೧೯೬೦ ರ ದಶಕದ ಕೊನೆಗೆ ಪ್ರಾರಂಭವಾಗಿ ೭೦ರ ದಶಕದುದ್ದಕ್ಕೂ ಕನ್ನಡ ರಂಗಭೂಮಿಗೆ ನುಗ್ಗಿ ಬಂದ ಹೊಸ ಬಗೆಯ ನಾಟಕಗಳು ಇಡೀ ರಂಗಭೂಮಿಯ ಆಳ- ಅಗಲಗಳನ್ನೇ ವಿಸ್ತರಿದವು. ಮನರಂಜನೆಯ ಮೇಲ್ಪದರಿನಲ್ಲಿಯೇ ವ್ಯವಹರಿಸುತ್ತ ಜನಪ್ರಿಯವಾಗಿದ್ದ ಪ್ರಹಸನಗಳ ಪ್ರಭಾವ ಕಡಿಮೆಯಾಗಿ ನಗೆಯ ಆಳದಲ್ಲಿರುವ ವಿಷಾದವನ್ನು ಸ್ಫೋಟಿಸುವ ಈ ಹೊಸ ನಾಟಕಗಳು, ಆಗ ಚಾಲ್ತಿಯಲ್ಲಿದ್ದ ‘ನವ್ಯ’ ಕಾವ್ಯ ಜನರಿಂದ ದೂರವೇ ಉಳಿದಿದೆ ಎಂಬ ಆರೋಪ ಹೊತ್ತ ಅವಧಿಯಲ್ಲಿಯೇ ಜನಮನವನ್ನು ತಟ್ಟಿದ್ದವು ಈ ಹೊಸ ಪ್ರಯೋಗಗಳಿಗೆ ವಿಮರ್ಶಕರು ‘ಅಬ್ಸರ್ಡ್’ ಅಥವಾ ‘ಅಸಂಗತ’ ನಾಟಕ ಎಂಬ ಲೇಬಲ್ ಕೊಟ್ಟರು.

ಸೃಜನಶೀಲ ಮನಸ್ಸಿನ ಕ್ರಿಯಾಶೀಲತೆ ಸ್ಫೋಟಗೊಳ್ಳುವುದು ಯಾವಾಗಲೂ ಅನಿರೀಕ್ಷಿತ ರೀತಿಯಲ್ಲಿಯೇ, ಸ್ಫೋಟಗೊಳ್ಳುವ ಮುನ್ನ ಅಂತರಾಳದಲ್ಲಿ ಯಾವ ಯಾವ ಶಕ್ತಿಗಳು ಯಾವ ಯಾವ ಸಮೀಕರಣ ಹೊಂದಿರುತ್ತವೆಯೋ ಅದೆಲ್ಲ ರಹಸ್ಯದ ಮಾತು. ಕಾಲ ಹಾಗೂ ದೇಶದ ಕ್ಷಿತಿಜಗಳನ್ನು ಮೀರಿ ಈ ಪ್ರಭಾವಗಳು ತಮ್ಮ ಕೆಲಸ ನಡೆಸಿರುತ್ತವೆ. ಎಲ್ಲ ಬಯಲಾದ ಮೇಲೆ ಬರುತ್ತಾರೆ ರಂಗದ ಮೇಲೆ ವಿಮರ್ಶಕರು. ಅವರ ಕೆಲಸ ಇಡೀ ಘಟನೆಗೊಂದು ತರ್ಕಬದ್ದ ಚೌಕಟ್ಟು ಹುಡುಕುವುದು. ಕಲಾಕೃತಿಯನ್ನು ತಮ್ಮ ಜ್ಞಾನದ ಪರಿಮಿತಿಗನುಗುಣವಾಗಿ ‘ಮೌಲ್ಯ’ ಮಾಪನ ಮಾಡುವುದು, ಸೂತ್ರೀಕರಣಗೊಳಿಸುವುದು, ಅನಂತರ ಅದಕ್ಕೊಂದು ಲೇಬಲ್ ಹಚ್ಚುವುದು, ಪರಿಶ್ರಮ ಹಾಗೂ ಪಾಂಡಿತ್ಯಗಳಿಂದ ಕೂಡಿದ ಈ ಕೆಲಸ ಎಷ್ಟು ಆಕರ್ಷಕವಾಗಿರುತ್ತದೆ ಅಂದರೆ ಸೃಜನಶೀಲ ಕಲಾವಿದರು ಕೂಡ ಈ ವಿಮರ್ಶೆಯ ಕಕ್ಷಗೆ ಬಲಿ ಬೀಳುತ್ತಾರೆ” ಓ, ಇದು ಹೀಗೇ ಇರಬಹುದು!” ಎಂದು ಒಪ್ಪಿಕೊಂಡು, ತಾವೂ ಸೂತ್ರೀಕರಣಕ್ಕೆ ಬದ್ಧರಾಗಿ, ಅನಂತರದ ಕೃತಿಗಳಲ್ಲಿ ಅವಸಾನದ ಹಾದಿ ಹಿಡಿಯುತ್ತಾರೆ. ಆದರೆ ಪ್ರತಿಭಾವಂತರು ಮಾತ್ರ ವಿಮರ್ಶೆಯ ಲಕ್ಷ್ಮರೇಖೆಗಳನ್ನು ಉಲ್ಲಂಘಿಸುತ್ತಲೇ ಪುಷ್ಪಕ ವಿಮಾನದಲ್ಲಿ ಹಾರಾಡುತ್ತ ಭೂಮಿಯ ಮೇಲೆ ಗೆರೆ ಕೊರೆಯುವವರನ್ನು ಕಂಡು ನಗುತ್ತಲೇ ಇರುತ್ತಾರೆ.

