೧೯೭೬ ಇನ್ನೂ ಎಮರ್ಜೆನ್ಸಿ ಜಾರಿಯಲ್ಲಿತ್ತು. ನಾನು ಬರೆದು ಪ್ರಕಟಿಸಿದ ‘ಬುರುಡೀಬಾಬಾನ ವಸ್ತ್ರಾಪಹರಣ ಪವಾಡ’ ಎಂಬ ಬೀದಿ ನಾಟಕದ ಒಂದು ದೃಶ್ಯವಿದು. ಪಾತ್ರಗಳು: ಬಾಬಾ, ಅಂಬಾಪುತ್ರ ಮತ್ತು ಮಳ್ಳ ಕಾಶೀಮ ಬಾಬಾ ಅಂಬಾಪುತ್ರನಿಗೆ ಪೈಶಾಚಿಕ ಶೈಲಿಯಲ್ಲಿ ಓದಲು ಹೇಳುತ್ತೇನೆ.

ಬಾಬಾ: ನಾ ನಾ ನಾ ಆನಾ ಜಾನಾ ಖಾನ …..
ಕೂ ಕೂ ಕೂ ಹೈಕೂ ಮೈಕೂ ಬೈಕೂ
ತಂ ತಂ ತಂ ಬಂಬಂ ಬಂಬಂ ಕಂಬಂ …..

ಮಕಾ: ಆಹಾ, ಎಂಥ ಕಾವ್ಯವಿದು! ಓ, ಎಂಥಾ ನಾದವಿದು! ಪಿಶಾಚಿ ಕವನದಲ್ಲಿ ಒಟ್ಟು ಹದಿನಾಲ್ಕು ಅರ್ಥದ ಪದರುಗಳಿವೆ. ಒಂದನೇ ಪದರು: ಈ ನಶ್ವರ ಜಗತ್ತಿನ ತುಂಬಾ ಬಾಬಾ ತುಂಬಿದ್ದಾನೆ. ಎರಡನೇ ಪದರು: ಶಬ್ದ ಬ್ರಹ್ಮನ ಅರ್ಥ ಗುಮ್ಮಟದಲ್ಲಿ ನಾದ ವಿಷ್ಣು ಪವಡಿಸಿದ್ದಾನೆ. ಮೂರನೇ ಪದ …..

*

ಅಂದಿನ ಸಾಹಿತ್ಯಿಕ ಸನ್ನಿವೇಶ ಗೊತ್ತಿದ್ದವರಿಗೆಲ್ಲ ಯಾರು ಯಾರು ಅಂತ ಹೇಳಬೇಕಾಗಿಲ್ಲ … ಶಂಕರ ಮೊಕಾಶಿ ಪುಣೇಕರ ಅವರಿಗೆ ಅವರ ಸರೀಕರೆಲ್ಲ ‘ಮಳ್ಳಕಾಶಿ’ ಅಂತಲೇ ಕರೆಯುತ್ತಿದ್ದರು. ನನ್ನ ಅವರ ನಡುವೆ ಒಂದು ತಲೆಮಾರಿನ, ಅಂದರೆ ೨೦-೨೧ ವರ್ಷಗಳ ನಂತರ. ಎಪ್ಪತ್ತರ ದಶಕದ ಪ್ರಾರಂಭದಲ್ಲಿ ಧಾರವಾಡದ ಕರ್ನಾಟಕ ಯೂನಿವರ್ಸಿಟಿಯ ಇಂಗ್ಲೀಷ್ ವಿಭಾಗದಲ್ಲಿ ನಾವಿಬ್ಬರೂ ಕಲೀಗರು: ಧಾರವಾಡದ ಸಂಸ್ಕೃತಿಗೆ ಅನುಗುಣವಾಗಿ ನಾವೆಲ್ಲ ಬಹಳ ಪ್ರೀತಿಯಿಂದ ಜಗಳವಾಡುತ್ತಿದ್ದೆವು.

