ಕಾಲಮಾನದ ದೃಷ್ಟಿಯಿಂದ ದೂರ ದೂರವಾಗುತ್ತಿರುವ ನಮ್ಮ ನವೋದಯ ಹಾಗೂ ನವ್ಯ ಕಾಲದ ಪ್ರಮುಖರಲ್ಲಿ ಕೆಲವರನ್ನು ಹಿಡಕೊಂಡು ಬಂದು ನಮ್ಮ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ‘ಮನೆಯಂಗಳದಲ್ಲಿ ಮಾತುಕತೆ’ ಹಮ್ಮಿಕೊಳ್ಳುತ್ತಿರುವುದು ಹಳೆ – ಹೊಸ ಪೀಳಿಗೆಗಳ ಸಂವಾದಕ್ಕೆ ಪೂರಕವಾಗುತ್ತಿರುವ ಅಭಿನಂದನೀಯ ಕಾರ್ಯಕ್ರಮ. ಇತ್ತೀಚಿಗೆ ಅದರಲ್ಲಿ ಪಾಲುಗೊಂಡವರು, ಅಡಿಗರ ಜೊತೆ ಜೊತೆಯಲ್ಲಿ ‘ನವ್ಯ’ ದ ಪ್ರವಾಹದಲ್ಲಿ ತೇಲಿಬಂದ ಡಾ. ಬಿ. ಸಿ . ರಾಮಚಂದ್ರ ಶರ್ಮ ಅವರು. ಅವರಿಗೆ ಈಗ ಎಂಬತ್ತು ವರ್ಷ.

ನಾನು ಅವರನ್ನು ಮೊಟ್ಟ ಮೊದಲು ಕಂಡದ್ದು ಕಳೆದ ಶತಮಾನದ ಐವತ್ತರ ದಶಕದ ಉತ್ತರಾರ್ಧದಲ್ಲಿ. ನಾವೆಲ್ಲ ಆಗ ಕಾಲೇಜು – ರಂಗದ ಮರಿ ಕವಿಗಳು. ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಅವರ ಕಾವ್ಯ ವಾಚನವಿತ್ತು. ಅಂದಿನಿಂದ ಇಂದಿನವರೆಗೂ ಕಾವ್ಯದ ಸಾರ್ವಜನಿಕ ‘ವಾಚನ’ ಹೇಗಿರಬೇಕು ಎಂಬುದಕ್ಕೆ ಅತ್ಯುತ್ತಮ ಉದಾಹರಣೆಯಾಗಿರುವ ಕೆಲವೇ ಕೆಲವರಲ್ಲಿ ಶರ್ಮರೂ ಒಬ್ಬರೂ. ಆ ಕಾಲದಲ್ಲಿ ಅವರು ಪ್ರತಿಸಲ ಹೊಸ ಹೊಸ ಕವನಗಳನ್ನು ಓದುತ್ತಿದ್ದರು. ಆದರೆ ಇತ್ತೀಚಿನ ಹದಿನೈದು ವರ್ಷಗಳಲ್ಲಿ ಮಾತ್ರ ಅವರು ‘ಹೊಸ’ ಕವನಗಳನ್ನು ಓದಿದ್ದು ನನಗಂತೂ ನೆನಪಿಲ್ಲ.

ಅದಕ್ಕೆ ಬಹುಶಃ ಅವರು ಮೊನ್ನೆಯ ತಮ್ಮ ‘ಮಾತುಕತೆ’, ಯಲ್ಲಿ ‘ಕಳೆದ ಒಂದೂವರೆ ದಶಕದಿಂದ ಕನ್ನಡ ಕಾವ್ಯ ಕ್ಷೇತ್ರ ನಿಂತ ನೀರಾಗಿದೆ’ – ಎಂದು ತಮ್ಮ ಹತಾಶೆಯನ್ನು ತೋಡಿಕೊಂಡಿರಬೆಕು.

