ಶಾಶ್ವತ ಸಾಹಿತ್ಯನನ್ನ ದೃಷ್ಟಿಯಲ್ಲಿ

“ಶಾಶ್ವತ ಸಾಹಿತ್ಯ ಅಂದರೇನು?” ಈ ಪ್ರಶ್ನೆ ನನ್ನನ್ನು ಆಗೀಗ ಕಾಡಿಸುತ್ತದೆ. ನನ್ನ ಇತ್ತೀಚಿನ ಕೆಲ ನಾಟಕಗಳ ಸಂದರ್ಭದಲ್ಲಿ ಅನೇಕ ವಿಮರ್ಶಕ ಮಿತ್ರರು ಹೇಳುತ್ತಾರೆ. ’ಓದುವಾಗಲೇನೋ ರೋಚಕ ಅನುಭವವಾಗುತ್ತದೆ. ಆದರೆ ಇದು ಬಹು ಕಾಲ ನಿಲ್ಲುತ್ತದೆಯೇ?’ ಅಂತ, ಈ ನಾಟಕಗಳ ಸನ್ನಿವೇಶ ಸಮಕಾಲೀನವಾದುದು: ಪಾತ್ರಗಳೂ ಸಾರ್ವಜನಿಕ ಬದುಕಿನಲ್ಲಿ ಎಲ್ಲರಿಗೂ ಪರಿಚಿತವಿರುವ ವ್ಯಕ್ತಿಗಳನ್ನು ನೆನಪಿಸುವಂಥವು: ಘಟನೆಗಳೂ ಅಷ್ಟೆ, ರಾಮಾಯಣ, ಮಹಾಭಾರತಗಳನ್ನಾಧರಿಸಿದ ಕತೆ, ನಾಟಕ ಓದುವಾಗ ಇರುವ ಅರ್ಧ ಮಾನಸಿಕ ತಯಾರಿ ಇಂಥವುಗಳನ್ನು ಓದುವಾಗಲೂ ಇರುತ್ತದೆ. ಆದರೂ ಪ್ರಶ್ನೆ ಏಳುವುದು: ಈ ಕ್ಷಣವನ್ನು ಮೀರಿದ ನಾಳೆಗಾಗಿ, ನಾಡದಿಗಾಗಿ, ಸಮಕಾಲೀನವಾದುದು ಸಾರ್ವಕಾಲಿಕವಾಗಲಿ, ಆಗಬೇಕು ಎಂಬ ಸಹಜ ತುಡಿತ ನಮ್ಮೆದುರು ’ಶಾಶ್ವತ’ ಸಾಹಿತ್ಯದ ಪರಿಕಲ್ಪನೆಯನ್ನು ತಂದಿಡುತ್ತದೆ.

ಶಾಶ್ವತ ಸಾಹಿತ್ಯವೆಂದರೆ ಎಲ್ಲ ಕಾಲಕ್ಕೂ ಸಲ್ಲುವ ಸಾಹಿತ್ಯ: ಇಂಥವನ್ನು ನಾನು ನಿರ್ಮಿಸಬಲ್ಲೆ ಎಂದು ಒರಟೊರಟಾಗಿ ಅರ್ಥೈಯಿಸಿಕೊಂಡು ಅಂಥ ಸಾಹಿತ್ಯ ನಿರ್ಮಾಣಕ್ಕೆ ಕೈಹಾಕುವವರು ಶುದ್ಧ ಮೂರ್ಖರು. ಏಕೆಂದರೆ ಅದು ಅಸಾಧ್ಯ. ಬರಹಗಾರ ತನ್ನ ಅನುಭವಕ್ಕೆ, ಕಾಣ್ಕೆಯ ಬಿಸು ಭೂತ – ಭವಿಷ್ಯಗಳನ್ನೂ ಕಚ್ಚಿಕೊಳ್ಳಬಹುದು. ಭೂತವೆಂಬುದು ’ಆಗಿಹೋದ’ ಅನುಭವಗಳ ಗುಂಜು ಗುಂಜಾದ ನೆನಪಿನ ಲೋಕ: ಭವಿಷ್ಯವೆಂಬುದು ’ಆಗಬಹುದಾದ’ ಅನುಭವಗಳ ಬಗೆಗಿನ ಆಸೆ, ನಿರೀಕ್ಷೆ, ಕನಸು, ಕಾತರಗಳ ಮಂಜುಲೋಕ. ಆದರೆ ಈ ಎರಡೂ ಲೋಕಗಳು ಸಂಧಿಸುವುದು ಬರಹಗಾರನ ಸೃಷ್ಟಿಕಾರ್ಯದ ವರ್ತಮಾನದ ತುರ್ತಿನಲ್ಲಿ ಮಾತ್ರ.

