‘ಲಾಡೆನ್’ ಎಂಬ ಶಬ್ದ ಕಿವಿಗೆ ಬಿದ್ದೊಡನೆ ಅಮೆರಿಕೆಯ ಬುಶ್ ನಿಂದ ಮೊದಲು ಮಾಡಿ ಪುಟ್ಟಪರ್ತಿ ಸಾಹಿಬಾಬಾನವರೆ ಎಲ್ಲರೂ ಗಡಗಡ ನಡುಗುತ್ತಾರೆ. ‘ವರ್ಷದ ವ್ಯಕ್ತಿ’ ಎಂಬ ಅಂತಾರಾಷ್ಟ್ರೀಯ ಗೌರವ (?) ಲಾಡೆನ್ ಗೆ ಸಿಗುವ ಸಂಭವವಿದೆಯಂತೆ. ಭೂಮಿ ತಾಯಿಯ ಯಾವ ಕರುಳ ಸಂದಿಯಲ್ಲಿ ಅಡಗಿಕೊಂಡು ಆ ಮಹಾರಾಯ ಮತ್ತಾವ ಕಿತಾಪತಿ ಮಾಡುತ್ತಿರುವನೋ ಯಾರು ಬಲ್ಲರು?

ಮತ್ತೊಂದು ಲಯದಲ್ಲಿ ಇಡೀ ಪ್ರಪಂಚದ ತುಂಬ ಸುಳಿಗಾಳಿ ಸುಳಿದಂತೆ ವೈಚಾರಿಕ ಕಂಪನ ಮೂಡಿಸುತ್ತಿರುವ ಒಂದು ಹೆಸರು: ನೋಮ್ ಚಾಮ್ ಸ್ಕಿ!

ಚಾಮ್ ಸ್ಕಿ ಎಂಬ ಹೆಸರು ನನ್ನ ಕಿವಿಗ ಬಿದ್ದದ್ದು ಮೂವತ್ನಾಲ್ಕು ವರ್ಷಗಳ ಹಿಂದೆ (೧೯೬೮). ಆಗ ನಾನು ಹೈದ್ರಾಬಾದಿನ ಸೆಂಟ್ರಲ್ ಇನ್ ಸ್ಟಿಟ್ಯೂಟ್ ಆಫ್ ಇಂಗ್ಲಿಷ್ ಎಂಬ ಸಂಸ್ಥೆಯಲ್ಲಿ ‘ಡಿಪ್ಲೊಮಾ ಇನ್ ಇಂಗ್ಲಿಷ್’ ಮಾಡಲು ನಮ್ಮ ಕರ್ನಾಟಕ ಯೂನಿವರ್ಸಿಟಿಯಿಂದ ಕಳಿಸಲ್ಪಟ್ಟಿದೆ ನಾನು ಮೂಲತಃ ಇಂಗ್ಲಿಷ್ ಸಾಹಿತ್ಯದ ವಿದ್ಯಾರ್ಥಿಯಾಗಿದ್ದರೂ ಹೈದ್ರಾಬಾದಿನಲ್ಲಿ ನನ್ನ ವಿಶೇಷ ಆಸಕ್ತಿ ಬೆಳೆದದ್ದು ಭಾಷಾ ಶಾಸ್ತ್ರ (ಲಿಂಗ್ವಿಸ್ಟಿಕ್ಸ್) ಮತ್ತು ಧ್ವನಿಶಾಸ್ತ್ರ (ಫೊನೆಟಿಕ್ಸ್) ದಲ್ಲಿ. ನಾನು ಏನಾದರೂ ಅಕೆಡಿಮಿಕ್ ರೀತಿಯಲ್ಲಿ ಸಂಶೋಧನೆ ಗಿಂಶೋದನೆ ಮಾಡಿದ್ದರೆ ಅದು ಈ ಕ್ಷೇತ್ರಗಳಲ್ಲಿಯೇ.

