ಇದು ನಿನ್ನ ಕಾವನ್ನೆಲ್ಲ ಮಳೆಯಲ್ಲಿ ನೆನೆಹಾಕಿ
ರೆಫ್ರಿಜರೇಟರಿನಲ್ಲಿ ಸದಾ ಥಣ್ಣಗಿರಿಸುವ ವಿದ್ಯೆ ;
ಹೆಪ್ಪುಗಟ್ಟಿಸುವ ಹಿಮದ ಕತ್ತರಿಯಲ್ಲಿ ಸಣ್ಣಗೆ
ಹೆಚ್ಚಿ ಉಪ್ಪಿನಕಾಯಿ ಹಾಕಿ ಮುಚ್ಚಿಡುವ
ಪಾಕ ಪ್ರಾವೀಣ್ಯ ; ಶುದ್ಧರೇಷಿಮೆಗೆ ನುಸಿ ಹಿಡಿಸಿ
ಮಸಿಬಟ್ಟೆಗುಪಯೋಗಿಸುತ್ತ ಇದರ ಬೆಲೆ
ಇಷ್ಟೇ ಎಂದು ಸಾರುವ ಚಮತ್ಕಾರ ; ಹಿತ್ತಲ ಗಿಡಕೆ
ಕೊಡಲೀ ಹಾಕಿ ಹೂ ಚಿಗುರು ಹಣ್ಣಿರದ ಬಂಜೆಮರ-
ವೆಂದು ಚೀಟಿ ಅಂಟಿಸುವ ಚಾತುರ‍್ಯ. ನಿತ್ಯವೂ
ಈ ನಿಧಾನ ಕೊಲೆಗಾರಿಕೆಯ ಕಲೆಯಲ್ಲಿ ಸದ್ದಿರದೆ
ಸತ್ತ ಸಾವಿರ ಮುಖದ ಕಣ್ಣೀರ ಪಾತಿಗಳಲ್ಲಿ
ವಿಜೃಂಭಿಸಿದೆ ಈ ಚಾಣಕ್ಯ ಬೀಜದ ಬಳ್ಳಿ.