‘ರಾಜಕುಮಾರರು ೧೯೫೪ ರಲ್ಲಿ ಹುಬ್ಬಳ್ಳಿಯ ಕ್ಯಾಂಪಿನಲ್ಲಿದ್ದರು. ಮದ್ರಾಸಿನಿಂದ ಚಿತ್ರೀಕರಣಕ್ಕಾಗಿ ಕರೆ ಬಂತು. ನಾವೆಲ್ಲ ಅವರನ್ನು ಬೀಳ್ಕೊಟ್ಟೆವು. ಅಂದಿನಿಂದ ಇಂದಿನವರೆಗೆ ಅರ್ಧ ಶತಮಾನ ಕಳೆದಿದೆ.’

– ಹೀಗೆಂದು ನೆನಪುಗಳ ಮೆಲುಕು ಹಾಕಿದವರು ಹಿರಿಯರಾದ ಡಾ. ಪಾಟೀಲ ಪುಟ್ಟಪ್ಪನವರು. ಸಂದರ್ಭ: ಕನ್ನಡ ಹೋರಾಟಗಾರ ಸಿ. ಕೆ. ರಾಮೇಗೌಡರ ಅಧ್ಯಕ್ಷತೆಯಲ್ಲಿ ಹೊಸದಾಗಿ ಹುಟ್ಟಿಕೊಂಡ ‘ಕನ್ನಡ ಜನಶಕ್ತಿ’ ಸಂಘಟನೆ ಜೂನ್ ೨೦-೨೧ ರಂದು ರಾಜಧಾನಿಯಲ್ಲಿ ಹಮ್ಮಿಕೊಂಡಿದ್ದ ಒಂದು ಕಾರ್ಯಕ್ರಮ: ‘ಮಹಾನ್ ಪ್ರತಿಭೆ ಡಾ. ರಾಜ್: ಚಿತ್ರರಂಗದ ಅರ್ಧಶತಮಾನ – ಒಂದು ವೈಚಾರಿಕ ನೋಟ’…. ರಾಮೇಗೌಡರ ಕೈಗೂಡಿಸಿದ ಸಂಗಾತಿಗಳು ಯಡೆಯೂರ ಜನಾರ್ದನ ಮತ್ತು ಕೆ. ಸುರೇಶ.

*

ಇಡೀ ಐವತ್ತು ವರ್ಷಗಳ ಕಾಲ ಚಿತ್ರರಂಗದಂಥ ಕಲಾವಲಯವನ್ನು ಆಕಾಶದಂತೆ ಆವರಿಸಿದವರು ರಾಜಕುಮಾರ. ಬರಿ ಕಲಾವಿದರೆಂದರೂ ಕೂಡ ಅವರ ಈ ಸಾಧನೆ ಅದ್ಭುತ. ಆದರೆ ಕಲಾ ವ್ಯಕ್ತಿತ್ವವನ್ನು ಮೀರಿದ ಸಂಕೀರ್ಣ ಆಯಾಮಗಳನ್ನು ಚಿಗುರಿಸಿಕೊಂಡ ಅವರು ಕನ್ನಡ ನಾಡಿನ ಬಹು ಮುಖ್ಯ ಸಾಂಸ್ಕೃತಿಕ ಶಕ್ತಿಯಾದದ್ದು ಮಾತ್ರ ವೈಶಿಷ್ಟ್ಯಪೂರ್ಣ.

