ಗೆಳೆಯರೊಂದಿಗೆ ಬರವಣಿಗೆ, ಸಾಹಿತ್ಯ, ಅದು ಇದು ಅಂತ ಪಂಟು ಬಡಿಯುವಾಗ ನಾನು ಮತ್ತೆ ಮತ್ತೆ ಪ್ರಸ್ತಾಪಿಸುವ ಒಂದು ಶಬ್ದ: ‘ಸೆಳೆತ’. ನೀವು ಓದಲು ತೊಡಗುವ ಮೊದಲ ವಾಕ್ಯ ಮಾಡಬೇಕಾದ ಮೊದಲ ಕೆಲಸ ನಿಮ್ಮನ್ನು ತನ್ನಲ್ಲಿ ತೊಡಗಿಸಿಕೊಳ್ಳುವುದು. ಅದು ತನ್ನ ಬಸಿರಿನಲ್ಲಿ ಮುಂದಿನ ವಾಕ್ಯದ ಭ್ರೂಣವನ್ನು ಧರಿಸಿರಬೇಕು. ಇಂಥ ಸೆಳೆತ ಇಲ್ಲದ ಬರವಣಿಗೆ ನಂತರದಲ್ಲಿಯೇ ನಿಮ್ಮನ್ನು ಉದುರಿಸಿಬಿಡುತ್ತದೆ.

ನಾನೊಬ್ಬ ಸಾಹಿತ್ಯ ವ್ಯಾಮೋಹಿ. ಈ ‘ವ್ಯಾಮೋಹ’ ಎಂಬುದು ಸಂವಹನ ಪ್ರಕ್ರಿಯೆಯ ಆಸಕ್ತಿ – ಪ್ರೀತಿ – ಪ್ರೇಮ – ಮೋಹ …. ಈ ಸರಪಳಿಯ ಕೊನೆಯ ಕೊಂಡಿ. ಓದಲು ಕುಂತರೆ ಆಟ – ಊಟ – ನಿದ್ದೆಯ ಪರಿವೆ ಇರಬಾರದು. ಇಂಥ ಓದು ಮುಗಿದ ಹಂತದಲ್ಲಿ ನೀವು ಮೊದಲಿನ ನೀವಾಗಿ ಉಳಿಯಲಾರಿರಿ. ಅದೇ ಬಾನು, ಅದೇ ಭಾನು; ಆದರು ಇದು ಹೊಸ ದಿನ – ಎಂಬ ಕವಿಯ ಅನುಭವ ನಿಮ್ಮದಾಗುತ್ತದೆ.

*

ಇತ್ತೀಚಿಗೆ ಹೀಗೆ ನನ್ನನ್ನು ಸೆಳೆದ ಒಂದು ಕೃತಿ: ಡಾ. ಸ. ಜ. ನಾಗಲೋಟಿಮಠ ಅವರ ‘ಬಿಚ್ಚಿದ ಜೋಳಿಗೆ’. ಅದರ ಉಪ ಶೀರ್ಷಿಕೆ: ವೈದ್ಯನ ಆತ್ಮ ನಿವೇದನೆ. ಮುನ್ನೂರು ಪುಟಗಳ ಈ ಅಪರೂಪದ ಪುಸ್ತಕದ ಪ್ರಕಾಶಕರು ಮಂಗಳೂರಿನ ಅತ್ರಿ ಬುಕ್ ಸೆಂಟರ್.

ಕತೆ – ಕಾದಂಬರಿಗಳಿಗಿಂತ ಹೆಚ್ಚಿನ ಸೆಳೆತ ನನ್ನ ಪಾಲಿಗೆ ಆತ್ಮ ಕಥನಗಳದ್ದು ಇರಲು ಕಾರಣ: ಇಲ್ಲಿ ನಮ್ಮ ನಿಮ್ಮ ಹಾಗೆಯೇ ಬದುಕಿರುವ ಖರೇ ಖರೇ ಮನುಷ್ಯನೊಬ್ಬ ತನ್ನ ಅನುಭವಗಳ ಮೆಲಕುಗಳ ಮೂಲಕ ತನ್ನನ್ನು ಬಿಚ್ಚಿಕೊಳ್ಳುತ್ತಿದ್ದಾನೆ. ಪ್ರಶಂಸೆ, ಆತ್ಮ ವಂಚನೆಗಳಿಗೆ ಅಂತ ಸ್ವಲ್ಪ ಮಾರ್ಜಿನ್ ಕೊಟ್ಟರೂ ನಮಗೆ (ಅಂದರೆ ಓದುಗರಿಗೆ) ಗೊತ್ತಿರದ ಬದುಕೊಂದು ಅಥೆಂಟಿಕ್ಕಾಗಿ ಅನಾವರಣಗೊಳ್ಳುತ್ತದೆ. ಅದರಲ್ಲಿ ನಮ್ಮ ಅನುಭವಗಳೂ ಮಿಳಿತವಾಗಿರುವ ಸಧ್ಯತೆ ಇದೆ.

