ಒಮ್ಮೆ ವಿಧಾನಸೌಧದ ಲಿಪ್ಟಿನಲ್ಲಿ ಮೇಲಕ್ಕೆ ಹೋಗುತ್ತಿದ್ದಾಗ ಅದೇ ಲಿಪ್ಟಿನಲ್ಲಿ ಒಬ್ಬ ಅಪ್ಪಟ ಖಾದೀಧಾರಿ, ನಮಸ್ಕಾರ ಸರ್ ಅಂತ ನಮಸ್ಕಾರ ಮಾಡಿದರು. ಟಿಪಿಕಲ್ ರಾಜಕಾರಣಿ. ಅಡಿಯಿಂದ ಮುಡಿಯವರೆಗೆ – (ಪಾದ ಮತ್ತು ಮುಖ ಹೊರತುಪಡಿಸಿ) – ಶುಭ್ರವಸನ ಧಾರಿ. ಆ ಮಾತಿನ ಧಾಟಿ ಮತ್ತು ಚಹರೆಯ ಲಕ್ಷಣ ನೋಡಿದಾಗ ಅವರು ಮಾಡಿದ್ದು ಮಾಮೂಲಿ ಬೆಂಗಳೂರಿನ ನಮಸ್ಕಾರವಲ್ಲ ಅಂತ ಅನ್ನಿಸಿ ಅವರ ಕಣ್ಣಲ್ಲಿಯೆ ಕಣ್ಣಿಟ್ಟು ನೋಡಿದೆ.

ನನ್ನ ಅನುಮಾನ, ಅವರೊಬ್ಬ ಮಾಜಿ ಶಾಕರಿರಬೇಕು ಅಂತ. ಹಾಲಿಯಾಗಿದ್ದರೆ ಅವರ ಹಿಂದೆ ಮುಂದೆ ಎಂಟು ಹತ್ತು ಹಿಂಬಾಲಕರಾದರೂ ಇರುತ್ತಿದ್ದರು. ಸಚಿವರಾಗಿದ್ದರೆ ಈ ಸಂಖ್ಯೆ ಇಪ್ಪತ್ತು ದಾಟುತ್ತದೆ. ಮಾಜಿ, ಅಂತ ಯಾಕೆ ಸಂಶಯವೆಂದರೆ ಒಮ್ಮೆ ವಿಧಾನಸೌಧದ ರುಚಿ ಕಂಡವರು ಕಾರಣವಿರಲಿ, ಇಲ್ಲದಿರಲಿ ಅಲ್ಲಿ ಪ್ರೇತಾತ್ಮಗಳಂತೆ ಸುಳಿದಾಡುತ್ತಿರುತ್ತಾರೆ. ಇದೂ ಅಂಥ ಒಂದು ಗಿರಾಕಿ ಇರಬಹುದು….

ನನ್ನ ಲಹರಿಗೆ ಕತ್ತರಿ ಹಾಕಿದಂತೆ ಆ ವ್ಯಕ್ತಿ. “ನಾ ನಿಮ್ಮ ಸ್ಟೂಡಂಟು, ಸರ್s .” ಅಂದಿತು. ಪ್ರೀತಿಯ ನಗೆ ಚೆಲ್ಲಿ ಮತ್ತೊಮ್ಮೆ ನೋಡಿದೆ. ನನ್ನ ವಿದ್ಯಾರ್ಥಿ ಅಂದ ಮೇಲೆ ನನಗಿಂತ ಕಡಿಮೆ ವಯಸ್ಸಿರಬೇಕು. ಆದರೆ ಮುಖದಲ್ಲಿ ಗೆರೆಗಳು, ಮಾತಿನಲ್ಲಿ ಹಿರೇತನ, ವರ್ತನೆಯಲ್ಲಿ ಗಾಂಭೀರ್ಯ. ನಮ್ಮ ರಾಜಕೀಯ ಮನುಷ್ಯನನ್ನು ಎಷ್ಟು ಹಣ್ಣು ಮಾಡುತ್ತದೆಯಲ್ಲ ಅನ್ನಿಸಿತು.

ನನ್ನ ಮೂವತ್ತು ಮೂವತ್ತೈದು ವರ್ಷದ ಮಾಸ್ತರಿಕೆಯ ಮಹಾಗ್ರಂಥದಲ್ಲಿ ಈ ವಿದ್ಯಾರ್ಥಿ ಕಾಲ – ದೇಶ ನಿರ್ಣಯದ ಅನ್ವೇಷಣೆಗೆ ಮನಸ್ಸು ತೊಡಗಿತ್ತು. ಅವನಿಗಿದು ಗೊತ್ತಾಗಿ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ತಾನು ಇದ್ದ ವರ್ಷ, ಓದುತ್ತಿದ್ದ ತರಗತಿ, ನಾನು ಅವನ ಕ್ಲಾಸಿಗೆ ಕಲಿಸುತ್ತಿದ್ದ ಪಠ್ಯ ಅವನು ಸಿಗಲೇ ಇಲ್ಲ. ಅವನಿಗೆ ನಿರಾಸೆ, ಅಪಮಾನ. ಏನು, ನಾನು ಮೂವತ್ತೈದು ವರ್ಷ ನೆನಪಿನಲ್ಲಿಟ್ಟುಕೊಂಡು ಈ ಮಾಸ್ತರನಿಗೆ ನನ್ನ ನೆನಪೇ ಇಲ್ಲವಲ್ಲ – ಎಂಬ ಸಿಟ್ಟು ಕೊನೆಯ ಕೊಂಡಿಯಾಗಿ …..

ಅವನು: ಸರ್. ಆವಾಗ ಒಂದು ದೊಡ್ಡ ಸ್ಟ್ರೈಕ್ ಆಗಿತ್ತು ನೋಡ್ರಿ. ಸ್ಟ್ರೈಕ್ ಲೆವೆಲ್,

ನಾನು: ಹಾಂ ಹೌದು ಹೌದು.

ಅವನು: ಆವಾಗ ನಾನs ಸ್ಟೂಡಂಟ್ ಲೀಡರ್ ಆಗಿದ್ದಿನ್ರೀ ಸsರ್, ಪೇಪರಿನಾಗೆಲ್ಲಾ ಫೋಟೋ ಬಂದಿತ್ತು.

ಅವನ ರಾಜಕೀಯ ಬದುಕಿಗೆ ಬುನಾದಿಯಾಗಿದ್ದ ಆ ಘಟನೆಯ ಪ್ರಸ್ತಾಪದ ನಂತರವೂ ನನ್ನ ಮುಖ ಗೋಡೆಯೇ ಆಗಿದ್ದನ್ನು ಕಂಡ ಅವನು ತೀರ ಕಟ್ಟ ಕಡೆಯ ಅಸ್ತ್ರವನ್ನು ಉಪಯೋಗಿಸಿದ. ನನ್ನ ಹಳೆಯ ವಿದ್ಯಾರ್ಥಿಗಳು ಮಾಮೂಲಿಯಾಗಿ ಅನುಸರಿಸುವ ತಂತ್ರವಿದು. ತಮ್ಮ ಕ್ಲಾಸ್ ಮೇಟ್ ಗಳಾಗಿದ್ದ ಸುಂದರ ಹುಡುಗಿಯರ ಹೆಸರು ಹೇಳುವುದು. ಅವರಿಗೊಂದು ಗ್ಯಾರಂಟಿ ಇರುತ್ತದೆ: ಈ ಮಾಸ್ತರ ಮಂದಿ ಏನು ಮರೆತರೂ ಆ ಹುಡುಗಿಯರನ್ನು ಮರೆಯುವದಿಲ್ಲ ಅಂತ ಇದೇನೂ ಅಂಥ ಸತ್ಯ ದೂರವಾದ ಆಪಾದನೆ ಅಲ್ಲ ಅಂತ ನನ್ನ ಅಭಿಪ್ರಾಯ.

