ಒಮ್ಮೆ ಎಚ್ಚೆನ್ ನನ್ನನ್ನು ತಮ್ಮ ಊರಿಗೆ ಕರಕೊಂಡು ಹೋಗಿದ್ದರು. ಗೌರಿಬಿದನೂರಿನ ನ್ಯಾಷನಲ್ ಕಾಲೇಜಿನ ಕಾರ್ಯಕ್ರಮದ ನಂತರ ಅವರ ಹುಟ್ಟೂರಾದ ಹೊಸೂರಿಗೆ ನಮ್ಮ ಭೆಟ್ಟಿ – ‘ಪದ್ಮಭೂಷಣ ನಾಡೋಜ ಡಾ. ಎಚ್. ನರಸಿಂಹಯ್ಯನವರು ಹುಟ್ಟಿದ್ದು ಈ ಊರು’ – ಎಂಬ ಫಲಕದ ಸ್ವಾಗತ ನಮಗೆ.

ಅವರಿದ್ದ ಓಣಿಯಲ್ಲಿ ಸಹಜವಾಗಿಯೇ ‘ಆಧುನಿಕ’ ಎನ್ನಬಹುದಾದ ಮನೆಗಳು ಎದ್ದಿವೆ. ರಸ್ತೆಗಳೂ ಅಗಲವಾಗಿವೆ. ನಾವು ಕಾರನ್ನು ದೂರವೇ ನಿಲ್ಲಿಸಿ ಸಂದಿಗೊಂದಿ ಹಾಯ್ದು ಎಚ್ಚೆನ್ ‘ಮನೆ’ ತಲುಪಿದಾಗ ನಮಗೆ ಕಾನ್ವೆಂಟ್ ಬೆಡಗಿಯರ ನಡುವೆ ಒಬ್ಬ ಕನ್ನಡ ಹುಡುಗಿಯನ್ನು ಕಂಡ ಅನುಭವ. ಮನೆಗೆ ಮಣ್ಣ ಗೋಡೆ ಒಂದೇ ಬಾಗಿಲು. ತಲೆ ಬಗ್ಗಿಸಿ ಒಳಗೆ ಹೋದರೆ ಬಾಗಿಲ ಬಳಿಯೇ ಒಂದು ಬಯಲು ಬಚ್ಚಲು. ಆ ಕಡೆ ಅಡಿಗೆ ಮನೆ. ಮುಗಿಯಿತು.

ಹೇಳಿದರು ಎಚ್ಚೆನ್: ‘ನೀವು ಇಂಗ್ಲೆಂಡಿನ ಲೀಡ್ಸಗೆ ಹೋಗಿದ್ದೀರಲ್ಲವೇ? ಈಗ ಈ ಮನೆಗೆ ಬಂದಿರಲ್ಲ. ನಿಮ್ಮ ಜನ್ಮ ಸಾರ್ಥಕವಾಯಿತು’

ಇದು ಎಚ್ಚೆನ್ ಶೈಲಿ.

*

ಅವರ ಆತ್ಮಕತೆಯ ಶೀರ್ಷಿಕೆಯೇ ‘ಹೋರಾಟಕ ಬದುಕು’. ಇಂಥ ಮಡ್ಡಿ ಮಣ್ಣಿನ ಮನೆಯಲ್ಲಿ ಬಾಲ್ಯ ಕಳೆದ. ಹಿಂದುಳಿದ ಜನಾಂಗವೊಂದರ ಬಾಲಕ ಬೆಂಗಳೂರಿನಂಥ ಇಂಡಿಯಾದ ಮಾಹಾನಗರಿಯೊಂದರಲ್ಲಿ ಮಹಾ ಮಹಾ ಕಟ್ಟಡಗಳನ್ನು ಹೊಂದಿದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿದನಲ್ಲ! ಇದು ಎಲ್ಲರ ಕಣ್ಣೆದುರೇ, ಸಾಕ್ಷ್ಯಾಧಾರಗಳ ಸಮೇತ ನಡೆದ ಅದ್ಭುತ ಪವಾಡ. ಇಂಥ ಪವಾಡ ಪುರುಷ ರಾಷ್ಟ್ರದಾದ್ಯಂತ ಖ್ಯಾತಿ ಪಡೆದದ್ದು ಢೊಂಗಿ ಪವಾಡಗಳ ಬುರಡೀ ಬಾಬಾನಿಗೆ ಒಂದು ಸರಳ ಸವಾಲು ಎಸೆದಾಗ.ಸವಾಲಾದರೂ ಏನದು? ಅಪ್ಪಾ, ನೀನೊಬ್ಬ ಸೃಷ್ಟಿಕರ್ಥ, ಶೂನ್ಯದಿಂದ ಕೈಯಾಡಿಸಿ ಏನೇನೋ ಪಡೆಯುತ್ತೀ, ಸಿರಿವಂತರಿಗೆ ಬಂಗಾರದ ಉಂಗುರು, ಚೈನು, ಕಡಗ, ಬಡವರಿಗೆ, ಬೂದಿ. ನನಗೇನೂ ಬೇಡ ಮಾರಾಯ ಕೊಡು ನನಗೆ ಒಂದು ಕುಂಬಳಕಾಯೀ!

