ತೋಟ ದಾಟಲು ಬೇಲಿ ದಡಪೆಯಲ್ಲಿ ಕಾಲೆತ್ತಿ, ಗೂಟ ಹಿಡಿದು ಕಾಲು ನೆಲಕ್ಕಿಡುವ ಮೊದಲು ತಲೆಯೆತ್ತಿ ನೋಡಿದರೆ ಗಿಡಗಳಲ್ಲೆಲ್ಲಾ ಅರಿಸಿನದ ಚೆಂಡುಗಳು ತೂಗಾಡುತ್ತಿರುತ್ತವೆ.

ಪಕ್ಕದಲ್ಲಿರುವ ತೋಟದ ತಲೆಯಲ್ಲಿ ಹಸುರು ಚೆಂಡುಗಳು.  ಅದೋ ಅಲ್ಲಿ ಕಾಣಿಸುವ ಪುಟ್ಟಗಿಡದಲ್ಲಿ ಕಿತ್ತಳೆ ಚೆಂಡುಗಳು.  ಇವು ಸ್ವಲ್ಪ ಚಿಕ್ಕವು.  ಮಕ್ಕಳಿಗೆ ಆಡಲು ಅದೇ ಸಿಕ್ರಚೆಂಡು.  ಆಟಕ್ಕೆ ಆದೀತು.  ಆ ಹಸುರು ಚೆಂಡುಗಳು ಲಗೋರಿಗೆ.  ಮೇಲಿನ ಅರಿಸಿನ ಚೆಂಡುಗಳು ಥ್ರೋಬಾಲ್ ಆಡಲು.  ಆಟ ಮುಗಿದ ಮೇಲೆ ಉಪ್ಪುಖಾರಕ್ಕೆ…

ಛೇ! ಹೀಗೆಲ್ಲಾ ಆಟಕ್ಕೆ ಬಳಸಿ ಹಾಳುಮಾಡುವುದೇ? 

ಹಿಂದೆ ನಮಗೆಲ್ಲಾ ಬೇರಾವ ಚೆಂಡುಗಳಿದ್ದವು ಸಾರ್…

ಇವು ತೋಟದಲ್ಲಿ, ಹಿತ್ತಲಿನಲ್ಲಿ ಹೇಗೆಂದರೆ ಹಾಗೆ ಬೆಳೆಯುತ್ತಿದ್ದವು.

ಮಾರುವವರಾರು?  ಕೊಳ್ಳುವವರಾರು?

ಅರಿಸಿನದ್ದು ದೊಡ್ಲಿಹಣ್ಣು.  ಹಸುರಿನದ್ದು ಕಂಚಿಹಣ್ಣು, ಕಿತ್ತಲೆಯದು ಈಳಿಹಣ್ಣು.

ಕೊನೆಗೆ ಉಪ್ಪುಖಾರ ಹಾಕಿ ತಿನ್ನಲು ಗಜನಿಂಬೆ ಹಣ್ಣು.

ಎಲ್ಲವೂ ಸಾರು, ತಂಬುಳಿ, ಚಟ್ನಿ, ಉಪ್ಪಿನಕಾಯಿ, ಕಾಯಿರಸ ಹೀಗೆ ಏನೆಲ್ಲಾ ಅಡುಗೆಗೆ ಬಳಕೆ.  ಹಾಗೇ ಹುಳಿ ಹಿಂಡಿ ಇಟ್ಟುಕೊಂಡರೂ ಸ್ವಲ್ಪ ಉಪ್ಪು ಬೆರೆಸಿ ಕುದಿಸಿ ಇಟ್ಟರೂ ಎರಡು ವರ್ಷಗಳವರೆಗೆ ಬಳಸಬಹುದು.

