ನನಗೆ ಸಿನಿಮಾ ಹಾಡುಗಳೆಂದರೆ ಬಹಳ ಜೀವ ಇಡೀ ಹಾಡು ಅಲ್ಲದಿದ್ದರೂ ಕೆಲವು ಸಾಲುಗಳು, ಭಯೋತ್ಪಾದಕರು ನೆಲದಲ್ಲಿ ಬಚ್ಚಿಟ್ಟು ಮೈನುಗಳಂತೆ ಸಿಡಿದು. ಮೈತುಂಬ ಕೋಲಾಹಲ ಎಬ್ಬಿಸುತ್ತವೆ: ಮತ್ತೆ ಕೆಲವು, ಶಬ್ದ ಕಳಕೊಂಡ ಬರಿ ನಾದಗಳಾಗಿ ‘ಕಾಮಿ ಬೆಕ್ಕಿನಾಂಗ’ ಕಾಲಕಾಲಲ್ಲೇ ಸುಳಿಯುತ್ತವೆ: ಮತ್ತೂ ಕೆಲವು ನಿಂತಲ್ಲಿ ಕುಂತಲ್ಲಿ ಸಣ್ಣಗೆ ಜೀವ ಹಿಂಡುವ ಶೋಕ ರಾಗಗಳಾಗಿ ಹೃದಯವನ್ನು ಅಪ್ಪಿಕೊಳ್ಳುವ ಕೋಮಲ ತೋಳುಗಳಾಗುತ್ತವೆ.

ಸಣ್ಣವನಿದ್ದಾಗ ಯಾವುದೋ ಸಿನೆಮಾದಲ್ಲಿ ಕೇಳಿದ ‘ಓ ಚಂದಾ …’ ಎಂದು ಸುರುವಾಗುವ ಒಂದು ಹಾಡು ನನ್ನ ವಿರಾಮ ವೇಳೆಯ ‘ಲಗ್ಜರಿ’ ಯಾಗಿದ್ದು ನನಗೆ ನೆನಪಿದೆ. ‘ನೆನಪು’ ಯಾಕೆ ಅಂದರೆ ಅದು ಈಗ ಜೀವಂತ ಅನುಭವವಾಗಿ ಉಳಿದಿಲ್ಲ. ಅದನ್ನು ಈಗ ಕೇಳೀದಾಗಲೆಲ್ಲ ಚಂದಮಾಮನ ಬದಲಾಗಿ ನನಗೆ ಸಂಕ್ರಮಣದ ಉದ್ರಿ ‘ಚಂದಾ’ ಮಾಮಾಗಳೇ ಕಣ್ಣಿಗೆ ಕಟ್ಟುತ್ತಾರೆ! ‘ಚಂದಾ ಚಂದಾ ….’ ಅಂತ ಇತ್ತೀಚಿನ ಒಂದು ಕನ್ನಡ ಹಾಡಂತೂ ನನ್ನ (ಹಾಗೂ ನನ್ನಂಥ ಕೆಲವು ಅಲ್ಪ ಸಂಖ್ಯಾತರ) ಪರವಾಗಿಯೇ ಯಾರೋ ಕರುಣೆಯಿಂದ ಬರೆದ ಶೋಕಗೀತೆ ಎಂದೇ ನನಗೆ ಭಾಸವಾಗುತ್ತದೆ.

ದೊಡ್ಡ ದೊಡ್ಡ ಪತ್ರಿಕೆಗಳ ಸಂಪಾದಕರಿಗಾಗಲಿ, ಪ್ರಕಾಶಕರಿಗಾಗಲಿ ಈ ಸಮಸ್ಯೆ ಇರುವುದಿಲ್ಲ. ಚಂದಾ ದರವನ್ನು ಎಲ್ಲಿಯೋ ಮೂಲೆಯಲ್ಲಿ ಪ್ರಕಟಿಸುತ್ತ. ವರ್ಷದಿಂದ ವರ್ಷಕ್ಕೆ ಉಳ್ಳಾಗಡ್ಡಿ ಮುಳಗಾಯಿಗಳ ಬೆಲೆ ಏರಿದಂತೆ ಅದನ್ನೂ ಅಷ್ಟಷ್ಟೆ ಏರಿಸುತ್ತ. ಹಣ ಸಂಗ್ರಹಿಸುವ ದಗದವನ್ನು ಏಜಂಟರಿಗೇ ಬಿಟ್ಟು ಹಾಯಾಗಿ ಉಸಿರಾಡಿಸುವ ಅಂಥವರನ್ನು ಕಂಡು ‘ಹಾಯ್’ ಅನಿಸುತ್ತದೆ ನನಗೆ., ಜಾಹೀರಾತುಗಳ ಹಣದಲ್ಲಿಯೇ ಅವರ ಪತ್ರಿಕೆ ನೆಡೆಯುತ್ತವೆ. ಜಾಹೀರಾತುಗಳಿಲ್ಲದೆ ಪತ್ರಿಕೆ ನಡೆಸುತ್ತೇವೆನ್ನುವ ‘ಮಹಾತ್ಮಾ ಗಾಂಧಿ’ಗಳೂ ಕೂಡ. ಜಾಹೀರಾತಿನ ಜಾಗೆಯಲ್ಲಿ ಯಾರ್ಯಾರನ್ನೋ ಬ್ಲಾಕ್ ಮೇಲ್ ಮಾಡಿ. ಜಾಹೀರಾತಿಗಿಂತ ಎಷ್ಟೋ ಪಟ್ಟು ಹಣ ಗಳಿಸುವುದನ್ನೂ ನಾವು ನೋಡಿದ್ದೆವೆ. ಆದರೆ ‘ಸಂಕ್ರಮಣ’ ದಂಥ ‘ಚಿಕ್ಕ’ ಪತ್ರಿಕೆಗಳು ಮಾತ್ರ ಚಂದಾದಾರರಾದವರು ಮತ್ತು ಚಂದಾದಾರರಾಗಿ ಮಾಡಲ್ಪಟ್ಟವರ ಮರ್ಜಿಯನ್ನು ಒಂದಲ್ಲ ಒಂದು ತಂತ್ರದಿಂದಲೋ ಮಂತ್ರದಿಂದಲೋ ಹಿಡಿಯಲೇಬೇಕಾಗುತ್ತದೆ.