ಮೊನ್ನೆಯ ಕಾರ್ಯಕ್ರಮದಲ್ಲಿ ಇಂಥದೊಂದು ಬಹುಮುಖೀ ಪ್ರತಿಭೆಯ ಅನೇಕ ಮಗ್ಗಲುಗಳನ್ನು ಮುಟ್ಟಲು ಗಂಭೀರ ಪ್ರಯತ್ನ ಮಾಡಿದವರು ಬದುಕಿನ ನಾನಾ ರಂಗಗಳಿಂದ ಬಂದ ಗಣ್ಯರು: ಎಂ. ಎಸ್. ತಿಮ್ಮಪ್ಪ, ಕೆ. ಸಿ. ರಾಮಮೂರ್ತಿ, ಸಾ. ರಾ. ಗೋವಿಂದು, ಚನ್ನೇಗೌಡ, ನಿಸಾರ ಅಹಮದ, ದೊಡ್ಡರಂಗೇಗೌಡ, ಸಂಧ್ಯಾರೆಡ್ಡಿ, ಪಾಪು, ಪುಂಡಲೀಕ ಹಾಲಂಬಿ, ಕೆ.ಎಸ್.ಎಲ್. ಸ್ವಾಮಿ. ಚಂಪಾ, ನಾಗತಿಹಳ್ಳಿ, ಗೋವಿಂದರಾವ್, ಬರಗೂರು, ಮೋಹನ್‌ರಾವ್ ಮುಂತಾದವರು, ಚರ್ಚೆ ಸಹಜವಾಗಿಯೇ ರಾಜ್ – ಕೇಂದ್ರಿತವಾಗಿದ್ದರೂ ಸಮಾಜ, ಸಂಸ್ಕೃತಿ, ರಾಜಕೀಯ, ಕನ್ನಡ ಚಳುವಳಿಗಳ ಕಡೆಗೂ ಹರಡಿಕೊಂಡಿತ್ತು. ಒಟ್ಟಾರೆ ನೋಟ ವೈಚಾರಿಕವಾಗಿತ್ತು: ಆದರೆ ಅದಕ್ಕೆಲ್ಲ ರಾಜ್ ಅವರಂಥ ಮೇರು ವ್ಯಕ್ತಿಯ ಕುರಿತ ಪ್ರೀತಿ – ಅಭಿಮಾನವೇ ಮೂಲ ಮಿಡಿತವಾಗಿತ್ತು.

*

ದೃಶ್ಯ ಮಾಧ್ಯಮದ ಚಲನಚಿತ್ರ ರಂಗದಲ್ಲಿ ‘ಜನಪ್ರಿಯತೆ’ ಎಂಬುದು ಮಾಮೂಲು. ನಟ – ನಟಿಯರ ಅಭಿನಯ ಪ್ರತಿಭೆಯನ್ನು ಒಳಗೊಂಡಂತೆ ಇಲ್ಲಿ ಇತರ ಅನೇಕ ಅಂಶಗಳೂ ಪಾತ್ರವಾಡುತ್ತವೆ. ಹಳ್ಳಿಗಾಡಿನ ಹಿಂದುಳಿದ ಜಾತಿ ಹಿನ್ನೆಲೆಯ ಬಾಲಪ್ರತಿಭೆಯೊಂದು ‘ಮುತ್ತುರಾಜ’ ನಾಗಿ ಮೊಳಕೆಯೊಡೆದು, ಚಿತ್ರದಿಂದ ಚಿತ್ರಕ್ಕೆ ಅರಳುತ್ತಲೇ ‘ರಾಜಕುಮಾರ’ ನಾಗಿ ರೂಪುಗೊಂಡು, ಜನಪ್ರಿಯತೆಯ ಎಲ್ಲ ಘಟ್ಟಗಳನ್ನು ಮೀರಿ, ‘ಜನಪೂಜ್ಯತೆ’ ಯನ್ನು ಗಳಿಸಿ ನಾಡಿನ ಕಣ್ಮಣಿಯಾಗಿ ಬೆಳಗುತ್ತಿರುವುದು ನಾವು ಕಣ್ಣಾರೆ ಕಾಣುತ್ತಿರುವ ಪವಾಡ, ವೀರಪ್ಪನಿಂದ ಅಪಹರಣಗೊಂಡ ಅವಧಿಯಲ್ಲಿ ಇಡೀ ರಾಜ್ಯಕ್ಕೆ ಗರ ಬಡಿದಂತಾಗಿದ್ದು ನಮ್ಮೆಲ್ಲರ ಅನುಭವದ ಮಾತು.

