ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದ ಹೊನ್ನಾರು ಮಾಲೆಯಲ್ಲಿ ನನ್ನ ಗದ್ಯ-ಬರಹಗಳ ಸಂಕಲನವೊಂದನ್ನು ಹೊರತರಲು ಬಯಸಿ ಪ್ರೊ.ಬಿ.ಎ. ವಿವೇಕ ರೈ ಅವರು ಪತ್ರ ಬರೆದು ಲೇಖನಗಳ ಸಂಕಲನ ಕೊಡಲು ಕೇಳಿಕೊಂಡಿದ್ದರು. ಆದರೆ ನನ್ನ ಆಲಸಿತನ ಹಾಗೂ ಬೇರೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರಿಂದ ಇದು ಸಾಧ್ಯವಾಗಿರಲಿಲ್ಲ. ಪ್ರಸಾರಾಂಗದ ನಿರ್ದೇಶಕರಾದ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಮರಳಿ ಪತ್ರ ಬರೆದು ನೆನೆಪಿಸಿ ನನ್ನನ್ನು ಕೇಳಿಕೊಂಡಾಗ ನನಗೆ ಖುಶಿಯೇನೋ ಆಯಿತು; ಜೊತೆಗೆ ಸ್ವಲ್ಪ ಆತಂಕ ಕೂಡ ಆದದ್ದು ನಿಜ.

ಆತಂಕ ಯಾಕೆ ಅಂದರೆ: ಕಳೆದ ನಾಲ್ಕೂವರೆ ದಶಕಗಳಿಂದಲೂ ನಾನು ನನ್ನ ಮುಖ್ಯ ಅಭಿವ್ಯಕ್ತಿ ಪ್ರಕಾರಗಳಾದ ಕಾವ್ಯ ಮತ್ತು ನಾಟಕಗಳ ಜೊತೆ ಜೊತೆಯೆ ಗದ್ಯದಲ್ಲಿಯೂ ಸಾಕಷ್ಟು ಬರೆಯುತ್ತಲೇ ಬಂದಿರುವೆ. (ವೈಚಾರಿಕ, ಸಾಹಿತ್ಯಿಕ ಲೇಖನಗಳು: ಪುಸ್ತಕ ವಿಮರ್ಶೆ; ಲಲಿತ ಪ್ರಬಂಧ; ವ್ಯಕ್ತಿ ಚಿತ್ರಗಳು……ಹೀಗೆ) ೧೯೯೪ರಲ್ಲಿ ಧಾರವಾಡದಿಂದ ಪ್ರಾರಂಭವಾದ ’ಸಂಕ್ರಮಣ’ ಸಾಹಿತ್ಯ ಪತ್ರಿಕೆ ನನ್ನ ಮುಖ್ಯ ವೇದಿಕೆ. ಅದರಲ್ಲಿ ನನ್ನ ಚಂಪಾಕಾಲಂ ನಿರಂತರವಾಗಿ ಬರುತ್ತಲೇ ಇದೆ. ಬೇರೆ ಬೇರೆ ಕಾಲಘಟ್ಟಗಳಲ್ಲಿ ನಾಡಿನ ಪ್ರಮುಖ ಪತ್ರಿಕೆಗಳಿಗೆ ಅಂಕಣ ಕೂಡಾ ಅನೇಕ ಸಂಗತಿಗಳು ಪ್ರಸ್ತಾಪಗೊಂಡಿವೆ. ಒಂದು ’ಸಂಕಲನ’ ತರುವಾಗ ಈ ಸಂಗತಿಗಳನ್ನು ಕೈ ಬಿಡಬೇಕೇ ಅಥವಾ ಬದಲಾಯಿಸಬೇಕೇ ಎಂಬುದೇ ನನ್ನ ಆತಂಕವಾಗಿತ್ತು.

ಆಗ ನಾನು ಬರೆದ ಎಲ್ಲ ಲೇಖನಗಳನ್ನು ಮಲ್ಲೇಪುರಂ ಅವರ ಎದುರು ಸುರುವಿ ’ನೀವೇ ಏನಾದರೂ ಮಾಡಿಕೊಳ್ಳಿರಿ’ ಎಂದೆ. ’ನಿತ್ಯ ವರ್ತಮಾನ’ ಎಂಬ ಶೀರ್ಷಿಕೆ ಹೊತ್ತ ಈ ಸಂಕಲನದ ಲೇಖನಗಳ ಆಯ್ಕೆ ಸಂಪೂರ್ಣ ಅವರದೇ ಆಗಿದೆ. ನಾನು ಇಲ್ಲಿ ನಿಮಿತ್ತ ಮಾತ್ರ ಆಗಿದ್ದೇನೆ. ನನ್ನ ಕೃತಿಯೊಂದನ್ನು ಕನ್ನಡ ವಿಶ್ವವಿದ್ಯಾಲಯ ಪ್ರಕಟಿಸುತ್ತಿರುವುದಕ್ಕೆ ನನಗೆ ಖುಷಿಯಾಗಿದೆ. ಪ್ರಸಾರಾಂಗದ ಮಹತ್ವದ ಪ್ರಕಟಣ ಮಾಲೆಯಲ್ಲಿ ನನ್ನ ಈ ’ನಿತ್ಯ ವರ್ತಮಾನ’ವು ನನ್ನ ಅಭಿವ್ಯಕ್ತಿ ನೆಲೆಗಳಾದ ಸಾಹಿತ್ಯ, ವ್ಯಕ್ತಿ ಮತ್ತು ವಿಚಾರ ಎಂಬ ಉಪ ಶೀರ್ಷಿಕೆಗಳ ಅಡಿಯಲ್ಲಿ ಪ್ರೊ. ಮಲ್ಲೇಪುರಂ ಜೋಡಿಸಿ ಕ್ರಮಗೊಳಿಸಿದ್ದಾರೆ. ಅವರು ಪ್ರಸಾರಾಂಗದ ನಿರ್ದೇಶಕರಾಗಿ, ನಾಡಿನ ಗಣ್ಯ ವಿದ್ವಾಂಸರಲ್ಲಿ ಒಬ್ಬರಾಗಿ ನನ್ನೊಡನೆ ಸಹಕರಿಸಿದ್ದಾರೆ ಅವರಿಗೆ ನನ್ನ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಕನ್ನಡ ವಿಶ್ವವಿದ್ಯಾಲಯದ ಹಿಂದಿನ ಹಾಗೂ ಇಂದಿನ ಕುಲಪತಿಗಳಿಗೆ ಈ ಪುಸ್ತಕವನ್ನು ಅಂದವಾಗಿ ಅಕ್ಷರೀಕರಣಗೊಳಿಸಿದ ಉದಯ ಗ್ರಾಫಿಕ್ಸ್‌ನ ಶ್ರೀಮತಿ ಎಂ.ಡಿ. ಶೈಲಜಾ, ಸಹಕರಿಸಿದ ಕುಮಾರ ಅವಿನಾಶ ನಡಹಳ್ಳಿ, ಅಚ್ಚುಕಟ್ಟಾಗಿ ಮುದ್ರಿಸಿಕೊಟ್ಟ ಸತ್ಯಶ್ರೀ ಪ್ರಿಂಟರ್ಸ್ ಅವರಿಗೆ ನಾನು ಕೃತಜ್ಞನಾಗಿದ್ದೇನೆ.

ಚಂದ್ರಶೇಖರ ಪಾಟೀಲ

ಏಪ್ರಿಲ್ ೧೪, ೨೦೦೮, ಬೆಂಗಳೂರು.