ಮೊನ್ನೆ ಮೊನ್ನೆ – ನವೆಂಬರ್ ೧೦ ರಂದು ಮೈಸೂರಿನಲ್ಲಿ ಹಾಮಾನಾ ತೀರಿಕೊಂಡ ಸುದ್ದಿ ನನಗೆ ಮರುದಿನ ಪತ್ರಿಕೆಗಳ ಮೂಲಕವೇ ಗೊತ್ತಾದದ್ದು. ನನ್ನ ಫೈಲು ಬಿಚ್ಚಿ. ಅವರಿಂದ ತೀರ ಇತ್ತೀಚಿಗೆ – ಅಂದರೆ ಜುಲೈ ೧೩ರಂದು – ಬಂದ ಕಾರ್ಡು ತೆಗೆದು ಎದುರಿಗಿಟ್ಟುಕೊಂಡೆ. ಅಸ್ಪಷ್ಟವಾಗಿ ಮೂಡಿದೆ ಅವರ ಮನೆ ವಿಳಾಸದ ರಬ್ಬರ್ ಮೊಹರು: ಕನ್ನಡ ಅಂಕಿಗಳಲ್ಲಿ ತಾರೀಖು: ಎಂಟು – ಹತ್ತು ಸಾಲಿನ ಒಕ್ಕಣಿಕೆ: ಆಯ್ದು ಕೆಲವೇ ಶಬ್ದಗಳಲ್ಲಿ ಸ್ಪಷ್ಟವಾದ ನಿಲುವು: ಅದೇ ಅದೇ ಅವರ, ಸ್ನೇಹ, ಆತ್ಮೀಯತೆ ……..

ನಾಡಿನಾದ್ಯಂತ ಸಾವಿರಾರು ಸಾಹಿತಿಗಳು, ಸಾಹಿತ್ಯಪ್ರಿಯರು ಅಂದು ಮುಂಜಾನೆ ನನ್ನ ಹಾಗೇ ಮಾಡಿರಬೇಕು. ಹಾಮಾನಾ, ಸಾಹಿತ್ಯಪ್ರಿಯರು ಅಂದು ಮುಂಜಾನೆ ಸಾವಿರಾರು ಅಂಚೆ ಕಾರ್ಡುಗಳು ಇಂದು ಅವರ ನೆನಪಿನ ತುಣುಕುಗಳಾಗಿ ನಮ್ಮ ನಮ್ಮ ಮನೆಗಳಲ್ಲಿ ಹಾರಾಡುತ್ತಿವೆ. ಇತ್ತೀಚಿನ ವರ್ಷಗಳು ಅನಾರೋಗ್ಯದ ನಡುವೆಯೂ ಅವರು ಪತ್ರಿಕೆಗಳಿಗೆ ಅಂಕಣ ಬರೆಯುವುದು ನಿಲ್ಲಿಸಲಿಲ್ಲ. ಸಭೆ – ಸಮಾರಂಭಗಳಲ್ಲಿ ಪಾಲುಗೊಳ್ಳುವದನ್ನು ಕಡಿಮೆ ಮಾಡಲಿಲ್ಲ: ಸಣ್ಣವರಿರಲಿ, ದೊಡ್ಡವರಿರಲಿ ಯಾರೇ ಪತ್ರ ಬರೆದರೂ ಅವರಿಗೆ ತಕ್ಷಣವೇ ಕಾರ್ಡು ಬರೆಯುವ ಸೌಜನ್ಯವನ್ನು ಬಿಟ್ಟುಕೊಡಲಿಲ್ಲ.

