ಸೋಮು (ಹೆಚ್‌.ಜಿ.ಸೋಮಶೇಖರ ರಾವ್‌) ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳಲ್ಲೇ ಹವ್ಯಾಸಿ ರಂಗಭೂಮಿಯಲ್ಲಿ ಹೆಸರು ಮಾಡಿದವರನು. ಅದೇ ಕಾಲದಲ್ಲಿ ನಾನೂ ಸಹ ಕಾಲೇಜು ರಂಗ ಮಂಚಗಳ ಮೇಲೆ ಆಡಬಾರದ್ದನ್ನು ಆಡಿ, ಮಾಡಬಾರದ್ದನ್ನು ಮಾಡಿ ಮೈಸೂರಿನ ರಂಗಾಸಕ್ತರಿಂದ “ಇವನೂ ಒಬ್ಬ ಒಳ್ಳೆಯ ನಿರ್ದೇಶಕಲ, ಉತ್ತಮ ನಟ”ನೆಂದು ಕರೆಸಿಕೊಳ್ಳುತ್ತ ಹೆಮ್ಮೆಯಿಂದ ಹಾರಾಡುತ್ತಿದ್ದೆ.

ಅಂದು ನಾವಾಡುತ್ತಿದ್ದ ನಾಟಕಗಳನ್ನು ನೋಡಲು ವಿದ್ಯಾರ್ಥಿಗಳಲ್ಲದೆ ಹೊರಗನಿವರೂ ಸೇರಿ ಒಟ್ಟು ಪ್ರೇಕ್ಷಕರ ಸಂಖ್ಯೆ ಎರುಡ ಮೂರು ಸಾವಿರವನ್ನು ಮೀರುತ್ತಿದ್ದುದು ಸಾಮಾನ್ಯ. ಸ್ವಲ್ಪವೂ ಸದ್ದುಗದ್ದಲ ಮಾಡದೆ ನಾಟಕವನ್ನು ಮೊದಲಿಮದ ಕೊನೆವರೆವಿಗೆ ನೋಡುವ ತಾಳ್ಮೆ, ಸಂಯಮ ಅಂದಿನ ಪ್ರೇಕ್ಷಕರಲ್ಲಿತ್ತು. ಆದರೆ ಇತ್ತೀಚಿಗೆ, ಅಂದರೆ ಹಲವು ವರುಷಗಳಿಂದೀಚೆಗೆ ಮಿರುಗುತ್ತಿದ್ದ ಕಾಲೇಜು ರಂಗಮಂಚಗಳ ಮೇಲೆ ಪಾಚಿ ಕಟ್ಟಿ ಪಾರ್ಥೇನಿಯಂ ಬೆಳೆದು ನಿಂತಿದೆ. ಇಂತಹ ದುಸ್ಥಿತಿ ಬಂದದ್ದು ಒಂದು ದೊಡ್ಡ ದುರಂತ. ಈ ಮಾತು ಹಾಗಿರಲಿ.

ಸೋಮು ಒಳ್ಳೆಯ ಕಲಾವಿದ. ಧೀಮಂತಿಕೆ ಬೀರುವ ಗಾಂಭೀರ್ಯ ಪಾತ್ರಗಳಿಗೆ ಸೋಮು ಹೇಳಿ ಮಾಡಿಸಿದವನು. ೧೯೫೫ರ ಸುಮಾರಿನಲ್ಲಿ ಮಹಾರಾಜ ಕಾಲೇಜಿನಲ್ಲಿ ಮೂರ್ತಿರಾಯರ ಆಷಾಢಭೂತಿಯನ್ನಾಡಿಸಿದಾಗ ಅದರಲ್ಲಿ ಶಂಕರಪ್ಪನ ಪಾತ್ರವನ್ನು ವಹಿಸಿದ ಸೋಮುವನ್ನೂ, ಸುಬ್ಬಾಶಾಸ್ತ್ರಿಯ ಪಾತ್ರವಹಿಸಿದ್ದ ನ.ರತ್ನರನ್ನೂ ಅಂದು ರಂಗದ ಮೇಲೆ ಕಂಡ ಜನ ಇಂದಿಗೂ ಇವರನ್ನು ಮರೆತಿಲ್ಲ. ಪ್ರೇಕ್ಷಕರ ಮನದ ಮೇಲೆ ಇವರಂದು ಒತ್ತಿದ ಛಾಪು ಆ ರೀತಿಯದು.

