೧೯೭೦: ಕನ್ನಡ ‘ನವ್ಯ’ ಕಾವ್ಯ ತನ್ನ ಇಪ್ಪತ್ತರ ಹರೆಯದಲ್ಲೇ ತನ್ನೆಲ್ಲಾ ಎಣ್ಣೆ ಕಳಕೊಂಡು, ಮೈಯೆಲ್ಲ ಜೋಳಿಗೆಯಾಗೆ, ಜೋತಾಡುತ್ತಿದ್ದ ಕಾಲ. ಪ್ರಾರಂಭದ ಘೋಷಣೆಗಳೆಲ್ಲ, ಹಳೆಗೋಡೆಯ ಮೇಲಿನ ಕಳೆದುಹೋದ ಚುನಾವಣೆಯ ಘೋಷಣೆಗಳಂತೆ, ಮಸಕಾಗುತ್ತಿದ್ದ ಅವಧಿಯದು. ಅಡಿಗರ ‘ಸಮಕಾಲೀನ ಪ್ರಜ್ಞೆ’ ಪುರಾಣಕಾಲದ ಹಳವಂಡವಾಗಿ, ‘ಮಣ್ಣಿನ ವಾಸನೆ’ ಮಂತ್ರದ ನಾತವಾಗಿ, ‘ಆಡುಮಾತಿನ ಬಳಕೆ’ ಆಡಲಾಗದ ಸಂಸ್ಕೃತ ಪದಗಳ ಕಗ್ಗಂಟಾಗಿ, ‘ಒಂದು ಜನಾಂಗದ ಕಣ್ಣು ತೆರೆಸಿದ’ ಕವಿ ತಾನೇ ತೇಲುಗಣ್ಣು ಮೇಲುಗಣ್ಣು ಬಿಡುತ್ತಿದ್ದಾಗ, ಆ ಜನಾಂಗ ಇನ್ನೂ ಒಂದು ಕಣ್ಣನ್ನು, ತಾನೇ ತಕ್ಕೊಂಡು, ಹೊಸ ಬದಲಾವಣೆಗೆ ಮಗ್ಗಲು ಬದಲಿಸುವ ಈ ಸಂಧಿಕಾಲವೇ ಬಂಡಾಯ ಸಾಹಿತ್ಯದ ಹುಟ್ಟಿಗೆ ಸಾಕ್ಷಿಯಾಗಿತ್ತು.

ಇಡೀ ದೇಶದ ರಾಜಕೀಯ – ಸಾಮಾಜಿಕ ಬದುಕಿನಲ್ಲಿ ಕಂಡುಬಂದ ಅಲ್ಲೋಲ ಕಲ್ಲೋಲ ಕನ್ನಡ ಸಾಹಿತ್ಯದ ಬೇರುಗಳನ್ನೇ ಅಲುಗಿಸಿತು. ಅಕ್ಷರಕ್ಕೆ ಕ್ರಿಯೆಯ ಆಯಾಮ ಮೂಡಿ, ಕ್ರಿಯೆಗೆ ಅಕ್ಷರದ ಆಯಾಮ ಮೂಡಿ ಹೊರಬಂದ ಸಾಹಿತ್ಯಕ್ಕೆ ಹೊಸದೊಂದು ವ್ಯಕ್ತಿತ್ವವೇ ಒದಗಿತ್ತು. ೭೦ರ ದಶಕದ ಕೊನೆಗೆ ೧೯೭೯ರಲ್ಲಿ ಜರುಗಿದ ಮೊಟ್ಟಮೊದಲ ಬಂಡಾಯ ಸಾಹಿತ್ಯ ಸಮ್ಮೇಳನ ಮಾಡಿದ್ದು: ಒಡೆದು ಕಾಣುತ್ತಿದ್ದ ಈ ಬದಲಾವಣೆಯ ಪ್ರಕ್ರಿಯೆಗೆ ಅಧಿಕೃತವಾಗಿ ಸಿಕ್ಕಾ ಒತ್ತಿದ್ದು. ಬಂಡಾಯ ಸಾಹಿತ್ಯ, ಕೇವಲ ಒಂದು ‘ಸಾಹಿತ್ಯಿಕ’ ಪರಂಪರೆ ಅಲ್ಲ. ಹಳೆಯದನ್ನು ಕೇವಲ ಖಂಡಿಸುತ್ತ, ಅಂಥ ನಿಷೇಧಾತ್ಮಕ ನಿಲುವಿನಲ್ಲಿಯೇ ತನ್ನ ವ್ಯಕ್ತಿತ್ವ ರೂಪಿಸುವಂಥದಲ್ಲ. ಸಮಕಾಲೀನ ಬದುಕಿನಲ್ಲಿ ಇದೊಂದು ‘ವಿಶಿಷ್ಟ’ ಬೆಳವಣಿಗೆಯಂತೆ ಕಂಡರೂ, ಎಂಟು ಶತಮಾನಗಳ ಹಿಂದೆ ನಮ್ಮ ವಚನಕಾರರು ಇದೇ ಬಗೆಯ ಬದುಕು – ಬರಹದ ಸಂಲಗ್ನತೆಯ ವಾತಾವರಣ ನಿರ್ಮಿಸಿದ್ದನ್ನು ನಾವು ನೆನೆಯಬೇಕು. ಹೀಗೆ ಹೇಳಲು ಕಾರಣವಿದೆ. ‘ವಚನ ಸಾಹಿತ್ಯ’ವನ್ನು ಕೇವಲ ‘ಸಾಹಿತ್ಯಕ’ – ಅಂದರೆ ಬಹಿರಂಗದ ವಿನ್ಯಾಸ, ತಂತ್ರ ಇತ್ಯಾದಿ – ನೆಲೆಯಲ್ಲಿ ಮಾತ್ರ ತೂಗಿ ಬೆಲೆ ಕಟ್ಟುವುದು ಎಷ್ಟು ಅಸಂಬದ್ಧವೋ, ಅಷ್ಟೇ ಅಸಂಬದ್ಧ ‘ಬಂಡಾಯ ಸಾಹಿತ್ಯ’ಕ್ಕೂ ಅವೇ ಮಾನದಂಡಗಳನ್ನು ಬಳಸುವುದು.