ಮೊಕಾಸಿ: ‘ಗಂಗವ್ವ – ಗಂಗಾಮಾಯಿ’ ಯಂಥ ಅದ್ಭುತ ಕಾದಂಬರಿ ಬರೆದ ಅನನ್ಯ ವ್ಯಕ್ತಿತ್ವದ ಲೇಖಕ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ. ಬರಿ ಕೈಯನ್ನಲ್ಲ. ಮೈಯನ್ನೇ ಆಡಿಸಿದವರು. ಇಂಗ್ಲೀಷನಲ್ಲೂ ಬರೆದಿದ್ದಾರೆ. ಎಲ್ಲ ವಲಯದಲ್ಲೂ ವಿವಾದಾಸ್ಪದ. ಕಾಂಟ್ರವರ್ಸಿಯಲ್ ಮನುಷ್ಯ. ಉತ್ತರ ಕರ್ನಾಟಕದ ಸಹಜವಾದ ಜವಾರಿ ಕನ್ನಡ, ಸನ್ನಿವೇಶಗಳ ಸಂಕೀರ್ಣ ಶಿಲ್ಪ, ಪಾತ್ರಗಳ ಅದ್ಬುತ ಬೆಳವಣಿಗೆ, ತಲ್ಲಣಗಳ ಸಂವೇದನಾಶೀಲ ಅಭಿವ್ಯಕ್ತಿ- ಇವೆಲ್ಲ ಮೊಕಾಶಿಯವರ ಹೆಚ್ಚುಗಾರಿಕೆ.

*

ಮೈ ತುಂಬ ಪ್ರೀತಿ ತುಂಬಿದ ಜೀವ ಮೊಕಾಶಿಯವರು. ಅವರ ಓರಗೆಯವರಾದ ಕಣವಿ, ಅಮುರ ಕುರ್ತುಕೋಟಿ. ಚಿತ್ತಾಲ, ಶಾಂತಿನಾಥ ಮುಂತಾದವರು ಸೂಕ್ಷ ಚರ್ಮದವರು: ಮಾತು ಸ್ವಲ್ಪ ಏರು ಪೇರಾದರೂ ಚಾಳಿ ಟೂ ಬಿಡುತ್ತಿದ್ದ ಸಂವೇದಾನಾಶೀಲರು. ಆದರೆ ಮೊಕಾಶಿ ಒಂದು ಅಪರೂಪದ ಅಪವಾದ: ಬೇಂದ್ರೆಯವರ ಹಾಗೆ, ಪ್ರೀತಿಗೂ ಸೈ ಜಗಳಕ್ಕೂ ಸೈ.

ಅವರು ನನ್ನ ಚೇಂಬರಿನ ಬಾಗಿಲು ತಟ್ಟಿ ಒಳ ನುಗ್ಗಿದಾಗ ನಾನು ಸ್ವಾಗತಿಸುತ್ತಿದ್ದುದು, ಜೈ ಇಂದಿರಾ ಗಾಂಧಿ, ಜೈ ಸಾಯಿಬಾಬಾ ಎಂಬ ಘೋಷಣೆಯೊಂದಿಗೆ, ಅವರಿಬ್ಬರೂ ಪರಸ್ಪರರ ಅವತಾರಗಳೇ ಎಂದು ಅವರು ಗಾಢವಾಗಿ ನಂಬಿದ್ದರು.

ಮೊಕಾಶಿ ಉವಾಚ: ‘ಇಂದಿರಾ ಗಾಂಧಿ ಜಗತ್ತಿನ ವಿಭೂತಿಗಳಲ್ಲಿ ಒಬ್ಬರು. ಗೆದ್ದರೂ ಸರಿ, ಸೋತರು ಸರಿ, ಅವರಿಂದಲೇ ಭಾರತದ ಮುಕ್ತಿ. ಅವರಿಗೊಂದು ತತ್ವಜ್ಞಾನ ಇದೆ …. ಮಾರ್ಕ್ಸ – ಲೆನಿನ್ – ಮಾವೊಗಳು ಮೂರ್ಖರು. ನಿಮ್ಮ ರಾಮಮನೋಹರ ಲೋಹಿಯಾ ಅಂತೂ ಮಹಾ ಹುಚ್ಚ ….’

