ಪರನಾಡಿನೊಳೆಡರುಗಳಂ
ಪರಪರಿಯಿಂ ಸೋಸುತೆಮ್ಮ ಕನ್ನಡ ಮಿತ್ರರ್ |
ವರವಿದ್ಯೆಯನಾಜಿಸುತಿರೆ
ಪರಮೇಶ್ವರನಿತ್ತನೆಮಗೆ ಮುದದಿಂ ವರವಂ…. ||೧||

ಎಲೆ ಮಗುವೆ, ಸಾಕು ಕಷ್ಟವು
ಭಲೆ! ನಿನ್ನಯ ತಪಕೆ ಮೆಟ್ಟಿವರವಿತ್ತೆನುನಾ |
ಸಲೆ ತಂತುಪುರದೊಳೆಂತೆನೆ
ನಲಿದಾಡುವುದೀಗ ನಿನಗಭೀಷ್ಟಿತ ಕಾಲೇಜ್….. ||೨||

ಅಕ್ಟೋಬರ್ ೧೯೧೭ರ ಕರ್ನಾಟಕ ಕಾಲೇಜು ಮಿಸಲೆನಿಯ ಮೊದಲ ಸಂಪುಟದ ಮೊದಲ ಸಂಚಿಕೆಯಲ್ಲಿ ರಾಘವೇಂದ್ರಾಚಾರ್ಯ ಪಂಚಮುಖಿ ಅವರು ಬರೆದ ಪದ್ಯದ ಮೊದಲ ಎಂಟು ಸಾಲುಗಳಿವು. ಧಾರವಾಡದ ಕರ್ನಾಟಕ ಕಾಲೇಜು ಸ್ಥಾಪನೆಗೊಂಡಿದ್ದು, ೨೦ ಜೂನ್ ೧೯೧೭ ರಂದು. ಈ ಎಂಬತ್ತು ವರ್ಷಗಳಲ್ಲಿ ಮುಖ್ಯವಾಗಿ ಉತ್ತರ ಕರ್ನಟಕದ ಬದುಕನ್ನು ಅನೇಕ ನೆಲೆಗಳಲ್ಲಿ ಅನೇಕ ಆಯಾಮಗಳಲ್ಲಿ ರೂಪಿಸಿದ ಮಹಾ ಸಂಸ್ಥೆ ಕರ್ನಾಟಕ ಕಾಲೇಜು. ಛೋಟಾ ಮಹಾಬಳೇಶ್ವರ – (ಅದು ಈಗ ಪಾವಟೆನಗರ) – ದಲ್ಲಿ ಆಕಾಶದೆತ್ತರಕ್ಕೆ ಬೆಳೆದು ನಿಂತಿರುವ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಮಾತೃ ಸಂಸ್ಥೆಯಾಗಿರುವ ಧಾರವಾಡದ ಕರ್ನಾಟಕ ಕಾಲೇಜು, ಇಂದಿಗೂ ‘ಕೆಸಿಡಿ’ ಎಂಬ ಮೂರಕ್ಷರಗಳ ಮಂತ್ರಗಳ ಮಿಡಿತದಿಂದ ನಮ್ಮನ್ನು ನಮ್ಮ ನಮ್ಮ ಭೂತಕಾಲಗಳ ರೋಮಾಂಚಕ ಜಗತ್ತಿಗೆ ಸೆಳೆಯುವ ಅದ್ಭುತವಾದ ಸೂಜಿಗಲ್ಲು.

‘ನೀವು ಎಲ್ಲಿ ಓದಿದ್ದು?’

‘ಧಾರವಾಡದ ಕರ್ನಾಟಕ ಕಾಲೇಜು.’

‘ಓಹೋ, ನೀವೂ ಕೆಸಿಡಿ ಅಂಧಂಗಾತು!’

ಜಾತಿ ಬೇರೆ, ಧರ್ಮ ಬೇರೆ, ಊರುಗಳೂ ಬೇರೆ, ಪೀಳಿಗೆಗಳೂ ಬೇರೆ, ಆದರೆ ‘ಕೆಸಿಡಿ’ ಅಂದೊಡನೆ ಎಲ್ಲವೂ ಲಯವಾಗಿ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಯಾವುದೋ ಚುಂಬಕ ಗಾಳಿ ಬೀಸುತ್ತದೆ. ನೆನಪುಗಳ ಮಂಜು ಮಂಜಾದ ಮೋಡಗಳನ್ನು ಸರಿಸುತ್ತ ಕೆಂಪು ಇಟ್ಟಂಗಿಗಳು ಕಟ್ಟಡವೊಂದು ಕಣ್ಣು ಮೂಗು ಪಡೆಯುತ್ತದೆ. ಅದರೊಳಗಿನ ಕ್ಲಾಸ್ ರೂಮುಗಳು, ಆವಾಗಿನ ಪ್ರೊಫೆಸರರು, ಸಹಪಾಠಿಗಳು, ಗ್ಯಾದರಿಂಗುಗಳು, ಇಲೆಕ್ಷನ್ನುಗಳು, ಆಟ ನೋಟಗಳು…. ಆ ಹದಿ ವಯಸ್ಸಿನ ಕನಸುಗಳು, ಹತಾಶೆಗಳು, ನಿಟ್ಟುಸಿರುಗಳು, ಕವನಗಳು….

