ಸಾವೆಂಬ ದೆವ್ವ ಈಗಾಗಲೇ ನನ್ನ ದೈವದ
ಮನೆ ಮುಂದೆ ಬಂದು ನಿಂತಿದೆ.
ಅದೀಗ ನನ್ನ ಸುತ್ತ ಪ್ರದಕ್ಷಿಣೆ ಹಾಕುತ್ತಿದೆ –
ನಿಮಿಷ ನಿಮಿಷಕ್ಕೆ, ಗಂಟೆ ಗಂಟೆಗೆ
ದಿನ …. ದಿನಕ್ಕೆ … ವಾಸ ….. ಮಾಸಕ್ಕೆ
ಹಿಂಗದ ತನ್ನ ಹಸಿವಿನಿಂದ
ಕರಾಳ ತನ್ನ ಯಮ ಬಾಹುಗಳಿಂದ!
ಗೊತ್ತಿಲ್ಲ ಯಾವಾಗ ಅದು ನನ್ನ ದೇಹದ
ಗರ್ಭಗುಡಿಯ ಒಳಹೊಕ್ಕುವುದೋ …
ಸದ್ದು ಗದ್ದಲ ಮಾಡದೇ
ನಿದ್ದೆ ಮಂಪರಿನಲ್ಲಿ ನನ್ನ ಪ್ರಾಣಪಕ್ಷಿಯ
ಹೊತ್ತು ಒಯ್ಯುವುದೋ ……

ಹೀಗೆ ಸಾವಿನ ಕಪ್ಪು ನೆರಳಿನಲ್ಲಿ ಕರುಳನ್ನೇ ಹಿಂಡಿ ಕಾವ್ಯ ಮಾಡುತ್ತ ದಿನ ಸವೆಸುತ್ತಿದ್ದ ಕೊಪ್ಪಳದ ಕವಿ ಗವಿಸಿದ್ದ ಬಳ್ಳಾರಿ ಮೊನ್ನೆ ಮಾರ್ಚ ಹದಿನಾಲ್ಕರ ಮುಂಜಾನೆ ಸದ್ದುಗದ್ದಲ ಮಾಡದೇ ನಮ್ಮನೆಲ್ಲ ಆಗಲಿ ಹೋಗಿಬಿಟ್ಟ.

*

ಅದರ ಮುನ್ನಾದಿನ ನಾವು ಅನೇಕ ಗೆಳೆಯರು ಅವನನ್ನು ನೋಡಲು ಹೋಗಿದ್ದೆವು ಬರಿ ಎಲುಬಿನ ಹಂದರವಾಗಿದ್ದ ಗವಿಸಿದ್ದನ ಮೈಯಲ್ಲಿ ಇನ್ನೂ ತ್ರಾಣವಿತ್ತು. ದನಿ ಇರಲಿಲ್ಲ. ಬಿಡುಗಣ್ಣಿನಿಂದ ನಮ್ಮ ಮುಖಗಳನ್ನೆಲ್ಲ ನೋಡುತ್ತಿದ್ದ. ನಮ್ಮ ಗುರುತು ಹತ್ತಿರಬೇಕು ಅಂತ ನಮ್ಮ ನಂಬಿಕೆ. ಮರುದಿನ ಮುಂಜಾನೆ ಅದೇ ಟೈಮಿಗೆ ಹೋಗಿ ನೋಡಿದಾಗ ಕಣ್ಣು ನಿಶ್ಚಲವಾಗಿದ್ದವು.

ಮಾರ್ಚ ೧೩-೧೪ ರಂದು ಕೊಪ್ಪಳದಲ್ಲಿ ರಾಜ್ಯಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನ. ಅದಕ್ಕೆಂದು ಸೇರಿದವರು ನಾವೆಲ್ಲ… ಆದರೆ ಎರಡನೆಯ ದಿನದ ಕಾರ್ಯ ಕಲಾಪಗಳಿಗೆಲ್ಲ ಒಡನಾಡಿಯ ಸಾವಿನ ಸ್ಪರ್ಶ ಅಂಟಿಕೊಂಡು ಬಿಟ್ಟಿತು.