೧೯೨೦ ರಿಂದ ೫೦ ರವರೆಗಿನ ‘ನವೋದಯ’ ಕಾವ್ಯವನ್ನು ಖಂಡಿಸಿಯೇ, ಖಂಡಿಸುತ್ತಲೇ ‘ನವ್ಯ’ಕಾವ್ಯ ಪ್ರಾರಂಭವಾಯಿತು. ಕವನಗಳು. ಪತ್ರಿಕೆಯ ಲೇಖನಗಳು, ಬಾಯಿಮಾತುಗಳು – ಹೀಗೆ ಹಲವು ಶೈಲಿಗಳಲ್ಲಿ ಅಡಿಗ, ಶರ್ಮ ಮುಂತಾದವರು ಆಗ ಮಾಡುತ್ತಿದ್ದ ‘ದಾಳಿ’, ನವೋದಯ ಕವಿಗಳ ಬಗ್ಗೆ ಅವರು ಮಾಡಿದ ಲೇವಡಿ – ಎಲ್ಲಾ ಈಗ ಚರಿತ್ರೆಯ ಭಾಗಗಳು. ಹಣ್ಣೆಲೆ ನೋಡಿ ಹಸಿರೆಲೆ ನಗುವುದು ಸಹಜ: ಹಣ್ಣೆಲೆ ಅವನ್ನು ನೋಡಿ ತನ್ನದೇ ಆದ ರಿ ರೀತಿಯಲ್ಲಿ ನಗುತ್ತಿರುವುದೂ ಸಹಜ, ಪರಂಪರೆಯ ನಿರಂತರತೆಯ ಸೂಚನೆ ಇದು.

ಆದರೆ ವಿಚಿತ್ರವೆಂದರೆ, ೧೯೫೦ರ ಹಿಂದಿನ ಸಾಹಿತ್ಯವನ್ನೂ ಹಳಿಯುತ್ತಿದ್ದ ‘ನವ್ಯ’ರ ಒಂದು ಗುಂಪೇ ೧೯೭೦ರ ನಂತರದ ಸಾಹಿತ್ಯವನ್ನೂ ಅಷ್ಟೇ ನಿರ್ಮಮತೆಯಿಂದ ಹಳಿಯುತ್ತಿರುವುದು. ಸಮಕಾಲೀನ ಪ್ರಜ್ಞೆ, ಮಣ್ಣಿನ ವಾಸನೆ, ಆಡುಮಾತಿನ ಬಳಕೆ ಮುಂತಾದ ‘ಆಶಯ’ಗಳನ್ನು ಬರೀ ’ಘೋಷಣೆ’ಗಳ ಮಟ್ಟಕ್ಕೆ ಇಳಿಸಿದ ಈ ಜನ. ಈ ಆಶಯಗಳನ್ನೂ ಒಳಗೊಂಡು, ಅಷ್ಟೇ ಅಲ್ಲ. ಅವನ್ನು ಮೀರಿಯೂ ಬೆಳೆಯುವುದು ಹೋಗಲಿ, ಅದರ ದಾರಿಯಲ್ಲಿ ಜಾಲಿ ಮುಳ್ಳು ಹರಡಲು ಮಾಡುತ್ತಿರುವ ಪ್ರಯತ್ನ, ಅವರನ್ನು ಚರಿತ್ರೆಯ ಪ್ರಜ್ಞೆ ಇಲ್ಲದ, ಅಥವಾ ಯಾವ ಪ್ರಜ್ಞೆಯೂ ಇಲ್ಲದ, ಹಾಸ್ಯಾಸ್ಪದ ವ್ಯಕ್ತಿಗಳನ್ನಾಗಿ ಮಾಡುತ್ತಿದೆ.