*

ಹಾವೇರಿಯ ಮುನ್ಸಿಪಲ್ ಹೈಸ್ಕೂಲಿನಲ್ಲಿದ್ದಾಗಲೇ, ನಾನು ಕನಸು ಕಂಡದ್ದು, ‘ನನ್ನ ಜೀವನದ ಮಹತ್ವಾಕಾಂಕ್ಷೆ’ ಎಂಬ ನಿರ್ಬಂಧ ಬರೆದದ್ದು: ನಾನು ಕರ್ನಾಟಕ ಕಾಲೇಜಿನಲ್ಲಿ ಪ್ರೋಫೆಸರ್ ಆಗಬೇಕು – ಅಂತ. (ನನ್ನ ಗೆಳೆಯನೊಬ್ಬ ‘ಪ್ರೋಪೇಶ್ವರ’ ಅಂತ ಉಚ್ಚರಿಸುತ್ತಿದ್ದ!) ೧೯೫೬ರ ಎಸ್‌ಎಸ್‌ಸಿ ಪರೀಕ್ಷೆಯಲ್ಲಿ ಆವಾಗಿನ ಬಾಂಬೇ ಬೋರ್ಡಿನ ರ‍್ಯಾಂಕ ವಿದ್ಯಾರ್ಥಿಯಾಗಿ, ಜೀವನದಲ್ಲಿ ಮೊಟ್ಟ ಮೊದಲು ಪೈಜಾಮ ಹಾಕಿಕೊಂಡ ರೋಮಾಂಚನ ಅನುಭವಿಸುತ್ತ ತಲೆಗೆ ಗಾಂಧಿ ಟೊಪ್ಪಿಗೆ ಏರಿಸಿಕೊಂಡು ಕರ್ನಾಟಕ ಕಾಲೇಜಿಗೆ ನಾನು ಕಾಲಿಟ್ಟಾಗ ಎಲ್ಲರ ಕಣ್ಣಿಗೂ ನಾನು ಒತ್ತುತ್ತಿದ್ದುದು – ಹಳ್ಳಿಗಾಡಿನಿಂದ ಬಂದ ಒಬ್ಬ ಸಾದೂ ಸ್ವಭಾವದ ‘ಸ್ಕಾಲರ್’ ಎಂದೇ. ನನ್ನ ಕ್ಲಾಸಿನ ಸಹಪಾಠಿಗಳಿಗೆ – ಮುಖ್ಯವಾಗಿ ಹುಡುಗಿಯರಿಗೆ – ನಾನೊಂದು ಪ್ರೀತಿಯ ಕುತೂಹಲದ ವಸ್ತುವಾಗಿದ್ದೆನಂತೆ. (ಅವರೇ ಎಷ್ಟೋ ವರ್ಷಗಳ ನಂತರ ಹೇಳಿದ್ದು.) ಮುಂದೆ ನಾಲ್ಕು ವರ್ಷಗಳ ಅವಧಿಯಲ್ಲಿ ಪೈಜಾಮ, ಟೊಪ್ಪಿಗೆ ಇತ್ಯಾದಿ ಎಲ್ಲ ಬಂಧನಗಳೂ ಕಳಚಿ ಹೋಗಿ ಬಿ.ಎ. ಮುಗಿಸುವ ಹೊತ್ತಿಗೆ ನಾನೊಬ್ಬ ನೇರ ಸ್ವಭಾವದ ಅಡ್ಡ ಮಾತುಗಳ ಸಾಹಿತಿಯಾಗಿ, ವಾಗ್ಮಿಯಾಗಿ ಕಾಲೇಜಿನ ಮಟ್ಟಿಗೆ ಒಬ್ಬ ಸಾರ್ವಜನಿಕ ವ್ಯಕ್ತಿಯಾಗಿದ್ದೆ.

ಕನಸುಗಳ ಕಾಡಿನಲಿ ಆಟಗಳನಾಡುತಲೆ
ನಾಚಿಸುವೆ ನಂದನದ ಅರಸನನ್ನು.
ಪಕ್ಷಿಗಳ ಚಿಲಿಪಿಲಿಗೆ ಪಲ್ಲವಿಯ ಹಾಡುತಲೆ
ಅರಸುವೆನು ಎನ್ನದೆಯ ಅರಸಿಯನ್ನು.

– ಎಂದು ‘ನಾಳೆಗಿದೊ ಸುಸ್ವಾಗತ’ (ಮಾರ್ಚ್ ೧೯೫೭) ಹಾಡುವ ಮರಿ ಕವಿಯಾಗಿದ್ದವನು ಮತ್ತೆ ಸಪ್ಟಂಬರ್ ೧೯೬೦ರ ಹೊತ್ತಿಗೆ….