ಸಾಹಿತ್ಯ ಮೂಲ ಬಂಡವಾಳದ ಅನುಭವವನ್ನು ಒದಗಿಸುವುದಕ್ಕಷ್ಟೇ ವರ್ತಮಾನದ ಪಾತ್ರ ಮುಗಿಯಲಿಲ್ಲ. ನಾನು ಬರೆಯುವುದೂ ಕೂಡ ನನ್ನ ಇವತ್ತಿನ ಬದುಕಿಗೆ: ಸ್ಪುರಿಸಬೇಕಾದದ್ದು ಇವತ್ತಿನ ಸಂವೇದನೆಯನ್ನು,’ನಾನು’ ಎಂಬುದು ಸೃಷ್ಟಿಕ್ರಿಯೆಯ ಮಧ್ಯಬಿಂದುವಾಗಿರುವ ತನಕ, ’ಇವತ್ತು’ ಎಂಬುದು ನನ್ನ ಪರಿಘವಾಗಿರುತ್ತದೆ. ಈ ’ನಾನು’ ಎಂಬುದರಲ್ಲಿ ಇಡೀ ಮಾನವಕುಲದ ಅರ್ಕ (ಎಸೆನ್ಸ್)ವನ್ನು ತುಂಬಿದಾಗ, ’ಇವತ್ತು’ ಎಂಬುದರಲ್ಲಿ ಇಡೀ ಕಾಲದ ತೀವ್ರತೆಯನ್ನು ತುಂಬಿಟ್ಟಾಗ-ಸಾಹಿತ್ಯ ತೀರ ವೈಯಕ್ತಿಕವಾದ ಹಾಗೂ ತೀರ ಕಾಲಿಕವಾದ ನೆಲೆಯನ್ನು ಮೀರಿ ವಿಶಾಲವಾದ ಅರ್ಥವನ್ನೂ, ಧ್ವನಿಗಳನ್ನೂ ಹೊಂದತೊಡಗುತ್ತದೆ.’ಸಾರ್ವಕಾಲಿಕ’ ಇತ್ಯಾದಿ ಮಾತಾಡುವ ವಿಮರ್ಶಕರು ಸೃಜನಶೀಲ ಬರಹಗಾರನ ಒಳತೋಟಿಯ ಈ ಮರ್ಮವನ್ನು ಅರಿಯಬೇಕು.

ಮನುಷ್ಯನ ಬದುಕಿನ ಕ್ರಮ, ಚಿಂತನೆಯ ರೀತಿ, ಸಂವೇದನೆಯ ತೀವ್ರತೆ ಭಾಷೆಯ ಅರ್ಥ-ಲಯ-ಧ್ವನಿಗಳು, ಅಭಿವ್ಯಕ್ತಿ ತಂತ್ರಗಳು, ಓದುಗರ ಅಭಿರುಚಿ ಇವೇ ಕಾಲ ಕಾಲಕ್ಕೆ ನಿಧಾನವಾಗಿ ಆದರೆ ನಿರಂತರವಾಗಿ ಬದಲಾಗುತ್ತಲೇ ಹೋಗುವುದರಿಂದ ಒಂದು ಕೃತಿಗೆ ಒಂದು ಕಾಲಘಟ್ಟದಲ್ಲಿ ಇರುವ ವಿಶಿಷ್ಟವಾದ ಪ್ರಸ್ತುತ (ರೆಲೆವೆನ್ಸ್) ಸದಾಕಾಲ ಇರುತ್ತದೆ ಎಂಬ ಗ್ರಹಿಕೆಯಾಗಲಿ, ಇರಬೇಕು ಎಂಬ ಆಶಯವಾಗಲಿ ಎರಡೂ ಅಸಹಜ ಎಂಬುದು ಯಾವ ಸಾಹಿತ್ಯ ಚರಿತ್ರೆಯನ್ನೋದಿದರೂ ಗೊತ್ತಾಗುತ್ತದೆ, ಆದರೆ ಅನುಭವದ ಕೆಲವು ಪ್ಯಾಟರ್ನ್‌ಗಳು ಅನೇಕ ಕಾರಣಗಳಿಂದಾಗಿ ಮರುಕಳಿಸುವುದರಿಂದ ಯಾವುದೋ ಕಾಲಘಟ್ಟದ ಒಂದು ಕವಿತೆ, ನಾಟಕ, ಕಾದಂಬರಿ ನಮಗೆ ’ಇವತ್ತು’ ಪ್ರಸ್ತುತ ಎನ್ನಿಸಬಹುದು. ಇಂದಿನ ಪ್ರಸ್ತುತತೆಯ ಸಾಧ್ಯತೆಗಳನ್ನು ಹೆಚ್ಚು ಹೆಚ್ಚು ಒಳಗೊಂಡಿರುವ ಕೃತಿ ವಿಭಿನ್ನ ಕಾಲ ಘಟ್ಟಗಳಲ್ಲೂ “ಸಮಕಾಲೀನ” ವೆನ್ನಿಸುತ್ತದೆ. ಇದನ್ನೇ ಬೇಕೆಂದರೆ ಸಾರ್ವಕಾಲಿಕ ಅಥವಾ ಶಾಶ್ವತ ಎಂದು ಕರೆಯಬಹುದು- ಮೈಮೇಲೆ ತುಂಬ ಎಚ್ಚರ ಇಟ್ಟುಕೊಂಡು ’ಶಾಶ್ವತ’ ಆಶಯ-ಉದ್ದೇಶವಾಗಿರದೆ, ಕೃತಿ ರಚನೆಯಾದ ಎಷ್ಟೋ ಕಾಲಘಟ್ಟಗಳ ನಂತರ ತಾನಾಗಿಯೇ ರೂಪು ಪಡೆಯುವ ಮೌಲ್ಯ ನಿರ್ಣಯವಾಗಿರುತ್ತದೆ.

