ಉತ್ತರ ಕರ್ನಾಟಕದ ಧಾರವಾಡದ ನನಗೂ ದಕ್ಷಿಣ ಕರ್ನಾಟಕದ ಮಂಡ್ಯಕ್ಕೂ ಕೆ. ವಿ. ಶಂಕರಗೌಡರ ಕಾಲದಿಂದಲೂ ಬಿಡಿಸಲಾಗದ ನಂಟು. ಆ ನಮೂನೆಯ ಕರುಳ ಸಂಬಂಧ ಮೈಸೂರು, ಬೆಂಗಳೂರುಗಳಂಥ ‘ನಗರ’ಗಳೊಂದಿಗೆ ಚಿಗುರಲು ಸಾಧ್ಯವೇ ಇಲ್ಲವೇನೋ ಎಂದು ನನ್ನ ಅನಿಸಿಕೆ. ನಾಡು ಕಂಡ ಕ್ರಾಂತಿಕಾರಿ ಶಿಕ್ಷಣ ಸಚಿವರು ಶಂಕರಗೌಡರು. ಗೋಕಾಕ ಚಳುವಳಿ ಕಾಲಕ್ಕೆ ಧಾರವಾಡದ ‘ಕನ್ನಡ ಕ್ರಿಯಾ ಸಮಿತಿ’ ಗೆ ರಾಜ್ಯ ಮಟ್ಟದ ವ್ಯಾಪ್ತಿಯನ್ನು ಕೊಡಬೇಕಾಗಿ ಬಂದಾಗ ಮಂಡ್ಯದಲ್ಲಿಯೇ ಸಮಾವೇಶವಾಯಿತು. ಅದರ ಅಧ್ಯಕ್ಷತೆ ಶಂಕರಗೌಡರದು. ಬಿಜಾಪುರದ ಅಶೋಕ ಬಾದರದಿನ್ನಿ ನಿರ್ದೇಶನದ ಕಲಾ ಮಾಧ್ಯಮ ತಂಡವನ್ನು ಮಂಡ್ಯಕ್ಕೆ ಕರೆಸಿಕೊಂಡು ಗೌಡರು ನನ್ನ ‘ಗೋಕರ್ಣದ ಗೌಡಶಾನಿ’ ನಾಟಕ ಆಡಿಸಿದ್ದರು. ಕರ್ನಾಟಕದ ಸಾಂಸ್ಕೃತಿಕ ಚರಿತ್ರೆಯಲ್ಲಿ ಮಂಡ್ಯಕ್ಕೊಂದು ಗೌರವದ ಸ್ಥಾನ ತಂದುಕೊಟ್ಟವರು ಅವರು.

ಅದೇ ಕೆಲಸವನ್ನು ಸಾಹಿತ್ಯಿಕ ವಲಯದಲ್ಲಿ ಮಾಡಿದ ಕೀರ್ತಿ ಡಾ. ಬೇಸಗರಹಳ್ಳಿ ರಾಮಣ್ಣ ಅವರಿಗೆ ಸಲ್ಲಬೇಕು. ತನ್ನ ಹೆಸರಿನಲ್ಲಿಯೇ ‘ಅಣ್ಣ’ ಶಬ್ದವನ್ನು ಸೇರಿಸಿಕೊಂಡಿದ್ದ ರಾಮಣ್ಣನನ್ನು ನಾವ್ಯಾರು ಬಹುವಚನದಿಂದ ಕರೆಯುತ್ತಲೇ ಇರಲಿಲ್ಲ. ನವೋದಯ ಮತ್ತು ನವ್ಯದ ಅವಸ್ಥಾಂತರದಲ್ಲಿ ಕಾವ್ಯದಲ್ಲಿ ಜಿ.ಎಸ್.ಎಸ್. ಕಣವಿ, ಕೆ. ಎಸ್. ನ ಮುಂತಾದವರು ‘ಸಮನ್ವಯ’ ಕವಿಗಳೆಂದು (ಸ್ವಲ್ಪ ವ್ಯಂಗ್ಯವಾಗಿಯೇ) ಕರೆಯಲ್ಪಟ್ಟವರು. ಆದರೆ ‘ನವ್ಯ’ ಅಂದರೆ ಅಡಿಗ – ಶರ್ಮ ಎಂಬ ಶುಭ ಸಮೀಕರಣದ ಆ ಸಂದರ್ಭದಲ್ಲಿ ಬಹಳ ವಿಶಿಷ್ಟವಾದ ರೀತಿಯಲ್ಲಿ ಕತೆ – ಕಾದಂಬರಿ ಬರೆದವರು ತೇಜಸ್ವಿ. ಲಂಕೇಶ ಮತ್ತು ಬೆಸಗರಹಳ್ಳಿ ರಾಮಣ್ಣ ‘ಮಣ್ಣಿನ ವಾಸನೆ’ ಎಂಬುದು ಅಡಿಗ – ಅನಂತಮೂರ್ತಿ ಅಂಥವರಿಗೆ ಆಕಾಶ ಗರ್ಭದಿಂದ ಸೋರುತ್ತಿದ್ದ ಮಂತ್ರವಾಗಿದ್ದರೆ. ಈ ಮೂವರಿಗೆ ಮಾತ್ರ ಅದು ನೆಲದ ಒಡಲಿನಿಂದ ಚಿಮ್ಮಿದ ‘ಧ್ವನಿ’ ಯಾಗಿತ್ತು.

