‘ಬೆಳಗಾವಿ ನನಗೇನು ಮಾಡಿತು ಎನ್ನುವುದಕ್ಕಿಂತ ಬೆಳಗಾವಿಗಾಗಿ ನಾನು ಏನು ಮಾಡಿದೆ ಎನ್ನುವುದು ಮುಖ್ಯ.’ – ಸಂಕಲ್ಪ ಶಕ್ತಿಯ ನಿರ್ಧಾರದ ಈ ವಾಣಿಯ ಅರ್ಥವನ್ನು ಸ್ಥಾವರದ ರೂಪದಲ್ಲಿ ಕಾಣಬೇಕಾದರೆ ನೀವು ಕನ್ನಡದ ಗಡಿಯ ಭದ್ರಕೋಟೆಯಂತಿರುವ ಬೆಳಗಾವಿಗೆ ಹೋಗಿ. ಅಲ್ಲಿಯ ಸದಾಶಿವನಗರದಲ್ಲಿ ಶ್ರೀಮತಿ ಚಿಂದೋಡಿ ಲೀಲಾ ನೂತನವಾಗಿ ನಿರ್ಮಿಸಿದ ಕೆ.ಬಿ.ಆರ್. ಕನ್ನಡ ಸಂಸ್ಕೃತಿ ಕಲಾಕೇಂಧ್ರದ ಸುಸಜ್ಜಿತ ರಂಗಮಂದಿರವನ್ನು ನೋಡಬೇಕು. ಏಪ್ರಿಲ್ ಇಪ್ಪತ್ತರಂದು ನಡೆದ ಈ ರಂಗಮಂದಿರದ ಉದ್ಘಾಟನಾ ಸಮಾರಂಭದ ಅಂಗವಾಗಿ ಆರು ದಿನಗಳ ಸಾಂಸ್ಕೃತಿಯ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು.

ಕರ್ನಾಟಕದ ರಂಗಭೂಮಿ ಪರಂಪರೆಯ ಒಂದು ಮುಖ್ಯ ವಾಹಿನಿ: ವೃತ್ತಿ ನಾಟಕ ಕಂಪನಿಗಳು ಅದರಲ್ಲೂ ೧೯೨೮ ರಲ್ಲಿ ಗಾಯನ ಗಂಧರ್ವ ಚಿಂದೋಡಿ ವೀರಪ್ಪನವರು ಸ್ಥಾಪಿಸಿದ ಕೆ.ಬಿ.ಆರ್. ಡ್ರಾಮ್ ಕಂಪನಿ. ಅನೇಕ ಏಳು ಬೀಳುಗಳ ನಡುವೆಯೂ. ನಿರಂತರ ೭೪ ವರ್ಷಗಳ ಸಾರ್ಥಕ ಅಸ್ತಿತ್ವವನ್ನು ಸಾಬೀತುಗೊಳಿಸುತ್ತ. ಇನ್ನೇನು ಮುಂದಿನ ವರ್ಷ (೨೦೦೩) ವಜ್ರ ಮಹೋತ್ಸವದ ಸಂಭ್ರಮವನ್ನು ಕಾಣಲಿದೆ.

*

ರಾಜಾಶ್ರಯ, ಜನಾಶ್ರಯ ಎರಡೂ ಇದ್ದ ಕಾಲ ಒಂದಿತ್ತು ನಾಟಕಗಳಿಗೆ. ಮೈಸೂರು ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರರು ಚಿಂದೋಡಿ ವೀರಪ್ಪನವರಿಗೆ ಚಿನ್ನದ ತೊಡೆ ತೊಡಿಸಿ ತಮ್ಮ ಪ್ರೀತಿಯ ಅಭಿಮಾನ ತೋರಿದ್ದರು.

ಚಿಂದೋಡಿ ಲೀಲಾ ಬದುಕು ಕಂಪನಿಯ ಬದುಕಿನೊಂದಿಗೇ ತಳಕು ಬಿದ್ದದ್ದು ಈಗಲೂ ಅವರು ತಂದೆಗೆ ತಕ್ಕ ಮಗಳಾಗಿ ಕಂಪನಿಯ ಸರ್ವತೋಮುಖ ಬೆಳವಣಿಗೆಯ ಜೀವವಾಹಿನಿಯಾಗಿದ್ದಾರೆ. ಆದರೆ ಈ ವಾಹಿನಿ ಹರಿದು ಬಂದ ಮಾರ್ಗ ಮಾತ್ರ ಕಾಡು ಮೇಡುಗಳ, ಕಂದಕ ಕೊರಕಲುಗಳ ಮಾರ್ಗ.

