ನವು ಕತೆ – ಗೀತೆ, ಕವನ – ಗಿವನ, ಕಾದಂಬರಿ – ಪಾದಂಬರಿ ಬರೆದು. ಅಲ್ಲಲ್ಲಿ ಪ್ರಕಟಿಸಿ. ಸುದ್ದಿ ಮಾಧ್ಯಮಗಳಲ್ಲಿ ಅಷ್ಟಿಷ್ಟು ಹೆಸರು – ಪಸರು ಮಾಡಿದ ಸಾಹಿತಿಗಳಾಗಿದ್ದರೆ. ಅಲ್ಲಲ್ಲಿ ಅಖಿಲ ಭಾರತ ಮಟ್ಟದ ಅಥವಾ ಅಖಿಲ ತಾಲೂಕಾ ಮಟ್ಟದ ಸಾಹಿತ್ಯ ಸಮ್ಮೇಳನಗಳಿಗೆ ಹೋಗಿದ್ದರೆ ನಿಮಗೆ ಆಗಬಹುದಾದ ಅಥವಾ ಈಗಲೇ ಆಗಿರಬಹುದಾದ ರೋಮಾಂಚಕ ಅನುಭವವೆಂದರೆ, ಅಲ್ಲಲ್ಲಿ ಪ್ರಿಂಟಾಗಿರಬಹುದಾದ ನಿಮ್ಮ ಪೋಟೋ ಮೂಲಕ ಅಥವಾ ನಿಮ್ಮನ್ನು ಈಗಾಗಲೇ ನೋಡಿದವರ ಕಣ್ಣು – ಕ್ಯಾಮಾರಾ ಮೂಲಕ ನಿಮ್ಮನ್ನು ಪತ್ತೆ ಹಚ್ಚಿ ನಿಮ್ಮ ಆಟೋಗ್ರಾಫ್‌ಗಾಗಿ ಕಾತರದ ಕಣ್ಣುಗಳಿಂದ ಕಾದು ನಿಂತಿರುವ ನಿಮ್ಮ ಅಭಿಮಾನಿಗಳು ನಿಮ್ಮ ಬಳಿಗೆ ಭಯ – ಭಕ್ತಿಯಿಂದ ನಿಲ್ಲುವುದು.

ಸರ್, ತಾವು …. ಅವರು ಅಲ್ಲವೇ?

ಅಲ್ಲ – ಎಂದು ಹೇಳುವ ಪ್ರಶ್ನೆಯೇ ಇಲ್ಲ ನೀವು ಶ್ರೀಮದ್…. ಎಂದು ಹೇಳುತ್ತಾರಲ್ಲ ಅಂಥ ಗಾಂಭೀರ್ಯವನ್ನುಳಿಸಿಕೊಂಡೂ ಮಂದವಾದ… ಅನ್ನುತ್ತಾರಲ್ಲ ಅಂಥ ಮುಗುಳು ನಗೆಯೊಂದನ್ನು ಬೀರಿ ಆ ಅಭಿಮಾನಿಗಳ ಜೊತೆ ಒಂದೆರಡು ಮಾತಾಡುತ್ತೀರಿ. ಪೆನ್ನು ತೆಗೆದು ಅಥವಾ ಅವರದೇ ಬಾಲ್ ಪೆನ್ನು ಇಸಗೊಂಡು ನಿಮ್ಮ ಹಸ್ತಾಕ್ಷರ ನೀಡುವ ಮುನ್ನ …..

“ಸರ್ ಒಂದೆರಡು ಹಿತವಚನಾ ಬರೀರಿ.”

” ಹಿತವಚನಾ ಅಂದ್ರ?”

” ಅಂದ್ರ ಏನಾದರೂ ಸಂದೇಶ”

” ಸಂದೇಶ? ”

” ಅಂದ್ರ ನಮಗ ಮಾರ್ಗದರ್ಶನಾ ಆಗೋ ಹಂಗ . ”

ಈ ‘ಮಾರ್ಗದರ್ಶನ’ ಎಂಬ ಶಬ್ದ ಕೇಳಿದೊಡನೆ ನನಗೆ ಧುತ್ ಅಂತ ನೆನಪಾಗುವುದು; ನಮ್ಮ ಡಾ. ಕಲಬುರ್ಗಿ ಅವರ’ಮಾರ್ಗ’ದ ಪ್ರಸಂಗ. ಆ ಪ್ರಸಂಗದಲ್ಲಿ ಕಲಬುರ್ಗಿ ಅವರಿಗೆ ತಮ್ಮ ಕುಲಬಾಂಧವರ ಎಲ್ಲಾ ನಮೂನೆಯ ಅಕರಾಳ ವಿಕರಾಳ ಮುಖಗಳ ‘ದರ್ಶನ’ ವಾದರೂ. ಕಟ್ಟ ಕಡೆಯ ಶೆಟ್ಟರ ಲೆಕ್ಕಾಚಾರದಲ್ಲಿ ಮಾತ್ರ. ಗ್ರಂಥದ ಅನೇಕ ಆವೃತ್ತಿಗಳು ಮಾರಾಟವಾಗಿ, ಅವರು ಹಿಡಿದದ್ದು ‘ಕಲ್ಯಾಣ ಮಾರ್ಗ’ ವೇ ಆದದ್ದು ನನಗೆ ಗೊತ್ತು.

