ಇದೊಂದು ಪೇಚಿನ ಪ್ರಸಂಗ.

ಆದರೆ ಇಂಥ ಚಾನ್ಸುಗಳೂ ಹಗಲೆಲ್ಲಾ ಸಿಗುವುದಿಲ್ಲ. ಸಾಹಿತ್ಯ ಸೃಷ್ಟಿ ಮತ್ತು ವೈಜ್ಞಾನಿಕ ಮನೋಧರ್ಮ – ಕುರಿತ ಸಮಿನಾರಿನಲ್ಲಿ ಸೃಜನಶೀಲ ಬರಹಗಾರನೊಬ್ಬ ‘ಪ್ರತಿಕ್ರಿಯೆ’ ವ್ಯಕ್ತಪಡಿಸಲು ಆಹ್ವಾನಿತನಾದಾಗ ಅವನೆದುರು ಎರಡು ‘ಅತಿ’ಗಳ ಸಂಭ್ಯಾವತೆ ಇರುತ್ತದೆ: ಅವನು ತನ್ನ ಒಳಗಿನ ಬದುಕಿನಲ್ಲಿ ಬದುಕಿನಲ್ಲಿ ಕೆಲವನ್ನು ಮಾತ್ರ ಆಯ್ದು ಸಾರ್ವಜನಿಕರಿಗಾಗಿ ಒಂದು ಸ್ಪಶೆಲ್ಲಾದ ತನ್ನ ವ್ಯಕ್ತಿತ್ವದ (ಸಹಜವಾಗಿಯೇ ಸುಂದರವಾದ, ಆಕರ್ಷಣೀಯವಾದ, ಒಮ್ಮೊಮ್ಮೆ ಅನುಕಂಪನೀಯವಾದ)) ಒಂದು ಮುಖವನ್ನು ಸಾದರಪಡಿಸಲು ಹೋಗಬಹುದು. ಅಥವಾ ತನ್ನನ್ನು ತಾನೇ ಅನ್ವೇಷಿಸಿಕೊಳ್ಳುತ್ತ. ತನ್ನಲ್ಲೇ ಐಕ್ಯವಾಗುತ್ತ. ತನ್ನ ಸ್ವಾಗತಗಳನ್ನು ಹೊರಗಿನವರಿಗೆ ಅಷ್ಟೋ ಇಷ್ಟೋ ಕೇಳಿಸುತ್ತ ಹೋಗಬಹುದು. (ಕನ್ನಡಿಯಲ್ಲಿ ತಮ್ಮ ಮುಖ ತಾವೇ ನೋಡಿಕೊಳ್ಳುತ್ತ, ಅದೇ ಚಟ ಬಿದ್ದು, ಕನ್ನಡಿಯಲ್ಲಿದಿದ್ದಾಗಲೂ ಎಲ್ಲಾ ಕಡೆಗೆ ತಮ್ಮ ದಶಮುಖಗಳನ್ನೋ ಅನಂತ ಮುಖಗಳನ್ನೋ ಕಾಣುವ ಶೋಚನೀಯ ದುರಂತ ಜೀವಿಗಳನ್ನು ನಾವು ಕಾಣುತ್ತಿದ್ದೇವೆ) ಈ ಎರಡೂ ತುದಿಗಳನ್ನು ‘ಸಮನ್ವಯ’ಗೊಳಿಸಿ ಮಾತಾಡುತ್ತೇನೆ ಎಂದು ಹೊರಡುವವರ ಪ್ರಯತ್ನಗಳೂ ಅನುಮಾನಾಸ್ಪದವೇ.

