ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆನಿದ್ದಾನೋ ಇಲ್ಲವೋ?
ತನುವಿನೊಳಗೆ ಹುಸಿ ತುಂಬಿ,
ಮನದೊಳಗೆ ವಿಷಯ ತುಂಬಿ,
ಮನೆಯೊಳಗೆ ಮನೆಯೊಡೆಯನಿಲ್ಲ
ಕೂಡಲ ಸಂಗಮದೇವ,

ಇಪ್ಪತ್ತೊಂದು ಪದಪುಂಜಗಳ ಈ ವಚನ ಬಸವಣ್ಣನ ಜನಪ್ರಿಯ ವಚನಗಳಲ್ಲಿ ಒಂದು. ಇಲ್ಲಿ ‘ಮನೆ’ ಎಂಬ ಶಬ್ದ ಏಳು ಸಲ ಬಂದಿದ್ದರೆ ‘ತುಂಬಿ’ ಮೂರು ಸಲ, ‘ಇಲ್ಲಾ’ ಎಂಬುದು ಮೂರು ಸಲ ರಿಪೀಟಾಗಿವೆ. ಇವೇ ಹದಿಮೂರಾದರೆ ಉಳಿದುದೆಲ್ಲಾ ಸೇರಿ ಎಂಟು ಮಾತ್ರ. ಓದುವಾಗ ಕಣ್ಣಿಗೆ ಬೀಳವ, ಕೇಳುವಾಗ ಕಿವಿಗೆ ಬಡಿಯುವ ಈ ಮೂರು ಶಬ್ದಗಳೇ ಇಡೀ ವಾತಾವರಣವನ್ನು ತುಂಬಿವೆ.

ಇಷ್ಟು ತರಾತುರಿ, ಅವಸರದ ಕವನವನ್ನು ನಾನು ಬಹಳ ನೋಡಿಲ್ಲ. ಇದೊಂದು ‘ಕವನ’ ಎಂದು ಬೇಕೆಂತಲೇ ಕರೆದಿರುವೆ. ಏಕೆಂದರೆ ಇಲ್ಲಿ ಬಸವಣ್ಣ ಯಾವುದೇ ನೀತಿಯನ್ನು ಉಪದೇಶ ಮಾಡಿಲ್ಲ. ಅಭಿವ್ಯಕ್ತಿ ವಾಚ್ಯವಾಗಿಲ್ಲ. ಮೊದಲಲ್ಲಿಯೇ ಒಂದು ಚಿತ್ರ ಇದೆ. ಅದರ ವಿವರ ಇದೆ. ಈ ಚಿತ್ರ ಕ್ಷಿಪ್ರವಾಗಿ ಒಂದು ಸಂಕೇತವಾಗುತ್ತದೆ. ಸಂಕೇತ ಬೆಳೆದು. ಮೂಲ ಚಿತ್ರಕ್ಕೆ ಒಂದು ‘ಧ್ವನಿ’ ಒದಗುತ್ತದೆ. ಈ ಧ್ವನಿಯೇ ಕವನದ ಸಂದೇಶವೂ ಆಗುತ್ತದೆ. ಎಲ್ಲವೂ ಟಕ್ ಟಕ್ ಅಂತ ಮುಗಿದು ಹೋದರೂ, ಕವನ ಅವಸರದ್ದಾದರೂ ಅಪೂರ್ಣ ಅನ್ನಿಸುವುದಿಲ್ಲ.