ಮಾರ್ಗಕ್ಕಾಗಿ ಮಾರ್ಗ ಎಂಬುದಿಲ್ಲ ಮಾರ್ಗಕ್ಕೆ ಯಾವುದಾದರೊಂದು ಗುರಿ ಇರುತ್ತದೆ. ಉದಾಹರಣೆಗೆ – ಭಗವಂತನನ್ನು ನೀವು ಒಲಿಸಿಕೊಳ್ಳಬೇಕೆಂದರೆ ಜ್ಞಾನ ಮಾರ್ಗ, ಭಕ್ತಿ ಮಾರ್ಗ, ಕರ್ಮ ಮಾರ್ಗಗಳು (ನಿಮ್ಮ ನಿಮ್ಮ ಯೋಗ್ಯತೆಯ ಅಧಃಪತನ, ಅಂದರೆ ಇಳಿಕೆಯ, ಕ್ರಮದಲ್ಲಿ) ಇವೆ ಎಂದು ಹೇಳುತ್ತಾರೆ. ‘ಕರ್ಮ’ ಅಂದರೇನು? ಅದು ನಿಮಗೆ ಗೊತ್ತಿಲ್ಲ. ಅದು ನಿಮ್ಮ ಕರ್ಮ. ಅದೇನೆಂದು ತಿಳಿಯಬೇಕಾದರೆ ‘ಜ್ಞಾನ’ ಮಾರ್ಗಿಯ ಹತ್ತಿರ ‘ಭಕ್ತಿ’ ಪ್ಲಸ್ ಅದಕ್ಕನುಗುಣವಾದ ಕಾಣಿಕೆ ಸಮೇತ ನೀವು ಹೋಗಬೇಕು. ‘ಜ್ಞಾನ’ ಅಂದರೆ ಎಂಥಾ ಜ್ಞಾನ? ಬ್ರಹ್ಮ ಜ್ಞಾನ. ‘ಬ್ರಹ್ಮ ಅಂದರೆ ಏನು? ಅದು ಬ್ರಹ್ಮನಿಗೂ ಗೊತ್ತಿಲ್ಲ … ಹೀಗೆ, ಇರುವ ‘ಮಾರ್ಗ’ ಗಳೆಲ್ಲ ನಿಮ್ಮನ್ನು ಅಡ್ಡ ದಾರಿಗೆ ಏಳೆಯುವಂಥವೇ! ಇವೆಲ್ಲ ಭಗವಂತನನ್ನು ‘ಒಲಿಸಿ’ ಕೊಳ್ಳಲಿಕ್ಕೆ ಆಯಿತು: ಅವನಿಂದ ‘ಒದಿಸಿ’ ಕೊಳ್ಳಬೇಕೆಂದರೆ? ಅದಕ್ಕೂ ಬೇರೆ ಬೇರೆ ಮಾರ್ಗಗಳಿವೆ.

‘ಅಡ್ಡದಾರಿ’, ‘ಒಳದಾರಿ’ – ಇತ್ಯಾದಿ ಇವೆ. ಮೇನ್ ರೋಡ್ (ಮುಖ್ಯ ರಸ್ತೆ). ಹೈವೇ (ಹೆದ್ದಾರಿ) ಗಳಿಗಿಂತ ಇವು ಅನೇಕ ರೀತಿಯಲ್ಲಿ ಭಿನ್ನ. ದೊಡ್ಡ ದೊಡ್ಡ ದಾರಿಗಳಲ್ಲಿ, ರಾಜಮಾರ್ಗಗಳಲ್ಲಿ. (ನಾನೇ ಒಂದು ಕವನದಲ್ಲಿ ಬರೆದಂತೆ)

……. ನೋಡು, ಹರಿಯುವ ವಾಹನಗಳಿಗೆ
ನೀನೇ ಹಾದಿಯಾಗಬಾರದೆಂದು
ನಿನಗಾಗಿಯೇ ಫುಟ್ ಪಾಥಿವೆ. ನೀನ
ತುಳಿದದ್ದೆಷ್ಟು ಬಾಕಿ ಉಳಿದದ್ದೆಷ್ಟು
ಅಂತ ಲೆಕ್ಕಾಚಾರ ಹೇಳುವ ಮೂಕ ಕಲ್ಲುಗಳಿವೆ ….

ಸಾಮಾನ್ಯವಾಗಿ ರಾಜಮಾರ್ಗಗಳಲ್ಲಿ ಆಕ್ಸಿಡೆಂಟುಗಳ
ಸಂಭವ ಕಡಿಮೆ. ಸಂಭವಿಸಿದರೂ
ಹಾದಿಹೆಣವಾಗಬೇಕಿಲ್ಲ. ಸಕಾಲದಲ್ಲಿ ದವಾಖಾನೆ ಸೇರಿ
ಬಂದು ಸಮಕ್ಷಮದಲ್ಲೇ
ನಿಕಾಲಿಯಾಗಬಹುದು …….