ಸೋಮು, ರತ್ನ, ಇಂಥವರ ಧ್ವನಿ ಬಹು ವಿಶಿಷ್ಟವಾದದ್ದು. ಆ ಗಡಸು, ಗಂಡುಧ್ವನಿ, ಕೇವಲ ಕಂಠದಿಂದಷ್ಟೇ ಬರುವುದಲ್ಲ. ಅದು ಇವರ ಹೊಟ್ಟೆಯಿಂದ ಹೊರಹೊಮ್ಮಿ ಬರುತ್ತದೆ. ಅದೊಂದು ರೀತಿ ಬರುವ ಕುಂಭನಾದ. ಕೆಲವೇ ಕಲಾವಿದರಲ್ಲಿ ಈ ತೆರನ ಕಂಠವಿರುತ್ತದೆ.

ಡೈಲಾಗ್‌ ಡೆಲಿವರಿಯಲ್ಲಿ ವಿಶೇಷವಾದ ಪಾಜ್‌ ಕೊಟ್ಟು ಕೊಟ್ಟು ಪ್ರತಿಪದವೂ ಪ್ರೇಕ್ಷಕರ ಕಿವಿಮುಟ್ಟುವಂತೆ ಮನೋಜ್ಞವಾಗಿ ಮಾತನಾಡುವುದರಲ್ಲಿ ಸೋಮು ಎತ್ತಿದ ಕೈ. (ಏಣಗಿ ನಟರಾಜನಂತೆ). ಮಾತಿಗೆ ಒಪ್ಪವಾಗಿ ಒತ್ತುಕೊಡುವಂತೆ ಎಷ್ಟು ಬೇಕೋ ಅಷ್ಟೇ ಆಂಗಿಕ ಚಲನೆ, ಅಕ್ಕಸಾಲಿಗ ತೂಕ ಮಾಡಿ ಲೆಕ್ಕ ಹಾಕಿದಂತೆ. ಅತಿರೇಕದ ಅಭಿನಯ, ಅರ್ಥಾತ್‌ ಓವರ್ ಆಕ್ಟಿಂಗ್‌ ಅಂಬುದು ಸೋಮುವಿನ ಅರ್ಥಕೋಶಲ್ಲೇ ಇಲ್ಲ. ಗಂಭೀರ ಪ್ರಧಾನವಾದ ಪಾತ್ರಗಳೆಂದರೆ ಇವನಿಗೆ ಸುಲಿದ ರಸಬಾಳೆಯ ಹಣ್ಣು. ಅಂತೆಯೇ ಶುದ್ಧಪೆದ್ದನ ಪಾತ್ರವನ್ನೂ ಈ ಸೋಮು ರಸವತ್ತಾಗಿ ಅಭಿನಯಿಸುತ್ತಾನೆಂಬುದು ಬಹುತೇಕ ಮಂದಿಗೆ ತಿಳಿದಿರಲಿಕ್ಕಿಲ್ಲ. ೧೯೫೬ರಲ್ಲಿ ನಾನು ನಿರ್ದೇಶಿಸಿದ ‘ರಾಹುಕಾಲ’ ಎಂಬ ನಾಟಕದಲ್ಲಿ ಪೆದ್ದುಯಜಮಾನನ ಪಾತ್ರ ವಹಿಸಿದ್ದ ಸೋಮುವಿನ ಮಾತಿನ ಧಾಟಿ, ವಕ್ರಾಭಿನಯವನ್ನು ಕಂಡು ನಗುವನ್ನು ತಡೆಯಲಾಗದೆ ಇವನೊಟ್ಟಿಗೆ ನಟಿಸುತ್ತಿದದ ಸಹನಟರು ಸೈಡ್‌ ವಿಂಗಿಗೆ ಬಂದು ಹೊಟ್ಟೆ ಬಿರಿಯಾ ನಕ್ಕು ಸುಧಾರಿಸಿಕೊಂಡದ್ದನ್ನು ನಾನಿನ್ನು ಮರೆತಿಲ್ಲ.

ಸೋಮಣ್ಣನಿಗೆ ನಾಟಕಗಳಲ್ಲಿ ನಟಿಸುವುದು ನೀರ್ಕುಡಿದಷ್ಟೆ ನಿರಾಳ. ಇವನನ್ನು ನಟಿಸಬೇಕೆಂದು ಕರೆಯುತ್ತಿದ್ದವರ ಸಂಖ್ಯೆಯಂತೂ ಧಾರಾಳ. ಆದರೆ ಆಹ್ವಾನ ಬಂದೊಡನೆ ಆಡಲು ಸೋಮು ಎಂದೆಂದೂ ಒಪ್ಪುತ್ತಿರಲಿಲ್ಲ.