*

ಗವಿಸಿದ್ದನ ಅರೋಗ್ಯ ಮೊದಲಿನಿಂದಲೂ ಅಷ್ಟಕಷ್ಟೆ. ಆದರೆ ರೋಗ ಉಲ್ಬಣಗೊಂಡ ಸಮಾಚಾರವನ್ನು ಗೆಳೆಯರು ನನಗೆ ತಿಳಿಸಿರಲೇ ಇಲ್ಲ. ಅವನದೊಂದು ಕವನ, ‘ಈ ಮಣ್ಣು ಅಪ್ಪಿಕೊಳ್ಳುವ ಮುನ್ನ’ ಪ್ರಜಾವಾಣಿಯಲ್ಲಿ ಪ್ರಕಟವಾಗಿತ್ತು. (ನಾನು ಸರಿಯಾಗಿ ಗಮನಿಸಿರಲಿಲ್ಲ.) ಆದರೆ ನಾಡಿನಾದ್ಯಂತ ಅವನ ಬಳಗ ಅದನ್ನು ಆತಂಕದಿಂದ ಗ್ರಹಿಸಿದ್ದರು.

ಲೋಹಿಯಾ ಪ್ರಕಾಶನದ ಚೆನ್ನಬಸವಣ್ಣ ಗವಿಸಿದ್ದನ ಕವನಗಳನ್ನು ಕ್ರೋಡೀಕರಿಸಲು ಅಲ್ಲಮಪ್ರಭು ಬೆಟ್ಟದೂರು ಮತ್ತು ಎಚ್.ಎಸ್. ಪಾಟೀಲರನ್ನು ಕೇಳಿದರು. ಸತೀಶ ಕುಲಕರ್ಣಿ ಮತ್ತು ಸರಜೂ ಕಾಟ್ಕರ್ ಮುನ್ನುಡಿ. ಬೆನ್ನುಡಿ ಬರೆದರು. ಸುಧಾಕರ ದರ್ಬೆ ಮುಖಚಿತ್ರ ಬರೆದರು. ಕೇವಲ ಆರೇ ಆರು ದಿನಗಳಲ್ಲಿ ಕವನ ಸಂಕಲನ ರೆಡಿ ಆಯಿತು. ಚೆನ್ನಬಸವಣ್ಣ ಮಾರ್ಚ ೧೩ ರಂದು ಗವಿಸಿದ್ದನೆದುರು ಕುಳಿತು ಇಡೀ ಪುಸ್ತಕ ಓದಿದರು. ಮರುದಿನ ಸಮ್ಮೇಳನದಲ್ಲಿ ಪುಸ್ತಕ ಅಧಿಕೃತವಾಗಿ ನನ್ನಿಂದ ಬಿಡುಗಡೆ ಆಗಬೇಕು. ಆದರೆ ಆ ಕ್ಷಣದಲ್ಲಿ ಗವಿಸಿದ್ದ ತನ್ನ ಕಾವ್ಯವನ್ನು ನಮ್ಮ ಮಡಿಲಿಗೆ ಸುರಿದು ತಾನು ಸಾವಿನ ಮಡಿಲಲ್ಲಿ ಪವಡಿಸಿದ್ದ!

ಶೀರ್ಷಿಕೆಯ ಕವನದ ಸಾಲುಗಳಿವು:

ಇರುಳು ಕರುಳೆಲ್ಲ ನರಳಾಟ
ಹುರುಳಿಲ್ಲದ ಬದುಕಿನಲ್ಲೀಗ
ಅನಾಥ ಕೂಗಾಟ
ಎಂಥದೋ ಬುದ್ಧನ ಅರಿವು …..

