ಮಲಬಾರೊ, ಕಾಶ್ಮೀರೊ – ಎಲ್ಲವನ್ನೂ ಇಲ್ಲಿ
ತಂದಿಹನೂ ಆ ಸೃಷ್ಟಿಕರ್ತಾರನು.
ನಾನು ಎಲ್ಲಿದ್ದರೂ, ಎಂತಿದ್ದರೂ, ಆಹ.
ನೆನೆದವುದೆನ್ನ ಮನಂ ನಮ್ಮೂರನು….

ಆಗೀಗ ಯಾವುದೋ ಗುಂಗಿನಲ್ಲಿದ್ದಾಗ ನಾನು ೨೪ ವರ್ಷಗಳ ಹಿಂದೆ (೧೯೬೧ ರಲ್ಲಿ) ನಮ್ಮೂರಿನ ಬಗ್ಗೆ ಬರೆದ ಈ ಸಾಲುಗಳು ನನ್ನ ಒಳಗಿನ ಒಳಗಿನಿಂದಲೇ ಉದ್ಭವವಾದ ಹಾಗೆ ಚಿಮ್ಮಿ ನನ್ನ ಗುಂಗಿಗೆ ರಂಗೇರಿಸುತ್ತವೆ.

ಹೌದು. ಇಂಗ್ಲೆಂಡಿನಲ್ಲಿದ್ದಾಗ ಯಾರಾದರೂ `You are from?’ ಅಂದಾಗ ‘from India’ ಅನ್ನುತ್ತಿದ್ದೆ. ಇಂಡಿಯಾದ ಬೇರೆ ಪ್ರಾಂತಗಳಿಗೆ ಹೋದಾಗ ನಾನು ಕರ್ನಾಟಕದವ, ಬೆಂಗಳೂರು, ಪಂಗಳೂರಿನಲ್ಲಿ ನಾನು’ಧಾರವಾಢ’ ದವ. ಧಾರವಾಡದಲ್ಲಿ ನಾನು ‘ಹಾವೇರಿ ಕಡೆ’ ಯ ‘ಹತ್ತೀಮತ್ತೂರಿನವ’…. ಹೀಗೆ ನನ್ನ ‘ಉಗಮ’ದ ವಿಷಯದಲ್ಲಿ ಪ್ರತಿಯೊಂದು ಪ್ರಶ್ನೆಯೂ ನನ್ನನ್ನು ದೂಡಿ ದೂಡಿ ಕೊನೆಗೆ ನಮ್ಮೂರಿನ ದಂಡೆಗೇ ಒತ್ತುತ್ತದೆ. ಇಡೀ ಆಕಾಶವೇ ನನ್ನ ಕಣ್ಣಿನ ಸಾಮ್ರಾಜ್ಯವಾಗಿದ್ದರೂ ಕೊನೆಗೂ ನನ್ನ ನೆಲೆಯನ್ನು ಈ ನೆಲದ ಒಂದು ಬಿಂದುವಿನಲ್ಲೇ ಕಂಡುಕೊಳ್ಳುವದು ಅನಿವಾರ್ಯವೇನೋ.

ಇರಲಿ.

ಹುಬ್ಬಳ್ಳಿ ಸ್ಟೇಶನ್ನಿನಿಂದಲೋ ಧಾರವಾಡ ಸ್ಟೇಶನ್ನಿಂದಲೋ ನೀವೂ ಬೆಂಗಳೂರು ಕಡೆ ಹೊರಡುವ ಟ್ರೇನು ಹತ್ತಿದರೆ ಕುಂದಗೋಳ – ಸಂಶಿ – ಯಲವಿಗಿ ಸ್ಟೇಶನ್ನು ಒಂದೊಂದೇ ಹಿಂದೆ ಸರಿದ ಮೇಲೆ, ಕಿಟಕಿ ಹತ್ತಿರ ಕುಂತು ನೀವು ಎಡಕ್ಕೆ ತಾರ ಕಂಬಗಳ ತಂತಿಗಳಗುಂಟ ಲಯಬದ್ದವಾಗಿ ಕಣ್ಣು ತೂಗಿಸುತ್ತ ಮೇಲೆ ಕೆಳಗೆ ಹೊಯ್ಡಾಡುವ ಆಕಾಸದ ಅಂಚನ್ನು ನೋಡುತ್ತಿದ್ದರೆ ದೂರದಲ್ಲಿ ಒಮ್ಮೆಲೇ ಮಳೆಯ ಮೊದಲ ಹೊಡೆತಕ್ಕೆ ಪುದುಪುದು ಕೊಡವಿಕೊಂಡು ಅರಳುವ ನಾಯಿ ಕೊಡೆಗಳಂತೆ ತೆಂಗಿನ ಗಿಡಗಳ ಒಂದು ಸಮೂಹವೇ ಕಣ್ಣಿಗೆ ಹೊಡಿಯುತ್ತದೆ. ಅದೇ ನಮ್ಮೂರಿನ ತುರಾಯಿ, ನೀವು ಚಿವುಗಣ್ನು ಮಾಡಿ ನೋಡಿದರೆ ಆ ಗಿಡಗಳನ್ನು ಸುತ್ತ ಹೊಡೆದಂತೆ ಒಂದು ವೈಯಾರಿ ಹಾದಿ. ಅದೇ ನಮ್ಮೂರ ಕೆರೆಯ ದಂಡೆ.

