ನನಗೆ, ನನ್ನ ಓರಗೆಯ ಆ ಕಾಲದ ಮರಿ ಸಾಹಿತಿಗಳಿಗೆ, ‘ಧಾರವಾಡ’ ಎಂದರೆ ಒಂದು ಜಾಗೃತ ಭೂಮಿ ಹಾಗೂ ಸುಕ್ಷೇತ್ರ. ಐವತ್ತರ ದಶಕದ ಉತ್ತರಾರ್ಧದಲ್ಲಿ ಬೇರೆ ಬೇರೆ ಹಳ್ಳಿಗಳಿಂದ ಕಾಲೇಜು ಶಿಕ್ಷಣಕ್ಕೆಂದು ಧಾರವಾಡ ಸೇರಿದ ನಮಗೆ ದ.ಬಾ. ಕುಲಕರ್ಣಿ ಅವರ ಪುಸ್ತಕದಂಗಡಿ, ಟಿ.ಡಿ. ಶಿವಲಿಂಗಯ್ಯನವರ ಸಾಹಿತ್ಯ ಮಂದಿರ, ಬೆಟಗೇರಿ ಕೃಷ್ಣಶರ್ಮರ ‘ಜಯಂತಿ’, ಪಾಪು ಅವರ ‘ಪ್ರಪಂಚ’. ಇವೆಲ್ಲ ಸಾಹಿತ್ಯ ಲೋಕದ ಅಗಸೆ ಬಾಗಿಲುಗಳು. ಸುಭಾಸ ರಸ್ತೆಯಲ್ಲಿದ್ದ ಮನೋಹರ ಗ್ರಂಥಮಾಲೆಯ ‘ಅಟ್ಟ’ ಮಾತ್ರ ಪ್ರಬುದ್ಧ ಸಾಹಿತಿಗಳ ಕಾವ್ಯ ಕಥಾ ವಿನೋದಗಳ ದಂತಗೋಪುರ.

ಈ ಅಟ್ಟದ ಅಧಿಧೇವತೆಗಳೆಂದರೆ ಜಿ.ಬಿ. ಜೋಶಿ, ಅವರ ಪುತ್ರ ರಮಾಕಾಂತ ಮತ್ತು ಕೀರ್ತಿನಾಥ ಕುರ್ತಕೋಟಿ. (ಇವರನ್ನು ಸಾಹಿತ್ಯಲೋಕ Father, son and Holy Ghost ಅಂತ ಗುರುತಿಸಿತ್ತು.) ಅಲ್ಲಿ ಒಮ್ಮೆ ನಿಮಗೆ ‘ಪ್ರವೇಶ’ ಸಿಕ್ಕು ಅಲ್ಲಿಯ ಜಾಯಮಾನಕ್ಕೆ ಒಗ್ಗಿಕೊಂಡರೆ ಸಾಕು, ನೀವು ಅಲ್ಲಿ ಆಜೀವ ಸದಸ್ಯರು. ಜಿ.ಬಿ. ಅವರ ಕಬ್ಬಿನಹಾಲು, ಕುರ್ತಕೋಟಿಯವರ ಎಲೆಡಿಕೆ – ತಂಬಾಕು, ರಾಮಜೋಶಿ ಅವರ ಚಾ – ಪಾಣಿ ಜೊತೆಗೆ ಅಲ್ಲಿ ಅನಾವರಣಗೊಳ್ಳುತ್ತಿದ್ದದು ನಮ್ಮ ಅಕ್ಷರ – ಲೋಕದ ಅನಂತ ಅವತಾರಗಳು. ಹೊರಗಡೆಯಿಂದ ಬಂದ ಪ್ರತಿಷ್ಠಿತ ಸಾಹಿತಿಗಳೆಲ್ಲ ಈ ಅಟ್ಟದಲ್ಲಿಯೇ ಮುಖ ದರ್ಶನ ಮಾಡಿಸುತ್ತಿದ್ದರು.