‘ನವ್ಯ’ದ ಸಂದರ್ಭದಲ್ಲಿ, ಅಡಿಗರ ನಂತರದ ಪೀಳಿಗೆಯ ಅನೇಕರು, ಅಡಿಗರಿಗಿಂಥ ಭಿನ್ನವಾಗಿಯೇ ಬರೆಯತೊಡಗಿದರು. ಉಚ್ಚಮಟ್ಟದ ಕಾವ್ಯಸೃಷ್ಟಿಗೆ ತಮ್ಮ ಪಾಲೂ ಸೇರಿಸಿದ ಇಂಥವರು ಬಹಳ ಜನ ಈಗ ಬರೆಯುವುದು ಕಡಿಮೆ ಮಾಡಿದ್ದಾರೆ. ಕೆಲವರು ಬದಲಾವಣೆಗೆ ಪ್ರತಿಸ್ಪಂದಿಸುತ್ತ ಬೆಳೆಯುತ್ತಿದ್ದಾರೆ. ಇದು ಒಂದು ರೀತಿ. ಈ ಪೀಳಿಗೆಯ ನಂತರ ಬಂದ ಇನ್ನೊಂದು ಪೀಳಿಗೆಯ ಹಲವಾರು ಯುವಕವಿಗಳು ಮಾತ್ರ ವಿಚಿತ್ರ ಸಂಕಟದಲ್ಲಿದ್ದಾರೆ. ನವ್ಯದ ಅವಸಾನ ಕಾಲದಲ್ಲಿ ಉದ್ಭವಿಸಿದ ಇವರು, ಮುಪ್ಪಿನಲ್ಲಿ ಹುಟ್ಟಿದ ಕೂಸುಗಳಂತೆ, ಹುಟ್ಟುತ್ತಲೇ ನರೆಗೂದಲು ಪಡೆದು ಬಂದವರು. ಹಳೆಯ ವಾಸನೆ ಹೋಗಲೊಲ್ಲದು ಹೊಸ ವಾಸನೆ ಹತ್ತಲೊಲ್ಲದು – ಹೀಗಿರುವ ಇವರು ಸದ್ಯ ಒಂದು ಸಣ್ಣ ಗುಂಪಾಗಿ, ಅವನು ಇವನಿಗೆ ಪುಸ್ತಕ ಅರ್ಪಿಸುತ್ತ, ಇವನು ಅವನಿಗೆ ಮುನ್ನುಡಿ – ಬೆನ್ನುಡಿ ಬರೆಯುತ್ತ, ನೆರೆಹಾವಳಿಗೆ ತುತ್ತಾದ ನಡುಗಡ್ಡೆಯ ಮಂದಿ ಆಕಾಶದಿಂದ – ಅಂದರೆ ಹೆಲಿಕಾಪ್ಟರನಿಂದ – ಉದುರಿ ಬೀಳುವ ಅನ್ನದ ಪಾಕೀಟಿಗಾಗಿ ಕಾಯುತ್ತಿರುವಂತೆ ಕಾಯುತ್ತಿದ್ದಾರೆ.

ಇವರು ತಮ್ಮ ಅಸ್ತಿತ್ವಕ್ಕಾಗಿ, ಅಂದರೆ ತಾವು ಇದ್ದೇವೆ ಎಂದು ತಮಗೇ ಖಾತ್ರಿ ಮಾಡಿಕೊಳ್ಳುವ ಸಲುವಾಗಿ, ಬಳಸುವ ತಂತ್ರಗಳೆಂದರೆ:

೧.ತಮಗೆ ದಕ್ಕುವ ಸಮೂಹ ಮಾಧ್ಯಮಗಳ ಮುಖಾಂತರ ಸಮಕಾಲೀನ ಇತಿಹಾಸವನ್ನೇ ತಿರುಚುವುದು. ೨. ‘ನಿಮ್ಮಲ್ಲಿ ಸಾಮಾಜಿಕ ಪ್ರಜ್ಞೆ ಕಡಿಮೆ’ ಎಂದು ಯಾರಾದರೂ ಹೇಳಿದರೆ, ‘ಅಯ್ಯೋ, ಇವರು ನನ್ನ ಸೃಜನಶೀಲತೆಯ ಮೇಲೆ ದಾಳಿ ಮಾಡುತ್ತಿದ್ದಾರೆ!’ ಎಂದು ಗುಲ್ಲೆಬ್ಬಿಸುವುದು. ೩. ಕಾವ್ಯ ‘ರೂಪ’ದ ಬಗ್ಗೆ ತಮಗೆ ಗಾಢ ಕಾಳಜಿ ಇದೆ ಎಂದು ಹೇಳಿಕೊಳ್ಳುತ್ತ. ಬೇರೆಯವರ ಕಾವ್ಯದ ‘ರೂಪ’ವನ್ನು ಗೌಣಗೊಳಿಸುವುದು. ೪. ‘ಸಮಕಾಲಿನ’ ಎಂದ ‘ಕಾಲ’ಕ್ಕೆ ಬದ್ಧರಾಗದ ತಾವು ಕಾಲಾತೀತರೆಂದೂ, ‘ವಿಶ್ವಪ್ರಜ್ಞೆ’ಯುಳ್ಳವರೆಂದೂ ತಮಗೆ ತಾವೇ ಶಿಫಾರಸು ಮಾಡಿಕೊಳ್ಳುವುದು.

೧೯೬೦ರ ದಶಕದಲ್ಲಿ ‘ಉದಯೋನ್ಮುಖ’ ಕವಿಯಾಗಿದ್ದ ಕೆ.ವಿ. ತಿರುಮಲೇಶ ಭಟ್ಟರ ಹೆಸರು ನೀವು ಕೇಳಿರಬೇಕು. ಈ ಕಾಲು ಶತಮಾನದಲ್ಲಿ ಅವರೊಬ್ಬ ‘ಅಸ್ತೋನ್ಮುಖ’ ಕವಿಯಾಗಿ, ತಮ್ಮ ಹೆಸರಿನ ‘ಭಟ್ಟ’ ಪ್ರತ್ಯಯವನ್ನು ಗುಪ್ತವಾಗಿರಿಸಿಕೊಂಡು – ಕ್ರಾಪಿನಲ್ಲಿ ಜುಟ್ಟು ಅಡಗಿಸಿಕೊಂಡಂತೆ – ಈಗ ಬರಿ ಕೆ. ವಿ. ತಿರುಮಲೇಶ ಆಗಿದ್ದಾರೆ. ನಾನು ಪ್ರಸ್ತಾಪಿಸಿದ ‘ಮುದಿಗೂಸಿ’ಗಳಲ್ಲಿ ಇವರೊಬ್ಬ ಹಿರಿಯರು. ಈ ತಿರುಮಲೇಶರು The Hindu ಪತ್ರಿಕೆಯ ೯ ಜೂನ ೧೯೮೫ರ ಸಂಚಿಕೆಯಲ್ಲಿ ‘Small Eddies in Kannada Poetry’ (ಕನ್ನಡ ಕಾವ್ಯದ ಮೂಲಕ ಮಡುವುಗಳು) ಎಂಬ ಲೇಖನ ಬರೆದಿದ್ದಾರೆ. ರಾಷ್ಟ್ರಮಟ್ಟದ ಮಾಧ್ಯಮದ ಮೂಲಕ ಕೆಲವರು ಮಾಡುತ್ತಿರುವ ಕಾಯಕದ ಪರಿಚಯಕ್ಕಾದರೂ ನಾವು ಇಂಥವನ್ನು ಓದಬೇಕು.