*

ಹುಕ್ಕೇರಿ ಬಾಳಪ್ಪನನ್ನು ನೀವು ನೋಡಿರಬೇಕು. ಅಲ್ಲವೇ? ಮೈ ತುಂಬಿ ಮನ ತುಂಬಿ ಮೈ ತುಂಬಿ ಹಾಡುವ ಆ ಸಾವಿರ ಹಾಡಿನ ಸರದಾರ ನಾಳೆಗಳ ಪರಿವೆ ಇಲ್ಲದೆ ಇಂದಿನ ಕ್ಷಣಗಳನ್ನು ಬೊಗಸೆಯಲ್ಲಿ ತುಂಬಿ ತುಂಬಿಕೊಂಡು ಸುರಕೊಂಡ ಮನುಷ್ಯ. ನನ್ನ ಕೂಡ ಬಹಳ ಸಲಿಗೆ. ನಮ್ಮ ಅಪ್ಪನದೂ ಅವರಿಗೆ ಬಹಳ ಗೊತ್ತು ಒಮ್ಮೆ ಬಾಳಪ್ಪ ನನಗೆ ಹೇಳಿದ್ದ: ಏ ಗೌಡಾ. ನೀ ಅಂದ್ರ ಹತ್ತೀಮತ್ತೂರ ಕೆರಿ ನೋಡು.’

ನಮ್ಮೂರಿನ ಕೆರೆ ಈ ಕಲಾವಿದನ ಬಾಯಲ್ಲಿ ಸಂಕೇತವಾಗಿತ್ತು. ಅದು ತುಂಬಿದಾಗ ತನನನ; ಖಾಲಿಯಾದಾಗ ಭಣ ಭಣ. ಮಳೆಗಾಲದಲ್ಲಿ ಮೈಯೆಲ್ಲಾ ತುಂಬಿದಾಗ ಆಕಾಶದ ಮೋಡ – ಚಿಕ್ಕೆ – ಸೂರ್ಯ – ಚಂದ್ರಾಮರಿಗೆ ಮೇಕಪ್ ರೂಮಿನ ನಿಲುಗನ್ನಡಿಯಾಗುತ್ತದೆ. ಮಳೆ ಇಲ್ಲದಿದ್ದಾಗ ಸುತ್ತಲಿನ ತೋಟಗಳಿಗೆಲ್ಲ ಮೈಯ ಜೀವರಸವನ್ನು ಸುರಿದು, ಎಲುಬಿನ ಹಂದರವಾಗಿ,ಸುತ್ತಲಿನ ಹಳ್ಳಿಗಳಿಗೆ ಹೋಗುವ ಕಾಲುದಾರಿಗಳ ಸಂಗಮವಾಗುತ್ತದೆ.

ಕೋಡಿ ಬಸವನ ಗುಡಿಯೇ ನಮ್ಮೂರಿಗಿರುವ ಗಡಿ.
ಹಸಿರು ತೋಟದ ಸಾಲು ಆದರೀಚೆಗೆ.
ಎಡಬದಿಗೆ ತೆರೆದೆದೆಯ ಕೆರೆ: ನಡುವೆ ಬಳಕುತ್ತ
ನಡೆದಿರುವ ದಾರಿಗೋ ಬಲು ನಾಚಿಗೆ.

ನೆಲದಾಯ ಸವಿಗನಸು ತೆಂಗುಬೊಡ್ಡೆಯಗುಂಟ
ಏರಿ ಬಾನಂಗಳದಿ ಸ್ಟೋಟವಾಗಿ
ಚೆಲುವ ತೂರಿರುವಾಗ ಬಳೆ ಚೊಗಚಿಗಳೆಲ್ಲ
ಚೋಲಿ ಹೊಡಿಯುತ್ತಲಿವೆ ತಲೆಯ ತೂಗಿ.

ಹೌದು. ಒಂದು ಕಡೆ ಬಟಾ ಬಯಲಾದ ಕೆರೆ. ಇನ್ನೊಂದು ಕಡೆ ಈ ತೋಟ. ನಮ್ಮೂರು ಎಂದೊಡನೆ ನನಗೆ ಮೊದಲು ನೆನಪಾಗುವುದು ಈ ತೋಟ. ಈ ಕೆರೆ, ತೊಟಕ್ಕೆ ತಾಯಿಯಾಗಿ ಈ ಕೆರೆ. ಈ ಕೆರೆಯ ಕನಸಾಗಿ ಈ ತೋಟ. ಈ ತಾಯಿ ಈ ಮಗು ಇಬ್ಬರೂ ನನ್ನ ಒಡಲಲ್ಲಿ. ಅಥವಾ ನಾನೇ ಅವುಗಳ ಒಡಲಲ್ಲಿ ಇರಬಹುದೇ?

*

‘ನೆನಪು’ ಅನ್ನುವುದೇ ವಿಚಿತ್ರ. ಈ ಶಬ್ದ ಸಹಜವಾಗಿಯೇ ಹಳೆಯದನ್ನು ಆಗಿ ಹೋದದ್ದನ್ನು, ಭೂತವನ್ನು ಸೂಚಿಸುತ್ತದೆ. ಆದರೆ ನಮ್ಮೂರು ಭೂತವಲ್ಲ: ಅದು ಜೀವಂತ ವರ್ತಮಾನ. ಅಲ್ಲಿ ಈಗ ನನ್ನದು, ನಮ್ಮದು ಅನ್ನಬಹುದಾದ ಒಂದು ಮನೆ ಇಲ್ಲ: ಒಂದು ತುಣುಕು ನೆಲವಿಲ್ಲ. ಆದರೂ ಅದು ನಮ್ಮೂರೇ. ಊರು ಬಿಟ್ಟು ಅನೇಕ ವರ್ಷಗಳಾಗಿವೆ. ವರ್ಷಕ್ಕೋ ಎರಡು ವರ್ಷಕ್ಕೋ ಆ ಕಡೆ ಹೋದಾಗ ಅದು ಬದಲಾಗುತ್ತಲೇ ಇರುವುದನ್ನು ನಾನು ನೋಡುತ್ತೇನೆ. ಕಚ್ಚಾ ರಸ್ತೆ ಈಗ ಓಡಾಟಕ್ಕೆ ಯೋಗ್ಯವಾಗಿದೆ, ಬಸ್ಸೂ ಓಡಾಡುತ್ತಿವೆ. ಕರೆ ಇಬ್ಭಾಗವಾಗಿದೆ. ನಡುಪೇಟೆಯಲ್ಲಿಯೇ ಸೆರೇದ ಅಂಗಡಿಗಳು ಪ್ರತಿಷ್ಠಾಪನೆಗೊಂಡಿವೆ. ಹೈಸ್ಕೂಲು, ಕಾಲೇಜುಗಳು ಬಂದಿರುವುದರಿಂದ ಪ್ಯಾಂಟು, ಶರಟು, ಸಫಾರಿಗಳ ‘ಮಾಸ್ತರು’ಗಳೂ ಬಂದಿದ್ದಾರೆ. ಉಳ್ಳವರ ಮನೆಯೊಳಗಿಂದ ಸಿಡಿದು ನಿಂತ ಟಿ.ವಿ. ಆಂಟೇನಾಗಳು ಆಕಾಶದಲ್ಲಿ ಈಜಾಡುವ ಚೇಳುಗಳಂತೆ ಕಾಣುತ್ತವೆ. ಊರ ತುಂಬ ನಾವು ‘ಐ’. ನಾವು ‘ದಳ’ ಎಂದು ತಮ್ಮನ್ನು ಗುರುತಿಸಿಕೊಂಡು ಓಡಾಡುವ ನಿರ್ದಿಷ್ಟ ಗುಂಪುಗಳಾಗಿವೆ. ಆಗೀಗ ಬಾಬ್ರಿ ಮಸೀದಿ ಉರುಳಿದ ಶಬ್ದಗಳು ನಮ್ಮೂರಿನ ಹಾಳು ಗೋಡೆಗಳಿಗೆ ಬಡಿಯುವುದನ್ನೆ ಕೇಳಿದ್ದೇನೆ.