*

ಕವನ ಅಂದರೆ ಮಾತು. ಮಾತು ಅಂದರೆ ಮಾತಾಡುವವ ಇರಲೇಬೇಕಲ್ಲ. ಅವನು ಯಾರಿಗೋ ಹೇಳುತ್ತಿರುತ್ತಾನೆ. ಈ ‘ಕೇಳುಗ’ ಒಬ್ಬನಿರಬಹುದು ಕೆಲವರಿರಬಹುದು, ಒಂದು ಸಮೂಹವೇ ಇರಬಹುದು; ಅಥವಾ ಅವನು ತಾನೇ ಆಗಿರಬಹುದು. ಈ ಹೇಳುವ – ಕೇಳುವ ಕ್ರಿಯೆಗೆ ಒಂದು ಸನ್ನಿವೇಶ, ಸಂದರ್ಭ ಇರುತ್ತದೆ (context of situation) ಇವರಿಬ್ಬರ ವೈಯಕ್ತಿಕ. ಸಾಮಾಜಿಕ ಸಂಬಂಧಗಳು, ಆ ಕ್ಷಣದ ತುರ್ತು, ಅವರ ಮೂಡುಗಳು ಇವೆಲ್ಲ ಆ ಸಂದರ್ಭದ ಪೂರಕ ಅಂಶಗಳು. ಕತೆ, ಕಾದಂಬರಿ, ನಾಟಕಗಳಲ್ಲಿ ಇವೆಲ್ಲ ವಿವರಗಳನ್ನು ಲೇಖಕನೇ ಪೂರೈಸುತ್ತಾನೆ. ಆದರೆ ಅವನಲ್ಲಿ ಎಲ್ಲವನ್ನು ನಾವೇ ಉಹಿಸಿಕೊಳ್ಳಬೇಕು – ನಮ್ಮ ನಮ್ಮ ದರುಶನಕ್ಕೆ ತಕ್ಕ ಹಾಗೆ ಬಹುಶಃ ಇದೊಂದು ಕಾರಣದಿಂದಾಗಿಯೇ ಕಾವ್ಯದ ಭಿತ್ತಿ, ಬೀಸು ಬಹಳ ವಿಸ್ತಾರವಾದದ್ದು ಅನ್ನಿಸುತ್ತದೆ.

ಬಸವಣ್ಣ ಯಾವ ಸನ್ನಿವೇಶದಲ್ಲಿ, ಯಾವ ಮೂಡಿನಲ್ಲಿ ಈ ಮಾತು ಕೇಳಿರಬಹುದು? ಅಥವಾ ಹೇಳಿಕೊಂಡಿರಬಹುದು?…. ಈ ಪ್ರಶ್ನೆಗಳನ್ನು ಬದಿಗಿಟ್ಟು ನೇರ ಕವನಕ್ಕೆ ಹೋಗೋಣ.

*

ಸ್ವಲ್ಪ ದೂರದಲ್ಲಿ ಎದುರಿಗೊಂದು ಮನೆ. ಮನೆ ಅಂದರೆ ಇರಲಿಕ್ಕೆ ಕಟ್ಟಿಸಲಾದ ಒಂದು ತಾಣ: ವಸತಿಗೃಹ. ಅಲ್ಲಿ ಮಂದಿ ಇದ್ದರೇನೇ ಅದು ಮನೆ. ಈ ಮಂದಿಗೊಬ್ಬ ಹಿರಿಯ ಬೇಕು: ತಂದೆ ಗಂಡ, ಯಾರೋ ಅವನು ಮನೆಯ ಪ್ರತಿನಿಧಿ, ಯಜಮಾನ, ಒಡೆಯ. ದೂರದಿಂದ ನೋಡಿದಾಗ ಮನೆಯಲ್ಲಿ ಯಾರಾದರೂ ಇದ್ದರೆ ತಟ್ಟನೇ ಗೊತ್ತಾಗುತ್ತದೆ. ಆಡುವ ಮಕ್ಕಳು, ಒಣಗಲಿಕ್ಕೆ ಹಾಕಿದ ಅರವೇ. ಅಡುಗೆಮನೆಯ ಹೊಗೆ ಇತ್ಯಾದಿ. ಆದರೆ ಇಲ್ಲಿ ನೋಡಿದರೆ ಏನೂ ಇಲ್ಲ… ಸ್ವಲ್ಪ ಹತ್ತಿರ. ಇನ್ನೂ ಹತ್ತಿರ ಹೋಗಿ ನೋಡಿದಾಗ ಹೊಸ್ತಿಲಲ್ಲಿ ಹುಲ್ಲು ಕಾಣುತ್ತಿದೆ. ಹೊಸ್ತಿಲು ಮನೆಯ ಪ್ರವೇಶದ ಮೊದಲ ಹಂತ ಬೆಳಗು ಹರಿದೊಡನೆ ಅಥವಾ ಅದಕ್ಕೂ ಮುಂಚೆ, ಮನೆಯವರು ಮಾಡುವ ಕೆಲಸವೇ ಈ ಹೊಸ್ತಿಲನ್ನು ತೊಳೆಯುವುದು, ರಂಗೋಲಿ ಹಾಕುವುದು. ಮನೆಯ ಸೊಸೆ ಈ ಹೊಸ್ತಿಲು ದಾಟಿ, ಬಲಗಾಲು ಮುಂದಿಟ್ಟು ಒಳಗೆ ಬರಬೇಕು. ಬಂದ ಮೇಲೆ ಈ ಹೊಸ್ತಿಲೇ ಅವಳ ಲಕ್ಷ್ಮಣರೇಖೆ ಅವಳು ಹೊಸ್ತಿಲು ‘ದಾಟಿದ ಹೆಣ್ಣು’ ಆಗಬಾರದು! .. ನಿತ್ಯ ನೂತನವಾಗಿರಬೇಕಾದ ಹೊಸ್ತಿಲ ಮೇಲೆ ಈಗ ಹುಲ್ಲು ಬೆಳೆದಿದೆ. ಅಂದರೆ ಈ ಮೆನೆ ಖಾಲಿಯಾಗಿ ಬಹಳ ಕಾಲವಾಗಿರಬೇಕು. ಯಾವುದೇ ಕಾರಣಕ್ಕೆ ಮನೆ ತೆರವು ಮಾಡಿ ಹೋಗುವವರು ಮನೆ ಕಸ ಹೊಡೆಯಲು, ದೀಪ ಹಚ್ಚಲು ಯಾರನ್ನಾದರು ಇಟ್ಟು ಹೋಗುವುದು ರೂಢಿ ಇಲ್ಲಿ ಅದೂ ಇಲ್ಲ. ಹೊಸ್ತಿಲದ ಗತಿ ಹೀಗಾಗಿದ್ದರೆ, ಮನೆಯ ‘ಒಳಗಿನ’ ಸ್ಥಿತಿ? ಅಲ್ಲಿ ರಜ ತುಂಬಿದೆ. ರಜ ಅಂದರೆ ಹುಡಿ, ಧೂಳಿ, ಇಷ್ಟೆಲ್ಲ ಕಂಡಾಗ ಕಾಡುವ ಅನುಮಾನ: ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ …..