‘ನೆಲದ ಒಡಲು’ – ರಾಮಣ್ಣನ ಮೊಟ್ಟ ಮೊದಲ ಕಥಾ ಸಂಕಲನ (೧೯೬೭) ಅಷ್ಟೊತ್ತಿಗಾಗಲೇ ಅವನ ‘ಹಾವಿಲ್ಲದ ಹುತ್ತ’ ಕತೆ ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ದೆಯಲ್ಲಿ ವಿದ್ಯಾರ್ಥಿ ವಿಭಾಗದಲ್ಲಿ ತೀರ್ಪುಗಾರರ ಮೆಚ್ಚುಗೆ ಪಡೆದಿತ್ತು. ಆದರೆ ಅವನಿಗೆ ನಾಡಿನಾದ್ಯಂತ ಹೆಸರು ತಂದುಕೊಟ್ಟ ಕತೆ ‘ಸುಗ್ಗಿ’. ಈ ಕತೆಗೆ ಪ್ರಜಾವಾಣಿಯ ದೀಪಾವಳಿ ಕಥಾಸ್ಪರ್ಧೆಯಲ್ಲಿ ೧೯೬೫ ರಲ್ಲಿ ಪ್ರಥಮ ಬಹುಮಾನ ಬಂತು – ‘ಸಾರ್ವತ್ರೀಕ ವಿಭಾಗ’ದಲ್ಲಿ.!

ಈ ಕತೆಗೂ ಒಂದು ಕತೆ ಇದೆ. ಸಂಕ್ರಮಣ: ಅಗಸ್ಟ ೧೯೯೯ ರಲ್ಲಿ ನಾನದನ್ನು ದಾಖಲಿಸಿರುವೆ. ಆಗ ರಾಮಣ್ಣ ಇನ್ನೂ ವಿದ್ಯಾರ್ಥಿ. ಅವನು ಕಥೆಯನ್ನು ಕಳಿಸಿದ್ದೂ ವಿದ್ಯಾರ್ಥಿ ವಿಭಾಗಕ್ಕೇ. ಆದರೆ ತೀರ್ಪುಗಾರರು ಅದನ್ನು ‘ಸಾರ್ವತ್ರಿಕ’ ವಿಭಾಗಕ್ಕೆ ವರ್ಗಾಯಿಸಿ ‘ಪ್ರಥಮ’ ಬಹುಮಾನ ಕೊಟ್ಟರು.