ನಿಧನರಾದಾಗ ಅವರ ವಯಸ್ಸು ೬೯. ಅವರ ವಾರಿಗೆಯ ಅನೇಕ ಸಾಹಿತಿಗಳು ನಮ್ಮೊಂದಿಗಿದ್ದಾರೆ. ಆದರೆ ಜನರೊಂದಿಗೆ ಹಾಮಾನಾ ಬೆರೆತಷ್ಟು ಅವರಾರೂ ಬೆರೆಯುವುದಿಲ್ಲ. ತಮ್ಮದೇ ಆದ ಅನನ್ಯ ವ್ಯಕ್ತಿತ್ವಗಳ ಘನಗಾಂಭಿರ್ಯದ ವಿಚಿತ್ರ ಭ್ರಮಾಲೋಕದಲ್ಲಿ ವಿಹರಿಸುವ ಸಾಹಿತಿಗಳ ಸಂಖ್ಯೆಯೇ ನಮ್ಮಲ್ಲಿ ಹೆಚ್ಚು ಪ್ರತಿವರ್ಷದ ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುತ್ತಿದ್ದ ಹಾಮಾನಾ, ಬರಿ ವೇದಿಕೆಯ ಆಸನಗಳಿಗೇ ಅಂಟಿಕೊಳ್ಳದೆ ಚಹದಂಗಡಿಗಳಲ್ಲಿ, ಪುಸ್ತಕದ ಮಳಿಗೆಗಳಲ್ಲಿ, ಸಮ್ಮೇಳನದ ಅಂಗಳದಲ್ಲಿ ಅರಸುವ ಕಾಲುಗಳಿಗೆ ಸಿಗುವ ಬಳ್ಳಿಯಂತಿದ್ದರು. ಸಂತೆಯೊಳಗಿದ್ದರೂ ತಟ್ಟನೆ ಗುರುತು ಸಿಗುವಂತಿದ್ದ ರೂಪ: ಬಿಳಿಯ ಕೇಶರಾಶಿ, ಉದ್ದನ್ನ ಜುಬ್ಬ, ಮುಖದಗಲಕ್ಕೆ ಹಬ್ಬಿಕೊಂಡ ಮುಗುಳ್ನಗೆ, ಎಲ್ಲರನ್ನೂ ಪ್ರೀತಿಯಿಂದ ಮಾತಾಡಿಸುವ ಆತ್ಮೀಯತೆ.

ಹೌದು, ಹಾಮಾನಾ ಅಂಥವರು, ಹಾಮಾನ ಒಬ್ಬರೇ.

ಬದುಕಿನೊಂದಿಗೆ, ಬದುಕಿದವರೊಂದಿಗೆ ಇದ್ದ ಇಂಥ ನಿರಂತರ ಸಂಪರ್ಕದಿಂದಾಗಿಯೇ ಹಾಮಾನಾ ಅವರು ಎಲ್ಲ ಸಮಕಾಲೀನ ಸಾಂಸ್ಕೃತಿಕ, ರಾಜಕೀಯ ಮತ್ತು ಸಾಹಿತ್ಯಿಕ ವಿಧ್ಯಮಾನಗಳ ಬಗ್ಗೆ ಸವಿವರವಾಗಿ, ಕರಾರುವಾಕ್ಕಾಗಿ ಬರೆಯಬಲ್ಲವರಾಗಿದ್ದರು. (ಈ ಬಗೆಯ ‘ಆಲ್ ರೌಂಡರ್’ ಗುಣ ನಮ್ಮ ನವೋದಯ ಕಾಲದ ಸಾಹಿತಿಗಳಿಗೆ ಮಾತ್ರ ಇತ್ತು.) ಹೀಗಾಗಿಯೇ ಅವರು ಅನೇಕ ಪ್ರಮುಖ ಪತ್ರಿಕೆಗಳಿಗೆ ಬರೆದ ಅಂಕಣಗಳು ಒಂದು ನೆಲೆಯಲ್ಲಿ ನಮ್ಮ ನಾಡಿನ ಸಮಕಾಲೀನ ಇತಿಹಾಸದ ದಾಖಲೆಗಳೇ. ತಮ್ಮನ್ನು ತಾವು ಮಹಾ ವಿಮರ್ಶಕರೆಂದೇನೂ ಅವರು ತಿಳಿದುಕೊಂಡಿರಲಿಲ್ಲ. ಆದರೆ ಕನ್ನಡ ಸಾರಸ್ವತ ಲೋಕದ ಯಾವುದೋ ಮೂಲೆಯಲ್ಲಿ ಸಾಹಿತ್ಯ ಸೃಷ್ಟಿ ಮಾಡುತ್ತ. ಜನಮನ್ನಣೆ ಇಲ್ಲದೆ ಕೀಳರಿಮೆ ಬೆಳೆಸಿಕೊಂಡಿದ್ದ ಅನೇಕ ಪ್ರತಿಭೆಗಳನ್ನು ಅಂಕಣಗಳ ಮೂಲಕ ನಮಗೆಲ್ಲ ಪರಿಚಯ ಮಾಡಿಸಿದವರು ಹಾಮಾನಾ. ಅದಕ್ಕಾಗಿ ನಾವೆಲ್ಲ ಅವರಿಗೆ ಕೃತಜ್ಞರು.

