ಧಾರವಾಡದ ಕರ್ನಾಟಕ ಕಾಲೇಜು ಅಂದರೆ ಆ ಸೀಮೆಯ ನಮಗೆಲ್ಲ. ಎಷ್ಟೆ ಕಷ್ಟ ಬಂದರೂ ಹೋಗಿ ತಲುಪಬೇಕು ಎಂಬ ಕನಸು ಮೂಡಿಸುತ್ತಿದ್ದ ಒಂದು ಆದರ್ಶ ಲೋಕ. ಇಡೀ ಉತ್ತರ ಕರ್ನಾಟಕದ ಪ್ರತಿಭೆ ಅಲ್ಲಿಗೆ ಹರಿದು ಬರುತ್ತಿತ್ತು. ನಾನು ಅಲ್ಲಿ ವಿದ್ಯಾರ್ಥಿಯಾಗಿದ್ದಾಗ – (೧೯೫೬ – ೧೯೬೦) – ನಮ್ಮಂಥ ಕಿರಿಯರಿಗೆ ಹಿರಿಯ ಗುರುಗಳಾಗಿ ದೊರೆತವರು ಪ್ರಿನ್ಸಿಪಾಲ್ ಗೋಕಾಕರು. ನಾನು ಕರ್ನಾಟಕ ಸಂಘದ ಕಾರ್ಯದರ್ಶಿ.

ಒಮ್ಮೆ ಕಾರ್ಯಕ್ರಮಕ್ಕೆಂದು ಬಂದಿದ್ದ ಚೆನ್ನವೀರ ಕಣವಿಯವರು ‘ನವ್ಯ ಕಾವ್ಯ’ ದ ಬಗ್ಗೆ ಮಾಡಿದ ಬಾಷಣದ ಟಿಪ್ಪಣಿ ಇನ್ನೂ ನನ್ನ ಹತ್ತಿರ ಇದೆ. ಅವರಿಗೂ ನಮಗೂ ಒಂದು ದಶದಕ ಅಂತರ. ಅಷ್ಟೆ. ಆದರೆ ಆಗ ಧಾರವಾಡದ ಆಕಾಶವನ್ನು ಬೇಂದ್ರೆ ಇನ್ನೂ ತುಂಬಿಕೊಂಡಿದ್ದರೂ ನಮಗೆಲ್ಲ ಹೆಚ್ಚು ಸಮೀಪ ಅನಿಸಿದವರು, ಆತ್ಮೀಯರೆನ್ನಿಸಿದವರು ಕಣವಿಯವರೇ. ಅವರು ಮಧುರ ಚೆನ್ನ – ಅಂಬಿಕಾತನಯದತ್ತರ ಸತ್ವವನ್ನು ಮೈಗೂಡಿಸಿಕೊಂಡು, ಹೊಸ ಮನ್ವಂತರದ ಬೆಳವಣಿಗೆಗಳಿಗೆ ಮುಕ್ತವಾಗಿ ಸ್ಪಂದಿಸುತ್ತ ತಮ್ಮ ಕಾವ್ಯವನ್ನು ರೂಪಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದರು ಆಗ. ಕಣವಿಯವರಿಗೆ ಗೋಕಾಕ – ಪ್ರಣಿತ ಮತ್ತು ಅಡಿಗ – ಪ್ರಣೀತ ಎರಡೂ ನವ್ಯ ಕಾವ್ಯ ಮಾರ್ಗಗಳು ಸ್ವೀಕಾರಾರ್ಹವಾಗಿದ್ದವು. ಬೇಂದ್ರೆ ಬಗ್ಗೆಯಂತೂ ವಿಪರೀತ ಭಕ್ತಿ: ಬೇಂದ್ರೆ ನಡೆದದ್ದೆ ಸಾಧನಕೇರಿ ಎಂಬ ಭಾವನೆ ಅವರದು.

*

ನನ್ನ ಪ್ರಾರಂಭದ ‘ಬಾನುಲಿ’ ಮತ್ತು ‘ಮಧ್ಯಬಿಂದು’ ಸಂಕಲನಗಳಲ್ಲಿ ನವೋದಯದ ಪ್ರಭಾವವಿದ್ದರೆ ಅದು ನನಗೆ ಕಣವಿಯವರ ಮೂಲಕವೇ ಬಂದದ್ದು. ಆದರೆ ಅನಂತರ ನನ್ನ ಕಾವ್ಯದ ಜಾಡೇ ಬದಲಾಯಿತು. ಅದು ಬೇರೆ ವಿಷಯ.

