ನೀವು ಒಬ್ಬ ‘ಗಣ್ಯ’ ಮನುಷ್ಯ ಅಂದುಕೊಳ್ಳಿರಿ. ಜೀವನದಲ್ಲಿ ಒಮ್ಮೆಯಾದರೂ ನೀವು ಮಾಧ್ಯಮಗಳ ಪ್ರತಿನಿಧಿಗಳಿಂದ, ‘ನಿಮ್ಮ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು ಯಾರು?’ ಎಂಬ ಪ್ರಶ್ನೆ ಎದುರಿಸಬೇಕಾಗುತ್ತದೆ. ಅನೇಕ ವಸಂತಗಳನ್ನೂ ಚಳಿಗಾಲಗಳನ್ನೂ ಕಂಡಿರುವ ನೀವು ‘ಅಬೌಟ್ ಟರ್ನ’ ಅಂತ ಹೇಳಿ ಹೊರಡುತ್ತೀರಿ ಹುಡುಕಲಿಕ್ಕೆ: ತಂದೆ- ತಾಯಿ, ಬಾಲ್ಯದ ಮಾಸ್ತರುಗಳು, ಯೌವನದ ಪ್ರೊಫೆಸರುಗಳು, ಯಾವುದೋ ಸ್ವಾಮೀಜಿ ಅಥವ ಸಾಧು, ಯಾರೋ ಪ್ರಖ್ಯಾತ ಸಾಹಿತಿಗಳು. ಚಿಂತಕರು. ಯಾರೋ ಮಹಾತ್ಮರು… ಹೀಗೆ. ನಾನು ತುಳಿದು ಬಂದ ದಾರಿಗೆ ನನ್ನ ಕಾಲುಗಳಷ್ಟೇ ಕಾರಣವಲ್ಲ: ನನ್ನನ್ನು ಹಿಂದಿನಿಂದ ದಬ್ಬುವ ಕೈಗಳೂ ಇವೆ ಎಂಬ ನಂಬಿಕೆಯೇ ಈ ಹುಡುಕಾಟಕ್ಕೆ ಕಾರಣ.

ನನಗೆ ಆ ಪ್ರಶ್ನೆ ಎದುರಾದರೆ ನಾನು ನಾಲ್ಕಾರು ಹೆಸರು ಪಟ ಪಟ ಹೇಳಿಬಿಟ್ಟು. ಮುಂದಿನ ಪ್ರಶ್ನೆಗಾಗಿ ಕಾಯುತ್ತೇನೆ. ಮೇಲೆ ಪ್ರಸ್ತಾಪಿಸಿದ ಯಾವ ಕೆಟಗರಿಗೂ ಸೇರದ ವ್ಯಕ್ತಿಯೊಬ್ಬರಿದ್ದಾರೆ. ನಿಸ್ಸಂದೇಹವಾಗಿ ಅವರು ನನ್ನ ಮೇಲೆ ಪ್ರಭಾವ ಬೀರಿದ ಹಿರಿಯರು ಅವರ ಹೆಸರು: ರಾಮ ಜಾಧವ.

*

ಯಾರು ಈ ರಾಮ ಜಾಧವ?

ಒಂದು ಕ್ಷೀಷೆಯಾಗಿಯೇ ಉತ್ತರ ಕರ್ನಾಟಕದ ‘ಸಾಂಸ್ಕೃತಿಕ ರಾಜಧಾನಿ’ ಎಂದು ಬಣ್ಣಿಸಲ್ಪಡುವ ಧಾರವಾಡದೊಂದಿಗೆ ನನಗೆ ನಲವತ್ತು ವರ್ಷಗಳ ನಂಟು. ೧೯೫೬ ರಿಂದ ೧೯೯೬ ವಿದ್ಯಾರ್ಥಿಯಾಗಿ ಕರ್ನಾಟಕ ಕಾಲೇಜು ಸೇರಿದವನು ಧಾರವಾಡ ಬಿಟ್ಟಾಗ ಕರ್ನಾಟಕ ಯೂನಿವರ್ಸಿಟಿಯ ಇಂಗ್ಲೀಷ್ ವಿಭಾಗದ ಮುಖ್ಯಸ್ಥನಾಗಿದ್ದೆ. ಈ ನಾಲ್ಕು ದಶಕಗಳಲ್ಲಿ, ನನ್ನ ಪ್ರಾಧಾಪಕ ವೃತ್ತಿಯ ಜೊತೆಗೇ ಅನೇಕ ಜನಪರ ಚಳುವಳಿಗಳಲ್ಲಿ ಪಾಲ್ಗೊಂಡ ನನಗೆ ಅನೇಕ ಹಿರಿಯ ಚೇತನಗಳ ಒಡನಾಟ ಒದಗಿ ಬಂದದ್ದು ಸಹಜ.

