‘ನಿನ್ನೆ ಮಧ್ಯಾಹ್ನದಿಂದ ಸಾವು – ಬದುಕಿನ ಹೋರಾಟ’

ಕಿದ್ವಾಯಿ ಹಾಸ್ಟಿಟಲ್ಲಿನ ರೂಮೊಂದರಲ್ಲಿ ಏಳಲು ಬಾರದಂತೆ ಒರಗಿಕೊಂಡು ಉಸಿರಾಡಿಸಲು ಕಷ್ಟಪಡುತ್ತಲೇ ಪ್ರೊಫೆಸರ್ ನಂಜುಂಡಸ್ವಾಮಿ ನಮಗೆ ಹೇಳಿದ ಮಾತಿದು.

ನಾವು: ಅಂದರೆ ‘ಅಗ್ನಿ’ ಸಂಪಾದಕ ಶ್ರೀಧರ್, ಮಂಜುನಾಥ ಅದ್ದೆ. ಬಚ್ವನ್ ಮತ್ತು ನಾನು. ಆವತ್ತು ಜನವರಿ ಹದಿನಾರು . ಶುಕ್ರವಾರ ಪ್ರೊಫೆಸರನ್ನು ನೋಡಿಕೊಂಡು ಬರೋಣ ಅಂತ ಶ್ರೀಧರ್ ಆತಂಕದಿಂದ ಹೇಳಿದರು. ನಾವೆಲಲ್ ಹೋದಾಗ ನಿಜವಾಗಿಯು ಆತಂಕದ ಪರಿಸ್ಥಿತಿ. ಆಸ್ಪತ್ರೆ ಸೇರಿದಾಗಿನಿಂದ ಅವರ ದೇಹಸ್ಥಿತಿ ಒಮ್ಮೆ ಹಾಗೆ ಒಮ್ಮೆ ಹೀಗೆ ಅಂತ ಜೋಲಿ ಹೊಡೆಯುತ್ತಲೇ ಇತ್ತು. ಅವರು ಮಾತಾಡುವ ಸ್ಥಿತಿಯಲ್ಲಿಯೇ ಇರಲಿಲ್ಲ.

*

ಎಪ್ಪತ್ತರ ದಶಕದ ಸುರುವಾತಿನಿಂದಲೂ ಕರ್ನಾಟಕದ ಉದ್ದಗಲಕ್ಕೆ ಹೊಸ ಎಚ್ಚರದ ಡಿಂಡಿಮ ಬಾರಿಸುತ್ತ ನಮ್ಮಂಥ ಎಳೆಯ ಸಾಹಿತಿ ಕಲಾವಿದರ ಸಂವೇದನೆಗಳಿಗೆ ರಾಜಕೀಯ ಪ್ರಜ್ಞೆಯ ಕಸಿ ಮಾಡಿದ ಈ ಪ್ರಚಂಡ ವ್ಯಕ್ತಿ ಕೈ ಕಾಲೆಲ್ಲಾ ಕಡ್ಡಿಯಾಗಿ, ಸಹಜ ಉಸಿರಾಟಕ್ಕೆ ಅಡ್ಡಿಯಾಗಿ, ತನ್ನ ಬದುಕಿನ ಬಹುಶಃ ಕೊನೆಯ ಹೋರಾಟದಲ್ಲಿ ತೊಡಗಿದ ಆ ಕರುಳು ಹಿಂಡುವ ನೋವು ನೋಡಲಾರದೆ ನಾನು ರೂಮಿನ ಹೊರಗೆ ಅತ್ತಿಂದಿತ್ತ ಅಡ್ಡಾಡತೊಡಗಿದ್ದೆ.

‘ಚಂಪಾ, ನಿಮ್ಮನ್ನು ಕರೀತಾರೆ’ – ಅಂದಳು ಅವರ ಮಗಳು ‘ಚುಕ್ಕಿ’. ಮಡದಿ ಒಂದು ಕಡೆ ಮೌನದ ಮುದ್ದೆಯಾಗಿ ಕುಂತಾಗ ಈ ಮಗಳು ತಂದೆಯ ಆರೈಕೆಗೆಂದು ಚಕ ಚಕ ಓಡಾಡುತ್ತಿದ್ದಳು. ಮಗ ‘ಪಚ್ಚೆ’ ಅಪ್ಪನಿಗೆ ಹಾಸಿಗೆಯಲ್ಲಿ ಕೂಡ್ರಲು ನೆರವಾಗುತ್ತ ಅಂಗೈಯನ್ನು ಅವರ ನೆತ್ತಿಯ ಮೇಲೆ ಹಿಡಿದಿದ್ದ. ಅದು’ರೇಖಿ’ಯ ಪ್ರಯೋಗವಂತೆ.