ಈಗ ನನ್ನೆದುರಿಗಿದ್ದ, ಮಾಜಿ ಎಂಎಲ್‌ಎ ಆಗಿರದಿದ್ದರೂ ಭಾವಿ ಎಂಎಲ್‌ಎ ಆಗಬಹುದಾದ ನನ್ನ ಮಾಜಿ ವಿದ್ಯಾರ್ಥಿ, ತನ್ನ ಮಾಜಿ – ಮಾಸ್ತರನ ಮೇಲೂ ಅದೇ ಪ್ರಯೋಗ ಮಾಡಿದ. ಒಂದು … ಎರಡು …. ಮೂರು … ಭೂತಕಾಲದ ಸಮುದ್ರದಡಿಯಲ್ಲಿ ಹುದುಗಿ ಹೋಗಿದ್ದ ಆ ಸುಂದರ ಮುತ್ತು – ಹವಳ- ಕಪ್ಪೆಚಿಪ್ಪುಗಳು ಒಂದೊಂದಾಗಿ ಎದುರು ಬಂದು ನನ್ನ ಸದ್ಯದ ವಯಸ್ಸಿನಲ್ಲಿ ಭಾರೀ ಕುಸಿತವನ್ನು ಮಾಡಿದವು.

“ಓ …… ಈಗ ಗೊತ್ತಾತು ಬಿಡ್ರಿ ” – ಅಂದೆ, ನನ್ನ ಮುಖ ಆಗ ಮಿಂಚುತ್ತಿರಬೇಕು ಅವನಿಗೂ ಸಮಾಧಾನವಾಯಿತು. “ಮತ್ತ ಭೆಟ್ಟಿ ಆಗ್ತನ್ರಿ, ಸsರ್ ” ಅಂತ ಎರಡನೆ ನಮಸ್ಕಾರ ಹೇಳಿ ವಿಧಾನಸೌಧದ ತಿರುವಿನಲ್ಲಿ ಮಾಯವಾದ.

ಖರೆ ಹೇಳಬೇಕೆಂದರೆ: ನನಗೆ ‘ಗೊತ್ತು’ ಆದದ್ದು ಆ ಹುಡುಗಿಯರ ಮುಖಗಳೇ ಹೊರತು ಈ ಪ್ರೀತಿಯ ಶಿಷ್ಯನ ಮುಖವಲ್ಲ!… ಮತ್ತೆ ಭೆಟ್ಟಿಯಾದಾಗ ಈ ಸಮಸ್ಯೆ ಇರುವುದಿಲ್ಲ. ಏಕೆಂದರೆ ಮುಖ ಪರಿಚಯ ಆಗಿದೆಯಲ್ಲ.

*

ಹಾಗೆ ನೋಡಿದರೆ ನನ್ನ ನೆನಪಿನ ಶಕ್ತಿ ಅಗಾಧವಾದದ್ದೇ. ನೋಡಿದ್ದು, ಕೇಳಿದ್ದು ಎಲ್ಲವೂ ರೆಕಾರ್ಡಾಗಿ ನನ್ನ ಮೆದುಳಿನ ಕಂಪ್ಯೂಟರಿನಲ್ಲಿ ಬಿದ್ದಿರುತ್ತದೆ. ಬಹಳ ದಿನಗಳ ನಂತರ ಯಾರಾದರೂ ಕಂಡಾಗ ಅವರ ಹೆಸರು ಹಿಡಿದು ಕರೆದರೆ ಅವರಿಗೆ ಬಹಳ ಖುಶಿ. ಜೊತೆಗೆ “ನಿಮ್ಮ ಮೆಮರಿ ಬಹಳ ತೀಕ್ಷ್ಣ ” ಅಂತ ಅವರು ಅಭಿನಂದಿಸಿದರೆ ನನಗೂ ಖುಶಿ. ಆದರೆ ಒಮ್ಮೊಮ್ಮೆ ಒತ್ತುವ ಬಟನ್ನುಗಳು ಅದಲು ಬದಲಾಗಿ ಪರಿಸ್ಥಿತಿ ‘ಬಿಗುವಾಗಿ ಪರಿಣಮಿಸಿದರೂ ಹತೋಟಿಯಲ್ಲಿಯೇ’ ಇರುತ್ತದೆ.