ನನ್ನ ಹಣೆಬರಹಕ್ಕೆ ನಾನೆ ಹೊಣೆಯಾಗಿರಲು
ನಿನ್ನ ಒಣ ಆಸರವು ನನಗೆ ಬೇಡ
ನಿನ್ನ ಹೊಗಳಿಕೆ ಬೇಡ, ನಿನ್ನ ತೆಗಳಿಕೆ ಬೇಡ,
ನಿನ್ನದೆಂಬುದು ನನಗೆ ಯಾವುದೂ ಬೇಡ.

ಎಂದು ಸುತ್ತಲ ಜಗತ್ತನ್ನು ನಿರ್ದಾಕ್ಷಿಣ್ಯವಾಗಿ ನಿರಾಕರಿಸುವ ಭಗ್ನ ಪ್ರೇಮಿಯಾಗಿದ್ದೆ.

*

ಡಾ. ವಿ.ಕೃ. ಗೋಕಾಕ್ ಅವರು ಆಗ ನಮ್ಮ ಪ್ರಿನ್ಸಿಪಾಲರು. ‘ಗೋಕಾಕ್’ ಅಂದೊಡನೆ ಈಗ ನಮ್ಮೆಲ್ಲರಿಗೆ ನೆನಪಾಗುವುದು ೧೯೮೨ – ೮೩ರ ಗೋಕಾಕ್ ಚಳುವಳಿ. (ಅದನ್ನೂ ನಾವೇ, ಧಾರವಾಡದವರು ಸುರು ಮಾಡಿದ್ದು.) ಆದರೆ ಆಗ ಗೋಕಾಕ್ ಅಂದರೆ ಕರ್ನಾಟಕ ಕಾಲೇಜೇ. ಕಾಲೇಜಿನೆದುರು ಬೆಳೆದು ನಿಂತ ಆಕಾಶಮಲ್ಲಿಗೆಯ ಗಿಡದಂತೆ ಇದ್ದ ಗೋಕಾಕರು ನನ್ನಂಥವರ ಬಾಳನ್ನು ಒಂದು ದಂಡೆಗೆ ಹಚ್ಚಿದವರು. ಅವರು ಕ್ಲಾಸಿನಲ್ಲಿ ಪಾಠ ಮಾಡುವಾಗ ಆಡುತ್ತಿದ್ದ ಪ್ರತಿ ಮಾತಿಗೂ ಮಿಂಚಿನ ರೆಕ್ಕೆ ಮೂಡಿದಂತಾಗಿ ಉಂಟಾಗುತ್ತಿದ್ದ ಗಾಂಭೀರ್ಯದ ವಾತಾವರಣ ಒಂದು ರೀತಿಯದಾದರೆ, ಪ್ರತಿ ಶನಿವಾರ ಸಂಜೆ ಅವರ ಬಂಗಲೆಯಲ್ಲಿ ಕಾಲೇಜಿನ ಮರಿ ಕವಿಗಳನ್ನು ಸುತ್ತ ಕೂಡ್ರಿಸಿಕೊಂಡು ಅವರ ಮರಿ ಕವನಗಳಿಗೆ ಹಾರಲು ಕಲಿಸುತ್ತಿದ್ದ ಆತ್ಮೀಯತೆ ಇನ್ನೊಂದು ರೀತಿಯದು. ನಾವೆಲ್ಲ ಸೇರಿ ‘ಕಮಲ ಮಂಡಲ’ ಕಟ್ಟಿದೆವು. ‘ಭೃಂಗನಾದ’ ಎಂಬ ಹೆಸರಿನ ಕವನ ಸಂಕಲನ ಪ್ರಕಟಿಸಿದೆವು. ಅವರು ಆಗೀಗ ಸಂಜೆಯ ಮುಂದೆ ನನ್ನನ್ನು ವಾಕಿಂಗ್ ಕರಕೊಂಡು ಹೋದಾಗ ಕಾವ್ಯದ ಬಗ್ಗೆ, ಮಾನವತೆ ಬಗ್ಗೆ, ವಿಶ್ವದ ಬಗ್ಗೆ ಏನೇನೋ ಹೇಳುತ್ತಿದ್ದರು. ನನಗೀಗ ಯಾವುದೂ ನೆನಪಿಲ್ಲ. ಬೆಟ್ಟದಂಥ ಆ ಚೇತನದೊಂದಿಗೆ ಗುಂಡುಕಲ್ಲಿನ ಹಾಗೆ ನಡೆದಷ್ಟು ಮಾತ್ರ ಗೊತ್ತು. ಆ ದನಿಯ ಅನುಕರಣ ಮಾತ್ರ ಈಗಿನ ನೆನಪು.

