ಧಾರವಾಡದ ವಿದ್ಯಾರಣ್ಯ ಹೈಸ್ಕೂಲು ಅತ್ಯಂತ ಹಳೆಯ ವಿದ್ಯಾಸಂಸ್ಥೆ ನವೋದಯ ಕಾಲದ ಆ ಭಾಗದ ಹಿರಿಯರೆಲ್ಲ ಅಲ್ಲಿ ವಿದ್ಯಾರ್ಥಿಗಳಾಗಿಯೋ ಮಾಸ್ತರರಾಗಿಯೋ ತಮ್ಮ ಬದುಕು ರೂಪಿಸಿಕೊಂಡವರು.

೧೯೬೦ರ ದಶಕದ ಪ್ರಾರಂಭದ ಕಾಲ. ನಮ್ಮಂಥವರು ಮರಿ ಕವಿಗಳಾಗಿ, ಕಾಲೇಜು ವಿದ್ಯಾರ್ಥಿಗಳಾಗಿ, ಚಿಂವ್ ಗುಡುತ್ತಿದ್ದ ದಿನಗಳವು. ಯಾವ ಕಾರ್ಯಕ್ರಮವಾದರೂ ನಾವು ಹಾಜರು. ವಿದ್ಯಾರಣ್ಯ ಹೈಸ್ಕೂಲಿನಲ್ಲಿ ಒಮ್ಮೆ ಶಂಬಾ ಜೋಶಿಯವರ ಭಾಷಣ ತಮ್ಮ ಎಂದಿನ ಒಗರು ಶೈಲಿಯಲ್ಲಿ ಏನೋ ಅಡ್ಡಮಾತು ಒಗೆದರು.

ಸಭೆಯ ಮಧ್ಯದಿಂದ ‘ನಾ ಇಲ್ಲೇ ಕುಂತೆನೋ!’ ಅಂತ, ಕಚ್ಚೆ ಸಿಗಿಸಿಕೊಳ್ಳುತ್ತ ಎದ್ದು ನಿಂತರೊಬ್ಬ ಹಿರಿಯರು ‘ಗೊತ್ತೈತಿ. ಸುಮ್ಮನ ಕೂಡ್ರೋ. ನೀ ಆದೀ ಅಂತನ ಆ ಮಾತು ಆಡಿದ್ದು’…. ಮುಂದೆ ಏನೇನೋ ಚರ್ಚೆ, ವಾದ, ಜಗಳ. ಈ ಪುರಾತನರು ಎಷ್ಟು ಚಂದ ಜಗಳಾಡುತ್ತಾರಲ್ಲ ಅಂತ ನನಗೆ ರೋಮಾಂಚನ.

*

ಧಾರವಾಡ ಅಂದರೆ ಸಾಧನಕೇರಿ: ಸಾಧನಕೇರಿ ಅಂದ್ರೆ ಬೇಂದ್ರೆ: ಎಂಬ ಸುಲಭ ಸಮೀಕರಣ. ಕಣವಿ ಅಂಥವರ ಉದ್ಗಾರಗಳ ಮೂಲಕ ನಾಡಿಗೆಲ್ಲ ಗೊತ್ತು. ಆದರೆ ಸಾಧನಕೇರಿಯ ದಾರಿಗಳೆಲ್ಲ ಬೇಂದ್ರೆ ಮನೆಗೇ ಹೋಗುತ್ತವೆ ಅಂತ ಹೇಳುವಂತಿಲ್ಲ ಅದಕ್ಕೆ ಮೊದಲೇ ಒಂದು ಅಡ್ಡದಾರಿ ಇದೆ. ಆ ದಾರಿ ನೀವು ಹಿಡಿದರೆ ಅಲ್ಲಿ ಶಂಬಾ ಅವರ ಮನೆ.

