ಪ್ರತಿಯೊಬ್ಬ ಕವಿಗೆ, ಕಲಾವಿದನಿಗೆ ತನ್ನನ್ನು ಇತರರೊಂದಿಗೆ ಹಂಚಿಕೊಳ್ಳಬೇಕೆಂಬ ಹಂಬಲ ಇದ್ದೇ ಇರುತ್ತದೆ. ಸೃಜನಶೀಲತೆ ಅತ್ಯಂತ ಪ್ರಖರವಾಗಿದ್ದಾಗ, ಮೈಯೊಳಗಿನ ಎಣ್ಣೆ ಮುಖದಲ್ಲಿ, ಬಣ್ಣದಲ್ಲಿ, ಗೆರೆಯಲ್ಲಿ ಜಿನುಜಿನುಗಿ ಮಿರಿಮಿರಿ ಮಿಂಚುವಾಗ, ಇವನಿಗೆ ತನ್ನ ಬಗ್ಗೆ, ತನ್ನ ಪ್ರತಿಭೆಯ ಬಗ್ಗೆ ಸಾರ್ಥಕತೆಯ ಭಾವ ಮೂಡಲು, ತಾನೋದುವ ಸಾಲುಸಾಲಿಗೆ ಬೀಳುವ ಚಪ್ಪಾಳೆಗಳ ಸಪ್ಪಳವೇ ಸಾಕು; ತನ್ನ ಕೃತಿಯನ್ನು ಬಟ್ಟಲುಗಣ್ಣಿನಿಂದ ನೋಡುವ ಮುಖದ ಮೇಲಿನ ಬೆರಗೇ ಸಾಕು. ತನ್ನ ದನಿ ಗುಡ್ಡಗುಡ್ಡಕ್ಕೆ ಢಿಕ್ಕಿ ಹೊಡೆದು ತನಗೇ ಮರಳಿ ಬಂದಾಗ ಆ ಗುಡ್ಡಗಳೆಲ್ಲ ತನ್ನ ತೆಕ್ಕೆಯಲ್ಲಿ ಬಿದ್ದಂಥ ಧನ್ಯತಾಭಾವ ಅವನಿಗೆ.

ಆದರೆ ಬಹುತೇಕ ಬರಹಗಾರರಲ್ಲಿ ಸೃಜನಶೀಲತೆಯ ಕಾವು ಒಂದೇ ಪ್ರಮಾಣದಲ್ಲಿ ಉಳಿಯುವುದಿಲ್ಲ. ಇದಕ್ಕೆ ಅನೇಕ ಕಾರಣ. ಕೆಲವರು ತಮ್ಮ ಬದುಕಿನ ಕಿಟಕಿ ಬಾಗಿಲುಗಳನ್ನು ಭದ್ರವಾಗಿ ಮುಚ್ಚಿಕೊಂಡು ತಾವಾಗಿಯೇ ಉಸಿರುಗಟ್ಟಿ ಸಾಯತೊಡಗುತ್ತಾರೆ. ಇನ್ನು ಹಲವರು ಎಣ್ಣೆ ಹೆಚ್ಚಾಗಿ, ಹಂಗಾಮು ಇದ್ದಾಗ ಎಲ್ಲ ನಿಂಗಮ್ಮಗಳನ್ನೂ ಬಸಿರು ಮಾಡಲು ಪ್ರಯತ್ನಿಸಿ, ಹಂಗಾಮು ಮುಗಿದ ನಂತರ ಜೋಳಿಗೆಯಾಗಿ ಜೋತು ಬೀಳುತ್ತಾರೆ.

ಕಾರಣ ಏನೇ ಇರಲಿ, ಸ್ನಾಯುಗಳು ಸಡಿಲವಾದಂತೆಲ್ಲ, ನಿಂತ ನೆಲ ಕಾಲ ಕೆಳಗಿನಿಂದ ಸರಿಯುವಂತೆ ಅನಿಸಿ, ತಾವು ‘ಭೂತ’ಗಳಾಗುತ್ತಿದ್ದೇವೆಂಬ ಹೆದರಿಕೆಯಿಂದ ‘ವರ್ತಮಾನ’ಕ್ಕೆ ಜೋತು ಬೀಳಲು, ಇಂಥ ಕ್ರಿಯಾಶೂನ್ಯ ಚೇತನಗಳು ಅನೇಕ ತಂತ್ರ ಬಳಸುತ್ತವೆ. ಅಂಥ ತಂತ್ರಗಳಲ್ಲಿ ಒಂದು: ಪ್ರಶಸ್ತಿಗಳಿಗಾಗಿ ಪರದಾಡುವುದು.

*

ನಮ್ಮ ನವೋದಯ ಸಾಹಿತ್ಯದ ಹಳೆಯ ತಲೆಗಳಿಗೆ ಇದ್ದ ಬಹುಮುಖ್ಯ ಹಳವಂಡ: ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷಗಿರಿ. ಆ ಕಾಲಕ್ಕೆ ಜನಮನ್ನಣೆಯ, ರಾಜ ಮನ್ನಣೆಯ, ಅಭಿವ್ಯಕ್ತಿಯ ಒಂದೇ ಒಂದು ಗೌರವ ಅದಾಗಿದ್ದರಿಂದ. ಸಾಯುವುದರೊಳಗೆ ಒಮ್ಮೆ ಅಧ್ಯಕ್ಷನಾಗಬೇಕು ಎಂಬ ಹಂಬಲದಲ್ಲಿ ಆ ಪೀಳಿಗೆಯ ಸಾಹಿತಿಗಳು ಆ ಕಾಲಘಟ್ಟಕ್ಕೆ ತಕ್ಕಂತೆ ರಾಜಕೀಯ ಮಾಡುತ್ತಿದ್ದರು. ಕೆಲವರು ಆ ಪದವಿಗಾಗಿಯೇ ಕೊನೆಯ ಉಸಿರನ್ನು ಗಂಟಲಲ್ಲಿ ಅದುಮಿಟ್ಟುಕೊಂಡಿದ್ದೂ ಉಂಟು. ಹಲವರು ಆಶೆ ಈಡೇರದೆ ಈಗಲೂ ಸಾಹಿತ್ಯ ಪರಿಷತ್ತಿನ ಕಟ್ಟಡದ ಸುತ್ತಲೂ ಭೂತಗಳಾಗಿ ಪ್ರದಕ್ಷಿಣೆ ಹಾಕುತ್ತಿರಲೂಬಹುದು.