ಕಣವಿಯವರ ‘ಜೀವಧ್ವನಿ’ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಾಗ ನಾನು ‘ಲಂಕೇಶ ಪತ್ರಿಕೆ’ ಯ ಕಾಲಮ್ಮಿನಲ್ಲಿ (೭ ಡಿಸೆಂಬರ‍್ ೧೯೮೨) ಬರೆದ ಸಾಲುಗಳಿವು: ‘ಕಣವಿ- ಶಿವರುದ್ರಪ್ಪನವರನ್ನು (ಇತ್ತೀಚಿಗೆ ನಿಸಾರ್ ಅಹಮ್ಮದರನ್ನು) ಸಾರಾಸಗಟಾಗಿ ‘ಸಮನ್ವಯ’ ಕವಿಗಳೆಂದು ಸ್ವಲ್ಪ ತುಟಿ ಕೊಂಕಿಸಿ ಪ್ರಸ್ತಾಪಿಸುವುದು ನಮ್ಮ ವಿಮರ್ಶಾವಲಯದಲ್ಲಿ ಸಾಮಾನ್ಯ. ಐವತ್ತರ ದಶಕದಲ್ಲಿ ನವೋದಯದ ನಯನಾಜೂಕಿನ ಒಮ್ಮೆಲೆ ಗೊಂದಲಾಪುರದ ರಾಕ್ಷಸರು ದಾಳಿ ಮಾಡಿದಾಗ, ದಾಳಿಗೆ ಬಂದವರು ಇಲ್ಲಿಯೇ ‘ಟೆಂಟು’ ಹೊಡೆದಾಗ, ಎರಡೂ ಜಗತ್ತಿನ ‘ಒಳ್ಳೆಯ’ ಅಂಶಗಳನ್ನು ಯಾಕೆ ಒಗ್ಗಿಸಿಕೊಳ್ಳಬಾರದು ಎಂಬ ಒಳ್ಳೆ ಉದ್ದೇಶದಿಂದಲೇ ಈ ‘ಸಮನ್ವಯ’ ಪದವಿ ಜಾರಿಗೆ ಬಂದದ್ದು. ಆದರೆ ಧ್ವನಿ ಮತ್ತು ಸಪ್ಪಳಗಳಿಗೆ ಹೆಚ್ಚು ಅಂತರವಿರದ ನಮ್ಮ ದೇಶದ ಚರಿತ್ರೆಯಲ್ಲಿ ಇಂಥ ಶಬ್ದಗಳು ಹದಗೆಡಲು ಬಹಳ ದಿನ ಹಿಡಿಯುವುದಿಲ್ಲ. ಹೀಗಾಗಿ ಬರಬರುತ್ತ ಈ ‘ಸಮನ್ವಯ’ ಶಬ್ದ ಮಿಸಳಬಾಜಿಯಾಗಿಯೋ ಎಡಬಿಡಂಗಿತನವಾಗಿಯೋ. ‘ಸಮಯೋಚಿತ’ ಪ್ರಜ್ಞೆಯಾಗಿಯೋ ಪರಿಣಮಿಸಿದ್ದರು.’

*

ಈ ಬಿರುದಿನ ‘ಧ್ವನಿ’ಯನ್ನು ಎಂದೋ ಗ್ರಹಿಸಿದ ಜಿ. ಎಸ್ . ಎಸ್. ಅದನ್ನು ಸಾರ್ವಜನಿಕವಾಗಿಯೇ ತಿರಸ್ಕರಿಸಿದರು, ಸರಿಯಾದ ವೇಳೆಯಲ್ಲಿ ಕಠಿಣವಾದ ನಿಲುವನ್ನು ತಳೆದು, ಖಚಿತವಾಗಿ ಅಭಿವ್ಯಕ್ತಿಸುವ ಜಿ. ಎಸ್.ಎಸ್. ಒಮ್ಮೊಮ್ಮೆ ಹಿತಾಸಕ್ತ ವರ್ಗಗಳ ಆಕ್ರೋಶಕ್ಕೂ ಬಲಿಯಾಗುವುದುಂಟು. ಆದರೆ ಚೆನ್ನವೀರ ಕಣವಿಯವರ ವಿಷಯದಲ್ಲಿ ಹಾಗೆಂದೂ ಆಗಿಲ್ಲ: ಆಗುವುದು ಸಾಧ್ಯವೂ ಇಲ್ಲ. ಅವರಿಗೆ ಎರಡೂ ದಡ ಮುಖ್ಯ.:

ನಿಂತಿರುವ
ದಂಡೆ ವಾಸ್ತವವೆನಲು ಆಚೆ ದಡ ಕಲ್ಪನೆಯೇ? ಈಸು,
ಬಂದರೂ ಸಲೀಸು ತಲುಪವೆವೆಂಬ ಭರವಸೆಯುಂಟೆ?