*

ಮೊನ್ನೆ ಮೊನ್ನೆ ತೀರಿಕೊಂಡ ಕೀರ್ತಿನಾಥ ಕುರ್ತಕೋಟಿ – (ಅವರ ಇನಿಶಿಯಲ್ಲು: ಕೆ.ಡಿ. ಅವರಿಗಾಗದವರು ‘ಕೇಡಿ’ ಅನ್ನುತ್ತಿದ್ದರು.) – ಅಟ್ಟದ ಕೇಂದ್ರ ಬಿಂದು. ಗುಜರಾತದ ಆನಂದ ಯೂನಿವರ್ಸಿಟಿಯಲ್ಲಿ ಇಂಗ್ಲೀಷಿ ಪ್ರಾಧ್ಯಾಪಕರು. ನಾಡಿಗೆಲ್ಲ ವಿಮರ್ಶಕರೆಂದೇ ಅವರ ಗುರುತು. ಅವರ ಒಡನಾಟದ ಮೂಲವೇ ‘ಸ್ನೇಹ’. ಬಾಯಿ ತುಂಬ ನಗುತ್ತ, ಜೋಕು ಹೊಡೆಯುತ್ತ, ತಮ್ಮ ಸಾಹಿತ್ಯ ಪಾಂಡಿತ್ಯದ ಅನೂಹ್ಯ ಲೋಕಕ್ಕೆ ಆಡಾಡುತ್ತಲೇ ಕರಕೊಂಡು ಹೋಗುತ್ತಿದ್ದರು. ಅವರ ನೆನಪಿನ ಶಕ್ತಿಯಂತೂ ಅದ್ಭುತ. ಅವರ ತಲೆ ಎಂಬುದು ಜಂಗಲ್ಲೋ, ಗೋಡೌನೋ ಎಂಬ ಆಶ್ಚರ್ಯ ನಮಗೆಲ್ಲ.

ಮನೋಹರ ಗ್ರಂಥಮಾಲೆಯ ‘ಮಾರ್ಗದರ್ಶಕ’ರಾಗಿ, ಅವರು ಯಾರನ್ನು ಮೆರೆಸಿದರು, ಯಾರನ್ನು ಮಣಿಸಿದರು – ಎಂಬುದರ ಬಗ್ಗೆ ಅನೇಕ ಅಭಿಪ್ರಾಯಗಳಿವೆ. ಎಲ್ಲ ‘ಜಾತಿ’ ಯವರಿಂದ ಚಂದಾ ಪಡೆದರೂ ಈ ಗ್ರಂಥಮಾಲೆ ಪ್ರಕಟಿಸಿದ್ದು ಶೇಕಡಾ ೯೯ ರಷ್ಟು ಬ್ರಾಹ್ಮಣರ ಕೃತಿಗಳನ್ನೇ ಎಂಬುದು – (ಇವತ್ತಿಗೂ ಸತ್ಯವಾಗಿರುವ) – ಸಂಗತಿ. ಅಟ್ಟದ ಮೇಲಿನ ಈ ‘ಅಗ್ರಹಾರ’ ಸಂಸ್ಕೃತಿಯ ವೈಶಿಷ್ಟವೆಂದರೆ: ಅಲ್ಲಿ ‘ಬೇಂದ್ರೆ’ ಗುಂಪಿನ ವಿಪ್ರರಿಗೆ ಮಾತ್ರ ಅವಕಾಶವಿತ್ತು! ಉದಾಹರಣೆ: ಶ್ರೀರಂಗ, ಶಂಬಾಜೋಶಿ, ಗೋಕಾಕ, ಬೆಟಗೇರಿ, ಸಾಲಿ, ಧಾರವಾಡಕರ, ಇನಾಂದಾರ, ಮೊಕಾಶಿ, ಆಮೂರ ಮುಂತಾದವರಿಗೆ ಅಲ್ಲಿ ಪ್ರವೇಶ ಇಲ್ಲ. ಇವರು ಬ್ರಾಹ್ಮಣೇತರರಲ್ಲ; ಇತರೇ ಬ್ರಾಹ್ಮಣರು!

