ಮೊನ್ನೆ ಮೊನ್ನೆ ನಮ್ಮನ್ನಗಲಿದ ಕೆ. ಎಸ್. ನರಸಿಂಗಸ್ವಾಮಿ ‘ಮೈಸೂರು ಮಲ್ಲಿಗೆ’ಯ ಕವಿ ಎಂದೇ ಜನಮಾಸದಲ್ಲಿ ಪ್ರತಿಷ್ಠಾಪಿತರು. ಸುಗಮ ಸಂಗೀತದ ಮೂಲಕ ಅವರ ಗೀತೆಗಳು ಎಷ್ಟು ಜನಪ್ರಿಯ ಅಂದರೆ ನಮ್ಮ ಸಾರಿಗೆ ಸಂಸ್ಥೆ ಬೆಂಗಳೂರು – ಮೈಸೂರು ನಡುವೆ ಹರಿದಾಡುವ ಸರಕಾರಿ ಬಸ್ಸುಗಳಿಗೆ ‘ಮೈಸೂರ ಮಲ್ಲಿಗೆ’ ಎಂದೇ ಹೆಸರಿಟ್ಟಿದೆ ಸಂಸ್ಥೆಯ ಅಧಿಕಾರಿ ನಮ್ಮ ಮೂಡ್ನಾಕೂಡು ಚೆನ್ನಸ್ವಾಮಿ ಪ್ರಯಾಣದುದ್ದಕ್ಕೂ ತೂಕಡಿಸುವ ಜನಕ್ಕೆ ಕೆ.ಎಸ್.ನ. ಹಾಡುಗಳು ಕಿವಿಗೆ ಬೀಳುವ ವ್ಯವಸ್ಥೆಯನ್ನೂ ಮಾಡಿದ್ದಾರೆ.

೧೯೬೦ ರ ದಶಕದ ಮಾತು. ಆಗ ಹಳೇ ಮೈಸೂರ ಮತ್ತು ಉತ್ತರ ಕರ್ನಾಟಕದ ನಡುವೆ ಒಂದು ಸುಮಧುರ ಸಾಹಿತ್ಯಿಕ ಬಾಂಧವ್ಯವಿತ್ತು. ಬೆಂಗಳೂರು- ಮೈಸೂರು ಕಡೆಯ ಅನೇಕ ಖ್ಯಾತನಾಮರು ಧಾರವಾಡಕ್ಕೆ ಬಂದು ವಿದ್ಯಾವರ್ಧಕ ಸಂಘದಲ್ಲಿ ಮಾಡುತ್ತಿದ್ದ ಭಾಷಣ, ಓದುತ್ತಿದ್ದ ಕವನಗಳು ನಮ್ಮಂಥವರಿಗೆ ಹರೆಯದ ಹಂಗಾಮಿನ ಪಾಡುಗಾಯಿಯಂಥ ನೆನಪುಗಳು. ಒಮ್ಮೆ ಕೆ ಎಸ್ ನ ಅವರು. ಪತ್ನಿಯೊಂದಿಗೆ, ನಾಲ್ಕನೇ ನಂಬರ್ ರಾಷ್ಟ್ರೀಯ ಹೆದ್ದಾರಿಯ ಮಗ್ಗುಲಿಗಿದ್ದ ನಮ್ಮ ಮನೆಗೂ ಬಂದು ಚಾ ಕುಡಿದು ಹೋಗಿದ್ದರು. ಸಾಹಿತ್ಯಲೋಕವೇ ಒಂದು ಕುಟುಂಬದಂತಿದ್ದ ದಿನಗಳು ಅವು ಈಗ ಆ ಪರಿಸ್ಥಿತಿ ಇಲ್ಲ. ಅಡಿಗ – ಶರ್ಮರ ಅವತಾರವಾದ ನಂತರ ಗುಂಪುಗಳು, ಕ್ಯಾಂಪುಗಳು. ಕಾಕಸ್ಸುಗಳ ಪರ್ವ ಪ್ರಾರಂಭವಾಯಿತು.