‘ಅಂಕಣ’ (ಕಾಲಂ) ಎಂಬ ಬರವಣಿಗೆಯ ರೀತಿಗೆ ಸಾಹಿತ್ಯ – ಪ್ರಕಾರದ ಗೌರವ, ಘನತೆ, ಬಂದದ್ದು ಹಾಮಾನಾ ಅವರಿಂದಲೇ ಕೇಂದ್ರ ಸಾಹಿತ್ಯ ಆಕಾಡೆಮಿಯ ಪ್ರಶಸ್ತಿ ಅವರಿಗೆ ಲಭಿಸಿದ್ದು ಈ ಕಾರಣಕ್ಕಾಗಿಯೇ. ಅಂಕಣದ ಮುಖ್ಯ ನೆಲೆ ಹಾಗೂ ಗುಣ ಸಮಕಾಲೀನತೆ: ಇವತ್ತಿನ ಆಗುಹೋಗುಗಳು. ಆದರೆ ಇಂದಿನ ಚುಂಗು ಹಿಡಿದುಕೊಂಡು ನಿನ್ನೆ – ನಾಳೆಗಳ ಕ್ಷಿತಿಜಗಳ ಬೆನ್ನು ಹತ್ತಿ ವರ್ತಮಾನದ ‘ಕ್ಷಣ’ಕ್ಕೆ ಭೂತ – ಭವಿಷ್ಯಗಳ ಸಾರ್ವಕಾಲಿಕತೆಯ ಆಯಾಮ ಮೂಡಿಸುವ ಸಾಧ್ಯತೆ ಈ ಪ್ರಕಾರಕ್ಕಿದೆ.

ಈ ಸಾಧ್ಯತೆಗಳನ್ನು ಸಾರ್ಥಕವಾಗಿ ಬಳಸಿಕೊಂಡವರು ಹಾಮಾನಾ. ಆದರೆ ಅಷ್ಟೇ ಅವರ ಮಿತಿಯಾಗಿರಲಿಲ್ಲ. ಪಂಜಾಬಿ ಕವಿ ಅಮೃತಾ ಪ್ರೀತಮ್ ಅವರ ಕವನಗಳನ್ನು ಸೂಕ್ಷ್ಮ, ಸುಕೋಮಲ ಶೈಲಿಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದ ಹಾಮಾನಾ ತಮ್ಮ ಒಳಗೆ ಅಳದಲ್ಲಿ ಜುಳುಜುಳು ಹರಿಯುತ್ತಿದ್ದ ಕಾವ್ಯದ ಸೆಲೆಯನ್ನು ನಮಗೆ ತೋರಿಸಿದ್ದರು.

ಆಧುನಿಕ ಕನ್ನಡ ಸಾಹಿತ್ಯದ ತೊಂಬತ್ತು ವರ್ಷಗಳಲ್ಲಿ ಕಾವ್ಯಶೈಲಿ ಸಾಕಷ್ಟು ಬದಲಾಗಿದೆ; ಆದರೆ ಗದ್ಯದ ಶೈಲಿ ಮಾತ್ರ ಕತೆ, ಕಾದಂಬರಿ, ಪ್ರಬಂಧ ಇತ್ಯಾದಿಗಳ ಮೂಲಕ ಅಗಾಧವಾಗಿ, ವೈವಿಧ್ಯಮಯವಾಗಿ ಬಿಚ್ಚಿಕೊಳ್ಳುತ್ತಲೇ ಇದೆ. ಅಂಕಣ ಬರಹಗಳ ಮೂಲಕ ಹಾಮಾನಾ ಕನ್ನಡದ ಗದ್ಯಕ್ಕೆ ಹೊಸ ಹೊಣೆಗಾರಿಕೆಯನ್ನು ವಹಿಸಿಕೊಟ್ಟರು: ಹೊಸ ಸೂಕ್ಷ್ಮಗಳನ್ನು ಮೂಡಿಸಿ, ಹೊಸ ವ್ಯಕ್ತಿತ್ವವನ್ನು ತಂದುಕೊಟ್ಟರು.

