ಖ್ಯಾತ ಸಂಗೀತ ನಿರ್ದೇಶಕನೆಂದು ಚಿತ್ರಲೋಕದಲ್ಲಿ ಮಿನುಗುತ್ತಿರುವ ನನ್ನ ಮಿತ್ರ ಗುಣಸಿಂಗ್‌ ತನ್ನ ಚಿತ್ರಗಳನ್ನು ಕೊನೆಗೂ ಕಡೆಘಳಿಗೆಯಲ್ಲಿ ಕಳುಹಿಸಿ ಕೊಟ್ಟ. ಈ ನಿಟ್ಟಿನಲ್ಲಿ ಗುಣಸಿಂಗನ ಚಿತ್ರಗಳನ್ನು ಪಡೆದು ನನಗೆ ತಲುಪಿಸಲು ಗೆಳೆಯ ಡೇವಿಡ್‌ (ಚಿತ್ರನಿರ್ಮಾಪಕ) ಪಟ್ಟ ಪಾಡು ಹಾಗೂ ತೋರಿದ ಕಾಳಜಿ ವರ್ಣಿಸಲಸದಳವು.

ಇದಕ್ಕಾಗಿಯೇ ಇತ್ತೀಚೆಗೆ ಚೆನ್ನೈಗೆ ಹೋಗಿದ್ದ ಡೇವಿಡ್‌ ಗುಣಸಿಂಗನನ್ನು ಕಂಡು, ‘ಸಾರ್, ಮೊದ್ಲು ನಿಮ್ಮ ಫೋಟೋಗಳನ್ನು ಕೊಡಿ. ಇಲ್ದಿದ್ರೆ ನಿಮ್ಮ ಚಿತ್ರವನ್ನು ಛಾಪಿಸುವ ಜಾಗದಲ್ಲಿ ಖಾಲಿ ಫ್ರೇಮನ್ನು ಕಪ್ಪು ಬಣ್ಣದಿಂದ ತುಂಬಿ, ಇದು ಗುಣಸಿಂಗನ ಚಿತ್ರ, ಗೋಚರಿಸುವುದಾದರೆ ನಿಮ್ಮ ಪುಣ್ಯಅಂತ ಕಪ್ಪು ಫ್ರೇಮಿನ ಕೆಳಗೆ ಬರೆದ್ಬಿಡ್ತಾರಂತೆ ಕೇಶವರಾಯರು’ ಎನ್ನುತ್ತಲೇ, ಅನಾರೋಗ್ಯದಿಂದ  ಬಳಲಿ ಚೇತರಿಸಿಕೊಳ್ಳುತ್ತಿರುವ ಗುಣಸಿಂಗ್‌ ಕೊಸರಾಡುತ್ತಲೇ ಮೇಲೆದ್ದು ನಗುತ್ತ, ‘ಆ ನನ್ಮಗ ಹಾಗೇನಾದ್ರೂ ಮಾಡಿದ್ರೆ ಎದ್ಬಂದು ಎದೆಗೊದೀತೀನೀಂತ ಹೇಳಯ್ಯ, ಮೊದ್ಲು ಈ ಫೋಟೋಗಳನ್ನು ಅವನ್ಗೆ ತಲುಪ್ಸು ಮಹಾರಾಯ. ಆ ಕಿಲಾಡಿ ಕೇಶವ ಕಪ್ಪು ಫ್ರೇಮಿನ ಕೆಳಗೆ ಹಾಗೆ ಬರದು ಪ್ರಿಂಟ್‌ ಮಾಡೋಕ್ಮುಂಚೆ ತಲಪ್ಸು’ ಎಂದವನೆ ಹಲವು ಚಿತ್ರಗಳನ್ನು ಕಳುಹಿಸಿಕೊಟ್ಟ.  ಅವು ಕೈಸೇರುತ್ತಲೇ ಪ್ರಕಾಶಕ ಮಿತ್ರ ತಾ.ರಾ. ನಾಗರಾಜರ ಮನೆಗೆ ದೌಡೋಡಿ ಗುಣಸಿಂಗನ ಚಿತ್ರಗಳನ್ನು ಹೇಗಾದರೂ ಮಾಡಿ ಪುಸ್ತಕದಲ್ಲಿ ಸೇರಿಸಬೇಕೆಂದು ಪ್ರಾರ್ಥಿಸಿದೆ.

‘ಆಯ್ತು ರಾಯ್ರೆ, ಅಂತೂ ಅವರ ಚಿತ್ರಗಳು ಕೊನೇಗೂ ಸಿಕ್ತಲ್ಲ. ಖಾಲಿ ಬಿಟ್ಟಿರೋ ಫ್ರೇಮಿನಲ್ಲಿ ಅವರ ಒಂದು ಒಳ್ಳೆಯ ಚಿತ್ರವನ್ನು ಹಾಕಿ ಮಿಕ್ಕವನ್ನ ಕೊನೆಯಲ್ಲಿ ಹಾಕಸ್ತೀವಿ’ ಎಂದ ನಾಗರಾಜ್‌ ತೃಪ್ತಿಯಿಂದ ತೇಗಿದರು.

-ಬಿ.ಎಸ್‌. ಕೇಶವರಾವ್‌