*

ಗ್ರಾಮಾಂತರ ಪ್ರದೇಶದ ಸಾಧಾರಣ ಮನೆತದಲ್ಲಿ ಹುಟ್ಟಿದ್ದ ಹುಡುಗನೊಬ್ಬ ಹೇಗೆ ತನ್ನ ಪ್ರಾಮಾಣಿಕ ಪ್ರಯತ್ನಗಳ ಮೂಲಕ ತನ್ನ ಸಾಧ್ಯತೆಗಳನ್ನು ಅರಳಿಸಿಕೊಳ್ಳುತ್ತ ಸಾರ್ಥಕವಾಗಿ ಬದುಕಿ ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಬಲ್ಲ – ಎಂಬುದರ ಒಂದು ನಿದರ್ಶನ, ಡಾ.ನಾಗಲೋಟಿಮಠ ಅವರ ಜೀವನ ಗಾಥೇ.

ಕೃತಿಯ ಶೀರ್ಷಿಕೆ ನೋಡಿರಿ. ಅವರು ಹೇಳುತ್ತಾರೆ: ‘ಜೋಳಿಗೆಯ ಜಂಗಮ ಜಾತಿಯ ಬಳುವಳಿ. ಉಳಿದವರಿಗೆ ಅದು ಅಲಭ್ಯ. ಜಂಗಮರಿಗೆ ಪ್ರಾರಂಭದಲ್ಲಿ ಅದು ಸಮಾಜಸೇವೆ ಮಾಡುವ ಸಾಧನವಾಗಿತ್ತು …. (ಬರಬರುತ್ತ) ಜೀವನೋಪಾಯದ ಸಲಕರಣೆಯಾಯಿತು …. ಭಿಕ್ಷೆ ಬೇಡುವ ಈ ವಿಧಾನ ಜಂಗಮ ಕುಲದ ಸಂಕೇತವೇ ಆಯಿತು. ‘ವೀರಶೈವ ಪರಿಭಾಷೆಯಲ್ಲಿ ‘ಜಂಗಮ’ ಎಂಬುದು ನಿರಂತರ ಚೈತನ್ಯ ವಾಹಿನಿಯ ಸಂಕೇತ. ಜೋಳಿಗೆಯಲ್ಲಿ ‘ಸಂಗ್ರಹ’ವಾದದ್ದು ಮತ್ತೆ ‘ವಿತರಣೆ’ಯಾಗಲೇ ಬೇಕು. ನಾಗಲೋಟಿಮಠದ ಕತೆಯೂ ಅದೇ. ಹೇಳುತ್ತಾರೆ: ‘ಜೀವನದಲ್ಲಿ ಉಳಿದವರಂತೆ ನಾನೂ ಏರುಪೇರು ಕಂಡಿದ್ದೇನೆ. ಬಡತನ ಶ್ರೀಮಂತಿಕೆಗಳೆರಡನ್ನೂ ಸವಿದಿದ್ದೇನೆ. ಸ್ನೇಹಿತರ ಸುಖವನ್ನೂ ಆಗದವರ ಕಿರುಕುಳವನ್ನೂ ಉಂಡಿದ್ದೇನೆ. ಅನೇಕರಿಗೆ ಬೇಕಾದವನಾಗಿದ್ದೇನೆ. ಕೆಲವರಿಗೆ ಬೇಡದವನಾಗಿದ್ದೇನೆ. ಸ್ವಲ್ಪ ಸಾಧಿಸಿದ್ದೇನೆ. ಅಲ್ಲಲ್ಲಿ ಸೋತಿದ್ದೇನೆ.’