ಯುರೋಪಿಯನ್, ಅಮೆರಿಕನ್ ಖಂಡಗಳಲ್ಲಿ ಕೂಡ ಹೀಗೆ ಆಗಿದ್ದು: ಈ ಖಂಡಗಳ ಅನೇಕ ನಾಟಕಕಾರರು ಪರಸ್ಪರ ಯಾವ ಸಂಪರ್ಕವೂ ಇಲ್ಲದೆ ತಮ್ಮಷ್ಟಕ್ಕೆ ತಾವು ಹೊಸ ರೀತಿಯ ಕೃತಿ ರಚಿಸುತ್ತಿದ್ದರು. ಅನಂತರ ಯಾವನೋ ವಿಮರ್ಶಕ ಬಂದು ಅವರಲ್ಲಿ – ತನಗೆ ತಿಳಿದಂತೆ – ಒಂದು ಸಮಾನಾಂಶವನ್ನು ಕಂಡು ಅವರ ಕೃತಿಗಳಿಗೊಂದು ಚಾರಿತ್ರಿಕ ಹಿನ್ನೆಲೆ ಒದಗಿಸಿದ, ಅವರಿಗೂಂದು ಲೇಬಲ್ ಅಂಟಿಸಿದ. ನಕ್ಷತ್ರ ನಕ್ಷತ್ರದ ನಡುವೆ ಕೋಟ್ಯಂತರ ಪ್ರಕಾಶ – ವರ್ಷಗಳ ಅಂತರವಿದ್ದವರೂ ‘ಭೂಮಿ’ಯ ನೆಲೆಯಿಂದ ನಕ್ಷತ್ರಗಳೆಲ್ಲ ಒಂದೇ ಕಡೆ ಕಾಣುವಂತೆ ಈ ನಾಟಕಕಾರರೆಲ್ಲ ಒಂದೇ ಗುಂಪಿನವರಾಗಿ ಕಾಣತೊಡಗಿದರು.