ಮಾಗಿದ ಹಣ್ಣುಗಳ ಆಯ್ಕೆ.  ವಿಪರೀತ ಫಸಲು ಬರುವ ಮರಗಳದ್ದು.  ಬೀಜ ತೆಗೆದು ಬೂದಿಯಲ್ಲಿ ಕಲೆಸಿ ಒಣಗಿಸುವುದು, ನೀರು ಸದಾ ಬೀಳುವ ಜಾಗದಲ್ಲಿ ಬಿತ್ತುವುದು, ಒಂದೂವರೆ ತಿಂಗಳಲ್ಲಿ ಒಂದಿಷ್ಟು ಬೀಜಗಳು ಮೊಳಕೆಯೊಡೆಯುತ್ತವೆ.  ಎರಡು ಅಡಿ ಆಳ-ಉದ್ದ-ಅಗಲದ ಗುಂಡಿಗೆ ಗೊಬ್ಬರ, ಮರಳು, ಬೂದಿ ಮಿಶ್ರ ಮಾಡಿ ನೆಡುವುದು.  ತಿರುಗಿ ನೋಡದಿದ್ದರೂ ಗಿಡ ಏಳುತ್ತದೆ.ಮರವಾಗುತ್ತದೆ.ಹನ್ನು ಬಿಡುತ್ತದೆ. ಎರಡು ಅಂಗೈಯಲ್ಲಿ ಹಿಡಿಯುವಷ್ಟು ದೊಡ್ಡ, ದಪ್ಪ ಅರಿಸಿನ ಸಿಪ್ಪೆ.  ಹುಳಿ ತೆಗೆಯುವುದು ತುರಿಮಣೆಯಲ್ಲಿ ಕಾಯಿ ತುರಿದಂತೆ!

ಕಂಚಿಹಣ್ಣು ಹಾಗಲ್ಲ.  ಸುಮಧುರ ಸುವಾಸನೆ.  ಅಡುಗೆಯಲ್ಲೂ ಪರಿಮಳ ಉಳಿಯುತ್ತದೆ.

ಈಳಿ ಹಣ್ಣು ಮಾತ್ರ ಕಿತ್ತಳೆಯಂತೆ ತೊಳೆ ತೊಳೆಯಾಗಿ ತಿನ್ನಲು ಬರುತ್ತದೆ.  ಆದರೆ ಹಲ್ಲೆಲ್ಲಾ ಝುಂ ಎನ್ನುವಷ್ಟು ಹುಳಿ.  ಇದರ ಸಿಪ್ಪೆಯೇ ರುಚಿ.

ಈ ಗಜನಿಂಬೆ ಉಂಟಲ್ಲ, ಇದು ಅಪ್ಪಟ ಕರ್ನಾಟಕದ್ದು.  ದೊಡ್ಡದಾಗಿ ಉದ್ದ ಇರುತ್ತದೆ.  ಕಾಲು ಕಿಲೋಗ್ರಾಂ ತೂಗುವುದು.  ಸುವಾಸನೆ.  ಅರ್ಧ ಕಪ್ ರಸ ಗ್ಯಾರಂಟಿ.  ಚೆನ್ನಾಗಿ ಬೆಳೆಸಿದರೆ ಮರವಾಗಿಬಿಡುತ್ತದೆ.

ಬಾವಿಯ ಮೂಲೆಕಟ್ಟಿನಲ್ಲಿ ಉದ್ದುದ್ದ ತೆಂಗಿನಸಿಪ್ಪೆಸಹಿತ ಕಾಯಂತೆ ಇದೆಯಲ್ಲಾ ಅದೇ ಮಾದಲಕಂಚಿ.  ನಿಂಬೆ ಜಾತಿಯ ದೈತ್ಯ.  ಕೆಲವು ಹತ್ತು ಕಿಲೋಗ್ರಾಂನಷ್ಟು ದೊಡ್ಡದಾಗಿದ್ದೂ ಇದೆ.  ಇದರ ಸಿಪ್ಪೆ ತಿನ್ನಲು ರುಚಿ.  ಕೊನೆಗೆ ಕಿರುಗಹಿ.  ತೊಳೆಗಳು ಹುಳಿ, ಸಿಹಿ.  ಇದನ್ನು ಅಡುಗೆಗೆ ಬಳಸುವುದು ಕಮ್ಮಿ.  ಆದರೆ ಮಧ್ಯಾಹ್ನ ಬಿಸಿಲಿನಲ್ಲಿ ತಿನ್ನಲು ಬಳಕೆ.

