ಕರ್ನಾಟಕ ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗದಲ್ಲಿ ನನ್ನ ಕಲೀಗಾಗಿದ್ದ ಡಾ. ಸಿ. ವಿ. ವೇಣುಗೋಪಾಲ ಸಿಡಿಎನ್ ಕುರಿತು ಒಂದು ಪ್ರಸಂಗ ಹೇಳುತ್ತಿದ್ದರು.

ಮೈಸೂರಿನ ಧ್ವನ್ಯಾಲೋಕಕ್ಕೆ ಇವರೊಮ್ಮೆ ಹೋಗಿದ್ದರಂತೆ. ಸಂಶೋಧನೆಗೆಂದು ಇಂಡಿಯಾದ ನಾನಾ ಕಡೆಯಿಂದ ಆ ಸಂಸ್ಥೆಗೆ ಬರುವವರಿಗೆ ಅಲ್ಲಿಯೇ ವಸತಿಯ ವ್ಯವಸ್ಥೆ. ಜೊತೆಗೆ ಸಿಡಿಎನ್ ಅವರ ನಿರಂತರ ಬೌದ್ದಿಕ ಸಾಹಚರ್ಯ, ವೇಣುಗೋಪಾಲ ಅವರ ಹಳೆಯ ಶಿಷ್ಯ ಕೂಡ.

ಆಗ ಚಳಿಗಾಲ. ಒಂದು ನಸುಕಿನಲ್ಲಿ ವೇಣುಗೋಪಾಲರ ರೂಮಿನ ಕದದ ಮೇಲೆ ಕಟ್ ಕಟ್ ಸಪ್ಪಳ. ಬಾಗಿಲು ತೆರೆದಾಗ ಎದುರಿಗೆ ಸಿಡಿಎನ್. ಕೈಯಲ್ಲಿ ನೀರು ತುಂಬಿದ ಬಕೆಟ್: ‘ವೇಣು, ಹಾಟ್ ವಾಟರ್ ಫಾರ್ ಯು.’

*

ಮೈಸೂರು ಸೀಮೆಯ ಬದುಕಿನ ಒಂದು ಭಾಗವೇ ಆಗಿದ್ದ ಪ್ರೊಫೆಸರ್ ಸಿ.ಡಿ. ನರಸಿಂಹಯ್ಯ ಮೊನ್ನೆ (ಏಪ್ರಿಲ್ ೧೨, ಮಂಗಳವಾರ) ಕಾಲವಾಗಿದ್ದಾರೆ. ಮಾನಸ ಗಂಗೋತ್ರಿಯ ಇಂಗ್ಲೀಷ್ ವಿಭಾಗದಲ್ಲಿ ಅನೇಕ ದಶಕಗಳ ಕಾಲ ಪ್ರಾಧ್ಯಪಕರಾಗಿದ್ದ ಸಿಡಿಎನ್ ಕೇವಲ ‘ಮಾಸ್ತರಿಕೆ’ ಮಾಡಲಿಲ್ಲ: ಅಪಾರ ಶಿಷ್ಯಕೋಟಿಗೆ ‘ಗುರು’ ವಾಗಿದ್ದರು. ನಮ್ಮ ಶೈಕ್ಷಣಿಕ ಬದುಕಿನ ವಿವಿಧ ಹಂತಗಳಲ್ಲಿ ನೂರಾರು ಜನ ಶಿಕ್ಷಕರು ಹಾಯ್ದು ಹೋಗಿರುತ್ತಾರೆ. ಎಲ್ಲರೂ ನೆನಪಿನಲ್ಲಿ ಉಳಿಯಲಾರರು. ಕೆಲವರು ಮಾತ್ರ ನಮ್ಮೊಳಗೆ ಉಳಿದು ಬಿಡುತ್ತಾರೆ. ಅನಿರೀಕ್ಷಿತ ಕ್ಷಣಗಳಲ್ಲಿ ಕಣ್ಣೆದುರು ಧುತ್ ಅಂತ ಪ್ರತ್ಯಕ್ಷವಾಗುತ್ತಾರೆ. ಮೈಸೂರು ಯುನಿವರ್ಸಿಟಿಯಲ್ಲಿ ಇಂಗ್ಲಿಷ್ ಸಾಹಿತ್ಯ ಓದಿದ ನೂರಾರು ವಿದ್ಯಾರ್ಥಿಗಳು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ: ‘ನಾನು ಸಿಡಿಎನ್ ಸ್ಟೂಡೆಂಟ್.’