*

ಎಪ್ಪತ್ತರ ದಶಕದ ಪ್ರಾರಂಭದಲ್ಲಿ ನಾವು ಕೆಲವರು ಧಾರವಾಡದಲ್ಲಿ ಸಮಾಜವಾದ ಯುವಜನ ಸಭಾ (ಎಸ್ ವೈ ಎಸ್) ಪರವಾಗಿ ಸಾಯಿಬಾಬಾನಿಗೆ ಘೇರಾವೋ ಹಾಕಿ ಓಡಿಸಿದ್ದೆವು. ನಂತರ ಅವನ ಭಾವಚಿತ್ರಕ್ಕೆ ‘ಉಚಿತ’ ರೀತಿಯಲ್ಲಿ ಹಾರ ಹಾಕಿ ಮೆರವಣಿಗೆ ಮಾಡಿದ ಸುದ್ದಿ ನಾಡಿಗೆಲ್ಲ ಹರಡಿತು. ಪತ್ರಿಕೆಗಳ ತುಂಬ ಖಂಡನೆ, ಸ್ವಾಗತಗಳ ಸುರಿಮಳಿ, ಬೀಚಿಯವರು ಪ್ರಜಾವಾಣಿಯ ‘ವಾಚಕರ ವಾಣಿ’ ಗೆ ಬರೆದು ಹುರಿದುಂಬಿಸಿದ್ದರು.

ಆ ಕಾಲದಿಂದಲೂ ನನ್ನಂಥವರಿಗೆ ಎಚ್ಚೆನ್ ಜೊತೆ ಆತ್ಮೀಯ ನಂಟು. ಪ್ರಖರ ವೈಚಾರಿಕತೆಗೊಂದು ಸಂಕೇತ ಅವರಾಗಿದ್ದರು. ಸಾಯಿಬಾಬಾನ ಪವಾಡ ಬಯಲು ಮಾಡಲು ಅವರ ಹಿರಿತನದಲ್ಲಿಯೇ ಆಯೋಗ ರಚಿತವಾಯಿತು. ಇವರು ತಮ್ಮ ದಂಡು ಕಟ್ಟಿಕೊಂಡು ದಾಳಿ ಮಾಡಿದಾಗ ಬಾಬಾ ತಂಗಿದ್ದ ನಿವಾಸದ ಗೇಟನ್ನೇ ತೆಗೆಯಲಿಲ್ಲವಂತೆ. ಬಾಬಾ ಒಳಗೆ ‘ಇದ್ದರೂ’ …. ‘ಇಲ್ಲ’ ಎಂದು ಹೇಳಲಾಯಿತು! ಆಗ ಎಚ್ಚೆನ್ ಹೇಳಿದರಂತೆ: ‘ಬಾಬಾ ಇದ್ದ. ಈಗ ಇಲ್ಲ. ಇದೇ ನಮ್ಮ ಪವಾಡ!’