ಜಾಗತಿಕ ಭಾಷಾಶಾಸ್ತ್ರದ ವಲಯದಲ್ಲಿ ನೋಮ್ ಚಾಮ್ ಸ್ಕಿ ಬಹಳ ದೊಡ್ಡ ಹೆಸರು. ಭಾಷಾಗ್ರಹಿಕೆ ಮತ್ತು ಭಾಷೆಯ ವ್ಯಾಕರಣದ ವಿನ್ಯಾಸದಲ್ಲಿ ರೂಢಮೂಲವಾದ ಅನೇಕ ಸಿದ್ಧಾಂತಗಳನ್ನು ಬುಡಮೇಲು ಮಾಡಿದ ಚೇತನ ಇದು ‘ಚಾಮ್ ಸ್ಕಿ ಕ್ರಾಂತಿ’ ಎಂಬ ಪದವೇ ಬಳಕೆಗೆ ಬಂದಿದೆ.

ಹೈದ್ರಾಬಾದಿನಲ್ಲಿ ನಾಮಮಾತ್ರವಾಗಿ ಕಿವಿಯಲ್ಲಿ ಗುಯ್ಗುಡುತ್ತಿದ್ದ ನೋಮ್ ಚಾಮ್ ಸ್ಕಿ ಎಂಬ ಶಬ್ದ ಓಂಕಾರದ ರೀತಿಯಲ್ಲಿ ಮಂತ್ರದ ಹಾಗೆ ನನ್ನನ್ನು ಆವರಿಸಿಕೊಂಡದ್ದು ನಾಲ್ಕು ವರ್ಷಗಳ ನಂತರ. ಆಗ ನಾನು ಬ್ರಿಟಿಶ್ ಕೌನ್ಸಿಲ್ ಆರ್ಥಿಕ ನೆರವಿನೊಂದಿಗೆ ಇಂಗ್ಲೆಂಡಿನ ಲೀಡ್ಸ ಯೂನಿವರ್ಸಿಟಿಯಲ್ಲಿ ಮತ್ತೊಂದು ಎಂ.ಎ ಮಾಡುವ ಅವಕಾಶ ಪಡೆದಿದ್ದೆ.

*

ಮೂಲ ಚರ್ಚೆ ಭಾಷಾ ಕಲಿಕೆ – (ಮಗು ಭಾಷೆಯನ್ನು ಹೇಗೆ ಕಲಿಯುತ್ತದೆ?) ಎಂಬುದಾಗಿದ್ದರೂ ವ್ಯಾಪಕ ನೆಲೆಯಲ್ಲಿ ಅನುಭವ (ಎಕ್ಸಪೀರಿಯನ್ಸ್) ಮತ್ತು ಜ್ಞಾನ (ನಾಲೇಜ್) ದ ಸಂಕೀರ್ಣ ಸಂಬಂಧದ ಬಗ್ಗೆ ಇರುವ ಸಿದ್ಧಾಂತಿಗಳು ಹಲವಾರು. ಪಂಚೇಂದ್ರಿಯಗಳ ಮೂಲಕ ನಾವು ಪಡೆಯುವ ‘ಅನುಭವ’ದ ಬಂಡವಾಳ (ಇನಪುಟ್) ಪ್ರಮಾಣದಲ್ಲಿ ‘ಜ್ಞಾನ’ ದ ಉತ್ಪಾದನೆ (ಔಟ್ ಪುಟ್) ಆಗುತ್ತದೆ. ಎಂಬ ಒಂದು ವಾದವಿದೆ. ಆದರೆ ಸಕಲ ಪ್ರಾಣಿಗಳಲ್ಲಿ ‘ವಿಶಿಷ್ಟ’ ನೆನಿಸಿಕೊಂಡ ‘ಮನುಷ್ಯ’ ಪ್ರಾಣಿಯ, ಮೆದುಳಿನ ವಿನ್ಯಾಸದಲ್ಲೇ ನೈಸರ್ಗಿಕವಾಗಿ ಅಂತರ್ಗತನಾಗಿರುವ ಒಂದು ‘ಶಕ್ತಿ’ ಇದೆ. ಅದು ‘ಅನುಭವ’ (ಮಾಹಿತಿ) ಯನ್ನು ಕೇವಲ ಮರು – ಉತ್ಪಾದನೆ ಮಾಡದೆ ‘ಮರುಸೃಷ್ಟಿ’ ಮಾಡುತ್ತದೆ. ಈ ಸಿದ್ಧಾಂತದ ಎಳೆ ಹಿಡಿದು ನೋಮ್ ಚಾಮ ಸ್ಕಿ ಹುಟ್ಟು ಹಾಕಿದ ಒಂದು ಪರಿಕಲ್ಪನೆ ಟಿ.ಜಿ. (ಟಿ. ಜಿ.ಎಂದರೆ ಟ್ರಾನ್ಸಫರ್ಮೇಶನಲ್ ಜನರೆಟಿವ್ ಗ್ಯ್ರಾಮರ್)

