ಎಚ್ಚನ್ ಅವರು ಸಿಕ್ಕಾಗ ಒಮ್ಮೆ ಡಾ. ಸಾ. ಶಿ. ಮರುಳಯ್ಯ ಹೇಳಿದರಂತೆ ‘ಏನು ಸಾರ್, ನೀವು ನಿನ್ನೆ ನಮ್ಮ ಮನೆಯ ಒಳಕ್ಕೇ ಬಂದಿರಿ.’

ಎಚ್ಚನ್ ಗೆ ಆಶ್ಚರ್ಯ: ‘ಏನಪ್ಪಾ, ಏನು ಹಾಗೆಂದರೆ? ನನ್ನ ರೂಮು ಬಿಟ್ಟು ನಾನು ಹೋಗೆ ಇಲ್ಲವಲ್ಲ.’

ಸಾಶಿಮ: ಅಲ್ಲ ಸಾರ್, ನೀವು ಟಿವಿಯೊಳಗೆ ಕಂಡಿರಿ.

ಎಚ್ಚನ್: ಓ ಹಾಗೋ! ಅದಕ್ಕೇ ರಾತ್ರಿಯೆಲ್ಲಾ ನನಗೆ ನಿದ್ರೆ ಇರಲಿಲ್ಲ.

ಸಾಶಿಮ: ಅದಕ್ಕೂ ಇದಕ್ಕೂ ಏನು ಸಂಬಂಧ?

ಎಚ್ಚನ್: ಟಿವಿಯೊಳಗೆ ನನ್ನ ಮುಖ ಕಂಡಿತಲ್ಲ. ನೀವೆಲ್ಲಾ ಮನೆ ಮಂದಿ ನೋಡಿದಿರಿ, ಅಲ್ಲವಾ? ನನಗೆ ‘ದೃಷ್ಟಿ’ ಆಯಿತು. ನಿದ್ರೆ ಬರಲೇ ಇಲ್ಲ!

ಆಹಾ! ಸುಂದರ ಪುರುಷ! ಎಂದು ನಕ್ಕರು ಸಾಶಿಮ.

*

ಈ ನಿರೂಪಣೆ ನಮಗೆ ಲಭ್ಯವಾದದ್ದು: ಇತ್ತೀಚಿಗೆ (ಫೆಬ್ರವರಿ ೯) ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಮರುಳಯ್ಯನವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಂಡ ‘ಎಚ್ಚನ್ ನೆನಪು’ ಕಾರ್ಯಕ್ರಮದಲ್ಲಿ. ಪಾಲುಗೊಂಡವರು ಪ್ರೊ. ಎಂ. ಎಚ್. ಕೃಷ್ಣಯ್ಯ. ಡಾ.ಪಿ.ವಿ. ನಾರಾಯಣ, ಹೇಮಲತಾ ಮಹಿಷಿ ಮತ್ತು ಸಿ. ಆರ್. ಸಿಂಹ. ಪ್ರಖ್ಯಾತ ರೊಬ್ಬರು ನಿಧನರಾದಾಗ ಮೊದಲ ಹಂತದಲ್ಲಿ ಸಾರ್ವತ್ರಿಕವಾಗಿ ಮಾಮೂಲಿ ಶ್ರದ್ದಾಂಜಲಿ ಸಭೆಗಳು ನಡೆಯುತ್ತವೆ. ಪತ್ರಿಕೆಗಳು ತಮ್ಮ ಸಂಗ್ರಹದ ಸರಕನ್ನೆಲ್ಲಾ ಆಕರ್ಷಕ ಶೀರ್ಷಿಕೆಗಳಡಿಯಲ್ಲಿ ಖಾಲಿ ಮಾಡಿಕೊಳ್ಳುತ್ತೆವೆ. ಸಾಮಾನ್ಯವಾಗಿ ಅತಿರೇಕದ ಪ್ರಶಂಸೆಗಳು ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಪ್ರಾರ್ಥನೆಗಳು.