ಆದರೆ ನಾವು ನೋಡುತ್ತೇವೆ: ಅವರ ಸರೀಕರಾದ ಅನೇಕ ಕವಿಗಳು – (ಕೆ. ಎಸ್. ನ. ಜಿ. ಎಸ್. ಎಸ್., ಕಣವಿ, ನಿಸಾರ್ ಮುಂತಾದವರು) – ಬದಲಾದ ವಾಸ್ತವಕ್ಕೆ ಜೀವಂತವಾಗಿಯೇ ಸ್ಪಂದಿಸುತ್ತಾ ಇಂದಿಗೂ ಕಾವ್ಯ ಬರೆಯುತ್ತಿದ್ದಾರೆ. ಶರ್ಮರ ನಂತರದ ನವ್ಯೋತ್ತರ, ದಲಿತ, ಬಂಡಾಯ ಬರಹಗಾರರು ಸಾಹಿತ್ಯದ ಎಲ್ಲ ವಲಯಗಳಲ್ಲಿ ಅನುಭವ ಮತ್ತು ಅಭಿವ್ಯಕ್ತಿಯ ಸಾಧ್ಯತೆಗಳನ್ನು ಬಗೆಯುತ್ತ ಗಮನಾರ್ಹ ಸಾಹಿತ್ಯ ಸೃಷ್ಟಿಸುತ್ತಿದ್ದಾರೆ.

ಆದರೆ ಶರ್ಮರ ಸಂಜೆಗಣ್ಣಿನ ಮಬ್ಬು ನೋಟದಲ್ಲಿ ಇದೆಲ್ಲ ‘’ನಿಂತ ನೀರು’’ಅವರ ಈ ತಕರಾರು ಎರಡು ದಶಕಗಳ ಹಿಂದಿನದು. ಅದರ ಮೂಲ ತೊಂದರೆ ಅಂದರೆ, ಅವರ ವ್ಯಾಕರಣದಲ್ಲಿ ‘ಕನ್ನಡ ಕಾವ್ಯ’ ಅಂದರೆ ‘ನವ್ಯ ಕಾವ್ಯ; ‘ನವ್ಯಕಾವ್ಯ’ ಅಂದರೆ ‘ಶರ್ಮಕಾವ್ಯ’ ತನ್ನ ಗಂಡಸುತನ ಸಡನ್ನಾಗಿ ನಿಂತು ಹೋದಾಗ, ಇಡೀ ಲೋಕದ ಗಂಡಸರೆಲ್ಲ ಷಂಡರಾಗಿ ಬಿಟ್ಟರು – ಎಂಬ ಆಳದ ಹತಾಶೆ ಅವರದು. (ಅಥವಾ – ‘ಹಾಗಾಗಲಿ’ ಎಂಬ ಆಳದ ಕನಸೂ ಇರಬಹುದೇ?)

*

ನವ್ಯದ ಭರಭರಾಟೆಯ ದಿನಗಳಲ್ಲಿ, ಮುಖ್ಯವಾಗಿ ದಕ್ಷಿಣ ಕರ್ನಾಟಕದಲ್ಲಿ, ಅಡಿಗ ಮತ್ತು ಶರ್ಮ ಮುಂಚೂಣಿಯ ಹೆಸರುಗಳು, ಇವರೆಲ್ಲ ತಮ್ಮ ಕಾರ್ಯಾಚರಣೆಯ ಪ್ರಥಮ ಹಂತದಲ್ಲಿ ‘ನವೋದಯ’ದ – ಅಂದರೆ ಕುವೆಂಪು, ಬೇಂದ್ರೆ, ಮುಂತಾದವರ ಆಶಯಗಳನ್ನು, ಅಭಿವ್ಯಕ್ತಿಯ ವಿನ್ಯಾಸಗಳನ್ನು, ಭಾಷೆಯನ್ನು ಸಾರಾಸಗಟಾಗಿ ನಿರಾಕರಿಸುತ್ತಲೇ, ತಮ್ಮ ಸಾಹಿತ್ಯವನ್ನು ಮುನ್ನುಡಿ – ಬೆನ್ನುಡಿ – ಹಿನ್ನುಡಿ – ಒಳನುಡಿಗಳ ಮೂಲಕ ‘ಎಸ್ಟ್ಯಾಬ್ಲಿಷ್’ ಮಾಡಿಕೊಂಡವರು. ಇಂಥ ಪ್ರಚಾರದ ಆರ್ಭಟದಲ್ಲೂ ಕನ್ನಡ ಸಾಹಿತ್ಯಕ್ಕೆ ಅವರು ನೀಡಿದ ಮಹತ್ವದ ಕೊಡುಗೆಯನ್ನು ಅಲ್ಲಗೆಳೆಯುವಂತಿಲ್ಲ. ಮುಂದೆ ಕಾಲಾಂತರದಲ್ಲಿ ‘ನವ್ಯ’ ಕೂಡ ಇತಿಹಾಸದ ಒಂದು ಭಾಗವಾಯಿತು; ನವೋದಯ- ನವ್ಯಗಳನ್ನು ಹೀರಿಕೊಂಡು ನಮ್ಮ ಸಾಹಿತ್ಯ ಬೆಳೆಯಿತು. ಇದು ಸಹಜ ಪ್ರಕ್ರಿಯೆ. ತಮ್ಮನ್ನು ‘ಆಧುನಿಕ’ (ಮಾಡರ್ನ್) ಎಂದು ತಿಳಕೊಂಡಿರುವ ಶರ್ಮರು ಯಾಕೆ ‘ಕರ್ಮಠ’ರ ಹಾಗೆ ಕಳೆದ ಒಂದೂವರೆ ದಶಕಗಳಿಂದ ತಮ್ಮ ಹಳೆರಾಗ ಮೀಟುತ್ತಿರುವರೋ ತಿಳಿಯದು.