ಸ್ವಾರಸ್ಯದ ವಿದ್ಯಮಾನ ಇದು: ಅದೇ ವಿಭಾಗಕ್ಕೆ ಪಿ.ಲಂಕೇಶರೂ ಕಥೆ ಕಳಿಸಿದ್ದರು ಅದಕ್ಕೆ ‘ದ್ವಿತೀಯ’ ಬಹುಮಾನ. ಆ ಹೊತ್ತಿಗಾಗಲೇ ಕತೆ, ಕಾದಂಬರಿ, ನಾಟಕಗಳಿಂದಾ ಪ್ರಖ್ಯಾತರಾಗಿ ಕಂಗೊಳಿಸುತ್ತಿದ್ದವರು ಲಂಕೇಶ. ಇಂಗ್ಲೀಷ್ ಪ್ರಾಧ್ಯಾಪಕರು ಬೇರೆ ‘ಅದ್ವಿತೀಯ’ ನಾದ ತನಗೆ ಬರಬೇಕಾದ ಪ್ರಥಮ ಬಹುಮಾನದ ಬದಲಾಗಿ ‘ದ್ವಿತೀಯ’ ಸ್ಥಾನ ಲಭ್ಯವಾದದ್ದು ಅವರಿಗೆ ಪಚನವಾಗಲಿಲ್ಲವೆಂದು ಕಾಣುತ್ತದೆ. ಫಲಿತಾಂಶ ಪ್ರಕಟವಾದ ನಂತರ ಅವರು ಪತ್ರಿಕೆ ಕಛೇರಿಗೆ ಹೋಗಿ ಏನೋ ಒಂದು ಸಣ್ಣ ಪ್ರಮಾಣದ ‘ರಾಜಕೀಯ’ ಮಾಡಿದರೆಂದು ರಾಮಣ್ಣನೇ ಅನೇಕ ವರ್ಷಗಳ ಕಾಲ ಪಾನಗೋಷ್ಠಿಯಲ್ಲಿ ತೊಡೆತಟ್ಟಿಕೊಂಡು ಹೇಳುತ್ತಿದ್ದ: ‘ಆ ಲಂಗೇಶ ಹಿಂಗೆ ಮಾಡಿದ್ದು ನೋಡಪ್ಪಾ ಬಡ್ಡಿ ಮಗಾ ….’

ಯಾವುದೇ ಕಾಲಘಟ್ಟದ ಬದುಕಿನಲ್ಲಿ ಮನುಷ್ಯ ಸ್ವಭಾವಕ್ಕೆ ಸಹಜವಾದ ಇಂಥ ಘಟನೆಗಳು ನಡೆಯುವಂಥವೇ. ಆದರೆ ಸಾಮಾನ್ಯವಾಗಿ ‘ದೊಡ್ಡ’ ಮನುಷ್ಯರ ಚರಿತ್ರೆ ಬರೆಯುವವರು ಇಂಥ ಚಿಲ್ಲರೆ ವಿಷಯಗಳನ್ನು ದಾಖಲಿಸುವುದಿಲ್ಲ.. ಆ ದೊಡ್ಡ ಮನುಷ್ಯರು ಕೂಡ ತಮ್ಮ ‘ಆತ್ಮಕಥೆ’ ಗಳಲ್ಲಿ ಈ ಅಂಶಗಳನ್ನು ಮರೆಮಾಚುತ್ತಾರೆ.

ರಾಮಣ್ಣ ಒಂದೆಡೆ ಬರೆದ ಮಾತಿದು: ‘ಭೂತಕಾಲದ ದಾಳಿಂಬೆಯನ್ನು ವರ್ತಮಾನದ ಮುಷ್ಠಿಯಲ್ಲಿ ಜಜ್ಜಿದಾಗ ನೆನಪಿನ ಬೀಜಗಳು ದೃಷ್ಠಿಯ ಮುಂದೆ ಚೆಲ್ಲಿದವು.’

ಇವೇ ಶಬ್ದಗಳನ್ನು ಅಲ್ಲಲ್ಲಿ ಸ್ಥಾನಪಲ್ಲಟ ಮಾಡಿ, ಒಂದರ ಕೆಳಗೊಂದು ಚಿಕ್ಕ ಚಿಕ್ಕ ಸಾಲುಗಳಲ್ಲಿ ಮುದ್ರಿಸಿದರೆ ಅದೊಂದು ಉತ್ತಮ ಕವನವೇ ಆದೀತು. ಅದನ್ನು ರಾಮಣ್ಣ, ಕಾವ್ಯವನ್ನು ತನ್ನೊಳಗೆ ಬಚ್ಚಿಟ್ಟುಕೊಂಡೇ ಕಥೆ, ಕಾದಂಬರಿಗಳಂಥ ಸಾಹಿತ್ಯ ಪ್ರಕಾರಕ್ಕೆ ವಾಲಿದರು.ಮೊದಲ ಸಂಕಲನಕ್ಕೆ ಸಹೃದಯತೆಯ ಮುನ್ನುಡಿ ಬರೆದ ಹಾ. ಮಾ. ನಾಯಕ ಹೇಳುತ್ತಾರೆ: ‘ರಾಮಣ್ಣನವರ ಕಥೆಗಳಲ್ಲಿ ಧಾರಾಳವಾದ ಜೀವನ ಶ್ರದ್ದೆ ಇದೆ: ಗ್ರಾಮ ಜೀವನದ ಹಲಬಗೆಯ ಚಿತ್ರಣವಿದೆ.’ ಹೊಸ ಬರಹಗಾರರನ್ನು ಹೊಸದರಲ್ಲಿ ಮುಕ್ತವಾಗಿ ಸ್ವಾಗತಿಸುವ ಸ್ವಭಾವದ ಅನಂತಮೂರ್ತಿ ಹೇಳುವುದು ಯಾವುದು ಘಟನೆ, ಯಾವುದು ಪಾತ್ರ, ಯಾವುದು ವಿವರ ಎಂದು ವಿಂಗಡಿಸಲಾರದಂತೆ ಒಂದಕ್ಕೊಂದು ಹೊಸೆದುಕೊಂಡು ಮೂರ್ತವಾಗುವ ಕಥೆಗಳನ್ನು ಪಡೆದಿರುವ ‘ನೆಲದ ಒಡಲು’ ಒಂದು ಉತ್ತಮ ಕಥಾ ಸಂಕಲನ.’