ಹೀಗೆ ನೆನಪಿದ್ದ ಅನೇಕ ಸಂಗತಿಗಳ ದಾಖಲೆಯಾಗಿರುವ ಈ ಕೃತಿ ಕೇವಲ ‘ದಾಖಲೆ’ ಅಲ್ಲ. ಪ್ರತಿಯೊಂದು ಸನ್ನಿವೇಶ ತನ್ನೆಲ್ಲ ವಿವರಗಳೊಂದಿಗೆ ಮೈದಾಳುವುದರೊಂದಿಗೇನೇ ನೂರಾರು ಪಾತ್ರಗಳನ್ನು ಅವರವರ ಬಣ್ಣದಲ್ಲಿ ಚಿತ್ರಿಸುತ್ತದೆ. ಒಬ್ಬ ಡಾಕ್ಟರಾಗಿ, ಆಡಳಿತಗಾರನಾಗಿ, ಬದುಕಿನ ವಿದ್ಯಾರ್ಥಿಯಾಗಿ ಕಂಡದ್ದನ್ನು ಉಂಡದ್ದನ್ನು ಯಾವ ಮುಚ್ಚುಮರೆ ಇಲ್ಲದೆ, ನಖರಾತನ ಇಲ್ಲದೆ ಬಯಲು ಮಾಡುವ ಪರಿಯೇ ಈ ಆತ್ಮನಿವೇದನದ ಮೂಲ ಸೆಳೆತ.

ವೈದ್ಯ – ಸಂಶೋಧಕರಾಗಿ ನಾಗಲೋಟಿಮಠ ಸಾಧನೆ ಅಂತಾರಾಷ್ಟ್ರೀಯ ಮಟ್ಟದ್ದು. ನೂರಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಆ ಸಂಶೋಧನೆಯ ವಿವರಗಳು ಕೂಡ ಈ ಕೃತಿಯ ಭಾಗವಾಗಿರುವುದೊಂದು ವಿಶೇಷ. ಜೊತೆಗೆ ಆಡಳಿತಗಾರರಾಗಿ ಅವರು ಅನುಭವಿಸಿದ್ದು ನಮ್ಮ ರಾಜಕೀಯ – ಅಧಿಕಾರಶಾಹಿ ‘ವ್ಯವಸ್ಥೆ’ ಯ ಒಳಹೂರಣವನ್ನು ಬಿಚ್ಚಿಡುವಂತಿದೆ. ಆದರೆ ಸೋಲಿರಲಿ, ಗೆಲುವಿರಲಿ – ಇವರ ವ್ಯಕ್ತಿತ್ವವನ್ನು ಎಂದೂ ಮುಕ್ಕು ಮಾಡಲಿಲ್ಲ.

*

ಸಭೆ- ಸಮ್ಮೇಳನಗಳಲ್ಲಿ ನಾಗಲೋಟಿಮಠರ ಮಾತಿನ ಮೋಡಿಯನ್ನು ಅನುಭವಿಸಿದ್ದೇನೆ. ಬಿಜಾಪುರದ ಜವಾರಿ ಕನ್ನಡ. ಸಣ್ಣ ಸಣ್ಣ ವಾಕ್ಯಗಳು. ಅದಕ್ಕೆ ತಕ್ಕಂತೆ ದನಿಯ ಏರಿಳಿತ, ಹಾವಭಾವ ಸಾವಿರಾರು ಸಂಖ್ಯೆಯ ಸಭಿಕರಿದ್ದರೂ ಅವರನ್ನು ತಮ್ಮ ತಿಳಿಗನ್ನಡದ ಝರಿಯಲ್ಲಿ ಸೆಳೆದುಕೊಂಡು ಹೋಗುವ ಚಂದದ ಶೈಲಿ ಅವರ ಬರವಣಿಗೆಯ ಧಾಟಿ ಕೂಡ ಅದೇ ಬಗೆಯದು – ಸಂತೆಯಲ್ಲಿ ಮಕ್ಕಳ ಬೆರಳು ಹಿಡಕೊಂಡು ಹೋಗುವಂಥ ಅಪ್ಪನಂತೆ.