ಅನಂತರದಲ್ಲಿ ಅನೇಕ ಪ್ರಶಸ್ತಿಗಳು ಹುಟ್ಟಿಕೊಂಡಿದ್ದರಿಂದ ಸಾಹಿತಿಗಳ ಕಾಯಕದಲ್ಲೂ ವೈವಿದ್ಯ ಬರತೊಡಗಿತು. ಸ್ವಂತ ಊರಿನವರೋ, ಜಾತಿಯವರೋ ಸಮಾರಂಭ ಮಾಡಿ ‘ಕವಿ ಚಕ್ರವರ್ತಿ’, ‘ಸಾಹಿತ್ಯ ಸಾಮ್ರಾಟ’, ‘ಕಲಾ ಸಾರ್ವಭೌಮ’ ಇತ್ಯಾದಿ ಸಣ್ಣಸಣ್ಣ ಪದವಿಗಳ ಹಂತದ ನಂತರ, ರಾಜ್ಯ ಅಕಾಡೆಮಿ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ, ಕಬೀರ ಸಮ್ಮಾನ, ನೊಬೆಲ್ ಪ್ರಶಸ್ತಿ-ಹೀಗೆ ಪ್ರಶಸ್ತಿಗಳ ನಕಾಶವೇ ಆಕಾಶದುದ್ದಕ್ಕೂ ತೆರೆದುಕೊಂಡಿದೆ. (ಇವಲ್ಲದೇ ಅನೇಕ ‘ಪ್ರತಿಷ್ಠಾನ’ಗಳೂ ಬಹುಮಾನ ನೀಡುವುದುಂಟು. ಕೇಂದ್ರದ ಪದ್ಮಶ್ರೀ, ಪದ್ಮಭೂಷಣ, ವಿಭೂಷಣ ಮುಂತಾದ ಪದ್ಮಪರಂಪರೆಯೂ ಇದೆ.)

ಯಾವ ಮಟ್ಟದ ಪ್ರಶಸ್ತಿಯೇ ಬರಲಿ, ಒಂದು ಮಾತ್ರ ಆಗುತ್ತದೆ: ಆ ಸಾಹಿತಿ ಹಾಗೂ ಅವನ ಕೃತಿ ಜನರ ಬಾಯಲ್ಲಿ ಚಲಾವಣೆಗೆ ಬರುವುದು. ಪತ್ರಿಕೆಗಳಲ್ಲಿ, ರೇಡಿಯೋದಲ್ಲಿ, ದೂರದರ್ಶನದಲ್ಲಿ ಸುದ್ದಿ, ಪರಿಚಯ, ಸಂದರ್ಶನ ಬರುತ್ತವೆ. ಸಂಪಾದಕರು ಸಂಪಾದಕೀಯ ಬರೆಯುತ್ತಾರೆ. ಕೆಲವರು ಅಭಿನಂದನ – ಕವನ ಬರೆಯುತ್ತಾರೆ. ಎಲ್ಲ ಕಡೆ ಸತ್ಕಾರ ಸಮಾರಂಭ. ಮಾನಪತ್ರ, ಮಾಲಾರ್ಪಣೆ, ಶಾಲಾರ್ಪಣೆ ನಡೆಯುತ್ತವೆ. ಮನೆಯಲ್ಲಿ ಕೆಲದಿನ ತಾಜಾತಾಜಾ ಹಣ್ಣು – ಹಂಪಲುಗಳ ಸಮೃದ್ಧಿ. ಶಾಲುಗಳಿಗಾಗಿ ದೊಡ್ಡವರು – ಸಣ್ಣವರೆನ್ನದೆ ಬಡಿದಾಟ ….. ಪ್ರಶಸ್ತಿ ಪಡೆದ ಸಾಹಿತಿ ಸ್ವಲ್ಪ ದಿನ ತೇಲುಗಣ್ಣಿನ ಅಮಲಿನಲ್ಲಿಯೇ ಉಳಿದು ಅಮಲು ಇಳಿದ ನಂತರ ಮುಂದಿನ ಗ್ರೇಡಿನ ಪ್ರಶಸ್ತಿಗಾಗಿ ಗುಣಾಕಾರ – ಭಾಗಾಕಾರ ಸುರು.

ಈ ಪ್ರಶಸ್ತಿ – ಪ್ರಸಂಗಗಳೆಲ್ಲ ಬಹಳ ಮೋಜಿನವಿರುತ್ತವೆ. ಅದೊಂದು ಸೂತ್ರ ಬದ್ಧವಾದ ಪ್ರತಿಕ್ರಿಯೆಗಳನ್ನೊಳಗೊಂಡ ಕರ್ಮಕಾಂಡ. ಸುದ್ದಿ ಬಯಲಿಗೆ ಬಿದ್ದೊಡನೆ, ಸಾಮಾನ್ಯವಾಗಿ ಸುದ್ದಿಗಾರರು ಕೇಳುವ ಮೊದಲ ಪ್ರಶ್ನೆಗಳು: ‘ಈ ಪ್ರಶಸ್ತಿಯನ್ನು ನೀವು ನಿರೀಕ್ಷಿಸಿದ್ದಿರಾ? ಇದರಿಂದ ನಿಮಗೆ ಆನಂದವಾಗಿದೆಯೇ?’ ಇತ್ಯಾದಿ. ‘ಆನಂದವಾಗಿದೆ’ – ಎಂಬ ಪ್ರಾಮಾಣಿಕ ಉತ್ತರದ ಬೆನ್ನಿಗೇ ಇನ್ನೊಂದು ಉತ್ತರ ಬರುತ್ತದೆ. ‘ಈ ಪ್ರಶಸ್ತಿಯನ್ನು ನಾನು ಕನಸು ಮನಸಿನಲ್ಲಿಯೂ ನೆನೆಸಿರಲಿಲ್ಲ ಅದಕ್ಕಾಗಿ ನಾನು ಪ್ರಯತ್ನವನ್ನೂ ಮಾಡಿರಲಿಲ್ಲ. ನನಗೆ ಸುದ್ದಿ ಗೊತ್ತಾದದ್ದೇ ನಿನ್ನೆ ರಾತ್ರಿ ಎರಡೂವರೆ ಗಂಟೆಗೆ, ಯಾರೋ ಫೋನು ಮಾಡಿ ಅಭಿನಂದನೆ ಸಲ್ಲಿಸಿದರು….’

