ಮೈಸೂರಿನಲ್ಲಿ ಮೊನ್ನೆ ಮೊನ್ನೆ ಕೊನೆಯುಸಿರೆಳೆದ ಹಿರಿಯ ಗೆಳೆಯ ಎಚ್. ಎಂ. ಚೆನ್ನಯ್ಯ ಕನ್ನಡ ನವ್ಯ ಸಾಹಿತ್ಯದ ಸಂದರ್ಭದಲ್ಲಿ ನಿಗಿ ನಿಗಿ ಕೆಂಡದ ಹಾಗೆ ಉರಿದವರು. ಸಾಹಿತ್ಯದ ವಲಯದಲ್ಲಿ ಅವರನ್ನು ನಾವೆಲ್ಲ ‘ಕಾಮಿ ಚೆನ್ನಯ್ಯ’ ಎಂದೇ ಕರೆಯುತ್ತಿದ್ದೆವು.

ಸ್ವಲ್ಪ ಗಿಡ್ಡ ಆಳು. ಗಟ್ಟಿಮುಟ್ಟಾದ ಸುಂದರ ದೇಹ. ಟಿಪಿಕಲ್ ‘ಕಲಾವಿದ’ ನ ಶೈಲಿಯ ನೀಳ ಕೇಶರಾಶಿ. ಹಿಟ್ಲರ ಮೀಸೆಯಂಥ ಮೀಸೆ. ಆ ಕಣ್ಣುಗಳಲ್ಲಿ ಸುರಿಯುತ್ತಿದ್ದುದ್ದು ಬಿಸಿಲೋ ಬೆಳದಿಂಗಳೋ ನನಗಿನ್ನೂ ಖಾತ್ರಿ ಇಲ್ಲ. ಪರಿಚಯವಾದವರನ್ನು ಆತ್ಮೀಯತೆಯಿಂದ ಮಾತಾಡಿಸುವ ಸ್ನೇಹಜೀವಿ. (ಮೈಸೂರಿನ ಅವರ ಕೆಲವು ಸಮಕಾಲೀನರಲ್ಲಿ ಈ ಆತ್ಮೀಯತೆ ಎಂಬುದು ಲಿಂಗಭೇದವಿಲ್ಲದ ಆಲಿಂಗನವೇ ಆಗಿತ್ತು ಇಂದಿಗೂ ಆ ಪರಂಪರೆ ಉಳಿಸಿಕೊಂಡಿದ್ದಾರೆ ಅವರು ಅದು ಬೇರೆಯೇ ರೀತಿಯ ಪುರಾಣ. ಇರಲಿ)

*

ನನ್ನ ವಾರಿಗೆಯ ನನ್ನಂಥವರು ಆಗ ಪ್ರಖರವಾಗಿ ಚಾಲ್ತಿಯಲ್ಲಿದ್ದ ‘ನವ್ಯ’ ವಲಯಕ್ಕೆ ಸ್ವಲ್ಪ ಲೇಟಾಗಿ ಪ್ರವೇಶ ಪಡೆದವರು, ನಮಗಿಂತ ನಾಲ್ಕಾರು ವರ್ಷ ಹಿರಿಯರಾಗಿದ್ದ ಲಂಕೇಶ್, ಅನಂತಮೂರ್ತಿ, ಸುಮತೀಂದ್ರ ನಾಡಿಗ, ಚನ್ನಯ್ಯ ಮುಂತಾದವರು ತಮ್ಮ ಅತ್ಯಂತ ತಾಜಾ ತಾಜಾ ಅನ್ನಬಹುದಾದ ಬರವಣಿಗೆಯಿಂದಾಗಿ ನಮಗೆಲ್ಲ ಕುತೂಹಲದ, ಆಕರ್ಷಣೆಯ ವಸ್ತುವಾಗಿದ್ದರು. ಇವರಿಗಿಂತ ಹಿರಿಯರಾಗಿದ್ದವರು ಅಡಿಗ, ರಾಮಚಂದ್ರಶರ್ಮ ಮತ್ತಿತರು. (ಜಿ.ಎಸ್.ಎಸ್, ಕಣವಿ, ಕೆ.ಎಸ್.ನ ಅಂಥವರು ಹೊಸ ಪೀಳಿಗೆಯ ವಿಮರ್ಶಕರ ಕಣ್ಣಲ್ಲಿ ‘ಸಮನ್ವಯ’ ಎಂಬ ಕೆಟಗರಿಗೆ ಸೇರಿಸಲ್ಪಟ್ಟು ಸಮಕಾಲೀನ ಪ್ರಧಾನ ಧಾರೆಯಿಂದ ಸ್ವಲ್ಪ ದೂರವೇ ಉಳಿಯಬೇಕಾಯಿತು.)