ಈ ಎಲ್ಲಾ ನಿಂಬೆ ಕುಟುಂಬದವರನ್ನು ಬೆಳೆಸುವುದು ಬಹಳ ಸುಲಭ.  ಅದರಲ್ಲೂ ಬಸಿಗಾಲುವೆ, ನೀರು ಹರಿವ ತೋಡು ಮುಂತಾದ ಹುಳಿಮಣ್ಣಿನಲ್ಲಿ ಯಾವ ಆರೈಕೆಯಿಲ್ಲದೆ ಬೆಳೆಯುತ್ತದೆ.  ಮಣ್ಣು ಸವಕಳಿಯನ್ನೂ ತಡೆಯುತ್ತದೆ.  ಅದರಲ್ಲೂ ಬೆಳಗಿನ ಬಿಸಿಲು ಬೀಳುವ ಕಡೆ ಈ ಗಿಡಮರಗಳಿದ್ದರಂತೂ ಕೊಂಬೆ ಮುರಿಯುವಷ್ಟು ಫಸಲು.

ಈ ನಿಂಬೆ ಜಾತಿಯ ಗಿಡಗಳನ್ನು ಹುಡುಕಿಕೊಂಡು ಒಕ್ಕಲಿಗರು ಬರುತ್ತಿದ್ದರಂತೆ.  ಕಾರಣ ಕೇವಲ ಇವುಗಳ ಮೇಲೆ ಮಾತ್ರ ಇರುವ ಕಂಜಿರುವೆಗಳು.  ಅವು ಇವುಗಳ ಎಲೆಗಳನ್ನೆಲ್ಲಾ ಸೇರಿಸಿ ಗೂಡು ಕಟ್ಟುತ್ತವೆ, ಮೊಟ್ಟೆ ಇಡುತ್ತವೆ, ಮರಿ ಮಾಡುತ್ತವೆ.  ಈ ಜಾತಿಯ ಎಲೆಗಳನ್ನು ಮಾತ್ರ ತಿನ್ನುವ ಇವುಗಳು ಜೀವವೈವಿಧ್ಯದ ಅಚ್ಚರಿಗಳು.  ಈ ಕೆಂಪು ಅಚ್ಚರಿಗಳೇ ಒಕ್ಕಲಿಗರ ಸ್ವಾದಿಷ್ಟ ಖಾದ್ಯ ಕೆಂಪಿರುವೆ ಚಟ್ನಿ.

ಕಡಿದಾಳ್ ರಾಮಪ್ಪಗೌಡರು [ತೀರ್ಥಹಳ್ಳಿ] ಕೆಂಪಿರುವೆ ಚಟ್ನಿ ಮಾಡುವ ರೀತಿ, ರುಚಿ, ವರ್ಷಕ್ಕೊಮ್ಮೆ ಏಕೆ ತಿನ್ನಲೇಬೇಕು ಎನ್ನುವುದನ್ನು ತಮ್ಮ ಒಕ್ಕಲಿಗರ ಸಂಪ್ರದಾಯ ಪುಸ್ತಕದಲ್ಲಿ ಉಲ್ಲೇಖಿಸುತ್ತಾರೆ.

ಆ ಮೂಲಕ ಕೆಂಪಿರುವೆಗಾಗಿ ಈ ಗಿಡಗಳೂ ಉಳಿಯುತ್ತವೆ.  ಇದೊಂದೇ ಅಲ್ಲ, ಲೆಮನ್‌ಬಟರ್‌ಫ್ಲೈ ಎನ್ನುವ ಪಾತರಗಿತ್ತಿಗಳೂ ನಿಂಬೆ ಜಾತಿಯನ್ನೇ ಆಶ್ರಯಿಸಿವೆ ಎನ್ನುತ್ತಾರೆ ಹೊಸಬಾಳೆ ಮಂಜುನಾಥ್ ಹೆಗಡೆ [ಚಿಟ್ಟೆತಜ್ಞ].

ಕಾಂಡಕಸಿ, ರೆಂಬೆಕಸಿ, ಗೂಟಿ ಮುಂತಾದ ವಿಧಾನಗಳಿಂದ ಮೂಲ ತಳಿ ಉಳಿಸಿಕೊಳ್ಳಬಹುದು.  ಇವು ಅನೇಕ ತಲೆಮಾರುಗಳವರೆಗೂ ಇರುವಷ್ಟು ಆಯುಸ್ಸು, ಆರೋಗ್ಯ ಪಡೆದಿರುತ್ತವೆ.