ಕನ್ನಡದ ‘ಅಸಂಗತ’ ನಾಟಕಕಾರರ ಪಟ್ಟಿಯಲ್ಲಿ ನನ್ನದೂ ಒಂದು ಹೆಸರಿರುವುದರಿಂದ ಈ ಬಗ್ಗೆ ಒಂದು ಹೊರಳು ನೋಟ ಅವಶ್ಯವೆಂದು ನನಗನಿಸಿದೆ. ಈ ನಾಟಕಗಳ ಇತಿಹಾಸವನ್ನಾಗಲಿ, ಸಮೀಕ್ಷೆಯನ್ನಾಗಲಿ, ವಿಮರ್ಶೆಯನ್ನಾಗಲಿ ಮಾಡುವುದು ನನ್ನ ಅಳವಿಗೆ ಮೀರಿದ ಮಾತು. ‘ವಿಮರ್ಶೆ’ ಯ ಪ್ರಕ್ರಿಯೆ ನನಗೆ ಅಲರ್ಜಿಯ ವಿಷಯ.

೧೯೬೭ – ೬೮ ರ ಅವಧಿ. ನಾನು ಹೈದ್ರಾಬಾದಿನ ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್‌‌ ಇಂಗ್ಲೀಷದಲ್ಲಿ ತರಬೇತಿ ಪಡೆಯುತ್ತಿದ್ದೆ. ಒಮ್ಮೆ ಮೈಸೂರಿನ ಗೆಳೆಯ ವಿಶ್ವನಾಥ ಮಿರ್ಲೆ ಬಂದಿದ್ದರು. ಅವರು ನ.ರತ್ನ ಅವರು ಬರೆದ ‘ಗೊಡೆ ಬೇಕೇ ಗೋಡೆ’ ನಾಟಕದ ಹಸ್ತಪ್ರತಿ ನನಗೆ ಓದಲು ಕೊಟ್ಟರು. ಸಣ್ಣ ನಾಟಕ. ಒಂದೇ ಮಟ್ಟಿಗೆ ಓದಿ ಮುಗಿಸಿದೆ. ನನಗೆ ಬಹಳ ಹಿಡಿಸಿತು. ನನ್ನೊಳಗೆ ಒದ್ದಾಡುತ್ತಿದ್ದ ಹಲವಾರು ಅನುಭವಗಳಿಗೆ ರೂಪು ಕೊಡಲು ನನಗೊಂದು ಹಾದಿಯಾಯಿತು. ಇಡೀ ಒಂದು ದಿನ ಒಂದು ರಾತ್ರಿ ಕುಂತು ನನ್ನ ಮೊದಲ ನಾಟಕ ಕೊಡೆಗಳು ಬರೆದೆ. ಅದನ್ನೋದಿದ ಮಿರ್ಲೆ ‘A genuine absurd play’ ಅಂದರು. ಅಲ್ಲಿಯವರೆಗೂ ‘absurd’ ಎನ್ನುವುದು ಪಾಶ್ಚಿಮಾತ್ಯ ಸಾಹಿತ್ಯದ ಒಂದು ಸಾಹಿತ್ಯ ಪ್ರಕಾರವಾಗಿ ಮಾತ್ರ ನನಗೆ ಪರಿಚಯವಿತ್ತು. ನನ್ನ ನಾಟಕಕ್ಕೂ ಈ ಲೇಬಲ್ ಅನ್ವಯವಾಗುತ್ತಿರುವುದು ಕಂಡು ನನಗೆ ಸಹಜವಾಗಿಯೇ ರೋಮಾಂಚನವಾಯಿತು.

ಅದಕ್ಕೂ ಮುನ್ನ ಸುಮಾರು ಹತ್ತು ವರ್ಷ ಕಾವ್ಯ ಕೃಷಿ ಮಾಡಿದ ಅನುಭವ ನನ್ನದು. ೧೯೬೭ ರಲ್ಲಿ ‘ಕೊಡೆಗಳುಎಂಬ ಹೆಸರಿನ ಕವನವನ್ನೂ ಬರೆದಿದ್ದೆ. ಮಳೆಯಲ್ಲಿ ‘ಛತ್ರಪತಿ’ ಯಾಗಿ ನಾನೆ, ನಾನೊಬ್ಬನೆ ಹೊರಟಾಗ ಎದುರಿನಿಂದ ಎಲ್ಲಿಂದಲೋ ತೇಲಿ ಬಂದಂತ ಕೊಡೆ ಹಿಡಿದ ಮತ್ತೊಬ್ಬರು. ಮಾತು ಕತೆ.