ಸಾಹಿತ್ಯ ‘ಸೃಷ್ಟಿ ಪ್ರಕ್ರಿಯೆ’ ಯ ಹಿಂದೆ ಒಂದು ‘ಮನೋಧರ್ಮ’ ಕೆಲಸ ಮಾಡುತ್ತದೆ – ಎಂಬ ಗ್ರಹೀತದೊಂದಿಗೆ ಹೊರಡೋಣ. ಸಾಹಿತ್ಯಕ್ಕೆ ಮೂಲ ಬಂಡವಾಳ ಒದಗಿಸುವ ಅನುಭವ ಸಮಷ್ಟಿಯದು; ನನ್ನ ಅನುಭವವನ್ನೂ ಒಳಗೊಂಡಿರುವಂಥದ್ದು. ಈ ಅನುಭವದ ಅಭಿವ್ಯಕ್ತಿಗೆ ಆರಿಸಿಕೊಳ್ಳಲಾದ ‘ಭಾಷೆ’ ಎಂಬ ಮಾಧ್ಯಮ ಕೂಡ ಸಮಷ್ಟಿಯದೇ. ಹಾಗೆಯೇ, ಸೃಷ್ಟಿಯಾದ ಸಾಹಿತ್ಯವನ್ನು ನಾನು ಹಂಚಿಕೊಳ್ಳಬಯಸುವುದು ಕೂಡ ಸಮಷ್ಟಿ ಮನಸ್ಸುಗಳೊಂದಿಗೇ. ಈ ಸಂಕೀರ್ಣ ವಿನ್ಯಾಸದಲ್ಲಿ ನನ್ನ ‘ಮನೋಧರ್ಮ’ ಎಂಬುದು, ಅನುಭವವನ್ನು ಗ್ರಹಿಸಿಕೊಳ್ಳುವ. ಅರಗಿಸಿಕೊಳ್ಳುವ ಹಂತದಲ್ಲಿ ಕೆಲಸ ಮಾಡುತ್ತದೆ ಎಂದು ನನ್ನ ಅನಿಸಿಕೆ. (ಇದೂ ಕೂಡ ‘ಭಾಷೆ’ಯ ಮೂಲಕವೇ ಆಗುವ ಪ್ರಕ್ರಿಯೇ ಎಂಬುದನ್ನು ಮರೆಯುವಂತಿಲ್ಲ ಯಾಕೆಂದರೆ ‘ಭಾಷತೀತ’ ವಾದ ಅನುಭವ ಎಂಬುದಿಲ್ಲ).

ಈ ಮನೋಧರ್ಮ ಒಂದು ಇಂಚು ಪಟ್ಟಿಯಂತೆ ಎಲ್ಲ ಕಾಲಕ್ಕೂ ನಿರ್ದಿಷ್ಟವಾದ, ಖಚಿತವಾದ ಮಾನದಂಡವಾಗಿರದೆ, ಪ್ರಜ್ಞೆ ಮತ್ತು ಪರಿಸರದ ನಡುವಿನ ನಿರಂತರವಾದ ಸ್ನೇಹ – ಸಂಘರ್ಷದ ಮೂಲಕ ಸದಾ ಚಲನಶೀಲವಾಗಿರುವಂಥದು. ಅಂದ ಮೇಲೆ ನನ್ನ ಮನೋಧರ್ಮ ರೂಪುಗೊಳ್ಳಲು ‘ನೆಲೆ’ಯಾಗಿ (ಹಿನ್ನೆಲೆಯೋ, ಮುನ್ನೆಲೆಯೋ ಒಳನೆಲೆಯೋ, ಹೊರನೆಲೆಯೋ – ಒಟ್ಟಿನಲ್ಲಿ ಒಂದು ನೆಲೆಯಾಗಿ) ಇರುವ ನನ್ನ ಬದುಕಿನ, ಬಾಲ್ಯದಿಂದ ಮೊದುಲು ಮಾಡಿ ಇವತ್ತಿನ ಈ ಕ್ಷಣದವರೆಗಿನ ಬದುಕಿನ. ಕೆಲವಾದರೂ ನಿರ್ಣಾಯಕ ಘಟ್ಟಗಳ ಮೆಲುಕಿ ಹಾಕುವುದು ಅನಿವಾರ್ಯವೇನೋ. ಬಹಳ ತೊಡಕಾದ ಸಾಮಾಜಿಕ, ಸಾಂಸ್ಕೃತಿಕ, ಐತಿಹಾಸಿಕ ಸಂರಚನೆಯುಳ್ಳ ಇಂಡಿಯಾದಲ್ಲಿ – (ಎಲ್ಲ ಸಮಾಜಗಳೂ ಹೀಗೇ ಇರಬಹುದೇನೋ!) – ಒಂದು ಮನೋಧರ್ಮ ರೂಪಿತವಾಗುವುದೂ ತೊಡಕು ತೊಡಕಾದ ಪ್ರಕ್ರಿಯೆಯೇ ಆಗಿರುತ್ತದೆ.

