ಸಾಹಿತ್ಯ ಎಂಬುದು ಮಾತಿನಲ್ಲಿ ಮೈದೆಳೆಯಬೇಕಾದದ್ದು ಮತ್ತು ಮಾತು ಎಂಬುದು ಸಕಲ ಜೀವಿಗಳಲ್ಲಿ ಮನುಷ್ಯ ಮಾತ್ರನ ಲಕ್ಷಣ ಎಂಬುದರ ತರ್ಕಬದ್ಧ ನಿರ್ಣಯವೆಂದರೆ ಮಾತು ಬಲ್ಲವರೆಲ್ಲ ಸಾಹಿತಿಗಳೇ. ಅಂದರೆ ಮನುಷ್ಯರೆಲ್ಲ ಸಾಹಿತಿಗಳೇ. ಆದರೆ ಇತಿಹಾಸದುದ್ದಕ್ಕೂ ಎಲ್ಲ ಸಂಸ್ಕೃತಿಗಳಲ್ಲಿ ‘ಸಾಹಿತಿ’ ಗೆ ಒಂದು ಪ್ರತ್ಯೇಕ ಸ್ಥಾನವನ್ನೇ ಕೊಡಲಾಗಿದೆ. ಸಾಹಿತಿಯ ‘ಪ್ರತಿಭೆ’ ಎಂಬುದಕ್ಕೆ ಈ ಲೋಕದ್ದಲ್ಲದ, ಯಾವುದೋ ಮೂಲವನ್ನು ಹುಡುಕುವ ಪ್ರಯತ್ನಗಳೂ ಆಗಿವೆ. ಎಲ್ಲರಿಗೂ ಲಾಗೂ ಆಗುವ ಕಾಲ ಹಾಗೂ ದೇಶದ ಬಂಧನಗಳಿಂದ ಸಾಹಿತಿ ಮುಕ್ತನಾದವ ‘ಅ – ಸಾಮಾನ್ಯ ಪೂಜ್ಯ’ ಎಂದು ತಿಳಿಯಲಾಗುತ್ತದೆ.

ಈ ಮಾತು ಯಾಕೆ ಅಂದರೆ ದಿನತ್ಯದ ಬದುಕಿನ ಕ್ರಿಯೆ – ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡು, ಸಾಹಿತ್ಯ ಸೃಷ್ಠಿ ಕೂಡ ಈ ಪ್ರಕ್ರಿಯೆಯ ಒಂದು ಭಾಗವೇ ಎಂದು ತಿಳಿದಿರುವ ನನ್ನಂಥವನಿಗೆ ಒಮ್ಮೊಮ್ಮೆ ಗೊಂದಲವಾಗುತ್ತದೆ. ತುರ್ತು ಪರಿಸ್ಥಿತಿಯ ಕರಾಳ ದಿನಗಳಲ್ಲಿ ಖ್ಯಾತ ಕಾದಂಬರಿಕಾರರೊಬ್ಬರು “ನನಗೆ ತುರ್ತು ಪರಿಸ್ಥಿತಿಯ ತುರ್ತು ತಟ್ಟಿಯೇ ಇಲ್ಲವಲ್ಲ” ಎಂದು ಉದ್ಗರಿಸಿದರಂತೆ. ಇಥಿಯೋಪಿಯದಲ್ಲಿ ಅನೇಕ ವರ್ಷ ಇದ್ದು ಬಂದ ಖ್ಯಾತ ಕವಿಯೊಬ್ಬರಿಗೆ “ಅಲ್ಲಿಯ ಭೀಕರ ಬರದ ಬಗ್ಗೆ ನಿಮ್ಮ ಕಾವ್ಯದಲ್ಲಿ ಒಂದು ನವ್ಯ ಸಾಲೂ ಇಲ್ಲವಲ್ಲ!” ಎಂದು ಯಾರೋ ಕೇಳಿದಾಗ, ಅವರು ಒಂದು ನಗೆ ನಕ್ಕು ಸುಮ್ಮನಾದರಂತೆ!

ಇಂಥ ಸಾಹಿತಿಗಳೂ ಇರುವುದು ಸಾಧ್ಯವೇ? – ಅಂತ ನನಗೆ ನಿಮಗೆ ಅಚ್ಚರಿಯಾಗಬಹುದು; ಇರುವುದು ಸಾಧ್ಯ ಅಷ್ಟೇ ಅಲ್ಲ. ಇದ್ದಾರೆ – ಎಂಬುದು ನಾನೂ ನೀವೂ ಕಾಣುತ್ತಿರುವ ವಾಸ್ತವ.

