ಖಾಲಿ ಗದ್ದಲದ ಈ ನಾಡಿನ ಉದ್ದಗಲಕ್ಕೂ
ಈಗ ಶಾಂತಿ ನೆಲೆಸಿದೆ.
ನರನಾಡಿಯೆಲ್ಲ ನಿಂತೇ ಹೋದಂತಾಗಿ
ನಾವೆಲ್ಲ ಯೋಗಿಗಳಾಗಿದ್ದೇವೆ.
ಹಾದಿ ಮಾತು, ಬೀದಿ ಭಾಷಣಗಳ ಸದ್ದಡಗಿ
ಬೆಳೆಯುತ್ತಿದೆ.
ಹೆದ್ದಾರಿಯ ಮೇಲೆ ಕೆಟ್ಟು ನಿಂತ ಟ್ರಕ್ಕು ಕೂಡ
ನಾಡು ಮುನ್ನಡೆದಿದೆ – ಎಂಬ ಸಂದೇಶ ಹೊತ್ತಿದೆ.

೧೯೭೬ ರ ತುರ್ತು ಪರಿಸ್ಥಿತಿಯ ಆ ಕರಾಳ ದಿನಗಳಲ್ಲಿ – (ಸರಕಾರ ಸಂತ ವಿನೋಬಾ ಭಾವೆ ಅದಕ್ಕೆ ‘ಅನುಶಾಸನ ಪರ್ವ’ ಎಂದು ಕರೆದಿದ್ದರು!) ನಾನು ಬರೆದ ‘ಗಾಂಧೀ ಸ್ಮರಣೆಯ’ ಸಾಲುಗಳಿವು …..ದೇಶದಾದ್ಯಂತ ನನ್ನಂಥ ಸಾವಿರಾರು ಜನ ನಮ್ಮ ನಮ್ಮ ಮಿತಿಗಳನ್ನು ಮೀರಿ ಸಮಷ್ಟಿ ಆಂದೋಲನವೊಂದರಲ್ಲಿ ಪಾಲುಗೊಂಡ ರೋಮಾಂಚಕ ಸನ್ನಿವೇಶ ಅದು. ಅದರ ಹಿಂದಿನ ಚೈತನ್ಯ ಶಕ್ತಿ ಜೇಪಿ ಆಗಿದ್ದರು.

೧೧ ಅಕ್ಟೋಬರ್ ೨೦೦೧ ಜೇಪಿ ಬದುಕಿದ್ದರೆ ಇಂದು ನೂರು ವರ್ಷದವರಾಗಿರುತ್ತಿದ್ದರು. ಅವರು ಬದುಕಲಿಲ್ಲ. ಅವರ ಹೋರಾಟದ ಮೂಲಕವೇ ೧೯೭೭ ರಲ್ಲಿ ಅಧಿಕಾರಕ್ಕೆ ಬಂದವರು, ರಾಜಘಾಟದ ಮಹಾತ್ಮನ ಸಮಾಧಿ ಎದುರು ಒಕ್ಕಟ್ಟಿನ ಪ್ರತಿಜ್ಞೆ ಗೈದವರು ಮುಂದೆ ತಮ್ಮ ತಮ್ಮ ಪ್ರತಿಷ್ಠೆಯಾಗಿ ಮುಚ್ಚಿ ಮೂರು ಪಾಲಾಗುವಂತೆ ಹೊಡೆದಾಡಿದರು. ದೇಶದ ಯುವಶಕ್ತಿಯನ್ನು ಬಡಿದೆಬ್ಬಿಸಿ ಇತಿಹಾಸಕ್ಕೆ ಹೊಸ ತಿರುವು ಕೊಟ್ಟ ಜೇಪಿಯ ಕನಸನ್ನು ಇದೇ ದೇಶದ ಹಲವು ಮುದಿಯರು ಹಾಳುಗೆಡವಿದ್ದರು.

ಕೋಟಿಗೆ ಗುಲಾಬಿ ಹೂ ಸಿಗಿಸಿಕೊಂಡು ಆಗಸ್ಟ ೧೫ರ ಮಧ್ಯರಾತ್ರಿಯಲ್ಲಿ ಕೆಂಪುಕೋಟೆಯ ಮೇಲೆ ಜವಾಹರಲಾಲ ನೆಹರೂ ತ್ರಿವರ್ಣ ಧ್ವಜವನ್ನು ಹಾರಿಸುತ್ತಿದ್ದ ಗಳಿಗೆಯಲ್ಲಿ ಗಾಂಧೀಜಿ ದೂರದ ನೌಖಾಲಿಯಲ್ಲಿ ಹಿಂದು ಮುಸ್ಲಿಂ ಗಲಭೆಗಳಲ್ಲಿ ನಿರಾಶ್ರಿತರಾದವರ ಕಣ್ಣೀರು ಒರೆಸುತ್ತ ಕೋಲೂರುತ್ತ ಬಿಡಾರದಿಂದ ಬಿಡಾರಕ್ಕೆ ಅಲೆಯುತ್ತಿದ್ದರು. ಎಲ್ಲ ನೆಲೆಯ ಭ್ರಮೆಗಳೂ ಭಗ್ನಗೊಂಡ ಮಹಾತ್ಮನ ಆತ್ಮವನ್ನು ನೆಹರೂ ನೀತಿ ಕೊಂದು ಹಾಕಿತ್ತು. ಮರುವರ್ಷದ ಜನವರಿ ೨೮ ರಂದು ಹಿಂದೂ ಮತಾಂಧ ನಾಥುರಾಮ ಗೋಡ್ಸೆ ಕೊಂದು ಹಾಕಿದ್ದು ಭೌತಿಕ ದೇಹವನ್ನು ಮಾತ್ರ.

