ಗೆಳೆಯ ನಾ. ಮೊಗಸಾಲೆ ಅವರ ‘ಅರುವತ್ತ ತೇರು’ ನನ್ನೆದುರಿಗೆ ಇದೆ. ೧೯೭೪ ರಿಂದ ೨೦೦೩ ರವರೆಗಿನ ಬೀಸಿನಲ್ಲಿ – ಅಂದರೆ ಅಂದಾಜು ಸುಮಾರು ಮೂರು ದಶಕಗಳ ಅವಧಿಯಲ್ಲಿ – ಅವರಿಂದ ರಚಿತವಾದ ಕವನಗಳ ಸಮಗ್ರ ಸಂಕಲನವಿದು. ಒಬ್ಬ ಕವಿಯ ಬಿಡಿ ಬಿಡಿ ಪದ್ಯಗಳನ್ನು ಅವಾಗಿವಾಗ, ಅಲ್ಲಿ ಇಲ್ಲಿ, ಅವಸರವಸರದಲ್ಲಿ ಓದಿದಾಗಿನ ತುಣುಕು ಅನುಭವಗಳಿಗಿಂತ ಅವನ ಇಡೀ ಕಾವ್ಯವನ್ನು ಒಂದೇ ಮಟ್ಟಿಗೆ ಅಸ್ವಾದಿಸುವ ಅನುಭವ ವಿಶಿಷ್ಟವಾದುದು. ಇಂಥ ಅನುಭವದುದ್ದಕ್ಕೂ ಕವಿಯ ಒಂದು ‘ಚಿತ್ರ’ ರೂಪು ತಳೆಯುತ್ತ ಹೋಗುತ್ತದೆ. ಅವನು ವೇದಿಕೆಯ ಮೇಲೆ ಸ್ವಲ್ಪ ಕಾಲ ನಿಂತು ಭಾಷಣ ಬಿಗಿದು ಹೋಗಿ ಬಿಡುವ ‘ಅತಿಥಿ’ ಯಾಗಿ ಉಳಿಯದೆ. ನಮ್ಮ ಮಗ್ಗುಲಿಗೇ ಕುಂತು ಸದಾ ಅದು ಇದು ಮಾತಾಡುತ್ತಲೇ ಇರುವ ‘ಸಂಗಾತಿ’ ಯಾಗುತ್ತಾನೆ.

ಮೊಗಸಾಲೆಯವರ ಅಭಿವ್ಯಕ್ತಿಯ ರೀತಿಯಂತೂ ಹೀಗೆಯೇ. ಅವರದು ಕಥಾನಕದ ಶೈಲಿ. ಅವರು ಹೇಳಬೇಕು, ನಾವು ಕೇಳಬೇಕು. ಒಮ್ಮೊಮ್ಮೆ ಈ ಆಸಾಮಿ ವಾಚಾಳಿ ಅಂತ ಅನ್ನಿಸಿದರೂ, ಅವನು ಹೆಣೆದ ಮಾತಿನ ಬಲೆಯಲ್ಲಿ ಸಿಕ್ಕಿದ್ದೇವೆ ಅನ್ನಿಸಿದರೂ, ಅದರಿಂದ ಹೊರಗೆ ಹೋಗಬೇಕು ಅಂತ ಯೇಕೆ ಅನ್ನಿಸುವುದಿಲ್ಲ ಅಂದರೆ ಅವನು ಹೇಳುತ್ತಿರುವ ತನ್ನ ಕತೆ ನಮ್ಮ ಕತೆಯೂ ಆಗಿರುತ್ತದೆ. ನಮ್ಮ ಅನುಭವವನ್ನು ಈತ ಎಷ್ಟು ಸ್ವಾರಸ್ಯಕರವಾಗಿ, ಆತ್ಮೀಯವಾಗಿ ಹೇಳುತ್ತಿದ್ದಾನಲ್ಲ – ಎಂಬ ಖುಶಿಯೂ ನಮ್ಮದಾಗುತ್ತದೆ. ಒಮ್ಮೊಮ್ಮೆ ಓದುಗನೇ ಕವಿಯಾಗಿ ಬಿಟ್ಟು ತನಗಾಗಿ ಮತ್ತೊಬ್ಬ ಓದುಗ / ಕೇಳುಗನನ್ನು ಹುಡುಕಿಕೊಳ್ಳುವ ಪ್ರಸಂಗವೂ ಬಂದೀತು.