ಸದ್ಯ ಈ ಮಾಹಿತಿ ಇಷ್ಟು ಸಾಕು ನಮಗೆ, ಸಿದ್ಧಾಂತದ ಗೊಂಡಾರಣ್ಯದಲ್ಲಿ ಹೊಕ್ಕರೆ ಅದರಿಂದ ವಾಪಸು ಬರುವುದು ಕಷ್ಟಕರ.

ಒಟ್ಟಿನಲ್ಲಿ ಚಾಮ್ ಸ್ಕಿ ಒತ್ತು ನೀಡುವುದು ಸೃಜನಶೀಲತೆಗೆ. ಈ ಮೂಲ ಬೀಜವೇ ಅವರಲ್ಲಿ ಮಹಾವೃಕ್ಷವಾಗಿ ಬೆಳೆದು ಅವರನ್ನು ಅಮೆರಿಕಾ ಎಂಬ ಬೃಹತ್ ಬ್ರಹ್ಮ ರಾಕ್ಷಸನ ಜೀವ ವಿರೋಧಿ ನೀತಿಯ ಕಟು ಟೀಕಾಕಾರರನ್ನಾಗಿ ಮಾಡಿದೆ. ಚಾಮ್ ಸ್ಕಿ ಅಮೆರಿಕೆಯ ಮೂಲದವರಲ್ಲ. ಆದರೆ ಅವರು ಅಮೇರಿಕದ ಪ್ರಜೆ.

*

ಲೀಡ್ಸ್ ನಲ್ಲಿ ಈ ವಿಚಾರಧಾರೆ ನನ್ನನ್ನು ಎಷ್ಟು ಮುತ್ತಿಕೊಂಡಿತೆಂದರೆ ನಾನು ಟಿ.ಜಿ. ಗ್ಯ್ರಾಮರ್ ನಲ್ಲಿ ಒಬ್ಬ ಎಕ್ಸಪರ್ಟ್ ಆಗಿಬಿಟ್ಟೆ. ನನ್ನ ಕ್ಲಾಸ್ ಮೇಟುಗಳೆಲ್ಲ ನನ್ನನ್ನು ಮರಿ ಚಾಮ್ ಸ್ಕಿ ಎಂದೇ ಕರೆಯುವಂತಾಯಿತು! ಅದರಿಂದೀಚಿಗೆ ಭಾಷಾಶಾಸ್ತ್ರದಲ್ಲಿ ಅನೇಕ ಸ್ಥಿತ್ಯಂತರಗಳಾಗಿವೆ. ಅವುಗಳ ಹೆಚ್ಚಿನ ಮಾಹಿತಿ ನನಗಿಲ್ಲ. ಇಂಡಿಯಾಕ್ಕೆ ಮರಳಿದ ಮೇಲೆ ಅಕೆಡೆಮಿಕ್ ಆಸಕ್ತಿಗಳೆಲ್ಲ ಕಡಿಮೆ ಆದವು. ಆ ಪುರಾಣ ಬೇರೆ.