ಮೈಸೂರಿನಲ್ಲಿದ್ದ ಐದಾರು ವರುಷಗಳಲ್ಲಿ ಈತ ನಟಿಸಿದ್ದು ಮೂರ್ನಾಲ್ಕು ನಾಟಕಗಳಲ್ಲಿರಬಹುದು. ಸಾಮಾನ್ಯವಾಗಿ ನಾಟಕದವರಿಗಂಟಿಕೊಳ್ಳುವ ರಂಗಭೂಮಿಯ ತೀಟೆ, ತೆವಲು ಇವನನ್ನೆಂದೂ ತಡಕಿ ತೀಡಲಿಲ್ಲ. ಅಪರೂಪಕ್ಕೆ ಸೋಮು ಅಭಿನಯಿಸುತ್ತಿದ್ದಾನೆಂದು ತಿಳಿದೊಡನೆ ಅವನನ್ನು ರಂಗದ ಮೇಲೆ ನೋಡಲು ಹವ್ಯಾಸಿಗಳು ಹಾತೊರೆಯುತ್ತಿದ್ದರು. ಅವನು ಮಾಡಿದ ಪಾತ್ರಗಳೆಲ್ಲಾ ಗಟ್ಟಿಪಾತ್ರಗಳೇ ಆಗಿದ್ದು ಅವನ್ನು ಸೋಮು ಬಹು ಅಚ್ಚುಕಟ್ಟಾಗಿ ನಿರ್ವಹಿಸಿ ಪ್ರೇಕ್ಷಕರ ಪ್ರಶಂಸೆಯಿಂದ ಅಟ್ಟಕ್ಕೇರಿದವನು.

ನಾಟಕದಲ್ಲಾಡಿದರೆ ಅಂತಹ ನಾಟಕಗಳಲ್ಲಿ ಹಾಗಾಡಬೇಕು. ನಾಟಕಗಳಲ್ಲಿ ಪಾತ್ರವಹಿಸುವವರು ಅಂತಹ ತನ್ಮಯತೆ, ಏಕಾಗ್ರತೆ, ಉದ್ದಿಶ್ಯದಿಂದ ಪಾತ್ರ ನಿರ್ವಹಣೆಯಲ್ಲಿ ಆಸಕ್ತಿ ವಹಿಸಬೇಕು. ಹಿಂದೆ ಮುಂದೆ ನೋಡದೆ, ಯಾರು ಬರೆದ ಯಾವ ನಾಟಕವೆಂಬುದನ್ನು ಕೇಳದೆ, ಕೇವಲ ಕಾಟಾಚಾರಕ್ಕೆ ತೀಟೆ ತೀರಿಸಿಕೊಳ್ಳಲು ಕರೆದವರ ಕೂಟದಲ್ಲಿ ಭಾಗವಹಿಸಿ ತಕ್ಕ ತಾಲೀಮು ತಯಾರಿಯಲ್ಲಿ ನಂಬಿಕೆಯಿಡದೆ, ನಾಟಕದ ದಿನ ಒಂದು ಕೋಟು ಸುಣ್ಣ, ಅದರ ಮೇಲೊಂದು ಕೋಟು ಬಣ್ಣ ಬಳಿದುಕೊಂಡು ರಂಗದ ಮೇಲೆ ಬಂದು ಅಂಗಮಂಗನಂತೆ ಆಡಿಹೋದರೆ ಅಂಥವರು ಪ್ರೇಕ್ಷಕರ ನೆನಪಲ್ಲಿ ವರುಷಗಳಂತಿರಲಿ, ಕ್ಷಣಕಾಲವೂ ಉಳಿಯುವುದಿಲ್ಲ. ಮಾಡುವ ಪಾತ್ರ ಸಣ್ಣದಿರಬಹುದು, ದೊಡ್ಡದಿರಬಹುದು. ಅದು ಮುಖ್ಯವಲ್ಲ. ಯಾವುದೇ ಪಾತ್ರವಾಗಲಿ, ಎಂಥದೇ ಪಾತ್ರವಾಗಲಿ, ಅದನ್ನು ನಿರ್ವಹಿಸುವ ನಟ ಆ ಪಾತ್ರವನ್ನು ಅಮೂಲಾಗ್ರವಾಗಿ ಅರ್ಥಮಾಡಿಕೊಮಡು ತನ್ನೆಲ್ಲ ಕಲಾಶಕ್ತಿಯನ್ನು ಒಗ್ಗೂಡಿಸಿಕೊಂಡು ರೂಪಿಸುವ ಸಂಕಲ್ಪವನ್ನು ತೆಗೆದುಕೊಳ್ಳಬೇಕು. ಅಂತಹ ನಿಷ್ಠೆ, ನಿಯತ್ತಿನಿಂದ ಕೆಲಸ ಮಾಡುವ ಕೆಲವೇ ಕಲಾವಿದರ ಸಾಲಿಗೆ ಸೇರುವವ ಈ ಸೋಮಶೇಖರ ಎಂದರೆ ಈ ಮಾತು ಉತ್ಪ್ರೇಕ್ಷೆಯಾಗದು.