*

ಸಿಡಿಎನ್ ಅವರಿಗೆ ನಾನು ನೇರ ಶಿಷ್ಯನಲ್ಲ. ನಾನು ಕರ್ನಾಟಕ ಯುನಿವರ್ಸಿಟಿಯಲ್ಲಿ ಅರವತ್ತರ ದಶಕದ ಇಂಗ್ಲೀಷ್ ವಿದ್ಯಾರ್ಥಿ. ಆದರೆ ಸಭೆ- ಸೆಮಿನಾರು – ಸಂದರ್ಶನ ಅಂತ ಅವರ ಸಂಪರ್ಕ ಪಡೆಯುವ ಅನೇಕ ಪ್ರಸಂಗ ಇರುತ್ತಿದ್ದವು. ನಮ್ಮಲ್ಲಿಗೆ ಬಂದಾಗಲೆಲ್ಲ ಅವರ ಉಪನ್ಯಾಸಗಳು.

ಎತ್ತರದ ಆಳು, ಕಡುಕಪ್ಪು ಬಣ್ಣ. ಗಂಭೀರ ಧ್ವನಿ. ವಿಷಯ ಪ್ರವೇಶ ಮಾಡುತ್ತಿದ್ದಂತೆಯೇ ಅವರು ಕೇಳುಗರನ್ನೆಲ್ಲ ತಮ್ಮ ಸಂಗಾತಿಗಳನ್ನಾಗಿ ಮಾಡಿಕೊಂಡು ಎಲ್ಲೆಲ್ಲೊ ಕರಕೊಂಡು ಹೋಗುತ್ತಿದ್ದರು. ಅದು ಇದು ಅಂತ ಮೊಗಮ್ಮಾಗಿ ಎಂದು ಮಾತಾಡಿದವರಲ್ಲ ಸಿಡಿಎನ್. ಮಾತಿಗೊಂದು ಗುರಿ ಇರಿಸಿಕೊಂಡೇ ಖಚಿತವಾಗಿ ವಾದ ಮಂಡಿಸುವುದು ಅವರ ರೀತಿ. ಅರ್ಥಕ್ಕೆ ತಕ್ಕಂತೆ ಶಬ್ದಗಳಿಗೆ ಒತ್ತು ಕೊಡುವ ಅವರು ಬಳಸುತ್ತಿದ್ದ ಇಂಗ್ಲೀಷ್ ಅತ್ತ ಇಂಗ್ಲೆಂಡಿನದೂ ಆಗಿರಲಿಲ್ಲ, ಇತ್ತ ಇಂಡಿಯಾದ್ದೂ ಆಗಿರಲಿಲ್ಲ. ಅದು ಟಿಪಿಕಲ್ ಸಿಡಿಎನ್ ಇಂಗ್ಲೀಷೇ ಆಗಿತ್ತು.