ಸಮಕಾಲೀನ ಕನ್ನಡ ಕಾವ್ಯದ ಬಗ್ಗೆ ಬರೆದಿರುವ ತಿರುಮಲೇಶರು, ೧೯೭೦ ದಶಕದ ರಾಜಕೀಯ – ಸಾಮಾಜಿಕ ಸಂಘರ್ಷದ – (ಏಕೆಂದರೆ, ಈ ಸಂಘರ್ಷವೇ ಆ ದಶಕದಲ್ಲಿ ಸಾಹಿತ್ಯಕ್ಕೆ ಹೊಸ ಆಯಾಮ ತರಕೊಡಗಿದ್ದು) – ಪ್ರಸ್ತಾಪವನ್ನು ಮಾಡದೆ, ಕೇವಲ ‘ಕಲೆ’ (art)ಯ ಮೇಲೆ ಒತ್ತು ಕೊಡುತ್ತ, ಕೆಲವು ದಲಿತ ಲೇಖಕರನ್ನು ಪ್ರತ್ಯೇಕಿಸುತ್ತ. ಕೊನೆಗೆ ಹೇಳುವುದೇನೆಂದರೆ; ಈ ಎಲ್ಲ ವರ್ಷಗಳಲ್ಲಿ ಕ್ರಾಂತಿಗಳು ಬರ-ಹೋಗುತ್ತಿದ್ದರೂ ಪಿ.ಟಿ. ನರಸಿಂಹಾಚಾರ‍್ (ಪುತಿನ) ಮತ್ತು ಎಸ್.ಆರ‍್. ಯಕ್ಕುಂಡಿಯವರು ಅತ್ಯಂತ ಶ್ರದ್ಧೆಯಿಂದ ಜೋಪಾನ ಮಾಡುತ್ತಿರುವ ಕಾವ್ಯಕಲೆಯ ಪರಂಪರೆಯೇ ಕನ್ನಡದ ನಿಜವಾದ ಕಾವ್ಯಪರಂಪರೆ…… `it is the tradition that forms the main stream of kannada poetry and whatever small eddies arise from time to time are always carried along with it’…. ಅರ್ಥಾತ್ ಪುತಿನ – ಯಕ್ಕುಂಡಿಯವರದೇ ಮುಖ್ಯ ಪ್ರವಾಹ; ಆಗೀಗ ಉದ್ಭವಿಸುವ ದಲಿತ. ಬಂಡಾಯ ಇತ್ಯಾದಿಗಳು ಪುಟ್ಟ ಮಡುಗಳು!’

ತಮ್ಮ ಜನ- ಪರವಾದ, ಬದುಕು- ಮೂಲವಾದ ಕಾಳಜಿಗಳಿಂದಾಗಿ ಕನ್ನಡ ಸಾಹಿತ್ಯಕ್ಕೆ ಹೊಸ ಸಾರ್ಥಕತೆಯನ್ನು ಕೊಡುತ್ತಿರುವ ಬಂಡಾಯ, ದಲಿತ ಚಳುವಳಿಗಳ ಬಗ್ಗೆ ತಿರುಮಲೇಶ (ಭಟ್ಟ) ರಿಗಿರುವ ಅಸಹನೀಯ ತಿರಸ್ಕಾರದ ಧ್ವನಿಯನ್ನು ಅದೇ ಧ್ವನಿಯಲ್ಲಿ ತಿರಸ್ಕರಿಸುವುದೇನೂ ತ್ರಾಸಿನ ಕೆಲಸವಲ್ಲ ಎನ್ನಿಸುವ ತಿರುಮಲೇಶರು ‘ಶೈಲಿ’(Style) ‘ವಸ್ತು’ (content) ಮುಖ್ಯ ಪ್ರವಾಹ (main stream) ಮುಂತಾದ ಸುಪರಿಚಿತ ಪರಿಕಲ್ಪನೆಗಳ ಬಗ್ಗೆ ಹೊಂದಿರುವ ಅರಿವೇ ಪ್ರಶ್ನಾರ್ಹವಾಗಿದೆ. ಏಕೆಂದರೆ-