೧೯೮೦-೮೨: ಏಕೀಕರಣ ನಂತರ ನಾನು ಕಂಡ ಬೃಹತ್ ಆಂದೋಲನವಾದ ಗೋಕಾಕ್ ಚಳುವಳಿಯ ಸನ್ನಿವೇಶ. ಧಾರವಾಡದ ವಿದ್ಯಾವರ್ಧಕ ಸಂಘ ಆ ಚಳುವಳಿ ಸಮರ ಭೂಮಿ. ಖ್ಯಾತ ಪತ್ರಕರ್ತ ಪಾಟೀಲ ಪುಟ್ಟಪ್ಪನವರ ಕಾರಿನಲ್ಲಿ ವಾಕಿಂಗ್ ಸ್ಟಿಕ್ಕಿನ ಹಿರಿಯರೊಬ್ಬರು ಬರುತ್ತಿದ್ದರು ಅವರು, ಪಾಪು. ಆರ್. ಸಿ. ಹಿರೇಮಠ ಮತ್ತು ಬಿ. ಟಿ. ಸಾಸನುರ ಅವರ ಗೆಳೆಯರೆಂದು ಗೊತ್ತಾಯಿತು… ಚಳುವಳಿಯ ಮೊದಲ ಹಂತದ ಕೋಲಾಹಲಕಾರಿ ಅಧ್ಯಾಯ ಮುಗಿದು. ಅನಂತರದ ದಿನಗಳಲ್ಲಿ ಅಖಿಲ ಕರ್ನಾಟಕ ಕೇಂದ್ರ ಕನ್ನಡ ಕ್ರಿಯಾಸಮಿತಿ ಒಂದು ‘ರಿಜಿಸ್ಟರ್ಡ್’ ಸಂಸ್ಥೆಯಾಗಿ ಮುಂದುವರೆದ ಸಂದರ್ಭದಲ್ಲಿ ನಮ್ಮೆಲ್ಲರಿಗೆ ಸ್ಫೂರ್ತಿಯಾಗಿ ನಿಂತ ‘ಜಾಧವ ಅಜ್ಜ’ ಎಂದೇ ನಮ್ಮೊಳಗೆ ಇಳಿದವರು ರಾಮ ಜಾಧವ.

*

ಮನೆ ಮಾತು ಮರಾಠಿ. ಗೋಡೆಯ ಮೇಲೆ ಛತ್ರಪತಿ ಶಿವಾಜಿ ಮಹಾರಾಜನ ಒಂದು ಪೋಟೋ. ಎರಡು ದೆವ್ವನಾಕಾರದ ಕ್ರಾಸ್ ಬ್ರೀಡಿನ ನಾಯಿಗಳ ಸ್ವಾಗತ ‘ನಮ್ಮ ಮನ್ಯಾಗಿನ ನಾಯಿ ಸೈತ ಮರಾಠಿ ಮಾತಾಡ್ತಾವ’ ಅಂತಿದ್ದರು ಅಜ್ಜ. ಈ ಅಜ್ಜನ ಹಿನ್ನೆಲೆ ಮಾತ್ರ ಈ ಚೆಲುವ ಕನ್ನಡನಾಡು. ಹುಟ್ಟಿದ್ದು ಧಾರವಾಡ ಜಿಲ್ಲೆಯ ಕರ್ಕಿಕಟ್ಟಿ. ಪ್ರಾರಂಭದ ಶಿಕ್ಷಣ ಕಟಗೇರಿ, ಬಿಜಾಪುರ, ಬಾಗಲಕೋಟೆಗಳಲ್ಲಿ. ಉಚ್ಚ ಶಿಕ್ಷಣ ಕೊಲ್ಲಾಪುರದ ರಾಜಾರಾಮ ಕಾಲೇಜಿನಲ್ಲಿ … ಮುಂದೆ ಕೇಳಿರಿ.

