ಧಾರವಾಡಕ್ಕೆ ಮಲೆನಾಡಿನ ಸೆರಗು ಅನ್ನುತ್ತಾರೆ ಈ ‘ಸೆರಗು’ ಶಬ್ದ ನೋಡಿರಿ, ಅಂಚು, ತುದಿ, ಚುಂಗು ಮುಂತಾದ ಅದೇ ನಮೂನೆಯ ಶಬ್ದಗಳಿಗೆ ಇಲ್ಲದ ಏನೋ ಒಂದು ವಿಶೇಷ ಈ ಶಬ್ದಕ್ಕಿದೆ. ಸೆರಗು ಅಂದೊಡನೆ ಅದು ಸೀರೆಯ ಸೆರಗೇ. ಸೀರೆಯಿಂದ – ಸೀರೆ ಉಟ್ಟ ಹೆಣ್ಣು. ಹೆಣ್ಣು ಅಂದರೆ? … ಹೆಣ್ಣು ಅಂದರೆ ಇಲ್ಲಿ ತಾಯಿಯೇ. (ಕೆಲವರಿಗೆ ಸೆರಗು ಅಂದರೆ ಮತ್ತೆ ಯಾರ್ಯಾರೋ ನೆನಪಾಗಬಹುದು) ತಾಯಿಯ ಬಗಲಲ್ಲಿ ಕೂಸು, ಈ ಕೂಸಿಗೆ ತಾಯಿಗೆ ಬೆಚ್ಚಗಿನ ಮೈಯ ಆಸರೆ. ಜೊತೆಗೇ ಹೊರ ಜಗತ್ತಿನ ಬಿಸಿಲಿನಿಂದಲೋ, ಕೆಟ್ಟ ಕಣ್ಣುಗಳಿಂದಲೋ ಪಾರಾಗಲು ತಾಯಿಯ ಸೀರೆಯ ಸೆರಗಿನ ಮುಸುಕು. ಆ ಮುಸುಕು ಕೂಡ ಕಂಬಳಿ ಹೊತ್ತ ಹಾಗಲ್ಲ. ಸೆರಗಿನ ತೆಳ್ಳನೆ ಪರದೆಯ ಮೂಲಕ ಮಬ್ಬು ಮಬ್ಬಾಗಿ ಕಾಣುವ ಹೊರಗಿನ ಲೋಕ.

ಧಾರವಾಡ ಇಂಥ ಸೆರಗು. ಮಲೆನಾಡಿನ ಸೆರಗು. ಇಂಥ ಸೆರಗಿನ ಮಗುವಾಗಿರುವ ನನ್ನಂಥವರಿಗೆ ಮಲೆನಾಡಿನ ಒಳನಾಡಿನ ದುರ್ಗಮ ಜಗತ್ತಿನ ಹಾಗೆಯೇ ಬಯಲು ಸೀಮೆಯ ರಣ ಬಿಸಿಲಿನ ಜಗತ್ತು ಕೂಡ ಯಾವಾಗಲೂ ರಹಸ್ಯಮಯ. ರಹಸ್ಯ ಅಂದೊಡನೆ ಅಲ್ಲಿ ಭಯ. ಕುತೂಹಲ, ರೋಮಾಂಚನ ಎಲ್ಲವೂ ಇರುತ್ತದೆ.

‘ಕುವೆಂಪು’ – ಅಂದೊಡನೆ ನನಗೆ ಅನುಭವಕ್ಕೆ ಬರುವುದು ಈ ರಹಸ್ಯವೇ. ಅದು ಕವಿಯ ಆ ಧಾಂಡಿಗ್ಯಾ ಅನ್ನಬಹುದಾದ ದೇಹವಿರಬಹುದು: ಅವರ ಕಾದಂಬರಿಗಳ ನಮೂನೆಯ ಪಾತ್ರಗಳಿರಬಹುದು; ಅವರ ಮಹಾಕಾವ್ಯದ ಮಹಾ ಛಂದಸ್ಸಿನ ಭೋರ್ಗರೆತ ಇರಬಹುದು: ಅವರ ‘ದೋಣಿ ಸಾಗಲಿ’ ಹಾಡಿನ ಆ ಅಲೆ ಅಲೆಗಳ ಸಂಗೀತದ ಲಯವಿರಬಹುದು…

ಈ ರಹಸ್ಯದ ಪ್ರತ್ಯಕ್ಷ ಅನುಭವ ನನ್ನ ಮೈಯ ಕಣಕಣಕ್ಕೂ ಒದಗಿ ಬಂದದ್ದು. ಒಂದೂವರೆ ವರ್ಷದ ಹಿಂದೆ ಕುವೆಂಪು ಹುಟ್ಟಿ ಬೆಳೆದ, ಕುಪ್ಪಳ್ಳಿ ಹಿರೇಕೊಡಿಗೆಗಳ ಮಲೆನಾಡಿಗೆ ಯಾವುದೋ ಒಂದು ಕಾರ್ಯಕ್ರಮಕ್ಕೆ ನಾನು ಹೋದಾಗ. ಆ ಕಾರ್ಯಕ್ರಮಕ್ಕಿಂತ ಹೆಚ್ಚಾಗಿ ನನ್ನನ್ನು ಸೂಜಿಗಲ್ಲಿನಂತೆ ಸೆಳೆದದ್ದು – ಕೇವಲ ಕವಿಯಾಗಿ ಉಗಮವಾದ ಈ ಚೇತನ ಬೆಳೆಬೆಳೆಯುತ್ತ ಅಗಾಧ ಮಾನವನಾಗಿ ಬೆಳೆದು ನಿಂತ ಪವಾಡಕ್ಕೆ ಯಾವಾಗಲೂ ನೆಲದ ಮರೆಯ ನಿಧಾನವಾಗಿಯೇ ಇದ್ದ ಆ ಭೂಪ್ರದೇಶ. ಕೇವಲ ಅಕ್ಷರಗಳ ಮೂಲಕ ನನ್ನನ್ನು ಆವರಿಸಿದ್ದ ಆ ಗುಡ್ಡ ಬೆಟ್ಟಗಳನ್ನು, ಹಳ್ಳ ನದಿಗಳನ್ನು. ಕೋಗಿಲೆ ಕಾಜಾಣಗಳನ್ನು, ‘ದೇವರ ದಯೆ ಕಾಣೋ’ ಎಂದು ಕವಿ ಬಣ್ಣಿಸಿದ ಆ ಸೂರ್ಯೋದಯ ಚಂದ್ರೋದಯಗಳನ್ನು ಬದುಕಿರುವಾಗ ಒಮ್ಮೆಯಾದರೂ ನೋಡಬೇಕು ಎಂಬ ಅದಮ್ಯ ಬಯಕೆ ನನ್ನದು.