ಬದುಕಿನ ತಿರುವುಗಳಲ್ಲಿ ಭೆಟ್ಟಿಯಾದವರೆಲ್ಲ. ನಮ್ಮ ನಮ್ಮ ನೆನಪೆಂಬ ನೆನಪಿನ ಅಗಾಧ ಸಂತೆಯ ಸದಸ್ಯರಾಗಿದ್ದರೂ ಕೂಡ, ಶಿಕ್ಷಣ ರಂಗದಲ್ಲಿ ಜೀವ ಸವೆಸುವವರಿಗೆ ಮಾತ್ರ ವಿದ್ಯಾರ್ಥಿ ಸಮೂಹವೆಂದರೆ ವಿಶೇಷ ಅಭಿಮಾನ. ‘ನೀನು ನಮಗೆ ಕಲಿಸಿದ್ದೀರಿ ಸಾರ್’ – ಅಂತ ಯಾರಾದರೂ ಹೇಳಿದಾಗ ಆ ವಿಷಯ ಅಷ್ಟಕ್ಕೇ ಬಿಡುವುದು ಒಳ್ಳೆಯದು. ನಾನು ಏನು ಕಲಿಸಿದ್ದೆನೋ ಅವನು ಏನು ಕಲಿತನೋ ಯಾರಿಗೆ ಗೊತ್ತು? ಇಷ್ಟೆ: ನಾನು ಎಲ್ಲಿಯೋ ಯಾವಾಗಲೋ ಮಾಸ್ತರಿಕೆ ಮಾಡುತ್ತಿದ್ದಾಗ ಅವನು ಅದೇ ಸಮಯದ ಅದೇ ಸ್ಥಳದ ಆಜೂಬಾಜು ವಿದ್ಯಾರ್ಥಿಯಾಗಿದ್ದ – ಎಂದು ತಿಳಿದುಕೊಂಡರೆ ಸಾಕು. ಏಕೆಂದರೆ ‘ಶಿಕ್ಷಕ – ವಿದ್ಯಾರ್ಥಿ’ ಸಂಬಂಧ ವ್ಯಾವಹಾರಿಕವಾದದ್ದು. ‘ಗುರು – ಶಿಷ್ಯ’ ಸಂಬಂಧ ಭಾವನಾತ್ಮಕವಾದದ್ದು. ವಿದ್ಯಾರ್ಥಿಯಾದವ ಶಿಷ್ಯನಾಗಿರಲಿಕ್ಕಿಲ್ಲ; ಶಿಷ್ಯನಾದವ ವಿದ್ಯಾರ್ಥಿಯಾಗಿರಲಿಕ್ಕಿಲ್ಲ. ಶಿಷ್ಯರು ಚಲನವಲನ ಸಾಧಾರಣ ಗೊತ್ತಿರುತ್ತವೆಯಾದರೂ ಕೇವಲ ವಿದ್ಯಾರ್ಥಿಯಾಗಿದ್ದವರ ಬಗ್ಗೆ ಈ ಗ್ಯಾರಂಟಿ ಇರುವುದಿಲ್ಲ. ನನ್ನ ಹಳೇ ವಿದ್ಯಾರ್ಥಿಗಳು ಜೀವನದಲ್ಲಿ ಏನೇನೋ ಸಾಧಿಸಿದ್ದಾರೆ: ನೌಕರಿ, ಸ್ಥಾನಮಾನ, ಅಧಿಕಾರ, ಕೀರ್ತಿ, ಪ್ರಶಸ್ತಿ, ಪುರಸ್ಕಾರ ಇತ್ಯಾದಿ. ಕ್ಲಾಸರೂಮು, ವಿದ್ಯಾರ್ಥಿಗಳು, ಪಠ್ಯ, ಪರೀಕ್ಷೆ – ಇಂಥ ಮಾಮೂಲಿ ಚೌಕಟ್ಟಿಗೆ ಸೀಮಿತವಾಗದ ನಾನು ಬದುಕಿನ ಬೇರೆ ಬೇರೆ ಅನಧಿಕೃತ ವಲಯಗಳಲ್ಲೂ ಹೊಕ್ಕಾಡಿ ಬಂದವನು.

ತುರ್ತು ಪರಿಸ್ಥಿತಿಯಲ್ಲಿ ಜೇಲಿಗೆ ಹೋಗಿದ್ದೆನಲ್ಲ. (ಹೋಗಿದ್ದೆ ಎನ್ನುವುದು ಅಹಂಕಾರದ ಮಾತು. ಕರಕೊಂಡು ಹೋಗಿದ್ದರು – ಎಂಬುದು ವಿನಯ ಮತ್ತು ವಾಸ್ತವ.) ಒಳಗೆ ಹೋದ ಒಂದೆರಡು ದಿನಗಳ ನಂತರ ೨೪ – ೨೫ ರ ತರುಣನೊಬ್ಬ ಎದುರಿಗೆ ನಿಂತು ಸೆಲ್ಯೂಟು ಹೊಡೆದು, “ನನಗ ನಿಮ್ಮದು ಗೊತ್ತೈತೀ ಸsರ್. ಅಂದ ಹೆಂಗಪಾ ಅಂದೆ. “ಕೇಸಿಡಿಯೊಳಗ ನಾ ನಿಮ್ಮ ಸ್ಟೂಡೆಂಟು ಸರ್” ಅಂದ. ಎದೆ ಧಸಕ್ ಅಂದಿತು. ಅವನು ಮಾಡಿದ್ದ ಅಪರಾಧವೆಂದರೆ: ವೀರೇಂದ್ರ ಪಾಟೀಲರು ಮುಖ್ಯಮಂತ್ರಿ ಆಗಿದ್ದಾಗ ತಾನು ಅವರ “ಮಗ” ಅಂತ ಹೇಳಿಕೊಂಡು ಅಧಿಕಾರಿಗಳಿಗೆ, ಸಾರ್ವಜನಿಕರಿಗೆ ಟೊಪ್ಪಿಗೆ ಹಾಕಿದ್ದು. ಅವನ ಅಪರಾಧದ ಸ್ವರೂಪ ತಿಳಿದು ಸ್ವಲ್ಪ ಸಮಾಧಾನವಾಯಿತು. ಅಡ್ಡಿ ಇಲ್ಲ. ನನ್ನ ಶಿಷ್ಯರು ಎಲ್ಲಾ ಕಡೆಗೂ ಇದ್ದಾರೆ ಎಂಬ ಅಭಿಮಾನ. ಅವನು ಈಗ ಎಲ್ಲಿದ್ದಾನೋ ಗೊತ್ತಿಲ್ಲ. ಮತ್ತೆ ನಾಮಾಂತರ ಮಾಡಿಕೊಡು ಶಾಸಕನೋ ಸಚಿವನೋ ಆಗಿರಲೂಬಹುದು.

ಗೆಳೆಯರೊಂದಿಗೋ ಸಂಬಂಧಪಟ್ಟವರೊಂದಿಗೋ ಹರಟೆ ಚರ್ಚೆಗಳಲ್ಲಿ ತೊಡಗಿದಾಗ ಯಾರಾದರೂ ಬಂದು ‘ಹಳೇ ವಿದ್ಯಾರ್ಥಿ’ ಅಂತ ಹೇಳಿಕೊಂಡಾಗ ಆಗುವ ಖುಶಿಗಿಂತ, ಆದರಿಂದ ಜೊತೆಗಿದ್ದವರ ಮುಖಗಳಲ್ಲಿ ಹಣಿಕಿ ಹಾಕುವ ಅಸೂಯೆಯೇ ರೋಮಾಂಚನಕಾರಿ. ಆದರೆ ರಾಜ್ಯದಾದ್ಯಂತ ವಿಶಾಲ ವಿದ್ಯಾರ್ಥಿ ಸಮುದಾಯ ಹೊಂದಿರುವ ನನ್ನಂಥವರಿಗಿರುವ ಚಿಂತೆ ಎಂದರೆ: ಇವರಿಂದ ಪಾರಾಗುವ ದಾರಿಯೇ ಇಲ್ಲದೆ, ಒಂದೇ ಏಕಾಂತದ ಕ್ಷಣವೂ ದೊರಕದಿರುವುದು. ಹೀಗೆಯೇ ಒಂದು ದಿನ ಯಾವುದೋ ಊರಿನ ಯಾವುದೋ ಬಾರೊಂದರಲ್ಲಿ ಕುಳಿತಿದ್ದೆ – ಯಾರೊಂದಿಗೋ. ಆ ಕಡೆ ಮೂಲೆಯೊಂದರ ಟೇಬಲ್ ಕಡೆಯಿಂದ ‘ಮುಸುಕಿದ ಮಬ್ಬಿನಲ್ಲಿ’ ತೇಲಿ ತೇಲಿ ಬಂದ ಒಂದು ಆಸಾಮಿ ಕೈಯಲ್ಲಿ ಗ್ಲಾಸು ಹಿಡಕೊಂಡೇ ಬಂದಿದ್ದ. ಅವನೂ ಒಬ್ಬ ಹಳೆಯ ವಿದ್ಯಾರ್ಥಿಯೇ! ಪರಿಚಯ ಮಾಡಿಕೊಂಡು ‘ಲೆಟ್ ಮಿ ಹ್ಯಾವ್ ದ ಪ್ಲೆಜ್ರ್ ಆಪ್ ಯುವರ್ ಕಂಪನಿ. ಸರ್’ ಎಂದು ಅಲ್ಲಿಯೇ ಕುಕ್ಕರಿಸಿದ. ಬಿಲ್ ಅವನೇ ಕೊಟ್ಟಿದ್ದು, ನಾನು ಕೀಟ್ಸ ಕಾವ್ಯಪಾಠ ಮಾಡಿದ್ದು ಅವನಿನ್ನೂ ನೆನಪಿನಲ್ಲಿ ಇಟ್ಟದ್ದು – ಎಲ್ಲಾ ಸಮಾಧಾನಕರವೇ. ಆದರೆ ಅವನು ಅವತರಿಸಿದ ಕ್ಷಣದಿಂದ ನಾನು ಗೆಳೆಯರೊಂದಿಗೆ ಹಂಚಿಕೊಳ್ಳುತ್ತಿದ್ದ ಪೋಲಿ – ಪ್ರಸಂಗಗಳ ನಿರೂಪಣೆಗೆ ಮಾತ್ರ ಕತ್ತರಿ ಬಿತ್ತು … ವಿದ್ಯಾರ್ಥಿ ಎದುರು ಚೀಪಾಗಬಾರದಲ್ಲ!.

