ಸಮ್ಮೇಳನ ಮುಗಿದ ಮುರುದಿನ ಟಿವಿ ವರದಿಗಾರರೊಬ್ಬರು ಕೇಳಿದ ಪ್ರಶ್ನೆ: “ಚಂಪಾ ಅವರೆ, ನೀವು ಮರೆಯಲಾಗದ ದೃಶ್ಯಗಳು ಯಾವುವು? ”

ಒಂದು ಕ್ಷಣ ನಾನು ಕಣ್ಣು ಮುಚ್ಚಿಕೊಂಡೆ …. … ಜನ ….. ಜನ. ….. ಜನ….. ..

ರಾಜಕುಮಾರ ವೇದಿಕೆಯ ಕುವೆಂಪು ಸಭಾಂಗಣ, ಲಂಕೇಶ್ ವೇದಿಕೆಯ ಅಂಬೇಡ್ಕರ್‌ಭವನ, ಹೇಮಾಂಗಣ ಕುವೆಂಪು ರಂಗಮಂದಿರ, ಊಟದ ಜಾಗ, ಪುಸ್ತಕ ಮಳಿಗೆಗಳು, ಶಿವಮೊಗ್ಗದ ಅಂಗಡಿ ಮುಂಗಟ್ಟುಗಳು, ನಗರದ ರಸ್ತೆ ರಸ್ತೆಗಳು, ಕಣ್ಣು ಹಾಯಿಸಿದ ಕಡೆಗೆಲ್ಲ ಜನ …. ಜನ…. ಮೊದಲ ದಿನದ ಭುವನೇಶ್ವರಿಯ ಮೆರವಣಿಗೆಯ ಆ ಜನಸಾಗರ ಮುಂದಿನ ಮೂರು ದಿನಗಳಲ್ಲಿ ಉಕ್ಕೇರುತ್ತಲೇ ಹೋಯಿತು.

ಉಪಮುಖ್ಯಮಂತ್ರಿ ಯಡಿಯೂರಪ್ಪ ಮೊದಲೇ ಹೇಳಿದ್ದರು: “ಶಿವಮೊಗ್ಗ ಸಮ್ಮೇಳನವನ್ನು ನ ಭೂತೋ ನ ಭವಿಷ್ಯತಿ ಎಂಬಂತೆ ಮಾಡಿ ತೋರಿಸುತ್ತೇವೆ”, ನನಗೆ ಪೂರ್ತಿ ವಿಶ್ವಾಸವಿರಲಿಲ್ಲ. ನ ಭೂತೋ ಒಪ್ಪಬಹುದು. ಭವಿಷ್ಯದ ಬಗ್ಗೆ ಏನು ಹೇಳಲು ಸಾಧ್ಯ? ಆದರೆ ಮೆರವಣಿಗೆಯ ನಂತರ ಸಮ್ಮೇಳನಾಧ್ಯಕ್ಷ ನಿಸಾರ ಮತ್ತು ರಾಷ್ಟ್ರಕವಿ ಜಿ.ಎಸ್‌.ಎಸ್ ಅವರಿಗೆ ನೀಡಲಾದ ಪೌರ ಸನ್ಮಾನದ ವೇದಿಕೆಯಿಂದ ನನ್ನ ಮೊದಲ ಕಂತಿನ ಭಾಷಣದಲ್ಲಿ ಹೇಳಿದೆ: “ಇಂಥ ಜನಸ್ತೋಮವನ್ನು ಮುಂದೆ ಕಂಡೇನೆಂಬ ಗ್ಯಾರಂಟಿ ನನಗಿಲ್ಲ.”

ಸಚಿವ ಈಶ್ವರಪ್ಪ: “ಸಮ್ಮೇಳನದ ಮುನ್ನ ಉಂಟಾಗಿರುವ ಗೊಂದಲಗಳೆಲ್ಲಾ ಈ ಮಹಾಸಾಗರದ ಹೊಡೆತಕ್ಕೆ ಕೊಚ್ಚಿ ಹೋಗಿವೆ.” ಅವರ ಮಾತಿಗೊಂದು ಹಿನ್ನೆಲೆ ಇತ್ತು.

*

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ನವೆಂಬರ್‌೨೦೦೪ ರಲ್ಲಿ ನಾನು ಆಯ್ಕೆಗೊಂಡ ನಂತರ ೨೦೦೬ ರ ಜನವರಿಯಲ್ಲಿ ಬೀದರದಲ್ಲಿ ೭೨ನೆಯ ಮತ್ತು ಡಿಸೆಂಬರಿನಲ್ಲಿ ಶಿವಮೊಗ್ಗದಲ್ಲಿ ೭೩ನೆಯ ಸಾಹಿತ್ಯ ಸಮ್ಮೇಳನ. ಬೀದರಿನಲ್ಲೂ ಅನೇಕ ಗೊಂದಲಗಳಿದ್ದವು. ಆದರೆ ಶಿವಮೊಗ್ಗದ ಗೊಂದಲಗಳೇ ಬೇರೆ. ಇವುಗಳ ಸ್ಥೂಲ ಸ್ವರೂಪದ ಅಂದಾಜು ನನಗೆ ಮೊದಲೇ ಇತ್ತು. ಅನೇಕ ತಿಂಗಳುಗಳ ಮೊದಲೇ ಪತ್ರಿಕಾ ಗೋಷ್ಠಿಯಲ್ಲಿ ವೈಯಕ್ತಿಕ ನೆಲೆಯಲ್ಲಿಯೇ ಮೊಟ್ಟ ಮೊದಲ ಬಾರಿ ಅಲ್ಪಸಂಖ್ಯಾತ ಸಮುದಾಯದ ಒಬ್ಬ ಹಿರಿಯ ಸಾಹಿತಿ ಶಿವಮೊಗ್ಗ ಸಮ್ಮೇಳನಕ್ಕೆ ಆಯ್ಕೆಯಾಗಬೇಕೆಂಬುದು ನನ್ನ ಬಯಕೆ ಅಂತ. ಒಂದು ಕಾಲಕ್ಕೆ ಸಮಾಜವಾದಿ ಚಳುವಳಿಗಳ ನಮ್ಮ ಸಮ್ಮೇಳನ ಧರ್ಮ ನಿರಪೇಕ್ಷತೆ ಹಾಗೂ ಕೋಮು ಸಾಮರಸ್ಯದ ನೆಲೆಯಲ್ಲಿ ಉತ್ತರ ನೀಡಲಿದೆ ಎಂದು ಸೂಚಿಸಿದ್ದೆ.

*

ವರ್ಷದ ಪ್ರಾರಂಭದಲ್ಲಿಯೇ ರಾಜ್ಯದಲ್ಲಿ ಜೆಡಿ (ಎಸ್) – ಬಿಜೆಪಿ ಮೈತ್ರಿ ಸರಕಾರ ಅಸ್ತಿತ್ವದಲ್ಲಿ ಬಂದಿತ್ತು. ಉಪಮುಖ್ಯಮಂತ್ರಿ ಯಡಿಯೂರಪ್ಪನವರೇ ಹಣಕಾಸು ಸಚಿವರು: ಸಮ್ಮೇಳನದ ಸ್ಥಳೀಯ ಸ್ವಾಗತ ಸಮಿತಿಯ ಅಧ್ಯಕ್ಷರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಕೂಡ. ಜಿಲ್ಲೆಯ ಇನ್ನಿಬ್ಬರು ಸಚಿವರಾದ ಶಂಕರಮೂರ್ತಿ ಮತ್ತು ಈಶ್ವರಪ್ಪ ಕೂಡ ಅದೇ ಪಕ್ಷ. ಇಂಥ ವಿಶಿಷ್ಟ ರಾಜಕೀಯ ಹಿನ್ನೆಲೆಯಲ್ಲಿ ನಾಡಿನ ಸಾಹಿತ್ಯಿಕ ಸಾಂಸ್ಕೃತಿಕ ಹಬ್ಬವಾಗಿ ನಡೆಯಬೇಕಾಗಿದ್ದ ಸಮ್ಮೇಳನ ಅನೇಕ ಗೊಂದಲಗಳಿಗೆ ಅವಕಾಶ ಮಾಡಿಕೊಟ್ಟರೂ ಕೊನೆಯಲ್ಲಿ ‘ಜನತೆಯ ವಿಜಯೋತ್ಸವ’ ವಾಗಿಯೇ ಹೊರಹೊಮ್ಮಿದ್ದು ಮಾತ್ರ ಐತಿಹಾಸಿಕ ದಾಖಲೆಯೇ.

ಒಂದು ವರ್ಷಕ್ಕೂ ಮೊದಲೇ ಸಮ್ಮೇಳನದ ತಯಾರಿ ಮಾಡಿಕೊಂಡವರು ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ ಮತ್ತು ಅವರ ಉತ್ಸಾಹಿ, ಕ್ರಿಯಾಶೀಲ ಸಂಗಾತಿಗಳ ತಂಡ. ಸಮಾಜದ ಎಲ್ಲ ವರ್ಗದವರನ್ನು, ಎಲ್ಲ ಪೀಳಿಗೆಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಹರ್ನಿಶಿ ದುಡಿದವರು ಅವರು. ಒಟ್ಟು ೩೫ ಸಮಿತಿಗಳು: ಆಯಾ ಸಮಿತಿಗೆ ನಿರ್ದಿಷ್ಟ ಕೆಲಸ: ನಿರಂತರ ಪತ್ರ ವ್ಯವಹಾರ ಮತ್ತು ಸಂಪರ್ಕ ಸಭೆಗಳು ಜೊತೆಗೇ, ಇಂಥ ಸಂದರ್ಭಗಳಲ್ಲಿ ಹುಟ್ಟಿಕೊಳ್ಳುವ ಭಿನ್ನಮತ, ಅಸೂಯೆಗಳು, ಚಿಲ್ಲರೆ ರಾಜಕೀಯಗಳು, ಗುಂಪಾಗಾರಿಕೆಗಳು. ಎಲ್ಲವನ್ನೂ ಬೆನ್ನಿಗೇ ಕಟ್ಟಿಕೊಂಡೇ ಕುದಿಯುವ ಕಡಲಲ್ಲೂ ಈಸಿ ಜೈಸಿದವರು ಮಂಜುನಾಥ.

ಸರಕಾರದಿಂದ ಒಂದು ಕೋಟಿ ರೂ. ಬಿಡುಗಡೆ ಮಾಡಿಸಿದವರು ಯಡಿಯೂರಪ್ಪ. ಕೊಕ್ಕೆ ಹಾಕಲು ಪ್ರಯತ್ನಿಸಿದ ವಿಧಾನಸೌಧದ ಅಧಿಕಾರಶಾಹಿಯನ್ನು ದಬಾಯಿಸಿದ ಅವರು ಜಿಲ್ಲಾಧಿಕಾರಿ ಅನಿಲಕುಮಾರರ ಆಡಳಿತ ಯಂತ್ರವನ್ನು ಸಂಪೂರ್ಣವಾಗಿ ತೊಡಗಿಸಿಕೊಂಡರು: ಸಂಗಾತಿ ಸಚಿವರೊಂದಿಗೆ ಸ್ಥಳದಲ್ಲೇ ಬೀಡುಬಿಟ್ಟು ಮಹಾಮನೆಯ ಯಜಮಾನರಾಗಿ ನಾಲ್ಕೂ ದಿನದ ಹಬ್ಬವನ್ನು ಅನನ್ಯ ರೀತಿಯಲ್ಲಿ ನಡೆಸಿಕೊಟ್ಟ ಉಪಮುಖ್ಯಮಂತ್ರಿಗಳದು ಸಮ್ಮೇಳನದ ಯಶಸ್ಸಿನಲ್ಲಿ ಸಿಂಹಪಾಲು. ಹಾಗೆಯೇ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಎಲ್. ಭೈರಪ್ಪ ಮತ್ತು ಜಿಲ್ಲಾಧ್ಯಕ್ಷ ಎನ್. ದೇವಾಡಿಗ ಅವರು ಸರಕಾರಿ ನೌಕರರ ಒಂದು ದಿನದ ಸಂಬಳವನ್ನು ಸಮ್ಮೇಳನಕ್ಕೆ ಧಾರೆಯೆರೆದದ್ದಂತೂ ಅವಿಸ್ಮರಣೀಯ ಸಂಗತಿ.

ಈ ಸಮ್ಮೇಳನಕ್ಕೆ ಅಧ್ಯಕ್ಷರನ್ನಾಗಿ, ಶಿವಮೊಗ್ಗದವರೇ ಆದ ನಮ್ಮ ನಿತ್ಯೋತ್ಸವದ ಜನಪ್ರಿಯ ಕವಿ ನಿಸಾರ ಅಹಮದರನ್ನು ಆರಿಸಬೇಕೆಂಬ ನನ್ನ ಸಂಕಲ್ಪಕ್ಕೆ ಬೆಂಬಲವಾಗಿ ಗಟ್ಟಿಯಾಗಿ ನಿಂತವರು ನಮ್ಮ ಕೋಶಾಧಿಕಾರಿ ಪುಂಡಲೀಕ ಹಾಲುಂಬಿ ಮತ್ತು ಗೌರವ ಕಾರ್ಯದರ್ಶಿ ಜರಗನಹಳ್ಳಿ ಶಿವಶಂಕರ. (ಈ ಮೊದಲು ಪುನರೂರು ಕಾಲದಲ್ಲಿ ತುಮಕೂರು ಸಮ್ಮೇಳನಕ್ಕೆ ನಿಸಾರರನ್ನು ಆರಿಸಲು ಪ್ರಯತ್ನ ನಡೆದಿತ್ತು. ಆದರೂ ಏನೇನೋ ಲಾಬಿ ಮಾಡಿದ ನಮ್ಮ ಜ್ಞಾನಪೀಠ ಅನಂತಮೂರ್ತಿ ತಮ್ಮ ಪಾರಂಪರಿಕ ಶೈಲಿಯಲ್ಲಿ ಅಧ್ಯಕ್ಷ ಪಟ್ಟವನ್ನು ಹೊಡೆದುಕೊಂಡು ಬಿಟ್ಟಿದ್ದರು!)