*

ಕೇಂಬ್ರಿಜ್ ಯುನಿವರ್ಸಿಟಿಯಲ್ಲಿ ಓದಿದವರು ಸಿಡಿಎನ್. ಕೆಲವು ಸಂಸ್ಥೆಗಳಿಗೆ ತಮ್ಮದೇ ಆದ ‘ವ್ಯಕ್ತಿತ್ವ’ ಇರುತ್ತದೆ. (ನಮ್ಮಲ್ಲಿ ಸೆಂಟ್ರಲ್ ಕಾಲೇಜು, ಮಹಾರಾಜಾ ಕಾಲೇಜು, ಕರ್ನಾಟಕ ಕಾಲೇಜು ಇರುವಂತೆ.) ಈ ಸಂಸ್ಥೆಗಳು ಟಂಕಸಾಲೆಗಳಂತೆ. ಅಲ್ಲಿಯ ವ್ಯಕ್ತಿಗಳೂ ಟಂಕಸಾಲೆಯ ನಾಣ್ಯಗಳ ಹಾಗೆಯೇ. ಸಿಡಿಎನ್, ತಮ್ಮ ಆಯುಷ್ಯದ ಬಹುಭಾಗ ಇಂಗ್ಲೆಂಡಿನ ಇಂಗ್ಲಿಷ್ ಸಾಹಿತ್ಯದ ಉಗ್ರ ಆರಾಧಕರಾಗಿಯೇ ಕಳೆದವರು. ಅದರಲ್ಲೂ ಅವರ ದೈವ ಎಫ್. ಆರ್. ಲೀವಿಸ್ ಎಂಬ – (ಟಿ.ಎಸ್. ಎಲಿಯಟ್ ಕವಿಯ ಸಮಕಾಲೀನ) – ವಿಮರ್ಶಕ. ಮೈಸೂರು ಯುನಿವರ್ಸಿಟಿಯಲ್ಲಿ ತಮ್ಮ ಶಿಷ್ಯರಿಗೆ ಅವರು ಅಭ್ಯಂಜನ ಮಾಡಿಸಿದ್ದೂ ಈ ಲೀವಿಸ್ ಎಂಬ ತೀರ್ಥದಿಂದಲೇ.

*

ಇಷ್ಟೇ ಅಲ್ಲ. ಸಿಡಿಎನ್ ತಾವೊಬ್ಬ ‘ಇಂಗ್ಲಿಷ್ ಮನ್’ ಎಂದೇ ತಮ್ಮನ್ನು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರು. ಡ್ರೆಸ್ಸು, ಮಾತಿನ ರೀತಿ, ಮುಖ ಚಹರೆ, ಕೈಸನ್ನೆ – ಬಾಯಿಸನ್ನೆ, ಶಿಷ್ಟ ನಡವಳಿಕೆ, ಆಸಕ್ತಿಗಳು, ಮನೋಧರ್ಮ – ಹೀಗೆ ಹಲವಾರು ಪರಿಗಳು, ‘ಮೂಲ ಇಂಗ್ಲೀಷಿನವನ್ನೇ ಇವನು. ಯಾವುದೇ ಚಿಲ್ಲರೆ ದೇವರ ಶಾಪದಿಂದ ಇಂಡಿಯಾದಲ್ಲಿ ದ್ರಾವಿಡನಾಗಿ. ಒಕ್ಕಲಿಗನಾಗಿ ಜನಿಸಿದ್ದಾನೆ’ – ಎಂದು ನೋಡಿದವರಿಗೆಲ್ಲ ಅನ್ನಿಸಬೇಕು ಅಂತ ಸಿಡಿಎನ್. ನಿರೀಕ್ಷೆ.