ಹತಾಶೆಗೆ ಸಿಕ್ಕ ಮನೆ ಮಂದಿ ಎಲ್ಲ ಬಗೆಯ ವೈದ್ಯಕೀಯ ಚಿಕಿತ್ಸೆಗೆ ಮೊರೆ ಹೋಗಿದ್ದರು. ಪ್ರೊಫೆಸರರ ಕೊರಳಲ್ಲಿ ಏನೇನೋ ಸರಗಳು. ಶಿರಡಿ ಸಾಯಿಬಾಬಾನ ಮಂತ್ರ ಸಾರುವ ಕ್ಯಾಸೆಟ್. ಕ್ಯಾಲೆಂಡರಿನಲ್ಲಿ ಆ ಈ ದೇವರ ಚಿತ್ರಗಳು ಹಿಂದೊಮ್ಮೆ ಬೆಂಗಳೂರಿನ ಆನಂದರಾವ್ ಸರ್ಕಲ್ಲಿನಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶನ ಮೂರ್ತಿಯನ್ನು ಕಾಲಿನಿಂದ ಒದ್ದು ಕೆಡವಿ ಸುದ್ದಿ ಮಾಡಿದ ಧೀಮಂತ ವಿಚಾರವಾದಿ ಈ ಎಂಡೀಎನ್. ‘ಇಂಥವರೂ ಕೊನೆಗಾಲದಲ್ಲಿ ಆಸ್ತಿಕರಾಗಿಬಿಟ್ಟರಲ್ಲ’ – ಎಂದು ನನ್ನ ಅನೇಕ ಸಂಗಾತಿಗಳು ಆಶ್ಚರ್ಯಪಡುತ್ತಿದ್ದಾರೆ. ಆದರೆ ವಾಸ್ತವ ಹಾಗಿತ್ತೇ?

*

ನಾನು ಒಳಗೆ ಹೋಗಿ ಮೌನವಾಗಿ ಕುಳಿತೆ ಆಕ್ಷಿಜೆನ್ ಸೇವನೆಯಿಂದ ಅವರ ತೊಂದರೆ ಸ್ಪಲ್ಪ ಕಡಿಮೆಯಾದಂತಿತ್ತು.

ನನ್ನನ್ನು ದಿಟ್ಟಿಸುತ್ತ ಅವರು ಕೇಳಿದ ಪ್ರಶ್ನೆ ‘ಮತ್ತೆ ಬರಹಗಾರರ ಒಕ್ಕೂಟದ ಚಳುವಳಿ ಪ್ರಾರಂಭಿಸೋಣವಾ?

ಶ್ರೀಧರ ಮತ್ತು ನನಗೆ ಅದೊಂದು ಶಾಕ್! ಏನಿದು ಈ ಮನುಷ್ಯ ಇಂಥಾ ಗಳಿಗೆಯಲ್ಲಿ ಮೂವತ್ತು ವರ್ಷ ಹಿಂದಿನ ಆ ಚಳುವಳಿಯ ಮಾತು ಆಡುತ್ತಿದ್ದಾನಲ್ಲ? ಒಂದು ಕ್ಷಣದ ಶಾಕ್ ಅಷ್ಟೇ. ಕನಿಷ್ಠ ಹದಿನೈದು ವರ್ಷಗಳಾದರೂ ಈ ಹಿರಿಯ ಕಾಮ್ರೇಡನಿಗೆ ಕಿರಿಯ ಕಾಮ್ರೇಡನಾಗಿ ಅವರನ್ನು ಬಹಳ ಹತ್ತಿರದಿಂದ ಬಲ್ಲ ನನಗೆ ಅವರಾಡಿದ ಮಾತು ಸಹಜವೇ ಅನ್ನಿಸಿತು. ನಾನೆಂದೆ: ‘ಬಹುಶಃ ಅದು ಅನಿವಾರ್ಯ ಅಂತ ಅನ್ನಿಸುತ್ತದೆ.