ಇದು ವಾಸ್ತವ. ವಾಸ್ತವ ಅಂದರೆ, ಏನು ಇದೆಯೋ ಏನು ಆಗುತ್ತಿದೆಯೋ ಅದು. ಆದರೆ ಸತ್ಯ ಅನ್ನುವುದು ಈ ವಾಸ್ತವ ನನ್ನ ಕಣ್ಣಲ್ಲಿ ಮೂಡಿಸಿದ ಬಿಂಬ ನಾನು ನಮ್ಮೂರಿನಲ್ಲಿ ಇದ್ದಾಗ ನಾನು ಅದರ ಭಾಗವಾಗಿ ಅದು ನನ್ನ ಭಾಗವಾಗಿ, ಆಗಿನ ವಾಸ್ತವ ನನ್ನ ಕಣ್ಣಲ್ಲಿ ಮೂಡಿಸಿದ ಬಿಂಬವೇ ನನ್ನ ಪಾಲಿನ ಸತ್ಯ. ಕಾಲದ ಸೆಳವಿನಲ್ಲಿ ನಮ್ಮೂರು ಎಷ್ಟೋ ಬದಲಾಗಿದ್ದರೂ ನನ್ನ ಒಳಗಣ್ಣಿಗೆ ಮಾತ್ರ ಆ ಮೊದಲ ಚಿತ್ರವೇ ಕಾಣುತ್ತದೆ – ಕವನದ ಮೊದಲ ಕರಡಿನಂತೆ; ಬದುಕಿನ ಮೊದಲ ಪ್ರೇಮದಂತೆ ಅದು ನನ್ನ ನೆನಪಿನ ಪದರುಗಳಲ್ಲಿ. ಪ್ರಜ್ಞೆಯ ವಿವಿಧ ಲಯಗಳಲ್ಲಿ ಸ್ಥಿರ ಚಿತ್ರದಂತೆ ನೆಲೆಗೊಂಡು, ಬಹುಶಃ ನನ್ನ ಅರಿವಿಗೂ ಮೀರಿದ ರೀತಿಯಲ್ಲಿ ನನ್ನ ವರ್ತಮಾನವನ್ನು, ಭವಿಷ್ಯವನ್ನು ನಿಯಂತ್ರಿಸುತ್ತಿರಬಹುದು. ಇರಲಿ.

*

ನಮ್ಮೂರಿನ ಆ ದಿನಗಳೆಂದರೆ ನನ್ನ ಬಾಲ್ಯದ ದಿನಗಳು. ನನ್ನ ಕನ್ನಡ ಶಾಲೆಯ ದಿನಗಳು (ಅಲ್ಲಿ ‘ನಾಕನೇ ಎತ್ತಾ’ ಮುಗಿಸಿದ ನಂತರ ನಾನು ಹೈಸ್ಕೂಲಿಗೆಂದು ಹಾವೇರಿಗೆ ಹೋದೆ.) ಹತ್ತೀಮತ್ತೂರು ನಮ್ಮ ಅವ್ವನ ಊರು. ನಾನು ಅಲ್ಲಿಯೇ ಹುಟ್ಟಿದ್ದು, ಬೆಳೆದದ್ದು, ಊರುಪೇಟೆಯ ನಡುವೆಯೇ ನಮ್ಮ ಮನೆ, ಮನೆ ಹಿಂದೆ ದೊಡ್ಡ ದೆವ್ವನಂಥ ಹಿತ್ತಲು, ಬಣವಿ, ತಿಪ್ಪೆ, ಹುಣಸೀ ಗಿಡಗಳಿಂದ ಕೂಡಿದ ಆ ಹಿತ್ತಲು ಇಂದಿಗೂ ಅನೇಕ ರಹಸ್ಯಗಳ ಗೂಢ ತಾಣವಾಗಿಯೇ ನನ್ನ ಮನಸ್ಸಿನಲ್ಲಿ ಗೂಡು ಕಟ್ಟಿದೆ. ಮನೆಗೆ ಸಮೀಪದಲ್ಲಿ ಮಲ್ಲಿಕಾರ್ಜುನ ದೇವರ ಗುಡಿ. ಈ ಕಡೆ ಊರ ಹೊಂಡ. ದಂಡೆಯ ಮೇಲೆ ಹೊನ್ನವ್ವನ ಗುಡಿ. ಮನೆಕಟ್ಟಿ, ಚಾವಡಿ, ಪ್ರತಿ ಬುಧವಾರ ನಮ್ಮ ಮನೆಯ ಮುಂದೆಯೇ ವಾರದ ಸಂತೆ …. ವಿಚಿತ್ರವೆನ್ನಿಸುತ್ತಿದೆ. ಈಗ ಹೋದರೆ ಇವೆಲ್ಲ ಸುತ್ತಾಡಿ ಬರಲು ಹತ್ತು ಮಿನಿಟೂ ಹತ್ತುವುದಿಲ್ಲ. ಆದರೆ ಆಗ ಮಾತ್ರ, ಅದೇ ವಿಶಾಲವಾದ ಅದ್ಭುತವಾದ ಆತ್ಮೀಯವಾದ ಜಗತ್ತು ಆಗಿತ್ತು. ಊರು ಅದೇ. ಪರಿಸರ ಅದೇ ನೋಡುವ ಕಣ್ಣೂ ಅದೇ. ಆದರೆ ನೋಟ ಮಾತ್ರ ಬೇರೆ.