ಚೆನ್ನಯ್ಯ ತಮ್ಮ ಕಾವ್ಯ ಮತ್ತು ಕಾವ್ಯೇತರ ಚಟುವಟಿಕೆಗಳಿಂದಾಗಿ ಉಳಿದವರಿಗಿಂತ ಭಿನ್ನವಾದ ಚೆಹರೆಯನ್ನು ಹೊಂದಿದ್ದರು. ಅದಕ್ಕೊಂದು ಕಾರಣ: ನವ್ಯ ಸಾಹಿತ್ಯದ ಕೇಂದ್ರ ಕಾಳಜಿಯೇನೋ ಎಂಬಂತೆ ಬಿಂಬಿಸಲ್ಪಟ್ಟ ‘ಕಾಮ’ (ಸೆಕ್ಸ್), ಈ ಕವಿಯ ಬರವಣಿಗೆಯಲ್ಲಿ ತನ್ನೆಲ್ಲ ನಗ್ನ ಸೌಂದರ್ಯವನ್ನು ಬಯಲು ಮಾಡಿಕೊಂಡಿದ್ದು. ಅವರ ‘ಕಾಮಿ’ ಮತ್ತು ‘ಆಮೆ’ ಈ ಎರಡೂ ಸಂಕಲನಗಳ ವಿಮರ್ಶಕರು ಮುಖ್ಯವಾಗಿ ‘ಕಾಮ’ದ ಕೇಂದ್ರದಲ್ಲಿಯೇ ಕವಿಯನ್ನು ನಿಲ್ಲಿಸಿ ಮೌಲ್ಯಪಾನ ಮಾಡಿದ್ದುಂಟು ಈವರೆಗೆ.

*

ಡಾ.ಬುದ್ದಣ್ಣ ಹಿಂಗಮಿರೆ ಅವರು ಮಾತುಗಳಿವು: ‘ನಮ್ಮ ಸಾಹಿತ್ಯ ಎಂದರೆ ಕಾಮ ಎಂದು ವ್ಯಾಖ್ಯಾನಿಸುವವರಿಗೆ ಇಲ್ಲೊಂದು ಸವಾಲೂ ಇದೆ. ಕಾಮವನ್ನು ಸ್ಥಾಯಿಯಾಗಿಸಿಕೊಂಡು ರಚಿಸಿದ ಕಾವ್ಯ ಚಿಂತನಶೀಲವಾಗಿರುವುದನ್ನು ‘ಆಮೆ’ ಕವಿತೆಗಳಲ್ಲಿ ಗುರುತಿಸಬಹುದು … ಸ್ವಂತದ ಅನುಭವಗಳನ್ನು ಅತ್ಯಂತ ಅಚ್ಚುಕಟ್ಟಾಗಿ ಬಿಡಿಸಿಟ್ಟು ವಿಚಾರಕ್ಕೆ ತೊಡಗಿಸುವಲ್ಲಿ ಹಾಗೂ ಮನಸ್ಸನ್ನು ತಟ್ಟಿ ಬದುಕನ್ನು ಆವರಿಸುವ ಪ್ರಶ್ನೆ – ಸಮಸ್ಯೆಗಳನ್ನು ಗಮನಕ್ಕೆ ತರುವ ಕಾರ್ಯವನ್ನು ಚೆನ್ನಯ್ಯನವರು ಕಾವ್ಯ ಮಾಡುತ್ತದೆ.’

*

ಒಂದು ಮಾತು ಮಾತ್ರ ನಿಜ. ನವ್ಯದ ಕೆಲವು ನೈಜ ಹಾಗೂ ಸಮರ್ಥ ಕೃತಿಗಳಲ್ಲಿ ಕಾಮವೆಂಬುದು ಕೇವಲ ಲೈಂಗಿಕಾರ್ಷಣೆಯ ವಸ್ತುವಾಗದೆ ವ್ಯಕ್ತಿತ್ವದ ಅಂತರಾಳದ ಅನ್ವೇಷಣೆಯ ಮಾಧ್ಯಮವಾಗಿಯೇ ಕೆಲಸ ಮಾಡಿದೆ. ಚೆನ್ನಯ್ಯನವರ ಕಾವ್ಯದಲ್ಲಂತೂ ಕಾಮ ತನ್ನೆಲ್ಲ ಸೂಕ್ಷ್ಮಗಳೊಂದಿಗೆ ಅನೇಕ ರೂಪಕ ಸಂಕೇತಗಳಲ್ಲಿ ಹರಳುಗಟ್ಟಿದೆ.