೧೯೫೮ರಲ್ಲಿ ಖಡಕ್‌ವಾಸ್ಲಾ ಕೆನಾಲ್‌ ಪ್ರಾಜೆಕ್ಟಿನಲ್ಲಿ ಕೆಲಸ ಮಾಡಲು ನಾನು ಪೂನಾಕ್ಕೆ ಹೊರಟುಹೋದೆ. ನಂತರ ನಾನು ಸೋಮುವನ್ನು ಹಲವಾರು ವರ್ಷ ಭೇಟಿಯಾಗಲಿಲ್ಲ. ಆದರೆ ಅವನಿಗೆ ಕೆನರಬ್ಯಾಂಕಿನಲ್ಲಿ ಕೆಲಸ ಸಿಕ್ಕಿರುವ ವಿಷಯ ತಿಳಿದಿತ್ತು.

ಬಹಳ ವರುಷಗಳ ನಂತರ ಮೈಸೂರಿನ ಸರಸ್ವತಿಪುರಂ ಬಡಾವಣೆಯಲ್ಲಿರುವ ಕೆನರಾಬ್ಯಾಂಕಿಗೆ ನನ್ನ ಗೆಳೆಯನೊಡನೆ ಹೋಗಿದ್ದೆ. ‘ಮ್ಯಾನೇಜರನ್ನ ಮಾತಾಡಸ್ಕೊಂಡು ಬರ್ತೀನಿ, ಐದು ನಿಮಿಷ, ಇಲ್ಲೇ ಕೂತಿರು’ ಎಂದು ನನ್ನ ಗೆಳೆಯ ಹೇಳಿ ಅವರ ಕೋಣೆಯೊಳಕ್ಕೆ ಹೋದ. ‘ಸರಿ ಎಂದು ಹಾಗೇ ಆ ಕೋಣೆಯ ಕಡೆ ಕಣ್ನಾಡಿಸಿದೆ. ‘ಎಚ್‌.ಜಿ, ಸೋಮಶೇಖರರಾವ್, M.A., ಮ್ಯಾನೇಜರ್’ ಎಂಬ ನಾಮಫಲಕವನ್ನೋದಿ ವಿಸ್ಮಿತನಾದೆ. ನಮ್ಮ ಸೋಮುವೇ ಇರಬಹುದೆಂದು ಬಾಗಿಲ ಸಂದಿನಿಂದ ಇಣುಕಿದೆ. ಅರೆ! ಹೌದು, ಅದೇ ಸೋಮು. ಜರ್ಬಾಗಿ ಸೂಟು ಧರಿಸಿ ಕೂತಿದ್ದಾನೆ. ಹೇಗಿದ್ದವನು ಹೇಗಾಗಿ ಹೋಗಿದ್ದಾನೆ ಎಂದು ಆಶ್ಚರ್ಯವಾಯಿತು. ಹಿಂದಿನ ದಿನಗಳ ನೆನಪಾಗಿ, ಆತ್ಮೀಯತೆ ಉಕ್ಕಿ, ಸೋಮುವನ್ನು ಬಾಚಿ ತಬ್ಬಿಕೊಂಡು ಬಿಡುವ ಆತುರ ಸಂಭ್ರಮದಲ್ಲಿ, ನಯವಿನಯ, ರೀತಿರಿವಾಜುಗಳನ್ನೆಲ್ಲಾ ಮರೆತು, ದಿಢೀರನೆ ಬಾಗಿಲನ್ನು ತೆರೆದುಕೊಂಡು ‘ಸೋಮಣ್ಣಾ, ಹೇಗಿದ್ದೀಯೋಮ್ಮಾ’ ಎನ್ನುತ್ತ ಹಂದಿಯಂತೆ ಒಳಹೊಕ್ಕು, ಹಸ್ತಲಾಘವಕ್ಕಾಗಿ ಹಾತೊರೆಯುತ್ತಾ ಅವನತ್ತ ಕೈಚಾಚಿದೆ. ಸೋಮು ನನ್ನನ್ನೊಮ್ಮೆ ದಿಟ್ಟಿಸಿದ. ಚಾಚಿದ್ದ ನನ್ನ ಕೈಗೆ ಅವನು ತನ್ನ ಕೈ ಕೊಡಲಿಲ್ಲ. ಕನ್ನಡಕವನ್ನು ಕನ್ನಡ ಚಿತ್ರದ ಖಳನಾಯಕನಂತೆ ಸ್ಟೈಲಾಗಿ ತೆಗೆದಿರಿಸಿ, ಕ್ಯಾಸ್ಟ್ರಾಯಿಲ್‌ ಕುಡಿದವರ ಮುಖಮುದ್ರೆ ಮಾಡಿಕೊಂಡು, ಸಪ್ಪೆಯಾದ ಸೋಬರ್ ವಾಯ್ಸಿನಲ್ಲಿ ‘ಓ ಕೇಶವರಾಯರು, ಎಲ್ಲಿದ್ದೀರಿ ಈಗ? ಎನ್ನುತ್ತ, ನನ್ನ ಅವನ ಪರಿಚಯ ಅಷ್ಟಾಗಿ ಇಲ್ಲವೇನೋ ಎಂಬರ್ಥ ಬರುವಂತೆ ಅಧೋಮುಖನಾಗಿ ತನ್ನ ಮುಂದಿದ್ದ ಪೇಪರ್ಗಳನ್ನು ನೋಡಲಾರಂಭಿಸಿದ.