*

ಎಚ್ಚೆನ್ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾಗ ನಮ್ಮ ಧಾರವಾಡದ ಮನೆಗೆ ಬಂದಿದ್ದರು. ಕಾರ್ಯಭಾರದಿಂದಾಗಿ ಅವಧಿಗೆ ಮುಂಚೆಯೇ ರಾಜೀನಾಮೆ ಕೊಟ್ಟರಾದರೂ ಶಿಕ್ಷಣದ ಮೊದಲ ಹಂತಗಳಲ್ಲಿ ಮಾತೃಭಾಷೆಗೆ ಇರಬೇಕಾದ ಪ್ರಥಮ ಆದ್ಯತೆಯ ಮಹತ್ವದ ಬಗ್ಗೆ ಅನೇಕ ವೇದಿಕೆಗಳಿಂದ ಸಮರ್ಥ ಪ್ರತಿಪಾದನೆಯ ಮೂಲದ ಜನಾಭಿಪ್ರಾಯ ಮೂಡಿಸಿದ್ದರು. ಅವರ ‘ವರದಿ’ಯನ್ನೇ ಆಧಾರವಾಗಿಟ್ಟುಕೊಂಡು ನನ್ನ ಅವಧಿಯಲ್ಲಿ ಶಿಕ್ಷಣ ತಜ್ಞರ ಸಮಿತಿ ನೇಮಕಗೊಂಡು ಸರಕಾರಕ್ಕೆ ‘ವರದಿ’ ಸಲ್ಲಿಸಿತು. ಈ ಪ್ರಕ್ರಿಯೆಯನ್ನು ಬರಗೂರ ಮುಂದುವರೆಸಿದರು.

*

ಮೊನ್ನೆ ಎಚ್ಚೆನ್ ತೀರಿಕೊಂಡ ದಿನ ಅಪಾರ ಸಂಖ್ಯೆಯಲ್ಲಿ ನ್ಯಾಷನಲ್ ಕಾಲೇಜಿನ ವೇದಿಕೆಯ ಸುತ್ತ ಸೇರಿದವರು ಕೇವಲ ಅವರ ಶಿಷ್ಯರಾಗಿರಲ್ಲಿಲ್ಲ. ಎಲ್ಲ ವರ್ಗದ ಜನ ಸಾಲುಗಟ್ಟಲೇ ನಿಂತು ಕೈ ಮುಗಿದರು. ಪುಟ್ಟ ವಿದ್ಯಾರ್ಥಿನಿಯರಂತೂ ಗೊಳೋ ಅಂತ ಅತ್ತರು.

ಬ್ರಹ್ಮಚಾರಿಯಾಗಿಯೇ ಉಳಿದ ಎಚ್ಚೆನ್ ಹೇಳುತ್ತಿದ್ದರು: ‘ನೋಡಿ ಚಂಪಾ, ನಾನು ನನ್ನ ಸುತ್ತ ಶಾಲೆ, ಕಾಲೇಜು ಅಂತ ದೊಡ್ಡ ಸಂಸಾರ ಕಟ್ಟಿಕೊಂಡಿರುವೆ. ನನಗೆ ಸಾವಿರಾರು ಜನ ಮಕ್ಕಳು. ದೇವರು ದಿಂಡರು, ಬಾಬಾ, ಗಣೇಶ, ದಕ್ಷಿಣೆ, ಪ್ರಸಾದ ಮುಂತಾದವುಗಳು ಬಗ್ಗೆ ನನ್ನ ವೈಯಕ್ತಿಕ ನಿಲುವುಗಳನ್ನು ಸಾರ್ವಜನಿಕವಾಗಿ ಹೇಳಲು ಹೇಗೆ ಸಾಧ್ಯ? ಎಲ್ಲರಿಗೂ ಎಲ್ಲಾ ಗೊತ್ತೇ ಇದೆ. ನನ್ನ ಈ ಸಂಸ್ಥೆಗಳು ಬದುಕಬೇಕಲ್ಲವೇ?

ಸರಳ ಮನಸ್ಸಿನ ಈ ಸರಳ ಮನುಷ್ಯನ ಇಂಥ ಸರಳ ಮಾತುಗಳನ್ನು ಯಾರೂ ಅಪಾರ್ಥ ಮಾಡಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ವೈಚಾರಿಕ ಚಿಂತನೆಗಳ ಬುದ್ಧಿಜೀವಿಗಳ ವಲಯಗಳಲ್ಲಿ ಎಚ್ಚೆನ್ ಆಗಾಗ ವಾದ – ವಿವಾದಗಳ ವಸ್ತುವಾಗುತ್ತಿದ್ದುದ್ದು ಮಾತ್ರ ಖರೆ.