‘ವಸ್ತು’ ಮತ್ತು ‘ಶೈಲಿ’ ಎರಡರ ಬಗ್ಗೆಯೂ ಕಾಳಜಿ ಇರುವ ‘ಕಾವ್ಯಪರಂಪರೆ’ ತಿರುಮಲೇಶ ಹೇಳುವಂತೆ, ಕೇವಲ ‘ಕನ್ನಡ’ ಕಾವ್ಯದ ಮುಖ್ಯ ಪ್ರವಾಹವಾಗಬೇಕಿಲ್ಲ; ಯಾವುದೇ ಭಾಷೆಯ ಉತ್ತಮ ಸಾಹಿತ್ಯದ ಮುಖ್ಯ ಪ್ರವಾಹವಾಗಿರುತ್ತದೆ. ಹಾಗೆ ನೋಡಿದರೆ, ‘ವಸ್ತು’ ಮತ್ತು ‘ಶೈಲಿ’ ಎಂಬ ಶಬ್ದಗಳು ವಿಮರ್ಶಕರು ತಮ್ಮ ವಿಶ್ಲೇಷಣೆಯ ಅನುಕೂಲತೆಗಾಗಿ ಬಳಸಿಕೊಳ್ಳವ ಪರಿಕರಗಳೆ ಹೊರತು, ಒಂದು ಕಲಾಕೃತಿ ‘ಶಿಲ್ಪ’ದಲ್ಲಿ ಈ ಭೇದ ಇರುವುದೇ ಇಲ್ಲ. ಶೈಲಿ ಸ್ವಲ್ಪ ಬದಲಾದರೂ ಶೈಲಿ ಮೂಲಶೈಲಿಯಾಗಿ ಉಳಿಯದು. ‘ಶಿಲ್ಪ’ವೇ ಬದಲಾಗಿಬಿಟ್ಟು. ಅದೊಂದು ಬೇರೆ ಕಲಾಕೃತಿಯೇ ಆಗಬಹುದು.

ಈ ವಸ್ತು- ರೂಪ – ಸಮಗ್ರತೆ ಯಾವುದೇ ಕಲೆಯ ಮುಖ್ಯ ಲಕ್ಷಣ. ಈ ಮೂಲ ಅರಿವೇ ಇರದಿದ್ದರೆ, ಆಗುವ ಅನಾಹುತಗಳೆಂದರೆ;

೧.ಈ ಸಮಗ್ರತೆಯನ್ನು ಕೇವಲ ಒಂದು ಭಾಷೆಯ ಸಾಹಿತ್ಯಕ್ಕೆ ಆರೋಪಿಸಲಾಗುತ್ತದೆ.

೨.art ಎಂಬ ಪದವನ್ನು ಕೇವಲ ‘ರೂಪ’, ‘ವಿನ್ಯಾಸ’, ‘ಶೈಲಿ’, ಎಂಬ ಸಂಕುಚಿತ ಅರ್ಥದಲ್ಲಿ ಬಳಸಲಾಗುತ್ತದೆ.

೩.‘ರೂಪ’ದ ಬಗ್ಗೆ ತನಗೆ ಮಾತ್ರ ವಿಶೇಷ ಪ್ರಜ್ಞೆ ಇದೆ ಎಂಬ ಮೇಲರಿಮೆ ಉಂಟಾಗುತ್ತದೆ (‘ವಸ್ತು’ವಿನ ಬಗ್ಗೆ ಪ್ರಜ್ಞೆ ಇಲ್ಲ ಎಂಬ ಕೀಳರಿಮೆಯನ್ನು ಇದು ಮುಚ್ಚಿಹಾಕಬಹುದು.)

೪.ಸಮಕಾಲೀನ ಸಂದರ್ಭದಲ್ಲಿ ‘ಸಮಾಜಿಕ’ ಪ್ರಜ್ಞೆ ಇದ್ದವರು ‘ಕಾಲಬದ್ದ‘ರು’ ಅದು ಇಲ್ಲದಿದ್ದರೂ, ‘ಕಲಾ’ಪ್ರಜ್ಞೆಯುಳ್ಳವರು ‘ಕಾಲಾತೀತ’ರು ಎಂಬ ಭ್ರಮೆ ಉಂಟಾಗುತ್ತದೆ.

ಈ ಕಾಲಾತೀತ ‘ವಿಶ್ವಪ್ರಜ್ಞೆ’ಯ ಭ್ರಮೆಯ ಪರಿಯನ್ನು ನೋಡಬೇಕೆಂದವರು ತಿರುಮಲೇಶರ ತಳಿಯ ಎಚ್. ಎಸ್. ವೆಂಕಟೇಶಮೂರ್ತಿಯವರು ತಮ್ಮ ಇತ್ತೀಚಿನ ಇಂದುಮುಖಿ ಕವನ ಸಂಕಲನಕ್ಕೆ ಪ್ರಾರಂಭದಲ್ಲಿ ಬರೆದುಕೊಂಡಿರುವ ಕೆಲವು ಮಾತುಗಳನ್ನು ನೋಡಬಹುದು, ‘ಸಮಕಾಲೀನವಾದ ವ್ಯಕ್ತಿ, ಉತ್ಪನ್ನ, ಭಾಷಾಬಳಕೆಯಿಂದಷ್ಟೇ ಒಂದು ಕೃತಿ ಸಮಕಾಲೀನ ಸಾಮಾಜಿಕ ಪ್ರಸ್ತುತತೆ ಪಡೆಯುವುದಿಲ್ಲ’ – ಎಂಬ ಹೇಳುವ ವೆಂಕಟೇಶಮೂರ್ತಿ ಮತ್ತು ಅವರಂಥವರು ಒಂದು ಮಾತು ಮರೆಯಬಾರದು: ‘ಕಾಲ’ ಮತ್ತು ‘ದೇಶ’ ಬದ್ಧನಾದ ‘ವ್ಯಕ್ತಿ’ಯಾಗಿರುವ ಕವಿಗೆ ಒಂದು ‘ಮಿತಿ’ ಇದೆ. ಈ ಮಿತಿಯಲ್ಲಿ. ಈ ಕಣ್ಣರಿಕೆಯಲ್ಲಿ ಎಷ್ಟು ದಕ್ಕಬಹುದೋ ಅದೇ ಕವಿಗೆ ಮೂಲ ಬಂಡವಾಳ. ಈ ಬಂಡವಾಳ ಸಮಕಾಲೀನವೇ ಆಗಿರುತ್ತದೆ. ಸಮಕಾಲೀನದ ಗಟ್ಟಿ ನೆಲದ ಮೇಲೆ ನಿಂತಾಗ ಮಾತ್ರ ಕಾಲದ ಹಿಂದು – ಮುಂದುಗಳ, ಅನಾದಿ – ಅನಂತಗಳ ಆಯಾಮವನ್ನೂ, ಧ್ವನಿಯನ್ನೂ ಮೂಡಿಸಲು ಸಾಧ್ಯ. ೧೬ನೆ ಶತಮಾನದ ‘ಕಾಲ’ದ ಚೌಕಟ್ಟಿನಲ್ಲಿ ಶೆಕ್ಸಪಿಯರ‍್ ಕಟೆದು ನಿಲ್ಲಿಸಿದ ‘ಡೆನ್ಮಾರ್ಕ’ನ ರಾಜಕುಮಾರನೊಬ್ಬ ‘ಎಲ್ಲ ಕಾಲ’ಕ್ಕೂ ಸಲ್ಲುವ ‘ವಿಶ್ವ’ ಎಂಬ ಶಬ್ದಗಳೆಲ್ಲ ಬೊಗಳೆಯಾಗುತ್ತವೆ; ಪ್ರಯೋಗದ ಹೆಸರಿನಲ್ಲಿ ಮಾಡುವ ಭಾಷಾ ಕಸರತ್ತುಗಳಿಲ್ಲ ಕೇವಲ ಲಯದ, ಛಂದಸ್ಸಿನ ಲಾಗಗಳಾಗಿ ವ್ಯರ್ಥ ಆಲಾಪಗಳಾಗುತ್ತವೆ.

