ಗೆಲುವು ನಮ್ಮದೋ ಗೆಲುವು ನಮ್ಮದೋ
ಇಂದಿಗೂ ಎಂದೆಂದಿಗೂ
ಗೆಲುವು ನಮ್ಮದೋ………

ಸೆಪ್ಟಂಬರ ೧೦, ೧೯೯೫ ತುಮಕೂರಿನ ವೀರಶೈವ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾದ ರಾಜ್ಯ ಮಟ್ಟದ ಬಂಡಾಯ ಸಾಹಿತ್ಯ ಸಮ್ಮೇಳನದ ಕೊನೆಯ ದಿನದ ಕೊನೆಯ ಹಂತದ ಸಮಾರೋಪ ಕಾರ್ಯಕ್ರಮ. ಸಾಮಾನ್ಯವಾಗಿ ಸಮ್ಮೇಳನಗಳ ಈ ಹಂತದಲ್ಲಿ ವೇದಿಕೆಯ ಮೇಲೆ ಭಾಷಣಕಾರರು ಮತ್ತು ವೇದಿಕೆಯ ಕೆಳಗೆ ಸಭಾಂಗಣದಲ್ಲಿ ಕೇವಲ ಖಾಲಿ ಕುರ್ಚಿಗಳು ಉಳಿಯುವುದು ನಾವು ನೋಡುವ ದೃಶ್ಯ. ಆದರೆ ಎಲ್ಲ ಸಮ್ಮೇಳನಗಳಂತಲ್ಲ ಬಂಡಾಯ ಸಾಹಿತ್ಯ ಸಮ್ಮೇಳನ.

ಗೆಳೆಯ ಸಿದ್ಧನಗೌಡ ಪಾಟೀಲ ಹಾಡಿದ ಹಾಡನ್ನು ತುಂಬಿದ ಸಭೆಗೆ ಸಭೆಯೇ ತುಂಬು ಕಂಠದಿಂದ ಹಾಡತೊಡಗಿದಾಗ ನಮಗೆಲ್ಲ ರೋಮಾಂಚನ. ಗೋಡೆ ಗೋಡೆಗಳು ತಲೆ ತೂಗುತ್ತ ಹಾಡಿನ ಅಲೆ ಅಲೆಗಳನ್ನು ಗುಣಗುಟ್ಟುತ್ತಿರುವಂಥ ಅನುಭವ.

ಬದುಕಿನುದ್ದಕೂ
ಬದ್ದ ವೈರಿಗಳ
ಗೆದ್ದೇ ಗೆಲುವೆವೋ…

ಸಾಗಿತ್ತು ಹಾಡು, ಹಾಡು ಮುಗಿದಾಗ ನನ್ನ ಹಿಂದಿನ ಸಾಲಿನಲ್ಲಿ ಕುಳಿತಿದ್ದ ಪ್ರೊ. ಮರಿದೇವರಿಗೆ ಹೇಳಿದೆ. “ನೀವು ನಮ್ಮ ಕೂಡ ಹಾಡುವಂತಾಯಿತಲ್ಲ. ಅದೇ ಖುಶಿ ನನಗೆ.” ಅವರ ಮಗ್ಗುಲಿಗೆ ಕುಳಿತಿದ್ದ ಇನ್ನೊಬ್ಬ ಹಿರಿಯರು ನಕ್ಕರು.

ಪ್ರೊ. ಮರಿದೇವರು ತುಮಕೂರಿನ ಜಗತ್ಪ್ರಸಿದ್ಧ ವ್ಯಕ್ತಿಗಳಲ್ಲಿ ಒಬ್ಬರು. ಅವರ ಬಿಜೆಪಿ ಪರ ಒಲವು ಎಲ್ಲರಿಗೂ ಗೊತ್ತು. ‘ಮಹಾಚೈತ್ರ’ವನ್ನು ವಿರೋಧಿಸಿದ ವೀರಶೈವ ಶರಣಾಗ್ರಣಿಗಳಲ್ಲಿ ಅವರೂ ಒಬ್ಬರು.

ಇಂಥ ಮರಿದೇವರೂ ಕೂಡ ಸಮ್ಮೇಳನದ ಎಲ್ಲ ಗೋಷ್ಠಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದು ನನಗೆ ವಿಶೇಷವಾಗಿ ಕಂಡಿತ್ತು. ಇಂದು ‘ಬಂಡಾಯ’ದ ಹೆಸರಿನಲ್ಲಿ ಏನು ಕಾರ್ಯಕ್ರಮ ಹಾಕಿಕೊಂಡರೂ ಅದರ ಬಗ್ಗೆ ‘ಬಂಡಾಯ’ದ ವಿರೋಧಿಗಳೂ ಕೂಡ ಆಸಕ್ತರಾಗಿರುತ್ತಾರೆ! ಇದು, ಈ ಎರಡು ದಶಕಗಳಲ್ಲಿ ಬಂಡಾಯ ಚಳುವಳಿ ನಿರ್ಮಿಸಿದ. ಸಾಹಿತ್ಯವನ್ನು ಮೀರಿದ, ಸಾಂಸ್ಕೃತಿಕ ಪರಿಣಾಮ, ಈ ಪರಿಣಾಮದ ದಟ್ಟವಾದ ಅಭಿವ್ಯಕ್ತಿಯಾಗಿತ್ತು ತುಮಕೂರಿನ ಸಮ್ಮೇಳನ.

*

೧೯೯೦ರಲ್ಲಿ ಬಾಗಲಕೋಟೆಯಲ್ಲಿ ಜರುಗಿದ ರಾಜ್ಯಮಟ್ಟದ ಸಮ್ಮೇಳನದ ನಂತರ ಬಂಡಾಯ ಸಂಘಟನೆ ಹುಟ್ಟಿ ಬೆಳೆದ ಒಂದೂವರೆ ದಶಕದ ನೆನಪಿಗೆಂದು – ಅಖಿಲ ಭಾರತ ಮಟ್ಟದ ಸಮ್ಮೇಳನವನ್ನೇ ಮಾಡಬೇಕೆಂದು ತುಮಕೂರು ಸಂಗಾತಿಗಳ ಸಂಕಲ್ಪವಾಗಿತ್ತು. ಆದರೆ ಕೈಮೀರಿದ ಏನೇನೋ ಕಾರಣಗಳಿಂದಾಗಿ ಕಾರ್ಯಕ್ರಮ ಮುಂದೆ ಮುಂದೆ ಬೀಳುತ್ತಾ ಹೋದಂತೆ ರಾಜ್ಯದಾದ್ಯಂತ ಗೆಳೆಯರಿಗೆಲ್ಲ ನಿರಾಸಕ್ತಿ; ರಾಜ್ಯ ಸಂಚಾಲಕರಲ್ಲಿ ಒಬ್ಬನಾಗಿದ ನನಗೂ ಒಂದು ನಮೂನೆ ಮಂಕು, ಅಂತೂ ಇಂತೂ ಇದೇ ಸೆಪ್ಟಂಬರ ೯ ಮತ್ತು ೧೦ ರಂದು ಸಮ್ಮೇಳನ ಅಂದಾಗ ಬಹಳ ಆತಂಕದಿಂದಲೇ ನಾನು ಬಂದದ್ದು.

ಆದರೆ ಎಲ್ಲಾ ಜಿಡ್ಡೂ ಕಳಚಿ ಬೀಳುವಂತೆ, ಜಂಗೆಲ್ಲ ಕತ್ತಿ ಹೋಗಿ ಮತ್ತೆ ಪಾತ್ರೆ ಫಳ ಫಳ ಹೊಳೆಯುವಂತೆ ಎರಡು ದಿನ ಅದ್ದೂರಿಯಾಗಿ, ಅರ್ಥಪೂರ್ಣವಾಗಿ ಸಮ್ಮೇಳನ ನಡೆಸಿಕೊಟ್ಟವರು ತುಮಕೂರಿನ ಬಂಡಾಯ ಸಂಗಾತಿಗಳು. ‘ಬಂಡಾಯ ಹದಿನೈದು ವರ್ಷ’ ಎಂಬ ನೆನಪಿನ ಸಂಚಿಕೆಯನ್ನೂ ಹೊರತಂದು ನಮ್ಮೊಳಗೆ ಸುಮ್ಮನೆ ಮಲಗಿದ್ದ ಬಂಡಾಯದ ನೆಲಗುಮ್ಮ ಮತ್ತೆ ಗುರುಗುಟ್ಟುವಂತೆ ಮಾಡಿದ ಈ ಗೆಳೆಯರ ಕ್ರಿಯಾಶೀಲತೆಯ ಹಿಂದೆ ಕೈಯಾಗಿ ಕೆಲಸ ಮಾಡಿದವರು ಬರಗೂರು ರಾಮಚಂದ್ರಪ್ಪ ಹಾಗೂ ಗಂಗಾಧರ ಮೊದಲಿಯಾರ; ಮತ್ತು ಇವರ ಕೈಗೆ ಬಲ ನೀಡಿದವರು ತುಮಕೂರಿನ ಯುವ ರಾಜಕಾರಣಿ. ಜಿ ಪಿ. ಚಳುವಳಿಯ ಹಿನ್ನೆಲೆಯ, ಸೋಮಶೇಖರ ಅರ್ಥಾತ್ ‘ಸೋಮಣ್ಣ’.

*

ಬಾನಂದೂರು ಕೆಂಪಯ್ಯ ಹಾಡಿದ ಶರೀಪ ಹಾಡಿದ ಶರೀಪ ಶಿವಯೋಗಿಯ ಹಾಡು ಮತ್ತು ಅಪ್ಪಗೆರೆ ತಿಮ್ಮರಾಜು ಹಾಡಿದ ಬರಗೂರರ ‘ನಮ್ಮ ಈ ನಾಡಿನಲ್ಲಿ’ ಗೀತ ಎರಡೂ ‘ಜನರ ನೋವಿಗೆ ಮಿಡಿದ ಪ್ರಾಣಮಿತ್ರ’ವಾಗಿ ಉದ್ಭವಿಸಿದ ಬಂಡಾಯ ಚಳುವಳಿಯ ಆಶಯವನ್ನೇ ಧ್ವನಿಸುವಂತಿದ್ದವು. ನಾಡಿನ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಂಡಾಯ ಸಾಹಿತ್ಯ ಚಳುವಳಿಯ ಮಹತ್ವವನ್ನು ಗುರುತಿಸಿದ ಕವಿ ಎಸ್. ಜಿ. ಸಿದ್ಧರಾಮಯ್ಯ ಉದ್ಘಾಟನಾ ಸಮಾರಂಭದ ಸ್ವಾಗತ ಭಾಷಣ ಮಾಡಿದರು.

ಕಳೆದ ೧೫-೧೬ ವರ್ಷಗಳಲ್ಲಿ ಸಂಘಟನೆಯ ಏಳು ಬೀಳುಗಳನ್ನು ಕಣ್ಣಾರೆ ಕಂಡವ ನಾನು ‘ನವ್ಯ’ದಿಂದ ಸಿಡಿದು ನೇರವಾಗಿ ಬಂಡಾಯಕ್ಕೆ ಬಂದವನು ನಾನು. ಬಂಡಾಯದ ಕಕ್ಷೆಯಲ್ಲಿ ಪೀಳಿಗೆಯ ನಂತರ ಪೀಳಿಗೆ ಬರುತ್ತಿರುವುದನ್ನು ಈ ಹಂತದ ಬದಲಾವಣೆಯ ಪ್ರಕ್ರಿಯೆಯನ್ನು ಆತ್ಮೀಯವಾಗಿ ಮತ್ತು ವಿಮರ್ಶಾತ್ಮಕವಾಗಿ ಸ್ವಾಗತಿಸುತ್ತಲೇ ಬಂದಿರುವ ನಾನು ಉದ್ಘಾಟನೆಯ ನೆವದಲ್ಲಿ ಒಂದೆರಡು ವಿಷಯಗಳನ್ನು ವಿವರವಾಗಿ ಪ್ರಸ್ತಾಪಿಸಬೇಕಾಯಿತು.

೧೯೮೦ರ ದಶಕದ ಪ್ರಾರಂಭದಲ್ಲಿ – ಅಂದರೆ ‘ಬಂಡಾಯ’ ದ ಹೊಸತರಲ್ಲಿ ಅದನ್ನು ಉಗ್ರವಾಗಿ ವಿರೋಧಿಸುತ್ತಿದ್ದ ಅನೇಕ ‘ನವ್ಯ’ರು ಈ ಒಂದೂವರೆ ದಶಕದ ಅವಧಿಯಲ್ಲಿ ಬಂಡಾಯದ ಐತಿಹಾಸಿಕ ಅನಿವಾರ‍್ಯತೆಯನ್ನು ಒಪ್ಪಿಕೊಂಡು ಅದಕ್ಕೆ ಅನುಗುಣವಾಗಿ ಬದಲಾಗುತ್ತಿರುವುದು ಇಂದು ಒಡೆದು ಕಾಣುವ ಅಂಶ. ಸೃಜನ ಶೀಲ ಬರಹಗಾರರು ತಮ್ಮ ಕೃತಿಗಳಲ್ಲಿ ಪ್ರತಿಭಟನೆ, ಬಂಡಾಯದ ಆಶಯಗಳನ್ನು ಧ್ವನಿಸುವುದು ಸಹಜವೇ, ಆದರೆ ವಿರ್ಮಶಕರು ತಮ್ಮ ಯಥಾಪ್ರಕಾರದ ಕಲಾನಿಷ್ಠತೆ ರೂಪನಿಷ್ಠತೆಗಳ ಕ್ಲೀಷೆಯನ್ನು ತೊರೆದು, ಬರಹಗಾರರ ‘ಸಾಮಾಜಿಕ ಹೊಣೆಗಾರಿಕೆ’ ಬಗ್ಗೆ ಮಾತನಾಡುವದು, ‘ಸಾಹಿತ್ಯ ವಿಮರ್ಶೆ’ ಯ ಬದಲಾಗಿ ‘ಸಂಸ್ಕೃತಿ ವಿಮರ್ಶೆ’ ಎನ್ನುವದು – ಬಂಡಾಯ ಚಳುವಳಿ ಸೃಷ್ಟಿಸಿದ ವಾತಾವರಣದಿಂದಲೇ ಸಾಧ್ಯವಾದದ್ದು.

