ನಿನ್ನ ಧರ್ಮಸ್ಥಳದಲ್ಲಿ ಸುರುವಾದ ಸರಕಾರಿ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಭಾಷಣದ ವರದಿ ಇವತ್ತಿನ ಪತ್ರಿಕೆಗಳಲ್ಲಿ ಓದಿದೆ. ಅಡಿಗರ ಬಗ್ಗೆ, ‘ಅಯ್ಯೋ ಪಾಪ’ ಅನಿಸುತ್ತದೆ. ಧರ್ಮಸ್ಥಳದ ಜಾತ್ರೆಗೆ ಹೋದವರಿಗೆ ತಿಂದ ಕೂಳು ದಕ್ಕಲೊಲ್ಲದು, ಕುಡಿದ ನೀರು ದಕ್ಕಲೊಲ್ಲದು. ಕುಂತಲ್ಲಿ ನಿಂತಲ್ಲಿ ಅವರ ತಲೆಯಲ್ಲಿ ಬಂಡಾಯ ಸಮ್ಮೇಳನವೇ ಹಳವಂಡವಾಗಿ ಕಾಡುತ್ತಿರಬಹುದು. ನಿಮ್ಮಲ್ಲಿ ಯಾರಿಗಾದರೂ ಅತೀಂದ್ರಿಯ ದೃಷ್ಟಿ ಇದ್ದರೆ ಈ ದೇವಾಂಗ ಸಂಘದ ಸಭಾಂಗಣದ ಸುತ್ತಲೂ ಧರ್ಮಸ್ಥಳದ ಪ್ರೇತಾತ್ಮಗಳು ಸುಳಿದಾಡುವುದನ್ನೂ ಕಾಣಬಹುದು!

ಸಾಹಿತ್ಯದಲ್ಲಿ ನಿಷ್ಪಕ್ಷಪಾತವಾದ ವಿಮರ್ಶೆ ಬೆಳೆದು ಬರಲು ಫ್ರೆಂಚ್ ಅಕಾಡೆಮಿ ಮಾದರಿಯಲ್ಲಿ ಧೀಮಂತರ ಒಂದು ಮಂಡಲಿ ಬೇಕೆಂದು ಅಡಿಗರು ಪ್ರತಿಪಾದಿಸಿದ್ದಾರೆ. ಅವರನ್ನು ಯಾವುದೋ ಅಭದ್ರತೆ ಕಾಡುತ್ತಿದೆ ಅಂದಂತಾಯಿತು. ತಮ್ಮ ಕಾಲ ಕೆಳಗಿನ ನೆಲವೇ ಕುಸಿಯುತ್ತಿದ್ದಂತೆ ಅವರಿಗೆ ಗಾಬರಿಯಾಗಿರಬೇಕು. ಫ್ರಾನ್ಸನಲ್ಲಿ ಕೂಡ ಫ್ರೆಂಚ್‌ ಅಕಾಡೆಮಿಗೆ ಅಲ್ಲಿಯ ಬರಹಗಾರರ ಕಣ್ಣಲ್ಲಿ ಯಾವ ಕಿಮ್ಮತ್ತೂ ಇಲ್ಲ. ಜನಸಮುದಾಯದ ವಿಮರ್ಶೆಯ ಅಗ್ನಿಪರೀಕ್ಷೆಯನ್ನು ಪಾಸಾಗುವ ಧೈರ್ಯವಿಲ್ಲದ ನಮ್ಮ ‘ಧೀಮಂತ’ ಅಡಿಗರು ರಕ್ಷಣೆ ಪಡೆಯುವ ಸಲುವಾಗಿ ಸ್ವಾಯತ್ತ ಅಕಾಡೆಮಿಯ ಮಾತಾಡುತ್ತಿರುವುದು ಶೋಚನೀಯ ಹಾಗೂ ಸಹಜ. ಅದೇ ಧಾಟಿಯಲ್ಲಿ ಅವರು ಅಧ್ಯಕ್ಷ ಪೀಠದಿಂದ ಅನೇಕ ಸಾರ್ವಕಾಲಿಕ ಸತ್ಯಗಳನ್ನು ಉದುರಿಸಿದ್ದಾರೆ. ಯಾರಿಗೆ ಸಮಕಾಲೀನ ಪ್ರಜ್ಞೆ ಕಡಿಮೆಯಾಗಿದೆಯೋ ಅಥವಾ ಅದರಿಂದ ಯಾವ ಲಾಭವೂ ಇಲ್ಲವೆಂದು ಮನವರಿಕೆಯಾಗಿದೆಯೋ ಅವರು ಸಾರ್ವಕಾಲಿಕ ಪ್ರಜ್ಞೆಯ ಬಗ್ಗೆ ಮಾತಾಡುವುದು ಸ್ವಾಭಾವಿಕವೇ ಅನಿಸುತ್ತದೆ.