ತಮ್ಮ ಇಂದಿರಾ – ನಿಷ್ಠೆಯನ್ನು ಅವರು ತೋರಿಸಲು ೧೯೭೪ರಲ್ಲಿ ‘ಜನತರಾಗ ಇಂದಿರಾ’ ಎಂಬ ರಾಗವನ್ನೇ ಸಂಯೋಜಿಸಿದರು! ಹೇ ಜವಾಹರ ನಂದಿನಿ! ಇಂದಿರಾ ಪ್ರಿಯದರ್ಶಿನಿ / / ದೀನ ದಲಿತೋಂಕೆ ಸಹಾರೆ / ಹೀನ ದುಃಖಿಯೋಂಕೇ ತೂ ಪ್ಯಾರೆ / / – ಎಂದು ಅರೋಹಣಗೊಳ್ಳುವ ಈ ರಾಗವನ್ನು ಮೊಟ್ಟಮೊದಲು ಅವರು ಹಾಡಿ ತೋರಿಸಿದ್ದು ಒಂದು ಹರಿಜನ ಕೇರಿಯಲ್ಲಿ. ಅವರ ಪ್ರಕಾರ ಈ ರಾಗ ಹಾಡಹಾಡುತ್ತಲೇ ಅನೇಕ ಚಿಕ್ಕ ಪುಟ್ಟ ರಾಗಿಣಿಗಳನ್ನೂ ಹುಟ್ಟಿಸಬಹುದು: ಇಂದಿರಾ ಕಲ್ಯಾಣ, ಇಂದಿರಾ ಜೀ, ಇಂದಿರಾ ಕಲಾವತಿ, ಇಂದಿರಾ ಬಲಾವಲ ಇತ್ಯಾದಿ.

ಇಂದಿರಾ ಗಾಂಧಿಯವರಿಗೆ ನಮ್ಮ ಮೊಕಾಶಿಯವರು ೧೫ ದಿನಕ್ಕೊಮ್ಮೆ ಕಾರ್ಡು ಬರೆಯುತ್ತಿದ್ದರಂತೆ. ಇಂದಿರಾ ಅನುಷ್ಠಾನಗೊಳಿಸಿದ ಅನೇಕ ಯೋಜನೆಗಳಿಗೆ ಈ ಕಾರ್ಡುಗಳೇ ಸ್ಪೂರ್ತಿ ಅಂತ ಅವರು ನಂಬಿದ್ದರು ‘ಕಾರ್ಡು ತಲುಪಿದ ಬಗ್ಗೆ ಏನಾದರೂ ಆಕ್ನಾಲೆಜ್ಮೆಂಟ್ ಬಂತೇ?’ – ನಾನು ಕಿಡಿಗೇಡಿ ಪ್ರಶ್ನೆ ಕೇಳಿದರೆ ಮೊಕಾಶಿ ತಮ್ಮ ಅಡ್ವಾಣಿ ಸ್ಟೈಲಿನ ಮೀಸೆಯಲ್ಲಿ ನಗುತ್ತಿದ್ದರು…. ಈ ಇಂದಿರಾ ಪ್ರಿಯನ ಜೀವನದ ಆಸೆ ಒಂದೇ ಒಂದಿತ್ತು: ಇಂದಿರಾಗಾಂಧಿ ಒಮ್ಮೆ ತಮ್ಮ ಮನೆಗೆ ಬಂದು ಊಟ ಮಾಡಬೇಕು, ಎಂದು (ವಿವರಗಳಿಗಾಗಿ: ಲಂಕೇಶ ಪತ್ರಿಕೆ ೧೧ -೪- ೧೯೮೨).