ತತ್ವಜ್ಞಾನಿಗಳ ಇಂಥ ನಿರ್ಲಿಪ್ತತೆ, ನಿರ್ಮಮತೆಗಳ ಸೋಗು ಹಾಕಿಕೊಂಡ ಇಂಥ ಸಾಹಿತಿಗಳು ಒಂದೋ ನಿಜವಾಗಿಯೂ ಅಜ್ಞಾನಿಗಳಾಗಿರಬೇಕು, ಅಥವಾ ಈ ಸೋಗಿನಡಿಯಲ್ಲಿ ಬದುಕಿನ ಜವಾಬ್ದಾರಿಗಳನ್ನು ಎದುರಿಸಲಾಗದೆ ಪಲಾಯನವಾದಿಗಳೇ ಇರಬೇಕು – ಎಂದು ಅನ್ನಿಸಲಿಕ್ಕೆ ಕಾರಣ, ಸಾಹಿತ್ಯ ಸೃಷ್ಟಿಯ ಮೂಲ ಘಟಕಗಳಾದ ವ್ಯಕ್ತಿ (ಪ್ರಜ್ಞೆ, ಸಂವೇದನೆ ಮುಂ) ಅನುಭವ (ಸಮಷ್ಟಿ, ಪರಿಸರ, ಜಗತ್ತು ಮುಂ) ಮತ್ತು ಭಾಷೆ (ಸಾಧನ) ಗಳ ಅಂತಃಸಂಬಂಧದ ಬಗ್ಗೆ ಸ್ಪಷ್ಟವಾದ ಅರಿವು.

ವ್ಯಕ್ತಿ ಒಂದು ಕಾಲಬಿಂದುವಿನಲ್ಲಿ ಅವನು ನಿರಂತರ ಮಾನವ ಪ್ರಜ್ಞೆಯ ಒಂದು ಕೊಂಡಿಯಾಗಿಯೇ ಇರುತ್ತಾನೆ. ತನಗಿಂತ ಮೊದಲೇ ಇರುವ ಮತ್ತು ನಂತರವೂ ಮುಂದುವರಿಯುವ ಸಮುದಾಯ ಬದುಕಿನ ಒಂದು ಅಂಗವಾಗಿರುವ ಈ ವ್ಯಕ್ತಿಯ ‘ವೈಶಿಷ್ಟ’ ಎಂಬುದು ಕೂಡ ಸಮಷ್ಟಿ ಶಕ್ತಿಗಳಿಂದಲೇ ನಿರ್ಧರಿಸಲ್ಪಡುತ್ತದೆ. ನಿಯಂತ್ರಿಸಲ್ಪಡುತ್ತದೆ. ವೃಷ್ಟಿ – ಸಮಷ್ಟಿಗಳ ಈ ನಿರಂತರ ಸಂಘರ್ಷ ಸಾಹಿತಿಯಾದವನ ವಿಷಯದಲ್ಲಿ ಅಭಿವ್ಯಕ್ತವಾಗುವುದು, ಅಭಿವ್ಯಕ್ತಿಗೆ ಹಾತೊರೆಯುವುದು ‘ಭಾಷೆ’ ಯ ಮಾಧ್ಯಮದ ಮೂಲಕ. ಭಾಷೆ ಕೂಡ ಸಮುದಾಯದ ಆಸ್ತಿ. ಭಾಷೆ ಅನುಭವಗಳ ದಾಖಲೆಯೂ ಆಗಿರುವುದರಿಂದ ಅದಕ್ಕೆ ಇತಿಹಾಸದ ದಟ್ಟವಾದ ಘಾಟೂ ಇರುತ್ತದೆ.