ಕೇವಲ ಬಂದಳಿಕೆಯ ಕಾಟ, [ಕಾಗೆಯಿಂದ] ಮಂಗನಕಾಟದಿಂದ ರಕ್ಷಣೆ ಕೊಟ್ಟರೆ ಸಾಕು.

ಇದಕ್ಕೆ ಆಷಸ್ ತಂಡದಷ್ಟೇ ಹುಳಿ

ಆಳೆತ್ತರದ ಗಿಡ.  ಗಿಡದ ತುಂಬಾ ಗೊಂಚಲು ಕಾಯಿಗಳು, ಹಣ್ಣುಗಳು, ಹೂವು, ಹೀಚು ಏನೆಲ್ಲಾ.  ಥಟ್ಟನೆ ನೋಡಿದರೆ ಗಜನಿಂಬೆಯಂತೆ ಕಾಣಿಸುವ ಈ ನಿಂಬೆ ಆಸ್ಟ್ರೇಲಿಯಾದಿಂದ ಬಂದಿದ್ದಂತೆ.  ಹಾಸನ ಜಿಲ್ಲೆಯ ಹಗರೆ ಹೊಲಬಗೆರೆಯ ಎ.ಪಿ. ಅನಂತರಾಜಯ್ಯನವರ ಮನೆಗೆ ಬಂದ ಒಂದು ವರ್ಷಕ್ಕೆ ಫಲ.  ಹಾಗೆ ಪ್ರಾರಂಭವಾದದ್ದು ಇಂದಿಗೆ ಅರವತ್ತು ವರ್ಷಗಳು ದಾಟಿದರೂ ಫಸಲು ನಿಂತಿಲ್ಲ.

ಅರಿಸಿನಬಣ್ಣದ ದಪ್ಪ ಸಿಪ್ಪೆಯ ಹಣ್ಣು.  ಮೂತಿ ಚೂಪಾಗಿ ಬಾದಾಮಿ ಆಕಾರದ್ದು.  ಹೆಚ್ಚು ರಸ.  ಮೈತುಂಬಾ ಮಕ್ಕಳಿದ್ದರೂ ಬಾಗದಷ್ಟು ಗಟ್ಟಿಗಿಡ, ಸದಾ ಹಸಿರು.  ವರ್ಷದಲ್ಲಿ ೫೦೦ಕ್ಕೂ ಹೆಚ್ಚು ಹಣ್ಣುಗಳು ಲಭ್ಯ.  ಇಟ್ಟರೆ ಕೊಯ್ದು ತಿಂಗಳಾದರೂ ಬಾಡದು, ಕೊಳೆಯದು.

ಹೆಚ್ಚಾಗಿ ಬೀಜದಿಂದಲೇ ಸಸಿಗಳ ತಯಾರಿ.  ಹೊಲಬಗೆರೆಯ ಜೀವರಾಜ, ಜಿನಚಂದ್ರರು ಸಾವಿರಾರು ಬೀಜಗಳನ್ನು ನೀಡಿದ್ದಾರೆ.  ಹಾಗೇ ಸಾವಿರಾರು ಸಸಿಗಳನ್ನು ರೈತರಿಗೆ ಹಂಚಿದ್ದಾರೆ.

ಈ ನಿಂಬೆಗೆ ಯಾವ ಮಣ್ಣಾದರೂ ಆದೀತು.  ಹೇಗೆ ನೆಟ್ಟರೂ ಬೆಳೆದೀತು.  ಆದರೂ ಚೆನ್ನಾಗಿ ಬಿಸಿಲು ಬೀಳುವ ಜಾಗ, ಆಗಾಗ ಗೊಬ್ಬರ, ತೇವಾಂಶ ಉಳಿಯುವಂತೆ ನೀರು ಕೊಡುತ್ತಿದ್ದರೆ ಗಿಡವೂ ಸಂತೋಷದಿಂದ ನಳನಳಿಸುತ್ತದೆ.  ಆರೈಕೆ ಮಾಡಿದಂತೆ ಫಲ, ರುಚಿ, ಬಣ್ಣ ಏನೆಲ್ಲಾ.