*

ಸಣ್ಣವನಿದ್ದಾಗ ನಾನು ಬಹಳ ಸಾದಾ ಸೀದಾ ಸಮದೂ ಹುಡುಗ, ಏನೂ ಅರಿಯದ ಮಳ್ಳ ಸುಳೇಮಗ. (ಸಂಪನ್ ಫೆಲೋ – ಅಂತಾರಲ್ಲ, ಹಾಗೆ) ಅಂದಿದ್ದು ಅನಿಸಿಕೊಂಡು, ಬಡಿದರೆ ಬಡಿಸಿಕೊಂಡು. ಮನೆಗೆ ಬಂದು ಮೂಲೆ ಹಿಡಿದು ಕೂಡ್ರುವ ಅಳಬುರಕ. ಸಾಲೆಯಲ್ಲಿ ಮಾತ್ರ ಬಹಳ ಶ್ಯಾಣ್ಯಾ: ಪೈಲಾ ನಂಬರು ಕಡೆತನಕ ನನ್ನದೇ ಆಗಿತ್ತು – ಹಾವೇರಿ ಹೈಸ್ಕೂಲಿನಿಂದ ಮ್ಯಾಟ್ರಿಕ್ ಪಾಸಾಗುವವರೆಗೂ. (ಮ್ಯಾಟ್ರಿಕ್ಕಿನಲ್ಲಿ ಆಗ ಇಡೀ ಮುಂಬೈ ಬೋರ್ಡಿಗೇ ರ‍್ಯಾಂಕು ಪಡೆದವ ನಾನು.) ಕಾಲೇಜಿಗೆಂದು ಧಾರವಾಡಕ್ಕೆ ಬಂದ ನಂತರ, ಬಹುಶಃ ನಾನು ನನ್ನ ಬಾಲ್ಯದ ವಿರುದ್ದವೇ ಬಂಡಾಯವೆದ್ದಿರಬೇಕು. ಅದೆಲ್ಲಾ ಪುರಾಣ ಈಗ ಬೇಡ.

ಮನೆಯಲ್ಲಿ ಮುಖ್ಯವಾದ ಎರಡು ಕೆಲಸಗಳೆಂದರೆ: ದಿನಾಲು ದೇವರ ಪೂಜೆ ಮಾಡುವುದು ಮತ್ತು ಸಂಜೆ ಲಾಟಿನ ಪಾವು ಒರೆಸುವುದು. ಹಣೆಗೆ ಲಕ್ಷಣವಾಗಿ ವಿಭೂತಿ ಹಚ್ಚಿಕೊಂಡು, ಗಂಧದ ಬಟ್ಟು ಇಟ್ಟುಕೊಂಡು, ಜಗಲಿಯ ಮೇಲೆ ಮನೆದೇವರಾದ ಕೊಟ್ಟೂರು ಬಸವಣ್ಣನ ಅಧ್ಯಕ್ಷತೆಯಲ್ಲಿ ಆಸೀನರಾಗಿದ್ದ ನೂರಾ ಎಂಟು ಪೋಟೋಗಳಲ್ಲಿಯ ದೇವರುಗಳಿಗೆ ಅದೇ ಮೇಕಪ್ ಮಾಡಿ, ಧೂಪಾರತಿ ಬೆಳಗಿ ಮನೆ ತುಂಬ ಲೋಬಾನದ ಹೊಗೆ ಎಬ್ಬಿಸುತ್ತಿದ್ದ ನನ್ನ ಆಗಿನ ಮೂರ್ತಿಯನ್ನು ನೆನಿಸಿಕೊಂಡರೆ ಈಗಲೂ ಮೂಗಿನ ತುಂಬ ಆ ಕಂಪು ಅಡರುತ್ತದೆ. (ಅದೇ ವೇಗದಲ್ಲಿ ತರ್ಕಬದ್ಧವಾಗಿ ನನ್ನ ಬದುಕು ಸಾಗಿದ್ದರೆ ಇಷ್ಟೊತ್ತಿಗಾಗಲೇ ನಾನು ಹುಬ್ಬಳ್ಳಿಯ ಥ್ರೀ ಥೌಜಂಡ್ ಜಗದ್ಗುರುವಿಗೆ ಎದುರಾಗಿ ಸಿಕ್ಸ್ ಥೌಜಂಡ್ ಜಗದ್ಗುರುವಾಗಿ ಜಗತ್ ಪ್ರಸಿದ್ಧನಾಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆಯುತ್ತಿದ್ದೆನೇನೋ. ಅಂಥ ಭಾಗ್ಯ ಈ ಭುವನಕ್ಕೆ ಇರಲಿಲ್ಲ ಎಂದು ಕಾಣಿಸುತ್ತದೆ).

