“ಮಗೂ, ನಿರ್ಧಾರ ಮಾಡಿದೆಯಾ?”

“ಯಾವ ಮಾತಿಗೆ ಗುರುಗಳೇ”?

ಯಾವ ಮಾತು, ಯಾವ ನಿರ್ಧಾರ ಎನ್ನುವುದು ಗುರುವಿಗೂ ಗೊತ್ತು, ಶಿಷ್ಯನಿಗೂ ಗೊತ್ತು. ಈ ವಿಷಯವಾಗಿ ಇಬ್ಬರೂ ಅನೇಕ ಸಲ ಮಾತನಾಡಿದ್ದರು. ಆದರೂ ಗುರುಗಳು ಮತ್ತೆ ಆ ಮಾತನ್ನೆತ್ತಿದರು.

ಬಿಡುವುದು ಹೇಗೆ?

“ಅದೇ, ಈ ಬಂಧನ ಬಿಟ್ಟು ನನ್ನ ಜೊತೆಗೆ ದೇಶ ಸಂಚಾರಕ್ಕೆ ಹೊರಡುವುದು. ಬೇಗ ನಿಧಾರ ಮಾಡು. ದಿನಗಳು ಕಳೆಯುತ್ತಾ ಇವೆ”.

“ಪುಣ್ಯ ಕ್ಷೇತ್ರಗಳಿಗೆ ಹೋಗಿ ದರ್ಶನ ಪಡೆಯಬೇಕು, ನಿಮ್ಮ ಸಹಾಯದಲ್ಲಿ ಸದಾಕಾಲ ಇರಬೇಕು ಎನ್ನುವ ಆಸೆಯೇನೂ ಬಹಳವಾಗಿದೆ. ಆದರೆ ರಾಜ್ಯದ ಆಡಳಿತದ ಕೆಲಸಗಳಿಂದ ಬಿಡುಗಡೆಯೇ ಸಿಕ್ಕಲೊಲ್ಲದು.ದಿನವೂ ಏನಾದರೊಂದು ಹೊಸ ಕೆಲಸವಿದ್ದೇ ಇರುತ್ತದೆ. ರಾಜನಾಗಿ ನಾನು ಅದನ್ನು ಮಾಡಿದಿದ್ದರೆ ಹೇಗೆ ಎಂದು ವಿಚಾರಿಸಿ ಪ್ರಯಾಣ ಮುಂದೆ ಹಾಕುತ್ತೇನೆ. ದಯವಿಟ್ಟು ಗುರುಗಳು ಸಿಟ್ಟು ಮಾಡಬಾರದು. ನನಗೆ ಮನಸ್ಸಿದ್ದರೂ, ಮಾರ್ಗವಿಲ್ಲದಾಗಿದೆ”.

“ಹೌದೇ ಇರಲಿ ಬಿಡು” ಎಂದು ಗುರುಗಳು ಅಂದಿನ ಮಾತು ಮುಗಿಸಿದರು.

ಮರುದಿನ ಸೂರ್ಯೋದಯವಾಗುವ ಮೊದಲು ರಾಜ ತನ್ನ ಸ್ನಾನಪೂಜಾದಿಗಳನ್ನು ಮುಗಿಸಿದ. ದಿನದ ಪದ್ಧತಿಯಂತೆ ಉಪಾಹಾರ ಸ್ವೀಕರಿಸುವ ಮೊದಲು ಗುರುಗಳ ಪಾದಪೂಜೆ ಮಾಡುವುದಕ್ಕಾಗಿ ಅವರ ದಾರಿಕಾಯುತ್ತಾ ಕುಳಿತ. ಗುರುಗಳನ್ನು ಕರೆಯಲು ಹೋದ ಸೇವಕ ಓಡುತ್ತ ಬಂದು, “ಗುರುಗಳು ಊರ ಹೊರಗೆ ಇದ್ದಾರೆ. ತಮ್ಮನ್ನೇ ಅಲ್ಲಿಗೆ ಕರೆಯುತ್ತಿದ್ದಾರೆ” ಎಂದು ಅರಿಕೆ ಮಾಡಿಕೊಂಡ. ರಾಜನು ಏನು ಸಮಾಚಾರವೋ ಎಂದು ಆತುರದಿಂದ ಗುರುಗಳಿದ್ದಲ್ಲಿಗೆ ಹೋದಾಗ, ಅವರು ಒಂದು ಮರವನ್ನು ಗಟ್ಟಿಯಾಗಿ ತೆಕ್ಕೆಯಲ್ಲಿ ಹಿಡಿದು ನಿಂತಿದ್ದರು. ಆಶ್ಚರ್ಯಚಕಿತನಾದ ರಾಜ ಹತ್ತಿರ ಹೋಗಿ,

“ಗುರುಗಳೇ, ಪಾದಪೂಜೆಯ ಸಮಯವಾಇತು. ಅರಮನೆಗೆ ಬನ್ನಿ” ಎಂದ.

ಅದಕ್ಕೆ ಅವರು, “ಬರಬೇಕೆಂದರೆ ಈ ಮರ ನನ್ನನ್ನು ಹಿಡಿದುಬಿಟ್ಟಿದೆ. ಬಿಡಲೊಲ್ಲದು. ಹೇಗೆ ಬರಲಿ?” ಎಂದು ಕೇಳಿದರು.

ಗುರುಗಳು ವಿನೋದ ಮಾಡುತ್ತಿದ್ದಾರೆಂದು ಭಾವಿಸಿ ರಾಜ, “ಗುರುಗಳೇ ಚೇಷ್ಟೇ ಮಾಡುತ್ತೀರಾ? ಮರ ನಿಮ್ಮನ್ನು ಹಿಡಿದುಕೊಂಡಿಲ್ಲ, ನೀವೇ ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಹೀಗೆನ್ನುತ್ತೀರಲ್ಲ! ಬಿಟ್ಟು ಬಿಡಿ. ನೀವು ಬಿಟ್ಟರೆ ಆಯಿತು. ನಿಮ್ಮ ಕೈಯಲ್ಲೇ ಇದೆ” ಎಂದ.

“ಹೇಗೆ ಬಿಡಲಪ್ಪಾ? ಮನಸ್ಸಿದೆ ಆದರೆ ಮಾರ್ಗವಿಲ್ಲದಾಗಿದೆ. ನಿನ್ನನ್ನು ಈ ನಶ್ವರ ರಾಜ್ಯ ಹಿಡಿದಿಲ್ಲವೇ? ಹಾಗೆಯೇ ಇದೂ ನನ್ನನ್ನು ಹಿಡಿದಿದೆ” ಎನ್ನುತ್ತ ಶಿಷ್ಯನನ್ನು ಕರುಣೆಯಿಂದ ನೋಡಿದರು.

ಅಷ್ಟೇ ತಡ, ರಾಜನಲ್ಲಿ ತಿಳಿವಿನ ಬೆಳಕು ಮೂಡಿತು. ಮಿಂಚಿನಂತೆ ಕೆಲಸ ಮಾಡಿತು. ಗುರುಗಳ ಪಾದಕ್ಕೆ ಅಡ್ಡ ಬಿದ್ದು, ಎದ್ದು,

“ನಡೆಯಿರಿ ಗುರುಗಳೇ, ನಾನು ನಿಮ್ಮ ಹಿಂದೆ ಹೊರಟೆ ಈ ಸಣ್ಣ ರಾಜ್ಯದಿಂದ ದೇವಾಧಿಧೇವನ ದೊಡ್ಡ ರಾಜ್ಯಕ್ಕೆ” ಎಂದವನೇ ತಿರುಗಿ ಅರಮನೆಗೂ ಕಾಲಿಡದೆ ಹೊರಗೆ ನಡೆದನು ಆ ರಾಜ.

“ಧನ, ಕನಕ, ವಸ್ತ್ರಭೂಷಣ, ಗಂಧಮೌಲ್ಯ,

ವಾಹನ, ರಮ್ಯವಾಸ, ವನಿತಾದಿ ವಸ್ತುಗಳು

ಮನವಾರೆ ಮುಂದೆ ತೀವಿರೆ ಭೋಗಿಸುವ ಶಕ್ತಿ

ತನಗಿರ್ದೊಡೆ, ಅಂತೆ ಅವೆಲ್ಲವನು ತೃಣವೆಂದು”

ತಿಳಿದು ನಿಜಗುಣರು ರಾಜ್ಯ ಬಿಟ್ಟು ವಿರಾಗಿಗಳಾದರು. ಶಂಭುಲಿಂಗನ ಬೆಟ್ಟದಲ್ಲಿ ತಪಸ್ಸು ಮಾಡಿ “ನಿಜಗುಣ ಶಿವಯೋಗಿ” ಎಂದು ಹೆಸರಾಯಿತು.

ಈ ಮರ ನನ್ನನ್ನು ಬಿಡಲೊಲ್ಲದು

ಖಚಿತವಾಗಿ ತಿಳಿದಿರುವುದು ಸ್ವಲ್ಪವೇ

ನಿಜಗುಣರು ಕರ್ನಾಟಕದ ದಕ್ಷಿಣ ಭಾಗದಲ್ಲಿ ಮೈಸೂರು ಜಿಲ್ಲೆಯ, ಕೊಳ್ಳೆಗಾಲ  ತಾಲೂಕಿನ ಚಿಲಕವಾಡಿ ಗ್ರಾಮದ ಸುತ್ತುಮುತ್ತಿನ ಪ್ರದೇಶಕ್ಕೆ ರಾಜರಾಗಿದ್ದರು. ಅವರು ಅಧಿಕಾರದಿಂದ ರಾಜರಾಗಿದ್ದರೂ ಶಿವಭಕ್ತರಾಗಿ, ಜಂಗಮಪ್ರೇಮಿಯಾಗಿ, ಪ್ರಜಾಪ್ರಿಯರೂ ಆಗಿದ್ದರು. ವೇದ, ಉಪನಿಷತ್ತು, ಶಾಸ್ತ್ರ, ಪುರಾಣ, ಇತಿಹಾಸ ಎಲ್ಲವನ್ನೂ ಚೆನ್ನಾಗಿ ಅಭ್ಯಾಸ ಮಾಡಿದ್ದರು. ನಿಜಗುಣರ ತಂದೆ-ತಾಯಿ ಯಾರು? ಅವರ ಜನಿಸಿದ್ದ ಕಾಲ ಯಾವುದು? ಅವರಿಗೆ ಹೆಂಡತಿ ಮಕ್ಕಳು ಇದ್ದರೆ? ಎನ್ನುವ ಯಾವ ಚಿವಾರವೂ ಖಚಿತವಾಗಿ ತಿಳಿದು ಬಂದಿಲ್ಲ. ಅವರು ಸನ್ಯಾಸ ಸ್ವೀಕಾರ ಮಾಡಿದ ಮೇಲೆ ರಚಿಸಿದ ಗ್ರಂಥಗಳಲ್ಲಿ ತಮ್ಮ ಮೊದಲಿನ ಜೀವನದ ಬಗ್ಗೆ ಯಾವ ವಿಷಯವನ್ನೂ ಹೇಳಿಕೊಂಡಿಲ್ಲ. ಅಲ್ಲಲ್ಲಿ ತಮ್ಮನ್ನು “ನಿಜಗುಣಯೋಗಿ, ನಿಜಗುಣಮತಿ, ಶ್ರೀಮನ್ನಿಜಗುಣ ಶಿವಯೋಗಿ, ಶ್ರೀ ನಿಜಗುಣ ಶಿವಯೋಗೀಂದ್ರ” ಇತ್ಯಾದಿಯಾಗಿ ಕರೆದುಕೊಂಡಿದ್ದಾರೆ. ಆದರೂ ಅವರು ಕನ್ನಡ ಜನಮನದಲ್ಲಿ “ನಿಜಗುಣ ಶಿವಯೋಗಿ” ಎಂದೇ ಹೆಸರಾಗಿದ್ದಾರೆ.

