ಶಾಂತರಸರು ಈಗ ರಾಯಚೂರಿನಲ್ಲಿ ಇಲ್ಲ. ನಿವೃತಿಯ ದಿನಗಳನ್ನು ಗುಬರ್ಗಾದಲ್ಲಿ ಕಳೆಯುತ್ತಿದ್ದಾರೆ. ಆದರೆ ನಮ್ಮ ಸಾಂಸ್ಕೃತಿಕ, ವಲಯದಲ್ಲಿ ರಾಯಚೂರೆಂದರೆ ಶಾಂತರಸರ ನೆನಪು: ಶಾಂತರಸ ಅಂದರೆ ರಾಯಚೂರಿನ ನೆನಪು.

ಡಾ. ಚಿದಾನಂದಮೂರ್ತಿಯವರ ಪರಂಪರೆಯು. ಇತಿಹಾಸದ ಬೇರುಗಳನ್ನು ಹುಡುಕಿಕೊಂಡು ಭೂತದ ಕಾಲಕೋಶದಲ್ಲಿ ಮುಳುಗುವ ಪ್ರವೃತ್ತಿ ಉಳ್ಳವರು ಅವರು. ‘ಹೈದ್ರಾಬಾದ್ದ ಕರ್ನಾಟಕ’ ಎಂದೇ ಪರಿಚಿತವಿರುವ ಗುಲಬರ್ಗಾ – ಬೀದರ – ರಾಯಚೂರು ಜಿಲ್ಲೆಗಳ ಭೂ ಪ್ರದೇಶಕ್ಕೆ ‘ಕಲ್ಯಾಣ ಕರ್ನಾಟಕ’ ಅಂತ ಹೆಸರಿಡೋಣ ಅಂತ ಒಮ್ಮೆ ಅಂದರು. ಆದರೆ ನಿಜಾಮರ ಆಡಳಿತ ನಮ್ಮ ನೋವಿನ ಇತಿಹಾಸದ ಭಾಗವೆಂದು ವಾದಿಸುವ ಅಲ್ಲಿಯ ಜನ ಚಿಮೂ ಅವರ ಪ್ರಸ್ತಾವನೆಯನ್ನು ತಳ್ಳಿಹಾಕಿದರು. ಈಗ ಮತ್ತೆ ಹೈದ್ರಾಬಾದ್ ಕರ್ನಾಟಕ ತನ್ನ ಪ್ರತ್ಯೇಕ ಅಸ್ತಿತ್ವದ ಕೂಗಿನೊಂದಿಗೆ ಸುದ್ದಿ ಮಾಡುತ್ತಲೇ ಇದೆ. ವಿಚಿತ್ರವೆಂದರೆ: ಎಸ್. ಎಂ. ಕೃಷ್ಣರ ಸದ್ಯದ ಸಚಿವ ಸಂಪುಟದಲ್ಲಿ ಗುಲಬರ್ಗಾ ಜಿಲ್ಲೆಯಿಂದಲೇ ಆರು ಜನ ಸಚಿವರಿದ್ದಾರೆ.!

ಇಂಡಿಯಾಕ್ಕೆ ಸ್ವಾತಂತ್ರ ಬಂದ ಮೂರು ವರ್ಷಗಳ ನಂತರ ಈ ಭಾಗದ ಜನತೆಗೆ ಸ್ವಾತಂತ್ರ ಬಂದದ್ದು – ಸಂಸ್ಥಾನಗಳ ವಿಲೀನಕರಣವಾದಾಗ, ಅನಂತರ ಆಡಳಿತದ ಅನುಕೂಲಕ್ಕಾಗಿ ಬಳ್ಳಾರಿ ಜಿಲ್ಲೆಯನ್ನು ಸೇರಿಸಲಾಯಿತಾದರೂ ಹೈ. ಕ. ಜನತೆಗೆ ಇಂದಿಗೂ ಬಳ್ಳಾರಿ ಅಂದರೆ ಪರಸ್ಥಳವೇ.

*

ಈ ಭಾಗದೊಂದಿಗೆ ಬೆರೆತು ಹೋದ ಜೀವ: ಶಾಂತರಸ. ತನ್ನ ಪರಿಸರದ ನೆಲ – ಮುಗಿಲಗಳೊಂದಿಗೆ, ಇತಿಹಾಸ – ವರ್ತಮಾನದೊಂದಿಗೆ, ಬದುಕು – ಭಾಷೆಯೊಂದಿಗೆ, ಸಾಹಿತ್ಯ – ಸಂಸ್ಕೃತಿಯೊಂದಿಗೆ ಈ ತೆರನಾದ ಸಾಮರಸ್ಯ ಹೊಂದಿದ ಇನ್ನೊಬ್ಬ ವ್ಯಕ್ತಿಯನ್ನು ಊಹಿಸಿಕೊಳ್ಳುವುದು ಕಷ್ಟ.

