ಕಾವೇರಿಯಿಂದಮಾ ಗೋ
ದಾವರಿವರಮಿರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ

ಕಾವೇರಿಯಿಂದ ಪ್ರಾರಂಭವಾಗುವ ‘ಕವಿರಾಜಮಾರ್ಗ’ದ ಈ ಸಾಲುಗಳು ಶತಶತಮಾನಗಳಿಂದ ಕನ್ನಡಿಗರನ್ನು ಕಾವೇರಿಸುತ್ತಲೇ ಬಂದಿವೆ.

ನೀ ಮೆಟ್ಟುವ ನೆಲ – ಅದೆ ಕರ್ನಾಟಕ
ನೀನೇರುವ ಮಲೆ – ಸಹ್ಯಾದ್ರಿ
ನೀ ಮುಟ್ಟುವ ಮರ – ಶ್ರೀಗಂಧದ ಮರ
ನೀ ಕುಡಿಯುವ ನೀರ್ – ಕಾವೇರಿ

ಕವಿ ಕುವೆಂಪು ಅವರ ಈ ಚರಣಗಳಂತೂ ಕನ್ನಡಮೆನಿಪ್ಪಾ ನಾಡಿನ ಧಮನಿ ಧಮನಿಗಳಲ್ಲಿ ಮಿಂಚಿನ ಹೊಳೆ ಹರಿಸುತ್ತವೆ.

*

ಒಂಬತ್ತನೆಯ ಶತಮಾನದ ನೃಪತುಂಗ ಕವಿಯ ಕಣ್ಣಲ್ಲಿ ಕಾವೇರಿ ಎಂಬುದು ನಾಡಿನ ಸೀಮಾರೇಖೆಯ ಒಂದು ಸಂಕೇತವಾಗಿದ್ದರೂ ಇಪ್ಪತ್ತನೆಯ ಶತಮಾನದ ಕವಿಯ ಕಾವೇರಿ, ಎಲ್ಲ ಭೌಗೋಳಿಕ ಸೀಮಾರೇಖೆಗಳನ್ನು ಮೀರಿ ಇಡೀ ವಿಶ್ವವನ್ನೇ ಆವರಿಸುವ ಜೀವ – ಚೈತನ್ಯದ ಕುರುಹು.

ಅರಿವೋ ಅರಿವಿನ ಕುರುಹೋ ಕಾವೇರಿ ನಿರಂತರವಾಗಿ ಹರಿಯುತ್ತಲೇ ಇದ್ದಾಳೇ: ಅವಳ ಚಿಮ್ಮು, ಅವಳ ಹೊರಳು ಈ ಭೂಮಿಯ ಎರಡು ತುಣುಕುಗಳ ನಡುವೆ ಒಮ್ಮೆ ಬೆಸುಗೆಯ ಕೊಂಡಿಯಾಗಿದ್ದರೆ, ಮತ್ತೊಮ್ಮೆ ವಿರಸದ ಅಗ್ನಿಕುಂಡವಾಗಿವೆ. ಕನ್ನಡಿಗರು ಮತ್ತು ತಮಿಳರು ಕಾವೇರಿಯ ಹೆಸರಲ್ಲಿ ಬಡಿದಾಡುತ್ತಲೇ ಬಂದಿದ್ದಾರೆ ನಮಗೆ ಅವಳು ಮನೆಯ ಮಗಳು: ಅವರಿಗೆ ಸೊಸೆ. ಇವಳ ಸುತ್ತಣ ವಿವಾದ ನಮಗೆ ನಿತ್ಯದ ವರ್ತಮಾನ.