ಸಂಜೆಯ ಮುಂದೆ ಮನೆಯಲ್ಲಿಯ ಎಲ್ಲಾ ಗುಬ್ಬೀ ಚಿಮಣಿ, ಲ್ಯಾಂಪು, ಲಾಟನು, ಸುತ್ತಲೂ ಹರವಿಕೊಂಡು ಬೂದಿ ಹಚ್ಚಿ ಗ್ಲಾಸು ಒರೆಸಿ ಲಕಲಕ ಹೊಳೆಯುವಂತೆ ಮಾಡುತ್ತಿದ್ದೆ. ಮಣ್ಣೆತ್ತಿನ ಅಮಾಸಿ ಮುಂದೆ ಚೆಂದಾಗಿ ಮಣ್ಣಿನ ಬಸವಣ್ಣನನ್ನು ಮಾಡುತ್ತಿದ್ದೆ. ಪೇಪರುಗಳಲ್ಲಿ ಬಂದ ಚಂದ ಚಂದದ ಚಿತ್ರಗಳನ್ನು ಕತ್ತರಿಸಿ ಗೋಡೆಗೆ ಅಂಟಿಸುತ್ತಿದ್ದೆ.

ಆವಾಗಿನ ಶಾಲೆಯ ಬದುಕೆಂದರೆ ಬೇರೆಯೇ. ಮುಂಜಾನೆ ನಾವೇ ಹೋಗಿ ಕಸ ಹೊಡೆಯಬೇಕು. ನೀರು ಚಿಮಕಿಸಬೇಕು. ವರ್ಷಕ್ಕೊಮ್ಮೆ ಶಾಲೆಯ ಗೋಡೆಗಳಿಗೆ ಸುಣ್ಣ, ಕೆಮ್ಮಣ್ಣ ಬಡಿಯುವ ಕಾಯಕ ನಮ್ಮದೇ. ಒಮ್ಮೆ ಈ ಕೆಲಸ ಮಾಡಿ ನಾವೆಲ್ಲ ಕೆರೆಗೆ ಹೋದೆವು ಈಜಾಡಲು. ದಂಡೆಗೆ ಬಂದು ನೋಡಿದರೆ ನಮ್ಮ ಅರಿವೆಗಳೇ ಮಾಯ! ಅದೇ ಆಕಾರದಲ್ಲಿ ಬರೇಬತ್ತಲ ಮತ್ತೇ ಸಾಲೆಯ ಕಡೆ ನಾವೆಲ್ಲ ಸಾಮೂಹಿಕವಾಗಿ ಓಡಿದ್ದು ಇನ್ನೂ ನೆನಪಿದೆ.

ಅಮವಾಸ್ಯೆಯ ರಾತ್ರಿ ಬೆಳತನಕ ಜಾಗರಣೆ. ಮಲ್ಲಿಕಾರ್ಜುನ ದೇವರ ಗುಡಿಯಲ್ಲಿ ಭಜನೆ. ಭಜನೆಗಿಂತ ಹೆಚ್ಚು ಪ್ರಖರವಾಗಿ ನೆನಪಿರುವುದು – ತಾಸಿಗೊಮ್ಮೆ ತಪ್ಪದೇ ಸಪ್ಲಾಯ್ ಆಗುತ್ತಿದ್ದ ತೋಯ್ಸಿದ ಮಂಡಕ್ಕಿ. ಮಂಡಕ್ಕಿಗಾಗಿ ಭಜನೆಯೋ ಭಜನೆಗಾಗಿ ಮಂಡಕ್ಕಿಯೋ – ಇವತ್ತಿಗೂ ಲೆಕ್ಕ ಬಗೆಹರಿದಿಲ್ಲ ನನ್ನ ಪಾಲಿಗೆ.

*

ನಮ್ಮ ಮನೆಯಲ್ಲಿ ಕಾಂಗ್ರೆಸ್ ವಾತಾವರಣ. ನಮ್ಮ ಅಪ್ಪ ಒಬ್ಬ ಕಾಂಗ್ರೆಸ್ ಮನುಷ್ಯ. ಹಳ್ಳಿಕೇರಿ ಗುದ್ಲೆಪ್ಪ. ಕೆ. ಎಫ಼್. ಪಾಟೀಲ, ಮೈಲಾರ ಮಹದೇವಪ್ಪ. ಸರದಾರ ವೀರನಗೌಡ ಮುಂತಾದವರ ಸಂಗಾತಿ. ಅವರೆಲ್ಲ ನಮ್ಮ ಅಪ್ಪನಿಗೆ ಮಾಸ್ತರ. ಮಾಸ್ತರ ಅನ್ನುತ್ತಿದ್ದರು. ಕರ್ನಾಟಕ ಕಾಲೇಜಿನ ವಿದ್ಯಾರ್ಥಿಯಾಗಿ (೧೯೨೦ ರ ಸುಮಾರಿಗೆ) ಧಾರವಾಡದ ಮುರುಘಾಮಠದ ಬೋರ್ಡಿಂಗಿನಲ್ಲಿದ್ದಾಗ ಯಾವುದೋ ಕಾರಣಕ್ಕೆ ಬೋರ್ಡಿಂಗ್ ಮ್ಯಾನೆಜರ್‌ನೊಂದಿಗೆ ಜಗಳವಾಡಿ ಹೊರಗೆ ಹಾಕಿಸಿಕೊಂಡು ಹೋದ ನಮ್ಮಪ್ಪ ಮತ್ತೆ ಕಾಲೇಜಿಗೆ ದರ್ಶನ ಕೊಡಲಿಲ್ಲ. ಸ್ವಾತಂತ್ಯ್ರ ಚಳುವಳಿಯ ದಿನ ಅವು. ಮುಂದೆ ಪ್ರೈವೇಟ್ ಇಂಗ್ಲೀಷ್ ಶಾಲೆ ಹಾವೇರಿಯಲ್ಲಿ ತೆಗೆದರು. ನನಗೆ ಮೊಟ್ಟಮೊದಲ ಗುರು ನಮ್ಮಪ್ಪ – ಕನ್ನಡದಲ್ಲಿ, ಇಂಗ್ಲೀಷಿನಲ್ಲಿ, ಜಗಳಗಂಟತನದಲ್ಲಿ.