ಇಂಥ ಬುರುಗು ಇಳಿದು ಎಲ್ಲ ನೆಲೆಗೊಂಡ ಮೇಲೆ ತಳದಲ್ಲಿ ಸ್ವಲ್ಪ ಮಸಕು ಮಸಕಾಗಿ ಕಾಣುವ ಚಿತ್ರಗಳ ಕಡೆ ಗಮನ ಹರಿಸಲು ಸಾಧ್ಯ ಹಿರಿಯ ಗಾಂಧೀವಾದಿ ಶಿಕ್ಷಣ ತಜ್ಞ, ಪ್ರಖರ ವಿಚಾರವಾದಿ – ಇಷ್ಟೆಲ್ಲ ಆಗಿದ್ದ ಎಚ್ಚನ್ ಬದುಕಿನುದ್ದಕ್ಕೂ ಮೇಲಿಂದ ಮೇಲೆ ಅನೇಕ ವಾದ – ವಿವಾದಗಳ ಕೇಂದ್ರವಾಗಿರುತ್ತಿದ್ದರು. ತೀರಾ ಇತ್ತೀಚಿಗೆ ದಸರಾ ಮಹೋತ್ಸವದ ಅಂಗವಾಗಿ ಎಚ್ಚನ್ ಚಾಮುಂಡಿ – ಪೂಜೆಗೆ ರೆಡಿಯಾಗಿ ನಿಂತಾಗ ಮೈಸೂರಿನ ಕೆ. ರಾಮದಾಸ ಕೇಳಿದ ಪ್ರಶ್ನೆ: ‘ದೇವರ ಪೂಜೆಗೆ ಒಪ್ಪಿದ ಇವರೆಂಥ ವಿಚಾರವಾದಿ?’ ಅದಕ್ಕೆ ಪತ್ರಿಕೆಗಳಿಗೆ ಮಾರುದ್ದ ಲೇಖನಗಳನ್ನು ಬರೆದು ಎಚ್ಚನ್, ‘ನಾನು ನಾಸ್ತಿಕನಲ್ಲ. ದೇವರಲ್ಲಿ ನನಗೆ ನಂಬುಗೆ ಇದೆ. ಆದರೆ ದೇವರ ಹೆಸರಿನಲ್ಲಿ ನಡೆಯುವ ದೌರ್ಜನ್ಯ, ಶೋಷಣೆಗಳಿಗೆ ನಾನು ವಿರೋಧಿ’ ಎಂದು ಪರಿಪರಿಯಾಗಿ ತಮ್ಮ ನಿಲುವುಗಳನ್ನು ಸಮರ್ಥಿಸಿಕೊಂಡಿದ್ದರು.

*

ಹಾಗಾದರೆ ಎಚ್ಚನ್ ಪ್ರತಿಪಾದಿಸಿದ ವೈಜ್ಞಾನಿಕತೆ, ವೈಚಾರಿತೆಗಳ ಅರ್ಥವೇನು? ಗಾಂಧೀವಾದಿ ಎನ್ನಿಸಿಕೊಂಡಿದ್ದ ಅವರು ಗಾಂಧಿ ವಿಚಾರ ಧಾರೆಯನ್ನು ಗ್ರಹಿಸಿದ್ದು ಹೇಗೆ? ಅವರ ಶೈಕ್ಷಣಿಕ ವಿಚಾರಗಳೆಲ್ಲವೂ ಸ್ವೀಕಾರಾರ್ಹವೇ? ಇಂಥ ಎಲ್ಲ ಪ್ರಶ್ನೆಗಳ ಸುತ್ತ ಗಂಭೀರ ಚರ್ಚೆ ನಡೆದದ್ದರಿಂದ ಮೊನ್ನೆಯ ನೆನಪಿನ ಕಾರ್ಯಕ್ರಮಕ್ಕೆ ಒಂದು ಸಮಿನಾರಿನ ಸ್ವರೂಪವೇ ಬಂದಂತಾಗಿತ್ತು.