ಹುಟ್ಟಿದ್ದ ಊರು (ಹತ್ತೀಮತ್ತೂರು) ಕುಗ್ರಾಮವೇನೂ ಆಗಿರಲಿಲ್ಲ: ಸುಗ್ರಾಮವೇ ಆಗಿತ್ತು. ವೀರಶೈವ ಸಮಾಜ. ಅದರಲ್ಲೂ ‘ಜಂಗಮ – ಗೌಡ’ ಎಂಬ ವಿಚಿತ್ರ ತಳಿಯಿದೆ. (ಇವರು ಜಂಗಮರೂ ಹೌದು, ಗೌಡರೂ ಹೌದು. ಯಾವಾಗ ಯಾವುದು ಅನುಕೂಲವೋ ಅದನ್ನು ಚಲಾಯಿಸಬಹುದು!) ಹಳೆಯ ಕಾಂಗ್ರೇಸಿಗನಾಗಿದ್ದ. ಬಹಳ ಬುದ್ದಿವಂತನೆಂದೂ, ಚಾಲಾಕು ಮಾತಿನವನೆಂದೂ ಪ್ರಖ್ಯಾತನಾಗಿದ್ದ ಅಪ್ಪ: (ಧಾರವಾಡದ ಕರ್ನಾಟಕ ಕಾಲೇಜಿನ ವಿದ್ಯಾರ್ಥಿಯಾಗಿದ್ದಾಗ ಅವನು ಮುರಘಾಮಠದಲ್ಲಿ ಇರುತ್ತಿದ್ದನಂತೆ: ‘ಸ್ವಾಮಿ’ಗಳಿಗೆ ಏನೋ ಅಂದಾಗ ಹೊರಗೆ ಹಾಕಿಸಿಕೊಂಡನಂತೆ: ಇವೆಲ್ಲಾ ಅವನ ಬಗೆಗಿರುವ ದಂತಕತೆಗಳು.) ಸಣ್ಣವನಿದ್ದಾಗ ನನ್ನ ಪ್ರೀತಿಯ ಕೆಲಸಗಳೆಂದರೆ ಗುಬ್ಬಿ ಚಿಮಣಿ, ಲಾಟೀನು ಒರೆಸುವುದು ಮತ್ತು ಚಂದವಾಗಿ ದೇವರ ಪೂಜೆ ಮಾಡುವುದು: ಹಳ್ಳಿಯಿಂದ ಹೈಸ್ಕೂಲು ಶಿಕ್ಷಣಕ್ಕಾಗಿ ಹಾವೇರಿಯಂಥ ದೊಡ್ಡ ಊರು: ಆಮೇಲೆ ಕಾಲೇಜಿಗಾಗಿ ಧಾರವಾಡದಂಥ ಮತ್ತೂ ದೊಡ್ಡ ಊರು:: ಅನಂತರ ಹೈದ್ರಾಬಾದು, ಇಂಗ್ಲೆಂಡು …..

ನಾನು ಲೀಡ್ಸ್ ಯುನಿವರ್ಸಿಟಿಯಲ್ಲಿ ವ್ಯಾಸಂಗ ಮುಗಿಸಿ ಇಂಡಿಯಾಕ್ಕೆ ಮರಳಿದಾಗ ನನಗೆ ೩೪ ವರ್ಷ. ಅಲ್ಲಿಯರೆಗೂ ಕವನ, ಕತೆ, ನಾಟಕ ಬರೆದು. ‘ಸಂಕ್ರಮಣ’ದ ಒಬ್ಬ ಸಂಪಾದಕನೂ ಆಗಿ,, ಒಳ್ಳೆಯ ಬರಹಗಾರನೆಂದು ಪ್ರಖ್ಯಾತನೂ. ಕೆಟ್ಟ ನಾಲಿಗೆಯವನೆಂದು ಕುಖ್ಯಾತನೂ ಆಗಿದ್ದೆ… ಎಪ್ಪತ್ತರ ದಶಕದ ಪ್ರಾರಂಭದ ಅನೇಕ ಜನಪರ, ವಿಚಾರವಾದಿ ಚಳುವಳಿಗಳೊಂದಿಗೆ ನಾನು ನೇರವಾಗಿ ತೊಡಗಿಸಿಕೊಂಡಾಗ, ನನ್ನ ಈ ಒಡೆದು ಕಾಣುವ ‘ಬದಲಾವಣೇ’ಗೆ ನಾನು ಇಂಗ್ಲೆಂಡಿಗೆ ಹೋಗಿ ಬಂದದ್ದೇ ಕಾರಣವೆಂದು ಅನೇಕರು ತಿಳಿದಿದ್ದರೂ; ಈಗಲೂ ತಿಳಿದಿರಬಹುದು.