ವಿಮರ್ಶಕ ಎಚ್. ಎಸ್. ರಾಘವೇಂದ್ರರಾವ್ ಅವರು ಶರ್ಮರ ಈ ‘ಮಿತಿ’ ಯನ್ನು ನಮ್ಮ ಸಾಮಾಜಿಕ, ಸಾಂಸ್ಕೃತಿಯ ಸನ್ನಿವೇಶದಲ್ಲಿ ವಿಶ್ಲೇಷಿಸುತ್ತ ಹೇಳಿರುವ ಮಾತು ಇವು: ‘ಮಧ್ಯಮ ವರ್ಗ ಮತ್ತು ಕೆಳ ಮಧ್ಯಮ ವರ್ಗದ ಬ್ರಾಹ್ಮಣ ಯುವಕರು ತಮ್ಮ ಸೀಮಿತ ಜಗತ್ತಿನ, ಪರಿಮಿತ ಭಾಷೆಯ ಬಲದಿಂದ ಇಡೀ ಸಮುದಾಯಕ್ಕೆ ಮಹತ್ವದ್ದೆನಿಸುವ ಕಾವ್ಯವನ್ನು ಬರೆಯುವ, ಕಾದಂಬರಿಗಳನ್ನು ರಚಿಸುವ ಸಾಧ್ಯತೆಯು ಸೊನ್ನೆಗಿಂತ ಕಡಿಮೆ …… ಒಟ್ಟು ಸಮುದಾಯವು ತನ್ನ ನೋವಿನ, ನಲಿವಿನ ಆಳಗಳಿಗೆ ನಾಲಿಗೆ ಕೊಡಲು ಹವಣಿಸುತ್ತಿರುವಾಗ, ಆ ನೋವಿಗೆ ಪರಕೀಯವಾಗಿಯೇ ಉಳಿದಿದ್ದು ತನ್ನ ಜಗತ್ತಷ್ಟೇ ಸಾಹಿತ್ಯವಾಗಬಲ್ಲುದೆಂಬ ಭ್ರಮೆಯಲ್ಲಿ ಮುಳುಗಿದ್ದ ಅಲ್ಪಸಂಖ್ಯಾತರ ನಡುವಿನ ವ್ಯಕ್ತಿಯೊಬ್ಬ ಹೇಗೆ ತಾನೇ ಮುಂಚೂಣಿಯಲ್ಲಿರಲು ಸಾಧ್ಯ?’ (ಶರ್ಮರ ‘ಸಮಗ್ರ ಕಾವ್ಯ’ ಕ್ಕೆ ಬರೆದ ‘ಮುನ್ನುಡಿ’ ಯಿಂದ .)

ಅಡಿಗರ ನಿಲುವನ್ನಾಗಲಿ, ಕಾವ್ಯವನ್ನಾಗಲಿ ನಾವು ಒಪ್ಪಲಿಕ್ಕಿಲ್ಲ. ಆದರೆ ಅದಮ್ಯ ಚೇತನದ ಆ ಕವಿ ಸದಾ ಮುನ್ನಡೆಯುತ್ತ ಮಂಚೂಣಿಯಲ್ಲಿದ್ದವರು ಅವರ ಕಾಲದಲ್ಲಿ. ಆದರೆ ರಾಮಚಂದ್ರಶರ್ಮ ಮಾತ್ರ ದಾರಿಯ ಮಧ್ಯದಲ್ಲಿಯೇ ಪೆಟ್ರೋಲು ಖಾಲಿಯಾಗಿ, ಗಾಡಿಯನ್ನು ಕೈಯಿಂದ ನೂಕಲೂ ಸಾಧ್ಯವಾಗಲೆ. ತನ್ನನ್ನು ದಾಟಿ ಮುಂದೆ ಹೋದವರನ್ನು ಹೋಗುತ್ತಿರುವವರನ್ನು ವಟ ವಟ ಎಂದು ಶಪಿಸುತ್ತಿರುವ ಬಡಪಾಯ ಲಾರಿ ಡ್ರೈವರಿನಂತಾಗಿರುವುದು: ನಾವು ಕನಿಕರದಿಂದ ನೋಡುತ್ತಿರುವ ಚಿಂತಾಜನಕ ದೃಶ್ಯವಾಗಿದೆ.