ಶಾಂತರಸರೊಂದಿಗೆ ನನ್ನದು ನಾಲ್ಕು ದಶಕಗಳ ಒಡನಾಟ, ಒಮ್ಮೆ ಪರಿಚಯವಾದರೆ ಸಾಕು. ವಯಸ್ಸಿನ ಅಂತರ ಕಿರಿದಾಗಿ, ಕಿರಿದಾಗಿ. ಅವರು ನಿಮ್ಮ ಕರುಳಬಳ್ಳಿಯ ಬಳಗವಾಗಿ ಬಿಡುತ್ತಾರೆ. ನಿಮ್ಮ ಭಾವಕೋಶದ ಒಂದು ಸೆಲೆಯಾಗುತ್ತಾರೆ. ನಿಮ್ಮ ಬದುಕಿನ ಅಜೀವ ಸದಸ್ಯರಾಗುತ್ತಾರೆ.

‘ಸಂಕ್ರಮಣ’ ದೊಂದಿಗೆ ಕೂಡ ಶಾಂತರಸರದು ಸಹಜವಾದ ನಂಟು. ೧೯೮೧ ರಲ್ಲಿ ಅವರ ‘ಬಡೇಸಾಬು ಪುರಾಣ’ ಸಂಕ್ರಮಣ ಪ್ರಕಾಶನದಿಂದಲೇ ಹೊರಬಂದಿದ್ದು.

ಸಂಕ್ರಮಣ ೨೧೪ (ಜೂನ್ ೧೯೯೦) ಸಂಚಿಕೆಯಲ್ಲಿ ನಾನು ಬರೆದ ಸಾಲುಗಳಿವು: “ಶಾಂತರಸರು ತಮ್ಮ ಕಾಲಕಿರ್ದಿಯಲ್ಲಿ ಹೈದ್ರಾಬಾದ್ ಕರ್ನಾಟಕದ ಅನೇಕ ಎಳೆಯರ ಬೆನ್ನು ಚಪ್ಪರಿಸಿ ಬಯಲಿಗೆ ಬರಲು ಅವಕಾಶ ಮಾಡಿಕೊಟ್ಟಿದ್ದಾರೆ. ಹೊಸ ಹೊಸ ಪೀಳಿಗೆಗಳ ಹರಿಯುವ ನೀರಿನೊಂದಿಗೆ ಅವರಿಗಿರುವ ಸಂವಾದ – ಸಂಪರ್ಕಗಳಿಂದಾಗಿಯೇ ಅವರಿನ್ನೂ ಜೀವಂತಿಕೆ ಸೆಲೆಯಾಗಿ ಉಳಿದಿರುವುದು. ಅವರಿಂದ ಬೆನ್ನು ಚೆಪ್ಪರಿಸಿಕೊಂಡ ಅನೇಕರು ಅವರಿಗೆ ಬೆನ್ನು ತೋರಿಸಿ ಹೋಗಿದ್ದಾರೆ: ಕೆಲವರು ಬೆನ್ನಿಗೆ ಚೂರಿಯನ್ನು ಹಾಕಿರಬಹುದು.”

*

ಶರಣ ಸಂಸ್ಕೃತಿಯ ವೈಚಾರಿಕ ನಾಡು ಹೈದ್ರಬಾದ್ ಕರ್ನಾಟಕ. ‘ಶಾಂತರಸ’ ಎಂಬುದು ೧೨ನೆಯ ಶತಮಾನದ ಶರಣನೊಬ್ಬನ ಹೆಸರು: ಅವನೊಬ್ಬ ಗ್ರಂಥಪಾಲಕನಾಗಿದ್ದ. (ತೀವ್ರ ಸಂವೇದನೆಯ ಸೂಕ್ಷ್ಮ ಕವಯತ್ರಿ ‘ಮುಕ್ತಾಯಕ್ಕ’ ಶಾಂತರಸರ ಮೊದಲ ಮಗಳು. ಇನ್ನೊಬ್ಬ ಮಗಳು ಭಾರತಿ ಮೋಹನ ಕೋಟಿ ಕೂಡ ಕವಯಿತ್ರಿಯೇ.) ಆ ಭಾಗದ ಹಿರಿಯ ತಲೆಮಾರಿನ ಬರಹಗಾರರು – ಸಿದ್ದಯ್ಯ ಪುರಾಣಿಕ, ಜಯತೀರ್ಥ ರಾಜಪುರೋಹಿತ, ಕೆ. ಮುದ್ದಣ್ಣ, ದೇವೇಂದ್ರ ಕುಮಾರ ಹಕಾರಿ, ಪಂಚಾಕ್ಷರಿ ಹಿರೇಮಠ: ಇವರೆಲ್ಲ ಶಾಂತರಸರ ಒಡನಾಡಿಗಳು. ರಜಾಕಾರರ ವಿರುದ್ದದ ಚಳುವಳಿಯಲ್ಲಿ ಪಾಲುಗೊಂಡವರಿವರು. ಇವರು ಬರೆದ ಅಕ್ಷರಗಳಲ್ಲಿ ಆ ಇತಿಹಾಸ ಜೀವ ತಾಳಿದೆ.

