ಕಾಲದ ಯಾವುದೇ ಒಂದು ಕ್ಷಣಕ್ಕೂ ಸ್ವಂತದ ಅಸ್ತಿತ್ವವಾಗಲಿ, ಅನನ್ಯತೆಯಾಗಲಿ ಇರುವುದಿಲ್ಲ. ಅದೊಂದು ನಿರಂತರ ಪ್ರವಾಹ. ನಮ್ಮ ಸೀಮಿತ ಕಣ್ಣ ನೋಟಕ್ಕೆ, ಗ್ರಹಿಕೆಗೆ ಅನುಕೂಲವಾಗಲೆಂದು ಕಾಲವನ್ನು, ನಾವೇ ಸೃಷ್ಟಿಸಿಕೊಂಡ ಭಾಷೆಯ ಶಬ್ದಗಳ ಮೂಲಕ, ಭೂತ – ವರ್ತಮಾನ – ಭವಿಷ್ಯ ಅಂತ ವಿಭಜಿಸಿ ಕೊಂಡಿದ್ದೇವೆ. ವರ್ತಮಾನ ಎಂಬುದು ಭೂತವನ್ನು ತಲೆ ಮೇಲೆ ಹೊತ್ತುಕೊಂಡು ಭವಿಷ್ಯತ್ತಿನತ್ತ ನಡೆಯುತ್ತಿರುವ ಒಂದು ಕಾಲ ಬಿಂದು.

ಇಲ್ಲಿ ನಾನು ಎರಡು ರೂಪಕಗಳನ್ನು ಬಳಸಿದ್ದೇನೆ. ಒಂದು ‘ಪ್ರವಾಹ’ ಇನ್ನೊಂದು ‘ನಡೆಯುವುದು’, ಅಂದರೆ ‘ದಾರಿ’ . ಯಾವುದೇ ಪ್ರವಾಹಕ್ಕೂ ಒಂದು ‘ದಾರಿ’ ಇರುವುದರಿಂದ ‘ದಾರಿ’ ಎಂಬುದೇ ಮೂಲ ರೂಪಕ. ನಾವು ಬರೆಯುತ್ತಿರಲಿ ಅಥವಾ ಸುಮ್ಮನೇ ಕುಳಿತು ಯೋಚಿಸುತ್ತಿರಲಿ, ಈ ರೂಪಕವನ್ನು ಅನೇಕ ನೆಲೆಗಳಲ್ಲಿ ಬಳಸುತ್ತೇವೆ. ಸನ್ಮಾರ್ಗ – ದುರ್ಮಾರ್ಗ; ಬದುಕುವ ದಾರಿ; ದಾರಿ ಕಾಣದಾಗಿದೆ ತೋರೊ ರಾಘವೆಂದ್ರನೆ; ಮನುಜಮತ ವಿಶ್ವಪಥ …. ಹೀಗೆ.

ನಮ್ಮ ಸಾಹಿತ್ಯದಲ್ಲೂ ಅನೇಕ ಉದಾಹರಣೆಗಳಿವೆ.

ಕರುಣಾಳು ಬಾ ಬೆಳಕೆ
ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು

ಇದು ಬಿಎಂಶ್ರೀ. ೧೯೫೨ ರಲ್ಲಿ ಗೋಪಾಲಕೃಷ್ಣ ಅಡಿಗರು –

ನಡೆದು ಬಂದ ದಾರಿ ಕಡೆಗೆ
ತಿರುಗಿಸಬೇಡ –
ಕಣ್ಣ –
ಹೊರಳಿಸಬೇಡ

ಅಂದರು. ಅದಕ್ಕೆ ಉತ್ತರವೆಂಬಂತೆ ಕೆ.ಎಸ್.ನ ಅವರು

ನಡೆದ ದಾರಿಯ ತಿರುಗಿ ನೋಡಬಾರದು ಏಕೆ?
ನೋಡಿದರೆ ಆ ಹೂವೆ ನಲುಗಬಹುದು.
ಮುಂದೆ ನಡೆವಾಗಲೂ ಮಾತಾಡದಿರಲೇಕೆ?
ಹೌದು, ತುಂಬಿದ ಮನವೆ ತುಳಕಲಿ ಬಿಡು.

– ಅಂತ ಬರೆದರು. ನನ್ನ ‘ಕುಂಟಾ ಕುಂಟಾ ಕುರವತ್ತಿ’ ನಾಟಕದ ಒಂದು ಪ್ರಸಂಗವಿದು. ಅದು ಪುಣಾ – ಬೆಂಗಳೂರು ನಡುವಿನ ದಾರಿ: ಕುರಡ, ಕುಂಟ, ಕೆಪ್ಪ ಪಾತ್ರಧಾರಿಗಳು.

ಕುರುಡ: ಈ ರೋಡು ಎತ್ತಾಗ ಹೊಕ್ಕತಿ?

ಕುಂಟ: ಈ ರೋಡು .. ಬೆಂಗಳೂರಿಗೆ … ಹೋಗೋದಿಲ್ಲ.

ಕೆಪ್ಪ: ಮತ್ತ ಎಲ್ಲಿಗೆ ಹೊಕ್ಕತಲೇ ಕುಂಟಾ?

ಕುಂಟ: ಈ ರೋಡು … ಪುಣಾಕ್ಕೆ .. ಹೋಗೋದಿಲ್ಲ.

ಇಬ್ಬರೂ: ನೀ ಏನು ಅಂತಿಲೇ ಕುಂಟಾ?