ಬೆಟ್ಟಗಳನ್ನು ಸೀಳಿ ಅಂಕುಡೊಂಕಾಗಿ ವೈಯಾರದಿಂದ ಸಾಗುವ ರಸ್ತೆಯ ಮೇಲೆ ಹರಿಯುತ್ತಿದ್ದ ಬಸ್ಸಿನ ಕಟ್ಟಕಡೆಯ ಸೀಟಿನಲ್ಲಿ ಕುಂತು ಕಿಟಕಿಯ ಆಚೆ ಕಣ್ಣು ತೂರುತ್ತ ಸಾಲು ಸಾಲು ಗಿಡಗಳ ಕಿಂಡಿಯೊಳಗಿಂದ ಹೇಗೋ ದಾರಿ ಮಾಡಿಕೊಂಡು ನುಗ್ಗುವ ಸೂರ್ಯನ ಕಿರಣಗಳ ಕಣ್ಣು ಮುಚ್ಚಾಲೆಯಾಟದಲ್ಲಿ ನಾನೂ ಒಬ್ಬ ಆಟಗಾರನೇ ಅನ್ನಿಸಿದಾಗ ನಾನೇ ಕುವೆಂಪು ಅಂತ ನನಗೆ ಭ್ರಮೆಯಾಗಿತ್ತು. ಆ ಹಿಂಜು ಮೋಡಗಳ ಮಂಜು ಮುಸುಕಿನ ಹಿಂದೆ ನನಗೆ ಪ್ರಿಯವಾದ ಮುಖವೊಂದು ಮಿನುಗಿದಂತೆನಿಸಿ, ಮೈಮೇಲೆ ತುಂಬ ಎಚ್ಚರವಿರುವವ ಎಂದುಕೊಂಡ ನನ್ನಂಥ ಪ್ರಬುದ್ದನಿಗೇ ಹೀಗೆ ಅನ್ನಿಸುತ್ತಿರಬೇಕಾದರೆ. ಮುಗ್ಧತೆಯೇ ಮೈತಾಳಿದಂತಿದ್ದ ಆ ಬಾಲ ಕುವೆಂಪುವಿಗೆ, ಪುಟ್ಟ ಪುಟ್ಟಪ್ಪನಿಗೆ, ಈ ಮಾಯಾಲೋಕ ಅದೆಂಥ ಕಮಾಯ ಮಾಡಿರಬೇಡ! ಅಂತ ದಿಗಿಲಾಯಿತು.

*

ಮುಖಪುಟದಲ್ಲಿ ಆ ಧೀರ ಗಂಭೀರ ನಿಲುವಿನ ಸ್ವಾಭಿಮಾನದ, ತೇಜಸ್ಸಿನ, ತುಂಬು ನಗೆಯ ಭಾವಚಿತ್ರ ಹೊತ್ತು ‘ಪ್ರಜಾವಾಣಿ ನವಂಬರ್ ೧೦. ೧೯೯೪ ರ ಬೆಳಿಗ್ಗೆ ಕುವೆಂಪು ನಿಧನದ ಸುದ್ದಿ ತಂದಾಗ ನನಗೆ ಅವರ ನಿಧನಕ್ಕಿಂತ ಹೆಚ್ಚಾಗಿ ಅವರ ಆ ಭಾವಚಿತ್ರವೇ ಚಿತ್ತವನ್ನು ಮುತ್ತಿತ್ತು. ಅನೇಕ ತಿಂಗಳುಗಳ ಕಾಲ ಕೋಮಾದಲ್ಲಿಯೇ ಇದ್ದರು ಕುವೆಂಪು. ‘ಕೊನೆಯನೆಂದೂ ಮುಟ್ಟದಿರು’ ಎಂದ ಕವಿ ಕೊನೆಯಿರದ ಆ ದಾರಿಗೆ ಬಿದ್ದು ಎಡಬಲದ ಗಿಡಗಳನ್ನು ಮುಟ್ಟಿ ಮುಟ್ಟಿ, ಆ ಗಿಡಗಳ ಬೇರುಗಳ ಭೂಮಿಯನ್ನೂ ಟೊಂಗೆಗಳ ಆಕಾಶವನ್ನೂ ತಮ್ಮ ತಕ್ಕೆಯಲ್ಲಿ ತುಂಬಿಕೊಳ್ಳುತ್ತ ಮುಂದೆ ಮುಂದೆ ಸಾಗಿಯೇ ಬಿಟ್ಟಿದ್ದರು ….. ಹೀಗಾಗಿ ಈ ಕವಿಯ ಸಾವು ಅನಿರೀಕ್ಷಿತವಾಗಿರಲಿಲ್ಲ. ನಮ್ಮ ಕಣ್ಣೆದುರಿಗಿರುವುದು ಈ ಕವಿಯ ಬದುಕು. ಒಂಟಿಯಾಗಿ ಹುಟ್ಟಿದ್ದರೂ ಅವರು ಒಂಟಿಯಾಗಿ ಬದುಕಲಿಲ್ಲ. ತಮ್ಮ ಬೀಸು ತೋಳುಗಳ ಕ್ಷಿತಿಜದಲ್ಲಿ ಸಮಷ್ಟಿ ಬದುಕಿದವರು ಕುವೆಂಪು ಸಮಷ್ಟಿ ಬದುಕಿನ ಎಲ್ಲವನ್ನು ಅವಚಿಕೊಂಡು ಭೂಮಿಯಂತೆ. ಬಾನಿನಂತೆ ವಿಮರ್ಶೆಯನ್ನು, ಪ್ರಬಂಧಗಳನ್ನು ಬಿಡಿಬಿಡಿಯಾಗಿ ತೊಳೆ ತೊಳೆಯಾಗಿ ಬಿಡಿಬಿಡಿಸಿ ಅವುಗಳ ಬಗ್ಗೆ ವಿಮರ್ಶಾತ್ಮಕವಾಗಿ, ಪಾಂಡಿತ್ಯಪೂರ್ಣವಾಗಿ ಕರಾರುವಾಕ್ಕಾಗಿ ನಿರ್ಣಯಗಳನ್ನೇನೋ ಕೊಡಬಹುದು: ಆಅವೆಲ್ಲವುಗಳಿಗೆ ಗರ್ಭವಾಗಿ, ಅವುಗಳನ್ನು ಒಳಗೊಂಡೂ ಅವುಗಳನ್ನು ಮೀರಿನಿಂತ ಆ ವ್ಯಕ್ತಿತ್ವ ಇದೆಯಲ್ಲ. ಅದು ನಿಜವಾಗಿಯೂ ಅದ್ಭುತ.