ಈ ಕೊಡೆಯ ಕೆಳಗೆ
ಈ ಕೊಡೆಯ ಒಳಗೆ
ಈ ನನ್ನ ಬಳಿಗೆ
ಬರುವಿರಾ?
ನಾನೆ ಬರಲೆ?
ಐದಾರು ಹೆಜ್ಜೆ, ಅಷ್ಟೆ, ಒಂದೆರಡು ಮಿನಿಟು.

ಅದೆಲ್ಲ ಆಗುವುದಿಲ್ಲ.
ಮತ್ತೆ ಹೆಜ್ಜೆ ಕಿತ್ತಿರುವೆ
ಛತ್ರಪತಿ!
ನಾನೆ.
ನಾನೊಬ್ಬನೆ.

ಸ್ನೇಹ, ಪ್ರೇಮ, ದಾಂಪತ್ಯ… ಏನೇ ಇದ್ದರೂ ಕೊನೆಗೂ ನಾವು ನಾವೇ ಆಗಿ ಉಳಿಯುವ ದುರಂತದ ವಿಷಾದ ಮುಂದೆ ಕೊಡೆಗಳು ನಾಟಕದ ಮೂಲಕ ಹೆಚ್ಚು ಧ್ವನಿಪೂರ್ಣವಾದದ್ದನ್ನು ನಾನು ಕಂಡುಕೊಂಡೆ. ಹೀಗೆ, ನನ್ನ ಮಟ್ಟಿಗೆ ಹೇಳಬೇಕೆಂದರೆ, ನಾನು ನಾಟಕ ಬರೆಯಲು ಪ್ರಾರಂಭಿಸಿದ್ದು ನನ್ನ ಅನುಭವದ ತುಡಿತಕ್ಕೆ, ನನ್ನ ವಯಸ್ಸಿನ ಆ ಘಟ್ಟದಲ್ಲಿ ನನಗೆದುರಾದ ಹಲವಾರು ಸಮಸ್ಯೆಗಳ ಮಿಡಿತಕ್ಕೆ, ಕಾವ್ಯ ಮಾಧ್ಯಮದಿಂದ ನಾಟಕ ಮಾಧ್ಯಮಕ್ಕೆ ಸಾಗುವುದರ ಮೂಲಕ.

ಅದೇ ಸೆಳವಿನಲ್ಲಿ ಬರೆದ ನಾಟಕ – ಅಪ್ಪ. ಬಸವಣ್ಣನವರ ವಚನವೊಂದು ನಾಲ್ಕೈದು ವರ್ಷಗಳಿಂದ ನನ್ನನ್ನು ಎಡೆಬಿಡದೆ ಕಾಡುತ್ತಿತ್ತು. “ನಾನು ನಿನ್ನನ್ನು ಅರಸುವುದೆಂದರೆ ಸೂಳೆಯ ಮಗ ತನ್ನ ತಂದೆಗಾಗಿ ಅರಸಿದಂತೆ” ಎಂಬ ಸಿಡಿಮದ್ದಿನಂಥ ಪ್ರತೀಕ ಆ ವಚನದಲ್ಲಿದೆ. ಕಾಣದ, ಬಹುಶಃ ಇರದ ಯಾವುದೋ ಒಂದಕ್ಕಾಗಿ ನಾವು ಸದಾ ಹುಡುಕಾಟ ನಡೆಸುತ್ತೇವೆ, ಅಲ್ಲವೇ? ಈ ನಿರಂತರ ಹುಡುಕಾಟ, ನಿರಂತರ ಅತೃಪ್ತಿ ಇಂದಿಗೂ ನನ್ನ ಬದುಕಿನ ಒಂದು ಅನಿವಾರ್ಯತೆಯೇ ಆಗಿರುವುದರಿಂದ ಈ ಹುಡುಕಾಟ ಕೂಡ ಒಂದು ಭ್ರಮೆಯೇ ಆಗಿರಬಹುದೇ ಎಂಬ ಅನುಮಾನವೂ ಇರುವುದರಿಂದ (“ಅವ್ವಾ ಅವ್ವಾ…. ಇದು ಬರೇ ಕತೀ ಏನ ಮತ್ತ?” – ಇದು ‘ಅಪ್ಪ’ ನಾಟಕದ ಬಸವನ ಕೊನೆಯ ಪ್ರಶ್ನೆ!) ಈ ಕೃತಿ ‘ನಾಟಕ’ ವಾಗಿ ನನಗೆ ಬಹಳ ಸಮಾಧಾನ ತಂದಿದೆ.