ನವೋದಯ – ನವ್ಯಗಳ ಅರ್ಧ ಸೃಷ್ಟಿಸಿದ ಶತಮಾನದ (೧೯೨೦ – ೧೯೭೦) ಅವಧಿಯಲ್ಲಿ ಘಟಿಸದ ಒಂದು ವಿದ್ಯಮಾನ ಸಂಭವಿಸಿದ್ದು ಬಂಡಾಯದ ಅವಧಿಯಲ್ಲಿ. ಈ ದೇಶದ ದಲಿತರು, ಮಹಿಳೆಯರು, ಧಾರ್ಮಿಕ ಅಲ್ಪಸಂಖ್ಯಾತರು ಮೊಟ್ಟ ಮೊದಲ ಬಾರಿ ಮೌನವನ್ನು ಸ್ಫೋಟಿಸಿ ಮಾತು ಬಳಸಿದರು. ಇದೊಂದು ಮಹಾ ಸಾಂಸ್ಕೃತಿಕ ಘಟನೆ; ಇಡೀ ಕನ್ನಡ ಸಾಹಿತ್ಯಕ್ಕೇ ಹೊಸ ಆಯಾಮವನ್ನು ಮೂಡಿಸಿದ ಘಟನೆ. ಮೊದಲ ಬಾರಿ ದನಿ ಇಲ್ಲದ ಜನ ದನಿ ಎತ್ತಿದಾಗ ಅಲ್ಲಿಯವರೆಗೂ ಹೊಟ್ಟೆಯಲ್ಲಿ ಅದುಮಿಟ್ಟುಕೊಂಡಿದ್ದ ನೋವು, ಹತಾಶೆ, ಅಪಮಾನ, ಆಕ್ರೋಶಗಳು ತಮ್ಮ ಅಭಿವ್ಯಕ್ತಿಯಲ್ಲಿ ಕಲಾತ್ಮಕತೆಯನ್ನು ಬದಿಗೆ ಸರಿಸಿದ್ದು ಸಹಜ ಮತ್ತು ಅನಿವಾರ‍್ಯ. ಆದರೆ ಆನಂತರದ ಅವಧಿಯಲ್ಲಿ ಬಂಡಾಯ ಸಾಹಿತಿಗಳು ತಮ್ಮ ಕವನ, ಕತೆ, ಕಾದಂಬರಿಗಳಲ್ಲಿ ತೋರುತ್ತಿರುವ ಅಪರೂಪದ ಕಲಾವಂತಿಕೆಯನ್ನು, ಬಂಡಾಯ ವಿಮರ್ಶಕರು ತಮ್ಮ ವಿಶ್ಲೇಷಣೆಗಳಲ್ಲಿ ಬಿಂಬಿಸುತ್ತಿರುವ ಒಪ್ಪಂದದ ಪ್ರಬುದ್ದತೆಯನ್ನು ಯಾರೂ ಕಡೆಗಣಿಸಲು ಸಾಧ್ಯವಿಲ್ಲ. ಇದು ಕನ್ನಡ ಸಾಹಿತ್ಯ ಪರಂಪರೆಯ ಜೀವಂತಿಕೆಯ ಮುಂದುವರಿಕೆಯೇ ಆಗಿದೆ.

ನನ್ನ ಮಾತಿನಲ್ಲಿ ನಾನು ಅನಿವಾರ‍್ಯವಾಗಿ ತರಲೇಬೇಕಾಗಿದ್ದ ಇನ್ನೊಂದು ತರಲೆ ಅಂಶವೆಂದರೆ: ತಮ್ಮ ವಿಶಿಷ್ಟ ಬರವಣಿಗೆಯಿಂದ ಬಂಡಾಯ ಸಾಹಿತ್ಯಕ್ಕೆ ಸಾಕಷ್ಟು ಕಾಣಿಕೆ ನೀಡುತ್ತಿರುವ ಹಿರಿಯ ಸಾಹಿತಿಗಳೊಬ್ಬರು (ಅವರು ಜನಪ್ರಿಯ ವಾರಪತ್ರಿಕೆಯೊಂದರ ಸಂಪಾದಕರೂ ಹೌದು.) ವಿನಾಕಾರಣ ಬಂಡಾಯ ಸಂಘಟನೆಯ ಬಗ್ಗೆ, ಇದರಲ್ಲಿ ಪಾಲುಗೊಂಡ ಬರಹಗಾರರ ಬಗ್ಗೆ ವಿಷ ಕಕ್ಕುತ್ತಿರುವದು. ಅಡಿಗರು ತೆರೆಸಿದ ಒಂದು ಕಣ್ಣನ್ನು ಖಾಯಂ ಆಗಿ ತೆರೆದಿಟ್ಟುಕೊಂಡು, ಇನ್ನೊಂದು ಸ್ವಂತ ಕಣ್ಣನ್ನು ಖಾಯಂ ಆಗಿ ಕಳಕೊಂಡು ಅರವತ್ತರ ನಂತರದ ಅರಳುಮರಳಿನಲ್ಲಿ ಹೊರಳಾಡುತ್ತಿರುವ ಈ ವ್ಯಕ್ತಿ, ವ್ಯಕ್ತಿಯಾಗಿ ಎಷ್ಟೇ ಚಿಲ್ಲರೆ ಮನುಷ್ಯನಾಗಿದ್ದರೂ, ಅವರ ಬರವಣಿಗೆ ನಮಗೆ ಮುಖ್ಯ ಎಂದು ಒತ್ತಿ ಹೇಳಿದ ನಾನು, “ಅವರ ದೇಹ, ಮೆದುಳು, ಆತ್ಮ, ಹೃದಯ ಇತ್ಯಾದಿಗಳು ಆದಷ್ಟು ಬೇಗ ಗುಣಮುಖವಾಗಲಿ ಎಂದು ನಾವೆಲ್ಲ ಹಾರೈಸೋಣ” ಅಂದಾಗ ಸಭಿಕರೆಲ್ಲ ಮುಸಿ ಮುಸಿ ನಗುತ್ತಲೇ ನನ್ನ ಪ್ರಾರ್ಥನೆಯಲ್ಲಿ ಪಾಲುಗೊಂಡದ್ದು ನೋಡಿ ನನಗೆ ಖುಶಿಯೋ ಖುಶಿ.

*

ಸುರುವಾತಿನಿಂದಲೂ ನಮ್ಮ ಸಂಘಟನೆಗೆ ದೊಡ್ಡ ಚಾಲಕ ಶಕ್ತಿಯಾದವರು ಬರಗೂರು. ಅವರು ಮೂರು ವರ್ಷ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ಅದು ಬಂಡಾಯ ಸಾಹಿತ್ಯ ಅಕಾಡೆಮಿಯೇ ಆಗಿ, ವಿರೋಧಿಗಳೆಲ್ಲ ಕಣ್ಣು ಕಿಸರು ಮಾಡಿದ್ದು ನಮಗೆಲ್ಲ ಗೊತ್ತು. ಅವರಿಗೆಲ್ಲ ಧಾಳಿಯ ಒಂದು ಕೇಂದ್ರ ಬಿಂದುವಾಗಿದ್ದ ಬರಗೂರು ವ್ಯಾಪಕವಾಗಿ, ನಾಡಿನುದ್ದಕ್ಕೂ ಎಲ್ಲ ಸಾಮಾಜಿಕ ವರ್ಗಗಳ ಪ್ರತಿಭೆಗಳನ್ನು ಒಳಗು ಮಾಡಿಕೊಂಡು ಪ್ರಕಟನೆಗಳ ಮತ್ತು ವಿಚಾರ ಸಂಕಿರಣಗಳ ಮೂಲಕ ಮಾಡಿದ ಅನನ್ಯವಾದದ್ದು.

ಬಂಡಾಯದ ಗಾಂಧೀ ಎಂದೇ ಗುರುತಿಸಲ್ಪಡುವ ಬರಗೂರು ಸ್ವಲ್ಪ ಮೆತ್ತಗಿನ ಮನುಷ್ಯ. ಹೀಗಾಗಿ ಲಂಕೇಶ ಪತ್ರಿಕೆಯ ಮಾಫಿಯಾ ಗ್ಯಾಂಗು ಅನೇಕ ನಿಟ್ಟಿನಲ್ಲಿ ಅವರ ಚಾರಿತ್ಯ ವಧೆಗೆ ಪ್ರಯತ್ನಿಸಿತು. ಆದರೆ ಬಂಡಾಯದ ಸಂಗಾತಿಗಳೆಲ್ಲ ಬಂಡಿಯಂತೆ ಒಂದಾಗಿ ನಿಂತು ಪ್ರತಿಭಟಿಸಿದಾಗ ಆ ಶಕ್ತಿಗಳೆಲ್ಲ ಎಲ್ಲಿಯೋ ಬಾಲ ಸಿಗಿಸಿಕೊಂಡು ಓಡಿದ್ದೂ ಉಂಟು.

ತುಮಕೂರು ಸಮ್ಮೇಳನವನ್ನು ಬರಗೂರು ‘ಪುನಶ್ಚೇತನ’ದ ಸಮ್ಮೇಳನವೆಂದು ಕರೆದು, ಸಂಘಟನೆಯ ಬಗ್ಗೆ ಅಭಿಮಾನ ಮತ್ತು ಆತ್ಮ ವಿಮರ್ಶೆ ಹೊಂದುತ್ತಲೇ ಇಂದು ದೇಶವನ್ನು ಒಡೆಯತ್ತಿರುವ ಕೋಮುವಾದದಂಥ ಹುಸಿ ಸಂಸ್ಕೃತಿಯ ಹಲ್ಲೆ ಮತ್ತು ಹುಸಿ ಬೌದ್ದಿಕಶಾಹಿಯ ಸಾಂಸ್ಕೃತಿಕ ಹಲ್ಲೆಗಳ ಸವಾಲನ್ನು ಸ್ವೀಕರಿಸುತ್ತ ಸಮರಕ್ಕೆ ಸಿದ್ಧರಾಗಲು ಕರೆ ಇತ್ತರು. ಇಡೀ ರಾಷ್ಟ್ರದಲ್ಲಿಯೇ ಇಂದು ಕರ್ನಾಟಕದ ಬಂಡಾಯ ಸಾಹಿತ್ಯ ಸಂಘಟನೆ ವಿಶಾಲ ವ್ಯಾಪ್ತಿಯ ಏಕೈಕ ಜಾತ್ಯಾತೀತ ಹಾಗೂ ಸಾಂಸ್ಕ್ರತಿಕ ಸಂಘಟನೆಯಾಗಿರುವದನ್ನು ಗುರುತಿಸುತ್ತ, ಪ್ರಗತಿಪರ ಹೋರಾಟಗಳೆಲ್ಲ ನಿರೀಕ್ಷಿತ ಯಶಸ್ಸು ಪಡೆಯದಿರಲು ಪ್ರತಿಗಾಮಿ ಶಕ್ತಿಗಳ ಒಕ್ಕಟ್ಟು ಮತ್ತು ಪ್ರಗತಿ ಪರ ಶಕ್ತಿಗಳ ಬಿಕ್ಕಟ್ಟೇ ಕಾರಣ ಎಂದು ವಿವರಿಸಿದ ಬರಗೂರು, “ಅವರ ಕ್ರಿಯೆಗೆ ಪ್ರತಿಕ್ರಿಯೆ ತೋರುವುದಷ್ಟೇ ನಮ್ಮ ಕೆಲಸವಾಗಿದೆ; ಆದರೆ ಇದು ಬದಲಾಗಿ ನಮ್ಮದು ನಿರಂತರ ಕ್ರಿಯೆಯ ಪ್ರಕ್ರಿಯೆಯಾಗಿ ಒಂದು ಕ್ರಿಯಾ ಪರಂಪರೆ ಸೃಷ್ಟಿಯಾಗಬೇಕು ” ಎಂದು ಹೇಳಿದ್ದರ ಹಿಂದೆ ಸ್ಪಷ್ಟ ಸೈದ್ಧಾಂತಿಕ ಅರಿವು ಇದ್ದುದು ಸ್ಪಷ್ಟವಾಗಿತ್ತು.

