ಮುಂದಿನ ನೋಟಕ್ಕೆ ‘ಮುನ್ನೋಟ’ ಅನ್ನುತ್ತಾರೆ: ಹಿಂದಿನ ನೋಟಕ್ಕೆ `ಹಿನ್ನೋಟ’ ಅನ್ನುತ್ತಾರೆ. ಹಾಗಾದರೆ ಇಂದಿನ ನೋಟಕ್ಕೆ ‘ಇನ್ನೋಟ’ ಅನ್ನಬಾರದೇಕೆ?

ಇಂದು ಎಂಬುದು ಹಿಂದು – ಮುಂದುಗಳ ಸಂಧಿ ಕಾಲ; ವರ್ತಮಾನದ ಒಂದು ಬಿಂದುವಿನಲ್ಲಿ ನಿಂತಾಗ ನಡೆದು ಬಂದ ದಾರಿಯೂ ಕಾಣುತ್ತದೆ; ಆ ದಾರಿ ಮುಂದೆ ಹಿಡಿಯಬಹುದಾದ ಗತಿಯನ್ನೂ ನಾವು ಊಹಿಸಬಹುದಾಗಿದೆ. ಭೂತದ ಅನುಭವದ ಆತ್ಮಾವಲೋಕನದ ಹಿನ್ನೆಲೆಯಲ್ಲಿ ಭವಿಷ್ಯದ ನಕಾಶವನ್ನು ನಾವು ಬರೆಯಲು ಸಾಧ್ಯವಾಗುವುದು ಈ ‘ಇನ್ನೋಟ’ ದ ನೆಲೆಯಿಂದ ಸಾಧ್ಯ.

ಇಂಥ ಒಂದು ವಿಚಾರ ಸಂಕಿರಣದಲ್ಲಿ ನಡೆಯಿತು. ಸಂಕಿರಣದ ವಿಷಯ: ಕರ್ನಾಟಕದಲ್ಲಿ ಪ್ರಗತಿಪರ ಚಳುವಳಿ: ಒಂದು ಅಭ್ಯಾಸ. ಕುವೆಂಪು ವಿಶ್ವವಿದ್ಯಾಲಯದ ಪ್ರಸರಾಂಗ ಮತ್ತು ಚಿತ್ರದುರ್ಗ ತಾಲೂಕಿನ ಕನ್ನಡ ಪರಿಷತ್ತು ಜಂಟಿಯಾಗಿ ಹಮ್ಮಿಕೊಂಡ ಈ ಕಾರ್ಯಕ್ರಮದಲ್ಲಿ ನಾನು ಪಾಲುಗೊಂಡದ್ದು. ಸಮಾರೋಪ ಭಾಷಣಕಾರನಾಗಿ. ಇಂಥ ಸಂದರ್ಭಗಳಲ್ಲೆಲ್ಲ ‘ಸಮಾರೋಪ ಸ್ಪೆಶಲಿಸ್ಟ್’ ಎಂದೇ ಕುಖ್ಯಾತನಾದ ನನ್ನನ್ನು ಸಮಾರೋಪಕ್ಕೆ ಆಮಂತ್ರಿಸುವುದರ ಹಿಂದೆ, ಕಾರ್ಯಕ್ರಮದುದ್ದಕ್ಕೂ ನಾನು ಕುರ್ಚಿಯಲ್ಲಿ ಕುಕ್ಕರಿಸಿ ನೋಟ್ಸ್ ಮಾಡಿಕೊಳ್ಳುವಂತೆ ಮಾಡುವ ಹುನ್ನಾರ ಇರುವುದು ನನಗೆ ಗೊತ್ತು. ಇದು ನನಗೆ ಪ್ರಿಯವಾದ ಕಾಯಕವೂ ಹೌದು.

*

ಉತ್ಸಾಹಿ ಗೆಳೆಯ ಚಿತ್ರಲಿಂಗಸ್ವಾಮಿ ಎಲ್ಲರನ್ನೂ ಸ್ವಾಗತಿಸಿದ ನಂತರ ಪ್ರಸಾರಾಂಗದ ಸಹನಿರ್ದೇಶಕ ಡಾ. ಕೇಶವ ಶರ್ಮ ವಿಚಾರ ಸಂಕಿರಣದ ಆಶಯವನ್ನು ವಿವರಿಸಿದರು. ನಮ್ಮ ದೇಶದ ಉತ್ಪನ್ನದ ಸಿಂಹಪಾಲನ್ನು ಕಬಳಿಸುತ್ತಿರುವ ನಮ್ಮ ಯುನಿವರ್ಸಿಟಿಗಳು ನಮ್ಮ ಬದುಕಿನ ಪ್ರವಾಹಕ್ಕೆ ಯಾವ ರೀತಿಯಲ್ಲೂ ಸ್ಪಂದಿಸದೆ ದ್ವೀಪಗಳಾಗಿ ಕಂಗೊಳಿಸುತ್ತಿರುವ ದುರಂತವನ್ನು ಒತ್ತಿ ಹೇಳಿದ ಶರ್ಮ, ಇಂಥದೊಂದು ಸಮಕಾಲೀನ ವಿಷಯದ ಬಗ್ಗೆ ಕುವೆಂಪು ವಿಶ್ವವಿದ್ಯಾಲಯದ ಪ್ರಸಾರಾಂಗ ಸಂವಾದ ಏರ್ಪಡಿಸಿದ್ದರ ಮಹತ್ವವನ್ನು ಎತ್ತಿ ತೋರಿಸಿ ‘ಚರ್ಚೆಗಾಗಿ ಆಹ್ವಾನಿಸಲ್ಪಟ್ಟವರು ಅಕೆಡಮಿಕ್ ಆಯಾಮದವರಾಗಿರದೆ ನೇರವಾಗಿ ಚಳುವಳಿಯಲ್ಲಿ ಪಾಲುಗೊಂಡವರೇ ಆಗಿದ್ದಾರೆ, ಎಂದು ಹೇಳಿದರು. ಮುಂದೆ ನಡೆದ ಎರಡು ಗೋಷ್ಠಿಗಳುದ್ದಕ್ಕೂ ನಡೆದ ಬಿಸಿ ಬಿಸಿ ಚರ್ಚೆ ಶರ್ಮರ ಮಾತಿಗೆ ಕನ್ನಡಿ ಹಿಡಿದಂತಿತ್ತು. ವಿಚಾರ ಸಂಕಿರಣವನ್ನು ಉದ್ಘಾಟಿಸಿದವರು ಎಸ್.ಜೆ.ಎಂ ಶಿಕ್ಷಣ ಸಂಸ್ಥೆಗಳ ಆಡಳಿತ ಅಧಿಕಾರಿ ಶ್ರೀ ಎಸ್. ಕೆ. ಬಸವರಾಜನ್. ಸ್ವಲ್ಪ ಮಾತಾಡಿದರೂ ಕೂಡಾ ಅವರು, ನೊಂದವರಿಗೆ ದನಿ ಕೊಡುವ ನಮ್ಮ ಜನಪರ ಚಳುವಳಿಗಳು ಒಮ್ಮೊಮ್ಮೆ ಅನಾಯಕತ್ವ ಒಳಜಗಳಗಳಿಂದಾಗಿ, ಮತ್ತೊಮ್ಮೆ ರಾಜಕಾರಣಿಗಳ ಪಿತೂರಿಯಿಂದಾಗಿ ಕಳೆಗುಂದುವ ವಾಸ್ತವವನ್ನು ಎತ್ತಿ ತೋರಿಸುತ್ತ ಬಸವ – ಮಾರ್ಕ್ಸ್ – ಲೋಹಿಯಾ – ಅಂಬೇಡ್ಕರರ ಪ್ರಗತಿಪರ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವ ಅಗತ್ಯವನ್ನು ಬಿಂಬಿಸಿದರು. ಪ್ರಸಾರಾಂಗದ ನಿರ್ದೇಶಕ ಡಾ. ಪಂಚಾಕ್ಷರಯ್ಯ ಕರ್ನಾಟಕದ ಸಂದರ್ಭದಲ್ಲಿ ನಮ್ಮ ವೀರಶೈವ ಸಂಸ್ಥೆಗಳು ಹೇಗೆ ಅರ್ಥಪೂರ್ಣವಾಗಿ ನಮ್ಮ ಪ್ರಗತಿಪರ ಚಳುವಳಿಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿವೆ ಎಂದು ಸೂಚಿಸಿದರು.