ಶಂಬಾ – ಬೇಂದ್ರೆ: ಎರಡು ಧ್ರುವ. ಅವರ ವೈಚಾರಿಕ ಭಿನ್ನತೆ ಪರಸ್ಪರರ ವೈಯಕ್ತಿಕ ಅವಹೇಳನಕ್ಕೂ ಕಾರಣವಾಗಿತ್ತು. ಒಮ್ಮೆ ಶಂಬಾ ಬಾತ್ ರೂಮಿನಲ್ಲಿ ಕಾಲುಜಾರಿ ಬಿದ್ದರು. ಬೇಂದ್ರೆ ಆಡಿದ ಕೊಕ್ಕೆಮಾತು: ‘ಅವನ ಸಂಶೋಧನಾದ ಹಂಗ ಅವನೂ ಕುಂಟ ಆದ ನೊಡ್ರಿ’. ಆಗಿನ ಧಾರವಾಡದ ಪುಟ್ಟ ಪ್ರಪಂಚದಲ್ಲಿ ಬೆಳಗಿನ ಮಾತು ಸಂಜೆಯೊಳಗಾಗಿ ಊರವರ ಬಾಯಲ್ಲಿ ತಂಬಲವಾಗುತ್ತಿತ್ತು.

*

ಮಡಿಕೇರಿಯ ಸಾಹಿತ್ಯ ಸಮ್ಮೇಳನಕ್ಕೆ ಶಂಬಾ ಅಧ್ಯಕ್ಷರಾಗಿ ಆಯ್ಕೆಗೊಂಡಾಗ ‘ಲಂಕೇಶ ಪತ್ರಿಕೆ’ಯ ನನ್ನ ‘ನೋಟ’ ಕಾಲಮ್ಮಿನಲ್ಲಿ ನಾನು ಬರೆದ ಶಂಬಾ ಚಿತ್ರವಿದುಃ ‘ಸುಮಾರು ಆರು ಫೂಟು ಎತ್ತರದ, ಇಲೆಕ್ಟ್ರಿಕ್ ತಂತಿಯಂಥ ನೀಳವಾದ ಮೈಕಟ್ಟಿನ ಶಂಬಾ ವಯೋಭಾರದಿಂದ ಬಿಲ್ಲಿನಂತೆ ನಸು ಬಾಗಿದ್ದಾರೆ. ತಲೆಗೆ ಕರಿ ಟೋಪಿ, ಬಗಲಿಗೊಂದು ಚೀಲ. ಮೈಯ ಬಹುಭಾಗ ಮುಚ್ಚುವ ಕೋಟು. ಬೆನ್ನ ಹಿಂದೆ ಕೈಕಟ್ಟಿಕೊಂಡು ದಾರಿಯ ಒಂದು ಮಗ್ಗುಲಿಗೆ ಬೇಟೆಗಾರನಂತೆ ಬೀಸಾಗಿ ನಡೆದು ಬರುವ ಶಂಬಾ ಅವರ ಹದ್ದಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಯಾವ ಪರಿಚಿತರಿಗೂ ಸಾಧ್ಯವಿಲ್ಲ. ಅವರ ಸಂದರ್ಶನಕ್ಕೆಂದು ಅವರ ಮನೆಗೇ ಹೋಗಬೇಕೆಂದಿಲ್ಲ. ನಿಂತಲ್ಲಿಯೇ ಚರ್ಚೆ, ವಾದವಿವಾದ. ಇದು ಮುಗಿದು ಹೋಗಿಬರ್ತಿನ್ರಿ ಎಂದು ಹೇಳಿ ಕೈ ಮುಗಿದು ಹೋದ ಮನುಷ್ಯ ಮೊದಲಿನ ಮನುಷ್ಯನಾಗಿ ಉಳಿಯುವುದಿಲ್ಲ. ಅವನ ತಲೆಯೊಳಗೆ ಒಂದೋ ಎರಡೋ ಗುಂಗೀಹುಳ ಹಾಕಿಬಿಟ್ಟಿರುತ್ತಾರೆ ಶಂಬಾ.’