ಅಂತೂ ಮಿಕ್ಕಿ’ಶಾಶ್ವತ’ ಸಾಹಿತ್ಯ ನಿರ್ಮಾಣ’ಕ್ಕೆ ಬದ್ಧಕಂಕಣರಾಗಿರುವವರು” ಎಮ್ಮೆ ಎಂಬುದು ಒಂದು ಪ್ರಾಣಿ, ಅದಕ್ಕೆ ನಾಲ್ಕು ಕಾಲುಗಳೂ, ಎರಡು ಕೋಡುಗಳೂ, ಒಂದು ಬಾಲವೂ….” ಇತ್ಯಾದಿ ಶಾಲಾ ನಿಬಂಧಗಳನ್ನು ಬರೆಯುವುದು ಒಳ್ಳೆಯದು.

ಸಾಹಿತ್ಯದಿಂದ ಏನು ಪ್ರಯೋಜನ?”

ಈ ಪ್ರಶ್ನೆಯನ್ನು ಹುಬ್ಬೇರಿಸಿ, ಚಿವುಗಣ್ಣು ಮಾಡಿ, ಒಂದು ಬಗೆಯ ಕೋಪ ಉಕ್ಕಿಸುವ ಒಣದನಿಯಲ್ಲಿ ಕೇಳುವವರನ್ನು ಕಂಡಿದ್ದೇನೆ. ಅವರ ಪ್ರಶ್ನೆಯೂ ಪ್ರಯೋಜನವಿಲ್ಲದ್ದೇ: ಏಕೆಂದರೆ ಅದಕ್ಕೆ ಉತ್ತರ ಅವರ ಬಳಿ ಇದ್ದೇ ಇದೆ.

ನನಗೆ ಇಂಥ ಪ್ರಶ್ನೆ ಕಾಡುವುದೇ ಇಲ್ಲ. ಒಮ್ಮೊಮ್ಮೆ ಏನಾದರೂ ಓದಲೇಬೇಕು ಎಂಬ ಒಳಗಿನ ತುರ್ತು ಹೆಚ್ಚಾಗಿ ಏನೋ ಓದಿದ ನಂತರವೇ ಉಂಟಾಗುವ ಸಮಾಧಾನ. ಅನಂತರ ’ಯಾಕೆ ಈ ಸಮಾಧಾನ?’ ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಪ್ರಯತ್ನಿಸುತ್ತಿರುವೆ.

ಸಾಹಿತ್ಯದ ಓದಿನಲ್ಲಿ ಮೊದಲು ನನ್ನನ್ನು ತನ್ನೊಳಗೆ ಸೆಳೆದುಕೊಳ್ಳುವುದು ಮಾತಿನ ಲಯದ ಓಘ. ಸದಾ ನಮ್ಮ ಕಿವಿಯ ಮೇಲೆ ಬೀಳುತ್ತಿರುವ ಸಾಮಾನ್ಯ ಎನಿಸುವ ಭಾಷೆ. ಒಂದು ಕೃತಿಯಲ್ಲಿ ಹೇಗೆ ಅದ್ಭುತವಾಗಿ ಕೆಲಸ ಮಾಡಬಹುದಲ್ಲ- ಎಂಬ ಸಾಧ್ಯತೆ ಕಂಡು ಬಹಳ ಖುಶಿಯಾಗುತ್ತದೆ. ಅದು ಒಂದು ಜೋಕೇ ಇರಬಹುದು: ಒಂದು ಡೈಲಾಗಿರಬಹುದು: ಇಡೀ ಸನ್ನಿವೇಶದ ಚಿತ್ರವಿರಬಹುದು.

ಈ ಮೊದಲ ನೋಟದ ಪ್ರೇಮದ ಹಂತ ದಾಟಿದ ನಂತರ-(ದಾಟಿದರೆ)-ನಾನು ಬಹುಶ: ಹುಡುಕುವುದು ಭಾಷೆಯ ಮೂಲಕ ಅರಳಿಕೊಳ್ಳುವ ಬದುಕಿನ ಸಾಧ್ಯತೆಗಳನ್ನು. ಕೃತಿಕಾರನ ದೃಷ್ಟಿಕೋನದಿಂದ ಕಂಡ ಬದುಕನ್ನು ನಾನು ನೋಡುವಾಗ ಪರರ ಮಾಲನ್ನು ಪ್ರೀತಿಯಿಂದ ಕದ್ದು ಅನುಭವಿಸಿದಂತೆ, ನನ್ನ ಮೈ ಚರ್ಮದ ಕೋಟೆಯಿಂದ ಹೊರಗೆ ಜಿಗಿದು ಪರಕಾಯ ಪ್ರವೇಶ ಮಾಡಿದಂತೆ .’ಹೌದಲ್ಲ ಇದು ನನಗೆ ಗೊತ್ತೇ ಇರಲಿಲ್ಲ! ಎಂಬ ಹೊಸ ’ಅರಿವಿನ’ ಮೊದಲ ಥ್ರಿಲ್ಲು ಬಹುಶ: ನಾನು ಸಾಹಿತ್ಯದಲ್ಲಿ ಹುಡುಕಾಡುವ ಮೊದಲ ’ಪ್ರಯೋಜನ’ ಎನ್ನಬಹುದು.