೧೯೭೦ರ ದಶಕವನ್ನು ನಮ್ಮ ರಾಜ್ಯದ ಮಟ್ಟಿಗೆ ಚಳುವಳಿಗಳ ದಶಕವೆಂದೇ ಹೇಳಬೇಕು. ಕುವೆಂಪು ಮಾರ್ಗದರ್ಶನದಲ್ಲಿ ಲೋಹಿಯಾವಾದಿಗಳ ಸಮಾಜವಾದಿ ಯುವಜನ ಸಭಾ ಪ್ರಾರಂಭಿಸಿದ ಜಾತಿವಿನಾಶ ಚಳುವಳಿ. ದಲಿತ ಸಂಘರ್ಷ ಸಮಿತಿಯ ಹುಟ್ಟು. ಜೆ.ಪಿ ಆಂದೋಲನ ಮುನ್ನಡೆಸಿದ ನವನಿರ್ಮಾಣ ಸಮಿತಿ. ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಒಕ್ಕೂಟ, ಕಮ್ಯುನಿಸ್ಟ ವಿಚಾರಧಾರೆಯು ಪ್ರಗತಿ ಪಂಥ. ಅಬ್ರಹಾಂ ಕೋವೂರರ ವೈಚಾರಿಕ ಆಂದೋಲನ, ಬಂಡಾಯ ಸಾಹಿತ್ಯ ಸಂಘಟನೆಯ ಪ್ರಾರಂಭ, ರೈತ ಚಳುವಳಿ ಇವೆಲ್ಲ ಆ ದಶಕಕ್ಕೆ ವಿಶಿಷ್ಟ ಸಾಂಸ್ಕೃತಿಕ ಮಹತ್ವ ಒದಗಿಸಿದ ಘಟನೆಗಳು, ಸಂಗತಿಗಳು. ೮೦ ಮತ್ತು ೯೦ರ ದಶಕದಲ್ಲಿ ಇವೆಲ್ಲ ಚಳುವಳಿಗಳ ಮುಂದುವರಿಕೆಯನ್ನು, ಏಳು ಬೀಳುಗಳನ್ನು ನಾವು ಕಾಣುತ್ತಿದ್ದೇವೆ. ಸದ್ಯದ ಹಂತದಲ್ಲಿ ಇವೆಲ್ಲ ದಣಿದುಕೊಂಡು, ಏದುಸಿರು ಬಿಡುತ್ತಿರುವಾಗ ಈ ಪ್ರಗತಿಪರ ಚಳುವಳಿಗಳು ಬಗ್ಗೆ ಒಂದು ವಿಚಾರ ಸಂಕಿರಣವನ್ನೇ ಏರ್ಪಡಿಸಿದ್ದು ಕುವೆಂಪು ವಿಶ್ವವಿದ್ಯಾಲಯಕ್ಕೆ, ಉಳಿದ ವಿಶ್ವವಿದ್ಯಾಲಯಗಳಿಗೆ ಇಲ್ಲದ ಒಂದು ಹಿರಿಮೆಯನ್ನು ತಂದು ಕೊಟ್ಟಿದೆ. (ಕಳೆದ ವರ್ಷ ‘ಬಂಡಾಯ ಸಾಹಿತ್ಯ’ ದ ಬಗ್ಗೆ ಒಂದು ವಿಚಾರ ಸಂಕಿರಣ ಮಾಡಿದ ಕೀರ್ತಿಯೂ ಕುವೆಂಪು ವಿ.ವಿ. ಯದೇ ಎಂಬುದನ್ನು ನೆನಪಿಡಬೇಕು)

