ನಿಘಂಟು

ಒಂದು ಭಾಷೆಯಲ್ಲಿರುವ ಎಲ್ಲ ಪದಗಳನ್ನೂ ಸಂಗ್ರಹಿಸಿ ಆಕಾರಾದಿಯಾಗಿ ಜೋಡಿಸಿ, ಆ ಪದಗಳ ಅರ್ಥಗಳನ್ನು ಕ್ರಮವಾಗಿ ತಿಳಿಸುವುದೇ  ನಿಘಂಟು. ಪದಗಳಿಗಿರುವ ಅರ್ಥಗಳನ್ನು ಸೂಚಿಸುವುದರ ಜೊತೆಗೆ ಆ ಪದದ ವ್ಯಾಕರಣಾಂಶವನ್ನೂ, ನಿಷ್ಪತ್ತಿಯನ್ನೂ, ವಿವರಿಸಲಾಗುತ್ತದೆ. ಮಾನವನ ಜ್ಞಾನವಿಕಾಸಕ್ಕೆ ಕಾವ್ಯ ಶಾಸ್ತ್ರ ಪುರಾಣವೇ ಮೊದಲಾದವು ಎಷ್ಟು ಅಗತ್ಯವೋ ನಿಘಂಟೂ ಅಷ್ಟೇ ಅಗತ್ಯವಾದುದು. ಯಾವುದೋ ವಿಷಯವನ್ನು ಖಚಿತವಾಗಿ ಹೇಳು, ಕರಾರುವಕ್ಕಾಗಿ ತಿಳಿಸು ಎನ್ನುವುದಕ್ಕೆ ನಿಘಂಟಾಗಿ ಹೇಳು ಎಂಬ ಬಳಕೆಯ ಮಾತು ರೂಢಿಗೆ ಬಂದಿದೆ. ಅಲ್ಲದೆ ಕೋಶ ಓದು ದೇಶ ನೋಡು ಎಂಬ ಬಳಕೆಯ ಮಾತು ರೂಢಿಗೆ ಬಂದಿದೆ. ಅಲ್ಲದೆ ಕೋಶ ಓದು ದೇಶ ನೋಡು ಎಂಬ ಗಾದೆ ಕನ್ನಡ ನಾಡಿನಾದ್ಯಂತ ಪ್ರಚಲಿತವಾಗಿದೆ. ಕೋಶ ಓದುವುದರಿಂದ ಶಬ್ದಜ್ಞಾನವೂ ದೇಶ ನೋಡುವುದರಿಂದ ಲೋಕಾನುಭವವೂ ಉಂಟಾಗುತ್ತದೆ. ನಿಘಂಟನ್ನು ಕೋಶ, ಅಭಿದಾನಕೋಶ, ವಸ್ತುಕೋಶ, ಶಬ್ದಾರ್ಥಕೋಶ, ನಿರುಕ್ತ ಮೊದಲಾದ ಬೇರೆ ಬೇರೆ ಹೆಸರುಗಳಿಂದ ಕರೆಯುವುದೂ ಬಳಕೆಯಲ್ಲಿದೆ. ಭಾರತೀಯರು ನಿಘಂಟನ್ನು ಒಂದು ಶಾಸ್ತ್ರವನ್ನಾಗಿ ಪರಿಗಣಿಸಿದ್ದಾರೆ.

ನಿಘಂಟುಗಳನ್ನು ಕಂಠಪಾಠ ಮಾಡಿಕೊಳ್ಳುವ ಪದ್ಧತಿ ನಮ್ಮ ದೇಶದಲ್ಲಿ ಹಿಂದಿನಿಂದಲೂ ರೂಢಿಯಲ್ಲಿದೆ. ಈ ಪದ್ಧತಿ ಇಂದಿಗೂ ಕೆಲವೆಡೆ ರೂಢಿ ಯಲ್ಲಿರುವುದನ್ನೂ ಕಾಣಬಹುದಾಗಿದೆ. ಆದುದರಿಂದಲೇ ಪ್ರಾಚೀನ ನಿಘಂಟು ಗಳೆಲ್ಲ ಶ್ಲೋಕ ಪದ್ಯಗಳಲ್ಲೇ ರಚಿತವಾಗಿದೆ.

ಪ್ರಾಚೀನ ನಿಘಂಟುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ಅನುಕೂಲವಾಗುವುದಕ್ಕಾಗಿ ಈ ನಿಘಂಟುಗಳಿಗೆ ಟೀಕುಟಿಪ್ಪಣಿಗಳನ್ನು ಬರೆಯುವ ಪದ್ಧತಿಯೂ ರೂಢಿಯಲ್ಲಿತ್ತು. ಸಂಸ್ಕೃತ ಮತ್ತು ಕನ್ನಡ ನಿಘಂಟುಗಳಿಗೆ ಹಲವಾರು ಟೀಕೆಗಳು ರಚಿತವಾಗಿರುವುದನ್ನು ಕಾಣಬಹು ದಾಗಿದೆ. ಸುಪ್ರಸಿದ್ಧವಾದ ಸಂಸ್ಕೃತದ ಅಮರಕೋಶಕ್ಕೆ ಸುಮಾರು ಐವತ್ತಕ್ಕಿಂತಲೂ ಹೆಚ್ಚು ಟೀಕುಗಳು ರಚಿತವಾಗಿರುವುದು ಅದರ ಜನಪ್ರಿಯತೆಗೂ ಉಪಯುಕ್ತತೆಗೂ ಜೀವಂತ ನಿದರ್ಶನವಾಗಿದೆ.

ವಿವಿಧ ವಿಷಯಗಳಿಗೆ ಸಂಬಂಧಿಸಿದ ನಿಘಂಟುಗಳೂ ಪ್ರಚಲಿತದಲ್ಲಿದ್ದುವು. ಗಿಡಮೂಲಿಕೆಗಳಿಗೆ ಸಂಬಂಧಿಸಿದಂತೆ ಔಷಧಿ ಕೋಶಗಳೂ ವೈದ್ಯಕ್ಕೆ ಸಂಬಂಧಿಸಿದಂತೆ ವೈದ್ಯ ನಿಘಂಟುಗಳೂ ಸಾಕಷ್ಟು ಪ್ರಮಾಣದಲ್ಲಿ ಬಳಕೆ ಯಲ್ಲಿದ್ದುವು. ಅಲ್ಲದೆ ವಿವಿಧ ಧರ್ಮಗಳಿಗೆ ಸಂಬಂಧಿಸಿದ ಪಾರಿಭಾಷಿಕ  ನಿಘಂಟುಗಳೂ, ಸಂಗೀತ, ನೃತ್ಯ, ಶಿಲ್ಪ ಮೊದಲಾದ ಕಲೆಗಳಿಗೆ ಸಂಬಂಧಿಸಿದ ನಿಘಂಟುಗಳೂ ವ್ಯಾಕರಣ, ಅಲಂಕಾರ, ತರ್ಕ, ಜ್ಯೋತಿಷ್ಯ, ಕಾಮಶಾಸ್ತ್ರ, ಗಣಿತ ಮುಂತಾದ ಶಾಸ್ತ್ರಗಳಿಗೆ ಸಂಬಂಧಿಸಿದ ನಿಘಂಟುಗಳೂ ಬಳಕೆ ಯಲ್ಲಿದ್ದುದನ್ನು ಕಾಣಬಹುದಾಗಿದೆ.

ಭರತಖಂಡಕ್ಕೆ ಪಾಶ್ಚಾತ್ಯರ ಆಗಮನವಾದ ಮೇಲೆ ಎಲ್ಲ ದೇಶೀಯ ಭಾಷೆಗಳಲ್ಲೂ ನಿಘಂಟು ಕಾರ್ಯ ವಿಶೇಷವಾಗಿ ನಡೆದಿರುವುದನ್ನು ಗುರುತಿಸ ಬಹುದು. ನಿಘಂಟುಗಳನ್ನು ಆಕಾರಾದಿ ಕ್ರಮದಲ್ಲಿ ಸಿದ್ಧಪಡಿಸುವುದನ್ನು ರೂಢಿಗೆ ತಂದ ಈ ವಿದೇಶೀ ವಿದ್ವಾಂಸರು ನಿಘಂಟು ಕ್ಷೇತ್ರಕ್ಕೆ ಗಣನೀಯವಾದ ಸೇವೆಯನ್ನು ಸಲ್ಲಿಸಿರುವುದನ್ನು ಕಾಣಬಹುದಾಗಿದೆ.

ಹತ್ತೊಂಬತ್ತು ಮತ್ತು ಇಪ್ಪತ್ತನೆಯ ಶತಮಾನಗಳಲ್ಲಿ ನಿಘಂಟು ಕಾರ್ಯ ಗಮನಾರ್ಹ ಪ್ರಮಾಣದಲ್ಲಿ ನಡೆದಿದೆ. ಉದಾಹರಣೆಯಾಗಿ ಕೆಲವನ್ನು ನೋಡಬಹುದಾಗಿದೆ. ಒಬ್ಬ ಕವಿಯ ಅಥವಾ ಸಾಹಿತಿಯ ಒಂದು ಮಹತ್ವದ ಕೃತಿಯಿಂದ ಎಲ್ಲ ವಿಶಿಷ್ಟ ಪದಗಳನ್ನೂ, ಪ್ರಯೋಗಗಳನ್ನೂ, ನುಡಿಗಟ್ಟುಗಳನ್ನೂ ಸಂಗ್ರಹಿಸಿದ ಪದಪ್ರಯೋಗ ಕೋಶಗಳು, ಬೇಡ, ಬೆಸ್ತ, ಮೇದರ, ಕುಂಬಾರ, ಚಮ್ಮಾರ ಮೊದಲಾದವರ ವೃತ್ತಿಗಳಿಗೆ ಸಂಬಂಧಿಸಿದ ವೃತ್ತಿ ಪದಕೋಶಗಳೂ, ಸೋಲಿಗ, ಕಾಡುಕುರುಬ, ಕೊರಗ ಇವರೇ ಮೊದಲಾದ ಬುಡಕಟ್ಟಿಗೆ ಸೇರಿದವರ ಭಾಷೆಯ ನಿಘಂಟುಗಳೂ, ವಿವಿಧ ಜಾನಪದ ಪ್ರಕಾರಕ್ಕೆ ಸಂಬಂಧಿಸಿದ ಜಾನಪದ ನಿಘಂಟುಗಳು, ವ್ಯತ್ಪತ್ತಿ ಕೋಶಗಳು, ವೈಜ್ಞಾನಿಕ ಪದಕೋಶಗಳು, ವಿರುದ್ಧಾರ್ಥ ಪದಕೋಶಗಳು, ವರ್ಗೀಕೃತ ಪದಕೋಶಗಳು ಇವೇ ಮೊದಲಾದ ನಿಘಂಟುಗಳು, ಪದಕೋಶಗಳು ಸಿದ್ಧವಾಗಿವೆ, ಸಿದ್ಧವಾಗುತ್ತಿವೆ, ಬಳಕೆಗೆ ಬರುತ್ತಿವೆ.

ಪಾಶ್ಚಿಮಾತ್ಯರು ನಿಘಂಟು ಕ್ಷೇತ್ರದಲ್ಲಿ ಬಹಳ ಮುಂದುವರಿದಿದ್ದಾರೆ. ಸಹಸ್ರಾರು ಪುಟಗಳ ಬೃಹಾಕಾರದ ನಿಘಂಟುಗಳಿಂದ ಹಿಡಿದು ಕಿಸೆ ನಿಘಂಟು, ಹೆಬ್ಬೆಟ್ಟಿನ ನಿಘಂಟು ಮೊದಲಾದ ವಿವಿಧಾಕಾರದ ನಿಘಂಟುಗಳನ್ನು ನಿರ್ಮಿಸಿದ್ಧಾರೆ. ಇಷ್ಟೇ ಅಲ್ಲದೆ ಪದೋಚ್ಚಾರಣೆಯ ನಿಘಂಟು, ಕವನ ರಚಿಸುವವರ ಉಪಯೋಗಕ್ಕಾಗಿ ಪ್ರಾಸಪದಗಳ ನಿಘಂಟು ಇವೇ ಮೊದಲಾದ ವಿವಿಧ ಸ್ವರೂಪದ ನಿಘಂಟುಗಳನ್ನು ಸಿದ್ಧಪಡಿಸಿದ್ದಾರೆ.

ವಿಶ್ವದ ಜೀವಂತ ಭಾಷೆಗಳಿಗೆಲ್ಲ ಒಂದಲ್ಲ ಒಂದು ತೆರದ ನಿಘಂಟುಗಳು ರಚಿತವಾಗಿ ಪ್ರಚಲಿತವಾಗಿವೆ. ಭಾಷಾ ವಿಜ್ಞಾನಕ್ಕೆ ನಿಘಂಟು ಒಂದು ಮುಖ್ಯ ಸಾಧನವಾಗಿದೆ.

ಸ್ವರೂಪ

ನಿಘಂಟುಗಳು ನಾನಾ ತೆರವಾಗಿವೆ. ಒಂದು ಭಾಷೆಯ ಪದಕ್ಕೆ ಅದೇ ಭಾಷೆಯಲ್ಲಿ ಅರ್ಥವನ್ನು ಕೊಡುವುದು ಏಕಭಾಷಿಕ ನಿಘಂಟು. ಆ ಪದಕ್ಕೆ ಬೇರೆ ಇನ್ನೊಂದು ಭಾಷೆಯಲ್ಲಿ ಅರ್ಥವನ್ನು ಕೊಡುವುದು ದ್ವಿಭಾಷಿಕ ನಿಘಂಟು. ಒಂದಕ್ಕಿಂತ ಹೆಚ್ಚು ಭಾಷೆಗಳಲ್ಲಿ ಹೆಚ್ಚಿನ ಅರ್ಥಗಳನ್ನು  ಕೊಡುವುದು ಬಹುಭಾಷಿಕ ನಿಘಂಟು. ಇವಕ್ಕೆ ಕ್ರಮವಾಗಿ ಈ ಉದಾಹರಣೆ ಗಳನ್ನು ನೋಡಬಹುದು: ಕನ್ನಡ – ಕನ್ನಡ; ಕನ್ನಡ – ಇಂಗ್ಲೀಷ್,  ಕನ್ನಡ – ತೆಲುಗು, ಕನ್ನಡ – ತಮಿಳು, ಕನ್ನಡ – ಮಲಯಾಳ.

ಒಂದು ಭಾಷೆಯಲ್ಲಿನ ಪದಗಳನ್ನು ಸಮಗ್ರವಾಗಿ ಸಂಗ್ರಹಿಸಿದ ಮೇಲೆ ಅವನ್ನು ಆಕಾರಾದಿಯಾಗಿ ವಿಂಗಡಿಸಲಾಗುವುದು. ಆಮೇಲೆ ಒಂದೊಂದು ಪದವನ್ನೂ ಅದರ ವ್ಯಾಕರಣ ವರ್ಗಕ್ಕೆ ಅನುಗುಣವಾಗಿ ಕ್ರಿಯಾಪದ, ನಾಮಪದ, ಗುಣವಾಚಕ, ಅವ್ಯಯ ಮುಂತಾಗಿ ವಿಂಗಡಿಸಿ ಮುಖ್ಯ ಉಲ್ಲೇಖವನ್ನಾಗಿ ಕೊಡಲಾಗವುದು. ಪ್ರತಿಯೊಂದು ಪದದ ಮುಂದೆ ಮೊದಲು ಅದರ ವಾಚಕವನ್ನು ಸೂಚಿಸಿ ಆಮೇಲೆ ಅರ್ಥಗಳನ್ನು ನೀಡಲಾಗುವುದು. ಶಬ್ದಾರ್ಥವನ್ನು ಮೊದಲು ಕೊಟ್ಟು ಆಮೇಲೆ ವಾಚ್ಯಾರ್ಥ, ಲಕ್ಷಣಾರ್ಥ, ಧ್ವನ್ಯಾರ್ಥಗಳನ್ನು ವಿವರಿಸಿ, ಪ್ರತಿಯೊಂದು ಅರ್ಥಕ್ಕೂ ಪ್ರಾಚೀನ ಮತ್ತು ಆಧುನಿಕ ಕಾವ್ಯ ಪ್ರಯೋಗಗಳನ್ನು ಆಕರ ಸಮೇತ ಉದ್ಧರಿಸಲಾಗುವುದು. ಆ ಪದದ ಎಲ್ಲ ಅರ್ಥಗಳೂ ಮುಗಿದ ಮೇಲೆ ಅದರ ನಿಷ್ಪತ್ತಿಯನ್ನು ಕೊಡಲಾಗುತ್ತದೆ. ನಿಷ್ಪತ್ತಿ ವಿಭಾಗದಲ್ಲಿ ಆ ಪದ ಯಾವ ಭಾಷೆಯದು? ದೇಶ್ಯವೆ? ಸಂಸ್ಕೃತವೆ? ಅನ್ಯ ದೇಶ್ಯವೆ? ಎಂಬುದನ್ನು ಸೂಚಿಸಲಾಗುವುದು. ಸಂಸ್ಕೃತ ಭಾಷೆಯ ಪದವಾದರೆ ಅದನ್ನು ಸೂಚಿಸಿ ರೂಪ ವ್ಯತ್ಯಾಸವಾಗಲಿ ಅರ್ಥ ವ್ಯತ್ಯಾಸವಾಗಲಿ ಆಗಿದ್ದರೆ ಅದನ್ನು ನಮೂದಿಸಲಾಗುವುದು. ದೇಶ್ಯಪದವಾದರೆ ಇತರ ದ್ರಾವಿಡ ಭಾಷೆಗಳಲ್ಲಿ ಆ ಪದಕ್ಕಿರುವ ಜ್ಞಾತಿ ಶಬ್ದಗಳನ್ನು ಕೊಡಲಾಗುವುದು. ಅನ್ಯದೇಶ್ಯ ಶಬ್ದವಾದರೆ ಅದು ಯಾವ ಭಾಷೆಯದು ಎಂಬುದನ್ನು ತೋರಿಸಲಾಗುವುದು. ಮುಂದಿನ ಉದಾಹರಣೆಗಳಿಂದ ಈ ಎಲ್ಲ ಅಂಶಗಳನ್ನೂ ಸ್ಪಷ್ಟಪಡಿಸಬಹುದಾಗಿದೆ.