ಜೇಪಿ ಅಂತ್ಯ ಕೂಡ ಸುಖಮಯವಾಗಿರಲಿಲ್ಲ. ಜನಲೋಕ ಆಸ್ಪತ್ರೆಯಲ್ಲಿ ಈ ಲೋಕಾನಾಯಕನ ಆತ್ಮ ಚಡಪಡಿಕೆಯಿಂದಲೇ ಈ ಲೋಕ ತೊರೆದಿರಬೇಕು.

ಅಂದು ಗಾಂಧಿ ಇಂದು ಜೇಪಿ: ಇದು ಆ ಕಾಲದ ಒಂದು ಘೋಷಣೆಯಾಗಿತ್ತು. ಇತಿಹಾಸದ ವ್ಯಂಗ್ಯ ನೋಡಿರಿ. ಅಂದು ಗಾಂಧಿ ಮಹಾತ್ಮನನ್ನು ಹುತಾತ್ಮನನ್ನಾಗಿ ಮಾಡಿದ ಕೋಮುವಾದಿ ಶಕ್ತಿಗಳೇ ಜೇಪಿಗೆ ಕಿರಿ ಕಿರಿ ಮಾಡತೊಡಗಿದ್ದವು. ಕಾಂಗ್ರೆಸ್ಸೇತರ ಸರಕಾರವನ್ನು ಅಧಿಕಾರಕ್ಕೆ ತರಬೇಕೆಂಬ ತವಕದಲ್ಲಿ ಜೇಪಿ ಆಂದೋಲನದಲ್ಲಿ ಒಳಗೆ ಬಿಟ್ಟುಕೊಂಡ ಆರ್.ಎಸ್.ಎಸ್. – ಜನಸಂಘದ ಚೆಡ್ಡಿಗಳು. ಗಂಗೆಯ ಪುಣ್ಯ ಪ್ರವಾಹದಲ್ಲಿ ಮಿಂದು ತಮ್ಮೆಲ್ಲ ಪಾಪವನ್ನೂ ತೊಳಕೊಂಡ ಹಾಗೆ, ಪರಿಶುದ್ಧಾತ್ಮರಾಗಿ, ಗಾಂಧೀ ಹತ್ಯೆಯ ಪಾಪದ ಅಪವಾದದಿಂದ ಹೊರಬಂದು ತ್ರಿವಿಕ್ರಮನೋಪಾದಿಯಲ್ಲಿ ಬೆಳೆದು ನಿಂತಿದ್ದು ಜೇಪಿ ಕಟ್ಟಿದ ಜನತಾ ಪರಿವಾರದ ಕೋಟೆಯಲ್ಲಿ ಬಿರುಕು ಬಿಡಲು ಕಾರಣವಾಯಿತು.

ಆ ದಿನಗಳಲ್ಲಿ ನಾನು ಬರೆದು ಕೆಲವು ಸಾಲುಗಳಿವು:

ಜೇಪಿ ಅಮೃತ ಮಹೋತ್ಸವದಂದು ಪುರೋಹಿತ ಪಾದಗಳು
ಮನೆಮನೆಗೆ ಪಾದ ಬೆಳೆಸಿ
ಕ್ರಾಂತಿಯ ಮಾತ್ರೆ ಹಂಚುತ್ತಿವೆ.
ಸರ್ವೋದಯದ ತೆಂಗಿನಕಾಯಿಯ ಮೇಲೆ
ಸಂಪೂರ್ಣ ಕ್ರಾಂತಿಯ ಕಪ್ಪುರ ಉರಿದು
ಅಂಗೈಗಳೆಲ್ಲ ಕಪ್ಪಾಗುತ್ತಿವೆ.
ಫಂಡಿಗಾಗಿ ದಂಡು ಸುರುವಾಗಿದೆ.