ಇಂಥ ಅನುಕೂಲಗಳಿದ್ದರೂ, ಅಡ್ಡದಾರಿಗಳು ವೈಯಾರದ ತಿರುವುಗಳಲ್ಲಿ ಅನಿರೀಕ್ಷಿತ ಆತಂಕಗಳಲ್ಲಿ ತಲುಪಬೇಕಾದ ಗುರಿಯ ಗುಂಜುಗುಂಜಾದ ಅಸ್ಪಷ್ಟತೆಯಲ್ಲಿ ಇರುವೆ ರೋಮಾಂಚನ ಮಾತ್ರ ರಾಜಮಾರ್ಗಗಳ ಗಂಟುಮೋರೆಯ ಏಕತಾನಗಳಲ್ಲಿ ಇರುವುದಿಲ್ಲ. ಅದಕ್ಕೇ ನನ್ನ ಕವನದ ಆ ಹುಡುಗ ….

ಲೇ ಲೇ ಅನ್ನುವುದರೊಳಗೆ ಅಡಾಡುತ್ತ ಹುಡುಗ
ಅಡವೀ ಬಿದ್ದು ಅಡ್ಡ ಬಿದ್ದು
ಹೆಜ್ಜೆ ಮೂಡದ ಹಾದಿಯ ಮೇಲೆ
ಹಕ್ಕಿಯಂತೆ ಗಾಳಿಯಂತೆ ಹರಿದಾಡಿ ಹೋದ.
ಹೋಗಿ ಹೋಗಿ ಕ್ಷಿತಿಜದ ಅಡ್ಡಗೆರೆಗೊಂದು ಲಂಬವಾಗಿ
ಅಧಿಕ ಚಿಹ್ನೆಯ ಹಾಗೆ ಮಿಂಚಾಡಿದ.

ಇಂಥ ಅಡ್ಡದಾರಿಗಳು ಮೋಹವಿರುವ ನನಗೆ ಯಾರಾದರೂ ಬಂದು, ” ಮಾರ್ಗದರ್ಶನ ಮಾಡು ಗುರೂ.” ಅಂತ ಗಂಟುಬಿದ್ದಾಗ ಗಾಬರಿಯಾಗುತ್ತದೆ. ಆಟೋಗ್ರಾಪ್ ಬುಕ್ಕಿನಲ್ಲಿ ಅವಸರವಸರದಿಂದ ಸಹಿ ಮಾಡಿ. ” ನನ್ನ ಸಂದೇಶ ಅಂದರ: ನೀವು ಯಾರ ಸಂದೇಶಾನೂ ಕೇಳಬ್ಯಾಡ್ರಿ.” ಅಂತ ಮೌಖಿಕವಾಗಿ ಹಿತವಚನ ಹೇಳಿ ನನ್ನ ಹಾದಿ ಹಿಡಿಯುತ್ತೇನೆ.

ಈ ವಿಷಯದಲ್ಲಿ ಉಳಿದ (ಕೆಲವು) ಸಾಹಿತಿಗಳನ್ನು ನೋಡಿದರೆ ನನಗೆ ಹೊಟ್ಟೆ ರುಮ್ ಅನ್ನುತ್ತದೆ. ಅವರು ಬೌಲರರನ್ನು ಎದುರಿಸಲು ಹಿಂದಿನ ರಾತ್ರಿಯಿಂದಲೇ ರಿಹರ್ಸಲ್ ಮಾಡಿದ ಬ್ಯಾಟ್ಸಮನ್ ಹಾಗೆ. ಆಟೋಗ್ರಾಪಿಗಳ ಹಾದಿಯನ್ನೇ ಕಾಯುತ್ತಿರುತ್ತಾರೆ. ಅನೇಕ ಕೊಟೇಶನ್ನುಗಳನ್ನು – (ಬೇರೆಯವರವಿದ್ದರೂ ತಮ್ಮದನ್ನೇ ಮಾಡಿಕೊಂಡು) – ಸುಂದರವಾದ ಅಕ್ಷರಗಳಲ್ಲಿ ಸೀರಿಯಸ್ಸಾಗಿ ಬರೆಯುತ್ತಾರೆ. ಅಭಿಮಾನಿಗಳನ್ನು ಧನ್ಯರನ್ನಾಗಿ ಮಾಡಿ ತಾವೂ ಧನ್ಯತೆಯನ್ನು ಅನುಭವಿಸುತ್ತಾರೆ.