ನನ್ನ ಪ್ರತಿಕ್ರಿಯಗೆ ತಕ್ಷಣದ ಹಿನ್ನಲೆ: ಕುವೆಂಪು ಅವರ ನಾಡಗೀತೆಯ ಬಗ್ಗೆ ಎದ್ದ ಗೊಂದಲ. ೧೯೭೪ರಲ್ಲಿ ಮೈಸೂರಿನಲ್ಲಿ ‘ಕರ್ನಾಟಕ ಕಲಾವಿದರ ಮತ್ತು ಬರಹಗಾರರ ಒಕ್ಕೂಟ’ವನ್ನು ಉದ್ಘಾಟಿಸಿದವನು ನಾನೇ ….. ಹಾಸ್ಟಿಟಲ್ಲಿನಲ್ಲಿ ಆ ಮಬ್ಬುಗತ್ತಲೆಯಲ್ಲೂ. ಪ್ರೊಫೆಸರರು ಮಾತಿನಿಂದಾಗಿ, ನಾನು ಮೂರು ದಶಕಗಳ ಸೀರಿಯಲ್ಲಿನ ತುಣುಕು ತುಣುಕು ದೃಶ್ಯಗಳಿಗೆ ಮೂಕ ಪ್ರೇಕ್ಷಕನಾಗಿಬಿಟ್ಟೆ.

*

ನಾನು ಬರೆಯುತ್ತಿರುವ ಅಕ್ಷರಗಳ ಕಿಂಡಿ ಕಿಂಡಿಗಳಲ್ಲಿ ಆ ದೃಶ್ಯಗಳನ್ನು ನೀವೂ ಮೇಲಿಂದ ಮೇಲೆ ನೋಡಿರುತ್ತೀರಿ. ವಿಚಾರಕ್ರಾಂತಿಯ ಮೂಲ ನಕಾಶವನ್ನು ತಮ್ಮ ಸಂದೇಶಗಳ ಮೂಲಕ ಹಾಕಿಕೊಟ್ಟವರು ಕುವೆಂಪು. ಅದಕ್ಕೆ ಪೂರಕವಾಗಿ ಲೋಹಿಯಾ, ಅಂಬೇಡ್ಕರ್ ವಿಚಾರಧಾರೆ. ಜೊತೆಗೆ ಸಿಂಹಳ ದ್ವೀಪದಿಂದ ಸುಂಟರಗಾಳಿಯಂತೆ ಬೀಸಿ ಬಂದ ವಿಚಾರವಾದಿ. ಅಬ್ರಹಾಂ ಕೋವೂರ್. ಆದರೆ ಈ ನಕಾಶಕ್ಕೆ ಬಣ್ಣ ತುಂಬಿದವರು ಅಮೂರ್ತ ಚಿಂತನೆಗೆ ಕ್ರಿಯಾಶೀಲತೆಯ ಮಂತ್ರದಂಡ ತಾಗಿಸಿದವರು. ಕೆ.ಎಂ. ಶಂಕರಪ್ಪರಪ್ಪ ಮತ್ತು ಎಂ.ಡಿ. ನಂಜುಂಡಸ್ವಾಮಿ ಇವರ ಓರಗೆಯ ಸಾಹಿತಿ ಮಿತ್ರರಲ್ಲಿ ಪ್ರಮುಖರು ಲಂಕೇಶ ಮತ್ತು ತೇಜಸ್ಷಿ ಜಾತಿ ವಿನಾಶ ಆಂದೋಲನ. ಒಕ್ಕೂಟ ತುರ್ತು ಪರಿಸ್ಥಿತಿಯ ನವ ನಿರ್ಮಾಣ ಕ್ರಾಂತಿ … ಒಂದೇ ಎರಡೇ? ಆ ದೃಶ್ಯಗಳು ಪರದೆಯ ಮೇಲೆ ಮೂಡಿದಾಗ ಈಗಲೂ ಮಗ್ಗುಲಿಗೆ ಕುಳಿತ ಸಹ – ಪ್ರೇಕ್ಷಕನನ್ನ ಡಿಶಂ ಡಿಶಂ ಅಂತ ಕೆರಳಿಸುವಂಥ ಉತ್ಸಾಹ ನನಗೆ.