*

ಕೆ.ಎಸ್.ನ. ಜಿ.ಎಸ್.ಎಸ್. ಕಣವಿ – ಇವೆರದೆಲ್ಲ ನಮ್ಮ ಕಾವ್ಯಲೋಕದ ಸಂದಿಕಾಲ ನವೋದಯದ ಸಂಪ್ರಾದಯ ತೆರೆಮರೆಗೆ ಸರಿದು ನವ್ಯದ ರಂಗುಬಿರಂಗೀ ಪಾತ್ರಗಳು ಥಕಥೈ ಎಂದು ರಂಗದ ಮೇಲೆ ಕುಣಿಯಲು ಹುರಪಳಿಸುತ್ತಿದ್ದ ಸಂದರ್ಭ. ಆಗ ಮಧ್ಯವಯಸ್ಕರಾದ ಈ ಮೂವರಿಗೆ ಯಾವುದನ್ನು ಹಿಡಿಯಲಿ ಯಾವುದನ್ನು ಬಿಡಲಿ ಎಂದ ದ್ವಂದ್ವ. ಇದೇ ಕೋಲಾಹಲದಲ್ಲಿ ‘ಸಮನ್ವಯ’ ಎಂಬ ಸುಲಭ ಪರಿಹಾರ ಸೂತ್ರ ಚಾಲ್ತಿಗೆ ಬಂದದ್ದು.

ನವೋದಯ ಮೂಲದ ಕೆ.ಎಸ್.ನ ನವ್ಯವನ್ನೂ ಅರಗಿಸಿಕೊಂಡು ತಮ್ಮ ಕಾವ್ಯಕ್ಕೆ ಹೊಸ ಮೆರಗು ತಂದುಕೊಟ್ಟವರು. ಅಡಿಗ ಕ್ಯಾಂಪಿನ ಮಂದಿ ಈ ಕವಿಯನ್ನು ಕಟುವಾಗಿ ಟೀಕಿಸುತ್ತಿದ್ದರು. ಅಡಿಗರು ‘ಪುಷ್ಪಕವಿಯ ಪರಾಕು’ ಎಂಬ ವಿಡಂಬನ ಕವನವನ್ನೇ ಬರೆದರು. ಅದರ ಕೆಲವು ಸಾಲುಗಳು.

ಬಂದನಿಗೋ ಪುಷ್ಪಕವಿ. ಹೇಳಿ ಪರಾಕು:

(ನಾನೇ ಸ್ವಾಮೀ, ಈ ಕವಿ!) ನನಗೆ ಪರಾಕು!
ಕನ್ನಡಕ್ಕಿನ್ನೇನು ಬೇಕು!
ಭಾರತಕೂ ಈ ವಿಶ್ವಕು
ಸಕಲ ಚರಾಚರಕೂ
ಇವನೊಬ್ಬನೆ ಸಾಕು – ಎಂದರೆ –
ನಾನೊಬ್ಬನೆ ಸಾಕು.
ಜೈ ಜೈ ಜೈ ಪುಷ್ಪ ಕವಿ ……

*

ಕೆ.ಎಸ್.ನ ಅವರ ಅಂತರಂಗವನ್ನು ಅರಿಯಬೇಕಾದರೆ ಡಾ, ನರಹಳ್ಳಿ ಬಾಲಸುಬ್ರಹ್ಮಣ್ಯ ಬರೆದ ‘ಕೆ.ಎಸ್.ನ. ನುಡಿಮಲ್ಲಿಗೆ’ ಕೃತಿಯನ್ನು ಓದಬೇಕು. ನರಹಳ್ಳಿ ದೇಶಕುಲಕರ್ಣಿ ಮತ್ತು ವೆಂಕಟೇಶಮೂರ್ತಿ ಕವಿಯನ್ನು ಸಂದರ್ಶಿಸಿ, ಒಂದು ಸುಂದರ ವಿನ್ಯಾಸದಲ್ಲಿ ಅವರ ಅನ್ನಿಸಿಕೆಗಳನ್ನು ದಾಖಲಿಸಿದ್ದಾರೆ. ಅಡಿಗರ ಪದ್ಯಕ್ಕೆ ರಿಪ್ಲಾಯ್ ಕೊಡಬೇಕು ಅಂತ ಅವರಿಗೆ ಅನ್ನಿಸಲೇ ಇಲ್ಲವಂತೆ.