ನಾನು ತೀರ ಸಣ್ಣವ ಆಗ, ನಲವತ್ತೆರಡರ ಚಳುವಳಿಯ ಕಾಲ, ಇವತ್ತಿಗೂ ಆ ಬೆಂಕಿ ನನ್ನ ಕಣ್ಣ ಮುಂದೆ ಧಗಧಗ ಉರಿಯುತ್ತದೆ.

ಚಳುವಳಿಗಾರರು ನಮ್ಮೂರ ಚಾವಡಿ ಸುಟ್ಟಿದ್ದರು, ಮೈಲಾರ ಮಹದೇವಪ್ಪನ ಮಂದಿ. ನಾನು ಮನೆಯಲ್ಲಿ ಯಾವುದಕ್ಕೋ ಚೀರಾಡುತ್ತಿದ್ದೆ. – ‘ಅಪ್ಪನ ಹತ್ರ ಕಳಿಸು’ ಅಂತ. ಅಪ್ಪ ನೋಡಿದರೆ ಮಲ್ಲಿಕಾರ್ಜುನ ಗುಡಿಯಲ್ಲಿ. ಅವ್ವ ಸಿಟ್ಟಿಗೆದ್ದು ನನಗೆ ಬರೆ ಕೊಟ್ಟಿದ್ದಳು. ಇದೊಂದು ದೃಶ್ಯ .. ಇನ್ನೊಂದು ದೃಶ್ಯ: ಬೆಳದಿಂಗಳ ಆ ರಾತ್ರಿಯಲ್ಲಿ ನನ್ನನ್ನು ಯಾರೋ ಬಗಲಲ್ಲಿ ಎತ್ತಿಕೊಂಡಿದ್ದರು. ರಸ್ತೆಯ ತುಂಬ ಚಳವಳಿಗಾರರ ಕರಾಳ ನೆರಳುಗಳು. ಆ ಬೆಳದಿಂಗಳು, ಆ ಬೆಂಕಿ, ಆ ನೆರಳು …. ಅವ್ವ ಕೊಟ್ಟ ಆ ಬರೆ: ಚಲೇಜಾವ್ ಚಳುವಳಿಯ ನೆನಪುಗಳಿವು ನನ್ನ ಪಾಲಿಗೆ.

ಮಹಾತ್ಮ ಗಾಂಧಿ ಖೂನಿ ಆದ ದಿನ. ನನಗೆ ಆಗ ಒಂಬತ್ತು ವರ್ಷ. ಮನೆಮನೆಗಳಲ್ಲಿ ಗಾಂಧೀ – ನೆಹರು – ಸುಭಾಸರ ಪೋಟೋಗಳು ಆಗ, ಇಡೀ ಊರಿಗೆ ಊರೇ ಆಳುತ್ತಿತ್ತು. ಎರಡು ಸೈಕಲ್ ಜೋಡಿಸಿ, ರಥದ ಹಾಗೆ ಮಾಡಿ, ಅದರ ಮೇಲೆ ಗಾಂಧೀ ಪೋಟೋ ಇಟ್ಟು ಊರ ತುಂಬ ಮೆರವಣಿಗೆ ಮಾಡಿದೆವು. ಆ ಗಾಂಧೀ ನನಗೆ ಒಂದು ನೆನಪಾಗಿ, ಒಂದು ಸಂಕೇತವಾಗಿ, ಒಂದು ಕನ್ನಡಿಯಾಗಿ ಒಂದು ಗಾಳಿಯಾಗಿ ಬದುಕಿನುದ್ದಕ್ಕೂ ಕಾಡುತ್ತಲೇ ಇದ್ದಾನೆ. … ನನಗೆ ಇಂಥ ‘ಕಾಡಾಟ’ ಗಳು ಬಹಳ.

*

ನಮ್ಮೂರು ತೋಟಗಳ ಊರು ಶಾವಂತಿಗಿ ಹೂವು. ವೀಳೆದೆಲೆಗಾಗಿ ಪ್ರಖ್ಯಾತ ಒಂದು ಕಾಲಕ್ಕೆ ನಮ್ಮೂರಿನ ಎಲೆಗಳು ಕರಾಚಿಯ ತನಕವೂ ಹೋಗುತ್ತಿದ್ದವಂತೆ. ಇರುವ ಅನೇಕ ಬಾವಿಗಳಲ್ಲಿ ಕೆಲವು ಮಾತ್ರ ಈಸುವ ಬಾವಿಗಳು. ನನ್ನ ಸೋದರಮಾವನ – (ಗದಿಗೆಣ್ಣ ಅಂತೆಲೇ ನಾವೆಲ್ಲ ಕರೆಯುತ್ತಿದ್ದೆವು) – ಕಿರುಬಟ್ಟು ಹಿಡಕೊಂಡು, ಬಗಲಲ್ಲಿ ಟಾವೆಲ್ಲು ಚಡ್ಡಿ ಒಳಂಗಿ ಸಬಕಾರ ಸಿಗಿಸಿಕೊಂಡು ಈಸಲು ಹೋಗುವುದೇ ಒಂದು ಸಂಭ್ರಮ ಗಡಗಡೆಯ ಮೇಲೆ ಹತ್ತಿ ಬಾವಿಯೊಳಗೆ ದುಡುಂ ಅಂತ ಜಿಗಿದು, ನೀರಿನ ತಳದಲ್ಲಿ ತೋಳು ಬೀಸುತ್ತ ಹಾವಿನಂತೆ ಹರಿದಾಡಿ, ಮತ್ತೆ ಮೇಲೆ ಬಂದಾಗ ಪಾತಾಳ ಲೋಕವನ್ನೇ ಜಾಲಾಡಿ ಬಂದಷ್ಟು ಖುಶಿ ಮೊದಮೊದಲ ಈಸು ಕಲಿತಿದ್ದು ನಡುಮಟ ನೀರಿದ್ದ ಕೆರೆಯಲ್ಲಿಯೇ ನಡುವೆ ಇದ್ದ ಮಾಸ್ತಿಕಲ್ಲು ಮುಟ್ಟಿ ಬಂದರೆ ಗೆದ್ದ ಹಾಗೆಯೇ ಯಾವ ಮಹಾಸತಿ ಈ ಕೆರೆಗೆ ಬಿದ್ದು ಬಲಿಯಾಗಿದ್ದಳೋ ತಿಳಿಯದು.