ಅಮಿಷ (ನಾ) – 1. ಮಾಂಸ, 2. ಲೌಕಿಕ ಸುಖ ವೈಭವ, 3. ಚಲನವಿಲ್ಲದಿರುವುದು, 4. ನಿಷ್ಕಪಟ; ಪ್ರಾಮಾಣಿಕತೆ (ಸಂ) (ಕನ್ನಡ ನಿಘಂಟು : 1 – 346)

ಅರಿ (ಕ್ರಿ) – ಅಕ್ಕಿ ಮುಂತಾದ ಧಾನ್ಯಗಳನ್ನು ನೀರಿನಲ್ಲಿ ಜಾಲಿಸಿ ಕಲ್ಲು, ಮಣ್ಣು ತೆಗೆ – ಶೋಧಿಸು (ದೇ: ತಮಿ, ಮಲ, ತುಳು, ಕೊಡ, ಅರಿ) (ಕನ್ನಡ ನಿಘಂಟು : 1 – 381)

ಅಂಗ್ರೋಜಿ(ನಾ) – (ಉಕ) ಇಂಗ್ಲಿಶ್ ಭಾಷೆ : (ಹಿಂ. ಅಂಗ್ರೇಜೀ: :ಮರಾ, ಅಂಗ್ರೇಜ್, ಅಂಗ್ರೇಜಿ (ಇಂ.English) (ಕನ್ನಡ ನಿಘಂಟು : 1 – 19)

ಈ ಮೇಲಿನ ಉದಾಹರಣೆಗಳು ಭಾಷಾಶಾಸ್ತ್ರ ತತ್ವಗಳಿಗನುಸಾರವಾಗಿ ಚಾರಿತ್ರಿಕ ವಿಧಾನದಿಂದ ಕೂಡಿದ ಕನ್ನಡ ನಿಘಂಟಿನ ಸ್ವರೂಪವನ್ನು ವಿವರಿಸುತ್ತದೆ.

ಏಕಭಾಷೀಯ ನಿಘಂಟುಗಳಿಗೆ ಸಂಬಂಧಿಸಿದಂತೆ ಮತ್ತೆ ಕೆಲವು ಅಂಶಗಳನ್ನು ಸ್ಪಷ್ಟಪಡಿಸಬೇಕಾಗಿದೆ. ಈ ನಿಘಂಟುಗಳಲ್ಲಿ ಪ್ರಾದೇಶಿಕ ಶಬ್ದಗಳಿಗೆ ಬೇರೆ ಬೇರೆ ಅರ್ಥಗಳಿರುತ್ತವೆ. ಅವನ್ನು ಅಗತ್ಯವಾಗಿ ದಾಖಲಿಸ ಬೇಕಾಗಿದೆ. ಈ ಮುಂದಿನ ಉದಾಹರಣೆಗಳನ್ನು ನೋಡಿ:

ಅಳಿಯ ಸಂತಾನ ಎಂಬ ನಾಮಪದ ಕರಾವಳಿಯಲ್ಲಿ ಬಳಕೆಯಲ್ಲಿರುವ ಪದ. ಇದಕ್ಕೆ ಸೋದರಳಿಯನಿಗೆ ಮನೆತನದ ಆಸ್ತಿಯ ಹಕ್ಕು ನಿಯಮ ಎಂಬ ಅರ್ಥವಿದೆ. ಕರಾವಳಿಯನ್ನು ಬಿಟ್ಟು ಬೇರೆ ಕಡೆ ಈ ಅರ್ಥವಿಲ್ಲ. (ಕನ್ನಡ ನಿಘಂಟು, ಪು. 527)

ತಿಂಡಿ ಎಂಬ ನಾಮಪದಕ್ಕೆ ತಿನಿಸು, ಆಹಾರ ಎಂಬ ಸಾಮಾನ್ಯ ಅರ್ಥ. ಆದರೆ ಉತ್ತರ ಕರ್ನಾಟಕದಲ್ಲಿ ಇದಕ್ಕೆ ತುರಿಕೆ, ನವೆ, ತೀಟೆ ಎಂಬರ್ಥವಿದೆ. (ಕನ್ನಡ ನಿಘಂಟು, ಪು. 3465)

ಅಂಗಾರ ಎಂಬ ಶಬ್ದಕ್ಕೆ ಕನ್ನಡ ನಿಘಂಟಿನಲ್ಲಿ 1. ಕೆಂಡ, 2. ಇದ್ದಿಲು, 3. ಮಂಗಳಗ್ರಹ, ಅಂಗಾರಕ, 4. ದೇವರ ಧೂಪಾರತಿಯ ಕೆಂಡವನ್ನು ನೀರಿನಲ್ಲಿ ಆರಿಸಿ ಅದರಿಂದ ಮಾಧ್ವರು ಹಣೆಯಲ್ಲಿ ಧರಿಸುವ ಊರ್ಧ್ವರೇಖೆ, 5. (ಉಕ) ಬೂದಿ, 6. (ಉಕ) ದೇವರ ಧೂಪಾರತಿಯ ಬೂದಿ : ದೇವಸ್ಥಾನದಲ್ಲಿ ಅಭಿಮಂತ್ರಿಸಿ ಇಟ್ಟಿರುವ ಬೂದಿ, ಪುರೋಹಿತರು, ಜೋಯಿಸರು ಮೊದಲಾದವರು ಅಭಿಮಂತ್ರಿಸಿ ಕೊಟ್ಟಿರುವ ಬೂದಿ, 7. ಇಂಗಾಲ, ಎಂಬ ಅರ್ಥಗಳನ್ನು ಕೊಟ್ಟಿದೆ, ಇವುಗಳಲ್ಲಿ ಮೊದಲು ಮೂರು ಅರ್ಥಗಳು ಸಂಸ್ಕೃತದಲ್ಲಿ ಪ್ರಸಿದ್ಧವಾದವು. ಉಳಿದವು ಕನ್ನಡದಲ್ಲಿ ಬೆಳೆದು ಬಂದವು. (ಕನ್ನಡ ನಿಘಂಟು, ಸಂಪುಟ. 1 – 16)

ಈ ಮೇಲಿನ ಪ್ರಕಾರದ ನಿಘಂಟುಗಳೇ ಅಲ್ಲದೆ ಗ್ರಾಮ್ಯ ಮತ್ತು ಅಶಿಷ್ಟ ನಿಘಂಟುಗಳೂ ಬಳಕೆಯಲ್ಲಿವೆ.

ನಿಘಂಟುಗಳ ಚರಿತ್ರೆ

ನಿಘಂಟುಗಳ ಉಗಮ ಭರತಖಂಡದಲ್ಲಾಯಿತು ಎಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಸಂಸ್ಕೃತದಲ್ಲಿ ವಿಶ್ವದ ಇತರ ಭಾಷೆಯ ನಿಘಂಟು ಗಳಿಗಿಂತ ಪ್ರಾಚೀನ ನಿಘಂಟುಗಳು ಕಂಡುಬರುತ್ತವೆ. ಕ್ರಿ.ಪೂ. ನಾಲ್ಕನೆಯ ಶತಮಾನಕ್ಕಿಂತಲೂ ಮೊದಲೇ ನಿಘಂಟು ರಚನಾಕಾರ್ಯ ಪ್ರಾರಂಭ ವಾಗಿದ್ದಿತೆಂದು ತಿಳಿದು ಬರುತ್ತದೆ. ಸಂಸ್ಕೃತದಲ್ಲಿ ವೈದಿಕ ನಿಘಂಟೇ ಮೊಟ್ಟ ಮೊದಲನೆಯದು. ಆದರೆ ಈ ನಿಘಂಟಿನ ಕರ್ತೃವಾಗಲಿ ಕಾಲವಾಗಲಿ ತಿಳಿದು ಬಂದಿಲ್ಲ. ವೈದಿಕ ನಿಘಂಟಿಗೆ ಹಲವಾರು ವ್ಯಾಖ್ಯಾನಗಳೂ ಭಾಷ್ಯಗಳೂ ರಚಿತವಾಗಿವೆ. ಇವುಗಳಲ್ಲಿ ಯಾಸ್ಕರ ನಿರುಕ್ತ ಪ್ರಪ್ರಥಮ ವಾದದ್ದು. ಈ ಯಾಸ್ಕರು ಪಾಣಿನಿಗಿಂತ ಹಿಂದಿನವರು. ಇವರ ಕಾಲ ಕ್ರಿ.ಪೂ. ಏಳನೆಯ ಶತಮಾನವಿರಬಹುದು ಎಂದು ವಿದ್ವಾಂಸರು ಊಹಿಸಿದ್ದಾರೆ. ಕ್ರಿ.ಶ. ಆರನೆಯ ಶತಮಾನದ ಅಮರಸಿಂಹನ ಅಮರಕೋಶದಿಂದ ಹಿಡಿದು ಹದಿನೇಳನೆಯ ಶತಮಾನದವರೆಗೆ ಅನೇಕ ನಿಘಂಟುಗಳು ರಚಿತವಾಗಿರುವು ದನ್ನು ಕಾಣಬಹುದಾಗಿದೆ. ಪಾಲಿ ಮತ್ತು ಪ್ರಾಕೃತ ನಿಘಂಟುಗಳು ಹನ್ನೆರಡನೆಯ ಶತಮಾನದಿಂದಲೇ ಬಳಕೆಯಲ್ಲಿದ್ದಂತೆ  ತಿಳಿದುಬರುತ್ತದೆ.

ಕನ್ನಡದಲ್ಲಿ ನಿಘಂಟುಶಾಸ್ತ್ರ ಬಹಳ ಹಿಂದಿನಿಂದಲೇ ಬೆಳೆದುಕೊಂಡು ಬಂದಿದೆ. ಸುಮಾರು ಒಂದು ಸಾವಿರ ವರ್ಷಗಳ ಪ್ರಾಚೀನತೆ ಈ ಶಾಸ್ತ್ರಕ್ಕೆ ಇರುವುದು ಕಂಡು ಬರುತ್ತದೆ. ಕ್ರಿ.ಶ. ಹತ್ತನೆಯ ಶತಮಾನದಲ್ಲಿದ್ದ ಕವಿ ಚಕ್ರವರ್ತಿ ರನ್ನನ ‘ರನ್ನಕಂದ’ವೇ ಕನ್ನಡ ಮೊತ್ತಮೊದಲ ನಿಘಂಟು. ಈ ನಿಘಂಟಿನ 45 ಪದ್ಯಗಳು ಇತ್ತೀಚೆಗೆ ಪ್ರಕಟವಾಗಿವೆ. ಈ ಪ್ರಾಚೀನ ನಿಘಂಟಿನಲ್ಲಿ ಹಳಗನ್ನಡ ಶಬ್ದಗಳಿಗೆ ಅರ್ಥಗಳನ್ನು ಕೊಡಲಾಗಿದೆ. ಪಾಠ ತೀರ ಅಶುದ್ಧವಾಗಿದ್ದು ಸ್ಖಾಲಿತ್ಯಗಳಿಂದ ಕೂಡಿದೆ. ಕ್ರಿ.ಶ. 1145 ರಲ್ಲಿದ್ದ ಎರಡನೆಯ ನಾಗವರ್ಮ ಕಂದ ಮತ್ತು ವೃತ್ತಗಳಲ್ಲಿ ‘ಅಭಿದಾನ ವಸ್ತುಕೋಶ’ ವನ್ನು ರಚಿಸಿದ್ದಾನೆ. ಕನ್ನಡ ಕಾವ್ಯಗಳಲ್ಲಿರುವ ಸಂಸ್ಕೃತ ಶಬ್ದಗಳಿಗೆ ಅರ್ಥ ಗಳನ್ನು ಈ ನಿಘಂಟಿನಲ್ಲಿ ನಿರೂಪಿಸಿದೆ. ಇದೇ ನಾಗವರ್ಮನಿಂದ ‘ಅಭಿದಾನ ರತ್ನಮಾಲಾ’ ಕರ್ನಾಟಕ ಟೀಕೆ ಎಂಬ ನಿಘಂಟು ರಚಿತವಾಗಿದೆ. ಇದು ಭಟ್ಟಹಲಾಯುಧನ ‘ಅಭಿಧಾನ ರತ್ನಮಾಲೆ’ ಎಂಬ ಸಂಸ್ಕೃತ ನಿಘಂಟಿಗೆ ಬರೆದಿರುವ ಮೊಟ್ಟಮೊದಲನೆಯ ಟೀಕು. ಇದರಲ್ಲಿ ಸಂಸ್ಕೃತ, ಸಮಸಂಸ್ಕೃತ ಶಬ್ದಗಳಿಗೆ ಅರ್ಥ ನೀಡಲಾಗಿದೆ. ಕೇಶಿರಾಜ ತನ್ನ ಶಬ್ದಮಣಿದರ್ಪಣದ ‘ಧಾತು ಪ್ರಕರಣ’ದಲ್ಲಿ 985 ಧಾತುಗಳಿಗೆ ಅರ್ಥಗಳನ್ನೂ ‘ಸಹಜ ಱೞಂಗಳ್’ ಎಂಬ ವಿಭಾಗದಲ್ಲಿ 181 ಶಬ್ದಗಳ ವಿವಿಧಾರ್ಥಗಳನ್ನೂ ‘ಪ್ರಯೋಗಸಾರ’ವೆಂಬ ಶಬ್ದಾರ್ಥ ನಿರ್ಣಯ ಎಂಬ ವಿಭಾಗದಲ್ಲಿ ಪ್ರಾಚೀನ ಕವಿಗಳು ಬಳಸಿರುವ 233 ಪದಗಳ ಅರ್ಥಗಳನ್ನು ವಿವರಿಸಿದ್ದಾನೆ. ಕ್ರಿ.ಶ. 1398ರಲ್ಲಿದ್ದ ಎರಡನೆಯ ಮಂಗರಾಜ ಅಭಿನಾವಾಭಿಧಾನಂ ಎಂಬ ನಿಘಂಟನ್ನು ರಚಿಸಿದ್ದಾನೆ. ಇದರಲ್ಲಿ ಸಂಸ್ಕೃತ ಶಬ್ದಗಳಿಗೆ ಕನ್ನಡದಲ್ಲಿ ಅರ್ಥವನ್ನು ಕೊಟ್ಟಿದೆ. ಕ್ರಿ.ಶ. 1400 ರಲ್ಲಿ ರಚಿತವಾಗಿರಬಹುದಾದ ಕರ್ಣಾಟಕ ಶಬ್ದಸಾರಂ ಎಂಬ ಗದ್ಯ ನಿಘಂಟಿನಲ್ಲಿ 1416 ಪದಗಳಿಗೆ ಕನ್ನಡದಲ್ಲಿ ಅರ್ಥವನ್ನು ವಿವರಿಸಿದೆ. ಈ ನಿಘಂಟಿನ ಕರ್ತೃ ತಿಳಿದು ಬಂದಿಲ್ಲ. ಇದೇ ಕಾಲದ ಕರ್ತೃ ತಿಳಿಯದ ಕರ್ಣಾಟಕ ನಿಘಂಟುವಿನಲ್ಲಿ 99 ಕಂದ ಮತ್ತು ವೃತ್ತಗಳಿವೆ. ಇದರಲ್ಲಿ ಹಳಗನ್ನಡ ಪದಗಳಿಗೆ ಅರ್ಥಗಳನ್ನು ಹೇಳಿದೆ. ಕ್ರಿ.ಶ. 1450 ರಲ್ಲಿದ್ದ ಚತುರಾಸ್ಯ ಬೊಮ್ಮರಸ 137 ಕಂದ ಪದ್ಯಗಳಲ್ಲಿ ಚತುರಾಸ್ಯ ನಿಘಂಟನ್ನು ರಚಿಸಿದ್ದಾನೆ. ಇದರಲ್ಲಿ ದೇಶ್ಯ ತತ್ಸಮ ತದ್ಭವ ಶಬ್ದಗಳಿಗೆ ಅರ್ಥಗಳನ್ನು ಕೊಡಲಾಗಿದೆ. ಕ್ರಿ.ಶ. 1530 ರಲ್ಲಿದ್ದ ಅಂಗಮಂತ್ರಿ ಕಬ್ಬಿಗರ ಕೈಪಿಡಿಯನ್ನು ಸಂಕಲಿಸಿದ್ದಾನೆ. ಇದು ವಾರ್ಧಕ ಷಟ್ಪದಿಯಲ್ಲಿದೆ. 101 ಪದ್ಯಗಳಿರುವ ಈ ನಿಘಂಟಿನಲ್ಲಿ ಹಳಗನ್ನಡ ಪದಗಳಿಗೆ ಅರ್ಥಗಳನ್ನು ವಿವರಿಸಿದೆ. ವಿರಕ್ತ ತೋಂಟದಾರ್ಯ ಕ್ರಿ.ಶ. ಸುಮಾರು 1560 ವಾರ್ಧಕ ಷಟ್ಪದಿಯಲ್ಲಿ ಕರ್ಣಾಟಕ ಶಬ್ದಮಂಜರಿಯನ್ನು ರಚಿಸಿದ್ದಾನೆ. ಇದರಲ್ಲಿ 120 ಪದ್ಯಗಳಿವೆ. ಈ ನಿಘಂಟಿಗೆ ನಾಲ್ಕು ಟೀಕೆಗಳು ರಚಿತವಾಗಿವೆ. ಪ್ರಾಚೀನ ಕಾವ್ಯಗಳಲ್ಲಿನ ಹಳಗನ್ನಡ ಶಬ್ದಗಳಿಗೆ ಅರ್ಥಗಳನ್ನು ಇದರಲ್ಲಿ ವಿವರಿಸಿದೆ. ಕ್ರಿ.ಶ. ಸುಮಾರು 1600ರಲ್ಲಿ ರಚಿತವಾಗಿರಬಹುದಾದ ‘ಭಾರತ ನಿಘಂಟಿ’ನಲ್ಲಿ 67 ಕಂದ ಪದ್ಯಗಳಿವೆ. ಕುಮಾರವಾಸ್ಯನೇ ಈ ನಿಘಂಟನ್ನು ರಚಿಸಿರಬಹುದೆಂಬ ಪ್ರತೀತಿ ಇದೆ. ಇದರಲ್ಲಿ ಕುಮಾರವಾಸ್ಯ ಭಾರತದಲ್ಲಿನ ಕೆಲವು ದೇಶ್ಯ ಶಬ್ದಗಳಿಗೆ ಅರ್ಥಗಳನ್ನು ಕೊಟ್ಟಿದೆ. ಕ್ರಿ.ಶ. ಸುಮಾರು 1600ರಲ್ಲಿದ್ದ ಶೃಂಗಾರ ಕವಿ ‘ಕರ್ಣಾಟಕ ಸಂಜೀವನ’ ಎಂಬ ನಿಘಂಟನ್ನು ವಾರ್ಧಕ ಷಟ್ಪದಿಯಲ್ಲಿ ರಚಿಸಿದ್ದಾನೆ. ಇದರಲ್ಲಿ 35 ಪದ್ಯಗಳಿವೆ, ಇದಕ್ಕೆ ‘ಱೞ ಕುಳ ನಿಘಂಟು’ ಎಂಬ ಹೆಸರೂ ಇದ್ದಂತೆ ತಿಳಿದು ಬರುತ್ತದೆ. ಇದರಲ್ಲಿ ಱೞ ಕುಳಕ್ಷಳ ಶಬ್ದಗಳಿಗೆ ಅರ್ಥವನ್ನು ವಿವರಿಸಿದೆ. ಕ್ರಿ.ಶ. 1640 ರಲ್ಲಿದ್ದ ಸೂರ್ಯಕವಿ ‘ಕವಿಕಂಠಹಾರ’ ಎಂಬ 271 ಕಂದಪದ್ಯಗಳಿರುವ ನಿಘಂಟನ್ನು ಸಂಕಲಿಸಿದ್ದಾನೆ. ಕನ್ನಡ ಪ್ರಾಚೀನ ಕಾವ್ಯಗಳಲ್ಲಿನ ಶಬ್ದಗಳಿಗೆ ಅರ್ಥವನ್ನು ಇದರಲ್ಲಿ ವಿವರಿಸಿದೆ.

ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನಗಳಲ್ಲಿ ಭರತಖಂಡಕ್ಕೆ ಕ್ರೈಸ್ತಧರ್ಮ ಪ್ರಸಾರಕ್ಕಾಗಿ ನಿಯೋಜಿತರಾಗಿ ಬಂದ ವಿದೇಶೀ ವಿದ್ವಾಂಸರು ಈ ದೇಶದ ಹಲವಾರು ಭಾಗಗಳಲ್ಲಿ ನೆಲಸಿ ಆಯಾ ದೇಶಭಾಷೆಗಳಿಗೆ ಸಂಬಂಧಿಸಿದ ನಿಘಂಟುಗಳನ್ನು ರಚಿಸಿದ್ದಾರೆ. ಧರ್ಮ ಪ್ರಸಾರಕ್ಕೆ ಭಾಷಾ ಮಾಧ್ಯಮ ಅನಿವಾರ್ಯ ಎಂಬುದನ್ನು ಇವರು ಮನಗಂಡಿದ್ದರು. ಪ್ರಸ್ತುತ ಕನ್ನಡಕ್ಕೆ ನಿಘಂಟುಗಳನ್ನು ರಚಿಸಿದವರಲ್ಲಿ ರೆವೆರೆಂಡ್ ರೀವ್, ವಿಲಿಯಂ ಸ್ಯಾಂಡರ್‌ಸನ್ ಗ್ಯಾರೆಟ್, ಬುಚರ್, ಝಗ್ಲರ್, ರೆವೆರೆಂಡ್ ಎಫ್. ಕಿಟೆಲ್ ಪ್ರಮುಖರು. ಪಾಶ್ಚಾತ್ಯ ವಿದ್ವಾಂಸರು ಕನ್ನಡಕ್ಕೆ ಸಿದ್ಧಪಡಿಸಿದ ನಿಘಂಟುಗಳಲ್ಲಿ ಕ್ರಿ.ಶ. 1832 ರಲ್ಲಿ ರೆ. ರೀವ್ ಅವರ ‘ಎ ಡಿಕ್ಷನರಿ ಆಫ್ ಕೆನರೀಸ್ ಅಂಡ್ ಇಂಗ್ಲಿಶ್’ ಮೊದಲನೆಯದು. ಇದರಲ್ಲಿ ಕನ್ನಡ ಸಂಸ್ಕೃತ ಶಬ್ದಗಳಿಗೆ ಇಂಗ್ಲಿಷಿನಲ್ಲಿ ಅರ್ಥಗಳನ್ನು ಹೇಳಿದೆ. ಡೇನಿಯಲ್ ಸ್ಯಾಂಡರ್‌ಸನ್, ರೆ. ರೀವ್ ಅವರ ನಿಘಂಟನ್ನು ಪರಿಷ್ಕರಿಸಿ ವಿಸ್ತರಿಸಿ ಕ್ರಿ.ಶ. 1858 ರಲ್ಲಿ ಪ್ರಕಟಿಸಿದ್ದಾನೆ. ರೆ.ಎಫ್. ಕಿಟೆಲ್ ಅವರು ಕನ್ನಡಕ್ಕೆ ಒಂದು ಶಾಸ್ತ್ರೀಯವಾದ ಆಧುನಿಕ ನಿಘಂಟನ್ನು ರಚಿಸಿ 1893 ರಲ್ಲಿ ಪ್ರಕಟಿಸಿದ್ದಾರೆ. ಪ್ರತಿಯೊಂದು ಶಬ್ದಕ್ಕೂ ಆಕರಗಳನ್ನು ಸೂಚಿಸಿರುವ ಈ ನಿಘಂಟು ಪ್ರಮಾಣಭೂತವಾದುದು. ಈ ನಿಘಂಟಿನ ಸ್ವರೂಪ ಇಂತಿದೆ.

ಕಿಟೆಲ್ ಅವರು ತಮ್ಮ ನಿಘಂಟಿನಲ್ಲಿ ಅನುಸರಿಸಿದ ವಿಧಾನ ತುಂಬ ಶಾಸ್ತ್ರೀಯವಾದುದು, ದೇಶ್ಯ, ಸಂಸ್ಕೃತ, ಅನ್ಯದೇಶ್ಯ ಶಬ್ದಗಳನ್ನು ಪ್ರತ್ಯೇಕವಾಗಿ ವಿಂಗಡಿಸಿ ತೋರಿಸಿಕೊಟ್ಟಿದ್ದಾರೆ. ದೇಶ್ಯಶಬ್ದಕ್ಕೆ ಪ್ರಾಮುಖ್ಯ ಕೊಟ್ಟು ಅವನ್ನು ದಪ್ಪ ಅಕ್ಷರದಲ್ಲಿ ಅಚ್ಚು ಮಾಡಿದ್ದಾರೆ. ಸಂಸ್ಕೃತ ಮತ್ತು ಅನ್ಯದೇಶ್ಯ ಶಬ್ದಗಳನ್ನು ಸಣ್ಣ ಅಕ್ಷರಗಳಲ್ಲಿ ಸೂಚಿಸಿದ್ದಾರೆ. ದೇಶ್ಯ ಶಬ್ದಗಳಿಗೆ ಮೊದಲು ಅರ್ಥಗಳನ್ನು, ಆಮೇಲೆ ಕಾವ್ಯ ಪ್ರಯೋಗಗಳ ಆಕರಗಳನ್ನೂ ಇತರ ನಿಘಂಟುಗಳಲ್ಲಿ ಸಿಕ್ಕುವ ಅರ್ಥಗಳನ್ನೂ, ಆಕರಗಳನ್ನೂ ಕೊಟ್ಟಿದ್ದಾರೆ. ಆದಾದ ಮೇಲೆ ದ್ರಾವಿಡ ಭಾಷೆಯ ಸೋದರ ಭಾಷೆಗಳಾದ ತಮಿಳು, ತುಳು, ಮಲಯಾಳ, ತೆಲುಗು ಭಾಷೆಗಳಿಂದ ಜ್ಞಾತಿ ಶಬ್ದಗಳನ್ನು ಸೂಚಿಸಿದ್ದಾರೆ. ಕೊನೆಯಲ್ಲಿ ಉಪಲಬ್ದವಿದ್ದ ಆಕರಗಳನ್ನು ಅಲ್ಲಲ್ಲಿ ಕೊಟ್ಟಿದ್ದಾರೆ. ಅನ್ಯದೇಶ್ಯ ಶಬ್ದಗಳಿಗೆ ಅರ್ಥಗಳನ್ನು ಕೊಟ್ಟಮೇಲೆ ಅದು ಯಾವ ಭಾಷೆಯಿಂದ ಬಂದದ್ದು ಎಂಬುದನ್ನು ಸೂಚಿಸಿದ್ದಾರೆ. ಒಂದು ಶಬ್ದ ಬೇರೆ ಬೇರೆ ಮೂಲಗಳಿಂದ ಬಂದದ್ದಾಗಿದ್ದು, ಪ್ರತ್ಯೇಕ ನಿಷ್ಪತ್ತಿಯನ್ನು ಹೊಂದಿದ್ದರೆ ಆ ಶಬ್ದವನ್ನು ಪ್ರತ್ಯೇಕ ಮುಖ್ಯ ಉಲ್ಲೇಖಗಳಾಗಿ ಕೊಟ್ಟಿದ್ದಾರೆ. ಈ ಕ್ರಮ ಜನತೆಗೆ ಅತ್ಯಂತ ಉಪಯುಕ್ತವಾದುದು. ಕಿಟೆಲ್ ಅವರ ಸಮಕಾಲೀನ ಮತ್ತು ಅವರ ತರುವಾಯದ ಯಾವ ನಿಘಂಟುಗಳಲ್ಲಿಯೂ – ಅಷ್ಟೇ ಏಕೆ ಭಾರತದ ಬೇರಾವ ಭಾಷೆಗಳ ನಿಘಂಟಿನಲ್ಲಿಯೂ ಈ ವಿಧಾನ ಕಂಡು ಬರುವುದಿಲ್ಲ. ಈ ತೆರನ ಅತ್ಯಂತ ಶಾಸ್ತ್ರೀಯ ನಿಘಂಟನ್ನು ಕನ್ನಡ ದಲ್ಲಿ ಮೊಟ್ಟ ಮೊದಲಬಾರಿಗೆ ರಚಿಸಿದ ಶ್ರೇಯಸ್ಸು ಕಿಟೆಲ್ಲರಿಗೆ ಸಲ್ಲುತ್ತದೆ.

ಕಿಟೆಲ್ ಅವರ ನಿಘಂಟಿನಲ್ಲಿರುವ ಪ್ರತಿಯೊಂದು ಶಬ್ದಕ್ಕೂ ಆಧಾರವನ್ನು ಕೊಡಲಾಗಿದೆ. ಶಬ್ದಗಳಿಗೆ ಕಾವ್ಯಪ್ರಯೋಗಗಳ ಆಧಾರವಿದ್ದರೆ ಅವನ್ನು ಉದ್ಧರಿಸಲಾಗಿದೆ. ಇಲ್ಲವೆ ಆ ಶಬ್ದಗಳು ಆಡುಮಾತಿನಲ್ಲಿ ಮಾತ್ರ ಇದ್ದರೆ ಅವು ಯಾವ ಪ್ರಾಂತದಲ್ಲಿ ಯಾವ ಅರ್ಥದಲ್ಲಿ ಬಳಕೆಯಲ್ಲಿವೆ ಎಂಬುದನ್ನು ಸೂಚಿಸಲಾಗಿದೆ.

ಕಿಟೆಲ್ ಅವರ ಈ ಕ್ರಮದಿಂದ ಪ್ರಾಚೀನ ಕಾವ್ಯಗಳಲ್ಲಿನ ಶಬ್ದಗಳಷ್ಟೇ ಅಲ್ಲದೆ ಪ್ರಾದೇಶಿಕ ಶಬ್ದಗಳೂ ಆಡುಮಾತಿನ ಶಬ್ದಗಳೂ ನುಡಿಗಟ್ಟುಗಳೂ ಗ್ರಾಮ್ಯತಿಶಬ್ದಗಳೂ ಈ ನಿಘಂಟಿನಲ್ಲಿ ಸೇರಲು ಅವಕಾಶವಾಯಿತು. ಕರ್ಣಾಟಕದ ಎಲ್ಲ ಭಾಗದ ಶಬ್ದಗಳೂ ಈ ನಿಘಂಟಿನಲ್ಲಿ ಎಡೆಪಡೆದಿವೆ. ಕನ್ನಡದ ಯಾವೊಂದು ಶಬ್ದವೂ ಬಿಟ್ಟು ಹೋಗಬಾರದೆಂಬುದೇ ಅವರ ಉದ್ದೇಶವಾಗಿದ್ದಂತೆ ಕಂಡು ಬರುತ್ತದೆ. ಇಡೀ ಕನ್ನಡಿಗರಿಗೆ ಈ ನಿಘಂಟು ತುಂಬಾ ಉಪಯುಕ್ತವಾಗಿದೆ. ಕಿಟೆಲ್ ಅವರು ಈ ನಿಘಂಟಿನ ಕೆಲಸಕ್ಕಾಗಿ ಕರ್ನಾಟಕದ ಮೂಲೆ ಮೂಲೆಗಳಲ್ಲಿಯೂ ಸಂಚರಿಸಿದ್ದರು.