*

ಮಧ್ಯ ಕರ್ನಾಟಕದ ದಾವಣಗೆರೆ ಕೆ. ಬಿ. ಆರ್. ಡ್ರಾಮಾ ಕಂಪನಿಗೂ ಉತ್ತರ ಕರ್ನಾಟಕದ ಗಡಿಯಲ್ಲಿರುವ ಬೆಳಗಾವಿಗೂ ಬಿಡಲಾಗದ ನಂಟು. ೧೯೮೦ ರಿಂದಲೂ ಅಲ್ಲಿ ನಾಟಕಗಳ ನಿರಂತರ ಪ್ರಯೋಗ. ಥೇಟರ‍್ ನಿರ್ಮಾಣಕ್ಕಾಗಿ ನಿವೇಶನದ ಹುಡುಕಾಟ. ಮಹಾನಗರ ಪಾಲಿಕೆಯಿಂದ ಬಾಡಿಗೆ ಆಧಾರದ ಮೇಲೆ ನೀಡಲಾದ ನಿವೇಶನದಲ್ಲಿ ಚಿಂದೋಡಿ ಲೀಲಾ ಸುಸಜ್ಜಿತ ಥೇಟರ್ ಕಟ್ಟಿದರು.

ಬೆಳಗಾವಿ ಕನ್ನಡ ನಾಡಿನ ಅವಿಭಾಜ್ಯ ಅಂಗವಾಗಿದ್ದರೂ ಅಲ್ಲಿನ ಕೆಲವು ಮರಾಠಿ ಭಾಷಿಕರು ಅನಗತ್ಯವಾಗಿ ಭಾಷಾ ಸಾಮರಸ್ಯ ಹದಗೆಡಿಸುವ ಕಾಯಕದಲ್ಲಿ ನಿರತರಾಗಿರುವುದು ನಮಗೆ ಗೊತ್ತು. ಎರಡು ವರ್ಷಗಳ ಹಿಂದಿ (೧೯೯೮ ರಲ್ಲಿ) ಹೋಳಿ ಹಬ್ಬದ ಟೈಮಿನಲ್ಲಿ ದುಷ್ಕರ್ಮಿಗಳು ಈ ಥೇಟರನ್ನು ಸುಟ್ಟು ಬೂದಿ ಮಾಡಿದರು. ರಾಣಿ ಕಿತ್ತೂರ ಚೆನ್ನಮ್ಮನ ಛಲವನ್ನು ಮೈಗೂಡಿಸಿಕೊಂಡ ದಿಟ್ಟ ಮಹಿಳೆ ಚಿಂದೋಡಿ ಲೀಲಾ. ಮರಾಠಿಗರ ದರ್ಪ, ದೌರ್ಜನ್ಯ ಎದುರಿಸಿ ರಂಗಭೂಮಿಯ ಮೂಲಕ ಬೆಳಗಾವಿಯಲ್ಲಿ ಕನ್ನಡದ ಅಸ್ತಿತ್ವವನ್ನು ಗಟ್ಟಿಗೊಳಿಸಿದ ಈ ಸ್ತ್ರೀ ಶಕ್ತಿಯ ಸಾಕಾರಮೂರ್ತಿ ಧೈರ್ಯಗೆಡದೆ ಸ್ವಂತ ಜಾಗದಲ್ಲಿ ಮತ್ತೆ ರಂಗಮಂದಿರ ಕಟ್ಟಿದ್ದಾರೆ. ಸರಕಾರದಿಂದಾಗಲಿ ಇತರ ಯಾವುದೇ ಮೂಲದಿಂದಾಗಲಿ ಒಂದು ಬಿಡುಗಾಸಿನ ಸಹಾಯವನ್ನೂ ಪಡೆಯದೆ ರಂಗಭೂಮಿ ಕಾಯಕದಿಂದ ಬಂದ ದ್ರವ್ಯವೇ ಈ ರಂಗಮಂದಿರದ ಆಸ್ತಿಭಾರವಾಗಿದೆ.

ಒಂದು ಕಡೆ ಕೆ. ಎಲ್. ಇ. ಸೊಸೈಟಿಯ ವಿದ್ಯಾಸಂಸ್ಥೆಗಳು, ಮತ್ತೊಂದು ಕಡೆ ನಾಗನೂರು ರುದ್ರಾಕ್ಷಿ ಮಠ, ಮಗದೊಂದು ಕಡೆ ಚಿಂದೋಡಿ ಲೀಲಾ ಅವರ ಕನ್ನಡ ಸಂಸ್ಕೃತಿ ಕಲಾಕೇಂದ್ರ – ಹೀಗೆ ಗಡಿನಾಡಿನಲ್ಲಿ ಕನ್ನಡವನ್ನು ಕಾಯುತ್ತಿವೆ ಈ ಮೂರು ಶಕ್ತಿ ಕೇಂದ್ರಗಳು, ಏಕೀಕರಣ ನಂತರದ ನಾಲ್ಕುವರೆ ದಶಕಗಳಲ್ಲಿ ನಮ್ಮ ಕರ್ನಾಟಕ ಸರಕಾರಗಳು ಮಾತ್ರ ಬೆಳಗಾವಿ ನಗರದ ಕನ್ನಡೀಕರಣಕ್ಕಾಗಿ ಮಾಡಬೇಕಾದ ಪ್ರಮಾಣದ ಕೆಲಸ ಮಾಡಲಿಲ್ಲ ಎಂಬುದು ನೋವಿನ ಸಂಗತಿ. ಗಡಿಭಾಗದ ಸಮಸ್ಯೆಗಳು ಬಗ್ಗೆ ವರದಿಗಳು ಮಾತ್ರ ಪುಟಗಟ್ಟಲೆ ಸರಕಾರಕ್ಕೆ ತಲುಪುತ್ತಲೇ ಇವೆ.

