ಉತ್ತರ ಕರ್ನಾಟಕದ ಗ್ರಾಮೀಣ ಭಾಗದಲ್ಲಿ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವ್ಯಾಪಕವಾಗಿ ಪ್ರಸಾರಗೊಳ್ಳಲು ಅಪರಿಮಿತವಾಗಿ ಶ್ರಮಿಸುತ್ತಿರುವ ಶ್ರೀ ನಿಂಗಪ್ಪ ಗುರಪ್ಪ ಡಂಗಿಯವರು ಹಿರಿಯ ತಲೆಮಾರಿನ ಹಿಂದೂಸ್ಥಾನಿ ಸಂಗೀತಗಾರರು. ಅವರು ಜನಿಸಿದ್ದು ೧೯೪೨ರಲ್ಲಿ ಬಾಗಲಕೋಟೆ ಜಿಲ್ಲೆಯ ಕವಿ ಚಕ್ರವರ್ತಿ ರನ್ನನ ಜನ್ಮಭೂಮಿಯಾದ, ತಾಲೂಕು ಸ್ಥಳವಾದ ಮುಧೋಳದಲ್ಲಿ ಅವರ ತಂದೆ ಶ್ರೀ ಗುರಪ್ಪನವರು ಕೃಷಿಕರು, ಭಜನಾ ಪದಗಳ ಹಾಡುಗಾರರು ಮತ್ತು ಶಿಲ್ಪಿಗಳಾಗಿದ್ದರು. ತಾಯಿ ಶ್ರೀಮತಿ ಯಮುನಾಬಾಯಿ ಸದ್ಗೃಹಿಣಿ.

ತಂದೆಯ ಭಜನಾ ಪದಗಳ ಪ್ರಭಾವಕ್ಕೊಳಗಾಗಿ ಶಾಲಾ ದಿನಗಳಲ್ಲಿಯೇ ಸಂಗೀತದತ್ತ ಒಲವು ಬೆಳೆಸಿಕೊಂಡ ಶ್ರೀ ನಿಂಗಪ್ಪನವರು ಪ್ರೌಢ ಶಿಕ್ಷಣ ಕಲಿಯುವಾಗಲೇ ನಾಟಕಗಳಲ್ಲಿ ಅಭಿನಯಿಸಿ ಹಾಡಲಾರಂಭಿಸಿದರು. ಕ್ರಮೇಣ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಅವರ ಮನವನ್ನು ಆಕರ್ಷಿಸಿತು. ಅವರ ಬಾಲ ಪ್ರತಿಭೆ ಕಂಡ ಸ್ವಾತಂತ್ರ ಹೋರಾಟಗಾರ ಹಾಗೂ ಆಕಾಶವಾಣಿ ಕಲಾವಿದರಾಗಿದ್ದ ದಿ. ಶ್ರೀ ಎಸ್.ಟಿ.ಪಾಟೇಲ ಅಮಲ ಝರಿಯವರು ನಿಂಗಪ್ಪನವರಿಗೆ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತವನ್ನು ಕಲಿಸಿದರು. ಶ್ರೀ ನಿಂಗಪ್ಪ ಡಂಗಿಯವರು ಗುರುಗಳಲ್ಲಿ ೨೦ ವರ್ಷಗಳ ಕಾಲ ಸಂಗೀತ ಶಿಕ್ಷಣ ಪಡೆದು ಪ್ರಬುದ್ಧ ಗಾಯಕರೆನಿಸಿದರು. ಕರ್ನಾಟಕ ಸರ್ಕಾರದ ಸಂಗಿತ ವಿದ್ವತ್ ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.

ಧೋತರ, ಮೇಲೊಂದು ನಿಲುವಂಗಿ, ತಲೆ ಮೇಲೆ ಬಿಳೆ ಕೂದಲು, ಕಣ್ಣಿಗೊಂದು ಕನ್ನಡಕ, ಬಾಯಲ್ಲಿ ಸದಾ ತಾಂಬೂಲ, ಕೈಯಲ್ಲಿ ಹಾರ್ಮೋನಿಯಂ ತೆಗೆದುಕೊಂಡು ಹಾಡುತ್ತಿದ್ದರೆ ಕೇಳುಗರು ಮಂತ್ರ ಮುಗ್ಧ. ಅಂತಹ ಸರಳ ವ್ಯಕ್ತಿತ್ವ ಅವರದು. ಗ್ರಾಮೀಣ ಭಾಗದ ಅನೇಕ ಪ್ರತಿಭಾವಂತರಿಗೆ ಸಂಗೀತ ವಿದ್ಯೆ ನೀಡಿ ಶಿಷ್ಯರನ್ನ ತಯಾರಿಸಿದ್ದಾರೆ. ಶರಣ ಬಸವ ಚೌಧರಿ, ಸದಾನಂದ ಕೊಣ್ಣೂರ ಮುಂತಾದ ಪ್ರತಿಭಾವಂತ ಶಿಷ್ಯರನ್ನ ತಯಾರಿಸಿದ್ದಾರೆ.

ನವರಸಪೂರ ರಾಷ್ಟ್ರೀಯ ಉತ್ಸವ, ಅಖಿಲ ಭಾರತ ೬೮ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಧೋಳ, ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿ ಜರುಗಿದ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ, ವಿಜಾಪೂರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಹಾಗೂ ಪುಣೆ, ಸಾಂಗ್ಲಿ, ಮಿಜ ಮುಂತಾದೆಡೆ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಅವರ ಸಂಗೀತ-ಸಾಧನೆ ಗುರುತಿಸಿ ಅನೇಕ ಪ್ರಶಸ್ತಿ -ಪುರಸ್ಕಾರ ಬಂದಿವೆ. ಗಾನಗಂಧರ್ವ, ಗಾನರತ್ನ ಸಂಗೀತ ರತ್ನಾಕರ, ಸಂಗೀತ ರತ್ನಾಕರ, ಸಂಗೀತ ಸುಧಾಕರ, ಬಾಗಲಕೋಟೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಮೀರವಾಡಿಯ ಗೋದಾವರಿ ಸಾಂಸ್ಕೃತಿಕ ಸಾಂಸ್ಕೃತಿ ಪ್ರಶಸ್ತಿ ಹಾಗೂ ೨೦೦೫-೦೬ನೇ ಸಾಲಿನ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಪ್ರಶಸ್ತಿ ಮುಂತಾದ ಪುರಸ್ಕಾರ ಅವರಿಗೆ ಸಂದಿವೆ.