ಡಾ. ಕಮಲಾ ಹಂಪನಾ ಅವರು ಡಿಸೆಂಬರ್ ೧೮ ರಿಂದ ಮೂಡುಬಿದರೆಯಲ್ಲಿ ಪ್ರಾರಂಭವಾಗಲಿರುವ ೭೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. ಅಧ್ಯಕ್ಷರ ಆಯ್ಕೆಯ ಮುನ್ನ ಪ್ರತಿ ವರ್ಷದಂತೆ ಮಾಮೂಲಿಯಾಗಿ ಈ ವರ್ಷ ಕೂಡ ಅನೇಕ ಪ್ರಹಸನಗಳು ನಡೆದವು. ಸಾಹಿತಿಗಳ ‘ಹಿರಿತನ’ (ಅಂದರೆ ವಯಸ್ಸು) ಮತ್ತು ಪ್ರತಿಭೆ – ಇತ್ಯಾದಿ ವಾದಗಳ ನಡುವೆ ಸಾಹಿತ್ಯ ಪರಿಷತ್ತಿನ ಸಂವಿಧಾನ ಪ್ರಕಾರ ಕಾರ್ಯಸಮಿತಿಗೆ ‘ಆಡಳಿತಾತ್ಮಕ ಸರ್ವಾಧಿಕಾರ’ ಇರುವುದನ್ನೂ ಮರೆಯುವಂತಿಲ್ಲ. ವಯಸ್ಸೇ ಮುಖ್ಯವೆಂದಾದರೆ, ನನ್ನ ಲೆಕ್ಕದ ಪ್ರಕಾರ, ಕನಿಷ್ಠ ಪಕ್ಷ ಎಂಟು ಜನ ಅಂತ್ಯ – ವಯಸ್ಕರಾದರೂ ಸದ್ಯ ಸಮ್ಮೇಳನಾಧ್ಯಕ್ಷತೆಗೆ ಅರ್ಹರಾದವರಿದ್ದಾರೆ ಆ ಚರ್ಚೆ ಈಗ ಬೇಡ . ಮುಂದಿನ ವರ್ಷ ಮತ್ತೆ ಅವಕಾಶ ಇದ್ದೇ ಇದೆ.

ಸಾಹಿತ್ಯಿಕ ಸಾಧನೆಯ ದೃಷ್ಟಿಯಿಂದ ಕಮಲಾ ಹಂಪನಾ ಯಾರಿಗೂ ಕಡಿಮೆ ಇಲ್ಲ. ಅನೇಕ ಕ್ಷೇತ್ರಗಳಿಗೆ ಸಂಬಂಧಪಟ್ಟ ಐವತ್ತಕ್ಕೂ ಹೆಚ್ಚು ಪುಸ್ತಕ ಬರೆದಿದ್ದಾರೆ. ಕತೆ, ಕಾವ್ಯ, ವಿಮರ್ಶೆ, ಸಂಶೋಧನೆ, ಪ್ರಬಂಧ – ಎಲ್ಲದರಲ್ಲೂ ಕೈಯಾಡಿಸಿದ್ದಾರೆ. ಒಳ್ಳೆಯ ಭಾಷಣಕಾರ್ತಿ ಮತ್ತು ಪ್ರಾಧ್ಯಾಪಕಿ, ಅವರ ಶಿಷ್ಯಬಳಗದಿಂದ ನಾಲ್ಕಾರು ಅಭಿನಂದನಾ ಗ್ರಂಥಗಳು ಬಂದಿವೆ. ಅವರಿಗೆ ಐವತ್ತು ತುಂಬಿದಾಗ ರಂಗಾರೆಡ್ಡಿ ಕೋಡಿರಾಂಪುರ ಮತ್ತು ಬೆನಕನಹಳ್ಳಿ ಜಿ. ನಾಯಕ ಅವರ ಸಂಪಾದಕತ್ವದಲ್ಲಿ ಪ್ರಕಟವಾದ ‘ಕಮಲಾಭಿನಂದನ’ (೧೯೮೫) ಆಧುನಿಕ ಕನ್ನಡ ಸಾಹಿತ್ಯದ ಓದುಗರಿಗೆ, ಸಂಶೋಧಕರಿಗೆ ಒಂದು ಒಳ್ಳೆಯ ಆಕರ ಗ್ರಂಥವಾಗಿದೆ. ಅದು ದಲಿತ – ಬಂಡಾಯ ಸಾಹಿತ್ಯದ ಶಿಖರ ಸಂದರ್ಭ.