*

ಈ ವ್ಯಕ್ತಿತ್ವದ ಒಂದು ಅಂಚು ಮಾತ್ರ ನನಗೆ ಬಡಿದದ್ದು ನಾನು ಶಾಲೆಯ ಪಠ್ಯಪುಸ್ತಕಗಳಲ್ಲಿ ಕುವೆಂಪು ಬರೆದ ಕವನಗಳನ್ನು ಓದಿದಾಗ, ಯಾರಾದರೂ ಚೆಂದಾಗಿ ಹಾಡಿದ್ದು ಕೇಳಿದಾಗ. ಸ್ವಲ್ಪ ದೊಡ್ಡವನಾದಾಗ ಅವರ ಕತೆಗಳನ್ನು, ಮಲೆನಾಡಿನ ಚಿತ್ರಗಳನ್ನು ಓದಿದಾಗ ಆ ಸನ್ನಿವೇಶಗಳು, ಪಾತ್ರಗಳು ನಮ್ಮೂರಿನವೇ ಅನ್ನುವಷ್ಟು ಆತ್ಮೀಯವಾಗಿದ್ದವು. ಸಾಹಿತ್ಯದ ಇತಿಹಾಸಕಾರರು ಈಗ ಸಾಮಾನ್ಯವಾಗಿ ಕರೆಯುವ ‘ನವೋದಯ’ ದ ಕಾಲವದು. ನನ್ನ ಬದುಕಿಗೂ ಆಗ ನವೋದಯವೇ ಆಗಿತ್ತು – ಆ ನಲವತ್ತರ ದಶಕದ ಎಳೆಯ ವರ್ಷಗಳು. ನಾನು ಹಾವೇರಿಯಲ್ಲಿ ಹೈಸ್ಕೂಲು ಮುಗಿಸಿ, ಧಾರವಾಡದಲ್ಲಿ ಕಾಲೇಜು ಯುನಿವರ್ಸಿಟಿ ಮುಗಿಸಿ, ಅರವತ್ತರ ದಶಕದಲ್ಲಿ ಸುರುವಾತಿನಲ್ಲಿ ನಾನೂ ಒಬ್ಬ ‘ಕವಿ’ ಎಂದು ಕಣ್ಣು ಬಿಡುತ್ತಿರುವಾಗ ಕನ್ನಡ ಕಾವ್ಯ. ಲೋಕದ ಬಣ್ಣವೇ ಏಕ್ ದಂ ಬದಲಾಗಿತ್ತು. ಕುವೆಂಪು – ಬೇಂದ್ರೆ – ಗೋಕಾಕ ಮುಂತಾದವರು ‘ಹಳಬ’ರಾಗಿದ್ದರು. ಅವರಿಗಾಗಿ ವಿಮರ್ಶಕರು ಕೊಂಕುಬಾಯಿಯಿಂದ ಬಳಸುತ್ತಿದ್ದ ‘ರೊಮ್ಯಾಂಟಿಕ್’ ಎಂಬ ಶಬ್ದ. ‘ರೊಮಾನ್ಸ’ – ರೋಮಾಂಚನ’ಗಳನ್ನು ಧ್ವನಿಸುವುದರ ಬದಲಾಗಿ, ಯಾವುದೋ ಒಂದು ಗುಣಪಡಿಸಲಾಗದ ರೋಗದ ಉಬ್ಬಸವೆಂಬಂತೆ ನಮಗೆ ಕೇಳಿಸತೊಡಗಿತ್ತು. ಗೋಪಾಲಕೃಷ್ಣ ಅಡಿಗ ಮತ್ತು ರಾಮಚಂದ್ರಶರ್ಮ ಎಂಬ ಮುಂಗಾಲು, ಹಿಂಗಾಲುಗಳನ್ನು ಬೆಳೆಸಿಕೊಂಡ ‘ನವ್ಯಕಾವ್ಯ’ದ ಅಶ್ವಮೇಧದ ಕುದುರೆ ಮುಂದೆ ಮುಂದೆ: ಲಂಕೇಶ – ನಾಡಿಗ – ಅನಂತಮೂರ್ತಿ – ಚನ್ನಯ್ಯ ಮುಂತಾದವರ ಹೇಹೇಕಾರ ಹಿಂದೆ ಹಿಂದೆ ಚುರಮರಿ ತೂರುತ್ತ ಹುರ್ ರೆನ್ನುತ್ತ ಹಾರಾಡುತ್ತ ಚೀರಾಡುತ್ತ ಬೆನ್ನತ್ತಿದ ನನ್ನಂಥ ಕಿರಿ ಕವಿಗಳ ಹಾಹಾಕಾರ ಅವರ ಹಿಂದೆ. ಅಡಿಗರ ‘ಸಾಕ್ಷಿ’ ಈ ಅಶ್ವಮೇಧದ ಕುದುರೆಯ ಹೇಷಾರವದ ಲೌಡಸ್ಪೀಕರಾಗಿತ್ತು. ನಾವು ಮೂವರು ಗೆಳೆಯರು ೧೯೬೪ರಲ್ಲಿ ಧಾರವಾಡದಿಂದ ಪ್ರಾರಂಭಿಸಿ ‘ಸಂಕ್ರಮಣ’ ಕೂಡ ನವ್ಯದ ಸನಾದಿಯನ್ನೇ ಊದುತ್ತಿತ್ತು.