ನಿಸಾರರ ಆಯ್ಕೆ ಸುಲಭವಾಗಿರಲಿಲ್ಲ. ಸಮ್ಮೇಳನಾಧ್ಯಕ್ಷ ಸ್ಥಾನಕ್ಕೆ ಖಾಯಂ ಆಕಾಂಕ್ಷಿಯಾಗಿರುವ ಚಿದಾನಂದಮೂರ್ತಿಯವರ ಪರವಾಗಿ ಪ್ರಬಲವಾದ ಲಾಬಿ ಸುರುವಾಗಿತ್ತು. ಅವರು ಸಂಘ ಪರಿವಾರಕ್ಕೆ ಆಸ್ಥಾನ ಗುರುವಾಗಿರುವುದೂ ಇತ್ತೀಚಿಗೆ ಚೆಡ್ಡಿ ಸಂಶೋಧಕರೆಂಬ ಅಪಖ್ಯಾತಿಗೆ ಗುರಿಯಾಗಿರುವುದೂ ಇದಕ್ಕೆಲ್ಲ ಕಾರಣವಾಗಿತ್ತು. ಜೊತೆಗೇ ಯಡಿಯೂರಪ್ಪ ನೇತೃತ್ವದ ಸ್ವಾಗತ ಸಮಿತಿ ಕಳಿಸಿದ ಪಟ್ಟಿಯಲ್ಲಿಯೂ ನಿಸಾರರಿಗೆ ಸ್ಥಾನವಿರಲಿಲ್ಲ. (ಪಟ್ಟಿಯ ಹೆಸರುಗಳು: ತೇಜಸ್ವಿ, ಎಲ್. ಬಸವರಾಜು ಮತ್ತು ನಾ. ಡಿಸೋಜ.)

ಆದರೆ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅನೇಕ ಹೆಸರುಗಳು ಪ್ರಸ್ತಾಪವಾದರೂ ಕೊನೆಗೆ ‘ಸರ್ವಾನುಮತ’ ದಿಂದ ಸ್ವೀಕೃತವಾದ ಹೆಸರು ನಿಸಾರರದು. ಒಂದು ದಾಖಲೆ ಮಾಡಿದ ತೃಪ್ತಿ ನಮಗೆಲ್ಲ. ಆನಂತರ ದಿನಗಳಲ್ಲಿ ಕೂಡ ಮಾಧ್ಯಮಗಳಲ್ಲಿ, ಸಾರ್ವಜನಿಕ ವಲಯದಲ್ಲಿ ಎಲ್ಲೂ ಅಪಸ್ವರ ಕೇಳಲಿಲ್ಲ. ಯಡಿಯೂರಪ್ಪನವರೇ ಮುಂದಾಗಿ ನಿಸಾರರ ಮನಗೆ ತೆರಳಿ ಅಧಿಕೃತವಾದ ಆಹ್ವಾನ ನೀಡಿದ್ದು ವಿಶೇಷ.

ಅಲ್ಪಾ ಸಂಖ್ಯಾತ – ವಿರೋಧಿ ಎಂದೇ ಕುಖ್ಯಾತಿಗೊಳಗಾಗಿರುವ ರಾಜಕೀಯ ಪಕ್ಷವೊಂದಕ್ಕೆ ಇದರ ‘ರಾಜಕೀಯ ಲಾಭ’ ಸಿಗುವುದು ನಿಶ್ಚಿತ ಎಂದು ಜನ ಆಡಿಕೊಂಡರು. ಮೊದಲ ದಿನದ ಮೆರವಣಿಗೆಯಲ್ಲಿ ತೆರೆದ ವಾಹನದಲ್ಲಿ ತಾಸುಗಟ್ಟಲೆ ನಿಸಾರ ದಂಪತಿಗಳೊಂದಿಗೆ ನಿಂತವರು: ಕಸಾಪ ಅಧ್ಯಕ್ಷನಾಗಿ ನಾನು ಹಾಗೂ ಯಡಿಯೂರಪ್ಪ, ಶಂಕರಮೂರ್ತಿ, ಈಶ್ವರಪ್ಪ ತ್ರಿಮೂರ್ತಿಗಳು. ಶಿವಮೊಗ್ಗದಲ್ಲಿ ಸೇರಿದ ಅರವತ್ತು ಸಾವಿರ ಜನರಲ್ಲದೆ ಆ ದೃಶ್ಯವನ್ನು ಟಿವಿ ಮಾಧ್ಯಮಗಳ ನೇರ ಪ್ರಸಾರದ ಮೂಲಕ ವೀಕ್ಷಿಸಿದವರು, ‘ಎಲ್ಲಾದರೂ ಇರು ಎಂತಾದರೂ ಇರು’ ಎಂಬ ಕವಿವಾಣಿಯಂತೆ ಜಗತ್ತಿನ ತುಂಬ ಎಲ್ಲೆಲ್ಲೋ ತುಂಬಿಕೊಂಡಿದ್ದ ಕೋಟ್ಯಂತರ ಕನ್ನಡಿಗರು.

*

ಡಿಸೆಂಬರ ೨೦ರ ಅದೇ ಮುಂಜಾನೆಯ ಸನ್ನಿವೇಶಗಳು: ಎರಡು ಪ್ರತಿಭಟನೆಗಳು ಮತ್ತು ಒಂದು ಪತ್ರಿಕಾಗೋಷ್ಠಿ.

ಮೊದಲ ಪ್ರತಿಭಟನೆ ಸ್ಥಳಿಯ ಎಬಿವಿಪಿ ಕಾರ್ಯಕರ್ತರದು. ಇದೊಂದು ಸಂಘ ಪರಿವಾರದ ಅಂಗ ಸಂಸ್ಥೆ. ಅವರ ತಕರಾರು, ಸಮ್ಮೇಳನದ ಎರಡು ಗೋಷ್ಠಿಗಳಲ್ಲಿ ಪಾಲುಗೊಳ್ಳಲಿದ್ದ ಗೌರಿ ಲಂಕೇಶ ಮತ್ತು ವಿಠ್ಠಲ ಹೆಗಡೆ ಕಲ್ಕಳಿ ಅವರ ವಿರುದ್ಧ: ಈರ್ವರೂ ನಕ್ಸಲ್ ಚಳುವಳಿಯ ಬೆಂಬಲಿಗರು: ಮಲೆನಾಡಿನ ನೆಮ್ಮದಿಗೆ ಭಂಗ ತರುತ್ತಿರುವವರು: ಸಮಾಜ ವಿರೋಧಿಗಳು ಇತ್ಯಾದಿ. “ಅವರ ಪೂರ್ವಾಪರಗಳು ನಿಮಗೆ ಗೊತ್ತೇ?” ಕೇಳಿದರು. ‘ಚಂಪಾ, ಇದೇನು ರಂಪಾ?’ ಎಂಬ ಪ್ಲಕರ್ಡ್ ಹಿಡಕೊಂಡು ಕುಂಕುಮಧಾರಿ ಯುವಕರು. “ಅವರ ಪೂರ್ವಾಪರಗಳೂ ಗೊತ್ತು. ನಿಮ್ಮ ಪೂರ್ವಾಪರಗಳೂ ಗೊತ್ತು.”ಎಂದೆ ನಾನು. “ಯಾವ ಗೋಷ್ಠಿ. ಯಾರ ಭಾಷಣ ಇತ್ಯಾದಿ ನಮ್ಮ ಕಾರ್ಯಕಾರಿ ಸಮಿತಿ ನಿರ್ಧರಿಸಿದ್ದು. ಅವರಿಗೆ ನಿಮ್ಮ ಬೇಡಿಕೆ ಸಲ್ಲಿಸುವೆ” ಅಂತ ಸ್ಪಷ್ಟಪಡಿಸಿದೆ.

‘ಗದ್ದರ್‌ಅಂತರಾಷ್ಟ್ರೀಯ ಖ್ಯಾತಿಯ ನಕ್ಸಲೈಟ್ ಕಲಾವಿದ ಇದ್ದಾರೆ, ನಿಮಗೆ ಗೊತ್ತೆ? ಎಂಬ ನನ್ನ ಪ್ರಶ್ನೆಗೆ ಗೊತ್ತು ಗೊತ್ತು ಅಂದರು. “ಅಂಥ ಗದ್ದರ್‌ ಅವರನ್ನು ನಮ್ಮ ಚಿತ್ರದುರ್ಗ ಶರಣರು ಕರೆಸಿಕೊಂಡು ಬಸವಶ್ರೀ ಪ್ರಶಸ್ತಿ ನೀಡಿ ಒಂದು ಲಕ್ಷ ರೂ. ಕೊಟ್ಟರು. ಆ ಶರಣರೂ ನಮ್ಮ ಸಮ್ಮೇಳನದಲ್ಲಿ ವಚನಗೋಷ್ಠಿ ಉದ್ಘಾಟಿಸಲಿದ್ದಾರೆ. ಅವರ ಬಗ್ಗೆ ಏನಂತೀರಿ?” ನನ್ನ ಪ್ರಶ್ನೆಗೆ ಕುಂಕುಮಧಾರಿಗಳು ಏನೂ ಅನ್ನುವಂತಿರಲಿಲ್ಲ! ಬಾಯಿ ಬಂದು ಮಾಡಿಕೊಂಡು ಧಿಕ್ಕಾರ ಹೇಳುತ್ತಾ ಚದುರಿದರು.

ಇನ್ನೊಂದು ಪ್ರತಿಭಟನೆ, ರಾಷ್ಟ್ರಧ್ವಜ ಮತ್ತು ಪರಿಷತ್ತಿನ ಧ್ವಜಾರೋಹಣದ ಕಾಲಕ್ಕೆ. ಸ್ಥಳೀಯ ಜೆ.ಡಿ. (ಎಸ್) ಕಾರ್ಯಕರ್ತರಿಂದ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಚಂಪಾ ಅವಮರ್ಯಾದೆ ಮಾಡಿದ್ದಾರೆ – ಎಂಬುದು ಈ ಗುಂಪಿನ ಆರೋಪ. ಅಂದಿನ ಪತ್ರಿಕೆಗಳಲ್ಲಿ ಮುಖಪುಟದಲ್ಲೇ ರಾರಾಜಿಸಿದ ಈ ಪ್ರಹಸನದ ವಿವರಗಳನ್ನು ವಾಚಕರು ಪರಾಂಬರಿಸಬೇಕು. ಬೀದರ ಸಾಹಿತ್ಯ ಸಮ್ಮೇಳನಕ್ಕೆ ಮುನ್ನವೇ, ನೆರೆಯ ರಾಜ್ಯದ ಗಣ್ಯ ಸಾಹಿತಿಯೊಬ್ಬರಿಂದ ಸಮ್ಮೇಳನದ ಉದ್ಘಾಟನೆ ಮಾಡಿಸುವ ಇಂಗಿತ ಬಹಿರಂಗಗೊಳಿಸಿದ್ದೇ ನಾನು. ರಾಜಧಾನಿಯ ಪತ್ರಿಕೆಯೊಂದು ಇದಕ್ಕೆ “ಮರಾಠಿ ಸಾಹಿತಿಯೊಬ್ಬರಿಂದ” ಎಂಬ ವಿಪರೀತ ಹಚ್ಚಿ ಗೊಂದಲ ಸುರುಮಾಡಿತು. ಬೇರೆ ಪತ್ರಿಕೆಗಳೂ ಪುಟಗಟ್ಟಲೆ ಈ ಬಗ್ಗೆ ‘ಜನಾಭಿಪ್ರಾಯ’ವನ್ನು ಸಂಗ್ರಹಿಸಿದವು. ಯಥಾ ಪ್ರಕಾರ ಹುಬ್ಬಳ್ಳಿ ನಗರದ ಹಿರಿಯ ಪತ್ರಕರ್ತ ಪಿಟೀಲು ಪುಟ್ಟಪ್ಪ ತಮ್ಮ ಅಪಸ್ವರ ತೆಗೆದರು., ಒಟ್ಟಾರೆ ಸಹಮತ ಮೂಡದಿದ್ದರಿಂದ ಆ ವಿಚಾರ ಕೈಬಿಟ್ಟದ್ದಾಯಿತು. ಸಮ್ಮೇಳನ ಉದ್ಘಾಟಿಸಲು ಬರಬೇಕಾಗಿದ್ದ ಮುಖ್ಯಮಂತ್ರಿ ಧರ್ಮಸಿಂಗರು ಅವತ್ತಿನ ಕುತೂಲಹಲಕಾರಿ ರಾಜಕೀಯ ತಿರುವುಗಳಿಂದಾಗಿ ಬೀದರಿಗೆ ಬರಲಿಲ್ಲ. ಅವರ ಭಾಷಣವನ್ನು ನಾನೇ ಓದಬೇಕಾಯಿತು.