*

ಶಿಕ್ಷಕ ವೃತ್ತಿ ಕೈಕೊಂಡವರಿಗೆ ವಿದ್ಯಾರ್ಥಿಗಳ ದಂಡು ಇರುವುದು ಸಹಜ. ಆದರೆ ಬೇರೆ ವೃತ್ತಿಯಲ್ಲಿ ಇದ್ದವರಿಗೆ ಈ ಅನುಕೂಲ ಅಥವಾ ಅಪಾಯ ಇಲ್ಲದಿದ್ದರೂ. ಕಲಿಸಿದ ಮಾಸ್ತರರ ಹಿಂಡಂತೂ ಇದ್ದೆ ಇರುತ್ತದೆ. ನೀವು ಸಮಾಜದಲ್ಲಿ ಸ್ವಲ್ಪ ಹೆಸರು ಗಳಿಸಿ ಪೇಪರುಗಳಲ್ಲಿ ನಿಮ್ಮ ಹೆಸರು ಸ್ವಲ್ಪ ಓಡಾಡುತ್ತಿದ್ದಂತೆ ಎಲ್ಲೇಲ್ಲಿಂದಲೋ ಅವತರಿಸುತ್ತಾರೆ ಈ ಗುರುಗಳು. ಅವರಿಗಷ್ಟು ಅಭಿಮಾನ. ಕನ್ನಡ ಶಾಲೆಯಿಂದ ಯೂನಿವರ್ಸಿಟಿವರೆಗೆ ನೂರಾರು ಶಿಕ್ಷಕರು ನಿಮ್ಮ ಬದುಕಿನಲ್ಲಿ ಹಾಯ್ದು ಹೋಗಿದ್ದರೂ ನೆನಪಿನಲ್ಲಿ ಖಾಯಂ ಆಗಿ ಉಳಿಯುವವರ ಕೆಲವರು ಮಾತ್ರ – ಬೇರೆ ಬೇರೆ ಕಾರಣಗಳಿಂದಾಗಿ. ಚೆನ್ನಾಗಿ ಪಾಠ ಮಾಡುವವರು, ಜೋಕು ಹೊಡೆಯುವವರು, ಸಂಕಟ ಕಾಲದಲ್ಲಿ ಸಹಾಯ ಮಾಡಿದವರು, ಉಚಿತ ಮಾರ್ಗದರ್ಶನ ತೋರಿದವರು. ತಮ್ಮ ಕಲೀಗರಾದ ಮ್ಯಾಡಂಗಳ ಜೊತೆ ಭಾನಗಡಿ ಮಾಡಿ ಸಿಕ್ಕಿ ಬಿದ್ದವರು ನೆನಪಿನಲ್ಲಿ ಉಳಿಯಲು ಒಂದೇ ಎರಡೇ ಕಾರಣ?

ನಾನು ಕಲಿತ – (ಮತ್ತು ನಂತರ ಕಲಿಸಿದ) ಕಾಲೇಜೊಂದರಲ್ಲಿ ನಮಗೊಬ್ಬ ಮ್ಯಾಡಂ ಇದ್ದರು. ನನ್ನ ಅಣ್ಣ, ನಾನು, ನನ್ನ ತಂಗಿ, ನನ್ನ ಹೆಂಡತಿ, ಅವಳ ತಂಗಿ, ನನ್ನ ಮಗಳು, ಮಗ ಎಲ್ಲರೂ ಈ ಮ್ಯಾಡಂ ಕೈಯಲ್ಲಿ ಕಲಿತವರೇ. ಆ ಕಾಲಕ್ಕೇ ಆ ಸೀಮೆಗೆ ಅದೊಂದೇ ಕಾಲೇಜು. ಕಾಲೇಜಿನಲ್ಲಿ ಬಿಟ್ಟರೂ ಬಿಡದ ಕರ್ಮ ಅಂದರೆ – ಇಂಗ್ಲೀಷ್. ಹೀಗಾಗಿ ಇಂಥ ಪರಿಸ್ಥಿತಿ ಉದ್ಭವಿಸಿತ್ತು.

ಅದಿರಲಿ. ಅದೇ ಸಂಸ್ಥೆಯ ಅದೇ ವಿಭಾಗದಲ್ಲಿ ಅದೇ ಮ್ಯಾಡಂ ಕೈಯಲ್ಲಿ ಸಹೋದ್ಯೋಗಿಯಾಗಿ ಕೆಲಸ ಮಾಡುವ ಪ್ರಸಂಗ ಬಂದಾಗ ಒಮ್ಮೊಮ್ಮೆ ಸಮಸ್ಯೆ ಹುಟ್ಟುತ್ತಿದ್ದವು. ಮ್ಯಾಡಂಗೆ ತಮ್ಮ ಮಾತನ್ನು ಎಲ್ಲರೂ ಮರು ಪ್ರಶ್ನೆ ಹಾಕದೆ ಕೇಳಬೇಕೆಂಬ ಛಲ. ಪ್ರಶ್ನೆ ಮಾಡದೇ ಯಾರ ಮಾತನ್ನೂ ಕೇಳಬಾರದು ಎಂಬ ಎಡವಟ್ಟು ಸ್ವಭಾವವೇ ನನ್ನ ಬಲ. ಅವರಿಗೆ ನನ್ನ ಮೇಲೆ ವಿಶೇಷ ಅಧಿಕಾರದ ಹಕ್ಕು ಯಾಕೆಂದರೆ, ಅವರು ಲೆಕ್ಕ ಹಾಕಿದಂತೆ, ನನ್ನ ಮನೆಯ ಎಲ್ಲರೂ ಅವರ ವಿದ್ಯಾರ್ಥಿಗಳಾಗಿದ್ದದ್ದು. ನಮ್ಮ ಅಪ್ಪ ಮಾತ್ರ ಅವರಿಂದ ಪಾರಾಗಿದ್ದ: ಏಕೆಂದರೆ ಅವನು ನಮ್ಮ ಮ್ಯಾಡಂಗಿಂತ ಮೊದಲೇ ಹುಟ್ಟಿದ್ದ!