ಮೊನ್ನೆ ಮೊನ್ನೆಯವರೆಗೂ ಈ ಧೀಮಂತರು ಕನ್ನಡ ಸಾಹಿತ್ಯ ಪರಿಷತ್ತಿನ ವಿರೋಧಿಗಳು. ಪ್ರತಿ ವರ್ಷ ಸಮ್ಮೇಳನದ ಕಾಲಕ್ಕೆ ಇವರ ಗೊಂದಲ ಇದ್ದದ್ದೇ. ಈ ಸಲ ಮಾತ್ರ ಅವರೇ ಸಮ್ಮೇಳನದ ಉತ್ಸವ ಮೂರ್ತಿ! ಇಂಥ ವಿಪರ್ಯಾಸಕ್ಕೆ ಅವರ ಕಾವ್ಯದಲ್ಲಿಯೇ ಆಧಾರವಿದೆ. ಅಡಿಗರೇ ಒಂದೆಡೆ ಹೇಳಿದಂತೆ “ಇದ್ದುದ ಬಿಟ್ಟು ಇರದುದರೆಡೆಗೆ ತುಡಿವುದೆ ಜೀವನ”. ಸಮ್ಮೇಳನದ ಅಧ್ಯಕ್ಷರಾಗಬೇಕಾಗಿತ್ತು. ಅದಕ್ಕಾಗಿ ಅವರು “ತುಡಿದರು” ಮತ್ತು ಪಡೆದರು. ಇನ್ನು ಮೇಲೆ ಬಹುಶಃ ಅಡಿಗರು ಜ್ಞಾನಪೀಠ ಪ್ರಶಸ್ತಿಗಾಗಿ ತುಡಿಯಲು ಪ್ರಾರಂಭಿಸುತ್ತಾರೆ. ಅನಂತರ ನೊಬೆಲ್ ಬಹುಮಾನಕ್ಕಾಗಿ ಅನಂತರ….. ಹೀಗೆ ಸಾಗಬಹುದು ಅಡಿಗರ ನಿರಂತರ ತುಡಿತ!