ಬದುಕು ಸದಾ ಚಲನಶೀಲ ಅಂತ ಹೇಳಿದರೂ ಅದು ಒಂದು ನೆಲೆಯಲ್ಲಿ ಭೂತಕಾಲದಿಂದ ತೇಲಿ ಬಂದ ಅನೇಕ ನಂಬಿಕೆಗಳು, ಮೌಲ್ಯಗಳು., ನೆನಪುಗಳು ಮಡುಗಟ್ಟಿ ನಿಂತ ವರ್ತಮಾನವಾಗಿರುತ್ತದೆ. ವರ್ತಮಾನದ ವ್ಯವಸ್ಥೆ ಸರಿಯಾಗಿಲ್ಲ: ಇದು ನಾನು ನಂಬಿದ ಮೌಲ್ಯಗಳ ದಿಕ್ಕಿನಲ್ಲಿ ಬದಲಾಗಬೇಕು; ಈ ಬದಲಾವಣೆಗೆ ಪೂರಕವಾದ ರೀತಿಯಲ್ಲಿ ನಾನು ಭಾಷೆಯನ್ನು, ಕಲೆಯನ್ನು ಬಳಸಬೇಕು ಎಂದು ಪ್ರಜ್ಞಾಪೂರ್ವಕವಾಗಿ ಘೋಷಿಸಿಕೊಳ್ಳುವ ಸಾಹಿತಿ ‘ಬದ್ಧ ಸಾಹಿತಿ’ ಆಗುತ್ತಾನೆ. (ಅವನ ಘೋಷಣೆ ಎಷ್ಟರಮಟ್ಟಿಗೆ ಕ್ರಿಯೆಯಾಯಿತು – ಎಂಬುದು ಅನಂತರ ನೋಡಬೇಕಾದ ವಿಷಯ) ಇದಕ್ಕೆ ವ್ಯತಿರಿಕ್ತವಾಗಿ ಸಾಹಿತಿಯೊಬ್ಬ “ನನಗೆ ಬದ್ಧತೆಯಲ್ಲಿ ನಂಬಿಕೆಯಿಲ್ಲ ನಾನು ಮುಕ್ತ, ಸ್ವತಂತ್ರ” ಎಂದು ಹೇಳತೊಡಗಿದರೆ ಅದರ ಅರ್ಥ ಇಷ್ಟೆ: “ನನಗೆ ಸದ್ಯದ ವ್ಯವಸ್ಥೆಯಿಂದ ಏನೂ ತೊಂದರೆ ಇಲ್ಲ. ನಾನು ಹೆಂಡಿರು – ಮಕ್ಕಳೊಂದಿಗೆ ಆರಾಮಾಗಿದ್ದೇನೆ. ಈ ಪರಿಸ್ಥಿತಿ ಬದಲಾದರೇನೇ ನನಗೆ ಗೋಳು. ನನ್ನ ಮೌನ ಯಥಾಸ್ಥಿತಿಯ ಮುಂದುವರಿಕೆಗೆ ಪೂರಕವಾಗಿರುವುದರಿಂದ ನಾನು ಈ ಬಗ್ಗೆ ಮೌನವಾಗಿರುತ್ತೇನೆ. ಕತೆ, ಕಾದಂಬರಿ, ಕವನ ಬರೆಯಲು ಇನ್ನೂ ಎಷ್ಟೋ ವಿಷಯಗಳಿವೆಯಲ್ಲ! ನೀವೇಕೆ ನನಗೆ ಅಡ್ಡಾದಿಡ್ಡಾ ಪ್ರಶ್ನೆ ಕೇಳಿ ನನ್ನ ನಿದ್ದೆ ಕೆಡಿಸುತ್ತೀರಿ? ಇತ್ಯಾದಿ.”

ಇಂಡಿಯಾದ ಸಂದರ್ಭದಲ್ಲಿ ‘ಯಥಾಸ್ಥಿತಿ’ (Status quo) ಅಂದರೆ ಶ್ರೀಮಂತ ಬಡವ ಎಂಬ ವರ್ಗಭೇದ: ಉಚ್ಚ – ನೀಚ ಎಂಬ ಜಾತಿಭೇದ: ಗಂಡು – ಹೆಣ್ಣು ಎಂಬ ಲಿಂಗಭೇದ – ಮುಂತಾದ ‘ಅಸಮಾನತೆ’ಗಳೇ ಶೋಷಕ ಶಕ್ತಿಗಳಾಗಿ ಸಾವಿರಾರು ವರ್ಷಗಳಿಂದ ಮುಂದುವರೆದಿರುವ ವ್ಯವಸ್ಥೆ: ದೇವರು, ಅವತಾರ, ಕರ್ಮ, ಪುನರ್ಜನ್ಮ, ಪಾಪ – ಪುಣ್ಯ, ಸ್ವರ್ಗ – ನರಕ ಮುಂತಾದ ಪರಿಕಲ್ಪನೆಗಳೇ ಮನುಷ್ಯನ ಒಳಗಿನ ಹೊರಗಿನ ಎಲ್ಲ ಆಗು ಹೋಗುಗಳನ್ನು ಕಂಟ್ರೋಲು ಮಾಡುವ ಪರಿಸ್ಥಿತಿ ಇಂಥ ಸ್ಥಿತಿ ಕಾಯಂ ಆಗಿ ಇರಬೇಕೆನ್ನುವವರು ಈ ಎಲ್ಲ ಮೌಲ್ಯಗಳನ್ನು ಒಂದಿಲ್ಲೊಂದು ರೀತಿಯಿಂದ ವೈಭವೀಕರಿಸುತ್ತಾರೆ; ಇನ್ನು ಕೆಲವರು ಮೌನವಾಗಿದ್ದು ಬಿಡುತ್ತಾರೆ. ಇದು ಅವರ ಬದ್ಧತೆ!