ಶಾಂತರಸರ ಕತೆಗಳೆಲ್ಲ ಆ ನಾಡಿನ ‘ಮಿರ್ಥ’ ಗಳಂತಿವೆ. ನಿಜಾಮಶಾಹಿ. ಸಂಸ್ಕೃತಿಯ ದಟ್ಟ ವಿವರಗಳೊಂದಿಗೆ. ಆ ನೆಲದ ದುರಂತಗಳೂ ಧ್ವನಿ ಪಡೆದಿವೆ. ಕನ್ನಡದ ಉತ್ತಮ ಕತೆಗಾರರಲ್ಲಿ ಒಬ್ಬರು ಶಾಂತರಸ – ಎಂದು ನಮ್ಮ ವಿಮರ್ಶೆ ಸ್ವೀಕರಿಸಿದೆ. ಅವರದು ನೇರ ನಿಚ್ಚಳ ದೃಷ್ಟಿ: ಯಾವ ಸೋಗೂ ಇಲ್ಲ.

ತಮ್ಮ ಕಥೆಗಳ ಬಗ್ಗೆ ಅವರು ಹೇಳುತ್ತಾರೆ: ‘ನನ್ನ ಕಥೆಗಳು ಕಾಲ್ಪನಿಕವೆಂದು, ಎಲ್ಲ ಪಾತ್ರಗಳೂ ಕೇವಲ ಕಲ್ಪನೆಯಲ್ಲಿ ಮೈದಳೆದುವೆಂದು ನಾನು ಸುಳ್ಳು ಹೇಳಲಾರೆ … ಯಾವ ಮಠಕ್ಕೂ ನಾನು ಸೇರಿಲ್ಲ ….. ನನ್ನ ದಾರಿಯಲ್ಲಿ ನಾನು ನಡೆದಿದ್ದೇನೆ.’

*

ಆ ದಿನಗಳಲ್ಲಿ ಶಾಂತರಸರು ತಮ್ಮ ಆತ್ಮೀಯರಾಗಿದ್ದ ಸಿರವಾರದ ಉಮಾಪತಿ ಚುಕ್ಕಿ ಅವರ ಪುಣ್ಯ ತಿಥಿಯನ್ನು – (ಅವರ ಪುತ್ರರಾದ ಅಮರೇಶ ಮತ್ತು ಸೂಗಪ್ಪ ಚುಕ್ಕಿ ಅವರ ಪ್ರಾಯೋಜಕತ್ವದಲ್ಲಿ) – ಒಂದು ಸಾಂಸ್ಕೃತಿಕ ಹಬ್ಬದಂತೆ ಆಚರಿಸುತ್ತಿದ್ದರು. ಕರ್ನಾಟಕದ ಅನೇಕ ದಿಕ್ಕುಗಳಿಂದ ಪ್ರತಿಭೆಗಳು ಹರಿದು ಬರುತ್ತಿದ್ದವು. ಆ ಕಾರ್ಯಕ್ರಮದ ಮುಖ್ಯ ಆಕರ್ಷಣೆ: ಸಿದ್ದರಾಮ ಜಂಬಲದಿನ್ನಿ ಅವರ ವಚನ ಸಂಗೀತ. ಆಂಥ ಕಂಠವನ್ನು ನಾನೆಲ್ಲೂ ಕೇಳಿಲ್ಲ. ಶರಣರ ನುಡಿಗಳನ್ನು ತಮ್ಮ ನಾದದ ಹಾರದಲ್ಲಿ ಪೋಣಿಸುತ್ತ ಮುಗಿಲಿಗೇ ಕಾಮನಬಿಲ್ಲು ತೊಡಿಸುವ ಅದ್ಭುತ ಕಲಾವಿದರಾಗಿದ್ದರು ಜಂಬಲದಿನ್ನಿ.