ಯಾವುದೇ ಕಾಲಘಟ್ಟದಲ್ಲಿ ಸಮೃದ್ಧವಾಗಿ ಉತ್ಪಾದನೆಯಾಗುವ ಸಾಹಿತ್ಯದಲ್ಲಿ ಎಲ್ಲವೂ ಉತ್ತಮವಾಗಿರುವುದಿಲ್ಲ. ಎಲ್ಲ ದೇಶದ ಎಲ್ಲ ರೀತಿಯ ಉತ್ಪಾದನೆಗಳಿಗೂ ಅನ್ವಯವಾಗುವ ಮಾತಿದು. ಕೊನೆಗೂ ಗಟ್ಟಿಯಾಗಿ ಉಳಿಯುವುದು ಕೆಲವೇ ಕೃತಿಗಳು ಮಾತ್ರ….. ಈ ದೃಷ್ಟಿಯಿಂದ ‘ನವೋದಯ’ದ ಹೆಸರಿನಲ್ಲಿ, ‘ನವ್ಯ’ದ ಹೆಸರಿನಲ್ಲಿ ಒಂದಷ್ಟು ಜೊಳ್ಳು ಕವನಗಳಿಗೆ ಹೋಲಿಸಿದರೆ ‘ಬಂಡಾಯ’ದ ಹೆಸರಿನಲ್ಲಿ ಬರುತ್ತಿರುವ ಜೊಳ್ಳು ಏನೇನೂ ಅಲ್ಲ.

ವಿಮರ್ಶೆಯಲ್ಲಿ ಬರುವ ಇಂಥ ಮಾತುಗಳ ಹಿಂದಿನ ವಿಮರ್ಶಕರ ಆಶಯ, ಉದ್ದೇಶಗಳನ್ನು ಅರಿಯಬೇಕಾಗುತ್ತದೆ. ತೆಗಳಬೇಕೆನ್ನುವವರು ಬರೀ ಜೊಳ್ಳಿಗೆ ಕೈ ಹಾಕುತ್ತಾರೆ; ಸಹನೆಯಿಂದ ಮೌಲ್ಯಮಾಪನ ಮಾಡಬೇಕೆನ್ನುವವರು ಗಟ್ಟಿಕಾಳುಗಳನ್ನು ಎತ್ತಿ ತೋರಿಸುತ್ತಾರೆ.

‘ಬಂಡಾಯ ಸಾಹಿತ್ಯ’ವನ್ನು ಅನುಮಾನ ದೃಷ್ಟಿಯಿಂದ ನೋಡುವವರ ಒಂದು ಮಾತು ಮೆಲುಕು ಹಾಕಲಿಕ್ಕೆ ಯೋಗ್ಯವಾಗಿದೆ. ಅವರು ಕೇಳುವ ಪ್ರಶ್ನೆ – ಅದು ಉದ್ಗಾರವಾಚಕವೂ ಹೌದು – ಹೀಗಿದೆ ‘ಇಷ್ಟು ವರ್ಷಗಳಾದರೂ ಬಂಡಾಯ ಸಾಹಿತ್ಯ ತನ್ನದೇ ಆದ ಒಂದು ರೂಪವನ್ನು ವಿನ್ಯಾಸವನ್ನು ಪಡೆದುಕೊಂಡಿಲ್ಲವಲ್ಲ?’ ಮೇಲು ನೋಟಕ್ಕೆ ನೆರವೂ ಪ್ರಾಮಾಣಿಕವೂ ಆಗಿ ತೋರುವ ಈ ಪ್ರಶ್ನೆಯ ಮೋಸಕ್ಕೆ ಮರುಳಾಗಿ ಅನೇಕ ಬಂಡಾಯ ಸಾಹಿತಿಗಳೂ ಕೂಡ ’ಹೌದು, ನಮಗೊಂದು ಅಭಿವ್ಯಕ್ತಿಯ ಮಾಡಲ್ಲೇ ಇಲ್ಲವಲ್ಲ; ಯಾರಾದರೂ ನಮಗೆ ಒಂದು ಮಾಡೆಲ್ ಕೊಡಬಾರದೇ? ಎಂದು ಹಪಹಪಿಸುತ್ತಿದ್ದಾರೆ.