ಅವರು ತಮ್ಮ “ವಿವೇಕ ಚಿಂತಾಮಣಿ” ಎನ್ನುವ ಗ್ರಂಥದ ದೀಕ್ಷಾ ಪ್ರಕರಣದಲ್ಲಿ ರೇವಣಸಿದ್ಧ, ಮರುಳ ಸಿದ್ಧ, ಏಕೋರಾಮ, ಪಂಡಿತಾರಾಧ್ಯ ಎನ್ನುವ ನಾಲ್ಕು ಜನ ಆಚಾರ್ಯರ ಹೆಸರನ್ನು ಹೇಳಿದ್ದಾರೆ. ೧೨ನೆಯ ಶತಮಾನದ ಮೊದಲಿನಿಂದಲೂ ರೇವಣಸಿದ್ಧರು ಪ್ರಸಿದ್ಧರು. ಮರುಳಸಿದ್ಧ, ಪಂಡಿತಾರಾಧ್ಯರು ಬಸವೇಶ್ವರರ ಕಾಲದಲ್ಲಿಯೇ ಇದ್ದವರು. ಏಕೋರಾಮರು ಬಸವೇಶ್ವರರಿಗಿಂತ ಹಿಂದಿನವರು. ಅಂದ ಮೇಲೆ ನಿಜಗುಣರು ೧೨ನೇಯ ಶತಮಾನದಿಂದ ಈಚೆಗಿನವರು ಇರಬೇಕು. ಹಾಗೆಯೇ ೧೬೫೦ ರಲ್ಲಿ ಷಡಕ್ಷರಿ ಕವಿಯು “ರಾಜಶೇಖರ ವಿಲಾಸ” ಎನ್ನುವ ಕಾವ್ಯದಲ್ಲಿ ನಿಜಗುಣರ ಹೆಸರು ಹೇಳಿರುವುದರಿಂದ ಅವರು ೧೬೫೦ ಕ್ಕಿಂತ ಹಿಂದಿನವರಿರಬೇಕು. ನಿಜಗುಣರ ಗ್ರಂಥಗಳನ್ನು, ಇತರರು ಅವರನ್ನು ಸ್ಮರಿಸಿರುವುದನ್ನು ಅಭ್ಯಾಸ ಮಾಡಿ ವಿದ್ವಾಂಸರು ಅವರ ಕಾಲ ೧೫ನೇ ಶತಮಾನ ಎಂದು ಊಹಿಸಿದ್ದಾರೆ.

ಜನರ ಹೃದಯದಲ್ಲಿ ನಿಂತವರು

ಇವರ ಬಗ್ಗೆ ಕೊಳ್ಳೆಗಾಲದ ಪ್ರದೇಶದಲ್ಲಿರುವ ಜನರಲ್ಲಿ ಅನೇಕ ಕಥೆಗಳು ರೂಢಿಯಲ್ಲಿವೆ. ಇವರು ಮೊದಲು ರಾಜರಾಗಿ, ಸಂಸಾರಿಯಾಗಿದ್ದರು. ದೇವರಲ್ಲಿ ಬಹಳ ಭಕ್ತಿಯುಳ್ಳವರಾಗಿದ್ದರು. ಮುಂದೆ ಗುರುವಿನ ಅನುಗ್ರಹದಿಂದ ರಾಜ್ಯ ಬಿಟ್ಟು, ಸನ್ಯಾಸ ತೆಗೆದುಕೊಂಡು ಶಂಭುಲಿಂಗನ ಬೆಟ್ಟದಲ್ಲಿ ತಪಸ್ಸು ಮಾಡಿದರು. ಕನ್ನಡದಲ್ಲಿ ಗ್ರಂಥಗಳನ್ನು ಬರೆದರು ಎಂದು ತಿಳಿಯುತ್ತದೆ. ಶಂಭುಲಿಂಗನ ಬೆಟ್ಟದಲ್ಲಿ ಇವರು ತಪಸ್ಸು ಮಾಡಿದ ಗುಹೆಯನ್ನೂ ತೋರಿಸುತ್ತಾರೆ. ಅವರು ಕನ್ನಡ ಗ್ರಂಥಗಳಲ್ಲಿ ಶಂಬುಲಿಂಗನ ಹೆಸರನ್ನೇ ಸ್ಮರಿಸಿದ್ದಾರೆ.

ಪಂಡಿತರಾದವರು, ಮುಕ್ತಿಯ ಮಾರ್ಗವನ್ನು ಬಯಸುವ ಜನರು ನಿಜಗುಣರ ಗ್ರಂಥಗಳನ್ನು ಓದಿ, ಅಭ್ಯಾಸ ಮಾಡಿ, ಅವರನ್ನು ಮೆಚ್ಚುತ್ತಾರೆ ಗೌರವಿಸುತ್ತಾರೆ. ಅದರ ಜೊತೆಗೆ ಸಾಮಾನ್ಯ ಜನರು “ನಿಜಗುಣೆಪ್ಪ” ನವರ ಬಗ್ಗೆ ಅನೇಕ ಪವಾಡ-ಕಥೆಗಳನ್ನು ಹೇಳಿಕೊಂಡು ಸಂತೋಷ ಪಟ್ಟುಕೊಳ್ಳುತ್ತಾರೆ. ಧನ್ಯತೆಯನ್ನು ಅನುಭವಿಸುತ್ತಾರೆ. ಯೋಗಮಾರ್ಗದಲ್ಲಿ ಸಾಧನೆ ಮಾಡಿ ಶಿವಯೋಗಿಯಾಗಿದ್ದ ನಿಜಗುಣರು ಅಂಥ ಪವಾಡಗಳನ್ನು ಮಾಡಿರುವ ಸಂಭವವೂ ಇದೆ.

ರಾಜ್ಯ ಆಳುವುದನ್ನು ಬಿಟ್ಟು, ಅಲೌಕಿಕ ಆನಂದವನ್ನು, ದೇವರ ಸಾನ್ನಿಧ್ಯವನ್ನು ಪಡೆಯ ಬಯಸಿದ ನಿಜಗುಣರು ಶಂಭುಲಿಂಗನ ಬೆಟ್ಟಕ್ಕೆ ಬಂದು ತಪಸ್ಸಿಗೆ ಕುಳಿತರು. ಹಠಯೋಗದಲ್ಲಿಯೂ ರಾಜಯೋಗದಲ್ಲಿಯೂ ಸಾಧನೆ ಮಾಡಿ, ಸಿದ್ಧಿ ಪಡೆದು ಕೊನೆಗೆಸ ಶಿವಯೋಗದಲ್ಲಿಯೂ ಅಖಂಡವಾಗಿ, ಸಾಧನೆ ನಡೆಸಿ ದೇವರನ್ನು ಸಾಕ್ಷಾತ್ಕರಿಸಿಕೊಂಡರು. ಅಂದರೆ ದೇವರನ್ನು ಒಲಿಸಿಕೊಂಡರು. ಅದಾದ ಅನಂತರವೂ ದಿನವೂ ಜಪ, ತಪ, ಅನುಷ್ಠಾನಗಳನ್ನು ನಡೆಸುತ್ತಾ ಬೆಟ್ಟದಲ್ಲಿಯೇ ಇದ್ದರು. ದೇವರು, ಧರ್ಮಗಳ ಬಗ್ಗೆ ಕುತೂಹಲವುಳ್ಳವರು ಬಂದು ತಮ್ಮನ್ನು ಭೇಟಿಮಾಡಿದಾಗ ಅವರೊಡನೆ ಚರ್ಚೆ ಮಾಡುತ್ತಿದ್ದರು. ತಿಳಿಸಿ ಹೇಳಿ ಅವರಿಗೆ ಮಾರ್ಗದರ್ಶನ ಮಾಡುತ್ತಿದ್ದರು.

ಮುಪ್ಪಿನ ಷಡಕ್ಷರಿಯವರೊಡನೆ

ನಿಜಗುಣರ ಜೊತೆಗೆ “ಸುಭೋಧ ಸಾರ” ಎನ್ನುವ ಗ್ರಂಥದಲ್ಲಿಯ ಹಾಡುಗಬ್ಬಗಳನ್ನು ರಚಿಸಿದ ಯೋಗಿ ಮುಪ್ಪಿನ ಷಡಕ್ಷರಿಯವರೂ ಶಂಭುಲಿಂಗನ ಬೆಟ್ಟದಲ್ಲಿಯೇ ಇದ್ದರೆಂದು ಹೇಳುವುದುಂಟು. ಈಗಲೂ ಅವರು ತಪಸ್ಸು ಮಾಡಿದ ಗುಹೆಯನ್ನು ತೋರಿಸುತ್ತಾರೆ. ಇಬ್ಬರೂ ಈ ರೀತಿಯಾಗಿ ಸತ್ಸಂಗದಲ್ಲಿ ಇದ್ದುಕೊಂಡು ಶಿವಜ್ಞಾನವನ್ನು ಇತರರಿಗೆ ಹಂಚುತ್ತಾ ಇದ್ದರು.

ಅವರ ಸಂಗಡ ನಿಜಗುಣ ಶಿವಯೋಗಿಗಳು ಇದ್ದಾಗ ನಿಜಗುಣರು ಹಲವು ಪವಾಡಗಳನ್ನು ಮೆರೆದರೆಂದು ಭಕ್ತರು ಹೇಳುತ್ತಾರೆ.

ಒಂದು ಸಲ ಇಬ್ಬರೂ ಕೂಡಿ ತಮ್ಮ ಗುರುಗಳ ದರ್ಶನ ಮಾಡಿಕೊಂಡು ಬರಬೇಬೆಂದು ಯೋಚಿಸಿದರು. ಆಗ ವಾಹನ ಸೌಕರ್ಯ ಇಲ್ಲದ್ದರಿಂದ ಇಬ್ಬರೂ ಕಾಲು ನಡಿಗೆಯಿಂದಲೇ ಹೊರಟರು. ಇಬ್ಬರ ಕೈಯಲ್ಲೂ ಒಂದೊಂದು ಗಂಟು ಇತ್ತು. ಮುಪ್ಪಿನ ಷಡಕ್ಷರಿಗಳ ಕೈಯಲ್ಲಿ ದೇವರ ಪೂಜಾ ಸಾಮಾಗ್ರಿಯ ಗಂಟು ಇತ್ತು. ನಿಜಗುಣರ ಕೈಯಲ್ಲಿ ಅವರಿಗೆ ಪ್ರಿಯವಾದ ಆಧ್ಯಾತ್ಮ ವಿಷಯಗಳ ಗ್ರಂಥಗಳ ಗಂಟು. ಷಡಕ್ಷರಿಯವರು ಕರ್ಮಯೋಗಿಗಳಾಗಿದ್ದರು (ಕರ್ಮಯೋಗಿ ಎಂದರೆ ಕಾಯಕದಲ್ಲಿ ನಿರತನಾದವನು). ತಾನು ಮಾಡುವ ಕೆಲಸದಿಂದ ಲೋಕಹಿತವಷ್ಟೆ ಅಲ್ಲ, ಪಾರಮಾರ್ಥಿಕ ಗುರಿಯು ಸಾಧಿಸುವುದು ಎಂಬ ಶ್ರದ್ಧೆಯಿಂದ ದುಡಿಯುವವನು) ನಿಜಗುಣರು ಜ್ಞಾನಯೋಗಿಗಳು. (ಜ್ಞಾನಯೋಗಿ ಎಂದರೆ ಪಾರಮಾರ್ಥಿಕ ಅನುಭವಗಳನ್ನು ಗಳಿಸಲು ಜ್ಞಾನವೇ ಅವಶ್ಯ. ಎಂದು ನಂಬಿ ಪರಮಾರ್ಥ ವಿಚಾರದಲ್ಲಿ ಮಗ್ನನಾಗಿರುವವನು.) ಅವರು ಹೀಗೆಯೇ ಸಂಚಾರ ಮಾಡುತ್ತಿರುವಾಗ ದಾರಿಯಲ್ಲಿ ಸಿಕ್ಕುವ ಹಳ್ಳಿಗಳಲ್ಲಿ ಮಠಗಳು ಅಥವಾ ವೀರಶೈವರ ಮನೆಗಳು ಸಿಕ್ಕರೆ ಮಾತ್ರ ಷಡಕ್ಷರಿಗಳು ಅಲ್ಲಿ ತಮ್ಮ ತಲೆಯ ಮೇಲಿನ ಪೂಜಾ ಗಂಟು ಇಳಿಸಿ ಸ್ನಾನ ಮಾಡಿ, ದೇವರ ಪೂಜೆ ಮಾಡಿದ ಮೇಲೆಯೇ ಊಟ ಮಾಡುತ್ತಿದ್ದರು. ಎಲ್ಲಯೂ ತಮ್ಮ ಸ್ನಾನ, ಪೂಜೆಗಳಿಗೆ ತಕ್ಕ ವ್ಯವಸ್ಥೆಯಾಗದಿದ್ದರೆ ಉಪವಾಸವಿದ್ದು ಬಾಯಲ್ಲಿ ಹನಿ ನೀರೂ ಹಾಕದೆ ಹಾಗೆಯೇ ಪ್ರಯಾಣ ಮಾಡುತ್ತಿದ್ದರು.

ಕಬ್ಬಿಡಣದ ರಸವನ್ನೇ ಕೊಡು

ಒಂದು ಸಲ ಅವರ ಹಳ್ಳಿಯಲ್ಲಿ ಮಾರಮ್ಮನ ಗುಡಿಯಲ್ಲಿ ರಾತ್ರಿಯನ್ನು ಕಳೆಯಬೇಕಾಯಿತು. ಗುಡಿಯಲ್ಲಿಯ ಹೊಲಸನ್ನೂ ಮಾರಮನನ್ನೂ ನೋಡಿ ಷಡಕ್ಷರಿಗಳು ತಲೆಯ ಮೇಲೆ ಗಂಟನ್ನಿಟ್ಟುಕೊಂಡು ಕುಳಿತೇ ರಾತ್ರಿ ಕಳೆದರು. ಆದರೆ ನಿಜಗುಣರು ಅದಾವುದನ್ನೂ ಮನಸ್ಸಿಗೆ ತಂದುಕೊಳ್ಳದೆ ತಮ್ಮ ಗ್ರಂಥಗಳ ಗಂಟನ್ನು ತಲೆದಿಂಬಿನಂತೆ ಇಟ್ಟುಕೊಂಡು ಸೊಂಪಾಗಿ ನಿದ್ರೆ ಮಾಡಿ ವಿಶ್ರಾಂತಿ ಪಡೆದರು.