*

ಎಚ್ಚೆನ್ ಎಳೆಯ ಬಾಲಕನಾಗಿದ್ದಾಗ ಮಹಾತ್ಮ ಗಾಂಧೀಜಿಯ ಜೊತೆಯಲ್ಲಿ ತೆಗೆಯಿಸಿಕೊಂಡ ಪೋಟೋ ಈಗ ಎಲ್ಲರ ಕಣ್ಣಿಗೂ ಗೊತ್ತು. ಆ ಮುಗ್ಧತೆಯೊಂದಿಗೆ ಹಟವನ್ನೂ ಬೆಳೆಸಿಕೊಂಡ ಬಾಲಕ ಕೋಲಾರ ಜಿಲ್ಲೆಯ ತನ್ನ ಹಳ್ಳಿಯಿಂದ ಬೆಂಗಳೂರಿನವರೆಗೆ ನಡೆದುಕೊಂಡೇ ಬಂದಿದ್ದನ್ನು ನೆನೆದು ಪಿ.ವಿ . ನಾರಾಯಣ ಅವರು. ವಾಮನನು ತ್ರಿವಿಕ್ರಮನಾಗಿ ಬೆಳೆದ ಪರಿಯನ್ನು ವಿವರಿಸಿದರು. ಗಾಂಧೀ – ವೈಚಾರಿಕತೆಯ ಭಾಗಗಳಾದ ರಾಮಭಕ್ತಿ – ಪ್ರಾರ್ಥನೆ ಇತ್ಯಾದಿಗಳನ್ನು ತಿರಸ್ಕರಿಸಿದ ಎಚ್ಚನ್. ಗಾಂಧಿಯ ಸರಳ ಜೀವನ ಶೈಲಿಯನ್ನು ಮಾತ್ರ ಕಟ್ಟುನಿಟ್ಟಾಗಿ ವ್ರತದಂತೆ ಪಾಲಿಸಿದರು. ಆ ಗಾಂಧಿ ಮಹಾತ್ಮ ‘ಪ್ರಯೋಗ’ಗಳ ನೆಲೆಯಲ್ಲಾದರೂ ಸ್ವಲ್ಪ ‘ಸುಖ’ವನ್ನು ಅನುಭವಿಸಿದ್ದ. ಈ ಶಿಷ್ಯನಾದರೋ ಆಜನ್ಮ ಅಖಂಡ ಬ್ರಹ್ಮಚಾರಿ. ಎಲ್ಲವನ್ನೂ ಪ್ರಶ್ನಿಸಬೇಕು – ಎಂದು ಸಾರಿದ ಎಚ್ಚನ್. ಇಂಥ ಬರಹ – ಭಾಷಣಗಳಲ್ಲಿ ಸಿಡಿಮಿಡಿಗೊಳ್ಳುತ್ತಿದ್ದ ಈ ನಿಷ್ಠುರವಾದಿ ಯಾಕೆ ಗಾಂಧೀಯ ಹಾಗೆ ಕ್ರಿಯಾತ್ಮಕ ಬೀದಿ ‘ಸತ್ಯಾಗ್ರಹ’ ಕ್ಕೆ ಇಳಿಯಲಿಲ್ಲ?

ದೇವಮಾನವರ ಪವಾಡ ಬಯಲಿಗೆಳೆಯಲು ವಿಚಾರವಾದಿಗಳ ಸಮಿತಿಯನ್ನು ರಚಿಸಿ ರಾಷ್ಟ್ರಖ್ಯಾತಿಯನ್ನು ಗಳಿಸಿದಾಗ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ಮುಂದೆ ಆ ಹುದ್ದೆಗೆ ರಾಜೀನಾಮೆ ಇತ್ತರು. ಇದರ ಹಿಂದೆ ಸರಕಾರದ ಒತ್ತಡವಿತ್ತೇ?

ಹೀಗೆ ಪ್ರಶ್ನೆಗಳ ಸರಮಾಲೆಯನ್ನೇ ಹೆಣೆದವರು ಪಿ. ವಿ ನಾರಾಯಣ. ಕನ್ನಡ ಮಾಧ್ಯಮದ ಬಗ್ಗೆ ಅಪಾರ ಕಾಳಜಿ ಹೊಂದಿದ್ದರೂ ಎಚ್ಚನ್ ಕನ್ನಡ ಅಭಿವೃದ್ದಿ ಪ್ರಾದಿಕಾರದ ಅಧ್ಯಕ್ಷರಾಗಿದ್ದಾಗ ಸಾಕಷ್ಟು ಧಾಡಸೀತನ ತೋರಲಿಲ್ಲ ಎಂಬ ಸಂಗತಿಯೂ ಪ್ರಸ್ತಾಪವಾಯಿತು.