*

ಋಷಿಯಮೂಲ, ನದಿಮೂಲ ಕೆದಕಬಾರದು ಅನ್ನುತ್ತಾರೆ. ಇಂಥ ‘ಬಾರದು’ ಎಂಬ ನಿಷೇಧಗಳೇ ಅವುಗಳ ಬಗ್ಗೆ ವಿಪರೀತ ಕುತೂಹಲ ಹುಟ್ಟಿಸುತ್ತವೆ. ಕೆದಕುತ್ತಾ ಹೋದಾ ಹಾಗೆ ಏನೇನು ಅದ್ಭುತಗಳು ಅನಾವರಣಗೊಳ್ಳುತ್ತವೆಯೇನೊ! ಛಾಪಾ ಕಾಗದದ ತೆಲಗಿ ಹಗರಣದ ಕತೆ ನಾವು ನೋಡುತ್ತಿದ್ದೇವಲ್ಲ. ಹಾಗೆ ನೋಡಿದರೆ ತನ್ನ ಪಾಡಿಗೆ ತಾನು ಹರಿಯುವ ನದಿಗೆ ಯಾರ ದರಕಾರವೂ ಇರಬೇಕಾಗಿಲ್ಲ. ಆದರೆ ನದಿಯ ಪ್ರವಾಹಗಳು ಸಂಸ್ಕೃತಿಗಳ ಸ್ವರೂಪಗಳಲ್ಲಿ ನಿರ್ಣಾಯಕವಾಗಿರುವುದರಿಂದ ಅವು ಪುರಾಣ, ಇತಿಹಾಸ, ಐತಿಹ್ಯಗಳನ್ನು ಕಟ್ಟಿಕೊಂಡೇ ಜನಮಾಸದಲ್ಲೂ ಹರಿಯುತ್ತಲೇ ಇರುತ್ತವೆ.

ಕಾವೇರಿ ನದಿಯ ಇಂಥ ವಿರಾಟ್ ಸ್ವರೂಪವನ್ನು ಅರಿಯಬೇಕಾದರೆ ನೀವು ಶ್ರೀ ಶೇಷನಾರಾಯಣರ ‘ಕಾವೇರಿ’: ಒಂದು ಚಿಮ್ಮು ಒಂದು ಹೊರಳು’ ಎಂಬ ಶೀರ್ಷಿಕೆಯ ಕೃತಿಯನ್ನು ಒಮ್ಮೆ ಸಮಗ್ರವಾಗಿ ಓದಬೇಕು. (ಕಾವ್ಯಾಲಯ, ಮೈಸೂರು: ೨೦೦೩)