ಸಮಕಾಲೀನರಾದ ಲಂಕೇಶ, ತೆಜಸ್ವಿ, ಅನಂತಮೂರ್ತಿ ಮುಂತಾದವರಿಗೆ. ವಯಸ್ಸಿನಲ್ಲಿ ಕಿರಿಯರಾದ ದೇವನೂರ ಮಹದೇವರಂಥವರಿಗೆ ಸಿಕ್ಕಷ್ಟು ಪ್ರಚಾರ, ಕೀರ್ತಿಗಳು ರಾಮಣ್ಣನಿಗೆ ಯಾಕೆ ಸಿಗಲಿಲ್ಲ? ಇಂಥ ಚರ್ಚೆ ನಮ್ಮ ಸಮಕಾಲೀನ ಸಂದರ್ಭದಲ್ಲಿ ನಡೆದಿರುವುದು ನಮಗೆ ಗೊತ್ತು. ಇನ್ನೂ ಒಂದು ಸತ್ಯ ನಮಗೆ ಗೊತ್ತಾಗಬೇಕು: ವಿಮರ್ಶಾ ಪ್ರಪಂಚದಲ್ಲಿ ಸಾಹಿತಿಗಳಿಗೆ ಸಿಗುವ ಸ್ಥಾನಮಾನಕ್ಕೆ ಕೇವಲ ಅವರ ‘ಸಾಹಿತ್ಯ’ ವೊಂದೇ ಮಾನದಂಡವಾಗಿರುವುದಿಲ್ಲ. ಇನ್ನೂ ಏನೇನೋ ಇರುತ್ತವೆ … ಅದೊಂದು ಅತ್ಯಂತ ನಿಗೂಢವಾದ ‘ಅಲಿಖಿತ’ ಸಾಹಿತ್ಯ ಚರಿತ್ರೆ!

ನಮಗೆ ದೇವನೂರರ ಒಡಲಿನ ಆಳಗಳು, ಲಂಕೇಶರ ಹತ್ತು ವದನಗಳು, ಅನಂತಮೂರ್ತಿಯವರ ಅನಂತ ಮುಖವಾಡಗಳು ಗೊತ್ತು. ಆದರೆ ನಮ್ಮ ರಾಮಣ್ಣ ಮಾತ್ರ ಬದಲಾಗಲೇ ಇಲ್ಲ: ಒಂದೇ ಮುಖ, ಒಂದೇ ನಾಲಿಗೆ.