*

ಪ್ರಾಚೀನ ಅರ್ವಾಚೀನ ಸಾಹಿತ್ಯದ ಬಗ್ಗೆ ‘ಅಥಾರಿಟಿ’ ಎಂಬಂತಿದ್ದ ಕುರ್ತಕೋಟಿ ಅವರ ವೈಯಕ್ತಿಕ ಆಯ್ಕೆಗಳ ಸ್ಪಷ್ಟ: ಮಧ್ಯಯುಗದ ಕುಮಾರವ್ಯಾಸ ಮತ್ತು ಆಧುನಿಕ ನವೋದಯದ ಬೇಂದ್ರೆ. ಇವರಿಬ್ಬರ ಸಾಹಿತ್ಯ ಸೃಷ್ಟಿಯ ಅನೇಕ ಆಯಾಮಗಳ ವಿಶ್ಲೇಷಣೆ ಕುರ್ತಕೋಟಿ ಬರಹಗಳಲ್ಲಿದೆ. (ಬೇಂದ್ರೆಯವರ ಪ್ರತಿಷ್ಠಾಪನೆಗಾಗಿ ಕುವೆಂಪು ಅವರನ್ನು ವಿಮರ್ಶಾತ್ಮಕವಾಗಿ ಕುಗ್ಗಿಸಲು ಸಾಕಷ್ಟು ಶ್ರಮಿಸಿದ್ದೂ ಉಂಟು.)

‘ನವ್ಯ’ಕ್ಕೆ ಬಂದಾಗ ಮಾತ್ರ ಕೀರ್ತಿಯವರ ಪಾತ್ರ ಹೆಚ್ಚು ವಿವಾದಾಸ್ಪದವಾಯಿತು. ಪ್ರಾರಂಭದಲ್ಲಿ ಸರಿಯಾಗಿ ಕನ್ನಡವೇ ಬಾರದಿದ್ದ ಗಿರೀಶ ಕಾರ್ನಾಡರನ್ನು ಒಂದು ‘ಶಿಲ್ಪ’ವನ್ನಾಗಿ ಕೆತ್ತಿದ ಕೈ ಕುರ್ತಕೋಟಿಯವರದು. (ಗಿರೀಶರ ‘ಯಯಾತಿ’, ಜಿ.ಬಿ. ಜೋಶಿಯವರ ‘ಸತ್ತವರ ನೆರಳು’, ರಾವ್ ಬಹದ್ದೂರರ ‘ಗ್ರಾಮಾಯಣ’ ಇವು ವಿಮರ್ಶಕರಿಂದ ಪ್ರಸ್ತಾಪಿತವಾಗಿರುವ ಕೃತಿಗಳು.) ಗಿರಡ್ಡಿಯವರು ಸೂಕ್ಷ್ಮವಾಗಿ ಈ ಕೆಲಸವನ್ನು ‘ಸಂಸ್ಕಾರ’ ಎಂದು ಕರೆದರೆ, ಜಿ.ಎಸ್. ಆಮೂರರು ‘ಕೈವಾಡ’ ಎನ್ನುತ್ತಾರೆ. ಅಚ್ಚಗನ್ನಡದಲ್ಲಿ ಹೇಳಬೇಕೆಂದರೆ, ಇದು ‘ರಿಪೇರಿ’ ಕೆಲಸ: ಕಚ್ಚಾ ಸಾಮಗ್ರಿಯನ್ನು ಪ್ರೋಸೆಸ್ ಮಾಡಿ, ಪಾಕೆಟಿಂಗ್ ನಂತರ, ಮಾರ್ಕೆಟಿಂಗ್ ಮಾಡುವ ಇಂಥ ‘ಉತ್ಪಾದಕ’ ಕ್ರಿಯೆಯಲ್ಲಿಯೇ ಸ್ವಂತದ ಸೃಜನಶೀಲತೆಯನ್ನು ಹಾಳು ಮಾಡಿಕೊಂಡವರು ಕೀರ್ತಿನಾಥರು.