*

ಎಪ್ಪತ್ತರ ದಶಕದ ಆ ದಿನಗಳು ನನ್ನ ಪೀಳಿಗೆಯನ್ನು ಹಳವಂಡವಾಗಿ ಇಂದಿಗೂ ಕಾಡುತ್ತವೆ. ಅಂಥದೊಂದು ಕಾಲಖಂಡ ಮತ್ತೊಂದು ಬರಲಿಕ್ಕೂ ಇಲ್ಲ. ಇಡೀ ನಾಡಿಗೆ ನಾಡೇ ಹೊಸ ಸಾಂಸ್ಕೃತಿಕ ಬೆಳಕಿಗೆ ಎಚ್ಚೆತ್ತುಕೊಂಡು ಆ ಗಳಿಗೆಯಲ್ಲಿ ಎಷ್ಟೊಂದು ಯುವ ಚೇತನಗಳು ಅರಳಿದವಲ್ಲ.- ಅದೇ ರೋಮಾಂಚನ, ನಮ್ಮ ಅಂದೋಲನಗಳೆಲ್ಲ ಅವರ ಅಕ್ಷರಗಳಿಗೆ ಕ್ರಾಂತಿಯ ಮಿಂಚು ಮೂಡಿಸಿದುವು: ಅವರ ಕ್ರಿಯೆಗಳಿಗೆ ಸಾರ್ಥಕತೆಯ ಸಂಗೀತ ಜೋಡಿಸಿದವು. ಅಂಥ ಎಳೆಯರಲ್ಲಿ ಗವಿಸಿದ್ದ ಬಳ್ಳಾರಿಯ ವೈಶಿಷ್ಟ್ಯವೇ ಬೇರೆ. ಎಂದೂ ಎತ್ತರದ ದನಿಯಲ್ಲ ಅವನದು: ಸಂಕೋಚದ ಮುದ್ದೆ. ಎಂದೂ ರಂಗಸ್ಥಳದ ಕೇಂದ್ರಕ್ಕೆ ಬಂದವನಲ್ಲ: ನೇಪಥ್ಯದ ಬದುಕು. ಆದರೆ ಅಂತರಂಗದ ತಳಮಳ ಮಾತ್ರ ಸದಾ ನಿಗಿ ನಿಗಿ ಕೆಂಡ (ಅವನು ಸಂಪಾದಕನಾಗಿದ್ದ ಪತ್ರಿಕೆಯ ಶೀರ್ಷಿಕೆಯೂ ‘ತಳಮಳವೇ!)

ಮತ್ತೆ ಅವನವೇ ಸಾಲುಗಳಿವು:

ನಾನು ಗವಿಯಲ್ಲಿ
ಮಲಗಿ ನಿದ್ರಿಸುವಾಗ
ನನ್ನೊಳಗಿನ ಕವಿ
ಕನಸು ಕಾಣುತ್ತಾನೆ ಬೆಳಕಿಗಾಗಿ

*

ಸತೀಶ ಕುಲಕರ್ಣಿಯ ಮಾತುಗಳಿವು: ‘ಗಿಜಗುಡುವ ವಾತಾವರಣದಲ್ಲಿ ಗವಿಸಿದ್ದ ಎಂದೂ ಮುಂಚೂಣಿಯಲ್ಲಿ ನಿಲ್ಲಬಯಸಿದವನಲ್ಲ. ಹೀಗೆಂದು ಗೌಣವಾದ ವ್ಯಕ್ತಿತ್ವವಲ್ಲ. ಇದ್ದರೂ ಇರದಂತೆ, ತನ್ನ ಕಾವ್ಯ ವರ್ಚಸಿನಿಂದ ಪ್ರಭಾವಳಿ ಬೆಳೆಸಿಕೊಂಡಿದ್ದ ಗವಿಸಿದ್ದ ಸರಳ, ಸಭ್ಯ, ಸಹೃದಯಿ ಕವಿಯಾಗಿ ಯಾವುದೇ ಕವಿಗೋಷ್ಠಿಯಲ್ಲಿ ಕಾವ್ಯ ವಾಚನ ಮಾಡಿ, ಜನರ ಮನ ಗೆಲ್ಲುವ ಕವಿ. ಸ್ವಲ್ಪ ಡೂಗಾಗಿ, ತಲೆ ಬಾಗಿ, ಮಿಂಚು ಶೈಲಿಯಲ್ಲಿ ಖಚಿತ ಕೊರೆದಿಟ್ಟ ಶೈಲಿ ಅದು.