ಆದರೆ ಬರಬರುತ್ತ ಇಂಥ ವ್ಯಕ್ತಿ ಕೇಂದ್ರಿತ ದೃಷ್ಟಿಕೋನ ಮಾಡಿದ್ದು ಏನೆಂದರೆ ಆತ್ಮನಿಷ್ಠೆ ಚಿಂತನೆ ಎಂಬುದು ‘ಆತ್ಮರತಿ’ ಯಾಗಿ, ಸಂಕೀರ್ಣ ಪ್ರತಿಮೆಗಳ ಜಂಗಲ್ಲಿನಲ್ಲಿ ಸಹಜವಾದ ಕಾವ್ಯ ಸೆರೆಯಾಳಾಯಿತು. ಭಾಷೆ ಎಂಬುದು ಸಂವಹನವನ್ನೇ ಕಳೆದುಕೊಂಡು ಅರ್ಥವಿಲ್ಲದ ಬಡಬಡಿಕೆಯಾಯಿತು. ಕಾವ್ಯದ ಓದು ಎಂಬುದೇ ಅಸಾಧ್ಯವಾಗಿ ಕೊನೆಗೆ ‘ನವ್ಯ ಕಾವ್ಯ’ ಜನ ದೂರವಾಯಿತು. ಕಾಲಧರ್ಮಕ್ಕೆ ಅನುಗುಣವಾಗಿ ಹಾಗೂ ಸಮಕಾಲೀನ ವಾಸ್ತವಗಳ ಒತ್ತಡದಿಂದ ಬೇರೆ ಹೆದ್ದೆರೆಗಳ ಹೊಡೆತಕ್ಕೆ ನವ್ಯ ಸಿಕ್ಕು ಕಾಲಗರ್ಭವನ್ನು ಸೇರುವಂತಾಯಿತು.

ಜೊತೆಯಾಗಿದ್ದವರಲ್ಲಿ ಅನೇಕರು ನವ್ಯದ ಲಕ್ಷ್ಮಣ ರೇಖೆಯನ್ನು ದಾಟಿ ಪುಷ್ಪಕ ವಿಮಾನದಲ್ಲಿ ಹಾರಿ ಹೋದರೂ ಚೆನ್ನಯ್ಯ ಮಾತ್ರ ನೆಲದ ಮೇಲೇ ಉಳಿದರು ‘ಎಲ್ಲರಂಥವನಲ್ಲ ನನ ಗಂಡ’ – ಎಂಬ ಅವರ ನಾಟಕ ಅನೇಕ ಪ್ರಯೋಗಗಳನ್ನು ಕಂಡಿತು. ಸ್ವತಃ ಒಬ್ಬ ಉತ್ತಮ ನಟ ಮತ್ತು ನಿರ್ದೇಶಕರಾಗಿದ್ದರು ಚನ್ನಯ್ಯ. ಜರ್ಮನ್ ನಾಟಕಕಾರ ಬ್ರೆಕ್ಟನ ಮುಕ್ತ ರಂಗಭೂಮಿ (ಎಪಿಕ್ ಥಿಯೇಟರ್) ಯ ತಂತ್ರ ಮತ್ತು ಆಶಯಗಳೆರಡನ್ನೂ ಒಳಗೊಂಡಿರುವ ಈ ಕೃತಿಯ ನಿರೂಪಣಾ ತಂತ್ರದ ನಾವೀನ್ಯತೆಯನ್ನು ಗುರುತಿಸಿದ ವಿಮರ್ಶಕ ಡಾ. ಕೆ. ಮರುಳುಸಿದ್ದಪ್ಪ ಈ ನಾಟಕವನ್ನು ಒಂದು ‘ವಿನೂತನ’ ಪ್ರಯೋಗವೆಂದು ಕರೆದಿದ್ದಾರೆ.