ಕುಂಟ: ಈ ರೋಡು … ಇಲ್ಲೇ ಇರ್ತತಿ

*

ನಮ್ಮೆದುರು ಒಂದು ವಿಷಯ ಇದೆ: ಸ್ವಾತಂತ್ಯ್ರೋತ್ತರ ಭಾರತ: ಪರಂಪರೆ – ಪ್ರಯೋಗ. ಸ್ವಾತಂತ್ಯ್ರೋತ್ತರ ಭಾರತಕ್ಕೆ ಐವತ್ತಾರು ವರ್ಷದ ಇತಿಹಾಸವಿದೆ. ಸ್ವಾತಂತ್ಯ್ರ ಪೂರ್ವ ಭಾರತಕ್ಕೆ? ಸಾವಿರಾರು ವರ್ಷಗಳ ಇತಿಹಾಸವಿದೆ. ನಾವೆಲ್ಲ ವ್ಯಕ್ತಿಗಳು, ಸಮುದಾಯಗಳು. ನಮ್ಮ ಆಯಷ್ಯ ಸೀಮಿತ. ಈ ಸೀಮಿತ ಬದುಕಿನ ಬೀಸಿನಲ್ಲಿ ಕೆಲವು ‘ನಿರ್ಣಾಯಕ’ ಹಂತಗಳನ್ನು ಸುಲಭವಾಗಿ ಗುರುತಿಸಬಹುದು. ಆದರೆ ದೇಶದ ಆಯುಷ್ಯ ದೊಡ್ಡದು. ದೇಶದ ಚರಿತ್ರೆಯಲ್ಲಿ ಒಂದೊಂದು ಹಂತವನ್ನೂ ಶತಮಾನಗಳ ಲೆಕ್ಕದಲ್ಲಿಯೇ ಅಳೆಯಬೇಕಾಗುತ್ತದೆ. ನಾವು ಈ ದೇಶ ಸಾಗಿ ಬಂದ ಸಾವಿರಾರು ಮೈಲುಗಳ ಹಾದಿಯಲ್ಲಿ ಕೆಲವೇ ಮೈಲುಗಳ ಪಯಣಿಗರು. ಈಗ ನಾವೇನು ಮಾಡೋಣ?

ಅಡಿಗರ ಹಾಗೆ ನಡೆದು ಬಂದ ದಾರಿಯ ಕಡೆ ಕಣ್ಣ ಹೊರಳಿಸದೆ ಮುನ್ನುಗ್ಗಬೇಕೇ? ಕೆ.ಎಸ್.ನ ಹಾಗೆ ಮುಂದೆ ಮುಂದೆ ಹೆಜ್ಜೆ ಹಾಕುತ್ತಲೇ ಹಿಂದೆ ಹಿಂದೆ ನೋಡುತ್ತಿರಬೇಕೆ? ಕುಂಟನ ಹಾಗೆ ಈ ಹಾದಿ ಇಲ್ಲೇ ಇರುತ್ತದೆ ಅಂತ ಇಲ್ಲಿಯೇ ಕುಕ್ಕರಿಸಬೇಕೇ? ಅಥವಾ ಮುಸುಕಿದ ಮಬ್ಬಿನೊಳಗೆ ದಾರಿ ತೋರಲು ಮೊರೆಯಿಡಬೇಕೇ?

ಇವೆಲ್ಲವನ್ನು ಏಕಕಾಲಕ್ಕೆ ಮಾಡಬೇಕಾದ ಅನಿವಾರ್ಯತೆ ನಮ್ಮದು.

*

ವರ್ತಮಾನ ಎಂಬುದು ಭೂತವನ್ನು ತಲೆಮೇಲೆ ಹೊತ್ತುಕೊಂಡು ಭವಿಷ್ಯತ್ತಿನತ್ತ ನಡೆಯುತ್ತಿರುವ ಒಂದು ಕಾಲ ಬಿಂದು – ಅಂದೆ. ಇದೆ ಒಂದು ರೂಪಕವೇ ಇಲ್ಲಿ ದಾರಿ ಇದೆ: ನಡೆಯಬೇಕಾದ ಕಾಲುಗಳಿವೆ: ತಲೆ ಮೇಲೆ ಹೊರೆ ಇದೆ. ನಮ್ಮೆದುರಿಗಿರುವ ‘ಪರಂಪರೆ’ ಮತ್ತು ‘ಪ್ರಯೋಗ’ ಎಂಬ ಶಬ್ದಗಳ ಈ ರೂಪಕದಲ್ಲಿ ಅಡಗಿವೆ. ಮಾನವ ಕುಲದ ಇತಿಹಾಸವೆಂಬುದು ಈ ರೂಪಕದ ವಿಸ್ತಾರವೇ ಆಗಿದೆ.

ಬಿಡಿ ಇಲ್ಲದೆ ಇಡಿಯಿಲ್ಲ: ಇಡಿ ಇಲ್ಲದೆ ಬಿಡಿಯಿಲ್ಲ: ಇದು ಮನುಷ್ಯ ತನಗಾಗಿ ಸಮುದಾಯದ ಪರಿಕಲ್ಪನೆ ರೂಪಿಸಿಕೊಳ್ಳಲು ಪ್ರಕೃತಿಯಿಂದ ಪ್ರಜ್ಞಾಪೂರ್ವಕಾವಾಗಿ ಆಯ್ದುಕೊಂಡ ನಿರ್ದೇಶಕ ತತ್ವ. ಆದರೆ ಮನುಷ್ಯ ನಿರ್ಮಿತ ಸಮುದಾಯ ಪ್ರಕೃತಿಯ ಯಥಾವತ್ ನಕಲು ಅಲ್ಲ. ಬಹುಶಃ ಪ್ರಕೃತಿಯಲ್ಲಿ ಇಲ್ಲದ ಕೆಲವು ಮೌಲ್ಯಗಳನ್ನು ಸೃಷ್ಟಿಸಿಕೊಂಡು ಅವುಗಳಿಗೆ ಅನುಗುಣವಾಗಿ ತನ್ನ ಬದುಕಿನ ವಿನ್ಯಾಸವನ್ನು ಅವನು ರೂಪಿಸಿಕೊಂಡಾಗ ಅದು ‘ಸಂಸ್ಕೃತಿ’ ಆಯಿತು. ಈ ಪ್ರಕೃತಿ – ಸಂಸ್ಕೃತಿಗಳ ಸಂಬಂಧ ವೈರುಧ್ಯಗಳ ಸಂಘರ್ಷವೆಂದೇ ಹೇಳಬೇಕು. ಇರಲಿ.