ಯಾರನ್ನೂ ವಿನಾಕಾರಣವಾಗಿ ಎದುರು ಹಾಕಿಕೊಳ್ಳದೇ ಸದುವಿನಯದ ಸಾಕಾರಮೂರ್ತಿಯಾಗಿದ್ದ ಈ ಕವಿ – ಈ ಕಾರಣದಿಂದಾಗಿಯೇ – ನಾಡಿನ ಎಲ್ಲ ಪತ್ರಿಕೆಗಳಲ್ಲಿ ತನ್ನ ಕವನಗಳ ಮೂಲಕ ಮಿಂಚುತ್ತಿದ್ದ. ಒಮ್ಮೊಮ್ಮೆ ತೀರ ಮುಜುಗರದ ಪ್ರಸಂಗಗಳಲ್ಲಿ ಒಡನಾಡಿಗಳ ಪ್ರತಿಭಟನೆಗೂ ಗುರಿಯಾಗುತ್ತಿದ್ದ. ಮಾಡಿದ್ದು ತಪ್ಪು ಅಂತ ಮನವರಿಕೆಯಾದಾಗ ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಳ್ಳುತ್ತಿದ್ದ. ಬಂಡಾಯ ಸಾಹಿತ್ಯ ಚಳುವಳಿ ಹೀಗೆ ಎಲ್ಲ ಸಂಗಾತಿಗಳಲ್ಲಿ ಸಮಾನತೆ ಹಾಗೂ ಪ್ರೀತಿಯ ನೆಲೆಗಳಲ್ಲಿ ಮಾನವೀತೆಯನ್ನು ಪ್ರೇರೇಪಿಸುವ ಶಕ್ತಿ ಆಗಿದ್ದುದು ಒಂದು ವಿಶೇಷ.

*

ಗವಿಸಿದ್ದ ಬಳ್ಳಾರಿಯ ಕವನ ಸಂಕಲನಗಳು ಒಟ್ಟು ಮೂರೇ: ಕತ್ತಲು ದೇಶದ ಕವಿತೆಗಳು, ಕಪ್ಪು ಸೂರ್ಯ, ಈ ಮಣ್ಣು ಅಪ್ಪಿಕೊಳ್ಳುವ ಮುನ್ನ. ಅವನ ಕಾವ್ಯಲೋಕದಲ್ಲಿ ಕತ್ತಲಿನದೇ ಸಾಮ್ರಾಜ್ಯ. ಹೀಗಾಗಿ ಅವನಿಗೆ ಸದಾ ಬೆಳಕಿನ ಹಂಬಲವೇ. ಆದರೆ ಇದು ಕೇವಲ ವೈಯಕ್ತಿಕ ಸೆಂಟಿಮೆಂಟ್ಯಾಲಿಟಿ ಆಗದೇ ಸಮಷ್ಟಿ ಬದುಕನ್ನು ಕುರಿತು ಗಾಢ ವಿಷಾದವಾಗಿತ್ತು. ಇಂಥ ವಿಷಾದ ಹರಿತವಾದ ವ್ಯಂಗ್ಯವಾಗಿ ಚುಚ್ಚುತ್ತಿತ್ತು.

ಅವನ ಕಾವ್ಯಕ್ಕೆ ಕೆಲವು ಬೆಳಕಿಂಡಿಗಳು ಇವು:

ರಾಜಪಥದಲ್ಲೊಂದು ಅಪಘಾತ
ಸಂಭವಿಸಿ ನನ್ನ ರಥ ನಿಂತುಹೋಗಿದೆ ಈಗ.
ತೇಜವನೇ ತಿಂದುಂಡು ಗಾಳಿಯಲ್ಲಿ ಓಡಿದ
ಕುದುರೆಗಳು ಮುಗ್ಗರಿಸಿ
ಲಾಗ ಹಾಕಿವೆ ಈಗ.

*

ಕವಿಗಳು ತುಂಬಿರುವ ನಾಡಿನಲ್ಲಿ
ಕೋವಿಗಳು ಹೆಗಲೇರಿದ ಜಾಡಿನಲ್ಲಿ
ನೋವುಗಳ ಹೇಳುವುದು ಯಾರಿಗೆ?
ಸಾವುಗಳ ಲೆಕ್ಕ ಬರೆಯುವುದು
ಯಾರ ಪಾಲಿಗೆ?
ಕೊಂಪೆಯಾಗಿರುವ
ಭಾರತದ ಬದುಕು
ಹಂಪೆಯ ಚಲಿಸದ ಕಲ್ಲಿನ ತೇರು.