ಇನ್ನೊಂದು ರೀತಿಯ ಅಭಿವ್ಯಕ್ತಿಯಲ್ಲಿ. ಕವಿ ತನ್ನ ಸಾಮ್ರಾಜ್ಯಕ್ಕೆ ತಾನೇ ಪ್ರಭು, ತಾನೇ ಪ್ರಜೆ, ಪಿಸು ಮಾತೋ, ಗೊಣಗೋ – ಅಲ್ಲಿ ಅವನು ತನಗೆ ತಿಳಿದ ಹಾಗೆ ಅನಾವರಣಗೊಳ್ಳುತ್ತಾನೆ. ಅವನ ಮಾತು ಯಾರನ್ನೂ ‘ಉದ್ದೇಶಿಸಿ’ ಹೇಳಿದ್ದಲ್ಲ. ಕೇಳಿದರೆ ಕೇಳು, ಕೇಳದಿರ್ದೊಡೆ ಮಾಣು. ನನ್ನ ಹಾಡು ನಾ ಹಾಡಿದಲ್ಲದೆ ಸೈರಿಸಲಾರೆನಯ್ಯ – ಎಂಬ ಅಕ್ಕಮಹಾದೇವಿಯ ದಾರಿ ಅದು. ಇಲ್ಲಿ ಕವಿಗೆ ಓದುಗನ ಹಂಗು ಇರದಿದ್ದರೂ, ಓದುಗ ಯಾವುದೋ ಒಂದು ನೆಲೆಯಲ್ಲಿ ಕವಿಯೊಂದಿಗೆ ತನ್ನನ್ನು ಗುರುತಿಸಿಕೊಳ್ಳುವ ಸಾಧ್ಯತೆ ಇದೆ.

*

ಅನುಭವವನ್ನು ಕತೆಯನ್ನಾಗಿಯೋ, ಹರಟೆಯನ್ನಾಗಿಯೋ ಹಿಗ್ಗಿಸಿ ಹೇಳುವ ಚಟವಿರುವ ಮೊಗಸಾಲೆಯವರ ಕವನಗಳು ಸಾಮಾನ್ಯವಾಗಿ ‘ಉದ್ದ’ ಅನಿಸುತ್ತದೆ. (ಇಲ್ಲಿ ಸಾಲುಗಳ ಸಂಖ್ಯೆ ಮುಖ್ಯವಲ್ಲ: ಹೇಳುವ ರೀತಿ ಮುಖ್ಯ) ಹೀಗಾಗಿ ಒಮ್ಮೊಮ್ಮೆ ಕೇಳುಗನಿಗೆ ಸಣ್ಣ ಪ್ರಮಾಣದ ನಿದ್ದೆ ತೆಗೆಯುವ ಅವಕಾಶವೂ ಇರುತ್ತದೆ. ಮತ್ತೆ ಎಚ್ಚರವಾದಾಗ ಅದೇ ಕತೆ ಮುಂದುವರೆಯುವುದರಿಂದ ಯಾವ ರಸಭಂಗಕ್ಕೂ ಕಾರಣವಿಲ್ಲ.

ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿರುವ ಕವನಗಳು ಅನುಭವದ ಸಾಂದ್ರತೆ ಹಾಗೂ ಶೈಲಿಯ ಬಿಗಿಯಾದ ಬಂಧದಿಂದ ಗಾಢ ಪರಿಣಾಮ ಬೀರಬಲ್ಲವು. ಅಂಥ ಎರಡು ಕವನಗಳನ್ನು ನಾನೀಗ ಎತ್ತಿಕೊಳ್ಳುತ್ತಿದ್ದೇನೆ: ಒಂದು, ‘ನನ್ನ ಕೊಡೆ’; ಇನ್ನೊಂದು ‘ಚಹಾ’ ಇವರೆಡರ ನಡುವೆ ಒಂದು ದಶಕದ ಅಂತರವಾದರೂ ಇರಬೇಕು.

ನನ್ನ ಕೊಡೆ

ನನ್ನ ಕೊಡೆ ನನ್ನ ಹಾಗಿದೆ
ನನ್ನ ಕೊಡೆ ನನ್ನ ಹೆಂಡತಿಯ ಹಾಗಿದೆ.
ನನ್ನ ಕೊಡೆ ನನ್ನ ಮನೆಯ ಹಾಗಿದೆ
ನನ್ನ ಕೊಡೆ ನನ್ನ ಮಕ್ಕಳ ಹಾಗಿದೆ
ನನ್ನ ಕೊಡೆ ನನ್ನ ನನ್ನ – ಅದರ ಇದರ ಹಾಗಿದೆ

ಆದರೆ ನೀವು
ನನಗೆ ಕೊಡೆಯೇ ಇಲ್ಲ
ಅನ್ನುತ್ತೀರಲ್ಲ:
ಇರಲೂ ಬಹುದು.