ಒಂದು ಸಮುದಾಯ ಕಾಲ – ದೇಶ ಬದ್ದವಾಗಿ, ತನ್ನ ಸಹಜ ಅಸ್ತಿತ್ವಕ್ಕೆ ಅನಿವಾರ್ಯವಾದ ಮೌಲ್ಯಗಳನ್ನು ಕಲ್ಪಿಸಿಕೊಂಡು ಅವುಗಳ ಅನುಷ್ಠಾನಕ್ಕಾಗಿ ಕೆಲವು ರೀತಿ – ರಿವಾಜುಗಳನ್ನು ರೂಢಿಗೆ ತರುತ್ತದೆ. ಇದಕ್ಕೆ ‘ಸಂಪ್ರದಾಯ’ ಅನ್ನುತ್ತಾರೆ. ಆದರೆ ಅನೇಕ ಕಾರಣಗಳಿಂದಾಗಿ ಸಮುದಾಯವು ಅನಿವಾರ್ಯ ಬದಲಾವಣೆಗಳಿಗೆ ತುತ್ತಾಗಬೇಕಾದಾಗ ಒಂದು ಸಂದರ್ಭದ ಸಂಪ್ರದಾಯ ಮತ್ತೊಂದು ಸಂದರ್ಭಕ್ಕೆ ‘ಗೊಡ್ಡು’ ಸಂಪ್ರದಾಯವಾಗಿ, ನಂಬಿಕೆಗಳು ‘ಮೂಢ’ ನಂಬಿಕೆಗಳಾಗಿ ಪರಿಣಮಿಸುತ್ತವೆ. ಸಮುದಾಯದ ಒಳಗೇ ಪ್ರತಿಭಟನೆ, ಬಂಡಾಯಗಳು ಅಂಕುರಿಸಿ ಸುಧಾರಣೆ. ಪರಿವರ್ತನೆ, ಕ್ರಾಂತಿಯ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ಹೊಸ ಮೌಲ್ಯ, ನಂಬಿಕೆಗಳು ಮೊದಲ ಹಂತದಲ್ಲಿ ‘ಪ್ರಯೋಗ’ಗಳಾಗಿ, ಅನಂತರ ಒಪ್ಪಿತವಾದರೆ ‘ಸಂಪ್ರದಾಯ’ಗಳಾಗಿ ನೆಲೆಯೂರುತ್ತವೆ. ಈ ಪ್ರಯೋಗ, ಸ್ವೀಕರಣೆ, ಸಂಪ್ರದಾಯ, ಪ್ರತಿಭಟನೆ, ನಿರಾಕರಣೆಗಳ ಒಟ್ಟು ಚಲನಶೀಲ ವಿದ್ಯಮಾನಕ್ಕೆ ‘ಪರಂಪರೆ’ (Tradition) ಎನ್ನಬಹುದು. ‘ಪರಂಪರೆ’ ಮತ್ತು ‘ಪ್ರಯೋಗ’ ಎಂಬ ಪದಗಳನ್ನು ನಾನು ಅಥೈಸಿಕೊಂಡ ಬಗೆ ಇದು.

ಅಗಸ್ಟ್ ೧೫, ೧೯೪೭: ನಮ್ಮ’‘ಭಾರತ’ ಕ್ಕೆ ‘ಸ್ವಾತಂತ್ಯ್ರ’ ವನ್ನು ತಂದುಕೊಟ್ಟ ದಿನ. ಈ ‘ಸ್ವಾತಂತ್ಯ್ರ’ ಎಂಬ ಪದ ಅನೇಕ ಸ್ತರಗಳಲ್ಲಿ ಅರ್ಥಪೂರ್ಣ ಹಾಗೂ ಧ್ವನಿಪೂರ್ಣ. ಅದು ಕೇವಲ ಬ್ರಿಟಿಶ್ ಸಾಮ್ರಾಜ್ಯಶಾಹಿಯಿಂದ ಬಿಡುಗಡೆ ತಂದ ಸ್ವಾತಂತ್ಯ್ರವಾಗಿರದೆ, ಸಾವಿರಾರು ವರ್ಷಗಳ ದಬ್ಬಾಳಿಕೆಯಿಂದ ವಿಮೋಚನೆ ತಂದ ಸ್ವಾತಂತ್ಯ್ರವಾಗಿದೆ. ಏಕೆಂದರೆ ಭವ್ಯ, ದಿವ್ಯ, ಸನಾತನವೆಂದು ಅನೇಕರಿಂದ ವರ್ಣಿತವಾಗಿರುವ ಈ ದೇಶದ ‘ಸಂಸ್ಕೃತಿ’ ಯೇ ಅಸಮಾನತೆಯ ಆಸ್ತಿಬಾರದ ಮೇಲೆ ಕಟ್ಟಲಾದ ದೇವಸ್ಥಾನವೋ ಅರಮನೆಯೋ ಆಗಿತ್ತು. ದೇವರು – ಧರ್ಮದ ಹೆಸರಿನಲ್ಲಿ ಪುರೋಹಿತರು, ಅವರ ಆಶೀರ್ವಾದದ ನೆರಳಿನಲ್ಲಿ ರಾಜರು – ಸಾಮಂತರು -ವ್ಯಾಪಾರಿಗಳು ಬಹುಜನ ಸಮುದಾಯದ ಶ್ರಮ – ಸಾಮರ್ಥ್ಯವನ್ನು ಬಳಸಿಕೊಂಡು ಆ ಸಮುದಾಯವನ್ನು ಗುಲಾಮರನ್ನಾಗಿ ನಡೆಸಿಕೊಂಡ ಕ್ರೂರ ಕಥೆ ಈ ದೇಶದ ಇತಿಹಾಸ. ಅಲ್ಲಲ್ಲಿ ಆಗಾಗ ಸ್ಥಳೀಯ ನೆಲೆಗಳಲ್ಲಿ ಇಂಥ ವ್ಯವಸ್ಥೆಯ ವಿರುದ್ಧ ಸಣ್ಣ ದೊಡ್ಡ ಪ್ರಮಾಣದ ದಂಗೆಗಳಾದರೂ ಕೂಡ ಅವೆಲ್ಲ ‘ಕ್ರಾಂತಿ’ ಯಾಗಿ ರೂಪು ಪಡೆಯದೆ ಯಥಾಸ್ಥಿತಿಯೇ ಮುಂದುವರೆಯಿತು. ಪಾಶ್ಚತ್ಯ ಜಗತ್ತಿನಲ್ಲಿ ಔದ್ಯೋಗಿಕ ಕ್ರಾಂತಿಯ ನಂತರ ವಿಕಿರಣಗೊಂಡ ಶಕ್ತಿ ತರಂಗಗಳು ಬ್ರಿಟಿಶ್ ವಸಹಾತುಶಾಹಿಯ ರೂಪದಲ್ಲಿ ಈ ದೇಶಕ್ಕೆ ಅಪ್ಪಳಿಸಿದಾಗಲೇ ಇಲ್ಲಿ ಸಂಚಲನ ಪ್ರಾರಂಭವಾದದ್ದು. ಆನಂತರದ ಕತೆ ನಮಗೆ ಗೊತ್ತು. ವ್ಯಾಪಾರಕ್ಕಾಗಿ, ಧರ್ಮಪ್ರಸಾರಕ್ಕಾಗಿ ಬಂದವರು ತಮ್ಮ ಭಾಷೆಯನ್ನು ತಂದರು, ಅದರಗುಂಟ ನಾವು ಕಂಡು ಕೇಳಿ ಅರಿಯದ ಸ್ವಾತಂತ್ಯ್ರ, ಸಮಾನತೆ, ವಿಶ್ವಬಂಧುತ್ವದ ಮೌಲ್ಯಗಳು ಬಂದವು. ಅಕ್ಷರ – ವಿದ್ಯೆ – ಜ್ಞಾನಗಳಿಂದ ವಂಚಿತರಾದ ಬಹುಜನಕ್ಕೆ ಸಾರ್ವತ್ರಿಕ ಶಿಕ್ಷಣ ದೊರೆಯಿತು. ಸ್ವಪ್ರಜ್ಞೆ ಸಮುದಾಯ ಪ್ರಜ್ಞೆ ಜಾಗೃತಗೊಂಡು ಜನಪರ ಆಂದೋಲನಗಳು ಕುಡಿಯೊಡೆದವು ಇಡೀ ಹತ್ತೊಂಬತ್ತನೆಯ ಶತಮಾನ ಮತ್ತು ಇಪ್ಪತ್ತನೆಯ ಶತಮಾನದ ಪೂರ್ವಾರ್ಧಗಳು ಜಾಗೃತಿ – ಸಂಘರ್ಷಗಳ ಸಂಚಲನದ ಮೂಲಕ ಇಂಡಿಯಾ ದೇಶದ ಚರಿತ್ರೆಯಲ್ಲಿ ನಿರ್ಣಾಯಕ ಪಾತ್ರವಹಿಸಿ, ಇಪ್ಪತ್ತೊಂದನೆಯ ಶತಮಾನದ ಆದಿಯಲ್ಲಿ ನಿಂತು ನಾವು – ನೀವು ‘ಸ್ವಾತಂತ್ಯ್ರೋತ್ತರ ಭಾರತ’ದ ೫೬ ವರ್ಷಗಳ ಅಲ್ಪ ಅವಧಿಯತ್ತ ಕಣ್ಣು ಹೊರಳಿಸಿ ನೋಡುವ ಕ್ಷಣವನ್ನು ನಿರ್ಮಿಸಿಕೊಟ್ಟಿವೆ.