*

ಅನಂತರ ಆದದ್ದೇನು? ‘ಒಕ್ಕೂಟ’ ಪ್ರಥಮ ಅಧ್ಯಕ್ಷರಾಗಿದ್ದ ಹಿರಿಯ ಕವಿ ಜಿ.ಎಸ್. ಶಿವರುದ್ರಪ್ಪ ಸದ್ದಿಲ್ಲದೆ ದೂರ ಸರಿದರು. ಬುನಾದಿ ಸಡಿಲಾಗಿ ಕಟ್ಟಡ ಜೀರ್ಣವಾಯಿತು. (ಆ ಸಾಂಸ್ಕೃತಿಕ ಅಧಃಪತನಃ ವಿವರವಾದ ವಿಮರ್ಶೆಗೆ ಯೋಗ್ಯವಾದ ವಿಷಯ) ಆದರೆ ಇಬ್ಬರು ಧೀಮಂತರು ಮಾತ್ರ ತಮ್ಮ ಎಲ್ಲ ವೈಯಕ್ತಿಕ ವೈರುಧ್ಯಗಳ ನಡುವೆಯೂ, ಕ್ರಾಂತಿಯ ಜ್ಯೋತಿಯನ್ನು ಜೀವಂತವಾಗಿ ಇಟ್ಟರು: ‘ಲಂಕೇಶ ಪತ್ರಿಕೆ’ಯ ಮೂಲಕ ಪಿ.ಲಂಕೇಶ ಮತ್ತು ಕರ್ನಾಟಕ ರಾಜ್ಯ ರೈತ ಸಂಘವನ್ನು ಕಟ್ಟುವದರ ಮೂಲಕ ನಂಜುಂಡಸ್ವಾಮಿ ಅವರಿಬ್ಬರೂ ಈಗ ನಮ್ಮ ನಡುವೆ ಇಲ್ಲ.

*

ಪ್ರೊಫೆಸರರ ಮಾತಿನಲ್ಲಿ ಸ್ಪಷ್ಟತೆ ಇತ್ತು. ತಮ್ಮ ಅನಾರೋಗ್ಯ ತಾತ್ಕಾಲಿಕ, ಅದನ್ನೂ ಮೀರಿ ಮತ್ತೇ ಗಟ್ಟಿಯಾಗುತ್ತೇನೆ – ಎಂಬ ಮನೋಬಲ ಅವರದಾಗಿತ್ತು. ಹೋರಾಟದುದ್ದಕ್ಕೂ ಅನೇಕ ಹಿನ್ನಡೆಗಳನ್ನು ಕಂಡಿದ್ದರೂ ಅವರೆಂದೂ ನಿರಾಶಾವಾದಿಯಾಗಲಿಲ್ಲಾ: ಸಿನಿಕರಾಗಲಿಲ್ಲ ಪಲಾಯನವಾದಿಯಾಗಲಿಲ್ಲ.

‘ಅಗ್ನಿ’ ಶ್ರೀಧರ್: ತಮ್ಮ ಏಳೆ ಹರೆಯದಲ್ಲಿ ಆಗ ‘ಒಕ್ಕೂಟ’ದ ಸಮಾವೇಶದಲ್ಲಿ ಪಾಲುಗೊಂಡವರು. ಮಧ್ಯಂತರದಲ್ಲಿ ಮರೆಯಾಗಿ ಈಗ ಧುತ್ತನೆ ‘ಅಗ್ನಿ’ ಮೂಲಕ ಬೆಳಕು ಬೆಂಕಿ ಎರಡನ್ನೂ ನೀಡುತ್ತಿರುವ ಸ್ನೇಹಿತ.

ಶ್ರೀಧರ್ ವಿಷಾದದಿಂದ ಹೇಳಿದ್ದು ‘ತೇಜಸ್ವಿ ಕೂಡ ಏನೂ ಮಾಡಲಿಲ್ಲ.’ ನಂಜುಂಡಸ್ವಾಮಿ ಒಂದು ನಿಮಿಷದ ಮೌನ. ಅನಂತರ‍, ತೇಜಸ್ವಿ ಬಗ್ಗೆ ಅವರಾಡಿದ್ದು ಒಂದೇ ಒಂದು ವಾಕ್ಯ (ಅದನ್ನು ದಾಖಲಿಸುವ ಮನಸ್ಸು ನನಗಿಲ್ಲ.)