ನನ್ನ ಗತಿ ಏನಾಗಬೇಡ. ಅತಿ ಉತ್ಸಾಹದಿಂದ ಇವನನ್ನು ಅಭಿನಂದಿಸಲು ಹೋದ ನನ್ನ ಮೋರೆಗೆ ಮೋರಿಯಿಂದ ಬಗೆದ ಬಗ್ಗಡದ ನೀರನ್ನು ರಪ್ಪನೆ ರಾಚಿದಂತಾಯಿತು. ಸ್ನೇಹಿತನಿಗೆ, ಸಿಟ್ಟೆಷ್ಟೇ ಇರಲಿ, ಸೀಟು ತೋರಿಸಿ ಸಿಟ್‌ಡೌನ್‌ ಅನ್ನುವ ಸೌಜನ್ಯವೂ ಬೇಡವೇ? ಅದೂ ಅವನೆದುರು ನನ್ನ ಗೆಲೆಯ ಹಾಗೂ ಇನ್ನೂ ನಾಲ್ಕಾರು ಮಂದಿ ಮಂಡಿಸಿದ್ದರು. ಅವರೆಲ್ಲರ ಸಮಕ್ಷಮದಲ್ಲಿ ಸೋಮು ನನ್ನ ತೇಜೋಭಂಗ ಮಾಡಿದ್ದ. ಅಲ್ಲದೆ ಸೋಮು ನಾನು ಲಾಗಾಯ್ತಿನಿಂದಲೂ ಹೋಗೋ ಬಾರೋ ಫ್ರೆಂಡ್ಸು. ಅಂಥದರಲ್ಲಿ “ಕೇಶವರಾಯರು, ಎಲ್ಲಿದ್ದೀರಿ?’ ಎಂದು ರಾಗವಳೆಯುವ ಧಾಟಿಯಲ್ಲಿ, ಮೊದಲಿಗೆ ನಾನವನನ್ನು ಸಲಿಗೆ ವಹಿಸಿ ಏಕವಚನದಲ್ಲಿ ಸಂಭೋದಿಸಿದ್ದು ಸರಿಯಲ್ಲವೆನ್ನುವ ಅರ್ಥ ಬರುವಂತೆ ಅಸಡ್ಡೆ ಬೆರೆತ ದನಿಯಲ್ಲಿ ಆಡಿದ್ದು ನನಗೆ ಸ್ವಲ್ಪವೂ ಹಿಡಿಸಲಿಲ್ಲ. ಇವನನ್ನು ಮ್ಯಾನೇಜರ್ ಗಿರಿಯ ಪೊಗರು ಒಗರಾಗಿಸಿದೇ ಎಂದುಕೊಂಡವನೆ, `O.K. Sir, I wii see you some time later’ ಎಂದವನೆ ರೊಯ್ಯನೆ ತಿರುಗಿ ಬಾಗಿಲನ್ನು ಸಮೀಪಿಸುತ್ತಿದ್ದಂತೆ, `Stop there, you Scoundrel’ ಎಂಬ ಗೊಗ್ಗರು ಧ್ವನಿ ಕೇಳಿಸಿತು. ತಿರುಗಿದೆ. ಸೋಮು ಎದ್ದು ಪಕ್ಕ ಸರಿದು ತನ್ನೆರಡು ಕೈಗಳನ್ನು ಚಾಚಿ ನನ್ನನ್ನು ಬಾಚಿತಬ್ಬಿಕೊಳ್ಳಲು ತಯಾರಾಗಿ ನಿಂತಿದ್ದ. ‘ಬಾರೋ ನನ್ಮಗ್ನೇ, ಇಷ್ಟು ದಿವಸ ಅದೆಲ್ಲಿ ಹಾಳಾಗಿ ಹೋಗಿದ್ಯೋ ಮುಂಡೇದೇ, ಬಾರೋ’ ಎನ್ನುತ್ತ ತಾನೇ ನಾನಿದ್ದಲ್ಲಿಗೆ ದುಡುದುಡನೆ ಬಂದು ಬಾಚಿತಬ್ಬಿಕೊಂಡ. ಸಮಯದಲ್ಲಿ ಸೋಮು ಕೊಡುವ ಶಾಕ್‌ ಟ್ರೀಟ್ಮೆಂಟ್‌ ಈ ಮಟ್ಟದ್ದು.