All art is propaganda, but all propaganda is not an art (ಎಲ್ಲ ಕಲೆಯೂ ಪ್ರಚಾರವೆ: ಆದರೆ ಪ್ರಚಾರವೆಲ್ಲಾ ಕಲೆಯಲ್ಲ) ಎಂಬ ಮಾತು ನಮಗೆಲ್ಲ ಗೊತ್ತು ಎಲ್ಲ ಸಾಹಿತಿಗಳೂ ಕಲಾವಿದರೂ ಒಂದಿಲ್ಲೊಂದು ರೀತಿಯಲ್ಲಿ ‘ಮನ ಒಲಿಸುವ’ ಕ್ರಿಯೆಯಲ್ಲಿಯೇ ತೊಡಗಿರುತ್ತಾರೆ. ಎಲ್ಲರೂ ಪ್ರಜ್ಞಾಪೂರ್ವಕವಾಗಿಯೋ ಅಪ್ರಜ್ಞಾಪೂರ್ವಕವಾಗಿಯೋ ತಮ್ಮ ತಮ್ಮ ನಂಬಿಕೆಗಳಿಗೆ ಬದ್ಧರೇ. ಆದರೆ ‘ಬದ್ಧ ಸಾಹಿತಿ’ (Committed Writer) ಎಂಬ ಪದಪುಂಜ ಬಹುತೇಕವಾಗಿ ಸಮಾಜವಾದಿ ರಾಷ್ಟ್ರಗಳಲ್ಲಿ, ಪ್ರಗತಿಗಾಮಿ, ಎಡಪಂಥೀಯ ಸಿದ್ಧಾಂತಗಳ ಬೆಳಕಿನಲ್ಲಿ ಬರೆಯುವ ಸಾಹಿತಿಗಳ ಬಗ್ಗೆಯೇ ಚಾಲ್ತಿಯಲ್ಲಿರುವುದನ್ನು ಗಮನಿಸಬೇಕು.