‘ಶ್ರೇಷ್ಠ ಸಾಹಿತ್ಯ’ದ ‘ಶ್ರೇಷ್ಠಿ’ ಗಳ (ಇದು ಶಿವಪ್ರಕಾಶಕ ಶಬ್ದ) ಬಗ್ಗೆ ಬರಗೂರು; “ಶ್ರೇಷ್ಠತೆಯ ಪರಿಕಲ್ಪನೆಗೆ ನಮ್ಮ ವಿರೋಧವಿಲ್ಲ; ಆದರೆ ಶ್ರೇಷ್ಠತೆಯ ಬಗ್ಗೆ ನಮಗೆ ವ್ಯಸನ, ಅಬ್ಸೆಶನ್, ಇಲ್ಲ. ಒಂದು ಏಕೈಕ ಅಸಾಧಾರಣ ಕೃತಿಗಿಂತ ಅಸಾಧಾರಣ ಪರಿಣಾಮ ಉಂಟು ಮಾಡುವ ಹತ್ತು ಕೃತಿಗಳ ನಮಗೆ ಮಹತ್ವದ್ದು. ”

ತುಮಕೂರು ಸಮ್ಮೇಳನದ ಪ್ರಾರಂಭದಲ್ಲಿ ಕೆಲವರಿಗಾದರೂ ಹೊಸದಾಗಿ ಮತ್ತು ಸ್ವಲ್ಪ ವಿಚಿತ್ರವಾಗಿ ಕಂಡದ್ದು ಕೆಲವು ಹಿರಿಯರಿಂದ ‘ಶುಭ ಹಾರೈಕೆ’ ಕಾರ್ಯಕ್ರಮ ಅವರೆಲ್ಲ ತುಮಕೂರು ಜಿಲ್ಲೆಯವರೇ ಆಗಿದ್ದರಿಂದ ಅವರನ್ನು ತೊಡಗಿಸಿಕೊಳ್ಳಲು ಇದೊಂದು ತಂತ್ರ ಎಂದು ಆಮೇಲೆ ತಿಳಿಯಿತು. ಡಾ. ಕಮಲಾ ಹಂಪನಾ ಅವರು ಚಾತುರ್ವಣ್ಯವನ್ನು ಪ್ರತಿಪಾದಿಸಿದ ಮನುವಿನಿಂದ ಮೊದಲುಗೊಂಡು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ರಂಗನಾಥ ವಿಶ್ರಾರವರೆಗೂ ಈ ದೇಶದ ಪುರುಷ ವರ್ಗ ಮಹಿಳೆಯರನ್ನು ಶೋಷಿಸಿದ ಪರಿಯನ್ನು ಬಿಚ್ಚಿಡುತ್ತ ‘ಮಹಿಳೆಯಿಂದಲೇ ಮೊದಲು ಬಂಡಾಯ ಪ್ರಾರಂಭವಾಗಬೇಕು’ ಎಂದರು, ತಮ್ಮನ್ನು ‘ಪದನಿಮಿತ್ತ’ ಸಾಹಿತಿ ಎಂದು ವಿನೋದವಾಗಿ ಬಣ್ಣಿಸಿಕೊಂಡ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಸಾ.ಶಿ. ಮರುಳಯ್ಯ, ‘ನಿಂತ ನೀರು ಕೊಳಚೆಯಾದರೆ ಹರಿವ ನೀರು ತೀರ್ಥವಾಗುತ್ತದೆ’ ಎನ್ನುತ್ತ ಸಾಮಾಜಿಕ ಹೊಣೆಗಾರಿಕೆ ಇಲ್ಲದ ಸಾಹಿತ್ಯ ಸಾಹಿತ್ಯವೇ ಅಲ್ಲ ಎಂದು ಪ್ರತಿಪಾದಿಸಿ. ಬಂಡಾಯ ಸಾಹಿತ್ಯ ಚಳುವಳಿ ಸಮುದಾಯದ ಸದುದ್ದೇಶಕ್ಕಾಗಿ ನಡೆಯುತ್ತಿರುವ ಸಾತ್ವಿಕ ಚಳುವಳಿಯಾಗಿರುವುದರಿಂದ ಅದು ನಿರಂತರವಾಗಿರಲಿ ಎಂದು ಹಾರೈಸಿದರು. ಶೋಷಣೆ ಇರುವವರೆಗೂ ಬಂಡಾಯ ಸಂಘಟನೆಯ ಅಸ್ತಿತ್ವ ಅನಿವಾರ್ಯವೆಂದು ಹೇಳಿದ ಹಿರಿಯ ಕವಿ ವೀಚಿಯವರು, ಅಡಿಗರಂಥ ಅಡಿಗರೂ ಕೂಡ ಬಂಡಾಯದ ಹೊಡೆತಕ್ಕೆ ಸಿಕ್ಕು ‘ಬಂಡಾಯ’ ಎಂಬ ಶೀರ್ಷಿಕೆಯ ಕವನ ಬರೆಯಬೇಕಾದ ಪ್ರಸಂಗವನ್ನು ಸಭಿಕರಿಗೆ ನೆನಪಿಸುತ್ತ ಬಂಡಾಯ ಚಳುವಳಿಯಿಂದಾಗಿ ಮೇಲ್ವರ್ಗದ ಸಾಹಿತಿಗಳೂ ತಮ್ಮ ಮನೋಭಾವ ಬದಲಾಯಿಸಿಕೊಳ್ಳುವಂತಾಗಿದೆ ಎಂದರು. ತುಮಕೂರಿನ ಮತ್ತೊಬ್ಬ ಹಿರಿಯ ಸಾಹಿತಿ ಪ್ರೊ. ಎಚ್. ಜಿ. ಸಣ್ಣಗುಡ್ಡಯ್ಯನವರು ‘ಬಂಡಾಯದವರಿಗೂ ಶುಭ ಹಾರೈಕೆ ಅಗತ್ಯವೆ?’ ಎಂದು ಕೇಳುತ್ತ, ‘ಬಂಡಾಯದ ಮನೋಧರ್ಮವಿಲ್ಲದ ಸಾಹಿತಿಯಾಗಲಾರ’ ಎಂಬ ಸ್ವಲ್ಪ ಸಂಶಯಾಸ್ಪದವಾದ, ಸರಳೀಕರಣವನ್ನು ಮುಂದಿಟ್ಟರು.

ಮತ್ತೊಬ್ಬ ಹಾರೈಕೆಗಾರ ಪ್ರೊ. ಕೆ.ಜಿ. ನಾಗರಾಜಪ್ಪನವರು ಸುರಕ್ಷಿತ ವಲಯದಲ್ಲಿ ನಿಂತು ಬಂಡಾಯದ ಬಾವುಟ ಹಾರಿಸುವ ಹುಸಿ ಬಂಡಾಯಗಾರರನ್ನು ಝಾಡಿಸುತ್ತ ವಿಮರ್ಶಕರು ಯಾವಾಗಲೂ ಭೂತದ ಮೌಲ್ಯಗಳಿಗೆ ಬದ್ಧರಾದರೆ ಸೃಜನಶೀಲ ಬರಹಗಾರರು ಮಾತ್ರ ವರ್ತಮಾನದ ಮೌಲ್ಯಗಳಲ್ಲಿ ಬದುಕುವುದರಿಂದ, ನಮ್ಮ ವಿಮರ್ಶಾ ಪರಂಪರೆಯ ಮೂಲ ತತ್ವಗಳನ್ನು ತಿರಸ್ಕರಿಸದ ಹೊರತು ಹೊಸ ಸಾಹಿತ್ಯ ಸೃಷ್ಟಿಯ ಮೌಲ್ಯ ಮಾಪನ ಸಾಧ್ಯವಿಲ್ಲ ಎಂಬ ಮೌಲಿಕ ವಿಷಯವನ್ನು ಪ್ರತಿಪಾದಿಸಿದರು.

ಒಂದೂವರೆ ದಶಕದ ಬಂಡಾಯ ಚಳುವಳಿಯ ಸ್ಥಿತ್ಯಂತರಗಳ ಹಿನ್ನೆಲೆಯಲ್ಲಿ ನಾಗರಾಜಪ್ಪ, “ಬಂಡಾಯ ಸಂಘಟನೆಯಿಂದ ಬ್ರಾಹ್ಮಣರನ್ನು ಮೊದಲೇ ಹೊರಗಿಡಲಾಯಿತು; ಇತ್ತೀಚಿಗೆ ದಲಿತರೂ ಇದರಿಂದ ಕಳಚಿಕೊಳ್ಳುತ್ತಿದ್ದಾರೆ” ಎಂದು ರಿಮಾರ್ಕು ಪಾಸು ಮಾಡಿದಾಗ, ಬರಗೂರು ಸೂಚನೆಯಂತೆ ನಾನು ಮತ್ತೆ ಮೈಕಿಗೆ ಬಂದು ಕೆಲವು ವಿಷಯ ಸ್ಪಷ್ಟಪಡಿಸಬೇಕಾಯಿತು. ನಾಗರಾಜಪ್ಪನವರ ಎರಡೂ ಮಾತು ಅರ್ಧ ಸತ್ಯಗಳು; ಅಂದರೆ ಅರ್ಧ ಸುಳ್ಳುಗಳು, ವೈದಿಕ ವಿರೋದಿ ಹಿನ್ನೆಲೆಯಲ್ಲಿಯೇ ಭಾರತದ ಇತಿಹಾಸದ ಉದ್ದಕ್ಕೂ ನೆಡೆದ ಬಂಡಾಯಗಳ ಪರಂಪರೆಯೇ ನಮ್ಮ ಎದುರುಗಿರುವಾಗ ನಮ್ಮ ಬಂಡಾಯ ಚಳುವಳಿಯಲ್ಲೂ ‘ಜಾತಿವಾದಿ’ ಬ್ರಾಹ್ಮಣರಾಗಲಿ, ಲಿಂಗಾಯತರಾಗಲಿ, ಒಕ್ಕಲಿಗರಾಗಲಿ, ದಲಿತರಾಗಲಿ ಇರಲು ಸಾಧ್ಯವಿಲ್ಲ. ತಮ್ಮ ತಮ್ಮ ಜಾತಿಗಳನ್ನು ಧಿಕ್ಕರಿಸುವವರಿಗೆ ಮಾತ್ರ ಇಲ್ಲಿ ಸ್ಥಾನವಿದೆ. ಅಂಥ ಅನೇಕ ಬ್ರಾಹ್ಮಣ ಮೂಲದ ವ್ಯಕ್ತಿಗಳು ನಮ್ಮ ಸಂಘಟನೆಯಲ್ಲಿದ್ದಾರೆ. ಇನ್ನು ‘ದಲಿತ’ ‘ಬಂಡಾಯ’ ದ ಪ್ರಶ್ನೆ. ‘ಬಂಡಾಯ’ ಎನ್ನುವುದು ಒಂದು ಮನೋಧರ್ಮ; ‘ದಲಿತ’ ಎನ್ನುವುದು ಜಾತಿ ಹೆಸರಿನಲ್ಲಿ ತಳಿತಕ್ಕೊಳಗಾದ ಒಂದು ಸಾಮಾಜಿಕ ವರ್ಗ, ಮಧ್ಯಮ ಹಾಗೂ ಉಚ್ಚ ವರ್ಗದವರಿಗೆ – ಅಂದರೆ ಯಾರಿಗೆ ಜಾತಿ ಅಸಮಾನತೆಯ ಕಟ್ಟು ಅನುಭವ ಇರುವದಿಲ್ಲವೋ ಅವರಿಗೆ ‘ಬಂಡಾಯ’ ಎಂಬುದು ‘ಆಯ್ಕೆ’ ಯ ಪ್ರಶ್ನೆಯಾದರೆ, ದಲಿತರಿಗೆ ಮಾತ್ರ ಬಂಡಾಯ ಅನಿವಾರ್ಯವಾಗಿದೆ. ದಲಿತ ಸಾಹಿತ್ಯವೆಲ್ಲ ಬಂಡಾಯ ಸಾಹಿತ್ಯವೇ ಆದರೆ ಬಂಡಾಯ ಸಾಹಿತ್ಯವೆಲ್ಲ ದಲಿತ ಸಾಹಿತ್ಯವಾಗಬೇಕಾಗಿಲ್ಲ ……..

ಅನೇಕ ವೇದಿಕೆಗಳಿಂದ ಮತ್ತೆ ಮತ್ತೆ ನಾವು ಹೇಳುತ್ತಲೇ ಬಂದಿರುವ ಮಾತುಗಳಿವು ನಾಗರಾಜಪ್ಪನವರಿಗೆ ಮನವರಿಕೆಯಾದಂತಿತ್ತು. ಅಲ್ಲ, ಸಂಘಟನೆಯಿಂದ ದೂರ ಉಳಿದ ಕೆಲ ದಲಿತ ಸಾಹಿತಿಗಳು ಒಳಗೆ ಬರಬೇಕೆನ್ನುತ್ತಾರೆ, ಬರಬಹುದೆ? ಇಷ್ಟೇ ಅವರ ಪ್ರಶ್ನೆಯಾಗಿತ್ತಂತೆ . (ಅವರೇ ಆನಂತರ ಹೇಳಿದ್ದು) ಇದಕ್ಕೆ ನಾವು ಮತ್ತೆ ಮತ್ತೆ ಹೇಳಿದ ಮಾತೇ ಹೇಳಬೇಕು. ಬಂಡಾಯಕ್ಕೆ ನೀವು ಬರ್ರಿ, ನೀವು ಬರ್ರೀ ಅಂತ ಮನೆಮನೆಗೆ ಹೋಗಿ ಕುಂಕುಮ ಇಟ್ಟು ಕರೆಯಲಿಕ್ಕೆ ಇದೇನು ಮಂಗಳಗೌರಿ ಅಥವಾ ಸತ್ಯನಾರಾಯಣ ಪೂಜೆಯಲ್ಲ. ಶೋಷಕ ವ್ಯವಸ್ಥೆಯ ಅನಿವಾರ್ಯ ಒತ್ತಡದ ವಿರುದ್ದ ನಿಂತವರು ತಾವಾಗಿಯೇ ಬರುತ್ತಾರೆ; ಈ ವ್ಯವಸ್ಥೆಯಲ್ಲಿಯೇ ತಮ್ಮ ‘ವ್ಯವಸ್ಥೆ’ ಬರೋಬರಿ ಮಾಡಿಕೊಂಡವರು ದೂರವೇ ಇರುತ್ತಾರೆ ಅಷ್ಟೇ.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದವರು ಖ್ಯಾತ ಮನಶ್ಯಾಸ್ತ್ರಜ್ಞ ಡಾ.ಬಿ. ಕೃಷ್ಣಮೂರ್ತಿ ಅವರು ಸೋವಿಯತ್ ರಶಿಯಾದ ಘಟನೆಯ ನಂತರ ಸಾಮ್ರಾಜ್ಯಶಾಹಿ ಶಕ್ತಿಗಳು ಸುಲಿಗೆಯನ್ನೇ ಗುರಿ ಮಾಡಿಕೊಂಡು ಖಾಸಗೀಕರಣದ ತಯಾರಿಗಾಗಿ ಜಾಗತೀಕರಣದ ಪ್ರಕ್ರಿಯೆಯನ್ನು ಗ್ಯಾಟ್, ಡಂಕಲ್ ಮುಂತಾದವುಗಳ ಮೂಲಕ ಪ್ರಾರಂಭಿಸಿದ ಜಾಗತಿಕ ವಿದ್ಯಮಾನಗಳ ಚೌಕಟ್ಟಿನಲ್ಲಿ, ಮನೋವೈಜ್ಞಾನಿಕ ನೆಲೆಯಲ್ಲಿ, “ಇದು ಕ್ರಾಂತಿಯ ಸಂದರ್ಭ” ಎಂದು ಹೇಳುತ್ತಾ, ಇಂದಿನ ಅದಮ್ಯ – ಅಸಹ್ಯ – ಅಸಹಾಯಕ ನಿರ್ವೀರ್ಯತೆಯ ಭಾವನೆಗಳ ಮಧ್ಯದಲ್ಲಿಯೇ ಸಂಘರ್ಷದ ಮೂಲಕ ಹೊಸ ಮನುಷ್ಶನ ಸೃಷ್ಟಿಯ ಸಾಧ್ಯತೆ ಇದೆ ಎಂದು ಹೇಳಿದರು; ಶ್ರೇಷ್ಠ ಕೃತಿ ಎನ್ನುವದು ಹೊಸ ಮೌಲ್ಯಗಳನ್ನು ರೂಪಿಸಿದಾಗ ಮಾತ್ರ ಬರಲು ಸಾಧ್ಯ ಎಂದು ಕೃಷ್ಣಮೂರ್ತಿ ಹೊಸ ಸವಾಲುಗಳನ್ನು ಸ್ವೀಕರಿಸದೆ ಹೋರಾಟಕ್ಕೆ ಬದ್ಧರಾಗಲು ಸಂಗಾತಿಗಳಿಗೆ ಕರೆಕೊಟ್ಟರು.