*

ನಡು ನಡುವೆ ನರ್ಸುಗಳು, ಡಾಕ್ಟರರು ಬರುತ್ತಿದ್ದರು. ನಾಡಿ ನೋಡುತ್ತಿದ್ದರು. ಇಂಜೆಕ್ಷನ್ನೂ ನೀಡುತ್ತಿದ್ದರು. ಡಾಕ್ಟರರೊಬ್ಬರು ಕೇಳಿದ ಪ್ರಶ್ನೆ ‘ವಾಟ್ ಇಜ್ ಹ್ಯಾಪನಿಂಗ್?

ಎಂಡೀಎನ್: ‘ನಥೀಂಗ್ ಇಜ್ ಹ್ಯಾಪನಿಂಗ್…. ಆಯ್ ಆಮ್ ಸಫರಿಂಗ್.”

ಇದೆಲ್ಲದರ ಮಧ್ಯೆ ಅವರ ಎಂದಿನ ಹುಡುಗಾಟ ಬೇರೆ. ಅವರೇ ಮನೆಮಂದಿಯನ್ನು ಸಮಾಧಾನ ಪಡಿಸುವಂತೆ ಇತ್ತು. ದೇಹವನ್ನು ಅಲಂಕರಿಸಿದ ಮಾಲೆಗಳನ್ನು ನೆನೆದರು: ‘ನಾನು ಇನ್ನು ಮೇಲೆ ನಂಜುಂಡಶಾಸ್ತ್ರಿ ಅಂತ ಹೆಸರು ಬದಲಾಯಿಸಿಕೊಳ್ಳುವೆ!’

ಇನ್ನೊಂದು ಮದುವೆ ಆಗುವ ಪ್ರಸ್ತಾಪವನ್ನೂ ಇಟ್ಟಿದ್ದರಂತೆ ಪ್ರೊಪೆಸರರು! ಇದೇನಪ್ಪಾ ಅಂತ ಮಕ್ಕಳು ಕೇಳಿದಾಗ ಹೇಳಿದರಂತೆ ‘ಗಾಬರಿ ಬೇಡ. ಪರ್ಮನೆಂಟ ಅಲ್ಲ ಬರಿ ಕ್ಯಾಜುಆಲ್ ಕಾಂಟ್ರಾಕ್!’ …. ಮಡದಿ .. ಮಕ್ಕಳೆಲ್ಲ ಇಂಥ ಪ್ರಸಂಗಗಳನ್ನು ಮೆಲಕು ಹಾಕುತ್ತ ನೋವು ನುಂಗುತ್ತಿದ್ದರು. ಅವರ ಕಣ್ಣೆದುರು ಅಗಾಗ ಅನೇಕ ದೇವರುಗಳು ಸುಳಿಯುತ್ತಿದ್ದರಂತೆ. ಕೆಲವರಂತೂ ಹೆಲಿಕಾಪ್ಟರಿನಲ್ಲಿ! ಬರುವವರಲ್ಲಿ ಮುಖ್ಯ ದೇವರು ಯಾರು? – ಅಂತ ವಿಚಾರಿಸೆದೆ. ಅವರ ಮಡದಿ ‘ಮುಖ್ಯವಾಗಿ ಶಿವ’ ಅಂದರು.

ನಾನು: ‘ಬಹುಶಃ ಅದಕ್ಕೇ ಇರಬೇಕು – ಪ್ರೊಫೆಸರರು ಸ್ಟೆಪ್ನಿ ಬಗ್ಗೆ ಪ್ಲಾನು ಹಾಕಿದ್ದು!’

*

(ಆ ‘ಶಿವ’ನೆಂಬವನ ಪರ್ಯಾಯ ನಾಮ ‘ನಂಜುಂಡಸ್ವಾಮಿ’ . ಇಂಥ ಪರ್ಯಾಯ ನಾಮಧಾರಿಗಳೆಲ್ಲ ಇಂಥದೊಂದು ಕನಸು ಕಾಣುವುದನ್ನು ನಾನು ಗಮನಿಸಿದ್ದೇನೆ.)