ಅಲ್ಲಿ ‘ಕನ್ನಡ’ ವಿಷಯದಲ್ಲಿ ಬಿ.ಎ. ಆನರ್ಸ ಆದವರಲ್ಲಿ ಅವರು ಎರಡನೆಯವರು. ಮರಾಠ ಸಮಾಜದಲ್ಲಿ ಮೊದಲಿಗರು. ಹೈಸ್ಕೂಲ್ ಹಂತದಿಂದಲೇ ಕನ್ನಡದ ಜಿಡ್ಡು ಉಳಿದ ಸಂಗಾತಿಗಳು ಶಿಕ್ಷಣ ರಂಗಕ್ಕೋ ಪತ್ರಿಕಾ ಪ್ರಪಂಚಕ್ಕೋ ಸೇರಿ ಪ್ರಸಿದ್ದಿಯ ಲೋಕನಾಯಕರಾದರು. ಆದರೆ ಇವರು ಕಸ್ಟಮ್ಸ್ ಅಧಿಕಾರಿಯಾಗಿ ಅನಾಮಧೇಯರಾಗಿ ಉಳಿದರು. ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಹತಗಣಗಲಿ ತಾಲೂಕಿನಲ್ಲಿ. ಕರ್ನಾಟಕದ ಕುಂದುರನಾಡಿನ ಅನೇಕ ಹಳ್ಳಿಗಳಲ್ಲಿ ಕನ್ನಡ ಪ್ರಾಥಮಿಕ ಶಾಲೆ, ಹೈಸ್ಕೂಲು ಪ್ರಾರಂಭಿಸಿದರು. ೧೯೭೭ ರಲ್ಲಿ ನಿವೃತ್ತ ಐಎಎಸ್ ಅಧಿಕಾರಿಯಾಗಿ ಧಾರವಾಡದಲ್ಲಿ ನೆಲೆಸಿದರು.

ಅವರ ಕಾರ್ಯಕ್ಷೇತ್ರದ ಹರವೇ ದೊಡ್ಡದು: ಮಕ್ಕಳ ಮನೆ, ಕಲ್ಯಾಣ ಕೂಟ, ಬಂಗಾರ ಬಳಗ, ಜಾಗೃತ ನಾಗರಿಕ ಮಂಡಳಿ, ಹಿಂದುಳಿದವರ ಅಲ್ಪಸಂಖ್ಯಾತರ, ದಲಿತರ ಜಂಟಿ ಕ್ರಿಯಾವೇದಿಕೆ, ಕೋಮು ಸೌಹಾರ್ದತಾ ವೇದಿಕೆ, ಕನ್ನಡ ಕ್ರಿಯಾಸಮಿತಿ ಹೀಗೆ ಇಂಥ ಎಲ್ಲ ವಲಯಗಳಿಗೂ ಅವರು ಅನಿವಾರ್ಯ. ಯಾರೇ ಯಾವುದೇ ಚಳುವಳಿ ಮಾಡಿದರೂ ಈ ಅಜ್ಜ ಬೇಕೇ ಬೇಕು! ಹಗಲಿಲ್ಲ, ರಾತ್ರಿ ಇಲ್ಲ. ಚಳಿಗಾಲವಿಲ್ಲ, ಬೇಸಿಗೆ ಇಲ್ಲ! ನಾನು ವಿನೋದದಿಂದ ಅವರನ್ನು ‘ಸರ್ವಋತು ಸತ್ಯಾಗ್ರಹಿ’ ಅಂತ ಕರೆಯುತ್ತಿದ್ದೆ. ದೊಡ್ಡ ಆಳು: ದೊಡ್ಡ ದನಿ ಕೈಯಲ್ಲಿ ಬಡಿಗೆ ಹಿಡಿದುಕೊಂಡು ಅಜ್ಜ ಹೊರಟನೆಂದರೆ ಸಾಕು. ಸಕ್ಸೆಸ್ ಗ್ಯಾರಂಟಿ ಎಂದೇ ಅರ್ಥ.