೧೯೫೮ರಲ್ಲಿ ಕರ್ನಾಟಕ ಕಾಲೇಜು ಕರ್ನಾಟಕ ವಿಶ್ವವಿದ್ಯಾಲಯದ ನಿಯಂತ್ರಣಕ್ಕೆ ಒಳಪಟ್ಟು ಆರ್ಟ್ಸ್ ಮತ್ತು ಸೈನ್ಸ್ ಅಂತ ಎರಡು ತುಂಡುಗಳಾದವು. ಗೋಕಾಕರು ಹೈದ್ರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಸಂಸ್ಥೆಯ ನಿರ್ದೇಶಕರಾಗಿ ಹೊರಟು ನಿಂತಾ ನಾನು –

ಕನ್ನಡದ ಗಡಿ ಬಿಟ್ಟು ಹೊರಗೆ ನೀನಡಿ ಇಟ್ಟು
ಎಲ್ಲಿ ಬೇಕಾದಲ್ಲಿ ಹೋದರೇನು?
ನಿನ್ನ ಲೇಖನಿ ಬರೆಯೆ, ಕವನಗಳು ಎದೆ ತೆರೆಯೆ
ಅವುಗಳಿಂಪನು ಪವನ ತಾರದೇನು?
ತುಂಬು ಹರಕೆಯ ಬಯಸಿ, ನಿನ್ನನೇ ನೆನೆನೆನಿಸಿ
ಮಿಡಿಯುತಿದೆ ನನ್ನದೆಯ ಏಕತಾರಿ.
ಎಲ್ಲಿಯೇ ಬಿಡು ಬೀಡು, ನಿನ್ನ ಹಾಡನು ಹಾಡು
ಹೂ ಹೊದಿಕೆ ಹೊದ್ದಿರಲಿ ನಿನ್ನ ದಾರಿ…..

ಅಂತ ಬರೆದೆ. ಮುಂದೆ ನನ್ನ ಪ್ರಥಮ ಸಂಕಲನ ಬಾನುಲಿ (೧೯೬೦) ನನ್ನ ಪ್ರೀತಿಯ ಗುರುವಿನ ಮುನ್ನುಡಿಯನ್ನು ಹೊತ್ತು ಪ್ರಕಟವಾಯಿತು.

‘ಬಾನುಲಿ’ಗೆ ಆ ವರ್ಷದ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿತು. ಬಹುಮಾನದ ಮೊತ್ತ ರೂ. ೭೫೦ ಅಂತ ಸುದ್ದಿ ಹತ್ತಿದ ಹಿಂದಿನ ದಿನ ನಮ್ಮ ಅವ್ವನಿಗೆ ಲಕ್ವಾ ಹೊಡೆದು ಸಾವಿಗೆ ತುದಿಗೆ ಬಂದು ತಲುಪಿದ್ದಳು. ಅಪ್ಪ ಹೇಳಿದ: ‘ಆಯಿತು. ಅವಳ ಔಷಧದ ಖರ್ಚಿಗೆ ಅನುಕೂಲ ಆತು.’

ಆ ಕತೆ ಬೇರೆ.

*

ಗೋಕಾಕರ ನಂತರ ಪ್ರಿನ್ಸಿಪಾಲರಾಗಿ ಬಂದವರು ಪ್ರೊ. ಆರ್ಮಾಂದೊ ಮೆನೆಜಿಸ್ ಅವರು. ಅವರು ಏತಿ ಅಂದರೆ ಇವರು ಪ್ರೇತಿ. ಆದರೆ ಇಬ್ಬರದೂ ನನ್ನ ಮೇಲೆ ಅಗಾಧ ಪ್ರೀತಿ. ನಾನು ಕನ್ನಡದ ಜೊತೆಗೆ ಇಂಗ್ಲೀಷ್‌ನಲ್ಲೂ ಕವನ ಬರೆಯುತ್ತಿದ್ದೆ. ಅವನ್ನು ಮೆಚ್ಚಿಕೊಂಡ ಮೆನೆಜಿಸ್ ಅವರು ನಾನು ಬಿ.ಎ. ಎಕನಾಮಿಕ್ಸ್ ಆಗಿದ್ದರೂ ನನಗೆ ಇಂಗ್ಲೀಷ್ ಎಂ.ಎ.ಗೆ ಪ್ರವೇಶ ಕೊಡಿಸಿದರು. ಎಂ.ಎ. ದಲ್ಲಿ ಪ್ರಥಮ ರ‍್ಯಾಂಕ್ ಬಂದಿದ್ದರಿಂದ ನನಗೆ ಮರುದಿನವೇ ನೌಕರಿ ಸಿಕ್ಕಿತು. ಎರಡು ವರ್ಷಗಳ ಅಂತರದ ನಂತರ ನಾನು ವಾಪಾಸು ಬಂದಿದ್ದು ಅದೇ ನನ್ನ ಪ್ರೀತಿಯ ಕರ್ನಾಟಕ ಕಾಲೇಜಿಗೆ – ಇಂಗ್ಲೀಷ್ ಲೆಕ್ಚರರ್‌ ಆಗಿ, ಇಂಗ್ಲೀಷ್ ‘ಪ್ರೊಪೇಶ್ವರನಾಗಿ’, ೧೯೬೨ರಿಂದ ೧೯೬೯ ರವರೆಗಿನ ಮಾಸ್ತಗಿರಿಯ ಕಾಲ, ವಿದ್ಯಾರ್ಥಿ ಜೀವನದ ಮೊದಲ ನಾಲ್ಕು ವರ್ಷಗಳಷ್ಟೇ ರೋಮಾಂಚನಕಾರಿ ಹಾಗೂ ಕೋಲಾಹಲಕಾರಿ.