ಯಾವುದೋ ಸಭೆಯ ಅಧ್ಯಕ್ಷನಾಗಿ. ಯಾವುದೋ ಕವಿಗೋಷ್ಠಿಯ ಉದ್ಘಾಟಕನಾಗಿ, ಯಾವುದೋ ಸೆಮಿನಾರಿನ ‘ಪ್ರಬಂಧ ಮಂಡಕ’ನಾಗಿ ನಾಡಿನ ಅನೇಕ ಕಡೆಯಿಂದ ಆಮಂತ್ರಣ ಬಂದಾಗ ನಾನು ಕರೆದವರ ‘ಕರೆಗೆ ಓಗೊಟ್ಟು’ ನನ್ನ ಎಡೆಬಿಡದ ಕಾರ್ಯಕ್ರಮಗಳಲ್ಲಿ ಬಿಡುವು ಮಾಡಿಕೊಂಡು ಹೋಗಲು ರೆಡಿಯಾಗಲು ಒಂದು ಕಾರಣ – (ಪ್ರೀತಿ, ವಿಶ್ವಾಸ, ಆತ್ಮೀಯತೆ, ಸಾಮಾಜಿಕ ಕಳಕಳಿ, ಕ್ರಾಂತಿಯ ಹಂಬಲ ಮುಂತಾದ ಇತರ ಮಾಮೂಲಿ ಕಾರಣಗಳೊಂದಿಗೆ) – ನಾನು ಹೋದಲ್ಲಿ ಕೆಲವರಾದರೂ ನಮ್ಮ ಉದ್ರಿ ಚಂದಾದರರ ಮುಖದರ್ಶನವಾದೀತು ಎಂಬ ಒಳಗಿನ ಒಳದನಿಯೊಂದರ ಸ್ಪೂರ್ತಿ!

ಅನೇಕ ವರ್ಷಗಳ ಹಿಂದೆ, ಅಂದರೆ ನಾವು ಮೂವರ ಸಂಪಾದಕರಾಗಿದ್ದಾಗ, ಪರಿಸ್ಥಿತಿ ಬೇರೆ ಇತ್ತು. ನಮಗೆ ಕೆಲವರು ಭಕ್ತಿಯಿಂದ ಬ್ರಹ್ಮ – ವಿಷ್ಣು – ಮಹೇಶ್ವರರೆಂದೂ, ಹಲವರು ಪ್ರಿತಿಯಿಂದ ಟಾಮ್ – ಡಿಕ್ – ಆಂಡ್ ಹ್ಯಾರಿ ಎಂದೂ, ಮತ್ತೆ ಕೆಲವರು (ಕನ್ನಡದ) ಎಂತ – ನೊಣ – ಶಿನರೆಂದೂ ಒಮ್ಮೆ ಏರುದನಿಯಲ್ಲಿ. ಮತ್ತೊಮ್ಮೆ ಇಳಿದನಿಯಲ್ಲಿ. ಮಗುದೊಮ್ಮೆ ತಮ್ಮ ಮನಸ್ಸಿನಲ್ಲೇ ಕರೆಯುತ್ತಿದ್ದರು. ಆದರೆ ನಾವು ಮಾತ್ರ ನಮ್ಮನ್ನು ವೀರಯೋಧರೆಂದೂ, ಥ್ರೀ ಮಸ್ಕೆಟಿಯರ್ಸ್ ಎಂದೂ ತಿಳಿದುಕೊಂಡು, ಹೆಗಲಿಗೆ ಬಗಲಚೀಲವನ್ನು ಬಂದೂಕಿನ ಹಾಗೆ ತೂಗಿಸಿಕೊಂಡು ಚಂದಾ – ಬೇಟಿಗೆ ಹೊರಡುತ್ತಿದ್ದೆವು. ನಮ್ಮ ಖ್ಯಾತಿ ಎಷ್ಟು ಹರಡಿತ್ತೇಂದರೆ, ಸಾಹಿತಿಗಳೂ ಸಾಹಿತ್ಯಾಸಕ್ತರು ಸೇರಿದ ಸಭೆಯಲ್ಲಿ ಅಕಸ್ಮಾತ್ ಗಲಾಟೆ ಆಗುವ ಸಂಭವ ಕಂಡು ಬಂದಾಗ ವ್ಯವಸ್ಥಾಪಕರು. ‘ಇಷ್ಟರಲ್ಲೆ ಇಂಥಿಂಥವರು ಇಲ್ಲಿಗೆ ಬರಲಿದ್ದಾರೆ’ ಎಂದು ನಮ್ಮ ಹೆಸರು ಅನೌನ್ಸ ಮಾಡಿದರೆ ಸಾಕು: ಮುಂದೆ ಐದೇ ಮಿನಿಟಿನಲ್ಲಿ. ಲಾಠಿ ಚಾರ್ಜೊತ್ತರ ಸನ್ನಿವೇಶದಂತೆ, ನಿರ್ಜನ ಪ್ರದೇಶ ನಿರ್ಮಾಣವಾಗುತ್ತಿತ್ತು!.