*

ಕಮಲಾ ಅವರಿಗೆ ಮೂರು ಮುಖಗಳಿವೆ: ದಲಿತ, ಜೈನ ಮತ್ತು ಮಹಿಳೆ, ಗಿರಿಜನ (ಬೇಡ) ಜನಾಂಗದಲ್ಲಿ ಹುಟ್ಟಿದ್ದರಿಂದಾಗಿ ದಲಿತ ಪ್ರಜ್ಞೆ: ಜೈನರಾದ ಹಂಪನಾ ಅವರನ್ನು ಕಟ್ಟಿಕೊಂಡಿದ್ದಕ್ಕೆ ಜೈನ ಪ್ರಜ್ಞೆ. ಮಹಿಳೆಯಾಗಿದ್ದಕ್ಕೆ ಮಹಿಳಾ ಪ್ರಜ್ಞೆ ಅವರು ಯಾವ ಕ್ಷಣದಲ್ಲಿ ಯಾವ ಮುಖವನ್ನು ಬಿಂಬಿಸುತ್ತಾರೆ ಎಂಬುದು ಎದುರಿಗಿರುವ ಕ್ಯಾಮರಾದ ಮೇಲೆ ಅವಲಂಬಿತವಾಗಿರುವ ಅಂಶ. ಈ ಮೂರು ಮುಖಗಳು ಪರಸ್ಪರ ಪೂರಕ ಎಂಬುದು ಮುಖ್ಯ. (ಯಾಕೆಂದರೆ, ನಾವು ಕಂಡ ಕೆಲವು ಸಾಹಿತಿಗಳಿಗೆ ಒಂದೇ ಮುಖವಿದ್ದರೂ ಮುಖವಾಡಗಳು ಅನೇಕ ಇರುತ್ತವೆ.)

*

‘ಕಮಲಾ’ ಹೆಸರಿನ ಅನೇಕ ಮಹಿಳಾ ಸಾಹಿತಿಗಳು ಇದ್ದಾರೆ. ಆದರೆ ಕೈಲಾಸಂ, ಕುವೆಂಪು, ಕಾರಂತ ಅವರ ಬಗ್ಗೆ ಹೇಳುವಂತೆ, ಕನ್ನಡಕ್ಕೋಬ್ಬರೆ ‘ಕಮಲಾ ಹಂಪನಾ’ ಆ ಆದರ್ಶ ದಾಂಪತ್ಯಕ್ಕೊಂದು ವೈಶಿಷ್ಟ್ಯವೂ ಇದೆ. ಕಾಲೇಜಿನಲ್ಲಿ ಕಮಲಾ ಮತ್ತು ಹಂಪನಾ (ಹಂಪ ನಾಗರಾಜಯ್ಯ) ಸಹಪಾಠಿಗಳು, ವಯಸ್ಸಿನಲ್ಲಿ ಕಮಲಾ ಅವರು ಹಂಪನಾಗಿಂತ ಹಿರಿಯರು. ಬೇಡ ಜನಾಂಗದ ಕನ್ಯೆಯೊಬ್ಬಳು ಜೈನ ಧರ್ಮದ ಯುವಕನನ್ನು ಪ್ರೀತಿಸಿ, ಸ್ವಲ್ಪ ಧಾಡಸೀ ರೀತಿಯಲ್ಲಿಯೇ ಅವನನ್ನು ವರಿ‘ಸಿದ ರೋಚಕ ಕತೆಯನ್ನು ಅವರ ಬಾಯಿಯಿಂದಲೇ ಕೇಳಬೇಕು.