*

ಯಾವುದೇ ಪಾತ್ರವಿರಲಿ, ಅದರ ಎಲುಬಿನ ಗೂಡಿನೊಳಗೆ ಜೀವವಾಹಿನಿಯಾಗಿ ಪ್ರವೇಶಿಸಿ ಅದಕ್ಕೆ ರಕ್ತ – ಮಾಂಸ – ಬಣ್ಣ ತುಂಬುವದು ರಾಜ್ ಅಭಿನಯದ ಶೈಲಿ. ಅವರ ಈ ‘ಭಾವಪರವಶತೆ’ ನಮ್ಮೆದುರು ಅನೇಕ ಪೌರಾಣಿಕ ಮತ್ತು ಚಾರಿತ್ರಿಕ ಪಾತ್ರಗಳನ್ನು ಕಟೆದು ನಿಲ್ಲಿಸಿದೆ. ಹಾವ- ಭಾವ – ಚಹರೆಗಳ ಔಚಿತ್ಯಪೂರ್ಣತೆಯೊಂದಿಗೆ ಕನ್ನಡ ಭಾಷೆಯನ್ನು ಅದರ ಎಲ್ಲ ಸೂಕ್ಷ್ಮಗಳೊಂದಿಗೆ ಸಹಜವಾಗಿ ನುಡಿಯುವ ಕೌಶಲ್ಯದಲ್ಲಿ ಅವರನ್ನು ಮೀರಿಸಿದವರಿಲ್ಲ.

ಈ ಪಾತ್ರಗಳ ಮೂಲಕ ಪ್ರೇಕ್ಷಕರಿಗೆ ಯಾವ ಸಂದೇಶ ತಲುಪಿಸುತ್ತೇನೆ ನಾನು? …. ಇದರ ಬಗ್ಗೆ ಈ ಕಲಾವಿದನಿಗಿರುವ ‘ಕಾಳಜಿ’ ಯಿಂದಾಗಿಯೇ ಅವರು ಸಮಷ್ಟಿಯ ಆಯಾಮ ಪಡೆಯುವುದು. ಪ್ರಿಯಕರ – ಪತಿ – ತಂದೆ – ಸೋದರ – ಶಿಕ್ಷಕ – ಪೋಲಿಸ್ – ನ್ಯಾಯಾಧೀಶ – ಸೈನಿಕ …. ಯಾವ ಪಾತ್ರದಲ್ಲೂ ರಾಜ್ ಪ್ರೇಕ್ಷಕರಿಗೆ ಅಸಭ್ಯತೆ – ಅನೀತಿ – ಅಧರ್ಮವನ್ನು ಬೋಧಿಸಲಾರರು. ಸಾಮಾಜಿಕ ಸ್ವಾಸ್ಥ್ಯವೆಂಬುದು ಕಲೆಯ ಅಂತಿಮ ಗುರಿ – ಇದು ಅವರು ನೆರೆ ನಂಬಿದ ಸಿದ್ಧಾಂತ. ಹೀಗಾಗಿಯೇ ಅವರು ನೈತಿಕತೆಗೊಂದು ಮಾದರಿ (ಮಾಡೆಲ್) ಆಗಿದ್ದಾರೆ.

*

ಜನಮಾನಸದಲ್ಲಿ ಗಟ್ಟಿಯಾಗಿ ರಾಜ್ ನೆಲೆಯೂರಲು ಒಂದು ಕಾರಣ: ಅವರ ಅಪರಿಮಿತ ಕನ್ನಡ ಪ್ರೇಮ. ಅವಕಾಶಗಳು ಕೈ ಬೀಸಿ ಕರೆದರೂ ಅವರು ಬೇರೆ ಭಾಷೆಗಳಲ್ಲಿ ನಟಿಸಲಿಲ್ಲ. ರಾಜ್ ಚಿತ್ರಗಳು ನೂರಾರು ದಿನ ಬೆಂಗಳೂರಿನಲ್ಲಿ ಓಡಿದವೆಂದೇ ಇಲ್ಲಿ ‘ಕನ್ನಡ’ ವಾತಾವರಣ ಸೃಷ್ಟಿಯಾಗಲು ನೆರವಾಯಿತು. ಜೊತೆಗೇ ಆ ದಿನಗಳಲ್ಲಿ ವಾಟಾಳ ನಾಗರಾಜ ಮಾಡಿದ ಹೋರಾಟವನ್ನಂತೂ ಕನ್ನಡಿಗರು ಮರೆಯುವಂತಿಲ್ಲ….. ಆದರೆ ನಮ್ಮ ನಟ ಸಾರ್ವಭೌಮನ ಪ್ರಚಂಡ ಶಕ್ತಿಯ ಅನಾವರಣ ಮಾಡಲು ನಾಡಿನ ಇತಿಹಾಸ ಆಯ್ಕೆ ಮಾಡಿಕೊಂಡಿದ್ದು: ಗೋಕಾಕ ಚಳುವಳಿಯ ಆ ನಿರ್ಣಾಯಕ ಗಳಿಗೆಗಳನ್ನು.