ತಮ್ಮನ್ನು ‘ಪ್ರಗತಿಗಾಮಿ’ ಎಂದು ಸ್ಪಷ್ಟವಾಗಿ ಗುರುತಿಸಿಕೊಳ್ಳುವ ಸಾಹಿತಿಗಳು ಇತಿಹಾಸವನ್ನು, ಭೂತವನ್ನು ಅರ್ಥೈಸಿಕೊಳ್ಳಲು ಒಂದು ಸಿದ್ಧಾಂತವನ್ನು (ಮಾರ್ಕ್ಸ್, ಲೋಹಿಯಾ, ಅಂಬೇಡ್ಕರ್ ಮುಂ) ಹಿನ್ನೆಲೆಯಾಗಿ ಬಳಸಿಕೊಳ್ಳುತ್ತ. ವರ್ತಮಾನದ ಅನೇಕ ದುರಂತಗಳ ಬೀಜಗಳನ್ನು ಇತಿಹಾಸದಲ್ಲಿ ಹುಡುಕುತ್ತ, ತಾವು ನಂಬಿದ ಮೌಲ್ಯಗಳ ದಿಕ್ಕಿನಲ್ಲಿ ವ್ಯವಸ್ಥೆ ಪುನರ್ ರೂಪಗೊಳ್ಳಬೇಕು ಎಂಬ ಪ್ರಾಮಾಣಿಕ ಆಶಯ ಧ್ವನಿಸುವ ರೀತಿಯಲ್ಲಿ ಸಾಹಿತ್ಯ ಸೃಷ್ಟಿ ಮಾಡತೊಡಗುತ್ತಾರೆ. ಇಂಥ ಅನೇಕ ಶಕ್ತಿಗಳು ಸಂಘಟಿತ ರೀತಿಯಲ್ಲಿ ಕೆಲಸ ಮಾಡತೊಡಗಿದಾಗ ಪ್ರಯತ್ನಕ್ಕೊಂದು ಸಮಷ್ಟಿರೂಪ ಬಂದು ಅದಕ್ಕೆ ಒಡೆದು ಕಾಣುವಂಥ ತೀವ್ರತೆಯೂ ಒದಗಿ ಬರುತ್ತದೆ. ಸಂಘಟನೆ ಒಂದೇ ಸಿದ್ಧಾಂತದ ಅಡಿಯಲ್ಲಿಯೋ (ಉದಾ: ದಲಿತ ಪ್ಯಾಂಥರ್ಸ, ಮಾರ್ಕ್ಸ್‌ವಾದಿ ಲೇಖಕರ ಸಂಘ, ಲೋಹಿಯಾವಾದಿಗಳ ಒಕ್ಕೂಟ). ಸಾಮಾನ್ಯ, ಶತ್ರುಗಳನ್ನು ಗುರುತಿಸುವಲ್ಲಿ ಹಾಗೂ ಒಟ್ಟಾರೆ ಸೈದ್ಧಾಂತಿಕ ಸಹಮತ ಸಾಧ್ಯವಾಗುವಲ್ಲಿ ಅನೇಕ ಸಿದ್ಧಾಂತಗಳ ಅಡಿಯಲ್ಲಿಯೋ (ಉದಾ: ಬಂಡಾಯ ಸಾಹಿತ್ಯ ಸಂಘಟನೆ) ನಡೆಸಬಹುದು.

ಇಂಥ ಸನ್ನಿವೇಶದಲ್ಲಿ ‘ಬದ್ಧತೆ’ ಎಂಬುದರ ಬಗ್ಗೆ ಇನ್ನೂ ಆಳವಾಗಿ ನಾವು ಯೋಚಿಸಬಹುದು. ಒಂದು ರಾಜಕೀಯ ಪಕ್ಷದ ಅಥವಾ ಸಂಘಟನೆಯ ಕಾರ್ಯಕರ್ತರಲ್ಲಿ ಇರುವ ಬದ್ಧತೆ ಬಹುತೇಕ ಏಕ ಆಯಾಮದ್ದು. ನಾಯಕ ಅಥವಾ ನಾಯಕರ ಒಂದು ಗುಂಪು ಒಂದು ಐಡಿಯಾಲಜಿಯನ್ನು ರೂಪಿಸಿಕೊಂಡ ಮೇಲೆ ಅದಕ್ಕೆ ಚಾಚೂ ತಪ್ಪದೆ, ಯಾವುದೇ ಪ್ರಶ್ನೆ ಹಾಕದೆ, ತಕರಾರು ತಗೆಯದೆ ನಿಷ್ಠನಾಗಿರುವುದು ಅನುಯಾಯಿಗಳು ತೋರುವ ಬದ್ಧತೆ ಇಂಥ ಒಂದು ಸಿದ್ಧಾಂತ ಪ್ರಾರಂಭದ ಹಂತದಲ್ಲಿ ಹೊರಗಡೆಯಿಂದ ಆಯಾತವಾಗಿದ್ದರೆ ಆ ಸಿದ್ದಾಂತದ ಯಾವ ಭಾಗವನ್ನು ಎಷ್ಟು ಮತ್ತು ಹೇಗೆ ಮತ್ತು ಯಾವಾಗ ಬಿಡುಗಡೆ ಮಾಡಬೇಕೆಂಬ ನಿರ್ಧಾರ ನಾಯಕಗಣದ್ದೇ (ಉದಾ, ಮಾರ್ಕ್ಸ್‌ವಾದನ್ನು ಇಂಡಿಯಾದ ಕಮ್ಯುನಿಸ್ಟ್ ನಾಯಕಗಣ ಹ್ಯಾಂಡಲ್ ಮಾಡುತ್ತಿರುವ ರೀತಿ.) ಇಲ್ಲಿ ಸಂಘಟನೆಯ ಕೆಳಗಿನ ಸ್ತರದಲ್ಲಿ ಸೈದ್ಧಾಂತಿಕ ಚರ್ಚೆಗಳು ಆಗುವುದು ಅಸಂಭವ. ಕಾರ್ಯಕರ್ತರ ಕೆಲಸವೆಂದರೆ ಆದೇಶಪಾಲನೆ: ಜಮಖಾನ ಹಾಸುವುದು, ಕರಪತ್ರ ಹಂಚುವುದು, ಮೆರೆವಣಿಗೆಯಲ್ಲಿ ಕೂಗುವುದು, ಗೋಳೀಬಾರಾದರೆ ಪ್ರಾಣತ್ಯಾಗ ಮಾಡಿ ಹುತಾತ್ಮರಾಗುವುದು ಅಷ್ಟೆ. ಇಂಥ ಪರಿಸ್ಥಿತಿಯಲ್ಲಿ ism (ವಾದ) ಎಂಬುದು ಚಲನಶೀಲತೆಯನ್ನು ಕಳೆದುಕೊಂಡು, ಜಡವಾಗಿ, ಒಂದು dogma ಆಗಿ, ಸಾಂಸ್ಥಿಕ ‘ಧರ್ಮ’ ಗಳ ಮಾದರಿಯಲ್ಲಿ. ಕಾಲದ ಆಗುಹೋಗುಗಳಿಗೆ ಪ್ರತಿಸ್ಪಂದಿಸುವ ಗುಣ ಕಳೆದುಕೊಂಡು, ವರ್ತಮಾನಕ್ಕೊಂದು ಹೊರೆಯಾಗುತ್ತ ಹೋಗುತ್ತದೆ. ಇಲ್ಲಿ ‘ಬದ್ಧತೆ’ ಎಂಬುದೂ ಜಡವಾಗುತ್ತದೆ: ಆರಾಧಾನೆಯಾಗುತ್ತದೆ, ಇಂಥ ಜಡವಾದ ಬದ್ಧತೆಯನ್ನು ‘ಮಲಬದ್ಧತೆ’ ಎಂದೇ ಕರೆಯಬಹುದೇನೋ! (ದೇಹದ ಒಂದು ಭಾಗದಲ್ಲಿ ಜಡವಾಗಿ ಕುಂತು ಉಂಡದ್ದು ಅರಗಲು, ಕೊಳೆತದ್ದು ಹೊರಹೋಗಲು ಆಸ್ಪದ ಕೊಡದಂಥ ಸ್ಥಿತಿ ಇದು.)