ನನ್ನನ್ನು ಹಾದಿಗೆ ತರಲು – (ಅಂದರೆ ತಮ್ಮ ಹಾದಿಗೆ ತಂದುಕೊಳ್ಳಲು) – ಒಮ್ಮೆ ಈ ನಮೂನೆಯ ಸನ್ನಿವೇಶ ಸೃಷ್ಟಿಸಿದ್ದರು ಮ್ಯಾಡಂ.

ಅವರು: ಪಾಟೀಲ್ರ. ನೀವು ನನ್ನ ಸ್ಟೂಡಂಟ್. ಹೌದಲ್ಲೋ?

ನಾನು: ಹೌದ್ರಿ, ಮ್ಯಾಡಂ

ಅವರು: ನಾನು ನಿಮಗಿಂತ ಸೀನಿಯರ್, ಹೌದಲ್ಲೋ?

ನಾನು: ಇರಬಹುದು ಮ್ಯಾಡಂ

ಅವರು: ನಾನು ನಿಮಗಿಂತ ಹತ್ತು ವರ್ಷ ಮುಂಚೆ ಹುಟ್ಟೇನಿ.

ನಾನು: ನಾ ಏನು ಮಾಡ್ಲಿ ಮ್ಯಾಡಂ? ಅದಕ್ಕೆ ನಿಮ್ಮ ಪೇರೆಂಟ್ಸ್ ಕಾರಣ. ಅಲ್ಲದ …..

ಅವರು: ಅಲ್ಲದs ಏನು

ನಾನು: ನೀವು ನನಗಿಂತ ಹತ್ತು ವರ್ಷ ಮುಂಚಿ ಹುಟ್ಟಿದ್ದರೆ ನನಗಿಂತ ಹತ್ತು ವರ್ಷ ಮುಂಚೆ ಸಾಯುತ್ತೀರಿ ಅಷ್ಟೆ.

ಸೀನಿಯಾರಿಟಿ ಅಂದರೆ ಇಷ್ಟೇ. ನಮ್ಮ ದೇಶದಲ್ಲಿ ವಿಶೇಷವೆಂದು ಪರಿಗಣಿತವಾಗುವ ಈ ಸೀನಿಯಾರಿಟಿ ಎಂಬ ಕ್ವಾಲಿಪಿಕೇಶನ್ ಪಡೆಯಲು ಅರ್ಹತೆ. ವಿದ್ಯೆ, ಪ್ರತಿಭೇ ಯಾವುದೂ ಬೇಕಾಗಿಲ್ಲ. ನೀವು ಜೀವಂತವಾಗಿ ಉಳಿದಿದ್ದರೆ ಸಾಕು. ಅಂದರೆ: ನೀವು ಒಳಗೆ ಎಳೆದುಕೊಂಡ ಉಸುಲು ಹೊರಗೆ ಬರಬೇಕು, ಮತ್ತೆ ಒಳಗೆ ಹೋಗಬೇಕು … ಅಷ್ಟೆ. ನೀವು ಸೀನಿಯರ್ಸ. ಆದರೆ ಸೀನಿಯಾರಿಟಿಗೂ ಅನುಭವಕ್ಕೂ ಜ್ಞಾನಕ್ಕೂ ಸಜ್ಜನಿಕೆಗೂ ಯಾವುದೇ ಪರಸ್ಪರ ಸಂಬಂಧ ಇರುವುದಿಲ್ಲ – ಎಂಬುದು ನನ್ನ ಅನುಭವದ ಮಾತು. “ಅವರದು ಇಪ್ಪತ್ತೈದು ವರ್ಷದ ಅನುಭವ ” … ಎಂಬ ಮಾತಿನ ಅರ್ಥವಿಷ್ಟೇ: “ಅವರ ಒಂದು ವರ್ಷದ ಅನುಭವ ಇಪ್ಪತ್ತೈದು ಸಲ ರಿಪೀಟಾಗಿದೆ.

ಆದರೆ ಎಲ್ಲ ಗುರುಗಳೂ ಒಂದೇ ನಮೂನೆ ಇರುವುದಿಲ್ಲ. ತಂದೆ – ತಾಯಿಗಳ ಮಾತು ಮೀರಬಾರದು ಎಂಬಂಥ ನಿರ್ಬಂಧಗಳಿರುವ ನಮ್ಮ ಪರಂಪರೆಯಲ್ಲಿ ಅನೇಕ ಸಲ ತಾಯಿ – ತಂದೆಗಳಿಗಿಂತ ಹೆಚ್ಚಾಗಿ ನಮ್ಮ ಮಾಸ್ತರೇ ನಮ್ಮನ್ನು ಅರ್ಥ ಮಾಡಿಕೊಳ್ಳಬಲ್ಲ ಸ್ನೇಹಿತರಾಗಿರುತ್ತಾರೆ. ಮನೆಯ ಮಗ ಮಾತು ಕೇಳದಿದ್ದಾಗ ಅವನಿಗೆ ಬುದ್ದಿ ಹೇಳಲು ಅವ್ವ – ಅಪ್ಪಂದಿರು ಅವನ ಮಾಸ್ತರಿಗೆ ವಶೀಲಿ ಹಚ್ಚುತ್ತಾರೆ. “ನಾ ಎಲ್ಲಾ ನಿಮ್ಮ ಅಪ್ಪಗ ಹೇಳ್ತನಿ ಬಿಡು” ಅಂತ ಮಾಸ್ತರರೇ ಧೈರ್ಯ ತುಂಬುತ್ತಾರೆ. ನಾನು ಎಂ.ಎ. ಇಂಗ್ಲಿಷ್ ಮಾಡಿದ್ದರೂ ನನ್ನ ಕಾಲೇಜು ಸುರುವಾಗಿದ್ದು – ಸೈನ್ಸ್ ದಿಂದ ಅನಂತರ ಮ್ಯಾಥ್ಸ, ಅನಂತರ ಬಿ.ಎ. ಎಕನಾಮಿಕ್ಸ, ಅನಂತರ ಇಂಗ್ಲೀಷಗೆ ಬಂದೆ. ನಾನು ಐಎಎಸ್. ಆಗಬೇಕೆಂಬ ನಮ್ಮ ಅಪ್ಪನ ಮಹತ್ವಾಕಾಂಕ್ಷೆಯಿಂದಾಗಿ ಸೈನ್ಸ್ ತಗೊಂಡೆ. ಅವನ ಮನಸ್ಸು ಬದಲು ಮಾಡುವ ಬದಲು ನಾನು ಉಪಯೋಗಿಸಿದ ವಶೀಲಿ ಡಾ. ಗೋಕಾಕರದು. ಡಾ. ಗೋಕಾಕರ ವಶೀಲಿಗಾಗಿ ನಾನು (ಅಪ್ಪನ ಸ್ನೇಹಿತ) ಹಳ್ಳಿಕೇರಿ ಗುದ್ಲೆಪ್ಪನವರ ವಶೀಲಿ ಬಳಸಿದ್ದೆ.