ಆಗಾಧ ಅಂಧಕಾರದ ನಮ್ಮ ಇತಿಹಾಸವನ್ನು ನೆನೆದಾಗ ಈ ಕ್ಷಣ ನಿಜವಾಗಿಯೂ ರೋಮಾಂಚಕ ಕ್ಷಣ. ಸಾವಿರಾರು ವರ್ಷಗಳಲ್ಲಿ ನಮ್ಮ ಕೋಟ್ಯಾನುಕೋಟಿ ಬಾಂಧವರು ಇಂತ ಕತ್ತಲೆಯಲ್ಲಿ ಕರಗಿಹೋದರಲ್ಲ! ಜನವರಿ ೨೬, ೧೯೫೦ ರಂದು ಸ್ವಾತಂತ್ರ ಭಾರತ ತನ್ನನ್ನು ‘ಪ್ರಜಾರಾಜ್ಯ’ ಎಂದು ಘೋಷಿಸಿಕೊಂಡು ‘ಪ್ರಜಾಸತ್ತೆ’ಯೇ ತನ್ನ ಧರ್ಮವೆಂದು ಸ್ವೀಕರಿಸಿತು. ಅದರೀಚೆಯ ಅರ್ಧ ಶತಮಾನ ನಮ್ಮ ಕಣ್ಣೆದುರಿಗಿದೆ. ಇಲ್ಲಿ ಸೇರಿರುವ ನಾವು ಬಹುತೇಕ ಜನ ‘ಸ್ವಾತಂತ್ಯ್ರೋತ್ತರ ಭಾರತದೊಂದಿಗೆ ಬದುಕುತ್ತಿರುವವರು. ಹೀಗಾಗಿ ಈ ಅವಧಿಯ ನಮ್ಮ ದೇಶದ ಚರಿತ್ರೆಯ ಮೌಲ್ಯಮಾಪನ ಮಾಡಲು ಇತಿಹಾಸಕಾರರಿಗೆ ಅವಶ್ಯವಿರುವ ‘ಕಾಲದ ಅಂತರ’ ನಮಗಿಲ್ಲ. ಹೀಗಾಗಿ ನಮ್ಮ ಪ್ರತಿಕ್ರಿಯೆಗಳಿಗೆ, ಪ್ರತಿಸ್ಪಂದನೆಗಳಿಗೆ ‘ನಿರ್ಣಯ’ಗಳ ಮೌಲಿಕತೆ ಬರಲಿಕ್ಕಿಲ್ಲ.

ನಮ್ಮದು ಕೆಎಸ್‌ನ್ ನಿಲುವು: ಮುಂದೆ ನಡೆಯುತ್ತಿದ್ದಂತೆಯೇ ಈವರೆಗೆ ನಡೆದ ದಾರಿಯ ಕಡೆಗೆ ತಿರುಗಿ ನೋಡುವುದು ಕಣ್ಣಿಗೂ ಕೆಲಸ, ಕಾಲಿಗೂ ಕೆಲಸ ‘ರಾಜಕೀಯ’ದಿಂದಲೇ ನನ್ನ ಮಾತು ಸುರು ಮಾಡುತ್ತೇನೆ.