*

ಕನ್ನಡಕ್ಕೆ ಒಂದು ಮಂತ್ರಶಕ್ತಿಯನ್ನು ತಂದುಕೊಟ್ಟ ರಾಷ್ಟ್ರಕವಿ ಕುವೆಂಪು ಅವರ ಶಿಷ್ಯರಾಗಿದ್ದರು ಹಾಮಾನಾ. ಇಂಥ ಮತ್ತೊಬ್ಬ ಶಿಷ್ಯರು ದೇಜಗೌ. ದಕ್ಚಿಣ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾದ ಮೈಸೂರಿನ ಮೇಲೆ ಇಂದಿಗೂ ಕುವೆಂಪು ಪ್ರಭಾವ ದಟ್ಟವಾಗಿದೆ, ಕುವೆಂಪು ಸೃಷ್ಟಿ ಮೈಸೂರು ವಿಶ್ವವಿದ್ಯಾಲಯ: ಮಾನಸಗಂಗೋತ್ರಿ ಈ ಗಂಗೋತ್ರಿಯಲ್ಲಿ ಉದ್ಭವವಾದ ಎರಡು ಪ್ರಧಾನ ತೊರೆಗಳು ದೇಜಗೌ ಮತ್ತು ಹಾಮಾನಾ. ಒಬ್ಬನೇ ಗುರುವನ್ನು ಆರಾಧಿಸುತ್ತಿದ್ದರೂ, ಒಂದೇ ಸಮುದಾಯದವರಾಗಿದ್ದರೂ ಇವರಿಬ್ಬರ ನಡುವಿನ ವ್ಯತ್ಯಾಸ, ಅವರ ಪರಸ್ಪರ ಪೈಪೋಟಿ ನಾಡಿಗೆಲ್ಲ ಗೊತ್ತಿರುವ ರಹಸ್ಯಗಳೇ ಆಗಿವೆ. ಕನ್ನಡತನದ ವಿಷಯ ಬಂದಾಗ ಮಾತ್ರ ಇಬ್ಬರೂ ಉಗ್ರಗಾಮಿಗಳೇ: ಹಳೇ ಮೈಸೂರು ಭಾಗದಲ್ಲಿ ನಿರಂತರವಾಗಿ ಉರಿಯುತ್ತಿರುವ ಕನ್ನಡದ ಜ್ಯೋತಿಗೆ ದೇಜಗೌ. ಹಾಮಾನಾ ಇಬ್ಬರು ಸಮಾನವಾಗಿ ಎಣ್ಣೆ ಸುರಿದ ಮಹಾನುಭಾವರು. ಕುವೆಂಪು ಅವರ ಎರಡು ಕಣ್ಣುಗಳು: ಆದರೆ ಒಂದು ಕಣ್ಣು ಕಾಶಿಯ ಕಡೆಗೆ, ಇನ್ನೊಂದು ರಾಮೇಶ್ವರದ ಕಡೆಗೆ.

ಹಾಮಾನಾ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗಿನ ಒಂದು ಪ್ರಸಂಗ: ಸಮಾರಂಭವೊಂದರಲ್ಲಿ ಗಣ್ಯರೊಬ್ಬರು ಇಂಗ್ಲಿಷಿನಲ್ಲಿ ಭಾಷಣ ಚಾಲೂ ಮಾಡಿದರು. ಹಾಮಾನಾ ಪ್ರೇಕ್ಷಕ ವರ್ಗದಲ್ಲಿದ್ದರು. ತಾವು ‘ಕುಲಪತಿ’ ಎಂಬ ಸ್ಥಾನದ ಸೌಜನ್ಯದ ಮಿತಿಯನ್ನು ಮೀರಿಯೂ ಹಾಮಾನಾ ಎದ್ದು ನಿಂತು ಕೇಳಿದರಂತೆ: ‘ಮಾನ್ಯರೇ, ನೀವು ನಾವು ಎಲ್ಲರೂ ಕನ್ನಡಿಗರು. ನೀವು ಕನ್ನಡದಲ್ಲಿಯೇ ಮಾತಾಡಬೇಕು.