*

ಕತೆ – ಕಾದಂಬರಿ – ಜೀವನ ಚರಿತ್ರೆ – ಮಕ್ಕಳ ನಾಹಿತ್ಯ: ಹೀಗೆ ಅನೇಕ ಪ್ರಕಾರಗಳಲ್ಲಿ ಕೈಯಾಡಿಸಿ ಜನಪ್ರಿಯರಾದವರು ಹಿರಿಯ ಸಾಹಿತಿ ಶೇಷನಾರಾಯಣರು. ಕನ್ನಡದಿಂದ ತಮಿಳಿಗೆ, ತಮಿಳಿನಿಂದ ಕನ್ನಡಕ್ಕೆ ಅನೇಕ ಕೃತಿಗಳನ್ನು ಅನುವಾದಿಸಿದ್ದಾರೆ; ಅನುವಾದಕ್ಕಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪಡೆದಿದ್ದಾರೆ. ಶೇಷನಾರಾಯಣರ ಔಪಚಾರಿಕ ಶಿಕ್ಷಣ ಕೇವಲ ನಾಲ್ಕನೇ ಇಯತ್ತೆಯವರಿಗೆ. ಬಡತನ ಅವರನ್ನು ನೇರವಾಗಿ ಬದುಕಿನ ಕುಲುಮೆಗೇ ತಳ್ಳಿತು. ನಮ್ಮ ದೇಶಕ್ಕೆ ಸ್ವಾತಂತ್ಯ್ರ ಬಂದಾಗ ಅವರು ಇಪ್ಪತ್ತು ವರ್ಷದ ತರುಣ. ಹೇಳುತ್ತಾರೆ; ‘ಈ ವಯಸ್ಸಿನಲ್ಲಿ, ಶಾಲೆ ಕಾಲೇಜುಗಳಿಗೆ ಅಡ್ಡಾಡಬೇಕಾದ ಈ ದಿನಗಳಲ್ಲಿ …. ನನಗೆ ಸಿಗುತ್ತಿದ್ದ ಕೆಲಸಗಳು: ಹೋಟೆಲ್ ಮಾಣಿ, ರುಬ್ಬುವ ಭಟ್ಟ, ಕಿರಾಣಿ ಅಂಗಡಿ, ಎಣ್ಣೆ ಅಂಗಡಿ, ಬೂಟ್ ಪಾಲಿಶ, ಕಡಲ ತೀರಗಳಲ್ಲಿ ಗುಗ್ಗರಿ ಮಾರಾಟ, ತಿರುಪತಿ ವೆಂಕಟರಮಣನ ಪೋಟೊ ಮಾರಾಟ, ಗಾರೆ ಕೆಲಸ ಇತ್ಯಾದಿ.’ …… ಈ ಲೋಕಾನುಭವವೇ ಅವರನ್ನು ಅರಿವಿನ ಅನ್ವೇಷಣೆಗೆ ಹಚ್ಚಿತು: ಅಕ್ಷರದ ಬೆಳಕಿನಲ್ಲಿ ಅನೇಕ ಭಾಷೆಗಳನ್ನು ಕಲಿತರು: ಸೃಜನಶೀಲ ಸಾಹಿತಿಯಾದರು, ವಿದ್ವಾಂಸರಾದರು. ಪತ್ರಿಕೆಗಳ ಸಂಪಾದಕತ್ವ, ಪ್ರಕಾಶನದ ಸಾಹಸಗಳು ಅವರನ್ನು ಕನ್ನಡ ಸಾರಸ್ವತ ಪ್ರಪಂಚಕ್ಕೆ ಆತ್ಮೀಯರನ್ನಾಗಿಸಿದವು.

ಬಾಲ್ಯದಲ್ಲಿಯೇ ಫಾರೆಸ್ಟ್ ಗಾರ್ಡ್ ಒಬ್ಬರು ಇವರಿಗೆ ಹೇಳಿಕೊಟ್ಟ ಬೀಜಮಂತ್ರ: ‘ಶೇಷಣ್ಣ, ನೀನು ಯಾವ ಕಾರಣಕ್ಕೂ ಲಂಚ ತೊಗೋಬ್ಯಾಡ. ದುಡಿದು ತಿನ್ನೋದು ಕಲಿತುಕೋ. ದುಡಿಯದೇ ತಿನ್ನೋದು ಮಹಾಪಾಪ.’

ಶೇಷನಾರಾಯಣರು ಹುಟ್ಟಿದ್ದು ೧೯೨೭ ರಲ್ಲಿ. ಆ ಕಾಲದ ನವೋದಯದ ಚೇತನಗಳೆಲ್ಲ ನಾಡಿನ ಹಲವಾರು ಆಂದೋಲನಗಳಲ್ಲಿ ಪಾಲುಗೊಂಡು ಸಮುದಾಯ ಪ್ರಜ್ಞೆಯೊಂದಿಗೆ ಸಮಗ್ರ ವ್ಯಕ್ತಿತ್ವವನ್ನು ಪಡಕೊಂಡವರು. ಅದೇ ಜಾಯಮಾನ ಶೇಷನಾರಾಯಣರದು.