ವಾಸ್ತವ ಎಂಬುದು ನಮ್ಮ ತಿಳುವಳಿಕೆಗಿಂತ ಹೇಗೆ ಭಿನ್ನವಾಗಿರುತ್ತದೆ ಎಂಬುದಕ್ಕೆ ಈ ಉದಾಹರಣೆ. ನಮ್ಮಲ್ಲಿರುವಂತೆಯೇ ಮೂರ್ಖರು, ಮೂಢರೂ, ಮೂಲಭೂತವಾದಿಗಳೂ ಇಂಗ್ಲೆಂಡಿನಲೂ ಇದ್ದಾರೆ. ಬಡತನ, ನಿರುದ್ಯೋಗ, ಭ್ರಷ್ಟಾಚಾರ ಅಲ್ಲಿಯೂ ಇದೆ. ಅದೇನೂ ಬೇರೆ ಲೋಕವಲ್ಲ. ಗೆಳೆಯರೆದರು ಚೇಷ್ಟೆಯಿಂದ ಹೇಳೂತ್ತಿರುತ್ತೇನೆ: ‘ಅಲ್ಲಿಯೂ ಗಿಡಗಳು ನಮ್ಮಲ್ಲಿಯ ಹಾಗೇ ಬೆಳೆಯುತ್ತವೆ – ಅಂದರೆ ಕೆಳಗಿನಿಂದ ಮೇಲೆ!‘

ಇರಲಿ ಇಂಗ್ಲೆಂಡಿಗೆ ತೆರಳುವ ಮೊದಲೇ ನನಗೆ ಮದುವೆಯಾಗಿತ್ತು. ಮಕ್ಕಳೂ ಆಗಿದ್ದವೂ. (ಈ ವಾಕ್ಯವನ್ನು ಇದೇ ಕ್ರಮದಲ್ಲಿ ಓದಬೇಕೆಂದು ನನ್ನ ಸವಿನಯ ವಿನಂತಿ.) ಅಲ್ಲಿಂದ ಮರಳಿದಾಗ ಹೆಂಡತಿ ಹೇಳಿದಳು: ‘ನಾನು ಶಿರಸಿ ಮಾರಿಕಾಂಬಾ ದೇವಿಗೆ ಹರಕೆ ಹೊತ್ತೀನಿ. ಅಲ್ಲಿಗೆ ಹೋಗೋಣ.’

ಅವಳ ಹರಕೆ ಏನೆಂದರೆ: ನಾನು (ಅಂದರೆ ಅವಳ ಗಂಡ) ಸುರಳೀತ ಮರಳಿ ಬರಬೇಕು. ಹಾಗೆಂದರೆ ಏನು? ‘ಒಬ್ಬನೇ’ ಮರಳಿ ಬರುವುದು … ಹೌದು ನಾನು ‘ಸುರಳೀತ’ ಮರಳಿ ಬಂದಿದ್ದೆ.

ಹೆಂಡತಿಯ ನಿರ್ಧಾರ ಕೇಳಿ ನನಗೆ ಶಾಕ್ ಆಗಲಿಲ್ಲ. ದೇವರು, ದಿಂಡರು ಇತ್ಯಾದಿಗಳ ಬಗ್ಗೆ ವಿಶ್ವಾಸ ನಾನಿನ್ನೂ ಕಳೆದುಕೊಂಡಿರಲಿಲ್ಲ: ಅಂಥಾ ಅಗಾಧ ಭಕ್ತಿ – ಭಾವವೂ ಇರಲಿಲ್ಲ. ಅವಳು ಹರಕೆ ಸಲ್ಲಿಸುವಾಗ ಮಾರಮ್ಮನ ಬಗ್ಗೆ ವಿಶೇಷ ಭಾವನೆ ನನಗೆ ಮೂಡದಿದ್ದರೂ, ನನ್ನ ಧರ್ಮಪತ್ನಿಯ ಬಗ್ಗೆ, ಹಾಗೆಯೇ ಪುಣ್ಯಭೂಮಿಯಾದ ಭರತಖಂಡದ ಎಲ್ಲಾ ನಮೂನೆಯ ಪತಿವ್ರತೆಯರ ಬಗ್ಗೆ ಅಗಾಧವಾದ ಗೌರವ ಉಂಟಾಗತೊಡಗಿತ್ತು. (ವಿಚಿತ್ರವೆಂದರೆ, ಗುಡಿಯ ಆವರಣದಲ್ಲೇ ನಿಂತಿದ್ದ, ಪೈಲವಾನನಂತಿದ್ದ, ಕೋಣದ ಆಕೃತಿ ಮಾತ್ರ ಇನ್ನೂ ನನ್ನ ಮನೋಭಿತ್ತಿಯ ಮೇಲೆ ಮೂಡಿನಿಂತಿದೆ.)