ಇಡೀ ಉತ್ತರ ಕರ್ನಾಟಕದಲ್ಲಿಯೇ ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ ಕರ್ನಾಟಕ ಕಾಲೇಜು ಕಂಗೊಳಿಸುತ್ತಿದ್ದ ಕಾಲ ಅದು. ಗೋಕಾಕರ ಭವ್ಯ ವ್ಯಕ್ತಿತ್ವ ಉಂಟು ಮಾಡಿದ್ದ ಪರಿಸರದ ಪರಿಣಾಮವದು. ಪ್ರಿನ್ಸಿಪಾಲರನ್ನೊಳಗೊಂಡಂತೆ ನಾವೆಲ್ಲ ಪ್ರಾಧ್ಯಾಪಕರು ಸೇರಿ ಒಂದು ಇಂಗ್ಲೀಷ್ ನಾಟಕವನ್ನೇ ಮಾಡಿದ್ದೆವು. ಸಿದ್ದಲಿಂಗ ಪಟ್ಟಣಶೆಟ್ಟಿ ಮತ್ತು ನಾನು ಒಮ್ಮೆ ಮೈಸೂರ ಕಡೆ ಹೋದಾಗ ತೇಜಸ್ವಿ ಮತ್ತು ಶ್ರೀರಾಮ ಕೂಡಿ ಸುರು ಮಾಡಿದ್ದ ‘ಲಹರಿ’ ಸಾಹಿತ್ಯ ಪತ್ರಿಕೆಯಿಂದ ಸ್ಪೂರ್ತಿ ಪಡೆದು ನಾವೂ ಯಾಕೆ ಧಾರವಾಡದಿಂದ ಒಂದು ಪತ್ರಿಕೆ ಚಾಲೂ ಮಾಡಬಾರದು ಅಂದುಕೊಂಡೆವು. ಗಿರಡ್ಡಿ ಗೋವಿಂದರಾಜರೂ ಕನಸಿನಲ್ಲಿ ಪಾಲುಗಾರರಾದರು. ಹೀಗೆ ಸುರುವಾದದ್ದು ‘ಸಂಕ್ರಮಣ’ ಅದು ೧೯೬೪ ರಲ್ಲಿ.

ಆಸೆ, ಕನಸು, ನಿಟ್ಟುಸಿರುಗಳೆಲ್ಲ ಕಾವ್ಯ ಕಲ್ಪನೆಯ ಪರಿಧಿಯನ್ನು ದಾಟಿ ವಾಸ್ತವದ ಬಾಗಿಲು ಬಡಿಯುತ್ತಿದ್ದ ವಯೋಮಾನ ಮತ್ತು ಮನೋಮಾನ. ಬದುಕಿನ ಅನುಭವಗಳೆಲ್ಲ ಈ ನಾಲ್ಕೆಂಟು ವರ್ಷಗಳಲ್ಲಿ ಕಿಕ್ಕಿರಿದು ತುಂಬಿಕೊಂಡು ಸ್ಪೋಟಗೊಳ್ಳುತ್ತಿರುವವೇನೋ ಎಂಬ ಎದೆ ಒಡೆಯುವ ಪ್ರಸಂಗಗಳು. ಕಾಲೇಜಿನ ಸುತ್ತಲಿನ ಚಿಕ್ಕ ಪುಟ್ಟ ಗುಡ್ಡ ಕಣಿವೆಗಳೆಲ್ಲ ನಮ್ಮ ಜೋಡಿ ಜೋಡಿ ಪಾದಗಳಿಗೆ ಹೂವಿನ ಹಾದಿಗಳಾದವು. ಆಕಾಶದಿಂದ ಸುರಿವ ಮಳೆ ನಮ್ಮ ತಲೆ ಮೇಲಿನ ಕೊಡೆಗೆ ಬಡಿದು ತುಂತುರು ಹನಿಗಳಾಗಿ ಭುಜ ತೊಯ್ದವು. ಒಂದು ಬಿರುಗಾಳಿ ಬೀಸಿ ಇದ್ದದ್ದನೆಲ್ಲ ತೊಳಕೊಂಡು ಹೋಗಿ ಉಂಟಾದ ಖಾಲಿ ಖಾಲಿ ಬದುಕನ್ನು ಮತ್ತೊಂದು ಗಾಳಿ ಬೀಸಿ ತುಂಬಿತೇ ತುಂಬಿತೇ ಎಂಬ ನಿರಂತರ ಕಾತರದಲ್ಲಿದ್ದಾಗಲೇ ನನ್ನ ಕಾಲೇಜು ಪ್ರಾಧ್ಯಾಪಕತ್ವದ ಹಂತ ಮುಗಿದು ನಾನು ವಿಶ್ವವಿದ್ಯಾಲಯಕ್ಕೆ ಹೋಗಬೇಕಾಯಿತು..