– ಇದು ಕವಿ ಕಣವಿ ಕೇಳುವ ಪ್ರಶ್ನೆ. ಅವರ ಬದುಕೂ ಹಾಗೆಯೇ, ಧಾರವಾಡದ ಮಂದಿ ಜಗಳಗಂಟರು – ಎಂಬ ಮಾಮೂಲಿ ನಂಬಿಕೆಗೆ ‘ಅಪವಾದ’ ವಾಗಿ ಬೆಳೆದ ಈ ‘ಸಜ್ಜನ’ ಕವಿ ಯಾರೊಂದಿಗೂ ದನಿ ಏರಿಸಿ ಮಾತಾಡಿದವರಲ್ಲ. ಹೀಗಾಗಿ ನಾಡಿನುದ್ದಕ್ಕೂ ಅವರಿಗೆ ಎಲ್ಲ ಪೀಳಿಗೆಗಳ ಆತ್ಮೀಯರಿದ್ದಾರೆ. ನಮ್ಮ ‘ವ್ಯವಸ್ಥೆ’ಯ ಬಗ್ಗೆ ಅವರಿಗೆ ಆಳದಲ್ಲಿ ಕ್ರೋಧವಿದ್ದರೂ, ‘ಪ್ರಭುತ್ವ’ ವನ್ನು ಮಾತ್ರ ಅವರು ಎಂದೂ ಎದುರು ಹಾಕಿಕೊಂಡವರಲ್ಲ.

*

ಎಲ್ಲರೊಂದಿಗೆ ಹೊಂದಿಕೊಂಡು ಹೋಗುವುದೇ – (ಅಂದರೆ ‘ಸಮರಸವೇ ಜೀವನ’) ಮುಖ್ಯವೆಂದಾಗ ಒಮ್ಮೊಮ್ಮೆ ಮುಜುಗರದ ಪ್ರಸಂಗ ಬರುವುದು ಸಹಜ. ಎಮರ್ಜನ್ಸಿಯ ಪ್ರಾರಂಭದಲ್ಲಿ ಯಾವುದೋ ‘ಸರಕಾರಿ’ ಕವಿ ಸಮ್ಮೇಳನಕ್ಕೆ ಅಧ್ಯಕ್ಷತೆ ವಹಿಸಬೇಕಾಯಿತು ಅವರು: ವಹಿಸಿದರು. ಆದರೆ ಪ್ರಾಯಶ್ಚಿತ್ತವೆಂಬಂತೆ, ಸ್ವಲ್ಪ ವ್ಯಂಗ್ಯವೆನ್ನಬಹುದಾದ ಶೈಲಿಯನ್ನು ಬಳಸಿ, ಮೂರು ಪದ್ಯಗಳನ್ನೂ ಬರೆದರು. ೧೯೭೭ ರ ಜನವೆರಿ ತಿಂಗಳ ಕೊನೆಯಲ್ಲಿ ಅವರು ತಾವೇ ಮುಂದಾಗಿ ಧಾರವಾಡದಲ್ಲಿ ‘ಗಾಂಧಿ ಕವಿ ಸಮ್ಮೇಳನ’ ಮಾಡಿಸಿದ್ದು ನನಗೆ ನೆನಪಿದೆ.