*

ಧಾರವಾಡದ ಮಾಳಮಡ್ಡಿಯಲ್ಲಿ ಮೊಕಾಶಿಯವರ ಮನೆ. ಅದಕ್ಕೆ ‘ಪುಣೇಕರ ಬಂಗಲೋ’ ಅಂತ ಹೆಸರು ‘ಬಂಗಲೆ’ ಅಂದರೆ ಅವರಿಗೆ ಸಿಟ್ಟು ‘ಬಂಗಲೋ’ ಎಂದೇ ಕರೆಯಬೇಕು. ಒಳಗೆ ಗೋಡೆಯ ಮೇಲೆ ಆಳೆತ್ತರದ ಸಾಯಿಬಾಬಾ ಪೋಟೋ ಜಗತ್ ಪ್ರಸಿದ್ದ ಬಾಬಾ ಭಕ್ತರಾಗಿದ್ದ ಬೇಂದ್ರೆ – ಗೋಕಾಕ್ – ರಾಜರತ್ನಂ – ಕಸ್ತೂರಿ – ಧಾರವಾಡಕರ ಮುಂತಾದವರು ಬಾಬಾನನ್ನು ಸ್ವಂತಕ್ಕಾಗಿ ಬಳಸಿಕೊಂಡುವರು. ಆದರೆ ಮೊಕಾಶಿ ಮಾತ್ರ ಸಾಯಿಬಾಬಾ ಎಂಬ ಶೂದ್ರ ಭಾರತದಲ್ಲಿ ಅವತರಿಸಿ ಬಂದದ್ದೇ ನಮ್ಮೆಲ್ಲರ ಉದ್ಧಾರಕ್ಕೆ ಎಂದು ನಂಬಿದವರು.

ಈ ಬಾಬಾನ ಮೇಲೆ ಅವನ ಶಿಷ್ಯನೊಬ್ಬ ಅಟ್ಯಾಕ್ ಮಾಡಿದ ಪ್ರಸಂಗ ನಿಮಗೆ ನೆನಪಿರಬೇಕು. ಆಗ ‘ಚಂಪಾ ಕಾಲಂ’ ನಲ್ಲಿ ದಾಖಲೆಯಾದ ಡೈಲಾಗಿದು. (ಸಂಕ್ರಮಣ ೩೦: ಮೇ ೧೯೯೮).

ನಾನು: ಮೊಕಾಶಿಯವರೇ, ಪವಾಡ ಪುರುಷನೂ ಪರಮಾತ್ಮನ ಅವತಾರವೊ ಆದ ನಿಮ್ಮ ಬಾಬಾನನ್ನು ಅವನ ಶಿಷ್ಯನೊಬ್ಬ ಅಟ್ಯಾಕ್ ಮಾಡಿದಾಗ ಬಾಬಾ ತನ್ನ ಬಂಗಲೆಯ ನೆಲಮನೆಯಲ್ಲಿ ಅಡಗಿಕೊಂಡನಂತಲ್ಲ! ಅದು ಹೇಗೆ?

ಮೊಕಾಶಿ: ಮಾನವ ರೂಪವನ್ನು ಧರಿಸಿ ಭಗವಂತನು ಅವತರಿಸಿದಾಗ ಅವನು ಮಾನವರಂತೆಯೆ ವರ್ತಿಸಬೇಕಾಗುತ್ತದೆ.

ನಾನು: ನಾವೆಲ್ಲ ಧಾರವಾಡದಲ್ಲಿ ಬಾಬಾನಿಗೆ ಘೇರಾವೂ ಮಾಡಿ. ಓಡಿಸಿ ನಂತರ ಅವನ ಭಾವಚಿತ್ರಕ್ಕೆ ಚಪ್ಪಲಿ ಹಾರಹಾಕಿ ಮೆರವಣಿಗೆ ಮಾಡಿದೆವಲ್ಲ ನಮಗೇಕೆ ಅವನು ಶಾಪ ಕೊಡಲಿಲ್ಲ?