ಶಿವಮೊಗ್ಗ ಸಮ್ಮೇಳನದ ಹೊತ್ತಿಗೆ ಪರಿಸ್ಥಿತಿ ಬದಲಾಗಿತ್ತು. ಅಧಿಕಾರಕ್ಕೆ ಬಂದ ಮೈತ್ರಿ ಸರಕಾರ ಡಾ. ಜಿ ಎಸ್. ಶಿವರುದ್ರಪ್ಪನವರಿಗೆ ‘ರಾಷ್ಟ್ರಕವಿ’ ಪುರಸ್ಕಾರ ನೀಡಿ ಹನ್ನೆರಡು ವರ್ಷ ಸ್ಥಗಿತಗೊಂಡಿದ್ದ ಪರಂಪರೆಗೆ ಮರು ಜೀವ ನೀಡಿತು. ಗೋವಿಂದ ಪೈ. ಕುವೆಂಪು ಅವರ ವಾರಸುದಾರರಾದ ಜಿ.ಎಸ್.ಎಸ್. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರು. ಹೀಗಾಗಿ ಕಾರ್ಯಕಾರಿ ಸಮಿತಿ ರಾಷ್ಟ್ರಕವಿಗಳಿಂದಲೇ ಉದ್ಘಾಟನೆ ಎಂಬ ಒಮ್ಮತದ ತೀರ್ಮಾನಕ್ಕೆ ಬಂತು. ಈ ಕುರಿತು ಕೂಡ ಯಾವುದೇ ವಿವಾದ ಏಳಲಿಲ್ಲ.

ಇತ್ತೀಚಿನ ವರ್ಷಗಳಲ್ಲಿ ಸಾಹಿತ್ಯ ಸಮ್ಮೇಳನಗಳಲ್ಲಿ ಅಧಿಕಾರಕ್ಕೆ ರಾಜಕಾರಣಿಗಳದೇ ಅಗ್ರಪೂಜೆ. ಸಮ್ಮೇಳನವನ್ನು ಮುಖ್ಯಮಂತ್ರಿಗಳೇ ಉದ್ಘಾಟಿಸಬೇಕೆಂಬುದು, ಯಾರೂ ಪ್ರಶ್ನಿಸಲಾಗದ, ಒಂದು ಸಂಪ್ರದಾಯವೇ ಆಗಿತ್ತು ಯಾವ ಸದ್ದುಗದ್ದಲವಿಲ್ಲದೇ ಆ ಸಂಪ್ರದಾಯ ಈ ಸಲ ಮುರಿದು ಬಿದ್ದಾಗ ರಾಜಕೀಯ ವಲಯದಲ್ಲಿ ಸ್ವಲ್ಪ ತಳಮಳ ಉಂಟಾಗಿದ್ದು ಸಹಜ.

ಸಮ್ಮೇಳನಕ್ಕೆ ಶಿಖರ ಪ್ರಾಯವಾದ ಸಮಾರೋಪದಲ್ಲಿ ಪ್ರಧಾನವಾಗಿ ಪಾಲುಗೊಂಡು, ಕನ್ನಡಿಗರ ಬದುಕಿಗೆ ಮುಖ್ಯಮಂತ್ರಿಯಾಗಿ ಹೊಸ ಭರವಸೆ ನೀಡಬೇಕೆಂದು ಒಂದು ತಿಂಗಳ ಮುಂಚೆಯೇ ಕುಮಾರಸ್ವಾಮಿಗಳಿಗೆ ಅಧಿಕೃತ ಪತ್ರ ಬರೆದಿದ್ದೆ. ಅವರ ಡಿಸೆಂಬರ್‌ಡೈರಿಯಲ್ಲಿ ಈ ಕಾರ್ಯಕ್ರಮ ದಾಖಲಾಗಿದ್ದನ್ನು ಖಾತ್ರಿ ಪಡಿಸಿಕೊಂಡು ಆಮಂತ್ರಣ ಪತ್ರಿಕೆ ಮುದ್ರಿಸಿದೆವು: ಅವರ ಕಚೇರಿಯ ಸಿಬ್ಬಂದಿ ಆಮಂತ್ರಣದ ಐವತ್ತು ಪ್ರತಿ ತರಿಸಿಕೊಂಡರು. ಚಾಮುಂಡೇಶ್ವರಿ ಉಪಚುನಾವಣೆಯ ಪ್ರಚಾರದ ಗಡಿಬಿಡಿಯಲ್ಲಿ ಬಿದ್ದಿದ್ದ ಮುಖ್ಯಮಂತ್ರಿಗಳನ್ನು ನಾನು ಮುಖತಃ ಕಾಣಲಾಗಲಿಲ್ಲ. ಇದನ್ನೇ ಮುಂದೆ ಮಾಡಿಕೊಂಡು ನಮ್ಮ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳ ಒಂದು ಹಿತಾಸಕ್ತ ವಲಯ ಸಮ್ಮೇಳನವನ್ನೇ ‘ಧ್ವಂಸ’ ಮಾಡಲು ಹೆಣಗಾಡಿದ್ದು, ನಮ್ಮ ‘ಸಾಂಸ್ಕೃತಿಕ ರಾಜಕಾರಣದ’ ದ ಕುರೂಪಕ್ಕೆ ಒಂದು ಕುರುಹಾಗಿತ್ತು.

ಡಿಸೆಂಬರ ೧೮ರ ರಾತ್ರಿ ಜಿಲ್ಲಾಧಿಕಾರಿ ಅನಿಲಕುಮಾರರಿಂದ ಒಂದು ಆತಂಕದ ಪೋನ್ ಕರೆ: ‘ಮುಖ್ಯಮಂತ್ರಿಗಳು ಮುನಿಸಿಕೊಂಡಿದ್ದಾರೆ!’ ಏನೋ ಯಡವಟ್ಟಾಗಿದೆ ಅಂತ ಅನಿಸಿ ಮರುದಿನ ಗೌ. ಕಾರ್ಯದರ್ಶಿ ಜರಗನಹಳ್ಳಿ ಶಿವಶಂಕರ್‌ಮತ್ತು ಜಿಲ್ಲಾಧ್ಯಕ್ಷ ಡಿ. ಮಂಜುನಾಥ ಅವರೊಟ್ಟಿಗೆ ವಿಧಾನಸೌಧದ ಮೂರನೆಯ ಮಹಡಿಗೆ ಹೋದೆ.

ಟಿವಿ ಪರದೆಯ ಮೇಲೆ ಸದಾ ಮಂದಸ್ಮಿತರಂತೆ ತೋರುವ ಸಿಎಂ ‘ಗರಂ’ ಆಗಿದ್ದರು. ನಾನು ಸಮಾಧಾನದಿಂದ ವಿವರಿಸಿದೆ. ಅವರ ಸಿಬ್ಬಂದಿ ತಂದು ತೋರಿಸಿದ ಫೈಲಿನಲ್ಲಿ ನನ್ನ ಪತ್ರ, ಡಿಸಿಎಂ ಯಡಿಯೂರಪ್ಪನವರ ಪತ್ರ ಎಲ್ಲ ಇದ್ದವು. ಅವರು ನರಂ ಆದಂತೆ ತೋರಿತು. ನಾನು ಹೇಳಿದ್ದಿಷ್ಟೆ: “ನೋಡ್ರಿ, ನೀವು ಕುಮಾರ ಸ್ವಾಮಿ ಅಂತ ಅಲ್ಲ, ನಾನು ಚಂಪಾ ಅಲ್ಲ. ನೀವು ನಮ್ಮ ಮುಖ್ಯಮಂತ್ರಿ: ನಾನು ಕಸಾಪ ಅಧ್ಯಕ್ಷ. ಒಬ್ಬ ಕನ್ನಡಿಗನಾಗಿ ಕರೆಯುತ್ತೇವೆ, ನೀವು ಸಮ್ಮೇಳನಕ್ಕೆ ಬರಬೇಕು “ಬರಲು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ” ಎಂದರು ನಾನು ಹೊರಬಂದೆ.

ಅವರು ನನ್ನನ್ನು ಕುಳಿತುಕೊಳ್ಳಲೂ ಹೇಳಲಿಲ್ಲ ಎಂಬ ಸಣ್ಣ ಸಂಗತಿ ನನಗೆ ಮುಖ್ಯವೆನಿಸಲಿಲ್ಲ. ವೈಯಕ್ತಿಕ ನಡವಳಿಕೆ ಅವರವರ ಸಂಸ್ಕಾರಕ್ಕೆ ಸಂಬಂಧಪಟ್ಟಿದ್ದು. ಬೇರೆಯವರಿಂದ ಕಲಿಯುವಂಥದಲ್ಲ. ಕೆಲವರಿಗೆ ಆಗುವುದಿಲ್ಲ.

ಹೊರಬಂದು ಮಾಧ್ಯಮದವರೆದುರು ಹೇಳಿದ: “ಸಾಹಿತ್ಯ ಸಮ್ಮೇಳನ ಎಂಬುದು ಸತ್ಯನಾರಾಯಣ ಪೂಜೆಯೂ ಅಲ್ಲ: ನಮ್ಮ ಮನೆಯ ಮದುವೆಯೂ ಅಲ್ಲ. ಕನ್ನಡದ ಹಬ್ಬಕ್ಕೆ ಹಣೆಗೆ ಕುಂಕುಮ ಇಟ್ಟು, ಆರತಿ ಮಾಡಿ ಬರ್ರಿ ಬರ್ರಿ ಅಂತ ಕರೆಯಬೇಕಾಗಿಲ್ಲ. ಕನ್ನಡಿಗರು ಪ್ರೀತಿಯಿಂದ ಬರಬೇಕು. ಮುಖ್ಯಮಂತ್ರಿಗಳು ಬರುತ್ತಾರೆಂಬ ವಿಶ್ವಾಸ ನನಗಿದೆ.”

ನನ್ನ ೩೦ – ೩೫ ವರ್ಷದ ಸಾರ್ವಜನಿಕ ಅನುಭವದ ಭಿತ್ತಿಯಲ್ಲಿ ಕರ್ನಾಟಕದ ‘ಸಾಂಸ್ಕೃತಿಕ ರಾಜಕಾರಣ’ದ ಒಳ ಹೊರಗುಗಳ ಪರಿಚಯ ನನಗಿದೆ. ಗುಲಾಬಿ ನಗರ ಬೆಂಗಳೂರಿಗೆ ನಾನು ‘ಲಾಬಿ ನಗರ’ ಎಂದೇ ಕರೆಯುವುದು. ಇಲ್ಲೊಂದು ವಲಯವಿದೆ: ಅದು ಜಾತಿಯಲ್ಲ, ವರ್ಗವಲ್ಲ: ಅದೊಂದು ಮನೋವಿಕಾರಿಗಳ ಗುಂಪು. ಈ ಗುಂಪಿಗೆ ನನ್ನಂಥವರೆಂದರೆ ಅಲರ್ಜಿ, ತಾತ್ಸಾರ, ಕೋಪ. ಪರಿಷತ್ತಿನ ಚುನಾವಣೆಯಲ್ಲಿ ಮೊದಲ ಸಲ ಸೋತು, ಮತ್ತೆ ಸ್ಪರ್ಧಿಸಿ ಹನ್ನೆರಡು ಸಾವಿರ ಮತಗಳ ದಾಖಲೆಯ ಮುನ್ನಡೆಯೊಂದಿಗೆ ಅಧ್ಯಕ್ಷನಾಗಿ ನಾನು ಆಯ್ಕೆಯಾಗಿದ್ದೇ ಇನ್ನೂ ಈ ಗುಂಪಿಗೆ ಪಚನವಾಗಿಲ್ಲ. ಹೇಗಾದರೂ ಮಾಡಿ ಧ್ವಂಸ ಮಾಡಬೇಕು ಇದೊಂದೇ ಗುರಿ. ಆದರೆ ಅದರಲ್ಲಿ ಅನೇಕರು ಭಯಪಡುವುದು: ನನ್ನ ಮೊಂಡ ಪೆನ್ನಿಗೆ ಮತ್ತು ಭಂಡ ಬಾಯಿಗೆ.

ಈ ಗುಂಪಿಗೆ ನನ್ನಂಥವರು ರಾಕ್ಷಸರಾದರೆ, ಅನಂತಮೂರ್ತಿಯಂಥವರು ದೇವತೆಗಳು. ಈ ದ್ವಂದ್ವ ಮೂರ್ತಿಗೆ ನನ್ನ ಇತ್ತೀಚಿನ ನಾಮಕರಣ: ‘ಅನುಕೂಲಮೂರ್ತಿ’ . ರಾಜ್ಯಸಭಾ ಚುನಾವಣೆಯಲ್ಲಿ ಇವರು ಸ್ಪರ್ಧಿಸಿದ್ದು ಕನ್ನಡ ‘ಸ್ವಾಭಿಮಾನ’ ದ ಹೆಸರಲ್ಲಿ! ಪಾಪ, ನಮ್ಮ ಛಲದಂಕಮಲ್ಲ ವಾಟಾಳ ನಾಗರಾಜರು ಈ ಮಹಾಶಯನ ಡೆಪಾಜಿಟ್ ಹಣ ಕಟ್ಟಿ ೫೦೦೦ ರೂ ಕಳಕೊಂಡರು! ಗೋಕಾಕ್ ಚಳುವಳಿನ್ನು ‘ಸಮೂಹ ಸನ್ನಿ’ ಎಂದು ಹೀಗಳೆದ ಈ ವ್ಯಕ್ತಿ ತುಮಕೂರು ಸಾಹಿತ್ಯ ಸಮ್ಮೇಳನಕ್ಕೆ ಪಿತೂರಿಯಿಂದ ಅಧ್ಯಕ್ಷರಾದದ್ದು ಕನ್ನಡ ಸಾಹಿತ್ಯದ ಒಂದು ದುರಂತವೆಂದೇ ಕೆಲವರು ಅಂಬೋಣ.