ನನ್ನ ಉಳಿದ ನಾಟಕಗಳೆಲ್ಲ ಇದೇ ರೀತಿ, ನನ್ನನ್ನು ಕಾಡುವ, ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ (ಪರಿಹಾರವನ್ನಲ್ಲ) ಒಂದು ರೂಪು ಕೊಡಲು ಮಾಡಿದ ಪ್ರಯತ್ನಗಳೇ. ಈ ಆರು ನಾಟಕಗಳಲ್ಲಿ ಕೊನೆಯದು – ಕತ್ತಲ ರಾತ್ರಿ ನಾನು ಇಂಗ್ಲೆಂಡಿನಲ್ಲಿದ್ದಾಗ – ೧೯೭೩ – ಬರೆದಿದ್ದು. ಅಲ್ಲಿಯೇ ಬರೆದ ಗೋಕರ್ಣದ ಗೌಡಶಾನಿ ಎಂಬ ಪೂರ್ಣಾವಧಿ ನಾಟಕದ ರೀತಿ ಮಾತ್ರ ತೀರ ವಿಭಿನ್ನವಾದದ್ದು.)

ಒಂದು ಕಾಲಾವಧಿಯಲ್ಲಿ ಬರೆಯುವ ಲೇಖಕರನ್ನು ಯಾವುದೋ ಒಂದು ಸೂತ್ರ ಹಿಡಿದು ಒಂದು ಗುಂಪಾಗಿ ಪರಿಗಣಿಸುವುದು ಸಾಧ್ಯ. ವಿಮರ್ಶಕರು ಮಾಡಬಲ್ಲ ಕೆಲಸವೇ ಅದು. ಆದರೆ ಪ್ರತಿಯೊಬ್ಬ ಸೃಜನಶೀಲ ಕಲಾವಿದನಿಗೂ ತನ್ನದೇ ಆದ ಸ್ವಂತ ಜಗತ್ತಿದೆ. ಆ ಜಗತ್ತಿನ ತಳಮಳ, ಹಾಹಾಕಾರ, ಆನಂದ, ಸಂಕಟ ಅವನಿಗೆ ಮಾತ್ರ ಗೊತ್ತು. ಚಾಲ್ತಿಯಲ್ಲಿರುವ ವಿಮರ್ಶೆಯ ಮಾನದಂಡಗಳಿಗಾಗಲಿ, ಅಭಿಪ್ರಾಯದ ಕ್ಲೀಷೆಗಳಿಗಾಗಲಿ ಹೆಚ್ಚು ಗಮನವೀಯದೆ ಅವನು ಮುಂದುವರಿಯಬೇಕಾಗುತ್ತದೆ. ‘ಅಸಂಗತ’ ಹೆಸರಿನ ನಾಟಕಗಳನ್ನು ಅನೇಕರು ಬರೆದರು – ನ.ರತ್ನ, ತೇಜಸ್ಷಿ, ಲಂಕೇಶ್, ಕಂಬಾರ, ಕುಸನೂರು, ವಾಲೀಕಾರ ಇನ್ನೂ ಅನೇಕರು. ಅವರವರನ್ನು ಕಾಡುವ ಪ್ರಶ್ನೆಗಳು ಅವರವರೇ ಆಗಿರುವುದರಿಂದ ನಾನು ಹೆಚ್ಚು ಮಾಡುವಂತಿಲ್ಲ.