ಒಮ್ಮೊಮ್ಮೆ ಈ ಕೊಟೇಶನ್ ಗಳು ತಲೆ ಕೆಡಿಸುತ್ತವೆ ಉದಾ: ಯಾರಾದರೂ ಕವಿ ಕಾವ್ಯಾಂದರ ಉಕ್ತಿಯನ್ನು – ” ಏನಾದರೂ ಆಗು; ಮೊದಲು ಮಾನವನಾಗು” ಎಂದು ಬರೆದರು ಅಂತ ತಿಳಿದುಕೊಳ್ಳಿರಿ. ಏನಿದರರ್ಥ? ನಾನು ಈಗ ‘ಮಾನವ’ ನಾಗಿಲ್ಲವೇ? ಇವರ ಕಣ್ಣಿಗೆ ನಾನು ದನದಂತೆ ಕಾಣುತ್ತೇನೆಯೇ? ಏನಾದರೂ ಆದ ನಂತರ ಮಾನವನಾಗಬೇಕೆ? ಆಥವಾ ಮಾನವನಾದ ನಂತರ ಏನಾದರೂ ಆಗಬೇಕೆ? ‘ಏನಾದರೂ ಆಗು’ ಎಂಬ ಮಾತಿನ ಹಿಂದೆ ‘ಹಾಳಾಗಿ ಹೋಗು’ ಎಂಬ ಧ್ವನಿ ಇದೆಯಲ್ಲವೆ? ….ಛೆ! ಛೆ!…… ಕಾವ್ಯಾನಂದರು ಇಷ್ಟಾದರೂ ಹೇಳಿದ್ದಾರೆ. ಮಹಾಕವಿ ಕುವೆಂಪು ಮಾತ್ರ ಬರೀ ‘ಆಗು ಆಗು ಆಗು ಆಗು’ ಅನ್ನುತ್ತಾರೆ. ಎಲ್ಲಿ ಯಾವಾಗ ಹೇಗೆ ಏನು ಆಗಬೇಕು? ಯಾಕೆ ಆಗಬೇಕು?

ಏನೂ ತಿಳಿಯದೆ ಕೊನೆಗೆ ‘ಆಗಲಿ!’ ಅಂತ ಕುಂಡಿಯ ಬುಡಕಿನ ಕರಚೀಫು ಝಾಡಿಸಿಕೊಂಡು ಎದ್ದು ಹೋಗುವುದೇ ಚಲೋ.

*

ಮಾರ್ಗದರ್ಶಕರಿಗೆ ಇಂಗ್ಲೀಷಿನಲ್ಲಿ ‘ಗೈಡ್’ ಅನ್ನುತ್ತಾರೆ. ಬಿ.ಎ.ಗಿ.ಎ ಆಗುವ ತನಕ ಗೈಡ್ ಅಂದರೆ ಬಜಾರದ ಗೈಡುಗಳೇ. ಆದರೆ ಎಂ.ಎ., ಎಂಫಿಲ್. ಆದ ನಂತರ ಗೈಡ್ ಅಂದರೆ ನಿಮ್ಮ ಸಂಶೋಧನೆಯ ಪ್ರಕ್ರಿಯಲ್ಲಿ ಪಾಲುಗೊಂಡು ಅಥವಾ ಪಾಲುಗೊಳ್ಳದೆ ತಮ್ಮ ಘನ ವಿದ್ವತ್ತಿನ ಅಲ್ಪ ಸಹಾಯವನ್ನು ನಿಮಗೆ ನೀಡುತ್ತಾ ನೀವು ಪಿಎಚ್.ಡಿ ಎಂಬ ಫಾಜೇಗಟ್ಟಿಯನ್ನು ಮುಟ್ಟಿ ‘ಡಾಕ್ಟರ್’ ಎಂಬ ಪದವಿ ಗಳಿಸಲು ಪ್ರೇರಕ ಶಕ್ತಿಯಾಗಿರುವ ಹಿರಿಯ ಅಧ್ಯಾಪಕರು. ಪ್ರೊಫೆಸರುಗಳು. (ನನ್ನ ಹೈಸ್ಕೂಲು ಸಹಪಾಠಿಯೊಬ್ಬ ‘ಪ್ರೊಫೇಶ್ವರರು’ ಎಂಬ ಪದ ಪ್ರಯೋಗ ಮಾಡುತ್ತಿದ್ದ ಪ್ರಿನ್ಸಿಪಾಲರು ‘ಪ್ರಾಂಶುಪಾಲ’ರಾಗುವುದಾದರೆ ಪ್ರೊಫೆಸರರು ಪ್ರೊಪೇಶ್ವರ ಯಾಕಾಗಬಾರದು? ಇದೊಂದು ಸೂಚನೆ.)

ನಾನು ಎರಡು ‘ಎಮ್ಮೆ’ ಮಾಡಿ – (ಒಂದು ಕರ್ನಾಟಕದ್ದು. ಇನ್ನೊಂದು ಇಂಗ್ಲೆಂಡಿನದು) – ಈಗೊಬ್ಬ ಪ್ರೊಪೇಶ್ವರನೇ ಆಗಿದ್ದರೂ, ಪಿಎಚ್ ಡಿ, ಗಿಎಚ್ ಡಿ ಮಾಡಲು ಹೋಗಲಿಲ್ಲ. ಡಾಕ್ಟರು ಹೋಗಲಿ ಕಂಪೌಂಡರು ಕೂಡ ಅಲ್ಲ ನಾನು. ಮಾಡಲು ಹೋಗಲಿಲ್ಲ – ಅಂದರೆ ಮಾಡಲು ‘ಆಗಲಿಲ್ಲ’ ಅಷ್ಟೆ ಅದೂ ಒಂದು ಕತೆಯೇ.