*

ನಾವು ಬಳಸುವ ಪದಗಳಿಗೆ ಕನಿಷ್ಠ ಎರಡು ಸ್ತರಗಳಿರುತ್ತವೆ: ಒಂದು ಸಾಮಾನ್ಯ ಅರ್ಥ, ಇನ್ನೊಂದು ವಿಶಿಷ್ಠ ಅರ್ಥ. ಉದಾ: ದೇವರಿಗೆ ಹಣ್ಣುಕಾಯಿ ಮಾಡಿಸುವುದು. ಇಲ್ಲಿ ಹಣ್ಣು ಎಂದರೆ ಮಾವಿನ ಹಣ್ಣು, ಹುಣಸೇ ಹಣ್ಣು ಅಲ್ಲ. ಬಾಳೇ ಹಣ್ಣೇ. ಕಾಯಿ ಅಂದರೆ ಮೆಣಸಿನ ಕಾಯಿ, ಲಿಂಬೀಕಾಯಿ ಅಲ್ಲ: ತೆಂಗಿನ ಕಾಯಿಯೇ. ಸಮುದಾಯದ ಒಳಗೆ ಒಂದು ವಿಶಿಷ್ಟ ಸಂದರ್ಭದಲ್ಲಿ ಎಲ್ಲರಿಗೂ ಒಪ್ಪಿತವಾದ, ಎಲ್ಲರಿಗೂ ಗೊತ್ತಿರುವ ಅರ್ಥ ಇದು. ಹಾಗೆಯೇ ‘ರಾಜಕೀಯ’ ‘ರಾಜಕಾರಣ’ ಅಂದರೆ ನಮಗೆ ತಟ್ಟನೆ ನೆನಪಾಗುವುದು ಮಂತ್ರಿಗಳು, ವಿಧಾನ ಸೌಧ, ಚುನಾವಣೆ, ಪಕ್ಷಗಳು, ಪಕ್ಷಾಂತರ ಇವೇ ಮೊದಲಾದವು. ಆದರೆ ತೀರ ವಿಶಾಲವಾದ ಮತ್ತು ಆಳವಾದ ಅರ್ಥದಲ್ಲಿ ವ್ಯವಸ್ಥೆಗೆ ಸಾಮಾಜಿಕ. ಸಾಂಸ್ಕೃತಿಕ, ಆರ್ಥಿಕ, ಶೈಕ್ಷಣಿಕ, ನೈತಿಕ ಮುಂತಾದ ಆಯಾಮಗಳಿರುತ್ತವೆ.

ನಾವು ಒಪ್ಪಿಕೊಂಡಿರುವ ಸಂವಿಧಾನ (Constitution) ಬೈಬಲ್, ಕುರಾನ್, ವೇದ, ಗ್ರಂಥ ಸಾಹೀಬ್ ಗಳ ರೀತಿಯಲ್ಲಿ ತ್ರಿಕಾಲಬಾಧಿತ ಎಂದುಕೊಂಡಿರುವ ‘ಸತ್ಯ’ಗಳ ಮೂಟೆಯಾಗಿರದೆ. ಕಾಲಧರ್ಮಕ್ಕನುಗುಣವಾಗಿ ಬದಲಾವಣೆಗಳನ್ನು ಒಳಗು ಮಾಡಿಕೊಳ್ಳಲು ಅವಕಾಶವಿರುವ ಸಂವೇದನಾಶೀಲ ಪಠ್ಯವಾಗಿರುವುದು ಸಹಜ., ಹೀಗಾಗಿ ಕಳೆದ ಅರ್ಧ ಶತಮಾನದಲ್ಲಿ ಅನೇಕ ತಿದ್ದುಪಡಿಗಳಾಗಿವೆ. ಸಮಾಜವಾದ, ಸೆಕ್ಯುಲರಿಸಂ, ಸಾಮಾಜಿಕ ನ್ಯಾಯ ಮುಂತಾದ ಪರಿಕಲ್ಪನಗಳು ಸಂವಿಧಾನದ ಭಾಗಗಳಾಗಿದ್ದು ಈ ರೀತಿಯಲ್ಲಿ ಜಗತ್ತಿನ ಅತ್ಯುತ್ತಮ ಸಂವಿಧಾನಗಳನ್ನು ಅಭ್ಯಸಿಸಿ ತಯಾರಿಸಲಾದ ಈ ಸಂವಿಧಾನ ನಮ್ಮ ದೇಶದ ವಾಸ್ತವಗಳಿಗೆ ಅನುಗುಣವಾದ ಮತ್ತು ನಮ್ಮ ಆಶೋತ್ತರಗಳ ಅನುಷ್ಠಾನಕ್ಕೆ ಮಾರ್ಗದರ್ಶಕವಾದ ಸೂಚಿ ಎಂದು ನಾನು ತಿಳಿದಿರುವೆ.

ಸಂವಿಧಾನದ ಆಶಯಗಳಿಗೆ ಕಣ್ಣು – ಮೂಗು ಮೂಡಿಸುವುದು ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗಗಳ ಜವಾಬ್ದಾರಿ, ಈ ಮೂರು ಅಂಗಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದಾಗಲೇ ರಾಷ್ಟ್ರದ ಬದುಕಿಗೆ ಒಂದು ಸಮತೋಲನ ಸಾಧ್ಯ. ಮೊದಲ ಕೆಲವು ದಶಕಗಳಲ್ಲಿ ಸಮಸ್ಯೆ ಇರಲಿಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ಆತಂಕದ ಪರಿಸ್ಥಿತಿ ತಲೆದೋರಿದೆ.