ನೋಮ್ ಚಾಮ್ ಸ್ಕಿ ಹೆಸರಿಗೆ ಈಗ ಜಾಗತಿಕ ಚಲಾವಣೆ ಇರುವುದು ಅವರು, ಅಮೇರಿಕಾ ನೇತೃತ್ವದ ಬಂಡವಾಳಶಾಹಿ ರಾಷ್ಟ್ರಗಳು, ಸ್ವಾತಂತ್ಯ್ರ – ಸಮಾನತೆ – ಪ್ರಜಾಪ್ರಭುತ್ವ ಮುಂತಾದ ಮಂತ್ರ ಉಗುಳುತ್ತಲೇ ಆ ಮೌಲ್ಯಗಳನ್ನೇ ಧ್ವಂಸ ಮಾಡುವಂಥ ಕುಟಿಲ ನೀತಿ ತಾಳಿದ್ದರ ವಿರುದ್ಧ ಯಾವ ಮುಲಾಜೂ ಇಲ್ಲದೆ ಎತ್ತರದ ದನಿಯಲ್ಲಿ ಪ್ರತಿಭಟನೆ ಮಾಡುತ್ತಿರುವುದರಿಂದ. ಜಾಗತಿಕ ಇತಿಹಾಸದ ಎಲ್ಲ ವಾಸ್ತವ ವಿದ್ಯಮಾನಗಳು. ಅಂಕಿಸಂಖ್ಯೆಗಳು ಅವರ ಬೆರಳ ತುದಿಯಲ್ಲಿವೆ. ಎಂಥವರೂ ತಲೆದೂಗುವಂತೆ ಬರಹದಲ್ಲಾಗಲಿ, ಮಾತಿನಲ್ಲಾಗಲಿ ನಿರ್ಭಾವುಕತೆಯಿಂದ ವಾದ ಮಂಡಿಸುತ್ತಾ ಸತ್ಯ – ಪಕ್ಷಪಾತಿಗಳ ಪಡೆ ಹೆಚ್ಚಿಸುವ ಸಾಮರ್ಥ್ಯ ಅವರದು.

ಮೂರನೇ ಜಗತ್ತಿನ ‘ಅಭಿವೃದ್ಧಿಶೀಲ’ – (ಅಂದರೆ ಅಭಿವೃದ್ಧಿಯಲ್ಲಿ ಹಿಂದುಳಿದ!) ರಾಷ್ಟ್ರಗಳ ತಣ್ಣಗಿನ ಆಕ್ರೋಶಕ್ಕೆ ದನಿಯಾಗುತ್ತಿದ್ದಾರೆ ನೋಮ್ ಚಾಮ್ ಸ್ಕಿ.

ಈ ಮಹಾನ್ ವ್ಯಕ್ತಿಯನ್ನು ಪ್ರತ್ಯಕ್ಷ ಕಾಣುವ ಅನೇಕ ಅವಕಾಶಗಳಿದ್ದರೂ ನಾನವರನ್ನು ನೋಡಿಲ್ಲ. ಇಂಡಿಯಾಕ್ಕೂ ಅನೇಕ ಸಲ ಬಂದಿದ್ದಾರೆ. ಇತ್ತೀಚಿನ ಸಪ್ಟೆಂಬರ್ ಹನ್ನೊಂದರ ಘಟನೆಯ ನಂತರ ಚಾಮ್ ಸ್ಕಿ ದನಿ ಎಲ್ಲಾ ಕಡೆ ಮೊಳಗುತ್ತಿದೆ. ತಾಲಿಬಾನ್ ಸದ್ದು ಆಡಗಿಸಿದ್ದರೂ ಅಮೆರಿಕಾದ ಹಿಡನ್ ಅಜಂಡಾ ಇನ್ನೂ ಹಿಗ್ಗುತ್ತಲೇ ಇದೆ ಅಂತ ಎಚ್ಚರಿಸುತ್ತಿದ್ದಾರೆ ಅವರು.

ಹುಟ್ಟಿಸಿದ ತಾಯಿ – ತಂದೆಗಳು ನಮ್ಮ ಬಾಳನ್ನು ಎಷ್ಟರಮಟ್ಟಿಗೆ ರೂಪಿಸುತ್ತಾರೋ ಹೇಳಲಿಕ್ಕಾಗದು. ಆದರೆ ನಮ್ಮ ಬದುಕಿನ ಕೆಲವು ತಿರುವುಗಳಲ್ಲಿ ಅನೇಕ ಸಲ ಕೆಲ ವ್ಯಕ್ತಿಗಳು – ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಸಂಭವಿಸುತ್ತಾರೆ. ಮಾರ್ಗದರ್ಶಕರಾಗುತ್ತಾರೆ. ಗುರುಗಳಾಗುತ್ತಾರೆ.

ಅಂಥ ನನ್ನೊಬ್ಬ ಗುರು ನೋಮ್ ಚಾಮ್ ಸ್ಕಿ.

 

-೨೦೦೧