ನಮ್ಮ ಹಂಪನಾ ಕೂಡ ‘ಪತೀಧರ್ಮ’ವನ್ನು ಪಾರದರ್ಶಕವಾಗಿಯೇ ಒಪ್ಪಿಕೊಂಡ ಪ್ರಾಮಾಣಿಕ ಮನುಷ್ಯ. ಸತಿಯ ಏಳಿಗೆಗಾಗಿ ತಮ್ಮ ಸರ್ವಸ್ವವನ್ನೂ ಧಾರೆಯೆರೆದ ಇಂಥ ಪತಿರಾಯರು ಅಪರೂಪ. ಅವರ ಮನೆಗೆ ಫೋನು ಮಾಡಿ, ‘ಹಜಮಾನರು ಇದ್ದಾರೆಯೇ?’ ಅಂತ ಕೇಳಿದರೆ ಹಂಪನಾ ಫೋನನ್ನು ಕಮಲಮ್ಮನವರ ಕೈಗೇ ರವಾನಿಸುತ್ತಾರೆ. ಅವರದು ಸಮರಸದ ದಾಂಪತ್ಯ.

*

ಮೊನ್ನೆ ಮಾರ್ಚ ೨೩ರಂದು ‘ಸ್ವಾಭಿಮಾನಿ ಕರ್ನಾಟಕ ವೇದಿಕೆ’ ಕಿತ್ತೂರ ಚೆನ್ನಮ್ಮ ರಾಣಿಯ ಪ್ರತಿಮೆಗೆ ಗೌರವ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಬರ‍್ರಿ ಅಂದಾಗ ಇಬ್ಬರೂ ಪ್ರೀತಿಯಿಂದ ಬಂದಿದ್ದರು. ಎಲ್ಲ ಮುಗಿದ ನಂತರ ನಾವೆಲ್ಲ ಅವರ ಕಾರು ಏರಿದೆವು. ಡ್ರೈವರ್ ಸ್ಥಾನದಲ್ಲಿ ಹಂಪನಾ; ಮಗ್ಗುಲಿಗೆ ನಾನು, ಹಿಂದಿನ ಸೀಟಿನಲ್ಲಿ ಕಮಲಮ್ಮ.

ಹಂಪನಾಗೆ ಯಾಕೋ ದಾರಿ ಗೊತ್ತಾಗಲಿಲ್ಲ. ಅಪರಿಚಿತ ದಾರಿ ಅದು. ಕಮಲಮ್ಮ ಅವರನ್ನು ದಾರಿಗೆ ತಂದರು. ಅಷ್ಟೆ ಅಲ್ಲ; ‘ಅದಕ್ಕೆ ಗಂಡಸರು ಯಾವಾಗಲೂ ಹೆಂಡತಿಯರನ್ನು ಕರೆದುಕೊಂಡೇ ಹೋಗಬೇಕು. ಅಂದರೆ ದಾರಿ ತಪ್ಪುವುದಿಲ್ಲ’ ಅಂದರು. ನಾವಿಬ್ಬರೂ ಅನುಭವೀ ಗಂಡಂದಿರು, ಹೀಗಾಗಿ ಅವರ ನೀತಿ ಬೋಧೆಯನ್ನು ಕಿಮಕ್ಕೆನ್ನದೆ. ಯಾವ ಪ್ರತಿರೋಧವೂ ಇಲ್ಲದೆ ಸ್ವೀಕರಿಸಿದೆವು.