ಇದು ಹಾಮಾನಾ ಗಟ್ಟಿತನ. ಮುಖ ನೋಡಿ ಎಂದೂ ಮಣೆ ಹಾಕಲಿಲ್ಲ ಅವರು. ೧೯೮೦ರ ದಶಕದ ಪ್ರಾರಂಭದಲ್ಲಿ ಈ ನಾಡು ಕಂಡ ಅಪೂರ್ವ ಚಳವಳಿ: ಗೋಕಾಕ್ ಚಳವಳಿ . ಗೋಕಾಕ್ ಸೂತ್ರದ ಬಗ್ಗೆ ಗುಂಡೂರಾವ್ ಸರಕಾರ ತೆಗೆದುಕೊಂಡ ನಿರ್ಣಯವನ್ನು ಪ್ರಪ್ರಥಮವಾಗಿ ಸ್ವಾಗತಿಸಿದವರಲ್ಲಿ ಹಾಮಾನಾ ಒಬ್ಬರಾಗಿದ್ದರು. (ಹಂಪನಾ ಮತ್ತು ವಾಟಾಳ್ ನಾಗರಾಜ್ ಇನ್ನಿಬ್ಬರು) ಇದರಿಂದ ಕನ್ನಡ ಚಳವಳಿಗಾರರು ಮೂವರು ‘ನಾ’ ಗಳು ಎಂದು ಮೂದಲಿಸಿ, ಈ ಮೂವರನ್ನು ಸಿಕ್ಕಾಪಟ್ಟೆ ಹೀಯಾಳಿಸಿದ್ದರು. ಚಳವಳಿ ತಣ್ಣಗಾಗಿ ಅನೇಕ ವರ್ಷಗಳ ನಂತರವೂ ನನಗೆ ಅಚ್ಚರಿಯಾದದ್ದು – ಹಾಮಾನಾ ತಮ್ಮ ನಿಲುವನ್ನು ಬದಲಿಸಿಕೊಂಡಿರಲಿಲ್ಲ! ಅವರ ಹೆಚ್ಚುಗಾರಿಕೆ ಎಂದರೆ ಎಂಥ ಭಿನ್ನಮತ, ಭಿನ್ನಾಭಿಪ್ರಾಯ ಇದ್ದರೂ ಅವರೊಂದಿಗೆ ಬಿಚ್ಚು ಮನಸ್ಸಿನೊಂದೆಗೆ ಚರ್ಚಿಸಬಹುದಾಗಿತ್ತು. ಸ್ವಲ್ಪ ಟೀಕೆ ಮಾಡಿದರೂ ಸಣ್ಣ ಹುಡುಗರಂತೆ ಸೆಟಗೊಂಡ ಚಾಳಿ ಟೂ ಬಿಡುವ ಅನೇಕ ಹಿರಿಯ ಸಾಹಿತಿಗಳೊಡನೆ ಹೋಲಿಸಿದಾಗ ಹಾಮಾನಾ ಅವರದು ನಿಜವಾಗಿಯೂ ಪ್ರಜಾಸತ್ತಾತ್ಮಕವಾದ ವ್ಯಕ್ತಿತ್ವ.

*

ಒಂದು ಕಾಲಕ್ಕೆ ಸಾಹಿತ್ಯ ಕ್ಷೇತ್ರ ಮತ್ತು ಅದಕ್ಕೆ ಸಂಬಂಧಪಟ್ಟ ಅನೇಕ ಅಧಿಕಾರ ಸ್ಥಾನಗಳು ಬ್ರಾಹ್ಮಣ ವರ್ಗಕ್ಕೆ ಮಾತ್ರ ಮೀಸಲಾಗಿದ್ದವು. ಬರಬರುತ್ತ ಸಾಮಾಜಿಕ ವಿನ್ಯಾಸದಲ್ಲಿ ಬದಲಾವಣೆಯಾದಂತೆ ಮಧ್ಯಮ ವರ್ಗಗಳಿಗೆ ಈ ವಲಯದಲ್ಲಿ ಪಾಲು ಸಿಗತೊಡಗಿತ್ತು. ಇಂಥ ಸಂಕ್ರಮಣ ಸನ್ನಿವೇಶದಲ್ಲಿ ಪ್ರವರ್ಧಮಾನರಾಗಿದ್ದ ಹಾಮಾನಾ ಅವರು ಕೇಂದ್ರ ಹಾಗೂ ರಾಜ್ಯ ಸಾಹಿತ್ಯ ಅಕಾಡೆಮಿಗಳಲ್ಲಿ. ಜ್ಞಾನಪೀಠ ಸಲಹಾ ಸಮಿತಿಗಳಲ್ಲಿ ಸ್ಥಾನ ಪಡೆದು ಪುರಸ್ಕಾರ – ಪ್ರಶಸ್ತಿಗಳನ್ನು ಕೊಡುವ, ಕೊಡಿಸುವ ಅವಕಾಶ ಪಡೆದಿದ್ದರು. ಅವರು ತಮ್ಮದೇ ಆದ ‘ಶಿಷ್ಯ- ಗಣ’ ಹೊಂದಿದ್ದರೆಂದೂ ಅಪಾದನೆಗಳಿವೆ. ಆದರೆ ಇದು ಮಾಸ್ತಿ – ಕುವೆಂಪು- ಬೇಂದ್ರೆ ಕಾಲದಿಂದ ಸುರುವಾಗಿ ಈಗಿನ ಅನಂತಮೂರ್ತಿ – ನಾಡಿಗ – ಕಂಬಾರರ ಕಾಲದವರೆಗೂ ಅನೂಚಾನವಾಗಿ ನಡೆದು ಬಂದಿರುವ ‘ಪದ್ದತಿ’ ಆಗಿರುವುದರಿಂದ ಹಾಮಾನಾ ಅವರೊಬ್ಬರನ್ನೆ ಪ್ರತ್ಯೇಕಿಸಿ ಮಾತಾಡುವುದು ತಪ್ಪಾಗುತ್ತದೆ ತಮ್ಮ ಮಾತು ನಡೆಯುವಾಗ ಎಲ್ಲರೂ ತಮ್ಮ ಮಾತು ನಡೆಸುವವರೇ. ಆದರೆ ಹಾಮಾನಾ ಸೂಕ್ಷ್ಮಸಂವೇದನೆಯ ಗುಣಗ್ರಾಹಿ ವ್ಯಕ್ತಿಯಾಗಿದ್ದರಿಂದ ಈ ನಿಟ್ಟಿನಲ್ಲಿ ಅನಾಹುತಗಳೇನೂ ಸಂಭವಿಸಿಲ್ಲ ಎಂದೇ ಹೇಳಬೇಕು.