ಆದರೆ ನವ್ಯಕಾವ್ಯದ ಬಗ್ಗೆ ತಮ್ಮ ತೀಕ್ಷ್ಣ ಪ್ರತಿಕ್ರಿಯೆಯನ್ನು ಗಂಭೀರವಾಗಿಯೇ ವ್ಯಕ್ತಪಡಿಸುಲು ಕೆ.ಎಸ್.ನ ಮೈಸೂರಿನಲ್ಲಿ ನಡೆದ ಅ.ಭಾ.ಸಾಹಿತ್ಯ ಸಮ್ಮೇಳನದ (೧೯೯೦) ಅಧ್ಯಕ್ಷ ಪೀಠ ಸಿಗುವವರೆಗೆ ಕಾಯಬೇಕಾಯಿತು.

ಅದೇ ವರ್ಷದ ಪ್ರಾರಂಭದಲ್ಲಿ ಹುಬ್ಬಳ್ಳಿ ಸಮ್ಮೇಳನಕ್ಕೆ ಡಾ. ಆರ್ ಸಿ. ಹಿರೇಮಠರು ಅಧ್ಯಕ್ಷರಾದಾಗ ಬೆಂಗಳೂರು ಕಡೆಯ ಲಂಕೇಶಾದಿ ಸಾಹಿತಿಗಳು ‘ಪರ್ಯಾಯ ಸಮ್ಮೇಳನ’ ಎಂಬ ಪ್ರಹಸನ ಆಡಿದರು. ಮೊದಲ ಹಂತದಲ್ಲಿ ಈ ಪ್ರಹಸನದ ಅಂಗವಾಗಿಯೇ ಇದ್ದ ಕೆ.ಎಸ್.ನ. ಅನಂತರ ಈ ‘ಜಾಗೃತ’ ರಿಂದ ಜಾಗ್ರತೆಯಾಗಿಯೇ ದೂರ ಉಳಿದರು.

ನವ್ಯದ ಬಗ್ಗೆ ಕೆ.ಎಸ್.ನ ‘ಬುದ್ಧಿ ಪ್ರಾಧಾನ್ಯವೂ ನಾಟಕೀಯತೆಯೂ ಜಟಲತೆಯೂ ಅದರ ಲಕ್ಷಣಗಳು. ಹೀಗಾಗಿ ಅದು ಗ್ರಾಮಾಂತರ ಪ್ರದೇಶದ ಜನಗಳಿಗೆ ತಲುಪಲಿಲ್ಲ ಕವನದ ಅಂಕಿತಕ್ಕೂ ಅದರ ಶರೀರಕ್ಕೂ ಸಂಬಂಧವಿಲ್ಲದ ಕವನಗಳೂ ಬಂದವು ಸ್ವಚ್ಛಂದದ ಹೆಸರಿನಲ್ಲಿ ಛಂದೋಹಿನ ಕವನಗಳು ಬಂದವು.

ನವ್ಯ ಕವಿತೆ ತನ್ನ ರಭಸದಲ್ಲಿ ಹಿಂದಿನ ಕವಿಗಳನ್ನು ಕಟುವಾಗಿ ಟೀಕಿಸಿತು. ಹೊಸತು ಹಳೆಯದು ಎಂಬ ಮಾತುಗಳನ್ನು ಅದು ಅಗ್ಗವಾಗಿ ಬಳಸಿತು’.