ಈ ಹೊಸ ನಾಟಕಗಳ ಹೆಚ್ಚಳವೆಂದರೆ – ಈಗಾಗಲೇ ಪ್ರಸ್ತಾಪಿಸಿರುವಂತೆ – ಅವು ತೀವ್ರಗತಿಯಲ್ಲಿ ರಂಗಭೂಮಿಯ ಮೇಲೆ ಯಶಸ್ವಿ ಪ್ರಯೋಗಗಳಾಗಿ ಪ್ರೇಕ್ಷಕರನ್ನು ತಲುಪಿದ್ದು. ವಸ್ತು, ಪಾತ್ರ, ಚಿತ್ರಣ, ಸಂಭಾಷಣೆಗಳ ನಾವೀನ್ಯತೆಯೂ ಇದಕ್ಕೆ ಕಾರಣವಾದವು. ನಿರ್ದೇಶಕರ ಜಾಣ್ಮೆಗೆ ಸವಾಲಾದವು ಈ ನಾಟಕಗಳು. ಆದರೆ ಈ ಕಾಲಾಂತರದಲ್ಲಿ ಒಡೆದು ಕಾಣುವ ಒಂದು ಅಂಶವೆಂದರೆ: ಬಹುತೇಕ ನಿರ್ದೇಶಕರು ಸಾಂಪ್ರದಾಯಿಕ ರೀತಿಯ ನಾಟಕಗಳನ್ನು ನಿರ್ದೇಶಿಸುವ ರೀತಿಯನ್ನೇ ಇವಕ್ಕೂ ಅನ್ವಯಿಸಿದರೇ ಹೊರತು, ಈ ಕೃತಿಗಳ ಜೀವಾಳವನ್ನು ಅಭಿವ್ಯಕ್ತಿಗೊಳಿಸುವ ಸೃಜನಶೀಲತೆಯನ್ನು ಮಾತ್ರ ತೋರಲಿಲ್ಲ. (ಈ ಮಾತಿಗೆ ಕೆಲ ಅಪವಾದಗಳಿವೆ) ಶಾಲೆ – ಕಾಲೇಜುಗಳ ಗ್ಯಾದರಿಂಗ್ಗಳಲ್ಲಂತೂ ಮೇಲುಪದರಿನ ಹಾಸ್ಯ, ಪಾತ್ರಗಳ ಅಸಂಬದ್ಧ ನಡವಳಿಕೆ ಇವೇ ವಿಜೃಂಬಿಸಿ ‘ಅಸಂಗತ’ ನಾಟಕಗಳನ್ನು ‘ಪ್ರಹಸನ’ದ ಮಟ್ಟಕ್ಕೆ ಇಳಿಸಿದ್ದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಇನ್ನು ಬಿ. ವಿ. ಕಾರಂತರ ಹಸ್ತಪ್ರತಿಗಳನ್ನು ತಮ್ಮ ಗಿಮಿಕ್ಸ್, ದೊಂಬರಾಟ ಹಾಗೂ ಮಾಸ್ ಡ್ರಿಲ್‌ಗಳಿಗೆ ಗ್ರಾಸ ಮಾಡಿಕೊಂಡ ದುರಂತವನ್ನು ಕನ್ನಡ ರಂಗಭೂಮಿ ಕಂಡಿದೆ ಮೂಲಕೃತಿಗಳಿಗೆ ಬದ್ಧರಾಗಿ, ಅವುಗಳ ಜೀವದ್ರವ್ಯವನ್ನು ಪ್ರೇಕ್ಷಕರಿಗೆ ಪರಿಣಾಮಕಾರಿಯಾಗಿ ತಲುಪಿಸಬಲ್ಲ ಸೃಜನಶೀಲ ನಿರ್ದೇಶಕರಿಂದು ಬೇಕಾಗಿದ್ದಾರೆ.