ಬಾಹ್ಯ ಲಕ್ಷಣಗಳನ್ನು ನೋಡಿದಾಗ – (ಪ್ರೈಮಾಪೇಸಿ ಅನ್ನುತ್ತಾರಲ್ಲ, ಹಾಗೆ) – ತಟ್ಟನೇ ಮೂಡುವ ಸಂಶಯವಿದು.

ತಾಳೇಗರಿಗಳಲ್ಲಿ ಉದ್ದುದ್ದ ಸಾಲುಗಳಲ್ಲಿ ಶಬ್ದ ಶಬ್ದಗಳ ನಡುವೆ ಬಹುಶಃ ಖಾಲಿ ಜಾಗವಿಲ್ಲದೆ, ಯಾವುದೇ ವಿರಾಮ ಚಿಹ್ನೆಗಳಿಲ್ಲದೆ ಕೈ ಬರಹದಲ್ಲಿದ್ದ ವಚನಗಳನ್ನು ಆಧುನಿಕ ಲಿಪಿ ವಿನ್ಯಾಸಕ್ಕನುಗುಣವಾಗಿ ಪರಿಷ್ಕರಣೆ ಮಾಡಿದ್ದಾರೆ. ಶಬ್ದ ವಿಚ್ಛೇದನೆ. ಸಾಲುಗಳ ವಿನ್ಯಾಸ, ವಿರಾಮ ಚಿಹ್ನೆಗಳು ಇವೆಲ್ಲ ವಚನಗಳ ಮೂಲ (?) ಆಶಯಕ್ಕೆ ಪೂರಕವಾಗಿ ಬಳಸಲ್ಪಟ್ಟ ನಮ್ಮೆದುರಿಗೆ ಈಗ, ಇವತ್ತಿನ ಯಾವುದೇ ಕವನ ಕಾಣುವ ರೀತಿಯಲ್ಲಿ, ವಚನಗಳೂ ಕಾಣುತ್ತಿವೆ.

ಪ್ರಸ್ತುತ ವಚನವನ್ನು ನಾನು ಅಂದುಕೊಂಡ ಅಥವಾ ಅನುಭವಿಸಿದ ರೀತಿಯಲ್ಲಿ ವಿನ್ಯಾಸಗೊಳಿಸುವುದಾದರೆ, ಮೊದಲ ಸಾಲಿನ ಕೊನೆಗೆ ಪ್ರಶ್ನಾರ್ಥಕ ಚಿಹ್ನೆಯನ್ನೂ, ಮೂರನೇ ಸಾಲಿನ ಕೊನೆಗೆ ಎರಡು – ಮೂರು ಚಿಕ್ಕೆಗಳನ್ನೂ ಹಾಕಬೇಕು.

ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ ….
……………………………………………………..
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ

ಮೊದಲ ಸಾಲು, ‘ಏನ್ರೀ ಮನ್ಯಾಗ ಯಜಮಾನ್ರು ಅದಾರೋ ಇಲ್ಲೋ? ಎಂದು ಮಾಮೂಲಿನಂತೆ ಕೇಳುವ ಪ್ರಶ್ನೆ ಈ ಪ್ರಶ್ನೆಗೆ ಉತ್ತರ ಒದಗುವ ಸಾಧ್ಯತೆ ಇಲ್ಲ. ಆಗ ಹೊಸ್ತಿಲು ಕಾಣುತ್ತದೆ. ಹುಲ್ಲು ಕಾಣುತ್ತದೆ. ಮನೆಯ ಒಳಗೆ ಧೂಳು ತುಂಬಿದ್ದು ಕಾಣುತ್ತದೆ. ಆಗ ಸಹಜವಾಗಿಯೇ ಮೊದಲು ಕೇಳಲಾದ ಮಾಮೂಲಿ ಪ್ರಶ್ನೆ ಪ್ರತ್ಯಕ್ಷ ಪ್ರಮಾಣ ಆಧಾರಿತ ‘ಸಂಶಯ’ವಾಗಿ ಮಾರ್ಪಡುತ್ತದೆ. ಮೊದಲಿನದು ಏರುದನಿಯ ಪ್ರಶ್ನೆಯಾಗಿದ್ದು ಎರಡನೆಯದು ಇಳಿದನಿಯ, ಬಹುಶಃ ತನಗೆ ತಾನೇ ಕೇಳಿಕೊಳ್ಳುವ, ಖಚಿತ ಉತ್ತರವನ್ನು ನಿರೀಕ್ಷಿಸಿರದಿದ್ದರೂ ಅಂಥ ಉತ್ತರವನ್ನು ಒಡಲೊಳಗೆ ಮುಚ್ಚಿಟ್ಟುಕೊಂಡು, ಪಿಸು ಮಾತಾಗುತ್ತದೆ.

ಮುಂದಿನ ಎರಡು ಸಾಲು:

ತನುವಿನೊಳಗೆ ಹುಸಿ ತುಂಬಿ.
ಮನದೊಳಗೆ ವಿಷಯ ತುಂಬಿ,

ಅದ್ಭುತವಾದ, ಸಡನ್ನಾದ ನೆಗೆತ! ಅರೆಕ್ಷಣದ ಬಿಡುವನ್ನೂ ಕೊಡದೆ ಬಸವಣ್ಣನ ಮೂವಿ ಕ್ಯಾಮೆರಾ ನಮ್ಮೆದುರು ಛಕ್ಕನೇ ಮೂಡಿಸುವ ಚಿತ್ರ ‘ತನು’ವಿನದು. ಈ ತನುವೇ ಮನೆ. ಈ ತನುವಿನಲ್ಲಿ ‘ಹುಸಿ’ ತುಂಬಿದೆ. ಹುಸಿ ಅಂದರೆ ಸುಳ್ಳು, ಮೋಸ, ಕಪಟತನ, ಆಷಾಢಭೂತಿತನ, ಹಿಪಾಕ್ರಸಿ. ಎಂದೆಲ್ಲ ಹೊಸ್ತಿಲ ಮೇಲಿನ ಹುಲ್ಲಿನಷ್ಟು ಗೋಚರ. ಕೆಲವರನ್ನು ‘ನೋಡಿ’ದರೆ ಸಾಕು, ಇವರು ಹೀಗೆ ಅಂತ ಹೇಳಬಹುದು. ನಿಂತ ನಿಲುವಿರಬಹುದು, ಗೋಣಿವ ಕೊಂಕಿರಬಹುದು, ತುಟಿಯ ವಕ್ರತೆ ಇರಬಹುದು, ಹುಬ್ಬಿನ ಡೊಂಕಿರಬಹುದು, ಕಣ್ಣಿವ ನೋಟ ಇರಬಹುದು. ಇದು ಅಂಗೈಯ ಹುಣ್ಣು: ಯಾವ ಕನ್ನಡಿಯೂ ಬೇಕಿಲ್ಲ. ಈ ತನುವಿನೊಳಗಿನ ‘ಮನ’? ಅದು ಕಣ್ಣಿಗೆ ಕಾಣುವಂತಿಲ್ಲ. ಮನೆಯ ‘ಖಾಲಿತನ’ ಅದು. ಖಾಲಿ ಮನೆಯಲ್ಲಿ ತುಂಬಿದ ರಜ (ಧೂಳಿ) ಕೂಡ ಕಾಣುವುದಿಲ್ಲ. ಬೆಳಕಿನ ಸೆಳಕು ಬಿದ್ದಾಗ ಮಾತ್ರ ಕಾಣುವಂಥದು ಅದು. ಈ ‘ಮನ’ ದಲ್ಲಿ ‘ವಿಷಯ’ ತುಂಬಿದೆ. ವಿಷಯ ಅಂದರೆ ಕಾಮ, ಕ್ರೋಧ ಇತ್ಯಾದಿ ‘ವಿಕಾರ’ ಗಳು. (ಇವಕ್ಕೆ ಷಡ್ರಿಪುಗಳು ಅನ್ನುತ್ತಾರೆ.) ಇವು ಅಮೂರ್ತ: ಕ್ರಿಯೆಗಳಾಗಿ ಅಭಿವ್ಯಕ್ತಿಗೊಂಡಾಗಲೇ ಒಂದು ರೂಪ ಲಭ್ಯ ಇವಕ್ಕೆ.