ನಾನು ಒಂದೇ ಒಂದು ಸಲ ಅಂಗಲಾಚಿದೆ: ಹೌದು ಮ್ಯಾಡಂ. ಹೆಂಡತಿ ಜೊತೆಯಲ್ಲಿ ಇಲ್ಲದಿದ್ದಾಗಲಾದರೂ ಗಂಡನಿಗೆ ದಾರಿ ತಪ್ಪಲು ಏನಾದರೂ ಅವಕಾಶವಿದೆಯೇ? … ಎಲ್ಲರೂ ನಕ್ಕೆವು

*

ಕಮಲಾ ಹಂಪನಾ: ಅನೇಕ ನೆಲೆಗಳಲ್ಲಿ ಮಹಿಳಾ ಶಕ್ತಿಯ ಸಂಕೇತ ಅಂಥದೊಂದು ನಿದರ್ಶನವನ್ನು ನಾನು ೧೯೮೭ ರಲ್ಲಿ ಬರೆದ ಲೇಖನವೊಂದರಲ್ಲಿ ದಾಖಲಿಸಿರುವೆ.

‘ಕನ್ನಡದ ಖ್ಯಾತ ನಿರ್ದೇಶಕರೊಬ್ಬರು ತಮ್ಮ ಸಹನಟಿಯನ್ನೊಳಗೊಂಡ ಕ್ರಿಮಿನಲ್ ಖಟ್ಲೆಗೆ ಗುರಿಯಾಗಿ ಬೇರೊಂದು ರಾಜ್ಯದಲ್ಲಿ ಸೆರೆಮನೆ ಸೇರಿದ ಸಂದರ್ಭ. ಆಗ ನಮ್ಮ ಅನೇಕ ಗಣ್ಯ ಸಾಹಿತಿಗಳು, ಸಮೂಹ ಮಾಧ್ಯಮಗಳು ವರ್ತಿಸಿದ ರೀತಿ ದಿಗ್ಬ್ರಮೆಗೊಳಿಸುವಂಥದ್ದು. ಇವರಲ್ಲಿ ಬಹುತೇಕ ಜನರು ದೇಶದ ಅಥವಾ ರಾಜ್ಯದ ಯಾವುದೇ ಸಮಸ್ಯೆಗೆ ಎಂದೂ ಬಹಿರಂಗವಾಗಿ ಸ್ಪಂದಿಸದ ಜಡ್ಡುಗಟ್ಟಿದ ತೊಗಲಿನವರು. ಇಂತವರು ಸದರೀ ರಂಗ ನಿರ್ದೇಶಕನ ‘ಸಂರಕ್ಷಣೆ’ಗೆಂದು ಸಾಮೂಹಿಕವಾಗಿ ಬಯಲಿಗೆ ಬಂದು. ಪತ್ರಿಕಾ ಹೇಳಿಕೆ ನೀಡಿ, ಮತ್ತೆ ಗೂಡು ಸೇರಿದ್ದರು. ಬೆಂಗಳೂರಿನ ವಾರಪತ್ರಿಕೆಯೊಂದು ವಿಸ್ಕಿಯ ಡಬರಿಯಲ್ಲಿಯೇ ಅದ್ದಿ ತೆಗೆದಂತೆ ಒಂದು ಅರೆ – ಎಚ್ಚರದ, ಅರೆ- ಕನಸಿನ ವಿಶೇಷಾಂಕವನ್ನೇ ಹೊರತಂದಿತ್ತು. ಕೊಳೆತ ಬೂರ್ಜ್ವ ಸಂಸ್ಕೃತಿಯ ಹೇಯ ಅಭಿವ್ಯಕ್ತಿ ಈ ಪ್ರಸಂಗದಲ್ಲಿ ಆ ನಿರ್ದೇಶಕನ ಕೊಲೆಯ ಪ್ರಯತ್ನಕ್ಕೆ ಬಲಿಯಾದ ಸಹನಟಿಯ ಪರವಾಗಿ, ಅವಳೊಬ್ಬ ಶೋಷಿತ ಮಹಿಳೆ ಎಂಬ ಕಾರಣದಿಂದ, ದಿಟ್ಟವಾದ ನಿಲುವು ತಾಳಿ, ಪತ್ರಿಕೆಗಳಲ್ಲಿ ಖಂಡಿಸಿದವರು ಬಹುಶಃ ಕಮಲಾ ಹಂಪನಾ ಒಬ್ಬರೇ ಅಂತ ಕಾಣುತ್ತದೆ. ನಾಡಿನ ಯಾವ ಮಹಿಳಾ ಸಂಘಟನೆಯೂ ಮುಂದೆ ಬಾರದ ಸಂದರ್ಭವದು.’