ಇಂಥ ಒಡನಾಟಗಳ ಮೂಲಕವೇ ನನಗೆ ಆ ಭಾಗದ ಕಿರಿಯ ಪೀಳಿಗೆ ಸಾಹಿತಿಗಳು – (ಚೆನ್ನಣ್ಣ ವಾಲೀಕಾರ, ಅಲ್ಲಮಪ್ರಭು ಬೆಟ್ಟದೂರ, ಗವಿಸಿದ್ದ ಬಳ್ಳಾರಿ, ರಾಜಶೇಖರ ನೀರಮಾನ್ವಿ, ಬಿ. ಟಿ. ಲಲಿತನಾಯಕ್, ಎಸ್ ಜಿ. ಸ್ವಾಮಿ, ಶಶಿಕಲ ವೀರಯ್ಯಸ್ವಾಮಿ, ಅಮರೇಶ ನುಗಡೋಣಿ, ಜಂಬಣ್ಣ ಅಮರಚಿಂತ ಮುಂತಾದವರು ಆತ್ಮೀಯ ಸಂಗಾತಿಗಳಾದದ್ದು) – ರಾಯಚೂರಿನ ಗಜಲ್ ಗುಂಡಮ್ಮ ಪರಿಚಯವಾದದ್ದು ಶಾಂತರಸರ ಮೂಲಕವೇ. ನಾನು ‘ಗುಂಡಮ್ಮನ ಹಾಡು’ ಬರೆದದ್ದು ಅವಳ ಗಜಲ್ ಗುಂಗಿನಲ್ಲಿಯೇ: ಕೊಪ್ಪಳ ಸಮ್ಮೇಳನದಲ್ಲಿ (೧೯೯೩)- ಸಂಗೀತಾಕಟ್ಟಿ ಅದನ್ನು ಹಾಡಿ ನನ್ನ ಗುಂಗನ್ನು ನಾಡಿಗೆಲ್ಲ ಹಂಚಿದಳು.

*

ಚಳುವಳಿಯೇ ಉಸಿರಾಗಿರುವ ಶಾಂತರಸರು ನಾಡಿನ ಅನೇಕ ಪ್ರಗತಿಪರ, ಜನಪರ ಆಂದೋಲನಗಳಲ್ಲಿ ಮಹತ್ವದ ಪಾತ್ರವಾಡಿದ್ದಾರೆ. ಒಕ್ಕೂಟ, ಜೆಪಿ ಚಳುವಳಿ, ಬಂಡಾಯ ಸಂಘಟನೆ, ಗೋಕಾಕ್ಚಳುವಳಿ – ಒಂದೇ ಎರಡೇ! ಅವರು ಗುಲಬರ್ಗಾ ಆಕಾಶವಾಣಿ ಕೇಂದ್ರದಿಂದ ವಾಚಿಸಿದ ‘ಭಗವದ್ಗೀತೆ’ ಕುರಿತಾದ ಒಂದು ಕವನ ಪುರೋಹಿತಶಾಹಿಯನ್ನು ಕೆರಳಿಸಿ ಒಂದು ವೈಚಾರಿಕ ಸಂಘರ್ಷಕ್ಕೂ ಹಾದಿ ಮಾಡಿಕೊಟ್ಟಿತ್ತು. ಅವರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷಗಿರಿಯ ಅವಧಿ ಸ್ವಲ್ಪ ಗೊಂದಲದಿಂದ ಕೂಡಿತ್ತಾದರೂ ಅವರು ಅನೇಕ ಮಹತ್ವದ ಪ್ರಕಟಣೆಗಳನ್ನು ತಂದದ್ದು ಮರೆಯುವಂತಿಲ್ಲ.

ಶಾಂತರಸರಷ್ಟೇ ವಿಶಿಷ್ಟ ಅವರ ಪತ್ನಿ ಲಕ್ಷ್ಮೀದೇವಿ ಅವರದು. ನೇರ ಮಾತು ವಿನೋದ ಪ್ರವೃತ್ತಿ ವೈಚಾರಿಕ ಸ್ಪಷ್ಟತೆ. ಆತ್ಮೀಯತೆ: ಆ ತಾಯಿಯ ಗುಣಗಳು. ಗಂಡನನ್ನು ಮಗುವಿನಂತೆ ನೋಡಿಕೊಂಡಿದ್ದ ಆ ತಾಯಿ, ಗಂಡನಿಂದ ಮಗುವಿನೋಪಾದಿಯಲ್ಲೇ ಉಪಚಾರ ಪಡೆದು ತೀರಕೊಂಡರು. ಶಾಂತರಸರ ಈಗಿನ ಗುಲಬರ್ಗಾದ ಮನೆಯ ಹೆಸರು ‘ಲಕ್ಷ್ಮೀ’.