ಅಡಿಗರನ್ನು ‘ಒಂದು ಜನಾಂಗದ ಕಣ್ಣು ತೆರೆಸಿದ ಕವಿ’ ಎಂದು ಒಬ್ಬರು ಬಣ್ಣಿಸಿದರು. ಅದು ನಿಜವೇ. ಆದರೆ ಅವರು ತೆರೆಸಿದ್ದು ನಮ್ಮ ಒಂದೇ ಕಣ್ಣನ್ನು. ಇನ್ನೊಂದು ಕಣ್ಣನ್ನು ನಾವೇ ಈಗ ತೆರೆದಿರುವಾಗ ಅಡಿಗರ, ಅಡಿಗರಂಥವರ ನಿಜವಾದ ಸ್ವರೂಪ ದರ್ಶನದ ಅರಿವು ನಮಗುಂಟಾಗಿದೆ. ಅವರೊಂದಿಗೆ ಅನಂತಮೂರ್ತಿ ಮುಂತಾದ ಎಡಬಿಡಂಗಿಗಳೂ ಧರ್ಮಸ್ಥಳಕ್ಕೆ ಹೋಗಿದ್ದಾರೆ. ಅವರು ಮೊದಲೇ ಅನಂತಮುಖದ ಅನಂತಮೂರ್ತಿಗಳು. “ನೀವು ಬೇರೆ ತಾರೀಖಿಗೆ ಸಮ್ಮೇಳನ ಮಾಡಿದ್ದರೆ ನಾವೂ ಬರುತ್ತಿದ್ದೆವು” – ಅಂತ ಅವರ ಅಂಬೋಣ. ಅವರಲ್ಲಿ ತುಳಸೀ ಪೂಜೆ ಮುಗಿಸಿಕೊಂಡು ನಿಮ್ಮಲ್ಲಿ ಗೌರೀ ಪೂಜೆಗೆ ಬರುತ್ತೇವೆ ಅನ್ನುತ್ತಾರಲ್ಲ. ಹಾಗೆ. ಇಂಥವರಿಗೆ ಅಂಥ ಅವಕಾಶ ಸಿಗಬಾರದೆಂದೇ ನಾವು ಆ ಸರಕಾರಿ ಸಮ್ಮೇಳನದ ಹೊತ್ತಿಗೇ ಈ ಬಂಡಾಯ ಸಮ್ಮೇಳನ ಹಮ್ಮಿಕೊಂಡದ್ದು. ನಾವು ಒಡ್ಡಿದ ಇಂಥ ಆಯ್ಕೆಯಿಂದಾಗಿ ಎಡಬಿಡಂಗಿಗಳಿಗೆ ಭಯಂಕರ ತ್ರಾಸಾಗಿದೆ. ಧರ್ಮಸ್ಥಳ ಕ್ಷೇತ್ರಕ್ಕೆ ಹೋದರು. ಆದರೆ ಧರ್ಮಸ್ಥಳದ ಆಮಂತ್ರಣವನ್ನು ನಿರಾಕರಿಸಿದ ಬಸವರಾಜ ಕಟ್ಟೀಮನಿಯವರು ಬಂಡಾಯದವರಿಗೆ ಕರಚೀಫು ತಾವೇ ಎತ್ತಿಕೊಂಡು, ಧರ್ಮಸ್ಥಳ ಕ್ಷೇತ್ರಕ್ಕೆ ಹೋದರು. ಆದರೆ ಧರ್ಮಸ್ಥಳದಲ್ಲಿ “ದಲಿತ ಸಾಹಿತ್ಯ ಮತ್ತು ಇತರ ಒಲವುಗಳು” ಎಂಬ ಗೋಷ್ಠಿಯಲ್ಲಿ ದಲಿತ ಸಾಹಿತ್ಯ ಕುರಿತು ಮಾತಾಡಬೇಕಾಗಿದ್ದ ಬಿ. ಕೃಷ್ಣಪ್ಪನವರು ಧರ್ಮಸ್ಥಳದ ಆಹ್ವಾನ ಧಿಕ್ಕರಿಸಿ ಇಲ್ಲಿಗೇ ಬಂದಿದ್ದಾರೆ. ಆದ್ದರಿಂದ ಅಲ್ಲಿ ನಡೆಯಲಿರುವುದು ಈಗ ಬಹುಶಃ “ಇತರ ಒಲವುಗಳು” ಎಂಬ ಗೋಷ್ಠಿ ಮಾತ್ರ.