ತುಮಕೂರು ಸಮ್ಮೇಳನಕ್ಕೆ ಹೊಸ ರೂಪ ಸಿಕ್ಕಿದ್ದು ಬೆಂಗಳೂರಿನ ಕ್ರಿಯಾ ಚೇತನ ಸಾಂಸ್ಕೃತಿಕ ಸಂಘದವರು ಏರ್ಪಡಿಸಿದ್ದ ‘ತುಳಿತಕ್ಕೊಳಗಾದವರು ಮತ್ತು ನಾವು’ ಎಂಬ ಥೀಮಿನ ಚಿತ್ರಕಲಾ ಕೃತಿಗಳ ಪ್ರದರ್ಶನ ಮತ್ತು ಕಲಾವಿದ ಬಿ. ಡಿ. ಜಗದೀಶ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ. ಇವುಗಳನ್ನು ಉದ್ಘಾಟಿಸಿದ, ಕರ್ನಾಟಕ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಸಿ. ಚಂದ್ರಶೇಖರ ಅವರು, ಕಲೆ ಕೂಡ ವಾಣಿಜ್ಯೀಕರಣಗೊಳ್ಳುತ್ತಿರುವ ಇಂದಿನ ಕರಾಳ ಸನ್ನಿವೇಶದಲ್ಲಿ ಕಲಾಕೃತಿಗಳು ಕೂಡ ಉಳ್ಳವರ ಮನೆಯ ಗೋಡೆಗಳನ್ನು ಅಲಂಕರಿಸುವ ಪ್ರತಿಷ್ಠೆಯ ಪ್ರತೀಕಗಳಾಗುತ್ತಿರುವಾಗ, ಸಮಕಾಲೀನ ಸಂವೇದನೆಯ ಕಲಾವಿದ ತನ್ನ ಸಾಮಾಜಿಕ ಚಿಂತನೆ ಮತ್ತು ಬದ್ಧತೆಗಳ ಬಗ್ಗೆ ಮರು ಚಿಂತನೆ ನಡೆಸಬೇಕಾಗಿದೆ ಅಂದರು.

ಎ.ಕೆ. ಹಂಪಣ್ಣ ನಿರ್ವಹಿಸಿದ ಮೊದಲ ಹಂತದ ಈ ಕಾರ್ಯಕ್ರಮ ಬಿಡುಗಡೆ ಮಾಡಿದ ವೈಚಾರಿಕ ಅಲೆಗಳು ಮುಂದಿನ ಎಲ್ಲ ವಿಚಾರಗೋಷ್ಠಿಗಳಲ್ಲೂ ಮರುಕಳಿಸಿ ಬಂಡಾಯದ ಸಂಗಾತಿಗಳಲ್ಲಿ ಪುನಶ್ಚೇತನದ ಪ್ರಕ್ರಿಯೆಗೆ ಬುನಾದಿ ಹಾಕಿದವು.

*

“ಹಿಂದೆ ಬುಲೆಟ್‌ಗಳನ್ನು ಕೊಡುತ್ತಿದ್ದವರು ಈಗ ಸಾಲಗಳನ್ನು ಕೊಡುತ್ತಿದ್ದಾರೆ. ಉತ್ಪಾದನೆ ಮಾಡಲಿಕ್ಕೂ ಸಾಲ, ಉತ್ಪಾದಿಸಿದ್ದನ್ನು ಖರೀದಿಸಲಿಕ್ಕೂ ಸಾಲ. ನಾವೆಲ್ಲ ಸಾಲಗಾರರೇ ನಮಗೆ ಸದಾಕಾಲ ಸಾಲ ತೀರಿಸುವುದೇ ಚಿಂತೆ.”

ಮೂರನೇ ಜಗತ್ತಿನ ಮತ್ತು ಲ್ಯಾಟಿನ್ ಅಮೇರಿಕದ ಅನೇಕ ರಾಷ್ಟ್ರಗಳು ಐಎಂಎಫ್, ವರ್ಲ್ಡ ಬ್ಯಾಂಕುಗಳ ಕರಾರುಗಳಿಗೆ ಒಪ್ಪಿ ಸಾಲ ಪಡೆದು ದಿವಾಳಿಯಾಗಿದ್ದರ ಈ ಚಿತ್ರವನ್ನು ಬಿಡಿಸುತ್ತ ಗಂಭೀರ ಚರ್ಚೆಗೆ ಹಾದಿ ಮೂಡಿದವರು ‘ಸಾಹಿತ್ಯ, ಸಂಸ್ಕೃತಿ ಮತ್ತು ಸಮಕಾಲೀನ ಸಾಮಾಜಿಕ ಆರ್ಥಿಕ ಸಂಬಂಧ’ ಕುರಿತ ಮೊದಲ ಗೋಷ್ಠಿಯ ಆಶಯ ಭಾಷಣ ಮಾಡಿದ ಖ್ಯಾತ ಕಥೆಗಾರ ಫಕೀರ ಮಹಮ್ಮದ ಕಟ್ಟಾಡಿಯವರು, ಜಾಗತೀಕರಣ ಪ್ರಕ್ರಿಯೆ ಮತ್ತು ನರಸಿಂಹರಾಯರ ಸರಕಾರ ಪ್ರಚುರ ಪಡಿಸಿರುವ ಹೊಸ ಆರ್ಥಿಕ ನೀತಿಗಳು ಈ ನೆಲದ ಸಮಸ್ಯೆಗಳಾದ ಬಡತನ, ನಿರುದ್ಯೋಗ ಮತ್ತು ಆಹಾರ ಸಮಸ್ಯೆಗಳಿಗೆ ಕುರುಡಾಗಿ, ಕೊರಳು ಕೊಯ್ಯುವ ಪೈಪೋಟಿಯ ಅಮಾನವೀಯ ಪರಿಸ್ಥಿತಿಗೆ ದೇಶವನ್ನು ತಳ್ಳಿ ಗ್ರಾಹಕ ಸಂಸ್ಕೃತಿ (ಕಂಜೂಮರಿಜಂ) ಮೂಲಕ ಮುಖ್ಯವಾಗಿ ಯುವ ಜನಾಂಗದ ನೈತಿಕ ಮೌಲ್ಯಗಳ ಕುಸಿತಕ್ಕೆ ಕಾರಣವಾಗುತ್ತಿವೆ ಎಂದು ಹೇಳಿದ ಕಟ್ಟಾಡಿ ಅಧಿಕೃತ ಅಂಕಿ ಸಂಖ್ಯೆಗಳ ಮೂಲಕವೇ ಬರಲಿರುವ ಕರಾಳ ದಿನಗಳನ್ನು ಚಿತ್ರಿಸಿದರು. ಹೇಗಾದರೂ ಮಾಡಿ ಹಣ ಗಳಿಸುವುದೇ ಹವ್ಯಾಸವಾಗಿರುವಾಗ ಈ ಆಮಿಷದಿಂದ ಸಾಹಿತಿ ಕೂಡ ದೂರವಿರಲು ಸಾಧ್ಯವಿಲ್ಲ; ನಮ್ಮ ದೇಶದ ಜಾನಪದ ಅಧ್ಯಯನಕಾರರು ವಿದೇಶೀ ಹಣಕ್ಕೆ ತಮ್ಮನ್ನು ಮಾರಿಕೊಳ್ಳುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ಕಟ್ಟಾಡಿ ಹೇಳಿದರು.

ಬಂಡವಾಳಶಾಹಿ ರಾಷ್ಟ್ರಗಳು ಮೂರನೆಯ ಜಗತ್ತಿಗೆ ‘ಏಡ್’ ಮತ್ತು ‘ಏಡ್ಸ್’ ಎರಡನ್ನೂ ರವಾನಿಸುತ್ತಿವೆ ಎಂದವರು ಲಿಂಗದೇವರು ಹಳೆಮನೆ. ಬಂಡವಾಳದ ಜೊತೆಗೆ ಫ್ಯಾಸಿಜಮ್ಮನ್ನೂ, ನಾರ್ಕೋಟಿಕಗಳನ್ನೂ, ಭಯೋತ್ಪಾದಕತೆಯನ್ನೂ ಕಳಿಸುತ್ತಿರುವ ಒಳಸಂಚಿನ ಗುರಿ ಎಂದರೆ, ತನ್ನ ಬಹುಮುಖೀ ಸಂಸ್ಕೃತಿಯ ಸಡುವೆಯೂ ಪ್ರಜಾಸತ್ತೆಯನ್ನು ಉಳಿಸಿಕೊಂಡು ಬಂದಿರುವ ಇಂಡಿಯಾ ದೇಶವನ್ನು ಹೇಗಾದರೂ ಮತ್ತೆ ಗುಲಾಮಗಿರಿಗೆ ತಳ್ಳುವುದು ಮಾತ್ರ ಇಂಥ ಸಂಕೀರ್ಣವಾದ ಹೊಸ ಜಾಗತಿಕ ಕ್ರಮದ ನಿರೀಕ್ಷೆಯನ್ನಿಟ್ಟುಕೊಂಡೇ ಇಂದಿನ ಬರಹಗಾರ ಭಾಷೆ ಮತ್ತು ಅಭಿವ್ಯಕ್ತಿಯ ಸಮಸ್ಯೆಗಳನ್ನು ಎದುರಿಸುತ್ತ ಬರೆಯಬೇಕಾಗಿದೆ ಎಂದು ಹಳೆಮನೆ ಆರ್ಥಿಕತೆ, ಸಾಹಿತ್ಯ, ಸಂಸ್ಕೃತಿಗಳ ಒಳಸಂಬಂಧಗಳನ್ನು ಬಿಡಿಸಿ ಬಿಡಿಸಿ ಇಟ್ಟರು. ಬಹುರಾಷ್ಟ್ರೀಯ ಕಂಪನಿಗಳು ನುಗ್ಗಿರುವ ಲ್ಯಾಟಿನ್ ಅಮೇರಿಕ ಮತ್ತು ಆಫ್ರಿಕದ ದೇಶಗಳ ಮೌಖಿಕ ಪರಂಪರೆಯೇ ನಾಶವಾಗಿದ್ದು ಅಲ್ಲಿಯ ಸಾಹಿತಿಗಳು ಹೊಸ ವ್ಯವಸ್ಥೆಗೆ ಒಗ್ಗಿ ಹೋಗಿರುವುದು ಇಂಡಿಯಾಕ್ಕೆ ಒಂದು ಬಗೆಯ ಅಪಾಯದ ಘಂಟೆಯಾಗಿದೆ – ಎಂಬ ಹಳೆಮನೆ ಮಾತಿಗೆ ದೃಷ್ಟಾಂತವೆಂಬಂತೆ ಡಾ.ಆರ್.ವ್ಹೀ. ಭಂಡಾರಿಯವರು ಕನ್ನಡ ಕರಾವಳಿಯಲ್ಲಿ ಪ್ರಾಚೀನವಾದ ಯಕ್ಷಗಾನ ಕಲೆಯನ್ನು ಕಲಿಸುವ ತರಬೇತಿ ಕೇಂದ್ರಗಳು ಇಂದು ವಿದೇಶಿ ಹಣಕ್ಕೆ ಮಾರಾಟವಾಗಿರುವುದನ್ನು ಕತೆ ಮಾಡಿ ಹೇಳಿದರು. ಹಸಿರು ಕಂಡಲ್ಲಿ ತಿಂದು ಅಲ್ಲಿಯೇ ಸಗಣಿ ಹಾಕುವ ದನಗಳಂತೆ ಈ ಬಹುರಾಷ್ಟ್ರೀಯ ಕಂಪನಿಗಳು – ಎಂದು ಪ್ರತಿಮೆಗಳ ಭಾಷೆಯಲ್ಲಿಯೇ ಮಾತಾಡಿದ ವಿಮರ್ಶಕ ಡಾ. ರಹಮತ ತರೀಕೆರೆ, ಪ್ರವಾಸಿಗರ ಸ್ವರ್ಗವಾಗಿರುವ ಥಾಯಲಂಡ್ ದೇಶ ಇಂದು ಸೂಳೆಯರ ನಾಡಾಗಿರುವ ದುರಂತವನ್ನು ಧ್ವನಿಸುತ್ತ ಮಾಯಾಮೋಹಿನಿ – ಯಂಥ ಇಂದಿನ ಸಮೂಹ ಮಾಧ್ಯಮಗಳ ಕರೆಯನ್ನು ಧಿಕ್ಕರಿಸಬಲ್ಲ ವೈಚಾರಿಕತೆ ನಮಗೆ ಬೇಕಾಗಿದೆ ಅಂದರು ಹೊಸ ಆರ್ಥಿಕ ನೀತಿ ಕುಸುಮಬಾಲೆಯ ಚೆನ್ನನ ಹಾಗೆ ವೈಚಾರಿಕ ಎಚ್ಚರವುಳ್ಳ, ಆದರೆ ತನ್ನ ಬೇರುಗಳನ್ನೇ ಕಳದುಕೊಂಡ ಜನವರ್ಗದ ಸೃಷ್ಟಿಗೆ ಕಾರಣವಾಗುತ್ತದೆ ಎಂದರು ರಹಮತ.