ಇದನ್ನು ಕುಂಡಗಳಲ್ಲಿ, ಟೆರೇಸ್ ಮೇಲೆ, ಹಿತ್ತಿಲು, ತೋಟದ ತಲೆಕಟ್ಟು, ಗದ್ದೆ, ಹೊಲ ಎಲ್ಲೆಂದರಲ್ಲಿ ಬೆಳೆಯಬಹುದು.

ಸಾರು, ತಂಬುಳಿ, ಪಾನಕ ಮುಂತಾದ ಅಡುಗೆ ಮಾಡಿದರೆ ವಿಶೇಷ ಪರಿಮಳ ಇದಕ್ಕಿದೆ.  ಉಪ್ಪಿನಕಾಯಿಗೆ ಬಹಳ ಸೂಕ್ತ.

ಸಂಪರ್ಕ : ಜಿನರಾಜ : ೦೮೧೭೭ ೨೫೮೦೫೦

ಚಕ್ಕೋತಾ…ಕುಟುಂಬ

ಚಕ್ಕೋತಾ ಎಂದರೆ ದೇವನಹಳ್ಳಿಯ ಹೆಸರು ತಾನೇ ತಾನಾಗಿ ಬರುತ್ತದೆ.  ಇದು ರಾಜ್ಯದಾದ್ಯಂತ ಜನಜನಿತ.  ಆದರೆ ಮಲೆನಾಡಿನಲ್ಲಿ ಸಕ್ಕರೆಕಂಚಿ, ಸಿಹಿಗಂಚಿ, ದೊಡ್ಡಕಂಚಿ ಎಂದೆಲ್ಲಾ ಹೇಳಲಾಗುವ ಬೇರೆ ಜಾತಿಗಳೂ ಇವೆ.

ದೇವನಹಳ್ಳಿಯ ಚಕ್ಕೋತಾಕ್ಕೆ ಟಿಪ್ಪು, ಮೈಸೂರು ಮಹಾರಾಜರು, ಗಾಂಧೀಜಿ, ನೆಹರೂ, ಸೋನಿಯಾ ಇನ್ನೆಷ್ಟೋ ವಿದೇಶೀಯರು ತಿಂದು ನೀಡಿದ ಸರ್ಟಿಫಿಕೇಟ್‌ಗಳು ಬಹಳಷ್ಟಿವೆ.  ಅಂದು ಇದು ತಿಗಳರ ಮನೆತನದ ಕೃಷಿಯಾಗಿತ್ತು.

ಹುಳಿ, ಸಿಹಿ, ಸಕ್ಕರೆ, ಬೆಲ್ಲ ಇನ್ನೇನೇನೋ ಹೇಳಬಹುದಾದರೂ ತಿಂದಮೇಲೆ ನಾಲಿಗೆ ಗ್ರಹಿಸುವ ರುಚಿಗಿಂತ ಮೆದುಳು ಗ್ರಹಿಸುವ ಬಣ್ಣ, ವಾಸನೆ, ರುಚಿಗಳೆಲ್ಲಾ ಸೇರಿ ಆಗುವ ಆನಂದವೇ ಇದರ ಹೆಮ್ಮೆ ಎನ್ನುತ್ತಾರೆ ಮೂಲತಳಿ ಉಳಿಸಿಕೊಂಡಿರುವ ದೇವನಹಳ್ಳಿಯ ಶಿವನಾಪುರ ರಮೇಶ್.

ಚಕ್ಕೋತಾ ತೋಟಗಳು ಇಲ್ಲವೇ ಇಲ್ಲ ಎಂದರೂ ತಪ್ಪಿಲ್ಲ.  ತೋಟದ ಮೂಲೆಯಲ್ಲಿ, ಹಿತ್ತಲ ಎಡೆಯಲ್ಲಿ, ಗದ್ದೆಯಂಚಿನಲ್ಲಿ ಹೀಗೆ ಎಲ್ಲೋ, ಅಲ್ಲೋ, ಇಲ್ಲೋ ಮತ್ತೆಲ್ಲೋ ಮರಗಳು ಬೆಳೆದಿರುತ್ತವೆ.  ಆದರೆ ಹೆಚ್ಚಿನವು ಹುಳಿ, ಕಿರುಗಹಿ, ಚಪ್ಪೆ ಹೀಗೆ ಏನೆಲ್ಲಾ ರುಚಿಯವು.