*

ಕನ್ನಡನಾಡು ಒಂದಾಗಿ ನಲವತ್ತೇಳು ವರ್ಷಗಳೇ ಕಳೆದಿವೆ. ಆದರೆ ಇಂದಿಗೂ ಸಾರ್ವಜನಿಕ ವೇದಿಕೆಗಳಲ್ಲಿ ಕೇಳಿಬರುವ ಘೋಷಣೆಗಳಲ್ಲಿ ಒಂದು: ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ. ಈ ಘೋಷಣೆಯ ಕರ್ತೃ ಕಣವಿಯವರು. ಗೋಕಾಕ ಚಳುವಳಿಯನ್ನು ಮೊದಲ ಹಂತದಲ್ಲಿ ಮುನ್ನಡೆಸಿದ ಹಿರಿಯರಲ್ಲಿ ಅವರೂ ಒಬ್ಬರು. ಕಾಲಾಂತರದಲ್ಲಿ ಡಾ. ಶಂಭಾ ಜೋಶಿಯವರು ಮುಂಬೈಗೆ ಹೊರಟುಹೋದ ಮೇಲೆ. ಅ. ಕ. ಕೇಂದ್ರ ಕನ್ನಡ ಕ್ರಿಯಾ ಸಮಿತಿಯ ಅಧ್ಯಕ್ಷತೆಯ ಜವಾಬ್ದಾರಿಯೂ ಕಣವಿಯವರ ಹೆಗಲ ಮೇಲೇ ಬಿತ್ತು.

ಚಳುವಳಿಯೇ ಮುಖ್ಯವಾಗಿರುವ ಸಂಘಟನೆಯೊಂದರ ಅಧ್ಯಕ್ಷರಾಗಿರುವುದು ಸ್ವಲ್ಪ ತ್ರಾಸಿನ ಕೆಲಸ. ಪ್ರತಿಕೂಲ ಪರಿಸ್ಥಿತಿಯಲ್ಲಿ, ‘ವ್ಯವಸ್ಥೆ’ ಗೆ ವಿರುದ್ದವಾಗಿ, ಒಮ್ಮೊಮ್ಮೆ ಪ್ರತಿಷ್ಟಿತ, ಬಲಿಷ್ಠ ವ್ಯಕ್ತಿಗಳನ್ನು ಎದುರು ಹಾಕಿಕೊಂಡು, ಖಚಿತ ನಿಲುವು ತಾಳುವುದು ಅನಿವಾರ್ಯವಾಗುತ್ತದೆ. ಇಂಥದೆಲ್ಲ ಕಣವಿ ಅವರಿಗೆ ಆಗಿಬರುವುದಿಲ್ಲ. ಹೀಗಾಗಿ ಕ್ರಿಯಾಸಮಿತಿಯ ಪ್ರಧಾನ ಕಾರ್ಯದರ್ಶಿಗಳಾಗಿದ್ದ ಡಾ. ಕಲಬುರ್ಗಿ ಮತ್ತು ನಾನು ಅನೇಕ ಮುಜುಗರ ಕ್ಷಣಗಳನ್ನು ಎದುರಿಸಬೇಕಾಯಿತು. ಪರಿಣಾಮ: ಕ್ರಿಯಾಸಮಿತಿಯ ಅಧ್ಯಕ್ಷತೆಯನ್ನು ಮತ್ತೊಬ್ಬ ಹಿರಿಯರು ಹೊರಬೇಕಾಯಿತು.

*

ಅವರ ಕಾವ್ಯ ಕುರಿತಂತೆ, ಮತ್ತೆ ನನ್ನ ಸಾಲುಗಳು: ‘ಬೇಂದ್ರೆಯವರು ನಂತರ ಧಾರವಾಡದ ಪ್ರಕೃತಿಯನ್ನು ಶಬ್ದಗಳಲ್ಲಿ ಸೆರೆ ಹಿಡಿದವರೆಂದರೆ ಕಣವಿಯವರೇ. ‘ಕವಿಗಾಳಿ ಸವಿಗಾಳಿ’ ತೀಡುವ ಧಾರವಾಡ ಕಣವಿಯವರ ಕಾವ್ಯಕ್ಕೆ ಬೇಂದ್ರೆ ಹಾಗೂ ಮಧುರಚೆನ್ನರ ‘ಲಯ’ದ ಸುಸಂಬದ್ದ ಹಿನ್ನಲೆ ಒದಗಿಸಿತು. ವರ್ಷ ಕಳೆದಂತೆ ಕಾವ್ಯದ ಅಗಲ ಹೆಚ್ಚಾಗಿದ್ದರೂ ಆಳದ ಏಕತಾರಿ ಮಾತ್ರ ಅದೇ ನಾದ ಮಿಡಿಯುತ್ತಿದೆ.’