ಇಂಗ್ಲೆಂಡಿನಿಂದ ವಾಪಾಸಾದ ಹೊಸ ಹುರುಪಿನಲ್ಲಿ ನಮ್ಮ ವಿಶ್ವವಿದ್ಯಾಲಯದ ಭಾಷಾಶಾಸ್ತ್ರ ಪ್ರಾಧ್ಯಾಪಕ ಡಾ. ಜಯವಂತ ಕುಳ್ಳಿ ಅವರನ್ನು ಗೈಡ್ ಅಂತ ತಗೊಂಡು ರಿಜಿಸ್ಟರ್ ಮಾಡಿಸಿದೆ. ಕುಳ್ಳಿ, ನಾನು ಆತ್ಮೀಯ ಗೆಳೆಯರು. ಕೇವಲ ಒಂದೇ ವರ್ಷ ಫರಕು. ಅವರು ನನ್ನನ್ನು ಹಿಡಿದು ಕೂಡ್ರಿಸಿ ರಿಸರ್ಚ ಮಾಡಿಸಲು ಎಷ್ಟೇ ಪ್ರಯತ್ನಿಸಿದರೂ ನನ್ನ ನೂರಾ ಎಂಟು ಅಡ್ಡನಾಡಿ ಕಾರ್ಯಕಲಾಪಗಳಲ್ಲಿ ನಾನು ಅವನ ಕೈಗೆ ಸಿಗುತ್ತಲೇ ಇರಲಿಲ್ಲ.

ನನ್ನ ‘ಗೋಕರ್ಣದ ಗೌಡಶಾನಿ’ ಯಲ್ಲಿ ಒಂದು ಡೈಲಾಗಿದೆ. ಕೈಲಾಸಕ್ಕೆ ಹೋಗಿ ಪರಮೇಶ್ವರನಿಂದ ಶಿವಲಿಂಗ ತರಲು ಅವಸರದಲ್ಲಿ ಹೊರಟ ರಾವಣನನ್ನು ದಾರಿಯಲ್ಲಿ ಭೆಟ್ಟಿಯಾದ ಭಾಗವತ ಏನೇನೋ ಹೆದರಿಸಿ ಕಂಗಾಲ ಮಾಡಿದ್ದಾನೆ.

ರಾವಣ: ನಾನೇನು ಮಾಡಲಿ ಭಾಗವತಾ? ನನ್ನ ಬುದ್ದಿಯೆಲ್ಲಾ ಹತ್ತು ತಲೆಗಳಲ್ಲಿ ಹಂಚಿ ಹೋಗಿ ನಾನು ಬಹಳ ಡಲ್ಲಾಗಿದ್ದೇನೆ. ಅಲ್ಲದೆ ಉಳಿದ ಒಂಬತ್ತು ತಲೆಗಳನ್ನು ಮಂಡೋದರಿ ತನ್ನ ಹತ್ತಿರವೇ ಇಟ್ಟುಕೊಂಡಿದ್ದಾಳೆ …. ದಾರಿ ತೋರುವಂತವನಾಗು ನೀನೆ ನನ್ನ ಗುರು. ನನ್ನ ಮಾರ್ಗದರ್ಶಕ. ನನ್ನ ಗೈಡು.

ಭಾಗವತ: ಚಿಂತಿಸದಿರು ರಾವಣಾ, ನಾನು ನಿನ್ನ ಗೈಡದಾರೆ ನೀನು ನನ್ನ ಟೆಕ್ಸ್ಟಬುಕ್ಕು …..

ಈ ಡೈಲಾಗಿಗೆ ಮೂಲ, ನನ್ನ ಜಯವಂತನ ಸಂಬಂಧ. ಈ ಮಹರಾಯ ನನಗೆ ಮಾರ್ಗದರ್ಶನ ಮಾಡುವುದಿರಲಿ: ತಾನೇ ಒನ್ ಫೈನ್ ಮಾರ್ನಿಂಗ್ ಕೈಲಾಸದ ಮಾರ್ಗ ಹಿಡಿದು ಹೋದ. ನನ್ನಿಂದ ಯಾವ ಗೈಡಿಗೂ ಈ ಗತಿ ಮತ್ತೆ ಬರದಿರಲಿ ಅಂತ ನಾನು ಪಿಎಚ್ ಡಿ ಸುದ್ದಿಯನ್ನೇ ಮರೆತುಬಿಟ್ಟೆ.

ಮುಂದೊಂದು ದಿನ ಮತ್ತೊಬ್ಬ ಗೆಳೆಯ – (ಅವನ ಹೆಸರು ಕೊಟ್ರಶೆಟ್ಟಿ) – ಕಳಕಳಿಯಿಂದ ನನ್ನನ್ನು ಈ ರೀತಿ ಝಾಡಿಸಿದ: “ಅಲ್ಲೋ ಚಂಪಾ, ನೀ ಇಷ್ಟು ಶಾಣ್ಯ ಅದೀ. ಈಗ ಎಂಥೆಂಥಾ ದನಾ ಕಾಯೋರs ಡಾಕ್ಟರ್ ಆಗ್ಯಾರ ನಿನಗೇನಲೇ ಧಾಡಿ?