*

ಐದು ಭಾಗಗಳಲ್ಲಿ ಹರವಿಕೊಂಡ ಕಾವೇರಿಯ ಕತೆ ಜಾಗತಿಕ ಸ್ಥಿತಿಗಳ ಭಿತ್ತಿಯಲ್ಲಿಯೆ ಪ್ರಾರಂಭ ಕಾಣುತ್ತದೆ. ನದಿಯ ಉಗಮ, ಕಾವ್ಯ – ಶಾಸನ – ಜಾನಪದಗಳ ಉಲ್ಲೇಖ. ಅಣೆಕಟ್ಟುಗಳ ವಿಷಯ, ನೀರಿಗಾಗಿ ನಡೆದ ಹೋರಾಟಗಳು, ಒಪ್ಪಂದಗಳು, ಕನ್ನಡಿಗರಿಗಾದ ಅನ್ಯಾಯ, ಕರಿಕಾಲ ಚೋಳ – ಟಿಪ್ಪುಸುಲ್ತಾನ – ವಿಶ್ವೇಶ್ವರಯ್ಯನವರ ಬಗ್ಗೆ ವಿವರಗಳು, ವಿವಾದದ ಇತ್ತೀಚಿನ ಬೆಳವಣಿಗೆಗಳು, ಗಂಗಾ -ಕಾವೇರಿ – ಯೋಜನೆ- ಹೀಗೆ ಹಲವಾರು ಸಂಗತಿಗಳನ್ನು ತನ್ನ ತೆಕ್ಕೆಗೆ ಒಗ್ಗಿಸಿಕೊಳ್ಳುತ್ತ ಮುಂದುವರಿಯುವ ಈ ಪುಸ್ತಕವನ್ನು ಹಿರಿಯ ಸಾಹಿತಿ ಪ್ರೊ. ಎಲ್. ಎಸ್. ಶೇಷಗಿರಿರಾವ್. ಅವರು ‘ಕಾವೇರಿ ವಿಶ್ವಕೋಶ’ ವೆಂದೇ ಕರೆದಿದ್ದಾರೆ.

*

‘ವಿಶ್ವಕೋಶ’ (ಎನ್ ಸೈಕ್ಲೋಪೀಡಿಯ) ಎಂಬುದು ಮುಖ್ಯವಾಗಿ ಪ್ರಮಾಣಾಧಾರಿತ ಮಾಹಿತಿಗಳ ಸುಸಂಬದ್ದ ಆಕರ. ಯಾವುದನ್ನು ಎಲ್ಲಿ ಪಡೆಯಬಹುದು ಎಂಬುದಕ್ಕೆ ಖಚಿತ ಸೂಚಿಗಳಿರುತ್ತವೆ ವಿಶ್ವಕೋಶದಲ್ಲಿ. ಶೇಷನಾರಾಯಣರ ಈ ಕೃತಿಯಲ್ಲಿ ಈ ರೀತಿಯ ಅಕೆಡಮಿಕ್ ಶಿಸ್ತು ಇಲ್ಲ; ಅದು ಅವರ ಅಪೇಕ್ಷೆಯೂ ಅಲ್ಲ.

‘ನಾನು ಕಥೆ ಕಾದಂಬರಿ ಬರೆಯುವವನು, ತಾಂತ್ರಿಕ ತಜ್ಞ ಅಲ್ಲ. ಎನ್ನುವ ಲೇಖಕರು ಇಲ್ಲಿ ಬಳಸುವ ನಿರೂಪಣಾ ತಂತ್ರವೂ ವಿಶಿಷ್ಟವಾದದ್ದೇ. ಇತಿಹಾಸ ಪ್ರಸಿದ್ಧ ಸ್ಥಳವೊಂದಕ್ಕೆ ನೀವು ಪ್ರವಾಸಿಗರಾಗಿ ಭೆಟ್ಟಿ ಕೊಟ್ಟಾಗ ಅಲ್ಲಿಯ ವಿವರಗಳನ್ನು ಸ್ವಾರಸ್ಯಕರವಾಗಿ ನೀಡುವ ಮಾರ್ಗದರ್ಶಿಯ ಹಾಗೆ ಲೇಖಕರು ನಿಮ್ಮನ್ನು ಎಲ್ಲೆಲ್ಲಿಯೋ ಕರಕೊಂಡು ಹೋಗುತ್ತಾರೆ. ಭೂತದ ಬಗ್ಗೆ ಮಾತಮಾತಾಡುತ್ತಲೇ ವರ್ತಮಾನದ ಸಂಗತಿಗಳ ಕಡೆಗೂ ಗಮನ ಸೆಳೆಯುತ್ತಾರೆ. ಕೊನೆಗೆ ನಿಮ್ಮ ನೆನಪಿನಲ್ಲಿ ಉಳಿಯುವುದು ಆ ಸ್ಥಳದ ಮಾಹಿತಿಯೊಂದಿಗೆ ಆ ಮಾರ್ಗದರ್ಶಿಯ ವಿಶಿಷ್ಟ ವ್ಯಕ್ತಿತ್ವ ಮತ್ತು ಮಾತುಗಾರಿಕೆಯ ಸೊಗಸು.