ನವ್ಯ ಕನ್ಯೆಯ ವೃದ್ಧ ಪ್ರೇಮಿಯಾಗಿ ಇನ್ನೂ ಉಳಿದುಕೊಂಡಿರುವ ಬಿ.ಸಿ.ರಾಮಚಂದ್ರ ಶರ್ಮರಿಗೆ ಈ ಮಾತು ನುಂಗಲಾರದ ಗುಳಿಗೆಗಳಾದವು ಅದೇ ಸಮ್ಮೇಳನದ ಗೋಷ್ಠಿಯೊಂದರಲ್ಲಿ ಅವರ ಕೊಂಕು ಮಾತು: ‘ಜನರಿಗೆ ಬೇಕಾದ್ದನ್ನು ಬರೆಯಬೇಕು ಎಂದು ಕೆ.ಎಸ್.ನ ಹೇಳಿರುವುದನ್ನೆಲ್ಲ ಕೇಳಿದರೆ ನಾವೆಲ್ಲ ಕವಿಗಳು ಇಂದು ರಾಮಜನ್ಮಭೂಮಿಯ ಬಗ್ಗೆ ಬರೆಯಬೇಕಾಗುತ್ತದೆ. ಕಾವ್ಯ ಎನ್ನುವುದು ತಪಸ್ಸಿನ ಫಲ!” ಸಮ್ಮೇಳನದ ಅಧ್ಯಕ್ಷರಾಗಿ ಕೊನೆಯ ಚಾನ್ಸು ಪಡೆದ ಕೆ.ಎಸ್.ನ ಅವರು ಶರ್ಮರಿಗೆ ಕೊಟ್ಟ ಕೊನೆಯ ಹೊಡೆತ: ‘ಇವರು ಕಾವ್ಯ ಎಂಬುದು ತಪಸ್ಸಿನ ಫಲ ಎನ್ನುತ್ತಾರೆ. ನನಗೆ ಈ ತಪಸ್ಸು ಎಂಬುದರ ವಿಳಾಸವೇ ಗೊತ್ತಿಲ್ಲ!,

*

ಈಗ ನಮಗೆಲ್ಲರಿಗೆ ಗೊತ್ತಾಗಿ ಬಿಟ್ಟಿರುವ ಸತ್ಯ ಏನೆಂದರೆ: ಕನ್ನಡ ಜನಕ್ಕೆ ರಾಮಚಂದ್ರಶರ್ಮರ ವಿಳಾಸ ಕೂಡ ಗೊತ್ತಿಲ್ಲದಂತಾಗಿದೆ.!

‘ನೆಲದ ಆಳಕ್ಕೆ ಯಾವುದು ಬೇರು ಬಿಟ್ಟು ನಿಂತಿದೆಯೋ ಅಂಥ ಮರಗಳು ಮಾತ್ರ ಎಲ್ಲ ಕಾಲಕ್ಕೂ ಹೂ ಬಿಡುತ್ತವೇ ಲೋಕಾನುಭವದಲ್ಲಿ ಬೇರು ಬಿಟ್ಟಂತಹ ಕವಿ ಮಾತ್ರ ನಿಜವಾದ ಕವಿತೆಗಳನ್ನು ನೀಡಬಲ್ಲ ‘ಇದು ಕೆಎಸ್.ನ ಅವರ ನೇರ ನಿಲುವು. ಇದಕ್ಕೆ ಬದ್ಧರಾಗಿಯೇ ಅವರು ಸಾಹಿತ್ಯ ರಚಿಸಿದವರು ಕವಿಯಾಗಿ ನಿಮಗೆ ಮುಖ್ಯರಾದವರು ಯಾರು? ಎಂಬ ಪ್ರಶ್ನೆಗೆ ಅವರ ಉತ್ತರ: ‘ನಾನೇನೋ ಸಾಮಾನ್ಯ ಓದುಗರು ಅಂತ ತಿಳಕೊಂಡಿದೀನಿ. ನನ್ನ ಕಾವ್ಯ ಅವರ ಮನಸ್ಸಿನ ಮೇಲೆ ಏನು ಪರಿಣಾಮ ಬೀರುತ್ತೆ ಅನ್ನೋದು ಮುಖ್ಯ. They are our market. ಅವನು ಸಾಹಿತ್ಯದ ಓದುಗ, ವಿಮರ್ಶಕ ಅಂತ ಬೋರ್ಡು ಹಾಕಿಕೊಂಡೊರಲ್ಲ. ಆದರೆ ತುಂಬ ಸಂವೇದನಾಶೀಲರಾಗಿರುತ್ತಾರೆ.