ಮತ್ತೆ ಹಲವಾರು ವರುಷ ನನ್ನ ಸೋಮುವಿನ ನಡುವಿನ ಭೇಟಿಯಲ್ಲಿ ಲಾಂಗ್‌ ಗ್ಯಾಪು. ಏತನ್ವಧ್ಯೆ ಸೋಮು ಹಲವು ಚಿತ್ರಗಳಲ್ಲಿ ನಟಿಸಿ ಖ್ಯಾತಿಗಳಿಸುತ್ತಿದ್ದುದು ನನ್ನ ಗಮನಕ್ಕೆ ಬಂತು. ಆ ಪೈಕಿ ‘ಆಕ್ಸಿಡೆಂಟ್‌’ ನೋಡಿದೆ. ಅದರಲ್ಲಿ ಫೋರ್ಮನ್ನಿನ ಪಾತ್ರದಲ್ಲಿ ಸೋಮುವಿನ ಅಭಿನಯ ಸುಮಾರು. ಏಕೋ ಏನೋ ಆ ಪಾತ್ರದಲ್ಲಿನ ಪೆಚ್ಚಾಗಿದ್ದಾನೆ. ಅದೇ ‘ಹರಕೆಯ ಕುರಿ’, ‘ಮಿಥಿಲೆಯ ಸೀತೆಯರು ಚಿತ್ರಗಳಲ್ಲಿ ಮಿಂಚಿದ್ದಾನೆ. ಆದರೂ ಸೋಮುವನ್ನು ನಮ್ಮ ಚಿತ್ರರಂಗ ಸರಿಯಾದ ರೀತಿಯಲ್ಲಿ ಬಳಸಿಕೊಂಡಿಲ್ಲ. ಉಸಿರುಬಿಡಲೂ ಪುರಸೊತ್ತಿಲ್ಲದಂತೆ ರೀಲು ಸುತ್ತುವುದರಲ್ಲೇ ಮಗ್ನರಾಗುವ ನಮ್ಮ ಚಿತ್ರಬ್ರಹ್ಮರಿಗೆ ಕಾಸು ಮುಖ್ಯವೇ ಹೊರತು ಕ್ವಾಲಿಟಿ ಕಲಾವಿದ, ಕಲಾವಂತಿಕೆ ಇವೇನೂ ಅಷ್ಟು ಮುಖ್ಯವಲ್ಲ.