ಮೊದಲ ಮೂರು ಸಾಲುಗಳ ಮೂಲಕ ನಮ್ಮನ್ನು ‘ತಯಾರು’ ಮಾಡಿದ ಕವಿ ಬಸವಣ್ಣ ನಂತರದ ಎರಡು ಸಾಲುಗಳಲ್ಲಿ ಇಷ್ಟೆಲ್ಲವನ್ನೂ ಬಯಲು ಮಾಡಿದ್ದಾನೆ. ಬಹಿರಂಗ – ಅಂತರಂಗ. ತನು – ಮನ, ಹುಸಿ – ವಿಷಯ ಹೀಗೆ ಜೋಡು ಪದರಗಳಲ್ಲಿ ಕ್ಷಿಪ್ರವಾಗಿ ಮನುಷ್ಯನ ಬದುಕನ್ನೆ ಅನಾವರಣಗೊಳಿಸುವ ಪ್ರಕ್ರಿಯೆ ಇನ್ನೂ ಜಾರಿಯಲ್ಲಿರುವಾಗಲೇ ಹೇಳುವ ಮಾತನ್ನು ಪೂರ್ಣಗೊಳಿಸುವ ಮುನ್ನವೇ …..

ನ್ಯಾಯಾಧೀಶರು, ನಡುವೆಯೇ ಬಾಯಿ ಹಾಕಿ, “ಸಾಕು, ಸಾಕು. ಇಷ್ಟು ಸಾಕು, ಡೋಂಟ್ ಪ್ರೊಸಿಡ್” ಎನ್ನುವಂತೆ, ಅರ್ಧಸಾಲನ್ನು ಅರ್ಧಕ್ಕೇ ಬಿಟ್ಟು, ತಕ್ಷಣವೇ ತೀರ್ಪು ನೀಡುತ್ತಾನೆ ಕವಿ:

ಮನೆಯೊಳಗೆ ಮನೆಯೊಡೆಯನಿಲ್ಲ

ಅಷ್ಟೊಂದು ಆಸಕ್ತಿ ಇಲ್ಲದೆ, ‘ಹೀಗೆ’ ಅಂತಾರಲ್ಲ ಹಾಗೆ ಕೇಳಿದ ಪ್ರಶ್ನೆ, ಸ್ವಲ್ಪ ಆತಂಕದ ಅನುಮಾನವಾಗಿ ಮಾರ್ಪಟ್ಟು, ಖಚಿತ ಉತ್ತರವನ್ನು ನಿರ್ಣಯವನ್ನು ಪಡೆಯುವ ಈ ವಚನದ ವಿನ್ಯಾಸ, ಬಿದ್ದ ಬೀಜ ಮೊಳಕೆಯೊಡೆದು ಸಸಿಯಾಗಿ ಗಿಡವಾಗಿ ಹೆಮ್ಮರವಾಗಿ ನೋಡನೋಡುತ್ತಲೇ ಹೂ ಬಿಟ್ಟು ಕಾಯಿಯಾಗಿ ಹಣ್ಣಾಗಿ ಅಸಂಖ್ಯ ಬೀಜಗಳನ್ನು ಹಡೆಯುವ ಸೃಷ್ಟಿಕ್ರಿಯೆಯ ವಿನ್ಯಾಸದಷ್ಟು ಸಹಜವಾಗಿದೆ. ಅದೂ ಕೇವಲ ಇಪ್ಪತ್ತು ಪದಪುಂಜಗಳಲ್ಲಿ!