*

ಶರ್ಮರಿಗೆ ಅರವತ್ತು ತುಂಬಿದಾಗ, ಸಂಕ್ರಮಣದಲ್ಲಿ – (ಸಂಚಿಕೆ ೧೮೬: ಫೆಬ್ರವರಿ ೧೯೮೮) ನಾನು ಬರೆದದ್ದು: ಅನೇಕ ವರ್ಷಗಳ ಕಾಲ ದೇಶದ ಹೊರಗೇ ಇದ್ದ ಶರ್ಮ ಒಂದು ರೀತಿಯಿಂದ ಕನ್ನಡ ಕಾವ್ಯದ ಮುಖ್ಯ ಪ್ರವಾಹದಿಂದ ದೂರವೇ ಇದ್ದರೂ ಅನೇಕ ನೆಲಗಳ, ಆಕಾಶಗಳ ನಂಟಿನಿಂದಾಗಿ ಅವರ ಕಾವ್ಯಕ್ಕೆ ತನ್ನದೇ ಆದ ವೈಶಿಷ್ಟ್ಯ. ವೈವಿಧ್ಯ ಒದಗಿ ಬಂದಿದೆ. ಅವರ ಭಾಷೆಯ ಲಯ, ಪ್ರತಿಮೆ, ಧ್ವನಿಗಳು ಸ್ವಲ್ಪ ‘ಪರಕೀಯ’ ಅನ್ನಿಸುವುದು ಸ್ವಾಭಾವಿಕ, ಅಡಿಗರ ಕಾವ್ಯದಲ್ಲಿ ತಮಿಳು ಸಿನಿಮಾ ನಟರಂತೆ ಖಟ್ ಖಡಲ್ಲೆಂದು ಡೈಲಾಗು ಹೊಡೆದು, ಕೊನೆಗೊಂದು ನೀತಿ ಪಾಠವನ್ನು ಸಾರಿ ಬಿಡುವ ಅಟ್ಟಹಾಸದ ರೀತಿ ಇದ್ದರೆ, ಶರ್ಮರ ಕಾವ್ಯದಲ್ಲಿ ಇದಕ್ಕೆ ತದ್ವಿರುದ್ದ ಸಾಧ್ಯವಾದಷ್ಟೂ ಪ್ರತಿಮೆಗಳ ಮೂಲಕವೇ ಮಾತಾಡುತ್ತ. ಇಳುದನಿಯಲ್ಲಿ ಸ್ವಂತದೊಂದಿಗೆ ಅಥವಾ ಆತ್ಮೀಯರೊಂದಿಗೆ ಮಬ್ಬು ಬೆಳಕಿನಲ್ಲಿ ಬೀರು ಹೀರುತ್ತ ನೆನಪುಗಳನ್ನೋ ಕನಸುಗಳನ್ನೋ ಹಂಚಿಕೊಳ್ಳುವ ರೀತಿ ಶರ್ಮರದು. ಅಡಿಗರ ಕಾವ್ಯ ಟಿ. ವಿ. ಕಾಮೇಂಟ್ರೀ ಆದರೆ, ಶರ್ಮರದು ಮೂಕಿ ಸಿನಿಮಾ.