*

ನವೋದಯ ಕಾಲದ ಪೀಳಿಗೆಯ ನಂತರ ಚಾಲ್ತಿಗೆ ಬಂದ ಹಾಮಾನಾ ಅವರಿಗೆ ಅವರ ಸಾಹಿತ್ಯಿಕ ಕೃಷಿಯ ಬಗ್ಗೆ ಸಮಾಕಾಲೀನ ‘ನವ್ಯ’ ದ ಸಂದರ್ಭದಲ್ಲಿ ಅನೇಕ ಕಾರಣಗಳಿಂದಾಗಿ ‘ವಸ್ತುನಿಷ್ಠ’ ಎನ್ನಬಹುದಾದ ವಿಮರ್ಶೆಯ ನ್ಯಾಯ ದೊರೆಯಲಿಲ್ಲ. ರಾಜಕೀಯದ ಸಂತೆ – ಗದ್ದಲದಲ್ಲಿ ಸಾಹಿತ್ಯದ ಸಾಮಾನಿಗೆ ಒಮ್ಮೊಮ್ಮೆ ಸರಿಯಾದ ಬೆಲೆ ಸಿಗುವುದೇ ಇಲ್ಲ. ಅನಂತರದ ದಲಿತ – ಬಂಡಾಯ ಸಂದರ್ಭದಲ್ಲೂ ಪರಿಸ್ಥಿತಿಯಲ್ಲಿ ವಿಶೇಷ ಬದಲಾವಣೆಯಾಗಲಿಲ್ಲ.

ಆದರೆ ಇಂದು ನುಡಿಯ ಮೂಲಕ ನಮ್ಮ ನಾಡನ್ನು ಕಟ್ಟಬೇಕು. ಈ ನಾಡಿಗೊಂದು ಅನನ್ಯ ವ್ಯಕ್ತಿತ್ವವನ್ನು ರೂಪಿಸಬೇಕು ಎಂಬ ವಿಚಾರಧಾರೆ ಬಲವಾಗುತ್ತಿರುವಾಗ, ಕನ್ನಡದ ಹಿತಾಸಕ್ತಿಗಳ ಬಲವಾದ ಪ್ರತಿಪಾದನೆಯನ್ನು ತಮ್ಮ ಮಾತು – ಬರಹ – ಕ್ರಿಯೆಗಳ ಮೂಲಕ ಮಾಡುತ್ತಿದ್ದ ಕನ್ನಡದ ಧಣಿ ಹಾಮಾನಾ ಅವರ ಅಪರೂಪದ ವ್ಯಕ್ತಿತ್ವವನ್ನು, ಅವರ ಸಾಹಿತ್ಯದ ಆಳ – ಅಗಲ – ಎತ್ತರಗಳನ್ನು ನಾವು ಮತ್ತೊಮ್ಮೆ ತೆರೆದು ನೋಡಬೇಕಾಗಿದೆ.

-೨೦೦೦