ಆದರೂ
ಇಲ್ಲದ ನನ್ನ ಕೊಡೆಗೆ
ಬೇರೆ ಬೇರೆ ಹೋಲಿಕೆ ಕೊಡುವುದಕ್ಕೆ
ನಿಮ್ಮ ಪ್ರತಿಭಟನೆ ಯಾಕೆ
ನಿಮಗೂ ಕೊಡೆ ಇಲ್ಲವೆಂದೆ?

ಇಲ್ಲಿ ಎರಡು ಪಾತ್ರಗಳಿವೆ: ‘ನಾನು’ ಮತ್ತು ‘ನೀವು’. ಆದರೆ ‘ದ್ವಿತೀಯ’ ಪುರುಷನ ಅರಿವು ನಮಗೆ ಅರಿವಾಗುವುದು ಮೊದಲ ಐದು ಸಾಲುಗಳ ನಂತರವೇ. ಈ ಐದು ಸಾಲುಗಳಲ್ಲಿ ಮೊದಲ ಮೂರು ಶಬ್ದಗಳು ಅವೇ ಅವೇ: ನನ್ನ ಕೊಡೆ ನನ್ನ … ಕೊಡೆ ಉಪಮಾನವಾಗುವುದು – ನಾನು, ನನ್ನ ಹೆಂಡತಿ, ನನ್ನ ಮನೆ, ನನ್ನ ಮಕ್ಕಳು, ನನ್ನ ಅದು ಇದು. ‘ನಾನು’ ಎಂಬುದೇ ತುಂಬಿಕೊಂಡ ಈ ಪುಟ್ಟ ಜಗತ್ತು ಕವರು ಕವರಾಗಿ ಒಂದ ‘ವ್ಯಕ್ತಿ’ಯ ಚಿತ್ರ ಮೂಡಿಸುತ್ತಿದ್ದಂತೆಯೇ ಆ ಚಿತ್ರವನ್ನು ಚಿಂದಿ ಚಿಂದಿ ಮಾಡುವ ಇನ್ನೊಂಡು ವ್ಯಕ್ತಿ ಧುತ್ತನೆ ಪ್ರತ್ಯಕ್ಷವಾಗುತ್ತಾನೆ. ಮೊದಲ ವ್ಯಕ್ತಿ ಸೃಷ್ಟಿಸಿ (ಕೊಂಡ)ದ್ದು ವಾಸ್ತವವಲ್ಲ. ಭ್ರಮೆ – ಎಂಬುದು ಎರಡನೆಯ ವ್ಯಕ್ತಿಯ ಅಂಬೋಣ. ಈಗ ಸಂಘರ್ಷದ ಪ್ರಾರಂಭಕ್ಕೆ ಒಳ್ಳೆ ಮುಹೂರ್ತ. ಈ ಕುತೂಹಲದ ಕ್ಷಣ – ಒಂದೇ ಕ್ಷಣ. ಎದುರಿನಿಂದ ಬಂದ ಅಸ್ತ್ರಕ್ಕೆ ಪ್ರತಿ ಅಸ್ತ್ರ ಬಿಡಬೇಕು. ಬಿಡುತ್ತಾನೆ ಅಂತ ನಮ್ಮ ನಿರೀಕ್ಷೆ. ಆದರೆ ಅವನು ಅಸ್ತ್ರವನ್ನು ಸ್ವೀಕರಿಸಿ ಬಿಡುತ್ತಾನೆ. ಅದು ಅಸ್ತ್ರವೇ ಅಲ್ಲ ಎನ್ನುವಂತೆ ಗೌಣಗೊಳಿಸುತ್ತಾನೆ. ‘ಕೊಡೆಯೆ ಇಲ್ಲ’ – ಎಂಬ ಆರೋಪವನ್ನು ಸತ್ಯವೆಂದು ಒಪ್ಪಿಕೊಂಡು, ತನ್ನದೇ ಆದ ಮತ್ತೊಂದು ಅಸ್ತ್ರ ಅಣಿಗೊಳಿಸುತ್ತಾನೆ. ಹೌದು, ನನಗೆ ಕೊಡೆ ಇಲ್ಲ. ಆದರೆ ಬೇರೆ ಬೇರೆ ಹೋಲಿಕೆ ಕೊಡುವುದು ನನ್ನ ಸ್ವಾತಂತ್ಯ್ರ. ಅದಕ್ಕೆ ನಿನ್ನದೇನು ಪ್ರತಿಭಟನೆ? ತಕರಾರು?