ಬಾಲ್ಯದ ಕಷ್ಟ, ತಾಯಿಯ ಸಾವು, ತಂದೆಯ ಸಾವು, ಓದುವಾಗಿನ ತೊಂದರೆಗಳು, ಮಡದಿ – ಮಕ್ಕಳು ವಿಷಯಗಳು, ವೃತ್ತಿ ಜೀವನದ ಸವಾಲುಗಳು – ಎಲ್ಲವನ್ನೂ ಓದುತ್ತ ಹೋದಂತೆ ಒಂದು ನೆಲೆಯಲ್ಲಿ ನನ್ನಂಥವರಿಗೆ ಇದು ನಮ್ಮದೇ ಕತೆ ಅನ್ನಿಸುವಂಥ ಆಪ್ತತೆ. ಅಪ್ಪನ ಸಿಗರೇಟು ಚಟವನ್ನು ಮಗನಾದವನು, ತನ್ನ ಅಪ್ಪನ ಅಪ್ಪನೊಂದಿಗೆ ಸೇರಿ ‘ನಾಟಕ’ ಮಾಡಿ, ಬಿಡಿಸಿ ಸ್ವಾರಸ್ಯಕರ ಪ್ರಸಂಗವನ್ನು ಓದಿಯೇ ಸವಿಯಬೇಕು.

ಒಂದು ಪ್ರಸಂಗ

‘ಶಿವಾಲಯದ ಹತ್ತಿರವಿದ್ದ ಮರದ ಬುಡದಲ್ಲಿ ಕುಳಿತಿದ್ದೆ . ಒಬ್ಬ ಮುದುಕಿ ಬಂದಳು. ನನ್ನ ಹತ್ತಿರವೇ ಕುಳಿತಳು. ನನ್ನೊಡನೆ ಮಾತಾಡತೊಡಗಿದಳು. ಆಕೆ ಕೇಳಿದಳು: ‘ಐಯಪ್ಪಾ, ನಿನ್ನ ಹಡದಾಕಿ ಎಲ್ಲಿ ಅದಾಳ?’

ನಾನು: ಯಮ್ಮಾ ನನ್ನ ಹಡದಾಕಿ ಸತ್ತ ಹೋಗ್ಯಾಳ.

ಮುದುಕಿ: ಯಪ್ಪಾ, ಹಂಗಾದರ ಮುಂದಿನ ಜನ್ಮದಾಗ ನೀ ನನ್ನ ಹೊಟ್ಯಾಗ ಹುಟ್ಟಬೇಕ ನೋಡ.

– ಎನ್ನುತ್ತ ನನ್ನ ಕೈಗಳನ್ನು ಗಟ್ಟಿಯಾಗಿ ಹಿಡಿದಳು.

*

ಚೀನಾದ ಬೀಸಿಂಗ್ ನಗರ. ಒಂದು ಔಷಧ ಅಂಗಡಿ. ‘ಅಂಗಡಿಯಲ್ಲಿಯ ಓರ್ವ ಮಾರಾಟಗಾತಿ ನನ್ನ ಹತ್ತಿರ ಬಂದು ಏನು ಬೇಕೆಂದು ಕೇಳಿದಳು. ನಾನು ಭಾರತದವನು, ಸುಮ್ಮನೆ ನೋಡುತ್ತಿರುವೆ ಎಂದು ತಿಳಿಸಿದೆ. ಆಕೆ ಆಸಕ್ತಿ ವಹಿಸಿ ಕೆಲವು ಔಷಧಿ ತೋರಿಸಿ ಅವು ಪುರುಷತ್ವವನ್ನು ಹೆಚ್ಚಿಸುತ್ತವೆ ಅಂದಳು. ನಾನು ಹೇಳಿದೆ: ‘ಪುರುಷತ್ವ’ ದಲ್ಲಿ ಭಾರತಕ್ಕೆ ಕೊರತೆ ಇಲ್ಲ: ಅಲ್ಲಿಯ ಹವೆಯಲ್ಲಿ ಇಂತ ಔಷಧಿ ಇದೆ.’ ಆಕೆ ನಗಹತ್ತಿದಳು.