ಮೊಕಾಶಿ: ದೇವರ ಮಹಿಮೆ ಲೋಕಕ್ಕೆ ತಿಳಿಯುವುದು ರಾಕ್ಷಸರ ಮೂಲಕವೇ ತನಗೆ ಸರಿಯಾದ ಪ್ರಚಾರ ಸಿಗಲಿ ಎಂದು ಬಾಬಾನೇ ಸ್ವತಃ ನಿನ್ನಂಥ ದುಷ್ಟರನ್ನು ಈ ಭೂಮಿಯ ಮೇಲೆ ಹುಟ್ಟಿಸಿದ್ದಾನೆ!

*

ಪುರೋಹಿತಶಾಹಿಯ ವಿರುದ್ಧ ಶೂದ್ರ ಮತ್ತು ದಲಿತ ಶಕ್ತಿ ಒಂದಾಗಿ ಸೆಡ್ಡು ಹೊಡೆದ ಸಂದರ್ಭ: ೧೯೭೪ರಲ್ಲಿ ‘ಒಕ್ಕೂಟ’ ದ ರಚನೆ. (‘ಒಕ್ಕೂಟ’ ಕುರಿತು ನಿರಂಜನ ಕಟುವಾಗಿ ಟೀಕೆ ಮಾಡಿದ್ದರು.) ಆಗ ಮೊಕಾಶಿಯವರು ನಮ್ಮ ತೇಜಸ್ವಿಯವರ ‘ಆಸ್ತಿ’ ಯ ಬಗ್ಗೆ ಒಂದು ವಿಡಂಬನ ಕವನ ಬರೆದಿದ್ದರು. ತೇಜಸ್ವಿ ಆಗ ಸಿಟ್ಟಿನ ಮೂರ್ತಿ: ಈಗಿನಂತೆ ಸಂತರಾಗಿರಲಿಲ್ಲ. ‘ಮೊಕಾಶಿಯ ಹಲ್ಲು ಮುರಿಯುತ್ತೇನೆ “- ಅಂತ ಘೋಷಿಸಿದರು. ಮತ್ತೊಮ್ಮೆ ಕನ್ನಡದ ನೆಲದಲ್ಲಿ, ೨೦ನೆಯ ಶತಮಾನದಲ್ಲಿ, ಹರಿಹರ – ರಾಘವಾಂಕರ ಪ್ರಸಂಗವನ್ನು ಕಣ್ಣಾರೆ ಕಾಣುವ ಸಂಭ್ರಮ ನಮಗೆಲ್ಲ. ಆದರೆ, ‘ಯಾರೋ ನನಗೆ ತಪ್ಪು ಮಾಹಿತಿ ಕೊಟ್ಟಿದ್ದರು’ ಮೊಕಾಶಿ ರಣರಂಗದಿಂದ ಓಡಿಹೋದರು. ಆಗ ನಾನು, ‘ಆಂದೋಲನ’ ದಲ್ಲಿ ಮೊಕಾಶಿ ದಂತ ಕತೆ’ ಅಂತ ಲೇಖನ ಬರೆದೆ. ಹೋಟೆಲ್ ಧಾರವಾಡದಲ್ಲಿ ನನ್ನ ಟೈ ಜಗ್ಗಿ ಎಳೆದು, ಮೊಕಾಶಿ ಹಲ್ಲು ಮಸೆಯುತ್ತ ‘ಚಂಪಾ, ನಿನ್ನ ಮೇಲೂ ಒಂದು ಪದ್ಯ ರೆಡಿ ಆಗುತ್ತಿದೆ’ ಅಂತ ವಾರ್ನಿಂಗ್ ಕೊಟ್ಟರು. ನಾನು ಮಾತ್ರ ‘ಪದ್ಯಕ್ಕೆ ಪದ್ಯದಲ್ಲಿಯೇ ಉತ್ತರಿಸುವೆ’ ಅಂತ ಮರುಸವಾಲು ಹಾಕಿದೆನು.