*

ಹಾಗಾದರೆ ಕೊನೆಯಲ್ಲಿ ಬರುವ ‘ಕೂಡಲ ಸಂಗಮದೇವ’? ಇದು ಏನು? ಇವನು ಯಾರು?

ನಾವೆಲ್ಲ ವಚನಕಾರರನ್ನು ಗುರುತಿಸುವುದು ಅವರು ವಚನಗಳ ಕೊನೆಗೆ ಹಾಕಿಕೊಂಡಿರುವ ಅಂಕಿತನಾಮಗಳ ಮೂಲಕ: ಗುಹೇಶ್ವರ, ರಾಮನಾಥ, ಕೂಡಲಸಂಗಮದೇವ, ಚೆನ್ನಮಲ್ಲಿಕಾರ್ಜನ ಇತ್ಯಾದಿ. ಇವು ಕೇವಲ ಗುರುತಿನ ಗೊಂಡೆ (ಐಡೆಂಟಿಟಿ ಟ್ಯಾಗ್) ಅಲ್ಲ. ಇನ್ನೂ ಏನೇನೋ ಅರ್ಥಗಳಿವೆ ಅನ್ನುತ್ತಾರೆ ಸಂಶೋಧಕರು. ನಾನೆಂದುಕೊಂಡಂತೆ ಬಸವಣ್ಣನಿಗೆ ಕೂಡಲಸಂಗಮದೇವ ಅವನ ಅನ್ವೇಷಣೆಯ ಅಂತಿಮ ಸತ್ಯದ ಶಬ್ದರೂಪವಾಗಿದ್ದ ಅಥವಾ ಡಾ. ಚಿದಾನಂದಮೂರ್ತಿಯವರು (ಎಲ್ಲೋ) ಹೇಳುವಂತೆ, ಈ ಅಂಕಿತನಾಮಗಳು ಆಯಾ ವಚನಕಾರರಿಗೆ ‘ಆತ್ಮಸಾಕ್ಷಿ’ ಗಳಾಗಿದ್ದವೇನೋ. ಅಂದರೆ ವಚನಗಳು, ಈ ಇಷ್ಟಲಿಂಗದ ಆತ್ಮಸಾಕ್ಷಿಗಳೊಂದಿಗೆ ವಚನಕಾರರು ನಡೆಸುವ ಸಂವಾದ, ಸಂಭಾಷಣೆಯಾಗಿರಬಹುದು; ಅವುಗಳಿಗೆ ಸಲ್ಲಿಸುವ ‘ವರದಿ’ ಗಳಾಗಿರಬಹುದು: ಆತ್ಮನಿವೇದನೆ (ಕನ್ಫೆಶನ್) ಆಗಿರಬಹುದು …. ಒಟ್ಟಿನಲ್ಲಿ ವಚನಗಳು ಅಂಕಿತಗಳು ಅನೇಕ ಅರ್ಥಸಾಧ್ಯತೆಗಳ ಆಕರಗಳಾಗಿವೆ.

ಮಾತಿಗೊಂದು ಸನ್ನಿವೇಶ – ಎಂದು ಪ್ರಸ್ತಾಪಿಸಿದೆ. ‘ಮನೆಯೊಳಗೆ ಮನೆಯೊಡೆಯ’ ವಚನದ ಸನ್ನಿವೇಶ ಹೀಗಿರಬಹುದಲ್ಲವೇ ಎಂದು ಕಲ್ಪಿಸಿಕೊಳ್ಳಲು ನನ್ನ ಮನವಿ.