*

ಗೌರಿಬಿದನೂರಿನ ಕಾರ್ಯಕ್ರಮದ ಬಿಡುವಿನ ಅವಧಿ. ಊಟಕ್ಕೆ ಮುನ್ನ ಸುತ್ತಲೂ ಕುರ್ಚಿ ಹಾಕಿಕೊಂಡು ಹರಟೆ ಹೊಡಿಯುತ್ತಿದ್ದೆವು. ಎಚ್ಚೆನ್ ಆಗ ತೆಗೆದ ಸುದ್ದಿ ಅವರ ‘ಅಂತ್ಯ ಸಂಸ್ಕಾರ’ದ್ದು!

‘ನೋಡ್ರಿ ಚಂಪಾ, ನನ್ನ ಅಂತ್ಯ ಸಂಸ್ಕಾರ ಎಲ್ಲಿ ಆಗಬೇಕು ಅಂತ ನಾ ಹೇಗೆ ಹೇಳಲಿ? ನಾನಿನ್ನೂ ಸತ್ತೇ ಇಲ್ಲ. ನನ್ನದೊಂದು ರಿಕ್ವೆಸ್ಟ್ ಏನು ಅಂದರೆ ನನ್ನನ್ನು ಒಣಸೌದೆಯಲ್ಲಿ ಸುಡಿರಿ. ಹಸಿ ಸೌದೆ ಬೇಡ. ಯಾಕೆ ಗೊತ್ತೆ? ನನಗೆ ಆ ಹೊಗೆ, ಘಾಟು ತಡೆಯಲು ಸಾಧ್ಯವಿಲ್ಲ.’

ಮಾತಿನ ಹಿಂದೆಯೆ ಮೈ ಕುಲುಕಿಸುವ ನಗೆ. ತಮಗೆ ತಾವೇ ಜೋಕು ಹೊಡಕೊಳ್ಳುವ ತಂತ್ರಗಾರರ ಹಿಕಮತ್ತು ಏನೆಂದರೆ, ಅವರು ಬೇರೆ ಎಲ್ಲರ ಬಗ್ಗೆಯೂ ಜೋಕು ಮಾಡುವ ‘ನೈತಿಕ’ ಅಧಿಕಾರ ಪಡೆಯುತ್ತಾರೆ. ಇಂತ ವಿದ್ಯೆಯಲ್ಲಿ ನನ್ನಂಥವರಿಗೆ ಎಚ್ಚೆನ್ನೇ ಗುರು. ಮೊನ್ನೆಯ ವೈರುಧ್ಯ ನೋಡಿರಿ.

ಹೊಸೂರಿನಲ್ಲಿ ಅವರ ಅಂತ್ಯ ಸಂಸ್ಕಾರದ ವೇಳೆ ಧೋ ಧೋ ಮಳೆ ಸುರಿಯಿತಂತೆ. ಎಚ್ಚೆನ್ ಹೇಳಬಹುದಾದ ಮಾತಿದು: ~‘ನಾನು ಸತ್ತೇ ಇರಲಿಲ್ಲ ಕಣಪ್ಪ. ಉರಿಯುವ ಸೌದೆಗೆ ನೀರು ಬಿದ್ದು ಹೊಗೆ ತಾಳಲಾರದೆ ಸತ್ತು ನಿನ್ನ ಬಾಗಿಲೆಗೆ ಬರಬೇಕಾಯಿತು ನೋಡೋ ಭಗವಂತಾ!’

ಎಚ್ಚೆನ್ ಜೋಕುಗಳಿಗೆ ಅಪಾರ ಪ್ರಚಾರ. ಈ ಪ್ರಚಾರ ಆಂದೋಲನಕ್ಕೂ ಅವರೆ ಮುಂದಾಳು! ಸರಕಾರಿ ವಲಯದಲ್ಲಿ ‘ಎಚ್ಚೆನ್’ ಎಂಬ ಹೆಸರು ಎಷ್ಟು ಚಾಲ್ತಿ ಅಂದರೆ: ಗುಟಕಾದಿಂದಾಗುವ ಅನಾಹುತಗಳ ಅಧ್ಯಯನ ಮಾಡಲು ರಚಿತವಾದ ಆಯೋಗಕ್ಕೂ ಇವರೇ ಆಧ್ಯಕ್ಷರು! ಬೀಡಿ ಸಿಗರೇಟು, ಸೆರೆ, ಸೇಂದಿ, ಗುಟಕಾ, ಪಟಕಾ ಯಾವುದೂ ಗೊತ್ತಿಲ್ಲದ ಈ ನಿರುಪದ್ರವಿ ಆಸಾಮಿಗೆ ಇಂಥ ಸಾರ್ವಜನಿಕ ಭಾರಗಳೇ ಬಹಳ. ಅವರು ಬ್ರಹ್ಮಚಾರಿ ಆಗಿದ್ದುದೂ ಕೂಡ ಸರಕಾರದ ಕೆಲಸವನ್ನು ದೇವರ ಕೆಲಸ ಅಂತ ತಿಳಿಯಲು ಅನುಕೂಲವಾಗಿರಬೇಕು.