ನಮ್ಮ ಎಂಥೆಂಥಾ ಮಹಾ ಮಹಾ ಎನ್ನುವ ಸಾಹಿತಿಗಳೂ ಸಹಜ ಉಸಿರಾಡಿಸಿದಂತೆ ಇಂಥ ಮಹಾ ಸುಳ್ಳು ಹೇಳುವುದನ್ನು ನಾವು ಕೇಳುತ್ತೇವೆ. ಆದರೆ ಕೇಳುಗರು ವಿನಯದಿಂದ ಮೌನವಾಗುತ್ತಾರೆ. ಎಲ್ಲ ಕಡೆಗೂ ರಾಜಕೀಯ ಇದೆ ಅಂತ ಎಲ್ಲರಿಗೂ ಗೊತ್ತೇ ಇರುವಾಗ ಇಂಥ ಸುಳ್ಳುಗಳೂ ರಾಜಕೀಯದ ಒಂದು ಭಾಗವೇ ಆಗಿರುತ್ತದೆ.

ಇನ್ನು ಸನ್ಮಾನ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡುವವರ ಧಾಟಿ ಇದು; ‘ಈ ಪ್ರಶಸ್ತಿ ಇವರಿಗೆ ಎಂದೋ ಬರಬೇಕಿತ್ತು. ಈಗಾಲಾದರೂ ಬಂದಿದೆ. ಇದರಿಂದ ಪ್ರಶಸ್ತಿ ನೀಡಿದವರು ತಮಗೇ ಗೌರವ ನೀಡಿಕೊಂಡಂತಾಗಿದೆ. ಈ ಸಾಹಿತಿಗಳಿಗೆ ಇನ್ನೂ ಹೆಚ್ಚಿನ ಪ್ರಶಸ್ತಿಗಳು ಸಿಗಲಿ, ಸಿಕ್ಕೇ ಸಿಗುತ್ತವೆ. ಇವರಿಗೆ ಸಿಗದೆ ಇನ್ಯಾರಿಗೆ ಸಿಗಬೇಕು?…’ ಇತ್ಯಾದಿ.

ಆದರೆ ಒಂದು ಪ್ರಶಸ್ತಿ ಲಭ್ಯವಾಗುವ ಮುನ್ನ ಯಾರ್ಯರು, ಎಲ್ಲೆಲ್ಲಿ. ಏನೇನು ‘ಕಟಿಬಿಟಿ’ ಮಾಡಿರುತ್ತಾರೆಂಬುದು ಆ ಸಾಹಿತಿಗೇ ಗೊತ್ತು. ಬಹುಶಃ ಭಾಷಣ ಮಾಡುವವರಿಗೂ ಗೊತ್ತು.

*

ಏಕೆಂದರೆ-

ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ. ಪ್ರಶಸ್ತಿಗಳು ತಾವಾಗಿಯೇ ನೀವು ನಡೆಯುವ ಹಾದಿಯಲ್ಲಿ ಬಿದ್ದಿರುವುದಿಲ್ಲ. ನೀವು ಕಟಿಬಿಟಿ ಮಾಡಲೇಬೇಕಾಗುತ್ತದೆ. ಇಂಡಿಯಾದಂಥ ದೇಶದಲ್ಲಿ ವರ್ಗಗಳಿವೆ, ಜಾತಿಗಳಿವೆ, ಪಂಗಡಗಳಿವೆ. ಜಾತಿಯಲ್ಲಿ ಒಳಜಾತಿಗಳು, ಪಂಗಡಗಳಲ್ಲಿ ಒಳ ಪಂಗಡಗಳು. ಪ್ರಶಸ್ತಿಗಳಿಗೆ ಆಯ್ಕೆ ಮಾಡುವ ಸಮಿತಿಯ ಸದಸ್ಯರು ನಮ್ಮ ನಿಮ್ಮಂತೆ ಉಪ್ಪು ಖಾರ ತಿಂದವರೇ ಇರುತ್ತಾರೆ. ಅವರನ್ನು ‘ಹಿಡಿದುಕೊಳ್ಳ’ಬೇಕು. ಅವರನ್ನು ‘ಹಿಡಿದುಕೊಳ್ಳಲು’ ಯಾರಿಗೆ ಸಾಧ್ಯವೋ ಅವರನ್ನು ಮೊದಲು ‘ಹಿಡಿದುಕೊಳ್ಳ’ಬೇಕು. ಯಾವ ದಾರ ಜಗ್ಗಿದರೆ ಯಾವ ಗಂಟೆ ಬಾರಿಸುತ್ತದೆ ಎಂಬುದನ್ನು ಅಧ್ಯಯನ ಮಾಡಿ ಅರಿತುಕೊಳ್ಳಬೇಕು. ಅದೇ ಪ್ರಶಸ್ತಿಗಾಗಿ ಬಾಯಿಬಿಡುತ್ತಿರುವ ಇತರ ಹುರಿಯಾಳುಗಳು ಏರುತ್ತಿರುವ ನಿಚ್ಚಣಿಕೆಯನ್ನು ಮೆಲ್ಲನೆ ಹಿಂದೆ ಹಿಂದೆ ಸರಿಸಬೇಕು. ಕೋರ್ಟುಗಳಲ್ಲಿ ‘ಫೇವರಬಲ್ ಬೆಂಚ್’ ಇದ್ದಾಗ ಕೇಸು ಮಂಡಿಸುವಂತೆ, ಗುರುಕೃಪೆ – ಹರಿಕೃಪೆಗಳಿಂದಾಗಿ, ಎಲ್ಲ ನಕ್ಷತ್ರಗಳೂ ಸರಿಯಾಗಿ ಕೂಡಿಬಂದ ಶುಭ ಮುಹೂರ್ತದಲ್ಲಿ ಹೊಡೆತ ಹಾಕಬೇಕು!

ಇದೊಂದು ಗಮ್ಮತ್ತಿನ ಚದುರಂಗದಾಟ, ಒಂದು ಕವನವನ್ನೋ, ನಾಟಕವನ್ನೋ ಬರೆಯುವಾಗ ಕಷ್ಟಪಡಬೇಕಾಗಿಲ್ಲ. ಆದರೆ ಪ್ರಶಸ್ತಿಗಾಗಿ ಮಾತ್ರ ಅಗಾಧ ಪರಿಶ್ರಮ ಬೇಕು. ಶ್ರಮ ಏವ ಜಯತೆ!