‘ಬಕಾಲ’ ಖ್ಯಾತಿಯ ಕವಿ ಕೆ.ಬಿ. ಸಿದ್ದಯ್ಯ ಅತ್ಯಂತ ಸ್ಪಷ್ಟವಾದ ಶಬ್ದಗಳಲ್ಲಿಯೇ ಕೇಂದ್ರೀಕೃತ ವ್ಯವಸ್ಥೆಯನ್ನು ಪ್ರತಿಪಾದಿಸುವ ಅಂತರಾಷ್ಟ್ರೀಯ ಪುರೋಹಿತಶಾಹಿಗೂ ಅಂಥದೇ ವ್ಯವಸ್ಥೆಯನ್ನು ಹೊಂದಿರುವ ಭಾರತೀಯ ಪುರೋಹಿತಶಾಹಿಗೂ ಇರುವ ನಿಕಟ ಸಂಬಂಧವನ್ನು ಬಯಲು ಮಾಡುತ್ತ, ಈಗಾಗಲೇ ನಮ್ಮ ದೇಶದ ಒಂದು ಜನವರ್ಗವು ನವ ವಸಹಾತುಶಾಹಿಯನ್ನು ಒಪ್ಪಿಕೊಳ್ಳುವ ನವಬೌದ್ದಿಕಶಾಹಿಯನ್ನು ಸಿದ್ಧಗೊಳಿಸುತ್ತಿರುವ ಹುನ್ನಾರಗಳನ್ನು ಖಂಡಿಸಿದರು. ಜನಪರ ಚಳುವಳಿಗೆ ಮಾರಕವಾಗಿರುವ ಹೊಸ ಆರ್ಥಿಕ ನೀತಿ ಕುಟುಂಬ ಪರಿಕಲ್ಪನೆಗೆ ಆಘಾತ ನೀಡುವ ಜೊತೆಗೆ ಮಾತೃ ಸಂಸ್ಕೃತಿಯನ್ನೂ ನಾಶ ಮಾಡಲಿದೆ ಎಂದು ಎಚ್ಚರಿಸಿದ ಸಿದ್ದಯ್ಯ, ಈ ನಾಡು ಕಂಡ ದಲಿತ, ರೈತ, ಭಾಷಾ ಚಳುವಳಿಗಳು ಹೊಸ ಆಲೋಚನಾ ಕ್ರಮವನ್ನು ರೂಪಿಸಿಕೊಂಡು ಮತ್ತೆ ಸಂಘರ್ಷಕ್ಕಿಳಿದು ಪರ‍್ಯಾಯ ಸಂಸ್ಕೃತಿಯನ್ನು ಕಟ್ಟಬೇಕಾಗಿದೆ ಎಂದು ಬಲವಾಗಿ ಪ್ರತಿಪಾದಿಸಿದರು.

‘ಇಂದು ಆಗುತ್ತಿರುವುದು ಒಂದು ಸಂಸ್ಕೃತಿಯ ಮೇಲೆ ಇನ್ನೊಂದರ ಪ್ರಭಾವ ಅಲ್ಲ, ಆಕ್ರಮಣ’ – ಎಂದು ವಾದ ಪ್ರಾರಂಭಿಸಿದ ಬಂಜಗೆರೆ ಜಯಪ್ರಕಾಶ, ದೂರದರ್ಶನವನ್ನು ವಶೀಕರಣ ಮಾಡಿಕೊಂಡ ವಿದೇಶೀ ಕಂಪನಿಗಳು ನಮ್ಮ ಸಾರ್ವಜನಿಕ ಉದ್ಯಮಗಳನ್ನು ಆಕ್ರಮಿಸುವ ಪ್ರಯತ್ನ ಮಾಡುತ್ತ, ನಮ್ಮನ್ನು ಗ್ರಾಹಕರನ್ನಾಗಿ ಮಾಡಲು ಮೊದಲು ನಮ್ಮ ಬೇರು ಕತ್ತರಿಸುವ, ಅನಂತ್ ಸ್ವಾಭಿಮಾನ ಶೂನ್ಯರನ್ನಾಗಿ ಮಾಡುವ ಕುತಂತ್ರಗಳನ್ನು ಬಯಲಿಗೆಳೆದರು: ನಮ್ಮ ದೇಶದ ಕೋಮುವಾದಿ ಶಕ್ತಿಗಳು ಇಂಥದಕ್ಕೆ ಕುಮ್ಮಕ್ಕು ಕೊಡುತ್ತಿರುವುದನ್ನೂ ಅವರು ಪ್ರಸ್ತಾಪಿಸಿದರು.

“ಈ ಭಯಾನಕ ಪರಿಸ್ಥಿತಿಯಿಂದಾಗಿ ನಮಗೆ ಇನ್ನೂ ಯಾಕೆ ಹುಚ್ಚು ಹಿಡಿದಿಲ್ಲ?” – ಎಂದು ಕೇಳಿಕೊಂಡ ಬಿ. ಗಂಗಾಧರಮೂರ್ತಿ, ಸೋವಿಯತ್ ಒಕ್ಕೂಟದ ಛಿದ್ರೀಕರಣದ ನಂತರ ಬಂಡವಾಳಶಾಹಿ ರಾಷ್ಟ್ರಗಳಿಗೆ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿ, ಅವು ಮುಟ್ಟಿದ್ದೆಲ್ಲ ಬಂಗಾರದ ಗೊಂಬೆಯಾಗುವಂತೆ ಆಧುನಿಕ ಮೈದಾಸ ಮೈದಳೆದಿದ್ದಾನೆ – ಎಂದರು ಹೊಸ ವಿಪತ್ತನ್ನು ಎದುರಿಸಿ ಹೊಸ ಚಿಂತನಾ ಕ್ರಮವನ್ನು ತುರ್ತಾಗಿ ರೂಪಿಸಿಕೊಳ್ಳಬೇಕಾದ ಈ ಕ್ಷಣದಲ್ಲಿ ‘ಅಕ್ಷರ ಚಿಂತನ ಮಾಲೆ’ ಯ ಮೂಲಕ ಅಂಥ ಚಿಂತನಾ ಕ್ರಮವನ್ನು ಮೂವತ್ತು ವರ್ಷ ಪೋಸ್ಟ್ ಪೋನ್ ಮಾಡುವ ಹುಸಿ ಬೌದ್ದಿಕ ಶಾಹಿಯ ಸೂಕ್ಷ್ಮ ಕುತಂತ್ರಗಳನ್ನು ಬಿಚ್ಚಿಟ್ಟ ಗಂಗಾಧರ ಮೂರ್ತಿ, ಲುಕಾಕ್ ಹೇಳಿದ The best form of capitalism is worse than the worst form of communism ಎಂದು ಮಾತು ಮುಗಿಸಿದರು.

*

“ಬೆಂಗಳೂರಲ್ಲಿ ಅಡ್ಡಾಡುವವರಿಗೆ ಈಗ ಎರಡು ಕ್ಯೂಗಳು ಕಾಣುತ್ತವೆ; ಅಂಗಡಿಗಳ ಮುಂದೆ ಸೀಮೆ ಎಣ್ಣೆಗಾಗಿ ಕ್ಯೂ; ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎದುರು ವಿದೇಶಿ ವಿನಿಮಯಕ್ಕಾಗಿ, ಡಾಲರಿಗಾಗಿ ಕ್ಯೂ .. ಸೀಮೆ ಎಣ್ಣೆ ಸಿಗುವುದು ಸಂಶಯ ಆದರೆ ಡಾಲರ ಸಿಗುವುದು ಗ್ಯಾರಂಟಿ. ”

– ಭಾರತೀಯರ ಹೊಸ ಹಪಾಹಪಿಯನ್ನು ಹೀಗೆ ಬಣ್ಣಿಸಿದವರು ವಿಚಾರ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಜಿ. ಆರ್. ರಾಮಕೃಷ್ಣ ಅವರು, ಬಹು ರಾಷ್ಟ್ರೀಯ ಕಂಪನಿಗಳು ಆರೋಗ್ಯಕರ ಸ್ಪರ್ಧೆಯನ್ನು ಸೃಷ್ಟಿಸುತ್ತವೆ ಎಂಬ ಉದಾರೀಕರಣವಾದಿಗಳ ಪ್ರಚಾರವನ್ನು ಅಲ್ಲಗೆಳೆದ ಜಿ.ಆರ್. ಈ ಬರಾಕಂಗಳ ಉದ್ದೇಶ ಸ್ಪರ್ಧೆಯನ್ನು ನಾಶಪಡಿಸುವುದೇ ಆಗಿದೆ. ಮೆಕಾಲೆ ಪ್ರಣೀತ ಇಂಗ್ಲೀಷ್ ಶಿಕ್ಷಣದ ಉದ್ದೇಶ ಗುಲಾಮಿ ಸಂಸ್ಕೃತಿಯನ್ನು ಬೆಳೆಸುವುದೇ ಆಗಿದ್ದರೂ, ಆ ಶಿಕ್ಷಣ ಕೊಟ್ಟ ಹೊಸ ದೃಷ್ಟಿಯಿಂದಾಗಿ ನಮಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಲಾಭವೇ ಆಯಿತು. ಆದರೆ ಈಗ ಮುಕ್ತ ಮಾರುಕಟ್ಟೆಯ ಹೆಸರಿನಲ್ಲಿ ದಾಳಿ ಮಾಡುತ್ತಿರುವ ಅನ್ಯ ಸಂಸ್ಕೃತಿಯನ್ನು ಜನಪರ ಉದ್ದೇಶಕ್ಕೆ ಬಳಸಿಕೊಳ್ಳಲು ಸಾಧ್ಯವೇ ಇಲ್ಲ. ಈ ಸಾಂಸ್ಕೃತಿಕ ಆಕ್ರಮಣಕ್ಕೆ ಮೊಟ್ಟಮೊದಲ ಬಲಿ ನಮ್ಮ ಸಾಮಾನ್ಯ ಜನರ ಸಂಸ್ಕೃತಿಯೇ.

ಸುಶ್ಮಿತಾ, ಐಶ್ವರ್ಯರಿಗೆ ಲೋಕ ಸುಂದರಿ – ಭುವನ ಸುಂದರಿ ಪಟ್ಟಕಟ್ಟಿದ ಪಟ್ಟಭದ್ರರಿಗೆ ಆ ಮೂಲಕ ತಮ್ಮ ಸೌಂದರ್ಯ ಸಾಧನಗಳಿಗೆ ಇಂಡಿಯಾದಲ್ಲಿ ಮಾರುಕಟ್ಟೆ ಪಡೆಯುವದೇ ಒಳ ಉದ್ದೇಶವಾಗಿದೆ ಎಂದ ಜಿ.ಆರ್. ಹೊಸ ಆರ್ಥಿಕ ನೀತಿಯನ್ನು ಒಪ್ಪಿಕೊಳ್ಳುವಂತೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ವಿಮರ್ಶಕರನ್ನು ಬಳಸಿಕೊಳ್ಳುತ್ತಿರುವ ಕುತಂತ್ರಗಳ ಬಗ್ಗೆ ನಾವು ಜಾಗರೂಕರಾಗಬೇಕಿದೆ ಎಂದು ಎಚ್ಚರಿಸಿದರು, ನಿಜವಾದ ಎಡ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳು ಮಾತ್ರ ಈ ಆಕ್ರಮಣವನ್ನು ತಡೆಯಬಲ್ಲವೇ ಹೊರತು, ನಾವು ಯಾವುದೇ ಅವತಾರ ಪುರುಷನಿಗಾಗಿ ಕಾಯಬೇಕಾಗಿಲ್ಲ ಎಂದೂ ಅವರು ಹೇಳಿದ್ದು, ಬರಹಗಾರರ ‘ಸಾಮಾಜಿಕ’ ಜವಾಬ್ಧಾರಿ ಬಗ್ಗೆ ಹೆಚ್ಚಿನ ಒತ್ತು ಕೊಡುವ ಮಾತಾಗಿತ್ತು.

ಸೋ. ಮು. ಭಾಸ್ಕರಾಚಾರ್ ನಿರ್ವಹಿಸಿದ ಈ ವಿಚಾರಗೋಷ್ಠಿಯಲ್ಲಿ ಪಾಲುಗೊಂಡವರೆಲ್ಲ ಹತ್ತು ಹತ್ತು ನಿಮಿಷಗಳ ಅವಧಿಯಲ್ಲೇ ಪ್ರತಿಕ್ರಿಯೆ ಸೂಚಿಸುವ ಅನಿವಾರ‍್ಯತೆ ಇತ್ತು. ಹೇಳಬೇಕಾದ ಅನೇಕ ವಿಷಯ ಹಾಗೆಯೇ ಉಳಿದವೇನೋ ಅನ್ನಿಸಿತ್ತು.

ರಹಮತ್ ಹೇಳಿದರು: “ಇನ್ನು ಹತ್ತು ನಿಮಿಷ ಕೊಟ್ಟಿದ್ದರೆ ಸಾಕಿತ್ತು ಹರಿಕಥೆ ಇನ್ನೂ ಚೆನ್ನಾಗಿ ಮಾಡುತ್ತಿದ್ದೆ!”