ಆ ದಿನಗಳಲ್ಲಿ, ಮೂವರಿಗೂ ಸಲುಗೆಯ ಗೆಳೆಯನಾಗಿ, ಧಾರವಾಡದ ವಲಯದಲ್ಲಿ ‘ರಂಗ’. ‘ರಂಗ’ ಎಂದು ಈಗಲೂ ಜಗತ್ ಪ್ರಸಿದ್ಧನಾಗಿರುವ ಉದ್ರಿ ಚಂದಾದಾರನೊಬ್ಬ ನಮಗೆ ಓಪನ್ನಾಗಿ ಹೇಳುತ್ತಿದ್ದ: ‘ಮಕ್ಕಳs, ನೀವು ಪೇಪರ್ ಬಂದ್ ಮಾಡ್ರಿ: ನಾ ಇವತ್ತs ನೀವೂ ಮೂವರಿಗೂ ಸಾರ್ವಜನಿಕ ಸನ್ಮಾನ ಸಮಾರಂಭಾ ಏರ್ಪಡಿಸ್ತೀನಿ ಬೇಕಾದಷ್ಟು ಖರ್ಚಾಗಲಿ! …’ ಅವನಿಂದ ಸನ್ಮಾನ ಪಡೆಯುವ ಭಾಗ್ಯ ಇವತ್ತಿಗೂ ಒದಗಿ ಬಂದಿಲ್ಲ. ಅವನ ಉದ್ರಿಯೂ ಹಾಗೇ ಉಳಿದಿದೆ.

ಚಂದಾಯಣ ಅಂದರೆ ಉದ್ರಿ ಚಂದಾಯಣವೇ. ಕರ್ನಾಟಕದ ಯಾವುದೇ ಭಾಗದ ಚಾಲ್ತಿ ಸಾಹಿತಿಯ ಹೆಸರು ತೆಗೆದರೂ ನಾನು ತಕ್ಷಣ ಅವರ ಮನೆ ನಂಬರು, ಕ್ರಾಸು, ಮೇನ್ ರೋಡು, ಊರು, ಅದರ ಪಿನ್ ಕೋಡು ಎಲ್ಲಾ ಪಟಪಟ ಹೇಳುವುದನ್ನು ಕೇಳಿ. ನನ್ನ ಅಗಾಧ ಸ್ಮರಣಶಕ್ತಿಯನ್ನೂ ಸಾಹಿತಿಗಳ ಬಗೆಗಿರುವ ಆತ್ಮೀಯತೆ – ಕಾಳಜಿಗಳನ್ನೂ ಕೊಂಡಾಡುವವರಿಗೆ ಒಳಗಿನ ಕಾರಣ – (ಆ ಚಾಲ್ತಿ ಸಾಹಿತಿ, ನಮ್ಮ ಉದ್ರಿ ಯಾದಿಯಲ್ಲಿರುವುದು!) ಗೊತ್ತೇ ಇರುವುದಿಲ್ಲ.

ಪ್ರತಿ ವರ್ಷವೂ ತಾವಾಗಿಯೇ ಮುಂಗಡವಾಗಿ ಚಂದಾ ಕಳಿಸುವ ಪ್ರಾಮಾಣಿಕರೂ ಸಾಕಷ್ಟು ಇದ್ದಾರೆ – ಅಡೆನ್ ಕವಿಯ ‘ದಿ ಅನ್ ನೋನ್ ಸಿಟಿಜನ್’ ಅಂಥವರು. ಅವರು ನೆನಪಿನಲ್ಲಿ ಉಳಿಯುವುದಿಲ್ಲ. ಇದೆಲ್ಲ ಬರೆಯುವಾಗ ಕೂಡಾ, ಅವರ ವಿಷಯ ನೆನಪೇ ಹಾರೀತು ಎಂಬ ಆತಂಕದಿಂದ. ಅವರಿಗೆ ಮೊದಲೆ ನನ್ನ ಮತ್ತು ನನ್ನಂಥವರ ಪರವಾಗಿ, ಇಂತ ಬಡಪಾಯಿ ಪತ್ರಿಕೆಗಳ ಸಂಪಾದಕರ ಪರವಾಗಿ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನೂ, ನಿಮ್ಮಂಥವರ ವಂಶ ಉದ್ದಾರವಾಗಲಿ ಎಂಬ ಹಾರೈಕೆಯನ್ನೂ ಸಲ್ಲಿಸಿ. ಮುಂದೆ ಸಾಗುತ್ತೇನೆ. (ಇಲ್ಲವಾದರೆ, ಅವರೂ ‘ನೋಡೋಣ’ ಎಂದು ಉದ್ರಿ ಪಟ್ಟಿಗೆ ಸೇರಿಬಿಡಬಹುದು ಎಂದು ಭಯವಿದೆ.)