*

ಆ ದೃಶ್ಯಗಳು ನನ್ನ ಪಾಲಿಗಂತೂ ಇಂದಿಗೂ ಜೀವಂತ

ಗೋಕಾಕ್ ಗೋಬ್ಯಾಕ್ ಎಂದು ಚಳುವಳಿ ಪ್ರಾರಂಭಿಸಿದ ಧಾರವಾಡ ಎಂದೂ ಹಿಂದಡಿ ಇಡುವಂತಿರಲಿಲ್ಲ. ಒಂದು ಘಟ್ಟದಲ್ಲಿ ಬೆಂಗಳೂರು ಹಾಗೂ ಮೈಸೂರಿನ ಸಂಗಾತಿಗಳು ಶಸ್ತ್ರ ತ್ಯಾಗ ಮಾಡಿದರು. ನಾವು ಮಾತ್ರ ೧೯೮೭ ಏಪ್ರಿಲ್ ೨ ರಿಂದ ಜೇಲ್ ಭರೋ ಕರೆ ನೀಡಿಯೇ ಬಿಟ್ಟೆವು. ಮತ್ತೆ ಸುತ್ತಲೂ ಕಾವೇರ ತೊಡಗಿತ್ತು. ವಿದ್ಯಾವರ್ಧಕ ಸಂಘದ ಆವರಣದಲ್ಲಿ ಕನ್ನಡ ಕ್ರಿಯಾ ಸಮಿತಿ ನಿರ್ಮಿಸಿದ ಸತ್ಯಾಗ್ರಹ ವೇದಿಕೆ ಕ್ರಾಂತಿಯ ಕರ್ಮಭೂಮಿಯಾಯಿತು.

ಹಿರಿಯ ಸಾಹಿತಿಗಳ ಸಹಯೋಗವೂ ಇರಲಿ ಅಂತ ಪಾಟೀಲ ಪುಟ್ಟಪ್ಪನವರು ಕುವೆಂಪು – ಕಾರಂತ – ಮಾಸ್ತಿ ಅವರಿಗೆ ಪತ್ರ ಬರೆದರು. ಆ ಪುರಾತನರಿಂದ ನಮಗೆ ದಕ್ಕಿದ್ದು ಮಾಹಾಮೌನ ಮಾತ್ರ. ಕೊನೆಗೆ ಪತ್ರಿಕೆಗಳ ಮೂಲಕವೇ ಕರೆ ರವಾನೆಯಾಯಿತು ಡಾ. ರಾಜಕುಮಾರರಿಗೆ …. ಮರುದಿನವೇ ಬಂತು ಮಿಂಚಿನ ಸಂದೇಶ: ನಾನು ಚಳುವಳಿಗೆ ಧುಮುಕುವೆ!

ಅನಂತರ ನಾವು – ನೀವು ಕಂಡದ್ದು ನಮ್ಮ ನಾಡಿನ ಉಜ್ವಲ ಇತಿಹಾಸದ ಒಂದು ರೋಮಾಂಚಕ ಪ್ರಸಂಗವನ್ನು. ಬೀದರದಿಂದ ಕೋಲಾರದವರೆಗೆ ಸಾಗಿತು ರಾಜ್ ನೇತೃತ್ವದ ಮಿಂಚಿನ ಸಂಚಾರ. ತೆರೆ ತೆರೆಯಾಗಿ ಬಂದರು ಲಕ್ಷಗಟ್ಟಲೆ ಜನ. ರಾಜ್ ಗುಡುಗಿದರು. ಗುಂಡೂರಾವ್ ನಡುಗಿದರು. ಮಾತುಕತೆಗೆ ಕರೆದರೆ. ಒಂದು ಹಂತದ ವಿಜಯ ನಮಗೆ ದೊರೆತಂತಾಯಿತು. ಆದರೆ ಕನ್ನಡದ ಶಾಪ ಕನ್ನಡ ದ್ರೋಹಿಗಳನ್ನು ಬಿಡಲಿಲ್ಲ. ರೈತ ಚಳುವಳಿ ಮತ್ತು ಕನ್ನಡ ಚಳುವಳಿ ಸೇರಿ ೧೯೮೩ ರಲ್ಲಿ ಕಾಂಗ್ರೆಸ್ ಸರಕಾರವನ್ನು ಗಟಾರಕ್ಕೆ ಬಿಸಾಕಿದವು.