ರಮೇಶ್‌ರವರ ಬಳಿಯಲ್ಲಿ ಕೇವಲ ಐದು ಮರಗಳು ಮೂಲತಳಿಯವು.  ಮರದಲ್ಲಿ ಸದಾ ಫಸಲು.  ಸಿಹಿ ಚಕ್ಕೋತ ಎಂಟು ತಿಂಗಳಿಗೆ ಕೊಯ್ಲಿಗೆ ಸಿದ್ಧ.  ಕಾಯಿ ಇದ್ದಾಗ ೪೦ಕ್ಕೂ ಹೆಚ್ಚು ಬೀಜಗಳಿರುತ್ತವೆ.  ಬೆಳೆದಂತೆಲ್ಲಾ ಬೀಜಗಳು ಕರಗುತ್ತಾ ೧೦-೧೨ಕ್ಕಿಳಿಯುತ್ತವೆ.  ತುದಿಯಲ್ಲಿ ರೂಪಾಯಿ ಅಗಲದ ಬಿಳಿಯ/ಅರಿಸಿನ ವೃತ್ತ ಮೂಡಿದಾಗ ಬೆಳೆದಿದೆ, ಕೊಯ್ಲಿಗೆ ಸಿದ್ಧ ಎಂದರ್ಥ.

ಕೊಯ್ದ ಮೇಲೆ ಎರಡು ದಿನ ಇಟ್ಟರೆ ಸಿಹಿ ಹೆಚ್ಚುತ್ತದೆ.  ಇದರ ಸಿಪ್ಪೆ ಬಿಡಿಸುವುದೂ ಒಂದು ಕಲೆ.  ಕೆಂಪಗಿನ ತೊಳೆಗಳು.  ಒಂದೊಂದು ಕುಸುಮದ ಉದ್ದ ಕನಿಷ್ಠ ಎರಡು ಇಂಚುಗಳು.  ಬೀಜದಿಂದ, ಗೂಟಿ ವಿಧಾನ, ಕಣ್ಣುಕಸಿ ವಿಧಾನಗಳಿಂದ ಸಸಿಗಳ ತಯಾರಿಕೆ.  ಬೀಜದಿಂದ ಎದ್ದ ಸಸಿಗಳಲ್ಲಿ ಮೂಲತಳಿಯನ್ನು ಗುರುತಿಸುವುದು ಬಲು ಸುಲಭ.  ವಿಪರೀತ ಮುಳ್ಳುಗಳಿದ್ದರೆ ಸಂಕರವಾಗಿದೆ ಎಂತಲೂ, ಮುಳ್ಳುಗಳು ಅತಿ ಕಡಿಮೆಯಿದ್ದರೆ ಮೂಲದ್ದೆಂತಲೂ ಹೇಳುತ್ತಾರೆ ರಮೇಶ್.  ಈ ಮುಳ್ಳನ್ನು ವರ್ಷದೊಳಗೆ ಮುರಿದರೆ ಕೊನೆಗೆ ಮುಳ್ಳುಗಳು ಹುಟ್ಟುವುದಿಲ್ಲ.  ಮೂಲಗುಣ ಇಲ್ಲದ ಸಸಿಗಳು ಕಸಿ ಬಳಕೆಗೆ.

ಗೂಟಿ ಕಟ್ಟಿದ ಸಸಿಗಳಿಗೆ ಆಯುಸ್ಸು ಕೇವಲ ಹದಿನೈದು ವರ್ಷ ಮಾತ್ರ.  ಕಣ್ಣುಕಸಿಯೂ ಒಳ್ಳೆಯದು.

ಈಗಾಗಲೇ ೧೦ ಸಾವಿರಕ್ಕೂ ಹೆಚ್ಚು ಸಸಿಗಳನ್ನು ಮಾರಿದ ರಮೇಶ್ ಅಭಿಪ್ರಾಯ ಚಕ್ಕೋತಾಕ್ಕೆ ನೆಲದ ಗುಣ, ಹವಾಮಾನಗಳನ್ನು ಅವಲಂಬಿಸಿ ಮೂಲಗುಣ ಬರುತ್ತದೆ.