ಚಂದಾ ಕಳಿಸಿದವರಿಗೆ ಪತ್ರಿಕೆ ಕಳಿಸಬೇಡಿರಿ – ಎಂದು ನೀವೇ ಏಕೆ, ಯಾರಾದರೂ ಪುಕ್ಕಟ್ಟೆ ಸಲಹೆ ನೀಡಬಹುದು. ಪರಿಸ್ಥಿತಿ ಅಷ್ಟು ಸರಳವಿಲ್ಲ, ಮಾರಾಯರೆ. ಈ ತಿಂಗಳಿಂದ ಸಂಚಿಕೆ ಕಳಿಸಿಲ್ಲ – ಅಂತಾ ತಿಳಿಯಿರಿ. ಈವರೆಗೂ ತಿಂಗಳು ತಿಂಗಳೂ ಕಳಿಸಿದ ಸಂಚಿಕೆಗಳ ಉದ್ರಿ ಬಾಬತ್ತು ಏನಾಗಬೇಕು? ‘ನಿನ್ನೆ ನಿನ್ನೆಗೆ, ಇಂದು ಇಂದಿಗೆ, ಇರಲಿ ನಾಳೆಯು ನಾಳೆಗೆ’ – ಎಂದು ಕವಿಗಳೇನೋ ಸರಾಗವಾಗಿ ಹಾಡಬಹುದು. ಆದರೆ ಅದು ಚಂದಾದಾರರ ಹಾಡೂ ಆಗಿಬಿಟ್ಟರೆ ಸಂಪಾದಕರೇನು ಹಾಡಬಹುದು. ಆದರೆ ಅದು ಚಂದಾದಾರರ ಹಾಡೂ ಆಗಿಬಿಟ್ಟರೆ ಸಂಪಾದಕರೇನು ಹೊಟ್ಟೆಗೆ ಕೇರು ಹಾಕಿಕೊಳ್ಳಬೇಕೆ? ನಾಳೆ ಬಪ್ಪುದು ನಮಗೆ ಇಂದೆ ಬರಲಿ – ಎಂಬುದು ನಮ್ಮ ಭಜನೆ. ಒಂದಲ್ಲ ಒಂದು ದಿನ ಉದ್ರಿ ಗೆಳೆಯನಿಗೆ ಪಶ್ಚಾತ್ತಾಪವಾದೀತು: ಅರಿವು ಗುರುವಾಗಿ ಕೆಲಸ ಮಾಡೀತು: ಮನದಾಣ್ಮ ಗುರುಸಿದ್ದ ಎಚ್ಚರಿಸಿ, ‘ಅಪ್ಪಾ? ಅವರ ಚಂದಾ ಕಳಿಸಿಬಿಡು’ ಎಂಬ ಅಣತಿಯನ್ನು ಇತ್ತಾನು ಎಂದು ಮನುಷ್ಯ ಮೂಲಭೂತವಾಗಿ ಒಳ್ಳೆಯವನು ಎಂಬ ಸಿದ್ದಾಂತವನ್ನು ನಂಬಿ, ಸಂಚಿಕೆಯನ್ನು ಕಳಿಸುತ್ತಲೇ ಇರಬೇಕಾಗುತ್ತದೆ.

ಮೇಲಿನ ಎಲ್ಲ ನಿರೀಕ್ಷೆಗಳೂ ಬುಡಮೇಲಾದ ಮೇಲೆ, ಬದುಕಿನಲ್ಲಿ ಬೇಸರ ತಾಳದೆ, ಇಂಥಾ ಕಟ್-ಗಿರಾಕಿಗಳನ್ನು ಹೇಗಾದರೂ ಹಿಡಕ್ಕೊಳ್ಳಲು ಒಂದು ‘ಹಿಡಿಕೋ’ ಯೋಜನೆ ತಯಾರಿಸಬೇಕು. ನಾನಂತೂ ತಯಾರಿಸಿದ್ದೇನೆ.