ಸಾಹಿತ್ಯ ತುಳಿದ ದಾರಿಯ ಬಗ್ಗೆ (ಕುಂಟುತ್ತ ಅಥವಾ ನಡೆಯುತ್ತಾ ಅಥವಾ ಓಡುತ್ತಾ ಬಂದ ದಾರಿ) ಚರ್ಚಿಸುವುದು, ಅದರ ಬೆಳವಣಿಗೆ ಹಾಗೂ ಭವಿಷ್ಯದ ಬಗ್ಗೆ ಸ್ವಲ್ಪ ಆಲೋಚಿಸುವುದು ಸಾಮಾನ್ಯವಾಗಿ ಸೆಮಿನಾರ್‌ಗಳಲ್ಲಿ ಮಾಡುವ ಕ್ರಿಯೆಗಳು ಬರಹಗಾರನ ಸೃಜನಶೀಲತೆಗೆ ಇಂಥ ಚರ್ಚೆಗಳಿಂದ ವಿಶೇಷ ಲಾಭವೇನೂ ಆಗುವುದಿಲ್ಲವೆಂದು ನನ್ನ ಅನಿಸಿಕೆ.

ಚರ್ಚೆಯ ಸಂದರ್ಭದಲ್ಲಿ ಸಾಮಾನ್ಯವಾಗಿ ಎತ್ತಲಾಗುವ ಕೆಲವು ಮಾಮೂಲಿ ಪ್ರಶ್ನೆಗಳಿವೆ. ಮೊದಲ ಹಂತದಲ್ಲಿ ಕೆಲವು ಪ್ರಮುಖರಿಂದ ಚಲಾವಣೆಗೆ ಬರುವ ಈ ಪ್ರಶ್ನೆಗಳು ಬರಬರುತ್ತ ಬಣ್ಣಗೆಟ್ಟ ಕ್ಲೀಷೆಗಳಾಗಿ, ಈ ಅಥವಾ ಇಂಥ ಪ್ರಶ್ನೆ ಕೇಳುವವರು ‘ಅವರೂ ಒಬ್ಬ ವಿಮರ್ಶಕರಿರಬಹುದು’ ಎಂಬ ಭ್ರಮೆ ಹುಟ್ಟಿಸುವಲ್ಲಿ ಮಾತ್ರ ಯಶಸ್ವಿಯಾಗುತ್ತವೆ. ಈ ಕಲಾಕೃತಿ ವೈಯಕ್ತಿಕ ತುರ್ತಿನಿಂದ ಹುಟ್ಟಿದೆಯೇ? ಇಲ್ಲಿ ಪ್ರಜ್ಞೆಯಾಗಲಿ, ಸಂವೇದನೆಯಾಗಲಿ, ಎಷ್ಟರಮಟ್ಟಿಗೆ ನಮ್ಮ (ಅರ್ಥತ್ ‘ಭಾರತೀಯ’) ಪರಂಪರೆಗೆ ಅನುಗುಣವಾಗಿದೆ? ಇದು ಮುಖ್ಯ ಪ್ರವಾಹದಲ್ಲಿಯೋ ಅಥವಾ ಪ್ರವಾಹ ಬಿಟ್ಟು ಹೊರಗಿದೆಯೋ?…. ಇತ್ಯಾದಿ ಪ್ರಶ್ನೆಗಳು, ಸೃಜನಶೀಲತೆಯು ರಹಸ್ಯದ ‘ಅಆಇಈ’ ಕೂಡ ಗೊತ್ತಿಲ್ಲದ ಕೊರಡು ಮನಸ್ಸಿನ ಪ್ರತೀಕಗಳೆಂದೇ ನನ್ನ ಅನಿಸಿಕೆ. ಈ ಐತಿಹಾಸಿಕ ಅನಿವಾರ್ಯತಾವಾದಿಗಳು ವ್ಯಕ್ತಿಯ ಹಾಗೂ ಸಮಷ್ಟಿಯ ಬದುಕುಗಳು ಒಂದು ಕ್ರಮಬದ್ಧವಾದ, ತರ್ಕಬದ್ಧವಾದ ರೀತಿಯಲ್ಲಿಯೇ ಸಾಗುತ್ತವೆ ಎಂಬ ಮೂಢನಂಬಿಕೆಯವರು, ಇಲ್ಲವೆ ಸಾಗಬೇಕು ಎಂಬ ಮೂಲಭೂತವಾದಿಗಳು. ಸದಾ ಚಲನಶೀಲವಾಗಿರುವ ಪ್ರಜ್ಞೆಗಾಗಲಿ, ಸಂವೇದನೆಗಾಗಲಿ ಇದು ಭಾರತೀಯ ಇದು ಕರ್ನಾಟಕೀಯ ಎಂಬ ಭೌಗೋಳಿಕ ಅಕ್ಷಾಂಶ – ರೇಖಾಂಶ ಹಾಕುವವರು ಕೇವಲ ಸಂಕುಚಿತ ದೃಷ್ಟಿ ಕ್ಷಿತಿಜದ ಸಂಪ್ರದಾಯವಾದಿಗಳು. ಮುಖ್ಯ ಪ್ರವಾಹದ ಬಗ್ಗೆ ಮಾತಾಡುವವರು ‘ಬಹುಮತ’ದ ದಬ್ಬಾಳಿಕೆಯ ಸಮರ್ಥಕರು ಹಾಗೂ ನಿರಂತರ ಪ್ರಯೋಗಶೀಲತೆಯ ವಿರೋಧಿಗಳು, ಕಾಲದ ಯಾವುದೋ ಒಂದು ನೆಲೆಯಲ್ಲಿ ನಿಂತು ‘ಭವಿಷ್ಯ’ದ ಬಗ್ಗೆ ಖಚಿತವಾಗಿ ಮಾತಾಡುವವರಂತೂ ಕಾಲದ ಮುಖ್ಯ ಗುಣಧರ್ಮವಾದ ಚಲನಶೀಲತೆಯನ್ನೇ ಅರ್ಥ ಮಾಡಿಕೊಳ್ಳಲಾಗದ ‘ಸ್ಥಿತ’ಪ್ರಜ್ಞರು.