ಮತ್ತೆ ನನ್ನ ಚಂಪಾಕಾಲಂ ಸಾಲುಗಳಿವು: ‘ಕರ್ನಾಟಕದ ಬೇರೆ ಬೇರೆ ಹಳ್ಳಿಗಳಿಂದ ಬಂದು ಏನೇನೂ ಕಾರಣಗಳಿಂದ ಬೆಂಗಳೂರು ಸೇರಿಕೊಂಡ ನಮ್ಮ ಅನೇಕ ಗ್ರಾಮಾಂತರ ಸಾಹಿತಿಗಳು ರಾಜಧಾನಿಯ ಹೊಗೆ ಬಡಿಸಿಕೊಂಡು ಮಾತಿನಲ್ಲಿ ಮೌನದಲ್ಲಿ ಮುಖದ ಚಹರೆ ಪಟ್ಟಿಯಲ್ಲಿ ದಿನನಿತ್ಯದ ವ್ಯವಹಾರದಲ್ಲಿ ರಾಜಧಾನಿಯ ಟಿಪಿಕಲ್ ಒನ್ – ಬೈ – ಟೂ ತನವನ್ನು ಆವಾಹನೆ ಮಾಡಿಕೊಂಡಿರುವಾಗ, ಮೈಸೂರು – ಬೆಂಗಳೂರುಗಳ ಅಡಕತ್ತಿನಲ್ಲಿ ಸಿಕ್ಕಂತಿರುವ ಮಂಡ್ಯ ಜಿಲ್ಲೆಯ ರಾಮಣ್ಣ ಕೊನೆಯವರೆಗೂ ಮಂಡ್ಯದ ಮಣ್ಣಿನ ಮಗನಾಗಿಯೇ ಬದುಕಿದ. ಮಂಡ್ಯದ ಮಣ್ಣಿನಲ್ಲಿಯೇ ಮಣ್ಣಾದ.’

೧೯೭೦ರ ದಶಕ ಸಾಮಾಜಿಕ – ರಾಜಕೀಯ ತಲ್ಲಣಗಳ ಕೊನೆಯಂಚಿನಲ್ಲಿ, ೧೯೭೯ರಲ್ಲಿ ಅಸ್ತಿತ್ವಕ್ಕೆ ಬಂದದ್ದು ಬಂಡಾಯ ಸಾಹಿತ್ಯ ಸಂಘಟನೆ. ಅದಕ್ಕೂ ಮುಂಚಿನ ‘ಒಕ್ಕೂಟ’ದಲ್ಲಿ ಕ್ರಿಯಾಶೀಲರಾಗಿದ್ದ ತೇಜಸ್ವಿ ಮತ್ತು ಲಂಕೇಶ ‘ಬಂಡಾಯ’ದಿಂದ ದೂರವೇ ಉಳಿದರು. ಜನಪ್ರವಾಹದಿಂದ ದೂರ ಇರುವುದು ತೇಜಸ್ವಿ ಸ್ವಭಾವ. ಲಂಕೇಶರು ಮಾತ್ರ ನಮ್ಮ ಲೇಖನಿಯ ಮೂಲಕ ‘ಬಂಡಾಯ’ದವರನ್ನು ‘ಡಂಬಾಯಗಾರರು’ ಎಂದೇ ಮೂದಲಿಸಿದರು. ಬೆಸಗರಹಳ್ಳಿ ರಾಮಣ್ಣ ಮಾತ್ರ ಬಂಡಾಯ ಸಂಘಟನೆ ಸಮಾವೇಶ, ಸಂಘರ್ಷಗಳಲ್ಲಿ ಪಾಲುಗೊಂಡು ತಮ್ಮ ವ್ಯಕ್ತಿತ್ವ ಮತ್ತು ಅಕ್ಷರಗಳ ಮೂಲಕ ಕಿರಿಯರಿಗೆ ಸ್ಫೂರ್ತಿಯ ಆಕರವಾದರು.

*

ಎಮರ್ಜನ್ಸಿಯಲ್ಲಿ ನಮ್ಮ ಅನೇಕ ಸಾಹಿತಿಗಳ ವರ್ತನೆ ಕುರಿತು ಬರೆದರೆ ಅದೇ ಒಂದು ಮಹಾಭಾರತವಾಗುವಂತಿದೆ. ರಾಮಣ್ಣ ಆ ದಿನಗಳಲ್ಲಿ ಬರೆದ ‘ಪ್ರಜಾಪ್ರಭುತ್ವ ಮತ್ತು ಮೂರು ಮಂಗಗಳು,’ ಸರ್ವಾಧಿಕಾರವನ್ನು ತೀವ್ರ ವಿಡಂಬಿಸುವ ಕಥೆಯಾಗಿತ್ತು. ಅವರ ‘ಗಾಂಧಿ’ ಕಥೆಯಂತೂ ನನ್ನನ್ನು ಕನಸಿನಂತೆ ಕಾಡುತ್ತಿತ್ತು.