ಇದರ ಮುಖ್ಯಭಾಗ ‘ಪತ್ರಾಕ್ರಮಣ’: ಅಂದರೆ ಮೇಲಿಂದ ಮೇಲೆ ಪತ್ರಗಳನ್ನು, ನೆನಪೋಲೆ – ಒಂದು, ಎರಡು, ಮೂರು …. ಹೀಗೆ ಬರೆಯುವುದು. ಮೊದಲು, ದಯಮಾಡಿ ಕಳಿಸಿರೆ, ಅಂತ: ನಂತರ, ಹಳೇ ಉದ್ರಿ ತೀರಿಸಿ, ಹೊಸ ಉದ್ರಿ ಸುರು ಮಾಡಿರಿ. ಅಂತ: ಕೊನೆಗೆ ಹೇಗಾದರೂ ಮಾಡಿ ಋಣಮುಕ್ತವಾಗಿ ಆತ್ಮಶಾಂತಿ ಪಡೆಯಿರಿ ಅಂತ. ಇತ್ತೀಚಿಗೆ ಡಬಲ್ ಕಾರ್ಡು (ರಿಪ್ಲೈ ಕಾರ್ಡ್) ಬರೆಯ ತೊಡಗಿರುವೆ ಇಪ್ಪತ್ತಾದರೂ ಹೊರಳಲಿ ಅಂತ. ಇಪ್ಪತ್ತಂತೂ ಹೊರಳುತ್ತವೆ. ಉಳಿದ ಎಂಬತ್ತನ್ನು ಗೆಳೆಯರು ಬೇರೆಯವರಿಗೆ ಬಳಸುತ್ತಾರೆ! ಆದರೆ ಪತ್ರ ಬರೆಯಲು ನನಗೆ ಬೇಸರವೇ ಇಲ್ಲ. ‘ಹೋದರೆ ಹದಿನೈದು ಪೈಸಾ: ಬಂದರೆ ಐವತ್ತು ರೂಪಾಯಿ’ – ಇದು ನನ್ನ ಲೆಕ್ಕಾಚಾರ.

ನನ್ನಂಥ ಮತ್ತೆ ಕೆಲವು ಸಂಪಾದಕರು, ಉದ್ರಿ ಚಂದಾದಾರರ ಹೆಸರು ಪತ್ರಿಕೆಯಲ್ಲಿ ಪ್ರಕಟಿಸುತ್ತೇವೆ ಎಂದು ಹೆದರಿಕೆ ಹಾಕುತ್ತಾರಂತೆ. ಇದೂ ಉಪಯೋಗವಿಲ್ಲ. ಏಕೆಂದರೆ ಈ ರೀತಿಯಲ್ಲಾದರೂ ತಮ್ಮ ಹೆಸರು ಪ್ರಕಟವಾಗಲಿ ಎಂದು ಹಂಬಲಿಸುವವರೂ ಇರಬಹುದು. ನಮ್ಮ ಶೂದ್ರಶ್ರೀ ಬಗ್ಗೆ ಒಂದು ಕತೆ ಚಾಲ್ತಿ ಇದೆ. (‘ಶೂದ್ರ’ ಪತ್ರಿಕೆಯ ಸಂಪಾದಕ) ‘ನೋಡಿ ಸಾರ್, ನೀವು ಚಂದಾ ಕೊಡದಿದ್ದರೆ ನಮ್ಮ ಪತ್ರಿಕೆ ನಿಂತೇ ಹೋಗುತ್ತದೆ’ – ಎಂದು ದೈನಾಸಬಟ್ಟು ಹೇಳುತ್ತಾನಂತೆ. ಈ ಕಾರಣದಿಂದಾದರೂ ಅದು ನಿಂತು ಬಿಡಲಿ ಎಂದು ನೂರಾರು ಚಂದಾದಾರರು ಉದ್ರಿಯಾಗಿಯೇ ಉಳಿದಿದ್ದಾರಂತೆ.

ಪ್ರತಿ ವರ್ಷ ಚಂದಾ ಸಂಗ್ರಹಿಸುವ ಕಿಟಕಿಟಯಿಂದ ಪಾರಾಗುವ ಒಂದು ಮಾರ್ಗ – ಅಜೀವ ಚಂದಾ ತಗೊಳ್ಳುವುದೆ. ಇದನ್ನು ಇತ್ತೀಚಿಗೆ ನಾನು ಜೀವಾವಧಿ ಚಂದಾ ಎಂದು ಕರೆಯತೊಡಗಿರುವೆ. ಅಜೀವ ಅಂದರೆ ಯಾವ ಜೀವ? ಚಂದಾದಾರರ ಜೀವವೋ, ಪತ್ರಿಕೆಯ ಜೀವವೋ? ಇದು ಕೇಳಬೇಕಾದ ಪ್ರಶ್ನೆ, ಕೆಲವರು ಕೇಳಿದ್ದಾರೆ. ನನ್ನ ಉತ್ತರ ನೇರ, ಸ್ಪಷ್ಟ: ಅಜೀವ ಅಂದರೆ ಪತ್ರಿಕೆಯ ಜೀವ ಇರುವವರೆಗೆ ಅಥವಾ ಚಂದಾದಾರರ ಜೀವ ಇರುವವರೆಗೆ – whichever is earlier….. ಕೆಲವರು ಚಾಣಾಕ್ಷರು ತಮ್ಮ ಹೆಸರಿನಲ್ಲಿ ಅಲ್ಲ. ತಮ್ಮ ಮೊಮ್ಮಕ್ಕಳ ಹೆಸರಿನಲ್ಲಿ ಅಜೀವ ಚಂದಾದಾರರಾಗಿದ್ದಾರೆ! ಅಂದರೆ ಅವರ ಮೊಮ್ಮಕ್ಕಳ ಸಲುವಾಗಿ ನನ್ನ ಮೊಮ್ಮಕ್ಕಳು ಪತ್ರಿಕೆ ನಡೆಸಬೇಕು.