ಶಂಬಾ ಮಾತು ಅರ್ಥವಾಗಬೇಕಾದರೆ ಯಾವಾಗಲೂ ಆ ಮಾತಿನ ಚುಂಗು ಹಿಡಕೊಂಡೇ ಇರಬೇಕು. ಸ್ವಲ್ಪ ತಪ್ಪಿದರೆ ಸಾಕು, ಅವರೆಲ್ಲೋ ನೀವೆಲ್ಲೋ. ನಾನು ಸ್ವಲ್ಪ ಸಮಾಧಾನದಿಂದ ಅವರ ಮಾತು ಕೇಳುತ್ತ, ನಡುನಡುವೆ ಒಂದೆರಡು ‘ಜಾಣ’ ಪ್ರಶ್ನೆ ಹಾಕುತ್ತ ಇದ್ದುದ್ದರಿಂದ ನನ್ನ ಬಗ್ಗೆ ಅವರದು ಬಹಳ ಪ್ರೀತಿ. ನಾನು ನನ್ನ ಸರೀಕರಿಗೆ ವಿರುದ್ದವಾಗಿ ವರಕವಿ ಬೇಂದ್ರೆಯವರಿಗೆ ಅವರ ಶೈಲಿಯಲ್ಲಿಯೇ ಮಾರುತ್ತರ ಕೊಡುತ್ತ ಸ್ವಲ್ಪ ಕುಖ್ಯಾತಿಯನ್ನು ಪಡೆದಿದ್ದೆ. ಇದೂ ಶಂಬಾ ಅವರಿಗೆ ಪಸಂದಾಗಿತ್ತು ಅಂತ ಕಾಣುತ್ತದೆ.

*

ಬೇಂದ್ರೆ ಅವರಿಗೆ ವಿಮರ್ಶಕರು ‘ಗಾರುಡಿಗ’ ಅನ್ನುತ್ತಾರೆ. ಅವರ ಭಾಷೆಯ ಗುಂಗೇ ಅಂತಹುದು. ಆದರೆ ಶಂಬಾ ಅವರು ತಿರಸ್ಕಾರದಿಂದ ಬೇಂದ್ರೆ – ಕಾವ್ಯ ‘ಕಣ್ಕಟ್ಟಿ’ ನ ಕಾವ್ಯವೆಂದೂ, ಅವರೊಬ್ಬ ‘ಬುಡಬುಡಿಕಿ’ ಎಂದೂ ಜರೆಯುತ್ತಿದ್ದರು. ಶಂಬಾ ಗಂಭೀರವಾಗಿ ಕೇಳುತ್ತಿದ್ದ ಪ್ರಶ್ನೆ: ಭಾರತೀಯರ ಮನಸ್ಸನ್ನು ಆವರಿಸಿರುವ ಕೃಷ್ಣ – ಗಾರುಡಿಯೊಳಗಿಂದ ಪಾರಾಗುವುದೆಂತು? ಬ್ರಾಹ್ಮಣ ಆಚಾರ್ಯರ ಅಹಂ ಬ್ರಹ್ಮಾಸ್ಮಿ, ಏಕಂ ಏವ ಅದ್ವಿತೀಯಂ, ವಚನಕಾರರ ಮರಣವೇ ಮಹಾನವಮಿ, ದಾಸರ ‘ಗುರುವಿ ಗುಲಾಮನಾಗುವ ತನಕ’, ಬೇಂದ್ರೆಯಂಥವರ ನನ್ನ ಹರಣ ನಿನಗೆ ಶರಣ – ಇತ್ಯಾದಿಗಳು ದಾಸ್ಯ, ಶರಣಾಗತಿ, ಗುಲಾಮಗಿರಿ, ನಿಷ್ಕಾಮತ್ವ, ಷಂಡತನ, ನಿವೃತ್ತಿ ಮಾರ್ಗಗಳ ಅನಿಷ್ಟ ಪರಂಪರೆಯನ್ನೇ ನಿರ್ಮಿಸಿ, ಭಾರತೀಯರೆಲ್ಲ ರಾತ್ರಿಯ ಕತ್ತಲೆಯ ಉಪಾಸಕರಾಗುವಂತೆ ಮಾಡಿವೆ ….. ಭಗವದ್ಗೀತೆ ನಮ್ಮ ಸಮಷ್ಟಿ ಜೀವನದ ನೆಲೆಗಳನ್ನೇ ಸಡಿಲಗೊಳಿಸುವ ಒಂದು ಮಹಾಮೋಸದ ಹಾಗೂ ಕಣ್ಕಟ್ಟಿನ ಕೃತಿ. ತಳಮಟ್ಟದ ಅಧ್ಯಯನದ ನಂತರ ಶಂಬಾ ತಳೆದ ಮತ್ತು ನಿರಂತರವಾಗಿ ಮಾತು – ಬರಹದಲ್ಲಿ ಪ್ರತಿಪಾದಿಸಿದ ಕ್ರಾಂತಿಕಾರಿ ನಿಲುವು ಇದು. ಅವರು ಹೇಳುತ್ತಾರೆ; ‘ಭಗವದ್ಗೀತೆ ಎಂಬುದು ಮಾನವತೆಯ ವಿರುದ್ಧ ಎಸಗಲಾದ ಅತ್ಯಂತ ಘೋರ ಅಪರಾಧ.’