*

ಮೊದಲ ಗೋಷ್ಠಿಯಲ್ಲಿ ‘ಕರ್ನಾಟಕದಲ್ಲಿ ರೈತ ಚಳುವಳಿಗಳ ಸ್ವರೂಪ’ದ ಬಗ್ಗೆ ಮಾತಾಡಿದ ಶ್ರೀ ಕೆ. ಟಿ. ಗಂಗಾಧರ ಅವರು ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಯಾಗಿ ಮೊದಲಿನಿಂದಲೂ ರೈತ ಹೋರಾಟಗಳಲ್ಲಿ ಸಕ್ರಿಯವಾಗಿದ್ದವರು. ಒಂದು ನಿರ್ದಿಷ್ಟ, ಸೀಮಿತ ಉದ್ದೆಶದಿಂದ ಪ್ರಾರಂಭವಾದ ೧೯೫೦ರ ಕಾಗೋಡು ಸತ್ಯಾಗ್ರಹದಿಂದ ಮೊದಲುಗೊಂಡು ಸದ್ಯ ರಾಜಕೀಯ ಪಕ್ಷವಾಗಿ ರೂಪಗೊಂಡ ಕ. ರಾ. ರೈತಸಂಘದ ವರೆಗೆ ರೈತ ಚಳುವಳಿ ಹಾಯ್ದು ಬಂದ ಮುಜಲುಗಳನ್ನು ವ್ಯವಸ್ಥಿತವಾಗಿ ಗುರುತಿಸಿದ ಗಂಗಾಧರ ಅವರು ಮಾತಿನುದ್ದಕ್ಕೂ ನೋವಿನಿಂದ ಕೇಳಿದ ಪ್ರಶ್ನೆಗಳು: ದೇಶದ ಅನ್ನದಾತನೆಂದೂ, ನೇಗಿಲಯೋಗಿಯೆಂದೂ ಹೊಗಳಿಸಿಕೊಳ್ಳುವ ನಮ್ಮ ರೈತ ದೇಶಕ್ಕಾಗಿ ಸಾಕು ಸಾಕೆನ್ನುವಷ್ಟು ಉತ್ಪಾದನೆಯನ್ನು ಮಾಡಿಕೊಟ್ಟರು ಅವನೇಕೆ ಇನ್ನೂ ಕಂಗಾಲು ಪರಿಸ್ಥಿತಿಯಲ್ಲಿದ್ದಾನೆ? ಬಹು ಸಂಖ್ಯಾತರ ರೈತಮಕ್ಕಳೇ ಇಂದು ದೇಶದ ವಿದ್ಯಾವಂತ ವರ್ಗವಾಗಿದ್ದರೂ ಅವರೇಕೆ ರೈತ ಸಮಸ್ಯೆಗಳಿಗೆ ಸ್ಪಂದಿಸಿ ಸತ್ಯಾನ್ವೇಷಣೆಗೆ ಮುಂದಾಗುತ್ತಿಲ್ಲ?

ಸಮಸ್ಯೆಯ ಮೂಲಕ್ಕೇ ಕೈ ಹಾಕಿದ ಗಂಗಾಧರ ಅವರು. ಇಂದು ರೈತ ವ್ಯವಸಾಯ – ಕೈಗಾರಿಕೆಗೆ ಕಚ್ಚಾ ವಸ್ತು ಪೂರೈಸುವ ಮಾಧ್ಯಮ ಮಾತ್ರವಾಗಿ, ತನ್ನ ಉತ್ಪಾದನೆಗೆ ತಾನೇ ‘ಗಿರಾಕಿ’ ಯಾಗಿರುವ ವೈರುಧ್ಯವನ್ನು ವಿವರಿಸುತ್ತ. ರೈತರು ಸಂಘಟಿತರಾಗಿ ಚಳುವಳಿ ದಾರಿ ಹಿಡಿಯುವುದು ಅನಿವಾರ್ಯವಾಗಿತ್ತೆಂದೂ, ೨೬ ಜುಲೈ ೧೯೮೧ ರ ನರಗುಂದದ ಘಟನೆಯ ನಂತರ ರೈತಸಂಘ ಬೃಹತ್ ಚಳುವಳಿಯ ಸ್ವರೂಪ ತಾಳಿ. ೧೯೮೩ರಲ್ಲಿ ರಾಜಕೀಯ ಪಲ್ಲಟವನ್ನೇ ಉಂಟುಮಾಡಿದ್ದನ್ನೂ ನೆನೆದರು. ತಮ್ಮದು ಅನ್ಯಾಯದ ವಿರುದ್ಧ ‘ಅಹಿಂಸಾತ್ಮಕ ಚಳುವಳಿ’ ಯಾಗಿದ್ದರೂ, ಅದನ್ನು ‘ಬಂಡಾಯ’ ವೆಂದು ಹೆಸರಿಸಿ ಈವರೆಗೆ ೧೪೬ ರೈತರ ಬಲಿ ತೆಗೆದುಕೊಂಡದ್ದನ್ನು ಉಲ್ಲೇಖಿಸಿದ ಅವರು ಪ್ರಸ್ತುತ ಸಂದರ್ಭದಲ್ಲಿ ಗ್ಯಾಟ್ ಒಪ್ಪಂದ ಡಂತೆಲ್ ಪ್ರಸ್ತಾವನೆಗಳ ಮೂಲಕ, ಅಂತಾರಾಷ್ಟ್ರೀಯ ಪಾತಳಿಯನ್ನು ನಮ್ಮ ಇಡೀ ಬದುಕಿನ ವ್ಯವಸ್ತೆಯನ್ನೇ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿರುವ ಬಹುರಾಷ್ಟ್ರೀಯ ಕಂಪನಿಗಳ ಕುಟಿಲ ಕಾರಸ್ಥಾನದ ವಿರುದ್ದ ನಾವು ‘ಸಮಗ್ರವಾಗಿ’ ಚಳುವಳಿ ಮಾಡಬೇಕೆಂದು ಹೇಳಿದರು. “ರೈತ ಸಾಲಗಾರನಲ್ಲ; ಸರಕಾರವೇ ಬಾಕಿದಾರ” ಎಂದು ರೈತ ಸಂಘ ಹೇಳುತ್ತಿರುವ ಮಾತಿನ ಸತ್ಯವನ್ನು ನಮ್ಮ ಬುದ್ದಿಜೀವಿ ವರ್ಗ ಅರಿಯಬೇಕಾಗಿದೆ. ಎಂದ ಗಂಗಾಧರರು, ರೈತ ಚಳುವಳಿ ೧೨ನೆಯ ಶತಮಾನದ ಶರಣ ಚಳುವಳಿಯಂತಿದೆಯೇ ಹೊರತು ಯಾವುದೇ ವರ್ಗದ ಅಥವಾ ಪ್ರತಿಷ್ಠೆಯ ಚಳುವಳಿಯಲ್ಲ – ಎಂದು ಸ್ಪಷ್ಟ ಪಡಿಸಿದರು.