ದೇವನಹಳ್ಳಿ, ಬಿ.ಆರ್. ಹಿಲ್ಸ್‌ಗಳಲ್ಲಿ ನೂರು ವರ್ಷಕ್ಕೂ ಹೆಚ್ಚು ವಯಸ್ಸಿನ ಮರಗಳಿವೆ.  ಲೋಡ್‌ಗಟ್ಟಳೆ ಇಳುವರಿ.  ಎಲ್ಲಾ ಹುಳಿ.  ಸಣ್ಣ ಗಾತ್ರ.  ಕೊಳ್ಳುವವರಿಲ್ಲ.

ರಮೇಶ್‌ರವರ ಮರವೊಂದರಿಂದ ವರ್ಷಕ್ಕೆ ಎರಡರಿಂದ ಮೂರು ಕ್ವಿಂಟಾಲ್ ಇಳುವರಿ.  ಒಂದೊಂದಕ್ಕೂ ನೂರು ರೂಪಾಯಿಗಳಂತೆ ಬೆಲೆ.  ಮರದ ಬುಡದಲ್ಲೇ ವ್ಯಾಪಾರ.  ಹಣ್ಣಾಗುವ ಮೊದಲೇ ಬುಕ್ಕಿಂಗ್.  ಇರುವ ಐದು ಮರದಿಂದ ಎರಡು ಲಕ್ಷದವರೆಗೆ ಆದಾಯ.

ಗಾತ್ರ ತೆಂಗಿನಕಾಯಿ, ಅಲ್ಲ ಕುಂಬಳಕಾಯಿಯಷ್ಟು ದೊಡ್ಡದು.  ಪ್ರತಿವರ್ಷ ಕೊಟ್ಟಿಗೆ ಗೊಬ್ಬರ, ಸತ್ತಪ್ರಾಣಿಗಳನ್ನು ಹುಗಿಯುವುದು, ಬೇಸಿಗೆಯಲ್ಲಿ ನೀರು.  ವಿಪರೀತ ಹೂಮಿಡಿಗಳಿದ್ದರೆ ಅವೇ ಉದುರಿಸಿ ಕಡಿಮೆ ಮಾಡಿಕೊಳ್ಳುತ್ತವೆ.  ವಯಸ್ಸಾದ ನಂತರ ಗಾತ್ರ ಕುಗ್ಗಿ ಹುಳಿ ಸೇರಿಕೊಳ್ಳುವುದೂ ಉಂಟು.

ಹುಳಿ ಇರುವ ಕಂಚಿಮರ ವರ್ಷಕ್ಕೆ ೬ ಕ್ವಿಂಟಾಲ್‌ವರೆಗೆ ಕಾಯಿ ಬಿಡುತ್ತದೆ.  ಬೆಲೆ ಕಾಯಿಗೆ ನಾಲ್ಕು-ಹತ್ತು ರೂಪಾಯಿ ಮಾತ್ರ.  ನಷ್ಟವೇನಿಲ್ಲ.

ಇದಕ್ಕೆ ರೋಗಗಳು, ಕೀಟಬಾಧೆ ಎಲ್ಲಾ ಇದೆ.  ಹಿಮ ಬಿದ್ದಾಗ ಚಿಗುರುಕಾಯಿ ಅರಿಸಿನ ಆಗುತ್ತದೆ.  ಬಿಸಿಲಿಗೆ ಸುಡುತ್ತದೆ.  ಅದಕ್ಕೆ ನೆರಳಲ್ಲಿ ಬೆಳೆಯಬೇಕು.  ರಂಗೋಲಿ ಹುಳ ಎಲೆಗಳ ಮೇಲೆ ಹರಿದಾಡಿ ತೊಂದರೆ ಕೊಡುತ್ತದೆ.  ಕೊಂಬೆಗಳಲ್ಲಿ, ಕಾಂಡದಲ್ಲಿ ಅಂಟು ಜಿನುಗುವ ರೋಗ ಬರುತ್ತದೆ.  ಇದು ಮರದ ಬುಡಕ್ಕೆ ಬಂದರೆ ಮರ ಸಾಯುತ್ತದೆ.  ಲಕ್ಕಿಸೊಪ್ಪನ್ನು ಗಂಜಳದಲ್ಲಿ ನೆನೆಸಿ ಸಿಂಪಡಿಸಬಹುದು.  ಬೋರ್ಡೋ ಸವರಿದರೂ ಹೋಗುತ್ತದೆ.