ಒಮ್ಮೊಮ್ಮೆ ಪರಿಶ್ರಮ ವ್ಯರ್ಥವೆನಿಸಿದರೂ ವ್ಯರ್ಥವಾಗವುದಿಲ್ಲ. ಬಯಿಸಿದ ಪ್ರಶಸ್ತಿ ಸಿಗದಿದ್ದರೂ, ಅದರ ನಂತರದ್ದಾದರೂ ಸಿಕ್ಕೇ ಸಿಗುವ ಚಾನ್ಸುಗಳು ಇರುತ್ತವೆ. ಥೇಟ್ ರಾಜಕಾರಣಿಯಾದ ನಮ್ಮ ‘ಜಹಂಪನಾ’ ಅವರು ಕೆಲಕಾಲದ ಹಿಂದೆ ತುಂಬ ಚಾಕಚಕ್ಯತೆಯಿಂದ (ನಿಜವೋ ಸುಳ್ಳೋ) ಕವಿ ಗೋಪಾಲಕೃಷ್ಣ ಅಡಿಗರ ಬಗ್ಗೆ ಒಂದು ಬಾಂಬು ಸ್ಟೋಟ ಮಾಡಿ ಅವರ ಅಗ್ರಹಾರದ ಬುನಾದಿಯನ್ನೇ ಸಡಿಲು ಮಾಡಿದ್ದರು. ಪತ್ರಿಕೆಗಳಲ್ಲಿ ವರದಿಯಾಗಿರುವಂತೆ, ಕರೋಡಪತಿ ಜೈನ್ ಮನೆತನ ಪ್ರತಿಷ್ಠಾಪಿಸಿದ ‘ಜ್ಞಾನಪೀಠ ಪ್ರಶಸ್ತಿ’ಯನ್ನು ಕೊಡಿಸಲು ಅಡಿಗರು ಜಾತಿಯಿಂದ ಜೈನರಾದ ಹಂಪನಾ ಅವರನ್ನು ಕೇಳಿದರಂತೆ. (ಅದು ಅವರಿಬ್ಬರೂ ಗಳಸ್ಯ ಕಂಠಸ್ಯ ಆಗಿದ್ದಾಗ.) ಹಂಪನಾ ಅವರು, ” ಪ್ರಶಸ್ತಿ ಕೊಡಿಸುವ ತಾಕತ್ತು ಎನಗಿಲ್ಲ. ನಾನೇನು ಮಾಡಲಿ ಬಡವನಯ್ಯಾ?” ಎಂದು ಕೈಚೆಲ್ಲಿದರಂತೆ!

ಜ್ಞಾನವೃದ್ದರಿಗೆ, ವಯೋವೃದ್ದರಿಗೆ ಮಾತ್ರ ಮೀಸಲಾದಂತಿರುವ ‘ಜ್ಞಾನಪೀಠ ಪ್ರಶಸ್ತಿ’ ಗೆ ಇನ್ನೂ ‘ಚಿಕ್ಕವ’ ರಾಗಿರುವ ಅಡಿಗರು ಕಣ್ಣು ಹಾಕಿದ್ದರೂ, ಅದರ ನಂತರದ ‘ಕಬೀರ್‌ ಸಮ್ಮಾನ್’ ಆದರೂ ಅವರಿಗೆ ದೊರಕಿತು. ಅದೂ ಕೂಡ, ಆಯ್ಕೆ ಸಮಿತಿಯಲ್ಲಿ ಕನ್ನಡದ ಪರವಾಗಿ ಡಾ. ಅನಂತಮೂರ್ತಿ ಇದ್ದುದರಿಂದ ಸಾಧ್ಯವಾಗಿರಬೇಕು ಎಂದು ಅನುಮಾನಪಡಲು ಸಾಧ್ಯವಿದೆ. (ರಾಜಧಾನಿಯ ರಾಜಕೀಯಕ್ಕೆ ಹತ್ತಿರದ ವ್ಯಕ್ತಿಯಾದ, ನನ್ನ ಆತ್ಮೀಯ ಸ್ನೇಹಿತ ಶೂದ್ರ ಶ್ರೀನಿವಾಸರು ಇತ್ತೀಚಿಗೆ ಬೆಳಗಾವಿಯಲ್ಲಿ ಅಕಾಡೆಮಿಯ ಕಾರ್ಯಕ್ರಮದ ಸಂದರ್ಭದಲ್ಲಿ, ಮಾತು ಮಾತಿನಲ್ಲಿ, ಈ ಮಾತು ಹೇಳಿದರು.) ಈ ‘ಸಮ್ಮಾನ್’ ದ ಸುದ್ದಿ ಪ್ರಕಟವಾದಾಗ ನನಗೆ ಬಹಳ ಆಶ್ಚರ್ಯವಾಗಿತ್ತು. ಕಾರಣ: ಎಲ್ಲಿಯ ಕಬೀರ, ಎಲ್ಲಿಯ ಅಡಿಗ? ಅನೇಕ ಶತಮಾನಗಳ ಹಿಂದೆಯೇ ಜಾತಿ ಅಸಮಾನತೆಯ ವಿರುದ್ದ ಹೋರಾಡಿದ ಸಂತ ಕವಿ ಕಬೀರ. ಇಪ್ಪತ್ತೊಂದನೇ ಶತಮಾನದ ಮುಂಬೆಳಕಿನಲ್ಲೂ ‘ನಾನು ಹಿಂದೂ ನಾನು ಬ್ರಾಹ್ಮಣ’ ಎಂದು ಸಾರಿ ಹೇಳುವ ಚಡ್ಡಿಕವಿ ಗೋಪಾಲಕೃಷ್ಣ ಅಡಿಗ. ‘ಕಬೀರ’ ಹೆಸರಿನ ಪ್ರಶಸ್ತಿ ‘ಅಡಿಗ’ರಿಗೆ ದೊರೆತದ್ದು ಇತಿಹಾಸದ ಕ್ರೂರ ವ್ಯಂಗ್ಯವಲ್ಲವೇ? ಈ ಬಗ್ಗೆ ಬೆಂಗಳೂರಿನ ಪ್ರಮುಖ ದೈನಿಕವೊಂದಕ್ಕೆ ನಾನು ಬರೆದು ಕಳಿಸಿದ್ದು ಪ್ರಕಟವಾಗಲೇ ಇಲ್ಲ. ವೇದಘೋಷಗಳ ಅಬ್ಬರದಲ್ಲಿ ಯಾರಿಗೆ ಬೇಕ್ರೀ ಅಪಸ್ವರ?