*

ಕಣವಿ ಕಾವ್ಯದ ವಸ್ತು – ವೈವಿಧ್ಯ ಅಪಾರ ಮತ್ತು ಅನಂತ. ಮನುಷ್ಯನೆಂಬ ಜೀವಿಯ ಎಲ್ಲ ನೋವು – ನಲಿವುಗಳಲ್ಲದೆ, ವಿಶ್ವದ ಸಕಲ ಜೀವರಾಶಿಗಳೂ ಅವರ ಕವಿ ಹೃದಯದಲ್ಲಿ ಗೌರವದ ಸ್ಥಾನ ಪಡೆದಿವೆ. ನಮ್ಮ ವಿಶೇಷ ಗಮನ ಸೆಳೆಯುವುದು ಅವರು ಚಿತ್ರಿಸುವ ಕ್ರಿಮಿ – ಕೀಟಗಳ ಪ್ರಪಂಚ. ಇದರಿಂದಾಗಿ ಕೆಲವರು ವಿನೋದದಿಂದ ಅವರನ್ನು ‘ಕನ್ನಡದ keats ‘ ಎಂದು ಕರೆಯುತ್ತಾರೆ. ಕಣವಿ ಕಾವ್ಯದಲ್ಲಿ ‘ಹೈಟ್ಸೇ’ ಇಲ್ಲವಲ್ಲ – ಅಂತ ಯಾರೋ ಕೇಳಿದಾಗ ಬೇಂದ್ರೆಯವರು ‘ಕಣಿವೆಯಲ್ಲಿ ಹೈಟ್ಸ್’ ಅಂತ ಜೋಕು ಮಾಡಿದ್ದರಂತೆ. (ಅದು ವೈಎನ್ಕೆ – ಜೋಕು ಅಂತ ನನ್ನ ಭಾವನೆ) ಲಂಕೇಶರ ಬಗ್ಗೆ ಕಣವಿಯವರಿಗೆ ಅಪಾರ ಅಭಿಮಾನ. ಆದರೂ ಅವರನ್ನು ಒಮ್ಮೆ ಲಂಕೇಶರು ‘ತರಕಾರಿ ಕವಿ’ ಅಂತ ಛೇಡಿಸಿದ್ದರು. ಆದರೂ ಕಣವಿಯವರ ಸಹೃದಯತೆ ಮುಕ್ಕಾಗಲಿಲ್ಲ. ಅವರ ಕಾವ್ಯರೂಪದಲ್ಲಿಯೇ ಪ್ರೀತಿಯಿಂದ ‘ನಿಲುವಿಗೊಂದು ಶಾಲು’ ಹೊದಿಸಲು ಮರೆಯಲಿಲ್ಲ. ೧೯೪೬ ರಿಂದಲೂ ಕಣವಿ ಕಾವ್ಯದ ‘ಜೀವಧ್ವನಿ’ ಕನ್ನಡದ ನೆಲವನ್ನು, ಮುಗಿಲನ್ನು ಮಿಡಿಯುತ್ತಿದೆ. ಈಗಲೂ ಅವರ ಕವನಗಳಿಲ್ಲದ ದೀಪಾವಳಿ ಸಂಚಿಕೆಗಳನ್ನು ನಾವು ಕಾಣುವ ಹಾಗಿಲ್ಲ. ಡಾ. ಆಮೂರ ಹೇಳುತ್ತಾರೆ: ‘ಕಣವಿಯವರ ಕಾವ್ಯ ಜೀವನದ ಎದ್ದು ಕಾಣುವ ವೈಶಿಷ್ಟವೆಂದರೆ, ಎಲ್ಲ ಸಮಕಾಲೀನ ಚಳುವಳಿಗಳಿಗೆ ಪ್ರತಿಸ್ಪಂದಿಸಿಯೂ ಯಾವುದಕ್ಕೂ ತಮ್ಮನ್ನು ಸಂಪೂರ್ಣವಾಗಿ ಒಪ್ಪಿಸಿಕೊಳ್ಳದೆ ಇರುವುದು. ಇದು ಅವರ ಮನೋಧರ್ಮ ಗುಣವಿದ್ದಂತೆ ಉದ್ದೇಶಪೂರ್ಣವಾದ ಆಯ್ಕೆಯೂ ಆಗಿದೆ ಎಂದೆನಿಸುತ್ತದೆ.’