ಬಸವಣ್ಣ ಲಿಂಗ ಪೂಜೆ ಸಾಗಿದೆ. ಅದು ಅವನ ನಿತ್ಯದ ವಿಧಿ, ಕೈಯಲ್ಲಿ ಇಷ್ಟಲಿಂಗವಿದೆ. ಪೂಜೆಯ ಪ್ರಕ್ರಿಯೆಗಾಗಿ ಇಡೀ ತನು, ಇಡೀ ಮನ ರೆಡಿಯಾಗಬೇಕು. ಆದರೆ ಯಾಕೋ ಎಡವಟ್ಟಾಗುತ್ತಿದೆಯಲ್ಲ. ಏಕಾಗ್ರತೆ ಸಾಧಿಸುತ್ತಿಲ್ಲ. ಬಿಜ್ಜಳನ ಆಸ್ಥಾನದ ಮಂತ್ರಿಗಿರಿ, ಅತ್ತ ಮಹಾಮನೆಯ ಜವಾಬ್ದಾರಿ. ಅನೇಕ ಆರೋಪಗಳು, ಅಪವಾದಗಳು. ಚಾಡಿ ಹೇಳುವವರ ಬಗ್ಗೆ ಕ್ರೋಧವಿದೆ. ತನಗೆ ಭಕ್ತಿ ಭಂಡಾರಿ ಎಂಬ ಹೆಸರಿದೆ. ಈ ಭಂಡಾರವನ್ನು ಇನ್ನೂ ಹಿಗ್ಗಿಸಬೇಕು ಎಂಬ ಲೋಭ ತನ್ನನ್ನು ಕಾಡುತ್ತಿದೆಯೇ? ಇತರ ಶಿವಶರಣರು ತನಗಿಂತ ಹೆಚ್ಚಿನ ಸಿದ್ಧಿ ಪಡೆಯುತ್ತಿದ್ದಾರೆಂದು ಅವರ ಬಗ್ಗೆ ಮತ್ಸರವೇ ತನಗೆ?’ ಎನಗಿಂತ ಕಿರಿಯರಲ್ಲ’ – ಎಂದು ವಿನಯದಿಂದ ಹೇಳುವ ಮಾತಿನಲ್ಲಿ ಶ್ರೇಷ್ಟ ಜಾತಿಯ ಬ್ರಾಹ್ಮಣನಾದ ತನ್ನಲ್ಲಿ ಸೂಕ್ಷ್ಮರೀತಿಯ ಗುಪ್ತಗಾಮಿನಿ ‘ಮದ’ ಹರಿಯುತ್ತಿರಬಹುದೆ? ಮನೆಯಲ್ಲಿ ಇಬ್ಬರು ಹೆಂಡಿರು: ಅವರು ಸವತಿಯರಂತೆ ಕಾದಾಡುತ್ತಿಲ್ಲ ಎಂಬ ಸಮಾಧಾನವೇನೋ ಇದೆ. ಆದರೆ ಒಬ್ಬಳ ಬಗ್ಗೆ ಮೋಹ, ಇನ್ನೊಬ್ಬಳ ಬಗ್ಗೆ ಕಾಮ. ‘ಗಂಡ’ ನಾದವನಿಗೆ ಇವು ಸಹಜವಾಗಿ ಇರಬೇಕಾದ ಬಯಕೆಗಳೇ ಆಗಿದ್ದರೂ, ಇವು ಷಡ್ರಿಪುಗಳ ಪೈಕಿ ಅಂತ ಹಿರಿಯರು ಹೇಳುತ್ತಾರಲ್ಲ! ಏನು ಮಾಡಲಿ? ಶಿವಶಿವಾ!!

ಇಂಥ ಲಹರಿಯಲ್ಲಿ ಇರಬಹುದಾದ ಬಸವಣ್ಣ ಅವಸರವಸರದಲ್ಲಿ ಪೂಜೆ ಮುಗಿಸಿ ಎದ್ದಿರಬೇಕು .. ಮುಂದೊಂದು ಗಳಿಗೆಯಲ್ಲಿ emotions recollected in tranquillity ಎಂದು ವರ್ಡ್ಸವರ್ತ್ ಹೇಳಿದಂತೆ, ಈ ತಾಕಲಾಟವನ್ನು ಮೆಲಕು ಹಾಕುತ್ತಾ ‘ಮನೆ’ಯ ರೂಪಕದ ಮೂಲಕ ಕವನ ಕಟ್ಟಿರಬೇಕು. ಆನಂತರ, ‘ನೋಡಪ್ಪಾ ಕೂಡಲ ಸಂಗಮದೇವಾ. ಇದು ಈ ನಿನ್ನ ಭಕ್ತನ ಪರಿಸ್ಥಿತಿ, ನಿನಗಂತೂ ವರದಿ ಸಲ್ಲಿಸಿದ್ದೇನೆ. ನೀನೇ ನನ್ನ ಸಾಕ್ಷಿ, ಪುರಾವೆ, ಪ್ರಮಾಣ, ನೀನೇ ನನ್ನ ಪಾಲಿನ ಪಂಚಪರಮೇಶ್ವರ “ಎಂದು ಮನಸ್ಸು ನಿರಂಬಳ ಮಾಡಿಕೊಂಡು ತನ್ನ ಕಾಯಕಕ್ಕೆ ಮರಳಿರಬೇಕು.