ಮತ್ತೆ ಒಂದು ದಶಕದಲ್ಲಿ ಸೀನರಿ ಚೇಂಜಾಗಿತ್ತು. ಅಡಿಗರ ಕುದುರೆ ಮುಂದೆ ಮುಂದೆ ಹೋಗುತ್ತಿದ್ದಂತೆಯೇ ಅದು ಹಿಂದೆ ಹಿಂದೆ ಹಾಕುತ್ತ ಹೋದ ಲದ್ದಿಗಳ ದುರ್ಗಂಧ ಸುತ್ತಲೂ ಹರಡತೊಡಗಿತ್ತು. ಲಂಕೇಶ, ತೇಜಸ್ವಿ, ಬೆಸಗರಹಳ್ಳಿ ರಾಮಣ್ಣ ಮುಂತಾದವರು ‘ನವ್ಯ’ ಕ್ಕಿಂತ ಭಿನ್ನವಾಗಿ ಬರೆಯುತ್ತ ಹೊಸದಿಗಂತದ ಹುಡುಕಾಟದಲ್ಲಿದ್ದರು. ಅಡಿಗರ ಮಣ್ಣಿನ ವಾಸನೆಗೆ ತುಪ್ಪದ ವಾಸನೆ ತಗುಲಿ ಸಮಕಾಲೀನ ಪ್ರಜ್ಞೆಗೆ ವೈದಿಕ ಭೂತ ಬಡಕೊಂಡು, ಅವರ ಆಡುಭಾಷೆ (ತೇಜಸ್ವಿ ಲೇವಡಿ ಮಾಡಿದಂತೆ) ಆಡುಗಳು ಬ್ಯಾ ಬ್ಯಾ ಆಗಿ … ಅಂತೂ ಇಂತೂ ಅಡಿಗರೂ ಅವರ ಟೋಳಿಯೂ ಜನಸಂಘದ ಅಗ್ರಹಾರದಲ್ಲಿ ಮುಂಜಿ ಮಾಡಿಸಿಕೊಳ್ಳುವಾಗ… ಎಪ್ಪತ್ತರ ದಶಕ ಕರ್ನಾಟಕದ ಒಟ್ಟಾರೆ ಬದುಕಿನಲ್ಲಿ ದೂರಗಾಮಿಯಾದ ನಿರ್ಣಾಯಕ ಸ್ಥಿತ್ಯಂತರಗಳನ್ನು ತರತೊಡಗಿತ್ತು. ಕಳೆದು ಹೋದ ಬಾಲ್ಯದ ಭವಕೋಶದ ಜೀವಾಳವಾಗಿದ್ದ, ಹರೆಯದ ಪ್ರಾರಂಭದ ಉಬ್ಬಿನಲ್ಲಿ ಮಬ್ಬಾಗಿ ಹೋಗಿದ್ದರೂ ಮತ್ತೆ ಹೊಸ ಅರಿವಿನ ಬೆಳಕಿನಲ್ಲಿ ಹೊಸಹುಟ್ಟಿನ ಹರಿಕಾರನಾಗಿ ನಮಗೆ ಮೂಡಿಬಂದವರು ಕುವೆಂಪು. ಆವರೆಗೂ ಕೇವಲ ಕಾವ್ಯ ವ್ಯಕ್ತಿತ್ವವಾಗಿ ನಮ್ಮ ಪಾಲಿಗೆ ತೋರಿದ ಕುವೆಂಪು ಈಗ ಪೂರ್ಣಪ್ರಮಾಣದ ವೈಚಾರಿಕ ಕ್ರಾಂತಿಕಾರ ವ್ಯಕ್ತಿತ್ವವಾಗಿ ನಮ್ಮೆಲ್ಲ ಆಂದೋಲನಗಳಿಗೆ ಚೈತನ್ಯಶಕ್ತಿಯಾಗಿ ಅನಾವರಣಗೊಂಡಿದ್ದನ್ನು ಈಗ ಎರಡು ದಶಕಗಳ ನಂತರ ನೆನೆಯುತ್ತಿರುವಾಗ Bliss was it in that dawn to be alive ಎಂಬ ವಡ್ಸವರ್ಥನ ಉದ್ಗಾರ ಮಾರ್ದನಿಗೊಳ್ಳುತ್ತದೆ.