ನಾನೊಬ್ಬ ಬರಹಗಾರನೂ ಆಗಿರುವುದರಿಂದ ನನ್ನ ಸಾಹಿತ್ಯಾಧ್ಯಯನ ನಿರಾತಂಕವಾಗಿ ಇರುವುದು ಅಸಂಭವ. ಮತ್ತೆ ಮತ್ತೆ ಪುಸ್ತಕ ಮುಚ್ಚಿ. ನನ್ನ ಸ್ವಂತದ ಲೋಕದೊಳಗೆ ಅಡ್ಡಾಡಿ ಬಂದು, ಓದು ಮುಂದುವರಿಸಬೇಕಾಗುತ್ತದೆ. ಅಷ್ಟರಮಟ್ಟಿಗೆ ಆಗ ನನ್ನ ದೃಷ್ಟಿ ಪಲ್ಲಟವಾಗಿರುತ್ತದೆ. ಆ ಕ್ಷಣದಿಂದ ನನ್ನ ಸುತ್ತಲಿನ ಬದುಕು ಅದೇ ಹಳೆಯ ಬದುಕಾಗಿ ಉಳಿದಿರುವದಿಲ್ಲ. ಅವೇ ಅವೇ ಹಳೆಯ ಕಣ್ಣು ಎದುರಾದರೂ ಆ ಕಣ್ಣುಗಳು ಬೀರುವ ನೋಟದ ಆಳವೇ ಬೇರೆಯಾಗಿ ಇರುತ್ತದೆ. ಸಾಹಿತ್ಯ ಕೃತಿಗಳ ಅಧ್ಯಯನದ ಒಟ್ಟು ಮೊತ್ತ ಹೀಗೆ ನಮಗೆ ಗೊತ್ತಿರುವ ಅಥವಾ ಹಾಗೆ ನಾವೆಂದುಕೊಂಡಿರುವ ಪ್ರಪಂಚವೇ ಹೊಸ ಹೊಸದಾಗಿ ತನ್ನನ್ನು ಅರಳಿಸಿಕೊಳ್ಳುವಂತೆ ಮಾಡುತ್ತದೆ. ಇದಕ್ಕೆ ಮೂಲ ಕಾರಣ: ಕೃತಿಗಳ ಓದಿನಿಂದ ನಾನು ನಿಜವಾಗಿಯೂ ಪಡೆದುಕೊಳ್ಳುವುದು ಅನೇಕ ಕಣ್ಣುಗಳನ್ನು, ಕಿವಿಗಳನ್ನು, ಅನುಭವಿಸುವ ಹೃದಯಗಳನ್ನು ಇದನ್ನೇ ಸ್ವಲ್ಪ ಗಂಭೀರವಾಗಿ ‘ವ್ಯಕ್ತಿ ವಿಕಾಸ’ ಎನ್ನಬಹುದೇನೋ.

ಸಮಾಜ ಬದಲಾವಣೆ – ಮುಂದಿನ ಹಂತ, ಅಷ್ಟೇ. ವ್ಯಕ್ತಿ ವ್ಯಕ್ತಿಯಾಗಿರುವುದೇ ಸಮಾಜದಿಂದಾಗಿ, ಅವನ ಬದಲಾವಣೆ ಅವನಿಗೇ ಸೀಮಿತವಾದರೂ ಅಷ್ಟರಮಟ್ಟಿಗೆ ಇಡೀ ಸಮಾಜವೂ ಬದಲಾಗಿರುತ್ತದೆ; ಈ ಬದಲಾವಣೆಯನ್ನು ಇನ್ನೂ ಕ್ಷಿಪ್ರವಾಗಿ, ಪರಿಣಾಮಕಾರಿಯಾಗಿ, ಬುದ್ಧ್ಯಾಪೂರ್ವಕವಾಗಿ ತರುವುದಾಗಲಿ, ಬಿಡುವುದಾಗಲಿ ಆ ವ್ಯಕ್ತಿಯ ‘ಆಯ್ಕೆಗೆ’ ಬಿಟ್ಟುಕೊಟ್ಟದ್ದು. ಒಂದು ಸಾಹಿತ್ಯ ಕೃತಿ ಇದಕ್ಕಿಂತ ಹೆಚ್ಚೇನೂ ಮಾಡುವಂತಿಲ್ಲ.

ಒಬ್ಬನೇ ಕುಂತು ಓದುವ ಅನುಭವ – ನಾನು ಇಷ್ಟೊತ್ತಿನವರೆಗೂ ಹೇಳಿದ್ದು. ಆದರೆ ನಾಟಕದಂಥ ಸಾಹಿತ್ಯ ಕೃತಿಯು ಇಂಥ ಪರಿಧಿಯನ್ನು ದಾಟಿ, ರಂಗ ಪ್ರಯೋಗದ ಮೂಲಕ ಒಂದು ಸಮೂಹದ ಏಕಕಾಲದ ಅನುಭವವಾದಾಗ ಅದು ಯಾವುದೋ ಒಂದು ಹಂತದಲ್ಲಿ ಒಂದು ಸಮಷ್ಟಿ ಬದಲಾವಣೆಯನ್ನು ತರಬಹುದು. ಈ ಬದಲಾವಣೆ ವೈಚಾರಿಕ ತುಮುಲವೋ, ಭಾವನೆಗಳ ಕೆರಳುವಿಕೆಯೋ, ಕ್ರಿಯಾತ್ಮಕ ಚಟುವಟಿಕೆಯೋ ಏನಾದರೂ ಆಗಿರಬಹುದು. ಇಲ್ಲಿ ಕೂಡ ಪ್ರತಿಸ್ಪಂದನದ ಮೊದಲ ಸೆಳಕು ಬರುವದು ವ್ಯಕ್ತಿ ಮೂಲದಿಂದಲೇ ಎಂಬುದನ್ನು ಮರೆಯಬಾರದು.