‘ಕರ್ನಾಟಕಲ್ಲಿ ಕಾರ್ಮಿಕ ಚಳುವಳಿಯ ತಾತ್ವಿಕ ಸಮಸ್ಯೆಗಳು’ ಕುರಿತು ಮಾತಾಡಿದ ಡಾ. ಸಿದ್ಧನಗೌಡ ಪಾಟೀಲ ಕೂಡ, ಕೇ. ಟಿ. ಗಂಗಾಧರರಂತೆ, ಜನಪರ ಆಂದೋಲನಗಳಲ್ಲಿ ಇಡಿಯಾಗಿ ತೊಡಗಿಸಿಕೊಂಡವರು. ರೈತ ಚಳುವಳೀ ಕುರಿತ ಚರ್ಚೆಯಲ್ಲಿ ಎತ್ತಲಾದ ಎಳೆಗಳನ್ನೇ ಮುಂದುವರಿಸಿದ ಅವರು, ಅನೇಕ ಆದರ್ಶಗಳ ನೆಲೆಯಲ್ಲಿ ಸಂಘಟನೆಗಳು ಹುಟ್ಟಿದರೂ ನಿಷ್ಠುರ ವಾಸ್ತವದಲ್ಲಿ ಅವು ಅನಿವಾರ್ಯವಾಗಿ ಅನೇಕ ರಾಜಿಗಳನ್ನು ಮಾಡಿಕೊಳ್ಳಬೇಕಾಗುತ್ತದೆ ಎಂದರು. ಯಾವುದೇ ಚಳುವಳಿಯ ಮುಂಚೂಣಿಯಲ್ಲಿ ಕಾರ್ಮಿಕ ವರ್ಗವಿರಬೇಕು; ಅದಕ್ಕೆ ಬೆನ್ನೆಲುಬಾಗಿ ರೈತವರ್ಗವಿರಬೇಕು – ಎಂಬ ಕಾರ್ಲಮಾರ್ಕ್ಸ್‌ನ ಆಶಯ, ಇಂಡಿಯಾದ ಸಂದರ್ಭದಲ್ಲಿ, ಎಷ್ಟರಮಟ್ಟಿಗೆ ಈಡೇರಿದೆ? ಗುಣಾತ್ಮಕ ಬದಲಾವಣೆ ಎಷ್ಟರ ಮಟ್ಟಿಗೆ ಆಗಿದೆ? ಈ ಪ್ರಶ್ನೆಯನ್ನು ಕೇಳಿಕೊಂಡ ಸಿದ್ದನಗೌಡ, ಇಂಥ ಬದಲಾವಣೆ ನಿರೀಕ್ಷಿಸಿದ ಮಟ್ಟದಲ್ಲಿ ಆಗಿಲ್ಲ ಎಂದು ಒಪ್ಪಿಕೊಳ್ಳುತ್ತ. ಕಾರ್ಮಿಕ ಚಳುವಳಿ ಕೇವಲ ‘ಸೌಲಭ್ಯಗಳ ಸಲುವಾಗಿ ಮಾಡುವ ಚಳುವಳಿ’ಯಾದುದನ್ನು ವಿವರಿಸಿದರು. ನಮ್ಮ ದೇಶದ ಶ್ರೇಣಿಕೃತ ಜಾತಿ ವ್ಯವಸ್ಥೆ ಕಾರ್ಮಿಕ ಚಳುವಳಿಗಳ ಮೇಲೆ ಮಾಡಿದ ಪರಿಣಾಮಗಳನ್ನು ಉಲ್ಲೇಖಿಸಿದ ಅವರು, ಈ ದಶಕದಲ್ಲಿ ಖಾಸಗೀಕರಣದ ಬೆನ್ನು ಹತ್ತಿದ ನಮ್ಮ ಸರಕಾರ ತನ್ನ exit policy ಮತ್ತು golden shake plociy ಗಳಿಂದಾಗಿ ಬೃಹತ್ ಯಂತ್ರೀಕರಣದಿಂದಾಗಿ ಈ ದೇಶದ ‘ದುಡಿಯುವ ವರ್ಗ’ ವನ್ನು ಕೇವಲ ‘ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು’ ವರ್ತುಳಕ್ಕೆ ಸೀಮಿತಗೊಳಿಸುವ ಅಪಾಯದ ವಿರುದ್ದ ಎಚ್ಚರಿಸಿದರು. ೩೦-೧೨-೧೬೦೦ ರಂದು ಈ ದೇಶಕ್ಕೆ ಕಾಲಿಟ್ಟ ಈಸ್ಟ್ ಇಂಡಿಯಾ ಕಂಪನಿಗೂ, ಈಗ ಗ್ಯಾಟ್ ಮೂಲಕ ಪ್ರವೇಶಿಸುತ್ತಿರುವ ಬಹುರಾಷ್ಟ್ರೀಯ ಕಂಪನಿಗಳಿಗೂ ಇರುವ ಸಾಮ್ಯ ವಿವರಿಸಿದ ಅವರು, ಬರಲಿರುವ ಗಂಡಾಂತರದ ವಿರುದ್ಧ ಪ್ರಗತಿಪರರೆಲ್ಲ. ತಮ್ಮ ಸೈದ್ದಾಂತಿಕ ಸೂಕ್ಷ್ಮಗಳನ್ನು ಬದಿಗಿರಿಸಿ. ಹೋರಾಡುವ ಅನಿವಾರ್ಯತೆಯನ್ನು ಬಿಂಬಿಸಿದರು.