ಚಕ್ಕೋತ ಬಿಡಿಸಿದ ಮೇಲೆ ಸಿಪ್ಪೆಯನ್ನು ತಲೆಯ ಮೇಲಿಟ್ಟುಕೊಂಡರೆ ತಂಪಾಗುತ್ತದೆ.  ತಲೆನೋವು ನಿವಾರಣೆ, ಒಳ್ಳೆಯ ನಿದ್ರೆ ಬರುತ್ತದೆ. ಕಾಂಡದ ಇದ್ದಿಲಿನಿಂದ ಹಲ್ಲುಜ್ಜಿದರೆ ಹುಳುಕು ನಿವಾರಣೆ, ಹೊಳಪು ಬರುತ್ತದೆ.

ಚಕ್ಕೋತ ತಳಿ ಹೆಚ್ಚಿಸಲು, ಉಳಿಸಲು ತೋಟಗಾರಿಕಾ ಇಲಾಖೆ, ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ತನ್ನೆಲ್ಲಾ ಪ್ರಯತ್ನ ಮಾಡುತ್ತಿದೆ.  ಇನ್ನು ಕೆಲವೇ ವರ್ಷಗಳಲ್ಲಿ ಚಕ್ಕೋತ ಕೃಷಿಯನ್ನೇ ರೈತರು ಮಾಡಬಹುದು ಎನ್ನುವ ಆಶಯ ಹೆಸರಘಟ್ಟದ ತೋಟಗಾರಿಕಾ ಸಂಶೋಧನಾ ಸಂಸ್ಥೆಯದು.

ಹಾಸನ, ಮಂಡ್ಯ, ಶಿವಮೊಗ್ಗ, ಚಿಕ್ಕಮಗಳೂರು ಮುಂತಾದ ಕಡೆಯೂ ಒಳ್ಳೆಯ ರುಚಿಯ ಚಕ್ಕೋತಾಗಳಿವೆ.  ಕೇವಲ ಗುಲಾಬಿ ತಿರುಳೊಂದೇ ಅಲ್ಲ ಬಿಳಿ ತಿರುಳು, ಅರಿಸಿನ ತಿರುಳಿನವೂ ಇವೆ.  ರುಚಿಯೂ ಸಿಹಿ.  ಆದರೆ ಜನಪ್ರಿಯವಲ್ಲ.

ಇದನ್ನು ಸಲಾಡ್, ಚಟ್ನಿ ಮಾಡಬಹುದು ಹಾಗೂ ಉಪ್ಪು ಖಾರ ಸೇರಿಸಿ ತಿನ್ನಬಹುದು.  ಹರಟೆ ಹೊಡೆಯುತ್ತಾ ಉಪ್ಪುಖಾರ ಬೆರೆತ ಚಕ್ಕೋತ ತಿನ್ನುವುದು ಮಲೆನಾಡಿನಲ್ಲಿ ರೂಢಿಯಿದೆ.  ಇಲ್ಲಿಯೂ ದರವಿಲ್ಲ.  ಎಲ್ಲಾ ಉದಾರಕ್ಕೆ ಮೀಸಲು.

ಚಕ್ಕೋತಾಕ್ಕೆ ಮೊದಲು ಮಾರುಕಟ್ಟೆ ಹುಡುಕಿದರೆ, ಸೃಷ್ಟಿಸಿದರೆ ಬೆಳೆಯಲು, ಉಳಿಸಲು ಸಾಧ್ಯ.  ಅದಕ್ಕಾಗಿ ಮೌಲ್ಯವರ್ಧನೆ ಮಾಡಬೇಕು.  ಆದರೆ ಇದೆಲ್ಲಾ ಮಾಡುವವರು ಯಾರು?  ಯಾರಿಗೋಸ್ಕರ?