ಒಂದು ಕೃತಿಯ ಪರಿಣಾಮ ಒಬ್ಬ ಓದುಗನ ಮೇಲೆ ಒಂದೇ ಬಗೆಯದು ಅಂತ ಹೇಳಲಿಕ್ಕೂ ಆಗದು. ವರ್ಷ ಬಿಟ್ಟು ವರ್ಷ ಅದನ್ನೇ ಓದಿದರೂ (ಭಾಷೆ ಹಾಗೂ ಸಾಹಿತ್ಯದ ಪ್ರಾಧ್ಯಾಪಕನಾಗಿರುವ ನನ್ನಂಥವರಿಗೆ ಇದು ಕಂಪಲ್ಸರಿ ಕೂಡ) ಒಂದೊಂದು ಕೃತಿ ನಿತ್ಯ ನವೀನವಾಗಿರುತ್ತದೆ. ಬದುಕಿನ ಬಗ್ಗೆ ಹೊಸ ಹೊಸ ಒಳನೋಟಗಳು ಸ್ಫುರಿಸುತ್ತವೆ. ಅದೇ ಥ್ರಿಲ್ಲು.

ಹೌದು, ಒಳನೋಟ. ಸಾಹಿತ್ಯದಿಂದ – ನಾಟಕ, ವಿಮರ್ಶೆ, ಕಾವ್ಯ, ಕತೆ ಏನೇ ಆಗಿರಲಿ – ನಾನು ಯಾವಾಗಲೂ ಬಯಸುವುದು ಈ ಒಳನೋಟಗಳನ್ನು. ಈ ಒಳನೋಟಗಳ ಗ್ರಹಣ ಗರ್ಭದಲ್ಲಿಯೇ ಮನೋರಂಜನೆ, ವ್ಯಕ್ತಿವಿಕಾಸ, ಸಮಾಜ ಬದಲಾವಣೆಗಳ ಬೀಜಗಳ ಅಂಕುರಿಸುತ್ತವೆ. ಬೀಜ ಬಿತ್ತುವುದು ಸಾಹಿತಿಯ ಕೆಲಸ; ಅವನ್ನು ಬಿತ್ತಿಸಿಕೊಂಡು, ಸರಿಯಾಗಿ ಬಿರಿಸಿಕೊಂಡು, ಹೂವು, ಕಾಯಿ, ಹಣ್ಣು ಅನುಭವಿಸುವುದು ಓದುಗನ ಜವಾಬ್ದಾರಿ.

 

 

ಸಮಾಜವಾದಿ ಸಮಾಜ ಮತ್ತು ಸಾಹಿತಿ

ಸಮಾನತೆಯ ತತ್ವದ ಮೇಲೆ ಆಧಾರಿತವಾದ ಸಮಾಜವನ್ನು ಕಟ್ಟುವ ಪ್ರಯತ್ನದಲ್ಲಿ ಹೋರಾಟ ನಡೆದಾಗ ಸಾಹಿತಿಯಾದವ ಮಾಡಬೇಕಾದ ಕೆಲಸ ಹಾಗೂ ಅಂಥ ಸಮಾಜ ನಿರ್ಮಾಣವಾದ ನಂತರ ಅವನು ಮಾಡಬೇಕಾದ ಕೆಲಸ – ಹೀಗೆ ಎರಡು ಹಂತಗಳನ್ನು ಮಾಡಿಕೊಳ್ಳುವುದರಿಂದ ಬಹುಶಃ ನಮ್ಮ ಚಿಂತನೆಗೆ ಒಂದು ಶಿಸ್ತು ಬರುವುದೆಂದು ನನ್ನ ಅನಿಸಿಕೆ. ಇಂಡಿಯಾದಲ್ಲಿ ನಾವಿನ್ನೂ ಮೊದಲ ಹಂತದಲ್ಲಿಯೇ ಇರುವುದರಿಂದ ಎರಡನೆಯದು ಒಂದು ಕನಸಾಗಿ – ಒಂದು ಸಂಭಾವ್ಯ ಕನಸಾಗಿ – ಕಾಡುವುದು ಸ್ವಾಭಾವಿಕ. ಈ ಕನಸಿನ ಅರಿವಿನ ಕಕ್ಷೆಯೇ ನಮ್ಮ ಹೋರಾಟದ ಸ್ವರೂಪವನ್ನೂ ಗೊತ್ತು ಗುರಿಗಳನ್ನೂ ನಿರ್ದೇಶಿಸುತ್ತದೆ.