ಅಂದು ಜನತೆಯ ಕಣ್ಣಲ್ಲಿ ‘ಸಭ್ಯ’ರೆನಿಸಿಕೊಂಡ ಕೋಮುವಾದಿಗಳು ಕೊನೆಗೂ ಜನತಾ ಪರಿವಾರವನ್ನು ನುಚ್ಚುನೂರು ಮಾಡಿದರು. ಬಾಬರಿ ಮಸೀದಿಯನ್ನು ಧ್ವಂಸ ಮಾಡಿ ದೇಶದ ‘ಸೆಕ್ಯುಲರ‍್’ ಸ್ವರೂಪಕ್ಕೆ ಮಸಿ ಬಳಿದರು.

ಕೇಂದ್ರದಲ್ಲಿ ಅಧಿಕಾರಕ್ಕೂ ಬಂದರು. ಆದರೆ ದುರಂತವೆಂದರೆ ಮೊದಲಿನ ಜನತಾ ಪರಿವಾರದ ಅನೇಕ ಸೋಶಲಿಸ್ಟ, ಪ್ರಗತಿಪರ, ಕೋಮು ವಿರೋಧಿ ಧುರೀಣರು ಇಂದು ಎನ್.ಡಿ.ಎ ಸರಕಾರದಲ್ಲಿ ಪಾಲುಗೊಂಡು ತಮ್ಮ ಕರಾಳ ಸ್ವರೂಪವನ್ನು ಬಯಲು ಮಾಡಿಕೊಂಡದ್ದು.

ನನಗೆ ಆಗೀಗ ಅನ್ನಿಸುವುದು: ಮಹಾತ್ಮಗಾಂಧಿ, ಲೋಕನಾಯಕ ಜೇಪಿಯಂಥವರು ತಮಗೆ ಅಧಿಕಾರ ಬೇಡ’ ಎಂಬ ‘ತ್ಯಾಗ’ ಮನೋಭಾವದಿಂದಾಗಿ ದೇಶಕ್ಕೆ ಕೇಡನ್ನೇ ಮಾಡಿದರು. ೧೯೪೭ ರಲ್ಲಿ ಮಹಾತ್ಮಗಾಂಧಿ ನಮ್ಮ ಮೊಟ್ಟ ಮೊದಲ ಪ್ರಧಾನಿಯಾಗಿದ್ದರೆ ಇಂದಿರಾಗಾಂಧಿಯಂಥ ಕರಾಳ ನಾಯಕಿ ಉದ್ಭವಿಸುತ್ತಲೇ ಇರಲಿಲ್ಲ. ಹೋಗಲಿ. ೧೯೭೭ ರಲ್ಲಿ ಜೇಪಿ ನಮ್ಮ ಪ್ರಧಾನ ಮಂತ್ರಿಯಾಗಿ ದೇಶವನ್ನು ಮುನ್ನಡೆಸಿದ್ದರೆ ಬಿಜೆಪಿಯಂಥ ಫ್ಯಾಸಿಸ್ಟ್ ಶಕ್ತಿ ತಲೆ ಎತ್ತುತ್ತಿರಲಿಲ್ಲ. ನಾವು ಇತಿಹಾಸದಲ್ಲಿ ಕಂಡ ಕ್ರಾಂತಿಗಳಲ್ಲೆಲ್ಲ ಮುಂಚೂಣಿ ನಾಯಕರು ಕ್ರಾಂತಿಯ ನಂತರವೂ ತಮ್ಮ ಜವಾಬ್ದಾರಿಯನ್ನು ಅರಿತುಕೊಂಡು ಜನತೆಯನ್ನು ಮುನ್ನಡೆಸಿದ್ದಾರೆ. ಮವೋ, ಹೋಚಿ ಮಿನ್, ಫಿಡಲ್ ಕ್ಯಾಸ್ಟ್ರೋ …. ಇಂಥ ಅನೇಕ ಹೆಸರುಗಳು…..

*

ಸಾಯಿಬಾರದ ವಯಸ್ಸಿನಲ್ಲಿ ಜೇಪಿ ಸತ್ತಾಗ ಬರೆದ ಕೆಲವು ಸಾಲುಗಳಿವು:

ಸಾಯಬೇಕಾದವರು ಸಾಲಗಟ್ಟಿ ನಿಂತಾಗ
ಎಷ್ಟು ಅವಸರದಿಂದ ಸತ್ತಿ ನೀನು.
ಮೈಯಾಗಿನ ಎಣ್ಣೆಲ್ಲ ಬತ್ತಿ ಹೋಗಿದ್ರೂನು
ಕಡಿತನಕ ಕರಕಾದ ಬತ್ತಿ ನೀನು.
ಜೇಪಿಯ ಹುಟ್ಟುಹಬ್ಬದ ದಿನದಂದು ಅವರ ಸಾವಿನ ನೆನಪುಗಳೇ ….

 

-೨೦೦೧