ಮುಂದಿನ ಹಳ್ಳಿಯಲ್ಲಿ ಶಿವಾರ್ಚನೆಗೆ ಅವಕಾಶ ಸಿಕ್ಕೀತೆಂದು ಷಡಕ್ಷರಿಗಳು ಭಾವಿಸಿದ್ದರು. ನಿಜಗುಣರು ಆ ಹಳ್ಳಿಯ ಕಮ್ಮಾರನ ಕುಲುವೆಯ ಮುಂದೆ ನಿಂತು ಬಿಕ್ಷೆ ಕೇಳಿದರು. ಅಲ್ಲಿಯ ಜನ ಅಪಹಾಸ್ಯದಿಂದ ನಕ್ಕು,

“ಕಮ್ಮಾರನ ಕುಲುವೇಮಿ ಸಿಕ್ಕುವುದು ಕಬ್ಬಿನ ರಸ ಅಲ್ಲ, ಕಬ್ಬಿಣದ ರಸ. ಬೇಕೇನು?” ಎಂದರು.

“ಆಗಲಿ ತಮ್ಮ, ಅದನ್ನೇ ನೀಡು” ಎಂದು ನಿಜಗುಣರು ಬೊಗಸೆ ಒಡ್ಡಿದಾಗ ಅದರಲ್ಲಿ ಕಾಯ್ದ ಕಬ್ಬಿಣದ ರಸ ಸುರುವಿದರು. “ಶಿವನಿಚ್ಛೆ” ಎನ್ನುತ್ತ ನಿಜಗುಣರು ಅದನ್ನೆತ್ತಿ ಎಲಲರ ಮುಂದೆಯೇ ಕುಡಿದು ಬಿಟ್ಟರು.

ಆಗ ಅಲ್ಲಿದ್ದವರಿಗೆ ಇವರು ಯಾರೋ ಮಹಾತ್ಮರು ಎನ್ನುವುದು ತಿಳಿದು, ಕಾಲುಗಳ ಮೇಲೆ ಬಿದ್ದು ಕ್ಷಮೆ ಬೇಡಿದರು. ನಿಜಗುಣರು ಅವರನ್ನು ಕ್ಷಮಿಸಿ ಮುಂದೆ ನಡೆದರು.

ಅಸಾಧಾರಣ ಶಕ್ತಿ

ಹಗಲೂ ರಾತ್ರಿ ಪ್ರಯಾ ಮಾಡುತ್ತಿರುವಾಗ ಒಮ್ಮೆ ದಾರಿ ತಪ್ಪಿ ಅರಣ್ಯಕ್ಕೆ ಬಂದರು. ಆ ಗವಿಯಲ್ಲಿದ್ದ ಹೆಬ್ಬುಲಿಯನ್ನು ನೀಡಿ, “ನೀನು ಹೊರಗೆ ನಿಂತು ಕಾವಲು ಮಾಡು ನನಗೆ ಸ್ಥಳ ಬಿಟ್ಟುಕೊಡು: ಎಂದು ಆಜ್ಞಾಪಿಸಿದರು. ಅದು ಸುಮ್ಮನೆ ಗವಿಯ ಹೊರಗೆ ಹೋಗಿ ನಿಂತು ಬೆಳಗಿನವರೆಗೆ ಕಾವಲು ಮಾಡಿತು. ಇವರಿಬ್ಬರೂ ಗವಿಯಲ್ಲಿ ಚೆನ್ನಾಗಿ ವಿಶ್ರಾಂತಿ ತೆಗೆದುಕೊಂಡು ಮುಂದೆ ನಡೆದರು.

ಇನ್ನೊಂದು ದಿನ ನಿಜಗುಣರು ಒಂದು ಸುಂದರವಾದ, ಫಲಭರಿತವಾದ ತೆಂಗಿನ ತೋಟಕ್ಕೆ ಷಡಕ್ಷರಿಯವರನ್ನು ಕರೆದುಕೊಂಡು ಹೋದರು. ಊರು ಬಿಟ್ಟು ದೂರವಾಗಿ, ಶಾಂತವಾಗಿದ್ದು ಆ ಸ್ಥಳದಲ್ಲಿ ಗಂಟುಗಳನ್ನು ಇಳಿಸಿ ಆಯಾಸ ಪರಿಹಾರ ಮಾಡಿಕೊಂಡರು. ಆಮೇಲೆ ನಿಜಗುಣರು ತೋಟದ ಒಡೆಯನನ್ನು ಕರೆದು,

“ತಮ್ಮಾ ಬಾಯಾರಿಕೆಯಾಗಿದೆ. ಒಂದೆರಡು ಎಳನೀರು ತೆಗೆದು ಕೊಡು” ಎಂದರು. ಇವರು ಯಾರೋ ದಾರಿಹೋಕರು ಇರಬಹುದು ಎಂದು ತಿಳಿದು ಅವನು ಸ್ವಲ್ಪ ಸೊಕ್ಕಿನಿಂದಲೇ,

“ನಮ್ಮ ತೋಟದ ಮೊದಲನೆಯ ಫಲವನ್ನು ನಮ್ಮ ದೇವರಿಗೆ ಎಡೆ ಮಾಡದ ಹೊರತು ಯಾರಿಗೂ ಕೊಡುವುದಿಲ್ಲ” ಎಂದು ಇವರಿಗೆ ಹೇಳಿ ಆಳುಗಳಿಗೆ ತೆಂಗಿನಕಾಯಿ ಇಳಿಸಲು ಹೇಳಿದನು. ಕೂಡಲೇ ನಿಜಗುಣರು, “ಆಗಲಿ ತಮ್ಮಾ, ಎಲ್ಲವೂ ಶಿವಾರ್ಪಿತವಾಗಲಿ” ಎಂದು ಅಲ್ಲಿಂದ ಮುಂದೆ ನಡೆದರು.

ಆಳುಗಳು ಕಾಯಿಗಳನ್ನು ಇಳಿಸಿ ಒಡೆದು ನೋಡಿದರು. ಅದರಲ್ಲಿ ತಿರುಳೂ ಇರಲಿಲ್ಲ, ನೀರು ನಿರಲಿಲ್ಲ. ತೋಟದವನ ಎದೆ ಒಡೆದು ಹೋಯಿತು. ಓಡುತ್ತ ನಿಜಗುಣರ ಹಿಂದ ಹೋಗಿ ಅವರ ಕಾಲು ಹಿಡಿದು ಬೇಡಿಕೊಂಡ. ಕೃಪೆ ಮಾಡಬೇಕು ಎಂದ, ನಿಜಗುಣರು ತಮ್ಮ ದಿವ್ಯಶಕ್ತಿಯಿಂದ ಮತ್ತೆ ಎಲ್ಲವನ್ನೂ ಮೊದಲಿದ್ದಂತೆ ಮಾಡಿದ್ದರು. ಅವನ ಆತಿಥ್ಯ ಸ್ವೀಕರಿಸಿ ಮುಂದೆ ನಡೆದರು.

ಎರಡು ದೃಷ್ಟಿಗಳು

ನಿಜಗುಣರ ಈ ಪವಾಡಗಳನ್ನೆಲ್ಲ ನೋಡಿದ ಷಡಕ್ಷರಿಗಳಿಗೆ ಅಸಮಾಧಾನವಾಯಿತು. ಇವರು ನಿಜವಾಗಿಯೂ ಶಿವಯೋಗಿಗಳು ಅಹುದೋ ಅಥವಾ ಇಂದ್ರಜಾಲ ವಿದ್ಯೆಯನ್ನು ತೋರಿಸುತ್ತಿರುವರೋ ಎಂದು ಸಂಶಯ ಪಟ್ಟುಕೊಂಡರು. ಹಾಗೆಯೇ ಅದನ್ನು ಮನಸ್ಸಿನಲ್ಲಿಯೇ ಮುಚ್ಚಿಕುಟ್ಟಕೊಂಡರು. ನಿಜಗುಣರ ಮುಂದೆ ಆಡಿ ತೋರಿಸಲಿಲ್ಲ. ಆದರೂ ಎಲ್ಲವನ್ನೂ ಬಲ್ಲ ನಿಜಗುಣರಿಗೆ ಈ ವಿಷಯವೂ ತಿಳಿಯಿತು. ಆದರೂ ಅವರುಪವಾಡಗಳ ಬಗ್ಗೆ ಷಡಕ್ಷರಿಯವರೊಡನೆ ಮಾತನಾಡದೆ ಮಉ,ದೆ ನಮಡೆದರು.

ಕೊನೆಗೊಮ್ಮೆ ಇಬ್ಬರು ಪ್ರಯಾಣ ಕೊನೆಗೊಂಡಿತು. ಗುರುಗಳು ಈ ಇಬ್ಬರು ಶಿಷ್ಯರನ್ನೂ ನೋಡಿ ಬಹಳ ಸಂತೋಷಪಟ್ಟರು. ಇಬ್ಬರಿಗೂ ಒಂದೊಂದು ತೆಂಗಿನ ಕಾಯಿಯನ್ನು ಆಶೀರ್ವದಿಸಿದರು. ನಿಜಗುಣರು ಕಾಯಿಯನ್ನು ಮೂಗಿನ ಹತ್ತಿರ ಒಯ್ದು ಕ್ಷಣಕಾಲ ಮೂಸಿನೋಡಿ ಹೊರಗೆ ಒಗೆದರು. ಸ್ನಾನ, ಶಿವಪೂಜೆಯಾದ ಮೇಲೆ ಗುರುವು ಕೊಟ್ಟ ಕಾಯಿಯನ್ನು ಷಡಕ್ಷರಿಗಳು ಸೇವಿಸಿದರು. ಆಮೇಲೆ ಗುರುಗಳ ಹತ್ತಿರ ಬಂದು ಕುಳಿತರು. ಷಡಕ್ಷರಿಗಳು ದಾರಿಯಲ್ಲಿ ನೋಡಿದ ನಿಜಗುಣರ ಪವಾಡಗಳನ್ನು ಕುರಿತು ಹೇಳಿದರು. ಗುರುವಿನ ಹಸ್ತದಿಂದ ಬಂದ ಕಾಯಿಯನ್ನು ಬೀದಿಗೆ ಚೆಲ್ಲಿದರು ಎಂದು ದೂರು ಹೇಳಿದರು. ಆಗ ಗುರುಗಳು ಮುಗುಳುನಗುತ್ತ ನಿಜಗುಣರನ್ನು ಕರೆಸಿದರು.

“ನಾನು ಬೆಳಗ್ಗೆ ಕೊಟ್ಟ ಕಾಯಿಯನ್ನು ಎಲ್ಲಿ ಚೆಲ್ಲಿದೆ? ಇಲ್ಲ ತಾ” ಎಂದರು. ಹಾಗೆಯೇ ಷಡಕ್ಷರಿಗಳಿಗೂ ಹೇಳಿದರು. ಇಬ್ಬರ ಕಾಯಿಗಳನ್ನು ಪರೀಕ್ಷಿಸಲಾಗಿ ನಿಜಗುಣರ ಕಾಯಿಯಲ್ಲಿ ತಿರುಳು, ನೀರು ಏನೂ ಇರಲಿಲ್ಲ. ಬರಿಯ ಚಿಪ್ಪು ಮಾತ್ರ ಇತ್ತು. ಷಡಕ್ಷರಿಗಳ ಕಾಯಿಯಲ್ಲಿ ಇನ್ನೂ ಸ್ವಲ್ಪಸ್ವಲ್ಪ ಕೊಬ್ಬರಿ ಉಳಿದಿತ್ತು.

ಆಶ್ಚರ್ಯದಿಂದ ತಮ್ಮನ್ನು ನೋಡಿದ ಷಡಕ್ಷರಿಗಳಿಗೆ ನಿಜಗುಣರು ನಗುತ್ತಾ ಉತ್ತರವಿತ್ತರು: “ನಾನು ಮೂಸಿದಾಗಲೇ ಪ್ರಸಾದ ಸಿಕಾರಮಾಡಿದೆ” ಎಂದು.