ಬರಹಗಾರನೊಬ್ಬ “ನಮ್ಮ ಹೋರಾಟ” ಎಂಬ ಪದ ಪ್ರಯೋಗ ಮಾಡಿದಾಗ ಅದಕ್ಕೆ ಅರ್ಥದ ಎರಡು ಆಯಾಮಗಳಿರುತ್ತವೆ. ಸಮಾಜದ ಒಂದು ಅನಿವಾರ್ಯ ಘಟಕವಾದ ವ್ಯಕ್ತಿಯಾಗಿ – ಮಗನಾಗಿ, ತಂದೆಯಾಗಿ, ಗಂಡನಾಗಿ, ಹೆಂಡತಿಯಾಗಿ, ಮಾಸ್ತರನಾಗಿ, ಕಾರಕೂನನಾಗಿ, ಅಧಿಕಾರಿಯಾಗಿ… ಹೀಗೆ ಏನೇನೋ ಆಗಿ ಬದುಕಿನ ಸೆಳವಿನಲ್ಲಿರುವುದು ಒಂದು: ಈ ಸೆಳವಿನಿಂದ ಸ್ವಲ್ಪ ಹಿಂದೆ ಸರಿದು, ಆ ಕಡೆ ಈ ಕಡೆ ನೋಡಲು ಪುರುಸೊತ್ತು ಹೊಂದಿ, ತನ್ನ ಮತ್ತು ಬದುಕಿನ ಸಂಬಂಧದ ಸೂಕ್ಷ್ಮಗಳನ್ನು ಗುರುತಿಸಿಕೊಂಡು, ಅವುಗಳನ್ನು ಬರಹದ ಮೂಲಕ ಕಲಾತ್ಮಕವಾಗಿ ಮೂಡಿಸುವುದು ಇನ್ನೊಂದು. ಯಾವನಿಗೆ ನಾವು ಸಾಮಾನ್ಯ ಮನುಷ್ಯನೆಂದು ತಪ್ಪಾಗಿಯೋ ಸರಿಯಾಗಿಯೋ ಕರೆಯುತ್ತೇವೆಯೋ ಅಂಥ ಸಾಮಾನ್ಯನಿಂದ ಬರಹಗಾರನಾದವನು ಸ್ವಲ್ಪ “ಭಿನ್ನ” ನಾಗುವುದು ಈ ರೀತಿಯಲ್ಲಿ ಮಾತ್ರ. ಕೆಲವರು ಸಾಹಿತಿಗಳಿಗೆ ತೀರ ವಿಶಿಷ್ಟವಾದ ವ್ಯಕ್ತಿತ್ವವನ್ನು “ಆರೋಪಿಸಿ” ತಾವೂ ಭ್ರಮೆಗೊಳಗಾಗುವುದಲ್ಲದೆ ಅವನಿಗೂ ಸಾಕಷ್ಟು ಭ್ರಮೆ ಹುಟ್ಟಿಸುತ್ತಾರೆ. ಸಾಹಿತ್ಯಕ್ಕೂ ಬದುಕಿಗೂ ನಡುವೆ ಅಗಾಧವಾದ ಕಂದಕವೊಂದನ್ನು ನಿರ್ಮಿಸಿ ಅಥವಾ ನಿರ್ಮಿಸಿಕೊಂಡು ಸ್ವಯಂ ಆರೋಪಿತವಾದ ಅನಾಥ ಪ್ರಜ್ಞೆಯಡಿಯಲ್ಲಿ ಅನಗತ್ಯವಾಗಿ ಕಷ್ಟಪಡುವ ಸಾಹಿತಿಗಳನ್ನ ನಾವು ಕಂಡಿದ್ದೇವೆ.

ಆದರೆ ನನ್ನ ಕಲಾಕೃತಿಗಳಿಗೆ ಕಚ್ಚಾ ಸರಕಾದ ಅನುಭವ ಬರುವುದು ಬದುಕಿನ ಗರ್ಭದೊಳಗಿಂದ ಹಾಗೂ ನಾನು ಅಭಿವ್ಯಕ್ತಿಗಾಗಿ ಬಳಸುವ ಸಾಧನವಾದ ಭಾಷೆ ಕೂಡ ನನ್ನನ್ನೊಳಗೊಂಡ ಸಮಾಜದ ಸಾಮೂಹಿಕ ಸೊತ್ತು – ಎಂಬ ಕನಿಷ್ಠ ಕೂಡ ನನ್ನನ್ನೊಳಗೊಂಡ ಸಮಾಜದ ಸಾಮೂಹಿಕ ಸೊತ್ತು – ಎಂಬ ಕನಿಷ್ಠ ಅರಿವು ಇರುವ ಬರಹಗಾರ ಕೂಡ ತನ್ನ ಹಾಗೂ ತನ್ನ ಬದುಕಿನ ನಡುವೆ ಇರುವ “ಕಂದಕ” ಎಷ್ಟು ಮಿಥ್ಯವಾದದ್ದು ಎಂದು ಅರಿಯಬಲ್ಲ. ಇಂಥ ಅರಿವು ಬರಲು ವಿಶಿಷ್ಟವಾದ ‘ಸಾಮಾಜಿಕ ಪ್ರಜ್ಞೆ’ಯನ್ನೇ – ಏನೋ ಹೊರಗಿನದೆಂಬಂತೆ – ರೂಢಿಸಿಕೊಳ್ಳಬೇಕಾಗಿಲ್ಲ. ತನ್ನ ಮನಸ್ಸಿನೊಳಗಣ ಕೆಲ ಭ್ರಮೆಗಳನ್ನು ತೆಗೆದು ಹಾಕಿದರೆ ಸಾಕು, ಸಾಹಿತಿಗೆ ತಾನೂ ಪರಿಸರದ ಒಂದು ಭಾಗವೇ ಎಂಬ ಸತ್ಯ ಗೋಚರವಾಗುತ್ತದೆ.