ಆದರೆ ‘ವಿಶಿಷ್ಟ ವಿನ್ಯಾಸ’ದ ಪ್ರಶ್ನೆಯ ಮೋಸವೆಂದರೆ ಅದೊಂದು ಪ್ರಶ್ನೆಯೇ ಅಲ್ಲ- ಅದೊಂದು ‘ಅಪ್ರಶ್ನೆ’, ಏಕೆಂದರೆ ಯಾವುದೊಂದು ಸಾಹಿತ್ಯಕ ಕಾಲಘಟ್ಟದಲ್ಲಿ, ಬಹಳವೆಂದರೆ, ಒಂದು ಸಾಹಿತ್ಯ ಪ್ರಕಾರ (ಉದಾ: ನಾಟಕ, ಕಾದಂಬರಿ, ಕಾವ್ಯ, ಮುಂ) ಹೆಚ್ಚು ಚಾಲ್ತಿಗೆ ಬರಬಹುದೇ ಹೊರತು, ಆಯಾ ಸಾಹಿತ್ಯಕ್ಕೆ ‘ವಿಶಿಷ್ಟವಾದ ಯಾವ ವಿನ್ಯಾಸವೂ’ ರೂಪುಗೊಳ್ಳುವುದಿಲ್ಲ. ಒಂದು ಸಾಹಿತ್ಯ ಪ್ರಕಾರದ ಒಟ್ಟು ಮಿತಿಯೊಳಗಡೆ ಒಬ್ಬ ಲೇಖಕ ತನ್ನ ಅಧ್ಯಯನಶೀಲತೆ ಮತ್ತು ಪ್ರಯೋಗ ಪ್ರಿಯತೆಯ ಹಿನ್ನೆಲೆಯಲ್ಲಿ ತನಗೆ ವಿಶಿಷ್ಟವಾದ ‘ವಿನ್ಯಾಸ’ವನ್ನು ಪಡೆಯಬಹುದು ಅಷ್ಟೆ ಎಲ್ಲರಿಗೂ ಮಾಡೆಲ್ ಆಗಬಹುದಾದ ವಿನ್ಯಾಸದ ಬೇಡಿಕೆ ಆ ಕಾಲಘಟ್ಟದ ಸಾಹಿತ್ಯಿಕ ಅವಸಾನದ ಮುಖ್ಯ ಲಕ್ಷಣವೆಂದು ಬಗೆಯಬೇಕಾಗುತ್ತದೆ.

ಕನ್ನಡದ ‘ನವೋದಯ’ ಕಾಲದಲ್ಲಿ ಬರೆಯುತ್ತಿದ್ದವರು ಲಭ್ಯವಿರುವ ಎಲ್ಲ ಪ್ರಕಾರಗಳಲ್ಲೂ ಕೈಯಾಡಿಸಿದರು; ಎಲ್ಲ ವಿನ್ಯಾಸಗಳಲ್ಲೂ ತಮ್ಮ ಅಭಿವ್ಯಕ್ತಿ ತುಂಬಿದರು, ‘ನವ್ಯ’ ಕಾಲದಲ್ಲಿ ಕೂಡ ನವ್ಯಕ್ಕೆ ತನ್ನದೇ ಆದ ಯಾವ ವಿನ್ಯಾಸವೂ ಇರಲಿಲ್ಲ. ಮುಕ್ತ ಛಂದದೊಂದಿಗೆ ಛಂದೋಬದ್ದ ಕೃತಿಗಳೂ ಬಂದಿವೆ ಕತೆ, ಕಾದಂಬರಿ ನಾಟಕಗಳ ಎಲ್ಲ ವಿನ್ಯಾಸಗಳಲ್ಲಿ ‘ನವ್ಯತೆ’ ಅಚ್ಚೊತ್ತಿದೆ.

ಮುಖ್ಯವಾಗಿ ಗಮನಿಸಬೇಕಾದ ಸಂಗತಿ ಎಂದರೆ ‘ನವೋದಯ’, ‘ನವ್ಯ’ ‘ಬಂಡಾಯ’ ಮುಂತಾದ ಶಬ್ದಗಳು ‘ಪ್ರಜ್ಞೆ’ ಅಥವಾ ‘ಮನೋಧರ್ಮ’ದ ಸೂಚಿಗಳಾಗಿವೆಯೇ ಹೊರತು ‘ವಿನ್ಯಾಸ’ಗಳ ಪ್ರಬೇಧಗಳಾಗಿಲ್ಲ. ಅಭಿವ್ಯಕ್ತಿಯ ‘ತಂತ್ರ’ಗಳ ಪ್ರತೀಕಗಳಾಗಿಲ್ಲ. ‘ನವ್ಯತೆ ಅಂದರೆ ಒಂದು ತಂತ್ರ’ ಎಂಬ ಗೋಕಾಕರ ಅಭಿಪ್ರಾಯವನ್ನು ನೇರವಾಗಿ ನಿರಾಕರಿಸಿ’ ನವ್ಯತೆ ಒಂದು ತಂತ್ರವಲ್ಲ; ನವ್ಯತೆ ಒಂದು ದೃಷ್ಟಿ’ ಎಂದು ಸಾದರಪಡಿಸಿದ ಅಡಿಗರ ನಿಲುವನ್ನು ಇಲ್ಲಿ ನೆನೆಯಬೇಕು ಚೋದ್ಯವೆಂದರೆ ಅಡಿಗರ ವಂಶಾವಳಿಯ ಟೊಂಗೆಗಳೇ ಇಂದು ಗೋಕಾಕರ ರೀತಿಯಲ್ಲಿ ಮಾತಾಡುತ್ತಿರುವುದು!