*

ಜಾಧವರ ಬಗ್ಗೆ ಜನವರಿ ೧೯೯೬ ರಲ್ಲಿ ‘ಸಂಕ್ರಮಣ’ದಲ್ಲಿ ನಾನು ಬರೆದದ್ದು: ‘ರಾಮ ಜಾಧವರ ಬದುಕಿನ ಅಂತರಂಗ ಬಹಿರಂಗಗಳನ್ನು ರೂಪಿಸುತ್ತಲೇ ಬಂದಿರುವ ಅಂತರಗಂಗೆ ಅಂದರೆ ಅವರು ನಂಬಿದ ಬಸವತತ್ವ. ಬಸವಣ್ಣನ ಬಗ್ಗೆ ಅವರು ಮಾತಾಡಲು ಸುರು ಮಾಡಿದರೆ ಸಾಕು: ಅಶ್ವಾರೂಢ ಸೇನಾಪತಿಯಾಗಿ, ಭಕ್ತಿ ಬಂಡಾರಿಯಾಗಿ, ಕಲ್ಲಿನ ಎತ್ತಾಗಿ, ವೀರಶೈವರೆಂದೂ ಲಿಂಗಾಯತರೆಂದೂ ಕರೆದುಕೊಳ್ಳುವ ಅನೇಕರಿಗೆ ಕೇವಲ ಮಣ ಮಣ ಮಂತ್ರವಾಗಿಯೋ ಉಪಜೀವನದ ತಂತ್ರವಾಗಿಯೋ ಪರಿಣಮಿಸಿರುವ ಮಾಮೂಲಿ ಬಸವಣ್ಣ ಮರೆಯಾಗಿ, ಒಂದು ಸದಾ ನಿಗಿ ನಿಗಿ ಕೆಂಡದಂತಿರುವ ಜ್ಯೋತಿರ್ಲಿಂಗವಾಗಿರುವ ಬಸವ – ತತ್ವ ತನಗೆ ತಾನೇ ರಾಮ ಜಾಧವರ ಜವಾರಿ ಕನ್ನಡದಲ್ಲಿ ಅರಳತೊಡಗುತ್ತದೆ.’

ಅವರದೊಂದು ಕವನ:

ಅಕ್ಷರದಿಂದ ಅವಿಷ್ಕಾರ ಪಡೆಯುವುದು ಮಾಹಿತಿ
ಅಕ್ಷರದಿಂದ ಸಾಕ್ಷತ್ಕಾರ ಪಡೆಯುವವನು ಸಾಹಿತಿ
ಒಯ್ಯುವವನು ಸಿದ್ದಾಂತಿ
ಅಕ್ಷರವನ್ನೇ ನಕ್ಷತ್ರವನ್ನಾಗಿ ಮಾಡುವುದು
ಬಸವನಂಥವರ ಕೃತಿ.

*

ರಾಮ ಜಾಧವ ಮಾತಿನ ಹಾಗೆಯೇ ಬರವಣಿಗೆಯೂ ಪುಂಖಾನುಪುಂಖ. ಪ್ರಾಸಬದ್ಧವಾದ ಗತ್ತಿನ ಮಾತುಗಾರಿಕೆ: ಸುತ್ತಲಿನ ಹತ್ತು ಮನೆಗಳಿಗೆ ಕೇಳಬೇಕು. ಒಮ್ಮೊಮ್ಮೆ ಬಾಯಲ್ಲಿನ ಹಲ್ಲಿನ ಸೆಟ್ಟೇ ಕಳಚಿ ಬೀಳುತ್ತಿತ್ತು. ಅವರು ಬೇಂದ್ರೆಯವರ ಅಂತರಂಗ ಮಿತ್ರರಲ್ಲಿ ಒಬ್ಬರಾಗಿದ್ದರು.