*

ನನ್ನ ಕಾಲೇಜು ದಿನಗಳಿಂದಲೇ ನನ್ನ ಒಳಗೆ ಗರಿಗೆದರುತ್ತಿದ್ದ ಪ್ರವೃತ್ತಿ ವ್ಯಂಗ್ಯ – ವಿಡಂಬನೆಯದು. ಮೊದಲ ಸಂಕಲನ ‘ಬಾನುಲಿ’ (೧೯೬೦)ಯಲ್ಲಿಯೇ ಇಂಥ ಅನೇಕ ಕವನಗಳಿವೆ. ಪರೀಕ್ಷೆಗೆ, ಸ್ವಂತ ಅನುಭವದ ಒರೆಗಲ್ಲಿಗೆ, ಹಚ್ಚದೆ ನಾನು ಯಾವುದನ್ನೂ ಸ್ವೀಕರಿಸುವವನಲ್ಲ. ಎಷ್ಟು ಇನ್‌ವಾಲ್ವ್ ಆದರೂ (ಯಾವುದೇ ಅನುಭವಿರಲಿ) ‘ಹೊರಗಿನಿಂದ ನೋಡುವ ಕಣ್ಣು’ ಯಾವಾಗಲೂ ಕೆಲಸ ಮಾಡುತ್ತಿರುತ್ತದೆ. (ಬಾಳಿನ ಕಟಾಂಜನದಲ್ಲಿ ನಿಂತು ಸುತ್ತ ಮುತ್ತ ನೋಡಿದಾಗ ಏನೊ ಎಂತೊ ಗಾಳಿಯಲೆಗಳು ನನ್ನ ಒಳಹೊಕ್ಕು ಸುಳಿದಾಡಿ ಗುಂಗು ಹಿಡಿಸಿದಾಗ, ಆ ಗುಂಗೇ ಶಬ್ದಗಳ ರಂಗವಲ್ಲಿಯಾಗಿ ಹರಡಿದೆ, ಈ ಕವನಗಳಲ್ಲಿ.’ – ಇದು ‘ಬಾನುಲಿ’ಯಲ್ಲಿ ನಾನು ಬರೆದುಕೊಂಡ ಮಾತುಗಳು.) ವೈಜ್ಞಾನಿಕ ಮನೋಧರ್ಮ ಇದೇ ಅಲ್ಲವೇ? ಈ ಮನೋಧರ್ಮ ಹರಳುಗಟ್ಟುತ್ತಲೇ ಬರುತ್ತಿದೆ: ಮೊದಲು ಕೇವಲ ಸಾಹಿತ್ಯ ಸೃಷ್ಟಿಯಲ್ಲಿ. ಅರ್ಧ ಬದುಕಿನ ಪ್ರತಿಯೊಂದು ಆಯಾಮದಲ್ಲಿ.

ಯಾವಾಗಲೂ ಅರ್ಧ ಎಚ್ಚರ, ಅರ್ಧ ಕನಸಿನ ಹೈಬ್ರಿಡ್ ಲೋಕದಲ್ಲಿ ಸಂಚಾರಿ ಆಗಿರುವ ನನಗೆ ‘ಎಚ್ಚರ’ ದಲ್ಲಿ ಸ್ಟೋಟಿಸಲ್ಪಡುವ ಸತ್ಯಗಳಿಗಿಂತಲೂ ‘ಕನಸಿ’ನಲ್ಲಿ ನೋಡಿದರೆ ನನಗೆ ದೇವರು, ಪುನರ್ಜನ್ಮ, ಕರ್ಮ, ಅವತಾರ, ಪಾಪ – ಪುಣ್ಯ ಮುಂತಾದ ಪರಿಕಲ್ಪನೆಗಳಲ್ಲಿ. ‘ದೇವರು’ ಎಂಬ ಮೂಢ ನಂಬುಗೆಯೇ ಮೂಲವಾದ ಸ್ಥಾಪಿತ ಧರ್ಮ, ಜಾತಿ ಪದ್ದತಿಗಳಲ್ಲಿ ಯಾವ ನಂಬಿಗೆಯೇ ಉಳಿದಂತಿಲ್ಲ. ಮನುಷ್ಯ ಇತರ ಮನುಷ್ಯರೊಂದಿಗಷ್ಟೆ ಅಲ್ಲ ಪಶು – ಪಕ್ಷಿ ಸಸ್ಯ ಸಂಕುಲದೊಂದಿಗೆ, ಭೂಮಿಯೊಂದಿಗೆ ಪ್ರೀತಿಯಿಂದ ಬದುಕಬೇಕೆಂದು ನನ್ನ ಆಶಯ.