*

ಡಾ. ನಾಗಲೋಟಿಮಠ ಮಹಾ ಕನ್ನಡ ಪ್ರೇಮಿ. ನಮ್ಮಲ್ಲಿ ಮಹಾ ಮಹಾ ಕನ್ನಡ ಹೋರಾಟಗಾರರೂ ಕೂಡ ತಮ್ಮ ಮಕ್ಕಳು, ಮೊಮ್ಮಕ್ಕಳಿಗೆ ಮಾತೃಭಾಷೆ ಕಲಿಸುವ ವಿಷಯದಲ್ಲಿ ಏನೇನೋ ನೂರಾ ಎಂಟು ಕುಂಟು ನೆವ ಹೇಳುತ್ತಾರೆ. ಆದರೆ ನಮ್ಮ ಈ ಡಾಕ್ಟರು ಪ್ರತಿಷ್ಠಿತ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲರಾಗಿದ್ದರೂ ತಮ್ಮ ಮಕ್ಕಳನ್ನು ಬೆಳಗಾವಿಯ ನಾಗನೂರು ಮಠದ ಕನ್ನಡ ಶಾಲೆಗೇ ಹಾಕಿದ್ದರು. ಬೆಳೆದ ಮಕ್ಕಳೆಲ್ಲ ಪ್ರತಿಷ್ಠಿತ ನೌಕರಿಗಳಲ್ಲೇ ಇದ್ದಾರೆ.

ಸಮಕಾಲೀನ ಕನ್ನಡ ಸಾಹಿತ್ಯ ಲೋಕದಲ್ಲಿ ವೈದ್ಯಕೀಯ – ಸಾಹಿತ್ಯ ಒಂದು ಸಮೃದ್ಧ ಪರಂಪರೆ ಇದೆ. ಡಾ. ನಾಗಲೋಟಿಮಠದ ಕೊಡುಗೆ ಅಪಾರ. ದಿಕ್ಸೂಚಿ ಪತ್ರಿಕೆ ಬಳಗದ ಸಾಹಸೀ ಗೆಳೆಯ. ಎ. ಟಿ. ಪಾಟೀಲರು ಪ್ರಕಟಸುತ್ತಿರುವ ‘ಜೀವನಾಡಿ’ ಪತ್ರಿಕೆಗೆ ಇವರೇ ಪ್ರಧಾನ ಸಂಪಾದಕರು.

*

ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಿಸಿದಂತೆ ನಾಗಲೋಟಿಮಠ ಅನೇಕ ರಾಷ್ಟ್ರಗಳಲ್ಲಿ ಉಪನ್ಯಾಸ ನೀಡಿದ್ದಾರೆ: ಲೇಖನ ಪ್ರಕಟಿಸಿದ್ದಾರೆ. ಅನೇಕ ಅಂತಾರಾಷ್ಟ್ರೀಯ ಮಟ್ಟದ ಸಮ್ಮೇಳನಗಳನ್ನು ನಡೆಸಿದ್ದಾರೆ. ದೇಶ – ವಿದೇಶಗಳಿಂದ ಬಂದ ಪ್ರತಿನಿಧಿಗಳು ‘ಎಲ್ಲಿ, ಎಲ್ಲಿ, ಡಾ.ನಾಗ್?’ ಅಂತ ಹುಡುಕುವಾಗ, ಇವರು ಪ್ರತ್ಯಕ್ಷರಾದಾಗ, ಅವರು ಕಾಣುವುದು: ಪ್ಯಾಂಟು, ಬುಶ್ ಶರ್ಟು, ಅಷ್ಟೇ. ಈಗಲೂ ಅವರಲ್ಲಿರುವುದು ಒಂದೇ ಸೂಟು ಮದುವೆಯ ಕಾಲಕ್ಕೆ ಮಾವ ಹೊಲಿಸಿಕೊಟ್ಟಿದ್ದು.