ಈಸುವ ಬಾವಿಯಲ್ಲಿ ಪೀರಸಾಬನ ಬಾವಿ ಬಹಳ ಜನಪ್ರಿಯ ಬಾವಿ. ಒಮ್ಮೆ ಇಳಿಜಾರಾದ ಬಂಡಿಯ ಮೇಲೆ ಟಾವೆಲ್ ಚಡ್ಡಿ ಬನಿಯನ್ನು ಮಡಿಚಿಟ್ಟು ಅದರ ಮೇಲೆ ಕೊರಳಲ್ಲಿದ್ದ ಸಣ್ಣ ಬೆಳ್ಳಿಯ ಲಿಂಗದಕಾಯಿ ಇಟ್ಟು ಬಾವಿಗಿಳಿದೆ. ಈಸಾಡಿ ಬಂದ ನಂತರ ಅವಸರವಸರದಲ್ಲಿ ಟಾವೆಲ್ ಎತ್ತಿಕೊಂಡಾಗ ಆಸರೆ ತಪ್ಪಿದ ಲಿಂಗದಕಾಯಿ ಬುಡುಬುಡು ಅಂತ ಊರುಳಿ ಬಾವಿಗೆ ಬಿತ್ತು. ಸಂಗತಿ ಗೊತ್ತಾದ ನಮ್ಮ ಮಾವ ಸಿಟ್ಟಿಗೆದ್ದು ಬೈದ. ಹೊಡೆದ, ಬೈದರೆ ಹೊಡೆದರೆ ಹೋದ ಲಿಂಗಪ್ಪ ಮರಳಿ ಬರುತ್ತಾನೆಯೇ? …. ಸರಿ, ಮಾವ ಬಾವಿಯಲ್ಲಿ ಮುಳುಗು ಹಾಕಿದ. ತಳವನ್ನೆಲ್ಲ ಜಾಲಾಡಿದ. ಅವನು ಮೇಲೆ ಬಂದನೇ ಹೊರತು ಲಿಂಗಪ್ಪ ಮಾತ್ರ ಮತ್ತೇ ಈ ಜಗತ್ತಿಗೆ ಮುಖ ನೋಡಲಿಲ್ಲ.

ಇಷ್ಟು ವರ್ಷಗಳ ನಂತರವೂ ಆ ಲಿಂಗದಕಾಯಿ ಇನ್ನೂ ಅಲ್ಲಿಯೇ ಇರಬೇಕು, ಇನ್ನೂ ಭೂಮಿಯ ಆಳಕ್ಕೆ ಇಳಿದಿರಬೇಕು. ನನ್ನೊಂದಿಗೆ ಸೆಟಗೊಂಡು ಹೋದ ಲಿಂಗಪ್ಪ ನನ್ನನ್ನು ನಾಸ್ತಿಕನನ್ನಾಗಿ ಮಾಡಿದ ಮೊದಲ ಮಹಾನುಭಾವ. ಅವನು ಹೋಗಲಿ. ಉಳಿದ ಯಾವ ದೇವರು ದಿಂಡರು ಕೂಡ ನನ್ನ ಬಳಿ ಸುಳಿಯದಂತಾಗಿದೆ ಈಗ.

ತೋಟದೊಳಗಡೆ ಹುಚ್ಚುಗಾಳಿ ಸಿಳ್ಳನ್ನು ಹಾಕಿ
ತುಂಬ ಹೂಗಂಧ ಬಳಿದುಕೊಂಡು
ಬಂದು ಕೈ ಕುಲುಕಿರಲು ನೀವು ಮೈ ಮರೆಯುವಿರಿ
ಗಂಧರ್ವ ಲೋಕದಾ ಕನಸು ಕಂಡು ……

ಆ ಗಂಧರ್ವ ಲೋಕದ ಕನಸು ನಿಮ್ಮಲ್ಲಿ ತುಳುಕಬೇಕೆಂದರೆ ನಮ್ಮೂರ ಕರೆದಂಡೆಗುಂಟ ಸಂಜೆಯ ಮುಂದೆ ವಾಕಿಂಗು ಹೋಗಬೇಕು. ನಿಮ್ಮೊಂದಿಗೆ ಗೆಳೆಯರಿದ್ದರೆ ವರ್ತಮಾನ ಪತ್ರದ ಸುದ್ದಿಗಳೆಲ್ಲ ಚರ್ಚೆಯಾಗುವುದು ಆ ವೇಳೆಗೆ ಮಾತ್ರ …. ನಾನು ಮಾತ್ರ ಒಬ್ಬಂಟಿ: ಈಗಲೂ ಕೆರೆಯ ತುಂಬಿನ ಮೇಲೆ ಕುಂತು ನೀರಲ್ಲಿ ಕಾಲಾಡಿಸುತ್ತ ತೆರೆಯ ವರ್ತುಲಗಳ ಗುಂಟ ಅಂತರಂಗ ಬಿಚ್ಚುವಾಗ ದೂರ ಕ್ಷಿತಿಜದ ಗೆರೆಯಗುಂಟ ಇದ್ದ ರೇಲ್ವೆ ಹಳಿಗಳ ಮೇಲೆ ಟ್ರೇನು ಹರಿದು ಹೋಗುವ ನೋಟ. ದೂರದಿಂದಲೇ ಡಬ್ಬಿಗಳನ್ನು ಒಂದೊಂದಾಗಿ ಎಣಿಸುತ್ತಿರುವಾಗಲೇ ತಾನೇ ಉಗುಳಿದ ಹೊಗೆಯ ಕಪ್ಪಿನಲ್ಲಿ ಟ್ರೇನು ಮಾಯವಾಗುವ ಮಾಟ. ನನಗೆ ಆವಾಗಲೇ ಯಾವುದೋ ಅಗೋಚರ ಲೋಕದ ಕನಸನ್ನು ಮೂಡಿಸತೊಡಗಿತ್ತೇನೋ. ಮಂಜು ಮಂಜಾದ ಕನಸು – ಹಡಗುಗಳನ್ನೇರಿ ದೂರ ದೂರ ದೇಶಗಳನ್ನೆಲ್ಲ ಸುತ್ತಾಡಿ ಬರುತ್ತಿದ್ದೆ. ವಾಕಿಂಗು ಮುಗಿಸಿ ಮರಳುವಾಗ ಅದೇ ಧ್ಯಾನ …