ಜಾತಿ ವಿನಾಶ ಕಾರ್ಯಕ್ರಮ, ವಿಚಾರವಾದಿ ಆಂದೋಲನಗಳ ಮೂಲಕ ಆಗಿನ ಸಮಾಜವಾದಿ, ಯುವಜನ ಸಭಾ ಹೊಸ ಜನಾಂಗದ ಸಮಾಜವಾದಿ ಕನಸುಗಳಿಗೆ ಆಕಾರ ಕೊಡತೊಡಗಿತ್ತು. ನಂಜುಂಡಸ್ವಾಮಿ, ಲಂಕೇಶ ಆಗ ನಮಗೆಲ್ಲ ನೇತಾರರು. ಮುಂದೆ ಭೂಸಾ ಪ್ರಕರಣ, ಜೆ. ಪಿ / ಚಳುವಳಿ, ನವ ನಿರ್ಮಾಣ ಸಮಿತಿ. ತುರ್ತುಪರಿಸ್ಥಿತಿ .. ಈ ಘಟನಾ ಪರಂಪರೆಯ ಹಿನ್ನೆಲೆಗೆ ೧೯೭೪ರಲ್ಲಿ ಕುವೆಂಪು ಅವರು ಕರ್ನಾಟಕ ಕಲಾವಿದರ ಮತ್ತು ಬರಹಗಾರರ ಒಕ್ಕೂಟವನ್ನು ಉದ್ಘಾಟಿಸಿ ಮಾಡಿದ ಭಾಷಣ ಹೊಸ ಬದುಕಿನ ಪ್ರಣಾಳಿಕೆಯಾಗಿತ್ತು. ದಶಕದ ಕೊನೆಯಲ್ಲಿ ಎಲ್ಲ ಎಡಪಂಥೀಯರ, ಪ್ರಗತಿಪರರ ಹೋರಾಟದ ಸಂಘಟನೆಯಾಗಿ ಚಿಗುರೊಡೆದದ್ದು ಬಂಡಾಯ ಸಾಹಿತ್ಯ ಸಂಘಟನೆ …. ನಂತರದ್ದು ನಮಗೆ ನಿಮಗೆ ಗೊತ್ತೇ ಇರುವ ಇತಿಹಾಸ.

ಈ ಘಟ್ಟದಲ್ಲಿ ಆದ ಮಹತ್ವದ ಬದಲಾಣೆಯೆಂದರೆ, ಸಾಹಿತ್ಯ ಎಂಬುದು ಕೇವಲ ಅಕ್ಷರ ಸೃಷ್ಟಿ ಎಂಬ ಭ್ರಮೆ ದೂರವಾಗಿ, ಸಾಹಿತ್ಯ ಎಂಬುದು ಬದುಕಿನ ಎಲ್ಲ ಒತ್ತಡಗಳು ಅನಿವಾರ್ಯತೆಗಳ, ನೋವುಗಳ, ಕನಸುಗಳು ಹತಾಶೆಗಳ ಒಟ್ಟಾರೆ ಅಭಿವ್ಯಕ್ತಿ ಎಂಬ ಅರಿವು ಬರಹಗಾರರಿಗೆ ಒದಗಿದ್ದು. ಬದಲಾದ ಈ ನೋಟದಿಂದಾಗಿ ನವೋದಯದ ದಶಕಗಳುದ್ದಕ್ಕೂ ಶೂದ್ರ ಲೋಕದಿಂದ ಬಂದ ಕುವೆಂಪು ಏಕಾಂಗಿಯಾಗಿ ಪುರೋಹಿತಶಾಹಿಗಳನ್ನು ಎದುರು ಹಾಕಿಕೊಳ್ಳುತ್ತ. ಅವರ ಪೇಚುಗಳಿಂದಲೇ ಅವರೊಂದಿಗೆ ಕುಸ್ತಿ ಆಡುತ್ತ ಧಿರೋದಾತ್ತವಾಗಿ ಬದುಕಿದ ವಾಸ್ತವಗಳು ಇಂಡಿಯಾದ ಇಡೀ ಇತಿಹಾಸದ ಈ ಸಂಘರ್ಷದ ಸಂಕ್ಷಿಪ್ತ ಕತೆಯೇ ಆಗಿದ್ದ ಸತ್ಯ ನಮಗೆಲ್ಲ ಗೋಚಾರವಾಗಿ, ಮುಗಿಯದ ಈ ಸಂಘರ್ಷದ ಸಂಕ್ಷಿಪ್ತ ಇನ್ನೂ ಪಾಲುಗೊಳ್ಳಲೇಬೇಕಾದ ತುರ್ತು ನಮಗೆಲ್ಲ ಒದಗಿತು.

‘ಒಕ್ಕೂಟ’ದ ಉದ್ಘಾಟನೆ ಮಾಡಬೇಕೆಂದು ಕೇಳಿಕೊಳ್ಳಲು ನಾವು ಹೋದಾಗ ಸಣ್ಣ ಮಕ್ಕಳಿಗೆ ಹೇಳುವಂತೆ ಕುವೆಂಪು ನಮಗೆ ಹೇಳಿದರು. ಭಾಷಣದಲ್ಲೂ ಅದೇ ಹೇಳಿದರು:

ಹುಲಿಯನ್ನು ಕೊಲ್ಲುತ್ತೇನೆ ಎಂದು ಬಿಟ್ಟು ಹುಲಿ ಅಲ್ಲಿ ಇರುವಾಗ ಒಂದಿಷ್ಟು ಕಲ್ಲು ತೆಗೆದುಕೊಂಡು ಸರಿಯಾಗಿ ತಲೆಗೆ ಗುರಿಯಿಟ್ಟು ಹೊಡೆಯುತ್ತೇನೆಂದರೆ ಏಟು ಬಿದ್ದ ಕೊಡಲೇ ಅದು ಬಂದು ಆಮ್ಅಂತ ನಿಮ್ಮನ್ನು ಅಪ್ಪಳಿಸಿ ಒಂದೇ ಬಾರಿಗೆ ಪೂರೈಸುತ್ತದೆ. ಅದನ್ನು ಹೊಡೆಯಬೇಕಾದರೆ ನೀವು ತೋಟಾ ಕೋವಿ ಇಟ್ಟುಕೊಂಡು ಗುಂಡಿಗೆ ನಳಗೆ ಬಿಲ್ಲೆತ್ತಿ ಎಳೆದುಕೊಳ್ಳಬೇಕು ಹಾಗೆ ತಲೆಗೆ ಹೊಡೆದರೆ ಒಂದೇ ಹೊಡೆತಕ್ಕೆ ಅದು ಬೀಳಬೇಕು. ಅದು ಬಿಟ್ಟು ಗಾಯ ಮಾಡಿ ಬಿಡೋದಲ್ಲ. ಹಾಗೆಯೆ ಪುರೋಹಿತಶಾಹಿ ಹುಲಿಯಂತೆ. ಇದಕ್ಕೆ ಸಣ್ಣ ಪುಟ್ಟ ಕಲ್ಲನ್ನು ಜೇಬಿನಲ್ಲಿಟ್ಟುಕೊಂಡು ಹೋಗಿ ಹೊಡೆಯುತ್ತೇನೆಂದರೆ ಹುಡುಗಾಟದ ಕೆಲಸವಲ್ಲ. ಅದನ್ನು ಹೊಡೆಯಬೇಕಾದರೆ ನಾವು ಮದ್ದು ಗುಂಡುಗಳನ್ನೇ ತಯಾರು ಮಾಡಿಕೊಳ್ಳಬೇಕು.