ಕಮಲಾ ಹಂಪನಾ ಅವರು ಅನೇಕ ವರ್ಷಗಳಿಂದ ಸಮ್ಮೇಳನಾಧ್ಯಕ್ಷತೆಗೆ ಮೇಕಪ್ ಮಾಡಿಕೊಂಡು ಕುಂತವರು-ಎಂಬ ಟೀಕೆ ಇದೆ. ಇರಲಿ, ಈ ರೀತಿ ಮೇಕಪ್ಪಿನಲ್ಲಿರುವ ಅನೇಕ ಗಂಡು-ಸಾಹಿತಿಗಳೂ ಇದ್ದಾರೆ, ಆಯ್ಕೆ-ಪೂರ್ವದ’ಲಾಬಿ’ ಆರೋಪಕ್ಕೆ ಒಳಗಾದವರು ಯಾರು ಇಲ್ಲ…

*

ಕಮಲಾ ಅವರದು ಗಟ್ಟಿ ವ್ಯಕ್ತಿತ್ವ ಅವರ ಬರವಣಿಗೆ, ಭಾಷಣಗಳಲ್ಲಿ ಅದು ಸ್ಪಷ್ಟ. ಅದರೆ ಈ ಬಗೆಯ ಗಟ್ಟಿತನವನ್ನು ಎಲ್ಲ ಸಂದರ್ಭಗಳಲ್ಲೂ ಉಳಿಸಿಕೊಳ್ಳುವದು ಅನೇಕರಿಗೆ ಕಷ್ಟದ ಮಾತು. ಉದಾಹರಣೆಗೆ: ಅವರ ಇತ್ತೀಚಿನ ‘ಪ್ರಜಾವಾಣಿ’ ಸಂದರ್ಶನದಲ್ಲಿ ಇತ್ತೀಚಿಗೆ ‘ಎನ್ ಕೌಂಟರ್’ ಹೆಸರಿನಲ್ಲಿ ರಾಜ್ಯದ ಪೋಲಿಸರು ಕೊಂದು ಹಾಕಿದ ಇಬ್ಬರು ಯುವತಿಯರ ಪ್ರಸ್ತಾಪವಿದೆ. ಇಡೀ ನಾಡೇ ಕರ್ನಾಟಕ ಸರಕಾರಕ್ಕೆ ಈ ಕುರಿತು ಛೀ ಥೊ ಎನ್ನತೊಡಗಿದೆ.

ಆದರೆ ಕಮಲಾ ಹಂಪನಾ ಹೇಳುತ್ತಾರೆ; ‘(ಅವರು) ನಕ್ಸಲೀಯರೆಂದು ಸಾಬೀತಾದರೆ ಕರ್ತವ್ಯ ನಿರ್ವಹಿಸಿದ ಪೋಲಿಸರ ಮೇಲೆ ನಿರ್ಲಕ್ಷ್ಯದ ಆರೋಪ ಹೊರಿಸುವುದು ಕಷ್ಟವಾಗಬಹುದು. ಅದನ್ನು ಮಾನವ ಹಕ್ಕುಗಳ ದಮನದ ಪ್ರಶ್ನೆಯಾಗಿ ನೋಡಬಹುದೆ ಎಂಬ ಅನುಮಾನಗಳಿವೆ. ಸ್ತ್ರೀ ಸಂವೇದನೆ, ಸ್ತ್ರೀ ಸ್ವಾತಂತ್ಯ್ರ. ಪರಿಸರ ಸಂರಕ್ಷಣೆ ಎಂಬಿತ್ಯಾದಿ ತಾತ್ವಿಕ ಜಿಜ್ಞಾಸೆಗೆ ಇದನ್ನು ದಬ್ಬದೆ ವಾಸ್ತವವಾಗಿ ನಡೆದದ್ದಾರೂ ಏನು ಎಂಬುದರ ವಿವರಗಳನ್ನು ಪರಿಶೀಲಿಸಿಬೇಕು.