೧೯೭೦ ರ ಅಕ್ಟೋಬರ್ ೨೦ ರಂದು ಜಟಾಪಟಿ ನಿಮಗೆ ಗೊತ್ತು. ಆ ಘಟನೆಯ ನಂತರ ಬೇಂದ್ರೆ ಸೀದಾ ಹೋಗಿದ್ದು ಜಾಧವರ ಮನೆಗೆ ‘ಆ ಚೋಟು ಹುಡುಗ ನನಗ ಹಂಗ ಅಂದಾ, ಹಿಂಗ ಅಂದಾ ಅಂತ ಒದರಾಡಿದರಂತೆ,. (ಜಾಧವರೆ ಈ ಸಂಗತಿ ನನಗೆ ತಿಳಿಸಿದವರು ಆಗ ಅವರ ಪರಿಚಯ ನನಗಿರಲಿಲ್ಲ.)

ನಾಡಿನ ಹಿರಿಯ ಸಾಹಿತಿಗಳ ನಿಕಟ ಪರಿಚಯ ಅವರಿಗಿತ್ತು. ಸಾಮಾಜಿಕ ರಾಜಕೀಯ ರಂಗವಂತೂ ಸರಿಯೇ. ಆ ಕಾಲದಲ್ಲಿ ಧಾರವಾಡಕ್ಕೆ ಬಂದು ಹೋಗುತ್ತಿದ್ದ ಮೈಸೂರು ಸೀಮೆಯ ಅನೇಕ ‘ದೊಡ್ಡ’ ಸಾಹಿತಿಗಳ ‘ಸಣ್ಣತನ’ಗಳ ಸ್ವಾರಸ್ಯಕರ ಭಂಡಾರವೇ ಅವರಲ್ಲಿತ್ತು. ಬಸವ ನಿಷ್ಥೆಯಿಂದಾಗಿ ಅವರು ವೀರ ಶೈವ / ಲಿಂಗಾಯತ ಮುಖಂಡರಿಗೆ, ಮಠಾಧಿಪತಿಗಳಿಗೆ ಆತ್ಮೀಯರಾಗಿದ್ದರು …. ಹೀಗಾಗಿ ಹಲವರು ಗಣ್ಯರು ತಮ್ಮ ಸನ್ಮಾನಗಿನ್ಮಾನಗಳಿಗಾಗಿ ಒಪ್ಪಿಸುತ್ತಿದ್ದರು. ಸ್ವತಃ ಕೊಡುಗೈ ದಾನಿ. ಮರಣೋತ್ತರವಾಗಿ ತಮ್ಮ ‘ದೇಹದಾನ’ ಕೂಡ ಮಾಡಿದ್ದರು ಈ ಅಜ್ಜ.

*

ಅವರ ಓರಗೆಯ ಅನೇಕ ಹಿರಿಯರಲ್ಲಿ ಇಲ್ಲದ ಒಂದು ಪ್ರಾಮಣಿಕತೆ, ನಿಷ್ಠೆ ಈ ಮುದುಕನಲ್ಲಿತ್ತು. ಅನಿವಾರ್ಯವಾಗಿ ಮಾಡಬೇಕಾಗಿ ಬಂದ ತಪ್ಪುಗಳನ್ನು ಮರುಮಾತಿಲ್ಲದೆ ಒಪ್ಪಿಕೊಳ್ಳುವ ವಿನಯ ಇತ್ತು. ಉತ್ತಮ ಸಾಹಿತಿಯಾಗಿದ್ದರೂ. ಅವರ ಸ್ವ-ಪರಿಚಯದ ರೀತಿ ಇದುಃ

ನಾನು ಸಾಹಿತಿಗಳ ಸಂಗಾತಿ
ಅಲ್ಲ ಸಾಹಿತಿ.
ಎಂಬುದು ನನ್ನ ಪೂರ್ತಿ ಮಾಹಿತಿ.

(ಸಂಕ್ರಮಣ ಪ್ರಕಾಶನ ೧೯೯೩ ರಲ್ಲಿ ಅವರ ಕವನ ಸಂಕಲನ ‘ಇದಿಷ್ಟೇ ಸತ್ಯ’ವನ್ನು ಪ್ರಕಟಿಸಿದ ಅನೇಕ ಪುಸ್ತಕಕ್ಕಾಗುವಷ್ಟು ಅಪ್ರಕಟಿತ ಸಾಮಗ್ರಿ ಇದೆ.)