ಈ ಸಂಘರ್ಷ ತಾರಕಕ್ಕೇರುವುದು ಕೊನೆಯ ಸಾಲಿನಲ್ಲಿ: ನಿಮಗೂ ಕೊಡೆ ಇಲ್ಲವೆಂದೆ?

ಕೊನೆಗೂ ನಮಗೆ ಗೊತ್ತಾಗುವುದು: ಇದು, ಕೊಡೆಯ ಸುತ್ತ ಕೊಡೆಯೇ ಇಲ್ಲದವರ ಜಗಳ. ಕೊಡೆಯ ಬಗ್ಗೆಯಂತೂ ಜಗಳವಲ್ಲ. ನನಗನಿಸುವುದು: ಇಲ್ಲಿ ತಿಕ್ಕಾಟವಿರುವುದು, ಇಲ್ಲದ್ದರ ಬಗ್ಗೆ ‘ಯಾಕೆ ಮಾತಾಡಬೇಕು’? ಎಂಬ ವಾಸ್ತವವಾದಿ ಮತ್ತು ‘ಯಾಕೆ ಮಾತಾಡಬಾರದು?’ ಎಂಬ ಕನಸುಗಾರನ ನಡುವೆ.

ಅಸಂಗತ ನಾಟಕದ ಒಂದು ‘ಪ್ರಸಂಗ’ ದಂತಿರುವ ಈ ಮೊಗಸಾಲೆ – ಕವನ ಅರ್ಥಂವತಿಕೆಯ ಅಥವಾ ಅರ್ಥಹೀನತೆಯ ಅನಂತ ಪದರುಗಳ ಸಾಧ್ಯತೆಯನ್ನು ಹೊಂದಿದೆ.

ಚಹಾ

ಚಹಾ ಕುಡಿಯದವನು ಚಹಾ ಕುಡಿಯವವನನ್ನು ಕೇಳಿದ
ಕುಡಿವ ಹರ್ಷ ಯಾವುದದು?

ಚಹಾ ಗಿಡಗಳ ನಳನಳಿಕೆ
ಸಮುದ್ರವೇ ಮಳೆಯಾಗಿ ಬರುವ ಮಾಗುವಿಕೆ
ಕರುವಿಗಾಗಿಯೇ ತುಂಬುವ ಕೆಚ್ಚಲು
ಕಬ್ಬಿನ ತೋಟವೇ ಸಕ್ಕರೆಯಾಗುವ ಮನಸ್ಸು

ಬೆಂಕಿಯಲ್ಲಿ ಹದವಾಗಿ ಕುದಿದು ಉಕ್ಕದೆ
ಬಟ್ಟಲಲ್ಲಿ ತುಂಬಿದರೂ ಅಲೆ ಎಬ್ಬಿಸದೆ
ಸಿತಾರದಲ್ಲಿ ಎದ್ದ ಹಾಗೆ ಸ್ವರಗಳು
ಕುಡಿಯುವವನ ಗಂಟಲೊಳಗೆ ಇಳಿದು
ಚಹಾದ ಗಿಡ ಸಮುದ್ರವಾಗುವುದು
ಹಸು ಕಬ್ಬಿನ ತೋಟವಾಗುವುದು
ಸಕ್ಕರೆಯೇ ಮನಸ್ಸಾಗುವುದು
ಚಹಾ ಕುಡಿಯುವವ ಹೇಳುತ್ತಾ ಹೋದ
ಬಟ್ಟಲು ತುಂಬ ತುಂಬ
ಚಹಾ ಕುಡಿಯದವನು
ಬಟ್ಟಲು ಎತ್ತದೇ
ಚಹಾ ಕುಡಿದ ಹಾಗೆ
ತುಂಬಿಕೊಂಡು
ಉಕ್ಕಿದ

ಇಲ್ಲಿಯೂ ಇಬ್ಬರಿದ್ದಾರೆ: ಚಹಾ ಕುಡಿಯದವ, ಚಹಾ ಕುಡಿಯುವವ. ಒಬ್ಬ ಪ್ರಶ್ನೆ ಕೇಳುತ್ತಾನೆ. ಇನ್ನೊಬ್ಬ ಉತ್ತರ ಕೇಳುತ್ತಾನೆ. ಕವಿ ನಿರೂಪಕ.