ನಾನು ಸುಮ್ಮನೆ, ಪುಟ್ಟಾ ಪೂರಾ ಇಪ್ಪತ್ತು ಸೆಕೆಂಡು. ಅವನ ಮುಖ ದಿಟ್ಟಿಸಿ ಅಂದೆ: “ಹೌದಪ್ಪ, ನೀ ಹೇಳೂದು ಖರೇನs”

ಈ ಗೆಳೆಯ ಕೊಟ್ರಶೆಟ್ಟಿಯೂ ಡಾಕ್ಟರ್ ಕೊಟ್ರಶೆಟ್ಟಿಯೇ ಆಗಿದ್ದ. (ಮುಂದೆ ಈ ಗೆಳೆಯನೂ ಕುಳ್ಳಿಯನ್ನು ಫಾಲೋ ಮಾಡಿ ಮತ್ತೊಂದು ಪೈನ್ ಮಾರ್ನಿಂಗ್ ಸ್ವರ್ಗದ ಮಾರ್ಗ ಹಿಡಿದ.)

*

ಮಾತು ಎಲ್ಲೆಲ್ಲೋ ಹೋಗುತ್ತಿದೆ. ಅಡ್ಡದಾರಿ ಅಂದರೇ ಹೀಗೆ. ಇರಲಿ.

ಅಮೇರಿಕನ್ ಕವಿ ರಾಬರ್ಟ್ ಫ್ರಾಸ್ಟನ The Road Not Taken ಕವನ ನೆನಪಾಗುತ್ತಿದೆ. ಹೋಗ ಹೋಗುತ್ತ ಒಂದು ಸರ್ಕಲ್ ಬರುತ್ತದೆ. ಆ ಕಡೆ ಒಂದು ಹಾದಿ. ಈ ಕಡೆ ಒಂದು. ಯಾವ ಹಾದಿ ಹಿಡಿಯಬೇಕು? ಗೊತ್ತಿಲ್ಲ. ಯಾವ ಕಾರಣಕ್ಕೋ – ತತ್ಕಾಲದ ಅಗತ್ಯ? ಸಂಪ್ರದಾಯ? ಪರಂಪರೆ? ಬಿಡೆ? ಜನಾಗ್ರಹ? ಅಂತಃಸ್ಪೂರ್ತಿ? – ಒಂದು ಹಾದಿ ಹಿಡಿಯುತ್ತೇವೆ. ಯಾವ ಕಾರಣವೂ ಇರಲಿಕ್ಕಿಲ್ಲ ಒಮ್ಮೊಮ್ಮೆ. ಆಯ್ಕೆ ಮಾಡಿದ ನಂತರ ಮುಗಿಯಿತು. ಒಂದು ಹಾದಿಗೆ ಬಿದ್ದ ನಂತರ ಆ ಹಾದಿಗುಂಟ ಹೋಗಲೇ ಬೇಕು. ಆದರೆ ಮಜಾ ಅಂದರೆ, ಈ ಇನ್ನೊಂದು ಹಾದಿ ಇತ್ತಲ್ಲ. ಅದು ಈ ಹಾದಿಯುದ್ದಕ್ಕೂ ಕನಸಾಗಿ ಕಾಡುತ್ತದೆ.

ಹೀಗೆ ಬದುಕು ಅಲ್ಲವೇ? ತುಳಿಯಲಾಗದ ಹಾದಿಗಾಗಿ, ಬರೆಯಲಾಗದ ಕವನಕ್ಕಾಗಿ, ಪಡಿಯಲಾಗದ ಪ್ರೇಮಿಗಾಗಿ ನಾವು ಸದಾ ಸದಾ ಕನವರಿಸುತ್ತೇವೆ. ಈ ಕನವರಿಕೆ ನೆಲದ ಮರೆಯ ನಿಧಾನದಂತೆ ನಮ್ಮ ನೆಲದ ಮೇಲಿನ ಎಲ್ಲ ಗಾಳಿಗೆ ಕಂಪು ಕೊನರಿಸುತ್ತದೆ. ಎಲ್ಲ ಬಿಸಿಲಿಗೆ ತಂಪು ಸಿಂಪಡಿಸುತ್ತದೆ.

ಒಂದು ಮಾತು ಮಾತ್ರ ಖರೆ. ಯಾವುದೇ ಬಿಂದುವಿನಲ್ಲಿ ಖಾಯಂ ಆಗಿ ನಿಂತು ಹ್ಯಾಮ್ಲೆಟ್ ನಂತೆ to be or not to be ಎಂದು ಒದ್ದಾಡುವ ಹಾಗಿಲ್ಲ. ಒಂದು ಕ್ಷಣದಲ್ಲಿ ಏನಾದರೂ ಆಯ್ಕೆ ಮಾಡಬೇಕು. ಮುಂದೆ ಸಾಗಬೇಕು. ಇಲ್ಲವಾದರೆ ಹಿಂದಿನಿಂದ ಬಂದ ಕ್ಷಣಗಳು ಢಿಕ್ಕಿ ಹೊಡೆದು ನಮ್ಮನ್ನು ಗಟಾರಕ್ಕೆ ಕೆಡವಿ ಮುಂದೆ ಸಾಗುತ್ತದೆ.