*

ಸಾವು ಬದುಕಿನ ಹೋರಾಟವನ್ನು ಪ್ರಾಸ್ತಾಪಿಸಿದೆ ಹದಿನೆಂಟು ದಿನ ಹದಿನೆಂಟು ರಾತ್ರಿಗಳ ನಂತರ ಫೆಬ್ರವರಿ ಮೂರರ ಮಂಗಳವಾರ ಬೆಳಗಿನ ಜಾವದಲ್ಲಿ ಪ್ರೊಫೆಸರರು ವಿದಾಯ ಹೇಳಿದ್ದಾರೆ. ಕೊನೇ ಗಳಿಗೆಯಲ್ಲೂ ಅವರು ಕಾರ್ಲ್‌ಮಾರ್ಕ್ಸ್, ಲೋಹಿಯಾ ಅಂತ ಕನವರಿಸುತ್ತಿದ್ದರಂತೆ ‘ಸೀ ಯು ಟುಮಾರೋ’ – ಅಂತ ಬೆರಳು ತೋರಿಸಿದ ಅವರು ಮರುದಿನ ಸೂರ್ಯನಿಗೆ ಮುಖ ತೋರಿಸಲಿಲ್ಲ.

*

ಸುದ್ದಿ ಕೇಳಿ ರಾಜರಾಜೇಶ್ವರಿ ನಗರದ ಅವರ ಮನೆಗೆ ಧಾವಿಸಿದವರ ಮುಖ ನೋಡುತ್ತಿದ್ದೆ ಮೌನವಾಗಿ. ಎಲ್ಲಾ ಹಳೆಯ ಪಳೆಕೆಯ ಮುಖಗಳು. ಎಂಡೀಎನ್ ಜೊತೆ ಹೋರಾಟದಲ್ಲಿ ಪಾಲುಗೊಂಡವರು: ಅವರೊಂದಿಗೆ ಜಗಳಾಡಿದವರು. ಸರಕಾರದಲ್ಲಿ ಅಧಿಕಾರದಲ್ಲಿದ್ದ ಮಾಜಿಗಳು, ಅಧಿಕಾರದಲ್ಲಿರುವ ಹಾಲಿಗಳು. ಎಲ್ಲರನ್ನೂ ಅವರವರ ನೆಲೆಯಲ್ಲಿ ಕಾಡುತ್ತಿದ್ದ ನೆನಪುಗಳು. ನರಗುಂದ ಬಂಡಾಯದಿಂದ ಪ್ರಾರಂಭಗೊಂಡ ಕರ್ನಾಟಕದ ರೈತ ಚಳುವಳಿಯ ಹಸಿರು ಬಾವುಟವನ್ನು ಅಂತಾರಾಷ್ಟ್ರೀಯ ಆಕಾಶದೆತ್ತರಕ್ಕೇ ಹಾರಿಸಿದ ಸೇನಾಪತಿ. ಒಂದು ಚಿಕ್ಕ ಗಾಜಿನ ಮನೆಯಲ್ಲಿ ತಮ್ಮ ಎಂದಿನ ಗತ್ತಿನಲ್ಲಿ ಮೌನವಾಗಿ ಮಲಗಿದ್ದ.

ಮಣ್ಣಿನಲ್ಲಿ ಮೊಳಕೆಯೊಡೆದು ಪಲ್ಲವಿಸಿ ಗಿಡವಾಗಿ ಮರವಾಗಿ ಹೂವಾಗಿ ಅರಳಿದ ಜೀವ ಮತ್ತೇ ಮಣ್ಣಿಗೆ ಮರಳಿತ್ತು. ಆ ಹೂವಿನ ಮೊಗದ ತುಂಬ ಕನಸುಗಳು ತುಂಬಿದ್ದವು.

ಸಂಗಾತಿಗಳೇ, ಆ ಕನಸುಗಳು ನಮ್ಮವಾಗಲಾರವೇ? ಈ ಹಿರಿಯ ಜೀವದ ನೆನಪಿನಲ್ಲಿ ಯಾವುದಾದರೂ ಒಂದು ಹಳ್ಳಿಯಲ್ಲಿ ನಾವೆಲ್ಲ ಸೇರಿ, ಚರ್ಚಿಸಿ, ಆ ಚರ್ಚೆಗೊಂದು ಕ್ರಿಯಾರೂಪ ಕೊಟ್ಟು ಪ್ರೊಫೆಸರರು ಭಗ್ನ ಕನಸುಗಳಿಗೆ ಜೀವ ತುಂಬೋಣವೇ?

ವಿಚಾರಿಸಿರಿ

 

-೨೦೦೪