*

ಮೊಕಾಶಿಯವರದು ಅನೇಕ ಜ್ಞಾನ ವಲಯಗಳಲ್ಲಿ ತಲಸ್ಪರ್ಶಿಯಾದ ಪಾಂಡಿತ್ಯ ಸಂಗೀತ, ಕಲೆ, ಭಾಷಾಶಾಸ್ತ್ರ, ರಾಜಕೀಯ, ಇತಿಹಾಸ, ಮಾನವಶಾಸ್ತ್ರ … ಒಂದೇ ಎರಡೇ ಅವರ ಆಸಕ್ತಿ ಕೇಂದ್ರಗಳು? …… ಎಲ್ಲದರಲ್ಲೂ ಅವರದೇ ಛಾಪು. ಗೆಳೆಯರೆಲ್ಲ ನವ್ಯರಾಗಿಯೋ, ಸಮನ್ವಯಿಗಳಾಗಿಯೋ ಮರೆಯುತ್ತಿದ್ದ ಆ ಕಾಲದಲ್ಲಿ ಮೊಕಾಶಿ ಒಬ್ಬ ಭಿನ್ನಮತೀಯರು. ನವ್ಯದ ಸಿದ್ದಾಂತ, ಪರಿಕಲ್ಪನೆ, ಹಾವ – ಭಾವ. ವೇಷ ಭೂಷ ಅವರಿಗೆ ಎಂದೂ ಆಗಿಬರಲಿಲ್ಲ. ನಮ್ಮಂಥ ಮರಿ ಕವಿಗಳನ್ನಂತೂ ಅವರು ನವ್ಯದ ಶನಿ – ಸಂತಾನ ಎಂದೇ ಕರೆಯುತ್ತಿದ್ದರು. (ಮುಂದೊಂದು ದಿನ ದೂರದರ್ಶನಕ್ಕಾಗಿ ನಾನೇ ಅವರ ಸಂದರ್ಶನ ಮಾಡುವಾಗ ಇವೆಲ್ಲ ವಿಷಯ ಬಂದವು.)

*

ಮೇ ೯. ೧೯೯೮. ಅವರಿಗೆ ಎಪ್ಪತ್ತೊಂದು ತುಂಬಿದ ದಿನ, ನಾನು ಅವರನ್ನು ಅಭಿನಂದಿಸಿ ಬರೆದ ಪತ್ರದ ಕೆಲವು ಸಾಲುಗಳಿವು: ‘ಕುವೆಂಪು – ಬೇಂದ್ರೆ ನಂತರದ ಪೀಳಿಗೆಯ ಲೇಖಕರಲ್ಲಿ ನಿಮ್ಮ ಸ್ಥಾನ ಅನನ್ಯವಾದುದು. ನವ್ಯದ ಕ್ಲೀಷೆಗಳ ಭರಾಟೆಗೆ ಎದುರಾಗಿ ನೀವು ಏಕಾಂಗಿಯಾಗಿ ನಿಂತದ್ದು ಮತ್ತು ಹೋರಾಡಿದ್ದರ ಹಿಂದೆ ನಿಮಗಿದ್ದ ಬಲವೆಂದರೆ: ನಂಬಿದ್ದರ ಬಗ್ಗೆ ನಿಮಗಿದ್ದ ನಿಷ್ಠೆ ಮತ್ತು ‘ಜನಪ್ರಿಯತೆ’ ಗೆ ವಿಮುಖವಾಗಿ ನಿಲ್ಲಬಲ್ಲ ಹಟಮಾರಿತನ…. ನಿಮ್ಮೊಂದಿಗೆ ಅನೇಕ ಸಲ ಜಗಳಾಡಿದ್ದೇನೆ ಅವೆಲ್ಲ ಸೈದ್ದಾಂತಿಕ ನೀತಿಯ ಜಗಳಗಳು. ಆದರೆ ನಿಮ್ಮ ವಾರಿಗೆಯವರಲ್ಲಿ ನನಗೆ ನಿಮ್ಮ ಬಗ್ಗೆ ಇರುವಷ್ಟು ಪ್ರೀತಿ – (ಮತ್ತು ಅದರಿಂದಾಗಿ ಗೌರವ) – ಉಳಿದವರ ಬಗ್ಗೆ ಇಲ್ಲ. ಅದಕ್ಕೆ ಬಹುಶಃ ನಿಮ್ಮ ಪಾರದರ್ಶಕ ಸ್ವಭಾವ ಮತ್ತು ಮಗುವಿನ ಮುಗ್ಧತೆ ಕಾರಣವೆಂದು ಅನಿಸುತ್ತದೆ. ಇಂಥದೇ ಗುಣವನ್ನು ನಾನು ಬೇಂದ್ರೆ ಅವರಲ್ಲಿಯೂ ಕಂಡಿದ್ದೆ. ಕೊನೆಗೂ ನೆನಪಿನಲ್ಲಿ ಉಳಿಯುವುದು: ನಮ್ಮ ಸಿದ್ದಾಂತ ಮೂಲವಾದ ಮತ್ತು ಜಾತಿ ಮೂಲವಾದ ಪೂರ್ವಗ್ರಹಗಳಿಗಿಂತ ಈ ಬಗೆಯ ಕರುಳ ಸಂಬಂಧಗಳೇ ಅಲ್ಲವೇ?’