– ಹೀಗೆಂದ ಕುವೆಂಪು ಅದೇ ಉಸುರಿನಲ್ಲಿ ‘ನಾವು ಹೇಳುವಂತಹ ಮದ್ದುಗುಂಡು ರೂಪಕವಾದದ್ದು ಅಂತ ಇಟ್ಟುಕೊಳ್ಳೋಣ. ವಾಚ್ಯವಾಗಿಯೇ ಗುಂಡಿನಲ್ಲಿ ಹೊಡೆಯಬೇಕು ಅಂತ ಇಲ್ಲ’ ಎಂದು ಸ್ಪಷ್ಟೀಕರಿಸುತ್ತ:

ಆದರೆ ವಿಚಿತ್ರ ಬೇಟೆಯಲ್ಲಿ ( ಸಂದರ್ಭದಲ್ಲಿ) ಮೊದಲ ಗುಂಡು ತಗಲಬೇಕಾದ್ದು ಹುಲಿಯ ತಲೆಗಲ್ಲ. ನಿಮ್ಮ ತಲೆಗೇ! ತಲೆತಲೆ…. ತಲೆ ಮೊದಲು ತಲೆಯಲ್ಲಿರುವ ಮಿದುಳನ್ನು ಕ್ಲೀನ್ ಮಾಡಬೇಕು. ಅವರಿಗಲ್ಲ, ಪುರೋಹಿತ ವರ್ಗದವರಿಗಲ್ಲ. ನಿಮಗೆ!

– ಎಂದು ನಮಗೇ ಗುಂಡು ಹೊಡೆದರು. ಆ ಸನ್ನಿವೇಶದ ಅವರ ಆ ನಿಂತ ನಿಲುವು, ದನಿಯ ಏರಿಳಿತ, ವಿನೋದ, ವ್ಯಂಗ್ಯ, ಮಾತು ಮಾತಿನ ಒಳಹೊಕ್ಕು ಒಳಗಿನಿಂದಲೇ ಮಾತನ್ನು ಸ್ಟೋಟಿಸುತ್ತಿದ್ದ ಅವರ ಶೈಲಿ ಇಂದಿಗೂ ಕಣ್ಣಿಗೆ ಕಟ್ಟಿದಂತಿವೆ ನನಗೆ.

ಇಂಥ ಪುರೋಹಿತಶಾಹಿ ಹುಲಿಯನ್ನು ಎದುರು ಹಾಕಿಕೊಂಡೇ ಬದುಕಿದವರು ಅವರು. ಅವರ ಸಮಕಾಲೀನರಾದ ಹಳೇ ಮೈಸೂರು ಕಡೆಯ ಮಾಸ್ತಿಯವರ ಗುಂಪು, ತಲೆತಲಾಂತರದಿಂದ ತಮ್ಮ ಜನ್ಮಸಿದ್ದ ಹಕ್ಕಾದ ‘ಜ್ಞಾನ’ವನ್ನು ಈ ಶೂದ್ರ ಪಡೆಯುತ್ತಿದ್ದಾನಲ್ಲ ಎಂಬ ಕೆಟ್ಟ ಸಂಕಟದಿಂದ, ಅವರನ್ನು ನಿರ್ನಾಮ ಮಾಡಲು ಕೈಕೊಂಡ ಕುತಂತ್ರಗಳ ಇತಿಹಾಸ ಇನ್ನೂ ಬಯಲಿಗೆ ಬರಬೇಕಾಗಿದೆ. ಇವತ್ತಿಗೂ ಕೂಡ. ಅಂದರೆ ಶೂದ್ರ ಮತ್ತು ದಲಿತ ವರ್ಗ ಜಾಗೃತವಾಗಿ ಸಂಘರ್ಷಕ್ಕೆ ಅಣಿಯಾಗುತ್ತಿರುವಾಗ ಕೂಡ, ಈ ದೇಶದ ಬ್ರಾಹ್ಮಣಶಾಹಿ ತನ್ನದೇ ಆದ ಸಮುಯ ಸಾಧಕತೆಯಿಂದ ಕಾರ್ಯಪ್ರವೃತ್ತರಾಗಿರುವುದನ್ನು ಪ್ರತ್ಯಕ್ಷ ನೋಡುತ್ತಿರುವ ನಾವು. ಕುವೆಂಪು ಕಾಲದಲ್ಲಿ ಅವರು ಏಕಾಂಗಿಯಾಗಿದ್ದಾಗ, ಯಾವ ಪ್ರಮಾಣದ ಹಲ್ಲೆ ಮಾಡಿರಬಹುದೆಂಬುದನ್ನು ಊಹಿಸಿ ಮಾತ್ರ ತಿಳಿಯಬಹುದೇನೋ!