‘ಇದು ಕೇವಲ ಬ್ರಾಹ್ಮಣರ ಗ್ಯಾಂಗು’ – ಎಂಬ ಆಪಾದನೆಯಿಂದ ಪಾರಾಗಲು ಈ ಗ್ರಂಥಮಾಲೆ (ಜೈನರಾದ) ಶಾಂತಿನಾಥ ದೇಸಾಯರ ಕೃತಿ ಪ್ರಕಟಿಸಿತೆಂದು ಹೇಳುತ್ತಾರೆ. ಅನಂತರ ಕಾರ್ನಾಡರೊಂದಿಗೆ (ಶೂದ್ರ) ಕಂಬಾರರನ್ನೂ ಕರುಣೆಯಿಂದ ಎತ್ತಿಕೊಂಡರು. ಚಂದ್ರಶೇಖರ ಕಂಬಾರರದು ನೈಜ ಜಾನಪದ ಪ್ರತಿಭೆ (genius); ಕಾರ್ನಾಡರದು ಗಾಢ ಪರಿಶ್ರಮದಿಂದ – (ಮತ್ತು ಹರಿ – ವಾಯುಗಳ ಕೃಪೆಯಿಂದ) – ಗಳಿಸಲ್ಪಟ್ಟ ಕ್ಷಮತೆ (talent). ಜೋಶಿಯವರು ಗಿರೀಶರನ್ನು ತಲೆ ಮೇಲೆ ಹೊತ್ತು ಮೆರೆಸಿದರು; ಕಂಬಾರರನ್ನು ಮಾತ್ರ ಬಗಲಲ್ಲಿ ಅವಚಿಕೊಂಡರು. ಈ ತಾರತಮ್ಯದ ಅರಿವು ಕಂಬಾರನಿಗಿದೆ; ಆದರೆ ಮೂಲತಃ ಅವಕಾಶವಾದಿಯಾಗಿರುವ ಅವನು, ಎಲ್ಲವನ್ನೂ ಸಹಿಸಿಕೊಳ್ಳಬಲ್ಲ ಕುಶಲಕರ್ಮಿ, (ಕರ್ನಾಟಕ ಯೂನಿವರ್ಸಿಟಿಯ ಲಿಂಗಾಯತರನ್ನು ಬಯ್ಯುತ್ತಲೇ ಅವನು ಧಾರವಾಡದ ವಿಪ್ರರಿಗೆ ಆತ್ಮೀಯನಾದದ್ದು ಕೂಡ ನಿಜ.)

ಕಾರ್ನಾಡ, ಕಂಬಾರ ಇಬ್ಬರೂ ತಮ್ಮನ್ನು ಉದ್ಧರಿಸಿದ ಕೀರ್ತಿನಾಥರ ಉಪಕಾರ ಮರೆಯಲಿಲ್ಲ. ಕೇಂದ್ರ ಸರಕಾರದ ಆಯಕಟ್ಟಿನ ಹುದ್ದೆಗಳನ್ನು ಅಲಂಕರಿಸಿದ ಕಾರ್ನಾಡರು ಜಿ.ಬಿ. ಜೋಶಿಯವರಿಗೆ ‘ಪದ್ಮಶ್ರೀ’ ಪ್ರಶಸ್ತಿ ಕೊಡಿಸಿದರು; ಕುರ್ತಕೋಟಿ ಅವರ ‘ಆ ಮನಿ’ ನಾಟಕಕ್ಕೆ ಯಾವುದೋ ಬಹುಮಾನ ಕೊಡಿಸಿದರು. (ಇದನ್ನೆಲ್ಲ ಅವರೇ ಹೇಳಿಕೊಂಡಿದ್ದಾರಂತೆ.) ‘ನಾನೇನ ಮಾಡಲಿ ಬಡವನಯ್ಯಾ’ – ಅಂತ ಕಂಬಾರ ಕೂಡ, ಹಂಪಿ ವಿಶ್ವವಿದ್ಯಾಲಯದ ಕುಲಪತಿ ಆಗಿದ್ದಾಗ, ಕುರ್ತಕೋಟಿ ಅವರಿಗೆ ಟಿಎಡಿಎ ಕೊಡಿಸುವ ಮೂಲಕವೇ ತನ್ನ ‘ರಿಣಭಾರ’ ಇಳಿಸಿಕೊಂಡನಂತೆ!

*

‘ಹೀಗೆಲ್ಲಾ ಬರೆಯುವ ನಿಮ್ಮದು ಕುರ್ತಕೋಟಿ ಜೊತೆ ಎಂಥಾ ಸಂಬಂಧ?’ – ಅಂತ ನೀವು ಕೇಳಬಹುದು. ಅಲ್ಲೇ ಮಜಾ ಇರೋದು!