ಕಿಟೆಲ್ ಅವರು ತಮ್ಮ ನಿಘಂಟಿನಲ್ಲಿ ಏಕಾಕ್ಷರ ಶಬ್ದಗಳು, ಪ್ರತ್ಯಯಗಳು, ವ್ಯಾಕರಣ ಪ್ರಕ್ರಿಯೆಗಳು, ಸಮುಚ್ಛಯಗಳು  – ಈ ಮೊದಲಾದ ಎಲ್ಲ ಪ್ರಕಾರದ ಶಬ್ದಗಳನ್ನೂ ಸೂಚಿಸಿದ್ದಾರೆ. ಜೊತೆಗೆ ಅಂಕಿತ ನಾಮಗಳನ್ನೂ ಕೊಟ್ಟಿದ್ದಾರೆ. ಸಮಾಸ ಶಬ್ದಗಳನ್ನು ಕಿಟೆಲ್ ಅವರು ವಿವೇಚಿಸಿರುವ ವಿಧಾನ ವಿಶಿಷ್ಟ ರೀತಿಯದ್ದಾಗಿದೆ. ಅವನ್ನು ಅವರು ಪ್ರತ್ಯೇಕ ಮುಖ್ಯ ಉಲ್ಲೇಖಗಳಾಗಿ ಕೊಡದೆ ಮುಖ್ಯ ಶಬ್ದದ ಕೆಳಗೇ ಸೂಚಿಸಿದ್ದಾರೆ. ಇದರಿಂದ ಸಮಾಸಗಳು ಯಾವ ಶಬ್ದದಿಂದ ಬಂದಿವೆ ಎಂಬುದು ಓದುಗರಿಗೆ ಸುಲಭವಾಗಿ ಮನ ದಟ್ಟಾಗುತ್ತದೆ.

ಹತ್ತೊಂಬತ್ತನೆಯ ಶತಮಾನದ ಆದಿಭಾಗದ ವೇಳೆಗೆ ಹಲವಾರು ಪ್ರಾಚೀನ ಕೃತಿಗಳು ಬೆಳಕನ್ನೇ ಕಂಡಿರಲಿಲ್ಲ. ಕನ್ನಡದ ಪ್ರಥಮ ಕೃತಿಯಾದ ಕವಿರಾಜಮಾರ್ಗವಾಗಲೀ, ತರುವಾಯದ ಕೃತಿಗಳಾದ ವಡ್ಡಾರಾಧನೆ, ಆದಿಪುರಾಣ, ಪಂಪಭಾರತ, ಶಾಂತಿಪುರಾಣ, ಗದಾಯುದ್ಧ, ಅಜಿತಪುರಾಣ ಮೊದಲಾದ ಶ್ರೇಷ್ಠ ಕೃತಿಗಳಾಗಲಿ ಪ್ರಕಟವಾಗಿರಲಿಲ್ಲ. ಅಂದು ಅವರಿಗೆ ದೊರೆತ ಸುಮಾರು ಮೂವತ್ತಾರು ಕೃತಿಗಳೇ ಅವರ ನಿಘಂಟಿಗೆ ಆಧಾರ. ಅದರಲ್ಲೂ ಕೆಲವನ್ನು ಕಾಲದ ಅಭಾವದಿಂದ ಪೂರ್ತಿ ಪರಿಶೀಲಿಸಲಾಗಲಿಲ್ಲ ವೆಂದು ಅವರೇ ಹೇಳಿಕೊಂಡಿದ್ದಾರೆ. ತಮಗೆ ಆ ಕಾಲಕ್ಕೆ ದೊರೆತ ಕೆಲವೇ ಕೃತಿಗಳಿಂದ ಕಿಟೆಲ್ ಅವರು ತಮ್ಮ ಬೃಹತ್ ನಿಘಂಟನ್ನು ರಚಿಸಿದ್ದು ಅವರ ಅಪಾರ ಪಾಂಡಿತ್ಯಕ್ಕೂ ಮೇಧಾಶಕ್ತಿಗೂ ಕುರುಹಾಗಿದೆ.

ದೇಶೀಯ ವಿದ್ವಾಂಸರೂ ಕನ್ನಡಕ್ಕೆ ಕೆಲವು ನಿಘಂಟುಗಳನ್ನು ಸಿದ್ಧಪಡಿಸಿಕೊಟ್ಟಿದ್ದಾರೆ. ಗುರುರಾವ ವಿಠಲ ಮೋಹರೆ ಅವರು ಕ್ರಿ.ಶ.1874 ರಲ್ಲಿ ‘ಶಬ್ದ ಸಂಗ್ರಹ’ ಎಂಬ ನಿಘಂಟನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ ಕನ್ನಡದಲ್ಲಿರುವ ಸಂಸ್ಕೃತ ಶಬ್ದಗಳಿಗೆ ಅರ್ಥಗಳನ್ನು ಕೊಟ್ಟಿದೆ. ಕ್ರಿ.ಶ. 1885 ರಲ್ಲಿ ರಾಮಸ್ವಾಮಿ ಮತ್ತು ಹೆಸರುಘಟ್ಟದ ಹೊನ್ನಪ್ಪನವರು ‘ಕರ್ಣಾಟ ಕಲ್ಪದ್ರುಮ’ ಎಂಬ ನಿಘಂಟನ್ನು ರಚಿಸಿದ್ದಾರೆ. ಕನ್ನಡ ಸಂಸ್ಕೃತ ಶಬ್ದಗಳಿಗೆ ಇದರಲ್ಲಿ ಅರ್ಥಗಳನ್ನು ವಿವರಿಸಿದ್ದಾರೆ. ಗಂಗಾಧರ ಮಡಿವಾಳೇಶ್ವರ ತುರಮರಿ ಅವರು ಕ್ರಿ.ಶ. 1890 ರಲ್ಲಿ ‘ಶಬ್ದಮಂಜರಿ’ ಎಂಬ ನಿಘಂಟನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಹಳಗನ್ನಡ ಮತ್ತು ದೇಶ್ಯಶಬ್ದಗಳಿಗೆ ಅರ್ಥಗಳನ್ನು ವಿವರಿಸಿದೆ. ಕ್ರಿ.ಶ. 1891 ರಲ್ಲಿ ನರಸಿಂಗರಾವ್ ಅವರು ‘ಕಿಸಂವಾರ್ ಗ್ಲಾಸರಿ’ ಎಂಬ ನಿಘಂಟನ್ನು ಸಿದ್ಧಪಡಿಸಿದ್ದಾರೆ. ಇದರಲ್ಲಿ ದೇಶ್ಯ ಅನ್ಯದೇಶ್ಯ ಮತ್ತು ಕನ್ನಡ ಶಬ್ದಗಳಿಗೆ ಇಂಗ್ಲಿಶಿನಲ್ಲಿ ಅರ್ಥವನ್ನು ಕೊಟ್ಟಿದೆ.

ಈ ನಿಘಂಟುಗಳೇ ಅಲ್ಲದೆ ಜಾನ್ ಗ್ಯಾರೆಟ್ 1871 ರಲ್ಲಿ ‘ಎ ಮ್ಯಾನ್ಯುಯಲ್ ಕ್ಯಾನರೀಸ್ ಅಂಡ್ ಇಂಗ್ಲಿಷ್ ಡಿಕ್ಷನರಿ’ಯನ್ನೂ  ಜಯರಾಯಾಚಾರ್ಯರು 1891 ರಲ್ಲಿ ‘ಕರ್ಣಾಟಕ ಭಾಷಾಕರ’ವನ್ನೂ ರೆವೆರೆಂಡ್ ಬುಚರ್ 1899 ರಲ್ಲಿ ‘ಕನ್ನಡ – ಇಂಗ್ಲಿಷ್ ಸ್ಕೂಲ್ ಡಿಕ್ಷನರಿ’ ಯನ್ನೂ ರೆವೆರೆಂಡ್ ಎಫ್. ಜಿಗ್ಲರ್ 1919 ರಲ್ಲಿ ‘ದಿ ಇಂಗ್ಲಿಷ್ ಕ್ಯಾನರೀಸ್ ಸ್ಕೂಲ್ ಡಿಕ್ಷನರಿ’ಯನ್ನೂ ಸಂಕಲಿಸಿದ್ದಾರೆ. ಅಲ್ಲದೆ ಕೆ.ಆರ್. ಚಕ್ರವರ್ತಿ ಅವರು 1923 ರಲ್ಲಿ ‘ಪಾರಿಭಾಷಿಕ ನಿಘಂಟನ್ನೂ’ ರಘುಪತ್ಯಾಚಾರ್ಯ ಅವರು 1932 ರಲ್ಲಿ ‘ಕರ್ಣಾಟಕ ಭಾಷಾ ರತ್ನಾಕ’ ನಿಘಂಟನ್ನು, ಕೆ. ಶಿವರಾಮ ಕಾರಂತ ಅವರು 1940 ರಲ್ಲಿ ‘ಸಿರಿಗನ್ನಡ ಅರ್ಥಕೋಶ’ವನ್ನು ಬೆನಗಲ್ ರಾಮರಾವ್ ಮತ್ತು ವಿದ್ವಾನ್ ಪಾನ್ಯಂ ಸುಂದರಶಾಸ್ತ್ರಿ ಅವರು 1941 ರಲ್ಲಿ  ‘ಪುರಾಣನಾಮ ಚೂಡಾಮಣಿ’ಯನ್ನು ಸಿ.ಜಿ. ಹಳಕಟ್ಟಿ ಅವರು 1942 ರಲ್ಲಿ ‘ಶಿವಾನುಭವ ಶಬ್ದಕೋಶ’ವನ್ನು ಮಚ್ಚಿಮಲೆ ಶಂಕರ ನಾರಾಯಣರಾವ್, ಆರ್.ಎಸ್. ಸಾವುರ್‌ಕರ್, ಸೇಡಿಯಾಪು ಕೃಷ್ಣಭಟ್ಟ ಅವರುಗಳು 1951 ರಲ್ಲಿ ‘ಕನ್ನಡ ನಿಘಂಟು’ವನ್ನು ಎಸ್.ವಿ. ರಮಾಕಾಂತ ರಾವ್ ಅವರು 1852 ರಲ್ಲಿ ‘ಕನ್ನಡ ಕನ್ನಡ ಶಬ್ದಕೋಶ’ವನ್ನು ಗುರುನಾಥ ಜೋಷಿ ಮತ್ತು ಜಿ. ಅಶ್ವತ್ಥನಾರಾಯಣ ರಾವ್ ಅವರು 1956 ರಲ್ಲಿ ‘ಕನ್ನಡ ಕನ್ನಡ ಶಬ್ದಕೋಶ’ ವನ್ನು ಡಿ.ವಿ. ಹೊಳ್ಳ ಅವರು 1956 ರಲ್ಲಿ ‘ತದ್ಭವ ಸಂಸ್ಕೃತ ಕೋಶ’ವನ್ನು ಬಿ.ಎಸ್. ಗದ್ದಗಿ ಮಠ ಅವರು 1956 ರಲ್ಲಿ ‘ಕನ್ನಡ ಜಾನಪದ  ಶಬ್ದಕೋಶ’ವನ್ನು,  ಆರ್.ಎಸ್. ರಾಮರಾವ್ ಅವರು 1965 ರಲ್ಲಿ ಕನ್ನಡ – ಕನ್ನಡ ಇಂಗ್ಲಿಷ್ ನಿಘಂಟನ್ನು ಎಲ್. ಗುಂಡಪ್ಪನವರು 1965 ರಲ್ಲಿ ‘ಪತ್ರಿಕಾ ನಿಘಂಟು’ವನ್ನು ಪ್ರೊ.ಸ.ಸ. ಮಾಳವಾಡ, ಕ.ವೆಂ. ರಾಜಗೋಪಾಲ ಮತ್ತು ಟಿ. ಕೇಶವಭಟ್ಟ ಅವರು 1970 ರಲ್ಲಿ ‘ಕನ್ನಡ ಕಾವ್ಯ ಪದಮಂಜರಿ’ಯನ್ನು ಪಂಡಿತ ಯಜ್ಞಾ ನಾರಾಯಣ ಉಡುಪ ಅವರು 1975 ರಲ್ಲಿ ‘ಪುರಾಣ  ಭಾರತಕೋಶ’ವನ್ನು ಡಾ. ಟಿ.ವಿ. ವೆಂಕಟಾಚಲಶಾಸ್ತ್ರಿ ಅವರು 1971 ರಲ್ಲಿ ‘ಶ್ರೀವತ್ಸ ನಿಘಂಟು’ ವನ್ನು ಎನ್ಕೆ ಅವರು 1975 ರಲ್ಲಿ ‘ಸಂಕ್ಷಿಪ್ತ ಕನ್ನಡ ನಿಘಂಟು’ವನ್ನು 1977 ರಲ್ಲಿ ‘ಕನ್ನಡ ರತ್ನಕೋಶ’ವನ್ನೂ ಪ್ರೊ.ಜಿ. ವೆಂಕಟಸುಬ್ಬಯ್ಯ ಮತ್ತು ಇತರರು 1981 ರಲ್ಲಿ ‘ಕನ್ನಡ – ಕನ್ನಡ – ಇಂಗ್ಲಿಷ್ – ನಿಘಂಟು’ವನ್ನು, ತ.ಸು. ಶಾಮರಾಯರು ಮತ್ತು ಪ. ನಾಗರಾಜಯ್ಯ ಅವರು 1981 ರಲ್ಲಿ ‘ಜೈನ ಪರಿಭಾಷಾ ರತ್ನಕೋಶ’ವನ್ನು ಟಿ.ಎಸ್. ಶ್ಯಾಮರಾವ್ ಅವರು 1981 ರಲ್ಲಿ ‘ಕುಮಾರವ್ಯಾಸ ಭಾರತ ನಿಘಂಟು’ವನ್ನು ಪ್ರಕಟಿಸಿದ್ದಾರೆ.

ಸ್ವಾತಂತ್ರೋತ್ತರದಲ್ಲಿ ಕನ್ನಡದಲ್ಲಿ ಪ್ರಕಟವಾಗಿರುವ ದ್ವಿಭಾಷಿಕ, ಬಹುಭಾಷಿಕ ನಿಘಂಟುಗಳು ಬಹುಮುಖ್ಯವಾದವು. ಮೈಸೂರು ವಿಶ್ವವಿದ್ಯಾನಿಲಯ ಶ್ರೇಷ್ಠ ವಿದ್ವಾಂಸರ ನೆರವಿನಿಂದ ‘ಇಂಗ್ಲಿಷ್ ಕನ್ನಡ ನಿಘಂಟು’ವನ್ನು 1947 ರಲ್ಲಿ ಹೊರತಂದಿದೆ. ಈ ನಿಘಂಟಿನ ಅಧ್ಯಕ್ಷರು  ಮತ್ತು ಪ್ರಧಾನ ಸಂಪಾದಕರು ರಾಜಸೇವಾಸಕ್ತ ಬಿ. ವೆಂಕಟನಾರಣಪ್ಪ. ಈ ನಿಘಂಟಿನ ರೂಪರೇಷೆ ಇಂತಿದೆ. “ಯಾರು ಸುಮಾರು ಹೈಸ್ಕೂಲು  ದರ್ಜೆಯಷ್ಟು, ಇಂಗ್ಲಿಷ್ ಭಾಷಾಜ್ಞಾನವನ್ನು ಪಡೆದು ಈಗಿನ ಪ್ರಪಂಚಕ್ಕೆ ಆಸಕ್ತಿಕರಗಳಾದ ಗ್ರಂಥಗಳ ಮತ್ತು ಪತ್ರಿಕೆಗಳ ವ್ಯಾಸಂಗಕ್ಕೆ ಶಬ್ದಾರ್ಥಜ್ಞಾನ ಆಪೇಕ್ಷಿಸುವರೋ ಅಂಥವರ ಉಪಯೋಗಕ್ಕಾಗಿಯೂ, ಯಾರು ಇಂಗ್ಲೀಷ್ ಮೂಲಗಳಿಂದ ತೆಗೆದ ಭಾವಗಳನ್ನೂ ವಿಷಯ ಜ್ಞಾನವನ್ನೂ ಕನ್ನಡ ಜನಕ್ಕೆ ಕನ್ನಡದಲ್ಲಿ ತಿಳಿಸುವ ಕೆಲಸದಲ್ಲಿ ನಿರತವಾಗಿರುವರೋ ಅಂತಹ ಉಪಧ್ಯಾಯರು, ಭಾಷಾಂತರಕಾರರು, ಲೇಖಕರು, ಪತ್ರಿಕೋದ್ಯೋಗಿಗಳು, ಉಪನ್ಯಾಸಕರು ಮೊದಲಾದವರ ಸಹಾಯಕ್ಕಾಗಿಯೂ ನಿಘಂಟು ರಚನೆಯಾಗ” ಬೇಕೆಂಬುದು ಸಂಪಾದಕ ಮಂಡಲಿಯ ಉದ್ದೇಶವಾಯಿತು. ಅಖಿಲ ಕರ್ನಾಟಕ ಜನರಿಗೆ ಎಂದರೆ ಮೈಸೂರು ಸಂಸ್ಥಾನದ ಹೊರಗಿರುವ ಕನ್ನಡ ನಾಡಿನ ಜನರಿಗೂ ಸಹ ಈ ನಿಘಂಟು ಅಂಗೀಕಾರಾರ್ಹ ವಾಗಿರಬೇಕೆಂದೂ, ಆಧುನಿಕ ವಿಜ್ಞಾನ ಮತ್ತು ಆಧುನಿಕ ಭಾವಗಳ ಅರ್ಥ ವಿವರಣೆಗೆ ವಿಶೇಷವಾದ ಗಮನವನ್ನು ಕೊಡ ಬೇಕೆಂದೂ ಉದ್ದೇಶ ಪಡಲಾಯಿತು. ಶಾಸ್ತ್ರ ಪ್ರಪಂಚದಲ್ಲಿ ಪಂಡಿತರಾದವರಿ ಗಾಗಲಿ ವಿಶೇಷಜ್ಞರಿ ಗಾಗಲಿ ಉದ್ದೇಶಿಸದೆ, ಸಾಮಾನ್ಯ ವಾಚಕನಿಗೆ ಪ್ರಚಲಿತ ಇಂಗ್ಲಿಶ್ ಜ್ಞಾನವನ್ನು ಪ್ರಚಲಿತ ಕನ್ನಡದಲ್ಲಿ ತಿಳಿಸುವ ನಿಘಂಟಾಗಿರ ಬೇಕೆಂಬುದೇ ನಮ್ಮ ಧ್ಯೆೇಯ. ಪಾಠಶಾಲೆಗಳಲ್ಲಿಯೂ ಕಾಲೇಜುಗಳಲ್ಲಿಯೂ ಎಲ್ಲ ಬೋಧ್ಯ ವಿಷಯಗಳಿಗೂ ಕನ್ನಡವೇ ಹೆಚ್ಚು ಹೆಚ್ಚಾಗಿ ಬಳಸುತ್ತ ಬರ ಬೇಕೆಂದಿರುವ ಈಗಿನ ಸಂದರ್ಭದಲ್ಲಂತೂ ಇಂಥ ನಿಘಂಟು ಇನ್ನೂ ಹೆಚ್ಚು ಅವಶ್ಯವಾಗುತ್ತದೆಯಷ್ಟೆ ‘ಇಂಗ್ಲಿಷ್ – ಕನ್ನಡ ನಿಘಂಟು – ಮುನ್ನುಡಿ ಪು. XV) ಈ ನಿಘಂಟು ಕೆಲವಾರು ಬಾರಿ ಮರು ಮುದ್ರಣಗೊಂಡಿದಷ್ಟೇ ಅಲ್ಲದೆ ತರುವಾಯದ ನಿಘಂಟುಗಳಿಗೆ ಆಕರವಾಯಿತು.