*

ನವ್ಯ ವಿಮರ್ಶೆ ರಂಗಮಧ್ಯಕ್ಕೆ ತಂದ ಕಾಳಜಿ ಎಂದರೆ ಕಲಾಕೃತಿಯ ‘ಶಿಲ್ಪ’ದ ಬಗ್ಗೆ ವಿಶೇಷ ಗಮನ. ಭಾಷೆಯ ಬಳಕೆ ಹಾಗೂ ಕೃತಿಯ ವಿನ್ಯಾಸದ ಬಗೆಗಿನ ಒತ್ತು: ಇವು ಕನ್ನಡ ವಿಮರ್ಶಾ ಪರಂಪರೆಗೆ ನವ್ಯರು ಸೇರಿಸಿದ ಮಹತ್ವದ ಆಯಾಮಗಳು. ‘ಪ್ರಾಯೋಗಿಕ’ (ಪ್ರಾಕ್ಟಿಕಲ್) ವಿಮರ್ಶೆಯ ನೆಲೆಯಲ್ಲಿ ಎಚ್. ಎಂ. ಚೆನ್ನಯ್ಯ ೧೨ನೆಯ ಶತಮಾನದ ಅನೇಕ ವಚನಗಳನ್ನು ನಿರ್ವಚಿಸಿದರು. ‘ಸಂಕ್ರಮಣ’ದ ೧೯೭೦ ಸಂಚಿಕೆಯೊಂದರಲ್ಲಿ ‘ಅಕ್ಕಮಹಾದೇವಿಯ ವಚನಗಳ ಪ್ರತಿಮಾ ವಿಧಾನ’ ಎಂಬ ಶೀರ್ಷಿಕೆಯಲ್ಲಿ ಲೇಖನ ಚನ್ನಯ್ಯನವರ ಒಳನೋಟದ ವಿಮರ್ಶೆಗೆ ಉತ್ತಮ ನಿದರ್ಶನ. ಅಕ್ಕನ ಬಗ್ಗೆ ಅವರು ಹೇಳುವ ಮಾತಿದು: ‘ಸಾಮಾಜಿಕ ಸಂಪ್ರದಾಯದ ವಿರುದ್ದ ಮದುವೆಯಾದ ಗಂಡನನ್ನೂ ಧಿಕ್ಕರಿಸಿ, ತಾನು ಕಂಡುಕೊಂಡ ವಿಶಿಷ್ಟವಾದ ಜೀವನ ಮಾರ್ಗಕ್ಕೆ ಅಡ್ಡಿ ಬಂದದ್ದೆಲ್ಲವನ್ನೂ ಪಕ್ಕಕ್ಕೆ ತಳ್ಳಿ ಬೆತ್ತಲೆಯಾಗಿ ಹೊರಟ ಮಹಾದೇವಿ ವ್ಯಕ್ತಿ ಸ್ವಾತಂತ್ಯ್ರದಂಥ ಮೌಲ್ಯವನ್ನು ಬಾಳಿ ತೋರಿಸಿದವಳು.’

ಇಂಥ ಅಕ್ಕ ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ನಮ್ಮ ಅನೇಕ ಮಹಿಳಾ ಕವಿಗಳಿಗೆ ಇಂದು ‘ಪ್ರತೀಕ’ ವಾಗಿರುವುದನ್ನು ನಾವು ಗಮನಿಸಬಹುದು.

*

‘ಸಂಕ್ರಮಣ’ಕ್ಕೂ ಚನ್ನಯ್ಯನವರಿಗೂ ಪ್ರಾರಂಭದಿಂದಲೇ ನಂಟು. ಆಗಸ್ಟ್ ೧೯೬೪ರ ಮೊಟ್ಟಮೊದಲ ಸಂಚಿಕೆಯಲ್ಲಿಯೇ ಅವರ ‘ನಾನು: ನೀನು’ ಅಚ್ಚಾಗಿತ್ತು. ಆದರೆ ಲೈಂಗಿಕ ಪ್ರತಿಮೆ ಅವರ ಅನಂತರದ ಕಾವ್ಯದುದ್ದಕ್ಕೂ ಕೇವಲ ಪ್ರತೀಕವಾಗಿ ಅಲ್ಲ ಜೀವನ ದರ್ಶನದ ಮಾಧ್ಯಮವಾಗಿ ಕೆಲಸ ಮಾಡಿದೆ.

ಧಾರವಾಡದೊಂದಿಗೆ ಅವರ ಇನ್ನೊಂದು ರೀತಿಯ ನಂಟೂ ಇದೆ. ತಮ್ಮ ಮಗಳನ್ನು ಅವರು ಕೊಟ್ಟಿದ್ದು ಧಾರವಾಡದ ಪ್ರೊ.ಕಲ್ಲೂರ ಅವರ ಪುತ್ರನಿಗೆ ಚನ್ನಯ್ಯನವರ ಹುಟ್ಟೂರು ಹೊನ್ನಾಳಿ. ಮಧ್ಯ ಕರ್ನಾಟಕದ ಮಿಶ್ರ ಸಂಸ್ಕೃತಿ. ಹೊನ್ನಾಳಿ ಹರಿಹರ – ದಾವಣಗೆರೆಗಳದು. ಹೀಗಾಗಿ ಚನ್ನಯ್ಯನವರ ಬರವಣಿಗೆಯಲ್ಲಿ ಮೈಸೂರಿನ ನಯಗಾರಿಕೆಯೊಂದಿಗೆ ಧಾರವಾಡ ಕಡೆಯ ಬಿರುಸೂ ಬೆರೆತಿದೆ.