ಹೋದ ವರ್ಷ ಧಾರವಾಡದ ಹಿರಿಯರೊಬ್ಬರಿಗೆ – ಅಂದರೆ ವಯೋವೃದ್ಧರಿಗೆ – ‘ಪದ್ಮಶ್ರೀ’ ಪ್ರಶಸ್ತಿ ಬಂತು. ಆದರೂ ಸಂಭ್ರಮವನ್ನು ಕಣ್ಣಾರೆ ಕಾಣುವ ಸೌಭಾಗ್ಯ ನನ್ನದಾಗಿತ್ತು. ಕನ್ನಡದ ಮೊದಲ ತಲೆಮಾರಿನ ಅಧುನಿಕ ನಾಟಕಕಾರರಲ್ಲಿ ಒಬ್ಬರಿವರು – ಜೆ. ಬಿ. ಜೋಶಿ (‘ಜಡಭರತ’ ಅವರ ಕಾವ್ಯನಾಮ.) ಅವರ ‘ಕದಡಿದ ನೀರು’ ಎಂಬ ನಾಟಕ. ವಿಮರ್ಶಕರು ಅಪ್ಪಿತಪ್ಪಿ ಕೂಡ ಹೆಸರಿಸದ ಇಂಗ್ಲೀಷ್ ನಾಟಕವೊಂದರ ‘ಕೃತಿ ಚೌರ್ಯವಾಗಿದೆ ಇದು ಎಂಬ ಆಪಾದನೆ. ಈ ಆಪಾದನೆಯನ್ನು ಒರೆಗೆ ಹಚ್ಚಿ, ಸತ್ಯೆ ಪರೀಕ್ಷೆ ಮಾಡುವ ಕೆಲಸ ನಮ್ಮ ವಿಮರ್ಶಕರು ಯಾರು ಮಾಡಿಲ್ಲ. ಬದಲಾಗಿ, ಈ ನಾಟಕವೇ ಕನ್ನಡದ ಮಹತ್ವದ ನಾಟಕಗಳಲ್ಲಿ ಒಂದಾಗಿದೆ ಎಂದು ವಿಮರ್ಶಕ – ಗೆಳೆಯರೊಬ್ಬರು ಹೇಳಿದಾಗ ನನಗೆ ಆಶ್ಚರ್ಯವೇನೂ ಆಗಲಿಲ್ಲ.

ಜಿ. ಬಿ. ಯವರು ಧಾರವಾಡದ ಸುಭಾಸ ರೋಡಿನ ‘ಅಟ್ಟ’ದ ಕೇಂದ್ರ ವ್ಯಕ್ತಿ. ಈ ಅಟ್ಟದ ‘ಮ್ಯಾಳ’ ಕನ್ನಡ ಸಾಹಿತ್ಯ ವಲಯಕ್ಕೆಲ್ಲ ಸುಪರಿಚಿತ. ಈ ‘ಮ್ಯಾಳ’ದ ಅತ್ಯಂತ ಜ್ಯೂನಿಯರ್ ಮೆಂಬರಾದ ಕಾರ್ನಾಡರಿಗೆ ‘ಪದ್ಮಶ್ರಿ’ ಬಂದದ್ದು ಹಳೇ ಜನ್ಮದ ಮಾತಾಗಿದೆ. ಈಗ ‘ಸೀನಿಯರ್’ ಮೆಂಬರಿಗೂ ಬಂದಂತಾಗಿದೆ. ನಡುವಿನವರಾದ ಕೀರ್ತಿನಾಥ ಕುರ್ತಕೋಟಿ ಅವರಿಗೂ ಇವತ್ತಲ್ಲ ನಾಳೇ ಬರುವುದನ್ನು ಕನ್ನಡ ಕವಿಕುಲ ಕಾತುರದಿಂದ ಕಾಯುತ್ತಿದೆ. ಇರಲಿ.

ಪದ್ಮಶ್ರೀ ಬಂದ ಮೇಲೆ ಜಿ.ಬಿ ಅವರಿಗೆ ಬಿಡುವೇ ಇರಲಿಲ್ಲ ಆಥವಾ ‘ಬಿಡುವೇ ಇಲ್ಲ’ ಎಂಬ ವಾತಾವರಣ ಅವರು ನಿರ್ಮಿಸಿದ್ದರು. ದೂರದ ಊರುಗಳಿಗೆ ಸತ್ಕಾರ ಮಾಡಿಸಿಕೊಳ್ಳಲು ಹೋಗಿ ಬರುವ ಸಲುವಾಗಿ ಒಂದು ಕಾಯಂ ಟ್ಯಾಕ್ಸಿಯನ್ನೇ ಗೊತ್ತು ಮಾಡಿದ್ದರು. ಮಿನಿಸ್ಟರುಗಳ ‘ಟಿ. ಪಿ.’ (ಟೂರ್ ಪ್ರೋಗ್ರಾಂ) ಹಾಗೆಯೇ ಇವರದೂ ಖಚಿತ ಕಾರ್ಯಕ್ರಮ. ಇವರ ಅಂಗರಕ್ಷಕರಾದ ಇವರ ಪುತ್ರ ರಾಮ ಜೋಶಿಯವರಂತೂ ಪ್ರಶಸ್ತಿ – ಗಿಶಸ್ತಿಗಳ ಬಗ್ಗೆ ಒಂದು ಕಂಪ್ಯೂಟರ್ ಕೆಲಸ ಮಾಡಿದಂತೆ ಮಾಡುತ್ತಾರೆ. ಯಾರಿಗೆ ಯಾವ ಪ್ರಶಸ್ತಿ ಯಾವಾಗ ಬಂತು: ಪ್ರಶಸ್ತಿಗಳ ಆಗಿನ ರೇಟು, ಈಗಿನ ರೇಟು: ಒಂದು ಪ್ರಶಸ್ತಿಯಿಂದ ಇನ್ನೊಂದು ಪ್ರಶಸ್ತಿಗೆ ಬಡತಿ ಸಿಗುವುದೇ: ಅಂಥ ಉದಾಹರಣೆಗಳು ಇವೆಯೇ; ಕೊಟ್ಟ ಮೆಡಲುಗಳಲ್ಲಿ ಬಂಗಾರದ ಪರಸೆಂಟೇಜು ಎಷ್ಟು: ಅದನ್ನು ಹಾಗೇ ಇಟ್ಟರೆ ಲಾಭವೋ, ಕರಿಗಿಸಿ ಮಾರಾಟ ಮಾಡಿದರೆ ಲಾಭವೋ … ಒಂದೇ ಎರಡೇ? ಇಂಥ ಸಾವಿರಾರು ಚಿಲ್ಲರೆ ವಿಷಯಗಳ ಬಗ್ಗೆ ಚಟ್ ಚಟ್ ಮಾತಾಡುತ್ತಾರೆ ಅವರು. ಎಂಥ ಬಣಜಿಗರನ್ನೂ ನಾಚಿಸುವ ಇವರ ಮುಖದ ಹಾವ ಭಾವ ನೋಡುವುದೇ ನೇತ್ರಾನಂದ, ಮಾತು ಕೇಳುವುದೇ ಕರ್ಣಾನಂದ!