ಆದರೆ ಈ ವಿಷಯದಲ್ಲಿ ಇಬ್ಬರು ಯೋಗಿಗಳ ವಿಚಾರಗಳೂ ಬೇರೆಬೇರೆಯಾಗಿದ್ದವು. ಶಿವಯೋಗಿಯಾದವನು ತನ್ನ ಸಿದ್ಧಿಯಿಂದ ಇಂತಹ ಪವಾಡಗಳನ್ನು ಮಾಡಿ ತೋರಿಸಬಾರದೆಂದು ಷಡಕ್ಷರಿಗಳ ಅಭಿಪ್ರಾಯವಾಗಿತ್ತು. ಆದರೆ ನಿಜಗುಣರು ತಮ್ಮ ವಾದದಿಂದ ಅವರನ್ನು ಸಮಾಧಾನಪಡಿಸಿದರು. ಅವರು ಹೇಳಿದ್ದು ಇಷ್ಟೆ:

ಯೋಗ ಸಾಧನೆಯಿಂದ ಇಂಥ ಪವಾಡಗಳನ್ನು ಮಾಡುವ ಶಕ್ತಿ ನಮಗೆ ಬರುತ್ತದೆ. ನಮಗೆ ಬೇಕಾಗಿರುವುದು ಶಿವನ ಕೃಪೆಯೊಂದೇ. ಅದನ್ನು ಬಿಟ್ಟರೆ ಇನ್ನೇನೂ ಬೇಡ. ಆದರೆ ಸಾಮಾನ್ಯ ಜನರಲ್ಲಿ ಕೆಲವರು ಗ್ರಂಥಗಳನ್ನು ಓದುವುದರಿಂದ, ಗುರುಗಳ ಉಪದೇಶದಿಂದ ಈ ಪಾರಮಾರ್ಥಿಕ ದಾರಿಯನ್ನು ಹಿಡಿಯುತ್ತಾರೆ. ಉಳಿದವರಿಗೆ ಇಂಥ ಪವಾಡಗಳು ಬೇಕಾಗುತ್ತವೆ. ಇದರ ಪರಿಣಾಮದಿಂದ ಅವರು ಒಳ್ಳೆಯ ದಾರಿಯನ್ನು ಹಿಡಿಯಲಿ, ಮಹಾತ್ಮರ ಉಪದೇಶವನ್ನು ಕೇಳಲಿ, ಮನೆ-ಮಠ-ಆಸ್ತಿ-ಪಾಸ್ತಿ, ಹೆಂಡತಿ-ಮಕ್ಕಳು ಎನ್ನುವ ಅಶಾಶ್ವತ ಸುಖದ ಆಸೆ ಬಿಡಲು, ಇನ್ನೂ ಬೇರೆ ಸುಖವೊಂದು ಇದೆ ಎನ್ನುವನ್ನು ತಿಳಿದುಕೊಳ್ಳಲಿ ಎನ್ನುವ ಉದ್ದೇಶದಿಂದ ನಾನು ಪವಾಡಗಳನ್ನು ಮಾಡಿದೆ. ನನ್ನ ಸ್ವಂತಕ್ಕೆ ಹಣ, ಕೀರ್ತಿ, ವೈಭವದ ಆಸೆಗಾಗಿ ಮಾಡಲಿಲ್ಲ. ಅಗ್ನಿಯಿಂದ ಆಹಾರವನ್ನು ತಯಾರಿಸಲೂಬಹುದು, ಮನೆಯನ್ನು ಸುಡಲೂ ಬಹುದು. ಹಾಗೆಯೇ ಪವಾಡಗಳನ್ನು ನಿಷ್ಕಾಮಿಯಾಗಿ, ಲೋಹಿತಕ್ಕಾಗಿ ಮಾತ್ರ ಉಪಯೋಗಿಸಬೇಕು.

ಉಪಕಾರ ಮಾಡು

ಗುರುಗಳಿಗೆ ಶಿಷ್ಯನವಾದ ಹಿಡಿಸಿತು. ತಮ್ಮ ಶಿಷ್ಯ ಎಲ್ಲ ಯೋಗಗಳಲ್ಲಿಯೂ ಸಿದ್ಧಿ ಪಡೆದು ಮಹಾತ್ಮನಾಗಿದ್ದಾನೆ. ಆದರೆ ಅವನು ತಾನೊಬ್ಬನೇ ದೊಡ್ಡವನಾದರೆ ಸಾಲದು. ಲೋಕಕಲ್ಯಾಣಕ್ಕೆ ಕೆಲಸಮಾಡಬೇಕು ಎಂದು ಗುರುಗಳ ಇಚ್ಛೆಯಾಗಿತ್ತು. ಅದನ್ನೇ ನಿಜಗುಣರವರಿಗೆ ಹೇಳಿ ” ನಿನ್ನಿಂದ ಕನ್ನಡ ಜನತೆಗೆ ಬಹಳ ದೊಡ್ಡ ಉಪಕಾರವಾಗಬೇಕಾಗಿದೆ. ನೀನು ಅನುಭಾವ ಮಾರ್ಗದಲ್ಲಿ ಪಡೆದ ಅನುಭವದಿಂದ ಇಂದಿನ ಮತ್ತು ಮುಂದಿನ ಜನರಿಗಾಗಿ ತಿಳಿಗನ್ನಡದಲ್ಲಿ ಗ್ರಂಥವನ್ನು ಬರಿ. ದೇವರನ್ನು ಕಾಣಬೇಕೆಂದು ಹಂಬಲಿಸುವ ಜನರಿಗೆ ನಿನ್ನ ಗ್ರಂಥಗಳು ಮಾರ್ಗದರ್ಶನ ಮಾಡಲಿ” ಎಂದು ಆಶೀರ್ವದಿಸಿದರು. (ಜೀವನವನ್ನು ಸಾರ್ಥಕಗೊಳಿಸುವ ಅಂತರಂಗದ ಅನುಭವಕ್ಕೆ ಅನುಭಾವ ಎನ್ನಬಹುದು. ತಮ್ಮ ಅರಿವಿನಿಂದ ತಮ್ಮ ಆಚರಣೆಯಿಂದ ಪಡೆದ ಅನುಭವ ಇದು.)

ಏಳು ದೀಪಗಳು

ನಿಜಗುಣರು ಸಂಸ್ಕೃತ ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಪಂಡಿತರಾಗಿದ್ದರು. ವೇದ, ಉಪನಿಷತ್ತು, ಶಾಸ್ತ್ರಗಳನ್ನೆಲ್ಲ ಆಳವಾಗಿ ಅಭ್ಯಾಸ ಮಾಡಿದ್ದರು. ಈಗ ಗುರುಗಳು ಅಪ್ಪಣೆ ಕೊಡಿಸಿದಂತೆ ಲೋಕಕಲ್ಯಾಣಕ್ಕಾಗಿ ತಾವು ಏನಾದರೂ ಕೆಲಸ ಮಾಡಬೇಕು. ತಮ್ಮ ಯೋಗ ಸಾಧನೆ, ಸಿದ್ಧಿಯ ಸದುಪಯೋಗ ಮಾಡಿಕೊಳ್ಳಬೇಕು. ತಮ್ಮಲ್ಲಿರುವ ಜ್ಞಾನವನ್ನು ನಾಲ್ಕು ಜನರಿಗೆ ಹಂಚಬೇಕು ಎನ್ನುವ ವಿಚಾರದಿಂದ ನಿಜಗುಣರ ಗ್ರಂಥಗಳನ್ನು ಬರೆಯಲು ಪ್ರಾರಂಭಿಸಿದರು.

ಆಗ ಅವರಿಗೆ ಹೊಳೆದ ಮೊದಲನೆಯ ವಿಚಾರವೆಂದರೆ ವೇದ, ಉಪನಿಷತ್ತುಗಳಂತಹ ಅಮೂಲ್ಯ ಗ್ರಂಥಗಳು ಸಂಸ್ಕೃತದಲ್ಲಿಯೇ ಇರುವುವು. ಸಂಸ್ಕೃತದಲ್ಲಿ ಹೆಚ್ಚಿನ ಪಾಂಡಿತ್ಯ ಇರುವವರಿಗೆ ಮಾತ್ರ ವುಗಳನ್ನು ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಾಗುವುದು. ಕೇವಲ ಕನ್ನಡ ಭಾಷೆಯನ್ನು ತಿಳಿದ ಸಾಮಾನ್ಯ ಜನರಿಗೆ ಇವು ಕಬ್ಬಿಣದ ಕಡಲೆಯಾಗಿರುವುವು. ಹೀಗೆ ಯೋಚಿಸಿ ಅವರು ನಾಡಿನಲ್ಲಿ ಸಾಮಾನ್ಯ ಜನರಿಗೆ ತಿಳಿಯುವಂತೆ ವೇದ, ಉಪನಿಷತ್ತುಗಳನ್ನು ಸಾರವನ್ನು ಕನ್ನಡದಲ್ಲಿ ಬರೆಯಬೇಕೆಂದು ನಿರ್ಧಾರ ಮಾಡಿದರು.

ನಿನ್ನಿಂದ ಕನ್ನಡ ಜನತೆಗೆ ಬಹಳ ದೊಡ್ಡ ಉಪಕಾರವಾಗಬೇಕಾಗಿದೆ

ಸಪ್ತ ಋಷಿ, ಸಪ್ತಸಾಗರ, ಸಪ್ತಸ್ವರಗಳಂತೆ ನಿಜಗುಣರು ಕನ್ನಡದಲ್ಲಿ ಸಪ್ತ ಅಂದರೆ ಏಳು ಗ್ರಂಥಗಳನ್ನು ರಚಿಸಿದ್ದಾರೆ.

೧. ಕೈವಲ್ಯ ಪದ್ಧತಿ

೨. ಪರಮಾನುಭವ ಬೋಧೆ

೩. ಅನುಭವಸಾರ

೪. ಪರಮಾರ್ಥ ಗೀತೆ

೫. ಪಾರಮಾರ್ಥ ಪ್ರಕಾಶಿಕೆ

೬. ವಿವೇಕ ಚಿಂತಾಮಣಿ

೭. ಅರವತ್ಮೂರು ಪುರಾತನ ತ್ರಿವಿಧಿ

ಇವೇ ಆ ಗ್ರಂಥಗಳು. ಜನಸಾಮಾನ್ಯರನ್ನೂ ವಿದ್ವಾಂಸರನ್ನೂ ಇವು ಆಕರ್ಷಿಸಿವೆ. ಸಾಮಾನ್ಯ ರೈತ, ಹಳ್ಳಿಯ ಗೃಹಿಣಿ, ಬಿಕ್ಷೆ ಬೇಡುವವರು, ಮುಕ್ತಿಮಾರ್ಗ ಬಯಸುವವರು, ಸ್ವಾಮಿಗಳು, ಸಾಧು-ಸಂತರು ಎಲ್ಲರೂ ನಿಜಗುಣರ ಹಾಡುಗಳನ್ನು ಹಾಡುತ್ತಾರೆ. ಹಾಡಿ ಸಂತೋಷ ಪಡುತ್ತಾರೆ. ಈ ಕನ್ನಡ ಗ್ರಂಥಗಳಲ್ಲದೆ “ದರ್ಶನಸಾರಂ” ಮತ್ತು “ಆತ್ಮತರ್ಕ ಚಿಂತಾಮಣಿ” ಎಂಬ ಎರಡು ಸಂಸ್ಕೃತ ಗ್ರಂಥಗಳನ್ನೂ ರಚಿಸಿದ್ದಾರೆ ಎಂದು ತಿಳಿದು ಬಂದಿದೆ. ಆ ಆ ಗ್ರಂಥಗಳ ಪ್ರತಿಗಳು ಇರುವರೆಗೂ ಸಿಕ್ಕಿಲ್ಲ.

ಐದುನೂರು ವರ್ಷ ಕಳೆದ ಮೇಲೆಯೂ ನಿಜಗುಣರನ್ನು ಜನರ ಮನದಲ್ಲಿ ಸದಾಕಾಲ ಉಳಿಯುವಂತೆ ಮಾಡಿದ ಅವರ ಗ್ರಂಥಗಳ ಪರಿಚಯವನ್ನು ಮಾಡಿಕೊಳ್ಳಬೇಕಲ್ಲವೇ?

ಕೈವಲ್ಯ ಪದ್ಧತಿ

ಹುಟ್ಟಿನಿಂದಲೇ ನಿಜಗುಣರು ಕವಿಹೃದಯವುಳ್ಳವರಾಗಿದ್ದರು. ಯೋಗಸಾಧನೆ ಮಾಡುತ್ತಿದ್ದಾಗಲೇ ಅವರು ತಮ್ಮ ಅನುಭವಗಳನ್ನು ಕವಿತೆಗಳ ರೂಪದಲ್ಲಿ ಹಾಡಿಕೊಳ್ಳುತ್ತಿದ್ದರು. ಅವರಿಗೆ ಸಂಗೀತದಲ್ಲಿಯೂ ಹೆಚ್ಚಿನ ಪಾಂಡಿತ್ಯವಿತ್ತು. ಆಧ್ಯಾತ್ಮದಂತಹ ಕಠಿಣವಿಷಯದ ಬಗ್ಗೆ ಸರಳವಾದ, ಸುಂದರವಾದ, ಕನ್ನಡದಲ್ಲಿ ಕವನಗಳನ್ನು ರಚಿಸಿದರು. ಅವುಗಳಿಗೆ ಶಾಸ್ತ್ರೀಯ ಕರ್ನಾಟಕ ಸಂಗೀತಕ್ಕೆ ಹೊಂದುವಂತೆ ರಾಗ, ತಾಳಗಳನ್ನು ಹಾಕಿದರು. ಎಲ್ಲರಿಗೂ ತಿಳಿಯುವಂತೆ ಸರಳ ಕನ್ನಡದಲ್ಲಿ ರಾಗಬದ್ಧವಾಗಿ ಬರೆದಿದ್ದರಿಂದ ಅವರ ಕವಿತೆಗಳು ಬಹು ಜನಪ್ರಿಯವಾದವು.