*

ಇತ್ತೀಚಿಗೆ- ಅಂದರೆ ಏಪ್ರಿಲ್ ೪ ಮತ್ತು ೫ ರಂದು – ಕರ್ನಾಟಕ ಕಾಲೇಜಿನ ಅಮೃತ ಮಹೋತ್ಸವ (ಪ್ಲಾಟಿನಂ ಜ್ಯುಬಿಲಿ) ಪ್ರಾರಂಭವಾಯಿತು. ಕಾಲೇಜಿನ ಹಳೆಯ ವಿದ್ಯಾರ್ಥಿ ಎಸ್. ಆರ್. ಬೊಮ್ಮಾಯಿ ಅವರಿಂದ ಸನ್ಮಾನಿತರಾದವರಲ್ಲಿ ಹುಬ್ಬಳ್ಳಿಯ ಶ್ರೀ ಆರ್. ಎಚ್. ಗೂಡವಾಲಾ ಒಬ್ಬರು. ಅವರಿಗೀಗ ೯೯ ವರ್ಷ. ಕಾಲೇಜಿಗೆ ೫೦ ವರ್ಷ. ಅಂದರೆ ಅವರಿಗೆ ತಾರುಣ್ಯ ಮೂಡಿದಾಗ, ಮುಖದ ಮೇಲೆ ಮೀಸೆ ಮೂಡಿದಂತೆ, ಕರ್ನಾಟಕ ಕಾಲೇಜು ಮೂಡಿರಬೇಕು. ಗೂಡವಾಲಾ ಅವರಿಂದ ಹಿಡಿದು ತೀರ ಇತ್ತೀಚಿನ ಲಕ್ಷಗಟ್ಟಲೆ ವಿದ್ಯಾರ್ಥಿಗಳು ಈ ಕಾಲೇಜಿನಿಂದ ಹೊರಬಂದಿರಬೇಕು. ಹೊರಬರುವುದು ಅಂದರೆ ಕಾಲೇಜನ್ನು ಒಳಗೆ ನುಂಗಿಕೊಂಡೇ ಹೊರಗೆ ಬರುವುದು. ಅಂತರಾಳದೊಳಗಿನ ಈ ಬಿಂಬ ಸ್ಥಾವರವೋ ಜಂಗಮವೋ? ಸ್ಥಾವರಕ್ಕಳಿವುಂಟು – ಅಂತ ಬಸವಣ್ಣ ಹೇಳಿದ. ಆದರೆ ಸ್ಥಾವರವೇ ಜಂಗಮವಾದಾಗ ಅದಕ್ಕೆ ಅಳಿವು ಎಂಬುದು ಎಲ್ಲಿ?

ಅಮೃತ ಮಹೋತ್ಸವವನ್ನು ಕಾಟಾಚಾರದ ಕಾರ್ಯಕ್ರಮವೆಂದು ಮಾಡದೆ ಅದನ್ನು ತನ್ನ ಮನೆಯ ಹಬ್ಬವೆಂಬಂತೆ, ತನ್ನ ಬದುಕಿನ ಒಂದು ಸಾಧನೆ ಎಂಬಂತೆ ಸಂಪೂರ್ಣವಾಗಿ ತೊಡಗಿಸಿಕೊಂಡು ಮಾಡುತ್ತಿರುವವರು ಕರ್ನಾಟಕ ವಿಶ್ವವಿದ್ಯಾಲಯದ ಇಂದಿನ ಕುಲಪತಿ ಡಾ. ಪಠಾನ್ ಅವರು. ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ ಪಠಾನ್ ಅವರದು ಮಾತೃ ಸಂಸ್ಥೆಯೊಂದಿಗೆ ಕರುಳಿನ ಸಂಬಂಧ ಹಾಗೆಯೇ ಕಾಲೇಜಿನ ಇಂದಿನ ಪ್ರಿನ್ಸಿಪಾಲರಾಗಿರುವವರು ಡಾ.ವೀಣಾ ಶಾಂತೇಶ್ವರ. ೧೯೬೪ ರಲ್ಲಿಯೇ ಕಾಲೇಜಿನ ಮಿಸೆಲೆನಿಯಲ್ಲಿ ‘ಮಧುರಸ್ಮೃತಿ’ ಎಂಬ ಸಣ್ಣ ಕತೆ ಪ್ರಕಟಿಸಿದ್ದ ವೀಣಾ ಯಲಬುರ್ಗಿ ಈಗ ಕನ್ನಡದ ಖ್ಯಾತ ಸಾಹಿತಿಯಾಗಿರುವುದು ಕಾಲೇಜಿನ ಗುಡ್ಡ ಕಣಿವೆಗಳ ಗಾಳಿಯನ್ನು ಸೇವಿಸಿಯೇ.