ಇಂಥ ಜಿ.ಬಿ.ಯವರ ಒಂದು ವೈಶಿಷ್ಟ್ಯವೆಂದರೆ – ಅವರು ಯಾವ ಸಮಾರಂಭದಲ್ಲೂ ಮಾತಾಡುವುದೇ ಇಲ್ಲ! ಎದ್ದು ನಿಂತರೆ ಅವರ ಕೈ, ಮೈ ಗಡಗಡ ನಡಗುತ್ತವೆಯಂತೆ. ಮಾತಿಗಿಂತ ಮೌನವೇ ಅವರಿಗೆ ಪ್ರಿಯ. ತಮ್ಮ ಎಲ್ಲ ಕಾಯಕಗಳನ್ನೂ ಇಷ್ಟು ವರ್ಷ ಅವರು ಮೌನದಿಂದಲೇ ಮಾಡಿಕೊಂಡು ಬಂದಿದ್ದಾರೆ.

ಸತ್ಕಾರ ಸಮಾರಂಭ ಮಾಡಲು ಬಂದವರಿಗೆ ಅವರು ಈ ಬಗ್ಗೆ ‘ಕರಾರು’ ಹಾಕುತ್ತಾರೆ. ಆದರೆ ಇಂಥ ಕರಾರು ಒಮ್ಮೊಮ್ಮೆ ಎಷ್ಟು ಕ್ರೂರ. ಅಮಾನವೀಯ ಆಗಬಹುದು ಎಂಬುದನ್ನು ನಾನು ಕಂಡಿದ್ದೇನೆ. ಬೆಳಗಾವಿ ಕಾಲೇಜೊಂದರಲ್ಲಿ ನಡೆದ ಕಾರ್ಯಕ್ರಮಕ್ಕೆ ಅತಿಥಿಯಾಗಿ ನಾನು ಹೋಗಿದ್ದೆ. ಅದೇ ಕಾಲಕ್ಕೆ ಜಿ.ಬಿ. ಅವರ ಸತ್ಕಾರವೂ ಇತ್ತು. ಕಾಲೇಜಿನ ಪ್ರಿನ್ಸಿಪಾಲರಾದಿಯಾಗಿ ಎಲ್ಲರೂ ತುಂಬ ಸಂಭ್ರಮ, ಆತ್ಮೀಯತೆಯಿಂದ ಬರಮಾಡಿಕೊಂಡರು. ಆಮಂತ್ರಣ ಪತ್ರಿಕೆಯಲ್ಲಿ ‘ಜಡಭರತ’ ಬದಲಾಗಿ ‘ಬಡಭರತ’ ಎಂದು ಆಕಸ್ಮಾತ್ತಾಗಿ ಆದ ತಪ್ಪೊಂದನ್ನು ಬಿಟ್ಟರೆ. ಉಳಿದೆಲ್ಲ ಚೊಕ್ಕಟವಾಗಿತ್ತು. ಮಾಲೆ, ಶಾಲು, ಫಲ – ಪುಷ್ಪ ಸಮರ್ಪಣೆ ಆದ ಮೇಲೆ ಸಭಾಧ್ಯಕ್ಷರು ಜಿ. ಬಿ. ಯವರನ್ನು ‘ನಾಲ್ಕು ಮಾತು’ ಹೇಳಲು ಕೇಳಿಕೊಂಡರು.

ಹರಟೆಗೆ ಕುಂತಾಗ ಲಕ್ಷಗಟ್ಟಲೆ ಮಾತು ಉದುರಿಸುವ ಹಿರಿಯರಿಗೆ ‘ನಾಲ್ಕು ಮಾತು’ ಹೇಳಲು ಏನು ತೊಂದರೆ? ಜಿ. ಬಿ. ಅವರು ನಾಲ್ಕು ಆಡಿದರೇನೋ ನಿಜ. ಆದರೆ ಎಂಥ ಮಾತು!

‘ನಾನು ಭಾಷಣ ಮಾಡೋದಿಲ್ಲ ಅಂತ ನನ್ನನ್ನು ಕರಿಯಲ್ಲಿಕ್ಕೆ ಬಂದವರ ಮೂಲಕ ಮೆಸೇಜ್ ಕಳಿಸಿದ್ದೆ. ಆ ಮೆಸೇಜ್ ಮುಟ್ಟಬೇಕಾದವರಿಗೆ ಮುಟ್ಟಿಲ್ಲ ಅಂತ ಕಾಣಸ್ತದ. ಮುಟ್ಟಿದ್ದರ ಹಿಂಗ ಆಗ್ತಿದ್ದಿಲ್ಲ. ನನಗ ಮಾತಾಡಾಕ ಬರೋದಿಲ್ಲ. ನಾನು ಮಾತಾಡೋದಿಲ್ಲ.’ – ಎಂದು ಕರ್ಕಶ ದನಿಯಲ್ಲಿ ಹೇಳಿದವರೇ ಕುಳಿತುಬಿಟ್ಟರು. ಪ್ರೀತಿ, ಅಭಿಮಾನದಿಂದ ಕರೆಸಿದವರೆಲ್ಲ ತಮ್ಮನ್ನು ತಾವೇ ಚಪ್ಪಲಿಯಿಂದ ಹೊಡೆದುಕೊಳ್ಳುವಂತಾಗಿತ್ತು ‘Thanks ‘ – ಎಂಬ ಒಂದು ಶಬ್ದವೂ ಈ ಮುದುಕನ ಬಾಯಿಂದ ಬರಲಿಲ್ಲವಲ್ಲ – ಎಂದು ನನ್ನಂಥ ನಾನೂ ಶಾಂತಂ ಪಾಪಂ ಎಂದು ಕಿವಿ ಮುಚ್ಚಿಕೊಳ್ಳುವಂತಾಯಿತು.