ನಿರುದ್ಯೋಗ, ಅದರಿಂದಾಗಿ ಮದುವೆಯಾಗದಿರುವುದು, ಅದರಿಂದಾಗಿ ಉಂಟಾದ ಹತಾಶೆಗಳನ್ನು ಹೊಂದಿದ ಯುವಜನಾಂಗವನ್ನು ಸ್ಟಾರ್ ಟಿ.ವಿ ಗಳ ಜಾಲದಿಂದಾಗಿ ಲೈಂಗಿಕತೆ ಮತ್ತು ಅಪರಾಧ (sex and crime)ಗಳ ವಿಷವರ್ತುಲದಲ್ಲಿ ನೂಕುವ ವರ್ತಮಾನದ ವ್ಯವಸ್ಥೆಯತ್ತ ಗಮನ ಸೆಳೆದ ಸಿದ್ದನಗೌಡರು, ನಮ್ಮ ದೇಶದ ಹಬ್ಬ-ಹುಣ್ಣಿಮೆ-ಜಾತ್ರೆಗಳ ಸಂದರ್ಭಗಳನ್ನು ಪ್ರಗತಿಪರರು ಸರಿಯಾಗಿ ಬಳಸಿಕೊಂಡು ನಮ್ಮ ಜನತೆಯ ಸಾಂಸ್ಕೃತಿಕ ಹಸಿವನ್ನು ಏಕೆ ಹಿಂಗಿಸಲು ಪ್ರಯತ್ನಿಸಬಾರದು? – ಎಂಬ ಸೂಚನೆಯನ್ನು ಮುಂದಿಟ್ಟರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಪತ್ರಕರ್ತ ಬಾ. ಮ. ಬಸವರಾಜಯ್ಯ ತಮ್ಮದೇ ಉದಾಹರಣೆಯೊಂದಿಗೆ ಇಡೀ ದುರಂತವನ್ನು ಕಣ್ಣೆದುರು ತಂದರು: “ನಾನೊಬ್ಬ ರೈತನ ಮಗ. ನಮಗೆ ೧೦ ಎಕರೆ ಜಮೀನು. ನಮ್ಮ ಅಜ್ಜನಿಗೆ ೬೦೦ ರೂ ಸಾಲವಿತ್ತು: ಅಪ್ಪನ ಸಾಲ ೬೦೦೦ ರೂ: ಈಗ ನನ್ನ ಸಾಲ ೬೦೦೦೦ ರೂ. ಆದರೆ ನಮ್ಮ ಕಣದಲ್ಲಿ ಸ್ವಲ್ಪ ಭಾಗದಲ್ಲಿ ಆಶ್ರಯ ಪಡೆದ ವ್ಯಕ್ತಿ ದಲ್ಲಾಳಿಯಾಗಿ, ಮುಂದೆ ವ್ಯಾಪಾರಿಯಾಗಿ ೫೦ ಲಕ್ಷ ರೂ. ಗಳಿಸಿದ: ಶ್ರೀಮಂತನಾಗಿ ಮಾರುತಿ ಕಾರಿನಲ್ಲಿ ಮೆರೆದ”.

*

ದಲಿತ ಸಂಘರ್ಷ ಸಮಿತಿಯ ಒಡನಾಡಿ ಹಾಗೂ ಬಂಡಾಯ ಸಾಹಿತ್ಯ ಸಂಘಟನೆಯ ರಾಜ್ಯ ಸಂಚಾಲಕರಲ್ಲಿ ಒಬ್ಬರಾಗಿರುವ ಸಿ. ಕೆ. ಮಹೇಶ ಕಳೆದ ಎರಡು ದಶಕದ ದಲಿತ ಚಳುವಳಿಯನ್ನು ಕಟುವಾದ ಆತ್ಮ ವಿಮರ್ಶೆಯ ನೆಲೆಯಲ್ಲಿಯೇ ವಿಶ್ಲೇಷಿಸಿದರು. ಮೀಸಲಾತಿ ಮೂಲಕ ಬಂದಿರುವ ಪ್ರಜ್ಞಾವಂತ ದಲಿತ ವರ್ಗ ಇಡೀ ದಲಿತ ಸಮುದಾಯದ ಸಾಂಸ್ಕೃತಿಕ ಆರ್ಥಿಕ, ಸಾಮಾಜಿಕ ನೋವನ್ನು ಅರಿತು, ಅನುಭವಿಸಿ, ಮುಖ್ಯವಾಗಿ ‘ಸ್ವಾಭಿಮಾನ’ ಮತ್ತು ‘ಸ್ವಾವಲಂಬನೆ’ಯ ನೆಲೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಹೋರಾಟ ಪ್ರಾರಂಭಿಸಿದ್ದನ್ನು ನೆನೆಯುತ್ತ, ಬುದ್ಧ – ಬಸವ – ಮಾರ್ಕ್ಸ್ – ಅಂಬೇಡ್ಕರರ ಪರಂಪರೆಯಲ್ಲಿ ಬ್ರಾಹ್ಮಣ್ಯದ ವಿರುದ್ಧ ನಡೆಸಿದ ಹೋರಾಟ. ಎರಡು ಪ್ರಸಂಗಗಳಲ್ಲಿ ಮಾತ್ರ (೧. ನನ್ನ ಮನೆಯ ನೀರು ಕುಡಿಯಲು ಬಾ ಎಂದು ಬ್ರಾಹ್ಮಣರಿಗೆ ಹೇಳಿದ್ದು. ೨. ದಲಿತರ ರಕ್ತದ ಹನಿಗಳನ್ನು ಪ್ರಧಾನಿಗೆ ಕಳಿಸಿದ್ದು.) ದಾರಿ ತಪ್ಪಿತೆಂದು ಹೇಳಿದ ಮಹೇಶ. “ನಮ್ಮದು ನಮ್ಮ ಹಕ್ಕಿಗಾಗಿ ಹೋರಾಟವಾಗಬೇಕೇ ಹೊರತು, ಯಾಚನೆಯ ಮೂಲಕ ಅಲ್ಲ “ಎಂದು ಸ್ಪಷ್ಟಪಡಿಸಿದರು. ಏಳು ದಶಕಗಳಿಂದ ಇಂಡಿಯಾ ನೆಲದ ಮೇಲಿರುವ ಕಮ್ಯುನಿಸ್ಟರು ‘ಜಾತಿ’ಯ ವಾಸ್ತವ ಅಸ್ತಿತ್ವವನ್ನು ಗುರುತಿಸುವಂತೆ ಮಾಡಿದ್ದು. ಬಸವನ ಪ್ರಭಾವದಿಂದಾಗಿ ದಲಿತರೊಳಗಡೆಯೇ ಬೇರೆ ಜಾತಿಯವರ ಸಂವಹನ ಸಾಧ್ಯವಾದದ್ದು, ಮೀಸಲಾತಿಯಿಂದಾಗಿ ಅರಿವಿನ ಬಗ್ಗೆ ಹೆಚ್ಚುತ್ತಿರುವ ದಾಹ. ಸಿದ್ಧಾಂತ – ಸಂಘಟನೆ – ಸಂಘರ್ಷಗಳ ಪಾತಳಿಯಲ್ಲಿ ಕಂಡುಬರುವ ಸಾಂಗತ್ಯ – ಇವೆಲ್ಲ ದಲಿತ ಚಳುವಳಿಯ ಗುಣಾತ್ಮಕ ಸಾಧನೆಗಳೆಂದು ಗುರುತಿಸಿದ ಮಹೇಶ. ಈಗ ಬರುತ್ತಿರುವ ಗ್ಯಾಟ್ ಪಿಡುಗು ಕೂಡ ಮಹಾಬ್ರಾಹ್ಮಣ್ಯದ ಮತ್ತೊಂದು ಮುಖವೇ ಎಂದು ಒತ್ತಿಹೇಳಿ ನಮ್ಮ ನೆಲದ ನೈಜ ಉಪಸಂಸ್ಕೃತಿಗಳನ್ನೇ ಸಮೂಲ ನಾಶಪಡಿಸುವ ಇಂಥ ಪ್ರಯತ್ನದ ವಿರುದ್ಧ ಸಮಗ್ರ ಚಳುವಳಿ ಈಗ ಅನಿವಾರ್ಯ ಎಂದು ಹೇಳಿದರು.