ರಾಜಕೀಯ ಪಕ್ಷ ಅಥವಾ ಸಂಘಟನೆಗಳ ಸಕ್ರಿಯ ಸದಸ್ಯರಾಗಿದಿದ್ದೂ, ಆ ನಿಟ್ಟಿನ ರಾಜಕೀಯ ಒಲವಿರುವ ‘ಸಾಹಿತಿ’ ಗಳಿಗೆ ಒಮ್ಮೊಮ್ಮೆ ಪೇಚಿನ ಪ್ರಸಂಗ ಬರುತ್ತದೆ. (ಪಕ್ಷದ ಒಳಗಿದ್ದರಂತೂ ಫಜೀತಿಯೇ) ಯಾಕೆಂದರೆ ಅನುಭವವನ್ನು ಕಪ್ಪು – ಬಿಳುಪಿನ ಸರಳೀಕರಣದಲ್ಲಿ ಸ್ವೀಕರಿಸಲು ಒಪ್ಪದ ಸಾಹಿತಿಯ ಪ್ರಜ್ಞೆ – ಸಂವೇದನೆ – ವಿವೇಕಗಳು ಅವನನ್ನು ಆರಾಧಾನೆಯ ಮಟ್ಟದ ‘ಬದ್ಧತೆ’ ಯ ನೆಲೆಯಲ್ಲಿ ಬಿಡಲಾರವು.

ಇಲ್ಲಿ ಬದ್ಧತೆಯ ಸ್ವರೂಪ ಹೇಗಿರಬೇಕು?