ಮುಖ್ಯಮಂತ್ರಿಗಳಿಗೆ ಕೊನೇ ಗಳಿಗೆಯಲ್ಲಿ ಕಾಟಾಚಾರದ ಆಮಂತ್ರಣ ನೀಡಲಾಯಿತು ಎಂಬ ಸತ್ಯಕ್ಕೆ ದೂರವಾದ ಸಂಗತಿಗೆ ವಿಪರೀತ ಮಹತ್ವ ಕೊಟ್ಟ ಕೆಲ ಪತ್ರಿಕೆಗಳು, ಅದೇ ಗದ್ದಲಗಳಲ್ಲಿ, ಅನಂತಮೂರ್ತಿಯವರ ಘನ ವ್ಯಕ್ತಿತ್ವಕ್ಕೆ ಕೂಡ ಚಂಪಾ ಅಪಮಾನ ಮಾಡಿದ್ದಾರೆ ಎಂದು ಪ್ರಚಾರ ಮಾಡಿದವು. (ರಾಜ್ಯಸಭೆ ಚುನಾವಣೆ ಪರಾಭವದ ನಂತರ ಇವರ ಮಾನಾಪಹರಣದ ಗಳಿಗೆಗಳಲ್ಲಿ ಮಾನಸಂರಕ್ಷಣೆಗೆ ಧಾವಿಸುವುದು ಈ ಪತ್ರಿಕೆಗಳ ಪವಿತ್ರ ಕರ್ತವ್ಯವಾಗಿದೆ. ಅವರ ಪಾಲಿಗೆ ಇವು ಒಂದು ಬಗೆಯ ICU: ಇಂಟೆನ್ಸಿವ್ ಕೇರ್‌ಯುನಿಟ್: ಸಾಧ್ಯವಿದ್ದಷ್ಟು ಕಾಲ ಉಸಿರಾಟವನ್ನು ಜಾರಿಯಲ್ಲಿಡುವುದು!) ಶಿವಮೊಗ್ಗದವರೇ ಆದ ಡಾ. ಯು. ಆರ್. ಅನಂತಮೂರ್ತಿ ಕನ್ನಡದ ಮುಖ್ಯ ಸಾಹಿತಿಗಳಲ್ಲಿ ಒಬ್ಬರು ಎಂಬುದು ನಿರ್ವಿವಾದ. ನನಗಂತೂ ಅವರೊಬ್ಬ ಪ್ರೀತಿಯ ಲೇಖಕರೇ. ಸಮ್ಮೇಳನದ ಉದ್ಘಾಟನೆಯ ವೇದಿಕೆಯಲ್ಲಿ. ಮತ್ತೊಬ್ಬ ಮಹಾಸಾಹಿತಿ ವಸುದೇವ ಭೂಪಾಳಂ ಅವರ ಸಮಗ್ರ ಸಾಹಿತ್ಯದ ಎರಡು ಸಂಪುಟಗಳನ್ನೂ ಬಿಡುಗಡೆ ಮಾಡಲು ಅವರನ್ನು ಪರಿಷತ್ತಿನ ಪರವಾಗಿ ಅಧಿಕೃತವಾಗಿ ಕೇಳಿಕೊಳ್ಳಲಾಗಿತ್ತು. ಆಗ ಆ ಕಡೆಯಿಂದ ಬಂದ ಪ್ರತಿಕ್ರಿಯೆ: “ರಾಜಕಾರಣಿಗಳೊಂದಿಗೆ ನಾನು ವೇದಿಕೆಯನ್ನು ಹಂಚಿಕೊಳ್ಳುವುದಿಲ್ಲ” ಎಂಬುದು. ಸ್ವಾಭಿಮಾನಿ ಸಾಹಿತಿಯೊಬ್ಬರ ಈ ನಿಲುವಿಗೆ ನಾನು ಗೌರವ ನೀಡಿದೆ. ಮುಂದೆ, ಮಾಜಿ ಸಮ್ಮೇಳನಾಧ್ಯಕ್ಷರನ್ನು ಪ್ರತಿ ಸಮ್ಮೇಳನಕ್ಕೂ ವಿಶೇಷ ಆಹ್ವಾನಿತರನ್ನಾಗಿ ಕರೆಯುವ ರೂಢಿಯ ಪ್ರಕಾರ ಇವರಿಗೂ ಅಧಿಕೃತ ಪತ್ರ ಹೋಯಿತು. ಸಮ್ಮೇಳನಕ್ಕೆ ಶುಭಕೋರಿ ಅವರು ಪತ್ರ ಬರೆದರು.

ಆದರೆ ‘ರಾಜಕೀಯ’ ಹೇಗಿದೆ ನೋಡಿರಿ. ಈ ಪತ್ರ ಅಂಚೆ ಮೂಲಕ ಪರಿಷತ್ತಿಗೆ ತಲುಪುವ ಮೊದಲೇ, ಪತ್ರಿಕೆಯೊಂದಕ್ಕೆ ಫ್ಯಾಕ್ಸ್ ಮೂಲಕ ತಲುಪಿ ಸುದ್ದಿಯಾಯಿತು. ಮೇಲಾಗಿ ಅವರೇ ಟಿವಿ ವಾಹಿನಿಗಳಿಗೆ ಹೇಳಿದರೆನ್ನಲಾದ ಮಾತು: “ಯಾವುದೊ ಪುಸ್ತಕ ಬಿಡುಗಡೆಗೆ ಕರೆದಿದ್ದರು. ಬದಲಾಗಿ ಮುಖ್ಯವಾದ ಗೋಷ್ಠಿಯೊಂದಕ್ಕೆ ಕರೆದಿದ್ದರೆ ಹೋಗಬಹುದಿತ್ತು.”

ಶಿವಮೊಗ್ಗದಲ್ಲಿ ಡಿಸೆಂಬರ್ ೨೦ರಂದು ಪತ್ರಿಕಾಗೋಷ್ಠಿಯಲ್ಲಿ ನಾನು ಹೇಳಿದೆ. “ಅರ್ಥಾತ್ ಅನುಕೂಲ ಮೂರ್ತಿಯವರ ಪತಿವ್ರತಾ ಧರ್ಮ ಮುಗಿದಂತಾಯಿತಲ್ಲವೇ?” ಗೆಳೆಯರೆಲ್ಲ ನಕ್ಕರು.

ಅನಂತಮೂರ್ತಿಯ ಚೇಲ ಒಬ್ಬರು: ಶಿವಮೊಗ್ಗದ ಸತ್ಯನಾರಾಯಣರಾವ್ ಅಣತಿ ಎಂಬುವರು. ಚಂಪಾ ಅನಂತಮೂರ್ತಿಯ ಕ್ಷಮೆ ಕೇಳಬೇಕೆಂದು ಪತ್ರಿಕೆಗೆ ಬರೆದರು. ಇಂಥ ಚೇಲಾಗಳ ಉದ್ದೇಶ: ಇಂಥ ಪ್ರಯತ್ನಗಳ ಮೂಲಕ ತಮ್ಮದೊಂದು ಪುಸ್ತಕಕ್ಕೆ ಘನ ಸಾಹಿತಿಗಳಿಂದ ಮುನ್ನುಡಿಯನ್ನೋ ಬೆನ್ನುಡಿಯನ್ನೋ ಬರೆಸಿಕೊಳ್ಳುವುದು ಅಷ್ಟೇ.

ಮಜಾ ಅಂದರೆ, ಸಮ್ಮೇಳನದ ಸಂಭ್ರಮದಲ್ಲಿ ಯಾರೂ ಅನಂತಮೂರ್ತಿ ಗೈರು ಹಾಜರಿ ಕುರಿತು ಕ್ಯಾರೇ ಅನ್ನಲಿಲ್ಲ. ಅಣತಿ ಕೂಡ ಬಾಲ ಮುದುರಿಕೊಂಡು ಗಪ್ಪಾದರು; ‘ಗೀತ ಸಂಗೀತ’ದಲ್ಲಿ ಪಾಲುಗೊಂಡು ಸರಾಗವಾಗಿ ಆಲಾಪ ತೆಗೆದರು!

*

ಮುಖ್ಯಮಂತ್ರಿಗಳ ಅಸಮಾಧಾನದ ಮೂಲ, ಸಮ್ಮೇಳನದ ‘ಉದ್ಘಾಟನೆ’ ಯನ್ನು ಅವರ ಕೈಯಿಂದ ತಪ್ಪಿಸಿದ್ದರ ಹಿಂದೆ ಏನು ಕಾರಣ ಇರಬಹುದು ಎಂಬ ಜಿಜ್ಞಾಸೆಯೇ ಆಗಿತ್ತು. ಇದರಲ್ಲಿ ಮೈತ್ರಿ ಸರಕಾರದ ಪಾಲುಗಾರ ಪಕ್ಷದ ಕೈವಾಡ ಇರಬಹುದೇ? ಅದಕ್ಕೆ ಕಸಾಪ ಅಧ್ಯಕ್ಷರ ಕುಮ್ಮಕ್ಕು ಇರಬಹುದೇ? ಇತ್ಯಾದಿ ಪ್ರಶ್ನೆಗಳು. “ಕೊನೆಯ ದಿನ ಬಂದು ನಾನು ಏನು ಮಾತಾಡಲಿ?” ಎಂದು ನೇರವಾಗಿ ಕೇಳಿದರು. ನಾನು ಸಮ್ಮೇಳನದ ಚರಮಘಟ್ಟದ ಮಹತ್ವವನ್ನು ವಿವರಿಸಿದೆ. “ನಾನು ಈ ರಾಜ್ಯದ ಮುಖ್ಯಮಂತ್ರಿ “ಎಂದು ಎರಡು ಸಲ ಮೇಜು ಕುಟ್ಟಿದರು. ಆ ವಿಷಯದ ಬಗ್ಗೆ ಅವರಿಗೇ ಸಂಶಯವಿರುವಂತೆ ನನಗೆ ತೋರಿ ಸ್ವಲ್ಪ ನಗೆ ಬಂತು. ನಗಲಿಲ್ಲ “ನೀವು ದೊಡ್ಡವರು ಏನಾದರೂ ಮಾಡಿಕೊಳ್ಳಿರಿ” ಅಂದರು.

ಮುಖ್ಯಮಂತ್ರಿಗಳ ಅಸಮಾಧಾನದ ಮೂಲ, ಸಮ್ಮೇಳನದ’ಉದ್ಘಾಟನೆ’ಯನ್ನು ಅವರ ಕೈಯಿಂದ ತಪ್ಪಿಸಿದ್ದರ ಹಿಂದೆ ಏನು ಕಾರಣ ಇರಬಹುದು ಎಂಬ ಜಿಜ್ಞಾಸೆಯೇ ಆಗಿತ್ತು. ಇದರಲ್ಲಿ ಮೈತ್ರಿ ಸರಕಾರದ ಪಾಲುಗಾರ ಪಕ್ಷದ ಕೈವಾಡ ಇರಬಹುದೇ? ಅದಕ್ಕೆ ಕಸಾಪ ಅಧ್ಯಕ್ಷರ ಕುಮ್ಮಕ್ಕು ಇರಬಹುದೇ? ಇತ್ಯಾದಿ ಪ್ರಶ್ನೆಗಳು.’ಕೊನೆಯ ದಿನ ಬಂದು ನಾನು ಏನು ಮಾತಾಡಲಿ? ಎಂದು ನೇರವಾಗಿ ಕೇಳಿದರು. ನಾನು ಸಮ್ಮೇಳನದ ಚರಮಘಟ್ಟದ ಮಹತ್ವವನ್ನು ವಿವರಿಸಿದೆ.’ನಾನು ಈ ರಾಜ್ಯದ ಮುಖ್ಯಮಂತ್ರಿ’ ಎಂದು ಎರಡು ಸಲ ಮೇಜು ಕುಟ್ಟಿದರು. ಆ ವಿಷಯದ ಬಗ್ಗೆ ಅವರಿಗೇ ಸಂಶಯವಿರುವಂತೆ ನನಗೆ ತೋರಿ ಸ್ವಲ್ಪ ನಗೆ ಬಂತು. ನಗಲಿಲ್ಲ. ನೀವು ದೊಡ್ಡವರು ಏನಾದರೂ ಮಾಡಿಕೊಳ್ಳಿರಿ’ ಅಂದರು.

ನಾನೂ ರಾಜ್ಯದ ಅನೇಕ ಮುಖ್ಯಮಂತ್ರಿಗಳನ್ನು ಅನೇಕ ಅಂತರಗಳಲ್ಲಿ ನೋಡಿದ್ದೇನೆ. ಕನ್ನಡದ ವಿಷಯದಲ್ಲಿ ಗುಂಡೂರಾವ್, ರಾಮಕೃಷ್ಣ ಹೆಗಡೆ ಅವರೊಂದಿಗೆ ನೇರ ಮುಖಾಮುಖಿಯಾದ ಪ್ರಸಂಗಗಳೂ ಇವೆ. ಕುಮಾರಸ್ವಾಮಿಯವರು ಮಾತ್ರ ಇನ್ನೂ ಆ ಸ್ಥಾನದ ಮಾನಕ್ಕೆ. ಘನತೆಗೆ ಹೊಂದಿಕೊಂಡ ಹಾಗೆ ಕಾಣಿಸಲಿಲ್ಲ. ಸಾಹಿತ್ಯ, ಕಲೆ, ಸಂಸ್ಕೃತಿ ಮುಂತಾದವುಗಳ ಬಗ್ಗೆ ತಲೆ ಕೆಡಿಸಿಕೊಳ್ಳುವವರಲ್ಲ ಅವರು.