ಆಶಯ ಎಂದರೆ ಆಶಯ, ಅಷ್ಟೇ. ವಾಸ್ತವ ಎಂಬುದು ಇಷ್ಟು ಸರಳವಾಗಿಲ್ಲ. ಆಶಯಗಳ ಅರಿವಿನಲ್ಲಿ, ಅವುಗಳತ್ತ ವಾಸ್ತವವನ್ನು ಬದಲಿಸಲು ಪ್ರಯತ್ನಿಸುವುದು (ಅದೂ ನನ್ನ ಇತಿ – ಮಿತಿಯಲ್ಲಿ) ನಾನು ಮಾಡಬಹುದಾದ ಕೆಲಸ. ನಮ್ಮೆದುರಿಗಿನ ದುರಂತ ನಮ್ಮದೇ ‘ಸೃಷ್ಟಿ’ಯಾಗಿರುವುದರಿಂದ, ಅದನ್ನು ‘ಲಯ’ ಮಾಡುವುದೂ ಕೂಡ ನಮ್ಮದೇ ಕರ್ತವ್ಯವಾಗಿದೆ.

ಈ ವಾಸ್ತವದ ದುರಂತ ಎಂಥದು?

ಈ ದುರಂತ ಆಕಾಶದಿಂದ ಹಿಡಿದು ನನ್ನ ಅಂತರಂಗದವರೆಗೂ ಹಬ್ಬಿರುವಂಥದು. ಇಪ್ಪತ್ತನೇ ಶತಮಾನದ ಅಂಚಿನಲ್ಲಿರುವ ಇಂದಿನ ಜಗತ್ತಿನಲ್ಲಿ ವಿಜ್ಞಾನವು ಹೊಸ ಮೂಢ ನಂಬಿಕೆಗಳನ್ನು ಚಲಾವಣೆಗೆ ತರುತ್ತಿದೆ: ಮಂತ್ರಾಲಯದ ರಾಯರ ಪೋಟೋವನ್ನು ಈಗ ಇಲೆಕ್ಟ್ರಿಕ್ ಬಲ್ಬ್ ಗಳ ಮಾಲೆ ಅಲಂಕರಿಸುತ್ತದೆ. ವಿದೇಶಿ ಬಂಡವಾಳ ಸುರಿದರೆ ಮಾತ್ರ ನಮ್ಮ ದೇಶದ ಅಭಿವೃದ್ಧಿ ಸಾಧ್ಯ ಎಂಬ ಆರ್ಥಿಕ ಮೂಢನಂಬಿಕೆ ನಮ್ಮ ಆಳುವ ವರ್ಗವನ್ನು ಆಳುತ್ತಿದೆ. ನಮ್ಮ ದೇಶದ ಪ್ರಥಮ ಪ್ರಜೆಯಾದ ರಾಷ್ಟ್ರಪತಿ ತಿರುಪತಿಗೆ ಹೋಗಿ ತಲೆ ಬೋಳಿಸಿಕೊಂಡ ಸಾಯಿಬಾಬಾನಂಥ ಬೂದಿ ಭಂಡಾರಿಗನ ದರ್ಶನಕ್ಕೆ ಧಾವಿಸುತ್ತಾರೆ ಆಕಸ್ಮಾತ್ ನಮ್ಮ ದೇಶದಲ್ಲೂ ಅಟಂಬಾಂಬು ತಯಾರಿಸಲ್ಪಟ್ಟರೆ, ಅದನ್ನು ಸ್ಪೋಟಿಸುವ ಮುನ್ನ ತೆಂಗಿನಕಾಯಿ ಸ್ಪೋಟಿಸಲು ಮುಂದಾಗುವ ವಿಜ್ಞಾನಿಗಳು ನಮ್ಮಲ್ಲಿದ್ದಾರೆ.