ಪ್ರಜೆಗಳಿಂದ ನೇರವಾಗಿ ಆಯ್ಕೆಯಾಗುವ ಪ್ರಜಾ – ಪ್ರತಿನಿಧಿಗಳು, ಶಾಸಕರು ಮತ್ತು ಸಂಸದರು, ತಮ್ಮ ಮತಕ್ಷೇತ್ರಗಳ ಸಮಸ್ತ ಪ್ರಜೆಗಳನ್ನು ಪ್ರತಿನಿಧಿಸದೆ ತಮ್ಮ ಮನೆತನ, ಜಾತಿ – ಕುಲ, ಪಕ್ಷಗಳ ಹಿತಾಸಕ್ತಿಯೇ ಮುಖ್ಯ ಎಂದು ತಿಳಿಯುವ ಪ್ರವೃತ್ತಿ ಅಧಿಕವಾಗಿದೆ. ಇವರಿಂದಲೇ ಆಯ್ಕೆಯಾಗುವ ಸಚಿವ ಸಂಪುಟಗಳೂ ಅಷ್ಟೆ. ದೇಶದ ಆಡಳಿತದ ಜವಾಬ್ದಾರಿ ಹೊತ್ತ ಅಧಿಕಾರಶಾಹಿ, ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳ ‘ಸೇವೆ’ಯೇ ಮುಖ್ಯವೆಂದು ಭಾವಿಸಿ. ಒಟ್ಟು ಜನಸಮುದಾಯಕ್ಕೆ ‘ವಿರೋಧಿ’ ಎಂಬ ಪಟ್ಟ ಗಳಿಸುತ್ತಿದೆ. ಶಾಸಕಾಂಗ ಹಾಗೂ ಕಾರ್ಯಾಂಗಗಳ ವೈಫಲ್ಯದಿಂದಾಗಿ ‘ನ್ಯಾಯಾಂಗ’ವೇ ಮುಂದಾಗಿ ಅನೇಕ ಸಮಸ್ಯೆಗಳ ಪರಿಹಾರಕ್ಕೆ ಕೈಹಾಕುತ್ತಿರುವುದು. ಇತ್ತೀಚಿನ ಬೆಳವಣಿಗೆ. ನ್ಯಾಯಾಂಗ ಈ ‘ಕ್ರಿಯಾಶೀಲತೆ’ (Activism) ವಿವಾದಾಸ್ಪದವಾದ ವಿಧ್ಯಮಾನ. ಸಣ್ಣ ಸಣ್ಣ ಸಮಸ್ಯೆಗಳಿಗೂ ಕೋರ್ಟೇ ಗತಿಎಂದು ಈ ದೇಶದ ಸಾಮಾನ್ಯ ಪ್ರಜೆ ಭಾವಿಸುವುದಾದರೆ ಅದು ನಮ್ಮ ಪ್ರಜಾಸತ್ತೆಗೆ ಬಡಿದ ಪಾರ್ಶ್ವವಾಯು ಎಂದೆ ಹೇಳಬೇಕು.

ಈ ಐವತ್ತು ವರ್ಷಗಳ ನಮ್ಮ ಆರ್ಥಿಕ ನೀತಿ ಕೂಡ ಇಂದು ಅಪರಾಧಿ ಸ್ಥಾನದಲ್ಲಿದೆ. ಗ್ರಾಮಸ್ವರಾಜ್ಯ. ವಿಕೇಂದ್ರೀಕರಣ, ಕೃಷಿಪ್ರಾಧಾನ್ಯ. ಸಣ್ಣ ಮತ್ತು ಮಧ್ಯಮ ಕೈಗಾರಿಕೆ – ಇತ್ಯಾದಿ ಪರಿಕಲ್ಪನೆಗಳು ಗಾಂಧೀಜಿಯ ಕನಸುಗಳು, ಈ ನೆಲದ ವಾಸ್ತವಕ್ಕೇ ಹೊಂದಿಕೊಂಡ ಈ ಕನಸುಗಳು, ಗಾಂಧೀಜಿಯ ಕನಸುಗಳು ಗಾಂಧೀಜಿಯ ಜೊತೆಗೇ ಮಣ್ಣುಗೂಡಿದವು ಪ್ರಥಮ ಪ್ರಧಾನಿ ನೆಹರೂ ಕೂಡ ಕನಸುಗಾರರೇ. ನೆಹರೂ ಪ್ರಣೀತ ಮಿಶ್ರ ಆರ್ಥಿಕ ನೀತಿ ಮೊದಲ ದಶಕದಲ್ಲಿ ಪರಿಣಾಮಕಾರಿಯಾಗಿತ್ತು. ಇಂಡಿಯಾ ಅಭಿವೃದ್ಧಿ ಪಥದಲ್ಲಿ ಮುಂದೆ ಹೆಜ್ಜೆಹಾಕಿತು. ಆದರೆ ಸೋವಿಯತ್ ರಶಿಯಾ ಪತನಗೊಂಡು ಶೀತಲ ಸಮರ ಮುಕ್ತಾಯಗೊಂಡು ೧೯೯೦ರ ದಶಕದಲ್ಲಿ ತೀವ್ರಗೊಂಡ ಜಾಗತೀಕರಣ ಪ್ರಕ್ರಿಯೆ. ಮುಖ್ಯವಾಗಿ ಉದಾರೀಕರಣ ಮತ್ತು ಖಾಸಗೀಕರಣಗಳ ಮೂಲಕ ಉಲ್ಬಣಗೊಂಡು ಇಂದು ಇಂಡಿಯಾದ ಆರ್ಥಿಕ ನೀತಿಯನ್ನೇ ಬುಡಮೇಲು ಮಾಡತೊಡಗಿದೆ. ಇಂದು ಜಗತ್ತಿನ ಯಾವುದೇ ರಾಷ್ಟ್ರದ ಭವಿಷ್ಯ ಆ ರಾಷ್ಟ್ರದ ಕೈಯಲ್ಲಿಲ್ಲ. ಸಾಮ್ರಾಜಶಾಹಿ ಮತ್ತು ಬಂಡವಾಳಶಾಹಿ ಶಕ್ತಿಗಳು ಬಲಾಡ್ಯ ಅಮೇರಿಕಾದ ನೇತೃತ್ವದಲ್ಲಿ ಮೂರನೆಯ ಜಗತ್ತಿನ ಹಿಂದುಳಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಸ್ವಾತಂತ್ಯ್ರ ಮತ್ತು ಸಾರ್ವಭೌಮತ್ವಗಳಿಗೇ ಸವಾಲಿಗಿವೆ. ಉದಾರೀಕರಣ ಮತ್ತು ಖಾಸಗೀಕರಣಗಳು ನಮ್ಮ ಸಂವಿಧಾನದ ಸಮಾಜವಾದ, ಸಾಮಾಜಿಕ ನ್ಯಾಯ ಸಮಾನತೆ ಮುಂತಾದ ಮೂಲಭೂತ ಪರಿಕಲ್ಪನೆಗಳನ್ನೇ ನುಂಗಿ ಹಾಕುತ್ತಿವೆ. ಬಂಡವಾಳಶಾಹಿಯ ಕೇಂದ್ರೀಕರಣ ನೀತಿ ಉಳ್ಳವರ ಮತ್ತು ಇಲ್ಲದವರ ನಡುವಿನ ಕಂದಕವನ್ನು ಅಗಲಗೊಳಿಸುತ್ತಿದ್ದು ಮತ್ತೆ ನಮ್ಮ ದೇಶವನ್ನು ಮಧ್ಯಯುಗದ ಕರಾಳ ಕಾಂಡಕ್ಕೇ ಕರೆದೊಯ್ಯುತ್ತಿರುವಂತಿದೆ. ಅದೇ ರಾಜ – ಮಹಾರಾಜರು, ಸಾಮಂತರು, ಜಮೀನುದಾರರು .. ಅದೇ ದರ್ಪ, ದೌರ್ಜನ, ಶೋಷಣೆ, ಗುಲಾಮಗಿರಿ.