ರಾಜ್ಯಸಭಾ ಚುನಾವಣೆಯ ಸಂದರ್ಭದಲ್ಲಿ “ಯಾರ್ರೀ ಅನಂತಮೂರ್ತಿ” ಎಂಬಂಥ ಅಸೌಜನ್ಯದ ಮಾತು ಆಡಿ ದಕ್ಕಿಸಿಕೊಂಡರು. ಆ ಮಾತಿಗೆ ಖಾರವಾಗಿ ಪ್ರತಿಕ್ರಿಯಿಸಿದವರು ಅಗ್ನಿ ಶ್ರೀಧರ್ ಮಾತ್ರ: “ಯಾರ್ರೀ ಕುಮಾರಸ್ವಾಮಿ “ಅಂತ ಮುಖಪುಟದ ಲೇಖನ ಬರೆದರು. ಅನಂತಮೂರ್ತಿ ಮಾತ್ರ ಸ್ವಾಭಿಮಾನದ ಒಂದು ಲಕ್ಷಣವನ್ನೂ ತೋರಲಿಲ್ಲ: ಬದಲಾಗಿ ‘ನನ್ನ ಹೆಸರು ಹೈಸ್ಕೂಲು ಹುಡುಗರಿಗೂ ಗೊತ್ತು’ ಎಂಬಂಥ ಬಾಲಿಶ ಮಾತಾಡಿ. ಒದೆ ತಿಂದ ಪ್ರಾಣಿಯಂತೆ ಕುಂಯ್ ಗುಡುತ್ತಲೇ ಇದ್ದರು!.

*

ಶಿವಮೊಗ್ಗೆಯ ಮೊದಲ ಪತ್ರಿಕಾಗೋಷ್ಠಿಯಲ್ಲಿ ನಾನು ಮುಖ್ಯಮಂತ್ರಿಗಳಿಗೆ ಬರೆದಿದ್ದ ಪತ್ರಗಳೆಲ್ಲ ಅನಾವರಣಗೊಂಡವು. ಆಮಂತ್ರಣದ ವಿಷಯ ತಣ್ಣಗಾಯಿತು. ಜೊತೆಗೇ ಸೂಕ್ಷ್ಮವಾಗಿ “ಇದೆಲ್ಲದರ ಹಿಂದೆ ಮೈತ್ರಿ ಪಕ್ಷಗಳ ನಡುವೆ ಶೀತಲ ಸಮರವಿರುವಂತೆ, ಒಂದು shadow fight ನಡೆದಿರುವಂತೆ, ನನಗೆ ಭಾಸವಾಗುತ್ತದೆ” ಎಂದು ನಾನು ಹೇಳಿದ ಮಾತು ಪತ್ರಕರ್ತರನ್ನು ಎದ್ದು ಕೂಡ್ರುವಂತೆ ಮಾಡಿತು. ಉಪಮುಖ್ಯಮಂತ್ರಿ ಬೇರೆ. ಪರಿಷತ್ತು ಮಾಡದೇ ಇರುವ ತಪ್ಪುಗಳನ್ನು ತಮ್ಮವೆಂದೇ ಭಾವಿಸಿ ಎಲ್ಲರ ಕ್ಷಮೆಯನ್ನು ಕೋರುತ್ತ ಎಲ್ಲರನ್ನು ತಾವೇ ಆಹ್ವಾನಿಸುವುದಾಗಿ ಪತ್ರಿಕಾ ಹೇಳಿಕೆ ಕೊಟ್ಟರು. ನಾನು ಸುಮ್ಮನೇ ಇದ್ದೆ. ಅವರ ಸಂಕಟ ಅವರಿಗೆ. ಡಿಸಿಎಂ ಯಜಮಾನಿಕೆಯಲ್ಲಿ ನಡೆದ ಸಮ್ಮೇಳನಕ್ಕೆ ಸಿಎಂ ಬರದಿದ್ದರೆ ನಾಡಿನ ಮತದಾರರಿಗೆ ರಾಂಗ್ ಮೆಸೆಜ್ ಹೋಗಲಾರದೇ? ಸಿಎಂ ಅವರಿಗೂ ಬಹುಶಃ ಅದೇ ಪೀಕಲಾಟವಿರಬೇಕು. ಸಮಾರೋಪಕ್ಕಾದರೂ ಹೋಗದಿದ್ದರೆ ನಾಡಿನ ಜನಸ್ತೋಮ ಏನೆಂದುಕೊಂಡೀತು?

ಡಿಸಿಎಂ ಕಾಡಿದರು, ಬೇಡಿದರು: ಸಿಎಂ ಕಾಡಿಸಿಕೊಂಡರು, ಬೇಡಿಸಿಕೊಂಡರು, ಅಂತೂ ಮೈತ್ರಿ ಸರಕಾರದ ಮೈತ್ರಿಗೆ ಭಂಗ ಬರಲಿಲ್ಲ. ನಾನು ಮಾತ್ರ ಮಿತ್ರರಲ್ಲಿ ಹೇಳಿಕೊಂಡಿದ್ದೆ: ಯಾರು ಬರಲಿ, ಬಿಡಲಿ. ಸಮ್ಮೇಳನ ನಡೆಯುತ್ತದೆ. ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲುವುದಿಲ್ಲ. ನಾಡಿನ ಬಗ್ಗೆ ನೈಜ ಕಾಳಜಿ ಇಲ್ಲದವರು ಬಗ್ಗೆ ನಮ್ಮ ಬೇಂದ್ರೆ ಕವಿ ಹೇಳಿದ್ದಾರೆ: ಅವರಿದ್ದರು ಒಂದೇ ಇರದಿದ್ದರು ಒಂದೇ.

ಡಿಸೆಂಬರ್ ೨೦ರ ಅದ್ಭುತ ಮೆರವಣಿಗೆಯ ಕೊನೆಯಲ್ಲಿ. ಪ್ರಸ್ತುತ ವಿದ್ಯಮಾನಗಳ ಹಿನ್ನೆಲೆಯಲ್ಲಿ ಸೂಚ್ಯವಾಗಿ ನಾನು ‘ಸತ್ಯನಾರಾಯಣ ಪೂಜೆ’ ಇತ್ಯಾದಿ ಮಾತನಾಡಿದೆ ಎ.ಬಿ.ವಿ.ಪಿ ಪ್ರತಿಭಟನೆಯ ಹಿನ್ನೆಲೆಯಲ್ಲಿ, ‘ಯಾವುದೇ ರಾಜಕೀಯ ಪಕ್ಷವಾಗಲಿ, ಸಂಘಟನೆಯಾಗಲಿ ತನ್ನ ಅಜೆಂಡಾವನ್ನು ಸಮ್ಮೇಳನದ ಮೇಲೆ ಹೇರಲು ಅವಕಾಶವಿಲ್ಲ’ ಎಂದೂ ಸ್ಪಷ್ಟಪಡಿಸಿದೆ. ಮೆರವಣಿಗೆಯನ್ನು” ಮುಂದಿನ ಮೂರು ದಿನಗಳ ಮಹಾಕಾವ್ಯಕ್ಕೆ ಬರೆದ ಮುನ್ನುಡಿ ಇದು’’ ಎಂದು ಪ್ರಾಂಜಲ ಮನಸ್ಸಿನಿಂದ ಬಣ್ಣಿಸಿದೆ.

ಡಿಸೆಂಬರ್ ೨೧: ಸಮ್ಮೇಳನದ ಅಧಿಕೃತ ಉದ್ಘಾಟನೆ. ಇದು ೭೩ನೆಯ ಸಮ್ಮೇಳನ ಶಿವಮೊಗ್ಗ ಜಿಲ್ಲೆಯ ೭೩ ಮಂದಿ ಹಿರಿಕಿರಿಯ ಗಾಯಕಿಯರ ತಂಡ ಹಾಡಿದ ಕುವೆಂಪು ವಿರಚಿತ ನಾಡಗೀತೆ ಇಡೀ ಸಭಾಂಗಣವನ್ನು ತುಂಬಿ ಹೊರಚೆಲ್ಲುವಂತಿತ್ತು ಆನಂತರ ಯಡಿಯೂರಪ್ಪನವರಿಂದ ಸ್ವಾಗತ ಭಾಷಣ. ಆನಂತರ ನನ್ನಿಂದ ‘ಪ್ರಸ್ತಾವನೆ’

ಇದೊಂದು ಮಾಮೂಲಿ ವ್ಯವಸ್ಥೆ: ಕಸಾಪ ಅಧ್ಯಕ್ಷರಿಂದ ಸಂಸ್ಥೆಯ ಪರಿಚಯ ಮೂಲ ಉದ್ದೇಶ, ಮುಂದಿನ ಯೋಜನೆ ಇತ್ಯಾದಿ ಇತ್ಯಾದಿ. ಆದರೆ ಶಿವಮೊಗ್ಗ ಸಮ್ಮೇಳನದ ಸನ್ನಿವೇಶ ಮಾಮೂಲಿಯಾಗಿರಲಿಲ್ಲ. ನನ್ನ ಭಾಷಣವೂ ಮಾಮೂಲಿಯಾಗಿರಲಿಲ್ಲ. ಸಭಾಂಗಣದ ಒಂದು ಮೂಲೆಯಲ್ಲಿ ಕುಳಿತು ಟಿಪ್ಪಣಿ ಮಾಡಿಕೊಂಡಿದ್ದೆ.

ಪ್ರಸ್ತಾವನೆ ಮುಖ್ಯಾಂಶಗಳು:

೧. ನಾಡು ನುಡಿ ಸಾಹಿತ್ಯ ಸಂಸ್ಕೃತಿಗಳ ರಕ್ಷಣೆಗಾಗಿ ಪರಿಷತ್ತು ಹುಟ್ಟಿದ್ದು ೧೯೧೫ರಲ್ಲಿ. ಅದಕ್ಕೀಗ ೯೧ ವರ್ಷ. ನಾಡಿನ ಏಕೀಕರಣಕ್ಕಾಗಿ ಹೋರಾಡಿದ ದಾಖಲೆ ಈ ಸಂಸ್ಥೆಯದು. ಮೈಸೂರು ಮಹಾರಾಜರು, ಕನ್ನಡ ಜನತೆ ಇದನ್ನು ಕಟ್ಟಿದ್ದರು, ಬೆಳೆಸಿದರು.

೨. ಕರ್ನಾಟಕ ಸರಕಾರ ಅಸ್ತಿತ್ವಕ್ಕೆ ಬಂದದ್ದು ೧೯೫೬ರಲ್ಲಿ. ಅದಕ್ಕೀಗ ೫೦ ವರ್ಷ. ಪರಿಷತ್ತಿಗೆ ಇತ್ತೀಚಿನ ವರ್ಷಗಳಲ್ಲಿ ಸರಕಾರದಿಂದ ಆರ್ಥಿಕ ಅನುದಾನ ಹೆಚ್ಚುತ್ತಲೇ ಬಂದಿರುವುದು ನಿಜ.

೩. ಆದರೆ ಪರಿಷತ್ತು ಸರಕಾರದ ಅಂಗಸಂಸ್ಥೆಯಲ್ಲ. ಇದು ಸರಕಾರಿ ಪರಿಷತ್ತು ಅಲ್ಲ. ಹೀಗಾಗಿ ಸರಕಾರಿ ಕಾರ್ಯಕ್ರಮಗಳಿಗೆ ಅನ್ವಯವಾಗುವ ಶಿಷ್ಟಾಚಾರ ಕಷ್ಟಾಚಾರಗಳು ಪರಿಷತ್ತಿಗೆ ಅನ್ವಯವಾಗುವುದಿಲ್ಲ. ಮುಖ್ಯಮಂತ್ರಿಗಳಾದವರು ಸಮ್ಮೇಳನವನ್ನು ಉದ್ಘಾಟಿಸುವುದು ಬೆಳೆದು ಬಂದ ರೂಢಿ. ಅದು ಕಡ್ಡಾಯವೇನಲ್ಲ ಅರ್ಥಪೂರ್ಣ ಬದಲಾವಣೆಯ ಸಾಧ್ಯತೆ ಇದ್ದೇ ಇದೆ. ಅಂಥ ಬದಲಾವಣೆ ಈ ಸಲ ಆಗಿದೆ ಅಷ್ಟೆ.

೪. ಪರಿಷತ್ತಿನಂಥ ಸ್ವಾಯತ್ತ ಸಂಸ್ಥೆಗಳ ಯೋಜನೆಗಳಿಗೆ, ಕಾರ್ಯಕ್ರಮಗಳಿಗೆ ಜನಪ್ರಿಯ ಸರಕಾರ ಕೊಡುವ ದುಡ್ಡು ಜನರ ದುಡ್ಡು: ಜನತೆ ನೀಡುವ ತೆರಿಗೆಗಳಿಂದ ಸಂಗ್ರಹವಾದ ಧನ ನೀಡುವಾಗ ಕೆರೆಯ ನೀರನ್ನು ಕೆರೆಗೆ ಚೆಲ್ಲಿದ ಸಾರ್ಥಕ ಭಾವ ಸರಕಾರಕ್ಕಿರಬೇಕು.