*

ಎರಡನೆಯ ಗೋಷ್ಠಿಯ ವಿಷಯ: “ಪ್ರಜಾಸತ್ತಾತ್ಮಕ ಸಂಸ್ಕೃತಿ, ಸಾಹಿತ್ಯ ಮತ್ತು ಮಹಿಳೆ” ಆಶಯ ಭಾಷಣ ಮಾಡಿದ ಎನ್. ಗಾಯತ್ರಿ ಅವರು ೧೨ನೆಯ ಶತಮಾನದಿಂದ ೨೦ ನೆಯ ಶತಮಾನದ ಕೊನೆಯ ದಶಕಗಳ ವರೆಗೆ ಕಾಲದ ಬೀಸಿನಲ್ಲಿ ಕನ್ನಡ ಸಾಹಿತ್ಯ ಮಹಿಳೆಯನ್ನು ಕಂಡ ರೀತಿಯನ್ನು ವಿಶ್ಲೇಷಿಸುತ್ತ, ಕೆಳವರ್ಗದ ಮತ್ತು ಮಹಿಳಾ ಲೋಕದ ದನಿಗಳಿಗೆ ಇಂಬುಕೊಟ್ಟ ವಚನ ಸಾಹಿತ್ಯದಲ್ಲಿ ಪ್ರಜಾಸತ್ತಾತ್ಮಕ ಸಂಸ್ಕೃತಿಯ ಹಲವಾರು ಅಂಶಗಳಿದ್ದುದನ್ನು ಗುರುತಿಸುತ್ತಲೇ: ಆಧುನಿಕ ಕನ್ನಡ ಸಾಹಿತ್ಯದ ಮೂರು ಘಟ್ಟಗಳನ್ನು – ಮಹಿಳಾ ಬರಹಗಾರರ ಪಾಲುಗಾರಿಕೆ ಮತ್ತು ಮಹಿಳಾ ಚಿತ್ರಣ – ಈ ಎರಡು ನೆಲೆಗಳಲ್ಲಿ ಚರ್ಚೆಗೊಳಪಡಿಸಿದರು. ‘ನವೋದಯ’ ದವರಿಗೆ ಮಹಿಳೆ ಮಾತೃತ್ವ ಪರಿಕಲ್ಪನೆಯ ವೈಭವೀಕರಣವೇ ಪ್ರಧಾನವಾದರೆ, ತಮ್ಮ ಅಸ್ತಿತ್ವದ ವೈಭವೀಕರಣವೇ ಮುಖ್ಯವಾದ ‘ನವ್ಯ’ ರ ದೃಷ್ಟಿಕೋನ ಮಹಿಳೆಯ ಬಗ್ಗೆ ‘ನವ್ಯ’ ವೂ ಆಗಿರಲಿಲ್ಲ. ‘ಆಧುನಿಕ’ ವೂ ಆಗಿರಲಿಲ್ಲ. ಎಪ್ಪತ್ತರ ದಶಕದಲ್ಲಿ ಮಾತ್ರ ಮುಕ್ತ ಅನುಭವಕ್ಕೆ ಹೊಸ ಭಾಷೆ, ಹೊಸ ನಾಲಗೆಯನ್ನು ಮಹಿಳೆ ಪಡೆದುಕೊಂಡಿದ್ದರೂ ವಿಮರ್ಶೆಯ ಗುತ್ತಿಗೆ ಹಿಡಿದ ಕೆಲ ಪುರುಷರು ಮಹಿಳೆಗೆ ‘ನಿರ್ದೇಶನ’ ನೀಡುವ ಚಟವನ್ನು ಇನ್ನೂ ಕೈ ಬಿಟ್ಟಿಲ್ಲ. ಸಮಾಜದಲ್ಲಿರುವಂತೆ ಕುಟುಂಬದಲ್ಲಿಯೂ ಯಜಮಾನ – ಕೂಲಿ ಎಂಬ ವಿನ್ಯಾಸವಿದೆ; ಹೀಗಾಗಿ ಒಟ್ಟು ಸಮಾಜದ ಮತ್ತು ಕುಟುಂಬದ ನೋವಿನ ನೆಲೆಗಳಲ್ಲಿ ಇಂದಿನ ಮಹಿಳಾ ಸಾಹಿತಿ ಹೊಸ ಸವಾಲುಗಳನ್ನು ಎದುರಿಸಬೇಕಾಗಿದೆ.

ಗಾಯತ್ರಿ ಅವರ ವಿಚಾರಧಾರೆ ಗೋಷ್ಠಿಯಲ್ಲಿ ಪಾಲುಗೊಂಡ ಉಳಿದವರೆಲ್ಲರ ಗುಪ್ತಗಾಮಿನಿ ಪ್ರವಾಹವಾಗಿದ್ದು ಸ್ಪಷ್ಟವಾಗಿತ್ತು. ಆರ್ಥಿಕ ಹಾಗೂ ಶೈಕ್ಷಣಿಕ ನೆಲೆಗಳಲ್ಲಿ ಬ್ರಿಟಿಷ್ ವಸಹಾತುಶಾಹಿ ನಮ್ಮಲ್ಲಿ ವಿಚಾರಶಕ್ತಿಯನ್ನು ಬೆಳೆಸಿದ ಅಂಶವನ್ನು ಗುರುತಿಸಿದ ರಾಜಪ್ಪ ದಳವಾಯಿ ಗ್ರಾಮೀಣ ಮತ್ತು ಆದಿವಾಸಿ ಕುಟುಂಬಗಳಲ್ಲಿ ಹೆಣ್ಣಿಗೆ ಉನ್ನತ ಸ್ಥಾನವಿದ್ದರೂ ಫ್ಯೂಡಲ್ (ಜಮೀನುದಾರಿ) ವಿನ್ಯಾಸದಲ್ಲಿ ಮಾತ್ರ ಹೆಣ್ಣು ಶೋಷಣೆಯ ಗುರಿಯಾಗಿದ್ದನ್ನು ಪ್ರಸ್ತಾಪಿಸಿದರು. ನಮ್ಮದೆಲ್ಲಾ ಆರ್ಯೀಕರಣಗೊಂಡ ಮನಸ್ಸು ಎಂದು ಹೇಳಿದ ಡಾ. ಚೆನ್ನಣ್ಣ ವಾಲೀಕಾರರು. ನಮ್ಮಲ್ಲಿ ಸಮಾನತೆಯ ಪರಿಕಲ್ಪನೆಯ ಹೊಸ ಮನಸ್ಸು ಮೂಡಬೇಕೆಂದು ಹಾರೈಸುತ್ತ. ಸ್ತ್ರೀಯರೂ ಕೂಡ ಪುರುಷ – ವಿರೋಧಿ ಧೋರಣೆ ಬಿಡಬೇಕೆಂದು ಸಭಿಕರಿಗೆಲ್ಲ ಹಿತವಚನ ಹೇಳಿದ್ದು ಸ್ವಾರಸ್ಯಕರವಾಗಿತ್ತು. ಪಂಚಾಯಿತಿ ಚುನಾವಣೆಗಳಲ್ಲಿ ಮಹಿಳೆಯರಿಗೆ ೩೦% ಮೀಸಲಾತಿ ಜಾರಿಗೆ ಬಂದಿದ್ದರೂ, ಹೀಗೆ ಆಯ್ಕೆಯಾದ ಮಹಿಳೆಯರ ನೋವುಗಳ ಬಗ್ಗೆ ನಮಗೆ ಸ್ಪಂದನವಿದೆಯೇ? ಎಂದು ಪ್ರಶ್ನೆ ಹಾಕಿದ ಬಾ. ಹ. ರಮಾಕುಮಾರಿ, ಮಹಿಳೆಯರಿಗೆ ಸಮೂಹ ಪಾಲುಗಾರಿಕೆ ಬೇಕೆಂಬುದನ್ನು ಒತ್ತಿ ಹೇಳುತ್ತ ವಿರ್ಮಶೆಯ ಧೋರಣೆ ಬದಲಾಗಬೇಕೆಂದೂ ಸೂಚಿಸಿದರು. ತಾಂತ್ರಿಕ ಶಿಕ್ಷಣದಲ್ಲೂ ಕೂಡ ಶೇಕಡಾ ೩೦ – ೪೦ ಪಾಲುಗಾರಿಕೆ ಹೊಂದಿದ ಇಂದಿನ ಮಹಿಳೆ ಆತ್ಮ ವಿಶ್ವಾಸ, ಸ್ವಾಭಿಮಾನದ ಪ್ರತೀಕವಾಗಿ ಸ್ಫೋಟಗೊಂಡಿರುವುದು ಬಹು ದೊಡ್ಡ ಸಂಗತಿ ಎಂದು ಎತ್ತಿ ಹೇಳಿದ ಚಂದ್ರಶೇಖರ ಆಲೂರು, ಗಂಡನ್ನು ಪರಿಪೂರ್ಣ ಪುರುಷೋತ್ತಮನನ್ನಾಗಿ ಚಿತ್ರಿಸಿದ ನವ್ಯರು ಹೆಣ್ಣನ್ನು ಮಾತ್ರ ಭೋಗ ವಸ್ತುವನ್ನಾಗಿಯೇ ಕಂಡ ಪರಿಯನ್ನು ವಿಶ್ಲೇಷಿಸಿದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಡಾ. ಮಲ್ಲಿಕಾ ಘಂಡಿಯವರು ದಲಿತ ವಿಮೋಚನೆಯೊಂದಿಗೆ ಮಹಿಳೆಯರ ವಿಮೋಚನೆಯೂ ಆಗುವುದೆಂಬ ಕಲ್ಪನೆ ತಪ್ಪು ಎಂದು ಹೇಳುತ್ತಾ, ಅಮೃತಮತಿ ತನ್ನ ಗಂಡನಾದ ರಾಜನಿಂದ ಬಡಿಸಿಕೊಂಡ ಹಾಗೆಯೇ ಪ್ರಿಯಕರನಾದ ದಲಿತ ಮಾವುತನಿಂದಲೂ ಬಡಿಸಿಕೊಂಡ ಅರ್ಥಪೂರ್ಣ ಉಹಾಹರಣೆ ಕೊಟ್ಟರು. ಇಂದಿಗೂ ಬರೆಯುವ ಬಂಡಾಯ ಲೇಖಕಿಯರಿದ್ದರೂ ಚಳುವಳಿಗಳಲ್ಲಿ ನೇರವಾಗಿ ಪಾಲುಗೊಳ್ಳುವ ಪರಿಸ್ಥಿತಿ ಸೃಷ್ಟಿಯಾಗಿಲ್ಲ; ಇದಕ್ಕೆ ಕಾರಣ. ಗಂಡಿನ ಬದಲಾಗದ ದೃಷ್ಟಿ ಮತ್ತು ಮನೋಭಾವ – ಎಂದ ಮಲ್ಲಿಕಾ. ಇಂದಿನ ಬಹುತೇಕ ಮಹಿಳಾ ಸಾಹಿತ್ಯದಲ್ಲಿ ಸಿನಿಮೀಯ ಬದುಕಿನ ಚಿತ್ರಣವಿದೆಯೇ ಹೊರತು ’ಸಾವಿತ್ರಮ್ಮ ಚಿತ್ರಿಸಿದಂಥ ವಾಸ್ತವ ಬದಕು ಇಲ್ಲ ಎಂದು ಹೇಳಲಿಕ್ಕೂ ಮರೆಯಲಿಲ್ಲ. “ನಮಗೆ ಆದಿಶಕ್ತಿ, ಜಗನ್ಮಾತೆ, ಪತಿವ್ರತೆ ಮುಂತಾದ ತುರಾಯಿಗಳು ಬೇಕಾಗಿಲ್ಲ. ನಮ್ಮನ್ನು ಮನುಷ್ಯರ ಹಾಗೆ ಬದುಕಲು ಬಿಟ್ಟರೆ ಸಾಕು.” – ಎಂಬ ಮಲ್ಲಿಕಾ ಘಂಟಿಯವರ ಮಾತು ಘಂಟಾನಾದದಷ್ಟೆ ಗಟ್ಟಿಯಾಗಿತ್ತು.

ಈ ಗೋಷ್ಠಿಯನ್ನು ನಿರ್ವಹಿಸಿದ ಶೈಲಾ ನಾಗರಾಜ ಅವರು ಆಗೀಗ ಗುಜುಗುಜು ಮಾಡುತ್ತಿದ್ದ ಸಭಿಕರನ್ನು ತರಾಟೆಗೆ ತೆಗೆದುಕೊಂಡ ರೀತಿ ಕೂಡ ಎಚ್ಚೆತ್ತ ಮಹಿಳೆಯ ಸ್ಪಷ್ಟ ಆಗಮನದ ಸೂಚನೆಯಾಗಿತ್ತು.

*

ಎಲ್ಲರ ಕತೆಯನ್ನು ಸ್ವಂತ ಕತೆ ಎಂಬಂತೆ ಅಥವಾ ತನ್ನ ಕತೆಯನ್ನು ಎಲ್ಲರ ಕತೆಯಂತೆ ಹೇಳುವ ಸ್ವಭಾವದ ಚೆನ್ನಣ್ಣ ತನ್ನದೂ ಆರ್ಯ – ಮನಸ್ಸೇ ಎಂದು ಒಪ್ಪಿಕೊಳ್ಳುತ್ತಲೇ ಅದನ್ನು ಬಿಡುವ ಪ್ರಯತ್ನವನ್ನು ದಾಖಲಿಸುತ್ತಾ. “ಎಲ್ಲಾ ಬಿಟ್ಟು ಬಿಟ್ಟsನಿ ಈಗ; ಪೈಲಾಕ ಪಗಾರ ಬಂದ ಕೂಡ್ಲೆ ಇಡೀ ಪಗಾರ ಹೇಣ್ತೀ ಕೈಯಾಗ ಕೊಟ್ಟು ಬಿಡ್ತsನಿ” ಎಂದು ಹೇಳಿ ಸಭಿಕರೆಲ್ಲ ಚಪ್ಪಾಳೆ ಗಿಟ್ಟಿಸಿಕೊಂಡು ಖುಶಿಯಿಂದ ಕುಂತು ಕುರ್ಚಿಯಲ್ಲೇ ಬೀಗುತ್ತಿದ್ದ.

ಮಲ್ಲಿಕಾ ಘಂಟಿ, ತಮ್ಮ ಪಾಳೆ ಬಂದಾಗ ಹೇಳಿದ್ದು; “ಈ ಅಣ್ಣಂದು ಎಲ್ಲಾ ಗೊತ್ತೈತಿ ನನಗ, ಹೇಣ್ತೀ ಕೈಯಾಗ ಪಗಾರ ಕೊಡಗಾನ ಖರೆ. ಆದರ ಅದರಾಗಿಂದ ಒಂದು ರೂಪಾಯಿ ಖರ್ಚು ಮಾಡಾಕೂ ಆ ಹೇಣ್ತೀಗೆ ಈ ಗಂಡನ ಪರಮಿಶನ್ ಬೇಕು. ಇದು ಬ್ಯಾಂಕ್ ನಾಗ ರೊಟ್ಟಿ ಇಟ್ಟಂಗ. ಚೆಕ್ಕಿಗೆ ಮ್ಯಾನೇಜರ‍್ ಸಹಿ ಬೇಕsಬೇಕು ನೋಡ್ರಿ.”