*

ಮಾರ್ಗದರ್ಶನದ ವ್ಯವಹಾರ ಇಷ್ಟೆಲ್ಲ ಗಡಚಾಗಿದ್ದರೂ ನಮಗೆ ಬೇಡ ಬೇಡವೆಂದರೂ ಮಾರ್ಗ ತೋರಿಸುವವರ ಸಂಖ್ಯೆಯೇನೂ ಕಡಿಮೆ ಇಲ್ಲ. ಯಾವನಾದರೂ ಒಬ್ಬ ಗಣ್ಯ ವ್ಯಕ್ತಿ ಅಕಾಲಿಕವಾಗಿಯೋ ಸಕಾಲಿಕವಾಗಿಯೋ ನಿಧನ ಹೊಂದಿದಾಗ, ಅವನಿಗೆ ಸಲ್ಲಿಸುವ ಶ್ರದ್ಧಾಂಜಲಿಯ ಪರಿ ನೀವು ಗಮನಿಸಿರಬೇಕು. ಸತ್ತವನನ್ನು ಸಾಕಷ್ಟು ಹೊಗಳುತ್ತಾರೆ. ಹೊಗಳಲಿ ಆದರೆ ಕೊನೆಯಲ್ಲಿ “ಶ್ರೀಯುತರು ನಮ್ಮನ್ನು ಅಗಲಿದ್ದರೂ ಅವರು ನಡೆದ ಮಾರ್ಗ ನಮ್ಮೆದುರಿಗಿದೆ. ಆ ಮಾರ್ಗದಲ್ಲಿ ನಾವೂ ನಡೆಯುವಾ. ಇದರಿಂದ ಮಾತ್ರ ಅವರ ಆತ್ಮಕ್ಕೆ ನಿಜವಾದ ಶಾಂತಿ!” ಎಂದು ಶಿಫಾರಸು ಮಾಡುತ್ತಾರೆ. ಸತ್ತವನು ಸತ್ತ. ಅವನು ಹಿಡಿದ ಮಾರ್ಗದಿಂದಾಗಿಯೇ ಅವನು ಸತ್ತಿರಬಹುದು. ಯಾರು ಬಲ್ಲರು? ಅವನ ಮಾರ್ಗವೇ ಬದುಕಿದವರ ಮಾರ್ಗವೂ ಯಾಕಾಗಬೇಕು? ಹೀಗೆ ದಿನಾ ಒಬ್ಬರು ಸಾಯುತ್ತಾರೆ. ನಾವು ಯಾರ ಮಾರ್ಗ ಅಂತ ಹಿಡಿಯಬೇಕು?

ನನಗನಿಸುತ್ತದೆ ಬಹುಶಃ ಇಂಥ ಶ್ರದ್ಧಾಂಜಲಿಗಳ ಹಿಂದೆ ಒಂದು ನಿಗೂಢ ಭಯ ಇರುತ್ತದೆ. ಸಾಗಿದ ಮಾರ್ಗವನ್ನು ಯಾರೂ ತುಳಿಯದಿದ್ದರೆ ಆ ಸತ್ತವನೇ ಅದೇ ಮಾರ್ಗವಾಗಿ ವಾಪಸು ಬಂದು ಇದ್ದವರನ್ನು ಕಾಡಿಸಬಹುದು ಎಂಬ ಭಯ.

*

ನಮ್ಮ ಪೋಲಂಕಿಯವರು ಹಗಲೆಲ್ಲ ಒಂದು ಉದಾಹರಣೆ ಹೇಳುತ್ತಿದ್ದರು. ಬಹಳ ತನ್ಮಯರಾಗಿ ಹೇಳುತ್ತಿದ್ದರು. ಬುದ್ಧನ ಕೊನೆಯ ಗಳಿಗೆಯಲ್ಲಿ ಅವನ ಶಿಷ್ಯ ಆನಂದ ಗುರುವಿನಿಂದ ಮಾರ್ಗದರ್ಶನ ಬಯಸಿ “ಓ ತಥಾಗತ, ನಮ್ಮ ಮುಂದಿನ ಮಾರ್ಗಕ್ಕೆ ಬೆಳಕು ತೋರಿಸು” ಅಂದನಂತೆ.

ಆಗ ಬುದ್ಧ – (ಈ ಮಾತನ್ನು ಯಾವಾಗಲೂ ಪೋಲಂಕಿ ಇಂಗ್ಲೀಷಿನಲ್ಲಿಯೇ ಹೇಳುತ್ತಿದ್ದರು) – ಹೇಳಿದನಂತೆ: “O Ananda! Be a light unto thyself ” (ನೀನೇ ನಿನ್ನ ಬೆಳಕಾಗಿರು)