ಡಾ. ವಿ. ಕೃ ಗೋಕಾಕರ ಅಚ್ಚುಮೆಚ್ಚಿನ ಶಿಷ್ಯರಲ್ಲಿ ನಾನು ಒಬ್ಬ. ಆ ಹದಿ ಹರೆಯದ ಕಣ್ಣುಗಳಲ್ಲಿ ಕನಸು ತುಂಬಿದವರು ಅವರು. ಕನಸುಗಳಲ್ಲಿ ಕಾವ್ಯ ತುಂಬಿದವರು. ಆದರೆ ಗೋಕಾಕ್ ಚಳುವಳಿಯ ಸುರುವಾತಿನಲ್ಲಿ ಅವರ ಶಿಷ್ಯರಾದ ನಾವೆಲ್ಲ ‘ಗೋಕಾಕ್ ಗೋಬ್ಯಾಕ್’ ಅಂತ ಕೂಗು ಹಾಕಿದಾಗ ಅದನ್ನೂ ನಸುನಗೆಯ ಗಾಂಭಿರ್ಯದಿಂದ ಪ್ರೀತಿಯಲ್ಲಿ ಅರ್ಥ ಮಾಡಿಕೊಂಡವರು ಅವರು.

ಗುರುವಿನ ಗುಲಾಮನಾಗುವ ಮಾತು ಹರಿದಾಡಿದ ಈ ನೆಲದಲ್ಲಿ ಶಿಷ್ಯಾದ್ ಇಚ್ಛೇತ್ ಪರಾಜಯಂ ಎಂಬ ಮಾತೂ ಇದೆ. ಗುರುದೇವೋ ಭವ ಎಂದು ಗುರುಗಳನ್ನು ಆರಾಧಿಸುವ ಪವಿತ್ರ ದೇಶದಲ್ಲಿ ಅರಮನೆಯ ಹಂಗಿಗೊಳಗಾಗಿ ಏಕಲವ್ಯನ ಹೆಬ್ಬೆರಳನ್ನೇ ಗುರುದಕ್ಷಿಣೆಯನ್ನಾಗಿ ಬೇಡಿ ಪಡೆದ ದ್ರೋಣಾಚಾರ್ಯ ಪರಂಪರೆಯೂ ಇದೆ. ಚೋರ ಗುರು ಚಂಡಾಲ ಶಿಷ್ಯ ಎಂಬ ಗಾದೆ ಇದೆ. ‘ಏನು ಗುರೂ?’ ಅಂತ ಎಂಥ ಅಪರಿಚಿತವನನ್ನೂ ಸ್ನೇಹದ ಸಲುಗೆಯಲ್ಲಿ ಸಂಬೋಧಿಸಬಹುದು … ‘ಗುರು’ ಎಂಬುದು ಈಗ ಅಂತಾರಾಷ್ಟ್ರೀಯ ನೆಲೆಯಲ್ಲಿ ಚಲಾವಣೆಯಲ್ಲಿರುವ ಶಬ್ದ ಮತ್ತು ಪರಿಕಲ್ಪನೆ.

ವಿದ್ಯಾರ್ಥಿಗಳಾಗಿರುವವರಲ್ಲಿ ನೂರಕ್ಕೆ ತೊಂಬತ್ತರಷ್ಟು ಅನಾಮಧೇಯರೇ. ರ‍್ಯಾಂಕಿನ ಹುಚ್ಚಿನವರಲ್ಲ. ಅವರು ಹಿಂದಿನ ಬೆಂಚಿನವರು. ಯಾರ ಉಸಾಬರಿಗೂ ಹೋದವರಲ್ಲ. ನಾಟಕ – ಸಂಗೀತ – ನೃತ್ಯ – ಕ್ರೀಡೆಗಳಿಂದ ದೂರ. ಕಾಲೇಜು ಮಿಸಲೆನಿಗಳಲ್ಲಿ. ವಾಲ್ ಪೇಪರುಗಳಲ್ಲಿ ಅವರ ಹೆಸರು ಕಾಣದು. ಸ್ಟ್ರೈಕುಗಳಲ್ಲಿ ಚುನಾವಣೆಗಳಲ್ಲಿ ಪಾಲುಗೊಂಡವರಲ್ಲ. ಜೀವನದಲ್ಲಿ ಇಂಥವರು ಏನೇನೋ ಗುದಮುರಿಗೆ ಹಾಕಿ ಒಂದು ಮಟ್ಟಿಗೆ ಹತ್ತಿ ತಮ್ಮ ಪಾಡಿಗೆ ತಾವು ಇದ್ದು ಬಿಟ್ಟರೂ ತಮ್ಮ ಶಿಕ್ಷಕರನ್ನಾಗಲಿ, ಪ್ರೊಫೆಸರನ್ನಾಗಲಿ ಮರೆಯುವುದಿಲ್ಲ. ಇಂಥವರು ತಮ್ಮ ಗುರುಗಳಿಗೆ ಸಲ್ಲಿಸುವ ಕೃತಜ್ಞತೆಯೂ ಬೇರೆ ಬೇರೆ ನಮೂನೆಯದಾಗಿರುತ್ತದೆ. ಇಂಥ ಒಬ್ಬ ಶಿಷ್ಯ ಅನೇಕ ವರ್ಷಗಳ ನಂತರ ಭೆಟ್ಟಿಯಾಗಿ ತಾನು ಲೆಕ್ಚರರ್ ಆಗಿರುವ ಕಾಲೇಜಿಗೆ ಗ್ಯಾದರಂಗಿನ ಮುಖ್ಯ ಅತಿಥಿಯಾಗಿ ಬರಬೇಕೆಂದು ಕೇಳಿಕೊಂಡಾಗ ಇಲ್ಲವೆನ್ನಲಾಗಲಿಲ್ಲ. ನಾನು ನನ್ನ ಯಥಾ ಪ್ರಕಾರದ ಯೂನಿಫಾರ್ಮಾಗಿರುವ ಪ್ಯಾಂಟು ಶರಟುಗಳಲ್ಲಿ ಚೀಪ್ ಗೆಸ್ಟಾಗಿ ಹೋದಾಗ ಸ್ವಾಗತಿಸಿದ ನನ್ನ ವಿದ್ಯಾರ್ಥಿ ಅಡಿಯಿಂದ ಮುಡಿವರೆಗೆ ಸೂಟುಧಾರಿ. (ಸಣ್ಣ ಸಣ್ಣ ಕಾಲೇಜುಗಳಲ್ಲಿ, ‘ಪ್ರೊಫೆಸರ್’ ಆಗಿರುವವರಿಗೆ ಇದು ಅನಿವಾರ್ಯ ಕೂಡ. ಇಲ್ಲದಿದ್ದರೆ ಅದೇ ರೀತಿ ಸೂಟುಧಾರಿಗಳಾಗಿರುವ ವಿಧ್ಯಾರ್ಥಿ ಕೂಟದ ಪದಾಧಿಕಾರಿಗಳೆದುರು ಸಣ್ಣವಾರಾಗುವ ಹೆದರಿಕೆ ಇರುತ್ತದೆ.)