ಇದಕ್ಕೆ ಸಂವಾದಿಯಾಗಿ ಇನ್ನೊಂದು ಗಂಡಾಂತರಕಾರಿ ಬೆಳವಣಿಗೆ ತನ್ನ ಕ್ರೂರ ಬಾಹುಗಳಿಂದ ನಮ್ಮನ್ನು ತಬ್ಬಲು ಹವಣಿಸುತ್ತಿದೆ. ಜನ್ಮಾಧಾರಿತ ಜಾತಿ, ಜಾತಿ ಆಧಾರಿತ ಸ್ಥಾನ – ಮಾನ – ಅವಕಾಶಗಳು ಬುನಾದಿಯಾಗಿದ್ದ ಈ ದೇಶದ ಸಾವಿರಾರು ವರ್ಷಗಳ ನಿಸರ್ಗ ವಿರೋಧಿ ಮತ್ತು ವಿರೋಧಿ ಸಾಮಾಜಿಕ ವ್ಯವಸ್ಥೆಯನ್ನು ಸಾಮಾಜಿಕ ನ್ಯಾಯ ಮತ್ತು ಸೆಕ್ಯುಲರಿಸಂ (ಧರ್ಮ ನಿರಪೇಕ್ಷತೆ) ಮುಂತಾದ ಪರಿಕಲ್ಪನೆಗಳು ಇಂದು ಗಂಡಾಂತರದಲ್ಲಿವೆ. ಇಂಡಿಯಾದ ವ್ಯಕ್ತಿತ್ವವನ್ನೇ ವಿರೂಪಗೊಳಿಸಿದ ಪುರೋಹಿತಶಾಹಿ ಮತ್ತೆ ತನ್ನ ಶಕ್ತಿಯನ್ನು ಕ್ರೋಡಿಕರಿಸಿಕೊಂಡು. “ನಮಗೆ ಮನುಧರ್ಮ ಪ್ರಣೀತ ವ್ಯವಸ್ಥೆಯೇ ಇರಲಿ: ಈಗಿನ ಸಂವಿಧಾನವನ್ನು ಮೂಲೆಗೆಸೆಯಿರಿ. Scrap this Constitution” ಎಂದು ಘೋಷಿಸುತ್ತ ಮತ್ತೊಂದು ದಿಕ್ಕಿನಲ್ಲಿ ಮಧ್ಯಯುಗದತ್ತ ನಮ್ಮನ್ನು ಒಯ್ಯುತ್ತಿದೆ.

ಜಾಗತಿಕ ವಿದ್ಯಮಾನವಾದ ಅಮೇರಿಕಾ – ಪ್ರಣಿತ ಜಾಗತೀಕರಣ ಮತ್ತು ಸ್ಥಳೀಯ (ಭಾರತೀಯ) ವಿದ್ಯಮಾನವಾದ ಕೋಮುವಾಧೀಕರಣಗಳ ಸಾಮ್ಯವನ್ನು ನಾವು ಗುರುತಿಸಬೇಕು. ಎರಡಕ್ಕೂ ಇರುವುದು ಒಂದೇ ಒಂದು ಅಜೆಂಡಾ: ಅಮೇರಿಕಾಕ್ಕೆ ಬೇಕಾಗಿರುವುದು ಜಗತ್ತಿನ ಎಲ್ಲ ವೈವಿಧ್ಯಮಯ ಸಂಸ್ಕೃತಿಗಳು ಹಾಳಾಗಿ ತನ್ನ ಸಂಸ್ಕೃತಿಯೊಂದೇ ವಿಜೃಂಭಿಸಬೇಕು. ಜಾಗತೀಕರಣವೆಂದರೆ ಅಮೇರಿಕೀಕರಣ. ಅದೇ ರೀತಿಯಲ್ಲಿ ಇಂಡಿಯಾದ ಕೋಮುವಾದಿಗಳಿಗೆ ಬೇಕಾಗಿರುವುದು: ಬಹು – ಸಂಸ್ಕೃತಿಗಳ ನಲೆವೀಡಾದ ಈ ದೇಶದಲ್ಲಿ ತನ್ನ ಮನುಪ್ರಣೀತ ಸಂಸ್ಕೃತಿಯ ಯಜಮಾನ್ಯದ ಪ್ರತಿಷ್ಠಾಪನೆ; ಕಾಮನಬಿಲ್ಲಿನ ಎಲ್ಲ ಬಣ್ಣಗಳು ನಾಶಗೊಂಡು ತನ್ನದೊಂದೇ ಬಣ್ಣ ಢಾಳಾಗಿ ವಿಜೃಂಭಿಸಬೇಕು ಕೋಮುವಾದೀಕರಣ ಎಂದರೆ ಕೇಸರಿಕರಣ.

*

ಸ್ವಾತಂತ್ಯ್ರೋತ್ತರ ಭಾರತದತ್ತ ಹೊರಳು ನೋಟವೆಂದರೆ ಒಂದು ನೆಲೆಯಲ್ಲಿ ಇಡೀ ಜಗತ್ತಿನ ವಿದ್ಯಮಾನಗಳತ್ತ ಹೊರಳು ನೋಟವೇ, ಇತಿಹಾಸದ ಯಾವ ಘಟ್ಟದಲ್ಲೂ ಈ ರೀತಿಯಾಗಿ ಜಗತ್ತಿನ ರಾಷ್ಟ್ರಗಳ ವರ್ತಮಾನ ಹಾಗೂ ಭವಿಷ್ಯಗಳು ಪರಸ್ಪರ ತಳಕು ಹಾಕಿಕೊಂಡಿರಲಿಲ್ಲ. ಭಾರತದಲ್ಲಿ ಪ್ರಜಾಸತ್ತೆಯೆ ಪ್ರಯೋಗದ ಸಾಫಲ್ಯ- ವೈಫಲ್ಯಗಳು ಜಗತ್ತಿನ ಬೆಳವಣಿಗೆಗೆ ಮಾರ್ಗಸೂಚಿಯಾಗುವಂಥವೂ. ಇದಕ್ಕೊಂದು ಕಾರಣವಿದೆ. ೧೯೫೦ರ ಅಜೂಬಾಜು ವಸಾಹತುಶಾಹಿ ಯುಗ ಅಂತ್ಯಗೊಂಡು ಇಂಡಿಯಾದಂತೆ ಅನೇಕ ದೇಶಗಳು ಸ್ವಾತಂತ್ಯ್ರ ಮತ್ತು ಸರ್ವಭೌಮತ್ವವನ್ನು ಬೆಳೆಸಿಕೊಂಡವು. ಆದರೆ ಅರ್ಧ ಶತಮಾನದ ಅವಧಿಯಲ್ಲಿ ಆ ದೇಶಗಳಲ್ಲಿ ನಿಜವಾದ ಪ್ರಜಾಸತ್ತೆ ಉಳಿಯಲಿಲ್ಲ. ತನ್ನೆಲ್ಲ ವೈರುಧ್ಯಗಳ ನಡುವೆಯೂ ನಮ್ಮ ದೇಶ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿ ಉಳಿದಿದೆ. ಇದು ನಮಗೂ, ಜಗತ್ತಿನ ಎಲ್ಲರಿಗೂ ಇರುವ ಒಂದು ಆಶಾಕಿರಣ. ಇದಕ್ಕೆ ಕಾರಣ ಏನು?