*

ಈ ಕೃತಿಯನ್ನು ಓದಿದಾಗ ನನ್ನ ಮನಸೆಳೆದದ್ದು ಶೇಷನಾರಾಯಣರ ಆರೋಗ್ಯಪೂರ್ಣ ಮನಸ್ಸಿನ ಚಿಂತನೆಗಳು. ‘ಟಿಪ್ಪು ಒಬ್ಬ ಮತಾಂಧ’ – ಎಂಬ ಒಂದು ಹಿತಾಸಕ್ತ ವರ್ಗದ ಅಪಾದನೆಗಳ ಹಿನ್ನಲೆಯಲ್ಲಿ ಅವರು ಹೇಳುತ್ತಾರೆ: ‘ಕ್ರೂರತನ ಎನ್ನುವುದು ಸಾರ್ವತ್ರಿಕವಾದದ್ದು. ಇದು ಒಂದು ಬಗೆಯ ಭೂತ: ರಕ್ತ ಪಿಶಾಚಿ. ಸುತ್ತಮುತ್ತಣ ಪ್ರಚೋದನೆ, ಧರ್ಮದ ದೇವರ ಹೆಸರಿನಲ್ಲಿ ಅತಿರೇಕ ಇಂಥವು ಕೆಲವರಲ್ಲಿ ಜಾಸ್ತಿ ಇರುತ್ತದೆ. ಅಷ್ಟೆ.’ ……. ಮುಂದುವರೆದು, ‘ಬೇಕೆಂತಲೇ ಮತಾಂಧ ಎಂಬ ಅಪಪ್ರಚಾರಕ್ಕೆ ಟಿಪ್ಪು ಒಳಗಾದನೆ?’ ….. ಎಂದು ಪ್ರಶ್ನೆ ಕೇಳುತ್ತಾರೆ.

೧೯೧೬ – ೧೭ ರ ಮದ್ರಾಸ್ ಪ್ರಾಂತದಲ್ಲಿ ಪ್ರಾರಂಭವಾದ ಬ್ರಾಹ್ಮಣೇತರ ಚಳುವಳಿ ಕುರಿತು: ‘ಸರಕಾರದ ಎಲ್ಲ ಇಲಾಖೆಗಳಲ್ಲಿಯೂ ಕಾರ್ಯಾಲಯಗಳಲ್ಲಿಯೂ ಅಲ್ಪಸಂಖ್ಯಾತರಾದ ಬ್ರಾಹ್ಮಣರೇ ತುಂಬಿಕೊಂಡಿದ್ದರಿಂದ ಈ ಚಳುವಳಿ ಪ್ರಾರಂಭವಾಯಿತು. ಇದು ಸಹಜವೇ, ಈ ಸಹಜತೆಗೆ ಆಗಿನ ಸಾಮಾಜಿಕ ಅನಿಷ್ಟಗಳೂ ಹಿನ್ನೆಲೆಯಾಗಿದ್ದವು. ವರ್ಣಾಶ್ರಮ ಪದ್ದತಿ ಇಂಥ ಕೆಲಸಗಳನ್ನೇ ಮಾಡಬೇಕು, ಮತ್ತೊಂದು ವರ್ಗದ ಜನರು ಅಧಮರು, ಅವರಿಗೆ ಇಂಥ ಇಂಥ ಕೆಲಸಗಳು – ಈ ರೀತಿ. ಈ ಎಲ್ಲ ಕಾರಣಗಳಿಂದಲೇ ಭಾರತ ವಿನಾಶವನ್ನು ಹೊಂದಿತು; ಗುಲಾಮಗಿರಿಯನ್ನು ಅಪ್ಪಿಕೊಳ್ಳಬೇಕಾಯಿತು.” (ಪುಟ ೯೭)