ಈಗೇನೋ ಶಿಕ್ಷಣ ಎಂಬುದು ಸಾರ್ವತ್ರೀಕರಣಗೊಂಡು ಊರೂರಿಗೆ ಕಾಲೇಜುಗಳಾಗಿವೆ. ಆದರೆ ಆ ಕಾಲಕ್ಕೆ ನಮ್ಮ ಭಾಗಕ್ಕೆ ಒಂದೇ ಒಂದೇ ಕಾಲೇಜು, ಅದು ಕರ್ನಾಟಕ ಕಾಲೇಜು. ನೂರಾರು ಪ್ರಾಧ್ಯಾಪಕರು. ಸಾವಿರಾರು ವಿದ್ಯಾರ್ಥಿಗಳು. ಹೀಗಾಗಿ ಅಲ್ಲಿ ಪ್ರಾಧ್ಯಾಪಕರಾಗಿರುವವರಿಗೆ ಎಲ್ಲಿಯೂ ‘ಖಾಸಗಿ’ ಬದುಕು ಎಂಬುದಿಲ್ಲ. ಇವತ್ತಿಗೂ ಎಲ್ಲಿ ಹೋದರೂ – ಬಾರುಗಳಲ್ಲಿ ಸಹ – ಯಾವುದೋ ಮೂಲೆಯಿಂದ ಒಬ್ಬ ಉದ್ಭವವಾಗಿ, ‘ನಾನು ನಿಮ್ಮ ಸ್ಟೂಡೆಂಟ್ ಸಾರ್’ ಅಂತ ಪ್ರೀತಿಯಿಂದ ಬಳಿಗೆ ಸಾರುತ್ತಾನೆ. ನನ್ನ ಅನೇಕ ಮಾಜಿ ವಿದ್ಯಾರ್ಥಿಗಳು – (ಉದಾ: ಕುಲಪತಿ ಪಠಾನ್, ಪ್ರಿನ್ಸಿಪಾಲ್ ವೀಣಾ ….) ದೊಡ್ಡ ದೊಡ್ಡ ಸ್ಥಾನ ಗಳಿಸಿದ್ದಾರೆ. ಅನೇಕರು ಮಂತ್ರಿಗಳಾಗಿದ್ದಾರೆ. ವಿಚಿತ್ರ ಆದರೂ ಸತ್ಯವೆಂದರೆ, ಎಮರ್ಜನ್ಸಿ ಕಾಲದಲ್ಲಿ ಇಂದಿರಾ ಸರಕಾರ ನನ್ನನ್ನು ಜೇಲಿಗೆ ಹಾಕಿದಾಗ ಮೊದಲನೇ ದಿನವೇ ಸೆಲ್ಯೂಟ್ ಹೊಡೆದವ – ಅವನೂ ಕೂಡ ಕರ್ನಾಟಕ ಕಾಲೇಜಿನ ನನ್ನ ಮಾಜಿ ವಿದ್ಯಾರ್ಥಿ. ಯಾವುದೋ ಕೇಸಿನಲ್ಲಿ ಸಿಕ್ಕು ಒಳಗೆ ಬಂದಿದ್ದನಂತೆ!.

*

ಕೆಸಿಡಿಯೊಂದಿಗೆ ನಮ್ಮದು ತಲೆತಲಾಂತರದ ಸಂಬಂಧ. ೧೯೨೦ – ೨೧ ರ ಸುಮಾರಿಗೆ ನಮ್ಮಪ್ಪ ಈ ಕಾಲೇಜಿನ ವಿದ್ಯಾರ್ಥಿ. ಅವನಿಗೆ ಓದು ಮುಗಿಸಲಿಕ್ಕಾಗಲಿಲ್ಲ. ಅಷ್ಟಕ್ಕೆ ಮುಗಿಸಿ ಟ್ಯೂಷನ್ ಕ್ಲಾಸು ತೆಗೆದು ಇಂಗ್ಲೀಷ್ ಮಾಸ್ತರ ಎಂದೇ ಪ್ರಸಿದ್ದನಾದವ. ನನ್ನ ಅಣ್ಣ, ತಮ್ಮ, ತಂಗಿ, ಹೆಂಡತಿ, ಮಗಳು, ಮಗ ಎಲ್ಲರೂ ಈ ಕಾಲೇಜಿನ ಡೆಸ್ಕುಗಳಲ್ಲಿ ಕುಂತವರು. ನನ್ನ ಮಗ ಸುನೀಲ ಬಿ.ಎ. ದಲ್ಲಿ ಯೂನಿವರ್ಸಿಟಿಗೆ ಫಸ್ಟ ರ‍್ಯಾಂಕು ಬಂದ. ನನ್ನದು ವಿದ್ಯಾರ್ಥಿಯಾಗಿ ನಾಲ್ಕುವರ್ಷ, ಪ್ರಾಧ್ಯಾಪಕನಾಗಿ ಏಳು ವರ್ಷ – ಹೀಗಾಗಿ ಕಾಲೇಜಿನೊಂದಿಗೆ ಹನ್ನೋಂದು ವರ್ಷದ ಸಂಬಂಧ. ಇಂದಿಗೂ ಧಾರವಾಡದ ಏಳು ಗುಡ್ಡಗಳ ಬಸಿರಿನಲ್ಲಿ ಅಂತರಗಂಗೆಯಾಗಿ ಹರಿಯುತ್ತಿರುವ ಶಾಲ್ಮಲಾ ಈ ಸಂಬಂಧದ ನಿರಂತರತೆಗೆ ಮೌನ ಸಾಕ್ಷಿಯಾಗಿದ್ದಾಳೆ.