ಈಗ ಚಪ್ಪಾಳೆ ಗಿಟ್ಟಿಸಿಕೊಳ್ಳುವ ಸರತಿ ಮಲ್ಲಿಕಾ ಅವರದು.

“ಅಲ್ಲೋ ಚೆನ್ನಣ್ಣ, ಕೆದರಿ ಕೇರು ಬಡಿಸಿಕೊಂಡೆಲ್ಲೋ! ” – ಅಂದೆ ನಾನು ಅನಂತರ “ಹೌದು ಮಾಮ. ಹಂಗಿದ್ರs ಚೆಂದ” ಅಂದ ಚೆನ್ನಣ್ಣ.

ಚೆನ್ನಣ್ಣ ಥೇಟ್ ಹಳ್ಳಿಯ ಮನುಷ್ಯ. ಎಲ್ಲರೂ ಅವನ ಕಣ್ಣಲ್ಲಿ ಮಾಮಾ, ಅಕ್ಕಾ, ಅಣ್ಣಾ, ತಂಗೀ … ನಮ್ಮ ಎಲ್ಲ ಹೋರಾಟಗಳ ಗುರಿಯೂ ಅದೇ ಅಲ್ಲವೇ? ಅದೇ ಕರುಳ ಬಳ್ಳಿಯ ಮಾನವೀಯ ಸಂಬಂಧಿಗಳು.

*

“ನನ್ನದು ಅಲೆಮಾರಿ ಜನಾಂಗ ಅಕ್ಷರದಿಂದ, ಗ್ರಾಮದಿಂದ ವಂಚಿತರಾದ ನನ್ನ ಜನ ಇನ್ನೂ ಅರಿವಿಗಾಗಿ, ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದಾರೆ. ಕೇರಿ ಕೇರಿಗಳಲ್ಲಿ. ಬೀದಿ ಬೀದಿಗಳಲ್ಲಿ ಅವರು ಅಲೆಯುತ್ತಿದ್ದಾರೆ. ನಾನು ಯಾವ ‘ಕೇಂದ್ರ’ ದಲ್ಲಿ ನಿಂತು ಮಾತಾಡಲಿ?”

– ಆತ್ಮಕಥನದ ಆತ್ಮೀಯ ರೀತಿಯಲ್ಲಿ ಮಾತು ಸುರು ಮಾಡಿದವರು “ಸಮೂಹ ಮಾಧ್ಯಮ ಸಂಸ್ಕೃತಿ, ಸಾಹಿತ್ಯ ಮತ್ತು ಸಮಾಜ ಬದಲಾವಣೆ” ಕುರಿತ ಮೂರನೆಯ ಗೋಷ್ಠಿಯ ಆಶಯ ಭಾಷಣ ಮಾಡಿದ ಸಂಶೋಧಕ – ವಿಮರ್ಶಕ ಮಲ್ಲೇಪುತೊ ಜಿ. ವೆಂಕಟೇಶ ಅವರು. ಕಳೆದ ಒಂದೂವರೆ ದಶಕದಲ್ಲಿ ನಗರ ಕೇಂದ್ರಿತ ನವ್ಯದಿಂದ. ಗ್ರಾಮಕೇಂದ್ರಿತ ದಲಿತ ಸಾಹಿತ್ಯದಿಂದ, ಈಗ ಕೇರಿಯಾಚೆಯ ಬದುಕಿನ ಆಚೆ ಕೂಡ ಸಂಸ್ಕೃತಿ ಕುರಿತ ಚಿಂತನಾ ವಿಧಾನ ಅಂತರಪಲ್ಲಟ ಹೊಂದಿರುವ ಪ್ರಕ್ರಿಯೆ ಗುರುತಿಸಿದ ಮಲ್ಲೇಪುರಂ, ನಮ್ಮ ಸಮೂಹ ಮಾಧ್ಯಮಗಳು ನಮ್ಮ ‘ಸಮೂಹ’ ಕ್ಕೆ ಸಂಬಂಧವಿರದ ರಾಜಕೀಯ ಸುದ್ದಿಗಳಿಗೆ, ಜಾಹಿರಾತುಗಳ ಹುಸಿ – ಬಿಂಬಗಳಿಗೇ ಪ್ರಾಶಸ್ತ್ಯ ಕೊಡುತ್ತಿರುವಾಗ, ನಾವು ಮತ್ತೇ ಸಾಹಿತ್ಯ ಹಾಗೂ ಕಲೆಗಳ ಮೂಲಕ ಸಮುದಾಯದ ಅಂತರ‍್ ಪ್ರೀತಿಯನ್ನು ಸೃಷ್ಟಿಸಬೇಕಾಗಿದೆ ಎಂದರು.

ಹೊಸ ಆರ್ಥಿಕ ನೀತಿ ಹುಟ್ಟು ಹಾಕುತ್ತಿರುವ ಆಶೆಬುರುಕತನಕ್ಕೆ ಪೂರಕವಾಗಿರುವ ನಮ್ಮ ಸಮೂಹ ಮಾಧ್ಯಮಗಳು ಸೃಜನಶೀಲತೆಯನ್ನು ಕೊಂದು ಹಾಕಿ, ಸಾಮಾಜಿಕ – ಕೌಟುಂಬಿಕ ವಿರಸಕ್ಕೆ ಹಾನಿ ಮಾಡುತ್ತಿವೆ. ವೈವಿಧ್ಯವಿಲ್ಲದ, ಕಾನ್ವೆಂಟ್ ಕನ್ನಡದ ನಮ್ಮ ದೂರದರ್ಶನ ಮನರಂಜನೆಯೇ ಸಾಧನವಾಗಿ ಅನ್ವೇಷಕತೆಯನ್ನು ಕೊಲ್ಲುತ್ತಿದೆ ಎಂದು ಗುಡಿಹಳ್ಳಿ ನಾಗರಾಜ ಹೇಳಿದರೆ. ಆರ‍್. ಜಿ. ಹಳ್ಳಿ ನಾಗರಾಜ ಅವರು ನೂರಾರು ಚಾನೆಲ್‌ಗಳ ಮೂಲಕ ಕನಸುಗಳ ಮಾರಾಟಕ್ಕೆ ದೂರದರ್ಶನ ವ್ಯವಸ್ಥೆ ಮಾಡುತ್ತಿರುವಾಗ, ನಾವು ಬೀದಿ ನಾಟಕ ಮತ್ತು ಹಾಡುಗಳ ಮೂಲಕ ಜನತೆಯ ವಾಸ್ತವಕ್ಕೆ ಪ್ರತಿಸ್ಪಂದಿಸಬೇಕು ಎಂದರು.

ಸ್ವಾತಂತ್ರ ಚಳುವಳಿ ಕಾಲಕ್ಕೆ ರಾಷ್ಟ್ರೀಯವಾದ – ಸಾಮ್ರಾಜ್ಯ ಶಾಹಿಗಳ ನಡುವೆ ಸಂಘರ್ಷವಿದ್ದರೆ, ಈಗ ಸಂಘರ್ಷ ರಾಷ್ಟ್ರೀಯವಾದ ಮತ್ತು ವಾಣಿಜ್ಯೀಕರಣದ ನಡುವೆ ನಡೆಯುತ್ತದೆ- ಎಂದು ವಿಶ್ಲೇಷಿಸಿದ ಸಿದ್ದನಗೌಡ ಪಾಟೀಲರು ಭಾರತೀಯ ಬುದ್ದಿಜೀವಿಗಳಿಗೆ ಸಂಶೋಧನೆಯ ಆಮಿಷ ತೋರಿ ಅವರನ್ನು ಖರೀದಿಸುತ್ತಿರುವ ವಿದೇಶೀಯರ ಪ್ರಯತ್ನವನ್ನು ಖಂಡಿಸಿದರು. ನಮ್ಮ ಜನರ ಸಾಂಸ್ಕೃತಿಕ ಹಸಿವು ಹಿಂಗಿಸುವ ನಮ್ಮ ಜಾತ್ರೆ, ಉತ್ಸವಗಳ ಜೀವಪರ ಅಂಶಗಳನ್ನು ಗುರುತಿಸಿ ಅವುಗಳನ್ನು ನಮ್ಮ ಉದ್ದೇಶಕ್ಕೆ ಬಳಸಿಕೊಳ್ಳಬೇಕೆಂಬ ಅವರ ವಿಚಾರ ಹೆಚ್ಚಿನ ಚರ್ಚೆಗೆ ಆಸ್ಪದ ವೀಯುವಂತಿತ್ತು. ದೃಶ್ಯಕಲೆಗಳ ದಬ್ಭಾಳಿಕೆಯಿಂದ ಬೌದ್ದಿಕ ಕಲೆ ಅಳಿಸಿ ಹೋಗುತ್ತಿರುವ ಈ ಅಪಾಯದ ದಿನಗಳಲ್ಲಿ ಪುಸ್ತಕ ಪ್ರೀತಿ ಹುಟ್ಟಿಸಲು ಬಂಡಾಯ ಜಾಥಾ ಹಮ್ಮಿಕೊಳ್ಳಲು ಭಕ್ತರಹಳ್ಳಿ ಕಾಮರಾಜ ಸೂಚಿಸಿದರು. ಸಮಷ್ಟಿ ಪ್ರಜ್ಞೆಯ ಬದಲಾಗಿ ಹುಸಿ ಬೌದ್ದಿಕತೆಯನ್ನು ಪ್ರಚುರ ಪಡಿಸುತ್ತಿರುವ ಬಂಡವಾಶಾಹಿ ಮೌಲ್ಯಗಳು ‘ಸಂಸ್ಕೃತಿ’ ಯನ್ನು ಒಂದು ‘ಉದ್ಯಮ’ ವನ್ನಾಗಿ ಮಾಡಿಕೊಂಡಿವೆ ಎಂದರು ವಿಮರ್ಶಕ ಎಸ್. ಶಿವಾನಂದ. ಜಾಣ – ಜಾಣೆಯರ ಪತ್ರಿಕೆಯೊಂದು ಬಂಡಾಯದ ಬಗ್ಗೆ ತಳೆದ ನಿಲುವಿನ ಹಿಂದೆ. ಸಂಪಾದಕನ ವಿಕೃತ (Sadist) ಮನಸ್ಸು ಕೆಲಸ ಮಾಡುತ್ತಿರುವುದನ್ನು ಶಿವಾನಂದ ಬೊಟ್ಟು ಮಾಡಿ ತೋರಿಸಿದರು. ಚಿತ್ರ ನಿರ್ದೇಶಕ – ಕತೆಗಾರ ನಾಗತಿಹಳ್ಳಿ ಚಂದ್ರಶೇಖರ ಅವರು ಒಬ್ಬ ಆರೋಗ್ಯವಂತ ರಾಷ್ಟ್ರಪತಿಯನ್ನು ಕೊಡಲಾಗದ ನಮ್ಮ ದೇಶದಲ್ಲಿ ಆರೋಗ್ಯವಂತ ಮನಸ್ಸುಗಳು ಅಲ್ಪಸಂಖ್ಯಾತವಾಗಿ, ದುಡ್ಡಿನ ಧಾವಂತದಿಂದಾಗಿ ಎಲ್ಲ ಮಾಧ್ಯಮಗಳೂ ಏಕಾಂಗಿಯಾಗಿರುವ ಈ ಸನ್ನಿವೇಶದಲ್ಲಿ ಕಲೆಯ ಗ್ರಹಿಕೆ ಮತ್ತು ಸಾಮಾಜಿಕ ಬದ್ಧತೆ ಎರಡನ್ನೂ ಉಳಿಸಿಕೊಂಡು ಮಾಧ್ಯಮಗಳು ಬದುಕಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು.

ಚರ್ಚೆಯ ಒಂದು ಹಂತದಲ್ಲಿ ವಿದೇಶಿ ಮಾಧ್ಯಮಗಳು ನಡೆಸಿದ ನಮ್ಮ ಸಂಸ್ಕೃತಿ ಮೇಲಿನ ಹಲ್ಲೆಯ ಬಗ್ಗೆ ಮಾತನಾಡುತ್ತ. ನಾನು “ನಮ್ಮ ಸಂಸ್ಕೃತಿ ಅನ್ನುತ್ತೇವೆಲ್ಲ ಯಾವುದು ನಮ್ಮ ಸಂಸ್ಕೃತಿ?” ಎಂದು ಕೇಳಿದೆ. ಅಸಮಾನತೆಯ ಮೂಲ ಬುನಾದಿಯ ಮೇಲೆ ನಿಂತ ನಮ್ಮ ಶ್ರೇಣಿಕೃತ ಸಾಮಾಜಿಕ ವ್ಯವಸ್ಥೆ ರೂಪಗೊಳಿಸಿದ ನಮ್ಮ ‘ಸಂಸ್ಕೃತಿ’ ಈ ಹೊಸ ದಾಳಿಯಿಂದ ಧ್ವಂಸವಾಗುವುದಾದರೆ ಅದಕ್ಕೆ ನಾವೇಕೆ ಕಣ್ಣೀರು ಹಾಕಬೇಕು? ಸದಾ ಸಂಕ್ರಮಣ ಸ್ಥಿತಿಯಲ್ಲಿರುವ ಆಧುನಿಕ ಜಗತ್ತಿನಲ್ಲಿ ಸಂಸ್ಕೃತಿ ಘರ್ಷಣದಿಂದಲೇ ಹೊಸ ಸಂಸ್ಕೃತಿಯೊಂದು ಮೂಡಿ ಬರಲು ಸಾಧ್ಯವಿಲ್ಲವೇ? – ನನ್ನ ಪ್ರಶ್ನೆಗಳಾಗಿದ್ದವು ಇವು.