ಇದು ಒಂದು ರೀತಿಯಾದರೆ. ಮತ್ತೆ ಕೆಲವರು ಮೈಮೇಲೆ ಯಾವ ಜವಾಬ್ದಾರಿಯನ್ನೂ ಹೊತ್ತುಕೊಳ್ಳದೆ ಹೇಳುತ್ತಾರೆ: ಮಹಾಜನೋ ಏನ ಗತಃ ಸ ಪಂಥಾ; ಅಂದರೆ, ದೊಡ್ಡವರು ನಡೆದದ್ದೆ ದಾರಿಯಂತೆ. ಇಲ್ಲಿ ನಾವು ಮೊದಲು ಮಾಡಬೇಕಾದದ್ದು: ನಾವು ‘ದೊಡ್ಡವ’ ರಾಗಬೇಕು! ಹಾಗೆಂದು ಜನ ನಮ್ಮನ್ನು ಗುರುತಿಸಬೇಕು. ಸಾರ್ವಜನಿಕವಾಗಿ ಕರೆಯಬೇಕು. ಆಮೇಲೆ ನಾವು ಮದ್ದಾನೆಯಂತೆ ಎಲ್ಲಿ ನುಗ್ಗಿದರೂ ಮಾರ್ಗವಾಗುತ್ತದೆ. ಮದ್ದಾನೆಯ ಮಾರ್ಗದಲ್ಲಿ ಮೊದ್ದು ಕುರಿಗಳು ಒಂದೊಂದಾಗಿ ಒಂದೊಂದಾಗಿ, ನಿಸಾರರ ಪದ್ಯವಾಚನ ಮಾಡುತ್ತ ಸಾಲುಸಾಲಾಗಿ ಬರುತ್ತವೆ.

*

ನಾನಂತೂ ಮೊದಲಿನಿಂದಲೂ ಬುದ್ಚನ ಪಾರ್ಟಿಯ ಮನುಷ್ಯ ಮೂರುವರೆ ದಶಕಗಳ ಹಿಂದಯೇ – ನಾನು ಇನ್ನೂ ಕಿರಿ – ಕವಿಯಾಗಿದ್ದಾಗಲೇ – ಬರೆದೆ:

ನೀ ಹಿಡಿದ ದಾರಿಯಲಿ ಹೂಗಳೇ ಇರಬಹುದು
ನನ್ನನ್ನು ಆ ದಾರಿಗೆಳೆಯಬೇಡ.
ನಾ ಕಂಡ ದಾರಿಯನೆ ನಾ ತುಳಿದು ಸಾಗುವೆನು
ಬೇರೆ ಯಾರೂ ಅದನು ತುಳಿಯವುದು ಬೇಡ …..
ಇದೂ ಅಲ್ಲದೆ. ನನ್ನ ಆ ಮೂರು ಜಗತ್ಪ್ರಸಿದ್ಧ ಸಾಲುಗಳು ನಿಮಗೆ ನೆನಪಿರಬೇಕು:
ಹೋಗಿಬರ್ತೇನಜ್ಜ. ಹೋಗಿಬರ್ತೇನಿ.
ನಿನ್ನ ಪಾದದ ಧೂಳಿ ನನ್ನ ಹಣೆ ಮೇಲಿರಲಿ.
ಕಣ್ಣೊಳಗೆ ಮಾತ್ರ ಅದು ಬೀಳದಿರಲಿ.

*

ಇಷ್ಟಿದ್ದರೂ ನನ್ನ ಬಳಿಗೆ ಮಾರ್ಗದರ್ಶನಕ್ಕಾಗಿ ಬರುವವರು ಇದ್ದೇ ಇದ್ದಾರೆ. ಮುಖ್ಯವಾಗಿ ಕಿರಿ ಬರಹಗಾರರು – ಹಿನ್ನುಡಿಗಾಗಿಯೋ, ಅದಕ್ಕಿಂತ ಕಿರಿದಾದ ಮುನ್ನುಡಿಗಾಗಿಯೋ, ಅದಕ್ಕಿಂತಲೂ ಕಿರಿದಾದ ಬೆನ್ನುಡಿಗಾಗಿಯೋ. ನಾನು ಏನೋ ತಿಳಿದದ್ದು ಅಥವಾ ತಿಳಿಯಲಾಗದ್ದು, ಬರೆದು ಕೊಡುತ್ತೇನೆ.

ಅಂತೂ ಮಿಕ್ಕಿ ಯಾವುದಾದರೂ ಗಿರಾಕಿ ಗಂಟೇ ಬಿತ್ತು ಅಂದರೆ ನಾನು ಹೇಳಬಹುದಾದ ಡೈಲಾಗಿದು: “ನೋಡಪಾ, ಇಲ್ಲಿ ಎದುರಿಗೆ ಒಂದು ದಾರಿ ಐತಿ. ಅದನ್ನ ಹಿಡಕೊಂಡು ಹೋಗು. ಹೋಗು ಹೋಗು ಹೋಗು. ದಾರ್ಯಾಗ ಒಂದು ಹಳ್ಳ ಹತ್ತಬಹುದು. ಅದರಾಗ ನೀನು ಬೀಳು. ಬಿದ್ದ ಮ್ಯಾಲ ಅದರಾಗಿನಿಂದ ನೀನು ಎದ್ದು ಬಂದರೆ ಮತ್ತ ನನ್ನ ಬೆಟ್ಟಿ ಆಗು ….. ”

ನನ್ನನ್ನು ಭೆಟ್ಟಿಯಾದವರು ಯಾರೂ ಇಲ್ಲ.

  • ೧೯೯೬