*

ಸನಾತನಿಗಳ ಬುಡಕ್ಕೆ ಬೆಂಕಿ ಹಚ್ಚುವ ಇಂತ ಪ್ರಖರ ವೈಚಾರಿಕನಿಗೆ, ಬೇಂದ್ರೆ ಯಜಮಾನಿಕೆಯ ಆಗಿನ ಸಾಂಸ್ಕೃತಿಕ ವಾತಾವರಣದಲ್ಲಿ, ಸಹಜವಾಗಿಯೇ ಯಾರೂ ಅನುಯಾಯಿಗಳು ಇರಲೇ ಇಲ್ಲ. ಕರ್ನಾಟಕ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕನಾಗಿದ್ದ ಚೆಡ್ಡಿ – ಪಂಡಿತನೊಬ್ಬ ‘ಸಂಯುಕ್ತ ಕರ್ನಾಟಕ’ ಮೂಲಕ ಶಂಬಾರನ್ನು ವಿನಾಕಾರಣ ಛೇಡಿಸುತ್ತಿದ್ದ. ವಿಪ್ರ – ಮೂಲದ ಈ ಕ್ರಾಂತಿಕಾರಿಗೆ ಇಡೀ ವಿಪ್ರಕುಲ (ಪಾವೆಂ ಆಚಾರ್ಯ ಗೌರೀಶ್ ಕಾಯ್ಕಿಣಿ ಅಂಥವರನ್ನು ಬಿಟ್ಟರೆ) ಬಹಿಷ್ಕಾರ ಹಾಕಿತ್ತು.

ಶಂಬಾ ಸಾಹಿತ್ಯವನ್ನು ನಿಷ್ಠೆಯಿಂದ ಅಧ್ಯಯನ ಮಾಡಿ, ಅವರ ಚದುರಿ ಹೋದ ಬರಹಗಳನ್ನು ಸಂಕಲನಗೊಳಿಸಿದ ಶ್ರೇಯಸ್ಸು ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರಿಗೆ ಸಲ್ಲಬೇಕು, ಅವರು ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾದ ಮೇಲೆಯೇ ಶಂಬಾ ಸಮಗ್ರ ಸಾಹಿತ್ಯ ಪ್ರಕಟವಾದದ್ದು ಗಮನಾರ್ಹ.

*

ಗೋಕಾಕ್ ಚಳುವಳಿಯ ಮೊದಲ ಕಿಡಿ ಹೊತ್ತಿಸಿದ ಧಾರವಾಡದ ‘ಕನ್ನಡ ಕ್ರಿಯಾ ಸಮಿತಿ’ಗೆ ಶಂಬಾ ಅವರೆ ಪ್ರಥಮ ಅಧ್ಯಕ್ಷರಾಗಿದ್ದು ಅತ್ಯಂತ ಸಹಜವಾಗಿತ್ತು. (ಆ ಸಮಿತಿಗೆ ಪ್ರಧಾನ ಕಾರ್ಯದರ್ಶಿಗಳಾಗಿದ್ದವರು ಡಾ. ಎಂ. ಎ ಕಲಬುರ್ಗಿ ಮತ್ತು ನಾನು.)