ಇಂತ ಸರಳ ವಾಸ್ತವತೆಗೇ ವಿಮುಖರಾದ ನವ್ಯದ ಒಂದು ವರ್ಗ – (ಅಡಿಗ ಶರ್ಮ ಮತ್ತು ಅವರ ಪಟಾಲಂ) – ‘ಸಾಮಾನ್ಯರು’ ಅಂದರೇ ದಡ್ಡರು ಸಂವೇದನಾಹೀನರು ಎಂಬ ಮೂಢ ನಂಬಿಕೆಗೆ ತುತ್ತಾಗಿ, ಸಂಕೀರ್ಣ ಅನುಭವಕ್ಕೆ ಸಂಕೀರ್ಣ ಅಭಿವ್ಯಕ್ತಿಯೇ ಬೇಕು ಎಂಬ ಹುಚ್ಚು ಹಂಬಲದಲ್ಲಿ ಸದಾ ಜನಮುಖಿಯಾಗಿದ್ದ ಕನ್ನಡ ಸಾಹಿತ್ಯವನ್ನು ಕೆಲವು ವರ್ಷ ಜನರಿಂದ ಸಮಷ್ಟಿಯಿಂದ ಬೇರ್ಪಡಿಸಿದರು ಪರಿಣಾಮ ನಮ್ಮ ಎದುರಿಗಿದೆ. ಕುವೆಂಪು, ಬೇಂದ್ರೆ, ಕೆಎಸ್.ನ, ಕಣವಿ. ಜಿ.ಎಸ್.ನ ಮುಂತಾದವರು ಇಂದಿಗೂ ಜನರ ನಾಲಿಗೆಯ ಮೇಲೆ ಇದ್ದಾರೆ. ಅಡಿಗ – ಶರ್ಮರಂಥವರು, ರಿಲೀಜೇ ಆಗದ ಬರಗೂರು – ಫಿಲ್ಮುಗಳಂತೆ, ತಮ್ಮ ಜೀವಿತದ ಅವಧಿಯಲ್ಲೇ ಮ್ಯೂಜಿಯಮ್ಮಿನ ಪೀಸುಗಳಾಗಿದ್ದಾರೆ.

*

ಕೆಎಸ್.ನ ಬರೀ ಪ್ರೇಮ – ಪ್ರಣಯದ ಕವಿಯಾಗಿ ಉಳಿಯಲಿಲ್ಲ. ಯಾವುದೇ ಬಗೆಯ ಅಬ್ಬರದ ಪ್ರದರ್ಶನಕ್ಕೂ ಮುಂದಾಗದ ಅವರು ಸಮಕಾಲೀನ ಬದುಕಿನ ದ್ರವ್ಯವನ್ನು ನಿಧಾನವಾಗಿ ಹೀರುತ್ತಲೇ ಹೋದರು, ಅವರ ‘ಮನೆಯಿಂದ ಮನೆಗೆ’ ಸಂಕಲನದ ನಂತರ ಹದಿನಾರು ವರ್ಷ ಮೌನವಾಗಿದ್ದರು. ಅನಂತರ ಬಂದದ್ದು ‘ಶಿಲಾಲತೆ’ ‘ನವ್ಯ’ ಸಂದರ್ಭದ ಮಹತ್ವದ ಸಂಕಲನಗಳಲ್ಲಿ ಇದೂ ಒಂದು. ಅವರು ಹೇಳುತ್ತಾರೆ. ‘ಸರಳತೆಯನ್ನಿಟ್ಟುಕೊಂಡು ಸಂಕೀರ್ಣವಾದುದನ್ನು ಹೇಳುವುದು ಹೇಗೆ ಅಂತ ಯೋಚನೆ ಮಾಡ್ತಾನೆ ಹದಿನಾರು ವರ್ಷ ಕಳೀತು.’

ಇದು ಭೂಮಿಯಿಂತೆ, ಆಕಾಶದಂತೆ ನಿರಂತರ ನಾವೀನ್ಯವನ್ನು ಉಳಿಸಿಕೊಂಡು ಬೆಳೆಯಬೇಕು ಎಂಬ ಜೀವಂತ ಕವಿಯೊಬ್ಬರ ಮನೋಧರ್ಮ. ಶರಣರ ವಚನಗಳು, ದಾಸರ ಪದಗಳು, ತತ್ವಪದಕಾರರ ಹಾಡುಗಳು ಇವತ್ತಿಗೂ ಹೊಸ ಹೊಸ ಅವತಾರಗಳಲ್ಲಿ ಬಿಚ್ಚಿಕೊಳ್ಳುತ್ತಿರುವ ಮರ್ಮ ಇದೇ. ನಮ್ಮ ಎಲ್ಲ ಸಾಹಿತ್ಯ ಘಟ್ಟಗಳ ಉತ್ತಮ ರಚನೆಗಳು ಈ ಮೂಲ ಲಕ್ಷಣಗಳನ್ನು ಹೊಂದಿವೆ.