ನಾನು ಕೆಲಸ ಮಾಡುತ್ತಿರುವ ವಿಶ್ವವಿದ್ಯಾಲಯದಲ್ಲಿ ಅನೇಕ ವರ್ಷಗಳ ಹಿಂದೆ ಫಿಜಿಕ್ಸ್ ಬಿಲ್ಡಿಂಗು ಉದ್ಘಾಟನೆಯಾಗುವುದು, ‘ರಾಹುಕಾಲ’ ದಿಂದಾಗಿ ಅರ್ಧ ತಾಸು ಮುಂದೂಡಲ್ಪಟ್ಟಿತ್ತು! ನಾನು ಸದ್ಯ ವಾಸವಾಗಿರು ಧಾರವಾಡದ ‘ಯುರೇಕಾ’ (ಆರ್ಕಿಮಿಡಿಸನ ನೆನಪಾಯಿತೇ?) ಕಾಲನಿಯಲ್ಲಿ ಇಟ್ಟ ಗಣಪ್ಪನನ್ನು ಮೊದಲ ರಾತ್ರಿಯೇ ಬಾವಿ ಕಾಣಿಸಬೇಕಾಯಿತು: ಕಾರಣ: ಈ ‘ವಿಘ್ನನಾಶಕ’ ನನ್ನು ರಾತ್ರಿಯ ಹೊತ್ತು ‘ಕಾಯು’ವುದು ಒಂದು ಪ್ರಾಬ್ಲಮ್ಮಾಗಿತ್ತು! … ದೇಶವಾಯಿತು. ಊರಾಯಿತು. ಓಣಿಯಾಯಿತು. ಮನೆಯ ಕತೆ ಗೊತ್ತೇ? ನಾನು ಆ ಕಾರ್ಯಕ್ರಮ ಈ ಕಾರ್ಯಕ್ರಮ ಅಂತ ಬೇರೆ ಊರಿಗೆ ಹೊರಟು ನಿಂತಾಗೊಮ್ಮೆ ನನ್ನ ಹೆಂಡತಿಯ ‘ಬಲಗಣ್ಣು’ ಹಾರತೊಡಗುತ್ತದೆ.

ದೇಹದೊಳಗಿನ ಏನೋ ಚಲನವಲನದಿಂದ ಹೀಗೆ ಆಗುತ್ತದೆ’ … ಅಂತ ನಾನು ವೈಜ್ಞಾನಿಕವಾಗಿ ಹೇಳುತ್ತೇನೆ. ‘ನನಗೆ ಒಮ್ಮೊಮ್ಮೆ ಎರಡೂ ಕಣ್ಣು ಹಾರುತ್ತವೆ.’ … ಎಂದು ಹೇಳುತ್ತೇನೆ. ಆದರೂ – ಅವಳು ನನ್ನ ಮಾತು ನಂಬಿದಂತಿಲ್ಲ.

ಇದು ವಾಸ್ತವ. ಈ ವೈರುಡ್ಯದ ಭಾಗವಾಗಿದ್ದರೂ ಅದನ್ನು ಎದುರುಗೊಳ್ಳುತ್ತ. ಅರಗಿಸಿಕೊಳ್ಳುತ್ತ. ಪ್ರತಿಮೆಗಳಲ್ಲಿ ಲಯದಲ್ಲಿ ಅದಕ್ಕೊಂದು ರೂಪು ಕೊಡಲು ಪ್ರಯತ್ನಿಸುತ್ತ. ಅನುಭವದ ಅನಂತ ಸಾಧ್ಯತೆಗಳನ್ನು ಅನುಭವಿಸುತ್ತ ಒಂದು ಸೃಜನಶೀಲ ಪ್ರಜ್ಞೆ ಯಾವಾಗಲೂ ಬೆಳೆಯುತ್ತಿರುತ್ತದೆ. ಅನ್ನಿಸಿದ್ದೆಲ್ಲ ಅಭಿಪ್ರಾಯಾವಾದಾಗ, ಶೋಧಿಸಿದ್ದೆಲ್ಲ ಸಿದ್ದಾಂತವಾದಾಗ ಅದು ಪ್ರಜ್ಞೆಯ ಅಂತವೂ ಆಗುತ್ತದೆ.