ಒಬ್ಬ ಕಲಾವಿದ ಒಂದು ಕಾಲದ, ಒಂದು ದೇಶದ ಪರಿಮಿತಿಯಲ್ಲಿ (ಭಾಷೆ, ಶೈಲಿ, ಪ್ರತಿಕಗಳು, ಅನುಭವ ಗ್ರಹಣದ ರೀತಿ, ವ್ಯಕ್ತಿ ವೈಶಿಷ್ಟಗಳು) ತನ್ನ ಅನುಭವಗಳಿಗೆ ರೂಪು ಕೊಟ್ಟಾಗಲೇ ಅದಕ್ಕೊಂದು ಸ್ವಂತಿಕೆ ಮತ್ತು ವಜನ ಬಂದೀತು. ಆದರೆ ಈ ಅನುಭವ ರೂಪಿಸುವ ಶಕ್ತಿಗಳು, ಕಾಳಜಿಗಳು ಮಾತ್ರ ಕಾಲ, ದೇಶದ ಹಂಗು ತೊರೆಯಬಲ್ಲ ಧ್ವನಿಪೂರ್ಣತೆಯನ್ನು ಪಡೆದಾಗಲೇ ಅದು ಶ್ರೇಷ್ಠ ಸಾಹಿತ್ಯವಾಗುತ್ತದೆ. ಯಾವುದೋ ಒಂದು ಸಾಹಿತ್ಯದ ಪ್ರಕಾರ ಎಂದೂ” ಮುಗಿದು ಹೋದ ಅಧ್ಯಾಯ” ವಾಗುವುದಿಲ್ಲ. ನವೋದಯ, ನವ್ಯ, ಪ್ರಗತಿಶೀಲ, ಅಸಂಗತ, ಬಂಡಾಯ – ಇವೆಲ್ಲ ಮತ್ತೆ ಮತ್ತೆ ಪುನರಾವರ್ತನೆಗೊಳ್ಳುವ ಸಾಧ್ಯತೆಯುಳ್ಳ ಪ್ರವೃತ್ತಿಗಳು. ಸೃಜನಶೀಲತೆಯ ಆಸ್ಫೋಟನೆಗೆ ಯಾವುದೇ ತರ್ಕವಾಗಲಿ, ಯಾರದೇ ಭವಿಷ್ಯವಾಣಿಯಾಗಲಿ, ಐತಿಹಾಸಿಕ ಅನಿವಾರ್ಯತೆಯಾಗಲಿ ಬೇಕಾಗಿಲ್ಲ.

-೧೯೮೯