*

ನಮ್ಮ ರಾಜಣ್ಣ ಆಗೀಗ ಸಿಕ್ಕಾಗ ಗೋಕಾಕ ಚಳುವಳಿಯ ಪ್ರಸಂಗಗಳನ್ನು ಈಗಲೂ ನೆನಿಸಿಕೊಳ್ಳುತ್ತಾರೆ. ಮೊನ್ನೆಯ ಕಾರ್ಯಕ್ರಮದಲ್ಲಿ ಮತ್ತೆ ಮತ್ತೆ ಪ್ರಸ್ತಾಪವಾದದ್ದು: ರಾಜ್ ನೇರವಾಗಿ ರಾಜಕೀಯಕ್ಕೆ ನುಗ್ಗಿದ್ದರೆ ಕರ್ನಾಟಕದ ಇತಿಹಾಸವೇ ಬದಲಾಗಿ ಬಿಡುತ್ತಿತ್ತು … ನಮ್ಮೆಲ್ಲರ ಒತ್ತಾಯಕ್ಕೆ ಅವರು ಬೆನ್ನು ತಿರುಗಿಸಿದರು. ‘ನನ್ನೊಳಗಿನ ಕಲಾವಿದನನ್ನು ಕನ್ನಡಿಗರೆಲ್ಲ ಪ್ರೀತಿಸಿದ್ದಾರೆ. ನಾನು ರಾಜಕಾರಣಿಯಾದರೆ ಅನಪೇಕ್ಷಿತವಾಗಿ ಈ ಪ್ರೀತಿಯನ್ನು ಕಳೆದುಕೊಳ್ಳಬಹುದು’ ….. ಇದು ಅವರ ಸಹಜ ಆತಂಕವಾಗಿತ್ತು. (ಅದರಿಂದೀಚೆಗೆ ಅವರು ಚಿತ್ರರಂಗಕ್ಕೆ ಸಂಬಂಧಿಸಿದ ವಿಷಯಗಳಿಗೆ ಮಾತ್ರ ಸ್ಪಂದಿಸಿ ಬೀದಿಗೂ ಇಳಿದುದ್ದುಂಟು. ಆದರೆ ನಾಡು ಒಂದಾಗಿ ಅರ್ಧ ಶತಮಾನದ ನಂತರವೂ ನಾವು ಎದುರಿಸುತ್ತಿರುವ ಸವಾಲುಗಳಿಗೆ ಅವರು ವಿಮುಖರೇ.)

ಯಾಕೇ ಹೀಗೆ? – ಎಂಬ ಪ್ರಶ್ನೆ ಇದೆ. ಕೆಲವರ ಪ್ರಕಾರ. ‘ರಾಜಕೀಯ’ ಎಂಬುದು ಅವರಿಗೆ ಅಲರ್ಜಿ. ಅವರ ಸ್ವಭಾವಕ್ಕೆ ಹೊಂದುವಂಥದಲ್ಲ. ಅವರೊಬ್ಬ ಸಂತನಿದ್ದ ಹಾಗೆ. ಲೌಕಿಕದಲ್ಲಿ ಆಸಕ್ತಿ ಕಡಿಮೆ. ಆದರೆ ಇದೇ ಬಗೆಯ ಹಿನ್ನಲೆ ಇದ್ದ ನೆರೆ ರಾಜ್ಯಗಳ ನಟಶ್ರೇಷ್ಠರು – (ತಮಿಳುನಾಡಿನಲ್ಲಿ ಎಂ.ಜಿ.ಆರ್., ಆಂಧ್ರಪ್ರದೇಶದಲ್ಲಿ ಎನ್. ಟಿ .ಆರ್.)- ಬೆಳ್ಳಿ ಪರದೆಯ ಚೌಕಟ್ಟನ್ನು ಮುರಿದು ಹಾಕಿ, ರಾಜಕೀಯ ಪ್ರವೇಶ ಮಾಡಿ, ನಾಡವರ ಸ್ವಾಭಿಮಾನಕ್ಕೊಂದು ನವೀನ ರೂಪವನ್ನೇ ಕೊಟ್ಟ ದೃಷ್ಠಾಂತಗಳು ನಮ್ಮೆದುರಿಗೆ ಇವೆ.