*

ನಂತರ ಮಾತಾಡಿದ ಎಂ . ಎಚ್. ಕೃಷ್ಣಯ್ಯನವರು. ಮೇಲು ಮೇಲೆ ಗೊಂದಲಮಯವೆಂದು ತೋರಿದರೂ ಆಳದಲ್ಲಿ ಸಂಕೀರ್ಣವಾಗಿದ್ದ ಎಚ್ಚನ್ ವ್ಯಕ್ತಿತ್ವವನ್ನು ಇನ್ನೂ ಸೂಕ್ಷ್ಮವಾಗಿ ವಿಶ್ಲೇಷಿಸಿದರು. ವೈಜ್ಞಾನಿಕತೆ ಎಂಬುದು. ಭಾವನಾತ್ಮಕತೆಯನ್ನು ಮೀರಿದ, ಪ್ರಯೋಗಗಳ ಮೂಲಕ ಮತ್ತೆ ಮತ್ತೆ ಸತ್ಯವನ್ನು ಅನ್ವೇಷಿಸುವ ತರ್ಕದ ಮಾರ್ಗ. ವೈಚಾರಿಕತೆ ಎಂಬುದು, ವೈಜ್ಞಾನಿಕತೆಯನ್ನು ಆಧಾರವಾಗಿ ಇಟ್ಟುಕೊಂಡೂ, ನೈತಿಕತೆಯನ್ನು ಪ್ರತಿಪಾದಿಸುವ ಮಾರ್ಗ, ಬಾಂಬು ಉತ್ಪಾದನೆಯ ತಂತ್ರ ವಿಜ್ಞಾನಿಯ ಸಂಪೂರ್ಣ ಕಾಳಜಿ: ಆದರೆ ಈ ಬಾಂಬಿನ ‘ಪರಿಣಾಮ’ಗಳ ಬಗ್ಗೆ ವಿಚಾರವಾದಿ ಚಿಂತಿಸುತ್ತಾರೆ. ಎಚ್ಚೆನ್ ಈ ಬಗೆಯ ವಿಚಾರವಾದಿ.

ಬದುಕಿನ ಅನಿಶ್ಚಿತತೆ, ಅಜ್ಞಾನ, ಭಯಗಳ ಫಲಿಂತಾಂಶವೇ ಮೂಢನಂಬಿಕೆಗಳು. ಸ್ವಾತಂತ್ರ ಆಲೋಚನಾ ಶಕ್ತಿಯನ್ನೇ ನಾಶಮಾಡುವ ‘ಕರ್ಮ’ ಸಿದ್ಧಾಂತದ ಘೋರ ಪರಿಣಾಮಗಳನ್ನು ಎಚ್ಚೆನ್ ‘ಕರ್ಮಾ ಸಿದ್ಧಾಂತದ ಕರ್ಮಕಾಂಡ’ ವೆಂದೇ ಕರೆದಿದ್ದಾರೆ.

ಪುಟಪರ್ತಿ ಸಾಯಿಬಾಬಾ. ಪಾಂಡವಪುರದ ಸಾಯಿಕೃಷ್ಣ, ಶಿವಬಾಲಯೋಗಿ, ಬಾನಾಮತಿ ಪ್ರಸಂಗಗಳನ್ನುಉಲ್ಲೇಖಿಸಿದ ಕೃಷ್ಣಯ್ಯ ಹೇಳಿದ್ದು: ಒಟ್ಟಿನಲ್ಲಿ ಎಚ್ಚೆನ್ ಆಸ್ತಿಕರೂ ಅಲ್ಲ. ನಾಸ್ತಿಕರು ಅಲ್ಲ: ಅವರೊಬ್ಬ ಅಜ್ಞೇಯತಾವಾದಿಯಾಗಿದ್ದರು. ಎಲ್ಲವೂ ಅವರವರ ನಂಬಿಕೆಯನ್ನೇ ಆಧರಿಸಿದ್ದು: ತರ್ಕವನ್ನಲ್ಲ.

*

ಎಚ್ಚೆನ್ ಕುರಿತ ತಮ್ಮ ಚೆದುರಿದ ನೆನಪುಗಳಿಗೆ ಒಂದು ಸೂತ್ರವನ್ನು ಪಡೆಯಲು ಪ್ರಯತ್ನಿಸುತ್ತಲೇ ಹೇಮಲತಾ ಮಹಿಷಿಯವರು ಎಚ್ಚೆನ್ ಅವರ ಕನ್ನಡ – ಪರ ನಿಲುವುಗಳನ್ನು ವಿವರಿಸಿದರು. ಗೋಕಾಕ ಚಳುವಳಿಯ ಸಂದರ್ಭ ಎಚ್ಚೆನ್ ಅಂಥವರು ತಳೆದ ಧೋರಣೆಗಳಿಂದಾಗಿ ‘ಕನ್ನಡದ ಚಳುವಳಿ’ಗೆ ರಾಜಕೀಯ ಚಳುವಳಿಯ ಮಹತ್ವದ ಆಯಾಮ ಒದಗಿತ್ತು. ಆದರೆ ಜಾಗತೀಕರಣದ ಇಂದಿನ ಆತಂಕದ ಸನ್ನಿವೇಶದಲ್ಲಿ ಆಳುವ ವರ್ಗಗಳು ಜನಾಂದೋಲನಗಳಿಗೆ ಪ್ರತಿಸ್ಪಂದಿಸುವ ಗುಣವನ್ನೇ ಕಳೆದುಕೊಳ್ಳುತ್ತಿವೆಯಲ್ಲ ಇದು ಹೇಮಲತಾ ಅವರ ಕೊರಗು.