*

ನಮ್ಮ ಸದ್ಯದ ಸಾಹಿತ್ಯಿಕ ಲೋಕದ ಸಂಕೀರ್ಣತೆಗೆ ಇದೊಂದು ಸೂಚಿ ಅಷ್ಟೆ. ಸಮ್ಮೇಳನವನ್ನು ಉದ್ಘಾಟಿಸಬೇಕಾಗಿದ್ದವರು ಈ ರಾಜ್ಯದ ಮುಖ್ಯಮಂತ್ರಿ ಅವರ ‘ಸನ್ನದಿ’ ಯಲ್ಲಿ ಸಮ್ಮೇಳನಾಧ್ಯಕ್ಷರು ಆ ಯುವತಿಯ ‘ಹತ್ಯೆ’ ಯನ್ನು ಖಂಡಿಸಲು ಹೇಗೆ ಸಾದ್ಯ? (ಪಾಪು ಅಂಥವರಿಗೆ ಮಾತ್ರ ಅದು ಸಾಧ್ಯ) ಕಮಲಾ ಹಂಪನಾ ಅವರ ಮುಜುಗರ ಅರ್ಥವಾಗುತ್ತದೆ. ನಮ್ಮ ಎಂಥಂಥಾ ಘನತೆವೆತ್ತ ಉದ್ದಾಮ ಸಾಹಿತಿಗಳೇ ಸರಕಾರದ ‘ಮುಜುಗರ’ ಕ್ಕೆ ಒಳಗಾಗಿ ರಣರಂಗದಿಂದ ರಣಹೇಡಿಗಳ ಹಾಗೆ ಪರಾರಿಯಾಗಿಲ್ಲವೇ?

*

ಯಾವುದೋ ‘ಅನಿವಾರ್ಯ’ ಕಾರಣದಿಂದಾಗಿ ಮುಖ್ಯಮಂತ್ರಿ ಕೃಷ್ಣ ಅವರು ಮೂಡುಬಿದರೆಯ ಸಮ್ಮೇಳನದಿಂದ ದೂರ ಉಳಿದಿದ್ದಾರೆ. ಹಳೆಯ ಸಂಪ್ರದಾಯವನ್ನೇ ಮುರಿದು ಹಾಕಿ ಹೊಸದಕ್ಕೆ ನಾಂದಿ ಹಾಡಿದ್ದಾರೆ.

ಮೊದಲಿನಿಂದಲೂ ಬಂಡಾಯ ಮನೋಧರ್ಮ ರೂಢಿಸಿಕೊಂಡ ಡಾ.ಕಮಲಾ ಹಂಪನಾ ಅವರು ಈಗಾಗಲೇ ತಮ್ಮ ಅನೇಕ ಸಂದರ್ಶನಗಳಲ್ಲಿ ಅಧ್ಯಕ್ಷ ಭಾಷಣದ ಸ್ಯಾಂಪಲು ತೋರಿಸಿದ್ದಾರೆ. ಅವರು ತಮ್ಮ ಕಂಠದಿಂದ ಕನ್ನಡ ಘರ್ಜನೆ ಹಾಕುವುದರಲ್ಲಿ ಸಂದೇಹವಿಲ್ಲ. ಕನ್ನಡದ ಅನೇಕ ಸಮಸ್ಯೆಗಳಿಗೆ ಕಿವುಡಾಗಿಯೇ ಉಳಿದಿರುವ ನಮ್ಮ ಸದ್ಯದ ಸರಕಾರ ಈ ಘರ್ಜನೆಯಿಂದಲಾದರೂ ಎಚ್ಚರಗೊಳ್ಳುವುದೇ?

(ವರದಿಗಾರರು ಹೇಳುವಂತೆ) – ಕಾದು ನೋಡಬೇಕಾಗಿದೆ.

 

-೨೦೦೩