ಬಂಡಾಯ ಸಾಹಿತ್ಯವಾಗಲಿ, ಬಂಡಾಯ ಸಾಹಿತ್ಯ ಸಮ್ಮೇಳನವಾಗಲಿ ದಿಢೀರ್ ಸೃಷ್ಟಿಯಲ್ಲ. ಈಗೇನೋ ಒಂದು ವಿಶಿಷ್ಟ ಐತಿಹಾಸಿಕ ಸಂದರ್ಭದ ತುರ್ತಿನಲ್ಲಿ ನಾವಿಲ್ಲಿ ಸೇರಿದ್ದೇವೆ. ಆದರೆ ಸಮಕಾಲೀನ ಕನ್ನಡ ಸಾಹಿತ್ಯದ ಗತಿಯನ್ನು ಗಮನಿಸುತ್ತ ಬಂದವರಿಗೆ ಒಡೆದು ಕಾಣುವ ಒಂದು ಸತ್ಯವೆಂದರೆ, ೧೯೫೦ ರಿಂದ ೧೯೭೦ರ ನಡುವೆ ಪ್ರಚಲಿತವಿದ್ದ ‘ನವ್ಯ’ ಸಾಹಿತ್ಯ ಈಗ ಸತ್ತು ಹೋಗಿದೆ. ೭೦ರ ದಶಕದ ಅನೇಕ ಸಾಮಾಜಿಕ, ರಾಜಕೀಯ ಘಟನೆಗಳು ನಮ್ಮ ಬದುಕಿನಲ್ಲಿ ಉಂಟುಮಾಡಿದ ಕೋಲಾಹಲದಿಂದಾಗಿ ನಮ್ಮ ಬರಹದಲ್ಲೂ ಅನಿವಾರ್ಯವಾದ ಬದಲಾವಣೆಗಳಾಗುತ್ತಲೇ ಬಂದಿವೆ. ಅಡಿಗರು ಆರೆಸ್ಸಸ್ / ಜನಸಂಘದ ಹುದ್ದಾರಿಯಾಗಿ ಚುನಾವಣೆಗೆ ನಿಂತಿದ್ದು, ಭೂಸಾ ಪ್ರಕರಣ, ಬರಹಗಾರರ ಮತ್ತು ಕಲಾವಿದರ ಒಕ್ಕೂಟ, ನವನಿರ್ಮಾಣ ಸಮಿತಿ – ಇವೆಲ್ಲ ಇತ್ತೀಚಿನ ಇತಿಹಾಸದ ನಿರ್ಣಾಯಕ ಹಂತಗಳು. ಕಳೆದ ೭-೮ ವರ್ಷಗಳಿಂದಲೂ ನಮ್ಮ ಸಾಹಿತ್ಯದಲ್ಲಿ ಬಂಡಾಯದ ದನಿ ಇದೆ; ಶೋಷಿತರ, ದಲಿತರ ಆಕ್ರೋಶವಿದೆ. ಸಮಕಾಲೀನ ಸಾಹಿತ್ಯವೆಂದರೆ ಇದೇ. ಆದ್ದರಿಂದ ಇಲ್ಲಿ ಸೇರಿರುವ ಬಂಡಾಯ ಸಾಹಿತ್ಯ ಸಮ್ಮೇಳನವೇ ನಿಜವಾದ, ಪ್ರಾತಿನಿಧಿಕವಾದ ಸಮ್ಮೇಳನವಾಗಿದೆ. ಕನ್ನಡದಲ್ಲಿ ನವ್ಯಕಾವ್ಯದ ಕಾಲ ಮುಗಿದುಹೋಯಿತು. ಈಗಿರುವುದು ದಲಿತ ಸಾಹಿತ್ಯವನ್ನು ಒಳಗೊಂಡ ಬಂಡಾಯ ಸಾಹಿತ್ಯದ ಕಾಲ.