“ಕೈವಲ್ಯ” ಎಂದರೆ ಮುಕ್ತಿ, “ಪದ್ಧತಿ” ಎಂದರೆ ಮಾರ್ಗ ಎಂದು ಅರ್ಥವಾಗುತ್ತದೆ. ಕೈವಲ್ಯ ಪದ್ಧತಿ ಪುಸ್ತಕದಲ್ಲಿ ಮುಕ್ತಿಯನ್ನು ಪಡೆಯುವ ಮಾರ್ಗವನ್ನು ತೋರಿಸಿದ್ದಾರೆ. ಪರಮೇಶ್ವರನ, ಗುರುವಿನ ಸ್ತುತಿಯಿಂದ ಈ ಗ್ರಂಥ ಪ್ರಾರಂಭವಾಗುತ್ತದೆ. ತಾಯಿ ಮಗುವನ್ನು ಮರಿ, ಪಾಪು, ಬಾಳಾ, ತಮ್ಮಾ ಎಂದು ಮೊದಲಾಗಿ ಬೇರೆ ಬೇರೆ ಹೆಸರಿನಿಂದ ಕರೆದು ಸಂತೋಷಪಡುತ್ತಾಳೆ. ಅದರಂತೆ ಇಲ್ಲಿ ನಿಜಗುಣರು ಶಿವಾ, ಮಹಾದೇವ, ಶಂಕರ, ಪಾರ್ವತೀಧವ, ನೀಲಕಂಠ, ನಾಗಭೂಷಣ, ಚಂದ್ರಮವಳಿ, ಫಾಲಾಕ್ಷ, ಪಶುಪತಿ ಎನ್ನುವ ನೂರು ಎಂಟು ನಾಮಾವಳಿಗಳಿಂದ ಪರಮೇಶ್ವರನನ್ನು ಸ್ತುತಿಸಿದ್ದಾರೆ. “ಉದಯ ಅಸ್ತಮಾನದೊಳು ನೂರೆಂಟು ನಾಮವನ್ನು ಪದುಳದಿಂದ ಓದಿ ಕೇಳಿದವರ್ಗೆ ಶಂಭುಲಿಂಗದ ಕರುಣದಿಂದ ಇತಿತು ಕೊರತೆಯಿಲ್ಲದೆ ಸಕಲ ಸಂಪದಗಳು ಒಂದುಗೂಡಿ ಸದಮಲ ಜ್ಞಾನ ಸದ್ಭಕ್ತಿಗಳು ಮೇಲೊದಗಿ ಕೈಸಾರುತಿಹವು ಇಹದಲ್ಲಿ ಪರದೊಳೊಂದಿದ ಗಣಪದವನೈದಿ ನಿಜಸುಖದೊಳಿಹ ಮುಕ್ತಿ ದೊರೆತುದಿದು ಸತ್ಯ.” ಎಂದು ಈ ಸ್ತೂತ್ರ ಮುಕ್ತಾಯವಾಗುತ್ತದೆ. ಅಂದರೆ ಈ ರೀತಿಯಾಗಿ ದಿನವೂ ಬೆಳಗ್ಗೆ, ಸಂಜೆ ಈಶ್ವರನನ್ನು ಸ್ಮರಿಸಬೇಕು. ಅವರಿಗೆ ಸಕಲ ಸಂಪತ್ತುಗಳು ಸಿಕ್ಕುತ್ತವೆ. ಜ್ಞಾನ, ಭಕ್ತಿಗಳು ದೊರೆತು ಮುಕ್ತಿಯು ದೊರೆಯುತ್ತದೆ ಎಂದು ಹೇಳಿದ್ದಾರೆ. ಅದರಂತೆ ಹ್ರೀಂಕಾರಿ, ವಾಣಿ, ಕಲ್ಯಾಣಿ, ರುದ್ರಾಣಿ, ರಮೆ, ವಿಮಲೆ, ಗಿರಿಜೆ, ಸುಮತಿ, ಸುಲಲಿತೆ, ಮಹೇಶ್ವರಿ, ಮಧುಮಾತೆ ಎನ್ನುವ ಸುಂದರ ಹೆಸರುಗಳಿಂದ ಪಾರ್ವತಿಯನ್ನು ಹಾಡಿ ಹೊಗಳಿದ್ದಾರೆ. ಶಿವ ಮತ್ತು ಪಾರ್ವತಿಯರ ಈ ನೂರೆಂಟು ನಾಮಾವಳಿಗಳನ್ನು ದಿನವೂ ಬೆಳಿಗ್ಗೆ, ಸಂಜೆ ಪೂಜಾ ಸಮಯದಲ್ಲಿ ಹೇಳುವ ರೂಢಿಯನ್ನು ವೀರಶೈವರು ಈಗಲೂ ಇಟ್ಟುಕೊಂಡಿದ್ದಾರೆ.

ಎಲ್ಲ ಧರ್ಮಗಳ ಸಾರ

ಯಾವ ಕಾಲಕ್ಕೂ ಎಲ್ಲರಿಗಿಂತಲೂ ಗುರುವು ದೊಡ್ಡವನು. ಅವನ ಉಪದೇಶವನ್ನು ಆಲಿಸಬೇಕು. ಅದರಂತೆ ಆಚರಿಸಿದರೆ ಮಾನವನಿಗೆ ಮುಕ್ತಿ ದೊರೆಯುತ್ತದೆ.

ಶ್ರೀಗುರು ವಚನೋಪದೇಶವನಾಲಿಸಿ
ದಾಗಳಹುದು ನರರಿಗೆ ಮುಕುತಿ
ದುರಿತ ಕರ್ಮವನೊಲ್ಲದಿರು, ಪುಣ್ಯವನೆ ಮಾಡು
ಹರನಡಿವಿಡಿ, ಶಾಂತರೊಡನಾಡು
ಕರುಣವಿರಲಿ ಜೀವರೊಳು ನೀತಿ ವಿದನಾಗು
ಪೊರೆ ಪೊರ್ದಿದರನೆಂದು ಬೆಸಸುವ
ನಿಂದಿಸಿ ನುಡಿಯದಿರಾರನು, ಮನಸಿಗೆ
ಬಂದಂತೆ ನಡೆಯದಿರಿಹದಲ್ಲಿ
ಕುಂದುವಡೆಯದಿರು ಕಾಮಾದಿಗಳನು ಜಯಿ
ಸೆಂದು ಕೈವಿಡಿದನುಗ್ರಹಿಸುವ
ಭವಮಾಲೆಗಲಸು, ಪುಸಿಯದಿರೆಡರು ಬಂದು
ಕವಿಯಲಂಜದಿರು, ಸಂಪದದೊಳು
ತವೆಮದವಳಿದಿರು ತತ್ವಸಂತತಿಯನು
ವಿವರಿಸಿ ನೊಡೆಂದು ತಿಳುಪುವ
ಳಸದಿರದ್ವೈತವನು ಬಾಹ್ಯದಲಿ,
ನಿನ್ನೊಳಗೇಕೋ ಭಾವನೆಯೊಡಗೂಡು
ತಿಳಿದು ಸಮಯ ನಿಷ್ಠೆಗಳಿ ವೇದವಿಧ ಭಕ್ತಿ
ಗಳನಗಲದಿರೆಂದುಸುರುವ
ಆರುನಾನೆಂದು ವಿಚಾರಿಸುವ, ವಿಷಯ
ಸಂಸಾರವಿದನು ಕನಸೆಂದರಿ
ಮಾರಮರ್ದನ ಶಂಭುಲಿಂಗವನೊಲಿಸಿ
ಗಂಭೀರ ಸುಖದೊಳಿರೆಂದರುಪುವ
ಕೆಟ್ಟ ಕೆಲಸವನ್ನು ಮಾಡಬೇಡ. ಪುಣ್ಯವನ್ನೇ ಮಾಡು.

ಒಳ್ಳೆಯವರೊಡನೆ ಇರು. ನೀತಿ ಮಾರ್ಗದಲ್ಲಿ ನಡೆ. ಈಶ್ವರನಿಗೆ ಶರಣುಹೋಗು. ಉಳಿದ ಜೀವಿಗಳಲ್ಲಿ ದಯೆ ತೋರು. ಕಷ್ಟಗಳು ಬಂದಾಗ ಅಂಜಬೇಡ. ಶ್ರೀಮಂತಿಕೆ ಬಂದಾಗ ಸೊಕ್ಕು ತೋರಿಸಬೇಡ. ಒಳಗೊಂದುಸ ಹೊರಗೊಂದು ಮಾತನಾಡಬೇಕು. ಒಂದೇ ರೀತಿಯಾಗಿರು. ಸಮಯನಿಷ್ಠೆ ಅಂದರೆಮತ, ಧರ್ಮಗಳಲ್ಲಿ ನಿಷ್ಥೆಯಿಂದ ಇರುವುದನ್ನು ಕಲಿ. ಇಲ್ಲಿ ಹುಟ್ಟಿ ಬಂದ “ನಾನು” ಯಾರು? ನನ್ನ ಕರ್ತವ್ಯವೇನು? ಎನ್ನುವ ಬಗ್ಗೆ ವಿಚಾರ ಮಾಡು. ಈ ರೀತಿಯಾಗಿ ನಡೆದುಕೊಂಡು ಶಂಭುಲಿಂಗನನ್ನು ಒಲಿಸಿಕೊಂಡು, ಸುಖವಾಗಿರು ಎನ್ನುತ್ತಾರೆ ನಿಜಗುಣ ಶಿವಯೋಗಿಗಳು. ಅದು ಅಂಥಿಂಥ ಸುಖವಲ್ಲ. ಗಂಭೀರ ಸುಖ. ಈ ಒಂದು ಪದ್ಯದಲ್ಲಿರುವಂತೆ ನಡೆದರೆ ಸಾಕು, ಮನುಷ್ಯನ ಜೀವನವೇ ಸಾರ್ಥಕವಾಗುತ್ತದೆ. ಎಲ್ಲ ಧರ್ಮಗಳ ಸಾರವೂ ಇದರಲ್ಲಿದೆ.

ನೋಡಲಾಗದೆ

ಶಿವನು ತಮ್ಮನ್ನು ಕರುಣೆ ತೋರಿ ನೋಡಬೇಕು.ತಮ್ಮ ಮನಸ್ಸಿನಲ್ಲಿದ್ದ ಕತ್ತಲೆಯನ್ನು ಕಳೆಯಬೇಕು ಎಂದು ನಿಜಗುಣರು ಅಂಗಲಾಚಿ ಬೇಡಿಕೊಂಡಿದ್ದಾರೆ.

ನೋಡಲಾಗದೆ ದೇವ ನೋಡಲಾಗದೆ ಕೂಡೆ ನಿನ್ನ ದಿಟೆ ಮೂರು ನಾಡೆ ಲೇಸು ಮಾಡಲೆನ್ನಶಿವನು ತನ್ನ ಮೂರು ಕಣ್ಣುಗಳನ್ನು ತೆರೆದು ತಮ್ಮನ್ನು ನೋಡಬೇಕು. ಮೂರು ಕಣ್ಣುಗಳಲ್ಲಿ ಒಂದನ್ನು ಅಗ್ನಿಗೆ, ಇನ್ನೊಂದನ್ನು ಸೂರ್ಯನಿಗೆ ಮತ್ತೊಂದನ್ನು ಚಂದ್ರನಿಗೆ ಹೋಲಿಸಿದ್ದಾರೆ. ಅಗ್ನಿಯಿಂದ ಮನದಲ್ಲಿದ್ದ ಮೋಹವೆಂಬ ಕಾಡನ್ನು ಸುಡಬೇಕು. ಹೃದಯ ಕಮಲವನ್ನು ಅರಳಿಸಲು ಸೂರ್ಯನು ಕಣ್ಣುಬಿಚ್ಚಿ ನೋಡಬೇಕು. ಹೃದಯ ಸಮುದ್ರ ಉಕ್ಕೇರಿ ಬರಲು ಚಂದ್ರನ ಕಣ್ಣಿನಿಂದ ತಂಪಾದ ಕಿರಣಗಳನ್ನು ಸುರಿಸಬೇಕು ಎಂದು ಬೇಡಿಕೊಳ್ಳುವ ಈ ಹಾಡು ಬಹಳ ಸುಂದರವಾಗಿದೆ.