ಆದರೆ ನೋಡಿದವರಿಗೆಲ್ಲ ಹಾಗೆ ಅನ್ನಿಸುತ್ತಲೇ ಇರಲಿಲ್ಲ. ಪಾಪ. ಈ ಮನುಷ್ಯ ಯಾಕೆ ಹೀಗೆ ಪರಕಾಯ ಪ್ರವೇಶಕ್ಕಾಗಿ ಪರದಾಡುತ್ತಿದ್ದಾನೆ – ಅಂತ ನಾನೇ ಅನೇಕ ಸಲ ಅಂದುಕೊಂಡದ್ದುಂಟು. ಮೈಸೂರು – ಕನ್ನಡನಾಡಿನ ಸಾಂಸ್ಕೃತಿಕ ರಾಜಧಾನಿ. ಕನ್ನಡ ಸಾಹಿತ್ಯದ ಆಗುಹೋಗುಗಳಲ್ಲಿ ಮೈಸೂರು ಮೊದಲಿನಿಂದಲೂ ಭಾಗಿಯಾಗಿದೆ. ಆದರೆ ಸಿಡಿಎನ್ ಮಾತ್ರ ತಮ್ಮ ಇಂಗ್ಲೀಷ್ – ಸಾಹಿತ್ಯ – ಸಂಸ್ಕೃತಿ ಕುರಿತ ವ್ಯಾಮೋಹದಿಂದಾಗಿ ಕನ್ನಡ ಬದುಕಿಗೆ ಪರಕೀಯರಾಗಿಯೇ ಉಳಿದರು. ಆಧುನಿಕ ಕನ್ನಡ ಸಾಹಿತ್ಯವನ್ನು ರೂಪಿಸಿದ ಪ್ರಮುಖರಲ್ಲಿ ವೃತ್ತಿಯಿಂದ ಇಂಗ್ಲಿಷ್ ಪ್ರಧ್ಯಾಪಕರಾಗಿರುವವರ ಪಾಲು ಬಹಳ ದೊಡ್ಡದು. ಬಿ.ಎಂ.ಶ್ರೀ ಅವರಿಂದಲೇ ಈ ಪರಂಪರೆ ಪ್ರಾರಂಭವಾಗಿದೆ. ಸಿಡಿಎನ್ ಒಂದು ದ್ವೀಪವಾಗಿಯೇ ಉಳಿದದ್ದು ಸೋಜಿಗದ ಸಂಗತಿ.

*

ಅವರ ಈ ಅಲರ್ಜಿಗೆ ತುತ್ತಾದದ್ದು ಭಾರತೀಯ ಲೇಖಕರ ಇಂಗ್ಲಿಷ್ ಸಾಹಿತ್ಯ ಕೂಡ. ಅವರನ್ನು ಬಹಳ ವರ್ಷಗಳವರೆಗೆ ಇವರು ಕಣ್ಣೆತ್ತಿ ನೋಡುತ್ತಿರಲಿಲ್ಲ. (ನೋಡುವಂಥದು ಕೂಡ ಹೆಚ್ಚು ಇರಲಿಲ್ಲ.) ಹಾಗೆಯೇ ಭಾಷಾಶಾಸ್ತ್ರ. ಶೈಲಿಶಾಸ್ತ್ರಗಳ ಮೂಲಕ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುವ ಪದ್ಧತಿಗೂ ಅವರು ವಿರೋಧವಾಗಿದ್ದರು. ಆದರೆ ಕೊನೆಕೊನೆಯ ವರ್ಷಗಳಲ್ಲಿ ಸಿಡಿಎನ್ ಈ ಎರಡೂ ವಲಯಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ. ಅವರ ಸ್ವಭಾವಕ್ಕನುಗುಣವಾಗಿ, ಅವುಗಳ ಉಗ್ರ ಪ್ರತಿಪಾಲಕರಾದರು. ‘ಭಾರತೀಯ’ ಸಂಸ್ಕೃತಿಯ ವಕೀಲರಾದರೂ. ಅವರು ಮೈಸೂರಲ್ಲಿ ಸ್ಥಾಪಿಸಿದ ‘ಧ್ವನ್ಯಾಲೋಕ’ ಅಂತರಾಷ್ಟ್ರೀಯ ಖ್ಯಾತಿ ಗಳಿಸಿದ್ದು ಇತಿಹಾಸ. ಜಗತ್ತಿನ ಅನೇಕ ಯುನಿವರ್ಸಿಟಿಗಳೊಂದಿಗೆ ಸಿಡಿಎನ್ ಅವರದು ಅನೇಕ ನೆಲೆಗಳ ಸಂಪರ್ಕ.