*

‘ಒಕ್ಕೂಟ’ ವಿಶೇಷಾಂಕವನ್ನು ಹೊರತಂದ ‘ಸಂಕ್ರಮಣ’ಕ್ಕೂ ಅದೊಂದು ನಿರ್ಣಾಯಕ ತಿರುವಾಗಿತ್ತು. ಅದುವರೆಗೆ ಮುಖ್ಯವಾಗಿ ‘ಸಾಹಿತ್ಯಿಕ’ ನೆಲೆಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಿಕೆಗೆ ಈಗ ಸಾಮಾಜಿಕ, ಸಾಂಸ್ಕೃತಿಕ ಆಯಾಮ ಮೂಡಿ ಅದು ನಾಡಿನ ಇತಿಹಾಸದ ಲಯಕ್ಕೆ ಲಯ ಕೂಡಿಸಿ ತನ್ನ ಚಲನಶೀಲತೆಯನ್ನು ಜೀವಂತಿಕೆಯನ್ನು ಇಂದಿನವರೆಗೂ ಉಳಿಸಿಕೊಂಡು ಬರಲಿಕ್ಕೆ ‘ಕುವೆಂಪು’ ಎಂಬ ಹೆಸರು ಸಂಕೇತಿಸುವ ಶಕ್ತಿಯೇ ಕಾರಣವಾಗಿದೆ. ಸಂಕ್ರಮಣದ ಮೊದಲ ಹಂತದಲ್ಲಿ (೧೯೭೫ ರವರೆಗೆ) ಅದರ ಅವಿಭಾಜ್ಯ ಅಂಗವಾಗಿದ್ದ ಇಬ್ಬರು ಸಂಗಾತಿಗಳು ವಿಚಿತ್ರ ಪರಿಸ್ಥಿತಿಯಲ್ಲಿ ಪತ್ರಿಕೆಯಿಂದ ದೂರವಾದರು. (ತುರ್ತು ಪರಿಸ್ಥಿತಿಯಲ್ಲಿ ಒಬ್ಬರು: ಅದಕ್ಕೂ ಮುಂಚೆ ಇನ್ನೂಬ್ಬರು) ಆದರೆ ವ್ಯಸನದ ಸಂಗತಿ ಎಂದರೆ ಒಬ್ಬರು ಗಿರಡ್ಡಿ ಗೋವಿಂದಾಚಾರ್ಯರಾಗಿ, ಇನ್ನೂಬ್ಬರು ಪಟ್ಟಣಶೆಟ್ಟಿ ಸಿದ್ದಲಿಂಗಭಟ್ಟಾರಾಗಿ ಇವತ್ತಿಗೂ ತಮ್ಮ ತಮ್ಮ ನೆಲೆಯಲ್ಲಿ ಪುರೋಹಿತಶಾಹಿಯ ಕೈಂಕರ್ಯವನ್ನು ವಹಿಸಿಕೊಂಡು ‘ಬದುಕು’ ಮಾಡುತ್ತಿರುವುದು.

ಈ ಮಾತು ಹೇಳಲು ಕಾರಣವಿದೆ.

ಇತ್ತೀಚಿಗೆ ಧಾರವಾಡದ ‘ಬಸವರಾಜ ಕಟ್ಟೀಮನಿ ವೇದಿಕೆ’ ಕುವೆಂಪು ಬಗ್ಗೆ ಒಂದು ಸಂವಾದ ಕಾರ್ಯಕ್ರಮ ಏರ್ಪಡಿಸಿದಾಗ ಅದರಲ್ಲಿ ಪಾಲುಗೊಂಡು ವಿಮರ್ಶಕ ಕೀರ್ತಿನಾಥ ಕುರ್ತುಕೋಟಿಯವರು ತಮ್ಮ ಯಥಾಪ್ರಕಾರದ ಹಳೇ ರಾಗ ತೆಗೆದು ಕುವೆಂಪು ಕಾವ್ಯ ಕಾವ್ಯವೇ ಅಲ್ಲ ಎಂಬ ಅರ್ಥದಲ್ಲಿ ಮಾತಾಡಿದರೆ. ಅದೇ ಧರ್ತಿಯಲ್ಲಿ ‘ತಾರಮ್ಮಯ್ಯ’ ಹಾಡಿದ ಗಿರಡ್ಡಿಯವರು ‘ಹಳೆ ಮೈಸೂರು ಕಡೆಗೆ ಕುವೆಂಪು ಹೆಸರಿನಲ್ಲಿ ಭಜನೆ ಮಾಡುವ ಹಾಗೆ ನಮ್ಮ ಕಡೆ ಮಾಡುವುದಿಲ್ಲ” ಎಂದು ಅಭಿಪ್ರಾಯಪಟ್ಟರು.

ಖರೇ ಹೇಳಬೇಕೆಂದರೆ ಇವರಿಬ್ಬರೂ ಬೇಂದ್ರೆ – ಭಜಾನಾ – ಮಂಡಳಿಯ ಅಜೀವ ಸದಸ್ಯರೇ. ‘ಮಲಬದ್ದತೆ’ಯ ಹಾಗೆ ‘ಕವಿಬದ್ದತೆ’ ಎಂಬ ರೋಗ ಪೀಡಿತರಾದ ಈ ದಾಸ ವಿಮರ್ಶಕರ ಒಂದು ಪರಂಪರೆಯೇ ಇದೆ. ಇವರಲ್ಲಿ ಒಬ್ಬರು “ಬೇಂದ್ರೆಯ ಒಂದು ಕೆಟ್ಟ ಪದ್ಯ ಕೂಡ ಉಳಿದ ಯಾವುದೇ ಕವಿಯ ಶ್ರೇಷ್ಠ ಪದ್ಯಕ್ಕಿಂತ ಚೆನ್ನಾಗಿರುತ್ತದೆ” ಎಂದು ಸಭೆಯೊಂದರಲ್ಲಿ ಉವಾಚ ಮಾಡಿದರೆಂಬ ಸುದ್ದಿ ಇದೆ. ನವೋದಯ ಕಾಲದಲ್ಲಂತೂ ‘ಬೇಂದ್ರೆ ಹೆಚ್ಚೊ ಕುವೆಂಪು ಹೆಚ್ಚೊ’ ಎಂಬ ದೊಡ್ಡ ಜಗಳವೇ ನಡೆದು ಅನಕೃ ಅವರು ‘ಎರಡು ಕಣ್ಣುಗಳಲ್ಲಿ ಯಾವ ಕಣ್ಣು ಹೆಚ್ಚು ಅಂತ ಹೇಳುತ್ತಿರಿ?” ಅಂತ ಬುದ್ದಿ ಹೇಳಿ ಕೊನೆಗೆ ಒಬ್ಬರು ಮಹಾಕವಿ ಎಂದೂ ಇನ್ನೊಬ್ಬರು ವರಕವಿ ಎಂದೂ ರಾಜಿ ಮಾಡಿಕೊಂಡ ಪ್ರಸಂಗ ನಮಗೆ ಗೊತ್ತು. ಆದರೂ ಕುವೆಂಪು ಪೂರ್ಣ ಪ್ರಮಾಣದ ಜ್ಞಾನಪೀಠ ಪ್ರಶಸ್ತಿ ಬಂತಲ್ಲಾ ಎಂಬ ಕೊರಗು ಮಾತ್ರ ‘ಸಮರಸವೇ ಜೀವನ’ದ ಕವಿಗೆ ಮಾತ್ರ ಕೊನೆಯವರೆಗೂ ಕಾಡುತ್ತಿತ್ತೆಂದು ಬಲ್ಲವರು ಹೇಳುತ್ತಾರೆ.!