ಅಜೀವ ಚಂದಾ ಒಮ್ಮೆಲೇ ಕೊಡುವುದು ತ್ರಾಸಿನ ಕೆಲಸ. ಎಷ್ಟು ಕಂತು ಮ್ಯಾಕ್ಸಿಮಮ್ ಅಂತ ಕೇಳುತ್ತಾರೆ. ಈ ಕಂತುದಾರರಿಗೆ ನಾನು ಹೇಳುವುದು: ‘ನೋಡ್ರಿ ಅಜೀವ ಚಂದಾ ಐದು ನೂರು. ಒಂದೇ ಕಂತಿನಲ್ಲಿ ಕೊಡ್ರಿ. ಮ್ಯಾಕ್ಸಿಮಮ್ ಅಂದರೆ ಒಂದೊಂದು ರೂಪಾಯಿಯ ಐದು ನೂರು ಕಂತುಗಳಲ್ಲಿ ಕೊಡ್ರಿ’. ಅವರು ನಡುವಿನ ಯಾವುದೋ ಅಂಕಿ ಸೂಚಿಸುತ್ತಾರೆ. ನಾನು ‘ಒಮ್ಮೆಗೆ ಅಷ್ಟು ಪೋಸ್ಟ – ಡೆಟೆಡ್ ಚೆಕ್ ಕೊಡ್ರಿ’ ಅನ್ನುತ್ತೇನೆ. ‘ಯಾವ ಡೇಟ್ ಹಾಕಲಿ?’ ಅನ್ನುತ್ತಾರೆ. ಈ ಶತಮಾನದ ಯಾವುದಾದರು ಡೇಟ್ ಹಾಕ್ರಿ ಅನ್ನುತ್ತೇನೆ. ವ್ಯವಹಾರ ಮುಗಿಯುತ್ತದೆ.

ದೊಡ್ಡ ಮೊತ್ತ ಕೈಗೆ ಹತ್ತಿದರೆ ಬ್ಯಾಂಕಿನಲ್ಲಿ ಇಟ್ಟು ಬಡ್ಡಿಗಳಿಸಬಹುದು. ಆದರೆ ಕಂತುಗಳಲ್ಲಿ ಹಂತಹಂತವಾಗಿ ಬಂದ ಹಣ ಆಯಾ ಕ್ಷಣದ ವರ್ತಮಾನದ ಆಹ್ವಾನಗಳನ್ನು ಎದುರಿಸಲು ಖರ್ಚಾಗಿ ಕೊನೆಗೂ ಅಜೀವ ಚಂದಾ ಅನ್ನುವುದು. ಭಾರತೀಯರ ತಲೆಯ ಮೇಲಿನ ವಿದೇಶಿ ಸಾಲದ ಹಾಗೆ. ಒಂದು ಭೂತವಾಗಿ ಪತ್ರಿಕೆಯವರ ತಲೆ ಹೊತ್ತು (ಒಮ್ಮೊಮ್ಮೆ ತಲೆ ಕೆಟ್ಟು) ಕೂಡ್ರುವುದು ಸಂಬಂಧಪಟ್ಟವರಿಗೆ ಗೊತ್ತಿದ್ದ ವಿಷಯವೇ.