*

ಕನ್ನಡ ಮಾಧ್ಯಮ, ಕನ್ನಡ ಮಾಧ್ಯಮ ಎಂದು ಬಡಿದಾಡುತ್ತಿದ್ದ ಈ ಧೀಮಂತ ಕನ್ನಡ ನಾಯಕನಿಗೆ ನನ್ನ ಬಗ್ಗೆ ವಿಶೇಷ ಪ್ರೀತಿ ಹುಟ್ಟಲು ಇನ್ನೊಂದು ಕಾರಣ:

ನಮ್ಮ ‘ಚೈತ್ರ’ – (ಮಗಳು ಮೀನಾ ಸದಾಶಿವ ಇವಳ ಮಗ) – ಎಚ್ಚೆನ್ ಅವರ ನ್ಯಾಷನಲ್ ಪ್ರೈಮರಿ ಸ್ಕೂಲಿನಲ್ಲಿ ಒಂದನೇ ಇಯತ್ತೆಯಿಂದಲೇ ಕನ್ನಡ ಮಾಧ್ಯಮದ ವಿದ್ಯಾರ್ಥಿಯಾಗಿರುವುದು. ನಮ್ಮ ಅನೇಕ ‘ಹಿರಿಯ’ ಕನ್ನಡ ಹೋರಾಟಗಾರರು ಈ ವಿಷಯದಲ್ಲಿ – (ಅಂದರೆ ತಮ್ಮ ಮಕ್ಕಳು, ಮೊಮ್ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸುವ ವಿಷಯ) – ಸ್ವಲ್ಪ ಹಿಂದೇಟು ಹಾಕುವುದನ್ನು ಎಚ್ಚೆನ್ ಬಲ್ಲವರಾಗಿದ್ದಾರೆ.

*

ತೀರ ಇತ್ತೀಚೆಗೆ ನಾನವರ ದನಿ ಕೇಳಿದ್ದು ಸಾಹಿತ್ಯ ಪರಿಷತ್ತಿನ ಚುನಾವಣೆಯಲ್ಲಿ ಫಲಿತಾಂಶದ ಮರುದಿನ. ‘ಭಯಂಕರ’ ಅಂತರದ ಮುನ್ನಡೆ ಪಡೆದ ನನಗೆ ಅವರು ಫೋನಿನಲ್ಲಿ ಅಭಿನಂದಿಸಿ. ‘ನ ಭೂತೋ ನ ಭವಿಷ್ಯತಿ’ ಅಂದರು.

ಪ್ರಶ್ನೆ ಮಾಡದೇ ಒಪ್ಪಬೇಡಿ – ಇದು ಎಚ್ಚೆನ್ ಮಂತ್ರ. ನಾನು ಪ್ರಶ್ನೆ ಕೇಳಿಯೇ ಬಿಟ್ಟೆ: ‘ನ ಭೂತೋ, ಹಿಂದೆಂದೂ ಆಗಿಲ್ಲ … ಅನ್ನೋದನ್ನ ಒಪ್ಪೋಣ. ಆದರೆ ನ ಭವಿಷ್ಯತಿ. ಮುಂದೆ ಆಗೋದಿಲ್ಲ. ….. ಅಂತ ಹ್ಯಾಂಗ್ ಹೇಳ್ತೀರಿ?

ಪೋನಿನಲ್ಲಿ ನಕ್ಕರು ಎಚ್ಚೆನ್. ಎಚ್ಚೆನ್ ಅಂದರೇನೋ ಆ ನಗೆ, ಆ ಜೋಕು, ಆ ಟೋಪಿ, ಆ ಅಂಗಿ, ಆ ಹೋರಾಟ, ಆ ಬದುಕು……

ಅಲ್ಲವೆ?

-೨೦೦೫