ಸಮಕಾಲಿನ ಸಂದರ್ಭದಲ್ಲಿ ಕರ್ನಾಟಕ ಕಂಡ ಮತ್ತೊಂದು ದೊಡ್ಡ ಚಳುವಳಿ ಎಂದರೆ ‘ಗೋಕಾಕ ಚಳುವಳಿ’ ಎಂದೇ ಪ್ರಸಿದ್ಧವಾದ ೧೯೮೨ – ೮೩ ರ ಕನ್ನಡ ಚಳುವಳಿ, ಈ ಭಾಷಾ ಚಳುವಳಿಯ ಬೇರೆ ಬೇರೆ ಹಂತಗಳನ್ನು ಗುರುತಿಸಿದವರು ಪತ್ರಕರ್ತ ಗುಡಿಹಳ್ಳಿ ನಾಗರಾಜ ಹೈಸ್ಕೂಲಿನ ಭಾಷಾ ಪಠ್ಯಕ್ರಮದಲ್ಲಿ ಸಂಸ್ಕೃತದ ಸ್ಥಾನ ಯಾವುದು? – ಎಂಬ ಬಗ್ಗೆ ಹುಟ್ಟಿದ ವಿವಾದ, ನಂತರದ ದಿನಗಳಲ್ಲಿ ಅನೇಕ ಪ್ರೇರಣೆಗಳಿಂದಾಗಿ ಕರ್ನಾಟಕಲ್ಲಿ ಜನಭಾಷೆಯಾದ ಕನ್ನಡಕ್ಕೇ ಅಗ್ರಸ್ಥಾನ ಘೋಷಣೆಯೊಂದಿಗೆ ಸುರುವಾದ ಹೋರಾಟಕ್ಕೆ ಜಯ ಸಿಕ್ಕಿದ್ದು ಇತ್ತೀಚಿನ ಸುಪ್ರೀಂಕೋರ್ಟಿನ ತೀರ್ಮಾನದ ನಂತರವೇ. ಈ ನಡುವಿನ ಅವಧಿಯಲ್ಲಿ ಪ್ರಾರಂಭದಲ್ಲಿ ಚಳುವಳಿಯನ್ನು ಹುಟ್ಟುಹಾಕಿದ ಬಂಡಾಯ ಸಾಹಿತ್ಯ ಸಂಘಟನೆ ನಂತರದ ಹಂತದಲ್ಲಿ ಹಿಂದೆ ಸರಿದದ್ದು. ಕೆಲವು ಕಡೆ ಆರ್‌.ಎಸ್. ಎಸ್. ದಂಥ ಜನವಿರೋಧಿ ಸಂಘಟನೆಗಳು ಚಳುವಳಿಗೆ ಕೋಮುವಾದಿ ಸ್ವರೂಪ ಕೊಟ್ಟಿದ್ದು ಸದ್ಯದಲ್ಲಿ ಬೆಂಗಳೂರಿನ ಕನ್ನಡ ಚಳುವಳಿಗಾರರು ಬೆಂಗಳೂರಿನಲ್ಲಿಯ ಸಮಸ್ಯೆಗಳೇ ಇಡೀ ರಾಜ್ಯದ ಸಮಸ್ಯೇಗಳೇನೋ ಎಂಬಂತೆ ವರ್ತಿಸುತ್ತಿರುವುದು – ಇವೇ ಮುಂತಾದ ಅಂಶಗಳನ್ನು ಚರ್ಚಿಸಿದ ನಾಗರಾಜರು. ಕೇಂದ್ರೀಕೃತ ಆರ್ಥಿಕ ನೀತಿಯಿಂದಾಗಿ ಹಿಂದಿಯ ಹೇರಿಕೆ, ಕಾನ್ವೆಂಟಿನ ವ್ಯಾಮೋಹದಿಂದಾಗಿ ಇಂಗ್ಲೀಷಿನ ಆಕ್ರಮಣ, ಭಾಷಾಭಿಮಾನದ ಹೆಸರಿನಲ್ಲಿ ಇತರ ಭಾಷೆಗಳ ಬಗ್ಗೆ ಪ್ರಜಾಸತ್ತಾತ್ಮಕ ನಿಲುವು ತಾಳದಿರುವುದು ಮುಂತಾದ ಗಂಡಾಂತರಗಳನ್ನು ಎತ್ತಿ ತೋರಿಸಿದರು. ಕನ್ನಡ ಚಳುವಳಿ ಎಂಬುದು ಒಟ್ಟು ಸಾಮಾಜಿಕ ಬದಲಾವಣೆಯ ಅಂಗವಾಗಿರಬೇಕೇ ಹೊರತು. ತಾನೇ ಸ್ವಯಂಭೂ ಆಗಲು ಸಾಧ್ಯವಿಲ್ಲ ಎಂಬುದು ಅವರ ಆಶಯ ಶಿಕ್ಷಣ, ಆಡಳಿತ, ಕಾನೂನುಗಳೆಲ್ಲ ಕನ್ನಡಮಯವಾದಾಗ ಮಾತ್ರ ಕನ್ನಡ ಕಲಿಕೆ ಎಂಬುದು ಅನಿವಾರ್ಯವಾಗುತ್ತದೆ ಎಂಬ ನಾಗರಾಜರ ಅಭಿಪ್ರಾಯ ಎಲ್ಲರೂ ಒಪ್ಪುವಂತಿತ್ತು.