ದೇವರು, ಧರ್ಮ, ಕರ್ಮ, ಪಾಪ, ಪುಣ್ಯ, ಪುರ್ನಜನ್ಮ, ಅವತಾರ ಮುಂತಾದ ಕಲ್ಪನೆಗಳು ಸಾವಿರಾರು ವರ್ಷಗಳಿಂದ ಬೇರೂರಿರುವ ನಮ್ಮ ಸಮಾಜದಲ್ಲಿ ಇವುಗಳ ಹಿನ್ನಲೆಯಲ್ಲಿ ವರ್ಣಭೇದ, ಲಿಂಗಭೇದಗಳಂಥ ಅಸಮಾನತೆಗಳು ಬೆಳೆದು ಬಂದು ತಾರತಮ್ಯದ ಪ್ರಪಂಚವನ್ನೇ ಸೃಷ್ಟಿಸಿ, ನಿರಂತರ ಶೋಷಣೆಗೆ ಹಾದಿ ಮಾಡಿಕೊಟ್ಟಿರುವ ದುರಂತವನ್ನು ಕಾಣಲು ನಾವು ಇತಿಹಾಸಕಾರರೇ ಆಗಬೇಕಿಲ್ಲ. ವರ್ತಮಾನದ ಒಡಲಲ್ಲಿಯೇ ಭೂತ ಅಡಗಿರುವುದರಿಂದ, ಸಮಕಾಲೀನ ಬದುಕಿನ ಯಾವುದೇ ಘಟನೆಯನ್ನು ತೆಗೆದುಕೊಂಡರೂ ಸಂವೇದನಾಶೀಲನಾದ ಬರಹಗಾರನಿಗೆ ವರ್ತಮಾನದ ಆಚೆ-ಈಚೆಗಿನ ಒಟ್ಟು ನಕಾಶ ಕಣ್ಣಿಗೆ ಹೊಡೆಯುತ್ತದೆ. ಈ ಎಲ್ಲ ಸತ್ಯಗಳ ಜೊತೆಗೆ ತನ್ನ ಸಂಬಂಧಗಳೇನು? ಎಂಬ ಪ್ರಶ್ನೆಗೆ ತನ್ನ ನಿತ್ಯದ ಅನುಭವಗಳ ಸಂಘರ್ಷದೊಳಗಿಂದಲೇ ಉತ್ತರ ಪಡೆಯಲು ಅವನು ಭಾಷೆಯ ಮೂಲಕ ಹುಡುಕಾಟ ಪ್ರಾರಂಭಿಸುತ್ತಾನೆ, ಸನ್ನಿವೇಶಗಳನ್ನು, ಪಾತ್ರಗಳನ್ನು ಸೃಷ್ಟಿಸುತ್ತಾನೆ, ಕಂಡುಂಡ ಪ್ರಪಂಚಕ್ಕೆ ಸಂವಾದಿಯಾಗಿ, ಒಮ್ಮೊಮ್ಮೆ ಪರ‍್ಯಾಯವಾಗಿ, ಮತ್ತೊಂದು ಪ್ರಪಂಚವನ್ನೇ ನಿರ್ಮಿಸುತ್ತಾನೆ.

ಸಾಹಿತ್ಯ ಜೀವನದ ಪ್ರತಿಬಿಂಬ – ಎಂಬ ಒಂದು ಮಾತಿದೆ. ಬರೋಬರಿ. ಜೀವನದಲ್ಲಿ ಇದ್ದುದನ್ನೇ ಸಾಹಿತ್ಯದಲ್ಲೂ ಕಾಣುತ್ತೇವೆ; ಇಲ್ಲದ್ದನ್ನು ಕಾಣಲಿಕ್ಕಾಗುವುದಿಲ್ಲ. ಆದರೆ ಸಾಹಿತಿಯಾದವ ಕೇವಲ ಜೀವನವನ್ನು ಪ್ರತಿಬಿಂಬಿತಗೊಳಿಸುವ ‘ಮಾಧ್ಯಮ’ ಅಷ್ಟೇ ಏನು? ಅನುಭವವನ್ನು ನೋಡುವಲ್ಲಿ, ತನ್ನದಾಗಿಸಿಕೊಳ್ಳುವಲ್ಲಿ, ಅರಗಿಸಿಕೊಳ್ಳುವಲ್ಲಿ, ಅದಕ್ಕೆ ಸಾಹಿತ್ಯ ರೂಪವನ್ನು ಕೊಡುವ ಪ್ರಕ್ರಿಯೆಯಲ್ಲಿ “ಅವನ” ದೆನ್ನುವ ಪಾಲು ಏನೂ ಇಲ್ಲವೇ? ಈ ಬಗೆಯ ಪ್ರಶ್ನೆಗಳನ್ನು ಕೇಳಿಕೊಳ್ಳಲು ಸುರು ಮಾಡಿದರೆ ಸಾಕು, ಈ “ಪ್ರತಿಬಿಂಬ” ಸಿದ್ಧಾಂತ ಎಷ್ಟು ಅಪೂರ್ಣವಾದುದು ಎಂಬುದು ತಿಳಿಯುತ್ತದೆ. ಯಾವುದೇ ಸಮಾಜದಲ್ಲಿ, ಅದರಲ್ಲೂ ಇಂಡಿಯದಂಥ ಸಂಕೀರ್ಣ ಸಮಾಜದಲ್ಲಿ ಯಾವ ಬರಹಗಾರನೂ ಕೇವಲ ನಿಷ್ಕ್ರಿಯ ಮಾಧ್ಯಮ (Passive medium) ಆಗಿ ಕೆಲಸ ಮಾಡಲು ಸಾಧ್ಯವಿಲ್ಲ. ಪರಿಸರದಲ್ಲಿನ ಹಿಂಸೆಯನ್ನು, ಕೌರ್ಯವನ್ನು, ದಬ್ಬಾಳಿಕೆಯನ್ನು, ಅದರ ಜೊತೆಗೇ ಪ್ರೀತಿಯನ್ನು, ಕರುಣೆಯನ್ನು, ಕೋಮಲತೆಯನ್ನು ಕಂಡು ಅನುಭವಿಸಿದ ಬರಹಗಾರ ಸಾಹಿತ್ಯದ ಮೂಲಕ ಪ್ರತಿಕ್ರಿಯೆ ತೋರಿಸುವುದು ಎರಡು ಹಂತದ ಕಾರ್ಯಕ್ರಮವೆಂದು ನಾನು ಭಾವಿಸಿರುವೆ. ಅನುಭವಕ್ಕೆ ಕಲೆಯ ಆಕಾರ ಕೊಡುವುದು ಒಂದು; ಈ ಅನುಭವವನ್ನು ತಾನು ಬದುಕುವುದು ಇನ್ನೊಂದು. ಇಲ್ಲವಾದರೆ ಒಳಗೊಂದು ಹೊರಗೊಂದು ಎಂಬ ಕೃತಕವಾದ ಕಂದಕ ಉಂಟಾಗಿ ಬದುಕೂ ಸುಳ್ಳಾಗಿ, ಬರೆದ ಸಾಹಿತ್ಯವೂ ಸುಳ್ಳಾಗಿ ಬಿಡುವ ಸಂಭವವಿದೆ.