*

ವೈಜ್ಞಾನಿಕ ಮನೋಧರ್ಮಕ್ಕೂ ಸೃಷ್ಟಿಯ ಹಿಂದಿನ ಪ್ರೇರಣೆಗೂ ಬಹುಶಃ ಇಲ್ಲೊಂದು ದೊಡ್ಡ ವ್ಯತ್ಯಾಸ ನಮಗೆ ಕಂಡೀತು. ವಿಜ್ಞಾನಿ ಮತ್ತು ಕವಿ – ಇಬ್ಬರೂ ಶೋಧಕರೇ. ಅಂದರೆ ಶೋಧೀಸಿದ್ದನ್ನು ವಿಜ್ಞಾನಿ ಬಿಚ್ಚಿ ಹೇಳುತ್ತಾನೆ, ಸಾಲು ಸಾಲುಗಳಲ್ಲಿ. ಕವಿ ಮಾತ್ರ ಶೋಧಿಸಿದ್ದನ್ನು ಮುಚ್ಚಿ ಹೇಳುತ್ತಾನು – ಸಾಲು ಸಾಲುಗಳ ನಡುವೆ.

ಕವಿಯ ಸಾಲು ಸಾಲುಗಳ ನಡುವಿನ ಈ ಲೋಕ, ದೃಶ್ಯ, ಅದೃಶ್ಯಗಳ ನಡುವಿನ ಮಂಜುಲೋಕ: ಹಗಲು – ರಾತ್ರಿಗಳ ನಡುವಿನ ಸಂಜೆಗಾವಳದ ಲೋಕ: ಸಪ್ಪಳ – ಧ್ವನಿಗಳ ನಡುವಿನ ಲಯದ ಲೋಕ: ಬುವಿ – ಬಾನಿನ ನಡುವಿನ ಬಯಲು ಲೋಕ. ಮೊಗೆದೆಷ್ಟೂ ನೀರು ಜಿನುಗುವ ಒರತೆಯಂತೆ; ಧಾರವಾಡದ ಏಳು ಗುಡ್ಡಗಳ ಗರ್ಭದಲ್ಲಿ ಹರಿಯುತ್ತಿರುವ ಗುಪ್ತಗಾಮಿನಿ ಶಾಲ್ಮಲೆಯಂತೆ.

ಉಳಿದ ನದಿಗಳ ಹಾಗೆ
ನೀನಲ್ಲ ಶಲ್ಮಲೆ…..
ನಿನ್ನ ಕಂಡವರಿಲ್ಲ ನಿನ್ನೊಳಿಗೆ ಮೈಯ ತೊಳಕೊಂಡವರಿಲ್ಲ
ನಿನ್ನ ಉಂಡವರಿಲ್ಲ ನಿನ್ನೊಳಗೆ ಕಳಕೊಂಡವರಿಲ್ಲ
ಉಗಮವೆಲ್ಲೋ ನಿನ್ನದು ನಿನ್ನ ಸಂಗಮವೆಲ್ಲೋ
ನೀನು ಹರಿಯುತಿರುವುದು ಮಾತ್ರ ಒಂದೇ ಖರೆ.
ಬಹುಶಃ, ನಾನು ಬದುಕಬೇಕೆಂದಿರುವ ಬದುಕಿನಂತೆ
ನಾನು ಬರೆಯಬೇಕೆಂದಿರುವ ಕಾವ್ಯದಂತೆ

ಇದು ೧೯೯೦ ರಲ್ಲಿ ನಾನು ಬರೆದ ಕವಿತೆಯೊಂದರೆ ಸಾಲುಗಳು. ಈಗ ನೆನಪಾಗುತ್ತಿದೆ: ಮೂವತ್ತು ವರ್ಷಗಳ ಹಿಂದೆ, ಸೆಪ್ಟೆಂಬರ್ ೧೯೬೦ ರಲ್ಲಿ ಬರೆದ ‘ಬೇಡ’ ಕವನದ ಸಾಲುಗಳು:

ನನ್ನ ಹಾಡಿನ ಹಳ್ಳ ಎಲ್ಲಿ ಹೊರಳುವುದೇನೋ!

ಗಚ್ಚಿನ ಗಟಾರವನು ಕಟ್ಟಬೇಡ.
ಹಳ್ಳ ಹರಿಯುತ್ತಲೇ ಇದೆ.

 

೧೯೯೨