ಬಂಡಾಯ ಸಾಹಿತ್ಯ ಸಂಘಟನೆಯ ಇನ್ನೊಬ್ಬ ರಾಜ್ಯ ಸಂಚಾಲಕ ಆರ್‌. ವಿ. ಭಂಡಾರಿ ೨ನೆ ಗೋಷ್ಠಿಯ ಅಧ್ಯಕ್ಷರು. ಇಂಡಿಯಾದ ಸಂಕೀರ್ಣ ಸಂದರ್ಭದಲ್ಲಿರುವ ಜಾತಿ, ವರ್ಗ, ಜಾತಿಯಲ್ಲಿ ವರ್ಗ, ವರ್ಗದಲ್ಲಿ ಜಾತಿ ಮುಂತಾದವುಗಳ ವಿಶ್ಲೇಷಣೆ ಮಾಡಿದ ಭಂಡಾರಿಯವರು, ದಶಕಗಳ ಹಿಂದೆಯೇ ಏಕಾಂಗಿಯಾಗಿ ಪುರೋಹಿತಶಾಹಿಯ ವಿರುದ್ಧ ‘ಸರ್ವರಿಗೆ ಸಮಪಾಲು, ಸರ್ವರಿಗೆ ಸಮಬಾಳು’ ಎಂದು ಹೋರಾಡಿದ ಕುವೆಂಪು ಹೆಸರಿನ ವಿಶ್ವವಿದ್ಯಾಲಯ ಇಂಥದೊಂದು ವಿಚಾರ ಸಂಕಿರಣ ಏರ್ಪಡಿಸಿದ್ದು ಅಭಿನಂದನೀಯ ಅಂದರು.

*

ಇಡೀ ವಿಚಾರ ಸಂಕಿರಣದ ಹೆಚ್ಚುಗಾರಿಕೆ ಎಂದರೆ ಪ್ರತಿಯೊಂದು ಪ್ರಬಂಧದ ನಂತರ ನಡೆಯುತ್ತಿದ್ದ ಚರ್ಚೆ, ವಿವಾದ. ನಾನು ಹೆಸರಿಗೆ ಸಮಾರೋಪ ಭಾಷಣಕಾರನಾಗಿದ್ದರೂ ಇಂಥ ಚರ್ಚೆಯ ಅನೇಕ ಹಂತಗಳಲ್ಲಿ ಪಾಲುಗೊಳ್ಳಲೇ ಬೇಕಾಗಿತ್ತು. ಕರ್ನಾಟಕದ ರೈತ ಚಳುವಳಿ ಕೇವಲ ದೊಡ್ಡ ರೈತರ ಚಳುವಳಿಯಾಗಿದೆಯೇ? ಕೃಷಿ – ಕಾರ್ಮಿಕರ ಬಗ್ಗೆ ಅಲಕ್ಷ್ಯ ತಾಳಿದೆಯೆ? – ಎಂಬ ಪ್ರಶ್ನೆಗಳನ್ನು ನಾನು ಎತ್ತಿದಾಗ ಕೆ. ಟಿ. ಗಂಗಾಧರರು ಸಮರ್ಪಕವಾಗಿ ಉತ್ತರಿಸಿದರು ಆದರೆ ಬದನವಾಳು ಅವರ, “ದ. ಸಂ . ಸ ವನ್ನು ಬ್ಯಾನ್ ಮಾಡಬೇಕು.” ಎಂದು ಹೇಳಿದರೆನ್ನಲಾದ ವರದಿಯ ಬಗ್ಗೆ ಗಂಗಾಧರರು, “ಅವರೊಂದಿಗೆ ಮಾತಾಡಿ ಹೇಳುತ್ತೇನೆ” ಎನ್ನಬೇಕಾಯಿತು.

ಇಂಡಿಯಾದ ಕಮ್ಯುನಿಸ್ಟರು ಇಲ್ಲಿಯ ‘ಜಾತಿ’ ಯನ್ನು ಬೇಕೆಂತಲೇ ಮರೆತು, ಕೇವಲ ‘ವರ್ಗ’ ದ ಬಗ್ಗೆ ಮಾತಾಡಿದ್ದರಿಂದ ಅವರು ತಮ್ಮ ದೇಶದಲ್ಲಿಯೇ ‘ಪರದೇಶಿ’ಗಳಾಗ ಬೇಕಾಯಿತು ಅಂತ ನಾನಂದಾಗ, ಗೆಳೆಯರೊಬ್ಬರು, “ಸೋಶಲಿಸ್ಟರು ಪರದೇಶಿಗಳಾದಷ್ಟು ಕಮ್ಯುನಿಸ್ಟರು ಆಗಿಲ್ಲ “ಅಂದರು. ನಾನು ಮತ್ತೆ ಮುಂದೆ ಹೋಗಿ ಈ ಗೆಳೆಯರಿಗೆ ಮತ್ತಷ್ಟು ಖುಷಿಯಾಗುವಂತೆ ಹೇಳಿದೆ: “ಸೋಶಲಿಸ್ಟರು “ಮುಖ್ಯ ಸಿದ್ದಾಂತ ವಿಕೇಂದ್ರೀಕರಣ, ಡಿಸೆಂಟ್ರಲೈಜೇಶನ್, ಅದಕ್ಕನುಗುಣವಾಗಿ ನಮ್ಮ ಮುಖಂಡರು ಎಲ್ಲ ಪಕ್ಷಗಳಲ್ಲಿ ಸೇರಿಕೊಂಡು, ಅಲ್ಲಿಯೇ ಲಿಂಗೈಕ್ಯರಾಗಿ. ಡಿಸೆಂಟ್ರಲೈಜ್ ಆಗಿದ್ದಾರೆ!”

ರೈತ ಸಂಘ ದಲಿತ ವಿರೋಧಿಯೇ ಎಂಬ ಚರ್ಚೆ ನಡೆದಾಗ, ಗಂಗಾಧರ ಅವರು ಇತ್ತೀಚಿಗೆ ನಡೆದ ಮಂಡಲ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಕ್ಷೇತ್ರದಲ್ಲಿ ದಲಿತ ಮಹಿಳೆಯನ್ನು ಅಧ್ಯಕ್ಷೆಯನ್ನಾಗಿ ಮಾಡಿದ ದೃಷ್ಟಾಂತ ಕೊಟ್ಟರು. ಆ ಮಹಿಳೆಯಿಂದಲೇ ಊರ ದೇವಸ್ಥಾನದಲ್ಲಿ ಪೂಜೆ ಮಾಡಿಸುವ ಸಂಕಲ್ಪದ ಬಗ್ಗೆ ಅವರು ಮಾತಾಡಿದಾಗ, ನನಗೆ ಯಾಕೋ ಅನಂತಮೂರ್ತಿಯವರ ಭಾರತೀಪುರದ ಜಗನ್ನಾಥನ ‘ಕ್ರಾಂತಿ’ಯ ನೆನಪಾಗಿ, ‘ಇದೂ ಕೂಡ ಯಥಾಸ್ಥಿತಿಯ ಮುಂದುವರಿಕೆಯೇ ಅಲ್ಲವೇ!’ ಅಂತ ಕೇಳಿದೆ.