ಬದುಕಿನ ವಾಸ್ತವಕ್ಕೆ ಪ್ರಸ್ತುತವಾದ ಯಾವುದೇ ಸಿದ್ಧಾಂತ ಹೇಗೆ ನಿಜದ ಬೆಂಕಿಗೆ ತನ್ನನ್ನು ಸದಾಕಾಲ ಒಡ್ಡಿಕೊಳ್ಳುತ್ತ ಯಾವಾಗಲೂ ತಾಜಾ ಆಗಿ ಇರಬೇಕೋ. ಹಾಗೆಯೇ ‘ಬದ್ಧತೆ’ ಎಂಬುದು ಕೂಡ ತನ್ನ ಒಡಲಲ್ಲಿ ಸ್ವವಿಮರ್ಶೆಯ ಗುಣವನ್ನು ಅಡಕ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ವಿಮರ್ಶಾತ್ಮಕ ಬದ್ಧತೆ (Critical Commitment) ಅನ್ನಬಹುದೇನೋ. ಮುಟ್ಟಬೇಕಾದ ಗುರಿಯ ಬಗ್ಗೆ ಅಲಕ್ಷ್ಯ ತೋರದೆ. ಹಿಡಿದಿರುವ ದಾರಿಯ ದಿಕ್ಕನ್ನು ಬದಲಿಸದೆ, ದಾರಿಯ ಬಗ್ಗೆ ಇಕ್ಕೆಲಗಳ ಆಗು ಹೋಗುಗಳ ಬದಲಾವಣೆಯನ್ನು ಗಮನಿಸುತ್ತ ಇಂಥ ಬದ್ಧತೆಯ ಜೀವಂತಿಕೆಯನ್ನು ನಾವು ಕಾಪಾಡಿಕೊಳ್ಳಬಹುದು. ಒಂದೇ ಗುರಿಯತ್ತ ಸಾಗಿದ ಅನೇಕ ದಾರಿಗಳ ನಡುವೆ ಮಾತುಕತೆ ಪ್ರಾರಂಭವಾದರೆ ಮುಟ್ಟಬೇಕಾದ ಗುರಿಯನ್ನು ಆದಷ್ಟು ಬೇಗ ಮುಟ್ಟುವ ಸಾಧ್ಯತೆಯೂ ಇರುತ್ತದೆ.

ಇಡೀ ಇಂಡಿಯಾದಲ್ಲಿಯೇ ತೀರ ವಿಶಿಷ್ಟವಾದ ರೀತಿಯಲ್ಲಿ ಕಳೆದ ಒಂದು ದಶಕದಿಂದ ಕರ್ನಾಟಕದಲ್ಲಿ ಹರಳುಗಟ್ಟುತ್ತಿರುವ ಬಂಡಾಯ ಸಾಹಿತ್ಯ ಸಂಘಟನೆಯಂಥಾ ಪ್ರಯತ್ನ ನನ್ನ ಈ ಮಾತುಗಳ ಹಿನ್ನೆಲೆಯಲ್ಲಿದೆ. ಮಾರ್ಕ್ಸ್, ಲೋಹಿಯಾ, ಅಂಬೇಡ್ಕರ, ಪೆರಿಯಾರ್ ಮುಂತಾದವರ ಸಿದ್ಧಾಂತಗಳಿಂದ ಪ್ರೇರಣೆ ಪಡೆದವರ ಜೊತೆಗೇ, ಯಾವುದೇ ಒಂದು ವಾದಕ್ಕೆ ಬದ್ಧರಾಗದಿದ್ದರೂ ವ್ಯವಸ್ಥೆಯಲ್ಲಿ ಬದಲಾವಣೆಯನ್ನು ಪ್ರಾಮಾಣಿಕವಾಗಿ ಬಯಸುವ, ಅದಕ್ಕಾಗಿ ಸಂಘಟಿತ ಹೋರಾಟದ ಸಂಕಲ್ಪ ಉಳ್ಳ ಬಹುಸಂಖ್ಯಾತರ ಬೆಂಬಲ ಪಡೆದ ಇಂಥ ಸಂಘಟನೆ. ಅನೇಕ ‘ವಾದ’ಗಳ ನಡುವೆ ಇರಬಹುದಾದ ಸೂಕ್ಷ್ಮ ವೈರುಧ್ಯಗಳ ಬಗ್ಗೆ ಕೂದಲು ಸೀಳುವ ಚಿಂತನ – ಮಂಥನದಲ್ಲಿ ಶಕ್ತಿಯನ್ನೂ ಕಾಲವನ್ನೂ ಹರಣ ಮಾಡುತ್ತ ಕುಳಿತರೆ, ಅಷ್ಟರ ಮಟ್ಟಿಗೆ ನಾವು ಈಗಾಗಲೇ ಗುರುತಿಸಿರುವ ನಮ್ಮ ಸಾಮಾನ್ಯ ಶತ್ರುಗಳಿಗೆ ಹಾಯಾಗಿರಲು ಆಸ್ಪದ ದೊರೆಯುತ್ತದೆ.