ಈ ನಿಘಂಟು ಅತ್ಯಾಧುನಿಕವಾಗಿ ಪರಿಷ್ಕರಣಗೊಂಡು ನಾಲ್ಕು ಸಂಪುಟಗಳಲ್ಲಿ ಸುಮಾರು 6500 ಪುಟಗಳ ವ್ಯಾಪ್ತಿಯಲ್ಲಿ ಹೊರಬರಲಿದೆ. ಇದರ ಎರಡು ಸಂಪುಟಗಳು ಹೊರಬಂದಿವೆ. 1608 ಪುಟಗಳಿರುವ ಮೊದಲ ಸಂಪುಟದಲ್ಲಿ ‘ಎ’ ಇಂದ ‘ಡಿ’ ವರೆಗಿನ ಪದಗಳಿವೆ. ಇದು 1989 ರಲ್ಲಿ ಪ್ರಕಟವಾಗಿದೆ. 1609 ರಿಂದ 3168 ಪುಟಗಳಿರುವ ಎರಡನೆಯ ಸಂಪುಟದಲ್ಲಿ ‘ಇ’ ಇಂದ ‘ಎಲ್’ ವರೆಗಿನ ಪದಗಳಿವೆ. ಇದು 1996 ರಲ್ಲಿ ಪ್ರಕಟವಾಗಿದೆ. ಈಗ ಎಲ್ಲ ಸಂಪುಟಗಳು ಪ್ರಕಟಗೊಂಡಿವೆ.

1967 ರಲ್ಲಿ ಕರ್ನಾಟಕ ಸರಕಾರದ ವತಿಯಿಂದ ‘ಗ್ಲಾಸರಿ ಆಫ್ ಅಡ್ಮಿನಿಸ್ಟ್ರೇಟಿವ್ ಟರ್ಮ್ಸ್ ಇಂಗ್ಲಿಶ್ – ಕನ್ನಡ’ ಎಂಬ ನಿಘಂಟು ಪ್ರಕಟ ವಾಗಿದೆ. 357 ಪುಟಗಳಿರುವ ಈ ನಿಘಂಟಿನಲ್ಲಿ ಇಂಗ್ಲಿಶ್ ಪದಗಳಿಗೆ ಸಮನಾರ್ಥಕ ಕನ್ನಡ ಪದಗಳನ್ನು ಕೊಟ್ಟಿದೆ.

ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ಸಂಕ್ಷಿಪ್ತ ಆಡಳಿತ ಪದಕೋಶವನ್ನು 1967 ರಲ್ಲಿ ಪ್ರಕಟಿಸಿದೆ. 1989 ರ ವೇಳೆಗೆ  ನಾಲ್ಕು ಮುದ್ರಣಗಳನ್ನು ಕಂಡಿರುವ ಈ ನಿಘಂಟಿನಲ್ಲಿ 7500 ಪದಗಳು ಹಾಗೂ ಪದಪುಂಜಗಳಿವೆ.

ಇದೇ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ 1986ರಲ್ಲಿ ‘ಕಾನೂನು ಪದಕೋಶ (ಪರಿಷ್ಕತ) ಕನ್ನಡ – ಇಂಗ್ಲಿಶ್ ನಿಘಂಟನ್ನು ಹೊರತಂದಿದೆ. ಈ ಪರಿಷ್ಕೃತ ಕಾನೂನು ಪದಕೋಶದಲ್ಲಿ ಸುಮಾರು 46000 ಪದಗಳಿವೆ.

ಆಡಳಿತದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಅನುಷ್ಠಾನ – ಗೊಳಿಸಬೇಕೆಂಬ ಉದ್ದೇಶದಿಂದ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಸರಕಾರದ ಎಲ್ಲಾ ಇಲಾಖೆಗಳಿಗೆ ಸಂಬಂಧಿಸಿದ ಇಲಾಖಾ ಪಾರಿಭಾಷಿಕ ಪದಕೋಶಗಳನ್ನು ಪ್ರಕಟಿಸುತ್ತಿದೆ. ಈವರೆಗೆ 34 ಇಲಾಖೆಗಳಿಗೆ ಸಂಬಂಧಿಸಿದ ಪದಕೋಶಗಳನ್ನು ಹೊರತಂದಿದೆ.

ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ವಿಭಾಗ ‘ಕೆಲವು ಸಸ್ಯಗಳ ವೈಜ್ಞಾನಿಕ ಕುಟುಂಬ, ಇಂಗ್ಲಿಶ್ ಹಾಗೂ ಕನ್ನಡ ಹೆಸರುಗಳು’ ಎಂಬ ನಿಘಂಟನ್ನು 1979 ರಲ್ಲಿ ಹೊರತಂದಿದೆ. ಕನ್ನಡ ನಾಡಿನಲ್ಲಿ ಕಂಡುಬರುವ ಸುಮಾರು ಎರಡು ಸಾವಿರ ಸಸ್ಯಗಳ ಹೆಸರುಗಳು ಈ ನಿಘಂಟಿನಲ್ಲಿವೆ.

ಬೆಂಗಳೂರು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ‘ಇಂಗ್ಲಿಷ್ – ಕನ್ನಡ ವಿಜ್ಞಾನ ಶಬ್ದಕೋಶ’ವನ್ನು 1990 ರಲ್ಲಿ ಪ್ರಕಟಿಸಿದೆ. ಇದರಲ್ಲಿ ಭೌತ ವಿಜ್ಞಾನ, ರಾಸಾಯನಿಕ ವಿಜ್ಞಾನ ಮತ್ತು ಜೀವ ರಸಾಯನ ವಿಜ್ಞಾನ, ಗಣಿತ, ಸಂಖ್ಯಾಶಾಸ್ತ್ರ, ಖಗೋಳಶಾಸ್ತ್ರ ಮತ್ತು ಪವನ ಶಾಸ್ತ್ರ, ಜೀವ ವಿಜ್ಞಾನ, ಭೂ ವಿಜ್ಞಾನ ಮತ್ತು ಭೂಗೋಳ ಶಾಸ್ತ್ರ, ಎಂಜಿನಿಯರಿಂಗ್, ವೈದ್ಯವಿಜ್ಞಾನ ಕೃಷಿ ವಿಜ್ಞಾನ – ಇವುಗಳಿಗೆ ಸಂಬಂಧಿಸಿದ ಪಾರಿಭಾಷಿಕ ಶಬ್ದಗಳಿಗೆ ಕನ್ನಡದಲ್ಲಿ ಸಮಾನ ಶಬ್ದಗಳನ್ನು ಕೊಡಲಾಗಿದೆ.

ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಅಧ್ಯಯನ ಸಂಸ್ಥೆ ‘ಶಿಕ್ಷಣ ಶಾಸ್ತ್ರದ ಪಾರಿಭಾಷಿಕ ನಿಘಂಟು’ (ಇಂಗ್ಲಿಶ್ – ಕನ್ನಡ) ಎಂಬ ಬೃಹತ್ ನಿಘಂಟನ್ನು 1981 ರಲ್ಲಿ ಪ್ರಕಟಿಸಿದೆ. ಇದರಲ್ಲಿ 1664 ಪುಟಗಳಿವೆ. ಇದು ಶಿಕ್ಷಣ ಶಾಸ್ತ್ರ ತಜ್ಞರಾದ ಎನ್.ಎಸ್. ವೀರಪ್ಪನವರ ಬಹುಕಾಲದ ಪ್ರಯತ್ನದಿಂದ ಸಿದ್ಧವಾಗಿದೆ. ಇಷ್ಟೊಂದು ಸಮಗ್ರವಾದ ವಿಚಾರ ಪರಿಪ್ಲುತವಾದ ವಿವರಣಾತ್ಮಕ ‘ಶಿಕ್ಷಣ ಶಾಸ್ತ್ರ ನಿಘಂಟು’ ಯಾವುದೇ ಭಾರತೀಯ ಭಾಷೆಯಲ್ಲೂ ಇನ್ನೂ ಹೊರಬಂದಿಲ್ಲ. ‘ಶಿಕ್ಷಣ ಶಾಸ್ತ್ರ’ ವಿದ್ಯಾರ್ಥಿಗಳು ಅಧ್ಯಾಪಕರು, ಸಂಶೋಧಕರು ಈ ಸಂಬಂಧವಾದ ಯಾವುದೇ ಅಧ್ಯಯನಕ್ಕೆ ಬರಹಕ್ಕೆ ತೊಡಗುವರು ಮೊದಲು ಅತ್ಯಗತ್ಯವಾಗಿ ಗಮನಿಸಬೇಕಾದ ಆಕರಗ್ರಂಥ, ‘ಇದರಲ್ಲಿ ಇಂಗ್ಲಿಶ್ ಪಾರಿಭಾಷಿಕಗಳಿಗೆ ಕನ್ನಡ ಸಮಾನಾರ್ಥಕಗಳಂತೆ ಅವುಗಳ ಅರ್ಥ ವಿವರಣೆ ಪ್ರಯೋಗವ್ಯಾಪ್ತಿ ಮುಂತಾದ ಅಂಶಗಳನ್ನೂ ಒದಗಿಸಿದೆ’ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಡಾ. ಡಿ.ಎಸ್. ಶಿವಪ್ಪನವರು 1973 ರಲ್ಲಿ ‘ಇಂಗ್ಲಿಶ್ – ಕನ್ನಡ ಪದಕೋಶ’ವನ್ನು ಹೊರತಂದಿದ್ದಾರೆ. ಇದೊಂದು ವೈದ್ಯ ಪದಕೋಶ, ಇದರಲ್ಲಿ ಸುಮಾರು 49 ಸಾವಿರ ವೈದ್ಯ ಪದಗಳಿವೆ. ಹನಸೋಗೆ ಮಹದೇವಯ್ಯನವರ ‘ಸಮನಾರ್ಥಕ ಪದಕೋಶ’ದಲ್ಲಿ ಒಂದು ಪದಕ್ಕೆ ಇರಬಹುದಾದ ಅನೇಕ ಪರ್ಯಾಯ ಪದಗಳನ್ನು ಸೂಚಿಸಿದೆ. ಇವರು ವಿರುದ್ಧಾರ್ಥಕೋಶ, ತತ್ಸಮ-ತದ್ಭವ ಕೋಶ ಎಂಬ ಮತ್ತೆರಡು ನಿಘಂಟುಗಳನ್ನೂ ಸಿದ್ಧಪಡಿಸಿದ್ದಾರೆ.

ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ ಅವರ ‘ಬ್ಯಾಂಕಿಂಗ್ ಕೈಪಿಡಿ’ ವ್ಯವಹಾರ ದೃಷ್ಟಿಯಿಂದ ತುಂಬ ಉಪಯುಕ್ತವಾಗಿದೆ.

ಬೆಂಗಳೂರಿನ ಐಬಿಎಚ್ ಪ್ರಕಾಶನವರು ಹೊರತಂದಿರುವ ಇಸಬಿಲ್ ಮೇರಿ ಮ್ಯಾಕಲೀನ್ ಅವರ ‘ಇಲಸ್ಟ್ರೇಟೆಡ್ ಸ್ಕೂಲ್ ಡಿಕ್ಷನರಿ’ಯ ಕನ್ನಡ ಅನುವಾದ ವರ್ಣರಂಜಿತ ಸಚಿತ್ರ ಶಾಲಾನಿಘಂಟು ವಿದ್ಯಾರ್ಥಿಗಳಿಗೂ ಸಾಮಾನ್ಯರಿಗೂ ತುಂಬ ಪ್ರಯೋಜನಕಾರಿಯಾದುದು.

ಧಾರವಾಡದ ಸಮಾಜ ಪುಸ್ತಕಾಲಯದವರು 1968 ರಲ್ಲಿ ಪ್ರಕಟಿಸಿರುವ ಟಿ.ವಿ. ವೆಂಕಟರಮಣಯ್ಯನವರ ‘ಕನ್ನಡ ಪಡೆನುಡಿಗಳ ಕೋಶ’ದಲ್ಲಿ ಪಂಪನಿಂದ ಹಿಡಿದು ಆಧುನಿಕ ಲೇಖಕರವರೆಗೆ ಸಾಹಿತ್ಯ ಪ್ರಕಾರಗಳಿಂದ ಈ ಪಡೆನುಡಿಗಳನ್ನು ಸಂಗ್ರಹಿಸಲಾಗಿದೆ.

ಮೈಸೂರಿನ ಡಿ.ವಿ.ಕೆ. ಮೂರ್ತಿ ಅವರು 1976 ರಲ್ಲಿ ಪ್ರಕಟಿಸಿರುವ ಎನ್. ಬಸವಾರಾಧ್ಯರಿಂದ ಸಂಪಾದಿತವಾದ ‘ಹಳಗನ್ನಡ ನಿಘಂಟು’ ಹದಿನೇಳು ಪ್ರಾಚೀನ ನಿಘಂಟುಗಳನ್ನೂ ಈ ನಿಘಂಟುಗಳಿಗೆ ಉಪಲಬ್ದ ಟೀಕುಗಳನ್ನೂ ಒಳಗೊಂಡಿದೆ. ಈ ನಿಘಂಟುಗಳನ್ನೂ ಶಾಸ್ತ್ರೀಯವಾಗಿ ಸಂಪಾದಿಸುವುದರ ಜೊತೆಗೆ ನಿಘಂಟುಗಳ ಕೆಲವು ಟೀಕುಗಳನ್ನು ಮೊದಲ ಬಾರಿಗೆ ಪ್ರಕಟಿಸಲಾಗಿದೆ. ಈ ನಿಘಂಟಿನಲ್ಲಿ ಸುಮಾರು 5000 ಹಳಗನ್ನಡ ಶಬ್ದಗಳಿಗೆ ಅರ್ಥವನ್ನು ಕೊಟ್ಟಿದೆ.

ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರು ‘ಅಚ್ಚಗನ್ನಡ ನುಡಿಕೋಶ’ ಎಂಬ ಶಾಸ್ತ್ರೀಯ ನಿಘಂಟನ್ನು ಏಕಾಂಗ ಸಾಹಸಿಯಾಗಿ ಸಂಕಲನ ಮಾಡಿದ್ದಾರೆ. ಸುಮಾರು 35 ಪ್ರಾಚೀನ ಕಾವ್ಯಗಳ ಆಧಾರದಿಂದ ಸಿದ್ಧ ಪಡಿಸಿರುವ ಈ ನಿಘಂಟಿನಲ್ಲಿ ಹತ್ತು ಸಾವಿರ ಪದಗಳು ಸೇರ್ಪಡೆಯಾಗಿವೆ ಎಂದು ಭಾವಿಸಲಾಗಿದೆ.

ಕನ್ನಡದಲ್ಲಿ ಇತ್ತೀಚೆಗೆ ವಿವರಣಾತ್ಮಕ ಪದಕೋಶಗಳೂ ಬಳಕೆಗೆ ಬಂದಿವೆ. ಓ.ಎಲ್. ನಾಗಭೂಷಣಸ್ವಾಮಿ ಅವರ ‘ವಿಮರ್ಶೆಯ ಪರಿಭಾಷೆ’ ಎಸ್. ಮರಿಶಾಮಾಚಾರ್ ಅವರ ‘ಲಲಿತಕಲಾ ಪದಕೋಶ’, ಕೆ.ವಿ. ಸುಬ್ಬಣ್ಣ ಅವರ ‘ಸಿನಿಮಾರಂಗಕ್ಕೆ ಸಂಬಂಧಿಸಿದ ಪದಕೋಶ’ ಮುಂತಾದವು ಹೆಸರಿಸತಕ್ಕವು.

ಈ ಶತಮಾನದ ಕನ್ನಡ ನಿಘಂಟುಗಳಲ್ಲಿ ಅಗತ್ಯವಾಗಿ ಹೆಸರಿಸಬೇಕಾದುದು ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ ನಿಘಂಟು ಭಾಷಾಶಾಸ್ತ್ರ ತತ್ವಗಳಿಗನುಸಾರ ವಾಗಿ ಚಾರಿತ್ರಿಕ ವಿವರಣೆಯಿಂದ ಕೂಡಿರುವ ಮೊಟ್ಟ ಮೊದಲನೆಯ ಪ್ರಮಾಣಭೂತವಾದ ಸಮಗ್ರವಾದ ನಿಘಂಟು. ಸುಮಾರು ಹತ್ತುಸಾವಿರ ಪುಟಗಳಿರುವ ಈ ನಿಘಂಟು ಎಂಟು ಸಂಪುಟಗಳಲ್ಲಿ ಪ್ರಕಟವಾಗಿದೆ. ಸುಮಾರು ಎರಡು ಲಕ್ಷ ಶಬ್ದಗಳು ಮುಖ್ಯ ಉಲ್ಲೇಖಗಳಾಗಿ ಈ ನಿಘಂಟಿನಲ್ಲಿ ಸೇರ್ಪಡೆಯಾಗಿವೆ. ಸುಮಾರು ಹತ್ತು ಲಕ್ಷ ಪ್ರಯೋಗಗಳನ್ನು ಸಂಗ್ರಹಿಸಿ ಪಟ್ಟಿಕೆಗಳಲ್ಲಿ ಬರೆದಿಡಲಾಗಿದೆ. ಕನ್ನಡದಲ್ಲಿನ ಎಲ್ಲ ತೆರನ ಸಾಹಿತ್ಯವನ್ನೂ ಈ ನಿಘಂಟಿನಲ್ಲಿ ಬಳಸಿಕೊಳ್ಳಲಾಗಿದೆ.

ಕನ್ನಡದ ಪ್ರಥಮ ಶಾಸನವೆಂದು ಪರಿಗಣಿತವಾಗಿರುವ ಕ್ರಿ.ಶ. ಸುಮಾರು 450ರ ಹಲ್ಮಿಡಿ ಶಾಸನದಿಂದ ಹಿಡಿದು 1800ರ ವರೆಗಿನ ಪ್ರಕಟಿತ ಅಪ್ರಕಟಿತ ಶಾಸನಗಳಿಂದ ಶಬ್ದಗಳನ್ನು ಸಂಗ್ರಹಿಸಲಾಗಿದೆ. ಕನ್ನಡದಲ್ಲಿ ಉಪಲಬ್ದವಾಗಿರುವ ಪ್ರಥಮ ಗ್ರಂಥವಾದ ನೃಪತುಂಗನ ಕವಿರಾಜಮಾರ್ಗದಿಂದ ಹಿಡಿದು ಈಚಿನ ಕಾಲಪರಿಮಿತಿಯಲ್ಲಿ ಬರುವ ಹಳಗನ್ನಡ ಹೊಸಗನ್ನಡಗಳ ಅನೇಕಾನೇಕ ಪ್ರಕಟಿತ ಮತ್ತು ಅಪ್ರಕಟಿತ ಗ್ರಂಥಗಳನ್ನು ಪರಿಶೀಲಿಸಬೇಕಾಗಿದೆ. ಕರ್ನಾಟಕದ ಬೇರೆ ಬೇರೆ ಪ್ರದೇಶಗಳಿಂದ ಪ್ರಾತಿನಿಧಿಕ ವಾದ ಆಧುನಿಕ ಗದ್ಯಪದ್ಯಗ್ರಂಥಗಳನ್ನೂ ಉಪಯೋಗಿಸಿಕೊಳ್ಳಲಾಗಿದೆ. ಜೊತೆಗೆ ಅಲಂಕಾರಶಾಸ್ತ್ರ, ಅಶ್ವಶಾಸ್ತ್ರ, ಕಾಮಶಾಸ್ತ್ರ, ಗಜಶಾಸ್ತ್ರ, ಛಂದಶಾಸ್ತ್ರ, ಜ್ಯೋತಿಶಾಸ್ತ್ರ, ತತ್ವಶಾಸ್ತ್ರ, ವೈದ್ಯಶಾಸ್ತ್ರ, ಶಿಲ್ಪಶಾಸ್ತ್ರ, ಸಂಗೀತಶಾಸ್ತ್ರ, ಸೂಪಶಾಸ್ತ್ರ ಮೊದಲಾದವುಗಳಿಗೆ ಸಂಬಂಧಿಸಿದ ಶಾಸ್ತ್ರೀಯ ಗ್ರಂಥಗಳಿಂದಲೂ ಶಬ್ದಗಳನ್ನೂ ಸಂಗ್ರಹಿಸಲಾಗಿದೆ. ಜೈನ, ವೀರಶೈವ, ವೈಷ್ಣವಧರ್ಮಗಳಿಗೆ ಸಂಬಂಧಿಸಿದ ಪಾರಿಭಾಷಿಕ ಶಬ್ದಗಳನ್ನೂ ಆರಿಸಿಕೊಳ್ಳ ಲಾಗಿದೆ. ಹೀಗೆ ಅನೇಕ ಆಕರಗಳಲ್ಲಿ ದೊರೆಯುವ ಶಬ್ದರೂಪಗಳನ್ನು ಅವುಗಳ ಸಂದರ್ಭಗಳೊಡನೆ ಪಟ್ಟಿಕೆಗಳನ್ನು ಬರೆದು ಅವುಗಳ ಆಧಾರದ ಮೇಲೆ ಶಬ್ದರೂಪ ಮತ್ತು ಅರ್ಥಗಳನ್ನು ನಿರ್ಣಯಿಸಲಾಗಿದೆ. ಇಂಥ ಪ್ರಯೋಗ ಪಟ್ಟಿಕೆಗಳು ಸುಮಾರು ಹತ್ತು ಲಕ್ಷದಷ್ಟು ಸಂಗ್ರಹವಾಗಿದೆ.

ಕನ್ನಡದಲ್ಲಿ ಈವರೆಗೆ ಉಪಲಬ್ದವಾಗಿರುವ ಅನೇಕ ಪ್ರಾಚೀನ ಅರ್ವಾಚೀನ ನಿಘಂಟುಗಳನ್ನೂ ಇನ್ನೂ ಹಸ್ತಪ್ರತಿರೂಪದಲ್ಲೇ ಇರುವ ನಿಘಂಟುಗಳನ್ನೂ ಬಳಸಿಕೊಳ್ಳಲಾಗಿದೆ. ಇದು ಪ್ರಧಾನವಾಗಿ ಕನ್ನಡ ನಿಘಂಟು. ಆದರೂ ಕನ್ನಡ ಭಾಷೆಯಲ್ಲೂ ಸೇರಿಹೋಗಿರುವ ತದ್ಭವ, ತತ್ಸಮ, ಅನ್ಯದೇಶ್ಯ ಮುಂತಾದ ಶಬ್ದಗಳೂ, ಧಾರ್ಮಿಕ, ಲೌಕಿಕ, ವ್ಯವಹಾರಿಕ, ಪಾರಿಭಾಷಿಕ ಮುಂತಾದ ಶಬ್ದಗಳೂ ಈ ನಿಘಂಟಿನಲ್ಲಿ ಸೇರಿವೆ. ಕನ್ನಡ ಭಾಷೆಯಲ್ಲಿನ ಸಮಾಸ ಶಬ್ದಗಳೂ ಮಾತ್ರವಲ್ಲದೆ ಕೃತ್ ತದ್ದಿತ ಪ್ರತ್ಯಯಗಳನ್ನು ಪ್ರಶ್ನೆ, ಅವಧಾರಣ, ಸಂಶಯ ಮುಂತಾದ ಭಾವಸೂಚಕ ಪ್ರತ್ಯಯಗಳನ್ನೂ ಈ ನಿಘಂಟಿನಲ್ಲಿ ಪ್ರತ್ಯೇಕವಾಗಿ ತೋರಿಸಲಾಗಿದೆ.

ಸಂಸ್ಕೃತ ಶಬ್ದಗಳಿಗೆ ಈ ನಿಘಂಟಿನಲ್ಲಿ ವಿಶಿಷ್ಟ ಸ್ಥಾನವಿದೆ. ಕನ್ನಡ ಕಾವ್ಯ ಗಳಲ್ಲಿ ಬಂದಿರುವ ಸಂಸ್ಕೃತ ಶಬ್ದಗಳು ಕಿಟ್ಟೆಲ್ ಅವರು ತಮ್ಮ ನಿಘಂಟಿನಲ್ಲಿ ಕೊಟ್ಟಿರುವ ಸಂಸ್ಕೃತ ಶಬ್ದಗಳು ಇವನ್ನೆಲ್ಲ ಈ ನಿಘಂಟಿನಲ್ಲಿ ಸೇರಿಸಿಕೊಳ್ಳಲಾಗಿದೆ. ಸಂಸ್ಕೃತ ಶಬ್ದಗಳಿಗೆ ಸಾಮಾನ್ಯವಾಗಿ ಪ್ರಯೋಗಗಳನ್ನು ಕೊಡುವುದಿಲ್ಲ. ಆದರೆ ಸಂಸ್ಕೃತದಲ್ಲಿಲ್ಲದ ಅರ್ಥ ಕನ್ನಡದಲ್ಲಿ ಬೆಳೆದು ಬಂದಿದ್ದರೆ ಅಂಥ ಸಂದರ್ಭದಲ್ಲಿ ಪ್ರಯೋಗಗಳನ್ನು ಕೊಡಲಾಗುವುದು. ಅಲ್ಲದೆ ಯಾವುದಾದರೂ ಒಂದು ಶಬ್ದ ಅಪೂರ್ವವಾಗಿದ್ದರೆ, ವಿಶೇಷಾರ್ಥವುಳ್ಳದ್ದಾಗಿದ್ದರೆ ಅಥವಾ ಶಾಸ್ತ್ರ ಪರಿಭಾಷೆಯದಾಗಿದ್ದರೆ ಅದರ ಅರ್ಥವನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಉಚಿತವರಿತು ಪ್ರಯೋಗಗಳನ್ನು ಕೊಡಲಾಗುವುದು.

ಅಂಕಿತ ನಾಮಗಳನ್ನು ಸಾಮಾನ್ಯವಾಗಿ ಈ ನಿಘಂಟಿನಲ್ಲಿ ಸೇರಿಸಿಲ್ಲ. ಆದರೆ ಕ್ರಿ.ಶ. ಸುಮಾರು 1000 ಕ್ಕೆ ಹಿಂದಿನ ಶಾಸನಗಳಲ್ಲಿ ದೊರೆಯುವ ಭಾಷಾ ದೃಷ್ಟಿಯಿಂದ ವೈಶಿಷ್ಟ್ಯ ಕಂಡುಬರುವಂಥ ಅಂಕಿತನಾಮಗಳನ್ನು ಮಾತ್ರ ಸೇರಿಸಲಾಗಿದೆ. ತರುವಾಯದ ಅಂಕಿತನಾಮಗಳಲ್ಲಿ ಉಚಿತವಾದವನ್ನು ಮಾತ್ರ ಉಳಿಸಿಕೊಳ್ಳಲಾಗಿದೆ.

ಗ್ರಾಮ್ಯ ಶಬ್ದಗಳಿಗೂ ಪ್ರಾದೇಶಿಕ ಶಬ್ದರೂಪಗಳಿಗೂ ಈ ನಿಘಂಟಿನಲ್ಲಿ ಎಡೆಯಿಲ್ಲ. ಆದರೆ ದಿನನಿತ್ಯದ ಬಳಕೆಯಲ್ಲಿರುವ ಅನೇಕ ರೂಢಿಯ ಶಬ್ದಗಳನ್ನು ಸೇರಿಸಿಕೊಂಡಿದೆ. ಜೊತೆಗೆ ಭಾಷೆಯಲ್ಲಿ ಉಳಿದುಕೊಂಡು ಬಂದಿರುವ ನುಡಿಗಟ್ಟುಗಳನ್ನು ಆಯಾ ಮುಖ್ಯ ಶಬ್ದದ ಅಡಿಯಲ್ಲೇ ವಿವರಿಸಲಾಗಿದೆ.

ಕನ್ನಡ ನಿಘಂಟಿನಲ್ಲಿ ಮುಖ್ಯ ಉಲ್ಲೇಖಗಳಾಗಿ ಬರುವ ಶಬ್ದಗಳನ್ನು ಕ್ರಿಯಾಪದ, ನಾಮಪದ, ಗುಣವಾಚಕ, ಅವ್ಯಯ, ಪ್ರತ್ಯಯ ಎಂದು ವಿಂಗಡಿಸಿದೆ. ಮುಖ್ಯ ಶಬ್ದಗಳನ್ನು ಕೊಟ್ಟು ಕೂಡಲೇ ಅದರ ಪಕ್ಕದಲ್ಲಿ ದುಂಡುಕಂಸದೊಳಗೆ ಆ ಶಬ್ದದ ಜಾತಿಯನ್ನು (ಕ್ರಿ), (ನಾ), (ಗು), (ಆ), (ಪ್ರ) ಮುಂತಾದ ಸಂಕೇತಗಳಿಂದ ಸೂಚಿಸಿದೆ. ತರುವಾಯ ಅರ್ಥಗಳನ್ನು ವಿವರಿಸಿದೆ. ಪ್ರತಿಯೊಂದು ಶಬ್ದದ ಅರ್ಥನಿರ್ಣಯಕ್ಕೂ ಪ್ರಯೋಗಗಳೇ ಮುಖ್ಯ ಆಧಾರ. ಶಬ್ದಗಳಿಗೆ ಅರ್ಥಗಳನ್ನು ಕೊಡುವಾಗ ಮೊದಲು ವಾಚ್ಯಾರ್ಥವನ್ನು, ಆಮೇಲೆ ಲಕ್ಷ್ಯಾರ್ಥವನ್ನೂ ಕೊಟ್ಟಿದೆ. ಎಲ್ಲ ಅರ್ಥಗಳಿಗೂ ಪ್ರಯೋಗಗಳನ್ನು ಕಾಲಾನುಕ್ರಮದಲ್ಲಿ ತೋರಿಸಿದೆ. ಒಂದು ಶಬ್ದಕ್ಕೆ ಹಲವು ರೂಪಗಳಿದ್ದಾಗ ಅತಿ ಪ್ರಾಚೀನ ರೂಪದಿಂದ ಆರಂಭಿಸಿ ಕಾಲಾನುಕ್ರಮದಲ್ಲಿ ಅರ್ಥಗಳನ್ನೂ ಪ್ರಯೋಗಗಳನ್ನೂ ಕೊಟ್ಟಿದೆ. ಹೀಗೆಯೇ ಒಂದು ಶಬ್ದಕ್ಕೆ ಹಲವು ಅರ್ಥಗಳಿದ್ದಾಗ ಈ ಅರ್ಥಗಳನ್ನು ಚಾರಿತ್ರಿಕ ದೃಷ್ಟಿಯಿಂದ ಬೇರ್ಪಡಿಸಿ ಪ್ರತಿಯೊಂದು ಅರ್ಥಕ್ಕೂ ಸಂಬಂಧಿಸಿದ ಪ್ರಯೋಗಗಳನ್ನು ಕಾಲಾನುಕ್ರಮದಲ್ಲಿ ವಿವರಿಸಿದೆ. ಶಬ್ದದ ಅರ್ಥ ವಿವರಣೆಗಾಗಿ ಹಳಗನ್ನಡ, ನಡುಗನ್ನಡ, ಹೊಸಗನ್ನಡ – ಈ ಮೂರರಿಂದಲೂ ಪ್ರಯೋಗ ಗಳನ್ನೂ ಉದಾಹರಿಸಲಾಗಿದೆ.