ಹಾಗಿದ್ದರೆ ‘ಬಂಡಾಯ’ ‘ದಲಿತ’ ಮುಂತಾದ ಪರಿಕಲ್ಪನೆಗಳ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಬೇಕು. ದೊಡ್ಡ ಪ್ರಮಾಣದಲ್ಲಿ ನಡೆಯಬೇಕಾಗಿರುವ ಸಾಂಸ್ಕೃತಿಕ ಆಂದೋಲನದಲ್ಲಿ, ಉದಾಹರಣೆಗೆ, ನನ್ನಂಥವರ ಪಾತ್ರವೇನು? ನಾನೊಬ್ಬ ಜಾತಿಯಿಂದ ಲಿಂಗಾಯಿತ. ಯುನಿವರ್ಸಿಟಿ ಅಧ್ಯಾಪಕ. ಸಾವಿರಾರು ರೂಪಾಯಿ ಪಗಾರ ಇದೆ. ಹೆಂಡತಿ, ಮಕ್ಕಳು, ಮನೆ, ಸ್ಕೂಟರು ಇಟ್ಟುಕೊಂಡಿರುವ ನಾನು “ದಲಿತ” ಎಂದು ಕರೆದುಕೊಳ್ಳಲಾರೆ. ದಲಿತರಿಗಾಗುವ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಶೋಷಣೆ – ಅಪಮಾನಗಳು ನನ್ನವಲ್ಲ. ಇಂದು ಮುಂಜಾನೆ ಸಿ.ಜಿ.ಕೆ. ರೆಡ್ಡಿಯವರು ಹೇಳಿದಂತೆ ನನ್ನಂಥವರಿಗೆ – ಅಂದರೆ ಸಾಮಾಜಿಕವಾಗಿ ಉಚ್ಚ ಶ್ರೇಣಿಯಲ್ಲಿರುವವರಿಗೆ – ಬಂಡಾಯದ ‘ಹಕ್ಕು’ ಇದ್ದರೂ, ಬಂಡಾಯಕ್ಕೆ ಅನಿವಾರ್ಯವಾದ ‘ಕಾರಣ’ ಇಲ್ಲ. ಇಂಥ ಸಮಯದಲ್ಲಿ ನಾನು ನನ್ನ ಜಾತಿಯ ವ್ಯವಸ್ಥೆ ವಿರುದ್ಧ, ಅಲ್ಲಿರುವ ಜಂಗಮಶಾಹಿ – ಬಂಡವಾಳ ಶಾಹಿಯ ವಿರುದ್ಧ ಹೋರಾಟ ಮಾಡಿದಾಗ ಮಾತ್ರ ನಾನೊಬ್ಬ ಬಂಡಾಯ ಸಾಹಿತಿಯಾಗಬಲ್ಲೆ. ಒಕ್ಕಲಿಗ ಯುವಜನರು ಒಕ್ಕಲಿಗರ ಪಾಳೆಯಗಾರಿಕೆ ವಿರುದ್ಧ ಬಂಡೇಳಬೇಕು. ಬ್ರಾಹ್ಮಣ ಬಂಡವಾಳಶಾಹಿ ವಿರುದ್ಧ ಸಿಡಿದೇಳಬೇಕು. ಅಂದಾಗ ಮಾತ್ರ ಇವರಿಗೆ ಬಂಡಾಯದಲ್ಲಿ ಪಾಲುಗೊಳ್ಳಲು Credibility (ಅರ್ಹತೆ) ಬರುತ್ತದೆ.

ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಶತಮಾನಗಳಿಂದ ಶೋಷಣೆಗೆ, ಅಪಮಾನಕ್ಕೆ, ಕ್ರೌರ್ಯಕ್ಕೆ ಬಲಿಯಾದ ದಲಿತ ಪ್ರಜ್ಞಾವಂತ ಲೇಖಕ ಬರೆದ ಪ್ರತಿಭಟನಾ ಸಾಹಿತ್ಯವೇ ಅಥೆಂಟಿಕ್ ಆದ ದಲಿತ ಸಾಹಿತ್ಯ. ಬಂಡಾಯ ಸಾಹಿತ್ಯ ಸಂಘಟನೆಯಂಥ ಸಾಮೂಹಿಕ ಚಳುವಳಿಗೆ ಇಂಥ ದಲಿತ ಶಕ್ತಿಯೇ ನಾಯಕತ್ವ ವಹಿಸಬೇಕು. ಯಾವ ಚಳುವಳಿಯೇ ಆದರೂ ಅದರ ಮುಖಂಡತ್ವದ ಸೂತ್ರಗಳನ್ನು ತಾವೇ ಕೈಗೆ ತೆಗೆದುಕೊಂಡು, ಆ ಮೂಲಕ ಚಳುವಳಿಯನ್ನು ನಿರ್ವೀರ‍್ಯಗೊಳಿಸುವುದು, ಉಚ್ಚ ವರ್ಗದವರು ಈವರೆಗೂ ಪಾಲಿಸಿಕೊಂಡು ಬಂದ ಕುತಂತ್ರವಾಗಿದೆ. ಇಂಥ ಕುತಂತ್ರದ ವಿರುದ್ಧ ಸಂಘಟನೆ ಯಾವಾಗಲೂ ಎಚ್ಚರದಿಂದಿರಬೇಕು. ದಲಿತರ ಹೋರಾಟಕ್ಕೆ ಪೂರಕವಾಗಿ ಮಾತ್ರ ಉಳಿದ ಜಾತಿಗಳ ಪ್ರಗತಿಪರ ಶಕ್ತಿಗಳು ಕೆಲಸ ಮಾಡಬೇಕು.

ಇನ್ನು, ಇಲ್ಲಿ ಸೇರಿರುವ ನಾವೆಲ್ಲ ಪ್ರಖರ ರಾಜಕೀಯ ಪ್ರಜ್ಞೆ ಹೊಂದಿದವರು. ಎಲ್ಲರೂ ಎಡಪಂಥೀಯರು. ಅದೊಂದೇ ನಮ್ಮ ನಡುವಿನ ಸಾಮಾನ್ಯ ಕೊಂಡಿಯಾಗಿದೆ. ನಾನೊಬ್ಬ ಲೋಹಿಯಾ ಸೋಶಲಿಸ್ಟ. ಇಲ್ಲಿ ಅನೇಕರು ಕಮ್ಯುನಿಷ್ಟರು, ಮಾರ್ಕ್ಸಿಸ್ಟರು; ಕೆಲವರು ನಕ್ಸಲೀಯರು ಇರಬಹುದು. ಅವರವರ ದೃಷ್ಟಿಗೆ ತಕ್ಕಂಥ ರಾಜಕೀಯ ನಿಲವು ಹೊಂದುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಬಂಡಾಯ ವೇದಿಕೆಗೆ ಬಂದಾಗ ಮಾತ್ರ ನಾವು ನಮ್ಮ ರಾಜಕೀಯ ಸಿದ್ಧಾಂತಗಳನ್ನು ಮರೆತು ಅಲ್ಲ – (ಮರೆತರೆ ಅದೆಂಥ ರಾಜಕೀಯ ಪ್ರಜ್ಞೆ?) ಬದಿಗಿಟ್ಟು – ಸರ್ವಸಾಮಾನ್ಯ ಕಾರ್ಯಕ್ರಮಕ್ಕಾಗಿ ದುಡಿಯಲು ಮುಂದಾಗಬೇಕು. ಯಾರಾದರೂ ಒಂದು ಪಂಥದವರು ವೇದಿಕೆಯನ್ನು ತಮ್ಮ ಶಂಖ ಊದಲು ಬಳಸಿಕೊಂಡರೆ, ಅಂಥವರ ವಿರುದ್ಧ ‘ಒಳಗಿನ ಬಂಡಾಯ’ ಹೂಡಲು ಬೇಕಾಗಿರುವ ಆಂತರಿಕ ಪ್ರಜಾಪ್ರಭುತ್ವವನ್ನು ನಾವು ಒಪ್ಪಿಕೊಳ್ಳಬೇಕು.