ಸತ್ಯ ಎಂಬುದು ಸ್ಟೋಟಗೊಳ್ಳಲು ಮಹಾ ಮಹಾ ಘಟನೆಗಳೇ ಬೇಕಾಗಿಲ್ಲ ಇಂಥ ಸಣ್ಣ ಸಣ್ಣ. ಕ್ಷುಲ್ಲಕ ಅನ್ನಬಹುದಾದ ಪ್ರಸಂಗಗಳೂ ಸಾಕು – ಎಂಬ ಸತ್ಯವನ್ನು ನಾನು ಕಂಡುಕೊಂಡೆ.

ಇದೇ ಹಿರಿಯರ ಇನ್ನೊಂದು ಮೂಖವೂ ಇದೆ. ಅದು ಅವರ ವಿನೋದ ಪ್ರವೃತ್ತಿ. ಪ್ರಶಸ್ತಿ ಸಿಕ್ಕ ಹೊಸದರಲ್ಲಿ ಅವರನ್ನೊಮ್ಮೆ ಕಂಡಾಗ, ‘ಈಗ ನಾವು ಬದ್ಮಾಶ್ರೀ, ನಾವು ಬದ್ಮಾಶ್ರೀ’ ಎಂದು ಲಯಬದ್ದವಾಗಿ ಹಾಡುತ್ತ ಹೇಳಿದರು. ಕನ್ನಡದ ‘ಅದಬಾದೇಶ ಸಂಧಿ’ಯ ಪ್ರಕಾರ ಅವರ ಪದ್ಮಶ್ರೀ ‘ಪ’ ಕಾರಕ್ಕೆ ‘ಬ’ ಕಾರದೇಶವಾಗಿ, ಅದು ‘ಬದ್ಮಾಶ್ರೀ’ ಆಗಿತ್ತು.

ಅದು ಅವರ ವಿನೋದ ಪ್ರವೃತ್ತಿಯೋ ಅಥವಾ ಮುಪ್ಪಿನಲ್ಲಿ ಒದಗಿದ ಆತ್ಮಜ್ಞಾನವೋ ಎಂಬ ಅನುಮಾನ ನನಗೆ ಇನ್ನೂ ಇದೆ.

*

ನಮ್ಮ ಬದುಕಿನ ವಾಸ್ತವಗಳೊಂದಿಗೆ, ರಾಜಕೀಯದ ಸುತ್ತುಗಳೊಂದಿಗೆ ತಳಕು ಹಾಕಿಕೊಂಡಿರುವ ಪ್ರಶಸ್ತಿಗಳು ಯಾವಾಗಲೂ ಸತ್ಪಾತ್ರರಿಗೇ ದಕ್ಕುತ್ತವೆ ಎಂಬ ನಿಯಮವಿಲ್ಲ. ಇಂಥ ತಪ್ಪುಗಳನ್ನು ನಮ್ಮ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರು ಕಳೆದ ಸಲ ‘ರಾಜ್ಯೋತ್ಸವ ಪ್ರಶಸ್ತಿ’ ಸಮಾರಂಭದಲ್ಲಿ ರಿಪೇರಿ ಮಾಡಿದರೆಂದು ಹೇಳಲಾಗುತ್ತದೆ. ಸುಮಾರು ಐವತ್ತಕ್ಕಿಂತಲೂ ಹೆಚ್ಚು ಜನರಿಗೆ ಆ ಸಲ ಪ್ರಶಸ್ತಿ ಬಂತು. ಅದರಲ್ಲಿ ಮೂವತ್ತಕ್ಕಿಂತ ಹೆಚ್ಚು ಜನ ಬ್ರಾಹ್ಮಣರೇ – ಅಂದರೆ ಹೇಗಡೆ ಬಾಂಧವರೆ – ಇದ್ದಾರೆಂಬ ಟೀಕೆಯೂ ಬಂತು. ‘ಅದರಲ್ಲೇನು ತಪ್ಪು? ಶ್ರೇಷ್ಠತೆಗೂ ಜಾತಿಗೂ ಯಾಕೆ ನಂಟು?’ ಎಂದು. ಮೊದಲಿಂದಲೂ ಒಂದಲ್ಲ ಒಂದು ರೀತಿಯ ‘ರಾಮಶ್ರಯ’ ದಲ್ಲಿ ಬದುಕಿ ಬಂದಿರುವ ಬೆಂಗಳೂರಿನ ಒನ್ – ಬೈ -ಸೆವೆನ್ ಸಂಪಾದಕರೊಬ್ಬರು ರಾಮಕೃಷ್ಣ ಹೆಗಡೆ ಅವರ ಪರವಾಗಿ ವಾದಿಸಿದ್ದೂ ಆಯಿತು.

ಮಜಾ ಅಂದರೆ, ಆ ನವಂಬರ್ ಒಂದರ ಉದ್ದಾಮ ಸಾಹಿತಿಗಳ, ಅಜಾನುಬಾಹು ವ್ಯಕ್ತಿತ್ವದ, ಜ್ಞಾನವೃದ್ದ + ವಯೋವೃದ್ದ ದಿಗ್ಗಜಗಳ ಹಿಂಡಿನಲ್ಲಿ ನಮ್ಮ ದಲಿತ ಕವಿ ಸಿದ್ಧಲಿಂಗಯ್ಯನವರೂ ಇದ್ದರಂತೆ! ಅಷ್ಟೆಲ್ಲ ‘ಉಚ್ಚ’ ರ ನಡುವೆ, ದಿಟ್ಟಿಯ ಬೊಟ್ಟಾಗಿ ಬಳಸಲ್ಪಟ್ಟು. ಹೆಗಡೆಯವರ ‘ದಲಿತ ವಾತ್ಸಲ್ಯ’ದ ಗೋಡೆ – ಬರಹದಂತೆ ಈ ನಮ್ಮ ಪುಟ್ಟಕವಿ ಹೇಗೆ ಕುಂತಿರಬಹುದು – ಎಂದು ನೆನೆಸಿಕೊಳ್ಳುವುದೇ ಒಂದು ಅನುಭವ ನನಗೆ. ಹಾಸ್ಯಪ್ರಿಯ ಸಿದ್ಧಲಿಂಗಯ್ಯ ಇದೆನ್ನೆಲ್ಲ ತುಂಬ ‘ಎಂಜಾಯ್’ ಮಾಡಿರಬೇಕು ಅನಿಸುತ್ತದೆ. ಇಷ್ಟು ಮಾತ್ರ ನಿಜ. ಆ ನವಂಬರ ಒಂದರ ನಂತರ, ಇನ್ನೂ ಹುಡುಗು – ಕಳೆಯ ಗಿಡ್ಡ ತಳಿಯ ನಮ್ಮ ಕವಿ ಯಜಮಾನರ ಹಾಗೆ ಭಾರವಾದ ಹೆಜ್ಜೆಯನ್ನಿಡುತ್ತ ಅಡ್ಡಾಡುವುದನ್ನು ರೂಢಿ ಮಾಡಿಕೊಳ್ಳುತ್ತಿದ್ದಾರೆ. ಇದು ನಾನು ಕಣ್ಣಾರೆ ಕಂಡದ್ದು.