ಸಾವಿರಾರು ವರ್ಷಗಳ ಚರಿತ್ರೆಯ ಒತ್ತಡದ ವಿಷಯ ಮಾತಾಡಿದೆ. ದಬ್ಬಾಳಿಕೆಯ ವಿರುದ್ದ ಸಿಡಿದೆದ್ದ ಶಕ್ತಿಗಳನ್ನು ಪ್ರಸ್ತಾಪಿಸಿದೆ. ಇಂಥ ಶಕ್ತಿಗಳ ಒಂದು ಪರಂಪರೆಯೇ ನಮ್ಮಲ್ಲಿದೆ. ಬಹುರೂಪಿ ಸಂಸ್ಕೃತಿಯ ನಮ್ಮ ಸಮುದಾಯಗಳು ಪ್ರಜಾಸತ್ತೆಯ ನಿಜವಾದ ಮೌಲ್ಯಗಳನ್ನು ಮೌನವಾಗಿಯೇ ಕಾಪಾಡಿಕೊಂಡು ಬಂದಿವೆ. ‘ನಮ್ಮ ಇವತ್ತಿನ ‘ಮತದಾರ’, ವ್ಯವಸ್ಥೆಗೆ ಬಲಿಯಾಗಿ ಅನಿವಾರ್ಯವಾಗಿ ಭ್ರಷ್ಟನಾಗಿದ್ದರೂ. ‘ಆಯ್ಕೆ’ಯ ಕ್ಷಣದಲ್ಲಿ. ಚುನಾವಣೆಗಳಲ್ಲಿ ಅತ್ಯಂತ ನಿರ್ಣಾಯಕ ಪಾತ್ರ ವಹಿಸುತ್ತಿರುವುದು ನಾವು ಕಾಣುತ್ತಿರುವ ಸತ್ಯ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಇಂದು ‘ಏಕಪಕ್ಷೀಯ’ ಆಡಳಿತ ಎಂಬುದು ಕನಸಿನ ಮಾತಾಗಿ, ಮಿಶ್ರ ಸರಕಾರಗಳು ಅನಿವಾರ್ಯವಾಗುತ್ತಿರುವುದು, ಪ್ರಾದೇಶಿಕ ಪಕ್ಷಗಳು ಬಲಗೊಳ್ಳುತ್ತಿರುವುದು ನಮ್ಮ ದೇಶದ ಫೆಡರಲ್ ಸ್ವರೂಪಕ್ಕೆ ಸಂವಾದಿಯಾಗಿರುವ ಬೆಳವಣಿಗೆಗಳೇ ಆಗಿವೆ. ನಮ್ಮ ಜನಸಮುದಾಯ ಸಹಜವಾಗಿಯೇ ಮೈಗೊಡಿಸಿಕೊಂಡಿರುವ ಧರ್ಮನಿರಪೇಕ್ಷತೆ ಹಾಗೂ ಪ್ರಜಾಸತ್ತಾತ್ಮಕ ಮನೋಧರ್ಮದಿಂದಾಗಿ ನಾವು ನಿರಾಶವಾದಿಗಳೋ ಸಿನಿಕರೋ ಆಗಬೇಕಾಗಿಲ್ಲ.

ಗಾಂಧೀಜಿಯವರ ಕನಸು ಕಂಡಿದ್ದೇವೆ. ನೆಹರು ಅವರ ಕನಸನ್ನು ಕಂಡಿದ್ದೇವೆ. ಈಗ ರಾಷ್ಟ್ರಪತಿ ಅಬ್ದಲ್ ಕಲಾಮ್ ಅವರ ಕನಸನ್ನೂ ಕಾಣುತ್ತಿದ್ದೇವೆ. ಪ್ರತಿಯೊಂದು ‘ಪ್ರಯೋಗ’ವೂ ಕನಸಿನ ಅನುಷ್ಠಾನವೇ. ಭಗ್ನ ಕನಸುಗಳ ಆವಶೇಷಗಳೊಳಿಗಿಂದಲೇ ಹೊಸ ಕನಸುಗಳು ಚಿಗುರೊಡೆಯುತ್ತವೆ. ಜಂಗಮ ಸ್ಥಾವರವಾಗಿ ಸ್ಥಾವರ ಭಂಗಗೊಂಡು ಮತ್ತೆ ಜಂಗಮವಾಗುವುದೇ ‘ಪರಂಪರೆ’ಯ ಪ್ರಕ್ರಿಯೆ.

ಈ ಪ್ರಕ್ರಿಯೆಯನ್ನು, ನಾನು ಕಾವ್ಯದಲ್ಲಿ ಕಂಡದ್ದು ಹೀಗೆ:

ಹೋಗಿಬರ್ತೇನಜ್ಜ, ಹೋಗಿಬರ್ತೇನಿ.
ನಿನ್ನ ಪಾದದ ಧಳಿ ನನ್ನ ಹಣೆ ಮೇಲಿರಲಿ:
ಕಣ್ಣೊಳಗೆ ಅದು ಬೀಳದಿರಲಿ.

– ೨೦೦೪