ಸಾಹಿತ್ಯ ಸೃಷ್ಟಿಯ ಖುಶಿಗಾಗಿ, ರೋಮಾಂಚನಕ್ಕಾಗಿ ಸಾಹಿತ್ಯವನ್ನು ನಾವು ಸೃಷ್ಟಿಸುವುದಿಲ್ಲ. ಒಟ್ಟು ಸಾಂಸ್ಕೃತಿಕ ಬದಲಾವಣೆಗಾಗಿ ಸಾಹಿತ್ಯ ನಮಗೊಂದು ಪರಿಣಾಮಕಾರೀ ಸಾಧನ. ಸಾಹಿತ್ಯಿಕವಾಗಿಯೂ ನಮ್ಮ ತರುಣ ಬರಹಗಾರರು ಬೆಳೆಯಬೇಕು. ‘ಸಾಹಿತ್ಯ ಸೃಷ್ಟಿ ಏಕಾಂತದಲ್ಲಿ’ ಅಂತ ಅಡಿಗರು ಅಪ್ಪಣೆ ಕೊಡಿಸಿದ್ದಾರೆ. ನಮಗೂ ‘ಏಕಾಂತ’ ಬೇಕು – ಅನೇಕ ವಿಷಯಕ್ಕೆ; ಆದರೆ ಸಾಹಿತ್ಯಕ್ಕಲ್ಲ. ಪ್ರತಿಷ್ಠಾಪಿತ ಮೌಲ್ಯಗಳು ಜಡವಾಗಿ, ಪ್ರತಿಗಾಮಿಯಾಗಿ ಬದುಕನ್ನು ಆವರಿಸಿಕೊಂಡಾಗ ಅವುಗಳ ವಿರುದ್ಧ ಹೋರಾಡುವುದೇ ಬಂಡಾಯ. ಇದು ಸಾಹಿತ್ಯದಲ್ಲಿ ಅಭಿವ್ಯಕ್ತಗೊಂಡಾಗ ಅದೇ ಬಂಡಾಯ ಸಾಹಿತ್ಯ. ಇಂಥ ಬಂಡಾಯ ಸಾಹಿತ್ಯ ಉಗಮ ‘ಏಕಾಂತ’ದಲ್ಲಿ ಅದೆಂತು ಸಾಧ್ಯ? ಅದು ಹುಟ್ಟುವುದು ಬದುಕಿನ ಒಡಲಿನಿಂದ. ಅದರ ಗುರಿಯೂ ಕೂಡ ಬದುಕೇ ಆಗಿದೆ.

*

‘ಬಂಡಾಯ ಸಮ್ಮೇಳನಕ್ಕೆ ನಮ್ಮನ್ನು ಯಾರೂ ಆಮಂತ್ರಿಸಿಯೇ ಇಲ್ಲ’ ಎಂದು ಕೆಲವರು ಗೊಣಗಿಕೊಂಡರೆಂದು ಕೇಳಿದ್ದೇನೆ. ಬಂಡಾಯಕ್ಕೆ ಆಮಂತ್ರಣ ಬೇಕೆ? ಮಾವೋ ಹೇಳಿದಂತೆ ‘A revolution is not an invitation to a dinner party,’ ನೀವು ಬರ್ರಿ, ನೀವು ಬರ್ರಿ ಅಂತ ಕುಂಕುಮ ಹಚ್ಚಿ ಕರೆಯಲು ಬಂಡಾಯವೇನೂ ಸತ್ಯನಾರಾಯಣ ಪೂಜೆಯಲ್ಲ. ಧರ್ಮಸ್ಥಳದವರು ಟಿ.ಎ. ಡಿ.ಎ. ಕೊಟ್ಟು, ಆಮಂತ್ರಣ ಕೊಟ್ಟು ‘ಬರ್ರಿ’ ಅನ್ನಬಹುದು. ನಮ್ಮದು ಹಾಗಲ್ಲ. ಇಲ್ಲಿ ಅಂಥ ವ್ಯವಸ್ಥೆ ಇಲ್ಲ. ತೆಂಗಿನಕಾಯಿ ಒಡೆದು, ಕರ್ಪೂರ ಬೆಳಗಿ, ಶುಭ ಮುಹೂರ್ತದಲ್ಲಿ ಯಾರೂ ಬಂಡಾಯ ಸುರುಮಾಡುವುದಿಲ್ಲ. ಬಂಡಾಯದ ಪ್ರವೃತ್ತಿ ಇದ್ದವರು ತಾವಾಗಿಯೇ ಬರುತ್ತಾರೆಂಬ ಗ್ಯಾರಂಟಿ ನಮಗಿದೆ.