ಇತ್ತೀಚೆಗೆ ಸೋಮುವನ್ನು ಅವನಿರುವ ಎಂ.ಜಿ.ರೋಡಿನ ಕೆನರಾ ಬ್ಯಾಂಕ್‌ ಡಿವಿಜನಲ್‌ ಬ್ರಾಂಚಿನಲ್ಲಿ ಭೇಟಿಯಾದೆ. ಈಗ ಸೋಮು ಇಲ್ಲಿ ಡೆಪ್ಯೂಟಿ ಡಿವಿಜನಲ್‌ ಮ್ಯಾನೇಜರ್. ಚೊಕ್ಕವಾದ ಛೇಂಬರು. ಎರಡು ಮೂರು ಟೆಲಿಲಫೋನುಗಳು. ಇಂಟರ್ಕಾಮ್‌ ಫೆಸಿಲಿಟಿ. ಪಿ.ಎ. ಹಾಗೂ ಹಲವು ಮಂದಿ ಅಸಿಸ್ಟೆಂಟುಗಳು. ಬೆಲ್‌ ಮಾಡಿದೊಡನೆ ಬಂದು ನಿಲ್ಲುವ ಚಿತ್ರಗುಪ್ತ ಅರ್ಥಾತ್‌ ಸ್ಟೆನೋ. ಎದುರಿಗೆ ಮಿರಮಿರನೆ ಮಿರುಗುವ ಲಾಂಗ್‌ ಟೇಬಲ್ಲು. ಬಂದವರಿಗೆ ಕೂರಲು ಸೋಫಾಗಳು. ಕಿಟಕಿಗಳಿಗೆ ಕಾಸ್ಲೀ ಕರ್ಟನ್ಸ್‌. ಇಂತಹ ವೈಭವೋಪೇತ ಛೇಂಬರಿನಲ್ಲಿ ತನ್ನ ತಿರುಗಾಸನದಲ್ಲಿ ಅತ್ತಿತ್ತ ತೋಲಾಡುತ್ತ ಸುತ್ತಲಿದ್ದವರೊಡನೆ ಗತ್ತಿನಿಂದ ಮಾತನಾಡುತ್ತಿದ್ದ ಈ ಚಿತ್ರದುರ್ಗದ ಸೋಮಣ್ಣನನ್ನು ಗಮನಿಸಿದಾಗ, ಸಿಂಹಾಸನದಲ್ಲಿರುವ ಮದಕರಿನಾಯಕನನ್ನೇ ಕಂಡಂತಾಯಿತು.

ತಾರುಣ್ಯದ ದಿನಗಳಿಂದಲೇ ಸೋಮು ಅಗ್ನಿಆರಾಧಕ. ಇವನ ಅಂಗೈಯಲ್ಲಿ ಅಗ್ನಿ ಆರಿರುತ್ತಿದ್ದುದು ಅಪರೂಪಕ್ಕೆ. ಹೊತ್ತಿ ಹೊಗೆ ಕಾರುತ್ತಿದ್ದ ಹೊಗೆಸೊಪ್ಪಿನ ಸುರುಳಿ ಸದಾಕಾಲ ಇವನ ಬೆರಳುಗಳ ಸಂದಿನಲ್ಲಿ ಸಿಕ್ಕಿಕೊಂಡಿರುತ್ತಿದ್ದುದು ಸಾಮಾನ್ಯ. ಜೊತೆಗೀತ ಗಣೇಶನ ಭಕ್ತನೂ ಆಗಿದ್ದುದರಿಂದ ಮನೆಯಲ್ಲಿದ್ದಾಗ ಹಾಗೂ ಮರೆಯಲ್ಲಿ ಈತ ಸೇದುತ್ತಿದ್ದುದು ಬೆನಕನ ಬ್ರಾಂಡ್‌ ಬೀಡಿಯನ್ನೇ.

ಈಗ ಸೋಮು ಅಗ್ನಿ ಆರಾಧನೆಯನ್ನು ಪೂರ್ಣವಾಗಿ ಬಿಟ್ಟಿದ್ದಾನೆ. ಸಿಗರೇಟು ಸೇವಿಸಬೇಕು ಎಂದೆನಿಸಿದಾಗಲೆಲ್ಲಾ “ಸುಂಟಿ ಪೆಪ್ಪರ್ಮೆಂಟ್‌ ಚೀಪುವ ಹವ್ಯಾಸ ಹಚ್ಚಿಕೊಂಡಿದ್ದಾನೆ. ಇದೂ ಒಂದು ಅವನು ಜೀವನದಲ್ಲಿ ಮಾಡಿರುವ ಬಹು ಒಳ್ಳೆಯ ಕೆಲಸ, ಆಯುಷ್ಯದಾದ್ಯಂತ ಈ ಸಂಕಲ್ಪವನ್ನು ಸಾಧಿಸುವುದಾದರೆ.