ನಾಯಕತ್ವದ ಯಾವುದೇ ಶ್ರೇಣೀಕರಣವಿಲ್ಲದೆ ಸಮಾನತೆಯ ನೆಲೆಯಲ್ಲಿಯೇ ಕಾರ್ಯ ನಿರ್ವಹಿಸುತ್ತಿರುವ ಹಾಗೂ ನಿಷ್ಠುರ ಆತ್ಮವಿಮರ್ಶೆಯ ಬೆಂಕಿ ಮತ್ತು ಬೆಳಕಿನಲ್ಲಿ ಹೋರಾಟದ ಬಗ್ಗೆ ಸೈದ್ಧಾಂತಿಕ ಸ್ಪಷ್ಟತೆ ಕಂಡುಕೊಳ್ಳುತ್ತಿರುವ ಬಂಡಾಯ ಸಂಘಟನೆ ಮೂಲತಃ ಒಂದು ‘ಸಾಹಿತ್ಯಿಕ’ ಸಂಘಟನೆ ಆಗಿರುವುದರಿಂದಲೇ ಅದಕ್ಕೆ ಲೆಫ್ಟ್ – ರೈಟ್- ಲೆಫ್ಟ್ – ರೈಟ್ ಎಂಬ ಪಥಸಂಚಲನದ ಅಗತ್ಯ ಬೀಳುವುದಿಲ್ಲ. ಸಾಹಿತ್ಯ ಸೃಷ್ಟಿಗೆ ಪೂರಕವಾಗಿ ಹೋರಾಟ ಹಾಗೂ ಹೋರಾಟಕ್ಕೆ ಪೂರಕವಾಗಿ ಸಾಹಿತ್ಯ ಸೃಷ್ಠಿ – ಇವೆರಡೂ ಏಕಕಾಲಕ್ಕೆ ಸಂಭವಿಸುತ್ತಿರುವ ಅಪರೂಪದ ಸನ್ನಿವೇಶವಿದು. ಅಕ್ಷರಗಳು ಹೋರಾಟದ ‘ದಾಖಲೆ’ ಆಗುವುದರೊಂದಿಗೇ, ಅವು ‘ಕಲೆ’ಯೂ ಆಗಬೇಕಾದ ಅನಿವಾರ್ಯತೆಯಿಂದಾಗಿ ವಿಶಾಲ ಜನವರ್ಗವನ್ನು ತಲುಪುವ ದಿಕ್ಕಿನಲ್ಲಿ ಸಾಹಿತಿಯಾದವ ಭಾಷೆಯ ನುಡಿಗಟ್ಟನ್ನು ಬದಲಾಯಿಸಿಕೊಳ್ಳುತ್ತ. ಅದನ್ನು ಅನುಭವದ ಅವಿಷ್ಕಾರದ ಸಾಧನವಾಗಿ ಮತ್ತು ಸಂವಹನದ ಅರ್ಥಪೂರ್ಣ ಮಾಧ್ಯಮವನ್ನಾಗಿ ಬಳಸಿಕೊಳ್ಳಬೇಕಾಗುತ್ತದೆ. ಭಾಷೆ ಹಾಗೂ ಅನುಭವಗಳ ಪುನಃಸೃಷ್ಟಿಯ ಈ ಪ್ರಕ್ರಿಯೆ ಬದುಕಿನ ವಾಸ್ತವದ ಪುನಃಸೃಷ್ಟಿಯ ಒಂದು ಭಾಗವಾಗಿರುವುದು ಇಲ್ಲಿ ಮುಖ್ಯ.

ಇಲ್ಲಿ ಬದ್ಧತೆ ಎಂಬುದು ಒಂದು ಚಲನಶೀಲವಾದ ಪರಿಕಲ್ಪನೆಯಾಗಿರುತ್ತದೆ ಅದು ಸಾಮರಸ್ಯವೂ ಅಲ್ಲ, ಸನ್ಯಾಸವೂ ಅಲ್ಲ. ಸಾಹಿತಿ ಹಾಗೂ ಬದುಕಿನ ಸಂಬಂಧವೆಂದರೆ ಮಧ್ಯಬಿಂದು ಹಾಗೂ ಪರಿಘದ ಸಂ-ಬಂಧ.

-೧೯೯೦