‘ಸಹಜ’ ಯಾಕೆ ಅಂದರೆ, ಶಂಬಾ ಅವರ ಅಧ್ಯಯನದ ಮೂಲ ಆಯುಧವೇ ‘ಭಾಷೆ’. ಶಬ್ದದ ಪಂಜು ಹಿಡಿದುಕೊಂಡೇ ಅವರು ಇಂಗ್ಲೀಷ್, ಸಂಸ್ಕೃತ, ಮರಾಠಿ ಕನ್ನಡ ಭಾಷೆಗಳ ಪುರಾತನ ಗ್ರಂಥಗಳ ಗೊಂಡಾರಣ್ಯದಲ್ಲಿ ಸತ್ಯವನ್ನು ಅರಸುತ್ತಿದ್ದರು ಯಾವುದೋ ಒಂದು ಶಬ್ದದ ಒಂದು ಅರ್ಥ; ಎಲ್ಲೋ ಸಿಕ್ಕಾಗ ಅವರ ಕಣ್ಣಲ್ಲಿಯ ಯುರೇಕಾ ಮಿಂಚನ್ನು ಕಂಡವನ್ನು ನಾನು. ಮಹಾರಾಷ್ಟ್ರದ ಮೂಲ, ಕಣ್ಮರೆಯಾದ ಕಂನಡ, ಕಂನುಡಿಯ ಹುಟ್ಟು. ಕಂನಡದ ನೆಲೆ – ಹೀಗೆ ಭಾಷೆಯ ಆಕೃತಿಗಳ ನೆಲೆಯಲ್ಲಿ ಸುರುವಾದ ಅವರ ‘ಶೋಧ’, ವರ್ಷಗಳು ಉರುಳಿದಂತೆ ಸಾಂಸ್ಕೃತಿಕ ಮೂಲದಲ್ಲಿನ ತಾತ್ವಿಕ ಚಿಂತನೆಗಳ ಕ್ಷಿತಿಜವನ್ನು ವಿಸ್ತರಿಸುತ್ತಲೇ ಹೋಯಿತು. ಅವರ ಅನೇಕ ಅಮೂಲ್ಯ ಲೇಖನಗಳು ‘ಸಂಕ್ರಮಣ’ ದಲ್ಲಿ ಪ್ರಕಟವಾದವು. ಅದು ನಮ್ಮ ಹೆಮ್ಮೆ.

ಒಂದು ಮರೆಯಲಾಗದ ಪ್ರಸಂಗ:

ಏಪ್ರಿಲ್ ೨. ೧೯೮೨ ರಂದು ಉಪವಾಸ ಸತ್ಯಾಗ್ರಹ ಪ್ರಾರಂಭಿಸಬೇಕೆಂದು ಕ್ರಿಯಾ ಸಮಿತಿ ನಿರ್ಣಯಿಸಿತು. (ಅನಾರೋಗ್ಯದಿಂದಾಗಿ ಶಂಬಾ ಬಂದಿರಲಿಲ್ಲ.)) ನಾನು ಮನೆಗೆ ಹೋಗಿ ತಿಳಿಸಿದೆ. ಅವರು ಧರ್ಮಸಂಕಟದಲ್ಲಿ ಬಿದ್ದಂತಿತ್ತು. ಮಹಾತ್ಮ ಗಾಂಧೀಜಿಯ ಉಪವಾಸ, ಸತ್ಯಾಗ್ರಹ ಮುಂತಾದ ‘ತಂತ್ರ’ಗಳ ಬಗ್ಗೆ ಶಂಬಾಗೆ ತಿರಸ್ಕಾರವಿತ್ತು. ಹೇಳಿದರು: ‘ನನ್ನ ನಂಬಿಕೆಗೆ ವಿರುದ್ದ ಇದು’, ನಾನೆಂದೆ: ‘ಆದರೆ ಇದು ಸಮಿತಿಯ ನಿರ್ಣಯ ತಾವು ಬರಬೇಕು’, ಅವರು: ‘ನಾ ಒಂದು ಹೇಳಿಕೆ ಕೊಡುವೆ ಅದನ್ನೋದಿರಿ.’

ಕಟುವಾಗಿಯೇ ಹೇಳಿದೆ ನಾನು: ಆಯ್ಕೆ ನಿಮ್ಮದು / ಇದೆಲ್ಲವನ್ನೂ ಸೆಲೆಯಲ್ಲಿ ಬಹಿರಂಗವಾಗಿ ಹೇಳುವೆ. ಬರ‍್ರಿ ಅಥವಾ ಬಿಡ್ರಿ.