*

ನವ್ಯರ ‘ಅಬ್ಸೆಶನ್’ (ವ್ಯಸನ) ಗಳಲ್ಲಿ ‘ಕಾಮ’ ಮುಖ್ಯ. ಶರ್ಮರಲ್ಲಿ ಇದು ಸ್ವಲ್ಪ ‘ಅತಿ’ ಯಾಗಿಯೇ ಇದ್ದುದರಿಂದ ಕೀರ್ತಿನಾಥ ಕುರ್ತುಕೋಟಿ ಇವರನ್ನು ‘ಲಿಬಿಡೋ’ ಕವಿ ಅಂತ ಕರೆದರು. ಲಂಕೇಶರ ಇಳಿದಿನಗಳ ಸಂಜೆಯ ಪಾನಗೋಷ್ಠಿಯಲ್ಲಿ ಶರ್ಮರು ಖಾಯಂ ಸದಸ್ಯರಾಗಿದ್ದರಂತೆ. ಆದರೂ ಲಂಕೇಶ ಇವರನ್ನೂ ‘ಜಾಣ ಬ್ರಾಹ್ಮಣ’ ಅಂತ ಜರೆದರೆ. (ಅದಕ್ಕಾಗಿ ಲಂಕೇಶರನ್ನು ಶರ್ಮ ಇಂದಿಗೂ ಕ್ಷಮಿಸಿಲ್ಲ.) ಆದರೆ ನಾನು ಕಂಡಂತೆ ‘ನವ್ಯ’ ದ ಅವಶೇಷದಂತಿರುವ ಈ ಹಿರಿಯ ಜೀವ ಭಿನ್ನಾಭಿಪ್ರಾಯ ಭಿನ್ನಮತಗಳನ್ನು ಇಟ್ಟುಕೊಂಡೇ, ಎಲ್ಲ ವಯಸ್ಸಿನ ಸಂಗಾತಿಗಳೊಂದಿಗೆ, ಯಾವುದೇ ಒಣ ಬಿಗುಮಾನವಿಲ್ಲದೆ ಬೆರೆಯುವ ಸಾರ್ವಜನಿಕ ಬದುಕಿನ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಒಬ್ಬ ಸ್ನೇಹಿತ ಎಂಥ ರಿಸ್ಕೇ ಇರಲಿ, ತನಗೆ ತಕ್ಷಣ ಹೊಳೆದ ಜೋಕನ್ನು ಕ್ಯ್ರಾಕ್ ಮಾಡಿ ದಕ್ಕಿಸಿಕೊಳ್ಳಬಲ್ಲ ನಗುಮೊಗದ ಸಜ್ಜನರು ಈ ಶರ್ಮಾ.

ರಾಮಚಂದ್ರ ಶರ್ಮರಿಗೆ ‘ನವ್ಯ’ ಎಂಬುದು ಕಾವ್ಯಧರ್ಮ ಮತ್ತು ಕಾವ್ಯಕರ್ಮ ಈಗಲೂ ಹೊಸಬರ ಕಾವ್ಯದಲ್ಲಿ ಐದು ಪರ್‌ಸೆಂಟ್‌‘ನವ್ಯ’ ಇದ್ದರೆ ಸಾಕು. ‘ಆಹಾ, ನವ್ಯ ಇನ್ನೂ ಸತ್ತಿಲ್ಲ’ ಎಂಬ ಉತ್ಸಾಹದಲ್ಲಿ ‘ಮುನ್ನುಡಿ’ ಬರೆದು ಬಿಡುತ್ತಾರೆ. ಅವರು ಅನೇಕ ವರ್ಷ ಇಂಗ್ಲೆಂಡ್, ಇಥಿಯೋಪಿಯಾದಲ್ಲಿ ಇದ್ದವರು. ಒಬ್ಬ ಮನೋವಿಜ್ಞಾನಿಯಾಗಿ, ಶಿಕ್ಷಣತಜ್ಞರಾಗಿ ಖ್ಯಾತರಾದವರು. ಹೀಗಾಗಿ ‘ಪರದೇಶಿತನ’ ಎಂಬುದು ಅವರ ವ್ಯಕ್ತಿತ್ವದ ಒಂದು ಮುಖ್ಯ ಎಳೆ. ಕನ್ನಡದ ಅನೇಕ ಕೃತಿಗಳನ್ನು, ಪತ್ನಿ ಪದ್ಮಾ ಅವರ ಸಹಯೋಗದಲ್ಲಿ ಇಂಗ್ಲೀಷಿಗೆ ಭಾಷಾಂತರಿಸಿದ್ದಾರೆ. ಅವರ ಮನೆಯಲ್ಲಿ ಬರಿ ಇಂಗ್ಲೀಷ್ ವಾತಾವರಣ. ಶರ್ಮರ ಕನ್ನಡ ಕೂಡ ‘ಇಂಗ್ಲೀಷ್’ ಅಂತಲೇ ಅನಿಸುತ್ತದೆ. ಆದರೆ ಅವರ ಇಂಗ್ಲೀಷ್ ಮಾತ್ರ ಕನ್ನಡದ ಹಾಗೇ ಕೇಳಿಸುತ್ತದೆ. (ಅವರು ಈ ಮಾತು ಒಪ್ಪುವುದಿಲ್ಲ.)