ಕಲೆಯ ರೂಪ ಕೊಡುವ ಹಂತದಲ್ಲಿ ಭಾಷೆಯ ಬಳಕೆಯ ಬಗ್ಗೆ ಒಂದು ಮಾತು. ಅನುಭವ ಸಂಕೀರ್ಣವಾದುದರಿಂದ ಅಭಿವ್ಯಕ್ತಿಯೂ ಸಂಕೀರ್ಣವಾಗುತ್ತದೆ (ವಾಗಬೇಕು?) ಎಂಬ ಹಸಿ-ಬಿಸಿ ಕಲ್ಪನೆಯಿಂದಾಗಿ ನಮ್ಮ ಅನೇಕ ಸಾಹಿತಿಗಳು ಒಮ್ಮೊಮ್ಮೆ ತಮಗೂ ಸರಳವಾಗಿ ಅರ್ಥವಾಗದ ರೀತಿಯಲ್ಲಿ ಬರೆದು ತಮಗೆ ತಾವೇ ‘ಪರಕೀಯ’ರಾಗುವುದರ ಜೊತೆಗೇ ಜನ ಸಮುದಾಯಕ್ಕೂ ಪರಕೀಯರಾಗಿ ಉಳಿದ ರೀತಿಯನ್ನು ನಾವು ಕಂಡಿದ್ದೇವೆ. ಅನುಭವದ ಹಾಗೂ ಕಾಣ್ಕೆಯ ಅನೇಕ ಪದರು ಪದರುಗಳನ್ನು ಸರಳವಾಗಿ, ಸೂಚ್ಯವಾಗಿ, ಸಂಕ್ಷಿಪ್ತವಾಗಿ ಬರೆಯುವುದು ಸಾಧ್ಯ ಎಂಬುದನ್ನು ನಮ್ಮ ಸಾಹಿತಿಗಳು, ಮುಖ್ಯವಾಗಿ ೧೨ನೆಯ ಶತಮಾನದ ವಚನಕಾರರು ತೋರಿಸಿಕೊಟ್ಟಿದ್ದಾರೆ.

ಸಮಾಜ ಒಂದು ಚಲನಶೀಲವಾದ ಬದುಕು ಎಂಬುದನ್ನು ಅರಿತಾಗ ಇಂಥ ಪ್ರಶ್ನೆಗಳು ಹುಟ್ಟುವುದೇ ಇಲ್ಲ. ಸಮಾನತೆಯನ್ನು ಸಾಧಿಸಿದ ಸಮಾಜ ಕೂಡ ನಿರಂತರವಾಗಿ ಸಂಘರ್ಷದ ಕಣವೇ ಆಗಿರುತ್ತದೆ. ಈ ನಿರಂತರತೆಯೇ ಬದುಕಿನ ಮುಖ್ಯ ಲಕ್ಷಣ; ಅದರ ಜೀವಂತಿಕೆಯೇ ಮುಖ್ಯ. ಜೀವಂತ ಸಂವೇದನೆಯುಳ್ಳ ಸಾಹಿತಿ ಈ ಬದುಕಿಗೆ ಪ್ರತಿಕ್ಷಣ ಪ್ರತಿಸ್ಪಂದಿಸುತ್ತಿದ್ದರೆ ಮಾತ್ರ ಅವನ ಸಂವೇದನೆ ಜೀವಂತವಾಗಿ ಉಳಿದೀತು; ಇಲ್ಲವಾದರೆ ಯಾವುದೋ ಘಟ್ಟದಲ್ಲಿ ಅವನು ಸತ್ತು ಹೋಗಿ, ವರ್ತಮಾನದಿಂದ ದೂರವಾಗಿ, ಭೂತವನ್ನು ಮೆಲುಕಾಡಿಸುತ್ತ ಮೆಲುಕಾಡಿಸುತ್ತ ತಾನೂ ಒಂದು ಭೂತವಾಗಿ ಬಿಡುತ್ತಾನೆ, ಅಷ್ಟೆ.

  • ೧೯೮೩