ಇಷ್ಟು ಮಾತ್ರ ನಿಜ. ‘ಕುವೆಂಪು’ ಅಂದರೆ ತಮ್ಮ ವ್ಯಕ್ತಿತ್ವದ, ತಮ್ಮ ಬದುಕಿನ ಒಂದು ಭಾಗವೇ ಎಂದು ತಿಳಿದ ಬೃಹತ್ ಜನಸಮುದಾಯವಿದೆ. ಅದು ಆ ಚೇತನದ ಸಮಷ್ಟಿ ವ್ಯಕ್ತಿತ್ವದ ಫಲಶ್ರುತಿ ಅಷ್ಟೆ. ಇಂತ ಕೃತಜ್ಞ ಜನಸಮೂಹ ಇಂದು ವಿಶ್ವವಿದ್ಯಾಲಯಗಳಿಗೆ, ಸಂಘ – ಸಂಸ್ಥೆಗಳಿಗೆ, ನಗರ ಪ್ರದೇಶಗಳಿಗೆ, ಊರು ಕೇರಿಗಳಿಗೆ ಕುವೆಂಪು ಹೆಸರಿಟ್ಟು ಆ ಚೈತನ್ಯಕ್ಕೆ ನಿರಂತರ ವರ್ತಮಾನದ ಧೀಕ್ಷೆ ಕೊಟ್ಟಿರುವುದು ಸಹಜ. ಕುವೆಂಪು ತಾವೂ ಬೆಳೆದರು: ಉಳಿದವರನ್ನೂ ಬೆಳೆಸಿದರು: ಬೆಳಸುವ ಪರಿಸರ ನಿರ್ಮಿಸಿದರು: ಸಾಂಸ್ಕೃತಿಕವಾಗಿ ಮುಖ್ಯರಾದರು. ಬೇಂದ್ರೆ ಮುಂತಾದವರ ಬಗ್ಗೆ ಹೀಗೆ ಹೇಳಲಿಕ್ಕಾಗದು.

ಒಬ್ಬ ವ್ಯಕ್ತಿ ಸಂಸ್ಥೆಯಾಗಿ ಬೆಳೆದುನಿಂತಾಗ ಅವನನ್ನು ತಮ್ಮ ಸ್ವಾರ್ಥಕ್ಕಾಗಿ ವೈಭವೀಕರಿಸುವ ಒಂದು ಪಂಗಡ ನಿರ್ಮಾಣ ಆಗಿಯೇ ಆಗುತ್ತದೆ. ಕುವೆಂಪು ಅವರಿಗೂ ಇದರ ಅರಿವಿತ್ತು. ತೇಜಸ್ವಿ ಅವರಿಗೆ ಯಾರೋ ಈ ಬಗ್ಗೆ ಕೇಳಿ ವಿವಂಚನೆ ವ್ಯಕ್ತ ಪಡಿಸಿದಾಗ ಅವರು “ಅಯ್ಯೋ! ಇವರನ್ನ ರಿಪೇರಿ ಮಾಡಲಿಕ್ಕೆ ನಮ್ಮಪ್ಪನಿಗೆ ಸಾಧ್ಯವಾಗಲಿಲ್ಲ. ನನ್ನಿಂದೇನು ಆದೀತು? “ಅಂತ ಕೈಝಾಡಿಸಿ, ಕ್ಯಾಮರಾ ಬಗಲಿಗೇರಿಸಿ ಮೀನು ಹಿಡಿಯಲು ಜೀಪನ್ನೇರಿ ಹೊರಟರಂತೆ.

*

ಕುವೆಂಪು ಹುಟ್ಟೂರಾದ ಕುಪ್ಪಳ್ಳಿಯಲ್ಲಿ ತಾಯಿ ಸಹ್ಯಾದ್ರಿಯ ಮಡಿಲಲ್ಲಿ. ಲಯವಾಗುತ್ತಿದ್ದ ಗಳಿಗೆಯಲ್ಲಿ ದೂರದರ್ಶನ ಬಿತ್ತರಿಸಿದ ‘ದೋಣಿ ಸಾಗಲಿ’ ಕವನದ ಕೊನೆಯ ಚರಣ:

ನಿನ್ನೆ ನಿನ್ನೆಗೆ ಇಂದು ಇಂದಿಗೆ
ಇರಲಿ ನಾಳೆಯ ನಾಳೆಗೆ …

ಕುವೆಂಪು ಮರಣ ಯಾತ್ರೆಯ ನಿರಂತರ ಬದುಕಿನ ಹಾದಿಗೆ ಹಾಸಿದ ಹಡದಿಯಾಗಿತ್ತು … ಆ ಲಯಕ್ಕೆ ಜೋಕಾಲಿಯಾಗಿ ನಾನು ಮೌನವಾಗಿ ಮಿಡಿಯುತ್ತಿದ್ದೆ:

ದೋಣಿ ಸಾಗಲಿ ಮುಂದೆ ಹೋಗಲಿ|
ತೆರೆಯ ಮೇಗಡೆ ಬೀಳುತ್ತೇಳುತ ….

-೧೯೯೪