*

ಬಿ.ಎ ಅಂತಿಮ ವರ್ಷದ ಪಾಠ – ಪ್ರವಚನ ಮುಗಿದಿವೆ. ಏಪ್ರಿಲ್ ದಲ್ಲಿ ಪರೀಕ್ಷೆ ಪ್ರಾರಂಭ. ೧೯೬೦ ಫೆಬ್ರುವರಿಯಲ್ಲಿ ಫೇರ್ ವೆಲ್ ಫಂಕ್ಷನ್ – ವಿದಾಯ ಕಾರ್ಯಕ್ರಮ. ಆಗ ತುಂಬಿದ ಸಭೆಯಲ್ಲಿ ಓದಿದ ಕವನ ಇದು.

ಇವರು

ಯಾರೋ ಏನೋ ಇವರು ಇಂದಿಗೂ ನಾನರಿಯೆ:
ಎಲ್ಲೊ ಎಂತೋ ಏಕೊ ಕೂಡಿದವರು.
ಒಲುಮೆಯಲ್ಲಿ ಚಿಮ್ಮುತಿಹ ನನ್ನೆದೆಯ ಗೀತಕ್ಕೆ
ಸ್ನೇಹದಲಿ ಹಿಮ್ಮೇಳ ಹಾಡಿದವರು.

ಕನಸು ರಚಿಸಿದ ಜಗದಿ ಮನಸು ವಿರಮಿಸುವಾಗ
ದೂರ – ನನಸಿನ ದಾರಿ ತೋರಿಸಿದವರು.
`ಹೋಗಿ ಬಾ’ ಎಂದೆನುತ ಬಾಯಿತುಂಬಾ ಹರಸಿ
ಪ್ರೇಮದಲಿ ಶುಭವನ್ನು ಕೋರಿದವರು.

ಕಣ್ಣ ನೋಟಗಳಲ್ಲಿ ಮಲ್ಲಿಗೆಯನರಳಿಸುತ
ಕವನ – ವದನದ ಚೆಲುವ ತೋರಿದವರು
ಅಕ್ಕ ತಂಗಿಯರಾಗಿ ಅಕ್ಕರೆಯ ಮಾತಿನಲಿ
ಸಕ್ಕರೆಯ ಸವಿಯನ್ನು ಬೀರಿದವರು.

ನನ್ನ ಮನ ಬೆಂದಾಗ ಮುಂದಾಗಿ ಬಲು ರಮಿಸಿ
ಒಂದಾಗಿ ನನ್ನೊಡನೆ ಮರುಗಿದವರು
ನಗೆಗೆ ನಲುಮೆಯ ನೀಡಿ, ಮುಂಗಾವ – ಮಂಜಿನೊಲು
ಬೆಳಗಿ, ಎದೆಯಲಿ ಮರಳಿ ಕರಗಿದವರು.

ನಾಲ್ಕು ದಿನ ನಲಿದಾಡಿ ಮತ್ತೆ ಅಗಲಿದರೇನು?
ಮಧುರ ನೆನಪಿನ ಮಧುವ ತರುವರಿವರು.
ಎದೆಯ ಕಡಲಾಳದಲ್ಲಿ ಮುತ್ತಾಗಿ ಮಲಗಿರುತ
ಅಂತರಾಳಕೆ ಬೆಳಕನೀಯುವವರು.

ಈ ಅಂತರಳಾದ ಬೆಳಕಿನ ಮೂಲ ಬಿಂದು: ಇಂದಿಗೂ ಧಾರವಾಡದ ಭೂಮಿಗೂ ಕಾಮನ ಬಿಲ್ಲಾಗಿ ನಿಂತಿರುವ ಕೆಂಪು ಇಟ್ಟಂಗಿಯ ಕಟ್ಟಡ, ಕರ್ನಾಟಕ ಕಾಲೇಜು.

-೧೯೯೮