೫. ಸಮ್ಮೇಳನದ ಗೋಷ್ಠಿಗಳು, ಭಾಷಣಕಾರರು ಇತ್ಯಾದಿಗಳ ವಿನ್ಯಾಸದ ಜವಾಬ್ದಾರಿ ಪರಿಷತ್ತಿನ ಕಾರ್ಯವ್ಯಾಪ್ತಿ. ಸರಕಾರವಾಗಲಿ, ಯಾವುದೇ ರಾಜಕೀಯ ಪಕ್ಷವಾಗಲಿ, ರಾಜಕೀಯ ಸಂಘಟನೆಯಾಗಲಿ ಮಾಡುವ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಯಾರಾದರೂ ತಮ್ಮ ಅಜೆಂಡಾವನ್ನು ಹೇರಲು ಪ್ರಯತ್ನಿಸಿದರೆ ಅದನ್ನು ಸಹಿಸುವುದಿಲ್ಲ.

೬. ಸಮ್ಮೇಳನಗಳಿಂದ ರಾಜಕಾರಣಿಗಳನ್ನು ದೂರವಿಡುವುದು ತರವಲ್ಲ. ಆದರೆ ರಾಜಕಾರಣಿಗಳ ಪಾಲುಗಾರಿಕೆ ಅರ್ಥಪೂರ್ಣವಾಗಿರಬೇಕು. ಜನಸಮುದಾಯದ ನಾಡಿಮಿಡಿತವನ್ನು, ಹಕ್ಕೊತ್ತಾಯಗಳನ್ನು ಅರಿಯಲು ಅಧಿಕಾರಸ್ಥ ರಾಜಕಾರಣಿಗಳಿಗೆ ಇವು ಸುಸಂದರ್ಭಗಳು.

ಇತರ ಮಾಮೂಲಿ ವಿಷಯಗಳೊಂದಿಗೆ ಮುಖ್ಯವಾಗಿ ನನ್ನ ತಣ್ಣನೆಯ ದನಿಯಲ್ಲಿ ಮೂಡಿಬಂದ ಈ ಮುಖ್ಯ ಅಂಶಗಳಿಗೆ ವೇದಿಕೆಯ ಮೇಲೆ ಆಸೀನರಾದವರ ಸ್ಪಂದನ ಒಂದು ರೀತಿಯದಿದ್ದರೆ. ಕಿಕ್ಕಿರದ ಜನಸ್ತೋಮದ ಕರತಾಡನದ ಪ್ರತಿಕ್ರಿಯೆ ಮತ್ತೊಂದು ರೀತಿಯದಾಗಿತ್ತು. ಸಮ್ಮೇಳನದುದ್ದಕ್ಕೂ ಈ ಕುರಿತು ಮಾತೇ ಮಾತು. ಇವತ್ತಿಗೂ ಮಳೆ ನಿಂತರೂ ಮರದ ಹನಿ ನಿಲ್ಲಲಿಲ್ಲ ಎಂಬ ಪರಿಸ್ಥಿತಿಯೇ ಇದೆ.

*

ಇನ್ನೂ ಗೌರಿ – ವಿಠಲ ಪುರಾಣ.

ಇದೊಂದು ಪ್ರಕರಣ ಆಗಲೇಬೇಕಾಗಿರಲಿಲ್ಲ. ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯ ‘ಮಲೆನಾಡಿನ ವಾಸ್ತವಿಕ ಸಮಸ್ಯೆಗಳು’ ಕುರಿತ ಗೋಷ್ಠಿಯಲ್ಲಿ ವಿಠಲ ಹೆಗಡೆ ಅವ ಪಾಲುಗಾರಿಕೆ ಅರ್ಥಪೂರ್ಣ: ಏಕೆಂದರೆ ಮಲೆನಾಡಿನ ಅನೇಕ ಜನಪರ ಹೋರಾಟಗಳ ನೇತಾರರವರು. ಹಾಗೆಯೇ ಹಾರ್ ನಳ್ಳಿ ರಾಮಸ್ವಾಮಿ ಅಧ್ಯಕ್ಷತೆಯ ‘ಸಮೂಹ ಮಾಧ್ಯಮ: ಸಾಮಾಜಿಕ ಜವಾಬ್ದಾರಿ’ ಕುರಿತ ಗೋಷ್ಠಿಯಲ್ಲಿ ಗೌರಿ ಲಂಕೇಶ ಅವರಿದ್ದುದು ಸೂಕ್ತ. ರಾಜ್ಯ ಮಟ್ಟದ ವಾರಪತ್ರಿಕೆಯೊಂದರ ಸಂಪಾದಕಿ ಗೌರಿ. ಅವರ ತಂದೆ ಲಂಕೇಶ ಶಿವಮೊಗ್ಗದವರು, ಸಂಘ ಪರಿವಾರದ ಕ್ಯಾತೆಯಿಂದಾಗಿ ಉಳಿದೆಲ್ಲ ಗೋಷ್ಠಿಗಳಿಗಿಂತ ಈ ಎರಡು ಗೋಷ್ಠಿಗಳೇ ನಾಡಿನ ಗಮನ ಸೆಳೆಯುವಂತಾಗಿದ್ದು ಸಮ್ಮೇಳನದ ಕೌತುಕವಾಗಿತ್ತು.

ಎಬಿವಿಪಿ ಪ್ರತಿಭಟನೆಯನ್ನು ನಾನು ನಿಭಾಯಿಸಿದ್ದೆ. ಆದರೆ ಆ ಬಾಲಕರು ವಿಠಲ ಹೆಗಡೆ ಗೋಷ್ಠಿ ನಡೆದಾಗ ಹಲ್ಲೆಗೆ ಪ್ರಯತ್ನಿಸಿದರು. ಪೋಲಿಸರ ಕ್ಷಿಪ್ರ ಕಾರ್ಯಾಚರಣೆಯಿಂದ ಅನಾಹುತ ತಪ್ಪಿತು. ಮರುದಿನ ಪತ್ರಕರ್ತರು ಕೇಳಿದಾಗ ಉಪಮುಖ್ಯಮಂತ್ರಿ ಯಡಿಯೂರಪ್ಪನವರು ಎಬಿವಿಪಿಯವರ ದಾಂಧಲೆಯನ್ನು ಸಮರ್ಥಿಸಿಕೊಂಡದ್ದು ಮಾತ್ರ ಅವರ ರಾಜಕೀಯ ವರ್ಚಸ್ಸಿಗೆ ಅಂಟಿಕೊಂಡ ಕಳಂಕವೇ. ಮುಂದುವರಿದು ಹೇಳಿದರಂತೆ: “ಅವರಿಬ್ಬರನ್ನು ಗೋಷ್ಠಿಯಿಂದ ಕೈಬಿಡಲು ಸೂಚಿಸಿದ್ದೆ. ಆದರೆ ಚಂಪಾ ಆಗಲಿ, ಮಂಜುನಾಥ ಆಗಲಿ ನನ್ನ ಮಾತಿಗೆ ಬೆಲೆ ಕೊಡಲೇ ಇಲ್ಲ .”

ಡಿಸೆಂಬರ್‌೨೦ರ ಪತ್ರಿಕಾಗೋಷ್ಠಿಯಲ್ಲಿ. “ನಾನು ಹೇಳಲಾಗದ ಇನ್ನೂ ಕೆಲವು ಗುಟ್ಟು ಹೊಟ್ಟೆಯಲ್ಲಿವೆ. ಸಮ್ಮೇಳನ ಸರಿಯಾಗಿ ಮುಗಿಯಲಿ ಮೊದಲು. ಅನಂತರ ಹೇಳುತ್ತೇನೆ.” ಎಂದು ಮಿತ್ರರನ್ನು ಕುತೂಹಲದ ಅಂಚಿಗೆ ತಂದು ನಿಲ್ಲಿಸಿದ್ದೆ. ಗೌರಿ, ವಿಠಲ ವಿಷಯವನ್ನು ಯಡಿಯೂರಪ್ಪನವರೇ ಬಯಲು ಮಾಡಿದಾಗ. ಪತ್ರಕರ್ತರು ನನ್ನನ್ನು ಕೇಳಿದಾಗ, ಬಾಯಿ ಬಿಡುವುದು ನನ್ನ ಕರ್ತವ್ಯವೇ ಆಗಿತ್ತು. ಅಷ್ಟೊತ್ತಿಗೆ ಸಮ್ಮೇಳನವೇ ಮುಗಿದಿದ್ದೊಂದು ಸಮಾಧಾನದ ಅಂಶ.

ಅವತ್ತು ಡಿಸೆಂಬರ್ ೧೪. ರಾತ್ರಿ ೮.೧೫ ರ ಸುಮಾರಿಗೆ ನನಗೆ ಡಿಸಿಎಂ ಪೋನು ಸರಕಾರದ ಒಂದು ಕೋಟಿ ರೂ. ಗಳ ಚೆಕ್ಕು ಹಿಂದಿನ ದಿನವಷ್ಟೇ ಪರಿಷತ್ತಿನ ಖಾತೆಗೆ ಜಮಾ ಆಗಿತ್ತು. ನಾನು ಕೃತಜ್ಞತೆ ಹೇಳಿದೆ.

ಅದನ್ನು ಕೇಳಿಸಿಕೊಳ್ಳುವ ಸಮಾಧಾನ ಅವರಿಗಿರಲಿಲ್ಲ. ಮಾತಿನಲ್ಲಿ ದುಗುಡವಿತ್ತು ನೇರವಾಗಿ ಹೇಳಿದರು: “ಚಂಪಾ ಅವರೆ, ನನಗೆ ನಿಮ್ಮ ಬಗ್ಗೆ ತುಂಬಾ ಗೌರವ, ಎಲ್ಲ ಸಹಿಸಿಕೊಂಡಿರುವೆ ಈವರೆಗೆ, ಆದರೆ ನಕ್ಸಲೈಟ್ ಬೆಂಬಲಿಗರಾದ ಅವರಿಬ್ಬರನ್ನು ಕೈಬಿಡಬೇಕು. ಇಲ್ಲವಾದರೆ….”ನಾನು ಇಲ್ಲವಾದರೆ?

ಅವರು: ನಾವು ಮೂವರೂ ಸಚಿವರು ನಾಳೆ ಮುಂಜಾನೆ ಪತ್ರಿಕಾಗೋಷ್ಠಿ ಮಾಡುತ್ತೇವೆ. ನಾವ್ಯಾರು ಸಮ್ಮೇಳನಕ್ಕೆ ಬರುವುದಿಲ್ಲ. ನೀವೇ ಮಾಡಿಕೊಳ್ಳಿ ಮುಖ್ಯಮಂತ್ರಿಗಳೊಂದಿಗೂ ಮಾತನಾಡುತ್ತೇನೆ, ಅವರೂ ಬರುವುದಿಲ್ಲ.

ನಾನು ಯಡಿಯೂರಪ್ಪನವರೆ, ಗೋಷ್ಠಿಗಳ ಕುರಿತು ಕೇಂದ್ರ ಘಟಕ ಮತ್ತು ಜಿಲ್ಲಾ ಘಟಕಗಳು ಜಂಟಿಯಾಗಿ ಚರ್ಚಿಸಿ ಅಂತಿಮಗೊಳಿಸಿದ್ದು ಮಂಜುನಾಥರೊಂದಿಗೆ ಈ ಬಗ್ಗೆ ಮಾತಾಡುವೆ.

ತಕ್ಷಣ ಮಂಜುನಾಥರನ್ನು ಸಂಪರ್ಕಿಸಿದೆ. “ಸಾರ್, ಡಿಸಿಎಂ ಬಾಂಬು ಹಾಕಿದ್ದಾರೆ ಜಿಲ್ಲಾ ಬಿಜೆಪಿ ಶಾಮೀಲಾಗಿದೆ.” ಅಂದರವರು. ನಿಮ್ಮ ನಿಲುವೇನು? ಅಂತ ಕೇಳಿದಾಗ ಅವರಲ್ಲಿ ಗೊಂದಲ. ಗೌರಿ, ವಿಠಲ ಹೆಗಡೆ ಅವರನ್ನೇ ರಿಕ್ವೆಸ್ಟ ಮಾಡಿಕೊಂಡರೆ ಹೇಗೆ? ಅಂದರು.

ನಾನು: ಅದಂತು ಅಸಾಧ್ಯ. ಪರಿಷತ್ತು ಸರಕಾರದ ಅಡಿಯಾಳಲ್ಲ. ನೀವು ಹೇಳಿದಂತೆ ಮಾಡಿದರೆ ಯಾರದು ಹೋಗುತ್ತದೆ? ರಾಷ್ಟ್ರವ್ಯಾಪಿ ಚರ್ಚೆ ಸುರುವಾಗುತ್ತದೆ. ಏನು ಉತ್ತರ ಹೇಳುತ್ತಿರಿ? ನನ್ನ ಅಂದರೆ ಕೇಂದ್ರ ಘಟಕದ ನಿಲುವಿದು: ಡಿಸಿಎಂ, ಸಿಎಂಗಳು ಬರದಿದ್ದರೂ ಸಮ್ಮೇಳನ ನಡೆಯಬೇಕು ಅನಿವಾರ್ಯವಾದರೆ ಸಮ್ಮೇಳನವನ್ನು ಮುಂದೆ ಹಾಕಲು, ಅಥವಾ ರದ್ದುಪಡಿಸಲು ನಾನು ಸಿದ್ಧ. ನಿಮ್ಮ ಕಾರ್ಯಕಾರಿ ಸಮಿತಿಯೊಂದಿಗೆ ಚರ್ಚಿಸಿ ಜಿಲ್ಲಾ ಘಟಕದ ತೀರ್ಮಾನ ತಿಳಿಸಿರಿ.