ಈ ಚಂದಾ ಪುರಾಣದ ಒಂದು ಲಾಭವೆಂದರೆ ವಿಚಿತ್ರ ಸನ್ನಿವೇಶಗಳ ಸೃಷ್ಟಿ: ಆ ಮೂಲಕ ಮುನಷ್ಯ ಸ್ವಭಾವದ ವಿಚಿತ್ರ ಓರೆಕೋರೆಗಳ ಪರಿಚಯ. ಯಾವುದೋ ಸಭೆಯಲ್ಲಿ ಯಾರದೋ ಭೆಟ್ಟಿ. ಅದು ಇದು ಮಾತಾಡಿ. ‘ನಿಮ್ಮದು ಭಯಂಕರ ಸಾಹಸರೆಪಾ. ಇಷ್ಟು ವರ್ಷ ಪತ್ರಿಕೆ ನಡೆಸೀರಿ – ನಮ್ಮಂಥೋರ್ನು ಕಟ್ಟಿಕೊಂಡು’ ಅಂತ ಅವರು ಹೊಗಳಲು ಪ್ರಾರಂಭಿಸಿದಾಗ, ‘ಓಹೋ ಇದು ನಮ್ಮ ಗಿರಾಕಿ!’ ಎಂದು ಛಕ್ಕನೇ ಹೊಳೆದು ಹತ್ತಿರದ ಕ್ಯಾಂಟೀನಿಗೆ ಕರೆದೊಯ್ಯತ್ತೇನೆ. ಚಹಾ ಕುಡಿಯುತ್ತ ಅವರು ‘ನಿಮ್ಮ ಬಾಕಿ ಹಂಗs ಉಳಿತ್ರೆಪ’ ಅಂದಾಗ ಆಶೆ ಚಿಗುರುತ್ತದೆ. ಅವರು ಕವಿಗಾಳಾಗಿದ್ದರೆ ಅವರ ಕಾವ್ಯದ ಬಗ್ಗೆ ಆಸಕ್ತಿ ತೋರಿಸುತ್ತೇನೆ. ಪದ್ಯ ಕಳಿಸಿರಿ ಅನ್ನುತ್ತೇನೆ. ‘ನಿಮ್ಮ ಪತ್ರಿಕೆ ಅಂದ್ರ ನಮ್ಮ ಪತ್ರಿಕೆ ಅದು. ಅದು ನಿಂತ್ರ ನಾವು ಸತ್ತ ಹೋಗ್ತವಿ ಚಂದಾ ಬಾಕಿ ಬಗ್ಗೆ ಚಿಂತೀ ಮಾಡಬ್ಯಾಡ್ರಿ. ನಮ್ಮ ಪತ್ರಿಕೆಯ ಹಣ ನಮ್ಮ ಹತ್ತಿರ ಇದ್ರೇನು. ನಿಮ್ಮ ಹತ್ರ ಇದ್ರೆನು?’ ಎಂದು ಅವರು ಬಾಕಿಯನ್ನು ಉಳಿಸಿಕೊಳ್ಳುವುದಲ್ಲದೆ, ನಮ್ಮ ಪತ್ರಿಕೆಯನ್ನೂ ತಮ್ಮದನ್ನಾಗಿ ಮಾಡಿಕೊಂಡು ಗಾಡಿ ಬಿಡುತ್ತಾರೆ. ನಾನು ಚಹಾದ ಬಿಲ್ಲನ್ನು ಕೈಯಲ್ಲಿ ಹಿಡಿದುಕೊಂಡೇ ಅವರಿಗೆ ಟಾಟಾ ಹೇಳುತ್ತೇನೆ. ಅವಸರದಲ್ಲಿ ಮರಳುತ್ತಾರೆ. ನನಗೆ ಮತ್ತೆ ಆಶೆ ಚಿಗುರುತ್ತದೆ. ‘ಪದ್ಯಾ ಕೇಳಿದ್ರೆಲ್ಲ. ತಗೊಳ್ರಿ’ ಎಂದು ಅವತ್ತೇ ಮುಂಜಾನೆ ಬರೆಯಲಾದ ಬಿಸಿ ಬಿಸಿ ಪದ್ಯವೊಂದನ್ನು ಕೈಗೆ ತುರುಕಿ ಕಣ್ಮರೆಯಾಗುತ್ತಾರೆ.

ಬಿಜಾಪುರದಲ್ಲಿ ಒಬ್ಬ ಆತ್ಮೀಯನಿದ್ದಾನೆ. ಅವನ ಕತೆ ಬೇರೆ. ಜಿಲ್ಲೆಯ ರಾಜಕಾರಣಿಗಳಿಗೆಲ್ಲ ಹತ್ತಿರದ ಅಳಿಯನೋ, ದೂರದ ಮಾವನೋ, ಅಣ್ಣನೋ, ತಮ್ಮನೋ, ಚಿಕ್ಕದೊಡ್ಡಪ್ಪನ ಮಗನೋ ಆಗಿರುವ ಈ ಗೆಳೆಯ ನನಗೆ, ‘ಒಮ್ಮೆ ಈ ಕಡೆ ಬಂದು ಬಿಡು. ಐದಾರು ಲಕ್ಷ ಕೊಡಿಸಿ ಕೊಡ್ತೀನಿ’ ಎಂದು ಅನೇಕ ಸಲ ಹೇಳಿದ್ದರೂ ನನಗೇ ಪುರುಸೊತ್ತಾಗಿಲ್ಲ. ‘ನಿನ್ನದಷ್ಟು ಕಳಿಸು ಮಾರಾಯ’ ಅಂದರೆ ಅವನದೊಂದೇ ಕಂಡಿಶನ್: ‘ಹೇಗಾದರೂ ಮಾಡಿ ನನ್ನ ಹೆಸರು ಸಂಕ್ರಮಣದಲ್ಲಿ ಬಂದರೆ ಮಾತ್ರ ಹಣ ಹೊಡುವೆ.’ ಹೇಗಿದೆ ನೋಡಿರಿ. ಅವನ ಹೆಸರು ಶ್ರೀ ಐ ಎಚ್. ಇನಾಮದಾರ. ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕ. (ಯಾವ ಕ್ಷಣದಲ್ಲಾದರೂ ಪ್ರಿನ್ಸಿಪಾಲನಾಗುವ ಸಂಭವವಿದೆ.) ಬಿಜಾಪುರದ ಗೋಲಗುಮ್ಮಟ, ಇಬ್ರಾಹಿಂ ರೋಜಾ, ಉಪಲಿ ಬುರ್ಜ, ಬಾರಾಕಮಾನುಗಳ ಹಾಗೆಯೇ ಇವನೂ ಒಬ್ಬ ಪ್ರೇಕ್ಷಣೀಯ ವ್ಯಕ್ತಿ. ಅತ್ಯಂತ ಪ್ರಾಂಜಲ ಮನಸ್ಸಿನ ಬಿಚ್ಚುಮಾತಿನ ಸಹೃದಯಿ. ನೀವು ಆ ಕಡೆ ಹೋದಾಗ ಭೆಟ್ಟಿಯಾಗಿ ಬರ್ರಿ (ಇಷ್ಟೆಲ್ಲ ಬರೆದ ಮೇಲೆ ಅವನ ಚಂದಾ ಬರುವ ನಿರೀಕ್ಷೆ ಇದೆ.)