ಈ ವಚನದ ‘ಸಂದೇಶ’ವೇನು? ‘ನೀತಿಪಾಠ’ವೇನು? …. ಇದನ್ನೆಲ್ಲ ನಾವು ಸಾವಿರಾರು ವೇದಿಕೆಗಳಿಂದ ಮಠಾಧಿಪತಿಗಳ ಮೂಲಕ, ಪ್ರವಚನಕಾರರ ಮತ್ತು ಭಾಷಣಕಾರರ ಮೂಲಕ ಕೇಳಿದ್ದೇವೆ. ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ ಇದ್ದವರನ್ನು ಮಾತ್ರ ದೇವರು ಮೆಚ್ಚುತ್ತಾನೆ ಎಂದು ಮಹಾತ್ಮಾ ಬಸವೇಶ್ವರರು ಹೇಳಿದ ಆದರ್ಶವನ್ನು ಪಾಲಿಸಬೇಕು – ಎಂದು ಸಾಮಾನ್ಯವಾಗಿ ವೇದಿಕೆಗಳಿಂದ ಬಹಿರಂಗವಾಗಿ ಸಾರಲ್ಪಡುವ ಸಂದೇಶ ಒಂದು ನೆಲೆಯದು. ಇನ್ನೂ ಒಂದು ಸೂಕ್ಷ್ಮ ನೆಲೆಯ ಪಿಸುಮಾತಿನ ನೆಲೆಯೆಂದರೆ; ಅಂಥಾ ಬಸವಣ್ಣನಂಥಾ ಬಸವಣ್ಣನ್ನೇ ಈ ಕಾಮಕ್ರೋಧ ಇತ್ಯಾದಿಗಳು ಬಿಡಲಿಲ್ಲ. ಇನ್ನು ನಮ್ಮಂಥಾ ಸಾಮಾನ್ಯರ ಪಾಡೇನು? ಅವನು ನಮ್ಮ ಅಣ್ಣ; ನಾವು ಅವನ ತಮ್ಮಂದಿರು. ನಾವೂ ಅವನ ಹಾಗೇ ಇದ್ದು ಬಿಡೋಣ. ನಮಗೆ ಮಹಾತ್ಮ ಬಸವೇಶ್ವರರಿಗಿಂತ ನಮ್ಮಣ್ಣ ಬಸವಣ್ಣನೇ ಇರಲಿ.

ಕವನಕ್ಕೊಂದು ‘ಶಿಲ್ಪ ಇರಬೇಕು’ ಎಂಬುದು ಎಲ್ಲ ಕಾಲದ ಕಾವ್ಯ ಮೀಮಾಂಸಕರ ಮಾತು. ಪಾಶ್ಚಾತ್ಯ ವಿಮರ್ಶೆಯಲ್ಲಿ ಪ್ರಚಲಿತವಿರುವ ಇಂಥ ಮಾನದಂಡವನ್ನೇ ‘ಸಾವಯವ ಶಿಲ್ಪದ ಸಮಗ್ರೀಕರಣ ಬಲ’ ಎಂಬ ಆಕರ್ಷಕ ನುಡಿಗಟ್ಟಿನೊಂದಿಗೆ ಪ್ರಚಾರಕ್ಕೆ ತಂದವರು ಅಡಿಗರು. ಈ ನೆಲೆಯಲ್ಲಿ ಕೂಡ ಬಸವಣ್ಣನ ಈ ವಚನದ ಪುನರುಕ್ತಿಗಳು, ಸಮಾಂತರಗಳು, ಸಮೀಕರಣ ವೈರುಧ್ಯ ಸಮತೋಲನಗಳು, ಮುಖ್ಯವಾಗಿ ನಮ್ಮ ವಿಮರ್ಶಕರಿಂದ ವಿವರವಾಗಿ ಚರ್ಚಿಸಲ್ಪಟ್ಟಿವೆ.

ನಾನು ಇಲ್ಲಿ ನೀಡಿರುವುದು: ‘ಮನೆಯೊಳಗೆ ಮನೆಯೊಡೆಯ’ ವಚನವೂ ಓದುಗನಾದ ನನ್ನನ್ನು ಒಳಗು ಮಾಡಿಕೊಂಡು ನನ್ನ ಮೂಲಕ ಕೆಲವು ಹೊಳವುಗಳನ್ನು ಹೊರಗೆಡವಿದ ಪರಿಯನ್ನು ಮಾತ್ರ.

ಒಂದು ಒಳ್ಳೆಯ ಕವನ ಮಾಡುವುದು ಇದನ್ನೇ ಅಲ್ಲವೇ?

-೨೦೦೧