ಸೋಮು ವೇದ ಉಪನಿಷತ್ತುಗಳನ್ನು ಅಷ್ಟಿಷ್ಟು ಅರಿತವನು. ಕಠೋಪನಿಷತ್‌, ಮಾಂಡೋಕ್ಯೋಪನಿಷತ್‌, ಇತ್ಯಾದಿ ಉಪನಿಷತ್‌ಗಳ ಪರಿಚಯ ಅಷ್ಟಾಗಿ ಇಲ್ಲದಿದ್ದರೂ, ಒಂದು ಕಾಲದಲ್ಲಿ ಗುಂಡೋಪನಿಷತ್ತಿನಲ್ಲಿ ಇವ ಗಟ್ಟಿಗನೆನೆಸಿದ್ದ. ಇತ್ತೀಚಿಗೆ ಅಗ್ನಿ ಆರಾಧನೆಯಿಂದ ಕಳಚಿಕೊಂಡರೂ ಗುಂಡಿನ ಅಂಟಿನಿಮದ ಇವನಿನ್ನೂ ಪೂರ್ಣವಾಗಿ ಬಿಡಿಸಿಕೊಂಡಿಲ್ಲ. ಜಯನಗರದ ಕಾಸ್ಮಾಪಾಲಿಟನ್‌ ಕ್ಲಬ್ಬಿನಲ್ಲಿ ಇಂದಿಗೂ ಈ ಅಂಗಧ ತನ್ನ ಅವಲಾದಿಗಳೊಡನೆ ಅಪರೂಪಕ್ಕೆಂಬಂತೆ ಅಲ್ಪಸ್ವಲ್ಪ ಕುಡಿಯುವುದುಂಟು. ಇವನು ಕುಡಿಯುವುದಕ್ಕಿಂತ ಕಂಪನಿಯಲ್ಲಿದ್ದವರಿಗೆ ಕುಡಿಸುವುದೇ ಹೆಚ್ಚು. ಸ್ಥಾನಮಾನ, ಜವಾಬ್ದಾರಿಗಳು, ಏರುತ್ತೇರುತ್ತ ಇದ್ದೆರಡು ದುಶ್ಚಟಗಳಿಂದಲೂ ದೂರಸರಿಯುತ್ತಿರುವ ‘ಶಾಣ್ಯ’ ನಿವನು. ಅಮಾವಾಸ್ಯೆಗೊಮ್ಮೆ ಅಷ್ಟಿಷ್ಟು ಕುಡಿದರೂ ಅಲುಗಾಡದೆ ಅಲರ್ಟಾಗಿದ್ದು ದಾರಿತಪ್ಪದೆ ತನ್ನ ಕಾರನ್ನೋಡಿಸುತ್ತ ಶ್ರೀನಗರದಲ್ಲಿರುವ ತನ್ನ ಸ್ವಂತಹಟ್ಟಿಯನ್ನು ನೆಟ್ಟಗೆ ಮುಟ್ಟುವ ಈ ಸೋಮಣ್ಣನ ಜಟ್ಟಿ ದೇಹ ಹೀಗೆಯೇ ಅನೇಕ ವರುಷ ಗಟ್ಟಿಯಾಗಿರಲೆಂದು ಆ ಮಟ್ಟಿಮಾರುತಿಯನ್ನು ಕೈಕಟ್ಟಿ ಪ್ರಾರ್ಥಿಸುತ್ತೇನೆ.

ಸೋಮಣ್ಣನೀಗ ವೃತ್ತಿಯಿಂದ ನಿವೃತ್ತನಾಗಿ ಪ್ರವೃತ್ತಿಯಲ್ಲಿ ಅಪರೂಪಕ್ಕೆ ಅಷ್ಟಿಷ್ಟು ಕುಡಿಯುವುದನ್ನೂ, ಸೇದುವುದನ್ನೂ, ನಟಿಸುವುದನ್ನೂ ಉಳಿಸಿಕೊಂಡು ಲಂಗುಲಗಾಮಿಲ್ಲದ ಕುದುರೆಯಂತೆ ಸರ್ವರೀತಿಯಲ್ಲೂ ಸ್ವತಂತ್ರನಾಗಿದ್ದು, ಸ್ನೇಹಿತರೊಡನೆ ಸರಸಸಲ್ಲಾಪದಲ್ಲಿ ಕಾಲ ಕಳೆಯುತ್ತ ಸಂತೃಪ್ತಿಯಿಂಧ ಸಂತಸದಿಂದಿದ್ದಾನೆ.

* * *