ಆದರೆ ಇಂಥ ‘ನಿರ್ಲಿಪ್ತತೆ’ಯ ನಿಲುವು ಸೃಜನಶೀಲ ಕವಿಯ ‘ಗಂಭೀರ ಮಿತಿ’ ಯೂ ಆಗಬಹುದು ಅನಿಸುತ್ತದೆ ನನಗೆ. ಇದು ಚರ್ಚೆಗೆ ಬಿಟ್ಟ ವಿಷಯ. ಈಗ ಎಪ್ಪತೈದು ದಾಟಿರುವ ಕಣವಿ ಅವರಿಗೆ ಬದುಕಿನಲ್ಲಿ ‘ಅತೃಪ್ತಿ’ ಎಂಬುದು ಬರಲು ಸಾಧ್ಯವಿಲ್ಲ ಎಲ್ಲವನ್ನೂ ಪಡೆದಿದ್ದಾರೆ. ಸಹಜವಾದ ಆಡುಮಾತಿನಲ್ಲಿ ಶೈಲಿ, ಸೂಕ್ಷ್ಮ ವಿವರಗಳೊಂದಿಗೆ ‘ದರ್ಶನ’ ವನ್ನೂ ಧ್ವನಿಸುವ ಭಾಷೆ, ಬರೆದದ್ದನ್ನು ಪರಿಣಾಮಕಾರಿಯಾಗಿ ಓದುತ್ತ ಆ ಮೂಲಕ ತಮ್ಮ ಅನುಭವವನ್ನು ಸಮುದಾಯಕ್ಕೆ ಸಾಗಿಸುವ ಚಾಕಚಕ್ಯತೆ – ಇವೆಲ್ಲ ಅವರ ಜನಪ್ರಿಯತೆಗೆ ಮೂಲ ಕಾರಣಗಳು. ಅಂತರಂಗದ ತೀರ ಆಳದಲ್ಲಿರುವ ಆತಂಕಗಳು ಅವರ ಕವನಗಳಲ್ಲಿ ಬಹಳ ಕಡಿಮೆ: ಆದರೆ ಒಬ್ಬ ‘ವ್ಯಕ್ತಿ’ ಯಾಗಿ ಸಮಷ್ಠಿಯ ಅನುಭವಗಳನ್ನು ಕಾವ್ಯವಾಗಿಸುವ ಅವರ ಕಲೆ ಅನನ್ಯವಾದುದು.

*

ಪತ್ನಿ ಶಾಂತಾದೇವಿ ಅವರೂ ಕನ್ನಡದ ಗಮನಾರ್ಹ ಕತೆಗಾರ್ತಿಯರಲ್ಲಿ ಒಬ್ಬರು ನಮ್ಮ ಸಾಂಸ್ಕೃತಿಕ ಲೋಕದ ‘ಯಶಸ್ವಿ’ ದಂಪತಿಗಳ ಲಿಸ್ಟಿಗೆ ಕಣವಿ ದಂಪತಿಗಳೂ ಸೇರುತ್ತಾರೆ. ಧಾರವಾಡ ಕಲ್ಯಾಣನಗರದ ‘ಚೆಂಬೆಳಕು’, ನೀವು ಕರ್ನಾಟಕದ ಯಾವ ಮೂಲೆಯಿಂದ ಬಂದರೂ, ಸ್ನೇಹ – ಆತ್ಮೀಯತೆಯನ್ನು ನೀಡುವ ‘ಮನೆ’ ಯೇ.

ಕನ್ನಡದಲ್ಲಿ ‘ಸಾನೆಟ್’ – (ಅಷ್ಟ ಷಟ್ಟದಿ, ಸುನೀತ) ಕಾವ್ಯಪ್ರಕಾರಕ್ಕೆ ಆಳ, ಎತ್ತರ, ಅಗಲಗಳನ್ನು ವ್ಯಾಪಕ ಪ್ರಮಾಣದಲ್ಲಿ ನೀಡುತ್ತಿರುವವರು ಚೆನ್ನವೀರ ಕಣವಿ. ಅವರದು ನಿರಂತರ ಪ್ರಯೋಗಶೀಲತೆ.

ದೂರದಿಂದ ನೋಡಿದರೆ ಕಣವಿ ಅವರೂ ಒಂದು ‘ಸಾನೆಟ್’ ಹಾಗೆಯೇ ಕಾಣುತ್ತಾರೆ: ಅವರ ಚೆಂಬೆಳಕೂ ಹಾಗೆಯೇ.

-೨೦೦೩