೧೯೬೪ರಲ್ಲಿ ಪ್ರಾರಂಭವಾದ ‘ಸಂಕ್ರಮಣ’ ಪತ್ರಿಕೆ, ಈ ದಿನಗಳಲ್ಲಿ ಮತ್ತೊಂದು ಪರ್ಯಾಯ ಬೆಳವಣಿಗೆಗೆ ನಾಂದಿ ಹಾಡಿದ್ದು ನಾಡಿಗೇ ಗೊತ್ತಿರುವ ವಿಚಾರ. ಮೊದಲ ಹನ್ನೊಂದು ವರ್ಷಗಳಲ್ಲಿ – (೧೯೭೫ ರವರೆಗೆ) – ಈ ಬಳಗದ ತ್ರಿಮೂರ್ತಿಗಳೆಂದರೆ: ಒಂದೇ ಓರಗೆಯ ಗಿರಡ್ಡಿ, ಪಟ್ಟಣಶೆಟ್ಟಿ ಮತ್ತು ಚಂಪಾ (ಅರ್ಥಾತ್ ನಾನು). ನಮ್ಮ ಒಲವೆಲ್ಲ ‘ನವ್ಯ’ದ ಕಡೆಗೆ. (ಕೀರ್ತಿನಾಥರು ಕನ್ನಡದ ‘ನವ್ಯ’ ಸಾಹಿತ್ಯ ಐತಿಹಾಸಿಕವಾಗಿ ಅನಿವಾರ್ಯವಲ್ಲ ಎಂಬ ನಿಲುವಿನವರು; ಅವರು ಬೆಂಗಳೂರು ಕಡೆಯ ಅಡಿಗ ಶರ್ಮ ಮುಂತಾದವರಿಗೆ ಒಪ್ಪಿಗೆಯಾಗಲೇ ಇಲ್ಲ.) ನಾವು ‘ಬ್ರಾಹ್ಮಣೇತರ’ರಾದರೂ ನಮ್ಮ ನಿಲುವುಗಳಲ್ಲಿ ಅಗಾಧ ವ್ಯತ್ಯಾಸವಿತ್ತು. ‘ಅಟ್ಟ’ದವರೊಂದಿಗೆ ಹೆಚ್ಚಿನ ಒಡನಾಟವಿದ್ದುದು ಗಿರಡ್ಡಿಗೆ. ಇಂಥ ಒಡನಾಟಕ್ಕೆ ನಮ್ಮ ಕಡೆ ‘ಹೊಕ್ಕಾಟ’ ಅನ್ನುತ್ತಾರೆ; ಇದರಿಂದಾಗಿ ಅವನಿಗೆ ‘ಬ್ರಾಹ್ಮಣ – ಪ್ರಿಯ’ ಎಂಬ ಕಳಂಕವೂ ಹತ್ತಿಕೊಂಡಿತು. ಪಟ್ಟಣಶೆಟ್ಟಿಯದು ಸಾಂದರ್ಭಿಕ ಒಡನಾಟ ಮಾತ್ರ. ಉದಾ: ಕಾರ್ನಾಡರ ‘ತಲೆದಂಡ’ ನಾಟಕದ ಪ್ರೂಫು ನೋಡುತ್ತಲೇ ಅದರ ‘ಕನ್ನಡ’ ಭಾಷೆಗೆ ಜವಾರಿ – ಸ್ಪರ್ಶ ಕೊಡುವ ಕೈಂಕರ್ಯ ಅವನದಾಗಿತ್ತೆಂದು, ಅವನಿಗಾಗದವರು ಹೇಳುತ್ತಾರೆ. (ಆ ಕಾಲದ ‘ಆಭಿನಂದನ’ ಗ್ರಂಥಗಳಿಗೆಲ್ಲ ನಮ್ಮ ಶೆಟ್ಟಿಯೇ ಸಂಪಾದಕನಾಗಿರುತ್ತಿದ್ದ.)

ನನ್ನ ಮಾತು – ನಿಲುವು – ವರ್ತನೆ ಮಾತ್ರ ಈಗ ಹೇಗಿತ್ತೋ ಆಗಲೂ ಹಾಗೆಯೇ. ಜೋಶಿ, ಕುರ್ತಕೋಟಿ ಅವರಿಗೆಲ್ಲ ಇದು ಗೊತ್ತು. ಬೇಂದ್ರೆ ಜೊತೆಗಿನ ನನ್ನ ಲೆವೆಲ್ ಕ್ರಾಸಿಂಗ್ ಕಾಳಗ ಅವರಿಗೆ ತಿಳಿದದ್ದೇ. ನನ್ನದು ಅವರ ನೆಲೆಯಿಂದ ನೇರವಾದ ವೈರಿಯ ಕ್ಯಾಂಪು.