*

ಪ್ರಶಸ್ತಿ ಬರುವುದೇನೋ ನಿಜ – ಏನಕೇನ ಪ್ರಕಾರೇಣ. ಅದು ಬಂದ ನಂತರ, ಅದರ ಬಗ್ಗೆ ತಳೆಯುವ ಅಥವಾ ತೋರುವ ದೃಷ್ಟಿಕೋನ ಬಹಳ ಕುತೂಹಲಕಾರಿಯಾಗಿರುತ್ತದೆ. ಬಹಳ ಜನ ಈ ವಿಷಯದಲ್ಲಿ ನಿಷ್ಕಾಮ ಕರ್ಮಿಗಳು, ಸ್ಥಿತ ಪ್ರಜ್ಞರು. ಪ್ರಶಸ್ತಿ ಕೊಡಬೇಕಾಗಿತ್ತು. ಕೊಟ್ಟರು; ಅದು ಅವರ ಕರ್ಮ. ಅದನ್ನು ಸ್ವೀಕರಿಸುವುದು ನನ್ನ ಅನಿವಾರ್ಯ ಧರ್ಮ – ಎಂಬ ತಾತ್ಸಾರ ದೃಷ್ಟಿ ಅವರದು. ಈ ನಾಟಕವನ್ನು ಅವರು ಬಹಳ ಚೆನ್ನಾಗಿ ಆಡುತ್ತಾರೆ. ಆಡಿಕೊಳ್ಳುವವರು ಆಡಿಕೊಳ್ಳುತ್ತಾರೆ.

ನಮ್ಮ ಹಾಮಾನಾ ಅವರ ರೀತಿಯೇ ಒಂದು ರೀತಿ. ವ್ಯವಸ್ಥೆಯ ಜೊತೆ ಹೊಂದಾಣಿಕೆ ಮಾಡಿಕೊಂಡೂ, ತಮ್ಮದೆಲ್ಲಾ ವ್ಯವಸ್ಥೆ ಮಾಡಿಕೊಂಡೂ, ಅದರ ವಿರುದ್ದ ಆಗಾಗ ಸಾಕಷ್ಟು ಪರಿಣಾಮಕಾರಿಯಾಗಿಯೇ ದನಿ ಎತ್ತುವ ವೈಶಿಷ್ಟ್ಯ ಅವರದು. ಅವರೇ ಹೇಳುವಂತೆ ಅವರ ‘ಮನಸ್ಸಿನ ಒಡೆಯ’ ಹೇಳುವಂತೆ ಕೇಳುವವರವರು. ಈ ‘ಒಡೆಯ’ನ ವಾಸ್ತವ ಮಾತ್ರ ‘ಹಮಾನಾ’ ಅವರ ‘ಬಾಡಿಗೆ’ ಮನೆಯಲ್ಲಿಯೇ ಎಂಬುದನ್ನು ನಾವು ನೀವು ಗಮನಿಸಿದರೆ ಸಾಕು!

ಒಮ್ಮೆ ಯಾವುದೋ ಪ್ರಶಸ್ತಿ ಬಂದಾಗ ಹಾಮಾನಾ ಹೇಳಿದರಂತೆ: ‘ನನಗೆ ಪ್ರಶಸ್ತಿ ಮಾತ್ರ ಇರಲಿ: ಅದರ ಜೊತೆಗಿನ ಹಣ ಬೇಡ’. ಮನೆಗೆ ಬಂದ ಮಹಾಲಕ್ಷ್ಮಿಯನ್ನು ಎಡಗಾಲಿನಿಂದ ಒದ್ದು. ಬಲಗೈಯಿಂದ ಬರಿ ಪ್ರಶಸ್ತಿಯನ್ನು ಮಾತ್ರ ಸ್ವೀಕರಿಸಿದ್ದು ಕೂಡ ತ್ಯಾಗ – ಬೋಗಗಳ ಸಮನ್ವಯದ ಒಂದು ಸಂಕೇತವೇ ಸರಿ.

ನನಗೆ ಏನಾದರೂ ಯಾರಾದರೂ ಎಲ್ಲಿಯಾದರೂ ಯಾವಾಗಲಾದರೂ ಯಾಕಾದರೂ ಎಂಥದಾದರೂ ಪ್ರಶಸ್ತಿ ಕೊಟ್ಟರೆ, ನಾನು ಹಾಮಾನಾ – ಶೈಲಿಯನ್ನು ಸ್ವಲ್ಪ ತಿರುವುಮುರುವು ಮಾಡಿ (ನಾಮಾಹಾ – ಶೈಲಿ?) ಹೀಗೆ ಕೇಳಬೇಕೆಂದಿರುವೆ: ‘ಸ್ವಾಮಿ, ನಿಮ್ಮ ಪ್ರಶಸ್ತಿಯೊಂದಿಗೆ ನೀವೂ ಹಾಳುಗುಂಡಿ ಬೀಳಿರಿ. ನನಗೆ ಹಣ ಮಾತ್ರ ಕೊಟ್ಟು ಹೋಗಿರಿ’.

ಡೈಲಾಗು ಬಾಯಿಪಾಠ ಮಾಡಿಕೊಂಡಿರುವೆ, ನಿಜ. ಆದರೆ ನನ್ನ ಅನೇಕ (ಬರೆಯಲಾಗದ) ನಾಟಕಗಳಂತೆ ಈ ನಾಟಕವೂ ರಂಗದ ಮೇಲೆ ಎಂದೂ ಪ್ರಯೋಗಗೊಳ್ಳದೆ. ಬರೀ ಮನಸಿನೊಳಗಣ ಗ್ರಾಂಡ್ ರಿಹರ್ಸಲ್ಲಿನಲ್ಲಿಯೇ ಖತಂ ಆಗುವುದೆಂಬ ಅನುಮಾನವೂ ಇದೆ.

 

-೧೯೮೮