ಕೋಗಿಲೆ ಚೆಲ್ವೆ ಕೋಗಿಲೆ

ಇದರಂತೆಯೇ ಮನಸ್ಸನ್ನು ಕೋಗಿಲೆಗೆ ಹೋಲಿಸಿ ಅದಕ್ಕೆ ಬುದ್ಧಿ ಮಾತು ಹೇಳಿದ್ದಾರೆ. ಇನ್ನೊಂದು ಕವಿತೆಯಲ್ಲಿ ಅದೂ ಕೂಡ ಕೋಗಿಲೆಯ ಧ್ವನಿಯಂತೆಯೇ ಮಧುರವಾಗಿದೆ. ಕೋಗಿಲೆ ಚೆಲ್ವ ಕೋಗಿಲೆ ಮುದ್ದು ಕೋಗಿಲೆ ಜಾಣ ಕೋಗಿಲೆ

ಹಿಂದೆ ತಪದೋಳೀಶನೊಂದಿರುತಿರಲೆಚ್ಚು
ಬೆಂದಕಾಮನ ಬಿಟ್ಟು ಕೋಗಿಲೆ
ಬಂದು ಬೇಗದಿ ಬಾಲೇಂದುಧರದ ಕೊಡಿ
ಕುಂದದೇ ನೀ ಬಾಳು ಕೋಗಿಲೆ
ದುರುಳ ಕಂತುವಿನೊಡನಿರೆ ಲೋಕದೊಳು ನಿನ್ನ
ಪರಪುಟ್ಟನೆಂಬರು ಕೋಗಿಲೆ
ಧರೆಗೆ ಜನಕನಾದ ಗುರುಶಂಭುಲಿಂಗದ
ಚರಣ ಪಲ್ಲವ ಪಿಡಿ ಕೋಗಿಲೆ

“ಶಿವನ ತಪಸ್ಸನ್ನು ಕೆಡಿಸಲು ಹೋಗಿ ಅವನಿಂದ ಸುಟ್ಟು ಬೂದಿಯಾದ, ಋಷಿ-ಮಿನಿಗಳ ನೀತಿಗೆಡಿಸುವ, ವಿರಹಿಗಳ ಮನಸ್ಸನ್ನು ಕೊರೆಯುವ, ಕಾಮನನ್ನು ಬಿಟ್ಟು ಎಲ್ಲ ಜೀವಿಗಳನ್ನೂ ಪ್ರೀತಿಯಿಂದ ನೋಡುವ ಶಿವನನ್ನು ಕೊಡಿ ಕುಂದದಂತೆ ಬಾಳು. ಕಾಮನನ್ನು ಬಣ್ಣಿಸಿದರೆ ನಿನಗೇ ಕೇಡಲ್ಲವೇ? ಆದ್ದರಿಂದ ಪಾರ್ವತೀಪತಿಯನ್ನು ಕುರಿತು ಹಾಡು. ದುಷ್ಟನಾದ ಕಾಮನೊಡನಿದ್ದರೆ ಲೋಕದ ಜನರು ನಿನ್ನನ್ನು ಪರಪುಟ್ಟ (ಬೇರೆಯವರಿಂದ ಜೀವಿಸುವನು) ಎಂದು ಹೀಯಾಳಿಸುತ್ತಾರೆ. ಆದ್ದರಿಂದ ಅವನ ಸಂಗವನ್ನು ತೊರೆದು, ಮುದ್ದು ಕೋಗಿಲೆಯ, ಲೋಕದ ಒಡೆಯನಾದ ಗುರುಶಂಭುಲಿಂಗದ ಪಾದಗಳನ್ನು ಹಿಡಿದುಕೋ” ಎಂದು ಮನಸ್ಸಿಗೆ ಶಿವಕಾರುಣ್ಯವನ್ನು ಪಡೆಯಲು ಬೋಧಿಸಿದ್ದಾರೆ.

ದೇವರನ್ನು ತಾವು ಏನನ್ನು ಬೇಡುತ್ತೇವೆ ಎನ್ನುವುದನ್ನು ನಿಜಗುಣರು ಇನ್ನೊಂದು ಪದ್ಯದಲ್ಲಿ ಬಹಳ ಸರಳವಾಗಿ ಹೇಳಿದ್ದಾರೆ. ಸಾಮಾನ್ಯ ಮಾನವರು ಮನೆಯ್ನನೂ ಆಸ್ತಿಯನ್ನೂ, ಸಕಲಸಂಪತ್ತನ್ನೂ, ದೀರ್ಘಾಯುಷ್ಯವನ್ನೂ ಬೇಡುತ್ತಾರೆ. ಆದರೆ ಈ ಶಿವಯೋಗಿಗಳು ಏನನ್ನು ಬೇಡುತ್ತಾರೆ ನೋಡಿ:

ಬೇಡುವೆನಭವ ನಿಮ್ಮನು ಭವಭವದೊಳು
ಮಾಡೆನಗೊಲಿದು ಸುಗುಣ ಸಂತತಿಯನಿಂತು

ಎಂದು ಪದ್ಯವನ್ನು ಪ್ರಾರಂಭ ಮಾಡುತ್ತಾರೆ. ಕಷ್ಟ ಬಂದಾಗ ಧೈರ್ಯವನ್ನು ಕೊಡು. ಶ್ರೀಮಂತಿಕೆ ಇದ್ದಾಗಲೂ ವಿನಯವನ್ನು ಕೊಡು. ಯೌವನವಿದ್ದಾಗ ಕೆಟ್ಟ ದಾರಿ ಹಿಡಿಯದಂಥ ಗಟ್ಟಿಯಾದ ಮನಸ್ಸನ್ನು ಕೊಡು. ಹಿಡಿದ ಕೆಲಸವನ್ನು ಬಿಡದೆ ಮಾಡುವ ಛಲವನ್ನು ಕೊಡು. ಪ್ರಾಣಹೋದರು ಇತರರಿಗೆ ಶರಣಾಗದ ಮನವನ್ನು ಕೊಡು. ಪರಸ್ತ್ರೀಯನ್ನು ತಾಯಿಯಂತೆ ಕಾಣುವ ವಿವೇಕವನ್ನು ಕೊಡು ಎಂದು ಬೇಡಿಕೊಳ್ಳುತ್ತಾರೆ. ಹುಟ್ಟಿದ ಎಲ್ಲ ಮಾನವರೂ ದೇವರಲ್ಲಿ ಬೇಡಿಕೊಳ್ಳ ಬೇಕಾದದ್ದು ಇದನ್ನೇ ಅಲ್ಲವೇ?

ಪಾರಾತನರ ತ್ರಿವಿಧಿ

ಒಂಬತ್ತನೆಯ ಶತಮಾನದಲ್ಲಿ ತಮಿಳುನಾಡಿನಲ್ಲಿ ಅರುವತ್ಮೂರು ಜನ ಪುರಾತನರು ಬಾಳಿ ಬೆಳಗಿದರು. ಇವರು ಭಿನ್ನ ಭಿನ್ನ ಜಾತಿಯವರಾಗಿದ್ದು ಕುಲದ ಕಟ್ಟು ನಿಟ್ಟು ಇಲ್ಲದವರಾಗಿದ್ದರು ತಮ್ಮ ಅಗಾಧ ಭಕ್ತಿಯಿಂದ ಪರಮಾತ್ಮನನ್ನು ಸಾಕ್ಷಾತ್ಕಾರ ಮಾಡಿಕೊಂಡಿದ್ದರು.ಸ ದಕ್ಷಿಣ ಭಾರತದಲ್ಲಿ ಈ ಮಹಾಪುರುಷರು ತುಂಬ ಪ್ರಸಿದ್ಧರಾಗಿದ್ದಾರೆ. ಕವಿಗಳು ಸಂಸ್ಕೃತ, ತಮಿಳು, ಕನ್ನಡ ಭಾಷೆಗಳಲ್ಲಿ ಈ ಪುರಾತನರ ಚರಿತ್ರೆಗಳನ್ನು ಬರೆದಿದ್ದಾರೆ. ಈ ಅರವತ್ಮೂರು ಪುರಾತನರಲ್ಲಿ ಪ್ರತಿಯೊಬ್ಬರ ಮೇಲೆ ಮೂರು ಸಾಲಿನ ಒಂದೊಂದು ಪದ್ಯವನ್ನು ನಿಜಗುಣರು ತಮ್ಮ “ಆರವನ್ಮೂರು ಪುರಾತನರ ತ್ರಿವಿಧಿ” ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಆ ಮೂರು ಸಾಲಿನ ಪದ್ಯ ಅಂದರೆ ತ್ರಿಪದಿಯಲ್ಲಿ ಒಟ್ಟು ಅವರ ಸಮಗ್ರ ಪರಿಚಯವನ್ನೇ ಮಾಡಿಕೊಟ್ಟಿದ್ದಾರೆ. ಅವರಲ್ಲಿ ಬೇಡರ ಕಣ್ಣಪ್ಪನನ್ನು ಕುರಿತು ಬರೆದ ಈ ಪದ್ಯವನ್ನು ಕೇಳಿ:

ಮೃಡನ ದೃಷ್ಟಿಯಲ್ಲಿ ರುಜೆಯಡರಿತೆಂದತಿ ಭೀತಿ
ವಿಡಿದು ನಿಜಲೋಚನವಿತ್ತ ಕನ್ನಪ್ಪ
ನಡಿಗಳಂ ಪೊತ್ತು ಬಿಡದಿರ್ಪೆ

ಇಲ್ಲಿ ಮೃಡ ಎಂದರೆ ಶಿವ, ರುಜೆ ಎಂದರೆ ರೋಗ, ನಿಜಲೋಚನ ಎಂದರೆ ತನ್ನ ಕಣ್ಣುಗಳು ಎನ್ನುವುದು ಅರ್ಥವಾದರೆ ಸಾಕು. ಅಂತ ಕನ್ನಪ್ಪನ (ಕಣ್ಣಪ್ಪ) ಅಡಿಗಳನ್ನು ಹಿಡಿದು ನಿಜಗುಣರು ಕೊಂಡಾಡಿದ್ದಾರೆ.