ಕೊನೆಗೂ ಇದು ಅವರ ಆಯ್ಕೆಗೆ ಬಿಟ್ಟ ವಿಚಾರ, ಇಂದಿನ ವಾಸ್ತವದಲ್ಲಿ ಪ್ರಾದೇಶಿಕ ಶಕ್ತಿಗಳೇ ಇಡೀ ದೇಶದ ರಾಜಕೀಯವನ್ನು ನಿಯಂತ್ರಿಸುತ್ತವೆ.

ನಮ್ಮಲ್ಲೂ ಅನೇಕ ಪ್ರಯತ್ನಗಳಾದವು: ವಿಫಲಗೊಂಡವು. ಇತ್ತೀಚೆಗಂತೂ ಬಾಜಾ ಭಜಂತ್ರಿಯೊಂದಿಗೆ ಅಸ್ತಿತ್ವಕ್ಕೆ ಬಂದಿದ್ದ ಪ್ರಾದೇಶಿಕ ಪಕ್ಷವೊಂದು ಸೈದ್ಧಾಂತಿಕ ನೆಲೆಗಟ್ಟು ಮತ್ತು ದೂರ ದೃಷ್ಟಿಯ ಅಭಾವದಿಂದಾಗಿ ರಂಗದಿಂದಲೇ ಕಣ್ಮರೆಯಾಯಿತು.

ಕನ್ನಡದ ಶಕ್ತಿ ಅಗಾಧವಾಗಿದೆ. ಆದರೆ ಅದು ಕ್ರೋಡೀಕರಣವಾಗಬೇಕು. ಡಾ. ರಾಜಕುಮಾರರು ಈ ಇಳಿ – ವಯಸ್ಸಿನಲ್ಲಿ ನೇರ ರಾಜಕೀಯಕ್ಕೆ ಇಳಿಯಲು ಆಗದಿದ್ದರೂ, ಅವರ ಪರೋಕ್ಷ ಬೆಂಬಲ ಸಿಕ್ಕರೂ ಸಾಕು, ಅದು ಮಂತ್ರದ ಹಾಗೆ ಕೆಲಸ ಮಾಡಲು ಸಾಧ್ಯ.

*

ತಾವು ಅಭಿನಯಿಸಿದ ಚಿತ್ರಗಳನ್ನು ರಾಜ್ ನೋಡುವುದೇ ಇಲ್ಲವಂತೆ! ಕಾರಣ … ಏನಾದರೂ ದೋಷ ಕಂಡುಬಿಟ್ಟರೆ – ಎಂಬ ಎದೆಗುದಿ. ಈ ಥರದ ಎದೆಗುದಿಯೇ ಕಲಾವಿದನ ನಿರಂತರ ತುಡಿತದ ಲಕ್ಷಣ. ಒಂದು ಸತ್ವಪೂರ್ಣವಾದ ಕಥಾಸಂವಿಧಾನ, ಸೃಜನಶೀಲ ನಿರ್ದೇಶನ ಒದಗಿ ಬಂದರೆ ಮತ್ತೆ ಬಣ್ಣ ಹಚ್ಚಲು ಸಿದ್ಧ ಎಂದು ಅವರು ಆಗಿಂದಾಗ ಹೇಳುತ್ತಾರೆ.

ರಾಷ್ಟ್ರೀಯ ಖ್ಯಾತಿಯ ದಾದಾ ಸಾಹೇಬ ಫಾಲ್ಕೆ ಪುರಸ್ಕಾರವನ್ನು ಪಡೆದು ನಾಡಿಗೆ ಹೆಸರು ತಂದ ಈ ಅಪರೂಪದ ಅದ್ಭುತ ಕಲಾವಿದ ತನ್ನ ಕಲೆಯ ಸಂಪೂರ್ಣ ಅಭಿವ್ಯಕ್ತಿಯ ಅವಕಾಶ ಪಡೆದು ಅಂತಾರಾಷ್ಟ್ರೀಯ ಮಟ್ಟದ ಪುರಸ್ಕಾರ ಪಡೆದರೆ ಎಷ್ಟು ಚಂದ!

ಅಂಥದೊಂದು ಶಕ್ತಿಯ ಸ್ಫೋಟಕ್ಕಾಗಿ ನಾವೆಲ್ಲ ಕಾಯೋಣ.

-೨೦೦೪