ಚಹಾ ಕುಡಿಯುವಂಥ ಒಂದು ‘ಮಾಮೂಲಿ’ ಅನುಭವದ ಇಷ್ಟು ಜೀವಂತ ರೂಪಕವನ್ನು ನಾನು ಈವರೆಗೆ ಎಲ್ಲೂ ಕಂಡಿಲ್ಲ. ಚಹಾ – ಸಮುದ್ರ – ಹಸು – ಕಬ್ಬಿನತೋಟ – ಸಕ್ಕರೆ – ಮನಸ್ಸು – ಹೀಗೆ ಪರಿ ಪರಿಯಾಗಿ, ಪರೆ ಪರೆಯಾಗಿ ಹಿಗ್ಗುತ್ತಲೇ ಹೋಗುತ್ತದೆ. ಆ ಮೂಲ ಅನುಭವದ ಮೆಲಕು. ಬಟ್ಟಲು ತುಂಬುವ ಅನುಭವ ಅದು.

ಈಗ ಬರುತ್ತದೆ ಕವನದಲ್ಲಿ ಅನಿರೀಕ್ಷಿತ ತಿರುವು. ಅದೇ ಮೊಗಸಾಲೆ ಕಾವ್ಯದ ವೈಶಿಷ್ಟ್ಯ. ಚಹಾ ಕುಡಿಯವವನ ‘ಹರ್ಷ’ ಅವನ ‘ಮಾತು’ಗಳ ಮೂಲಕವೇ ಚಹಾ ಕುಡಿಯದವನ ‘ಹರ್ಷ’ವಾಗುತ್ತದೆ. ಅವನು ಚಹಾ ಕುಡಿಯಲು ಬಟ್ಟಲು ಎತ್ತಬೇಕಾಗಿಯೇ ಇಲ್ಲ: ‘ಚಹಾ ಕುಡಿದ ಹಾಗೆ’ ತುಂಬಿಕೊಂಡು ಉಕ್ಕುತ್ತಾನೆ – ಸಮುದ್ರದ ಹಾಗೆ.

*

ಕಾವ್ಯದ ಸಾರ್ಥಕ್ಯ. ಕವಿಯ ಅನುಭವ ಓದುಗನ ಅನುಭವವಾಗುವಲ್ಲಿ ಅಂತ ಹೇಳುತ್ತಾರೆ. ಅನುಭವದ ಪುನಾಸೃಷ್ಟಿ ಮಾಡುವುದೇ ಕವಿ ಭಾಷೆಗಿರುವ ಸಾಧ್ಯತೆ. ಆಗ ಭಾಷೆ ಕೇವಲ ವಾಹಕವಾಗಿ ಮಾಧ್ಯಮವಾಗಿ ಉಳಿದು. ಈ ಮೊಗಸಾಲೆ ಕವನ. ‘ನನ್ನ ಕೊಡೆ’ಯ ಹಾಗೆಯೇ ಓದುಗನನ್ನು ಅನೇಕ ನೆಲೆಗಳಲ್ಲಿ ಕಾಡುವ ಒಂದು ಸಾರ್ಥಕ ರಚನೆ.

ಒಂದು ಕಾಲವಿತ್ತು. ಬೆಳ್ಳಿ ಪರದೆಯ ಮೇಲೆ ನಟ – ನಟಿಯರು ದಶಕಗಳ ಕಾಲ ನಕ್ಷತ್ರವಾಗಿ ಮಿಂಚುತ್ತಿದ್ದರು. ಈಗಿನವರು ಒಂದೆರೆಡು ವರ್ಷ ಮಿಂಚಿ, ಅಥವಾ ಮಿಂಚಿದಂತೆ ಮಾಡಿ, ಖಾಯಮ್ಮಾಗಿ ಭೂತದಲ್ಲಿ ಲೀನರಾಗುವರು. ಕಾವ್ಯಲೋಕದ ಕತೆಯೂ ಅಷ್ಟೆ. ಮೂವತ್ತು – ನಲವತ್ತು ವರ್ಷಗಳ ಕಾಲ ನಿರಂತರವಾಗಿ ವಿಕಸನಶೀಲವಾದ ರೀತಿಯಲ್ಲಿ ಮೊಗಸಾಲೆಯವರ ಹಾಗೆ ಬರೆಯುತ್ತಿರುವವರು ಕನ್ನಡದಲ್ಲಿ ಬಹಳ ಕಡಿಮೆ.

ಮೊಗಸಾಲೆ

ಬತ್ತಿದ ಕರೆಯಲ್ಲ: ಬತ್ತದ ತೊರೆ
ಈ ತೇರಿಗೆ
ಅರುವತ್ತೆಂಬುದು ಬರೀ ಒಂದು ಗೆರೆ.

-೨೦೦೫