ಅವರಿಗೆ ಮನವರಿಕೆಯಾಗಿತ್ತು. ಯಡಿಯೂರಪ್ಪ ಮತ್ತೆ ಆ ಉಸಾಬರಿಗೆ ಬಾರಲೇ ಇಲ್ಲ. ಸಚಿವ ಈಶ್ವರಪ್ಪ ಮಾತ್ರ ತುಂಬ ಮುತ್ಸದ್ದಿತನದಿಂದ ನಡೆದುಕೊಂಡರು. ಗೌರಿ ಲಂಕೇಶ, ವಿಠಲ ಹೆಗಡೆ ಗೋಷ್ಠಿಗಳಲ್ಲಿ ಏನಾದರೂ ಮಾತಾಡಲಿ; ಅದರಿಂದ ಆಕಾಶ ಹರಿದು ಬೀಳುವುದೇ? ಇದು ಅವರ ನಿಲುವು. ಅವರೇ ನನಗೆ ಪೋನ್ ಮಾಡಿ, “ಇಲ್ಲಿ ಎಲ್ಲ ಸರಿಯಾಗಿದೆ. ತಲೆ ಕೆಡಿಸಿಕೊಳ್ಳಬೇಡಿರಿ ಚಂಪಾ. ಎಲ್ಲ ನೋಡಿಕೊಳ್ಳುತ್ತೇವೆ” ಅಂದರು.

*

ನನಗೇನೋ ಇದು ಮುಗಿದ ಅಧ್ಯಾಯ ಅನ್ನಿಸಿತ್ತು. ಆದರೆ ಎಬಿವಿಪಿಗಳ ಗೂಂಡಾಗಿರಿ, ಅದಕ್ಕೆ ಡಿಸಿಎಂ ಸಮರ್ಥನೆಯಿಂದಾಗಿ, ಹೊಟ್ಟೆಯಲ್ಲಿ ಬಚ್ಚಿಟ್ಟುಕೊಂಡ ಗುಟ್ಟನ್ನು ಹೊರಹಾಕಲೇ ಬೇಕಾಯಿತು. ಒಂದು ರಾಜಕೀಯ ಪಕ್ಷದ ಮುಖಂಡರಾಗಿ ಅವರು ಮಾತಾಡಿದ್ದರೆ ಸರಿ. ಆದರೆ ರಾಜ್ಯದ ಉಪಮುಖ್ಯಮಂತ್ರಿಯಾಗಿ, ಅದೂ ಶಿವಮೊಗ್ಗ ಸಮ್ಮೇಳನದ ಜವಾಬ್ದಾರಿ ಹೊತ್ತ ಯಜಮಾನರಾಗಿ, ಅವರು ವರ್ತಿಸಿದ ರೀತಿ ಮಾತ್ರ ಸರಿಯಾಗಿರಲಿಲ್ಲ. ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿಯ ಸರ್ವಾಧಿಕಾರವನ್ನು ಪ್ರತಿಭಟಿಸಿ ಕವನ, ನಾಟಕ ಬರೆದು ಸೆರೆಮನೆ ಕಂಡು ಬಂದವ ನಾನು. ಸ್ವಾತಂತ್ಯ್ರ ಸಿಕ್ಕು ಅರ್ಧ ಶತಕದ ನಂತರವೂ ಅಭಿವ್ಯಕ್ತಿ ಸ್ವಾತಂತ್ಯ್ರ ಹರಣದ ಇಂಥ ಪ್ರಯತ್ನವನ್ನು ಖಂಡಿಸುವುದು ನನ್ನ ಸಹಜ ಕರ್ತವ್ಯವೇ ಆಗಿತ್ತು.

ಗೌರಿ ಲಂಕೇಶ್ ಗೋಷ್ಠಿ ನಡೆದದ್ದು ಕುವೆಂಪು ರಂಗಮಂದಿರದ ಹೇಮಾಂಗಣ ವೇದಿಕೆಯಲ್ಲಿ. ಕಟ್ಟುನಿಟ್ಟಿನ ಬಂದೋಬಸ್ತು. ಒಂದು ಗಂಟೆ ಮುಂಚೆಯೇ ಹೌಸ್ ಫುಲ್ಲ.

ವೇದಿಕೆ ಏರುತ್ತಿದ್ದ ಗೌರಿಯ ಕೈ ಮೌನವಾಗಿಯೇ ಕುಲುಕಿದೆ. ಗೌರಿ ಮಾತಿನ ಧಾಟಿಯಲ್ಲಿ ಮೊದಮೊದಲು ಸ್ವಲ್ಪ ಆತಂಕವಿತ್ತು ಬರಬರುತ್ತ ನೇರವಾಗಿ, ಯಾವುದೇ ಗೊಂದಲವಿಲ್ಲದೆ, ಎದೆಗೆ ಗುಂಡು ಹೊಡದೆಂತೆ, ತಣ್ಣಗಿನ ದನಿಯಲ್ಲಿ. “ಯಾರಾದರೂ ನಮ್ಮಂಥವರನ್ನು, ಜನಪರ ಹೋರಾಟಗಾರರನ್ನು, ನಕ್ಸಲೈಟ್ ಅಂತ ಕರೆದರೆ ಕರೆಯಲಿ, ಐ ಡೋಂಟ್ ಕೇರ್! “ಎಂದು ಘೋಷಿಸಿದಾಗ ಇಡೀ ಸಭಾಂಗಣ ರೋಮಾಂಚನಗೊಂಡಿತ್ತು.

ಶಿವಮೊಗ್ಗಕ್ಕೆ ಬರುವ ಮುನ್ನ, ಹೋಗುವ ಮುನ್ನ ಸಂಪೂರ್ಣ ಪೋಲಿಸ್ ರಕ್ಷಣೆ ನೀಡಲಾಗಿತ್ತು ಗೌರಿ ಲಂಕೇಶರಿಗೆ, ತುರ್ತು ಪರಿಸ್ಥಿತಿಯ ನೆನಪು ನನಗೆ, ರಾತ್ರಿ ಪೋನಿನಲ್ಲಿ ಹೇಳಿದೆ. “ನಿಮ್ಮ ಪುಣ್ಯದಿಂದ ನನಗೂ ನಾಲ್ವರು ಪೋಲಿಸರ ಬೆಂಗಾವಲು ಸಿಗುವಂತಾಯಿತು!” …. ನನ್ನ ‘ರಕ್ಷಣ’ಗೆಂದು ಎಸ್.ಐ. ಮಾದಪ್ಪ, ಕೈಯಲ್ಲಿ ವೈರ‍್ಲೆಸ್. ಸೊಂಟದಲ್ಲಿ ಪಿಸ್ತೂಲಿನಿಂದ ಅಲಂಕೃತರಾಗಿ ನಿಂತಿದ್ದರು!

*

ಸ್ಥಳೀಯ ಗೊಂದಲಗಳಿಂದಾಗಿ ಡಿ.ಮಂಜುನಾಥ ಮತ್ತು ಸಂಗಾತಿಗಳು ಕಂಗೆಟ್ಟಿದ್ದರು. ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಕತ್ತಿಗೆ ಚೆನ್ನಪ್ಪ.ರೈತ ನಾಯಕ ಬಸರಾಜಪ್ಪ. ಬಂಡಾಯ ಸಾಹಿತಿ ಬರಗೂರು – ಬಂಟ ರಂಗರಾಜ ವನದುರ್ಗ, ಪತ್ರಕರ್ತ ಶಿ. ಜು. ಪಾಶ. ಕೆಲವರು ದಲಿತ ಮತ್ತು ಕನ್ನಡ ಸಂಘಟನೆಗಳ ನಾಯಕರು ದಿನಕ್ಕೊಂದು ಪತ್ರಿಕಾ ಹೇಳಿಕೆ ಮೂಲಕ ಧೂಳೆಬ್ಬಿಸುತ್ತಿದ್ದರು. ಸಮ್ಮೇಳನಕ್ಕೆ ಬಹಿಷ್ಕಾರ ಅಂದರು. ಪರ್ಯಾಯ ಸಾಹಿತ್ಯ ಸಮ್ಮೇಳನ ಅಂದರು. ಆದರೆ ನಾಡಿನ ಎಲ್ಲೆಡೆಯಿಂದ ನುಗ್ಗಿ ಬಂದ ಸಾಹಿತ್ಯ ಪ್ರಿಯರ ಸುನಾಮಿಯಲ್ಲಿ ಇವೆಲ್ಲ ಮುಳುಗಿ ಅತೃಪ್ತ ಆತ್ಮಗಳೆಲ್ಲ ಸಮಾಧಿಗೊಂಡವು.

ವಿವಿಧ ಗೋಷ್ಠಿಗಳಲ್ಲಿ ವಿವಿಧ ರಂಗಗಳ ಗಣ್ಯಾತಿಗಣ್ಯರಿಂದ ಪ್ರಬುದ್ದ ವಿಚಾರ ಮಂಡನೆ ಕಿಕ್ಕಿರಿದು ತುಂಬಿದ ಪ್ರತಿ ಗೋಷ್ಠಿಯಲ್ಲಿ ಸಭಿಕರ ಸಕ್ರಿಯ ಪಾಲುಗಾರಿಕೆ ಹಿಂದಿನ ಯಾವ ಸಮ್ಮೇಳನದಲ್ಲೂ ಕನ್ನಡ ಬದುಕಿನ ಅನೇಕ ವಲಯಗಳು ಈ ಪ್ರಮಾಣದಲ್ಲಿ ಅನಾವರಣಗೊಂಡಿರಲಿಲ್ಲ. ಕನ್ನಡದ ಖ್ಯಾತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು. ಪುಸ್ತಕ ಮಾರಾಟ ಮಳಿಗೆಗಳಲ್ಲಿ ಭರಾಟೆಯ ಮಾರಾಟ. ಮಕ್ಕಳಿಂದಲೇ ಮಕ್ಕಳಿಗಾಗಿ ಎರಡು ಗೋಷ್ಠಿಗಳು… ಒಟ್ಟಾರೆ ಶಿವಮೊಗ್ಗದ ಸಮ್ಮೇಳನ ಕನ್ನಡನಾಡಿನ ಸಾಂಸ್ಕೃತಿಕ ಸಮೃದ್ಧಿಗೆ ಕೈಗನ್ನಡಿಯಾಗಿತ್ತು. ಹಾಗೆಯೇ ನಮ್ಮ ಅನೇಕ ಸಮಸ್ಯೆಗಳ ಚಿಂತನ- ಮಂಥನದ ವೇದಿಕೆಯೂ ಆಗಿತ್ತು.

*

ಕೊನೆಯ ದಿನದ ಕೊನೆಯ ಘಟ್ಟ: ಸಮಾರೋಪ ಸಮಾರಂಭ ಸಮ್ಮೇಳನದಲ್ಲಿ ಸಾಮಾನ್ಯವಾಗಿ ಇದು ಅವರೋಹಣದ, ಇಳಿಜಾರಿನ ಹಂತ. ಆದರೆ ಶಿವಮೊಗ್ಗದಲ್ಲಿ ಮಾತ್ರ ಇದು ಆರೋಹಣದ ಚರಮಸೀಮೆಯಾಗಿತ್ತು.

ಹೇಗಾದರೂ ಮಾಡಿ ಸಮ್ಮೇಳನಕ್ಕೆ ಮುಖ್ಯಮಂತ್ರಿ ಬರಬಾರದಂಥ ಸನ್ನಿವೇಶ ನಿರ್ಮಿಸಬೇಕೆಂಬ ಅಜೆಂಡಾ ಹೊಂದಿದ್ದ ರಾಜಧಾನಿಯ ಮನೋವಿಕಾರಿಗಳ ಲೆಕ್ಕಾಚಾರವನ್ನು ಬುಡಮೇಲು ಮಾಡಿ ಸಕಾಲಕ್ಕೆ ಬಂದರು ಮುಖ್ಯಮಂತ್ರಿ. ಅವರದು ಸಮಾರೋಪ ಭಾಷಣ. ಅನಂತರ ನಿಸಾರರಿಂದ ಕೆಲ ಮಾತು. ಈ ಕಾರ್ಯಕ್ರಮದ ಅಧ್ಯಕ್ಷತೆ ನನ್ನದು. ಪತ್ತೇದಾರಿ ಸಿನೇಮಾದ ಕೊನೆಯ ಕ್ಷಣಗಳ ರೋಮಾಂಚನ. ಸಿಎಂ ಏನು ಮಾತಾಡುವರೋ, ಅದಕ್ಕೆ ಚಂಪಾ ಏನು ಮಾತಾಡುವರೋ ಎಂಬ ಕುತೂಹಲ ಜನಸ್ತೋಮವನ್ನು ತುದಿಗಾಲ ಮೇಲೆ ನಿಲ್ಲಿಸಿತ್ತು.