ಹಕ್ಕಿಗಳ ಬೆನ್ನೇರಿ ಸಾಗಿ ಬರುವುದು ಇರುಳು
ಅಲ್ಲಲ್ಲಿ ಮೆಲ್ಲಗೇ ಮೌನ ಚೆಲ್ಲಿ.
ನಮ್ಮೂರ ಸಂಜೆಯ ಕಲ್ಲು ಸಕ್ಕರೆ ನೆನಪು
ಕರಗುವುದು ನಿಮ್ಮದೆಯ ಹಾಲಿನಲ್ಲಿ….

ಅದೇ ಸಂಜೆ …. ಅದೇ ಟ್ರೇನು … ಅದೇ ಕೂಕೂ …. ಅದೇ ಕಪ್ಪು ಹೊಗೆ ……

ಈಗಲೂ ಸರೋರಾತ್ರಿಯ ಮೌನದಲ್ಲಿ ಈ ಟ್ರೇನುಗಳ ಕೂಕೂ ನನ್ನನ್ನು ಬಾಲ್ಯದ ಆ ಮುಂಜಾವಿಗೆ ಕರೆದೊಯ್ಯುವಂತೆಯೇ ರಾತ್ರಿಯ ಬೆಳದಿಂಗಳಿಗೂ ಕರೆದೊಯ್ಯುತ್ತದೆ …. ಕಾಣದ ಯಾವುದೋ ಖುಶಿಯ ನಾಡಿಗೆ ಕರೆದೊಯ್ಯುವ ಹನಿಮೂನು ಹಡಗಿನಂತೆ …..

*

ಈ ನೆನಪುಗಳೇ ಹೀಗೆ … ಒಂದರ ಹೊಟ್ಟೆಯೊಳಗಿನಿಂದ ಒಂದು ಒಂದರ ಹೊಟ್ಟೆಯೊಳಗಿನಿಂದ ಒಂದು. ಇವಕ್ಕೆ ಕೊನೆಯಿಲ್ಲ. ಕೊನೆ ಇರಬೇಕಾಗಿಯೂ ಇಲ್ಲ. ನಮ್ಮೂರ ನಟ್ಟನಡುವೆಯೇ ದ್ಯಾಮವ್ವನ ಗುಡಿ ಇದೆ. ಅಲ್ಲಿಂದ ಆ ಕಡೆ ಓಣಿಗೆ ಹೋಗಲು ಒಂದು ಚೌಕು ಚೌಕು ಆಕಾರದ ಹಾದಿ. ಎಡಕ್ಕೆ ಹೊರಳಿ ಬಲಕ್ಕೆ ಹೊರಳಿ ಮತ್ತೆ ಬಲಕ್ಕೋ ಎಡಕ್ಕೋ ಹೊರಳಿ ಆ ಓಣಿ ಸೇರಬೇಕು. ಕೈಲಾಸಪಟದಂಥ ಆ ಹಾದಿಯಲ್ಲಿ ಹಿಂದೆ ಮುಂದೆ ನೋಡುತ್ತ ನಾನು ಆಗಾಗ ಹೋಗುತ್ತಿದ್ದೆ – ಒಬ್ಬನೇ.

ಆ ಹಾದಿ ನನ್ನ ಪ್ರಜ್ಞೆಯ ಅಂಕು ಡೊಂಕಿನ ಹಾಗೆ ಇನ್ನೂ ನೆನಪಿನಲ್ಲಿದೆ. ಧಾರವಾಡದ ಅಡ್ಡತಿಡ್ಡ ಏರಿಳಿವುಗಳನ್ನು ತುಳಿಯುವಾಗಲೂ ಅದೇ ಅನುಭವ ನನಗೆ.

*

ನಮ್ಮೂರಿನ ಕೆರೆ ತನ್ನೆಲ್ಲ ನೀರನ್ನು ಬತ್ತಿಸಿಗೊಂಡು ಮುಪ್ಪಾನು ಮುದುಕನ ಮುಖದ ಗೆರೆಗಳಂತೆ ಬೇಸಿಗೆಯಲ್ಲಿ ಬಾನಿಗೆದುರಾಗಿ ಬಿದ್ದುಕೊಂಡರೂ ಮಗ್ಗುಲಿನ ತೋಟಗಳು ಹಸಿರು ಮುರಿಯುತ್ತ ವೈಯಾರದಿಂದ ಕುಣಿಯುತ್ತವೆ. ಚೊಗಚಿ ಗಿಡಗಳ ಟೊಂಗೆ ಟೊಂಗೆಗಳ ತುದಿಯಲ್ಲಿ ರಕ್ತಗೆಂಪಿನ ಹೂಗಳು ಗೊಂಡೆ ಗೊಂಡೆಯಾಗಿ ಗಾಳಿಯಲ್ಲಿ ಹೊಯ್ದಾಡುತ್ತವೆ.

ಕೆರೆ ಹಾಗೂ ತೋಟ – ಎರಡು ಒಂದೇ ಭೂಮಿಯ ಭಾಗಗಳು. ಆದರೂ ಒಂದು ಭಾಗ ಇನ್ನೊಂದರ ಜೀವ ಯಾಕೆ ಹಿಂಡುತ್ತದೆಯೋ – ಬಲ್ಲವರಾರು?

 

-೧೯೯೫