ಶಂಬಾ ಬಂದರು, ಸಾಂಕೇತಿಕವಾಗಿ ‘ಉಪವಾಸ’ ಕುಂತರು. ಮನಸ್ಸಿನಲ್ಲಿ ಯಾವ ಕಸರೂ ಇರಲಿಲ್ಲ. ಚಳುವಳಿ ಮುಗಿದ ನಂತರ ಹೇಳಿದರು: ‘ನನಗೆ ಸತ್ಯಾಗ್ರಹದ ಅವಕಾಶ ಮಾಡಿಕೊಟ್ಟಿರಿ. ನಾನು ನಿಮಗೆ ಕೃತಜ್ಞ.’

ಅಂಥಾ ದೊಡ್ಡ ಮನುಷ್ಯ ಈ ಶಂಬಾ. ಅದೇ ಜಾಗದಲ್ಲಿ ಬೇಂದ್ರೆ ಇದ್ದಿದ್ದರೆ ಗಾಳಿಯಲ್ಲಿ ಮೈ. ಕೈ ತೂರಾಡುತ್ತಿದ್ದರೇನೋ ಹಾರಾಡುತ್ತಿದ್ದರೇನೋ!

‘ಲಂಕೇಶ ಪತ್ರಿಕೆ’ ಯಲ್ಲಿ ಅವರ ಬಗ್ಗೆ ಬರೆದೆನಲ್ಲ. ಸ್ವಲ್ಪ ಬೇಸರದ ವಿಷಯ. ಲಂಕೇಶ ನನಗೆ ಪತ್ರ ಬರೆದು ಶಂಬಾ ಅವರನ್ನು ‘ಸ್ಟುಪಿಡ್ ಓಲ್ಡ ಮ್ಯಾನ್’ ಅಂತ ಜರೆದಿದ್ದರು. ಸಂಪಾದಕನ ಇಂಥ ಏಕಮುಖದ. ಸಣ್ಣ ಮನಸ್ಸಿನ, ಸರ್ವಾಧಿಕಾರ ನಿಲುವುಗಳೇ ‘ಪತ್ರಿಕೆ’ ಯ ಅಧಃಪತನಕ್ಕೂ ಕಾರಣವಾದವು ಅಂತ ನನ್ನ ಅನ್ನಿಸಿಕೆ.

*

ನಮ್ಮ ‘ವಿಚಾರವಾದಿ’ ಹಿರಿಯರಾದ ಡಾ.ಎಚ್ಚೆನ್ ಅವರು ಒಮ್ಮೆ ‘ಭಾನಾಮತಿ’ಯ ಸಂಶೋಧನೆ ನಡೆಸಲು ಮುಂದಾದರು. (ಇಂಥದಕ್ಕೆಲ್ಲ ಸರಕಾರ ಅವರನ್ನು ಧಾರಾಳವಾಗಿ ಬಳಸುತ್ತಲೇ ಬಂದಿದೆ.) ನಿಜವಾದ ವೈಜ್ಞಾನಿಕ ಮನೋಭಾವ ಹೊಂದಿದ್ದ ಶಂಬಾ ಅವರು ಎಚ್ಚನ್ ಅವರಿಗೆ ಸವಾಲು ಹಾಕಿದರು: ‘ಇಡೀ ಭಗದ್ಗೀತೆಯೇ ಒಂದು ಭಾನಾಮತಿಯಾಗಿದೆ. ಇದಕ್ಕೇನು ನಿಮ್ಮ ಪರಿಹಾರ?’

ಸಾಹಿಬಾಬಾನಿಗೆ ಕುಂಬಳಕಾಯಿ ‘ಸವಾಲು’ ಹಾಕಿ ಪ್ರಚಾರ ಪಡೆದವರು ಎಚ್ಚೆನ್. ಆದರೆ ತಾವು ಸ್ಥಾಪಿಸಿದ ಶೈಕ್ಷಣಿಕ ಸಂಸ್ಥೆಗಳಲ್ಲಿಯೇ ಭಗವದ್ಗೀತೆಯ ಶ್ಲೋಕಗಳನ್ನು ಬೋಧಿಸಲು ಅವಕಾಶವಿತ್ತಿರುವ ಈ ‘ವಿಚಾರವಾದಿ’ ಮಹನೀಯರು ಶಂಬಾ ಪ್ರಶ್ನೆಗೆ ಏನು ಉತ್ತರ ಕೊಟ್ಟಾರು?

-೨೦೦೩