*

‘ಎಚ್ಚೆನ್ ಬಗ್ಗೆ ಮಾತಾಡುವುದೆಂದರೆ ಶಿವರಾತ್ರಿಯ ಜಾಗರಣೆ ಮಾಡಿದ ಹಾಗೆ. ಬೆಳಗು ಹರಿಯುವ ತನಕವೋ ಹೇಳಬಹುದು’ – ಎಂದು ಮಾತು ಸುರುಮಾಡಿದ ಬೆಳಗು ಹರಿಯುವ ತನಕವೂ ಹೇಳಬಹುದು’ ಎಂದು ಮಾತು ಸುರುಮಾಡಿದ ಸಿ.ಆರ್. ಸಿಂಹ. ತಮ್ಮ ಸಹಜ ಚೇತೋಹಾರಿ ಶೈಲಿಯಲ್ಲಿ. ಆ ಮಹಾನ್ ಚೇತನದ ಆತ್ಮೀಯ ಚಿತ್ರಗಳನ್ನು ಮೂಡಿಸಿದರು. ತನ್ನಂಥ ಅನೇಕ ಚಿಕ್ಕ ಸಸಿಗಳನ್ನು ಪ್ರೀತಿಯಿಂದ ಹೆಮ್ಮರಗಳನ್ನಾಗಿ ಬೆಳೆಸಿದ ತೋಟಗಾರ ಎಚ್ಚೆನ್ ಎಂದು ಕರುಳು ಮಿಡಿಯುವಂತೆ ಮಾತಾಡಿದರು ಸಿಂಹ,

‘ಸತ್ಯ ಪ್ರಾಮಾಣಿಕತೆ ಮೈಗೂಡಿಸಿಕೊಂಡು ಬದುಕುವುದು ಕಷ್ಟ ಇಂಥವರು ಒಮ್ಮೊಮ್ಮೆ ದುರಹಂಕಾರಿಗಳಾಗುವ ಸಾಧ್ಯತೆಯೂ ಇದೆ. ಆಗ ಇವರು ಜನ – ವಿರೋಧಿಗಳೂ ಆಗುತ್ತಾರೆ. ಆದರೆ ವಿನೋದ – ಪ್ರಜ್ಞೆ (Sense of humour) ಅದೂ ತನ್ನನ್ನೇ ಹಾಸ್ಯಕ್ಕೆ ಒಡ್ಡಿಕೊಳ್ಳುವ ಪ್ರವೃತ್ತಿ. ಇಂಥ ದುರಂತದಿಂದ ನಮ್ಮನ್ನು ಪಾರು ಮಾಡಬಲ್ಲುದು. ಎಚ್ಚೆನ್ ಹಾಗೆ ಇದ್ದರು.. He was simply great

*

ಇತಿಹಾಸದ ಸೆಳವಿನಲ್ಲಿ ವೈಯಕ್ತಿಕ ವಿವರಗಳು ಕೊಚ್ಚಿಹೋಗುತ್ತವೆ. ಈಗ ಉಳಿಯುವುದು ವ್ಯಕ್ತಿಯ ವಿಚಾರಧಾರೆ ಮತ್ತು ಕಾಣ್ಕೆಗಳು ಮಾತ್ರ ಇವು ಕ್ಷಣ ಕ್ಷಣಕ್ಕೆ ಅನಾವರಣಗೊಳ್ಳುವ ಸತ್ಯಗಳು. ಹೀಗಾಗಿ ಎಚ್ಚೆನ್ ಅಂದರೆ ನಮ್ಮ ನಮ್ಮ ನೆನಪುಗಳಲ್ಲಿ ಇಂಗಿಹೋದ ಒಂದು ನಿರಂತರ ಜೀವ ಸೆಲೆ.

-೨೦೦೫