ನನ್ನನ್ನು ಬಹಳವಾಗಿ ಕಾಡುತ್ತಿರುವ ಪ್ರಶ್ನೆ ನಮ್ಮ ‘ಉಪಸಂಸ್ಕೃತಿ’ಗಳೆಂದು. ನಮ್ಮ ಉಪಸಂಸ್ಕೃತಿಗಳು ಬಹುತೇಕವಾಗಿ ವೈದಿಕಶಾಹಿಯ ‘ಯಜಮಾನ’ ಸಂಸ್ಕೃತಿಯ ಅನೇಕ ಮೌಲ್ಯಗಳನ್ನು ಅನುಕರಣ ಮಾಡುತ್ತಿರುವಾಗ ಇವುಗಳನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದು ಸಮಂಜಸವೇ? ಹಂಸಕ್ಷೀರ ನ್ಯಾಯ ಮಾಡಬೇಕೆಂದರೆ ಇದು ಹಾಲು, ಇದು ನೀರು ಅಂತ ಪರೀಕ್ಷೆ ಮಾಡುವುದು ಹೇಗೆ? ಇದು ಇನ್ನೂ ಗಂಭೀರವಾಗಿ ಚರ್ಚಿಸಬೇಕಾದ ವಿಷಯ ಹಾಗೆಯೇ ನಮ್ಮ ಹಬ್ಬ, ಹುಣ್ಣಿಮೆಗಳನ್ನು ‘ಸಾಂಸ್ಕೃತಿಕ ಹಸಿವು’ ನೀಗಿಸಲು ಉಪಯೋಗಿಸಬೇಕು ಎಂಬ ಸಿದ್ದನಗೌಡ ಪಾಟೀಲರ ಸೂಚನೆಯನ್ನು ಕೂಡ ಚರ್ಚೆಗೆ ಒಳಪಡಿಸಬೇಕಾಗಿದೆ.

*

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದವರು ಚಿತ್ರದುರ್ಗದ ಮುರುಘರಾಜೇಂದ್ರ ಬೃಹನ್ಮಠದ ಜಗದ್ಗುರುಗಳಾದ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು. ಪುರೋಹಿತಶಾಹಿ ಸಂಕೇತಗಳಾದ ಇಂಥ ಸ್ವಾಮಿಗಳೆಂದರೇ ಅಲರ್ಜಿ ನನಗೆ. ಸ್ವಾಮಿಗಳಿಗೂ ಕೂಡ ಒಂದು ಬಗೆಯ ಮುಜುಗರವಾಗಿತ್ತು. ಆದರೆ ಹೊಸ ತಲೆಮಾರಿನ ಇಂತ ಅನೇಕ ವೀರಶೈವ ಸ್ವಾಮಿಗಳು ಸಮಕಾಲೀನ ಸತ್ಯಗಳಿಗೆ ಸ್ಪಂದಿಸುತ್ತ ೧೨ನೆಯ ಶತಮಾನದ ಮೂಲ ಸಾಂಸ್ಕೃತಿಕ ಆಯಾಮಗಳನ್ನು ತಮ್ಮ ನಡೆ, ನುಡಿಗಳಿಗೆ ಹೊಂದಿಸಿಕೊಳ್ಳುತ್ತಿರುವುದೂ ನಡೆದಿದೆ. ಶಿವಮೂರ್ತಿ ಸ್ವಾಮಿಗಳು ಸ್ತಾವರ ವಿರೋಧಿಗಳಾದ ಬುದ್ಧ, ಬಸವಣ್ಣನವರಿಗಾದ ದುರಂತವನ್ನು ನೆನೆಯುತ್ತ. ಪವಾಡಗಳಲ್ಲಿ ಬಂಧಿಯಾಗಿರುವ ವಿಶ್ವಗುರು ಬಸವಣ್ಣನನ್ನು ಮೊದಲು ‘ಲಿಂಗಾಯತ’ ರಿಂದ ಬಿಡುಗಡೆ ಮಾಡಬೇಕಾಗಿದೆ ಎಂದಾಗ ಆ ಮಾತು ಲಿಂಗ ಮೆಚ್ಚಿ ಅಹುದಹುದೆನ್ನುವಂತಿತ್ತು.

ಶಿವಮೂರ್ತಿ ಸ್ವಾಮಿಗಳು ಗ್ರಾಮಾಂತರ ಪ್ರದೇಶದಲ್ಲಿ ಪಾದಯಾತ್ರೆಯ ಮೂಲಕ ‘ಮಧ್ಯಪಾನ ನಿಷೇಧ, ಕಾರ್ಯಕ್ರಮ ವಿಷಯ ಪ್ರಸ್ತಾಪಿಸಿ ನಾನು ನನ್ನ ಭಾಷಣದಲ್ಲಿ “ಸ್ವಾಮೀಜಿಯವರು ಬಡವರಿಗೆ ಸೆರೆ ಕುಡಿಯಬೇಡಿರೆಂದು ಹೇಳುತ್ತಾರೆ: ಆದರೆ ಇಡೀ ಸರಕಾರವನ್ನೇ ನಿಯಂತ್ರಿಸುತ್ತಿರುವ ಲಿಕರ್ ಲಾಬಿ ಶ್ರೀಮಂತ ಶಿಷ್ಯರಿಗೇಕೆ ಹೇಳುವುದಿಲ್ಲ?” ಅಂತ ಚುಚ್ಚಿದೆ. ಸ್ವಾಮಿಗಳು ಒಂದು ಪ್ರಸಂಗ ಉಲ್ಲೇಖಿಸಿದರು,”ಇಂಥ ಒಬ್ಬ ಮಾಹಾಶಯನಿಗೆ ಹೇಳಿ ನೋಡಿದೆವು, ಅವನು ಲಿಕರ್ ಬಿಜಿನೆಸ್ಸಿನಲ್ಲಿ ೫೦ ಲಕ್ಷ ರೂ ತೊಡಗಿಸಿದ್ದಾನಂತೆ, ಅಷ್ಟು ಹಣ ನೀವು ಕೊಡುತ್ತೀರೇನು? ಅಂತ ಅವನು ನಮ್ಮ ಮೇಲೆಯೇ ತಿರುಗಿ ಬಿದ್ದರೆ ಏನು ಮಾಡಬೇಕು?

ನಮ್ಮ ಎಲ್ಲ ಚಳುವಳಿಗಳ ‘ಇತಿ’ ಮತ್ತು ‘ಮಿತಿ’ ಇದೇ ಇರಬಹುದೇ?

-೧೯೯೪