ಇನ್ನೂ ಒಂದು ಎಚ್ಚರ ನಮಗಿರಬೇಕು. ರಮ್ಯ, ನವ್ಯ, ದಲಿತ ಸಾಹಿತ್ಯ ಲೇಬಲ್ಲುಗಳು ಪ್ರಚಲಿತವಾದಂತೆ ಅವುಗಳಿಗೆ ತಕ್ಕ ಹಾಗೆ ಸಾಹಿತ್ಯ ರಚಿಸುವ ಸಮಯೋಚಿತ ಪ್ರಜ್ಞೆಯ ಬರಹಗಾರರಿಗೂ ನಮ್ಮಲ್ಲಿ ಕೊರತೆ ಇಲ್ಲ. ‘ಸಂಕ್ರಮಣ’ದ ಸಂಪಾದಕನಾಗಿ ಈ ಮಾತು ಹೇಳುತ್ತಿರುವೆ. ಎಡಗಿಸೆಯಲ್ಲಿ ರಮ್ಯ ಕವನ, ಬಲಗಿಸೆಯಲ್ಲಿ ನವ್ಯ ಕವನ, ಹಿಂದಿನ ಕಿಸೆಯಲ್ಲಿ ದಲಿತ ಕವನವನ್ನು ಇಟ್ಟುಕೊಂಡವರು ಎದೆಯ ಕಿಸೆಯಿಂದ ‘ಬಂಡಾಯ’ ಕವನವನ್ನು ಇನ್ನು ಮೇಲೆ ತೆಗೆದುಕೊಟ್ಟಾರು. “ಖಡ್ಗವಾಗಲಿ ಕಾವ್ಯ” – ಅಂದರೆ ಖಡ್ಗದ ಆಕಾರದಲ್ಲಿಯೇ ತಮ್ಮ ಕಾವ್ಯ ಪ್ರಿಂಟು ಮಾಡಿಸುವ ಭೂಪರೂ ನಮ್ಮಲ್ಲಿದ್ದಾರೆ!

ಸಂಘಟನೆ ಸುರುವಾದಾಗ ಯಾರ‍್ಯಾರೋ ಒಳಗೆ ನುಸುಳುತ್ತಾರೆ. ಅದು ಸ್ವಾಭಾವಿಕ. ಆದರೆ ಕಾರ್ಯ ತ್ವರಿತ ಗತಿಯಿಂದ ಸಾಗಿದಾಗ ಸೈದ್ಧಾಂತಿಕ ಖಚಿತತೆ ಸ್ಪಷ್ಟವಾಗತೊಡಗಿದ ಹಾಗೆಲ್ಲ ಜೊಳ್ಳು ತಾವಾಗಿಯೇ ಹಾರಿ ಹೋಗುತ್ತವೆ. ನಮ್ಮ ಹಿಂದಿನ ಅನುಭವದ ಯಶಸ್ಸು ಹಾಗೂ ವೈಫಲ್ಯಗಳ ನೆರಳಿನಲ್ಲಿ ನಾವು ಈ ಬಂಡಾಯ ಸಂಘಟನೆಯನ್ನು ಮುನ್ನಡೆಸಿಕೊಂಡು ಹೋಗುವುದು ಮುಖ್ಯ. ಅಂಥ ರೊಚ್ಚು ಹಾಗು ಕಿಚ್ಚು ಎರಡೂ ನಮ್ಮಲ್ಲಿ ಇದೆ. ಇನ್ನೂ ಬೇಕು.

  • ೧೯೭೯