ವೇಷ – ಭೂಷಣಗಳಿಂದ ಗಮನ ಸೆಳೆಯದಿದ್ದರೂ ಇಂಥ ಸಂತೆಯ ಗಜಿಬಿಜಿಯಲ್ಲೂ ಈ ಡಾಕ್ಟರು ಎದ್ದು ಹೊಡೆಯುತ್ತಾರೆ. ಅದಕ್ಕೆ ಕಾರಣ ಅವರ ಹಣೆ ಮೇಲಿ ವಿಭೂತಿಯ ಮೂರು ಪಟ್ಟಿಗಳು. ಈ ಭಸ್ಮ ಧಾರಿಯನ್ನು ಕಂಡು ಅನೇಕರು ಹಗುರವಾಗಿ ನಗುತ್ತಾರೆ. ಆದರೆ ಅದು ಅವರ ವೈಯಕ್ತಿಕ ಶ್ರದ್ಧೆಯ ವಿಷಯ. ಅದರ ಬಗ್ಗೆ ಅವರಿಗೆ ಸಂಕೋಚವಿಲ್ಲ. ಮಾಸ್ತಿ. ಪುತಿನ ಮುಂತಾದ ಹಿರಿಯರ ಹಣೆಯ ಮೇಲಿನ ನಾಮಗಳು ನಮಗೆ ಗೊತ್ತು. ವೀರಶೈವ ಮಠವೊಂದು ಇವರಿಗೆ ‘ವಿಭೂತಿಪ್ರಿಯ’ ಎಂಬ ಬಿರುದನ್ನೇ ಕೊಟ್ಟಿದೆ. ಇಂಥ ಶ್ರದ್ಧೆಯ ಸಂಕೇತವನ್ನು ಧರಿಸುತ್ತಿದ್ದ ಮತ್ತೊಬ್ಬ ಹಿರಿಯರು ಬಿ.ಡಿ. ಜತ್ತಿ ಅವರು.

*

‘ಬಿಚ್ಚಿದ ಜೋಳಿಗೆ’ಯ ಒಟ್ಟು ವಿನ್ಯಾಸಕ್ಕೂ ಒಂದು ಚಂದವಿದೆ. ಐದು ಭಾಗಗಳ ಶೀರ್ಷಿಕೆಗಳಿವು: ಗೂಡಿನೊಳಗಿನ ಹಕ್ಕಿಮರಿ: ಗೂಡ ಕಟ್ಟಿದ್ದ ಹಕ್ಕಿಮರಿ: ಹಕ್ಕಿ ಹಾರುತ್ತಿದೆ ನೋಡಿದಿರಾ: ಮುಟ್ಟದೆ ದಿಂಗ್ಮಂಡಲಗಳ ಅಂಚ: ಮಕ್ಕಳ ಮಾಣಿಕ ಕಣಿಸಿಕ್ಕ ನೀ ಚೊಕ್ಕ ಚಿಂತಾಮಣಿ. ಒಂದು ಪ್ರತೀಕದ ನಿರಂತರ ಅನಾವರಣವೇ ಆಗಿದೆ ಈ ವೈದ್ಯನ ಆತ್ಮ ನಿವೇದನ.

ಈ ಕೃತಿಗೆ ಪ್ರೇರಣೆ ಇತ್ತವರು ಮೈಸೂರಿನ ಹಿರಿಯರಾದ ಜಿ. ಟಿ. ನಾರಾಯಣರಾವ್ ಅವರು. ‘ಕನ್ನಡ ವಿಶ್ವಕೋಶ’ದ ವಿಜ್ಞಾನ ಸಂಪಾದಕರಾಗಿ ನಿವೃತ್ತಿ ಹೊಂದಿದ ಕನ್ನಡ ಪ್ರೇಮಿ ವಿದ್ವಾಂಸರು. ಅವರ ಮಾತುಗಳಿವು.: ‘ಇದು ವೈಯಕ್ತಿಕತೆಯ ಜಿಗಿಹಲಗೆಯಿಂದ ಸಾರ್ವತ್ರಿಕ ವಿಸ್ತಾರಕ್ಕೆ ನೆಗೆದು ನೂತನ ಜೀವನ ದೃಷ್ಟಿಯನ್ನು ಒದಗಿಸುವ ಕೃತಿ.

*

ನಾಡಿನ ಪುರಾತನ ವೀರಶೈವ ಮಠಗಳಲ್ಲೊಂದಾದ ಕೊಳದ ಮಠದ ಶ್ರೀ ಶಾಂತವೀರ ಸ್ವಾಮಿಗಳು ಇತ್ತೀಚಿಗೆ (ಜೂನ್ ೧೪) ಡಾ. ನಾಗಲೋಟಿಮಠದ ಸರ್ವಾಂಗ ಸುಂದರ ವ್ಯಕ್ತಿತ್ವವನ್ನು ಗುರುತಿಸಿ ಅವರಿಗೆ ‘ಅಲ್ಲಮ ಶ್ರೀ’ ಪ್ರಶಸ್ತಿಯನ್ನು ನೀಡಿದ್ದು ಲಿಂಗಮೆಚ್ಚಿ ಅಹುದುಹುದೆನ್ನಬಹುದಾದ ಕೆಲಸ.

-೨೦೦೪