ಅದನ್ನೋದಿ ನಾನು ಅವನಿಗೆ ಬರೆದ ಒಂದೇ ಒಂದು ಸಾಲಿನ ಪತ್ರ. ‘ರಾಮಣ್ಣ, ಎಷ್ಟು ಚಂದ ಕತಿ ಬರಿದೀಯಲ್ಲ!’ ಅದೇ ಒಂದು ಮಹಾ ವಿಮರ್ಶೆಯ ತುಣುಕೇನೋ ಎನ್ನುವಂತೆ ರಾಮಣ್ಣ ತನ್ನ ಸಂಕಲನದ ಬೆನ್ನುಪುಟದಲ್ಲಿ ಆ ಸಾಲು ಬಳಸಿಕೊಂಡ. ಮುಂದೆ ಆ ಕತೆಯನ್ನು ನಾನೇ ಇಂಗ್ಲೀಷಿಗೆ ಅನುವಾದಿಸಿದೆ. (ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಾತಿನಿಧಿಕ ಸಂಕಲನದಲ್ಲಿ ಅದು ಅಚ್ಚಾಗಿದೆ.)

ರಾಮಣ್ಣನ ಮನೆಯ ಹೆಸರು: ‘ನೆಲದ ಒಡಲು’. ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಹಾಯುವವರೆಲ್ಲ ಮನೆಗೆ ಬಂದು ಊಟ ಮಾಡಬೇಕು. ಅದು ಅವನ ಪ್ರೀತಿಯ ಸೆಳೆತ. ಮನೆಯ ಒಳಗೂ ಅಷ್ಟೇ. ಎಲ್ಲಾ ಬಟಾ ಬಯಲು. ಗೆಸ್ಟಗಳು ಬಂದಾಗ ನಾವೆಲ್ಲಾ ನೀಟಾಗಿ ಗೆಟಪ್ಪಿನಲ್ಲಿರುತ್ತೇವೆ. ರಾಮಣ್ಣ ಮಾತ್ರ ಸೋಫಾದ ಮೇಲೆ ಕಂಗೊಳಿಸುವುದು ಬರಿಯ ನಿಕ್ಕರಿನಲ್ಲಿ. ಯಾರಾದರೂ ಕೇಳಿದರೆ ಅವನ ಉತ್ತರ: ‘ಮನೇಲಿ ಕೂಡ ನಾವು ಎಲ್ಲಾ ಮುಚಗೊಂಡು ಕೂಡ್ರಬೇಕು ಅಂದ್ರ ಇದಕ್ಕೆ ಮನೆ ಅಂತ ಯಾಕೆ ಕರಿಬೇಕು?’

ಗೆಳೆಯರು ಒಂದು ಪ್ರಸಂಗ ಹೇಳುತ್ತಾರೆ. ಯಾವುದೋ ಊರು. ಏನೋ ಒಂದು ಸೆಮಿನಾರು. ಡಾ. ಜಿ. ಎಸ್. ಎಸ್. ಮತ್ತು ರಾಮಣ್ಣ ಒಂದೇ ರೂಮಿನಲ್ಲಿ ಉಳಿಯಬೇಕಾಗಿದೆ. ಗೋಷ್ಠಿ ಮುಗಿಸಿಕೊಂಡು ಇಬ್ಬರೂ ರೂಮಿಗೆ ಮರಳಿದ್ದಾರೆ.

ರಾಮಣ್ಣ ಶರ್ಟ ತೆಗೆದ. ಗೂಟಕ್ಕೆ ಇಳಿಬಿಟ್ಟ, ಬನಿಯನ್ ತೆಗೆದ. ಸಾವಕಾಶ ಪ್ಯಾಂಟೂ ಭೂಮಿಗೆ ಇಳಿಯಿತು.

ಬಿಡುಗಣ್ಣರಾಗಿ ನೋಡುತ್ತಿದ್ದ ಜಿ.ಎಸ್.ಎಸ್. ಕೇಳಿದರು: ‘ರಾಮಣ್ಣ, ಇಷ್ಟೇ ಅಲ್ಲವೇ?’ ಇಂಥವ ನಮ್ಮ ಬೆಸಗರಹಳ್ಳಿ ರಾಮಣ್ಣ. ಅಣ್ಣ ಅಂದರೆ ರಾಮಣ್ಣ – ಬದುಕಿದಾಗಲೂ, ಸತ್ತು ಹೋದ ಮೇಲೂ.

 

-೨೦೦೩