ಚಿಂದೋಡಿ ಲೀಲಾ – (ಅನೇಕ ಚಲನಚಿತ್ರಗಳಲ್ಲಿ ಅಭಿನಯಿಸಿದ್ದರೂ) – ಮುಖ್ಯವಾಗಿ ರಂಗನಟಿ. ೧೯೬೦ ರಿಂದ ೧೯೭೪ ರವರೆಗೆ ಹತ್ತು ಸಾವಿರ ಪ್ರಯೋಗಗಳನ್ನು ಕಂಡ ನಾಟಕ ‘ಹಳ್ಳಿ ಹುಡುಗಿ’. ಚಿಂದೋಡಿ ಲೀಲಾ ‘ಹಳ್ಳಿ ಹುಡುಗಿ’ ಎಂದೇ ಪ್ರಖ್ಯಾತರು. ಇತ್ತೀಚಿನ ವರ್ಷಗಳಲ್ಲಿ ನಾಡಿನಾದ್ಯಂತ ಅನೇಕ ಪ್ರಮುಖ ಪಟ್ಟಣಗಳಲ್ಲಿ ಇವರೇ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ ‘ಪೋಲೀಸನ ಮಗಳು’ ನಾಟಕ ಐದು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಈಗಾಗಲೇ ಕಂಡು ದಾಖಲೆಯನ್ನು ನಿರ್ಮಿಸುತ್ತಿದೆ. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷತೆ ಚಿಂದೋಡಿ ಲೀಲಾ ಅವರ ರಂಗಸೇವೆಗೆ ಸಂದ ಉಡುಗೊರೆಯಾಗಿತ್ತು. ತಮ್ಮ ಅವಧಿಯಲ್ಲಿ ಅನೇಕ ಉಪಯುಕ್ತ ಕೆಲಸಗಳನ್ನು ಮಾಡಿದ ಸಾಧನೆ ಅವರದು. ಬೆಳಗಾವಿ ಕನ್ನಡಿಗರು ಅವರನ್ನು ಒಮ್ಮೆ ಬೆಳಗಾವಿ ಮಹಾನಗರ ಪಾಲಿಕೆಯ ಸದಸ್ಯರಾಗಿಯೂ ಆಯ್ಕೆ ಮಾಡಿದ್ದರು.

*

ತನ್ನ ವೈಭವದ ಎತ್ತರಗಳನ್ನು ಕಂಡ ಕನ್ನಡ ವೃತ್ತಿ ರಂಗಭೂಮಿ ಬದುಕಿನ ವಾಸ್ತವಗಳಿಗೆ ಹತ್ತಿರವಾದದ್ದು. ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ರಾಜಕೀಯ ನಾಟಕಗಳ ವಿಶಾಲ ಬೀಸು ಹೊಂದಿರುವ ಈ ರಂಗಭೂವಿಗೆ ಅಪರಿಮಿತ ಸಾಧ್ಯತೆಗಳಿವೆ. ಹಳ್ಳಿಗಳು, ಪಟ್ಟಣದವರು, ಕಲಿತವರು, ಕಲಿಯದವರು, ಇಂಥ ಯಾವ ವ್ಯತ್ಯಾಸಗಳೂ ಇರದೆ ಎಲ್ಲ ವರ್ಗದ ಪ್ರೇಕ್ಷಕರಿಂದಲೂ ಇಂಥ ನಾಟಕಗಳಿಗೆ ಶಭಾಶ್ ಗಿರಿ ಸಿಗುತ್ತದೆ. ವೃತ್ತಿ ರಂಗಭೂಮಿಗೆ ಹೊಸ ಸತ್ವವನ್ನು ರೂಪವನ್ನು ತಂದುಕೊಡುವುದರ ಜೊತೆಗೆ, ಕರ್ನಾಟಕದ ಉತ್ತರ ಗಡಿಭಾಗದ ಎಲ್ಲ ಬಗೆಯ, ಸಾಂಸ್ಕೃತಿಯ ಚಟುವಟಿಕೆಗಳಿಗೆ ಚಿಂದೋಡಿ ಲೀಲಾ ಅವರ ‘ಕನ್ನಡ ಸಂಸ್ಕೃತಿ ಕಲಾಕೇಂದ್ರವು’ ಜೀವಬಿಂದುವಾಗಲಿ ಎಂಬ ಹೆಬ್ಬಯಕೆ ಕನ್ನಡಿಗರದು.

 

-೨೦೦೨