ನಿಘಂಟಿನಲ್ಲಿನ ಪ್ರತಿಯೊಂದು ಮುಖ್ಯ ಶಬ್ದಕ್ಕೂ ನಿಷ್ಪತ್ತಿಯನ್ನು ಆ ಶಬ್ದದ ಕೆಳಗೇ ಚೌಕಕಂಸದಲ್ಲಿ ಸೂಚಿಸಿದೆ. ಸಮಾಸ ಶಬ್ದಗಳನ್ನು ಬಿಡಿಸಿ ತೋರಿಸಲಾಗಿದೆ. ಒಂದು ಶಬ್ದ ಸಂಸ್ಕೃತ ಭಾಷೆಯದಾಗಿದ್ದಲ್ಲಿ ನಿಷ್ಪತ್ತಿ ವಿಭಾಗದಲ್ಲಿ ಚೌಕಕಂಸದಲ್ಲಿ [ಸಂ] ಎಂದೂ ದೇಶ್ಯ ಶಬ್ದವಾಗಿದ್ದಲ್ಲಿ [ದೇ] ಎಂದೂ ಸೂಚಿಸಿ ಇತರ ದ್ರಾವಿಡ ಭಾಷೆಗಳಲ್ಲಿ ಕಂಡು ಬರುವ ಜ್ಞಾತಿ ಶಬ್ದಗಳನ್ನು ಉಲ್ಲೇಖಿಸಿದೆ. ಹಾಗೆಯೇ ಒಂದು ಶಬ್ದ ಅನ್ಯದೇಶವಾಗಿದ್ದಲ್ಲಿ ಈ ಶಬ್ದ ಯಾವ ಭಾಷೆಯಿಂದ ಬಂದದ್ದು ಎಂಬುದನ್ನು ß ಈ ಚಿಹ್ನೆ ಮುಂದೆ ಸೂಚಿಸಿ ತರುವಾಯ ಆಧಾರ ಶಬ್ದವನ್ನು ಕೊಟ್ಟಿದೆ. ಶಬ್ದದ ನಿಷ್ಪತ್ತಿ ಗೊತ್ತಿಲ್ಲದ ಕಡೆ ಪ್ರಶ್ನಾರ್ಥಕ ಚಿಹ್ನೆ (?) ಇರುತ್ತದೆ.

ಪಾಶ್ಚಿಮಾತ್ಯರಲ್ಲಿ ಗ್ರೀಕ್ ಮತ್ತು ಲ್ಯಾಟಿನ್ ಭಾಷೆಯ ನಿಘಂಟುಗಳು ಬಹಳ ಹಿಂದಿನಿಂದಲೂ ಬಳಕೆಯಲ್ಲಿದ್ದುವೆಂದೂ ಇಂಗ್ಲಿಷ್ ಭಾಷೆಯ  ನಿಘಂಟುಗಳು ತರುವಾಯ ಹೊರಬಂದುವೆಂದೂ ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಏಕಾಂಗಿ ಸಾಹಸಿಯಾಗಿ ಸ್ಯಾಮುಯಲ್ ಜಾನ್ಸನ್ ಕ್ರಿ.ಶ. 1755 ರಲ್ಲಿ ರಚಿಸಿದ ನಿಘಂಟು ‘ಡಿಕ್ಷನರಿ ಆಫ್ ಇಂಗ್ಲೀಷ್ ಲ್ಯಾಂಗ್ವೇಜ್’ ಒಂದು ವಿಕ್ರಮವನ್ನೇ ಸಾಧಿಸಿತು. ಈತನಿಗಿಂತ ಹಿಂದೆ ಕೆಲವು ನಿಘಂಟುಗಳಿದ್ದರೂ ಈ ನಿಘಂಟಿನ ಖ್ಯಾತಿ ಅವಕ್ಕೆ ಲಭ್ಯವಾಗಲಿಲ್ಲ. ಆ ತರುವಾಯ ಬಂದ ನಿಘಂಟುಗಳಲ್ಲಿ ಪ್ರಮುಖವಾದ ವೆಬ್‌ಸ್ಟರ್ ಮತ್ತು ಆಕ್ಸಫರ್ಡ್ ಡಿಕ್ಷನರಿಗಳ ಪರಿಚಯ ಅಗತ್ಯವಾದುದು.

ಕ್ರಿ.ಶ. 1758 – 1843 ರ ಅವಧಿಯಲ್ಲಿ ವೆಬ್‌ಸ್ಟರ್ ‘ಡಿಕ್ಷನರಿ ಆಫ್ ದಿ ಇಂಗ್ಲಿಷ್ ಲಾಂಗ್ವೇಜ್’ ಎಂಬ ನಿಘಂಟನ್ನು ಸಿದ್ಧಪಡಿಸಿದ. ಇದು 1874 ರಲ್ಲಿ ಪ್ರಕಟವಾಯಿತು. ಆಮೇಲೆ ಇದು ‘ವೆಬ್ಸ್‌ಟರ್ಸ್ ಇಂಟರ್ ನ್ಯಾಷನಲ್ ಡಿಕ್ಷನರಿ’ ಎಂಬ ಹೆಸರಿನಲ್ಲಿ ಅಚ್ಚಾಯಿತು. ಈ ನಿಘಂಟಿನಲ್ಲಿ ಅಮೆರಿಕದ ಕಾಗುಣಿತ ಇವುಗಳಿಗೆ ವ್ಯತ್ಯಾಸವಿದ್ದಲ್ಲಿ ಎರಡನ್ನೂ ಕೊಟ್ಟಿರುವುದರಿಂದ ಎಲ್ಲ ದೇಶದವರೂ ಇದನ್ನು ಬಳಸಬಹುದಾಗಿದೆ. ಈ ನಿಘಂಟನ್ನು ಮೆರಿಯಮ್ ಪ್ರಕಟಣ ಸಂಸ್ಥೆಯವರು 1847 ರಲ್ಲಿ ಪ್ರಕಟಿಸಿದರು. ಆಮೇಲೆ ಇದು ವೆಬ್ಸ್‌ಟರ್ಸ್ ಇಂಟರ್ ನ್ಯಾಷನಲ್ ಡಿಕ್ಷನರಿ ಎಂಬ ಹೆಸರಿನಲ್ಲಿ 1890 ರಲ್ಲಿ ಅಚ್ಚಾಯಿತು. 1909, 1934 ಮತ್ತು 1962 ರಲ್ಲಿ ವೆಬ್ಸ್‌ಟರ್ಸ್ ಫಸ್ಟ್, ಸೆಕೆಂಡ್, ಥರ್ಡ್ ನ್ಯೂ ಇಂಟರ್ ನ್ಯಾಷನಲ್ ಡಿಕ್ಷನರಿಗಳು ಕ್ರಮವಾಗಿ ಪ್ರಕಟಗೊಂಡಿವೆ. ಇದರಲ್ಲಿ 4.5 ಲಕ್ಷ ಶಬ್ದಗಳ ವ್ಯಾಖ್ಯೆ ವಿವರಗಳಿವೆ. 60 ಲಕ್ಷಕ್ಕೂ, ಮೀರಿದ ಉಲ್ಲೇಖಗಳಿವೆ. ಈ ನಿಘಂಟಿನ ತಯಾರಿಕೆ ವೆಚ್ಚ 35 ಲಕ್ಷ ಡಾಲರ್‌ಗಳು. ಈ ಕಾರ್ಯಕ್ಕೆ ಹಿಡಿದ ಸಮಯ ಸುಮಾರು 75 ವರ್ಷಗಳು. ಮೆರೆಯಮ್ ವೆಬ್ಸ್‌ಟರ್ ಪ್ರಧಾನ ಸಂಪಾದಕ 13 ಜನ ಸಂಪಾದಕರು, 58 ಜನ ಸಹಾಯಕ ಸಂಪಾದಕರು, 65 ಜನ ಉಪಸಂಪಾದಕರು, 31 ಜನ ಆಡಳಿತ ವರ್ಗ, ವಿವಿಧ ವಿಜ್ಞಾನ ವಿಭಾಗಗಳಿಗೆ ನೆರವಾದ ಹೊರಗಿನ ಸಮಾಲೋಚಕರು 196.

ಇಂಗ್ಲಿಷ್ ಭಾಷೆಯ ಪರಪ್ರಮಾಣ ನಿಘಂಟು ‘ಆಕ್ಸ್‌ಫರ್ಡ್ ಇಂಗ್ಲಿಶ ನಿಘಂಟು’ ಹತ್ತು ಸಂಪುಟಗಳಲ್ಲಿ ಪ್ರಕಟವಾಗಿರುವ ಈ ನಿಘಂಟಿನಲ್ಲಿ ಹದಿನೈದು ಸಾವಿರಕ್ಕೂ ಹೆಚ್ಚು ಪುಟಗಳಿವೆ. ಒಂದೊಂದು ಪುಟದಲ್ಲಿ 112 ಪಂಕ್ತಿಗಳೂ 3 ಅಂಕಣಗಳೂ ಇವೆ. ಈ ನಿಘಂಟಿನಲ್ಲಿ ಮುಖ್ಯ ಶಬ್ದಗಳೂ ಸಮಾಸಗಳೂ ಒಟ್ಟು 4,148,25. ಇವುಗಳಿಗೆ ಕೊಟ್ಟಿರುವ ಪ್ರಯೋಗಗಳು 18,27, 306. ಇದರಲ್ಲಿ  ಮೂವತ್ತು ಬಗೆಯ ಅಕ್ಷರದ ಅಚ್ಚುಗಳನ್ನು ಬಳಸಲಾಗಿದೆ. ಈ ನಿಘಂಟಿನ ಸಂಪಾದಕ ವರ್ಗದಲ್ಲಿ ಹಲವಾರು ಪ್ರಧಾನ ಸಂಪಾದಕರು ಸೇರಿಹೋಗಿದ್ದಾರೆ. ಆರ್.ಸಿ. ಟ್ರೆಂಚ್, ಹರ್ಬರ್ಟ್ ಕೋಲರಿಜ್, ಫರ‌್ನಿವಾಲಗ್ರೀನ್ ಟ್ರೆಂಚ್, ಜಿ.ಎ.ಎಚ್. ಮರಿ ಇತ್ಯಾದಿ. ಉಪಸಂಪಾದಕರು 84, ಸಹಾಯಕರು 65, ಕರಡಚ್ಚು ತಿದ್ದಿದವರು 24 ಅಲ್ಲದೆ 1227 ಖಾಸಗಿ ವಿದ್ವಾಂಸರು ಈ ಯೋಜನೆಯಲ್ಲಿ ಅಹರ್ನಿಶಿ ದುಡಿದಿದ್ದಾರೆ. ಈ ಕಾರ್ಯ 1858 ರಲ್ಲಿ ಪ್ರಾರಂಭವಾಗಿ 1928 ರಲ್ಲಿ ಮುಕ್ತಾಯವಾಯಿತು. ಈ ಯೋಜನೆಗೆ ತಗಲಿದ ವೆಚ್ಚ 40 ಲಕ್ಷ ಪೌಂಡುಗಳು. ವಿವಿಧ ಆಕಾರದಲ್ಲಿ ಈ ನಿಘಂಟು ಹಲವಾರು ಮುದ್ರಣಗಳಲ್ಲಿ ಹೊರಬಂದಿದೆ. ಪ್ರಪಂಚದ ಬೇರಾವ ಭಾಷೆಯಲ್ಲೂ ಇಷ್ಟು ಸಮಗ್ರವಾದ ಉತ್ಕೃಷ್ಟ ನಿಘಂಟಿಲ್ಲ ಎಂಬ ಕೀರ್ತಿಗೆ ಭಾಜನವಾಗಿದೆ.

‘ದಿ ರ‍್ಯಾಂಡಮ್ ಹೌಸ್ ಡಿಕ್ಷನರಿ ಆಫ್ ದಿ ಇಂಗ್ಲಿಷ್ ಲಾಂಗ್ವೆಜ್’ ಎಂಬ ನಿಘಂಟು 1987 ರಲ್ಲಿ ಪ್ರಕಟವಾಗಿದೆ. ಇದರಲ್ಲಿ ಎರಡು ಲಕ್ಷದ ಅರವತ್ತು ಸಾವಿರ ಪದಗಳಿವೆ. ‘ಪೆಂಗ್ವಿನ್ ಇಂಗ್ಲಿಷ್ ಡಿಕ್ಷನರಿ’ ಎಂಬ ನಿಘಂಟಿನಲ್ಲಿ ನಲವತ್ತು ಸಾವಿರ ಮುಖ್ಯ ಪದಗಳಿವೆ. ಇದರ ಎರಡನೆಯ ಮುದ್ರಣ 1969 ರಲ್ಲಿ ಆಗಿದೆ. ‘ಲಾಂಗ್‌ಮನ್ ಡಿಕ್ಷನರಿ ಆಫ್ ದಿ ಇಂಗ್ಲಿಷ್ ಲಾಂಗ್ವೇಜ್’ ಎಂಬ ನಿಘಂಟು 1984 ರಲ್ಲಿ ಪ್ರಕಟವಾಗಿದೆ. ಇದರಲ್ಲಿ ತೊಂಬತ್ತು ಸಾವಿರ ಪದಗಳಿವೆ.

ಈ ಶತಮಾನದ ಉತ್ತರಾರ್ಧದಿಂದ ನಿಘಂಟು ಕಾರ್ಯ ವಿಶ್ವದಾದ್ಯಂತ ನಿರಂತರವಾಗಿ ನಡೆಯುತ್ತಿದೆ. ನಿಘಂಟು ಮತ್ತು ನಿಘಂಟು ಶಾಸ್ತ್ರದ ಪ್ರಗತಿಗಾಗಿ ಶೈಕ್ಷಣಿಕ ಸಂಸ್ಥೆಗಳೂ ನಿಘಂಟು ಸಂಘ ಸಂಸ್ಥೆಗಳೂ ಸ್ಥಾಪನೆಯಾಗಿವೆ. 1980 ರಿಂದೀಚೆಗೆ ನಿಘಂಟು ಕ್ಷೇತ್ರದಲ್ಲಿ ಗಣಕಯಂತ್ರಗಳ ಮೂಲಕ ಗಣನೀಯವಾದ ಪ್ರಗತಿ ಸಾಧನೆಯಾಗಿದೆ.

ನಿಘಂಟುಗಳ ಬಳಕೆಯ ವಿಧಾನಗಳು

ಈ ಶತಮಾನದಲ್ಲಿ ಮಾನವ ನಿತ್ಯ ಜೀವನದಲ್ಲಿ ನಿಘಂಟುಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತಿವೆ. ಅನೇಕ ವಿಧವಾದ ನಿಘಂಟುಗಳು ಬಳಕೆಯಲ್ಲಿವೆ. ವಿದ್ಯಾರ್ಥಿಗಳಿಂದ ಹಿಡಿದು ವಿದ್ವಾಂಸರವರೆಗೂ ನಿಘಂಟುಗಳ ಬಳಕೆ ನಡೆಯುತ್ತಿದೆ. ಯಾರು ಯಾರು ಯಾವ ಯಾವ ನಿಘಂಟುಗಳನ್ನು ಹೇಗೆ ಹೇಗೆ ಬಳಸಬೇಕು ಎಂಬುದನ್ನು ಅರಿತುಕೊಳ್ಳುವುದು ಅವಶ್ಯಕ. ಪ್ರತಿಯೊಂದು ನಿಘಂಟಿನಲ್ಲಿಯೂ ಅದರ ರಚನೆಯಲ್ಲಿ ಅನುಸರಿಸುವ ವಿಧಿವಿಧಾನಗಳನ್ನು ನಿರೂಪಿಸಲಾಗುತ್ತದೆ. ನಿಘಂಟನ್ನು ಬಳಸುವವರು ಈ ನಿಯಮಗಳನ್ನು ಅಗತ್ಯವಾಗಿ ಗಮನಿಸಬೇಕಾಗುತ್ತದೆ. ಎಲ್ಲ ನಿಘಂಟುಗಳೂ ಆಯಾ ಭಾಷೆಯಲ್ಲಿ ಎಲ್ಲ ಶಬ್ದಗಳನ್ನೂ ಬಳಸಿಕೊಂಡಿರುವುದಿಲ್ಲ. ಅಲ್ಲದೆ ಎಲ್ಲ ಅರ್ಥಗಳೂ ಇಲ್ಲದೆಯೂ ಇರಬಹುದು. ಒಬ್ಬ ವಿದ್ಯಾರ್ಥಿಗೆ ವಿಜ್ಞಾನಕ್ಕೆ ಸಂಬಂಧಿಸಿದ ಶಬ್ದದ ಅರ್ಥ ಬೇಕಾಗಿದ್ದಲ್ಲಿ ಆತ ವೈಜ್ಞಾನಿಕ ನಿಘಂಟನ್ನೇ ನೋಡಬೇಕಾಗುತ್ತದೆ. ಸಾಮಾನ್ಯ ನಿಘಂಟಿನಲ್ಲಿ ರೂಢಿಯಲ್ಲಿನ ಅರ್ಥಗಳನ್ನು ಕೊಟ್ಟಿರಬಹುದೇ ಹೊರತು ವಿಜ್ಞಾನಕ್ಕೆ ಸಂಬಂಧಿಸಿದ ವಿಶಿಷ್ಟ ಅರ್ಥಕೊಡದೆ ಇರಬಹುದು. ಅಂಥ ಸಂದರ್ಭದಲ್ಲಿ ಆಯಾ ಪರಿಭಾಷೆಗೆ ಸಂಬಂಧಿಸಿದ ನಿಘಂಟುಗಳನ್ನೇ ಅವಲಂಬಿಸಿರಬೇಕಾಗುತ್ತದೆ. ಈ ದೃಷ್ಟಿಯಿಂದ ನಿಘಂಟುಗಳ ಬಳಕೆಯ ವಿಧಾನಗಳು ಬಹುಮುಖ್ಯವಾಗುತ್ತದೆ.