ಒಬ್ಬ ಬೇಡ ಅಡವಿಯಲ್ಲಿ ಬೇಟೆಯಾಡಿ, ಮಾಂಸ ತಿಂದು ಜೀವಿಸುತ್ತಿದ್ದ. ಒಂದು ದಿನ ಅವನಿಗೆ ಯಾವ ಬೇಟೆಯೂ ಸಿಕ್ಕಲಿಲ್ಲ. ಹುಡುಕುತ್ತಾ ಅಡವಿಯಲ್ಲಿ ಬಹಳ ದೂರ ಹೋದಾಗ ಶಿವದೇವಾಲಯವನ್ನು ಕಂಡ. ಪೂಜಾರಿ ದೇವರ ಪೂಜೆ ಮುಗಿಸಿ ಒಂದು ಚೂರು ನೈವೇದ್ಯವನ್ನೂ ಹಸಿದ ಬೇಡನಿಗೆ ಕೊಡದೇ ಕೀಳು ಜಾತಿಯವನೆಂದು ಅವನನ್ನು ಒಳಗೆ ಕರೆದುಕೊಳ್ಳದೆ, ಗುಡಿಯ ಬಾಗಿಲು ಹಾಕಿ ಮನೆಗೆ ಹೊರಟು ಹೋದ. ಹಸಿವಿನಿಂದ ಕಂಗೆಟ್ಟ ಬೇಡ ರಾತ್ರಿ ಗುಡಿಯ ಒಳಗೆ ನುಗ್ಗಿ ತನಗೆ ತಿಳಿದಂತೆ ಶಿವಲಿಂಗದ ಪೂಜೆ ಮಾಡಿದ. ಅವನಲ್ಲಿ ಭಕ್ತಿಯಿಂದ ಉತ್ಸಾಹ ಉಕ್ಕಿ ಮತ್ತೆ ಬೇಟೆಗೆ ಹೊರಟ. ಶಿವನಿಗೆ ನೈವೇದ್ಯ ಮಾಡಲು ಮೊಲವನ್ನು ಬೇಟೆಯಾಡಿ ತಂದ. ಅವನ ಮುಗ್ಧ ಭಕ್ತಿಗೆ ಮೆಚ್ಚಿ ಶಿವ ಅದನ್ನು ಸ್ವೀಕರಿಸಿದ. ಮುಂದೆ ಇದೇ ರೀತಿ ಶಿವಲಿಂಗ ಪೂಜೆ ಮಾಡುವುದು ಅವನ ದಿನಚರಿಯಾಯಿತು. ಶಿವನಲ್ಲಿ ತನ್ನ ಕಷ್ಟ ಸುಖಗಳನ್ನು ಹೇಳಿಕೊಳ್ಳುತ್ತಿದ್ದ. ಅವನ ಮುಗ್ಧ ಭಕ್ತಿಗೆ ಮೆಚ್ಚಿದ ಶಿವ ಸಂತೋಷ ಪಟ್ಟ. ಆದರೆ ಅವನನ್ನು ಇನ್ನೂ ಹೆಚ್ಚಿನ ಪರೀಕ್ಷೆಗೆ ಗುರಿ ಮಾಡಲು ನಿರ್ಧರಿಸಿದ. ಒಂದು ದಿನ ನಿತ್ಯದಂತೆ ಅವನು ಗುಡಿಗೆ ಬಂದಾಗ ಶಿವಲಿಂಗ ಎಂದಿನಂತೆ ಇರಲಿಲ್ಲ. ಲಿಂಗದ ಮೇಲೆ ಅದರ ಕಣ್ಣಿರುವ ಜಾಗದಿಂದ ಕೀವು ರಕ್ತ ಸೋರುತ್ತಿತ್ತು. ಅದನ್ನು ನೋಡಿದ ಬೇಡ ಗಾಬರಿಯಾದ. ಓಡಿ ಹೋಗಿ ಪ್ರೀತಿಯಿಂದ ರಕ್ತ, ಕೀವು ಒರೆಸಿದ. ನೀರಿನಿಂದ ತೊಳೆದ. ಮತ್ತೂ ಸೋರಹತ್ತಿತ್ತು. ಅದನ್ನು ನೋಡಿ ಬೇಡನಿಗೆ ಬಹಳ ದುಃಖವಾಯಿತು. “ಅಪ್ಪಾ ನನ್ನಪ್ಪಾ ಶಿವನೇ ನಿನ್ನ ಕಣ್ಣಿಗೆ ಏನಾಯ್ತಪ್ಪಾ” ಎಂದು ಗೋಳಾಡಿದ. ಅತ್ತ, ಕರೆದ. ಇಷ್ಟು ರಕ್ತ ಸುರಿದರೆ ಇನ್ನು ತನ್ನಪ್ಪನಿಗೆ ಕಣ್ಣು ಹೇಗೆ ಕಾಣಿಸಬೇಕು? ಎನ್ನುವ ಚಿಂತೆಯಾಯಿತು ಬೇಡನಿಗೆ. ಕೂಡಲೆ ಅವನಿಗೊಂದು ವಿಚಾರ ಹೊಳೆಯಿತು. ಬಾಣದ ತುದಿಯಿಂದ ತನ್ನ ಕಣ್ಣನ್ನು ಕಿತ್ತು ಶಿವಲಿಂಗದ ಮೇಲಿಟ್ಟ. ತನ್ನೆರಡೂ ಕಣ್ಣುಗಳು ಹೋದರೂ ಸ್ವಲ್ಪವೂ ಬಾಧೆ ತೋರಿಸದೆ, ದುಃಖಪಡದೆ ತನ್ನಪ್ಪನಿಗೆ ಕಣ್ಣು ಕಾಣಿಸಿದರೆ ಸಾಕು ಎಂದು ಸಂತೋಷಪಟ್ಟ. ಅವನ ಭಕ್ತಿಯನ್ನು ನೋಡಿದ ಶಿವನಿಗೆ ಮಮತೆ ಉಕ್ಕಿ ಬಂದಿತು. ತನ್ನ ನಿಜರೂಪ ತೋರಿಸಿದ. ಕಣ್ಣುಗಳನ್ನು ತಿರುಗಿ ಕೊಟ್ಟ. ಅವನೇ ಬೇಡರ ಕಣ್ಣಪ್ಪನೆಂದು ಹೆಸರಾದ.

ಎಲ್ಲರ ಕವಿ

ನಿಜಗುಣರ ವಿಚಾರಗಳು ಸುಂದರವಾಗಿರುವಂತೆ ನಿತ್ಯನೂತನವಾಗಿಯೂ ಇವೆ. ಅವರು ಪಂಡಿತರನ್ನು ತಲೆದೂಗಿಸುತ್ತಾರೆ. ಹಾಗೆಯೇ ಪಾಮರರನ್ನು ಅಂದರೆ ಕಲಿಯದವರನ್ನು ಸಮಾಧಾನಪಡಿಸುತ್ತಾರೆ. ನಿಜಗುಣರ ಗದ್ಯ ಗ್ರಂಥವಾದ “ವಿವೇಕ ಚಿಂತಾಮಣಿ” ಎನ್ನುವ ಮಹಾಗ್ರಂಥವು ಕನ್ನಡ ಸಾಹಿತ್ಯದಲ್ಲಿ ಮೊಟ್ಟಮೊದಲನೆಯ ವಿಶ್ವಕೋಶವೆಂದು ಹೇಳುತ್ತಾರೆ. (ವಿಶ್ವಕೋಶ ಎಂದರೆ ಎಲ್ಲ ವಿಷಯಗಳ ಬಗ್ಗೆ ತಿಳುವಳಿಕೆ ಕೊಡುವ ಗ್ರಂಥ. ಯಾವ ವಸ್ತುವನ್ನು ಕುರಿತು ನಾವು ತಿಳಿಯಬೇಕೆಂದು ಬಯಸಿದರೂ ಅದರ ವಿಷಯವನ್ನು ಹೇಳುವ ಗ್ರಂಥ.) ಅದರ‍ಲ್ಲಿ ವಿಶ್ವದಲ್ಲಿರುವ ಎಲ್ಲ ವಿಷಯಗಳ ಬಗ್ಗೆಯೂ ಪರಿಚಯವಿದೆ.  ಸ್ಮೃತಿ, ಪುರಾಣ, ಇತಿಹಾಸ, ಪುರಾತನರ ಹೇಳಿಕೆಗಳಿಂದ ಆರಿಸಿ ತೆಗೆದು, ಕೇವಲ ಕಲ್ಪನೆ ಮಾಡದೆ, ಅನುಭವಿಗಳು ಅಹುದೆನ್ನುವಂತೆ, ಎಲ್ಲದರ ತಿರುಳನ್ನು ಕೂಡಿಸಿ, ಸತ್ಯವಾದುದನ್ನು ಸಂಗ್ರಹಿಸಿ, ಅಲ್ಲಲ್ಲಿ ಚೆದುರಿಹೋದ ಬೆಲೆಯುಳ್ಳ ರತ್ನಗಳನ್ನು ಕೂಡಿಸಿ, ಸುಂದರವಾದ ಸರವನ್ನು ಪೋಣಿಸುವಂತೆ, ಜ್ಞಾನಾಪೇಕ್ಷಿಗಳಿಗೆ ಬೆಳುಗನ್ನಡದಲ್ಲಿ ವಿವೇಕ ಚಿಂತಾಮಣಿ ಎನ್ನುವ ಗ್ರಂಥದಲ್ಲಿ ರಚಿಸಿದ್ದೇನೆ ಎಂದು ಅದರಲ್ಲಿ ಹೇಳಿಕೊಂಡಿದ್ದಾರೆ. ಹೆಚ್ಚಿನ ಜ್ಞಾನವನ್ನುಸ ಪಡೆಯಬಯಸುವ ಎಲ್ಲರಿಗೂ ಈ ಗ್ರಂಥವು ಕೇಳಿದ್ದನ್ನು ಕೊಡುವ ಚಿಂತಾಮಣಿಯಾಗಿದೆ. ಈ ವಿವೇಕ ಚಿಂತಾಮಣಿಯನ್ನು ಕೊಡಗಿನ ಲಿಂಗರಾಜರು ಸಂಸ್ಕೃತಕ್ಕೆ ಭಾಷಾಂತರಿಸಿದ್ದಾರೆ. ಆ ಗ್ರಂಥದ ಆಧಾರದ ಮೇಲೆ ಶಾಂತಲಿಂಗ ದೇಶಿಕ ಎನ್ನುವವರು ಮರಾಠಿ ಭಾಷೆಯಲ್ಲಿಯೂ ಬರೆದಿದ್ದಾರೆ. ಅಲ್ಲದೆ ಇತರರು ತಮಿಳು, ತೆಲುಗು, ಭಾಷೆಗಳಲ್ಲಿಯೂ ಈ ಗ್ರಂಥವನ್ನು ಅನುವಾದಿಸಿದ್ದಾರೆ. ಇದರಿಂದ “ವಿವೇಕ ಚಿಂತಾಮಣಿ”ಯು ಆ ಕಾಲದಲ್ಲಿಯೇ ಎಷ್ಟೊಂದು ಜನಪ್ರಿಯವಾಗಿತ್ತು ಎನ್ನುವುದು ತಿಳಿದು ಬರುತ್ತದೆ; ಅಲ್ಲದೆ ದಕ್ಷಿಣ ಭಾರತದಲ್ಲೆಲ್ಲಾ ತುಂಬ ಪ್ರಸಿದ್ಧವಾಗಿದ್ದುದು ಕಂಡುಬರುತ್ತದೆ.

ಸಂಸ್ಕೃತದ ಭಂಡಾರ ಕನ್ನಡದಲ್ಲಿ

ಚೆನ್ನಸದಾಶಿವಯೋಗಿಗಳು ಸಂಸ್ಕೃತದಲ್ಲಿ “ಶಿವಯೋಗ ಪ್ರದೀಪಿಕಾ” ಎನ್ನುವ ಗ್ರಂಥವನ್ನು ರಚಿಸಿದ್ದರು. ಇವರು ನಿಜಗುಣರ ಗುರುಗಳು ಇದ್ದಿರಬಹುದುದೆಂದು ಕೆಲವು ವಿದ್ವಾಂಸರು ಊಹಿಸುತ್ತಾರೆ. ಇದನ್ನು ನಿಜಗುಣರು ತಮ್ಮ ಗ್ರಂಥದಲ್ಲಿ ಖಚಿತ ಪಡಿಸಿಲ್ಲ. ಈ “ಶಿವಯೋಗ ಪ್ರದೀಪಿಕಾ” ವು ಯೋಗಶಾಸ್ತ್ರವನ್ನು ತಿಳಿಸುವ ಗ್ರಂಥ. ಇದು ನಿಜಗುಣರಿಗೆ ಬಹಳ ಉಪಯುಕ್ತವಾಗಿ ಕಂಡಿರಬೇಕು. ಆದ್ದರಿಂದ ಇದರ ಲಾಭವನ್ನು ಇತರರು ಪಡೆಯಬೇಕೆಂದು ನಿಜಗುಣರು ಇದನ್ನು ಕನ್ನಡದಲ್ಲಿ ಅನುವಾದ ಮಾಡಿದ್ದಾರೆ. ಈ ಗ್ರಂಥಕ್ಕೆ “ಪಾರಮಾರ್ಥ ಪ್ರಕಾಶಿಕೆ” ಎಂದು ಕರೆದಿದ್ದಾರೆ. ಇದು ಭಾಷಾಂತರವಾಗಿದ್ದರೂ ನಿಜಗುಣರ ಪಾಂಡಿತ್ಯ ಮತ್ತು ಅನುಭಾವಗಳಿಂದ ಸ್ವತಂತ್ರ ಗ್ರಂಥದಂತೆಯೇ ಅನ್ನಿಸುತ್ತದೆ.