ಆದರೆ ವಿಚಿತ್ರ ನೋಡಿರಿ. ಯೋಧರಿಗೆ ನೇರವಾದ ಶತ್ರುಗಳ ಬಗೆಗಿರುವ ಗೌರವ ಮತ್ತು ಆತ್ಮೀಯತೆ ತನ್ನ ಜೊತೆಗೆ ಇರುವ ಅನುಯಾಯಿಗಳ ಬಗ್ಗೆ, ವಂದಿಮಾಗಧರ ಬಗ್ಗೆ ಇರುವುದಿಲ್ಲ. ನನಗೆ ಗೊತ್ತು: ಪೇಜಾವರ ಸ್ವಾಮೀಜಿ ನನ್ನೊಂದಿಗೆ ಮಾತಾಡುವಷ್ಟು ಮುಕ್ತವಾಗಿ ತಮ್ಮ ಸಾಹಿತ್ಯಿಕ – ಆವೃತ್ತಿಯಂತಿರುವ ‘ಮರಿ – ಪೇಜಾವರ’ ಅನಂತಮೂರ್ತಿಯೊಂದಿಗೆ ಮಾತಾಡಲು ಸಾಧ್ಯವಿಲ್ಲ. (ಇದು ನನ್ನ ಭ್ರಮೆಯೂ ಇರಬಹುದು.) ಹಾಗೆಯೇ ಜಿ.ಬಿ. ಜೋಶಿ – ಕುರ್ತಕೋಟಿ ಕೂಡ. ಕುರ್ತಕೋಟಿ ತಮ್ಮ ಊರಿನ ಗೌಡರು; ನಾನೂ ನಮ್ಮೂರಿನಲ್ಲಿ ಗೌಡನೇ. ಈ ‘ಗೌಡ’ರಿಗೆ ಆಸ್ತಿ ಇಲ್ಲದಿದ್ದರೂ ಒಣ ಧಿಮಾಕಕ್ಕೇನೂ ಕೊರತೆ ಇಲ್ಲ. ಈ ಸಂಗತಿ ಕೂಡ ಕೀರ್ತಿಯವರೊಂದಿಗೆ ನನಗಿದ್ದ ಸಲುಗೆಗೆ ಕಾರಣವಿರಬೇಕು.

*

ಕುರ್ತಕೋಟಿ ಅವರನ್ನು ಕುರಿತು ಗಿರಡ್ಡಿ; ‘(ಅಂಕಣ) ಬರಹಗಳಲ್ಲಿ ಅವರು ಮತ್ತೆ ಮತ್ತೆ ಭಾಷೆಯ ಸ್ವರೂಪದ ಬಗ್ಗೆ ಆಲೋಚಿಸಿರುವುದು ಕುತೂಹಲವಾಗಿದೆ. ಯಾವುದೇ ವಿಷಯವನ್ನು ಎತ್ತಿಕೊಂಡರೂ ಅದು ಮತ್ತೆ ಭಾಷೆಯ ನೆಲೆಗೇ ಬಂದು ನಿಲ್ಲುತ್ತದೆ….’ ಇದು ನಿಜ. ಭಾಷೆಯ ಎಳೆಗಳೇ ಅವರಿಗೆ ವಿಮರ್ಶೆಯಲ್ಲೂ ಮುಖ್ಯವಾಗಿತ್ತು. ಕುಮಾರವ್ಯಾಸ, ಬೇಂದ್ರೆ; ಕುರ್ತಕೋಟಿಯವರಿಗೆ ಈ ಮಟ್ಟಿಗೆ ಬಂಗಾರದ ಗಣಿಯಾಗಿದ್ದರು.