ನನ್ನ ಭಾಷಣ ಅರ್ಧ ತಾಸಿನದು ಮಾತ್ರ. ಅದಕ್ಕೆ ಮುನ್ನುಡಿಯಾಗಿ ನನ್ನ ಹಳೇ ವಿದ್ಯಾರ್ಥಿ ಮಾಡಿದ ಅತಿಥಿ – ಪರಿಚಯ ಮಾತ್ರ ಪುಟ್ಟಾಪೂರಾ ಒಂದು ತಾಸಿನದಿತ್ತು. ನಾನು ನಾಲ್ಕುವರ್ಷ ಪಾಠ ಮಾಡಿದ್ದನ್ನು ಮೌನವಾಗಿ ಸಹಿಸಿಕೊಂಡಿದ್ದವ ಈಗ ಸಂದರ್ಭ ಸಿಕ್ಕಾಗ ಸೇಡು ತೀರಿಸಿಕೊಂಡಿದ್ದ!

ಇನ್ನೊಬ್ಬನ ರೀತಿ ಬೇರೆ.

ನಮ್ಮ ಇಂಗ್ಲೀಷ್ ವಿಭಾಗದಲ್ಲಿ ಓದಿದ ಅನೇಕ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯದಲ್ಲಿ ಕವಿ – ಕತೆಗಾರ – ಕಾದಂಬರಿಕಾರರಾಗಿ, ವಿಮರ್ಶಕರಾಗಿ ಹೆಸರು ಮಾಡಿದ್ದಾರೆ. ಅವರಿಗೆ ಪ್ರೊಫೆಸರರಾಗಿದ್ದ ನನ್ನಂಥವರಿಗೆ, ಗಿರಡ್ಡಿ ಅಂಥವರಿಗೆ ಇದು ಹೆಮ್ಮೆಯ ಗರಿ. ಇಂತ ಕೆಲವರಿಗೆ ಮುನ್ನುಡಿ – ಬೆನ್ನುಡಿ – ಚೆನ್ನುಡಿ ಇತ್ಯಾದಿ ಬರೆಯಬೇಕಾದ ಭಾಗ್ಯವೂ ನಮಗೆ ಒಕ್ಕರಿಸುತ್ತದೆ.

ಇಂಥ ಒಬ್ಬ ಶಿಷ್ಯ ಡಿ.ಲಿಟ್ ಪದವಿಗಾಗಿ ಸಲ್ಲಿಸಬೇಕಾಗಿದ್ದ ಪುಸ್ತಕಕ್ಕೆ ಮುನ್ನುಡಿ ಬರೆಯಲು ಆರಾಮಾಗಿ ಒಪ್ಪಿಬಿಟ್ಟಿದ್ದೆ. ಇಂಗ್ಲೀಷಿನ ಜಾರ್ಜ ಬರ್ನಾರ್ಡ್ ಶಾ ಮತ್ತು ಕನ್ನಡದ ಟಿ.ಪಿ. ಕೈಲಾಸಂ ನಾಟಕಗಳ ತುಲನಾತ್ಮಕ ಅಧ್ಯಯನ ಅದು ಮುದ್ರಿತ ಫಾರ್ಮು ಕೈ ಸೇರಿದವು. ಮೊದಲ ಎಪ್ಪತ್ತು ಪುಟ ಶಾ ಕುರಿತ ಐದಾರು ಪ್ರಕರಣಗಳು: ಕೊನೆಯ ಎಪ್ಪತ್ತು ಪುಟ ಕೈಲಾಸಂ ಕುರಿತ ಅದೇ ಶೀರ್ಷಿಕೆಯ, ಐದಾರು ಪ್ರಕರಣ. ಇಬ್ಬರಿಗೂ ಯಾವ ಸಂಬಂಧವೂ ಇಲ್ಲ. ನನಗೋ ಫಜೀತಿ. ಹಳೆಯ ವಿದ್ಯಾರ್ಥಿ ಎಂಬ ರಿಣ – ಸಂಬಂಧ ಬೇರೆ ಕೊನಗೆ ಮುನ್ನುಡಿ ಬರೆದೆ. ಇಬ್ಬರೂ ನಾಟಕಕಾರರ ಬಗೆಗಿನ ಮಾಹಿತಿಯನ್ನು ಮೆಚ್ಚಿಕೊಂಡು “ಇಬ್ಬರ ನಡುವಿನ ಕೊಂಡಿಗಳನ್ನು ಗುರುತಿಸುವ ಗುರುತು ಜವಾಬ್ದಾರಿಯನ್ನು ಈ ಲೇಖಕರು ತಮ್ಮ ಮುಂದಿನ ಕೃತಿಯಲ್ಲಿ ಸರಿಯಾಗಿ ನಿರ್ವಹಿಸಲಿ” ಎಂದು ಆ ಉದಯೋನ್ಮಖ ಲೇಖಕರಿಗೆ ಉಜ್ವಲ ಭವಿಷ್ಯ ಹಾರೈಸಿದ್ದೆ.

ಪುಸ್ತಕ ಪ್ರಿಂಟಾಯಿತೇ, ಪ್ರಿಂಟಾಗಿದ್ದರೆ ಮುನ್ನುಡಿ ಅದರಲ್ಲಿ ಇತ್ತೇ – ಇತ್ಯಾದಿ ಏನೂ ಗೊತ್ತಾಗಲಿಲ್ಲ ಅಮೇಲೆ, ಹೋಗಲಿ. ಆ ಹಳೆಯ ವಿದ್ಯಾರ್ಥಿಯ ಮುಖ ದರ್ಶನವೂ ಆಗಲಿಲ್ಲ.