ಬಂಡಾಯ ಒಂದು ಮನೋಧರ್ಮ ವ್ಯಕ್ತಿಯನ್ನೊಳ್ಳಗೊಂಡ ಸಮಷ್ಟಿ ಬದುಕಿನ ನಿರಂತರ ಸಂಘರ್ಷದ ಅರಿವಿನ ನೆಲೆಯಲ್ಲಿ ಆ ಬದುಕನ್ನು ವೀಕ್ಷಿಸುವ, ಗ್ರಹಿಸುವ, ಜೀರ್ಣ ಮಾಡಿಕೊಂಡು ನಂತರ ಅಭಿವ್ಯಕ್ತಿಸುವ ಕ್ರಮದಲ್ಲಿ ಇಂಥ ಮನೋಧರ್ಮ, ದೃಷ್ಟಿಕೋನ, ರೂಪು ಪಡೆಯುತ್ತದೆ. ಇಂಡಿಯಾದ ಬದುಕಿನ ಪದರು ಪದರುಗಳಲ್ಲಿ. ಅಡಕವಾಗಿರುವ – ಹೊರಗೆ ರಕ್ತ ಸುರಿಸುವ ಒಳಗೆ ರಕ್ತ ಕುದಿಸುವ – ವೈಷಮ್ಯದ ಅರಿವಿರುವ ಯಾವನೂ ಇಂದು ಬಂಡಾಯ ಮನೋಧರ್ಮ ಬೆಳೆಸಿಕೊಳ್ಳದೇ ಇರುವುದು ಅಸಂಭವ ಮತ್ತು ಅಸಹಜ.

ಸೈದ್ದಾಂತಿಕ ಚರ್ಚೆಯ ಮೂಲಕ ಸಂಘಟನೆಯ ಶಿಸ್ತಿನ ಮೂಲದ ಸಂಘರ್ಷಗಳ ಕ್ರಿಯಾಶೀಲತೆಯ ಮೂಲಕ ಇಂಥ ಮನೋಧರ್ಮಕ್ಕೆ ಆಳ, ಅಗಲಗಳನ್ನು ತಂದುಕೊಳ್ಳುವುದರ ಜೊತೆಗೆ ‘ಕಲೆ’ಗೆ ಸಂಬಂಧಪಟ್ಟ ಎಲ್ಲ ವಸ್ತು ಹಾಗೂ ವಿನ್ಯಾಸಗಳ ವೈವಿಧ್ಯಗಳ ಜ್ಞಾನ ಸಂಪಾದಿಸುತ್ತ, ಪ್ರಯೋಗ ಪ್ರಿಯತೆಯನ್ನು ಮೈಗೂಡಿಸಿಕೊಂಡಾಗ ತುಂಬಾ ಸಮೃದ್ಧವಾದ, ಹಾಗೆಯೇ ಸಾರ್ಥಕವಾದ ಸಾಹಿತ್ಯ ಸೃಷ್ಟಿ ಸಾಧ್ಯ. ಶ್ರೀ ಜಿ. ಎಚ್. ನಾಯಕರು ಗುರುತಿಸಿರುವಂತೆ “ಬಂಡಾಯ ಕಾವ್ಯವು ಇಡಿಯಾಗಿ ಜನಪರ ಕಾವ್ಯವಾಗಿಯೇ ಬೆಳೆಯುತ್ತಿದೆ”. ನವೋದಯದಲ್ಲಿ ಭಾವಪರ.

ಹೊಸಗನ್ನಡ ಕವಿತೆ (೧೯೮೫) ಪ್ರಸ್ತಾವನೆ, ಪುಟ XXV

ಜನಪರ, ನವ್ಯಕಾವ್ಯದಲ್ಲಿ ಚಿಂತನೆಪರ – ಜನಪರ ಎಂಬ ವಿಂಗಡನೆಯ ಅಗತ್ಯವಿರುವಂತೆ, ಬಂಡಾಯ ಕಾವ್ಯ ಬೆಳೆದು ಬಂದಿಲ್ಲ ಎಂದು ಅಭಿಪ್ರಾಯ ಪಡುವ ನಾಯಕರು. “ಕನ್ನಡದ ಜನಪರ ಕಾವ್ಯ ಪರಂಪರೆಗೆ ಸ್ವತಂತ್ರವಾದ ಕಾವ್ಯ ಪರಿಕಲ್ಪನೆ ಅಥವಾ ಕಾವ್ಯ ತತ್ವವನ್ನು ರೂಪಿಸಿಕೊಳ್ಳಬೇಕಾದ ಅಗತ್ಯ ಎದುರಾಗಲಿಲ್ಲ ಎಂಬುದು ಗೊತ್ತಾಗುತ್ತದೆ’ ಎನ್ನುತ್ತಾರೆ.

ಇಡೀ ಬದುಕಿನ ಒಂದು ಅವಿಭಾಜ್ಯ ಅಂಗವೇ ಕಾವ್ಯ ಅಥವಾ ಸಾಹಿತ್ಯ ಆದಾಗ ಇಂಥ ‘ಪ್ರತ್ಯೇಕ’ ಪರಿಕಲ್ಪನೆಯ ಅಗತ್ಯವೇ ಬೀಳುವುದಿಲ್ಲ. ನಮ್ಮ ಬಂಡಾಯ ಸಾಹಿತಿಗಳು ಇದನ್ನರಿಯಬೇಕು.

-೧೯೮೫