ಸಂಕ್ರಮಣದ ಪ್ರಾರಂಭವಾದ ಮೊದಲ ವರ್ಷ ನಾವು ಮೂವರೂ ಪಳೆಂಕರು ಚಂದಾ ಸಂಗ್ರಹಕ್ಕೆಂದು ಮುಂಬೈಗೆ ದಂಡೀಯಾತ್ರೆ ಕೈಕೊಂಡು, ಕೂಡಿದ ಹಣವೆಲ್ಲ ಅಲ್ಲಿಯೇ ಖರ್ಚಾಗಿ (ಆಗ ವಾರ್ಷಿಕ ಚಂದಾ ಆರು ರೂ.!) ಬರುವಾಗ ಗಾಡೀ ಖರ್ಚಿಗೆ ಗೆಳೆಯರಿಂದ ಕೈಗಡ ಇಸಗೊಂಡಿದ್ದು ಇನ್ನೂ ನೆನಪಿದೆ. ತ್ರಿಮೂರ್ತಿಗಳಲ್ಲಿ ದ್ವಿಮೂರ್ತಿಗಳು ಹಿಂದೆ ಸರಿದು ನಾನೊಬ್ಬನೇ ಏಕಮೂರ್ತಿಯಾಗಿ ಉಳಿದಾಗ ಒಮ್ಮೆ ಬಿಜಾಪುರದ ‘ಕಲಾಮಾಧ್ಯಮ’ ತಂಡದರವರು ಅಶೋಕ ಬಾದರದಿನ್ನಿ ನಾಯಕತ್ವದಲ್ಲಿ ನಾಡಿನ ನಾನಾ ಕಡೆ ನನ್ನ ಕೆಲವು ನಾಟಕ ಪ್ರಯೋಗಿಸಿ ಸಂಕ್ರಮಣಕ್ಕಾಗಿ ಕೂಡಿಸಿದ ಹಣ. ೧೦ – ೧೫ ಕಲಾವಿದರಿದ್ದ ತಂಡದ ವ್ಯವಸ್ಥೆಗೆ ಬಹುಪಾಲು ಖರ್ಚಾಗಿ ‘ನಾಟಕ’ ಮಾಡಿದ್ದಷ್ಟೇ ಖರೆಯಾಯಿತು.

*

ಒಮ್ಮೆ ರಾಯಚೂರಿಗೆ ನಾನೊಬ್ಬನೇ ಚಂದಾಯಾತ್ರೆ ಕೈಗೊಂಡಿದ್ದೆ. ಅಲ್ಲಿ ಶಾಂತರಸ, ಎಸ್.ಜಿ.ಸ್ವಾಮಿ. ಅಮರೇಶ, ಅಮರಣ್ಣ ಚುಕ್ಕಿ ಮುಂತಾದವರು ಒಂದೆರಡು ದಿನ ಅಲ್ಲಲ್ಲಿ ಓಡಾಡಿ ಚಂದಾ ಸಂಗ್ರಹಿಸಿದರು. ಇನ್ನೂ ಕೆಲವರನ್ನು ಕಾಣಬೇಕಾಗಿತ್ತು. ಆದರೆ ನಾನು ಧಾರವಾಡಕ್ಕೆ ಬೇಗ ಮರಳಬೇಕಾಗಿತ್ತು.

ಲಕ್ಷ್ಮೀದೇವಿ (ಶಾಂತರಸರ ಪತ್ಮಿ) ಹೇಳಿದರು: ‘ಚಂದಾ ಕೇಳಾಕ ಹೋದಾಗ ನೀವು ಇರಾಕsಬೇಕು. ಈಗ ಊರಿಗೆ ಹೋಗಬ್ಯಾಡ್ರಿ’.

ನಾನು: ‘ಹಂಗೇನಿಲ್ಲ, ನೀವು ಕೇಳಿದ್ರ ಯಾರೂ ಇಲ್ಲಾ ಅನ್ನಂಗಿಲ್ಲ’

ಅವರು:‘ನಿಮಗೆ ತಿಳೆಂಗಿಲ್ಲ ಬಿಡ್ರಿ.’

ನಾನು: ‘ಏನು ತಿಳೆಂಗಿಲ್ರಿ?’

ಅವರು: ‘ಹೆಣಾ ಎದುರಿಗಿದ್ರ ಅಳಾಕ ಚೆಂದರೆಪಾ!’

 

-೧೯೯೨