ಉಪನಿಷತ್ತುಗಳಲ್ಲಿ ಬೃಹದಾರಾನ್ಯ ಕೋಪನಿಷತ್ತು ಒಂದು. ಅದರ ಎರಡನೆಯ ಅಧ್ಯಾಯದಲ್ಲಿ ಒಂದು ಕಥೆ ಬರುತ್ತದೆ. ಯಾಜ್ಞವಲ್ಕ್ಯರು ಒಬ್ಬ ಮಹಾಋಷಿಗಳು. ಅವರಿಗೆ ಒಬ್ಬರು ಹೆಂಡತಿಯರು. ದೊಡ್ಡವಳ ಹೆಸರು ಕಾತ್ಯಾಯಿನಿ. ಚಿಕ್ಕವಳ ಹೆಸರು ಮೈತ್ರೇಯಿ. ಯಾಜ್ಞವಲ್ಕ್ಯರಿಗೆ ಸಂಸಾರ ಬಿಟ್ಟು ಸನ್ಯಾಸ ತೆಗೆದುಕೊಳ್ಳಬೇಕೆನ್ನುವ ಬಯಕೆಯಾಗುತ್ತದೆ. ಆಗ ಅವರು ಇಬ್ಬರು ಹೆಂಡತಿಯರನ್ನು ಕರೆದು ತಾವು ಅಲ್ಲಿಯವರೆಗೆ ರಾಜ-ಮಹಾರಾಜರುಗಳಿಂದ ಸ್ವೀಕರಿಸಿದ ಸಂಪತ್ತನ್ನು ಎರಡು ಭಾಗ ಮಾಡಿ ಹಂಚಿ ಕೊಡುತ್ತಾರೆ. “ನೀವಿಬ್ಬರೂ ಸುಖವಾಗಿರಿ. ನಾನು ತಪಸ್ಸಿಗೆ ಹೋಗುತ್ತೇನೆ” ಎನ್ನುತ್ತಾರೆ. ಕಾತ್ಯಾಯಿನಿ ಸುಮ್ಮನೆ ಒಪ್ಪಿಕೊಳ್ಳುತ್ತಾಳೆ. ಆದರೆ ಮೈತ್ರೇಯಿಗೆ ಸಮಾಧಾನವಾಗುವುದಿಲ್ಲ. ಆಗ ಅವಳು ಪತಿ ದೇವರಿಗೆ “ಈ ಲೌಕಿಕ ಸಂಪತ್ತಿನಿಂದ ಶಾಶ್ವತವಾಗಿ ಸುಖ ಸಿಕ್ಕುವುದೇ?” ಎಂದು ಪ್ರಶ್ನೆ ಮಾಡುತ್ತಾಳೆ. ಅವರು ಇಲ್ಲವೆನ್ನುತ್ತಾರೆ. ಅದಕ್ಕೆ ಮೈತ್ರೇಯಿ, “ಹಾಗಾದರೆ ನನಗೆ ಧನದಿಂದ ಸಿಕ್ಕುವ ಅಶಾಶ್ವತ ಸುಖ ಬೇಡ, ಅಚ್ಚಳಿಯದ ಸುಖ ಬೇಕು. ಆ ಹಾದಿಯನ್ನು ತೋರಿಸಿರಿ” ಎನ್ನುತ್ತಾಳೆ. ಆಗ ಯಜ್ಞವಲ್ಕ್ಯರು ಅವಳ ಈ ಇಚ್ಛೆಗೆ ಮೆಚ್ಚಿ ಅದ್ವೈತ ವೆಂದರೇನು? ಪರಬ್ರಹ್ಮ ವಸ್ತುವೆಂದರೇನು? ಎನ್ನುವುದನ್ನು ಅವಳಿಗೆ ಬೋಧಿಸುತ್ತಾರೆ. ಅದನ್ನು ಕೇಳಿ ಮೈತ್ರೇಯಿ ಮುಕ್ತಿಯ ಮಾರ್ಗವನ್ನು ಕಂಡುಕೊಳ್ಲುವಳು. ಮೂಲದಲ್ಲಿ ಈ ಗ್ರಂಥವು ಸಂಸ್ಕೃತದಲ್ಲಿ ಇರುವುದರಿಂದ ನಿಜಗುಣರು ಜನಸಾಮಾನ್ಯರಿಗಾಗಿ ಇದನ್ನು ಕನ್ನಡಿಸಿರುವರು. ಅದಕ್ಕೆ “ಪರಮಾನುಭವ ಬೋಧೆ” ಎಂದು ಹೆಸರಿಟ್ಟಿರುವರು. ಪರಮ ಎಂದರೆ ಎಲ್ಲಕ್ಕೂ ಹೆಚ್ಚಿನದು, ದೊಡ್ಡದು. ಅದರ ಅನುಭವದಿಂದಲೇ ನಿಜವಾದ ಸುಖವು ಸಿಕ್ಕುವುದು. ಅದನ್ನು ಬೋಧಿಸುವುದೇ ಈ ಪುಸ್ತಕದ ತಿರುಳು.

ಪ್ರಸಿದ್ಧವಾಗ “ಯೋಗವಾಸಿಷ್ಠ” ಎನ್ನುವ ಸಂಸ್ಕೃತ ಗ್ರಂಥದಲ್ಲಿ ಹೇಳಿದ ಆಧ್ಯಾತ್ಮದ ವಿಷಯವನ್ನೇ ತಮ್ಮ “ಪರಮಾರ್ಥಗೀತೆ” ಎನ್ನುವ ಪುಸ್ತಕದಲ್ಲಿ ಬರೆದಿದ್ದಾರೆ. ತಾನು ಯಾರು? ತನ್ನ ನಿಜವಾದ ರೂಪ ಯಾವುದು? ಈ ಸೃಷ್ಟಿ ಹೇಗೆ ಪ್ರಾರಂಭವಾಯಿತು? ಅದರ ಬಂಧನದಿಂದ ತಪ್ಪಿಸಿಕೊಳ್ಳುವುದು ಹೇಗೆ? ಯಾವಾಗ? ಮುಂತಾದ ಶಿಷ್ಯನ ಪ್ರಶ್ನೆಗಳಿಗೆ ಗುರುವು ಸರಿಯಾದ ಉತ್ತರವನ್ನು ಕೊಟ್ಟು ಅವನ ಸಂಶವನ್ನು ಪರಿಹಾರ ಮಾಡುತ್ತಾನೆ.

ಅದೇ ರೀತಿಯಾಗಿ ಮುಕ್ತಿ ಕೋಪನಿಷತ್ತಿನ ಸಾರವನ್ನು ತಮ್ಮ “ಅನುಭವಸಾರ” ಎನ್ನುವ ಗ್ರಂಥದಲ್ಲಿ ನಿಜಗುಣರು ನಿರೂಪಿಸಿದ್ದಾರೆ. ವೇದಗಳ ಕೊನೆಯ ಭಾಗ ಉಪನಿಷತ್ತು. ಋಷಿಗಳು ಆಧ್ಯಾತ್ಮ ವಿದ್ಯೆಯನ್ನು ಉಪನಿಷತ್ತುಗಳಲ್ಲಿಯೇ ಬೋಧಿಸಿದ್ದಾರೆ. ಭಾರತೀಯರ ತತ್ವಜ್ಞಾನವು ಉಪನಿಷತ್ತಿನಿಂದಲೇ ಪ್ರಾರಂಭವಾಗುತ್ತದೆ. ಅಂಥ ತತ್ವಜ್ಞಾನದ ಅನುವಾದವನ್ನು, ಸಾರವನ್ನು ಪ್ರಥಮವಾಗಿ ಕನ್ನಡದಲ್ಲಿ ಇಳಿಸಿಕೊಟ್ಟು ನಿಜಗುಣ ಶಿವಯೋಗಿಗಳು ಕನ್ನಡಿಗರಿಗೆ ಬಹಳ ದೊಡ್ಡ ಉಪಕಾರವನ್ನು ಮಾಡಿದ್ದಾರೆ.

ಉದ್ಧರಿಸುವ ಮಹಾನುಭಾವರು

ಯೋಗಿಗಳಾದವರು ತಮ್ಮಷ್ಟಕ್ಕೆ ತಾವು ಉದ್ಧಾರವಾದರೆ ಅವರ ಕೆಲಸ ಮುಗಿಯಲಿಲ್ಲ. ಇತರ ಸಾಮಾನ್ಯ ಜನರನ್ನು ಉದ್ಧರಿಸುವ ಕಾರ್ಯ ಮಾಡಬೇಕು. ಎಷ್ಟೋ ಜನ ಮಹಾಪುರುಷರು ಆ ಕಾರ್ಯವನ್ನು ಮಾಡಿದ್ದಾರೆ. ಅವರಲ್ಲಿ ನಿಜಗುಣ ಶಿವಯೋಗಿಗಳೂ ಒಬ್ಬರು.

ಅವರು ರಾಜರು, ಕವಿಗಳು, ಸಂಗೀತ ವಿಶಾರದರು, ಜ್ಞಾನಿಗಳು, ಅನುಭಾವಿಗಳು, ಸಿದ್ಧಪುರುಷರು, ಗ್ರಂಥಕಾರರು ಎಲ್ಲವೂ ಆಗಿದ್ದರು. ಈ ರೀತಿಯಾಗಿ ಎಲ್ಲ ತೇಜೋಗುಣಗಳು ಒಬ್ಬ ವ್ಯಕ್ತಿಯಲ್ಲಿಯೇ ಸಿಕ್ಕುವುದು ತುಂಬಾ ಅಪರೂಪ. ಅವರು ಅಂಥ ಮಹಾವ್ಯಕ್ತಿಗಳಾಗಿದ್ದುದರಿಂದಲೇ ನೂರಾರು ವರ್ಷಗಳು ಕಳೆದರೂ ಜನರ ನೆನಹಿನಲ್ಲಿ ಭದ್ರವಾಗಿ ನೆಲೆಸಿದ್ದಾರೆ. ಸಣ್ಣದೊಂದು ರಾಜ್ಯವನ್ನು ತ್ಯಾಗ ಮಾಡಿ ಹೋದರೂ ನಾಡಿದ ಜನತೆಯ ಹೃದಯ ಸಾಮ್ರಾಜ್ಯವನ್ನು ಆಳುತ್ತಿದ್ದಾರೆ. ಅವರ ಕಾವ್ಯದಲ್ಲಿ ಅಲ್ಲಲ್ಲಿ ಮಿಂಚುವ ಕೆಲವು ನುಡಿಮುತ್ತುಗಳನ್ನು ನೋಡಿ:

ನರಜನ್ಮದಿಂದಹದೊಳು ಮಿಗಲುಂಟೇ?
ರಾಗದಿಂ ಬೇರಿನ್ನು ಭವಬೀಜಮುಂಟೇ?
ವಿಮಲ ಮಾನಸದಿಂದೆ ಶುಭತೀರ್ಥಮುಂಟೇ?
ಕರುಣದಿಂದತಿಶಯವಹ ಧರ್ಮಮುಂಟೇ?
ಕರಣ ವಿಜದಿಂದೆ ಕಲಿತನಮುಂಟೇ?
ಕಡುಲೋಬದಿಂದೆ ದುಗುಣಮನ್ಯಮುಂಟೇ?
ಅಪವಾದದಿಂ ಮರಣವಿನ್ನುಂಟೇ?
ಚಿಂತಿಸದಿರು ಸುಖದುಃಖದೆಡೆಯೊಳು.
ಜಾಣನು ಲೌಕಿಕ ಪಾರಮಾರ್ಥವೆರಡನು ಮಾಣದೆ
ಕೂಡಿ ನಡೆಸುತಿಹನು.
ಎಲ್ಲರೊಡನೆ ವೈರವಿಲ್ಲದೆ ಕೂರ್ಪುದೆ ಚಂದಮಮ.
ತಲ್ಲಣಿಸದೆ ನಿಜದಲ್ಲಿ ತಾನಿರ್ಪುದೆ ಚಂದಮಮ.
ಧರೆಯೊಳತ್ಯಧಿಕವೆನಿಪ ಶಾಂತಿಮತವನು
ಬೇಡುವೆನಭವಾ.
ದುರಿತದೊಳಧಿಕವಾವುದು? ನಿಂದೆ.
ಜೀವನವೆರಸಿದ ಮರಣವಾವುದು? ಚಿಂತೆ.
ಕೆಡುವ ಶರೀರದ ಸಫಲವಾವುದು? ಪರಹಿತ.
ಸೆವ ಜಾಗರಣವಾವುದು? ಸದ್ವಿವೇಕ.
ಸುಧಾರಸ ಧಾರೆಯಾವುದು? ಮಿಗೆ ಮೃದುವಚನ.
ಸದುಗತಿ ಯಾವುದು? ಶಂಭುಲಿಂಗ.

ಇತರರನ್ನು ಉದ್ಧರಿಸುವ ಕಾರ್ಯ ಮಾಡಿದರು ನಿಗುಣ ಶಿವಯೋಗಿಗಳು

ನಿಜಗುಣರ ಸ್ವತಂತ್ರ ಗ್ರಂಥವಾದ “ವೈಕಲ್ಯ ಪದ್ಧತಿ”ಯ ವೈಶಿಷ್ಟ್ಯವೇನೆಂದರೆ ಅದು ಯಾವ ಮತ, ಸಿದ್ಧಾಂತ ಇಲ್ಲವೆ ಧರ್ಮವನ್ನು ದೂಷಿಸಲು ಬರೆದದ್ದಲ್ಲ. ಶಿವಾದ್ವೈತ ಪಂಥಕ್ಕೆ ಸೇರಿದ ನಿಜಗುಣರು ವೀರಶೈವ ತತ್ವಗಳನ್ನು ಅದರಲ್ಲಿ ಪ್ರತಿಪಾದಿಸಿದ್ದಾಎ. ಅವರ ಕವಿತ್ವ ಅವರೇ ಹೇಳಿರುವಂತೆ.

“ಯೋಗಿ ನಿಜಾನಂದದೊಳು ನುಡಿಸುವ ವೀಣೆ ರಾಗ ರಸದ ತರಂಗಿಣಿ” ಯಾಗಿತ್ತು. ಆ ಗ್ರಂಥದ ಕೊನೆಯಲ್ಲಿಅವರು ಬರೆದ ಈ ಸುಂದರವಾದ ಮಂಗಳ ಪದ್ಯವನ್ನು ಕೇಳಿ:

ಜ್ಯೋತಿ ಬೆಳಗುತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ.

ಮಾತು ಮನಂಗಳಿಂದತ್ತತ್ತ ಮೀರಿದ ಸಾತಿಶಯದ ನಿರುಪಾಧಿಕ ನಿರ್ಮಲ.

ನಮ್ಮ ನಾಡನ ಜನರ ಮನಮನದಲ್ಲಿ ನಿಜಗುಣ ಶಿವಯೋಗಿಗಳ ನಿರ್ಮಲ ಪರಂಜ್ಯೋತಿ ಸದಾಕಾಲವೂ ಬೆಳಗುತ್ತಲೇ ಇದೆ.