‘ಜನರಿಗೆ ಅರ್ಥವಾದರೆ ಅದು ಕಾವ್ಯ ಹೇಗಾದೀತು?’ – ಎಂಬಂಥ ನಿಲುವಿನ ಇಂಥವರಿಗೆ ಇತ್ತೀಚಿನ ವರ್ಷಗಳಲ್ಲಿ ಸುಗಮ ಸಂಗೀತದ ಮೂಲಕ ಪ್ರಚಾರವಾಗುತ್ತಿರುವ ಕಾವ್ಯವನ್ನು. ಕಂಡರೆ ಅಲರ್ಜಿ. ಅನೇಕ ವೇದಿಕೆಗಳಿಂದ ಶರ್ಮರು ನಮ್ಮ ಲಕ್ಷ್ಮೀನಾರಾಯಣ ಭಟ್ಟರನ್ನು ಟಾರ್ಗೆಟ್ ಮಾಡಿಕೊಂಡು ಅಟ್ಯಾಕ್ ಮಾಡಿದ್ದಾರೆ. ಆ ಬಡಪಾಯಿ ಭಟ್ಟರಿಗೋ ಹೇಗಾದರೂ ಮಾಡಿ ಈ ಹಿರಿಯ ಆಚಾರ್ಯರಿಂದಲೇ ಸರ್ಟಿಫೀಕೇಟು ಪಡೆಯುವ ಹುಚ್ಚು ಹಂಬಲ.

*

ಶರ್ಮರ ಮನೆಯ ಹೆಸರು ‘ಪರಾಶರ’, ಅದೊಂದು ಗೋತ್ರದ ಹೆಸರು. ಈ ಪರಾಶರ ಶಕ್ತಿ – ಮಹರ್ಷಿಯ ಮಗ: ವಸಿಷ್ಠನ ಮೊಮ್ಮಗ, ಯಮುನಾ ನದಿ ದಾಟುವಾಗ ಅವಳು ತಕ್ಷಣವೇ ಗರ್ಭಿಣಿಯಾಗಿ ವೇದವ್ಯಾಸ (ಕೃಷ್ಣದ್ವೈಪಾಯನ) ಎಂಬ ಬಾಲಕನನ್ನು ತಕ್ಷಣವೇ ಹೆತ್ತಳಂತೆ. (ನೋಡಿರಿ: ಯಜ್ಞನಾರಾಯಣರ ಪುರಾಣ ಭಾರತ ಕೋಶ, ಪುಟ ೩೬೫) ಇಂಥ ಅರ್ಥ‘ಗರ್ಭಿತ’ ಹೆಸರು ಶರ್ಮರ ಮನೆಗಿದೆ. ಆದರೆ ಇತ್ತೀಚಿಗೆ ನಮ್ಮಂಥವರು ಕೀಟಲೇ ಮಾಡಲು ಸುರು ಮಾಡಿದಾಗ, ಶರ್ಮರು ‘ಜಾಣ’ ಬ್ರಾಹ್ಮಣಿಕೆ ಮಾಡಿ ಅದಕ್ಕೆ ಹೊಸ ವ್ಯಾಖ್ಯೆ ನೀಡತೊಡಗಿದ್ದಾರೆ: ‘ಪರಾಶರ’ ಅಂದರೆ ‘ಪದ್ಮಾ ರಾಮಚಂದ್ರ ಶರ್ಮಾ ರಚಿತ’ ….. ಆದರೆ ನಾವು ಮನೆಯನ್ನು ‘ರಚನೆ’ ಮಾಡುವುದಿಲ್ಲ: ‘ನಿರ್ಮಾಣ’ ಮಾಡುತ್ತೇವೆ. ಅಲ್ಲವೇ?

*

ಶರ್ಮರ ಈ ‘ಇನ್ನೊಂದು’ ಮುಖವನ್ನು – (ಬಹುಶಃ ನಿಜವಾದ ಮುಖವನ್ನು) – ಕುರಿತು ನಾ ಬರೆದ ಸಾಲುಗಳಿವು:

ಈ ಪಶ್ಚಿಮ ಮುಖಿಯ ಮಾತೆಲ್ಲ ನೂತನ
ಆಳದ ಬೇರು ಮಾತ್ರ ಸನಾತನ.

-೨೦೦೩