*

ಮುಂದೆ ಮೇ ೧೧ ರಂದು ಧಾರವಾಡಕ್ಕೆ ಹೋದಾಗ ಪುಣೇಕರ ಬಂಗಲೋಕ್ಕೆ ಹೋಗಿದ್ದೆ. (ಜೊತೆಗಿದ್ದವರು ಕಮಲಾ ಹೆಮ್ಮಿಗೆ ಮತ್ತು ಕನ್ನಡ – ಸಂಸ್ಕೃತಿ ಇಲಾಖೆಯ ಹಿರೇಗೌಡರು.) ಮೊಕಾಶಿಯವರ ಬುಲ್ಗಾನಿನ್ ಗಡ್ಡ ನೋಡಿ, ‘ಇದು ಯಾವಾಗಿನಿಂದ?’ ಅಂದೆ: ಮೊಕಾಶಿ ನಕ್ಕರು: ‘ಇದು ಬುಲ್ಗಾನಿನ್ – ಗುಜ್ರಾಲ್ – ತೇಜಸ್ವಿ ಗಡ್ಡ. ಈ ಗಡ್ಡ ಬಿಟ್ಟವರೆಲ್ಲಾ ಫೆಲ್ಯೂಆರ್ಸ್ ಆಗಿದ್ದಾರೆ!’ ನಾವೆಲ್ಲಾ ನಕ್ಕೆವು. ಪುಣೇಕರ ಬಂಗಲೋ ಕೂಡ ನಸುನಕ್ಕಿತು. ಅಂಗಳದ ಮಾಳಮಡ್ಡಿಯ ಮಾಮರಗಳಲ್ಲಿ ಧಾರವಾಡದ ಕೋಗಿಲೆಗಳು ಹಾಡುತ್ತಿದ್ದವು.

*

ಬಾಳ ಸಂಗಾತಿಯನ್ನು ಕಳಕೊಂಡ ಮೊಕಾಶಿ ಈಗ ಹಣ್ಣಾಗಿದ್ದಾರೆ. ಮುಂಬೈಯಲ್ಲಿ ನೆಲೆಸಿದ್ದಾರೆ. ಅವರು ನಂಬಿರುವ ಬಾಬಾ ಅವರನ್ನು ಚೆಂದಾಗಿ ಇಟ್ಟಿರಲಿ.

-೨೦೦೩