ಬಳಕೆಯ ಬಗೆಗಳು

ನಿಘಂಟನ್ನು ಎಲ್ಲರೂ ಯಾವಾಗಲೂ ಬಳಸುವ ಪ್ರಮೇಯವೇ ಇರುವುದಿಲ್ಲ. ಅನೇಕರು ನಿಘಂಟುಗಳನ್ನು ಬಳಸದೆಯೇ ದಿನನಿತ್ಯದ ವ್ಯವಹಾರವನ್ನು ನಡೆಸುತ್ತಾರೆ. ಯಾವುದಾದರೂ ಒಂದು ಶಬ್ದಕ್ಕೆ ಸರಿಯಾದ ಅರ್ಥ ತಿಳಿಯದ ಸಂದರ್ಭದಲ್ಲಿ ನಿಘಂಟನ್ನು ಅವಶ್ಯವಾಗಿ ನೋಡುತ್ತಾರೆ. ರೂಢಿಯಲ್ಲಿ ಬಳಸುತ್ತಿರುವ ಪದಕ್ಕೆ ನಿಘಂಟಿನಲ್ಲಿ ಏನು ಅರ್ಥ ಕೊಟ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದಕ್ಕೂ ನಿಘಂಟು  ಬಳಕೆಯಾಗುತ್ತದೆ. ಒಂದು ಶಬ್ದಕ್ಕೆ ಪರ್ಯಾಯವಾಗಿ ಯಾವ ಯಾವ ಪದಗಳು ಸಿಕ್ಕುತ್ತವೆ ಎಂದು ಕಂಡು ಹಿಡಿಯಲೂ ನಿಘಂಟು ನೆರವಾಗುತ್ತದೆ. ಉದಾಹರಣೆಗಾಗಿ ಒಂದು ಪದವನ್ನು ನೋಡೋಣ. ‘ಶೀತಜ್ವರ’ ಎಂಬ ಶಬ್ದಕ್ಕೆ ‘ಚಳಿಯಿಂದ ಕೂಡಿದ ಜ್ವರ’ ಎಂಬ ಅರ್ಥವನ್ನು ನಿಘಂಟಿನಲ್ಲಿ ಕೊಟ್ಟಿದೆ. ಆದರೆ ಇದಕ್ಕೆ ಕಾರಣವನ್ನಾಗಲಿ ಇದರ ನಿವಾರಣೋಪಾಯವನ್ನಾಗಲಿ ತಿಳಿದುಕೊಳ್ಳಬೇಕಾದರೆ ‘ವೈದ್ಯಪದಕೋಶ’ವನ್ನೇ ನೋಡಬೇಕಾಗುತ್ತದೆ. ನಿಘಂಟನ್ನು ಬಳಸಬೇಕಾದರೆ ಯಾವ ತರದ ಶಬ್ದವನ್ನು ಯಾವ ನಿಘಂಟಿನಲ್ಲಿ ನೋಡಬೇಕು ಎಂಬ ಸಾಮಾನ್ಯ ತಿಳುವಳಿಕೆ ಅಗತ್ಯ. ಒಂದು ಶಬ್ದದ ಸರಿಯಾದ ಅರ್ಥವನ್ನೂ ಅದರ ಸರಿಯಾದ ರೂಪವನ್ನೂ ಅದರ ವ್ಯಾಕರಣಾಂಶವನ್ನೂ ಅದರ ನಿಷ್ಪತ್ತಿಯನ್ನೂ ತಿಳಿದುಕೊಳ್ಳಲು ನಿಘಂಟಿನ ಬಳಕೆಯ ಬಗೆಗಳು ತುಂಬ ಸಹಕಾರಿಯಾಗುತ್ತವೆ.

ನಿಘಂಟು ರಚನೆಯಲ್ಲಿ ಆಗುತ್ತಿರುವ ಪರಿವರ್ತನೆಗಳು

ಪ್ರಾಚೀನ ನಿಘಂಟು ರಚನೆಯಲ್ಲಿನ ಅನೇಕ ವಿಧಿವಿಧಾನಗಳು ಇಂದಿನ ವೈಜ್ಞಾನಿಕ ಯುಗಕ್ಕೆ ಅನುಗುಣವಾಗಿ ಪರಿವರ್ತನೆಗಳಾಗಿರುವುದನ್ನು ಆಧುನಿಕ ನಿಘಂಟುಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದಾಗಿದೆ. ಕಂಠಸ್ಥವಾಗಿದ್ದ ಪ್ರಾಚೀನ ನಿಘಂಟುಗಳು ಇಂದಿನ ಅವಶ್ಯಕತೆಗಳಿಗನುಗುಣವಾಗಿ ಗ್ರಂಥಸ್ಥವಾಗುತ್ತಿವೆ. ಆ ಪ್ರಾಚೀನ ನಿಘಂಟುಗಳಲ್ಲಿನ ಪದಗಳನ್ನು ಆಕಾರಾದಿಯಾಗಿ ವಿಂಗಡಿಸಿ ಅರ್ಥಗಳನ್ನು ಇಂದು ಪ್ರಚಲಿತ ಮಾದ್ಯಮದಲ್ಲಿ ವಿವರಿಸಲಾಗುತ್ತಿದೆ. ಭಾಷೆಯಲ್ಲಿನ ಎಲ್ಲ ತೆರನ ಪದಗಳನ್ನೂ ಒಂದೇ ನಿಘಂಟಿನಲ್ಲಿ ಕೊಡುವುದಕ್ಕೆ ಬದಲಾಗಿ ಅವುಗಳನ್ನು ವರ್ಗೀಕರಿಸಿ ಆ ಪ್ರಕಾರದಲ್ಲಿ ಅವುಗಳಿಗಿರುವ ಅರ್ಥಗಳನ್ನು ಸ್ಪಷ್ಟಪಡಿಸಲಾಗುತ್ತಿದೆ. ವಿವಿಧ ಧರ್ಮಗಳಿಗೆ ಸಂಬಂಧಿಸಿದ, ವಿವಿಧ ವೃತ್ತಿಗಳಿಗೆ ಸಂಬಂಧಿಸಿದ ಪ್ರತ್ಯೇಕ ನಿಘಂಟುಗಳು ಸಿದ್ಧವಾಗುತ್ತಿವೆ. ಈ ಪರಿವರ್ತನೆಗಳು ಓದುಗರಿಗೆ ಸುಲಭವಷ್ಟೇ ಅಲ್ಲದೆ ಉಪಯುಕ್ತವೂ ಆಗುತ್ತವೆ ಎಂಬುದರಲ್ಲಿ ಸಂದೇಹವೇ ಇಲ್ಲ. ಒಂದು ಉದಾಹರಣೆಯನ್ನು ನೋಡಬಹುದು. ಒಬ್ಬ ಪ್ರೌಢಶಾಲಾ ವಿದ್ಯಾರ್ಥಿಗೆ ಸಂದೇಹ ಎಂಬ ರೂಢಿಯ ಶಬ್ದಕ್ಕೆ ಅನುಮಾನ, ಸಂಶಯ ಎಂಬ ಅರ್ಥ ಸ್ಪಷ್ಟವಾಗುತ್ತದೆ. ಅದಕ್ಕಿರುವ ಔಪಮ್ಯ ಮುಂತಾದ ಅರ್ಥಾಲಂಕಾರಗಳಲ್ಲಿ ಒಂದು ಎಂಬ ಕಾವ್ಯಮೀಮಾಂಸೆಯ ಅರ್ಥ ಅನಗತ್ಯವಾಗುತ್ತದೆ. ಸಂದೇಹ ಎಂಬ ಶಬ್ದಕ್ಕೆ ಈ ಎರಡು ಅರ್ಥಗಳಿದ್ದರೂ ಈ ವಿದ್ಯಾರ್ಥಿಯ ದೃಷ್ಟಿಯಿಂದ ಅಪ್ರಸ್ತುತ. ಇಂತಹ ಪಾರಿಭಾಷಿಕ ಪದಗಳನ್ನು ಬಿಟ್ಟು ಕೇವಲ ರೂಢಿಯ ಅರ್ಥಗಳನ್ನು ಕೊಡುವ ನಿಘಂಟುಗಳೂ ಇವೆ. ಪ್ರತಿಯೊಂದು ವಿಷಯ ವಿಭಾಗಕ್ಕೂ ಸಂಬಂಧಿಸಿದ ಶಬ್ದಗಳನ್ನು ಪ್ರತ್ಯೇಕವಾಗಿ ಸಂಕಲಿಸಿ ಸಿದ್ಧಪಡಿಸುವ ನಿಘಂಟುಗಳೂ ಬಳಕೆಯಲ್ಲಿವೆ. ರಸಾಯನಶಾಸ್ತ್ರ, ಭೌತಶಾಸ್ತ್ರ, ಸಸ್ಯಶಾಸ್ತ್ರ, ವೈದ್ಯಶಾಸ್ತ್ರ, ತಾಂತ್ರಿಕ ವಿಜ್ಞಾನ, ಸಂಗೀತ, ನೃತ್ಯ ಇತ್ಯಾದಿ – ವಿಷಯಗಳನ್ನು ಕುರಿತ ನಿಘಂಟುಗಳು ಸಿದ್ಧವಾಗಿ ಪ್ರಚಲಿತವಾಗಿರುವುದು ನಿಘಂಟು ರಚನೆಯಲ್ಲಿ ಮಹತ್ತರವಾದ ಪರಿವರ್ತನೆ ಎಂದು ಭಾವಿಸಬಹುದಾಗಿದೆ. ಇಂದಿನ ವಿಜ್ಞಾನಯುಗಕ್ಕೆ ಇದು ಅನಿವಾರ್ಯವೂ ಆಗಿದೆ.

ಬರಲಿರುವ ದಿನಗಳಲ್ಲಿ ನಿಘಂಟು

ನಾವು ಇಂದು ವಿಜ್ಞಾನ ಯುಗದಲ್ಲಿದ್ದೇವೆ. ಮಾನವನ ಎಲ್ಲ ಕಷ್ಟಸಾಧ್ಯ ಕೆಲಸಗಳನ್ನು ಯಂತ್ರಗಳು ಸುಲಲಿತವಾಗಿ ಸಮರ್ಪಕವಾಗಿ ನಿರ್ವಹಿಸುತ್ತಿವೆ. ನಿಘಂಟು ಕಾರ್ಯದಲ್ಲಂತೂ ಇವು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿವೆ. ನಿಘಂಟಿನ ಪ್ರಯೋಗ ಪಟ್ಟಿಕೆಗಳ ಬರವಣಿಗೆಯಿಂದ ಹಿಡಿದು ಅವುಗಳ ವಿಂಗಡಣೆ, ಅರ್ಥಗಳ ಜೋಡಣೆ ಮುಂತಾದ ಶ್ರಮದಾಯಕ ಕಾರ್ಯಗಳನ್ನೆಲ್ಲ ಗಣಕಯಂತ್ರಗಳು ಮಾಡುತ್ತಿವೆ. ಅಲ್ಲದೆ ನಿಘಂಟು ಬಳಕೆದಾರರಿಗೆ ಬೇಕಾದ ಅವಶ್ಯ ಮಾಹಿತಿಯನ್ನೆಲ್ಲ ಇವುಗಳ ನೆರವಿನಿಂದ ಪಡೆಯಬಹುದಾಗಿದೆ. ಹಲವಾರು ಸಂಪುಟಗಳಲ್ಲಿ ಹರಡಿಹೋಗಿರುವ ನಿಘಂಟಿನಲ್ಲಿ ತಮಗೆ ಬೇಕಾದ ಶಬ್ದದ ಎಲ್ಲ ವಿವರಗಳನ್ನೂ ಈ ಗಣಕ ಯಂತ್ರಗಳು ಕ್ಷಣ ಮಾತ್ರದಲ್ಲಿ ಒದಗಿಸುತ್ತವೆ. ಅಷ್ಟೇ ಅಲ್ಲದೆ ಹೊಸ ಶಬ್ದಗಳನ್ನೂ ಅರ್ಥಗಳನ್ನೂ ಸೇರಿಸುವುದು, ಅಪಮೌಲ್ಯಗೊಂಡ ಶಬ್ದಗಳನ್ನು ಬಿಡುವುದು ಮೊದಲಾದ ಎಲ್ಲ ಕಾರ್ಯಗಳನ್ನೂ ಗಣಕ ಯಂತ್ರಗಳು ನಿರ್ವಹಿಸುತ್ತವೆ. ಏಕಭಾಷಿಕ, ದ್ವಿಭಾಷಿಕ, ಬಹುಭಾಷಿಕ ನಿಘಂಟುಗಳನ್ನು ಗಣಕಯಂತ್ರದ ಮೂಲಕ ಒಂದೇ ಕಡೆಗೆ ತಂದು ಬಳಸುವ ಸಾಧ್ಯತೆಗಳನ್ನು ಬರಲಿರುವ ದಿನಗಳಲ್ಲಿ ಕಾಣಬಹುದಾಗಿದೆ.

ಜೀವಂತ ಭಾಷೆಗಳಿಗೆ ಪ್ರತಿನಿತ್ಯ ಹಲವಾರು ಶಬ್ದಗಳು ಸೃಷ್ಟಿಯಾಗಿ ಬಳಕೆಗೆ ಬರುತ್ತಿರುವುದನ್ನು ಕಾಣುತ್ತಿದ್ದೇವೆ. ಅಲ್ಲದೆ ಬಳಕೆಯಲ್ಲಿರುವ ಶಬ್ದಗಳಿಗೆ ಹೊಸ ಅರ್ಥಗಳೂ ಹುಟ್ಟಿಕೊಳ್ಳುತ್ತಿವೆ. ಇವನ್ನು ಅಳವಡಿಸಿಕೊಂಡು ಆಧುನಿಕ ಜನತೆಗೆ ಅಗತ್ಯವಾದ ಎಲ್ಲ ಮಾಹಿತಿಯನ್ನೂ ಗಣಕ ಯಂತ್ರಗಳು ಬರಲಿರುವ ದಿನಗಳಲ್ಲಿ ಒದಗಿಸುವುದರಲ್ಲಿ ಸಂದೇಹವಿಲ್ಲ.

ನಿಘಂಟುಕಾರ ಎಷ್ಟೇ ಎಚ್ಚರಿಕೆಯಿಂದಿರಲಿ, ಎಷ್ಟೇ ವಿದ್ವಾಂಸರಾಗಿರಲಿ ಭಾಷೆಯಲ್ಲಿನ ಎಲ್ಲ ಶಬ್ದಗಳನ್ನೂ ಶಬ್ದಗಳಲ್ಲಿ ಎಲ್ಲ ಅರ್ಥಗಳನ್ನೂ ಸಮಗ್ರವಾಗಿ ನಿರೂಪಿಸುವುದು ಅಸಂಭವ ಎಂಬುದನ್ನು ವಿದ್ವಾಂಸರೇ ಹೇಳಿಬಿಟ್ಟಿದ್ದಾರೆ.