*

ಕೋಳಿ ಕೂಗಿದರೂ ಈ ನಾಡಿನಲ್ಲಿ
ಬೆಳಕಾಗಲಿಲ್ಲ ಇಲ್ಲಿ
ಸೂರ್ಯ ಮೂಡಿ ಗಿಳಿ ಗುಬ್ಬಿ ಕೋಗಿಲೆ
ಸುಪ್ರಭಾತವ ಹಾಡಿದರೂ
ಬೆಳಕು ಬೀಳಲಿಲ್ಲ ನಮ್ಮ ಗುಡಿಸಲು ಮೇಲೆ

*

ಕೊಪ್ಪಳವಿರಲಿ, ಇಂಡಿಯಾ ಇರಲಿ, ಇಡೀ ಜಗತ್ತೇ ಇರಲಿ – ಎಲ್ಲ ಸಮಕಾಲೀನ ವಿದ್ಯಮಾನಗಳಿಗೆ ತಕ್ಷಣವೇ ಪದ್ಯದಲ್ಲಿ ಪ್ರತಿಕ್ರಿಯಿಸುವುದು ಈ ಕವಿಯ ಒಂದು ಮುಖ್ಯ ಲಕ್ಷಣ. ಈ ಕಾವ್ಯ ನೂರಾರು ವ್ಯಕ್ತಿಗಳ ಚಿತ್ರಶಾಲೆ: ಸಂಗಮನಾಥ, ನೆಲ್ಸನ್ ಮಂಡೇಲಾ, ಅಕ್ಕಮಹಾದೇವಿ, ಅಹಲ್ಯೆ, ಜೆ.ಎಚ್. ಪಟೇಲ, ರಾಮಕೃಷ್ಣ ಹೆಗಡೆ, ಗುಜರಾತ್ ಭೂಕಂಪ. ಗ್ಯಾಟ್ ಒಪ್ಪಂದ, ವಿಶ್ವಸುಂದರಿಯರು – ಒಂದೇ ಎರಡೇ!

‘ಹೇ ಅಮೇರಿಕಾ’ ಪದ್ಯದ ಸಾಲು ಗಮನಿಸಿರಿ:

ಹೇ! ಅಮೇರಿಕಾ
ಪ್ರಜಾಪ್ರಭುತ್ವದ ದೊಡ್ಡ ದೇಶವೆಂದು
ನಿನ್ನನ್ನು ಯಾರಾದರೂ ಎತ್ತಿ ಹಿಡಿದರೆ
ಸುತ್ತಿಗೆಯಿಂದ ನಿನ್ನ ತಲೆ ಸೀಳಬೇಕೆನಿಸುತ್ತದೆ ……

ನಿನ್ನ ದೇಶದಲ್ಲಿ ಹಾಲು ಉಕ್ಕಿ ಹರಿಯಲು
ಅನ್ಯದೇಶಗಳಲ್ಲಿ ಹಾಲಾಹಲ ಉಂಟು
ಮಾಡಿದ ಕುಲ ಕಂಟಕ ನೀನು!

*

ಈ ಕವಿಗೊಂದು ಆಸೆ ಇತ್ತು: ‘ಕವಿತೆಗಳಿಂದ ದೇಶದ ಹೊಸ ನಕಾಶೆ ಬರುವುದು ನನ್ನಾಸೆ.’ ಇಂಥ ಆಸೆಯನ್ನು ಕಣ್ಣಲ್ಲಿ ತುಂಬಿಕೊಂಡೇ ಮಣ್ಣು ಅಪ್ಪಿದ್ದ ಗವಿಸಿದ್ದ ಬಳ್ಳಾರಿ – ಈ ನಾಡಿನ ನೆನಪಿನ ಗೊಂಡಾರಣ್ಯದಲ್ಲಿ ತನ್ನ ಕಾವ್ಯದ ದೊಂದಿ ಹಿಡಿದು ಸದಾ ಅಲೆಯುವ ನಿತ್ಯ ಸಂಚಾರಿ.

 

-೨೦೦೪