ಮುಖ್ಯಮಂತ್ರಿ ಬಂದಾಗ ಭಯಂಕರ ಕರತಾಡನ ವೇದಿಕೆಯ ಮೇಲೆ ನಾವೆಲ್ಲ ಹಾರ್ದಿಕವಾಗಿ ಸ್ವಾಗತಿಸಿದೆವು. ನೆಟ್ ವರ್ಕ್ ವ್ಯವಸ್ಥೆಯಿಂದಾಗಿ ಕಿರುಪರದೆಗಳ ಮೂಲಕ ವೇದಿಕೆಯ ವಿದ್ಯಮಾನಗಳೆಲ್ಲ ಎದುರಿಗೆ ನಡೆದಂತೆ. ಮುಖ್ಯ ಅತಿಥಿಗಳು, ನಿಸಾರ ಅಹಮದರು, ಯಡಿಯೂರಪ್ಪ ಮಾತು ಮುಗಿಯಿತು. ವೇದಿಕೆಯಲ್ಲಿ ಆಸೀನರಾಗಿದ್ದ ಮುಖ್ಯಮಂತ್ರಿಗಳದು ಗಂಟು ಮುಖ. ನಾನು ಮಂದಹಾಸದಿಂದ ಕೈ ಕುಲುಕಿದಾಗಲೂ ಗಂಟು ಸಡಿಲಾಗಿರಲಿಲ್ಲ. ನಮ್ಮಿಬ್ಬರ ನಡುವೆ ಒಂದು ಖಾಲಿ ಕುರ್ಚಿ ಮಾತಿಲ್ಲ ಕತೆ ಇಲ್ಲ, ಮಾತಿಲ್ಲ ಕತೆ ಇಲ್ಲ. ಸಭಿಕರು ಸಮಿತಿ ಪರವಾಗಿ ಸನ್ಮಾನ, ಕುಮಾರಸ್ವಾಮಿ ಅವರಿಗೆ ನನ್ನ ಅಮೃತ ಹಸ್ತದಿಂದಲೇ ಶಾಲು ಹೊದಿಸಿದೆ. ಹೊದಿಸುವಾಗ ಅವರ ಕಿವಿಯಲ್ಲಿ ಎಂಟು ಅಕ್ಷರಗಳ ಒಂದು ವಾಕ್ಯವನ್ನು ನಸುನಗುತ್ತ ಉಸುರಿದೆ.

ತಕ್ಷಣ ಮುಖ್ಯಮಂತ್ರಿ ಮುಖ ಆಕಾಶದಷ್ಟು ಅಗಲವಾಯಿತು! ಇದೇನು ಪವಾಡ ಎಂಬಂತೆ ಇಡೀ ಸಭಾಂಗಣ ಹೋ ಅಂತ ಕೂಗಿತು. ಕ್ಷಣಾರ್ಧದಲ್ಲಿ ಸಮ್ಮೇಳನ ಗೌರಿಶಂಕರದ ತುತ್ತ ತುದಿಯನ್ನು ಮುಟ್ಟಿ ಧ್ವಜಾರೋಹಣ ಮಾಡಿದ್ದಾಗಿತ್ತು

ಭಾಷಣ ಮಾಡಲು ಪೋಡಿಯಂ ಕಡೆಗೆ ಮುಖ್ಯಮಂತ್ರಿ ನಡೆದರು. ಏನು ಮಾತಾಡುವರೋ ಅಂತ ಎಲ್ಲರೂ ಮೈಯಲ್ಲಿ ಕಣ್ಣಾಗಿ, ಕಿವಿಯಾಗಿ ಕಾದಿರುವಾಗಲೇ ಅವರು ಬರಕೊಂಡು ಬಂದ ಭಾಷಣವನ್ನು ಓದಲು ಸುರುಮಾಡಿದರು. ಮತ್ತೊಮ್ಮೆ ಹೋ ಎಂದು ಕೂಗಿದ ಜನಸಮುದಾಯ ಖಾಲಿಯಾಗತೊಡಗಿತು. ಅವರ ಕಾಯುವಿಕೆಯ ಕ್ಷಣ ಮುಗಿದಿದ್ದವು. ಸ್ಫೋಟಕ ಸದ್ದನ್ನು ನಿರೀಕ್ಷಿದವರ ಕಿವಿಗೆ ರಘುಪತಿ ರಾಘವ ರಾಜಾರಾಮ್ ಭಜನೆ ಸುರಿದಂತಾಯಿತು.

ಕೆಲವರಿಗಾದರೂ ಘೋರ ನಿರಾಶೆಯಾಗಿರಬೇಕು. ಆದರೆ ಬಹುತೇಕ ಜನರಿಗೆ ಮಾತ್ರ ನಾಲ್ಕು ದಿನದ ಮಹಾಜಾತ್ರೆ ಸುಖಾಂತ್ಯ ಕಂಡಿದ್ದರ ಬಗ್ಗೆ ಸಮಾಧಾನವಾಗಿತ್ತು.

ಕಸಾಪ ಅಧ್ಯಕ್ಷನಾಗಿ ನನ್ನ ಕೊನೆಯ ಕಂತಿನ ಒಂದು ಮಾತು: “ನಮ್ಮ ಮುಖ್ಯಮಂತ್ರಿಗಳು ಕುಮಾರಸ್ವಾಮಿ: ಕುಮಾರ ಪ್ಲಸ್ ಸ್ವಾಮಿ. ನನಗೆ ಗೊತ್ತಿತ್ತು ‘ಕುಮಾರ’ ಸೆಟಗೊಂಡರೂ, ಅಥವಾ ಸೆಟಗೊಂಡಂತೆ ಮಾಡಿದರೂ, ಕೊನೆಗೆ ‘ಸ್ವಾಮಿ’ ಪ್ರಸನ್ನಗೊಂಡು ಸಮ್ಮೇಳನಕ್ಕೆ ಬರುತ್ತಾನೆ ಅಂತ ಗೊತ್ತಿತ್ತು.

*

ಮರುದಿನ ಚಂಡಮಾರುತ ಬೀಸಿ ಹೋಗಿ ಶಿವಮೊಗ್ಗದ ನಗರ ಬೀದಿಗಳು ಬಿಕೋ ಎನ್ನಲು ಪ್ರಾರಂಭಿಸಿದ ದಿನ. ನಿರುಮ್ಮಳದ ವಾತಾವರಣದಲ್ಲಿ ಮಾಧ್ಯಮ ಮಿತ್ರರೊಂದಿಗೆ ಹರಟೆಯ ಸ್ವರೂಪದ ಪತ್ರಿಕಾಗೋಷ್ಠಿ. ಶಿವಮೊಗ್ಗದ ಈ ಗೆಳೆಯರ ವ್ಯಕ್ತಿತ್ವದ ಮೇಲೆ ಮಲೆನಾಡಿನ ಛಾಪೇ. ರಾಜಧಾನಿಯ ಪತ್ರಿಕಾ ಬಳಗದ ಕೊಂಕಿಲ್ಲ. ಕುಹಕವಿಲ್ಲ, ಕಾರಸ್ಥಾನವಿಲ್ಲ. ಎಲ್ಲಾ ಖುಲ್ಲಾ ಖುಲ್ಲಾ. “ಏನಿದು? ಮುಖ್ಯಮಂತ್ರಿಗಳ ಕಿವಿಯಲ್ಲಿ ಹೇಳಿದ್ದು?” ಅವರ ನಾಲಗೆ ತುದಿ ಮೇಲಿನ ಪ್ರಶ್ನೆ.

ಬಿಟ್ಟುಕೊಟ್ಟೇನೆಯೇ ನಾನು? ಜೋರಾಗಿ ನಕ್ಕೆ: “ಹಂಗೆಲ್ಲ ಹೇಳೋ ಹಾಗಿಲ್ಲ. ಅದು ಗಾಯತ್ರಿ ಮಂತ್ರ ಬೇಕಾದರೆ ನೀವೂ ಬರ್ರಿ. ನಿಮಗೂ ಒಂದು ಮಂತ್ರ ಕಿವ್ಯಾಗ ಹೇಳ್ತಿನಿ. ”

“ಮತ್ತೇನಾದರೂ ಗುಟ್ಟು ಇವೆಯೇ? ಸಮ್ಮೇಳನ ಮುಗಿದ ನಂತರ ಹೇಳುತ್ತೇನೆ ಅಂದಿದ್ದಿರಲ್ಲ. “ಅವರ ಪ್ರಶ್ನೆ. ನಾನು ಮತ್ತೆ ಮಗುಮ್ಮಾಗಿ: “ಇನ್ನೂ ಒಂದು ಇದೆ. ಯಾವ ಕಾರಣದಿಂದಾದರೂ ಸಮ್ಮೇಳನ ಕೆಟ್ಟು ಹೋಗಿದ್ದರೆ ಆ ಗುಟ್ಟು ಹೇಳುತ್ತಿದ್ದೆ. ಈಗ ಅಂಥ ಪ್ರಸಂಗ ಇಲ್ಲವಲ್ಲ? ಕೆಲವು ಆಫ್ ದಿ ರೆಕಾರ್ಡ್ ವಿಷಯಗಳಿವೆ. ಅವೆಲ್ಲ ಆಮೇಲೆ.”

ನಮಗೆಲ್ಲ ಗೊತ್ತಿರುವ ರಹಸ್ಯವಿದು. ನಿಮ್ಮ ಮಾತಿಗೆ ಗರಿಷ್ಠ ಮಟ್ಟದ ಪ್ರಸಾರ ಪ್ರಚಾರ ಸಿಗಬೇಕಾದರೆ ನೀವು ಆಫ್ ದಿ ರೆಕಾರ್ಡ್ ಅಂತ ಹೇಳಬೇಕು! ….. ಅದರಲ್ಲೂ ‘ಅಪಪ್ರಚಾರ’ ವೆಂದರೆ ‘ಪ್ರಚಾರ’ ದ ಒಂದು ಪ್ರಕಾರವೆಂದೇ ಕಳೆದ ಮೂರೂವರೆ ದಶಕಗಳಿಂದ ನಂಬಿಕೊಂಡು ಬಂದ ಆಸಾಮಿ ನಾನು.

*

ತುಂಬ ಅಚ್ಚುಕಟ್ಟಾಗಿ, ಖಚಿತ ನಿಲುವುಗಳೊಂದಿಗೆ ಸಮ್ಮೇಳನ ಉದ್ಘಾಟಿಸಿದ ಜಿಎಸ್‌ಎಸ್: ಆತ್ಮಚರಿತ್ರೆ ಸ್ವಲ್ಪ ಹೆಚ್ಚಾಯಿತು ಅನ್ನಿಸಿದರೂ ದೊಡ್ಡ ಬೀಸಿನಲ್ಲಿ ಅನೇಕ ವಿಷಯಗಳನ್ನು ಚರ್ಚಿಸಿದ ಸಮ್ಮೇಳನಾಧ್ಯಕ್ಷ ನಿಸಾರ: ಅರ್ಥಪೂರ್ಣವಾಗಿ ಪಾಲ್ಗೊಂಡ ಹಿರಿಯ ಚಿಂತನಶೀಲ ರಾಜಕಾರಣಿಗಳು: ಧಾರ್ಮಿಕ ವಲಯದ ಅಗ್ರಗಣ್ಯರು: ಸಮ್ಮೇಳನದ ನಿರ್ಣಯಗಳನ್ನು ಅನುಷ್ಠಾನಗೊಳಿಸಿ ಮುಂದಿನ ಸಮ್ಮೇಳನಕ್ಕೆ ವರದಿ ನೀಡುವುದಾಗಿ ಆಶ್ವಾಸನೆ ನೀಡಿದ ಉಪಮುಖ್ಯಮಂತ್ರಿ. “ಕನ್ನಡದ ವಿಷಯ ಬಂದಾಗ ಅಧಿಕಾರವನ್ನು ಬೇಕಾದರೂ ತ್ಯಜಿಸಿ ಕನ್ನಡ ಪರವಾದ ಹೋರಾಟಕ್ಕೆ ಕಂಕಣ ತೊಡುವೆ” ಎಂದು ವೀರಸಂಕಲ್ಪ ತಳೆದ ಮುಖ್ಯಮಂತ್ರಿ…. ನಾಡ ಬಾಂಧವರಿಗೆಲ್ಲ ಆತ್ಮೀಯತೆಯ ಅಮೃತ ಉಣ್ಣಿಸಿದ ಶಿವಮೊಗ್ಗದ ನಾಗರಿಕರು: ಸರಕಾರ – ಪರಿಷತ್ತಿನ ಸಂಬಂಧ, ಸಾಂಸ್ಕೃತಿಕ ಲೋಕದ ಸ್ವಾಯತ್ತತೆ, ಕೋಮುವಾದಿ ಫ್ಯಾಶಿಸ್ಟ್ ಶಕ್ತಿಗಳ ವಿರುದ್ದ ನಡೆಯಬೇಕಾದ ಹೋರಾಟ, ಕನ್ನಡ ಜನಶಕ್ತಿಗೆ ರಾಜಕೀಯದ ರೂಪು ಕೊಡುವ ಸಾಧ್ಯತೆ. ಹೀಗೆ ಅನೇಕ ಕವಲುಗಳಿಗೆ ಹಾದಿ ಮಾಡಿಕೊಟ್ಟ ಶಿವಮೊಗ್ಗ ಸಮ್ಮೇಳನ…

ನಮ್ಮನ್ನು ಬಹುಕಾಲ ಅನೇಕ ನೆಲೆಗಳಲ್ಲಿ ಕಾಡಲಿರುವ ಒಂದು ಸಮಕಾಲೀನ ಮಹಾ ವಿದ್ಯಮಾನ: ಮಹಾ ಸ್ವಪ್ನ.

-೨೦೦೬