ಮೊನ್ನೆ ಮಾತಿನ ಮಾತಿನಲ್ಲಿ, ಅನಂತಮೂರ್ತಿಯವರು ಯಾರದೋ ಮುಂದೆ ಎಂದೋ ಆಡಿದ ಮಾತಿನ ಪ್ರಸ್ತಾಪ ಬಂತು. ನೋಡಯ್ಯ, ನಾವು ಇಂಡಿಯಾದ ಒಳಗಡೆ ನಮ್ಮ ಹಿಂದೂ ಸಮಾಜದ ಕರಾಳ ಮುಖದ ಬಗ್ಗೆ ಏನೇ ಟೀಕೆ ಮಾಡಬಹುದು; ಆದರೆ ಹೊರಗಡೆಗೆ ಹೋದಾಗ ಮಾತ್ರ ನಮ್ಮ ಭಾರತೀಯ ಸಂಸ್ಕೃತಿಯನ್ನು ಎತ್ತಿ ಹಿಡಿಯಲೇಬೇಕು. ವಸಾಹತುವಾದ ಜೊತೆಗಿನ ನಮ್ಮ ಹೋರಾಟಕ್ಕೆ ಇದೇ ಕಾರ್ಯತಂತ್ರ (ಸ್ಟ್ರಾಟೆಜಿ) ಸೂಕ್ತ … ಇತ್ಯಾದಿ.

ಅನಂತಮೂರ್ತಿಯವರೂ ಸಿಡಿಎನ್ ಶಿಷ್ಯರೇ ಅಂತ ನನ್ನ ಭಾವನೆ. ಈ ಅಂತಾರಾಷ್ಟ್ರೀಯ ಚಲಾವಣೆಯ ವಿಷಯದಲ್ಲಿ ಮಾತ್ರ ಯಾರು ಗುರುವೋ ಯಾರು ಶಿಷ್ಯರೋ ಹೇಳಲಿಕ್ಕಾಗದು.

*

ಒಂದು ಪ್ರಸಂಗ ಈಗಲೂ ನೆನಪಿದೆ.

ಇಂಥದೇ ಒಂದು ವಿಷಯದ ಬಗ್ಗೆ ಸಿಡಿಎನ್ ಉಪನ್ಯಾಸ ನೀಡಿದ್ದರು. ಅನಂತರ ಖಾಸಗೀ ಚರ್ಚೆ. ಭಾರತೀಯ ಪರಂಪರೆಯಲ್ಲಿ ಮಹಿಳೆಗೆ ನೀಡಲಾಗಿದ್ದ ‘ಉನ್ನತ’ ಸ್ಥಾನದ ಬಗ್ಗೆ ಉತ್ಸಾಹದಿಂದ ಮಾತಾಡುತ್ತ, ‘ನೋಡಿ, ಅಹಲ್ಯೆಯ ಸಮಾಚಾರ. ತಾರಾಮಂಡಲದಲ್ಲಿ ಒಂದು ನಕ್ಷತ್ರಕ್ಕೆ ಅಹಲ್ಯೆಯ ಹೆಸರು ಕೊಟ್ಟಿದ್ದಾರೆ ನಮ್ಮ ಪೂರ್ವಜರು. What a great thing, ನಾನೆಂದೆ: ಹೌದು ಸಾರ್, ಭೂಮಿಯ ಮೇಲೆ ಅಹಲ್ಯೆಯನ್ನು ಕಲ್ಲಾಗಿ ಮಾಡಿದ್ದಾರಲ್ಲ! ಇದಕ್ಕೆ ಏನಂತೀರಿ?

ಸಿಡಿಎನ್ ಏನೂ ಅನ್ನಲಿಲ್ಲ. ಅವರು ಮೌನದಲ್ಲಿ ಮುಳುಗಿದ್ದರು.

-೨೦೦೫