*

“ಏನs ಹೇಳ್ರಿ, ಈಗಿನ ಹುಡುಗರೊಳಗ ಮೊದಲಿನ ಶಿಸ್ತು, ವಿಧೇಯತೆ ಉಳಿದಿಲ್ಲ ನೋಡ್ರಿ” ಅನೇಕರು ಹೇಳುವ ಇಂಥ ಮಾತುಗಳನ್ನು ನಾನು ಕೇಳುತ್ತಲೇ ಬಂದಿದ್ದೇನೆ – ಅನುಮಾನದಿಂದ. ಇದು ಪ್ರತಿಯೊಂದು ಪೀಳಿಗೆಯ ಗೋಳು. ತನ್ನ ಪೀಳಿಗೆಯೇ ತನ್ನ ಕಾಲವೇ ಅತ್ಯಂತ ಶ್ರೇಷ್ಠವಾದದ್ದು. ಮಾದರಿಯಾದು: ಅನಂತರದ್ದು ಎಲ್ಲಾ ಅವನತಿಯದು, ಅಧಃಪತನದ್ದು ಎಂಬ ಸಾರಾ ಸಗಟಾದ ಸರ್ವಾನುಮತದ ಗೊತ್ತುವಳಿ ಆಯಾ ಪೀಳಿಗೆಯ ಅಸ್ತಿತ್ವದ ಅಗತ್ಯವೂ ಇರಬಹುದು. ಹೌದು. ನಾವು ಕನ್ನಡ ಶಾಲೆಗೆ ಹೋಗುವ ದಿನಗಳಲ್ಲಿ ಮಾಸ್ತರರ ಬಗ್ಗೆ ಭಯವಿರುತ್ತಿತ್ತು. ಶಾಲೆಯಲ್ಲಿ ಹೊಡೆತ ತಿಂದರೂ ಮನೆಯಲ್ಲಿ ಹೇಳುತ್ತಿರಲಿಲ್ಲ. ಆದರೆ? ಶಾಲೆಯ ಸೆಳೆತ ಮಾತ್ರ ಕಮ್ಮಿ ಆಗುತ್ತಿರಲಿಲ್ಲ. ಈಗ ಮಾಸ್ತರು ಸ್ವಲ್ಪ ಕಣ್ಣು ಕಿಸಿದರೆ ಸಾಕು. ಮಧ್ಯಾಹ್ನದ ಹೊತ್ತಿಗೆ ವಿದ್ಯಾರ್ಥಿಯ ಅಪ್ಪನೋ, ಕಾಕಾನೋ, ಅಣ್ಣನೋ ಬಂದು ಮಾಸ್ತರನ್ನು ವಿಚಾರಿಸಿಕೊಳ್ಳುತ್ತಾರೆ. ವಿಶ್ವವಿದ್ಯಾಲಯಗಳ ಕ್ಯಾಂಪಸ್ಸುಗಳಲ್ಲಿ ಪ್ರಾಧ್ಯಾಪಕರು ವಿದ್ಯಾರ್ಥಿ ವೃಂದದ ಕೃಪಾ ಕಟಾಕ್ಷದಲ್ಲಿ ಬದುಕಿರಬೇಕಾಗಿದೆ. ಜಾತಿ, ಉಪಜಾತಿಗಳ ಕೋಟೆಗಳನ್ನು ನಿರ್ಮಿಸಿಕೊಳ್ಳ ಬೇಕಾಗಿದೆ. ಇಷ್ಟಿದ್ದರೂ ಸಹಿತ ನಾನು ಬಲವಾಗಿ ನಂಬಿದ್ದೇನೆ. ನಾನು ಮಾಡಲಿರುವ ಪಾಠದ ಹೋಂವರ್ಕ್ ಸರಿಯಾಗಿ ಮಾಡಿದ್ದರೆ: ನನಗೆ ಲಭ್ಯವಿರುವ ಐವತ್ತೋ ಅರವತ್ತೋ ಮಿನಿಟುಗಳ ಅವಧಿಯಲ್ಲಿ ನನ್ನ ಎದುರಿಗೆ ಕ್ಲಾಸಿನಲ್ಲಿ ಕುಳಿತ ವಿದ್ಯಾರ್ಥಿ, ವಿದ್ಯಾರ್ಥಿನಿಯರನ್ನು ಪಾಠದಲ್ಲಿ ಒಳಗು ಮಾಡಿಕೊಳ್ಳುವ ಸಹಜ ಶೈಲಿ ನನ್ನದಾಗಿದ್ದರೆ: ಅವರ ಕಣ್ಣುಗಳಲ್ಲಿ ಪ್ರಶ್ನೆಗಳನ್ನು ಮೂಡಿಸುತ್ತಲೇ ಅವರಿಗೆ ತಾವೇ ಉತ್ತರ ಪಡೆದುಕೊಳ್ಳುವಂಥ ಅರಿವಿನ ಬೆಳಕಿಂಡಿಗಳನ್ನು ನಾನು ತೆರೆಯುತ್ತಿದ್ದರೆ – ಅವರು ಎಂದಿಗೂ ಅಶಿಸ್ತಿನ, ಅವಿಧೇಯ ವ್ಯಕ್ತಿಗಳಾಗಿ ಉಳಿಯಲು ಸಾಧ್ಯವಿಲ್ಲ. ಈ ಬಗೆಯ ಕಾಯಕನಿಷ್ಠೆ ಮತ್ತು ಜೀವನ ಪ್ರೀತಿ ನಮ್ಮಲ್ಲಿ ಇದೆಯೇ? ಎಂಬ ಪ್ರಶ್ನೆ ನಮಗೆ ನಾವೇ ಹಾಕಿಕೊಂಡು ಅನಂತರ ಆ ಈ ಕಾಮೆಂಟಿಗೆ ಕೈ ಹಾಕಬಹುದು.

*

ಭಯ – ಭಕ್ತಿಗಳ ಬಗ್ಗೆ ಹೇಳಿದನಲ್ಲವೇ? ನಾನು ಹಿಂದೊಮ್ಮೆ ಬರೆದು ಪದ್ಯ ಮತ್ತೊಮ್ಮೆ ನಿಮಗಾಗಿ:

ಗಲಾಟೆ ಹಾಕುವ ಶಿಷ್ಯರ ಕಂಡು
ಕೆರಳಿದ ಗುರುಗಳು: “ಯಾಕ್ರೋ?
ಗುರು – ಶಿಷ್ಯರ ಸಂಬಂಧದ ಬಗ್ಗೆ
ನಮ್ಮ ಪರಂಪರೆ ಏನ್ರೋ?
ಭಯ … ಭಕ್ತಿ …. ಭಯಾ ಭಕ್ತಿ
ಅಂದರೆ ಏನು ಹೇಳ್ರೋ.”

ಥಂಡ ಹೊಡೆದಿದ್ದ ಶಿಷ್ಯರ ನಡುವೆ
ಎದ್ದ ಕಿಡಿಗೇಡಿ: “ಸsರ್ ಸsರ್
ಗುರುಗಳ ಬಗ್ಗೆ …. ಶಿಷ್ಯರಿಗೆಲ್ಲಾ ….
ಭಕ್ತಿಯು ಬೇಕು, ಸsರ್, ಹಾಗೇ
ಶಿಷ್ಯರ ಕಂಡರೆ ….. ಗುರುಗಳಿಗೆಲ್ಲ
ಭಯವಿರಬೇಕು, ಸsರ್.”

ನೂರಾರು ಗುರುಗಳಿಗೆ ಶಿಷ್ಯನಾಗಿ, ಸಾವಿರಾರು ಶಿಷ್ಯರಿಗೆ ಗುರುವಾಗಿ ನಾನು ಕಂಡುಂಡ ಸತ್ಯವಿದು. ನಾನು ನನಗಾಗಿ ಕಂಡುಕೊಂಡ ಸತ್ಯ ಇದಾಗಿದ್ದರೂ ನಿಮ್ಮದೂ ಇದೇ ಸತ್ಯವಾಗಿರಬೇಕೆಂಬ ಹಟ ನನಗಿಲ್ಲ.

-೧೯೯೯