*

ಆ ದಿನಗಳಲ್ಲಿ ನವ್ಯರ ಕರ್ಮಭೂಮಿಗಳೆಂದರೆ ಬೆಂಗಳೂರು, ಮೈಸೂರು ಮತ್ತು ಸ್ವಲ್ಪಮಟ್ಟಿಗೆ ಧಾರವಾಡ. ಆ ಹಂಗಾಮಿನಲ್ಲಿ ಮೆರೆದವರು ಈಗ ಹಣ್ಣಾಗಿದ್ದಾರೆ. ಯಥಾಪ್ರಕಾರ ಅರವತ್ತು ಎಪ್ಪತ್ತರ ಹುಟ್ಟು – ಹಬ್ಬಗಳನ್ನು ಅದ್ದೂರಿಯಾಗಿ, ಅರ್ಥಪೂರ್ಣ ಆಗಿ ಆಚರಿಸಿಕೊಳ್ಳುತ್ತ ‘ಅಭಿನಂದನ’ ಗ್ರಂಥಗಳನ್ನು ಸ್ವೀಕರಿಸುತ್ತ ಕಾಲನ ಸವಾಲನ್ನು ಎದುರಿಸುತ್ತಿದ್ದಾರೆ.

ನೀವು ಮೈಸೂರು ಕಡೆಗೆ ಹೋದಾಗ ಈ ನವ್ಯ – ಪುರಾತನರ ಸೆಮಿನಾರೋತ್ತರ ಗುಂಡುಗೋಷ್ಠಿಗಳಲ್ಲಿ ಕೇವಲ ಪ್ರೇಕ್ಷಕರಾಗಿ ಭಾಗವಹಿಸಿದರೆ ಸಾಕೆ: ಆ ಕಾಲದ ರಸಮಯ ಪ್ರಸಂಗಗಳು, ಇನ್ನೂ ರಸಮಯ ಶೈಲಿಯಲ್ಲಿ, ಅನಾವರಣಗೊಳ್ಳುತ್ತವೆ. ಆ ಸೀಮೆಯ ರೊಮ್ಯಂಟಿಕ್ ಕಥಾ ನಾಯಕರಲ್ಲಿ ನಮ್ಮ ಪ್ರೀತಿಯ ಚನ್ನಯ್ಯ ಪ್ರಮುಖರು. ಆಗ ಕಥಾನಾಯಕರದೇ ಮೆಜಾರಿಟಿ ಮತ್ತು ಕಥಾನಾಯಕಿಯರೆ ಮೈನಾರಿಟಿ. ಹೀಗಾಗಿ ಪೈಪೋಟಿ ಅನಿವಾರ್ಯವಾಗಿತ್ತು. ‘ಅಲ್ಪಸಂಖ್ಯಾತರನ್ನು ಓಲೈಸುವ’ ಮಾತು ಪತ್ರಿಕೆಗಳಲ್ಲಿ ಓದುತ್ತೇವೆ.ಈ ಮಾತಿನ ಸಾಹಿತ್ಯಿಕ ‘ರೂಪ’ಗಳನ್ನು ಅದರ ವಿಚಿತ್ರ ವಿನ್ಯಾಸಗಳನ್ನು ನವ್ಯದ ಅನೇಕ ಹಂತಗಳಲ್ಲಿ ಪ್ರಾದೇಶಿಕ ವೈವಿಧ್ಯಗಳೊಂದಿಗೆ ಕಾಣುತ್ತೇವೆ.

*

ಚನ್ನಯ್ಯ ನಮ್ಮನ್ನು ಅಗಲಿದ್ದಾರೆ. ಕವಿ ಹೋದರೂ ಕಾವ್ಯ ಉಳಿದೇ ಉಳಿಯುತ್ತದೆ. ಅವರು ಬಹು ಚರ್ಚಿತ ಕವನ ‘ಆಮೆ’ಯ ಕೊನೆಯ ಸಾಲುಗಳಿವು:

ನಾನು ಚಿಪ್ಪೊಳಗೇ
ಬದುಕು ಸಾವಿನ ಕೂದಲೆಳೆ ಗಡಿಯಲ್ಲಿ
ಕೃತಕ ಕೊಳದ ನೀರಿಗಾಗಿ ಕನಸ ಕಾಣುತ್ತೇನೆ.

-೨೦೦೪