ಒಂದು ಪ್ರಸಂಗ ದಾಖಲಿಸಬೇಕು ನಾನು.

ಸಂಕ್ರಮಣ ಚಂದಾ ಸಂಗ್ರಹಕ್ಕಾಗಿ ರಾಯಚೂರಿಗೇ ಹೋಗಿದ್ದೆ. ಗೆಳೆಯರೆಲ್ಲ ನೆರವಾದರು. ಎರಡು – ಮೂರು ದಿನದ ನಂತರ ಧಾರವಾಡಕ್ಕೆ ಹೊರಟು ನಿಂತೆ. ಇನ್ನೂ ಕೆಲವರನ್ನು ಕಾಣಬೇಕಾಗಿತ್ತು.

ಲಕ್ಷ್ಮೀದೇವಿ: ಈಗ ಊರಿಗೆ ಹೋಗಬ್ಯಾಡ್ರಿ. ಚಂದಾ ಕೇಳಾಕ ಹೋದಾಗ ನೀವು ಇರಾಕ ಬೇಕು.

ನಾನು: ಹಂಗೇನಿಲ್ಲ. ನೀವು ಕೇಳಿದ್ರ ಯಾರೂ ಇಲ್ಲ ಅನ್ನಂಗಿಲ್ಲ.

ಅವರು: ನಿಮಗ ತಿಳೆಂಗಿಲ್ಲ ಬಿಡ್ರಿ.

ನಾನು: ಏನು ತಿಳೆಂಗಿಲ್ರಿ?

ಅವರು: ಹೆಣಾ ಎದುರಿಗಿದ್ರ ಅಳಾಕ ಚೆಂದರೆಪಾ!

*

ಶಾಂತರಸ ಅಂದರೆ ಒರತೆಯ ನೀರು. ಅದೊಂದು ಉರಿಯುವ ಬೆಳದಿಂಗಳು. ಬರೆದಷ್ಟೂ ಬರೆಯಬೇಕು. ಅನ್ನಿಸುತ್ತದೆ. ಗದಗಿನ ಗೆಳೆಯ ಚಂದ್ರಶೇಖರ ವಸ್ತ್ರದ ಒಂದು ಕವನ ಅರ್ಜಂಟಾಗಿ ಬೇಕು ಅಂದಾಗ ನಾನು ೧೯೮೯ ರಲ್ಲಿ ಬರೆದ ಕವನವಿದುಃ

ಶಾಂತರಸ

ಚಾಳೀಸಿನ ನಂಬರು ಹೆಚ್ಚಾದಂತೆಲ್ಲ ಕಣ್ಣಿನ ನೋಟದ
ಕ್ಷಿತಿಜದ ವಿಸ್ತಾರ ಹೆಚ್ಚಾಗುವ
ಸೋಜಿಗವ
ನೀವು ಕಂಡಿದ್ದೀರಾ?
ಹಣ್ಣುಗಳೆಲ್ಲ ಸಾಮಾನ್ಯವಾಗಿ ಮಾಗಿ
ಪಕ್ವವಾಗಿ ಕೊಳೆತು ಹೋಗುತ್ತವೆ.
ಈ ಹಣ್ಣು ಮಾತ್ರ
ಮತ್ತೆ ಕಾಯಾಗಿ ಹೀಚಾಗಿ ಹೂವಾಗಿ
ಅರಳುವ ಚೆಲುವ
ನೀವು ಕಂಡಿದ್ದೀರಾ?
ಕಡಲಾಳದ ಕುದಿತವೆಲ್ಲ
ಕತೆಯಾಗಿ
ಕವನವಾಗಿ
ಲಾವರಸವಾಗಿ ಹೊರನುಗ್ಗಿ
ಮತ್ತೆ ತೋರಿಕೆಗೆ ಮುಖ
ಶಾಂತ-ರಸವ ಸೂಸುವ ಅಸಂಗತವ
ನೀವು ಕಂಡಿದ್ದೀರಾ?

-೨೦೦೩