*

ನಮ್ಮ ರಾಜಕಾರಣಿಗಳು ವೇದಿಕೆಗಳಿಂದ ಉದ್ಘೋಷಿಸುವ ಗಂಗಾ – ಕಾವೇರಿ ಯೋಜನೆಯನ್ನು ಶೇಷನಾರಾಯಣರು ಕರೆಯುವುದು: ಕಾರ್ಯಸಾಧ್ಯವಲ್ಲದ ಮಿಥ್ಯಾಲಾಪನೆ. ಕೆಲಸವಿಲ್ಲದವರು ಆಡುವ ಘೋಷಣೆ ಮಾತ್ರ: ‘ಇಂಥ ಪ್ರಯತ್ನಗಳು ಎಲ್ಲವೂ ಮಾನವ ಬಾಂಬಿನ ಹಾಗೆ, ಅವು ಸುತ್ತಮುತ್ತ ಎಲ್ಲವನ್ನೂ ನಾಶ ಮಾಡಿಬಿಡುತ್ತವೆ. ಹಾಗೆಯೇ ಅದನ್ನು ಕಟ್ಟಿಕೊಂಡು ಮುನ್ನುಗ್ಗಿದ್ದವನನ್ನೂ ಛಿದ್ರಛಿದ್ರ ಮಾಡಿಬಿಡುತ್ತವೆ.’

ಕಾವೇರಿಯ ಈ ವಿಶ್ವಕೋಶ ಒಂದು ಕಲಾಕೃತಿ ಕೂಡ: ಜೊತೆಗೇ ಶೇಷನಾರಾಯಣರ ತಾತ್ವಿಕ ನೆಲೆಯನ್ನು ನಿರೂಪಿಸುವ ಒಂದು ದರ್ಶನ ಗ್ರಂಥ. ಅವರ ಮೂಲ ಮಂತ್ರವಿದು” ‘ಮಾನವ ನಿಸರ್ಗದೊಂದಿಗೆ ಬಾಳುವೇ ಮಾಡುವುದನ್ನು ಮೊದಲು ಕಲಿಯಬೇಕು ಆಮೇಲೆ ತಂತ್ರಜ್ಞಾನ, ಸಾಹಸ.’

*

ಬೆಂಗಳೂರಿನ ನಿರ್ಮಾಣ್ ಶೆಲ್ಟರ್ಸನ ಆಡಳಿತ ನಿರ್ದೇಶಕ ಶ್ರೀ ವಿ. ಲಕ್ಷ್ಮೀನಾರಾಯಣ ಅವರು ಕೊಡುಗೈ ದೊರೆಯಾಗಿ ಸಂಸ್ಕೃತಿಯ ಪ್ರಾಯೋಜಕರಾಗಿ ಮಾಡುತ್ತಿರುವ ಕೆಲಸ ಅಭಿನಂದನೀಯ. ಅವರು ಅನಕೃ ಪ್ರತಿಷ್ಠಾನದ ಸಹಯೋಗದೊಂದಿಗೆ ಇತ್ತೀಚಿಗೆ (ಜುಲೈ ೪) ಶೇಷನಾರಾಯಣ ಅವರಿಗೆ ೨೦೦೩ ರ ಅನಕೃ ನಿರ್ಮಾಣ್ ಪ್ರಶಸ್ತಿ ನೀಡಿ ಗೌರವಿಸಿದರು. ಅದೊಂದು, ಘನತೆಯಿಂದ ಕೂಡಿದ ಸ್ಮರಣೀಯ ಪ್ರಸಂಗವಾಗಿತ್ತು.

-೨೦೦೩