*

ರಾಮ ಜಾಧವರು, ಅವರೇ ಹೇಳುವಂತೆ, ಕನ್ನಡದ ‘ದೀಕ್ಷೆ’ಯನ್ನು ಪಡೆದದ್ದು ಜಂಗಿನ ಮುರಿಗೆಯ್ಯನವರಿಂದ. ಅವರಿಗೆ ಬಸವ ಅಂದರೆ ಕನ್ನಡ; ಕನ್ನಡ ಅಂದರೆ ಬಸವ. ಎನಗಿಂತ ಕಿರಿಯರಿಲ್ಲ – ಎಂದು ಬಸವ ಹೇಳಿದಂತೆ. ಈ ಅಜ್ಜ ಹೇಳುತ್ತಿದ್ದ ‘ನಾನು ಮಾಮೂಲಿ ಕನ್ನಡದ ಕೂಲಿ’.

ಏನೇ ಇದ್ದರೂ ಇರಲಿ
ಎಂಥದೇ ಬಂದರೂ ಬರಲಿ
ಕನ್ನಡಕ್ಕಾದರೆ ತರಲಿ
ನಾನಿದ್ದೇನೆ ಕನ್ನಡದ ಕೊಡಲಿ
ಕಾಡುತ್ತ ಕೊಡಲು ನನ್ನದೇ ಬಲಿ.

*

ನನ್ನ ಬಗ್ಗೆ ವಿಶೇಷ ಮಮಕಾರ ಈ ಹಿರಿಯರಿಗೆ. ‘ಚಂಪಾ, ನೀನs ನಮ್ಮ ಎಂಜಿನ್ನು. ನಾವೆಲ್ಲಾ ಖಾಲೀ ಡಬ್ಬ’ – ಅನ್ನುತ್ತಿದ್ದರು. ಜನವರಿ ೯, ೧೯೯೬ ರಂದು ತೀರಿಕೊಂಡರು. ಆಗ ಅವರಿಗೆ ಎಪ್ಪತ್ತೇಳು. ಧಾರವಾಡದ ಕ್ರಿಯಾ ಸಮಿತಿಗೆ ಅಧ್ಯಕ್ಷರಾಗಿದ್ದರು. ಚಂದ್ರಕಾಂತ ಬೆಲ್ಲದ ಅವರು ಪಕ್ಷೇತರಾಗಿ ಚುನಾವಣೆಗೆ ನಿಂತಾಗ ಅವರನ್ನು ವಿಧಾನಸಭೆಗೆ ಧಾರವಾಡ ನಗರದಿಂದ ಆಯ್ಕೆ ಮಾಡಲು ದುಡಿದ ನಮ್ಮೆಲ್ಲರ ಚೈತನ್ಯವಾಗಿದ್ದವರು ರಾಮ ಜಾಧವ. (ಈ ಹಿರಿಯರ ಹೆಸರಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಕನ್ನಡ ಕ್ರಿಯಾಸಮಿತಿ ಪ್ರತಿವರ್ಷ ಸಾಹಿತ್ಯಿಕ ಪುರಸ್ಕಾರ ನೀಡುತ್ತಿದೆ.)

*

ಬರಿ ಕನ್ನಡದ ಕೆಲಸಕ್ಕಾಗಿ ಅಲ್ಲ. ನನ್ನ ವೈಯಕ್ತಿಕ ಬದುಕಿನಲ್ಲೂ ಸಂಗಾತಿಯಾಗಿ. ಹಿತೈಷಿಯಾಗಿ, ತಂದೆಯಾಗಿ ಇಂದಿಗೂ ನನ್ನ ಪ್ರಜ್ಞೆಯ ಒಂದು ಅಂಗವಾಗಿ ಉಳಿದವರು ಈ ಅಜ್ಜ ಅವರದೇ ಮಾತಿವೂ:

ದಿಂಡಿ ಬಾರಿಸುವ
ಕನ್ನಡದ ಹಲಿಗೆ –
ನನ್ನ ನಾಲಿಗೆ;
ಕನ್ನಡದ ಸೆಲೆ –
ನನ್ನ ತಲೆ.

-೨೦೦೪