*

‘ನುಡಿಮಲ್ಲಿಗೆ’ಯಲ್ಲಿ ಕೆಎಸ್.ನ ಅನೇಕ ವಿಷಯಗಳಲ್ಲಿ ತೆರೆದುಕೊಂಡಿದ್ದಾರೆ. ಕಳೆದ ಮೂರು ನಾಲ್ಕು ದಶಕಗಳ ‘ಚಳುವಳಿ’ಗಳ ಬಗ್ಗೆ ಅವರಿಗೆ ಆಲರ್ಜಿ. ಹೇಳುತ್ತಾರೆ: ‘ನಾನು ಕಂಡದ್ದನ್ನ, ಕೇಳಿದ್ದನ್ನ, ಅನುಭವಿಸಿದ್ದನ್ನ ನಾಲ್ಕು ಜನಕ್ಕೆ ಅರ್ಥವಾಗೋ ಹಾಗೆ ಬರೀಬೇಕು. ಇದು ನನ್ನ ಬಿಜಿನೆಸ್. ಹಾಗಿರೋವಾಗ ಆ ಚಳುವಳಿಗಳಿಂದ ಏನು ಪ್ರಯೋಜನ ಹೇಳಿ? ….. ನಾವು ಏನು ಮಾಡಿದರೂ ಅದನ್ನ ಕಾವ್ಯದ ಮೂಲಕ ತೋರಿಸಬೇಕೇ ಹೊರತು ಅದರಿಂದಾಚೆ ಅಲ್ಲ. ಆದ್ದರಿಂದ ಯಾವುದೇ ವಾದ ಇರಲಿ, ಕವಿತೆ ಮೊದಲು ಕವಿತೆ ಆಗಬೇಕು. ಅದು ಅನುಭವದ ಅನನ್ಯ ಅಭಿವ್ಯಕ್ತಿಯಾಗಬೇಕು.

*

ಸಾಮಾನ್ಯವಾಗಿ ಅಕೆಡಾಮಿಕ್ ನಮೂನೆಯ ಸೆಮಿನಾರುಗಳಲ್ಲಿ ‘ವಿಮರ್ಶೆಯ ನ್ಯಾಯ’ ಎಂಬ ‘ಪದಪುಂಜ ಬಳಕೆಯಾಗುತ್ತದೆ. ಪಾಪ. ಈ ಕವಿಗೆ ಸಿಗಬೇಕಾದ್ದು ಸಕಾಲದಲ್ಲಿ ಸಿಗಲಿಲ್ಲವಲ್ಲ – ಎಂಬ ಸಾಂತ್ವನದ ಮಾತು ಅದು. ಆದರೆ ಕೆಎಸ್ ನ ಅವರಂಥ ಕವಿಗಳಿಗೆ ಇಂಥವೆಲ್ಲ ಮುಖ್ಯ ಅನ್ನಿಸಲಿಕ್ಕಿಲ್ಲ.

‘ನನ್ನೂರು ಚೆಂದವೋ ನಿನ್ನೂರು ಚೆಂದವೋ’ ಹಾಡು ಹೇಳುವ ಗಂಡಹೆಂಡಿರ ಈ ಗತ್ತಿನಲ್ಲಿ ನಾದದ ಆ ಮತ್ತಿನಲ್ಲಿ ಮೈಸೂರು ಮಲ್ಲಿಗೆಯಂಥ ಕವಿ ಯಾವಾಗಲೂ ಜುಳು ಜುಳು ಅಂತ ಹರಿಯುವ ನದಿಯ ಹಾಗೆ ನಳನಳಿಸುತ್ತಾನೆ. ಮೈ ಮನಸ್ಸು ಮೆದುಳು ಎಲ್ಲವನ್ನೂ ರೋಮಾಂಚನಗೊಳಿಸಬಲ್ಲ ಕವಿ ಕೆ.ಎಸ್. ನ ಇಂಥ ಒಂದು ದ್ರವ್ಯ ಕನ್ನಡ ಕಾವ್ಯದ್ದು. ಇದೇ ನಮ್ಮ ಹೆಮ್ಮೆ.

-೨೦೦೪