‘ಸಮೂಹ ಮಾಧ್ಯಮ’ ಗಳೆಲ್ಲ ‘ವಿಷ’ ಗಳೆಂದೂ, ಈ ವಿಷಗಳಿಂದ ‘ಸಾಹಿತ್ಯ’ ಎಂಬ ‘ಪವಿತ್ರ ಆಕಳ’ ನ್ನು (Holy Cow) ರಕ್ಷಿಸಬೇಕೆಂದೂ ಪ್ರತಿಪಾದಿಸುವ ಮಾತುಗಳನ್ನು ತರಾಟೆಗೆ ತೆಗೆದುಕೊಂಡ ಎಚ್.ಎಸ್. ಶಿವಪ್ರಕಾಶ, ಗೋಷ್ಠಿಯ ಅಧ್ಯಕ್ಷರಾಗಿ ಮಾತನಾಡುತ್ತ, ಸಾಂಸ್ಕೃತಿಕ ಇರುವಿನ ಬಗ್ಗೆ ವಿಮರ್ಶಾತ್ಮಕ ತಿಳುವಳಿಕೆ ಇರದ ನಮ್ಮ ಸಾಹಿತ್ಯ ಶ್ರೇಷ್ಠಿಗಳಲ್ಲೂ ವಿಷ ತುಂಬಿದೆ ಎಂದು ಹೇಳಿದರು. ಮಾಧ್ಯಮಗಳು ತಟಸ್ಥವಾಗಿರುತ್ತವೆ; ಅವು ತಮ್ಮಷ್ಟಕ್ಕೆ ಶ್ರೇಷ್ಟ ಅಥವಾ ಕನಿಷ್ಠ ಇರುವುದಿಲ್ಲ. ನಾವು ಪುಸ್ತಕ ಮಾಧ್ಯಮಗಳ ಸೃಜನಶೀಲ ಸಾಧ್ಯತೆಗಳನ್ನು ಶೋಧಿಸುವತ್ತ ಗಮನ ಹರಿಸಬೇಕೆಂದರು ಶಿವಪ್ರಕಾಶ. (ಮಾದೇವ ಭರಣಿ ಈ ಗೋಷ್ಠಿಯ ನಿರ್ವಹಣೆ ಮಾಡಿದವರು.)

*

ಕೇಳುತ್ತೇನೆ:

ನನ್ನ ಜನರನ್ನೇ ಕೊಂದ ಖಡ್ಗಗಳ ಮೇಲೆ
ಶಾಂತಿ ಮಂತ್ರಗಳನ್ನೇಕೆ ಕೊರೆದಿದ್ದಾರೆ?

– ಕವಿ ಗೋಷ್ಠಿಯ ಅಧ್ಯಕ್ಷತೆ ವಹಿಸಿದ ಬಂಡಾಯದ ಶರೀಪ ಶಿವಯೋಗಿ ರಮಜಾನ ದರ್ಗಾ ಕಾವ್ಯವನ್ನೇ ಮಾತಾಡುತ್ತ ‘ಎಲ್ಲ’ ಕಾವ್ಯದ ಸ್ಥಾಯೀಭಾವ ಮನುಷ್ಯ ಪ್ರೀತಿ; ಸತ್ಯ ಉಸುರಲು ಸಾಧನ ಕಾವ್ಯ’ ಎನ್ನುತ್ತ. ಅಂತ:ಕರಣ ಮಿಡಿಯುವ ಅನೇಕ ದೃಷ್ಟಾಂತಗಳೊಂದಿಗೆ, ಬಂಡವಾಳ ಮತ್ತು ಶ್ರಮಗಳು ಅಂತರಾಷ್ಟ್ರೀಯವಾಗಿರುವಂತೆ ಕಾವ್ಯದ ಲಯ ಕೂಡ ಜಾಗತಿಕವಾಗಿರುತ್ತದೆ ಎಂದು ಬಿಂಬಿಸಿದರು.

ಹೊನ್ನೆಗಾನೆನಹಳ್ಳಿ ಕರಿಯಣ್ಣ ನಿರ್ವಹಿಸಿದ ಕವಿಗೋಷ್ಠಿಯಲ್ಲಿ ರಾಜ್ಯದ ಅನೇಕ ಕಡೆಯಿಂದ ಬಂದ ಕವಿಗಳು – ಚೆನ್ನಣ್ಣ ವಾಲೀಕಾರ, ಸುಕನ್ಯಾ ಮಾರುತಿ, ಉತ್ತನೂರು ರಾಜಮ್ಮ, ರಾಜಪ್ಪ ದಳವಾಯಿ, ಅಲ್ಲಮಪ್ರಭು ಬೆಟ್ಟದೂರು, ಶಂಕರ ಕಟಗಿ, ಸತೀಶ ಕುಲಕರ್ಣಿ, ಬಿ. ಎಂ ಹನೀಫ, ಕೆ, ಶರೀಪಾ ಎಸ್. ವಿ. ಪ್ರಭಾವತಿ, ಸತ್ಯಾನಂದ ಪಾತ್ರೊಟ, ಪ್ರಹ್ಲಾದ ಬೆಟಗೇರಿ, ಹೊರೆಯಾಲ ದೊರೆಸ್ವಾಮಿ, ಸಿ. ವಿ. ಪಾಟೀಲ ಗವಿಸಿದ್ದ ಬಳ್ಳಾರಿ ಎಚ್.ಎಲ್. ಪುಷ್ಪ ರಂಗಾರೆಡ್ಡಿ ಕೋಡಿರಾಂಪುರ ಬಾ. ಹ. ರಮಾಕುಮಾರಿ. ಮುನಿವೆಂಕಟಪ್ಪ. ಸಿ ಶಿವಲಿಂಗಪ್ಪ.. ಓದಿದ ಕವನಗಳು. ಬಂಡಾಯ ಕಾವ್ಯದ ಮನೋಧರ್ಮ ಮತ್ತು ಕಲಾವಂತಿಕೆಗೆ ಉತ್ತಮ ಉದಾಹರಣೆಗಳಾಗಿದ್ದವು. ಡಾ.ಬೆಸಗರಹಳ್ಳಿ ರಾಮಣ್ಣನವರ ನಡೆದ ಸಮಾರೋಪ ಸಮಾರಂಭ ಕೂಡ ಒಂದು ಪುಟ್ಟ ವಿಚಾರಗೋಷ್ಠಿಯೇ ಆಗಿತ್ತು. ‘ಕಾವ್ಯವಾಗಲಿ ಖಡ್ಗ’ – ಎಂಬ ಘೋಷಣೆ ಇತ್ತ ಕೆಲವರು ವಿದೇಶಿ ಹಣಕ್ಕೆ ಮಾರಾಟವಾಗಿ ಹೋದ ದುರಂತವನ್ನು ಚಿತ್ರಿಸಿದ ಎ.ಎಸ್. ಮೂರ್ತಿ ಅವರು ಸಾಹಿತ್ಯದ ತಕ್ಕಡಿ ಜನರ ಕೈಯಲ್ಲಿದೆಯೇ ಹೊರತು ಸ್ಷಯಂಘೋಷಿತ ವಿಮರ್ಶಕರ ಕೈಯಲ್ಲಿ ಇಲ್ಲ ಎಂದು ಹೇಳಿದರು. ಮಣ್ಣು ತಿಂದು ಭೂಮಿಯನ್ನು ಫಲವತ್ತುಗೊಳಿಸಿ ಹದ ಮಾಡಿದ ಎರೆ ಹುಳುಗಳು ಹಸಿರು ಕ್ರಾಂತಿಯ ರಸಗೊಬ್ಬರಗಳಿಂದಾಗಿ ಈಗ ಸತ್ತು ಹೋಗಿವೆ ಎಂಬ ರೂಪಕದೊಂದಿಗೆ ನಮ್ಮ ಸಾಂಸ್ಕೃತಿಕ ದುರಂತವನ್ನು ಬಣ್ಣಿಸಿದವರು ಕತೆಗಾರ ರಾಜಶೇಖರ ನೀರಮಾನ್ವಿ, ಸೌಮ್ಯವಾದಿಗಳ ಮೇಲೆ ಇಂದು ಕೋಮುವಾದದ ಕತ್ತಿ ತೂಗುತ್ತಿದ್ದರೆ. ಗ್ರಾಮೀಣ ಭಾರತದಲ್ಲಿ ಮುಕ್ತ ಆರ್ಥಿಕ ನೀತಿಯ ಖಡ್ಗ ಝಳಪಿಸುತ್ತಿದೆ – ಎಂದ ಎಲ್. ಹನುಮಂತಯ್ಯ. ನಮ್ಮ ಬಹುಮುಖೀ ಸಂಸ್ಕೃತಿಯನ್ನು ನಾಶ ಮಾಡುವ ಉದ್ದೇಶ ಡಂಕೆಲ್ ಪ್ರಣೀತ ಜಾಗತೀಕರಣದ್ದು ಎಂದು ಉಚ್ಚರಿಸಿದರು.

“ನನ್ನ ಜನ – ಕರ್ನಾಟಕದ ಜನ – ಈಗ ಬಡವರಾಗಿದ್ದಾರೆ. ನಮ್ಮ ಮಕ್ಕಳು ಪಡೆಯುತ್ತಿರುವ ವಿದ್ಯೆ ಅವರನ್ನು ಇಂದು ತುತ್ತು ಕೂಳಿಗಾಗಿ ತಮ್ಮ ಬೆವರನ್ನು ರಕ್ತವನ್ನು ಆತ್ಮ ಶಕ್ತಿಯನ್ನು ಮಾರಾಟಕ್ಕಿಡುವಂತೆ ಮಾಡುತ್ತಿದೆ” ಎಂದು ಆಳವಾದ ನೋವಿನಿಂದ ನುಡಿದವರು ಬೆಸಗರಹಳ್ಳಿ ರಾಮಣ್ಣ.

ಎಂಥ ಪ್ರಸಂಗವನ್ನೂ ಸಾಭಿನಯವಾಗಿ, ಇಡೀ ದೇಹವನ್ನು ದುಡಿಸಿಕೊಳ್ಳುತ್ತ. ಕಣ್ಣಿಗೆ ಕಟ್ಟುವಂತೆ ಕತೆ ಮಾಡಿ ಹೇಳುವ ಮಂಡ್ಯದ ಜವಾರಿ ಕನ್ನಡದ ರಾಮಣ್ಣ. “ನಮ್ಮ ಬರಹಗಾರರು ಇಂದು ಮಾತಾಡುವದನ್ನು ಕಲಿಯಬೇಕು. ಬೀದಿಗೆ ಬರಬೇಕು. ಬೀದಿಯೊಂದಿಗೆ ಅವರ ಅನುಸಂಧಾನ ಮತ್ತು ಅಭಿವ್ಯಕ್ತಿ ಕ್ರಿಯೆ ಈಗ ಅಗತ್ಯ” ಎಂದು ಪ್ರತಿಪಾದಿಸಿದರು. ತಿಮ್ಮನಹಳ್ಳಿ ವೇಣುಗೋಪಾಲ ನಿರ್ವಹಿಸಿದ ಸಮಾರೋಪ ಸಮಾರಂಭ ಇಡೀ ಸಮ್ಮೇಳನಕ್ಕೆ ಕಳಸ ಇಟ್ಟು ಹಾಗಿತ್ತು.

ಬಂಡಾಯ ಚಳುವಳಿಗೆ ನಿಜವಾಗಿಯೂ ಹೊಸ ದಿಕ್ಕನ್ನು, ಆ ದಿಕ್ಕಿನಲ್ಲಿ ಮುನ್ನುಗ್ಗಬೇಕಾದ ಸೈದ್ಧಾಂತಿಕ ತಿಳಿವು ಮತ್ತು ಆತ್ಮ ಶಕ್ತಿಯನ್ನು ಕೊಟ್ಟ ತುಮಕೂರು ಸಮ್ಮೇಳನದಲ್ಲಿ ಮುಂದಿನ ಅವಧಿಗಾಗಿ ರಾಜ್ಯ ಸಂಚಾಲಕರೆಂದು ಆಯ್ಕೆಯಾದವರು; ಎನ್. ಗಾಯತ್ರಿ, ಫಕೀರ ಮಹಮ್ಮದಿ ಕಟ್ಟಾಡಿ, ಸತ್ಯಾನಂದ ಪಾತ್ರೋಟ, ಭಕ್ತರಹಳ್ಳಿ ಕಾಮರಾಜ ಮತ್ತು ಸಿದ್ಧನಗೌಡ ಪಾಟೀಲ. ಪ್ರಗತಿಪರ ಹೋರಾಟಗಳೊಂದಿಗೇ ಬೆಳೆದ ಈ ಸಂಗಾತಿಗಳು ಸಂಘಟನೆಯನ್ನು ಮುನ್ನಡೆಸಬಲ್ಲ ತಾಕತ್ತು ಉಳ್ಳವರು.

ಧಾರವಾಡದ ಭಾರತೀಯ ಜನ ಕಲಾ ಸಮಿತಿ (ಇಪ್ಪಾ)ಯ ಕಲಾವಿದರು, ಸ್ಪೆಶಲ್. ಬಸ್ಸನ್ನೇ ಮಾಡಿಕೊಂಡು ಬಂದಿದ್ದ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ವೃಂದ ಇಡೀ ಸಮ್ಮೇಳನಕ್ಕೆ ಹೋರಾಟದ ಹಾಡುಗಳ ಗುಂಗು ಹಿಡಿಸಿದರು, ನಡು ನಡುವೆ ಇಂಪಾಗಿ ಹಾಡಿದ ಶರಣಪ್ಪ ಕುಷ್ಠಗಿ, ಮಂಡ್ಯದ ಚಂದ್ರಕಲಾ ಮತ್ತು ಸ್ಥಳೀಯ ಕಲಾವಿದರು ‘ಸಾಹಿತ್ಯ’ ಸಮ್ಮೇಳನಕ್ಕೆ ‘ಸಂಸ್ಕೃತಿ’ ಯ ಆವರಣ ಕಟ್ಟಿದರು. ನಾವೆಲ್ಲ ತುಮಕೂರು ಬಿಟ್ಟಿದ್ದು, ‘ಮತ್ತೆ ಮೈಸೂರಿನಲ್ಲಿ ಮಿಲನ’ ಎಂಬ ಶುಭಾಶಯದೊಂದಿಗೆ.

ಮುಂದಿನ ವರ್ಷದ ಸಮ್ಮೇಳನ – ಮೈಸೂರಿನಲ್ಲಿ.

 

-೧೯೯೫