ಆದರೆ ಈ ಪ್ರಚಂಡ ವಿಮರ್ಶಕ ಪೇಚಿಗೆ ಸಿಗುತ್ತಿದ್ದದು ಗಿರೀಶ ಕಾರ್ನಾಡರ ‘ಭಾಷೆ’ಯ ವಿಷಯದಲ್ಲಿ ಮಾತ್ರ. ಯಯಾತಿ, ತುಘಲಕ್, ಹಯವದನಗಳ ಭಾಷೆಯ ಬಗ್ಗೆ ‘ಇತಿಹಾಸ, ಪುರಾಣ ವಸ್ತುವಾಗಿದ್ದಾಗ ಭಾಷೆ ತಟಸ್ಥವಾಗಿರಬೇಕು’ ಎಂಬ ನಿಲವು ತಾಳಿದರು. – (ಅವರ ‘ತಟಸ್ಥ’ಕ್ಕೆ ನಮ್ಮ ಅರ್ಥ; ‘ಮೃತ’). ಮುಂದೆ ‘ತಲೆದಂಡ’ದಲ್ಲಿ ಆಡುಮಾತಿನ ಜೀವಂತ ಭಾಷೆ ಬಳಕೆಯಾದಾಗ, ಕುರ್ತಕೋಟಿಯವರು ಅದನ್ನೂ ಬಲವಾಗಿ ಸಮರ್ಥಿಸಿದರು!… ನಮ್ಮ ಅನೇಕ ಪ್ರಖ್ಯಾತ ‘ವಿಮರ್ಶಕ’ರು ಈ ನಮೂನಿಯ ‘ಸಮರ್ಥಕ’ರೇ ಆಗಿದ್ದಾರೆ.

*

ಆದರೆ ಕುರ್ತಕೋಟಿ ಅವರ ಬಗ್ಗೆ ಯಾಕೆ ಕಕ್ಕುಲಾತಿ ಅಂದರೆ, ಅವರು ‘ಗ್ರಂಥಮಾಲೆ’ಯ ಹಿಡನ್ ಅಜೆಂಡಾದ ಆಚೆಗೆ ಮಾತ್ರ ನೈಜ ಸಾಹಿತ್ಯದ ಪಕ್ಷಪಾತಿಯಾಗಿದ್ದರು. ಜಾತಿ, ವರ್ಗ, ಗುಂಪು, ವಯಸ್ಸು ಎಂಬ ಭೇದವಿಲ್ಲದೆ ಎಲ್ಲಿಯೇ ‘ಪ್ರತಿಭೆ’ ಕಂಡುಬಂದರೂ, ಅದನ್ನು ಗುರುತಿಸಿ ಮುನ್ನುಡಿ – ಹಿನ್ನುಡಿ – ಬೆನ್ನುಡಿಗಳ ರೂಪದಲ್ಲಿ ಶಾಭಾಸ್‌ಗಿರಿ ಕೊಡುತ್ತಿದ್ದರು. ಎಲ್ಲಕ್ಕೂ ಹೆಚ್ಚಾಗಿ ತಮ್ಮ ಎಲಡಿಕೆ ಹರಿಚಿಕೊಂಡ ರೀತಿಯಲ್ಲಿ ತಮ್ಮನ್ನೂ ಹಂಚಿಕೊಳ್ಳುತ್ತಿದ್ದ ಪ್ರೀತಿಯ ಗೆಳೆಯ ಅವರು… ಇದು ಧಾರವಾಡದ ಸಂಸ್ಕೃತಿ. ರಣಬಿಸಿಲಿಗೆ ಭೂಮಿ ಒಣಗಿ ರಟ್ಟಾದರೂ ಅಂತರಾಳದ ಹದ ಮಾತ್ರ ಹಸಿಯಾಗಿಯೇ ಇರುವುದು – ಇಂಥ ಸಂಸ್ಕೃತಿಯ ಲಕ್ಷಣ.

*

ಧಾರವಾಡದ ‘ಅಟ್ಟ’ದ ಮೇಲಿನ ‘ಅಗ್ರಹಾರ’ದ ಮುಖ್ಯ ‘ಭಟ್ಟ’ರಾಗಿದ್ದ ಕೆ. ಡಿ. ಕುರ್ತಕೋಟಿ, ತಮ್ಮ ಪೌರೋಹಿತ್ಯದ ಕಾಯಕ ಮುಗಿದ ನಂತರ, ಸುಭಾಸ ರಸ್ತೆಯಲ್ಲಿ ಅಡ್ಡಾದಿಡ್ಡಿ ನಡೆಯುತ್ತ ಹಲೋ, ಹಲೋ ಅಂತ ಪ್ರೀತಿಯಿಂದ ಕೈಕುಲುಕುತ್ತಿದ್ದ ಟಿಪಿಕಲ್ ‘ಧಾರವಾಡಿಗ’ರೇ ಆಗಿದ್ದರು….. ಅಂಥವರ ಒಡನಾಟದ ನೆನಪೇ ನಮಗೀಗ ಒಡನಾಡಿ.

-೨೦೦೩